ಪೀಠಿಕೆ: ಕರುನಾಡಿನ ಇಪ್ಪತ್ತೆಂಟನೆಯ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದ ರಾಮನಗರ ಪ್ರಾಕೃತಿಕ, ಐತಿಹಾಸಿಕ, ಧಾರ್ಮಿಕ, ಬೌದ್ಧಿಕ, ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆಯ ಜಿಲ್ಲೆ. ಅದರಲ್ಲೂ ರಾಜಕೀಯ ಪ್ರಜ್ಞಾವಂತಿಕೆಯನ್ನು ಮೈಗೂಡಿಸಿಕೊಂಡು ಯಾವುದೇ ವಿಚಾರಕ್ಕೆ ತಕ್ಷಣ ಪ್ರತಿಕ್ರಿಯಿಸುವ ಸಹೃದಯರ ಬೀಡು. ರಾಜಧಾನಿ ಬೆಂಗಳೂರಿಗೆ ಕೇವಲ ಕೆಲವೇ ನಿಮಿಷಗಳಲ್ಲಿ ತಲುಪಿಬಿಡಬಹುದಾದ ರಾಮನಗರ ಇದೀಗ ಅಭಿವೃದ್ಧಿಯತ್ತ ದಾಪುಗಾಲಿಟ್ಟು ಮುನ್ನಡೆಯುತ್ತಿದೆ. ರಾಮನಗರದ ಹೆಸರು ಹೇಳುತ್ತಿದ್ದಂತೆ ರೇಷ್ಮೆ, ವಿಧಾನ ಸೌಧದ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಂತರಾಯರು, ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡರು, ವಿಶ್ವ ಪ್ರಸಿದ್ಧ ಚನ್ನಪಟ್ಟಣದ ಬಣ್ಣದ ಗೊಂಬೆಗಳು, ‘ಕ್ಲೋಸ್ ಪೇಟೆ’ಯ ಗ್ರಾನೈಟ್, ನಾಗೇಗೌಡರ ಜಾನಪದ ಲೋಕ , ಕಾನಕನಹಳ್ಳಿಯ ಕಾವೇರಿಯ ಬಯಲು ಇತ್ಯಾದಿಗಳೆಲ್ಲ ನೆನಪಾಗುತ್ತವೆ.
ಗಡಿಗಳು: ರಾಮನಗರ ಬೆಂಗಳೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿದೆ. 2007ರ ಆಗಸ್ಟ್ 23ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪ್ರತ್ಯೇಕಗೊಂಡು ರಾಜ್ಯದ 28ನೇ ಜಿಲ್ಲೆಯಾಗಿ ಅಸ್ಥಿತ್ವ ಕ್ಕೆ ಬಂತು. ರಾಮನಗರ ಜಿಲ್ಲೆಯ ಉತ್ತರಕ್ಕೆ ಬೆಂಗಳೂರು ಗ್ರಾಮಾಂತರ, ದಕ್ಷಿಣಕ್ಕೆ ಚಾಮರಾಜ ನಗರ, ಮಂಡ್ಯ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳು, ಪೂರ್ವಕ್ಕೆ ಬೆಂಗಳೂರು ನಗರ ಜಿಲ್ಲೆ, ಪಶ್ಚಿಮಕ್ಕೆ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ಹೊಂದಿಕೊಂಡಿವೆ.
ವಿಶೇಷತೆ: ಜಿಲ್ಲೆಯ ವ್ಯಾಪ್ತಿಯಲ್ಲಿ ನಾಲ್ಕು (ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ) ತಾಲ್ಲೂಕುಗಳಿವೆ. ವಿಶಿಷ್ಟ ಪರಿಸರದ ಜತೆಗೆ ಗುಡ್ಡಗಳಿಂದಾವೃತವಾಗಿದೆ. ಕುರುಚಲು ಸಸ್ಯ ಮತ್ತು ಮರಗಳಿಂದಾದ ಅರಣ್ಯ ಪ್ರದೇಶ ಜಿಲ್ಲೆಗೆ ವಿಶೇಷ ಸೊಬಗು ನೀಡಿವೆ. ರಾಮನಗರದ ತಪ್ಪಲಲ್ಲೇ ಇರುವ ರಾಮದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟಗಳು ಚಾರಣಿಗರಿಗೆ ನೆಚ್ಚಿನ ತಾಣಗಳಾಗಿವೆ. ಇಲ್ಲಿ ಸಿನೆಮಾ ತೆಗೆಯಲು ಉತ್ತಮ ಪ್ರಾಕೃತಿಕ ಸೌಂದರ್ಯವಿರುವುದರಿಂದ ಚಿತ್ರ ರಸಿಕರ ಮೆಚ್ಚಿನ ಹಾಟ್ ಸ್ಪಾಟ್ ಕೂಡ ಹೌದು. ಇಲ್ಲಿ ಶೂಟಿಂಗ್ ಮಾಡಿದ್ದ ಹಿಂದಿಯ ‘ಶೋಲೆ’ ಸಿನೆಮಾ ಭರ್ಜರಿ ಯಶಸ್ಸು ನೀಡಿದ ಕಾರಣ ಇದು ಶೋಲೆ ಕಾಡು ಎಂದು ಪ್ರಸಿದ್ಧಿಯೂ ಆಯಿತು.
ವಿಸ್ತೀರ್ಣ: ರಾಮನಗರ ಜಿಲ್ಲೆ 3.56 ಲಕ್ಷ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಇದರಲ್ಲಿ 1.97 ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿ. ಜಿಲ್ಲೆಯಲ್ಲಿ ಐದು (ಮಂಚನಬೆಲೆ: ಮಾಗಡಿ ತಾ. ಬೈರಮಂಗಲ: ರಾಮನಗರ. ಹಾರೋಬೆಲೆ: ಕನಕಪುರ. ಕಣ್ವ ಮತ್ತು ಇಗ್ಗಲೂರು: ಚನ್ನಪಟ್ಟಣ.) ಜಲಾಶಯಗಳಿವೆ. ಅಲ್ಲದೆ 105 ಕೆರೆ-ಕಟ್ಟೆಗಳಿವೆ. ಕಣ್ವ, ಶಿಂಷಾ, ವೃಷಭಾವತಿ, ಕಾವೇರಿ, ಅರ್ಕಾವತಿ, ಕುಮುದ್ವತಿ ನದಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುತ್ತವೆ. ಇಷ್ಟೊಂದು ನದಿ, ಕೆರೆ, ಜಲಾಶಯಗಳಿದ್ದರೂ ಜಿಲ್ಲೆಯ ಬಹುಪಾಲು ಭೂಮಿ ಮಳೆಯನ್ನೇ ಅವಲಂಬಿಸಿದೆ.
ಜನಸಂಖ್ಯೆ: 2001ರ ಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 10,30,546. ಸಾಕ್ಷರತೆಯ ಪ್ರಮಾಣ ಶೇ 61.3. ರೇಷ್ಮೆ ಜಿಲ್ಲೆಯ ಪ್ರಮುಖ ಬೆಳೆ. 1310 ಗ್ರಾಮಗಳ 9,985 ಹೆಕ್ಟೇರ್ ಪ್ರದೇಶದಲ್ಲಿ 20 ಸಾವಿರ ರೈತರು ರೇಷ್ಮೆ ಬೇಸಾಯದಲ್ಲಿ ತೊಡಗಿದ್ದಾರೆ. ಹೆಚ್ಚಿನ ಭಾಗ ಗುಡ್ಡಗಾಡು ಮತ್ತು ಮಳೆಯಾಧಾರಿತ ಭೂಮಿಯಾದ್ದರಿಂದ ಇಲ್ಲಿನ ಕೃಷಿಕರ ಮಾವನ್ನು ಪ್ರಮುಖ ತೋಟಗಾರಿಕೆ ಬೆಳೆಯಾಗಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಅಂದಾಜು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಾರೆ. ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿ ಮತ್ತು ಭತ್ತ. ಬೆಂಗಳೂರಿಗೆ ಪೂರೈಕೆ ಯಾಗುವ ತರಕಾರಿಯ ಹೆಚ್ಚಿನ ಭಾಗ ರಾಮನಗರ ಜಿಲ್ಲೆಯದು ಎಂದರೆ ಅತಿಶಯೋಕ್ತಿಯಲ್ಲ. ಿತ್ತೀಚೆಗೆ ಹೂವು ಬೇಸಾಯ ಕೂಡ ಪ್ರಸಿದ್ಧಿಗೆ ಬಂದಿದೆ.
ಗ್ರಾನೈಟ್ ಗಣಿ ತವರು: ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳು ‘ಗ್ರಾನೈಟ್’ಶಿಲೆಗಳಿಗೆ ಹೆಸರುವಾಸಿ. ದಪ್ಪ ಕಣದ ಸ್ಫಟಿಕ ರಚನೆಯ ಗ್ರಾನೈಟ್ ಇಲ್ಲಿನ ವಿಶೇಷ. ರಾಮನಗರ ಸುತ್ತಮುತ್ತ ಸಿಗುವ ಗ್ರಾನೈಟ್ ‘ಕ್ಲೋಸ್‌ಪೇಟೆ’ ಗ್ರಾನೈಟ್ ಎಂದೇ ಹೆಸರುವಾಸಿ. ಜೊತೆಗೆ ಇಲ್ಲಿ ಕಪ್ಪು ಬಣ್ಣದ ಗ್ರಾನೈಟ್ ಗಣಿ ಇತ್ತೀಚೆಗೆ ಕಂಡು ಬಂದಿವೆ.
ಇತಿಹಾಸ: ಕ್ರಿ.ಶ 4ನೇ ಶತಮಾನದಲ್ಲಿ ಗಂಗ ವಂಶಸ್ಥ ರಾಜರು ರಾಮನಗರ ಭಾಗದಲ್ಲಿ ಆಳ್ವಿಕೆ ನಡೆಸಿದರು. ಚನ್ನಪಟ್ಟಣ ಬಳಿಯ ಮಾಕುಂದ (ಮಂಕುಂದ) ಅವರ ರಾಜಧಾನಿಯಾಗಿತ್ತು. ರಾಷ್ಟ್ರಕೂಟರು, ಹೊಯ್ಸಳರು, ಚೋಳರು, ಕೆಂಪೇಗೌಡರ ವಂಶಸ್ಥರು, ಟಿಪ್ಪುಸುಲ್ತಾನ್, ಮೈಸೂರು ಅರಸರು ಹಾಗೂ ಬ್ರಿಟಿಷರ ಆಡಳಿತಕ್ಕೆ ಈ ಭಾಗ ಒಳಪಟ್ಟಿತ್ತು. ಜಿಲ್ಲೆಯ ಕೆಲವೆಡೆ ಇತಿಹಾಸ ಪೂರ್ವ ಕಾಲದ ಪಳಿಯುಳಿಕೆಗಳು ಲಭ್ಯವಾಗಿವೆ. ತಾಲೂಕಿನ ಹನಿಯೂರು ಗ್ರಾಮದಲ್ಲಿ ಸಿಕ್ಕ ಅನೇಕ ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳು ಅನೇಕ ಮಾಹಿತಿ ಮತ್ತು ವಿಚಾರ ತಿಳಿಸುತ್ತವೆ.ಉತ್ತರ ಕರ್ನಾಟಕದಲ್ಲಿ ಬಹುಮನಿ ರಾಜ್ಯ ಪತನವಾದ ನಂತರ ಅಲ್ಲಿನ ಮುಸ್ಲಿಮರು ರಾಮನ ಗರದತ್ತ ವಲಸೆ ಬಂದರು. ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಈ ಭಾಗದ ಮುಸ್ಲಿಮ ರು ಪ್ರವರ್ಧಮಾನಕ್ಕೆ ಬಂದರು. ಜಿಲ್ಲೆಯಲ್ಲಿ ಹಿಂದೂಗಳಷ್ಟೇ ಸಂಖ್ಯೆಯಲ್ಲಿ ಮುಸ್ಲಿಮರಿದ್ದರೂ ಎರಡೂ ಸಮುದಾಯಗಳ ನಡುವೆ ಸೌಹಾರ್ದ ಬಹಳ ಹಿಂದಿನಿಂದಲೂ ಬೆಳೆದುಬಂದಿದೆ.
ಕ್ಲೋಸ್ ಪೇಟೆ: ಪುರಾಣ ಕಾಲದಲ್ಲಿ ರಾಮನಗರಕ್ಕೆ ಶ್ರೀರಾಮಗಿರಿ, ಶಿವರಾಮಗಿರಿ ಎಂಬ ಹೆಸರಿತ್ತು. 1799-1800ರಲ್ಲಿ ‘ಕ್ಲೋಸ್‌ಪೇಟೆ’ ಎಂಬ ಹೆಸರಿನಲ್ಲಿ ನವನಗರವಾಗಿ ನಿರ್ಮಾಣವಾಯಿತು. ಇದನ್ನು ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಸಂಸ್ಥಾನದ ಮೊದಲ ಆಂಗ್ಲ ರೆಸಿಡೆಂಟ್ ಆಗಿದ್ದ ಕರ್ನಲ್ ಕ್ಲೋಸ್ ಅವರ ಮೇಲಿನ ವಿಶ್ವಾಸಕ್ಕಾಗಿ 1799-80ರಲ್ಲಿ ಕ್ಲೋಸ್‌ಪೇಟೆ ಯನ್ನು ಸ್ಥಾಪಿಸಿದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಕರ್ನಲ್ ಕ್ಲೋಸ್ ಮೂರನೇ ಆಂಗ್ಲೊ- ಮೈಸೂರು ಯುದ್ಧದ ಸಮಯದಲ್ಲಿ ಗವರ್ನರ್ ಜನರಲ್ ಲಾರ್ಡ್ ಕಾರನ್‌ವಾಲೀಸ್ ಅವರ ಕೈಕೆಳಗೆ ಡೆಪ್ಯುಟಿ ಅಡ್ಜುಟೆಂಟ್ ಜನರಲ್ ಆಗಿದ್ದರು. ನಾಲ್ಕನೇ ಆಂಗ್ಲೊ- ಮೈಸೂರು ಯುದ್ಧದ ವೇಳೆಗೆ ಅವರು ‘ಅಡ್ಜುಟೆಂಟ್ ಜನರಲ್’ ಆದರು. ಟಿಪ್ಪು ಮರಣದ ನಂತರ ಅವರು ಮೈಸೂರು ರಾಜ ಮನೆತನ ಹಾಗೂ ರಾಜ್ಯಾಡಳಿತ ಪುನರ್ ವ್ಯವಸ್ಥೆ ಸಮಿತಿಯ ಸದಸ್ಯರೂ ಆದರು. 1799ರಲ್ಲಿ ಸಂಸ್ಥಾನದ ಪ್ರಥಮ ಬ್ರಿಟಿಷ್ ರೆಸಿಡೆಂಟ್ ಆಗಿ ಅಂದಿನ ದಿವಾನರಾದ ಪೂರ್ಣಯ್ಯ ಅವರೊಂದಿಗೆ ರಾಮನಗರ ಭಾಗದಲ್ಲಿ ಸಂಚಾರ ಕೈಗೊಂಡರು. ಆಗ ತುಂಬಿ ಹರಿಯುತ್ತಿದ್ದ ಅರ್ಕಾವತಿ ನದಿ ದಾಟಲು ಅಲ್ಲಿನ ಹೊಳೆಸಾಲಿನ ಹಳ್ಳಿ ಜನರು ಅವರಿಗೆ ನೆರವು ನೀಡಿದರು ಅದರ ನೆನಪಿಗೆ ಇಲ್ಲಿ ಊರು ನಿರ್ಮಿಸಲು ಕರ್ನಲ್ ಕ್ಲೋಸ್ ಆದೇಶ ನೀಡಿದರು ಎಂಬ ಐತಿಹ್ಯವಿದೆ.1884ರವರೆಗೆ ಮೈಸೂರು ಸಂಸ್ಥಾನದ ಉಪ ವಿಭಾಗೀಯ ಕೇಂದ್ರವಾಗಿದ್ದ ‘ಕ್ಲೋಸ್‌ಪೇಟೆ’ 1928 ರಲ್ಲಿ ತಾಲ್ಲೂಕು ಕೇಂದ್ರವಾಯಿತು. ಸ್ವಾತಂತ್ರ್ಯಾನಂತರ 1949ರಲ್ಲಿ ಕ್ಲೋಸ್‌ಪೇಟೆಗೆ ‘ರಾಮನಗರ’ ಎಂದು ನಾಮಕರಣ ಮಾಡಲಾಯಿತು. ಈಗಲೂ ಅದನ್ನು ಕೆಲವು ಹಿರಿಯ ಜೀವಗಳು ಅದನ್ನು ‘ಕುಲೀಸ್ ಪ್ಯಾಟೆ’ ಅಂತಲೇ ಕರೆಯುವುದು ಸಾಮಾನ್ಯವಾಗಿದೆ.
ಸಪ್ತ ಬೆಟ್ಟಗಳ ಜಿಲ್ಲೆ: ರಾಮನಗರ ಜಿಲ್ಲೆಯು ಏಳು ಪ್ರಮುಖ ಬೆಟ್ಟಗಳ ತವರು. ಶ್ರೀರಾಮಗಿರಿ, ರೇವಣ ಸಿದ್ದೇಶ್ವರ ಬೆಟ್ಟ, ಯತಿರಾಜಗಿರಿ, ಕೃಷ್ಣಗಿರಿ, ಸೋಮಗಿರಿ, ಸಿಡಿಲಕಲ್ಲು ಮತ್ತು ಜಲಸಿದ್ದೇಶ್ವರ ಬೆಟ್ಟಗಳಿವೆ. ಈ ಪ್ರದೇಶವನ್ನು ‘ಸಪ್ತಗಿರಿಗಳ ಜಿಲ್ಲೆ’ ಎಂದು ಕರೆಯುತ್ತಾರೆ. ಇವುಗಳಲ್ಲದೆ ಹಂದಿಗುಂದಿ ಬೆಟ್ಟ, ವಾಡೆ ಮಲ್ಲೇಶ್ವರ ಬೆಟ್ಟ, ಅಚ್ಚಲು ಬೆಟ್ಟ, ಸೋಮದೇವರ ಬೆಟ್ಟ, ಕೂಟಗಲ್ ಬೆಟ್ಟ ಮುಂತಾದವುಗಳಿವೆ..
* ಚನ್ನಪಟ್ಟಣದಲ್ಲಿ ಗವಿರಂಗಸ್ವಾಮಿ ಬೆಟ್ಟ, ಸವಣಪ್ಪನ ಗುಡ್ಡ, ಮುತ್ತಪ್ಪನ ಗುಡ್ಡ;
** ಕನಕಪುರದಲ್ಲಿ, ಕಬ್ಬಾಳಮ್ಮನ ದುರ್ಗ, ನಿಡಗಲ್ಲು, ಮೇಕೆದಾಟು, ಬಿಳಿಕಲ್ ಬೆಟ್ಟ, ಮುದುವಾಡಿ ಬೆಟ್ಟಗಳು,
*** ಮಾಗಡಿಯಲ್ಲಿ, ಇತಿಹಾಸ ಪ್ರಸಿದ್ಧ ಸಾವನದುರ್ಗ, ಬನತಿಮ್ಮನ ಬೆಟ್ಟ, ನರಸಿಂಹದೇವರ ಬೆಟ್ಟ, ಕಲ್ಯಾ ಗುಡ್ಡಗಳಿವೆ. ಅದರಲ್ಲೂ,
**** ರಾಮದೇವರ ಬೆಟ್ಟ, ಸಾವನದುರ್ಗ ಬೆಟ್ಟ, ಮೇಕೆದಾಟು, ಸಂಗಮ,ಚುಂಚಿಫಾಲ್ಸ್ ಗಳು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲದೆ ಚಾರಣಪ್ರಿಯರ ಮೆಚ್ಚಿನ ತಾಣಗಳೂ ಹೌದು.
ಉಪಸಂಹಾರ: ರಾಮನಗರದಿಂದ 2 ಕಿ.ಮೀ ದೂರದಲ್ಲಿ ಮೈಸೂರು ಹೆದ್ದಾರಿಗೆ ಅಂಟಿಕೊಂಡಿರುವ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಮಾಗಡಿ ಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿತ್ತಾದರೂ ಅದು ಕೈತಪ್ಪಿಹೋಯಿತು.. ಚನ್ನಪಟ್ಟಣದ ಸಿಲ್ಕ್ ಫಾರಂ ಬಳಿಯಲ್ಲಿ ರಾಜ್ಯ ಪೊಲೀಸ್ ಶಿಕ್ಷಣ ತರಬೇತಿ ಶಾಲೆ ಕಾರ್ಯನಿರ್ವಹಿಸುತ್ತಿದೆ.ಅಲ್ಲದೆ, ಏಷ್ಯಾ ಖಂಡದಲ್ಲೇ ಅತಿ ದೊಡ್ಡದಾದ ರೇಷ್ಮೆ ಮಾರುಕಟ್ಟೆ ಹೊಂದಿರುವ ಹೆಗ್ಗಳಿಕೆಯಿದೆ.
– ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.