ಕರುನಾಡಿನ “ಗೊಂಬೆನಗರಿ” ಎನಿಸಿರುವ ಚನ್ನಪಟ್ಟಣ ಬಹುಮುಖಿ ಪ್ರತಿಭೆಗಳನ್ನು ತನ್ನ ಮಡಿಲಲ್ಲಿರಿಸಿಕೊಂಡಿದೆ. ಅಂತಹ ಪ್ರತಿಭೆಗಳಲ್ಲಿ ನಮ್ಮ ನಾಡಿನ ಜಾನಪದ ನೃತ್ಯ ಕಲಾಪ್ರಕಾರಗಳು ಮುಖ್ಯವಾದವುಗಳಾಗಿವೆ.ಅವುಗಳಲ್ಲಿ ಕತ್ತಿವರಸೆ, ಒನಕೆ ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ವಿಶಿಷ್ಟ ತಮಟೆ ವಾದನ, ಕಂಬದ ಕುಣಿತ, ಮರಗಾಲು ಕುಣಿತ ಮುಖ್ಯವಾದವು. ಇದಿಷ್ಟೇ ಅಲ್ಲದೆ ಜಾನಪದ ಗಾಯಕರು, ಸೋಬಾನೆ ಹಾಡುಗಾರರು,ಗಮಕ ಕಲಾವಿದರು,ವಚನ ಗಾಯಕರು ಇಲ್ಲಿ ಆವಿರ್ಭವಿಸಿದ್ದಾರೆ. ಆದರೆ ಇಲ್ಲಿ ಇನ್ನು ಅನೇಕ ಕಲೆಗಳು, ಕಲಾರಾಧಕರು ಇದ್ದಾರೆ. ಇವರಲ್ಲಿ ವೇದಿಕೆಯೇರಿ ತಮ್ಮ ಕಲೆಯನ್ನು ಪ್ರದರ್ಶಿಸಿದವರೆಷ್ಟೋ ಇಲ್ಲದವರೆಷ್ಟೊ?
ಇಂತಿಪ್ಪ ಚನ್ನಪಟ್ಟಣ ಕಲೆಗಳ ಬೀಡೆ ಹೌದು. ಇಂತಹ ಕಲೆಯ ನೆಲೆಯಾದ ಈ ತಾಲೂಕಿನ ಹನಿಯೂರು ಗ್ರಾಮದ 90 ವರ್ಷ ವಯಸ್ಸಿನ ರಾಚೇಗೌಡರು ಕಳೆದ 35 ವರ್ಷಗಳಿಂದಲೂ ಕಾವ್ಯ ವಾಚನೆಯನ್ನು ಒಂದು ಪ್ರವೃತ್ತಿಯನ್ನಾಗಿಸಿಕೊಂಡು ಕಲಾಸೇವೆಗೈಯ್ಯುತ್ತಾ ಬಂದಿದ್ದಾರೆ. ಇವರು ಓದಿರುವುದು ಕೇವಲ 3 ನೇ ತರಗತಿಯಾದರೂ ಪುರಾತನ, ಆಧುನಿಕ ಹಾಗೂ ಪ್ರಾಚೀನ ಕಾವ್ಯಗಳನ್ನು ಒಂದೂ ತಪ್ಪಿಲ್ಲದಂತೆ ಓದಬಲ್ಲರು. ಅಲ್ಲದೆ ಕೇಳುಗರು ತಲೆದೂಗುವಂತೆ ಅರ್ಥೈಸಬಲ್ಲರು ಸಹ. ಅಲ್ಲದೆ ಸುಸ್ಪಷ್ಟವಾಗಿ, ನಿರರ್ಗಳವಾಗಿ ಓದಿ ಸಾರವತ್ತಾಗಿ ಹೇಳುವ ರೀತಿಗೆ ಎಂತಹ ಪಂಡಿತರೂ ಮೂಗಿನ ಮೇಲೆ ಬೆರಳಿಡಲೇ ಬೇಕು. ಅವರ ಈ ರೀತಿಯ ಕಾವ್ಯ ವಾಚನೆಯನ್ನು ಮೆಚ್ಚಿದ ಕೇಳುಗರು ಅವರನ್ನು ‘ಭಾಗವತಿಕೆಯ ಗುಡ್ಡಣ್ಣ’ ಎಂದೇ ಕರೆದು ತಮ್ಮ ಮೆಚ್ಚುಗೆ ಸೂಚಿಸುತ್ತಾರೆ. ಅಲ್ಲದೆ ಅವರು ಗುಡ್ಡಣ್ಣ ಎಂದೇ ಚಿರಪರಿಚಿತರೂ ಸಹ.
ಇವರು ಪೌರಾಣಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ, ಜೈಮಿನಿ ಭಾರತ, ವಚನ ಭಾರತ, ಪಂಪಭಾರತ, ವಾಲ್ಮೀಕಿ ರಾಮಾಯಣ., ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ, ಕುಮಾರವ್ಯಾಸ ಭಾರತ, ತುರಂಗ ಭಾರತ, ಬಸವಣ್ಣನವರ ವಚನಗಳು, ಅಕ್ಕನ ವಚನಗಳು, ಮಂಕುತಿಮ್ಮ ಮತ್ತು ಮರುಳ ಮುನಿಯನ ಕಗ್ಗ, …ಇನ್ನು ಮುಂತಾದವುಗಳನ್ನು ಹಾಡಿ, ಸಾರವತ್ತಾಗಿ ವಿವರಿಸಬಲ್ಲರು. ಅವರ ಈ ವಾಚನ ಶೈಲಿಯನ್ನು ನೋಡಿದರೆ ಇಂದಿನ ಎಂತಹ ಮೇಧಾವಿಗಳು ಮೆಚ್ಚಲೇಬೇಕು. ಹಾಗಿದೆ ಅವರ ಕಾವ್ಯ ವಾಚನಾ ವೈಖರಿ.
ನಾಡಿನ ಜಿಲ್ಲೆಗಳಾದ ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ನಗರ ಹಾಗೂ ತಾಲೂಕುಗಳಾದ ಕನಕಪುರ, ಮದ್ದೂರು, ಆನೇಕಲ್, ರಾಮನಗರ, ಮಾಗಡಿ, ಕುಣಿಗಲ್ ಮತ್ತು ಚನ್ನಪಟ್ಟಣಗಳಲ್ಲಿ ತಮ್ಮ ಕಾವ್ಯವಾಚನೆ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಗೊಂಬೆನಗರಿಯ ಧಾರ್ಮಿಕ ನೆಲೆಗಳಾದ ಚೌಕೀ ಮಠ, ಹೊನ್ನಪ್ಪ ಸ್ವಾಮಿ ಮಠ, ಚೆನ್ನಪ್ಪಸ್ವಾಮಿ ಮಠ, ಸಿಂಗರಾಜಪುರದ ದೊಡ್ಡಮ್ಮತಾಯಿ ಮಠ ಮುಂತಾದೆಡೆ ತಮ್ಮ ಅಮೋಘ ಕಾವ್ಯವಾಚನಾ ಕಾರ್ಯಕ್ರಮಗಳನ್ನು ಗುಡ್ಡಣ್ಣ ನೀಡಿ ಜನಮಾನಸದಲ್ಲಿ ನೆಲೆಯೂರಿದ್ದಾರೆ.
ಎ. ಆರ್. ಕೃಷ್ಣ ಶಾಸ್ತ್ರೀಗಳು, ಕುವೆಂಪು, ಮತ್ತು ಡಿವಿಜಿ ಅವರನ್ನು ಬಹುವಾಗಿ ಮೆಚ್ಚುವ ಇವರಿಗೆ ಇತ್ತೀಚೆಗೆ ಸರಿಯಾಗಿ ಕಣ್ಣು ಕಾಣಿಸದು. ಆದರೂ ಸದಾ ಕತೆ, ಕಾದಂಬರಿ, ಕಗ್ಗ, ವಚನ, ರಾಮಾಯಣ-ಮಹಾಭಾರತವನ್ನು ಕನ್ನಡಕದ ಸಹಾಯದಿಂದ ಓದುವುದರಲ್ಲಿ ತಲ್ಲೀನರಾಗಿರುತ್ತಾರೆ. ಇವರು ಇಂದಿಗೂ ಹೊಲದಲ್ಲಿ ದುಡಿಯಬಲ್ಲರು. ಇತ್ತೀಚೆಗೆ ಸ್ವಲ್ಪ ಬಳಲಿದಂತಾಗಿರುವ ಇವರು ತಾವು ನೀಡಿದ ಕಾವ್ಯವಾಚನೆಗೆ ಪ್ರತಿಫಲವಾಗಿ ಯಾವುದೇ ದಕ್ಷಿಣೆ ಪಡೆಯುವುದಿಲ್ಲ. ಇಂತಹ ನಿಸ್ವಾರ್ಥ ಕಾವ್ಯ ಸೇವೆ ಮಾಡುತ್ತಿರುವ ಗುಡ್ಡಣ್ಣನವರ ಕಾಯಕ ನಿಷ್ಟೆ ಅನುಸರಣೀಯವಾಗಿದೆ.ಅನುಕ್ಷಣವೂ ಚಟುವಟಿಕೆಯಂದ ಇರುವ ರಾಚೇಗೌಡರು ನಮ್ಮೊಡನಿರುವ ಕಲಾಪ್ರೇಮಿಯೂ ಹೌದು. ಇಂತಹ ಕಲಾ ಪ್ರೇಮಿಯನ್ನು ಇಂದಿಗೂ ಸರಕಾರವಾಗಲೀ, ಸಂಘ-ಸಂಸ್ಥೆಯಾಗಲೀ ಗೌರವಿಸುವ ಸೌಜನ್ಯ ತೋರಿಲ್ಲ. 35 ವರ್ಷಗಳ ಕಾಲ ಕಾವ್ಯ ಸೇವೆ ಮಾಡಿರುವ ಇವರ ಈ ಕಲೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಬಯಕೆ ಇಟ್ಟುಕೊಂಡಿದ್ದಾರೆ.
–ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.