Monday, October 23, 2017

ನಾಥ ಪಂಥ


ನಾಥ ಪಂಥ – ಭಾರತದ ಒಂದು ಪ್ರಸಿದ್ಧ ಯೋಗಪಂಥ. ಗೋರಖ್​ನಾಥ ಈ ವಿಶಿಷ್ಟ ಪಂಥದ ಪ್ರವರ್ತಕ. ಆತನ ಗುರು ಹಾಗೂ ಆದಿನಾಥನ ಶಿಷ್ಯ ಮತ್ಸ್ಯೇಂದ್ರನಾಥ ಇದರ ಸ್ಥಾಪಕ ಎನ್ನಲಾಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿಗಳೆಂಬ ಅಷ್ಟಾಂಗಗಳಿಂದ ಕೂಡಿದ ಈ ಯೋಗಪಂಥಕ್ಕೆ ಬಹಳ ಪ್ರಾಚೀನ ಇತಿಹಾಸವಿದೆ. ಯಾವುದೊಂದು ದಾರ್ಶನಿಕ ಒಲವನ್ನೂ ಹೇರಿಕೊಳ್ಳದೆ, ಎಲ್ಲ ವಿಚಾರವೇತ್ತರೂ ಅನುಸರಿಸಬಹುದಾದ ಈ ಯೋಗಮಾರ್ಗದ ಅರಿವು ಗುರುವಿನ ನೆರವಿಲ್ಲದೆ ಸಾಧ್ಯವಿಲ್ಲ; ಗುರುವಿಗೂ ಭಗವಂತನಿಗೂ ಭೇದವಿಲ್ಲ. ಇದೇ ಈ ಮಾರ್ಗದಲ್ಲಿನ ಮುಖ್ಯ ಅಂಶ. ಈ ಪ್ರಕ್ರಿಯೆಯ ಜೊತೆಗೆ ಗುರು ಪರಮಾತ್ಮರ ಐಕ್ಯ. ಶಿಷ್ಯನ ನಡವಳಿಕೆ ಮೊದಲಾದ ಕೆಲವು ತಾಂತ್ರಿಕ ಅನುಷ್ಠಾನಗಳೂ ಸೇರಿ ಇದೊಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆದಿದೆ.
ಮಾನವ ದೇಹದಲ್ಲಿ ಸುಪ್ತವಾಗಿರುವ ಕುಂಡಲಿನೀ ಶಕ್ತಿಯನ್ನು ಚಾಲನಗೊಳಿಸಿ ಎಂಟು ಚಕ್ರಗಳ ಮೂಲಕ ಒಯ್ದು, ಒಂಭತ್ತನೆಯ ಸಹಸ್ರಾರಚಕ್ರದಲ್ಲಿ ನಿಲ್ಲಿಸಿದಾಗ ಸಮಾಧಿಸ್ಥಿತಿಯುಂಟಾಗಿ ಪರಮಾರ್ಥದರ್ಶನವಾಗುತ್ತದೆ. ಈ ದರ್ಶನ ಪಡೆದಂಥ ವ್ಯಕ್ತಿ ಆನಂದಪೂರ್ಣನಾಗುತ್ತಾನೆ. ಲೋಕದ ಎಲ್ಲ ಬಂಧಕಸಾಮಗ್ರಿಯನ್ನು ಕೊಡವಿ ಹಾಕುವುದರಿಂದ ಅವಧೂತ ಎನಿಸುತ್ತಾನೆ. ಸಮಾಧಿಯ ತಿರುಳು ಸಮರಸಕರಣ. ಅಂದರೆ, ತಾನು, ಪರಮೇಶ್ವರ ಪ್ರಪಂಚ ಇತ್ಯಾದಿ ಭೇದಗಳಿಲ್ಲದೆ ಸರ್ವವೂ ಶಿವಮಯವಾಗುವುದು ಎಂದರ್ಥ. ಈ ವೈವಿಧ್ಯಮಯ ಪ್ರಪಂಚ ಶಕ್ತಿಯ ವಿಲಸಿತ. ಈ ಶಕ್ತಿಯಾದರೋ ಶಿವನಿಂದ ಬೇರೆಯಾದುದಲ್ಲ. ಸೃಷ್ಟಿಯಾಗಬೇಕಾದರೆ ಮೂಲಭೂತನಾದ ಶಿವನ ಶಕ್ತಿಯ ಮೂಲಕವೇ ಆಗಬೇಕು. ಶಿವಶಕ್ತಿಯರ ಪರಮಾರ್ಥ ಐಕ್ಯವನ್ನು ಅನುಭವಿಸುವಂಥ ನಾಥ-ಅವಸ್ಥೆಯಲ್ಲಿರುವುದೇ ಯೋಗದ ಗುರಿ. ಈ ಸ್ಥಿತಿಯನ್ನು ಪಡೆಯಲು ಕುಂಡಲಿನೀಚಾಲನ ಪ್ರಧಾನ ಸಹಾಯಕವಾದುದರಿಂದ ಅದನ್ನು ಪ್ರಚೋದಿಸುವ ಆಸನ, ಪ್ರಾಣಾಯಾಮಾದಿಗಳಿಗೆ ಈ ಪಂಥ ಆದ್ಯ ಗಮನ ನೀಡುತ್ತದೆ. ಈ ರೀತಿ ಹಠಯೋಗದ ಮೇಲೆ ಆಸ್ಥೆಯನ್ನು ಹೊಂದಿ ತಾಂತ್ರಿಕ ಪ್ರಕ್ರಿಯೆಗಳನ್ನು ಹೊಂದಿಸಿಕೊಂಡ ಈ ಮಾರ್ಗದ ಅನುಯಾಯಿಗಳು ಅವರದೇ ಆದ ಲಾಂಛನವನ್ನು ರೂಪಿಸಿಕೊಂಡಿದ್ದಾರೆ. ಭಸ್ಮಧಾರಣ, ಉಣ್ಣೆಯ ಜನಿವಾರ, ನಾದ (ಕೊಂಬು), ಮುದ್ರಾ (ಕಿವಿಯುಂಗರ) – ಇವು ಈ ಸಿದ್ಧಯೋಗಿಗಳನ್ನು ಇತರರಿಂದ ಬೇರ್ಪಡಿಸುತ್ತವೆ. ದೀಕ್ಷೆ ಪಡೆದ ಯೋಗಿಗಳ ಹೆಸರು ನಾಥ ಎಂಬುದರಲ್ಲಿ ಕೊನೆಯಾಗುತ್ತದೆ. ಮೂವತ್ತೆರಡು ಲಕ್ಷಣಗಳುಳ್ಳ ಶಿಷ್ಯ ಮೂವತ್ತಾರು ಲಕ್ಷಣಗಳುಳ್ಳ ಗುರುವಿನಲ್ಲಿ ದೀಕ್ಷೆ ಪಡೆಯುತ್ತಾನೆ. ಜ್ಞಾನ, ವಿವೇಕ, ನಿರಾಲಂಬ, ಸಂತೋಷ, ಶೀಲ, ಸಹಜ ಮತ್ತು ಶೂನ್ಯ – ಈ ಎಂಟು ಗುಣಗಳಲ್ಲಿ ನಾಲ್ಕು ನಾಲ್ಕು ವಿಭಾಗ ಮಾಡಿ ಮೂವತ್ತೆರಡು ಲಕ್ಷಣಗಳನ್ನು ಹೇಳಿದ್ದಾರೆ. ಒಬ್ಬ ಗುರು ಅನೇಕರಿಗೆ ದೀಕ್ಷೆ ಕೊಡುವುದನ್ನು ನಿಷೇಧಿಸಲಾಗಿದೆ. ಈ ಮಾರ್ಗಾನುಯಾಯಿಗಳನ್ನು ನಾಥಯೋಗಿಗಳು, ಸಿದ್ಧಯೋಗಿಗಳು ಅಥವಾ ಅವಧೂತರು ಎಂದು ಕರೆಯಲಾಗುತ್ತದೆ. ಜನಸಾಮಾನ್ಯರಲ್ಲಿ ಇವರನ್ನು ಕಾನ್​ಫಟಿ ಯೋಗಿಗಳು (ಕಿವಿ ಹರಿದವರು) ಎನ್ನಲಾಗುತ್ತದೆ. ಕಾಪಾಲಿಕ ಪಂಥ ಇವರೊಡನೆ ಸೋದರಸಂಬಂಧ ಹೊಂದಿದೆ.
ಈ ಪಂಥ ಭಾರತದ ಎಲ್ಲೆಡೆಯಲ್ಲಿಯೂ ಪ್ರಚಾರದಲ್ಲಿರುವುದಕ್ಕೆ ಇದು ಸರ್ವಜನ ಸಾಧಾರಣವಾಗಿರುವುದೇ ಕಾರಣ. ಇದರ ಜನಪ್ರಿಯತೆಗೆ ಗೋರಖ್​ನಾಥನ ಬಗೆಗೆ ಹೊರಟಿರುವ ವಿವಿಧ ಜನಪದ ಕಥೆಗಳೇ ಸಾಕ್ಷಿ. 15ನೆಯ ಶತಮಾನದಲ್ಲಿ ಪ್ರಸಿದ್ಧನಾಗಿದ್ದ ಈತ ಕಬೀರನ ಸಮಕಾಲೀನ ಹಾಗೂ ವಿರೋಧಿಯಾಗಿದ್ದನೆಂದು ಉತ್ತರಭಾರತದಲ್ಲಿ ಪ್ರಚಲಿತವಾಗಿದೆ. 14ನೆಯ ಶತಮಾನದ ಕೊನೆಯಲ್ಲಿ ಗೋರಖ್​ನಾಥನ ಜೊತೆ ಶಿಷ್ಯನಾದ ಧರ್ಮನಾಥ ಕಚ್ಛ್ ಪ್ರದೇಶದಲ್ಲಿ ತನ್ನ ಪಂಥದ ತತ್ತ್ವಗಳನ್ನು ಪ್ರಚುರಪಡಿಸಿದನೆಂದು ಪಶ್ಚಿಮ ಭಾರತದಲ್ಲಿ ಹೇಳುತ್ತಾರೆ. ನೇಪಾಳದಲ್ಲಿಯೂ ಈತನ ಹೆಸರು ಏಳನೆಯ ಶತಮಾನದ ದೊರೆ ನರೇಂದ್ರದೇವನೊಡನೆ ಕೇಳಿಬರುತ್ತದೆ. ಇನ್ನೊಂದು ನೇಪಾಳೀ ಕಥೆಯ ಪ್ರಕಾರ ಗೋರಖ್​ನಾಥ ನೀರಿನ ಮೂಲಗಳನ್ನೆಲ್ಲ ಒತ್ತಟ್ಟಿಗೆ ಸೇರಿಸಿ ಅದರ ಮೇಲೆ ಕುಳಿತು ಹನ್ನೆರಡು ವರ್ಷಗಳ ಜಲಕ್ಷಾಮವನ್ನು ಉಂಟುಮಾಡಿದನಂತೆ. ಆ ನೀರನ್ನು ಹೇಗೆ ಬಿಡುಗಡೆ ಮಾಡಿದನೆಂಬುದರಲ್ಲಿ ಬೌದ್ಧ, ಬ್ರಾಹ್ಮಣ ಕಥೆಗಳು ಭಿನ್ನವಾಗಿವೆ. ಬಹುಶಃ ಇದು ಐತಿಹಾಸಿಕ ಘಟನೆಯೊಂದನ್ನು ಸೂಚಿಸಬಹುದು. ಜನಪದ ಕಥೆಗಳಲ್ಲಿ ಗೋರಖ್​ನಾಥನನ್ನು ಶಿವನೆಂದೇ ಪರಿಗಣಿಸಲಾಗಿದೆ. ಈಗಲೂ ಗೋರಖ್​ಪುರ್ ಜಿಲ್ಲೆಯ ಗೋರಖ್​ನಾಥ್ ಎಂಬಲ್ಲಿ ಈತನ ದೇವಾಲಯವಿದೆ. ನೇಪಾಳದಲ್ಲಿ ಈ ಪಂಥದ ಆದಿಪುರುಷ ಆದಿನಾಥನನ್ನು ಆರ್ಯ ಅವಲೋಕಿತೇಶ್ವರನೆಂದು ಗುರುತಿಸುತ್ತಾರೆ. ಗೋರಖ್​ನಾಥನೂ ಅವನ ಶಿಷ್ಯರೂ ಮೊದಲು ಬೌದ್ಧರಾಗಿದ್ದರೆಂತಲೂ ಅನಂತರ ಈಶ್ವರಭಕ್ತರಾದರೆಂತಲೂ ಟಿಬೆಟನ್ ಕಥೆಗಳು ಸಾರುತ್ತವೆ.
(ಕೃಪೆ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ)