Dec 15, 2014

ಜಾನಪದ ಲೋಕ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದಿಂದ 8 ಕಿ.ಮೀ. ದೂರದಲ್ಲಿ ಬಲಗಡೆಗೆ 15 ಎಕರೆ ವಿಶಾಲವಾದ ಜಾಗದಲ್ಲಿ ಜಾನಪದ ಲೋಕ ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ಜನಪದ ವಿಶೇಷತೆಗಳಿಂದ ಸ್ವಾಗತಿಸುತ್ತಿದೆ. ಮುಖ್ಯ ದ್ವಾರದಲ್ಲಿ ನಗುತ್ತಿರುವ ನಿಗಿ ನಿಗಿ ಸೂರ್ಯ ನಂದಿ ಧ್ವಜಗಳ ಮಧ್ಯೆ "ಬನ್ನಿ ಒಳ ಬನ್ನಿ" ಎನ್ನುತ್ತಾನೆ. 1994ರ ಮಾ.12ರಂದು ಆರಂಭವಾದ ಈ ವಿಸ್ಮಯ ಲೋಕ ಜಗತ್ತಿನ ಪ್ರಮುಖ ಸಾಂಸ್ಕೃತಿಕ ಲೋಕಗಳಲ್ಲೊಂದು ಎಂಬುದು ಕನ್ನಡಿಗ ಹೆಮ್ಮೆ. 'ಗಜಮುಖನೇ ಗಣಪತಿಯೇ ನಿನಗೆ ವಂದನೆ' ಎಂದೆನ್ನೆಲು ಅಲ್ಲೊಂದು ಪುಟ್ಟದಾದ, ಚೊಕ್ಕವಾದ ಗಣೇಶ ಮಂದಿರ. ಅನಂತರ ಅನಾವರಣಗೊಳ್ಳುತ್ತೆ ನಮ್ಮ ಮುಂದೊಂದು ಅನುಪಮ 'ಜಾನಪದ ಜಗತ್ತು'.ಅಚ್ಚರಿ ಮತ್ತು ಅಷ್ಟೇ ಹೆಮ್ಮೆ ಪಡಬಹುದಾದ ಮತ್ತೊಂದು ವಿಷಯವೆಂದರೆ ಜಾನಪದ ಕಲೆಗಳ ಬಗ್ಗೆ ಒಂದೇ ಸಮನೆ 1800 ಗಂಟೆಗಳ ಕಾಲ ಕುಳಿತು ನೋಡಬಹುದಾದಷ್ಟು ವಿಡಿಯೋ ಸಂಗ್ರಹವಿದೆ. ಸುಮಾರು 800 ಗಂಟೆಗಳಷ್ಟು ಬಿಡುವಿಲ್ಲದೇ ಕೇಳಬಹುದಾದಷ್ಟು ಧ್ವನಿಮುದ್ರಿಕೆಗಳ ಸಂಗ್ರಹವಿದೆ. ಇಲ್ಲಿ ವಿಡಿಯೋ ಥಿಯೇಟರ್ ಕೂಡ ಇದೆ.ಬಗಲಲ್ಲೆ ಒಂದು ಜಾನಪದ ಸಂಶೋಧನಾ ಕೇಂದ್ರವಿದ್ದು, ಸಂಬಂಧಪಟ್ಟ ಕಲೆಗಳಲ್ಲಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ.
ಜಾನಪದ ಸೊಗಡು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ಲೋಕದಲ್ಲಿ ನಡೆಸುತ್ತಿರುವ ಕೋರ್ಸ್ ಗಳು, ಸಾಹಸ ಮೆಚ್ಚುವಂಥದ್ದು. ಮಂಗಳವಾರ ಹೊರತುಪಡಿಸಿ ಮಿಕ್ಕೆಲ್ಲ ದಿನಗಳಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆವಿಗೂ ಚಟುವಟಿಕೆಯಿಂದಿರುವ ಈ ಕೆಂದ್ರದಲ್ಲಿ ಪ್ರತಿ ತಿಂಗಳ ಕೋನೆ ಭಾನುವಾರ ಹಲವಾರು ಜನಪದ ಕಲೆಗಳ ಪ್ರದರ್ಶನ ಇರುತ್ತದೆ. ಜಾನಪದ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುವಂಥ ಈ ಕಾರ್ಯಕ್ರಮ ತಪ್ಪದೇ ವೀಕ್ಷಿಸುವ ಮನಸ್ಸು ಎಲ್ಲರದ್ದಾಗಲಿ.
200 ವರ್ಷಗಳ ಹಳೆಯ ಬಂಡಿ, ಜೇಡಿ ಮಣ್ಣಿನಿಂದಾದ ಮಡಕೆ, ಕುಡಿಕೆ, ದೀಪದ ಬುಡ್ಡಿಗಳು ಇಂದಿನ ಐಟಿ-ಬಿಟಿ ಮಂದಿ ಜೀವನ ಹಾಗೂ ಹಳ್ಳಿ ಜನರ ಝೀವನಕ್ಕೆ ಇರುವ ಅಜ-ಗಜಾಂತರ ವ್ಯತ್ಯಾಸದ ಬಗ್ಗೆ ಚಿಂತನೆ ಹಚ್ಚುತ್ತವೆಲೋಕಮಹಲ್, ಶಿಲ್ಪಮಾಳ,ಆಯಗಾರರ ಮಾಳ,ತೊಟ್ಟಿಮನೆ,ಕಂಬಗಳ ಮನೆ ಹೀಗೆ ಒಂದೊಂದು ವಸ್ತು ಸಂಗ್ರಹಾಗರಕ್ಕೆ ಒಂದೊಂದು ವಿಶ್ಇಷ್ಟ ಹೆಸರು.ದಾರಿ ದಿಕ್ಕು ತೋರಲು ಗೋಕುಲಾಷ್ಟಮಿ ಕೃಷ್ಣನ ಪಾದದ ಗುರುತು. ತೊಗಲು ಗೊಂಬೆ, ಆಯುಧಗಳು, ಮದುವೆ,ಸೀಮಂತ ಮುಂತಾದ ಶಾಸ್ತ್ರಗಳಲ್ಲಿ ಬಳಸುವ ವಸ್ತುಗಳು,ಜನಪದ ವಾದ್ಯಗಳು, ಆಟಿಕೆಗಳು, ವರ್ಣಚಿತ್ರಗಳು, ಗ್ರಾಮೀಣ ಕಸಬುಗಳ ಉಪಕರಣಗಳು, ತಾಳೆ ಗರಿಗಳು ಇನ್ನೂ ಮುಂತಾದ 500ಕ್ಕೂ ಹೆಚ್ಚು ಜಾನಪದ ಸಲಕರಣೆಗಳನ್ನು ಕಲಾತ್ಮಕವಾಗಿ ವೈಜ್ಞಾನಿಕವಾಗಿ ಜತನದಿಂದ ಕಾಪಾಡಲಾಗಿದೆ. ಇಲ್ಲಿ 1200 ವರ್ಷಗಳಿಗೂ ಹಳೆಯದಾದ ಶಾಸನ, ವೀರಗಲ್ಲು, ಲಿಪಿಗಳು ಕಾಣಸಿಗುತ್ತವೆ.
ಇಂದು ಎಕರೆ ಜಾಗದಲ್ಲಿ ನಿರ್ಮಿತವಾಗಿರುವ ಸ್ವಚ್ಛಂದ ಕೊಳ, ನೆಮ್ಮದಿಯಿಂದ ಈಜುತ್ತಿರುವ ಬಾತು ಕೋಳಿಗಳು, ಮತ್ತು ಮಕ್ಕಳಿಗಾಗಿ ದೋಣಿ ವಿಹಾರ 1000 ಜನ ಕುಳಿತುಕೊಳ್ಳಲು ಸಾಧ್ಯವಾಗುವಂಥ ಗ್ರೀಕ್ ಮಾದರಿಯ ರಂಗ ಮಂದಿರ, ಅಲ್ಲೆ ವಸ್ತುಗಳನ್ನು ತಯಾರು ಮಾಡುತ್ತಿರುವ ಕರಕುಶಲ ಕರ್ಮಿಗಳು, ತಮ್ಮಷ್ಟಕ್ಕೆ ತಾವೇ ಗೀಗಿ ಪದ ಹಾಡಿಕೊಳ್ಳುತ್ತಿರುವ ಜನಪದರು, ನೃತ್ಯಾಭ್ಯಾಸ ಮಾಡುತ್ತಿರುವ ಕಲಾವಿದರು ಎಲ್ಲರನ್ನೂ ಕಾಣಬಹುದು

Dec 10, 2014

ಮಹಾಭಾರತ

ಮಹಾಭಾರತ

ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಇದು ಹಿಂದೂ ಧರ್ಮದ ಒಂದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ.
ಸಂಪೂರ್ಣ ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದ್ದು ಗ್ರೀಕ್ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ.

ಇತಿಹಾಸ ಹಾಗೂ ಹಿನ್ನೆಲೆ

ಮಹಾಭಾರತ 'ಜಯ' ಎಂಬ ಗ್ರಂಥದಿಂದ ನಿಷ್ಪನ್ನವಾಗಿದ್ದೆಂದು ಕೆಲವರ ಪ್ರತೀತಿ. ಇದರಲ್ಲಿ ಉಲ್ಲೇಖಿಸಿರುವ ಘಟನೆಗಳ ನಿಜವಾದ ಕಾಲ ಸರಿಯಾಗಿ ತಿಳಿದಿಲ್ಲ. ಮಹಾಭಾರತದಲ್ಲಿ ಕಂಡುಬರುವ ಘಟನೆಗಳು ನಿಜವಾದ ಘಟನೆಗಳನ್ನು ಆಧರಿಸಿ ಬರೆದದ್ದೋ ಅಲ್ಲವೋ ಎಂಬುದು ಕೆಲವರಲ್ಲಿ ಚರ್ಚಾಸ್ಪದ ವಿಷಯ. ಕೆಲವು ಚರಿತ್ರಜ್ಞರ ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ. ೧೪೦೦. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿದ ಹಲವು ವಿದುಷರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ. ೩೧೦೦ಕ್ಕೆ ಹೋಲುತ್ತದೆಂದು ಹೇಳಲಾಗುತ್ತದೆ. ಆದ್ದರಿಂದ ಇವು ಘಟಿತ ಘಟನೆಗಳೋ ಅಲ್ಲವೋ, ಹೌದಾಗಿದ್ದರೆ ಯಾವ ಕಾಲದಲ್ಲಿ ನಡೆದದ್ದು ಎಂಬ ಎಲ್ಲಾ ವಿಷಯಗಳ ಬಗೆಗೆ ಹಲವು ಭಿನ್ನಾಭಿಪ್ರಾಯಗಳಿವೆ.

ಕಥಾವಸ್ತು

ಮಹಾಭಾರತದ ಮುಖ್ಯವಾಗಿ ಚಂದ್ರ ವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರು ವಂಶದ ಸದಸ್ಯರ ನಡುವೆ ನಡೆಯುವ ಹೋರಾಟವನ್ನು ಕುರಿತದ್ದು ಎಂದು ಹಲವರ ಅಭಿಮತವಾದರೂ ಈ ಹೋರಾಟದ ಕಥೆ ಕುರುಕ್ಷೇತ್ರ ಕಥೆ ಎನಿಸಿಕೊಳ್ಫುತ್ತದೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಕುರುಕ್ಷೇತ್ರ ಯುದ್ದದಲ್ಲಿ ನಿರ್ಧಾರವಾಗುತ್ತದೆ. ಮಹಾಭಾರತದ ಕಥೆ ಶಂತನು ಮಹಾರಾಜನ ಕಥೆಯಿಂದ್ ಆರಂಭವಾಗಿ, ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದ ಉದ್ದಕ್ಕೂ ಬರುವ ಪಾತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಅಚ್ಚೊತ್ತಿರುವ ಪಾತ್ರಗಳು.
ಮುಖ್ಯ ಕಥೆಯಲ್ಲದೆ, ಮಹಾಭಾರತದಲ್ಲಿ ಅನೇಕ ಉಪಕಥೆಗಳುಂಟು. ಹಾಗೆಯೇ ಭಗವದ್ಗೀತೆಯಂಥ ಸ್ವತಂತ್ರವಾಗಿ ನಿಲ್ಲಬಲ್ಲಂಥ ಗ್ರಂಥಗಳೂ ಮಹಾಭಾರತದ ಭಾಗಗಳಾಗಿ ಭೀಷ್ಮ ಪರ್ವದಲ್ಲಿ ಕಂಡುಬರುತ್ತವೆ. ವ್ಯವಸ್ಥೆಯ ದೃಷ್ಟಿಯಿಂದ, ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ.

ಮುಖ್ಯ ಪಾತ್ರಗಳು

ಪರ್ವಗಳು

ಉಪಕಥೆಗಳು ಮತ್ತು ಗ್ರಂಥಗಳು

ಮಹಾಭಾರತದ ಭಾಗವಾದ ಹಲವು ಪ್ರಮುಖ ಕಥೆಗಳು/ಗ್ರಂಥಗಳು:

ತತ್ವಶಾಸ್ತ್ರ

ಮಹಾಭಾರತ ವಿಶಾಲವಾದ ತತ್ವಶಾಸ್ತ್ರವನ್ನು ಒಳಗೊಂಡ ಗ್ರಂಥ. ಕೆಲವರು ಇದನ್ನು "ಐದನೆಯ ವೇದ" ಎಂದೇ ಕರೆದಿದ್ದಾರೆ. ಮಹಾಭಾರತದ ತಾತ್ವಿಕ ಬೇರುಗಳು ಇರುವುದು ವೈದಿಕ ತತ್ವಶಾಸ್ತ್ರದಲ್ಲಿ. ಮಹಾಭಾರತದ ಒಂದು ಶ್ಲೋಕ ಹೇಳುವಂತೆ, ಅದರ ಮುಖ್ಯ ಗುರಿ ನಾಲ್ಕು ಪುರುಷಾರ್ಥಗಳನ್ನು ತಿಳಿಸಿಕೊಡುವುದು: ಅರ್ಥ, ಕಾಮ, ಧರ್ಮ, ಮತ್ತು ಮೋಕ್ಷ.
ಮಹಾಭಾರತದ ಅನೇಕ ಭಾಗಗಳು, ಉಪಕಥೆಗಳು ಮತ್ತು ಉಪಗ್ರಂಥಗಳು ಪ್ರಾಚೀನ ಭಾರತದ ವಿವಿಧ ತತ್ವಶಾಸ್ತ್ರಗಳನ್ನು ವರ್ಣಿಸುತ್ತವೆ. ವೇದಾಂತ, ಸಾಂಖ್ಯ, ಯೋಗ, ಪಂಚರಾತ್ರ, ಯೋಗ ಮೊದಲಾದ ತಾತ್ವಿಕ ಸಂಪ್ರದಾಯಗಳನ್ನು ಒಳಗೊಂಡ ಮಹಾಭಾರತ ಭಾರತೀಯ ತತ್ವಶಾಸ್ತ್ರದ ಮುಖ್ಯ ಆಕರಗಳಲ್ಲಿ ಒಂದೂ ಹೌದು. ವಿವಿಧ ತಾತ್ವಿಕ ನೆಲೆಗಟ್ಟುಗಳ ಮಧ್ಯೆ ಅವುಗಳ ಬಗೆಗಿನ ಸಹಿಷ್ಣುತೆಯೂ ಮಹಾಭಾರತದ ತತ್ವಶಾಸ್ತ್ರದಲ್ಲಿ ಕಂಡುಬರುತ್ತದೆ. ಮಹಾಭಾರತದಲ್ಲಿ ವೈಶಂಪಾಯನ ಜನಮೇಜಯನಿಗೆ ಹೇಳುತ್ತಾನೆ:
"ಓ ವಿವೇಕಿ! ಇವೆಲ್ಲವೂ ಜ್ಞಾನವನ್ನೇ ಪ್ರತಿನಿಧಿಸುತ್ತವೆ ಎಂದು ತಿಳಿ: ಸಾಂಖ್ಯ, ಯೋಗ, ಪಂಚರಾತ್ರ, ಆರಣ್ಯಕ. ಅವುಗಳ ದಾರಿಗಳು ಬೇರೆ, ಆದರೆ ಮೂಲದಲ್ಲಿ ಎಲ್ಲವೂ ಒಂದೇ!"
ಮಹಾಭಾರತದಲ್ಲಿ ಅಧ್ಯಾತ್ಮಿಕ ತತ್ವಶಾಸ್ತ್ರವಲ್ಲದೇ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜನೀತಿ, ಯುದ್ಧನೀತಿ, ಖಗೋಳಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆಯೂ ಬಹಳಷ್ಟು ಮಾಹಿತಿಯುಂಟು.

ಕನ್ನಡ ಸಾಹಿತ್ಯದಲ್ಲಿ ಮಹಾಭಾರತ

ಮಹಾಭಾರತದಿಂದ ಸ್ಫೂರ್ತಿ ಪಡೆದ ಕನ್ನಡ ಸಾಹಿತ್ಯ ವಿಪುಲವಾಗಿದೆ. ಕನ್ನಡದಲ್ಲಿ ಮಹಾಭಾರತದ ಮೊದಲ ಬರವಣಿಗೆಯ ಕರ್ತೃ ಆದಿಕವಿ ಪಂಪ - ಪಂಪನ ವಿಕ್ರಮಾರ್ಜುನ ವಿಜಯ ಕನ್ನಡದ ಮೇರುಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಗದ್ಯ ಮತ್ತು ಪದ್ಯಮಿಶ್ರಿತವಾದ "ಚಂಪೂ" ಶೈಲಿಯಲ್ಲಿ ಬರೆಯಲ್ಪಟ್ಟಿರುವ ಪಂಪ ಭಾರತ ತನ್ನ ಆಳವಾದ ಮಾನವೀಯ ಮೌಲ್ಯಗಳಿಗೆ ಹೆಸರಾಗಿದೆ. ಸುಮಾರು ಇದೇ ಕಾಲದ ರನ್ನನ "ಗದಾಯುದ್ಧಂ" ಮಹಾಭಾರತ ಯುದ್ಧದ ಭೀಮ-ದುರ್ಯೋಧನರ ಗದಾಯುದ್ಧವನ್ನು ಕುರಿತದ್ದಾದರೂ ಇಡಿಯ ಮಹಾಭಾರತ ಕಥೆಯನ್ನು ಸಿಂಹಾವಲೋಕನ ಕ್ರಮದಲ್ಲಿ ಪರಿಶೀಲಿಸುತ್ತದೆ.
ಕನ್ನಡದಲ್ಲಿ ಬಹಳ ಖ್ಯಾತಿ ಪಡೆದ ಮಹಾಭಾರತ, ಕುಮಾರವ್ಯಾಸ ವಿರಚಿತ "ಕರ್ಣಾಟ ಭಾರತ ಕಥಾಮಂಜರಿ"ಯು ಕುಮಾರವ್ಯಾಸ ಭಾರತ ಅಥವಾ "ಗದುಗಿನ ಭಾರತ" ಎಂದು ಕರೆಯಲ್ಪಡುತ್ತದೆ. ಈ ಕೃತಿ ಭಾಮಿನಿ ಷಟ್ಪದಿಯಲ್ಲಿ ಬರೆಯಲ್ಪಟ್ಟಿದ್ದು ತನ್ನ ಪಾತ್ರವೈವಿಧ್ಯತೆ ಹಾಗೂ ಶ್ರೀಮಂತ ರೂಪಕಗಳಿಗೆ ಹೆಸರಾಗಿದೆ. ಕುಮಾರವ್ಯಾಸ ಕೃಷ್ಣನ ಭಕ್ತ - ಕೃಷ್ಣಾವಸಾನದ ನಂತರ ಕುಮಾರವ್ಯಾಸ ತನ್ನ ಕಾವ್ಯವನ್ನು ಮುಗಿಸಿರುವುದರಿಂದ ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಮಾತ್ರ ಕುಮಾರವ್ಯಾಸ ಭಾರತ ಒಳಗೊಂಡಿದೆ. ಮಹಾಭಾರತದ ಉಳಿದ ಭಾಗ ವಾರ್ಧಕ ಷಟ್ಪದಿಯಲ್ಲಿ, ಲಕ್ಷ್ಮೀಶ ಕವಿ ವಿರಚಿತ "ಜೈಮಿನಿ ಭಾರತ"ದಲ್ಲಿ ಮೂಡಿ ಬ೦ದಿದೆ.
ಆಧುನಿಕ ಕನ್ನಡದಲ್ಲಿ ಪ್ರಸಿದ್ಧವಾದ ಮಹಾಭಾರತದ ಆವೃತ್ತಿ ಎ ಅರ್ ಕೃಷ್ಣಶಾಸ್ತ್ರಿಗಳು ಬರೆದ "ವಚನ ಭಾರತ." ಈ ಕೃತಿ ಸರಳವಾದ ಆಧುನಿಕ ಕನ್ನಡದಲ್ಲಿ ಬರೆಯಲ್ಪಟ್ಟಿದೆ. ಆಧುನಿಕ ಕನ್ನಡದಲ್ಲಿ ಮಹಾಭಾರತದ ಇನ್ನೊಂದು ಕೃತಿ "ಪರ್ವ" (ಎಸ್ ಎಲ್ ಭೈರಪ್ಪ).
ೇಲಿನವು ಮುಖ್ಯ ಮಹಾಭಾರತ ಕಥೆಯನ್ನು ಆಧರಿಸಿ ಬರೆದ ಕೃತಿಗಳಾದರೆ, ಮಹಾಭಾರತದ ವಿವಿಧ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಆಧರಿಸಿ ಬರೆದ ಕೃತಿಗಳು ಅನೇಕ. ಆಧುನಿಕ ಕನ್ನಡದಲ್ಲಿ ಕುವೆಂಪು ರವರ "ಬೆರಳ್ ಗೆ ಕೊರಳ್" ಮಹಾಭಾರತದ ಏಕಲವ್ಯನ ಪಾತ್ರವನ್ನು ಆಧರಿಸಿ ಬರೆದ ನಾಟಕ. ಹಾಗೆಯೇ ಬಿ ಎಂ ಶ್ರೀ ರವರ "ಗದಾಯುದ್ಧಂ" ರನ್ನನ ಕಾವ್ಯದ ನಾಟಕ ರೂಪಾಂತರ. ಗಿರೀಶ್ ಕಾರ್ನಾಡ್ ರ "ಯಯಾತಿ" ಮಹಾಭಾರತದ ಉಪಕಥೆಯೊಂದನ್ನು ಆಧರಿಸಿ ಬರೆದ ನಾಟಕ. ಇತ್ತೀಚೆಗೆ ರಾಮಚಂದ್ರ ಭಾವೆಯವರು ಅಂಧಪರ್ವ, ಅಶ್ವಮೇಧ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಕ್ರಮವಾಗಿ ಸುಧಾ ಮತ್ತು ತರಂಗಗಳಲ್ಲಿ ಪ್ರಕಟವಾಗಿವೆ. ಅಂಧಪರ್ವ ಕಾದಂಬರಿಯಾಗಿ ಹೊರಬಂದಿದೆ. ಅಲ್ಲದೆ ಮಹಾಭಾರತ ಪಾತ್ರಪ್ರಪಂಚ ಎಂಬ ಸಂಕಲನವೂ ಇದೆ.

ಕೆಲವು ಉಕ್ತಿಗಳು

- See more at: http://www.nammakannadanaadu.com/purana/mahabharata.php#sthash.olzCuSRc.dpuf

Nov 15, 2014

Mallur, Karnataka

Dodda Mallur is a village in Channapatna Taluk in Bangalorerural district in the Indian state of Karnataka. Mallur is located on the banks of the river Kanva. The village is famous for its temples of Sri Aprameya Swamy and Ambegalu Krishna (crawling Krishna). It is approximately 60km from Bangalore in Bangalore-Mysore state highway. It is roughly 3km from Channapatna.
The idol of Ambegalu Navaneetha Krishna (crawling Krishna with butter in hand), is believed to be the only statue of Lord Sri Krishna in this pose. The famous Kriti (musical composition or song) "Jagadodharana Adisidale Yasode" was composed by most prominent composer of Carnatic music Purandaradasa in appreciation of the beauty of this idol.
Dodda Mallur is located between Bangalore and Mysore. Its 60km from Bangalore and approximately 80km from Mysore. It is 3km from Channapatna.
Transport: You can reach Channapatna by Bus and Train. From Channapatna, local autorickshaws and private vehicles transport travelers to Doddamallur.

The Brahmotsavam of Sri Aprameya Swamy happens to fall in the months of April/May of every year. The architecture of this temple is built in such a way that for this part of the year the sunrays at sunrise fall directly on the sanctum sanctorum (Garbhagudi of Sri Aprameya Swamy)

Oct 21, 2014

ಅಜ್ಞಾನದ ಕತ್ತಲೆಯನ್ನು ನೀಗಿಸುವ ಜ್ಞಾನ ಜ್ಯೋತಿ ದೀಪಾವಳಿ

ದೀಪಗಳ, ಬೆಳಕಿನ ಹಬ್ಬವಾದ ದೀಪಾವಳಿ ಅಥವಾ ದಿವಾಳಿಯು ಸ೦ತೋಷದ, ಸ೦ಭ್ರಮಾಚರಣೆಯ, ಸಡಗರದ ಸ೦ದರ್ಭವಾಗಿದೆ. ಮಾತ್ರವಲ್ಲ, ಈ ಹಬ್ಬವು ಎಲ್ಲೆ ಮೀರಿದ ಉತ್ಸಾಹ, ಉಲ್ಲಾಸ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವ ಸ೦ದರ್ಭವೂ ಕೂಡ ಹೌದು. ಯಾವುದೇ ಜಾತಿ, ವರ್ಗ, ಅಥವಾ ಪ್ರಾದೇಶಿಕತೆಯ ಭೇದವಿಲ್ಲದೇ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅರ್ಥೈಸಿಕೊ೦ಡಿರುವ ವಿಚಾರವೇನೆ೦ದರೆ, ಬೆಳಕಿನ ಹಬ್ಬವಾದ ದೀಪಾವಳಿಯು ಯಾವುದೋ ಒ೦ದು ನಿರ್ದಿಷ್ಟವಾದ ಧರ್ಮಕ್ಕೆ ಸೇರಿದುದಲ್ಲ, ಅದಕ್ಕೆ ಬದಲಾಗಿ ಇದು ಇಡೀ ವಿಶ್ವದ ಸ೦ಭ್ರಮಾಚರಣೆಯ ಪರ್ವವಾಗಿದೆ. ನಮ್ಮ ಜೀವ, ಜೀವನ, ಹಾಗೂ ಆತ್ಮದಲ್ಲಿರುವ ಅ೦ಧಕಾರವು ತೊಲಗಲಿ ಹಾಗೂ ನಮ್ಮ ಬಾಳ್ವೆಯಲ್ಲಿ ಸದಾ ಜ್ಞಾನಜ್ಯೋತಿಯು ಪ್ರಕಾಶಿಸುತ್ತಿರಲಿ. ನಾವು ಕೇವಲ ಬಹಿರ೦ಗದ ಅಥವಾ ಹೊರಗಣ, ಹೊರಪ್ರಪ೦ಚದ ಬೆಳಕಿಗನ ಕುರಿತಷ್ಟೇ ಚಿ೦ತಿಸುತ್ತೇವೆ. ಆದರೆ, ನಾವು ಅರ್ಥಮಾಡಿಕೊಳ್ಳಬೇಕಾಗಿರುವ ಸ೦ಗತಿಯೇನೆ೦ದರೆ, ಪ್ರತಿಯೋರ್ವ ವ್ಯಕ್ತಿಯ ಒಳಗಣ ಆತ್ಮವು ಬೆಳಕಿನಿ೦ದ ಪ್ರಕಾಶಮಾನವಾಗಬೇಕು ಹಾಗೂ ಇ೦ತಹ ಸ್ಥಿತಿಯನ್ನು ಹೊ೦ದುವುದೇ ಅತ್ಯ೦ತ ಪ್ರಮುಖವಾದುದು ಎ೦ಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. 

ಭಗವಾನ್ ಶ್ರೀ ಕೃಷ್ಣ ಹಾಗೂ ದೀಪಾವಳಿ ದೀಪಾವಳಿಯ ಈ ಪರ್ವದಿನದ೦ದೇ ಭಗವಾನ್ ಶ್ರೀ ಕೃಷ್ಣನು ನರಕಾಸುರನನ್ನು ಸ೦ಹರಿಸಿದನು. ಈ ಶುಭದಿನದ೦ದೇ ಭಗವಾನ್ ಶ್ರೀ ರಾಮಚ೦ದ್ರನು, ರಾವಣನನ್ನು ಪರಾಭವಗೊಳಿಸಿದ ಬಳಿಕ ತನ್ನ ಪತ್ನಿಯಾದ ಮಾತೆ ಸೀತಾದೇವಿಯೊ೦ದಿಗೆ ಅಯೋಧ್ಯೆಗೆ ಮರಳಿ ಬ೦ದನು. ಈ ದಿನದ೦ದೇ ದೇವಿ ಲಕ್ಷ್ಮೀ ಹಾಗೂ ಭಗವಾನ್ ಶ್ರೀ ವಿಷ್ಣುವಿನ ವಿವಾಹ ಮಹೋತ್ಸವವನ್ನಾಚರಿಸಲಾಯಿತು. ಧರ್ಮಾಸಕ್ತರು ಈ ಪರ್ವದಿನದ೦ದು ಕಾಳಿ ದೇವಿಯನ್ನು ಹಾಗೂ ಮಾತೆ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಇದೇ ಸ೦ದರ್ಭದಲ್ಲಿ ಧನತ್ರಯೋದಶಿ ಹಾಗೂ ಸ೦ಪತ್ತಿನ ಪೂಜೆಯನ್ನು ನೆರವೇರಿಸಲಾಗುತ್ತದೆ.

Oct 20, 2014

ಮೈಸೂರು ಸಮೀಪ ಬೌದ್ಧ ಧರ್ಮದ ಕುರುಹು ಪತ್ತೆ !

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿಯ ಹುರ ಗ್ರಾಮದಲ್ಲಿ ಬೌದ್ಧ ಧರ್ಮದ ಪ್ರಾಚೀನ ನೆಲೆಯೊಂದನ್ನು ಮೈಸೂರು ವಿಶ್ವವಿದ್ಯಾ ನಿಲಯದ ಕನ್ನಡ ಪ್ರಾಧ್ಯಾಪಕ ಡಾ.ಎಂ.ಜಿ. ಮಂಜುನಾಥ್ ಪತ್ತೆ ಹಚ್ಚಿದ್ದಾರೆ.
ಮೈಸೂರಿನಿಂದ ದಕ್ಷಿಣಕ್ಕೆ ಸುಮಾರು 45 ಕಿ. ಮೀ. ದೂರದಲ್ಲಿರುವ ಹುರದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಬೌದ್ಧ ಚೈತ್ಯಾಲಯವೊಂದರ ಗಜಪೃಷ್ಠಾಕಾರದ ಕಟ್ಟಡವೊಂದರ ಆವಶೇಷಗಳು ಹಾಗೂ ಭಗ್ನವಾಗಿರುವ ಬುದ್ಧನ ಮೂರ್ತಿಯು ಕ್ಷೇತ್ರ ಕಾರ್ಯದ ವೇಳೆ ದೊರೆತಿದೆ.

''64 ಸೆಂ.ಮೀ. ಅಗಲ ಮತ್ತು 64 ಸೆಂ.ಮೀ. ಎತ್ತರದ ಕಣಶಿಲೆಯಲ್ಲಿ ನಿರ್ಮಿತವಾದ, ಪದ್ಮಾಸನದಲ್ಲಿ ವ್ಯಾಖ್ಯಾನ ಮುದ್ರೆಯಲ್ಲಿ ಕುಳಿತ ಭಂಗಿಯ ಬುದ್ಧನ ಶಿಲ್ಪದ ತಲೆ ಹಾಗೂ ಬಲಗೈ ಭಿನ್ನವಾಗಿದೆ. ಮೂರ್ತಿಯ ಕಾಲುಗಳವರೆಗಿನ ಪಂಚೆಯ ನೆರಿಗೆಗಳು ಮತ್ತು ಎದೆಯ ಮೇಲಿನ ಉತ್ತರೀಯದ ಗಂಟುಗಳು ಸಹ ಸ್ಪಷ್ಟವಾಗಿ ಕಾಣುವಂತಿವೆ. ವ್ಯಾಖ್ಯಾನ ಮುದ್ರೆಯ ತುಂಡಾದ ಬಲಗೈಯನ್ನು ಅಲ್ಲಿಯೇ ತುಸು ದೂರದಲ್ಲಿರುವ ಅರಳೀ ಮರವೊಂದರ ಕೆಳಗೆ ನಾಗರಕಲ್ಲು ಗಳೊಡನೆ ಪ್ರತಿಷ್ಠಾಪಿಸಲಾಗಿದೆ. ಬುದ್ಧನ ಈ ಶಿಲ್ಪವು ಕ್ರಿ.ಶ. ಸುಮಾರು 6-7ನೇ ಶತಮಾನದ್ದಿರಬಹುದು'' ಎಂದು ಡಾ. ಎಂ.ಜಿ. ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ರಕ್ಷಣೆಗೆ ಆಗ್ರಹ: ''ಕ್ರಿ.ಪೂ. 3ನೇ ಶತಮಾನದಲ್ಲಿ ಮೌರ್ಯ ಚಕ್ರವರ್ತಿ ಅಶೋಕನು ಏರ್ಪಡಿಸಿದ್ದ ಬೌದ್ಧ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಮೊಗ್ಗಲೀಪುತ್ತತಿಸ್ಸ ಎಂಬ ಬೌದ್ಧ ಬಿಕ್ಕು ಬೌದ್ಧ ಧರ್ಮ ಪ್ರಚಾರಕ್ಕೆ ಮಹಿಷ ಮಂಡಲಕ್ಕೆ ಎಂದರೆ ಇಂದಿನ ಮೈಸೂರು ಪ್ರದೇಶಕ್ಕೆ ಮಹಾದೇವ ಎಂಬ ಬೌದ್ಧ ಬಿಕ್ಕು ಎನ್ನುವವನನ್ನು ಕಳುಹಿಸಿದ ಸಂಗತಿಯು ಶ್ರೀಲಂಕೆಯ ಬೌದ್ಧ ಧರ್ಮ ಗ್ರಂಥಗಳಾದ ದೀಪವಂಸ ಹಾಗೂ ಮಹಾವಂಸಗಳಿಂದ ತಿಳಿದುಬಂದಿದೆ. ಆದರೆ, ಮೈಸೂರಿನ ಪ್ರದೇಶದಲ್ಲಿ ಇದುವರೆಗೂ ಬೌದ್ಧ ಧರ್ಮಕ್ಕೆ ಸೇರಿದ ಯಾವ ಕುರುಹುಗಳೂ ದೊರೆತಿರಲಿಲ್ಲ. ಪ್ರಸ್ತುತ ಹುರ ಗ್ರಾಮದಲ್ಲಿ ದೊರೆತಿರುವ ಬೌದ್ಧ ಧರ್ಮದ ಆವಶೇಷಗಳ ಸಂಶೋಧನೆಯಿಂದ ಈ ಪ್ರದೇಶದಲ್ಲಿ ಕ್ರಿ.ಶ. 6-7ನೇ ಶತಮಾನದವರೆಗೂ ಬೌದ್ಧ ಧರ್ಮ ಅಸ್ತಿತ್ವದಲ್ಲಿತ್ತೆಂದು ಖಚಿತ ವಾಗುತ್ತದೆ. ಈ ಸಂಶೋಧನೆಯ ಬಗ್ಗೆ ವಿಸ್ತೃತವಾದ ಪ್ರಬಂಧವೊಂದನ್ನು ಪ್ರಕಟಿಸ ಲಾಗುವುದು'' ಎಂದು ತಿಳಿಸಿದ್ದಾರೆ.
''ಪ್ರಸ್ತುತ ಈ ಚೈತ್ಯಾಲಯವಿದ್ದ ಸ್ಥಳದಲ್ಲಿ ಪಾಯ ತೋಡಿ ಕಟ್ಟಡವೊಂದನ್ನು ಕಟ್ಟುತ್ತಿರುವುದರಿಂದ, ಚೈತ್ಯಾಲಯದ ಆವಶೇಷಗಳು ನಾಶವಾಗುತ್ತಿವೆ. ಪ್ರಾಚೀನ ಸ್ಮಾರಕ ನಾಶಪಡಿಸುವುದು ಶಿಕ್ಷಾರ್ಹ ಅಪರಾಧ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಅಥವಾ ಪುರಾತತ್ವ ಇಲಾಖೆ ಅಧಿಕಾರಿಗಳು ಆ ನಿರ್ಮಾಣ ಕಾರ್ಯವನ್ನು ನಿಲ್ಲಿಸಬೇಕು. ಈ ಸ್ಥಳದಲ್ಲಿ ವೈಜ್ಞಾನಿಕವಾಗಿ ಉತ್ಖನನವನ್ನು ನಡೆಸಿ, ಆ ಬೌದ್ಧವಶೇಷಗಳನ್ನು ಸಂರಕ್ಷಿಸಬೇಕು'' ಎಂದು ಒತ್ತಾಯಿಸಿದ್ದಾರೆ. ಈ ಕ್ಷೇತ್ರ ಕಾರ್ಯದಲ್ಲಿ ಉಪನ್ಯಾಸಕ ದೊಡ್ಡ ಸ್ವಾಮಿ, ವಿದ್ಯಾರ್ಥಿಗಳಾದ ಕೆ.ವಿ. ಮುರುಳಿ, ಎಂ.ಕೆ. ಮಂಜುನಾಥ್, ಎಂ. ಮುನಿ ಕೆಂಪೇ ಗೌಡ ಸಹಕರಿಸಿದರು ಎಂದು ತಿಳಿಸಿದ್ದಾರೆ.
http://vijaykarnataka.indiatimes.com/articleshow/44879655.cms



Oct 7, 2014

ನಿಮಗೆ ಗೊತ್ತಿಲ್ಲದ ರಾಮಾಯಣದ 10 ರಹಸ್ಯಗಳು


ರಾವಣನ ಸಾವಿಗೆ ಪಾರ್ವತಿ ಕಾರಣ!
ನಮಗೆ ತಿಳಿದಿರುವಂತೆ ಹತ್ತು ತಲೆಯ ದುಷ್ಟ ರಾವಣನ ಸಾವಿಗೆ ಕಾರಣ ಸೀತೆ. ಆದರೆ, ನಿಜವಾಗಿ ನೋಡಿದರೆ ಅವನ ಸಾವಿಗೆ ಸೀತೆ ನೆಪ ಮಾತ್ರ. ಅದಕ್ಕೆ ಮೂಲ ಕಾರಣ ಪಾರ್ವತಿಯ ಶಾಪ. ಈಶ್ವರ ರಾವಣನ ತಪಸ್ಸಿಗೆ ಮೆಚ್ಚಿ ಆತ್ಮಲಿಂಗ ಕೊಟ್ಟ ಎಂದು ಕೇಳಿದ್ದೇವೆ. ಆದರೆ ಪಾರ್ವತಿ ಶಾಪ ಕೊಟ್ಟಿದ್ದು ನಮಗೆ ಗೊತ್ತಿಲ್ಲ. ಆತ್ಮಲಿಂಗ ಪಡೆಯುವ ಕಸರತ್ತಿನಲ್ಲಿ ಒಮ್ಮೆ ಶಿವನನ್ನು ಮೆಚ್ಚಿಸಲು ರಾವಣ ಕೈಲಾಸ ಪರ್ವತವನ್ನೇ ಎತ್ತಿದ್ದ. ಆಗ ಪಾರ್ವತಿಗೆ ಬಹಳ ಹೆದರಿಕೆಯಾಗಿತ್ತಂತೆ. ರಾವಣನ ಮೇಲೆ ಸಿಟ್ಟುಗೊಂಡ ಆಕೆ, ನಿನಗೆ ಹೆಂಗಸಿನಿಂದಲೇ ಸಾವು ಎಂದು ಶಾಪ ಕೊಟ್ಟಳಂತೆ.

ಸೇತುವೆ ಕಟ್ಟಲು ಎಷ್ಟು ದಿನ ಬೇಕಾಯ್ತು?
ಭಾರತ-ಶ್ರೀಲಂಕಾ ನಡುವೆ ಇರುವ ರಾಮಸೇತು ಒಡೆಯಲು ಎರಡು ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಅದನ್ನು ಕಟ್ಟಲು ರಾಮನ ಕಪಿಸೈನ್ಯ ತೆಗೆದುಕೊಂಡಿದ್ದು ಕೇವಲ ಐದು ದಿನ! ಸೇತುವೆಯನ್ನು ಕಟ್ಟಿದ್ದು ಕಪಿಸೈನ್ಯ ಎಂಬುದು ಕೂಡ ಪೂರ್ತಿ ನಿಜವಲ್ಲ. ಅದನ್ನು ನಿರ್ಮಿಸಿದ್ದು ರಾಮನ ಅಂತಃಶಕ್ತಿ. ಇಲ್ಲವಾದರೆ, ಯಾರಾದರೂ ಮಂಗಗಳನ್ನಿಟ್ಟುಕೊಂಡು ಸಮುದ್ರಕ್ಕೆ ಸೇತುವೆ ಕಟ್ಟಲು ಸಾಧ್ಯವೇ? ವಾಲ್ಮೀಕಿಗೆ ರಾಮನನ್ನು ಪವಾಡಪುರುಷನನ್ನಾಗಿ ಮಾಡಲು ಇಷ್ಟವಿರಲಿಲ್ಲ. ಅವನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡಿ (ಪುರುಷೋತ್ತಮ) ಜನರಿಗೆ ಆದರ್ಶವಾಗಿ ನೀಡಬೇಕು ಎಂಬುದು ಅವರ ಮನಸ್ಸಿನಲ್ಲಿತ್ತು. ಹಾಗಾಗಿ ಕಪಿಗಳ ನೆರವಿನಿಂದ ರಾಮ ಸೇತುವೆ ಕಟ್ಟಿದ ಎಂಬಂತೆ ಬಿಂಬಿಸಿದರು.
 
ವನವಾಸಕ್ಕೆ ಹೋದಾಗ ರಾಮನಿಗೆ 27 ವರ್ಷ
ರಾಮಾಯಣವನ್ನು ಸೂಕ್ಷ್ಮವಾಗಿ ಓದಿದರೆ ಮಾತ್ರ ಇದು ತಿಳಿಯುತ್ತದೆ. ರಾಮ ವನವಾಸಕ್ಕೆ ಹೊರಟಾಗ ಅವನಿಗೆ 27 ವರ್ಷದ ಪ್ರಾಯ. ಇನ್ನೊಂದು ಕುತೂಹಲಕರ ಸಂಗತಿಯೆಂದರೆ, ಕಾಡಿಗೆ ಹೋದಮೇಲೆ ರಾಮ ಅಲ್ಲಿ ಸುಖವಾಗಿರಲೆಂದು ಅಪ್ಪ ದಶರಥ ಅವನಿಗೆ ತುಂಬಾ ಸಂಪತ್ತು ಕೊಟ್ಟು ಕಳಿಸಬೇಕೆಂದು ಬಯಸಿದ್ದ. ಆದರೆ ಅವನು ಖಾಲಿ ಕೈಲಿ ಹೋಗಬೇಕೆಂದು ಕೈಕೇಯಿ ತಾಕೀತು ಮಾಡಿದಳು. ಅದಕ್ಕೂ ಮುನ್ನವೇ, ಅರಮನೆಯಿಂದ ಏನನ್ನೂ ತೆಗೆದುಕೊಂಡು ಹೋಗಬಾರದೆಂದು ರಾಮ ನಿರ್ಧರಿಸಿದ್ದ. ಕೈಕೇಯಿ ಹೇಳುವುದಕ್ಕೂ ಮೊದಲೇ ಸೀತೆಗೆ ನಾರುವಸ್ತ್ರ ಉಟ್ಟುಕೊಳ್ಳಲೂ ಅವನು ಸೂಚಿಸಿದ್ದ.

ರಾಮ ಶಿವಧನುಸ್ಸನ್ನು ಮುರಿಯಲಿಲ್ಲ!
ಜನಕ ಮಹಾರಾಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಶಿವಧನುಸ್ಸನ್ನು ಮುರಿದು ರಾಮ ಸೀತೆಯನ್ನು ಮದುವೆಯಾದ ಎಂಬ ಜನಪ್ರಿಯ ಕತೆ ಚಾಲ್ತಿಯಲ್ಲಿದೆ. ಆದರೆ, ಮೂಲ ವಾಲ್ಮೀಕಿ ರಾಮಾಯಣದಲ್ಲಿ ಈ ಸನ್ನಿವೇಶವೇ ಇಲ್ಲ. ಶಿವನ ಧನುಸ್ಸನ್ನು ಹೆದೆಗೇರಿಸಿ ರಾಮ ಮುರಿದ ಎಂಬ ಘಟನೆ ಬರುವುದು ತುಳಸೀದಾಸರ ರಾಮಾಯಣದಲ್ಲಿ. ಇದೊಂದು ರೋಚಕ ಕತೆಆಗಿರುವುದರಿಂದ ಎಲ್ಲರ ಮನಸ್ಸಿನಲ್ಲೂ ಉಳಿದಿರಬೇಕು.


ರಾಮಾಯಣದ ಪ್ರಕಾರ ದೇವರು ಕೇವಲ 33
ಹಿಂದೂಗಳ ನಂಬಿಕೆಯಂತೆ ಮುಕ್ಕೋಟಿ (ಮೂರು ಕೋಟಿ) ದೇವರು, ಮೂವತ್ತಮೂರು ಕೋಟಿ ದೇವರು ಎಂದೆಲ್ಲ ಹೇಳಲಾಗುತ್ತದೆ. ಸರಿಯಾಗಿ ಕುಳಿತು ಲೆಕ್ಕ ಹಾಕಿದರೆ ಲಕ್ಷಾಂತರ ದೇವರಂತೂ ಸಿಕ್ಕೇ ಸಿಗುತ್ತಾರೆ. ಆದರೆ ರಾಮಾಯಣದ ಪ್ರಕಾರ ದೇವರು ಹಾಗೂ ದೇವತೆಗಳಿರುವುದು 33 ಮಾತ್ರ. ರಾಮಾಯಣದ ಅರಣ್ಯಕಾಂಡದಲ್ಲಿ ಇದರ ಉಲ್ಲೇಖವಿದೆ.

ದಶರಥ ಮುದುಕನಾದ ಮೇಲೆ ರಾಮ ಹುಟ್ಟಿದ
ಮದುವೆಯಾಗಿ ಬಹಳ ವರ್ಷಗಳವರೆಗೂ ದಶರಥ ರಾಜನಿಗೆ ಮಕ್ಕಳಿರಲಿಲ್ಲ. ಮೂವರು ಹೆಂಡಿರಿದ್ದರೂ ಅವನಿಗೆ ಸಂತಾನ ಭಾಗ್ಯ ಲಭಿಸಿರಲಿಲ್ಲ. ಕೊನೆಗೆ 60 ವರ್ಷವಾದಾಗ ಚಿಂತೆ ಜೋರಾಯಿತು. 'ನನ್ನ ನಂತರ ಅಯೋಧ್ಯೆಯ ಕತೆಯೇನು?' ಆಗ ಪುತ್ರಕಾಮೇಷ್ಠಿ ಯಾಗ ಮಾಡಿದ. ರಾಮ ಹುಟ್ಟಿದ. ನಂತರ ಲಕ್ಷ್ಮಣ, ಭರತ, ಶತ್ರುಘ್ನರು ಹುಟ್ಟಿದರು.


ಲಂಕೆ ನಿಜವಾಗಿ ರಾವಣನದ್ದಲ್ಲ
ಲಂಕೆಗೆ ರಾವಣನ ಲಂಕೆ ಎಂದೇ ಕರೆಯಲಾಗುತ್ತದೆ. ಆದರೆ ಅದು ಮೂಲತಃ ಕುಬೇರನದು. ಲಂಕೆ ಸಂಪೂರ್ಣ ಚಿನ್ನದಿಂದ ನಿರ್ಮಿತವಾಗಿತ್ತು. ಜಗತ್ತಿನ ನಂ.1 ಶ್ರೀಮಂತ ಕುಬೇರ ಅದನ್ನು ನಿರ್ಮಿಸಿ ಆಳುತ್ತಿದ್ದ. ಅವನ ತಮ್ಮ ರಾವಣ. ಅವನಿಗೆ ತಾನೇ ಲಂಕೆಯ ಅಧಿಪತಿಯಾಗಬೇಕು ಎಂಬ ಆಸೆ ಹುಟ್ಟಿತು. ಕುಬೇರ ಅಷ್ಟೇನೂ ಪರಾಕ್ರಮಿಯಲ್ಲ. ಆದರೆ ರಾವಣ ಭಯಂಕರ ಶಕ್ತಿವಂತ. ಅಣ್ಣನನ್ನೇ ಸೋಲಿಸಿ ಲಂಕೆಯನ್ನು ಗೆದ್ದು ತಾನು ಆಳತೊಡಗಿದ.


ಶಿವ ರಾವಣನಿಗೆ ವರ ಕೊಟ್ಟ, ಶಿವನ ಶಿಷ್ಯ ಶಾಪ ಕೊಟ್ಟ!
ವಾಸ್ತವವಾಗಿ ಶಿವನಿಗೂ ರಾವಣನನ್ನು ಕಂಡರಾಗುತ್ತಿರಲಿಲ್ಲ. ಆದರೆ ತಪಸ್ಸು ಮಾಡಿ ತಮ್ಮನ್ನು ಮೆಚ್ಚಿಸುವವರನ್ನು ಕಡೆಗಣಿಸುವ ಶಕ್ತಿ ದೇವರಿಗೂ ಇರಲಿಲ್ಲ. ಹಾಗಾಗಿ ರಾವಣನಿಗೆ ಅನಿವಾರ್ಯವಾಗಿ ವರ ಕೊಟ್ಟ. ಆದರೆ ಶಿವನ ಹೆಂಡತಿ ಪಾರ್ವತಿ ಮತ್ತು ಶಿವನ ವಾಹನ ನಂದಿ ಮಾತ್ರ ರಾವಣನಿಗೆ ಶಾಪ ಕೊಟ್ಟಿದ್ದರು. ಒಮ್ಮೆ ಶಿವನನ್ನು ನೋಡಲು ರಾವಣ ಕೈಲಾಸ ಪರ್ವತಕ್ಕೆ ಹೋಗಿದ್ದ. ಆಗ ಅಲ್ಲಿದ್ದ ನಂದಿಯನ್ನು ನೋಡಿ ಆಡಿಕೊಂಡು ನಕ್ಕನಂತೆ. ಅದರಿಂದ ಸಿಟ್ಟುಗೊಂಡ ನಂದಿ, ಒಂದು ಕೋತಿಯಿಂದ ನಿನ್ನ ಅವಸಾನವಾಗಲಿ ಎಂದು ಶಾಪ ಕೊಟ್ಟನಂತೆ. ನಂತರ ಹನುಮಂತನಿಂದಲೇ ರಾವಣನ ಅವಸಾನ ಆರಂಭವಾಯಿತು.

ಅಪ್ಪನ ಮೇಲೇ ಯುದ್ಧ ಮಾಡು ಎಂದಿದ್ದ ಲಕ್ಷ್ಮಣ
ರಾಮನಿಗೆ ಪಟ್ಟಾಭಿಷೇಕ ಮಾಡುವುದಿಲ್ಲವೆಂದೂ, ಅವನು ವನವಾಸಕ್ಕೆ ಹೋಗಬೇಕೆಂದೂ ದಶರಥ ಮಹಾರಾಜ ಹೇಳಿದಾಗ ಲಕ್ಷ್ಮಣ ಬಹಳ ಸಿಟ್ಟುಗೊಂಡಿದ್ದ. ಅಪ್ಪನ ಮೇಲೆ ಯುದ್ಧ ಮಾಡಿ, ಅವನನ್ನು ಸೋಲಿಸಿ ಸಿಂಹಾಸನ ಗೆಲ್ಲು ಎಂದು ಅಣ್ಣನಿಗೆ ಅವನು ಬಹಳ ಒತ್ತಾಯ ಮಾಡಿದ. ಆಲಕ್ಷ್ಮಣನಿಗೆ ಸಮಾಧಾನ ಮಾಡಿದ.


ಸೀತೆಗಾಗಿ ಇಂದ್ರ ಪಾಯಸ ತಂದಿದ್ದ!
ಸೀತೆ ರಾವಣನ ಅಶೋಕ ವನದಲ್ಲಿದ್ದಾಗ ಅಲ್ಲಿಗೆ ಹೊರಗಿನಿಂದ ಹೋದವನು ಹನುಮಂತ ಮಾತ್ರ ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಆದರೆ, ಅದಕ್ಕೂ ಮೊದಲೇ ಇಂದ್ರ ಅಲ್ಲಿಗೆ ಹೋಗಿದ್ದ. ಸೀತೆಯ ಅಪಹರಣ ಮಾಡಿ ರಾವಣ ಅವಳನ್ನು ಅಶೋಕ ವನಕ್ಕೆ ತೆಗೆದುಕೊಂಡು ಹೋದ ಸುದ್ದಿ ಬ್ರಹ್ಮನಿಗೆ ಗೊತ್ತಾಯಿತು. ಅವನು ಬಹಳ ಬೇಸರಗೊಂಡ. ಸೀತೆಗೆ ಸಂತೋಷವಾಗಲಿ ಎಂದು ಇಂದ್ರನ ಬಳಿ ಪಾಯಸ ಕೊಟ್ಟು ಕಳಿಸಿದ. ಇಂದ್ರ ಅದನ್ನು ತೆಗೆದುಕೊಂಡು ಬಂದು, ತನ್ನ ಮಂತ್ರಶಕ್ತಿಯಿಂದ ಎಲ್ಲಾ ರಾಕ್ಷಸರಿಗೂ ನಿದ್ದೆ ಬರಿಸಿ, ನಂತರ ಸೀತೆಗೆ ಪಾಯಸ ಕೊಟ್ಟಿದ್ದ.

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)

Apr 25, 2014

‘ಕನ್ನಡಿಗರ ಮೊದಲ ಧರ್ಮ

‘ಕನ್ನಡಿಗರ ಮೊದಲ ಧರ್ಮ ಲಿಂಗಾಯತ’ ಎಂದು ಪ್ರೊ. ಎಂ.ಎಂ. ಕಲಬುರ್ಗಿ­ಯವರು ಹೇಳಿದ ವರದಿ (ಪ್ರವಾ ಏ.19, ಪುಟ 5)ಸಂಬಂಧ ಈ ಬರಹ.
*ಪ್ರಾಚೀನ ಕರ್ನಾಟಕದಲ್ಲಿ ವೃತ್ತಿ ಮೂಲದ ಜಾತಿಗಳು ಮಾತ್ರ ಇದ್ದುವೇ ವಿನಾ ಧರ್ಮಗಳು ಇರ­ಲಿಲ್ಲ. ವಚನಕಾರರು ಸೃಜಿಸಿದ ಧರ್ಮವೇ ಕನ್ನಡಿ­ಗರು ಹುಟ್ಟುಹಾಕಿದ ಮೊಟ್ಟಮೊದಲ ಧರ್ಮ .
ಅವರ ಈ ಅಭಿಪ್ರಾಯ ವಾಸ್ತವವಲ್ಲ. ಶೈವ, ಜೈನ, ಬೌದ್ಧ ಧರ್ಮಗಳು ಕ್ರಿಸ್ತಪೂರ್ವದಿಂದ ಇಲ್ಲಿವೆ. ಅವು ವೃತ್ತಿಧರ್ಮಗಳಲ್ಲ. ‘ಲಿಂಗಾಯತ’ ಧರ್ಮ ಹನ್ನೆರಡನೆಯ ಶತಮಾನದಿಂದ ಈಚೆಗೆ ಕಂಡುಬರುತ್ತದೆ. ಹಳಮೆಯೊಂದೇ ಹಿರಿಮೆ­ಯಲ್ಲ. ಪ್ರಾಚೀನವೆಂಬ ಮಾತ್ರಕ್ಕೆ ಪವಿತ್ರವೆಂದೂ ಅಲ್ಲ. ಸಂಖ್ಯಾಬಲವೂ ಅಳತೆಗೋಲಲ್ಲ. ಎಲ್ಲ ಧರ್ಮಗಳೂ ಏರಿಳಿತವನ್ನು ಕಂಡಿವೆ. ಶ್ರೀವೈಷ್ಣ­ವರು ಹೊರಗಿನಿಂದ ಬಂದವರಾದರೂ, ಮಾಧ್ವ­ಧರ್ಮವು ತಡವಾಗಿ ಕಾಣಿಸಿದರೂ ಅವು ಕನ್ನಡ ನಾಡಿಗೆ ಸೇರಿದ ಮೇಲೆ ಕನ್ನಡ ನಾಡಿನ ಧರ್ಮ­ಗಳೆ­ನಿ­ಸಿವೆ. ಮಾಧ್ವದಂತೆ ಲಿಂಗಾಯತವೂ ತಡ­ವಾಗಿ ಇಲ್ಲಿ ಹುಟ್ಟಿದರೂ ಕನ್ನಡ ನಾಡಿನ ಧರ್ಮವೇ. ಯಾರೂ ಅಲ್ಲಗಳೆದಿಲ್ಲ.

*ಬೌದ್ಧ ಜೈನ ವೈದಿಕ ಶೈವ- ಉತ್ತರ ಭಾರತ­ದಿಂದ ರಾಜ್ಯಕ್ಕೆ ವಲಸೆ ಬಂದ ಧರ್ಮಗಳಾಗಿವೆ.
ಜೈನ ವೈದಿಕ ಶೈವ ಉತ್ತರ ಭಾರತದಿಂದ ಬರಲಿಲ್ಲ. ಅವು ಆಸೇತು ಹಿಮಾಚಲವಿದ್ದ ಪುರಾ­ತನ ಧರ್ಮಗಳು. ಜೈನಧರ್ಮ ಉತ್ತರದಿಂದ ಬಂದದ್ದು ಎಂಬುದು ಚರ್ವಿತ ಚರ್ವಣ ಮಾತು. ಉತ್ತರದಲ್ಲಿ ಬರಗಾಲವಾದ ಕಾರಣ ಭದ್ರ­ಬಾಹು, ಸಹಸ್ರಾರು ಮುನಿಗಳು ವಲಸೆ ಬಂದುದು ದಿಟ. ಆದರೆ ಜೈನಧರ್ಮ ಅವರು ಬರು­ವು­ದಕ್ಕೂ ಮೊದಲು ಇಲ್ಲಿತ್ತು. ಜೈನಮುನಿ­ಗಳು ತಾವಾಗಿ ಅಡುಗೆ ಮಾಡಿ ಉಣ್ಣರು. ಅವರು ಗೃಹಸ್ಥರಿಂದ ಆಹಾರ ಪಡೆಯುತ್ತಾರೆ. ಬೃಹತ್ ಪ್ರಮಾಣದ ಮುನಿ ಸಂಘಕ್ಕೆ ಭಿಕ್ಷೆ ನೀಡಲು ಜೈನರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ­ದ್ದರು. ತಮ್ಮ ತಪಸ್ಸಿಗೂ ಆಹಾರಕ್ಕೂ ಇಲ್ಲಿ ನಿರಾತಂಕವೆನಿಸಿ ನೆಲಸಿದರು. ಜೈನಧರ್ಮ ದ್ರಾವಿ­ಡ­­ವೆಂದು ಕೊಂಡಕುಂದರೂ ಪೂಜ್ಯಪಾದರೂ ಪ್ರಾಕೃತ, ಸಂಸ್ಕೃತ ಕೃತಿಗಳಲ್ಲಿ ತಿಳಿಸಿದ್ದಾರೆ. ದ್ರಾವಿಡ ಸಂಘವೆಂಬ ಪ್ರಾಚೀನ ಜೈನ ಮುನಿ­ಸಂಘ­ವಿದೆ. ಆರ್ಯಪೂರ್ವ
 ಜೈನ ದ್ರಾವಿಡರು ದಕ್ಷಿಣ ಭಾರತದಲ್ಲಿ ಹಬ್ಬಿದ್ದರು. ತಮಿಳುನಾಡು ಕರ್ನಾಟಕ ಆಂಧ್ರ ಕೇರಳದಲ್ಲಿ ಕ್ರಿ.ಪೂ. ನಾಲ್ಕ­ನೆಯ ಶತಮಾನದಿಂದ ಕ್ರಿ.ಶ. ಎರಡನೆಯ ಶತ­ಮಾನ­ದವರೆಗೆ ೮೯ ಪ್ರಾಚೀನ ತಮಿಳು ಶಾಸನ­ಗಳು ಸಿಕ್ಕಿವೆ. ಈ ೮೯ರಲ್ಲಿ ೮೫ ಜೈನ ಶಾಸನಗಳು. ಕ್ರಿ.ಪೂ. ಎರಡನೆಯ ಶತಮಾನದ ಶಾಸನಗಳಲ್ಲಿ ಕರ್ನಾಟಕ ಜೈನ ಸನ್ಯಾಸಿನಿಯರ ಪ್ರಭಾವವಿದೆ. ಈ ಬಗೆಯ ಆಧಾರಗಳು ಜೈನಧರ್ಮ ಹೊರಗಿ­ನಿಂದ ವಲಸೆ ಬಂದುದಲ್ಲ, ಅದು ಇಲ್ಲಿಯೇ ಈ ನೆಲದಲ್ಲಿಯೇ ಇದ್ದು ಹಬ್ಬಿದ್ದ ಮೂಲ ದೇಸಿ ಧರ್ಮ­ವೆಂದು ಸಾರುತ್ತಿವೆ. ಕ್ರಿ.ಪೂ. ಆರನೆಯ ಶತ­ಮಾನದಲ್ಲಿ ಮಹಾವೀರ ಜಿನನು ಕರ್ನಾಟಕ­ದ­ವರೆಗೆ ವಿಹರಿಸಿದ ಪ್ರತೀತಿಯೂ ಇದಕ್ಕೆ ಪೂರಕ ಆಧಾರವಾಗಿದೆ.

*ಆತ್ಮ-ಪರಮಾತ್ಮ ಎರಡರಲ್ಲೂ ನಂಬಿಕೆ ಇಲ್ಲದ ಬೌದ್ಧಧರ್ಮ ರಾಜ್ಯದಲ್ಲಿ ಬಹುಬೇಗ ನಾಶವಾಯಿತು.
ಈ ಹೇಳಿಕೆ ನನ್ನಿಯಲ್ಲ. ಚೀನೀ ಪ್ರವಾಸಿ ಹುಮ­ನ­ತ್ಸಾಂಗನು ಆರನೆಯ ಶತಮಾನದಲ್ಲಿ ಈ ರಾಜ್ಯ­ದಲ್ಲಿ ಸಂಚರಿಸಿದಾಗ ನೂರಾರು ಬೌದ್ಧ ವಿಹಾರಗಳಿದ್ದುವು. ಜೈನಧರ್ಮದ ತರುವಾಯ ನಾಡಿನ ಉದ್ದಗಲಗಳಲ್ಲಿ ಹಬ್ಬಿದ್ದುದು ಬೌದ್ಧ­ಧರ್ಮ. ‘ಆತ್ಮಪರಮಾತ್ಮದಲ್ಲಿ ನಂಬಿಕೆ ಇಲ್ಲ’­ದಿ­ದ್ದರೂ ಅದರ ಪ್ರಸರಣಕ್ಕೆ ಅಡ್ಡಿ ಇರಲಿಲ್ಲ. ರಾಜರ ಪ್ರಜೆಗಳ ಪ್ರೀತಿ, ಪ್ರೋತ್ಸಾಹಕ್ಕೆ ಅರೆಕೊರೆ ಇರ­ಲಿಲ್ಲ. ಐಹೊಳೆ, ಕನಗನಹಳ್ಳಿ, ಕದ್ರಿ, ಕೋಳಿ­ವಾಡ, ಡಂಬಳ, ತೊರ್ಕೆ, ರಾಜಘಟ್ಟ, ಬನ­ವಾಸಿ, ಬಳ್ಳಿಗಾವೆ ಮುಂತಾದ ಸ್ಥಳಗಳ ಬೌದ್ಧ ವಿಹಾ­ರ­ಸ್ತೂಪಗಳನ್ನು ಕೆಡವಿ ಧ್ವಂಸ ಮಾಡಿ­ದರು. ಬೌದ್ಧಧರ್ಮದ ಅಭ್ಯುದಯ ಸಹಿಸದೆ ನಾಶ­­ಪಡಿಸಿದ ಪಡೆಗಳನ್ನು ತಾಳಿಕೋಟೆ ಶಾಸನ ದಾಖಲಿಸಿದೆ : ಪರಸಮಯಗಿರಿ ವಜ್ರದಂಡರುಂ, ಜಗದಲುದ್ದಂಡರುಂ, ಬೌದ್ಧ ಸಮಯ ವಿಧ್ವಂಸನ ಪ್ರವೀಣರುಂ, ಅನ್ಯ ಸಮಯಿಗಳ ಬೆನ್ನಬಾರನೆತ್ತು­ವರುಂ –- ಆಗಿದ್ದವರು ವಿರುಪರಸ ಮಹಾ­ಮಂಡ­ಲೇ­ಶ್ವರನು ಮುಂದಾಳು ಆಗಿದ್ದ ಉಗ್ರ ಶಿವ­ಭಕ್ತರು. ಕಾವಿಬಟ್ಟೆ ತೊಟ್ಟು ಕರುಣಾಳು ಬುದ್ಧನ ತತ್ವಗಳನ್ನು ಬೋಧಿಸುತ್ತ ವೈಚಾರಿಕ ಪ್ರಜ್ಞೆ ಬಿತ್ತಿ ವೈಜ್ಞಾನಿಕ ದೃಷ್ಟಿ ಮೂಡಿಸುತ್ತಿದ್ದ ಬೌದ್ಧ ಭಿಕ್ಖುಗಳ ಮೇಲೆರಗಿ ಅವರ ಬೆನ್ನಿನ ಹುರಿ ಕಿತ್ತರು. ನಿರಾಯುಧ ಬೌದ್ಧರನ್ನು ಸಶಸ್ತ್ರ ಸನ್ನ­ದ್ಧರು, ‘ಬೌದ್ಧ ಸಮಯ ವಿಧ್ವಂಸನ ಪ್ರವೀಣರು’ ಬೆಂಬತ್ತಿ ಬೇಟೆ ಆಡಿ ಕೊಂದರು. ಅದರಿಂದಾಗಿ ‘ಬಹುಬೇಗ ನಾಶ’ವಾಗುವುದು ಅನಿವಾರ್ಯ. ‘ಧರ್ಮಗಳ ದಬ್ಬಾಳಿಕೆ ಹೆಚ್ಚಾದಾಗ’ ಎಂಬ ಪ್ರಯೋಗ ಸರಿಯಾದುದು. ಆ ‘ದಬ್ಬಾಳಿಕೆ’ ಮಾಡಿ­ದ­ವರು, ಮುಂಗೈ ಜೋರಿನಿಂದ ದಾಳಿಯೆ­ಸ­ಗಿದ್ದು ಬೌದ್ಧರಲ್ಲ, ಜೈನರಲ್ಲ. ನರಮೇಧ ನಿರ­ತರು ಯಾರೆಂಬುದನ್ನು ಶಾಸನಗಳೂ ವೀರಶೈವ ಪುರಾಣಗಳೂ ದಾಖಲಿಸಿವೆ.

*ಕೇವಲ ಆತ್ಮವಾದಿಯಾದ ಜೈನಧರ್ಮ ಅರೆಜೀವ ಹಿಡಿದು ಉಳಿಯಿತು .
ಅರೆಜೀವ ಸ್ಥಿತಿ ಬಂದದ್ದು ಹೇಗೆ, ತಂದವರು ಯಾರು ಎಂಬುದನ್ನು ಚರಿತ್ರೆ ನಮೂದಿಸಿದೆ. ಬೌದ್ಧ­ಧರ್ಮದ ಮೇಲೆ ಹರಿಹಾಯ್ದು ಮುಕ್ಕಿ­ದ­ವರೇ ಈ ಕೆಲಸ ಮಾಡಿದರು. ಉಗ್ರ ಶಿವ­ಭಕ್ತ­ರಾದ ಆದಯ್ಯ, ಏಕಾಂತದ ರಾಮಯ್ಯ, ಗೊಗ್ಗ­ರಸ, ವಿರುಪರಸ ಮೊದಲಾದವರ ದಂಡಿನ ಉಪ­ಟ­ಳಕ್ಕೆ ಕೊನೆ ಮೊದಲು ಇರಲಿಲ್ಲ. ಇವರಿತ್ತ ಅಟ್ಟುಳಿಯ ವಿವರಗಳು ಕಲ್ಬರೆಹಗಳಲ್ಲಿ ವೀರ­ಶೈವ ಪುರಾಣಗಳಲ್ಲಿ ಪುಂಖಾನುಪುಂಖವಾಗಿವೆ. ಗೊಗ್ಗ­ರಸನ ಪರಾಕ್ರಮದ ಒಂದು ತುಣುಕು ಅಣ್ಣಿಗೆರೆ ಶಾಸನದಲ್ಲಿದೆ:

ಜೈನಮೃಗ ಬೇಂಟೆಗಾರಂ
ಜೈನಾಗಮಧೂಮಕೇತು ಜೈನ ಕುಠಾರಂ
ಜೈನ ಫಣಿ ವೈನತೇಯಂ
ಜೈನಾಂತಕನೆನಿಸಿ ನೆಗಳ್ದನೀ ಗೊಗ್ಗರಸಂ.
ವಿರುಪರಸನೂ ಅವನ ಸೈನ್ಯವೂ ಕೈಗೊಂಡ ಧರ್ಮ­ಯುದ್ಧ ಮತ್ತು ಮಾಡಿದ ಸಾಹಸ ಕಾರ್ಯ­ಗಳ ಒಂದು ಉದಾಹರಣೆ ತಾಳಿಕೋಟೆ ಶಾಸನದಲ್ಲಿದೆ :-
ಜಿನ ಸಮಯವನ ದಹನದಾವಾನಲರು
ಪರಿಯಳಿಗೆ ಅಣಿಲೆವಾಡ ಉಣಕಲ್ಲು ಸಂಪಗಾಂವಿ
ಅಬ್ಬಲೂರು ಮಾರುಡಿಗೆ ಅಣಂಪೂರು ಕರಹಾಡ ಕೆಂಬಾವಿ
ಬಮ್ಮಕೂರು ಮೊದಲಾಗಿ ಅನಂತ ದೇಶಾಂತರದಲಿ
ಬಸದಿಗಳಂ ಹೊಸೆದು ಮುಕ್ಕಿ ಶಿವಲಿಂಗ ಸಿಂಹಾಸನಮಂ
ಕಂಗೊಳಿಸಿ ಚಲಂ ಮೆರೆದರು.

ಇವರು ತಮ್ಮ ‘ಚಲಮೆರೆದ’ದ್ದು ಹೇಗೆ ಎಂಬು­­ದಕ್ಕೆ ಮೇಲೆ ಹೇಳಿರುವ ಊರುಗಳಲ್ಲಿ ಒಂದಾದ ಅಬ್ಬಲೂರಿನಲ್ಲಿ ನಡೆದ ಘಟನೆಯನ್ನು ಅರಿತರೆ ಸಾಕು. ಅಬ್ಬಲೂರಿನ ಶಾಸನ ಮತ್ತು ಸೋಮೇಶ್ವರ ದೇವಾಲಯದಲ್ಲಿರುವ ಚಿತ್ರಶಿಲ್ಪ ‘ಧರ್ಮದ ದಬ್ಬಾಳಿಕೆ ಹೆಚ್ಚಾದು’ದನ್ನು, ಮರೆ­ಮಾಚಲು ಆಗದ ‘ನಗ್ನ ಸತ್ಯ’ವನ್ನು ಬಿತ್ತರಿಸಿವೆ. ಎಲ್ಲೆಲ್ಲಿ ಜೈನ ದೇವಾಲಯಗಳನ್ನು ‘ಹೊಸೆದು ಮುಕ್ಕಿ’ದ್ದನ್ನು ತಾಳಿಕೋಟೆ ಶೈವ ಶಾಸನ ದೊಡ್ಡ ಪಟ್ಟಿ­ಯನ್ನೇ ಕೊಟ್ಟಿದೆ. ಅದರ ಮುಂದುವರಿ­ಕೆಯ ದಾಳಿ ಭಯಂಕರ ರೂಪ ತಾಳಿದ್ದು ಅಬ್ಬ­ಲೂ­ರಲ್ಲಿ. ಅಲ್ಲಿನ ಶಾಸನ, ಹರಿಹರ ಕವಿಯ ಏಕಾಂತರಾಮಿ ತಂದೆಗಳ ರಗಳೆ, ರಾಘವಾಂಕ ಕವಿ ಸೋಮನಾಥ ಚರಿತೆಯ ಪದ್ಯ, ಭೀಮ ಕವಿಯ ಬಸವಪುರಾಣ, ಲಕ್ಕಣದಂಡೇಶನ ಶಿವ­ತತ್ವ­ಚಿಂತಾಮಣಿ, ಗುಬ್ಬಿ ಮಲ್ಲಣಾರ್ಯನ ವೀರ­ಶೈವಾ­ಮೃತ ಪುರಾಣ, ವಿರಕ್ತ ತೋಂಟದಾ­ರ್ಯನ ಸಿದ್ಧೇಶ್ವರ ಪುರಾಣ, ವಿರೂಪಾಕ್ಷ ಪಂಡಿ­ತನ ಚೆನ್ನಬಸವ ಪುರಾಣ, ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯ ಕಥಾಮಣಿಸೂತ್ರ ಮುಂತಾದ ವೀರಶೈವ ಪುರಾಣಗಳಲ್ಲಿ ಹಿಂಸಾರ­ಭ­­ಸ­ಮತಿಗಳು ನರಹತ್ಯೆಯಲ್ಲಿ ನಿರತರಾಗಿ ಹೆಮ್ಮೆ­ಯಿಂದ ಬೀಗಿದ ವರ್ಣನೆಯಿದೆ. ಭೀಮಕವಿ ಬಸವ­ಪುರಾಣದಲ್ಲಿ ಜೈನರ ಮೇಲೂ ಜೈನ ಸನ್ಯಾಸಿ­ಗಳ ಮೇಲೂ ಆಕ್ರಮಣ ಮಾಡಿ, ಹೊಡೆದು ಬಡಿದು ಹಿಂಸಿಸಿದ ವಿಧಾನಗಳನ್ನು ನಿರೂಪಿಸಿದ್ದಾನೆ-.
ಜಿನಮುನಿಗಳ ತಲೆಗಳಂ ಕೆಡಹುತ ಮುಳಿದು
ಜಿನರೂಪಗಳ ತಲೆಗಳನರಿದು ಹುಡಿಗುಟ್ಟಿ,
ಹಾರಿ ಕೆಡಹುತ ಜಿನ ಬಸದಿಗಳನೇರಿ ಜಾರುತ
ದಾಳಿ ದಬ್ಬಾಳಿಕೆ ನಡಸಿದರು.

ವಿರಕ್ತ ತೋಂಟದಾರ್ಯ  ಕವಿ ‘ಸಿದ್ಧೇಶ್ವರ ಪುರಾಣ’­ದಲ್ಲಿ - ‘ಮಹಾಶೂರ ಏಕಾಂತ ರಾಮ­ಯ್ಯನು ಹುರುಪೇರಿ ತನ್ನ ಮೊನಚು ಕತ್ತಿ ಝಳಪಿ­ಸುತ್ತ ಅಬ್ಬಲೂರಿನ ಜೈನರ ಕೇರಿಗೆ ನುಗ್ಗಿದನು. ಜಿನ­ಬಿಂಬಗಳನ್ನು ಕಿತ್ತೆಸೆದು ಶಿವಲಿಂಗಗಳನ್ನು ನೆಟ್ಟನು. ಜೈನರ ತಲೆಗಳನ್ನು ಕತ್ತರಿಸಿ ಕೀರ್ತಿಗಳಿಸಿ­ದನು’ ಮುಂತಾಗಿ ಮಾಹಿತಿ ಒದಗಿಸಿದ್ದಾನೆ. ಶಾಂತ­ ನಿರಂಜನ ಕವಿ ಅಬ್ಬಲೂರು ಚರಿತೆ ಕಾವ್ಯದಲ್ಲಿ ಜೈನರ ಮೇಲೆ ಆದ ಮಾರಣ ಹೋಮ­­ವನ್ನೂ ಜೈನರನ್ನೂ ದಿಗಂಬರ ಮುನಿಗ­ಳನ್ನೂ ಹೆಂಗಸರನ್ನೂ ಕೊಂದು, ಹಿಂಸಿಸಿ, ಇಡೀ ಕೇರಿ­ಯನ್ನು ಸ್ಮಶಾನವನ್ನಾಗಿಸಿದ್ದನ್ನೂ ತನ್ಮಯ­ನಾಗಿ ತಿಳಿಸಿದ್ದಾನೆ. ‘ಸೋಮೇಶ್ವರ ದೇವರು ಏಕಾಂತದ ರಾಮಯ್ಯನಿಗೆ ಜಿನಭಕ್ತರನ್ನೂ ಜಿನ­ಮುನಿ­ಗಳನ್ನೂ ಎಳೆದು ಬಿಸುಡಲು ಅಪ್ಪಣೆ ಮಾಡಿ­ದರು. ಅದರಂತೆ ಜೈನರನ್ನೂ ಜೈನಯತಿ­ಗಳನ್ನೂ ದರದರನೆ ಎಳೆದು ತಂದು ರಾಮಯ್ಯನ ಮುಂದೆ ನಿಲ್ಲಿಸಿದರು. ರಾಮಯ್ಯನು ಅವರ ಮೂಗು, ಕೈ, ನಾಲಗೆಗಳನ್ನು ಕತ್ತರಿಸಿ ವಿಕಲಾಂಗ­ಗೊಳಿಸಿ­ದನು. ಹೊಟ್ಟೆಗೆ ತಿವಿದನು. ಬೀದಿಯಲ್ಲಿ ನೆತ್ತರು ಹರಿಯಿತು, ಭೂತಗಳು ನಲಿದುವು. ಹದ್ದು ಕಾಗೆಗಳು ರಕ್ತ ಕುಡಿದು ಕುಣಿದುವು. ಜೈನರ ಕತ್ತರಿಸಿದ ತಲೆಗಳು, ಮುಂಡಗಳು ಚೆಲ್ಲಾ­ಪಿಲ್ಲಿ ಬಿದ್ದುವು. ಗೊಳೋ ಅಳುತ್ತ ಜೈನ ಮಹಿಳೆಯರು ತಮ್ಮ ಗಂಡಂದಿರ ಹರಣ ಉಳಿಸಿ­ದರೆ ಜೈನಧರ್ಮ ತೊರೆದು ಇಷ್ಟಲಿಂಗ ಧರಿಸಿ ಲಿಂಗಾಯತರಾಗುವುದಾಗಿ ಬೇಡಿಕೊಳ್ಳುತ್ತಿ­ದ್ದರು’. ಈ ವರ್ಣನೆ ವಿವರಣೆ ಬೇಕೆ!
ವೀರಶೈವ ಪುರಾಣಗಳ ವರ್ಣನೆಗೆ, ಶಾಸನ­ಗಳ ದಾಖಲೆಗಳಿಗೆ ಜೀವ ತುಂಬಿವೆ ಅಬ್ಬಲೂರಿನ ಶಿಲ್ಪಗಳು. ಜೈನರ ಕಗ್ಗೊಲೆಯ ದೃಶ್ಯಾವಳಿ ನಡೆದ ಹಿಂಸಾಕಾಂಡದ ಚಿತ್ರೀಕರಣದಂತಿವೆ. ಜೈನ­ ಹೆಂಗಸರನ್ನು ಅಂಗಲಾಚಿದರೂ ಬಿಡದೆ ವಿವಸ್ತ್ರ­ಗೊಳಿಸಿರುವುದು, ನಿರಾಯುಧರಾದ ದಿಗಂಬರ ಮುನಿಗಳ ತಲೆ ಕತ್ತರಿಸುತ್ತಿರುವುದು, ಇಬ್ಬಾಯಿ ಕತ್ತಿಯಿಂದ ಎದೆಗೆ ತಿವಿಯುವುದು, ಮರದ ಕೊಂಬೆ ರೆಂಬೆಗೆ ಜೈನರನ್ನೂ ಗುರು­ಗಳನ್ನೂ ನೇತಾಡಿಸಿ ಹಿಂಸಿಸುತ್ತಿರುವುದು, ಸುತ್ತಿಗೆ­ಯಿಂದ ಜಿನಬಿಂಬಗಳನ್ನು ಒಡೆದು ತುಂಡರಿ­ಸು­ವುದು, ಜೈನರ ರಕ್ತವನ್ನು ಕಾಗೆಗಳಿಗೆ ಊಡುತ್ತಿ­ರು­ವುದು, ದನಗಳ ರಾಸನ್ನು ಜೈನರ ಮೇಲೆ ಹಾಯಿಸುವುದು, ಕೊಂದ ಹೆಣಗಳ ಮೇಲೆ ಓಡಾಡು­ವುದು - ಮುಂತಾದ ವ್ಯಾಖ್ಯಾನ ನಿರ­ಪೇಕ್ಷ ದಾರುಣ ಚಿತ್ರಗಳು ‘ಧರ್ಮದ ದಬ್ಬಾಳಿಕೆ ಹೆಚ್ಚಾದು’ದಕ್ಕೆ ಸಾಕ್ಷಿ ಹೇಳುತ್ತಿವೆ. ಬೌದ್ಧರು, ಜೈನರು ಅನ್ಯಧರ್ಮದ ಮೇಲೆ ದಾಳಿ ದಬ್ಬಾಳಿಕೆ ಮಾಡಲಿಲ್ಲ. ಬೇರೆ ಧರ್ಮೀಯರ ಮನೆ ಮಠ ಮಂದಿರ ನಾಶಪಡಿಸಲಿಲ್ಲ. ಹೆಂಗಸರ ಮಾನ­ಹಾನಿ ಮಾಡಲಿಲ್ಲ. ಕೊಲೆಗೈಯಲಿಲ್ಲ. ಆಯುಧ ಹಿಡಿದು ಕೊಲೆ ಮಾಡುವುದಾಗಿ ಬಲಾತ್ಕಾರ­ದಿಂದ ಹೆದರಿಸಿ ಬೆದರಿಸಿ ಮತಾಂತರಕ್ಕೆ ತೊಡಗ­ಲಿಲ್ಲ. ಆದರೂ ಬೌದ್ಧರನ್ನು ‘ಬಹುಬೇಗನಾಶ’ ಮಾಡಿ­ದ­ವರು, ಜೈನರನ್ನು ‘ಅರೆಜೀವ ಹಿಡಿದು ಉಳಿಯು’ವಂತೆ ಮಾಡಿದವರು ಯಾರು ಎಂಬುದು ಶಾಸನ, ಕಾವ್ಯಗಳಲ್ಲಿ ನಮೂದಾ­ಗಿದೆ.
*ವಲಸೆ ಬಂದ (?) ಧರ್ಮಗಳು ನಮ್ಮ ಸಾಹಿತ್ಯ ಹಾಗೂ ಜೀವನ ಕ್ಷೇತ್ರ ಎರಡರ ಮೇಲೂ ಗಾಢ ಪ್ರಭಾವ ಬೀರಿದವು. ರಾಮಾ­ಯಣ, ಮಹಾಭಾರತ, ‘ತೀರ್ಥಂಕರ’ ಪುರಾಣ­ಗಳನ್ನೇ ಓದುವುದು ಕನ್ನಡಿಗರಿಗೆ ಅನಿವಾರ್ಯ­ವಾಯಿತು. ಅವುಗಳಿಂದ ನಮ್ಮ ಅರಿವು ವಿಸ್ತಾರ­ವಾದರೂ ಅಸ್ಮಿತೆ ನಾಶವಾಯಿತು.
ಇದು ವಿರೋಧಾಭಾಸದ ಮಾತು. ಸತ್ವ ಇರು­ವು­ದರಿಂದ ಗಾಢಪ್ರಭಾವ ಬೀರಿದುವು. ಅದು ಆರೋಗ್ಯ­ಕಾರಿ ಪ್ರಭಾವ. ರಾಮಾಯಣ ಮಹಾ­ಭಾರತ ಭಾರತೀಯ ಸಾರಸರ್ವಸ್ವದ ಎರಡು ಮಹಾ­­ಕಾವ್ಯಗಳು. ಅವನ್ನು ಓದುವುದು ಅಗತ್ಯ­ವಾದರೂ ಅನಿವಾರ್ಯವೇನೂ ಆಗಿರಲಿಲ್ಲ. ತೀರ್ಥಂಕರ ಪುರಾಣಗಳು ಇನ್ನಷ್ಟು ವೈವಿಧ್ಯ ವಿಸ್ತಾರ ತಂದಿವೆ. ಹಾಗೆಯೇ ವೀರಶೈವ ಪುರಾಣ­ಗಳೂ ವಚನಗಳೂ ಕೀರ್ತನೆಗಳೂ ಮತ್ತಷ್ಟು ವೈಭವ ವೈವಿಧ್ಯ ವಿಸ್ತಾರಗಳನ್ನು ತಂದಿವೆ.
‘ಅಸ್ಮಿತೆ ನಾಶವಾಯಿತು’ ಎಂಬುದು ಒಪ್ಪತಕ್ಕ ಮಾತಲ್ಲ. ಯಾವುದು ನಮ್ಮ ಅಸ್ಮಿತೆ? ಜೈನರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಸಂವರ್ಧ­ಕರು. ನಾಡುನುಡಿಗಳ ಅಭಿಮಾನವನ್ನು ರೂಪಿಸಿ ರೂಢಿ­ಸಿ­ದರು. ಸಂಸ್ಕೃತ ಪ್ರಾಕೃತಗಳ ಪ್ರಭಾವ­ವನ್ನು ಪ್ರತಿಭಟಿಸಿ ಕನ್ನಡವನ್ನೂ ಕನ್ನಡಿಗರನ್ನೂ ಕಾಪಾಡಿ­ದರು. ಜನರನ್ನು ಒಂದುಗೂಡಿಸುವ, ಒಟ್ಟಿಗೆ ಬಾಳುವ, ಪರಧರ್ಮವನ್ನು ಸಹಿಸುವ, ಪರವಿಚಾರವನ್ನು ಆಲಿಸುವ ಸೌಹಾರ್ದದಿಂದ ಪುದುವಾಳುವ ಸಂಸ್ಕೃತಿಯನ್ನು ಬಿತ್ತಿದರು. ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಈ ನಾಡಿನದು ಸಮನ್ವಯ ಸಂಸ್ಕೃತಿ. ಶೈವ, ಜೈನ, ಬೌದ್ಧ, ಲಿಂಗಾಯತ, ವೈಷ್ಣವ ಧರ್ಮಗಳು ಕನ್ನಡಿಗರ ಹೆಮ್ಮೆಯ ಧರ್ಮಗಳು.
ಕೃಪೆ : ಪ್ರಜಾವಾಣಿ

Mar 15, 2014

ಪ್ರವಾಸೋದ್ಯಮ - ಚನ್ನಪಟ್ಟಣ

ಪ್ರವಾಸೋದ್ಯಮದ ಬಗ್ಗೆ ಸಂಕ್ಷಿಪ್ತ ಪರಿಚಯ:

       ಚನ್ನಪಟ್ಟಣ ನಗರವು ಬೆಂಗಳೂರಿನಿಂದ ಸುಮಾರು 50 ಕಿ.ಮೀ ಗಳ ಅಂತರದಲ್ಲಿರುತ್ತದೆ. ಚನ್ನಪಟ್ಟಣ ನಗರವು ಗೊಂಬೆಗಳ ನಗರವೆಂದು ಪ್ರಸಿದ್ಧಿಯೊಂದಿದ್ದು, ಮರದ ಗೊಂಬೆಗಳ ತಯಾರಿಕೆ ಮತ್ತು ಕರಕುಶಲತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಹೊಂದಿದೆ.
    ಚನ್ನಪಟ್ಟಣ ನಗರವನ್ನು ಮೊಟ್ಟ ಮೊದಲ ಬಾರಿಗೆ ತಿಮ್ಮಪ್ಪ ರಾಜ ಅರಸು ನಂತರ ಜಗದೇವರಾಜ್ ರವರು ತಮ್ಮ ಆಳ್ವಿಕೆಯನ್ನು ನಡೆಸಿದರು ನಂತರ ಚನ್ನಪಟ್ಟಣವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳ್ವಿಕೆ ನಡೆಸಿದ್ದರು.
ಈ ಕೆಳಕಂಡ ಸ್ಥಳಗಳು ಚನ್ನಪಟ್ಟಣ ನಗರದ ಸಮೀಪದಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳಗಳಾಗಿವೆ.
1)      ಕಣ್ವ ಮಹರ್ಷಿ ಮಠ ಮತ್ತು ಬ್ರಾಹ್ಮಣ್ಯ ತೀರ್ಥರ ಬೃಂದಾವನ ಅಬ್ಬೂರು.
2)      ಕಣ್ವ ಜಲಾಶಯ         
3)       ಮಳೂರು ಅಪ್ರಮೇಯ ಸ್ವಾಮಿ ದೇವಸ್ಥಾನ, ದೊಡ್ಡಮಳೂರು.
4)       ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ.
5)       ಇಗ್ಗಲೂರು ಅಣೆಕಟ್ಟೆ
6)       ಬೆಟ್ಟದ ತಿಮ್ಮಪ್ಪ ಬೇವೂರು.
ತಲುಪುವ ಮಾರ್ಗ
1)      ಕಣ್ವ ಮಹರ್ಷಿ ಮಠ ಮತ್ತು ಬ್ರಾಹ್ಮಣ್ಯ ತೀರ್ಥರ ಬೃಂದಾವನವು ಚನ್ನಪಟ್ಟಣ ನಗರದ ಕಣ್ವ ಜಲಾಶಯದಿಂದ 6 ಕಿ.ಮೀ ದೂರದಲ್ಲಿದೆ.
2)      ಕಣ್ವ ಜಲಾಶಯ ಚನ್ನಪಟ್ಟಣದಿಂದ 13 ಕಿ.ಮೀ ದೂರದಲ್ಲಿದೆ.
3)       ಮಳೂರು ಅಪ್ರಮೇಯ ಸ್ವಾಮಿ ದೇವಸ್ಥಾನವು ಚನ್ನಪಟ್ಟಣದಿಂದ 2 ಕಿ.ಮೀ ದೂರದಲ್ಲಿದ್ದು ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯ ನಡೆವೆಯಲ್ಲಿದೆ.
4)      ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನವು ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಬರುವ ಮಾರ್ಗದಲ್ಲಿದ್ದು, ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯ ಬಳಿಯಿರುತ್ತದೆ.
5)      ಇಗ್ಗಲೂರು ಅಣೆಕಟ್ಟೆಯು ಚನ್ನಪಟ್ಟಣದಿಂದ 20 ಕಿ.ಮೀ ದೂರದಲ್ಲಿದೆ. ಸಂತೆಮೊಗೇನಹಳ್ಳಿ ಮತ್ತು ಅಕ್ಕೂರು ಮಾರ್ಗದ ಲ್ಲಿದೆ.
6)  ಬೆಟ್ಟದ ತಿಮ್ಮಪ್ಪ ದೇವಸ್ಥಾನವು ಚನ್ನಪಟ್ಟಣದಿಂದ 13 ಕಿ.ಮೀ ದೂರದಲ್ಲಿದೆ. ನಿಡಸಾಲೆಗೆ ಹೋಗುವ ಮಾರ್ಗದಲ್ಲಿದೆ.

ಮಳೂರಿನ ಅಂಬೆಗಾಲುಕೃಷ್ಣ

ಈ ಮುದ್ದು ಕೃಷ್ಣನನ್ನು ಕುರಿತು ಪುರಂದರದಾಸರು ಹಾಡಿದ ಗೀತೆ



ಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ (ಪ)

ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1)

ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ (2)

ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾ (3)

Mar 14, 2014

ಶ್ರೀಮಂತ ಸಂಸ್ಕೃತಿಯ ‘ಸಮೃದ್ಧ’ ಜಿಲ್ಲೆ – ರಾಮನಗರ

ಪೀಠಿಕೆ: ಕರುನಾಡಿನ ಇಪ್ಪತ್ತೆಂಟನೆಯ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದ ರಾಮನಗರ ಪ್ರಾಕೃತಿಕ, ಐತಿಹಾಸಿಕ, ಧಾರ್ಮಿಕ, ಬೌದ್ಧಿಕ, ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆಯ ಜಿಲ್ಲೆ. ಅದರಲ್ಲೂ ರಾಜಕೀಯ ಪ್ರಜ್ಞಾವಂತಿಕೆಯನ್ನು ಮೈಗೂಡಿಸಿಕೊಂಡು ಯಾವುದೇ ವಿಚಾರಕ್ಕೆ ತಕ್ಷಣ ಪ್ರತಿಕ್ರಿಯಿಸುವ ಸಹೃದಯರ ಬೀಡು. ರಾಜಧಾನಿ ಬೆಂಗಳೂರಿಗೆ ಕೇವಲ ಕೆಲವೇ ನಿಮಿಷಗಳಲ್ಲಿ ತಲುಪಿಬಿಡಬಹುದಾದ ರಾಮನಗರ ಇದೀಗ ಅಭಿವೃದ್ಧಿಯತ್ತ ದಾಪುಗಾಲಿಟ್ಟು ಮುನ್ನಡೆಯುತ್ತಿದೆ. ರಾಮನಗರದ ಹೆಸರು ಹೇಳುತ್ತಿದ್ದಂತೆ ರೇಷ್ಮೆ, ವಿಧಾನ ಸೌಧದ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಂತರಾಯರು, ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡರು, ವಿಶ್ವ ಪ್ರಸಿದ್ಧ ಚನ್ನಪಟ್ಟಣದ ಬಣ್ಣದ ಗೊಂಬೆಗಳು, ‘ಕ್ಲೋಸ್ ಪೇಟೆ’ಯ ಗ್ರಾನೈಟ್, ನಾಗೇಗೌಡರ ಜಾನಪದ ಲೋಕ , ಕಾನಕನಹಳ್ಳಿಯ ಕಾವೇರಿಯ ಬಯಲು ಇತ್ಯಾದಿಗಳೆಲ್ಲ ನೆನಪಾಗುತ್ತವೆ.
ಗಡಿಗಳು: ರಾಮನಗರ ಬೆಂಗಳೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿದೆ. 2007ರ ಆಗಸ್ಟ್ 23ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪ್ರತ್ಯೇಕಗೊಂಡು ರಾಜ್ಯದ 28ನೇ ಜಿಲ್ಲೆಯಾಗಿ ಅಸ್ಥಿತ್ವ ಕ್ಕೆ ಬಂತು. ರಾಮನಗರ ಜಿಲ್ಲೆಯ ಉತ್ತರಕ್ಕೆ ಬೆಂಗಳೂರು ಗ್ರಾಮಾಂತರ, ದಕ್ಷಿಣಕ್ಕೆ ಚಾಮರಾಜ ನಗರ, ಮಂಡ್ಯ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳು, ಪೂರ್ವಕ್ಕೆ ಬೆಂಗಳೂರು ನಗರ ಜಿಲ್ಲೆ, ಪಶ್ಚಿಮಕ್ಕೆ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ಹೊಂದಿಕೊಂಡಿವೆ.
ವಿಶೇಷತೆ: ಜಿಲ್ಲೆಯ ವ್ಯಾಪ್ತಿಯಲ್ಲಿ ನಾಲ್ಕು (ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ) ತಾಲ್ಲೂಕುಗಳಿವೆ. ವಿಶಿಷ್ಟ ಪರಿಸರದ ಜತೆಗೆ ಗುಡ್ಡಗಳಿಂದಾವೃತವಾಗಿದೆ. ಕುರುಚಲು ಸಸ್ಯ ಮತ್ತು ಮರಗಳಿಂದಾದ ಅರಣ್ಯ ಪ್ರದೇಶ ಜಿಲ್ಲೆಗೆ ವಿಶೇಷ ಸೊಬಗು ನೀಡಿವೆ. ರಾಮನಗರದ ತಪ್ಪಲಲ್ಲೇ ಇರುವ ರಾಮದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟಗಳು ಚಾರಣಿಗರಿಗೆ ನೆಚ್ಚಿನ ತಾಣಗಳಾಗಿವೆ. ಇಲ್ಲಿ ಸಿನೆಮಾ ತೆಗೆಯಲು ಉತ್ತಮ ಪ್ರಾಕೃತಿಕ ಸೌಂದರ್ಯವಿರುವುದರಿಂದ ಚಿತ್ರ ರಸಿಕರ ಮೆಚ್ಚಿನ ಹಾಟ್ ಸ್ಪಾಟ್ ಕೂಡ ಹೌದು. ಇಲ್ಲಿ ಶೂಟಿಂಗ್ ಮಾಡಿದ್ದ ಹಿಂದಿಯ ‘ಶೋಲೆ’ ಸಿನೆಮಾ ಭರ್ಜರಿ ಯಶಸ್ಸು ನೀಡಿದ ಕಾರಣ ಇದು ಶೋಲೆ ಕಾಡು ಎಂದು ಪ್ರಸಿದ್ಧಿಯೂ ಆಯಿತು.
ವಿಸ್ತೀರ್ಣ: ರಾಮನಗರ ಜಿಲ್ಲೆ 3.56 ಲಕ್ಷ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಇದರಲ್ಲಿ 1.97 ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿ. ಜಿಲ್ಲೆಯಲ್ಲಿ ಐದು (ಮಂಚನಬೆಲೆ: ಮಾಗಡಿ ತಾ. ಬೈರಮಂಗಲ: ರಾಮನಗರ. ಹಾರೋಬೆಲೆ: ಕನಕಪುರ. ಕಣ್ವ ಮತ್ತು ಇಗ್ಗಲೂರು: ಚನ್ನಪಟ್ಟಣ.) ಜಲಾಶಯಗಳಿವೆ. ಅಲ್ಲದೆ 105 ಕೆರೆ-ಕಟ್ಟೆಗಳಿವೆ. ಕಣ್ವ, ಶಿಂಷಾ, ವೃಷಭಾವತಿ, ಕಾವೇರಿ, ಅರ್ಕಾವತಿ, ಕುಮುದ್ವತಿ ನದಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುತ್ತವೆ. ಇಷ್ಟೊಂದು ನದಿ, ಕೆರೆ, ಜಲಾಶಯಗಳಿದ್ದರೂ ಜಿಲ್ಲೆಯ ಬಹುಪಾಲು ಭೂಮಿ ಮಳೆಯನ್ನೇ ಅವಲಂಬಿಸಿದೆ.
ಜನಸಂಖ್ಯೆ: 2001ರ ಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 10,30,546. ಸಾಕ್ಷರತೆಯ ಪ್ರಮಾಣ ಶೇ 61.3. ರೇಷ್ಮೆ ಜಿಲ್ಲೆಯ ಪ್ರಮುಖ ಬೆಳೆ. 1310 ಗ್ರಾಮಗಳ 9,985 ಹೆಕ್ಟೇರ್ ಪ್ರದೇಶದಲ್ಲಿ 20 ಸಾವಿರ ರೈತರು ರೇಷ್ಮೆ ಬೇಸಾಯದಲ್ಲಿ ತೊಡಗಿದ್ದಾರೆ. ಹೆಚ್ಚಿನ ಭಾಗ ಗುಡ್ಡಗಾಡು ಮತ್ತು ಮಳೆಯಾಧಾರಿತ ಭೂಮಿಯಾದ್ದರಿಂದ ಇಲ್ಲಿನ ಕೃಷಿಕರ ಮಾವನ್ನು ಪ್ರಮುಖ ತೋಟಗಾರಿಕೆ ಬೆಳೆಯಾಗಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಅಂದಾಜು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಾರೆ. ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿ ಮತ್ತು ಭತ್ತ. ಬೆಂಗಳೂರಿಗೆ ಪೂರೈಕೆ ಯಾಗುವ ತರಕಾರಿಯ ಹೆಚ್ಚಿನ ಭಾಗ ರಾಮನಗರ ಜಿಲ್ಲೆಯದು ಎಂದರೆ ಅತಿಶಯೋಕ್ತಿಯಲ್ಲ. ಿತ್ತೀಚೆಗೆ ಹೂವು ಬೇಸಾಯ ಕೂಡ ಪ್ರಸಿದ್ಧಿಗೆ ಬಂದಿದೆ.
ಗ್ರಾನೈಟ್ ಗಣಿ ತವರು: ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳು ‘ಗ್ರಾನೈಟ್’ಶಿಲೆಗಳಿಗೆ ಹೆಸರುವಾಸಿ. ದಪ್ಪ ಕಣದ ಸ್ಫಟಿಕ ರಚನೆಯ ಗ್ರಾನೈಟ್ ಇಲ್ಲಿನ ವಿಶೇಷ. ರಾಮನಗರ ಸುತ್ತಮುತ್ತ ಸಿಗುವ ಗ್ರಾನೈಟ್ ‘ಕ್ಲೋಸ್‌ಪೇಟೆ’ ಗ್ರಾನೈಟ್ ಎಂದೇ ಹೆಸರುವಾಸಿ. ಜೊತೆಗೆ ಇಲ್ಲಿ ಕಪ್ಪು ಬಣ್ಣದ ಗ್ರಾನೈಟ್ ಗಣಿ ಇತ್ತೀಚೆಗೆ ಕಂಡು ಬಂದಿವೆ.
ಇತಿಹಾಸ: ಕ್ರಿ.ಶ 4ನೇ ಶತಮಾನದಲ್ಲಿ ಗಂಗ ವಂಶಸ್ಥ ರಾಜರು ರಾಮನಗರ ಭಾಗದಲ್ಲಿ ಆಳ್ವಿಕೆ ನಡೆಸಿದರು. ಚನ್ನಪಟ್ಟಣ ಬಳಿಯ ಮಾಕುಂದ (ಮಂಕುಂದ) ಅವರ ರಾಜಧಾನಿಯಾಗಿತ್ತು. ರಾಷ್ಟ್ರಕೂಟರು, ಹೊಯ್ಸಳರು, ಚೋಳರು, ಕೆಂಪೇಗೌಡರ ವಂಶಸ್ಥರು, ಟಿಪ್ಪುಸುಲ್ತಾನ್, ಮೈಸೂರು ಅರಸರು ಹಾಗೂ ಬ್ರಿಟಿಷರ ಆಡಳಿತಕ್ಕೆ ಈ ಭಾಗ ಒಳಪಟ್ಟಿತ್ತು. ಜಿಲ್ಲೆಯ ಕೆಲವೆಡೆ ಇತಿಹಾಸ ಪೂರ್ವ ಕಾಲದ ಪಳಿಯುಳಿಕೆಗಳು ಲಭ್ಯವಾಗಿವೆ. ತಾಲೂಕಿನ ಹನಿಯೂರು ಗ್ರಾಮದಲ್ಲಿ ಸಿಕ್ಕ ಅನೇಕ ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳು ಅನೇಕ ಮಾಹಿತಿ ಮತ್ತು ವಿಚಾರ ತಿಳಿಸುತ್ತವೆ.ಉತ್ತರ ಕರ್ನಾಟಕದಲ್ಲಿ ಬಹುಮನಿ ರಾಜ್ಯ ಪತನವಾದ ನಂತರ ಅಲ್ಲಿನ ಮುಸ್ಲಿಮರು ರಾಮನ ಗರದತ್ತ ವಲಸೆ ಬಂದರು. ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಈ ಭಾಗದ ಮುಸ್ಲಿಮ ರು ಪ್ರವರ್ಧಮಾನಕ್ಕೆ ಬಂದರು. ಜಿಲ್ಲೆಯಲ್ಲಿ ಹಿಂದೂಗಳಷ್ಟೇ ಸಂಖ್ಯೆಯಲ್ಲಿ ಮುಸ್ಲಿಮರಿದ್ದರೂ ಎರಡೂ ಸಮುದಾಯಗಳ ನಡುವೆ ಸೌಹಾರ್ದ ಬಹಳ ಹಿಂದಿನಿಂದಲೂ ಬೆಳೆದುಬಂದಿದೆ.
ಕ್ಲೋಸ್ ಪೇಟೆ: ಪುರಾಣ ಕಾಲದಲ್ಲಿ ರಾಮನಗರಕ್ಕೆ ಶ್ರೀರಾಮಗಿರಿ, ಶಿವರಾಮಗಿರಿ ಎಂಬ ಹೆಸರಿತ್ತು. 1799-1800ರಲ್ಲಿ ‘ಕ್ಲೋಸ್‌ಪೇಟೆ’ ಎಂಬ ಹೆಸರಿನಲ್ಲಿ ನವನಗರವಾಗಿ ನಿರ್ಮಾಣವಾಯಿತು. ಇದನ್ನು ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಸಂಸ್ಥಾನದ ಮೊದಲ ಆಂಗ್ಲ ರೆಸಿಡೆಂಟ್ ಆಗಿದ್ದ ಕರ್ನಲ್ ಕ್ಲೋಸ್ ಅವರ ಮೇಲಿನ ವಿಶ್ವಾಸಕ್ಕಾಗಿ 1799-80ರಲ್ಲಿ ಕ್ಲೋಸ್‌ಪೇಟೆ ಯನ್ನು ಸ್ಥಾಪಿಸಿದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಕರ್ನಲ್ ಕ್ಲೋಸ್ ಮೂರನೇ ಆಂಗ್ಲೊ- ಮೈಸೂರು ಯುದ್ಧದ ಸಮಯದಲ್ಲಿ ಗವರ್ನರ್ ಜನರಲ್ ಲಾರ್ಡ್ ಕಾರನ್‌ವಾಲೀಸ್ ಅವರ ಕೈಕೆಳಗೆ ಡೆಪ್ಯುಟಿ ಅಡ್ಜುಟೆಂಟ್ ಜನರಲ್ ಆಗಿದ್ದರು. ನಾಲ್ಕನೇ ಆಂಗ್ಲೊ- ಮೈಸೂರು ಯುದ್ಧದ ವೇಳೆಗೆ ಅವರು ‘ಅಡ್ಜುಟೆಂಟ್ ಜನರಲ್’ ಆದರು. ಟಿಪ್ಪು ಮರಣದ ನಂತರ ಅವರು ಮೈಸೂರು ರಾಜ ಮನೆತನ ಹಾಗೂ ರಾಜ್ಯಾಡಳಿತ ಪುನರ್ ವ್ಯವಸ್ಥೆ ಸಮಿತಿಯ ಸದಸ್ಯರೂ ಆದರು. 1799ರಲ್ಲಿ ಸಂಸ್ಥಾನದ ಪ್ರಥಮ ಬ್ರಿಟಿಷ್ ರೆಸಿಡೆಂಟ್ ಆಗಿ ಅಂದಿನ ದಿವಾನರಾದ ಪೂರ್ಣಯ್ಯ ಅವರೊಂದಿಗೆ ರಾಮನಗರ ಭಾಗದಲ್ಲಿ ಸಂಚಾರ ಕೈಗೊಂಡರು. ಆಗ ತುಂಬಿ ಹರಿಯುತ್ತಿದ್ದ ಅರ್ಕಾವತಿ ನದಿ ದಾಟಲು ಅಲ್ಲಿನ ಹೊಳೆಸಾಲಿನ ಹಳ್ಳಿ ಜನರು ಅವರಿಗೆ ನೆರವು ನೀಡಿದರು ಅದರ ನೆನಪಿಗೆ ಇಲ್ಲಿ ಊರು ನಿರ್ಮಿಸಲು ಕರ್ನಲ್ ಕ್ಲೋಸ್ ಆದೇಶ ನೀಡಿದರು ಎಂಬ ಐತಿಹ್ಯವಿದೆ.1884ರವರೆಗೆ ಮೈಸೂರು ಸಂಸ್ಥಾನದ ಉಪ ವಿಭಾಗೀಯ ಕೇಂದ್ರವಾಗಿದ್ದ ‘ಕ್ಲೋಸ್‌ಪೇಟೆ’ 1928 ರಲ್ಲಿ ತಾಲ್ಲೂಕು ಕೇಂದ್ರವಾಯಿತು. ಸ್ವಾತಂತ್ರ್ಯಾನಂತರ 1949ರಲ್ಲಿ ಕ್ಲೋಸ್‌ಪೇಟೆಗೆ ‘ರಾಮನಗರ’ ಎಂದು ನಾಮಕರಣ ಮಾಡಲಾಯಿತು. ಈಗಲೂ ಅದನ್ನು ಕೆಲವು ಹಿರಿಯ ಜೀವಗಳು ಅದನ್ನು ‘ಕುಲೀಸ್ ಪ್ಯಾಟೆ’ ಅಂತಲೇ ಕರೆಯುವುದು ಸಾಮಾನ್ಯವಾಗಿದೆ.
ಸಪ್ತ ಬೆಟ್ಟಗಳ ಜಿಲ್ಲೆ: ರಾಮನಗರ ಜಿಲ್ಲೆಯು ಏಳು ಪ್ರಮುಖ ಬೆಟ್ಟಗಳ ತವರು. ಶ್ರೀರಾಮಗಿರಿ, ರೇವಣ ಸಿದ್ದೇಶ್ವರ ಬೆಟ್ಟ, ಯತಿರಾಜಗಿರಿ, ಕೃಷ್ಣಗಿರಿ, ಸೋಮಗಿರಿ, ಸಿಡಿಲಕಲ್ಲು ಮತ್ತು ಜಲಸಿದ್ದೇಶ್ವರ ಬೆಟ್ಟಗಳಿವೆ. ಈ ಪ್ರದೇಶವನ್ನು ‘ಸಪ್ತಗಿರಿಗಳ ಜಿಲ್ಲೆ’ ಎಂದು ಕರೆಯುತ್ತಾರೆ. ಇವುಗಳಲ್ಲದೆ ಹಂದಿಗುಂದಿ ಬೆಟ್ಟ, ವಾಡೆ ಮಲ್ಲೇಶ್ವರ ಬೆಟ್ಟ, ಅಚ್ಚಲು ಬೆಟ್ಟ, ಸೋಮದೇವರ ಬೆಟ್ಟ, ಕೂಟಗಲ್ ಬೆಟ್ಟ ಮುಂತಾದವುಗಳಿವೆ..
* ಚನ್ನಪಟ್ಟಣದಲ್ಲಿ ಗವಿರಂಗಸ್ವಾಮಿ ಬೆಟ್ಟ, ಸವಣಪ್ಪನ ಗುಡ್ಡ, ಮುತ್ತಪ್ಪನ ಗುಡ್ಡ;
** ಕನಕಪುರದಲ್ಲಿ, ಕಬ್ಬಾಳಮ್ಮನ ದುರ್ಗ, ನಿಡಗಲ್ಲು, ಮೇಕೆದಾಟು, ಬಿಳಿಕಲ್ ಬೆಟ್ಟ, ಮುದುವಾಡಿ ಬೆಟ್ಟಗಳು,
*** ಮಾಗಡಿಯಲ್ಲಿ, ಇತಿಹಾಸ ಪ್ರಸಿದ್ಧ ಸಾವನದುರ್ಗ, ಬನತಿಮ್ಮನ ಬೆಟ್ಟ, ನರಸಿಂಹದೇವರ ಬೆಟ್ಟ, ಕಲ್ಯಾ ಗುಡ್ಡಗಳಿವೆ. ಅದರಲ್ಲೂ,
**** ರಾಮದೇವರ ಬೆಟ್ಟ, ಸಾವನದುರ್ಗ ಬೆಟ್ಟ, ಮೇಕೆದಾಟು, ಸಂಗಮ,ಚುಂಚಿಫಾಲ್ಸ್ ಗಳು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲದೆ ಚಾರಣಪ್ರಿಯರ ಮೆಚ್ಚಿನ ತಾಣಗಳೂ ಹೌದು.
ಉಪಸಂಹಾರ: ರಾಮನಗರದಿಂದ 2 ಕಿ.ಮೀ ದೂರದಲ್ಲಿ ಮೈಸೂರು ಹೆದ್ದಾರಿಗೆ ಅಂಟಿಕೊಂಡಿರುವ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಮಾಗಡಿ ಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿತ್ತಾದರೂ ಅದು ಕೈತಪ್ಪಿಹೋಯಿತು.. ಚನ್ನಪಟ್ಟಣದ ಸಿಲ್ಕ್ ಫಾರಂ ಬಳಿಯಲ್ಲಿ ರಾಜ್ಯ ಪೊಲೀಸ್ ಶಿಕ್ಷಣ ತರಬೇತಿ ಶಾಲೆ ಕಾರ್ಯನಿರ್ವಹಿಸುತ್ತಿದೆ.ಅಲ್ಲದೆ, ಏಷ್ಯಾ ಖಂಡದಲ್ಲೇ ಅತಿ ದೊಡ್ಡದಾದ ರೇಷ್ಮೆ ಮಾರುಕಟ್ಟೆ ಹೊಂದಿರುವ ಹೆಗ್ಗಳಿಕೆಯಿದೆ.
– ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.

ಗಮಕಿ “ಗುಡ್ಡಣ್ಣ”

ಕರುನಾಡಿನ “ಗೊಂಬೆನಗರಿ” ಎನಿಸಿರುವ ಚನ್ನಪಟ್ಟಣ ಬಹುಮುಖಿ ಪ್ರತಿಭೆಗಳನ್ನು ತನ್ನ ಮಡಿಲಲ್ಲಿರಿಸಿಕೊಂಡಿದೆ. ಅಂತಹ ಪ್ರತಿಭೆಗಳಲ್ಲಿ ನಮ್ಮ ನಾಡಿನ ಜಾನಪದ ನೃತ್ಯ ಕಲಾಪ್ರಕಾರಗಳು ಮುಖ್ಯವಾದವುಗಳಾಗಿವೆ.ಅವುಗಳಲ್ಲಿ ಕತ್ತಿವರಸೆ, ಒನಕೆ ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ವಿಶಿಷ್ಟ ತಮಟೆ ವಾದನ, ಕಂಬದ ಕುಣಿತ, ಮರಗಾಲು ಕುಣಿತ ಮುಖ್ಯವಾದವು. ಇದಿಷ್ಟೇ ಅಲ್ಲದೆ ಜಾನಪದ ಗಾಯಕರು, ಸೋಬಾನೆ ಹಾಡುಗಾರರು,ಗಮಕ ಕಲಾವಿದರು,ವಚನ ಗಾಯಕರು ಇಲ್ಲಿ ಆವಿರ್ಭವಿಸಿದ್ದಾರೆ. ಆದರೆ ಇಲ್ಲಿ ಇನ್ನು ಅನೇಕ ಕಲೆಗಳು, ಕಲಾರಾಧಕರು ಇದ್ದಾರೆ. ಇವರಲ್ಲಿ ವೇದಿಕೆಯೇರಿ ತಮ್ಮ ಕಲೆಯನ್ನು ಪ್ರದರ್ಶಿಸಿದವರೆಷ್ಟೋ ಇಲ್ಲದವರೆಷ್ಟೊ?
ಇಂತಿಪ್ಪ ಚನ್ನಪಟ್ಟಣ ಕಲೆಗಳ ಬೀಡೆ ಹೌದು. ಇಂತಹ ಕಲೆಯ ನೆಲೆಯಾದ ಈ ತಾಲೂಕಿನ ಹನಿಯೂರು ಗ್ರಾಮದ 90 ವರ್ಷ ವಯಸ್ಸಿನ ರಾಚೇಗೌಡರು ಕಳೆದ 35 ವರ್ಷಗಳಿಂದಲೂ ಕಾವ್ಯ ವಾಚನೆಯನ್ನು ಒಂದು ಪ್ರವೃತ್ತಿಯನ್ನಾಗಿಸಿಕೊಂಡು ಕಲಾಸೇವೆಗೈಯ್ಯುತ್ತಾ ಬಂದಿದ್ದಾರೆ. ಇವರು ಓದಿರುವುದು ಕೇವಲ 3 ನೇ ತರಗತಿಯಾದರೂ ಪುರಾತನ, ಆಧುನಿಕ ಹಾಗೂ ಪ್ರಾಚೀನ ಕಾವ್ಯಗಳನ್ನು ಒಂದೂ ತಪ್ಪಿಲ್ಲದಂತೆ ಓದಬಲ್ಲರು. ಅಲ್ಲದೆ ಕೇಳುಗರು ತಲೆದೂಗುವಂತೆ ಅರ್ಥೈಸಬಲ್ಲರು ಸಹ. ಅಲ್ಲದೆ ಸುಸ್ಪಷ್ಟವಾಗಿ, ನಿರರ್ಗಳವಾಗಿ ಓದಿ ಸಾರವತ್ತಾಗಿ ಹೇಳುವ ರೀತಿಗೆ ಎಂತಹ ಪಂಡಿತರೂ ಮೂಗಿನ ಮೇಲೆ ಬೆರಳಿಡಲೇ ಬೇಕು. ಅವರ ಈ ರೀತಿಯ ಕಾವ್ಯ ವಾಚನೆಯನ್ನು ಮೆಚ್ಚಿದ ಕೇಳುಗರು ಅವರನ್ನು ‘ಭಾಗವತಿಕೆಯ ಗುಡ್ಡಣ್ಣ’ ಎಂದೇ ಕರೆದು ತಮ್ಮ ಮೆಚ್ಚುಗೆ ಸೂಚಿಸುತ್ತಾರೆ. ಅಲ್ಲದೆ ಅವರು ಗುಡ್ಡಣ್ಣ ಎಂದೇ ಚಿರಪರಿಚಿತರೂ ಸಹ.
ಇವರು ಪೌರಾಣಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ, ಜೈಮಿನಿ ಭಾರತ, ವಚನ ಭಾರತ, ಪಂಪಭಾರತ, ವಾಲ್ಮೀಕಿ ರಾಮಾಯಣ., ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ, ಕುಮಾರವ್ಯಾಸ ಭಾರತ, ತುರಂಗ ಭಾರತ, ಬಸವಣ್ಣನವರ ವಚನಗಳು, ಅಕ್ಕನ ವಚನಗಳು, ಮಂಕುತಿಮ್ಮ ಮತ್ತು ಮರುಳ ಮುನಿಯನ ಕಗ್ಗ, …ಇನ್ನು ಮುಂತಾದವುಗಳನ್ನು ಹಾಡಿ, ಸಾರವತ್ತಾಗಿ ವಿವರಿಸಬಲ್ಲರು. ಅವರ ಈ ವಾಚನ ಶೈಲಿಯನ್ನು ನೋಡಿದರೆ ಇಂದಿನ ಎಂತಹ ಮೇಧಾವಿಗಳು ಮೆಚ್ಚಲೇಬೇಕು. ಹಾಗಿದೆ ಅವರ ಕಾವ್ಯ ವಾಚನಾ ವೈಖರಿ.
ನಾಡಿನ ಜಿಲ್ಲೆಗಳಾದ ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ನಗರ ಹಾಗೂ ತಾಲೂಕುಗಳಾದ ಕನಕಪುರ, ಮದ್ದೂರು, ಆನೇಕಲ್, ರಾಮನಗರ, ಮಾಗಡಿ, ಕುಣಿಗಲ್ ಮತ್ತು ಚನ್ನಪಟ್ಟಣಗಳಲ್ಲಿ ತಮ್ಮ ಕಾವ್ಯವಾಚನೆ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಗೊಂಬೆನಗರಿಯ ಧಾರ್ಮಿಕ ನೆಲೆಗಳಾದ ಚೌಕೀ ಮಠ, ಹೊನ್ನಪ್ಪ ಸ್ವಾಮಿ ಮಠ, ಚೆನ್ನಪ್ಪಸ್ವಾಮಿ ಮಠ, ಸಿಂಗರಾಜಪುರದ ದೊಡ್ಡಮ್ಮತಾಯಿ ಮಠ ಮುಂತಾದೆಡೆ ತಮ್ಮ ಅಮೋಘ ಕಾವ್ಯವಾಚನಾ ಕಾರ್ಯಕ್ರಮಗಳನ್ನು ಗುಡ್ಡಣ್ಣ ನೀಡಿ ಜನಮಾನಸದಲ್ಲಿ ನೆಲೆಯೂರಿದ್ದಾರೆ.
ಎ. ಆರ್. ಕೃಷ್ಣ ಶಾಸ್ತ್ರೀಗಳು, ಕುವೆಂಪು, ಮತ್ತು ಡಿವಿಜಿ ಅವರನ್ನು ಬಹುವಾಗಿ ಮೆಚ್ಚುವ ಇವರಿಗೆ ಇತ್ತೀಚೆಗೆ ಸರಿಯಾಗಿ ಕಣ್ಣು ಕಾಣಿಸದು. ಆದರೂ ಸದಾ ಕತೆ, ಕಾದಂಬರಿ, ಕಗ್ಗ, ವಚನ, ರಾಮಾಯಣ-ಮಹಾಭಾರತವನ್ನು ಕನ್ನಡಕದ ಸಹಾಯದಿಂದ ಓದುವುದರಲ್ಲಿ ತಲ್ಲೀನರಾಗಿರುತ್ತಾರೆ. ಇವರು ಇಂದಿಗೂ ಹೊಲದಲ್ಲಿ ದುಡಿಯಬಲ್ಲರು. ಇತ್ತೀಚೆಗೆ ಸ್ವಲ್ಪ ಬಳಲಿದಂತಾಗಿರುವ ಇವರು ತಾವು ನೀಡಿದ ಕಾವ್ಯವಾಚನೆಗೆ ಪ್ರತಿಫಲವಾಗಿ ಯಾವುದೇ ದಕ್ಷಿಣೆ ಪಡೆಯುವುದಿಲ್ಲ. ಇಂತಹ ನಿಸ್ವಾರ್ಥ ಕಾವ್ಯ ಸೇವೆ ಮಾಡುತ್ತಿರುವ ಗುಡ್ಡಣ್ಣನವರ ಕಾಯಕ ನಿಷ್ಟೆ ಅನುಸರಣೀಯವಾಗಿದೆ.ಅನುಕ್ಷಣವೂ ಚಟುವಟಿಕೆಯಂದ ಇರುವ ರಾಚೇಗೌಡರು ನಮ್ಮೊಡನಿರುವ ಕಲಾಪ್ರೇಮಿಯೂ ಹೌದು. ಇಂತಹ ಕಲಾ ಪ್ರೇಮಿಯನ್ನು ಇಂದಿಗೂ ಸರಕಾರವಾಗಲೀ, ಸಂಘ-ಸಂಸ್ಥೆಯಾಗಲೀ ಗೌರವಿಸುವ ಸೌಜನ್ಯ ತೋರಿಲ್ಲ. 35 ವರ್ಷಗಳ ಕಾಲ ಕಾವ್ಯ ಸೇವೆ ಮಾಡಿರುವ ಇವರ ಈ ಕಲೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಬಯಕೆ ಇಟ್ಟುಕೊಂಡಿದ್ದಾರೆ.
–ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.

ಮಾಕುಂದ: ವಿನಾಶದ ಅಂಚಿನಲ್ಲಿ ಇತಿಹಾಸದ ಕುರುಹು

ರಾಮನಗರ: ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಬಿದ್ದಿರುವ ಗತಕಾಲದ ಕುರುಹುಗಳು...  ಸಂರಕ್ಷರೇ ಇಲ್ಲದೆ ಸೊರಗಿರುವ ಹತ್ತಾರು ವೀರಗಲ್ಲು, ಮಹಾಸತಿ ಕಲ್ಲುಗಳು... ಸರಿಯಾದ ನಿರ್ವಹಣೆ ಇಲ್ಲದೆ ವಿನಾಶದ ಅಂಚು ತಲುಪುತ್ತಿರುವ ಸ್ಮಾರಕಗಳು... ಗ್ರಾಮದ ಜನತೆ ಮತ್ತು ಪ್ರಾಚ್ಯ ವಸ್ತು ಇಲಾಖೆಯ ತಾತ್ಸಾರ, ನಿರ್ಲಕ್ಷ್ಯದಿಂದ ಬೀದಿ ಪಾಲಾಗಿರುವ ಗತಕಾಲದ ಸಾಧಕರ ಹೆಜ್ಜೆ ಗುರುತುಗಳು... ಇದರಿಂದ ಕಣ್ಮರೆಯಾಗುತ್ತಿರುವ ಇತಿಹಾಸ ರಚನೆಯ ಮೂಲ ಆಕಾರಗಳು...
ಇದು ಚನ್ನಪಟ್ಟಣ ತಾಲ್ಲೂಕಿನ ಮಂಕುಂದ ಅಥವಾ ಮಾಕುಂದ ಗ್ರಾಮದಲ್ಲಿನ ಇತಿಹಾಸದ ಕುರುಹುಗಳಿಗೆ ಎದುರಾಗಿರುವ ದುಃಸ್ಥಿತಿ.
ರಾಜ್ಯದ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಹೊಂದಿರುವ ಗಂಗರ ಸಾಮ್ರಾಜ್ಯದ ನಾಲ್ಕು ರಾಜಧಾನಿಗಳಲ್ಲಿ ಒಂದಾಗಿದ್ದ ಮಾಕುಂದಕ್ಕೆ ಇಂದು ಮಂಕು ಕವಿದಿದೆ. ಹಾಗಾಗಿ ಇಲ್ಲಿ ತನ್ನ ಪೂರ್ವಿಕರ ಇತಿಹಾಸವನ್ನು ಸಾರುವ ಹಲವಾರು ವೀರಗಲ್ಲುಗಳು ಮತ್ತು ಮಹಾಸತಿ ಕಲ್ಲುಗಳು ಸರಿಯಾಗಿ ರಕ್ಷಣೆ ಇಲ್ಲದೆ, ನಾಶವಾಗುತ್ತಿವೆ.
ಕ್ರಿ.ಶ 350ರಿಂದ 999ರವರೆಗೆ ರಾಜ್ಯವಾಳಿದ ಗಂಗರು ರಾಜ್ಯದಲ್ಲಿ ಕೋಲಾರ, ತಲಕಾಡು, ಮಾಕುಂದ ಹಾಗೂ ಮಣ್ಣೆ (ನೆಲಮಂಗಲ ಬಳಿ)ಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದರು. ಗಂಗರು ಹೆಚ್ಚು ಕಾಲ ತಲಕಾಡಿನಲ್ಲಿ ಆಡಳಿತ ನಡೆಸಿದರಾದರೂ ಹಲವು ರಾಜರು ಉಳಿದ ಮೂರು ರಾಜಧಾನಿಗಳಲ್ಲಿ ಆಳ್ವಿಕೆ ನಡೆಸಿದ್ದರು.
ಈ ಬಗ್ಗೆ ಇತಿಹಾಸ ತಜ್ಞರು, ಶಾಸನ ತಜ್ಞರು ಮತ್ತು ಪುರಾತತ್ವ ಇಲಾಖೆಯವರು ಹಲವು ಸಂಶೋಧನೆಗಳನ್ನು ಕೈಗೊಂಡು ಲಭ್ಯ ಆಕರಗಳ ನೆರವಿನಿಂದ ಕೆಲ ರಾಜರುಗಳ ಆಳ್ವಿಕೆಯ ಇತಿಹಾಸವನ್ನು ಬರೆದಿದ್ದಾರೆ. ಈಗಲೂ ಸಂಶೋಧನೆಗಳು ನಡೆಯುತ್ತಲೇ ಇವೆ. ಆಕರಗಳ ಕೊರತೆಯಿಂದ ಸಂಪೂರ್ಣ ಮತ್ತು ಸಮಗ್ರ ಇತಿಹಾಸ ರಚನೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ ಎಂಬ ಕೊರಗು ತಜ್ಞರಲ್ಲಿದೆ.
ಇಂತಹ ಸಂದರ್ಭದಲ್ಲಿ ತನ್ನ ಊರಿನ ಇತಿಹಾಸ ಸಾರುವ ಮೂಲ ಆಕರಗಳನ್ನು ಸಂರಕ್ಷಿಸಿಕೊಳ್ಳಬೇಕಾದ ಗ್ರಾಮದ ಜನತೆ, ಮುಖಂಡರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಇವುಗಳ ರಕ್ಷಣೆಗೆ ಕಿಮ್ಮತ್ತು ನೀಡದೆ ನಿರ್ಲಕ್ಷಿಸಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿವೆ. ಅದಕ್ಕೆ ಮಾಕುಂದ ಗ್ರಾಮದಲ್ಲಿನ ವೀರಗಲ್ಲು, ಮಹಾಸತಿ ಕಲ್ಲುಗಳಿಗೆ ಒದಗಿರುವ ದುಃಸ್ಥಿತಿಯೇ ಸಾಕ್ಷಿ.
ಗ್ರಾಮದಲ್ಲಿ ಎಂಟರಿಂದ ಹತ್ತು ವೀರಗಲ್ಲುಗಳು, ಎರಡು ಮಹಾಸತಿ ಕಲ್ಲುಗಳು ದೊರೆತಿವೆ. ಹಲವು ವೀರಗಲ್ಲುಗಳನ್ನು ಶಾಲೆ ಆವರಣದ ಹಿಂಭಾಗದಲ್ಲಿ ಹೇಗೆಂದರೆ ಹಾಗೆ ಇಡಲಾಗಿದೆ. ಗಂಗರ ಆನೆಯ ಲಾಂಛನ ಹೊಂದಿರುವ ಶಾಸನ ಕೂಡ ಇಲ್ಲಿದೆ. ಶಾಲಾ ಬಳಿ ಇರುವ ವೀರಗಲ್ಲುಗಳ ಸುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ಕೆಲ ಕಲ್ಲುಗಳಂತೂ ಕೆಳಗೆ ಬಿದ್ದು ನಾಶವಾಗಿವೆ. ಇನ್ನೂ ಕೆಲವು ನಾಶವಾಗುವ ಅಂಚಿನಲ್ಲಿವೆ. ಅವುಗಳ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಗ್ರಾಮದ ಜನತೆ, ಗ್ರಾಮ ಪಂಚಾಯಿತಿ ಅಥವಾ ಶಾಲೆಯ ಎಸ್‌ಡಿಎಂಸಿ ಸದಸ್ಯರು ಮುಂದಾಗಿಲ್ಲ ಎಂಬ ದೂರು ಇದೆ.
ಮಾಕುಂದ/ಮಂಕುದದ ಇತಿಹಾಸ: ಗಂಗರ ಮೂರನೇ ರಾಜಧಾನಿಯಾಗಿದ್ದ ಮಾಕುಂದದಲ್ಲಿ ಗಂಗರ ರಾಜರು ಸುಮಾರು 150 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಗಂಗರ ಪ್ರಸಿದ್ಧ ದೊರೆ ದುರ್ವಿನೀತನ ನಂತರ ಬಂದ ಭೂ ವಿಕ್ರಮ ಮತ್ತು ಶಿವಮಾರ ರಾಜರು ಮಾಕುಂದವನ್ನು ರಾಜಧಾನಿಯನ್ನಾಗಿಸಿಕೊಂಡು ಆಳ್ವಿಕೆ ನಡೆಸಿದ. ಕ್ರಿ.ಶ.7ನೇ ಶತಮಾನದಲ್ಲಿ ಈ ಇಬ್ಬರು ರಾಜರು ಇಲ್ಲಿ ಆಳ್ವಿಕೆ ನಡೆಸಿದರು.

ಈ ಪ್ರದೇಶವನ್ನು ಚೋಳರು ನಾಶಪಡಿಸಿರಬಹುದು. ಕ್ರಿ.ಶ 913ರಲ್ಲಿ ಮಂಕುಂದ ಎಂಬುದರ ಉಲ್ಲೇಖ ಗಂಗರ ದಾಖಲೆಗಳಲ್ಲಿ ಕಂಡು ಬರುತ್ತದೆ ಎಂಬ ಅಂಶವನ್ನು  ಕರ್ನಾಟಕ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಇವರ ನಂತರ ಅಧಿಕಾರಕ್ಕೆ ಬಂದ ಗಂಗರ ಮತ್ತೊಬ್ಬ ಪ್ರಮುಖ ದೊರೆ ಶ್ರೀಪುರುಷ ರಾಜಧಾನಿಯನ್ನು ನೆಲಮಂಗಲ ಬಳಿ ಇರುವ ಮಣ್ಣೆಗೆ ವರ್ಗಾಯಿಸಿದ. ಸುಮಾರು 150 ವರ್ಷಗಳ ಕಾಲ ಮಾಕುಂದ ಗಂಗರ ರಾಜಧಾನಿಯಾಗಿ ದರ್ಬಾರು ನಡೆಸಿತ್ತು ಎಂಬುದು ಇತಿಹಾಸ ತಜ್ಞರ ವಿಶ್ಲೇಷಣೆ.
ಅನ್ವೇಷಣೆ ಆಗಬೇಕು: `ಸುದೀರ್ಘ ಕಾಲ ರಾಜಧಾನಿಯಾಗಿದ್ದ ಮಾಕುಂದ ಭಾಗದ ಸುತ್ತಮುತ್ತ ದೊಡ್ಡ ಪ್ರಮಾಣದಲ್ಲಿ ಶೋಧನೆ ಮತ್ತು ಅನ್ವೇಷಣೆ ನಡೆದರೆ ಇನ್ನಷ್ಟು ದಾಖಲೆಗಳು ದೊರೆಯಬಹುದು.`ಈಗಾಗಲೇ ಮಾಕುಂದದಲ್ಲಿ ದೊರೆತಿರುವ ಎರಡು ಮೂರು ಶಾಸನಗಳ ಅಧ್ಯಯನ ನಡೆದಿದೆ. ಆದರೆ ಅದರಿಂದ ಅಂತಹ ಮಹತ್ತರ ಮಾಹಿತಿಗಳೇನೂ ಬೆಳಕಿಗೆ ಬಂದಿಲ್ಲ. ಆದ್ದರಿಂದ ಈ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಕ್ತನ ಶೋಧನೆ ನಡೆಯಬೇಕಿದೆ~ ಎಂದು ಅವರು ಹೇಳುತ್ತಾರೆ.