Feb 15, 2017

ಕನ್ನಡ ಭಾವಗೀತೆಗಳು

೧. ಎಂದೋ ಕೇಳಿದ ಒಂದು ಹಾಡನು ನಾನು ವೀಣೆಗೆ ಕಲಿಸಿದೆ.         
    ಹಾಡಿನ ಬಗೆಗೇ ಹಾಡಿದಂತಹ  ಕವಿಗಳು ನೂರಾರು. ಹಾಡು ಓದುಗರಿಗಷ್ಟೇ ಅಲ್ಲ; ಸ್ವತಹ ಕವಿಗೂ ಕೂಡಾ ಒಂದು ವಿಸ್ಮಯವೇ!   ಹಾಡಿನ ಹುಟ್ಟಿನ ಬಗೆಗೆ,  ಹಾಡು ತಮ್ಮನ್ನು ತಟ್ಟಿದ ಬಗೆಗೆ,  ಹಾಡಿನ ಸ್ವರೂಪದ ಬಗೆಗೆ, ಹಾಡಿನ ರಾಗಭಾವದೊಡನೆ  ಕವಿ- ಕಲಾವಿದ ತಾನು  ಲೀನವಾದ ಬಗೆಗೆ  ಅನೇಕಾನೇಕ  ಕವಿತೆಗಳನ್ನು ಬರೆದುಕೊಂಡಿದ್ದಾರೆ.    ಎಂದೋ ಕೇಳಿದ ಒಂದು ಹಾಡನು ನಾನು ವೀಣೆಗೆ ಕಲಿಸಿದೆ.    ಪ್ರೇಮಕವಿ ಕೆ. ಎಸ. ನರಸಿಂಹಸ್ವಾಮಿ ಅವರ ಕವನ.  ಪ್ರೇಮಿಗಳಿಬ್ಬರ ಜೀವನವು   ಹಾಡು ಹಾಗೂ ಸಂಗಿತದ  ಜೊತೆ ಜೊತೆ ಹೇಗೆ ಸಾಗಿತು ಎಂಬುದನ್ನು ಮಧುರವಾಗಿ ಕಟ್ಟಿಕೊಡುವ ಕವನ. ಸಾಹಿತ್ಯ ಹಾಗು ಸಂಗಿತದ ಕಾರಣದಿಂದ ಹತ್ತಿರವಾದ ಪ್ರೆಮಿಗಳಿಬ್ಬರಿಗೆ ಆ ಹಾಡೇ ಮುಂದಿನ ಹಾದಿಯನ್ನು ತೋರಿತು. ಪ್ರಕೃತಿಯೇ ಇರಬಹುದು, ಜೀವನದ ಸಂದರ್ಭಗಳೆ ಇರಬಹುದು ಅದು ಆ ಶುದ್ಧಮನಸ್ಸಿನ ಪ್ರೇಮಿಗಳನ್ನು ಶುಭವ ಕೋರಿ ಹರಸುವುದು. ಪ್ರೇಮಿಗಳಿಬ್ಬರ ಜೀವಗಾನದ ಮಾಧುರ್ಯಕ್ಕೆ  ಗಿಡಮರಗಳು ಹಸಿರುಕ್ಕಿಸಿ ನಲಿದವು, ಕೋಗಿಲೆಯ  ಹರ್ಷ ಹಾಡಾಯಿತು, ನವಿಲ ಉತ್ಸಾಹ ನರ್ತನವಾಯಿತು.    ಕವಿತೆ ಹೊನಲಾಗಿ ಹರಿವುದು. ವೀಣೆ ಮಧುರವಾಗಿ ಮಿಡಿಯುವುದು...    ಅಲ್ಲದೆ ಈ ಹಾಡು ಸಾಹಿತ್ಯ ಮತ್ತು ಸಂಗೀತೆದ ಮಧುರ ಸಂಬಂಧವನ್ನು ಸೂಕ್ಷ್ಮವಾಗಿ ತಿಳಿಸುತ್ತದೆ.  ಹಾಡು ಸಂಗೀತದ ಜೊತೆ ಹದದಲ್ಲಿ ಮೇಳೈಸಿದಾಗ ಭಾವ ಎದೆಯಾಳಕ್ಕಿಳಿವುದು.  ವ್ಯಕ್ತಿ ತಾನಳಿದು ಭಾವದಲ್ಲಿ ಲೀನವಾಗುವನು.  ಬಿಟ್ಟ ಬಾಣವೊಂದು  ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಿ ಜಯ ಪಡೆಯುವುದೋ ಹಾಗೆ ಹುಟ್ಟಿದ ಹಾಡು ಸಹೃದಯನ ಎದೆ ತಟ್ಟಿ  ಸಾರ್ಥಕಗೊಳ್ಳುವುದು.
 ೨.ಹಾಡು ಹಳೆಯದಾದರೇನು ಭಾವ ನವನವೀನ
            ಹಾಡು ಹಳೆಯದಾದರೇನು ಭಾವ ನವನವೀನ ನಿಜ, ನಮ್ಮ ಸುತ್ತಲಿನ ಪ್ರಕೃತಿ ಹೇಗೆ ನವ ನವೋನ್ಮೇಷ ಶಾಲಿನಿಯಾಗಿ ನಿತ್ಯನಾವಿನ್ಯತೆಯಿಂದ ಕಂಗೊಳಿಸುವುದೋ  ಹಾಗೆಯೇ ಸತ್ವಶಾಲಿಯಾದ ಹಾಡು ನಿತ್ಯವೂ ಓದುಗರ, ಕೇಳುಗರ ಎದೆಭಾವವನ್ನು ಹೊಸಹೊಸ ರೀತಿಯಲ್ಲಿ ತಟ್ಟುವುದು., ಭಾವವಾಗಿ ಕಾಡುವುದು.  ಹಾಡಿನ ಬಗೆಗೆ ರಚನೆಯಾದ ಈ ಹಾಡು ಕನ್ನಡದ ಅತ್ಯುತ್ತಮ ಭಾವಗೀತೆ  ಹಾಗೂ    ಗೇಯಗೀತೆ. ಭಾಷೆಯನ್ನೂ ಮೀರಿದ ಭಾವಕ್ಕೆ ಸಂಗೀತ ಹೆಚ್ಚು ಸಂವಾದಿಯಾಗಬಲ್ಲದು. ಹಾಡು ಎಷ್ಟೇ ಹಳೆಯದಾಗಿರಲಿ ಕೆಲವು ಹಾಡುಗಳಿಗೆ  ಹಾಡಿನ ಮೂಲಕ ಭಾವನೆಯನ್ನು ಉಕ್ಕಿಸುವು ತಾಕತ್ತು ಯಾವಾಗಲೂ ಇರುತ್ತದೆ.   ಅಂತಹ  ರಚನೆಯನ್ನು ಅಮರ ರಚನೆ ಎನ್ನುತ್ತೇವೆ. ಜನರ ಮಧ್ಯದಲ್ಲಿ ಹಾಡೊಂದು ಬದುಕಿತೆಂದರೆ ಅದು ಕವಿಗೆ ಸಿಕ್ಕಿದ ದೊಡ್ಡ ಪ್ರಶಸ್ತಿ ಎನ್ನಬಹುದು.    ಭಾಷೆಗೂ ಮೀರಿದ್ದು ಭಾವ. ಎದೆಯ ಭಾವ ಹೊಮ್ಮುವುದಕೆ ಭಾಷೆ ಒಂದು ಸಾಧನವೂ ಆಗಬಹುದು, ಅದೇ ಅಡೆತಡೆಯೂ ಆಗಬಹುದು. ಭಾವಕ್ಕೆ ಜೊತೆಯಾದ ಭಾಷೆ ಹಾಡಾಗುವುದು, ಆ ಹಾಡನ್ನು ಜೊತೆಮಾಡಿಕೊಂಡು, ಉಸಿರಾಗಿಸಿಕೊಂಡು ಕವಿ  ಬದುಕುತ್ತಾನೆ, ಬೆಳೆಯುತ್ತಾನೆ, ಹೊಸಜಿವನವನ್ನು ಕಟ್ಟಿಕೊಳ್ಳುತ್ತಾನೆ. ಹಮ್ಮು ಬಿಮ್ಮುಗಳನ್ನು ಕಳೆಯುವ ಹಾಡು ಹೃದಯವನ್ನು ವಿಶಾಲಗೊಳಿಸಿದೆ. ಅಂತಹ ಹಾಡಿನಲ್ಲಿ ಕರಗಿಹೊಗಲು  ಕವಿ ಬಯಸಿದ್ದಾನೆ. ವಿಜಯಭಾಸ್ಕರ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡು ‘ಮಾನಸ ಸರೋವರ’ ಎಂಬ ಸಿನೆಮಾದಲ್ಲಿ ಸೊಗಸಾಗಿ ಮೂಡಿಬಂದಿದೆ.
೩ ಎಡೆ ತುಂಬಿ ಹಾಡಿದೆನು ಅಂದು ನಾನು
    ಎಡೆ ತುಂಬಿ ಹಾಡಿದೆನು ಅಂದು ನಾನು .. ಕವಿ ಜೀ. ಎಸ. ಶಿವರುದ್ರಪ್ಪನವರು  ತಮ್ಮ ಗುರುಗಳಾದ ತ.ಸು.ಶ್ಯಾಮರಾಯರನ್ನು ಸ್ಮರಿಸುತ್ತಾ ಎಡೆ ತುಂಬಿ ಹಾಡಿದ ಈ ಹಾಡು ಕನ್ನಡ ಭಾವಗೀತೆಗಳ ಲೋಕದಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ಹಾಡಾಗಿದೆ. ಅನೇಕ ದೃಷ್ಟಿಯಿಂದ ‘ಓಂ ಪ್ರಥಮ’ ಎನ್ನಿಸುವುಂಥ ಹಾಡಾಗಿದೆ. ಕವಿಯ ಎದೆದುಂಬಿಯು ಹಾಡಿದ ಈ ಹಾಡನ್ನು ನಾಡಿನ ಗಾಯಕರೆಲ್ಲ ಎದೆತುಂಬಿ ಹಾಡಿದ್ದಾರೆ. ಭಾವಗೀತೆಗಳನ್ನು  ಹಾಡಲು ಕಲಿಯುವ ಮಕ್ಕಳ  ಮೊದಲ ಹಾಡೂ ಇದಾಗಿದೆ ಎನ್ನಬಹುದು. ಅಬಾಲವೃದ್ಧರಾದಿಯಾಗಿ ಎಲ್ಲರೂ ಇಷ್ಟ ಪಡುವ ಹಾಡು. ಅದರ ಸರಳವಾದ ಹಾಗೂ ಮನಮುಟ್ಟುವ ಕಾರಣದಿಂದಿರಬಹುದು  ಹಾಡು ಎಲ್ಲರ ಹಾಗೂ ಗಾಯಕರ ಮೆಚ್ಚಿನ ಹಾಡೂ ಆಗಿದೆ.
      ಕವಿ ಕಾವ್ಯಲೋಕದಲ್ಲಿ ಅಂಬೆಗಾಲಿಡುತ್ತಿದ್ದ ಕಾಲದಲ್ಲಿ ಅವರ ರಚನೆಗಳನ್ನು ಮೆಚ್ಚಿ ಪ್ರೋತ್ಸಾಹಿಸಿದ ಗುರುವನ್ನು ಇಲ್ಲಿ ಸ್ಮರಿಸಿದ್ದಾರೆ.  ತ.ಸು. ಶ್ಯಾಮರಾಯರು ಮಕ್ಕಳ ಮೆಚ್ಚಿನ ಗುರುವಾಗಿದ್ದರಲ್ಲದೆ  ಶ್ರೇಷ್ಠ ಸಾಹಿತಿಯೂ ಹೌದು. ಅವರು ಜೀ.ಎಸ.ಎಸ ನಂತಹ ಅನೇಕ ತರುಣರನ್ನು ಪ್ರೋತ್ಸಾಹಿಸಿ, ಬೆಳೆಸಿ ನಾಡಿನ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ‘ ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನೆಗೆ ಅದುವೇ ಬಹುಮಾನ. ಹಾಡು ಹಕ್ಕಿಗೆ ಬೇಕೆ  ಬಿರುದು ಸನ್ಮಾನ?’ ಇಂತಹ ಅಪೂರ್ವ ಧ್ವನಿ, ನುಡಿಸಂಯೋಜನೆ ಇನ್ನೆಲ್ಲಿ ಸಾಧ್ಯ? ನಿಜವಾದ ಕವಿ, ಕಲಾವಿದ ಬಿರುದು ಸನ್ಮಾನಗಳ ಹಿಂದೆ ಬೀಳುವುದಿಲ್ಲ. ಅವರ ತನ್ಮಯತೆಯೆಲ್ಲ ಕಾವ್ಯಲೋಕಕ್ಕೇ  ಮೀಸಲು. ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? ಎದೆತುಂಬಿ ಹಾಡಿದವರು ಕವಿ. ಮನವಿಟ್ಟು  ಕೇಳಿ ಮೆಚ್ಚಿದವರು ಗುರು.  ಮತ್ತೆ ಮುಂದುವರಿದು ಕವಿ  ‘ಹಾಡುವುದು ನನಗೆ ಅನಿವಾರ್ಯವೆಂದು’  ಹಾಡಿದರು.  ಭಾವಜಿವಿಗೆ ತನ್ನ ಎದೆಯಲ್ಲಿ ತುಂಬಿತುಳುಕುವ ಭಾವಧಾರೆಯನ್ನು ಹೊರಹಾಕದೆ ವಿಧಿಯಿಲ್ಲ. ಅನಿವಾರ್ಯ ಧರ್ಮವೋ ಕರ್ಮವೋ ಕವಿಗಳ ಪಾಡು ಇದಾಗಿದೆ. ಮಾನಸಮ್ಮಾನಗಳ ಕಡೆಗೆ ಅವರ ಗಮನವಿಲ್ಲ.  ಕೋಗಿಲೆಯು ವಸಂತ ಕಾಲದಲ್ಲಿ ತನ್ನ ಪಾಡಿಗೆ ತಾನು  ಸಂತೋಷದಿಂದ ಹಾಡುವುದು. ಬಹುಶಃ ಕೋಗಿಲೆಗೆ –ತನ್ನ ಕೂಜನ ಇಷ್ಟು ಇಂಪಾಗಿದೆ ಎಂದು ತಿಳಿದಿರಲಿಕ್ಕಿಲ್ಲ ಆದರೆ ಅದು ಮೈದುಂಬಿ, ಸಂತೋಷದಿನ ಹಾಡುವುದೇ ಅದರ ಹಾಡಿಗೆ ಮಾಧುರ್ಯವನ್ನು ತಂದಿದೆ. ಹಾಗೆಯೇ ಸಂತೋಷದಲ್ಲಿ ಭಾವಪೂರ್ಣತೆಯಲ್ಲಿ ಹುಟ್ಟಿದ ಹಾಡು ಕಟ್ಟಿದ ಹಾಡಿಗಿಂತ ಶ್ರೆಶ್ಥವಾಗಿರುವುದು, ಸಹಜವಾಗಿರುವುದು. ಮೆಚ್ಚುಗೆಯ, ಪ್ರತಿಫಲದ ಯಾವ ನಿರೀಕ್ಷೆಯಿಲ್ಲದೆ ಹಾಡಿಕೊಂಡ ಕವಿತೆ ಸಹಜವಾಗಿ ಶ್ರೆಶ್ಥವಾಗಿರುತ್ತದೆ ಈ ಕಾವ್ಯಸಹಜತೆ ಕವಿಗಳ ಹಿರಿಮೆಯ ದ್ಯೋತಕವಾಗಿರುತ್ತದೆ. ಅಪರೂಪದಲ್ಲಿ ಕೆಲವರಲ್ಲಿ ಮಾತ್ರ ಈ ಸಹಜತೆ ಸಿದ್ಧಿಯಾಗಿರುತ್ತದೆ. ಜೀ.ಎಸ. ಎಸ ಭಾವಗೀತೆಗಳ ರಾಜ ಎನಿಸಿಕೊಳ್ಳಲು ಇದೇ ಕಾರಣ.
      ಕೋಗಿಲೆಯು ತನಗಾಗಿ ತನ್ನ ಪಾಡಿಗೆ ತಾನೂ ಹಾಡಿಕೊಂಡರೂ ಅದನ್ನು ಆಸ್ವಾದಿಸುವ ಪ್ರಕೃತಿ ಅದರ ಸುತ್ತ ಇರುವಂತೆ  ತನ್ನ ಹಾಡನ್ನು ಕೇಳುವವರೂ ಆಸ್ವಾದಿಸುವವರೂ ಇರುವರೆಂಬ ಅರಿವು ಕವಿಗೆ ಇದೆ. ಆದರೆ ಕವಿಯಾಗಿ ಮೆಚ್ಚುಗೆ ಮಾನಸನ್ಮಾನಗಳ  ಹಿಂದೆ ಬಿಳಬಾರದೆಂಬ ಎಚ್ಚರಿಕೆಯೂ ಅವರಲ್ಲಿದೆ. ತನ್ನ ಹಾಡಿಗೆ ಯಾರು ಕಿವಿ ಮುಚ್ಚಿದರೂ ಚಿಂತೆ ಇಲ್ಲ ಎಂಬ ಧೈರ್ಯವು ಅವರಲ್ಲಿದೆ. ಮೈಸೂರು ಅನಂತಸ್ವಾಮಿಯವರ ಸಂಗೀತ ಸಂಯೋಜನೆಯಲ್ಲಿ ಭಾವದ  ಹೊನಲಾಗಿ ಹರಿದಿದೆ.
೪.ಯಾವ ಹಾಡ ಹಾಡಲಿ? ....
ಹಾಡುವುದು ತನ್ನ ಅನಿವಾರ್ಯವೆನ್ನುವ ಕವಿ, ತನ್ನ ಹಾಡಿಗೆ ಯಾರು ಕಿವಿ ಮುಚ್ಚಿದರೂ ಚಿಂತೆ ಇಲ್ಲ ಎನ್ನುವ ಕವಿ ಅದೇ ಸಮಯಕ್ಕೆ ತಾನು  ಸಮಾಜದಿಂದ ಬೇರೆಎಂದು ಭಾವಿಸುವುದಿಲ್ಲ.  ಕವಿಯು ತಾನು  ಒಂಟಿಯಾಗಿ, ಸಮಾಜಕ್ಕೂ ತನಗೂ ಏನೂ ಸಂಬಂಧವೇ ಇಲ್ಲ ಎಂಬಂತೆ ಬದುಕುವವನೂ ಅಲ್ಲ.  ನೈತಿಕವೆಂದು ಭಾವಿಸಲ್ಪಡುವ ಸಾಮಾಜಿಕ ಚಿಂತನೆಯಿಂದ ಜವಾಬ್ದಾರಿಯಿಂದ ಪಲಾಯನ ಮಾದುವುವವನೂ ಅಲ್ಲ. ತನ್ನ ಸುತ್ತಲಿರುವ ಜನರ ಸುಖದುಃಖಗಳಿಗೆ ಸ್ಪಂದಿಸದಿರಲಾರ. ಕವಿ ಜಿ. ಎಸ. ಎಸ ಇನ್ನೊಂದು ಹಾಡಿನಲ್ಲಿ ದೀನದಲಿತರ ಬಡಜನರ ಕಷ್ಟ –ಕಾರ್ಪಣ್ಯಗಳಿಗೆ ನೊಂದು ಅಸಹಾಯಕತೆಯಿಂದ ಹೀಗೆ ಹಾಡುತ್ತಾರೆ. ಯಾವ ಹಾಡ ಹಾಡಲಿ? ಯಾವ ಹಾಡ ಹಾಡಲಿ? ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ?    ದೀನದಲಿತರ ಬಡವರ, ಶೋಷಣೆಗೆ ಒಳಗಾದವರ , ಹರಕು ಬಟ್ಟೆ ತೊಟ್ಟವರ, ಮುರುಕು ತಟ್ಟೆ  ಹಿಡಿದವರ ಬೆಳಕಿಲ್ಲದ ದಾರಿಯಲ್ಲಿ ನಡೆಯುವವರ ಪಾಳುಗುಡಿಯಲ್ಲಿ ವಾಸಿಸುವವರ ಕಷ್ಟಗಳನ್ನು ನೋಡಿ ಅವರು ಮರುಗುತ್ತಾರೆ. ಆ ಜನಗಳಿಗಾಗಿ ತಾನೇನು ಮಾಡಬೇಕು, ತಾನೇನು ಮಾಡಬಲ್ಲೆ ಎಂದು ಚಿಂತಿಸುತ್ತಾನೆ. ನೊಂದವರ ದನಿಯಾಗಬೇಕೆ? ಆ ನನ್ನ ದನಿ ಅವರಿಗೆ ನೆಮ್ಮದಿ ತಂದೀತೆ? ಅಥವಾ ಅದೊಂದು ಸೋಗಾದೀತೆ? ಎಂಬ ಅನುಮಾನ ಆತಂಕಗಳು ಕವಿಗೆ ಕಾಡುವುದು.   ಬೆಳಕಿಲ್ಲದ ದಾರಿಯಲ್ಲಿ ಪಾಳು  ಗುಡಿಯ ಸಾಲಿನಲ್ಲಿ ಬಿರುಗಾಳಿಯ ಬೀಡಿನಲ್ಲಿ ಕುರುಡು ಪಯಣ ಸಾಗುವಲ್ಲಿ ಯಾವ ಹಾಡ  ಹಾಡಲಿ?. ಸುತ್ತ ಮುತ್ತ ಮನೆಮಠಗಳು  ಹೊತ್ತಿಕೊಂಡು ಉರಿಯುವಲ್ಲಿ,  ಸೋತು ಮೂಕವಾದ ಬದುಕು ನಿಟ್ಟುಸಿರೊಳು  ತೇಲುವಲ್ಲಿ  ಯಾವ ಹಾಡ ಹಾಡಲಿ?
 
                                     

    R                                          ಹಾಡು ಹಕ್ಕಿಗಳೇ ಹಾರಿ ಬಾನಿಗೆ ಮರದ ಗೂಡಿನಿಂದ ...
   ಬರೆಯದೆ ಇದ್ದರೂ ಕವಿತೆ ಇದೆ ಬರೆದಾತಗೆ ಹೆಸರು,  ಬದುಕುವ ಕಲೆಗೆ ಹೋರಾಟವೇ ಉಸಿರು. ಎಂಬ ಕವಿ ವಾಣಿಯಂತೆ  ಕವಿಯೊಬ್ಬ ಬರೆಯದೇ ಇದ್ದರೂ ಪ್ರಕೃತಿಯಲ್ಲಿ ಹಾಡು ತನಗೆ ತಾನೇ ಇದೆ. ಬೀಸುವ ಗಾಳಿಯಲ್ಲಿ ಒಂದು ಹಾಡು ಇದೆ ಒಂದು ಲಯವೂ ಇದೆ. ಹರಿಯುವ ನದಿಯಲ್ಲಿ ಒಂದು ಹಾಡು ಇದೆ, ತೆಲುವ ಮೋಡಗಳಲ್ಲೂ ಹಾದುಇದೆ. ಅದೇ ರೀತಿ ಚಿಲಿಪಿಲಿ ಗುಟ್ಟುವ ಹಕ್ಕಿದನಿಯಲ್ಲಿಯೂ ಹಾಡು ಇದೆ. ಕವಿ ಹೃದಯಕ್ಕಂತೂ ಹಕ್ಕಿಯ ದನಿಗಳದು ಅನೂಹ್ಯ ಪ್ರೇರಣೆಯೆನ್ನಬಹುದು. ಹಕ್ಲ್ಕಿಯ ಹಾಡು ಕವಿ ಹೃದಯದಲ್ಲಿ ಹಾಡಾಗುವುದು. ಹಕ್ಕಿಯ ಆನಂದ, ಅವುಗಳ ಉತ್ಸಾಹ, ಮುಗ್ಧತೆ ಇವೆಲ್ಲವೂ ಕವಿಯ ಪಾಲಿಗೆ ಆನಂದೋತ್ಸವವೇ ಆಗಿದೆ.  ಕವಿ ಏನ್. ಎಸ. ಲಕ್ಷ್ಮೀನಾರಾಯಣ ಭಟ್ಟರ  ಹಾಡು ಹಕ್ಕಿಗಳೇ  ಹಾರಿ ಬಾನಿಗೆ ಮರದ ಗೂಡಿನಿಂದ, ಎಂಬ ಹಾಡನ್ನು ಕೇಳಿದಾಗ ಅಮೃತ ಸಿಂಚನದಲ್ಲಿ ತೊಯ್ದಂತಾಗುವುದು. ಏಕೆಂದರೆ ಪುಟ್ಟ ಹಕ್ಕಿಯೊಂದು ಗೂಡಬಿಟ್ಟು  ಬಾನಿಗೆ ನೆಗೆಯುವ ಕ್ಷಣದಿಂದ ಪ್ರಾರಂಭವಾಗುವ ಅದರ ಜೀವನ ಆನಂದೋಲ್ಲಾಸದ ಜೀವಂತ ಪಯಣವಾಗಿದೆ.   ಹಾಡು ಹಕ್ಕಿಗಳೇ ಹಾರಿ ಬಾನಿಗೆ ಮರದ ಗೂಡಿನಿಂದ, ಹೋಗಿ ಚೆಲ್ಲಿರಿ ದಿಕ್ಕು ದಿಕ್ಕಿಗೂ  ಒಳಗಿನ ಆನಂದ.      ಮೇಲ್ನೋಟಕ್ಕೆ ಈ ಹಾಡು ಒಂದು ಹಕ್ಕಿಯ ಸಾರ್ಥಕ ಜೀವನದ ಕಥೆಯನ್ನು ವರ್ಣಿಸುವಂತೆ ಕಂಡು ಬಂದರೂ ಒಳಗೆ ಅಡಗಿರುವ ಧ್ವನ್ಯಾರ್ಥ ಬೇರೆಯದೇ ಆಗಿದೆ.    ಕವಿಯ ಮನಸ್ಸಿನಲ್ಲಿ ಮೂಡಿದ ಕಾವ್ಯಭಾವ  ಅದು ಹಕ್ಕಿ ಮರಿಯಂತೆ.    ಆ ಭಾವನೆಯು ಮರಿಹಕ್ಕಿಯಂತೆ  ಎದೆಗೂಡನ್ನು ಬಿಟ್ಟು ಹೊರ ಪ್ರಪಂಚಕ್ಕೆ  ನೆಗೆಯಲಿ.   ಪ್ರಕಟಗೊಂಡ ಆ ಹಾಡು ನಾಡಿನ ಮೂಲೆ ಮೂಲೆಗೂ ಹರಡಿ ಜನಮಾನಸದಲ್ಲಿ ಆನಂದದ ಅಲೆಯನ್ನೆಬ್ಬಿಸಲಿ. ಹೋಗಿ ಚೆಲ್ಲಿರಿ ದಿಕ್ಕು ದಿಕ್ಕಿಗೂ  ಒಳಗಿನ ಆನಂದ.       ಹಕ್ಕಿಯ ಹಾಡು ಮತ್ತು ಕವಿಗಳ ಹೃದಯದಲ್ಲಿ ಮೂಡುವ ಹಾಡು ಎರಡೂ ಒಂದೇ ಆಗಿದೆ. ತನ್ನಲ್ಲೇ ಹುಟ್ಟುವ  ಒಂದು ಹಾಡು ರೆಕ್ಕೆ ಬಲಿಯುವವರೆಗೆ ಕಾಯುತ್ತದೆ. ಬಲಿತ ರೆಕ್ಕೆಯ ಹಕ್ಕಿ ಮರಿ ಗೂಡಿಂದ ಹೊರಬರಲೇ ಬೇಕು. ಅದೇರೀತಿ ಕವಿಯ ಎದೆಯಲ್ಲಿ ಭಾವನೆ ತುಂಬಿ ತುಳುಕುವಂತಾದಾಗ ಅದು ಹೊರಚೆಲ್ಲಲೇ  ಬೇಕಲ್ಲವೇ? ಅದೇ ಕವಿತೆ.  “ ನಿಮ್ಮ ದನಿಯೇ ಆನಂದ ಚೆಲ್ಲಲಿ ಕೇಳಿದವರ ಎದೆಗೆ,   ಯಾವ ಹಕ್ಕಿಯಿದು ಬಂದುದೆಲ್ಲಿಂದ ಎಂಬ ಬೆರಗು ಕವಿಗೆ.”   ಕವಿಗೆ ತನ್ನಲ್ಲಿ  ಹುಟ್ಟುವ ಕವಿತೆಯ ಬಗೆಗೆ ಸಹಜ ಕುತೂಹಲವಿದೆ, ಸಂಭ್ರಮವಿದೆ, ವಿಸ್ಮಯವೂ ಇದೆ. ಅದು ತಾಯಿಯೋಬ್ಬಲಿಗೆ ತನ್ನಲ್ಲಿ ಮೊಳೆಯುವ ಜಿವಫಲದ ಕುರಿತಾಗಿ ಇರುವ ವಿಸ್ಮಯಾನಂದಕ್ಕೆ ಸಮವೆನ್ನಬಹುದು.
ಕವಿ ಕಂಡ ದೇವರು
   ಅನಾದಿ ಕಾಲದಿಂದಲೂ ದೇವರೆಲ್ಲಿದ್ದಾನೆ?  ಹೇಗಿದ್ದಾನೆ?  ಎಂಬ ಪ್ರಶ್ನೆ ಮಾನವನನ್ನು ಕಾಡುತ್ತಾ ಬಂದಿದೆ. ಋಷಿ ಮುನಿಗಳು ಅಧ್ಯಾತ್ಮದ ದಾರಿಯಲ್ಲಿ ಸಾಗಿ ದೇವರನ್ನು ಅರಿಯಲು ಪ್ರಯತ್ನಿಸಿದರೆ ವಿಜ್ಞಾನಿಗಳು ಸತ್ಯ ನಿಷ್ಠರಾಗಿ , ಪ್ರಯೋಗ ನಿಷ್ಠರಾಗಿ ಹೊರಟರು.ತಂತ್ರಜ್ಞಾನಗಳನ್ನು ಬೆಳೆಸುವಲ್ಲಿ ಸಾರ್ಥಕ್ಯ ಕಂಡರೂ ಇಂದ್ರಿಯದ ಅಳವಿಗೆ ಮೀರಿದ ನಿಗೂಢತೆಗಳ  ಬಗೆಗೆ ಬೆರಗು ಗೊಂಡರು. ದೇವರ ಬಗೆಗಿನ ಕುತೂಹಲ ಭಾವ ಜೀವಿಗಳಾದ ಕವಿಗಳನ್ನೂ ಬಿಟ್ಟಿಲ್ಲ. ದಾಸರೂ, ವಚನಕಾರರೂ ದೇವರನ್ನು ಸಾಂಪ್ರದಾಯಿಕವಾದ ಕಲ್ಪನೆಯ ಹಿನ್ನೆಲೆಯಲ್ಲಿ ಮುಂದಿಟ್ಟುಕೊಂಡು ಸ್ತುತಿಸಿದರೆ  ಇಂದಿನ ಕವಿಗಳು ಮಾನವೀಯ ಗುಣಗಳಾದ ಪ್ರೀತಿ, ಅನುಕಂಪ, ದಯೆ, ಇವುಗಳ ಹಿನ್ನೆಲೆಯಲ್ಲಿ, ಕಾಯಕದ ಹಿನ್ನೆಲೆಯಲ್ಲಿ  ದೇವರನ್ನು ಹುಡುಕುತ್ತಾರೆ ಮತ್ತು ಹೊಗಳುತ್ತಾರೆ.
 R ಎಲ್ಲೋ ಹುಡುಕಿದೆ  ಕಾಣದ ದೇವನ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ’    

ಕವಿ ಜೀ. ಎಸ. ಶಿವರುದ್ರಪ್ಪನವರ ಈ ಕವನ – ‘ಎಲ್ಲೋ ಹುಡುಕಿದೆ  ಕಾಣದ ದೇವನ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ’  ಇಲ್ಲಿ  ಮಾನವೀಯ ಗುಣಗಳ ಅನುಭೂತಿಯೇ ದೈವದ ಅನುಭೂತಿ ಎನ್ನುತ್ತಾರೆ ಕವಿ. ಕಲ್ಲು ಮಣ್ಣುಗಳ ಗುಡಿಯೊಳಗೆ ಪ್ರತಿಷ್ಟಾಪಿಸಲ್ಪಟ್ಟ ಶಿಲೆಯ ಮೂರ್ತಿಯಲ್ಲಿ ದೇವರನ್ನು ಕಾಣುವುದು ದೈವ ಜಿಜ್ಞಾಸೆಯ ಪ್ರಾರಂಭದ ಹಂತ; ಮತ್ತು  ಸಾಮಾನ್ಯನ ರೀತಿ.    ಮೂರ್ತಿಯಲ್ಲಿ ದೈವತ್ವವನ್ನು ಆರೋಪಿಸಿ ಆರಾಧಿಸುವ ಭಕ್ತ ನಂತರದಲ್ಲಿ  ಅದರ ಆಚೆ ಸಾಗಿ ಶಕ್ತಿ ಸ್ವರೂಪದ ಹಿನ್ನೆಲೆಯಲ್ಲಿ  ದೇವರನ್ನು ಅರ್ಥಮಾಡಿಕೊಳ್ಳುತ್ತಾನೆ.  ಅರ್ಥಮಾಡಿಕೊಳ್ಳುವುದು ಬುದ್ಧಿಗೆ ಸಂಬಂಧಿಸಿದ್ದಾದರೆ ಅದರಾಚೆಗೆ ಸಾಗಿ ದೈವಿಕವಾದ ಭಾವದಲ್ಲಿ  ತನ್ಮಯವಾಗಿ ದೈವತ್ವವನ್ನು ಅನುಭವಿಸುವುದು ಹೃದಯದ ರೀತಿ. ಪಕೃತಿಯಲ್ಲಿ  ತುಳುಕುತ್ತಿರುವ ಚಲುವು, ಪ್ರೀತಿ, ಕರುಣೆ, ವಾತ್ಸಲ್ಯ, ಅನುಕಂಪ, ಮುಗ್ಧತೆ ಇವೆಲ್ಲವುಗಳಲ್ಲಿ ದೈವದ ಲೀಲೆಯನ್ನು ಕವಿ ಗುರುತಿಸುತ್ತಾನೆ. ದೇವರನ್ನು ಗುಡಿಯಲ್ಲಿ ಹುಡುಕುವುದಕ್ಕಿಂತ ತನ್ನ ಸುತ್ತಲಿರುವ ಪ್ರೀತಿ-ಸ್ನೇಹಗಳಲ್ಲಿ ಹುಡುಕುವುದು ಕವಿಗೆ ಇಷ್ಟವಾಗಿದೆ. ದೇವರು ಬೇರೆಲ್ಲೂ  ಇಲ್ಲ; ನಮ್ಮ ಮನಸ್ಸಿನೋಳಗಿರುವನು. ನಮ್ಮ ಹೃದಯದ ಭಾವನೆಗಳಲ್ಲಿ ಇರುವನು. ನಾವು ನಮ್ಮ ಅಹಂಕಾರವನ್ನು ಬಿಟ್ಟು ಸಹ ಜಿವಿಗಳೊಂದಿಗೆ ಪ್ರೀತಿ, ವಿಶ್ವಾಸದಲ್ಲಿ ಬದುಕಿದಲ್ಲಿ ಅಲ್ಲಿ ಅಂತಹ ಬದುಕಿನಲ್ಲಿ ಇರುವನು.   ನಿರಪೇಕ್ಷವಾದ ಕಾಯಕದಲ್ಲಿ,    ಸಮರ್ಪಣೆಯಲ್ಲಿ, ಶೃದ್ಧೆಯಲ್ಲಿ  ಇರುವನು. 
    ‘ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ  ನಾಲಿಗೆಗೆ’  ಅಹಂಕಾರದ ಕೆರಳಿಕೆಗೆ ಕಾರಣವಾಗುವ ಸ್ವಾರ್ಥ, ಜಾತಿ ಧರ್ಮಗಳೆಂಬ ಅಂಧಾಭಿಮಾನಗಳನ್ನು ಬದಿಗಿಟ್ಟು ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತತ್ವವನ್ನು ಒಪ್ಪಿಕೊಂಡು ಸಹಬಾಳ್ವೆ ನಡೆಸಿದರೆ  ಆಗ ಆ ಜೀವನವೇ ಪವಿತ್ರ ತಾಣವೆನಿಸುವುದು.  ಆಧುನಿಕ ಕಾಲದಲ್ಲಿ ಅಂದರೆ ಭೋಗ ಸಂಸ್ಕೃತಿಯ  ಹಿಂದೆ ಬಿದ್ದಿರುವ ಈಗಿನ ಸಂದರ್ಭದಲ್ಲಿ  ‘ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬಾಳಿನಲಿ’ ಎಂಬ ವಾಸ್ತವದ  ಸಂಕಷ್ಟವನ್ನು ಕವಿ ನಮ್ಮೆಲ್ಲರ ಮುಂದಿಡುತ್ತಾನೆ. ಹತ್ತಿರವಿದ್ದೂ ದೂರ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುವುದು  ಅಹಂಕಾರದ ಕೋಟೆಯನ್ನು ಕಟ್ಟಿಕೊಂಡಾಗ . ಪ್ರೀತಿ ವಿಶ್ವಾಸವನ್ನು ಪರಸ್ಪರರಲ್ಲಿ ಬೆಸೆಯುವ ಮೂಲಕ  ಅಹಂಕಾರದ ಕೋಟೆಯನ್ನು ನಾಶಮಾಡಬೇಕು. ಇಲ್ಲದಿದ್ದಲ್ಲಿ  ವಿಶ್ವದಲ್ಲೇ ಶ್ರೇಷ್ಥ ವೆನಿಸುವ ಭಾರತಿಯ ಕುಟುಂಬ ವ್ಯವಸ್ಥೆ ನಾಶವಾದೀತು.   ಎಲ್ಲೋ ಹುಡುಕಿದೆ ಕಾಣದ ದೇವನ ...ಕವಿ ಕಾಣುವ ದೇವನು ಯಾರು?  ಹಾಡನ್ನು ಕೇಳಿ.   
            


    R                                 ಕರುಣಾಳು ಬಾ ಬೆಳಕೇ  ಮುಸುಕಿದೀ ಮಬ್ಬಿನಲಿ...   
     ಹೇಳದೆ  ಇದ್ದಲ್ಲಿ  ಇದೊಂದು ಅನುವಾದಿತ ಕವನ ಮತ್ತು ಇದು ಮೂಲದಲ್ಲಿ ಆಂಗ್ಲ ಕವಿಯಿಂದ ಬರೆಯಲ್ಪಟ್ಟ ಕವನ  ಎಂಬುದು ತಿಳಿಯುವುದೇ ಇಲ್ಲ. ಅಷ್ಟೊಂದು ಭಕ್ತಿ ಭಾವದಿಂದ ಕೂಡಿದ ಕವನ ಇದಾಗಿದೆ.  ಒಬ್ಬ ಭಾರತೀಯ ಆಸ್ತಿಕ ಮನಸ್ಸು ಹಾಡಿಕೊಂಡಂತಿವೆ. ದೇವರಿದ್ದಾನೋ ಇಲ್ಲವೋ ನಮಗೆ ತಿಳಿಯದು, ಆದರೆ ದೈವಿಕವಾದ ಪವಿತ್ರವಾದ ಬದುಕು ನಮ್ಮೊಂದಿಗಿದೆ. ಅದಕ್ಕೆ ಎಲ್ಲಾ ಬಗೆಯ ಅನುಕೂಲಗಳನ್ನು ಮಾಡಿಕೊಟ್ಟ ಪ್ರಕೃತಿ ನಮ್ಮೊಂದಿಗಿದೆ.   ಬೆಳಕು, ಜ್ಞಾನ, ಸಂಸ್ಕೃತಿ ಸಂಸ್ಕಾರಗಳು ನಮ್ಮ ಮುಂದಿವೆ. ತಮಸೋಮಾ ಜ್ಯೋತಿರ್ಗಮಯ ಎಂಬ ಆಶಯದಂತೆ ಕತ್ತಲು ತುಂಬಿರುವ ಈ ಬಾಳಿನಲ್ಲಿ ನಮ್ಮ ಕೈಯನ್ನು ಹಿಡಿದು ನಡೆಸು  ಎಂಬ ಆರ್ತವಾದ ಬೇಡಿಕೆ ಈ ಗೀತೆಯಲ್ಲಿದೆ.  ಕರುಣಾಳು ಬಾ ಬೆಳಕೇ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು .. ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾದ, ಅಹಂಕಾರದ ಲವಲೇಶವೂ ಇಲ್ಲದ ಹೃದಯ ಇಲ್ಲಿ ಬೇಡುತ್ತಿದೆ- ಕೈ ಹಿಡಿದು ನಡೆಸೆನ್ನನು..
     ಇಷ್ಟು ದಿನ ಸಲಹಿರುವೆ ಈ ಮುರ್ಖನನು ನೀನು ಮುಂದೆಯೂ ಸಲಹಲಾರೆಯಾ ನನ್ನನು ? ಕವಿಯು ತನ್ನನ್ನು ತಾನೂ ಅಂದರೆ ಮಾನವನನ್ನು ಮುರ್ಖನೆಂದೂ , ಸಣ್ಣವನೆಂದೂ   ಭಾವಿಸುತ್ತಾನೆ. ಇಷ್ಟು ದಿನ ಕರುಣೆಯಿಂದ ಕಾಪಾಡಿದ ಹಾಗೆ ಇನ್ನು ಮುಂದೆಯೂ ಮುನ್ನಡೆಸುವಂತೆ ಜ್ಞಾನವನ್ನು, ಬೆಳಕನ್ನೂ  ಬೇಡುತ್ತಾನೆ.  ತಾಯಿ ತನ್ನಮಗುವಿನ ತಪ್ಪು ಒಪ್ಪುಗಳನ್ನೆಲ್ಲ ಮನ್ನಿಸಿ ಕೈ ಹಿಡಿದು ನಡೆಸುವಂತೆ ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ದಾಟಿಸಿ, ಇರುಳನ್ನು ಅಂದರೆ ಅಜ್ಞಾನವನ್ನು ನೂಕಿ ಬೆಳಕನ್ನು ತೋರುವಂತೆಯೂ ಬೇಡಿಕೊಳ್ಳುತ್ತಾನೆ. ಬಿ. ಎಂ. ಶ್ರೀ ಅವರು ಅನುವಾದಿಸಿದ ಈ ಕವನ ಕನ್ನಡ ಭಾವಗೀತಾ ಪ್ರಪಂಚದಲ್ಲಿ ಸುಪರಿಚಿತವಾಗಿದೆ.

       R     ‘ಉಡಗಣ  ವೇಷ್ಟಿತ ಚಂದ್ರ ಸುಶೋಭಿತ ದಿವ್ಯಾಂಬರ ಸಂಚಾರಿ ‘     
       ಸ್ವಾಮಿ ವಿವೇಕಾನಂದರು ಹೇಳುತ್ತಾರೆ-ಭಾರತೀಯ ದಿನದಲಿತರೇ ನನ್ನ ದೇವರು ಎಂದು. ಇಂತಹ ದರಿದ್ರ ನಾರಾಯಣರ ಸೇವೆಗಾಗಿ ನಾನು ಪುನಃ ಈ ನೆಲದಲ್ಲಿ  ಹುಟ್ಟಿ ಬರುವೆ ಎಂದು ಹೇಳಿದರು. ಇದೇ ನೆಲದಲ್ಲಿ ಒಂದೆಡೆ ರಮ್ಯವಾದ ಸಾಂಕೇತಿಕವಾದ ರೂಪ ಕೊಟ್ಟು  ಕತೆಗಳನ್ನು ಹೆಣೆದು ಭಕ್ತು ಭಾವುಕರು ದೇವರನ್ನು ಸ್ತುತಿಸಿದರೆ ಮಾನವತಾವಾದಿಗಳಾದ ಸಂತರು, , ವಿಚಾರವಂತರು ಬಡವನಲ್ಲಿ, ದೀನ ದುರ್ಬಲರಲ್ಲಿ ಕಾಯಕದಲ್ಲಿ ಸೇವೆಯಲ್ಲಿ  ದೇವರನ್ನು  ಕಂಡರೂ. ಕವಿ ಜೀ.ಎಸ.ಶಿವರುದ್ರಪ್ಪನವರು ತಮ್ಮ  ಉಡು ಗಣ ವೇಷ್ಟಿತ ಚಂದ್ರ ಸುಶೋಭಿತ ದಿವ್ಯಾಮ್ಬರ ಸಂಚಾರಿ  ಎಂಬ ಕವನದಲ್ಲಿ ದೇವರನ್ನು ಈ ಎರಡೂ ನೆಲೆಯಲ್ಲಿ ಕಾಣಲು ಪ್ರಯತ್ನಿಸಿದ್ದಾರೆ. ಈ ಬ್ರಹ್ಮಾಂಡದ ಸೃಷ್ಟಿಗೆ ಕಾರಣನಾದ ದೈವಶಕ್ತಿಯು  ಒಂದೆಡೆ ಪ್ರಾಕೃತಿಕವಾದ ಅದ್ಭುತಗಳಾಗಿ ಗೋಚರವಾದರೆ  ಇನ್ನೊಂದೆಡೆ ಒಬ್ಬ ಸಾಮಾನ್ಯ ವ್ಯಕ್ತಿಯ ಶ್ರದ್ಧೆಯಲ್ಲಿಮುಗ್ಧತೆಯಲ್ಲಿ, ಕಷ್ಟ ಸುಖಗಳನ್ನು ಬಂದಂತೆ ಎದುರಿಸುವ ಜೀವನ ದೃಷ್ಟಿಯಲ್ಲಿ, ಆತನ ತನ್ಮಯತೆಯಲ್ಲಿ, ಕಂಡುಬರುತ್ತಾನೆ. ದಿವ್ಯಾಮ್ಬರ ಸಂಚಾರಿಯಾಗಿ ಮೂರು ಲೋಕವನ್ನೇ ಅಳೆವ ತ್ರಿವಿಕ್ರಮನು  ಬಡವನ ಕಣ್ಣೀರಿನಲ್ಲಿ, ಆತನ ಶ್ರದ್ಧೆಯ ಆಡಂಬೋಲವಾದ  ಮಣ್ಣಿನಲ್ಲಿ ಆತನ ಜೋತೆಯಾಗಿದ್ದಾನೆ. ಕೋಟಿ ಸೂರ್ಯಕರ ತೆಜಃಪುಂಜಕರ ವಿದ್ಯುತ್ ರಾಜಿತ ರಥಗಾಮಿ ಯಾದ ದೇವಾನು ಮಹಾನ ಶಕ್ತಿಯಾಗಿ ಕಂಡುಬಂದರೆ ಉಳುವ ರೈತನ ನೇಗಿಲು ಮೂಡಿಸುವ ಮಣ್ಣಿನ ರೇಖೆಯನ್ನು ಪಥವನ್ನಾಗಿ ಮಾಡಿಕೊಂಡ , ಸಾಮಾನ್ಯನ ಕಷ್ಟಗಳಿಗೆ ತುಡಿಯುವ ಸಂತೈಸುವ, ಭರವಸೆ ನೀಡುವ ಸಹಚಾರಿಯಾಗಿ ಕಂಡುಬರುತ್ತಾನೆ.
     ಆಕಾಶವನ್ನು ಚುಂಬಿಸುವಂತೆ ಎತ್ತರವಾಗಿ ಬೆಳೆದು ನಿಂತ ಹಿಮಾಲಯದಲ್ಲಿ  ಎತ್ತರದಲ್ಲಿ ವಾಸಿಯಾಗಿರುವ ಶಿವನು ದೀನ ಅನಾಥರ ದುಃಖ ದರಿದ್ರರ ಮುರುಕು ಗುಡಿಸಲಲ್ಲಿ,  ಬದವನೊಂದಿಗೆ ಒಂದಾಗಿ ವಾಸಿಸುತ್ತಾನೆ.    ಅಥವಾ ಅವನ ಜೊತೆ ಉಪವಾಸಿಯಾಗಿರುತ್ತಾನೆ. ಏಕೆಂದರೆ ಉಪವಾಸ ಬಡವನ ಸಂಗಾತಿ. ಇದೇ ಕವಿಯ  ಅನೇಕ ಭಾವಗಿತೆಗಳಲ್ಲಿ ದೀನ ದಲಿತರ  ಪರವಾದಂತಹ ಕರುಣೆ ರಸಧಾರೆಯಾಗಿ ಹರಿದಿದೆ. ಭಕ್ತ, ಬಡವರ, ನಂಬಿದವರ ಸೇವೆಗೆ ದೇವರು ಸದಾ ಸಿದ್ಧನಿರುತ್ತಾನೆ. ಆತ ಹೂವ ತರುವರ ಮನೆಗೆ ಹುಲ್ಲ ತರುವವ. ಕೈ ಕಡಿದುಕೊಂಡ ಗೋರಕುಂಬಾರನ ಸೇವೆಗೆ ನಿಂತ ಆಪದ್ಭಾಂಧವ.  
          R     ನಿಲಾಕಾಶದ ತಾರಾಗೆ ನೀನು ......
ಕವನ- ನಾನು ನೀನು.
    ಕವಿ ಜೀ. ಎಸ.ಶಿವರುದ್ರಪ್ಪ.  ನಮ್ಮ ಸುತ್ತಲಿನ ಪ್ರಕೃತಿ ಸುಂದರ, ತಾಜಾ, ಮತ್ತೆ ಅದ್ಭುತ.   ಈ ಪ್ರಕೃತಿಯ ಹಿಂದಿನ ಶಕ್ತಿ, ಅದರ ಅಗಾಧತೆ  ನಮ್ಮೆಲ್ಲರನ್ನೂ ಬೆರಗುಗೊಳಿಸುತ್ತದೆ, ಜಿಜ್ಞಾಸೆಗೆ   ದೂಡುತ್ತದೆ. ಪ್ರಕೃತಿ ನಮ್ಮಿಂದ ಭಾವ ಸಮರ್ಪನೆಯನ್ನು ಬೇಡುತ್ತದೆ. ಕವಿ- ಕಲಾವಿದರು ಪ್ರಕೃತಿಯ ಅದ್ಭುತಗಳಿಗೆ ಭಾವುಕರಾಗಿ ಹಾಡುತ್ತಾರೆ, ಭಕ್ತರಾಗಿ ತಲೆ ಬಾಗುತ್ತಾರೆ.  ನಾನು ನೀನು ಕವಿತೆಯಲ್ಲಿ ಕವಿಯು  ನಮ್ಮ ಹಾಗೂ ಪ್ರಕೃತಿಯ  ನಡುವಿನ  ಅಗಾಧ ಅಂತರವನ್ನು ಗುರುತಿಸುತ್ತಾರೆ. ಪ್ರಕೃತಿಯ ಹಿಂದಿನ ಶಕ್ತಿ, ಆಸ್ತಿಕರು ಒಪ್ಪುವ ದೇವರನ್ನು ಉದ್ದೇಶಿಸಿ  ಹೀಗೆ ಹೇಳುತ್ತಾರೆ-ನೀನು ನಿಲಾಕಾಶದಲ್ಲಿ ಹೊಳೆಯುವ ತಾರೆ,  ನಾನಾದರೋ  ಮಣ್ಣಿನಲ್ಲಿ ಹುಟ್ಟಿರುವ ಶಿಶು. ನಮ್ಮಿಬ್ಬರ ನಡುವಿನ ದೂರದಲ್ಲಿ  ಹಾಗು ನಮ್ಮಿಬ್ಬರ ನಡುವಿನ ಸ್ವರೂಪದಲ್ಲಿ  ಅಗಾಧ ಅಂತರವಿದೆ. ನಾನು   ನಿನ್ನನ್ನು ನೋಡಿ ಮೆಚ್ಚಿ ಚಪ್ಪಾಳೆಯಿಕ್ಕುವ ಶಿಶುವಿನಂತೆ ಇದ್ದೇನೆ.  ನೀನು ಬ್ರಹದ್ ವೈನಿಕನಾದರೆ ನಿನ್ನ ಲೀಲಾಗಾನವನ್ನು  ಆಲಿಸಿ ಮೈಮರೆಯುವ ಜಿಂಕೆಯಂತೆ ನಾನಿದ್ದೇನೆ. ಹೀಗೆ ಕವಿತೆಯ ಎಲ್ಲಾ ನುಡಿಗಳಲ್ಲಿ ತನಗೂ ಪ್ರಕೃತಿಗೂ ಇರುವ ಅಂತರವನ್ನು ಹೇಳಿ ನಾನು ಅತ್ಯಂತ ಚಿಕ್ಕವನು ಎಂದು ಹೇಳುತ್ತಾ ನಿನ್ನಲ್ಲಿ ನನ್ನೆಲ್ಲಾ ಭಾವಗಳು ಸಮರ್ಪಣೆಗೊಂಡಿದೆ ಎಂದು ಹಾಡುತ್ತಾ   ಕವಿ ವಿನೀತರಾಗುತ್ತಾರೆ.    

           ತೇನವಿನಾ ತೇನವಿನಾ ತೃಣಮಪಿ ಣ ಚಲತೆ ತೇನವಿನಾ ಮಮತೆಯ ಬಿಡು ಹೇ ಮೂಢ ಮನಾ //   
 ಇದೇ ಭಾವವನ್ನು ಕವಿ ಕುವೆಂಪು  ಅವರು   ಇನ್ನೂ ಅದ್ಭುತವಾಗಿ ಹಾಡಿದ್ದಾರೆ. ಸಕಲಕೆಲ್ಲಕೆ ನೀನೆ  ಅಕಳಂಕ ಹರಿಯೆಂದು ದಾಸರು ಹಾಡುವಂತೆ ತೇನವಿನಾ ಅಂದರೆ ನಿನ್ನ ಬಿಟ್ಟು ಈ ಜಗತ್ತಿನಲ್ಲಿ ಒಂದು ಹುಲ್ಲು ಕಡ್ಡಿಯೂ ಅಲುಗಾಡದು ಎನ್ನುತ್ತಾರೆ ಕವಿ.   ಈ  ವಿಶ್ವದ ಎಲ್ಲಾ ಜೀವನ ವ್ಯಾಪಾರಕ್ಕೆ,  ಜೀವಂತಿಕೆಗೆ, ಜೀವನ ಚಕ್ರಕ್ಕೆ, ಒಂದು ಅದ್ಭುತ ಶಕ್ತಿಹಿನ್ನೆಲೆ ಇದೆ. ಆಸ್ತಿಕ ಮನೋಭಾವ ಅದನ್ನು ದೇವರು ಎಂದು ಗುರುತಿಸುತ್ತದೆ. ತೇನವಿನಾ ತೇನವಿನಾ ತೃಣಮಪಿ ನಚಲತೇ  ತೇನವಿನಾ.  ಮಮತೆಯ ಬಿಡು ಹೇ ಮೂಢ ಮನಾ.  ಎಲ್ಲಾ ಕ್ರಿಯೆಗಳಿಗೂ  ನೀನೇ ಕಾರಣವೆಂದ ಮೇಲೆ  - ತಪ್ಪು  ಒಪ್ಪುಗಳಿಗೆಲ್ಲ ನಾವು ಕಾರಣರಲ್ಲ  ಅಂದರೆ ನಾವು ನೆಪ ಮಾತ್ರರು ಎಂದಾಯಿತು. ಮತ್ತೆ ನನ್ನ  ಜೀವನವನ್ನು ನಡೆಸುವವನು ನೀನು. ನನಗಾವ ಭಯವೂ ಇಲ್ಲ. ತಲ್ಲಣಿಸದಿರು ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯಬೇಡ.  ಎಂಬಂತೆ ಭಯದಿಂದ, ಆತಂಕದಿಂದ  ಬದುಕನ್ನು  ಸಾಗಿಸಬೇಡ ಆನಂದದಿಂದ ಜೀವಿಸು. ಮೋಹಬೇಡ, ಅದರಿಂದ ಹುಟ್ಟುವ ಆತಂಕ  ಬೇಡ.   ಶ್ರದ್ಧೆಯಿಂದ ಬದುಕು ಅಲ್ಲಿ ಯಾವ ವಿಷಾದಕ್ಕೂ ಎಡೆಯಿಲ್ಲ.   ನಾನೊಂದು ಗೊಂಬೆ ನೀನೊಬ್ಬ ಸೂತ್ರದಾರ ನೀನು ಆಡಿಸಿದಂತೆ ನಾನು ಆಡುವೆ.   ಆಡಿಸಿದಾತನ ಕೈ ಚಳಕದಲಿ ಎಲ್ಲ ಅಡಗಿದೆ ಎಂದಾದ ಮೇಲೆ ನಾ ತೋರಿದ ಆಟಗಳಿಗೆಲ್ಲ ಪಶ್ಚಾತ್ತಾಪವೂ  ಇಲ್ಲ.   ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ  ಅನಲಾಕ್ಷ ನಿನ್ನ ಪ್ರೇರಣೆ ಇಲ್ಲದೆ ಎಂದು ದಾಸರು ಹಾಡಿದಂತೆ  ಮಮತೆಯನ್ನು ಬೆಳೆಸಿಕೊಳ್ಳುವಲ್ಲಿ ಯಾವುದೇ ಅರ್ಥವಿಲ್ಲ ಭಗವದ್ಗೀತೆಯಲ್ಲಿ ಹೇಳಿದಂತೆ ಕರ್ಮಣ್ಯೇವ ಅಧಿಕಾರಸ್ತೆ ಅಂದರೆ ನಮಗೆ ಕರ್ಮದಲ್ಲಿ ಮಾತ್ರ ಅಧಿಕಾರ  ಫಲದಲ್ಲಿ ಅಲ್ಲ.  ಇದೊಂದು ರಂಗ; ಇಲ್ಲಿ ಪಾತ್ರಮಾಡಲು ನಮಗೆ ಅವಕಾಶ ಸಿಕ್ಕಿದೆ  ಚೆನ್ನಾಗಿ ಪಾತ್ರವನ್ನು ನಿರ್ವಹಿಸುವ ಅವಕಾಶವನ್ನು ಕಳೆದುಕೊಳ್ಳಬಾರದು. ಅದಕ್ಕೆಂದೇ ಜೀವನವನ್ನು ಭಗವಂತನೇ ಲೀಲೆ ಎನ್ನುತ್ತಾರೆ ಹಲವು ದಾರ್ಶನಿಕರು. ಲಿಲೆಯೆಂದರೆ ಆಟ. ಕ್ರೀಡಾ ಮನೋಭಾವದಿಂದ ಆಟವಾಡುವುದೇ ನಿಜವಾದ ಗೆಲುವು. ಆಟದ ಸೋಲುಗೆಲುವುಗಳನ್ನೆಲ್ಲಾ  ಅಂಟಿಸಿಕೊಂಡರೆ  ನಾವು ಸೋತಂತೆ!  ಈ ಜಿವನರಂಗದಲ್ಲಿ  ಪೂರ್ಣಶ್ರದ್ಧೆಯ,  ಆನಂದದ, ಪಾಪಲೆಪವಿಲ್ಲದ ಬದುಕು ನಿನ್ನದಾಗಲಿ. ಹಾಡಿನ ಆಳಕ್ಕಿಳಿದಂತೆ ಅರ್ಥ ವಿಸ್ತಾರಗೊಳ್ಳುತ್ತಾ ಹೋಗುವುದು.   ತೇನವಿನಾ ತೇನವಿನಾ ತೃಣಮಪಿ ಣ ಚಲತೆ ತೇನವಿನಾ ಮಮತೆಯ ಬಿಡು ಹೇ ಮೂಢ ಮನಾ ... ........  
  
                      
               R                  ನನ್ನ ಹರಣ ನಿನಗೆ ಶರಣ .....
‘ ರಸವೆ ಜನನ, ವಿರಸ ಮರಣ, ಸಮರಸವೇ ಜೀವನ ‘  ಜೀವನದ ಅರ್ಥವನ್ನು ಇಷ್ಟು ಕಾವ್ಯಾತ್ಮಕವಾಗಿ, ಚಿಕ್ಕದಾಗಿ, ಚೊಕ್ಕದಾಗಿ ಹೇಳಿದವರಿಲ್ಲ , ಹಾಡಿದವರಿಲ್ಲ ಎನ್ನಬಹುದು. ಬೆನ್ದ್ರೆಅಯವರ ನನ್ನ ಹಾಡು ಎಂಬ ಗೀತೆಯ ಕೊನೆಯಲ್ಲಿ ಈ ಅಪೂರ್ವ ನುಡಿ  ಮೂಡಿದೆ. 
      ನನ್ನ ಹರಣ ನಿನಗೆ ಶರಣ ಸಕಲ ಕಾರ್ಯ ಕಾರಣ.  ಭಗವಂತನಲ್ಲಿ ಅನನ್ಯ ಶರಣಾಗತಿಯನ್ನು ಸುಚಿಸುವ ಗೀತೆ ಇದಾಗಿದೆ.  ಹೇಗೆ ಕುವೆಂಪು ಅವರು  “ ತೇನವಿನಾ ತೆನ ವಿನಾ ತೃಣಮಪಿ ಣ ಚಲತೆ  ತೆನ ವಿನಾ ಮಮತೆಯ ಬಿಡು ಹೇ  ಮೂಢ ಮನಾ  “ ಎಂದು ಹಾಡಿದ್ದಾರೋ ಹಾಗೆಯೇ ಈ ಗಿತೆಯೂ ಕೂಡಾ. ಕಷ್ಟಗಳಲ್ಲಿ ಬೆಂದು ಹೋದ ವ್ಯಕ್ತಿಗೆ ಕೊನೆಯಲ್ಲಿ ತನ್ನನ್ನು ತಾನು  ಸಂತೈಸಿಕೊಳ್ಳುವ ಸಂದರ್ಭದಲ್ಲಿ ಆಸರೆಯಾಗುವುದು  ಭಗವಂತನಲ್ಲಿ ಶರಣಾಗತಿಯೊಂದೇ.  ನನ್ನ ಹರಣ ಎಂದರೆ ನನ್ನ ಪ್ರಾಣ  ನಿನ್ನಲ್ಲಿ ಶರಣಾಗಿದೆ, ಏಕೆಂದರೆ ನೈನ್ ಸಕಲ ಕಾರ್ಯ ಕಾರಣನಾಗಿರುವೆ. ಈ ಸಮರ್ಪಣೆಯಿಂದ ಆತನ ಮನಸ್ಸು ನಿರಾಳವಾಗುತ್ತದೆ. ಮನಸ್ಸಿಗೆ ದೊರಕಿದ ನಿರಾಳತೆಯು ದೇಹವನ್ನು ಆವರಿಸಿ ಅದು ಪಾವನಗೊಲ್ಲುತ್ತಿದೆ. ನಿನ್ನ ಮನನ  ದಿಂದ  ತನನ  ವೆನುತಿದೆ ತನು ಪಾವನ  
   ಸುಖದ ಮಿಷವು ದುಃಖ ವಿಷವು ಹಿಗ್ಗಿ ಪ್ರಾಣ ಪೂರಣ  -  ಸುಖದ ಮಿಷವೆಂದರೆ ಬಯಕೆ. ಸುಖದ ಬಯಕೆ ದುಃಖಕ್ಕೆ ಕಾರಣವಾಗುವ ವಿಷದಂತೆ. ಇದು ನಿನ್ನ ಪ್ರಾಣ ಪೂರಣವಾಗಿತ್ತು ಅಂದರೆ ಆವರಿಸಿತ್ತು.  ಆದರಿಂದು ಇದರ ಅರಿವಿನಿಂದ ಸುಖದ ಬಯಕೆಯನ್ನು ಕಳೆದುಕೊಂಡಿದ್ದೇನೆ. ಭಗವಂತನಿಗೆ ಶರಣಾಗಿದ್ದೇನೆ. ಕಾರಣ ಪಂಚೆಂದ್ರಿಯಗಳು  ಕರ್ಮೇಂದ್ರಿಯಗಳು ನಿನ್ನ ಗುಡಿಗೆ ತೋರಣ ಕಟ್ಟಿವೆ. ಆ ಗುಡಿಯೊಳಗೆ ನೀನು ವಾಸವಾಗಿರುವೆ.
      ನಿನ್ನ ಚರಣ ಸುಸಂತರಣ ಅಂದರೆ ನಿನ್ನ ಪಾದ ನಮ್ಮನ್ನು ಸಂಸಾರ ಸಾಗರದಿಂದ ಪಾರುಮಾದುವಂಥದ್ದು.  ಈ ಭಾವವು ಇಂದು ಜಗತ್ತಿನೆಲ್ಲೆಡೆ ಆಸ್ತಿಕರ ಮನಸ್ಸಿನಲ್ಲಿ ತುಂಬಿದ ಭಾವನೆಯಾಗಿದೆ. ಹಾಸ್ಯಕಿರಣ ಅಂದರೆ ಮಂದಹಾಸ ಭರಿತ ನಿನ್ನ ಮುಖಭಾವ ನಮಗೆ ಭರವಸೆಯ ಕಿರಣವಾಗಿದೆ. 
 ಹರುಷ ರಸವೆ  ಕರುಣದಸುವೆ  ಜಿವಧರ್ಮ ಧಾರಣಾ ಭಗವಂತನ ಹರುಷರಸವೇ ಅವನ ಸೃಷ್ಟಿಗೆ ಕಾರಣ.  ಹರುಷ ರಸವೆ ಕರುಣದ ಅಸು ಅಂದರೆ ಪ್ರಾಣ ವಾಗಿದೆ.  ಹರುಶವಿಲ್ಲದ ಜೀವನ ಉಸಿರಾಡುವ ಹೆಣವಿದ್ದಂತೆ.  ಭಗವಂತ ನಮ್ಮನ್ನು ಸಹರ್ಷದಿಂದ ಬಾಳಲೆಂದೇ ಸೃಷ್ಟಿಸಿದ್ದಾನೆ. ಇದೆ ಅವನ ಕರುಣೆ.  ಜೀವನ ದರ್ಶನಕ್ಕೆ ಸಂಬಂಧಿಸಿದಂತೆ ಬೇಂದ್ರೆ ಹೇಳಿದ ಈ  ಮಾತಿಗಿಂತ   ಮಿಗಿಲಾದ ಮಾತು ಇನ್ನೊಂದಿಲ್ಲ. ರಸವೆ ಜನನ, ವಿರಸ ಮರಣ ಸಮರಸವೇ ಜೀವನ ಸಮರಸವೇ ಜೀವನ   ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಕವನವು ಸಾಕಷ್ಟು ಅರ್ಥಗರ್ಭಿತವೂ ಸಂಕಿರ್ನಭಾವದಿಂದ ಕೂಡಿದ್ದು ಆಗಿದೆ.

  ಅಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ ...
       ಪ್ರೇಮಕವಿ ಎಂದೇ ಹೆಸರಾದ ಕವಿ ಕೇ. ಎಸ. ನರಸಿಂಹ ಸ್ವಾಮಿ ಅವರು ಅತ್ಯುತ್ತಮ ಪ್ರೆಮೆಗಿತೆಗಳ ಹೊರತಾಗಿಯೂ ನಾಡುನುಡಿಯ ಕುರಿತಾದ, ಹಾಗು ದೇಶಭಕ್ತಿಯನ್ನು ಸಾರುವ ಅನೇಕ ಉತ್ತಮ ಗೀತೆಗಳನ್ನು ರಚಿಸಿದ್ದಾರೆ. ಅವರ ನವಪಲ್ಲವ ಕವನ ಸಂಕಲನದ ಈ ಗೀತೆ ದೇಶದ ಏಕತೆಯನ್ನು ಸಾರುವ, ಹಾಗು ದೇಶದ ಐಕ್ಯತೆಗೆ ಕಾರಣವಾಗಿರುವ ಸಂಗತಿಗಳ ಮೇಲೆ ಬೆಳಕುಚೆಲ್ಲುವ ಭಾವಗಿತೆಯಾಗಿದೆ.  ಭಾರತದ ವಿಶೇಷತೆಯೇ ವಿವಿಧತೆಯಲ್ಲಿ ಐಕ್ಯತೆಯನ್ನು ಸಾಧಿಸಿರುವುದು.  ಅನೆಕತೆಯಲ್ಲಿಯೂ ಏಕತೆ ಸಾಧಿಸಿರುವ ದೇಶವೆಂದು ಈ ದೇಶ  ಇತಿಹಾಸದುದ್ದಕ್ಕೂ ಪ್ರಸಿದ್ಧವಾಗಿದೆ.   ಪ್ರಾಕೃತಿಕವಾಗಿ ಈ ನೆಲ ವೈವಿಧ್ಯಮಯವಾಗಿದೆ. ಅದಕ್ಕನುಗುಣವಾಗಿ ಇಲ್ಲಿ ಬದುಕುವ ಜನರೂ ಬಹುಭಾಷೆ ಬಹು ಧರ್ಮಿಯರಾಗಿದ್ದಾರೆ. ಅದಾಗ್ಯೂ ಇಲ್ಲಿ ಬೆಳೆದು ಬಂದ ಸಂಸ್ಕೃತಿ  ಈ ನಾಡು ಎಷ್ಟೇ ವೈವಿಧ್ಯತೆಯನ್ನು ಹೊಂದಿದ್ದರು ಅದು ಒಂದೇ ದೇಶವೆಂಬ ಭಾವೈಕ್ಯತೆಯನ್ನು ಬೆಳೆಸಿದೆ. 
   ನಮ್ಮ ಹಾಡು ಎಂಬ ಕವಿತೆಯಲ್ಲಿ ಕವಿ ದೇಶದ ಭಾವೈಕ್ಯತೆಯನ್ನು ಎತ್ತಿಹಿಡಿದಿದ್ದಾರೆ. ದೇಶದ ಉತ್ತರದಲ್ಲಿ ಹಿಮವತ್ಪರ್ವತ ಎದ್ದು ನಿಂತಿದೆ. ಅಲ್ಲಿ ಗಾಢ ಮೌನ ಮಡುಗಟ್ಟಿದೆ. ಮೈ ಮತ್ತು ಮನಸ್ಸು ಎರಡೂ ಮರಗಟ್ಟುವಂಥ ಕೊರೆವ ಚಳಿಯಲ್ಲಿ ದೇಶಭಕ್ತ ಸೈನಿಕರು ಹಗಲಿರುಳೆನ್ನದೆ ಗಾಡಿಯನ್ನು ಕಾಯುತ್ತಿದ್ದಾರೆ. ಈ ನೋಟ ದಕ್ಷಿಣಕ್ಕೆ ಬಂದರೆ ತೀರಾ ಭಿನ್ನವಾಗಿ ಕಾಣುತ್ತದೆ. ಸಾವಿರಾರು ಕಿಲೋಮೀಟರ್ ಉದ್ದದ ಕರಾವಳಿಗೆ ಸಮುದ್ರದಲೆಗಳು ನಿರಂತರವಾಗಿ ಆದಿ ಅಂತ್ಯಗಳ ಹಂಗಿಲ್ಲದೆ ಬಂದು ಆಪ್ಪಲಿಸುತ್ತಿವೆ; ಭೋರ್ಗರೆಯುತ್ತಲಿವೆ. ಈ ಭಿನ್ನಸ್ವರುಪದ ಗಡಿಗಳ ನಡುವಿನ ವಿಶಾಲವಾದ ಬಹುಭಾಗದಲ್ಲಿ ಕೋಟ್ಯಾಂತರ ಜನರ ಹಸಿವನ್ನು ಹಿಂಗಿಸಲು ಕಾರಣವಾದ ನೂರಾರು ನದಿಗಳು ಹರಿಯುತ್ತಿವೆ.  ಈ ಅಂಶವನ್ನು ಕವಿ ವಿನೂತನವಾದ  ರೀತಿಯಲ್ಲಿ  ಹಾಡಿದ್ದಾರೆ. ನದಿಗಳನ್ನು ಹಸಿರು ದೀಪಹಚ್ಚಿ ಹರಿವ ನದಿಗಳು ಎಂದು ಕರೆದಿದ್ದಾರೆ. ಇವುಗಳ ಜೊತೆಗೆ ದೇಶದ ಅಭಿವೃದ್ಧಿಗೆ ಕಾರಣವಾಗುವ ಕೈಗಾರಿಕೆಗಳ  ಯಂತ್ರಘೋಶ ಮೊಳಗುತ್ತಿದೆ. ನಮ್ಮ ಕಣ್ಣು ನಾಲ್ಕು ಭಿನ್ನವಾದ ದ್ರಶ್ಯವನ್ನು ನೋಡುತ್ತಿದೆ. ನಮ್ಮ ಕಣ್ಣು ಬೇರೆಬೇರೆ ದ್ರಶ್ಯವನ್ನು ನೋಡುತ್ತಿದ್ದರೂ ನಮ್ಮ ಒಳಗಣ್ಣು  ನಾವು ಭಾರತೀಯರು ಎಂಬುದನ್ನು ಅರ್ಹಿಸುತ್ತದೆ; ಅನುಭವಿಸುತ್ತದೆ. ಅದೇ ನಮ್ಮೆಲ್ಲರ ಏಕತೆ, ಭಾವೈಕ್ಯತೆ. ಮುಂದಿನ ನುಡಿಗಳಲ್ಲಿ ಇಂಥ ಅನೇಕ ಉದಾಹರಣೆಗಳನ್ನು ನೀಡಿ ಕವಿ-ಭಾಷೆ ಬೇರೆ ಭಾವವೊಂದು ನಾವು ಭಾರತೀಯರು ಎಂಬುದನ್ನು ಸಾರುತ್ತಾರೆ. ಎಲ್ಲೇ ಇರಲಿ ನಾವು ಒಂದು, ಏಕೆಂದರೆ ನಾವು ಭಾರತೀಯರು ಎಂದು ಸಾರುತ್ತಾರೆ. ಸುಂದರವಾದ ಅರ್ಥಪೂರ್ಣವಾದ ಈ ಗೀತೆಯನ್ನು ಮೈಸೂರು ಮಲ್ಲಿಗೆ ಎಂಬ ಸಿನೆಮಾದಲ್ಲೂ ಬಳಸಿಕೊಂಡಿದ್ದಾರೆ.


ಕುವೆಂಪು ಜನ್ಮದಿನ  ೨೯- ಡಿಸೆಂಬರ್
     ವಿಶಾಲವಾಗಿ ಹರಡಿನಿಂತ ಒಂದು ತಿಳಿನೀರ ಸರೋವರದಂತೆ ಕುವೆಂಪು ಅವರ ಕಾವ್ಯ ಲೋಕ ಸ್ವಚ್ಚವೂ , ಸುಂದರವೂ, ಆಳವೂ  ಗಂಭೀರವೂ , ವಿಸ್ತಾರವೂ ಆಕರ್ಷಕವೂ ಪ್ರತಿಬಿಂಬಿತವೂ ಆಗಿವೆ. ಕುವೆಂಪು ಅವರು ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ಮೊದಲಗಳ ಗೌರವಕ್ಕೆ ಪಾತ್ರರಾದ ಶ್ರೇಷ್ಠ ಕವಿ.    ಅವರು ಕನ್ನಡ ಸಾಹಿತ್ಯಕ್ಕೆ ಹೊಸ ಹೊಸ ದಾರಿಗಳನ್ನು ತೋರಿದವರಲ್ಲಿ ಮೊದಲಿಗರು. ಮಹಾಕಾವ್ಯಗಳ ಯುಗ ಮುಗಿಯಿತೆಂಬ ಮಾತನ್ನು ಸುಳ್ಳಾಗಿಸಿದವರು. ಮಲೆನಾಡಿನ ಗಾಢ ಅನುಭವಗಳನ್ನು ತಮ್ಮ ಕಾವ್ಯದಲ್ಲಿಯೂ, ಅದಕ್ಕಿಂತ ಹೆಚ್ಚಾಗಿ ತಮ್ಮ ಗದ್ಯ ರಚನೆಗಳಲ್ಲಿ ತೆರೆದಿಟ್ಟ ಮಹಾನ್ ಪ್ರತಿಭೆ. ಆಸ್ತಿಕ ಮನೋಭಾವ ಮತ್ತು ವೈಚಾರಿಕತೆ ಎರಡು ಮೇಳೈಸಿದ ದೃಷ್ಟಿಕೋನ. ಅವರ ರಚನೆಗಳೆಲ್ಲ ಭಾರಿತೀಯ ಸಂಸ್ಕೃತಿಯನ್ನು ಅತ್ಯಂತ ಸ್ಪಷ್ಟವಾಗಿ ಪ್ರಾತಿನಿಧಿಕರೂಪದಲ್ಲಿ ಬಿಂಬಿಸುವಂತಹದ್ದಾಗಿದೆ.
   ಕುವೆಂಪು ಅವರ ಅನೇಕ ಭಾವಗಿತೆಗಳು ನಮ್ಮನ್ನು ಈ ವಿಶ್ವದ ಹಿಂದಿರುವ ಮೂಲ ಚೈತನ್ಯದ  ಕಡೆಗೆ ಕರೆದೊಯ್ಯುತ್ತದೆ. ಅಂತಹ ಶಕ್ತಿ ಸ್ವರೂಪವಾದ ದೈವಕ್ಕೆ ಅವರು  ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಆತ್ಮ ನಿವೇದನೆಯ ದನಿಯಾಗಿ ಕಂಡುಬರುವ ಅನೇಕ ಭಾವಗಿತೆಗಳು ಅನುಭಾವ ಗಿತೆಗಳಂತೆ ಕಂಡು ಬರುತ್ತವೆ. ಆ ಗೀತೆಗಳು ನಮ್ಮನ್ನು ಅಲೌಕಿಕ ಶಕ್ತಿಯ ಕಡೆಗೆ ಕರೆದೊಯ್ಯುತ್ತದೆ. ಕನ್ನಡ ನಾಡು ಕುವೆಂಪು ಅವರನ್ನು ರಸಋಷಿ ಎಂದು  ಕರೆದು ಧನ್ಯಗೊಂಡಿದೆ.  

R            ಓ ನನ್ನ ಚೇತನ ಆಗು ನೀ ಅನಿಕೇತನ
ಕುವೆಂಪು ಅವರ ಅನಿಕೇತನ ಹಾಡು ವಿಶ್ವಮಾನವ ಸಂದೇಶವನ್ನು ಸಾರುವ ಶ್ರೇಷ್ಠಗೀತೆಯಾಗಿದೆ. ಹಾಡಿನ ಶೀರ್ಷಿಕೆಯೇ ಈ ಸಂದೇಶವನ್ನು ಸಾರಿ ಹೇಳುತ್ತವೆ. ಅನಿಕೇತನ ಅಂದರೆ ಅ- ನಿಕೇತನ  ಮನೆಯಿಲ್ಲದವನು ಎಂದರ್ಥ.  ನಾಗರೀಕ ಸಮಾಜದಲ್ಲಿ  “ಮನೆ” ಗೆ  ಪರಂಪರೆಯ ದೃಷ್ಟಿಯಿಂದ ತುಂಬಾ  ಮಹತ್ವವಿದೆ. ಅದು ಸಮಾಜದ ಮೊದಲ ಸಾಮಾಜಿಕವಾದ ಮತ್ತು ಅಷ್ಟೇ ಭದ್ರ ನೆಲೆಗಟ್ಟಿನ ಸಂಸ್ಥೆಯಾಗಿದೆ.  ಆದರೆ “ ವಸುದೈವ ಕುಟುಂಬಕಂ  “  ಎಂದು ಭಾವಿಸಿದಾಗ ನಾವು ವಾಸಿಸುವ ಮನೆಯ ಅರ್ಥ ಸೀಮಿತಗೊಳ್ಳುತ್ತದೆ. ಮನೆಯ ಮಹತ್ವವನ್ನು ಅಲ್ಲಗಳೆಯಲು ಸಾಧ್ಯವಿಲ್ಲದಿದ್ದರೂ ನಮ್ಮೊಳಗಿನ ಅದಮ್ಯ ಚೇತನ ಮನೆ ಎಂಬ ಸೀಮಿತ ಚೌಕಟ್ಟಿನಲ್ಲಿ ಬಂಧಿಯಾಗಬಾರದೆಂಬುದು ಕವಿಯ ಆಶಯ.   ಇಲ್ಲಿ  ಮನೆ ಎಂಬ ಪದ ನಾವು ವಾಸಿಸುವ ಮನೆಯಷ್ಟೇ ಅಲ್ಲ; ನಾವೆಲ್ಲಾ ಭಾವನಾತ್ಮಕವಾಗಿ ನೆಲೆ ಕಂಡುಕೊಳ್ಳುವ ನಮ್ಮ ಭಾಷೆಯೂ ಒಂದು ಮನೆಯಂತಾಗಬಹುದು,  ನನ್ನದು , ನಮ್ಮದು ಎಂದು ಗುರುತಿಸಲ್ಪಡುವ ದೇಶ, ಭಾಷೆ, ಧರ್ಮ, ಸಂಸ್ಕೃತಿ, ಸಿದ್ಧಾಂತ ಎಲ್ಲವೂ  ಸೂಕ್ಷ್ಮವಾಗಿ ನೋಡಿದರೆ ಒಂದು ಸೀಮಿತ ವಲಯವೇ ಆಗಿದೆ. ಆ ವಲಯವನ್ನು ಮೀರಿ ನಾವು   ಅನಂತದೆಡೆಗೆ ಸಾಗಬೇಕು.  ಅಂದರೆ ನಮ್ಮ ಚೇತನ  ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ  ಮುನ್ನಡೆಯಬೇಕು ಎಂಬ ಅರ್ಥವನ್ನು ಸಾರುವ ಗೀತೆ ಇದಾಗಿದೆ.
    ನೂರು ಮತದ  ಹೊತ್ತ ತೂರಿ  ಎಲ್ಲ ತತ್ವದೆಲ್ಲೆ ಮೀರಿ  ನಿರ್ದಿಗಂತವಾಗಿ ಏರಿ  ಓ ನನ್ನ ಚೇತನ ಆಗು ನೀ ಅನಿಕೇತನ.   ಕವಿ ನಮ್ಮೆಲ್ಲರ ಚೇತನವು ಹೀಗೆ ಸಾಗಬೇಕೆಂದು ಬಯಸುತ್ತಾರೆ. ನಾವು ಬೆಳೆಸಿಕೊಂಡು ಬಂದ, ನಾವು ಉಳಿಸಿಕೊಂಡು ಬಂದ ,  ನೂರಾರು ಮತಗಳು ಧಾನ್ಯದ ಹೊಟ್ಟಿನಂತೆ. ಹೊಟ್ಟಿಗೆ  ಮಹತ್ವ ಕೊಡದೆ ಆ ಹೊಟ್ಟನ್ನು ತೂರಿ, ಕಾಲನ್ನು ಉಳಿಸಿಕೊಂಡು ಮುಂದೆ ಸಾಗಬೇಕು. ಮತ, ತತ್ವ, ಸಿದ್ಧಾಂತಗಳೆಲ್ಲ ಸತ್ಯದ ಹೆಸರುಗಳಷ್ಟೆ ! ಹೆಸರೇ ಸತ್ಯವಲ್ಲ. ಸತ್ಯವೆಂದರೆ ಅದರ ತಿರುಳು. ಅದನ್ನು ನಮ್ಮದಾಗಿಸಿಕೊಳ್ಳಬೇಕು.
    ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು,   ಓ ಅನಂತ ವಾಗಿರು.
ನಮ್ಮ ಚೇತನ ಒಂದು ನೆಲೆಯನ್ನು ಕಂಡುಕೊಂಡಾಗ ಅದು ಅಲ್ಲಿ ಬಂಧಿಯಾಗುತ್ತದೆ. ಮನೆಯನ್ನು ನಿರ್ಮಿಸಿಕೊಂಡಾಗ ಅದು ಅಲ್ಲೇ ವಾಸವಾಗ ಬಯಸುತ್ತದೆ.   ಕವಿ ಹೇಳುವ ಕೊನೆಯನೆಂದು ಮುಟ್ಟದಿರು ಎಂಬ ಮಾತು ಅರ್ಥಪೂರ್ಣವಾಗಿದೆ.  ವಾಸ್ತವಾಗಿ ಈ ವಿಶ್ವಕ್ಕೆ ಆದಿ ಆಂತ್ಯಗಳಿಲ್ಲ , ದಿಕ್ಕು ದೆಸೆಗಳಿಲ್ಲ. ಇಂತಹ ವಿಶಾಲತೆಗೆ ನಮ್ಮನ್ನು ನಾವು ತೆರೆದು ಕೊಂಡಾಗ ನಮ್ಮೊಳಗಿರುವ ಜಾತಿ, ಧರ್ಮ, ಭಾಷೆ, ಪ್ರದೇಶಗಳೆಂಬ ಸಂಕುಚಿತ ಭಾವನೆ ಹೊರಟು ಹೋಗುತ್ತದೆ.     ನಾವು ನಮ್ಮ ಅಹಂಕಾರಗಳಿಂದ ಮುಕ್ತರಾಗುತ್ತೇವೆ. ಆಗ ಜಗತ್ತನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳೂ ದೂರವಾಗುವವು. ಆಗ ಜಾತಿ, ಧರ್ಮ, ಭಾಷೆಗಳೆಂಬ ರೂಪಲೇಪವಿಲ್ಲದ ಮೂಲ ಚೈತನ್ಯ ಪ್ರಕಾಶಗೊಳ್ಳುತ್ತವೆ . ಓ ಅನಂತವಾಗಿರು ಎಂಬ ಪ್ರಾರ್ಥನೆ ಎಲ್ಲರದಾಗಿರಲಿ.
  


R    ನಿನ್ನ ಬಾಂದಳದಂತೆ ನನ್ನ ಮನವಿರಲಿ, ನಿನ್ನ ಸಾಗರದಂತೆ ನನ್ನ ಎದೆ ಇರಲಿ
 ಕುವೆಂಪು ಅವರ  ಪ್ರಾರ್ಥನೆ ಎಂಬ ಹೆಸರಿನ ಈ ಕವಿತೆ ಪ್ರಕೃತಿಯನ್ನು ಉದ್ದೇಶಿಸಿ ಬರೆದದ್ದಾಗಿದೆ. ದೇವನ ಸೃಷ್ಟಿಯ ಈ ಪ್ರಕೃತಿ ಅತ್ಯಂತ ಸುಂದರವಾಗಿದೆ,   ಸ್ವಚ್ಚವಾಗಿದೆ,  ವಿಶಾಲವಾಗಿದೆ, ಪ್ರೇಮಪೂರ್ಣವಾಗಿದೆ. ಪ್ರಕೃತಿಯಲ್ಲಿ ಕಂಡ ಈ ಗುಣಲಕ್ಷಣಗಳು ನನ್ನಲ್ಲೂ ಕಂಡು ಬರಲಿ, ಅವನ್ನು ನನಗೆ ಕರುಣಿಸು ಎಂದು ಪ್ರಕೃತಿ ಮಾತೆಯಲ್ಲಿ ಪ್ರಾರ್ಥಿಸುವ ಗೀತೆ ಇದಾಗಿದೆ.
  ನಿನ್ನ ಬಾಂದಳದಂತೆ ನನ್ನ ಮನವಿರಲಿ,
ನಿನ್ನ ಸಾಗರದಂತೆ ನನ್ನ ಎದೆ ಇರಲಿ
   ಬಾನಿಗೊಂದು ಎಲ್ಲೆ  ಎಲ್ಲಿದೆ?  ತುದಿಮೊದಲು ತಿಳಿಯದ ಈ ನೀಲಿಯಲ್ಲಿ ಗ್ರಹ ತಾರೆಗಳು ಹರಡಿ ನಿಂತಿವೆ. ನನ್ನ ಮನಸ್ಸು ಆ ಬಾನಿನಂತೆ  ವಿಶಾಳವಾಗಲಿ, ವಿಶ್ವದ ಈ ವಿಶಾಲತೆಯ ಅನುಭೂತಿಯನ್ನು ಪಡೆದು ನನ್ನೋಳಗಿನೆ ಎಲ್ಲ ಸಂಕುಚಿತ ಮೇರೆಗಳು ನಾಶವಾಗಲಿ, ನಾನು ನನ್ನದು ಎಂಬ ಅಹಂಕಾರಗಳಿಂದ ಮುಕ್ತಿ ಸಿಗಲಿ. ಎಲ್ಲಾ ಜ್ಞಾನಿಗಳೂ, ಸಂತರೂ, ಕವಿ ಕಲಾವಿದರು  ಇವರೆಲ್ಲ ಪ್ರಕೃತಿಯನ್ನು ಆರಾಧಿಸುತ್ತಾರೆ. ಅವರೆಲ್ಲ ಪ್ರಕೃತಿಯನ್ನೇ ತಮ್ಮ ಆದರ್ಶವೆಂದು, ತಮ್ಮ ಗುರುವೆಂದು ತಿಳಿಯುತ್ತಾರೆ.  ಅಲ್ಲದೆ ಪ್ರಕೃತಿಯನ್ನು ನಾವೆಲ್ಲಾ  ನಮ್ಮ ತಾಯಿಯೆಂದು  ಭಾವಿಸುತ್ತೇವೆ. ಏಕೆಂದರೆ ಪ್ರಕೃತಿ ತನ್ನೊಡಲಲ್ಲಿರುವ  ಜೀವಿಗಳನ್ನು ಕಾಪಾಡುವ, ಸಂತೈಸುವ, ಪ್ರೀತಿಸುವ  ಒಲುಮೆ ಗುಣಗಳನ್ನು ಹೊಂದಿವೆ. ಪ್ರಕೃತಿ ವೈವಿಧ್ಯಮಯವಾಗಿದ್ದರೂ ಅದರಲ್ಲಿ ವಿರೋಧಾಭಾಸಗಳಿಲ್ಲ. ಅನೇಕತೆಯಲ್ಲಿ ಏಕತೆ ಪ್ರಕೃತಿಯ ವಿಶೇಷತೆ. ಪ್ರಕೃತಿಯಲ್ಲಿ ನೆಲೆಸಿರುವ ಶಾಂತಿ ಸಮಾಧಾನಗಳು ಎನಗೆ ಸಿಗಲಿ ಎಂದು ಕವಿ ಪ್ರಾಥಿಸುತ್ತಾರೆ.    ಈ ಗೀತೆ ಕುವೆಂಪು ಅವರ ಕೊಳಲು ಕವನ ಸಂಕಲನದಲ್ಲಿ ಪ್ರಕಟವಾಗಿದೆ.   
      
   R        ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ....
   ಸೋಮನಾಥಪುರದ ದೇವಾಲಯವನ್ನು ಕುರಿತು ಕುವೆಂಪು ಅವರು ಬರೆದಿರುವ ಈ ಗೀತೆ  ಶಿಲಾದೇಗುಲಗಳ ಕುರಿತಾಗಿ ಹೇಳುವ ಸಂದರ್ಭಗಳಲ್ಲೆಲ್ಲಾ  ಉಲ್ಲೇಖಿಸಲ್ಪಡುವ ಗೀತೆಯಾಗಿದೆ.  ಕನ್ನಡ ನಾಡು ಶಿಲ್ಪಕಲೆಯ ಬೀಡು. ಅವರೇ ನಾಡಗಿತೆಯಲ್ಲಿ  ಹಾಡಿರುವಂತೆ ಡಂಕಣ ಜಕಣರ ನೆಚ್ಚಿನ ನಾಡು. 
    ಹದಿಮೂರನೆಯ ಶತಮಾನದಲ್ಲಿ ನಿರ್ಮಾಣಗೊಂಡಿರುವ ಸೋಮನಾಥಪುರದ  ದೇವಾಲಯವು ಹೊಯ್ಸಳರು ಕಟ್ಟಿಸಿದ ದೇವಾಲಯಗಳಲ್ಲೇ  ಶ್ರೇಷ್ಠ ರಚನೆಯಾಗಿದೆ. ಬೇಲೂರಿನ ಶೃಂಗಾರ ಹಳೆಬೀಡಿನ ದೊಡ್ಡಸ್ತಿಕೆ  ಎರಡನ್ನೂ ಮೀರಿಸುವ ಘನತೆ ಈ ದೇವಾಲಯದ ಶಿಲ್ಪಕ್ಕಿದೆ.ಎಂದು   ಶಿಲ್ಪ ಶಾಸ್ತ್ರಜ್ಞರಾದ ಫರ್ಗ್ಯುಸನ್ ಮತ್ತು ಬುಲಕ್ ವರ್ಕಮನ್  ಇವರುಗಳು ಪ್ರಶಂಸಿಸಿದ್ದಾರೆ. ಸೋಮದಂಡ ನಾಯಕ ಕಟ್ಟಿಸಿದ ಈ ದೇವಾಲಯ ಶಿಲ್ಪಶಾಸ್ತ್ರಕ್ಕೆ ಮಾದರಿಯಾಗಿದೆ. ಈ ದೇವಾಲಯದ ಭೇಟಿಯ ಸಂದರ್ಭದಲ್ಲಿ ಮೂಡಿದ ಭಕ್ತಿಭಾವಗಳನ್ನು  ಕುವೆಂಪು  ಹಾಡಿನಲ್ಲಿ ಸೊಗಸಾಗಿ ಮೂಡಿಸಿದ್ದಾರೆ.  
    ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ, 
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು. 
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳನರ್ಪಿಸಿಲ್ಲಿ .
  ಈ ದೇವಾಲಯವನ್ನು ಪ್ರವೇಶಿಸುವಾಗ ಒಂದು ಮಾನಸಿಕ ಸಿದ್ಧತೆ ಇರಬೇಕು.  ಇದೊಂದು ಪ್ರವಾಸೀ ತಾಣವಲ್ಲ. ಮೋಜಿನ ತಾಣವೂ ಅಲ್ಲ. ಇಲ್ಲಿಗೆ ಬೇಟಿ ಮಾಡುವ ವ್ಯಕ್ತಿ ಆಸ್ತಿಕ ಮನೋಭಾವನೆಯನ್ನು, ಕಲಾಸ್ವಾದನೆಯ ಸಂಸ್ಕಾರಯುತ ಮನಸ್ಸನ್ನು ಹೊಂದಿರಬೇಕಾಗುತ್ತದೆ.  ಇಲ್ಲಿರುವುದು ಬರಿ ಶಿಲೆಯಲ್ಲ. ಇದು ಕಲೆಯ ಬಲೆಯು. ಇದನ್ನು ಗೌರವಿಸುವುದು ನಮ್ಮ ಮೊದಲ ಕರ್ತವ್ಯವಾಗಿದೆ.   ಯಾತ್ರಿಕನೆ, ಈ ಕಲೆಯನ್ನು ಗೌರವಿಸಿ ನೀನಿದರ ಒಳಗೆ ಬಾ  ಎಂದು ಕವಿ ಹೇಳುತ್ತಾರೆ. ಈ ಭಾವನೆಯಿಂದ ಒಳಗೆ ಹೋದಲ್ಲಿ ನಾವು ನಿಜಕ್ಕೂ ಧನ್ಯರಾಗುತ್ತೇವೆ.  ಈ ಧನ್ಯತೆ ಕೃತಜ್ಞತೆಯಾಗಿ   ಭಗವಂತನಿಗೆ ಅರ್ಪಿತವಾಗುತ್ತದೆ.  
   ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ
ಕರ್ಪೂರದಾರತಿಯ  ಜ್ಯೋತಿಯಿಲ್ಲ.
ಭಗವಂತನಾನಂದ ರೂಪು ಗೊಂಡಿಹುದಿಲ್ಲಿ
ರಸಿಕತೆಯು ಕದಳುಕ್ಕಿ ಹರಿವುದಿಲ್ಲಿ.
   ಶಿಲ್ಪಕಲೆ ಹುಟ್ಟಿಸುವ ಬೆರಗನ್ನು ಕಣ್ತುಂಬಿ ಕೊಳ್ಳಲು ಮಾತ್ರ ಈ ದೇವಾಲಯಕ್ಕೆ ಬರಬೇಕು. ಬೇರೆ ದೇವಾಲಯಗಳಲ್ಲಿರುವಂತೆ ಇಲ್ಲಿ  ಗಂಟೆಗಳ ದನಿಯಿಲ್ಲ.  ಪೂಜೆ ಪುನಸ್ಕಾರಗಳ ಅಬ್ಬರವಿಲ್ಲ ಕರ್ಪುರದಾರತಿಯಿಲ್ಲ.  ಇಲ್ಲಿಯ ಶಿಲೆಗಳಲ್ಲಿ ಶಿಲ್ಪಿಯ ರಸಿಕತೆ ಕಡಲಿನಂತೆ ಉಕ್ಕಿ ಹರಿದಿದೆ. ಇಲ್ಲಿಯ ಶಿಲೆಗಳು ರಾಮಾಯಣ ಮಹಾಭಾರತವನ್ನು ಹಾಡುತ್ತಿವೆ. ಶಿಲ್ಪಿಯ ಕೌಶಲ್ಯಕ್ಕೆ ಕಾಲವೇ ಮುಕವಾಗಿದೆ. ಇಂತಹ ಕಲಾದೆಗುಲಕ್ಕೆ ಕೈಮುಗಿದು ಒಳಬಂದು ಕಲೆಯನ್ನು ಗೌರವಿಸಬೇಕು, ರಕ್ಷಿಸಬೇಕು.    ಈ ಗೀತೆ ಕೊಳಲು ಕವನ ಸಂಕಲನದಲ್ಲಿ ಪ್ರಕಟವಾಗಿದೆ.
   
R   ದೇಹವಿದು ನೀನಿರುವ ಗುಡಿಯೆಂದು ಬಗೆದು ಗುಡಿಸುವೇನು ದಿನದಿನವೂ ದೇವದೇವ
     ಉಳ್ಳವರು ಶಿವಾಲಯವ ಮಾಡುವರು  ನಾನೇನು ಮಾಡಲಿ ಬಡವನಯ್ಯ,  ಎನ್ನ ಕಾಲೇ ಕಂಬ, ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ    ಎಂದು ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ್ದಾರೆ. ಅಂತೆಯೇ ಅನೇಕ ಕವಿಗಳು, ಸಂತರು, ಆಸ್ತಿಕವಿಚಾರವಾದಿಗಳು ದೇವರನ್ನು ಹೊರಗೆಲ್ಲೋ ಹುಡುಕದೆ ತಮ್ಮೊಳಗಿನ ಆತ್ಮವನ್ನೇ ದೇವರೆಂದು ಭಾವಿಸಿ ಪುಜಿಸಿದ್ದಾರೆ. ಇಂತಹ ಪೂಜೆಯನ್ನು ಆತ್ಮಾರ್ಚನೆ ಎಂದು ಕರೆಯುತ್ತಾರೆ. ಕವಿ  ಕುವೆಂಪು ಅವರ ‘ ನಿನ್ನವನು ನಾನಲ್ಲವೇ?’ ಎಂಬ ಇದೆ ಅರ್ಥದಲ್ಲಿ ರಚನೆಗೊಂಡಿದೆ.    
  ದೇಹವಿದು ನೀನಿರುವ ಗುಡಿಯೆಂದು ಬಗೆದು ಗುಡಿಸುವೇನು ದಿನದಿನವೂ ದೇವದೇವ.
 ಅನೇಕ  ಸಂದರ್ಭಗಳಲ್ಲಿ ದೇಹವನ್ನು ನಶ್ವರವೆಂದು ತುಚ್ಚವೆಂದು ಕಾಣಲಾಗುತ್ತದೆ. ಆದರೆ ನಮ್ಮ ದೇಹವನ್ನು ದೇವಮಂದಿರದಷ್ಟೇ ಪವಿತ್ರ ಎಂದು ಭಾವಿಸಿರುವುದು ವಿಶೇಷ. ಕವಿ ಬೇಂದ್ರೆಯವರು  ತಮ್ಮ ಬೆಳಗು ಪದ್ಯದಲ್ಲಿ ಇದೆ ಮಾತನ್ನು ಹೇಳಿದ್ದಾರೆ. “ ದೇವರದೀ ಮನಸಿನಾ ಗೇಹ” ದೇವರದ್ದು ಈ ಮನಸೆಂಬ ಮನೆ.   ಬಿದ್ದು ಹೋಗುವ ಮಣ್ಣ ಹೊದ್ದು ಮಲಗುವ  ಈ ದೇಹ ನಶ್ವರವಾದರೂ ದೇಹವಿಲ್ಲದೇ  ಈ ಜೀವಾತ್ಮ ಪ್ರಕಟಗೊಳ್ಳದು.  ಪರಮಾತ್ಮನ ಒಂದಂಶವಾದ  ಜೀವಾತ್ಮ ನೆಲೆಗೊಳ್ಳಲು ದೆವವು ಬೇಕೇಬೇಕು. ಆದ್ದರಿಂದ ದೇಹವನ್ನು ಮಂದಿರವೆಂದು ಭಾವಿಸಿ ಅದರ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.   “ ಗುಡಿಸುವೇನು ದಿನ ದಿನವು ದೇವ ದೇವ “  ಕವಿ ಹೇಳುತ್ತಾರೆ   ಈ ಮಂದಿರ ಸ್ವಚ್ಚವಾಗಿರುವಂತೆ ನಾನಿದನ್ನು ದಿನದಿನವು ಗುಡಿಸುವೇನು. ದೇಹದೊಳಗಿರುವ ಬುದ್ಧಿಯೆಂಬ  ಉರಿವ ದಿಪಕ್ಕೆ ಚಿಂತನೆಯ ತೈಲವನ್ನು ಎರೆಯುವೆನು ಎನ್ನುತ್ತಾರೆ.  ಅಲ್ಲಿ ಗೊಡ್ಡು ಸಂಪ್ರದಾಯಕ್ಕೆ ಬುದ್ಧಿಯನ್ನು ಒಪ್ಪಿಸಲಾರೆ ಎಂಬ ದೃಢ ನಿಲುವು  ಕವಿಯದ್ದಾಗಿದೆ.  
  “ ಕಂಬನಿಯ ನವ ಜಲದಿ ದಿನವು ತೊಳೆವೆ.”  ಕವಿ   ಯಾವ ಕಂಬನಿಯ ಜಲದಿಂದ ಮಂದಿರವನ್ನು ತೊಳೆಯುವನು? ಬದುಕನ್ನು ದಯಪಾಲಿಸಿದ ದೇವನಿಗೆ ಕೃತಜ್ಞತೆಯನ್ನು ಅರ್ಪಿಸುವ ಸಲುವಾಗಿ ಭಾವಪುರ್ಣವಾದ ಧನ್ಯತೆಯ ಕಂಬನಿಯನ್ನು ಸುರಿಸುವೇನು ಎನ್ನುತ್ತಾರೆ. ಮುಂದುವರಿದು ಕವಿ ‘ ಎನ್ನ ಕರ್ಮದ ಹಣ್ಣುಗಳ ಕೊಯ್ದು ತರುವೆ “ ಅಂದರೆ ಸುಖ ದುಃಖ ಸಂಮಿಶ್ರವಾದ ಬಾಳನ್ನು ಬಂದಂತೆ ಸ್ವೀಕರಿಸುವೆ ಎನ್ನುತ್ತಾರೆ.    “ ಗಂಟೆಗಳ ನಾ ಹೊಡೆಯೆ, ಶಂಖವನು ನಾನೂದೆ  ಮಂಗಳಾರತಿಯ ಬೆಳಗಲರಿಯೆ , ನಿನ್ನ ಸಂಗವ ತೊರೆಯೆ ನಿನ್ನನೆಂದಿಗು ಮರೆಯೆ ನಿನ್ನವನು ನಾನಲ್ಲವೆ ದೊರೆಯೇ? “  ಹಾಡಿನ ಒಂದೊಂದು ಸಾಲೂ ಭಾವಪೂರ್ಣವಾಗಿದೆ. 

ಕವನ -ಆಸೆ 
        ಹಕ್ಕಿಯ ಹಾಡಿಗೆ ತಲೆದುಗುವ ಹೂ ನಾನಾಗುವ ಆಸೆ.
      ಭಾವ ಜೀವಿಗಳಾದ ಕವಿಗಳ ಆಸೆ ಭಿನ್ನವಾದುದು. ಅವರು ಸಾಮಾನ್ಯವಾಗಿ ಹಣ ಅಂತಸ್ತು, ಅಧಿಕಾರ, ಪ್ರತಿಶ್ಥೆಗಳ ಹಿಂದೆ ಹೋಗುವುದಿಲ್ಲ. ಅವರ ಮೊದಲ ಆದ್ಯತೆ ಪ್ರಕೃತಿ. ಪ್ರಕ್ರುತಿಕವಾದ ಸೌಂದರ್ಯವನ್ನು ಅನುಭವಿಸಲು ಮುಂದಾಗುತ್ತಾರೆ ಮತ್ತು ಅದನ್ನು ಕಲಾತ್ಮಕವಾಗಿ ತಮ್ಮ ಮಾಧ್ಯಮದಲ್ಲಿ ಅಭಿವ್ಯಕ್ತಿಸಲು ತೊಡಗುತ್ತಾರೆ. ಸತ್ಯಂ-ಶಿವಂ- ಸುಂದರಂ ಎಂಬ ಮಾತಿನಂತೆ ವಿಜ್ಞಾನಿಗಳು ಸತ್ಯನಿಷ್ಥರಾಗಿ ಅನ್ವೇಷಣೆಗೆ ಮುಂದಾದರೆ,  ಅಧ್ಯಾತ್ಮಿಕರು ಶಿವಾನುಭುತಿಗೂ, ಕವಿಗಳು ಸೌಂದರ್ಯಾನುಭುತಿಗೂ  ಮುಂದಾಗುತ್ತಾರೆ. ಪ್ರಕೃತಿಯಲ್ಲಿ ಸತ್ಯ, ಶಿವ ಮತ್ತು ಸೌಂದರ್ಯ ಈ ಮೂರೂ ಒಂದೇ ಮೂಲದಿಂದ ಹೊರಟು ಭಿನ್ನಸ್ವರೂಪದಲ್ಲಿ ವ್ಯಕ್ತವಾಗಿದೆ. ಅವರವರ ಭಾವಕ್ಕೆ, ಅವರವರ ಭಕುತಿಗೆ ಎಂಬಂತೆ ಜೀವ ಪ್ರಕೃತಿಯಲ್ಲಿ ತನತನಗೆ ಬೇಕಾದುದ್ದನ್ನು ಕಂಡುಕೊಳ್ಳುತ್ತಾ ಹೋಗುತ್ತದೆ. ಸಹಜವಾಗಿ ಕವಿ ಪ್ರಕೃತಿ ಸೌಂದರ್ಯಕ್ಕೆ ಬೆರಗಾಗುತ್ತಾನೆ. ಹಾಗೂ ತಾನೂ ಪ್ರಕೃತಿಯಲ್ಲಿ ಒಂದಾಗಲು ಬಯಸುತ್ತಾನೆ.  ಇಂಥ ಒಂದು ಭಾವದ ಹಿನ್ನಲೆಯಲ್ಲಿ ರಚನೆಗೊಂಡದ್ದೇ  ಈ ಭಾವಗೀತೆ. 
   ಸುಂದರವಾದ ಪ್ರಕೃತಿಗೆ ಮರುಳಾಗದವರಾರು?  ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗಳು , ಗಿಡಮರಗಳು, ನದಿ ಪರ್ವತಗಳು, ಸೂರ್ಯೋದಯ-ಸೂರ್ಯಾಸ್ತಗಳು ಎಲ್ಲವುಗಳಲ್ಲಿ ಸೃಷ್ಟಿಶಕ್ತಿಯ ಪರಿಪೂರ್ಣತೆ ಮತ್ತು ಸೌಂದರ್ಯ ಪ್ರಜ್ಞೆ ಕಂಡುಬರುತ್ತದೆ.  ಆದ್ದರಿಂದಲೇ ಕವಿಗೆ ತಾನೂ ಹಕ್ಕಿಯಾಗಿ ಹಾಡಬೇಕೆನ್ನುವ,  ಹಾರಬೇಕೆನ್ನುವ  ಆಸೆಯಾಗಬಹುದು. ಹುವಾಗು ತಂಗಾಳಿಗೆ ಮೈಯೋದ್ದಬೇಕೆನ್ನುವ ಬಯಕೆ ಮೂಡಬಹುದು. ಕವಿ ಕೇ.ಎಸ. ನರಸಿಂಹಸ್ವಾಮಿ ಅವರ ಪ್ರಸಿದ್ಧ ಭಾವಗೀತೆ –ಆಸೆ- ಹಕ್ಕಿಯ ಹಾಡಿಗೆ ತಲೆದುಗುವ ಹೂ ನಾನಾಗುವ ಆಸೆ, ಹಸುವಿನ ಕೊರಳಿನ ಗೆಜ್ಜೆಯ ದನಿಯೂ ನಾನಾಗುವ ಆಸೆ. ಪ್ರಕೃತಿಯಲ್ಲಿರುವ ಗಿಡಮರ, ಹೂ ಹಣ್ಣು, ಪ್ರನಿಪಕ್ಷಿಗಳ ಸೌಂದರ್ಯ, ಸಹಜತೆ, ಸರಳತೆ, ಮುಗ್ಧತೆ ಇವು ಕವಿ ಮನಕ್ಕೆ ಮೊದಿಮಾಡಿದೆ. ಆದರೆ ಈ ಆನಂದಾನುಭೂತಿ ಅಷ್ಟಕ್ಕೇ ನಿಲ್ಲದೆ, ಆಟ ಪ್ರಕೃತಿಯಿಂದ ತನ್ನ ಜೀವನಕ್ಕೆ ಬೇಕಾದ ಧೈರ್ಯವನ್ನು ಪಡೆದಿದ್ದಾನೆ. ತನ್ನ ಜೀವನವು ತಾನೂ ಬದುಕಿದ ಈ ಜೀವನಕ್ಕೆ ಏನಾದರೂ ಕೊಡುಗೆಯನ್ನು ನಿಡುವ ಮುಳಕೆ ಸಾರ್ಥಕವಾಗಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾನೆ. ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ  ಈ ಸಾಲು ತುಂಬಾ ಅರ್ಥಪೂರ್ಣವಾಗಿದೆ. ಸಾವಿನೊಂದಿಗೆ ತಿರುವು ಪಡೆಯುವ ಜೀವ ಪಯಣ ಆ ತಿರುವಿನಲ್ಲೊಂದು ಹಣತೆಯನ್ನು ಬೆಳಗಿ ಹೋಗಬೇಕು ಆ ಬೆಳಕು ದಾರಿದೀಪವಾಗಬೇಕು ಎಂದು ಕವಿ ತನ್ನ ಉದಾತ್ತವಾದ ಆಸೆಯನ್ನು ವ್ಯಕ್ತಪಡಿಸುತ್ತಾರೆ.  ಮಣ್ಣಿನ ಕೊಡುಗೆಗೆ, ನೋವಿಗೆ ನಲಿವಿಗೆ ತನ್ನ ಕಾವ್ಯ ಕನ್ನಡಿ ಹಿಡಿಯುವ ಮೂಲಕ ಸಾರ್ಥಕಗೊಲ್ಲಬೇಕೆಂದು ತನ್ನ ಆಸೆಯನ್ನು ಹಾಡಿಕೊಂದಿದ್ದಾರೆ.  



ವಿರಹ  ವಿರಹ ನೂರು ನೂರು ತರಹ
                                          ೧    ನೀನಿಲ್ಲದೇ ನನಗೇನಿದೆ?........
ಎಂ. ಏನ್. ವ್ಯಾಸರಾವ್ ರು ಕುವೆಂಪು, ಬೇಂದ್ರೆ ಮುಂತಾದ ಕವಿಗಳ ನಂತರದ ತಲೆಮಾರಿನ ಕವಿ. ಇವರು ಬರೆದ ಅನೇಕ ಭಾವಗಿತೆಗಳು ನಾಡಿನಾದ್ಯಂತ ಪ್ರಸಿದ್ಧವಾಗಿದೆ.   ‘ನೀನಿಲ್ಲದೇ ನನಗೇನಿದೆ? ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ, ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ. ಪ್ರೀತಿಯ ಕಿಚ್ಚನ್ನು ಹೊತ್ತಿಸಿ ಅದನ್ನು ಆರಿಸಬೇಕಾದ ಪ್ರಿಯತಮನೇ ದುರನಿಂತಾಗ ಆಗುವ ವಿರಹವೇದನೆ ಎಂಥದ್ದು ಎಂಬುದನ್ನು ಕಟ್ಟಿಕೊಡುವ  ಸುಂದರ ಭಾವಗೀತೆ ಇದಾಗಿದೆ. ಪ್ರೆಮಭಾವದ ಹೊನಲಲ್ಲಿ ತೆಲಿತೇಲಿ ದಡಸೇರದಾದಾಗ ಉಂಟಾಗುವ ನೋವು, ಆತಂಕ  ಇಲ್ಲಿ  ಭಾರುಪ ಪಡೆದಿದೆ. ನೀನಿಲ್ಲದೆ ನನಗೆ ಯಾವ ಅಸ್ತಿತ್ವವಿಲ್ಲ, ನನ್ನ ಕನಸು ಮನಸಲ್ಲಿ ನೀನೇ ತುಂಬಿಕೊಂಡಿರುವೆ, ಅದಾಗ್ಯೂ ನೀನು ದುರನಿಂಟು ವಿರಹದ ನೋವನ್ನು ನಿದುತ್ತಿರುವೆ, ವಿರಹದ ಕತ್ತಲಲ್ಲಿರುವ ನನಗೆ ಒಲವೆಂಬ ಕಿರಣವಾಗಿ ಬಾ ಪ್ರೆಮಭಾವದಲ್ಲಿ ಬಂಧಿಯಾಗಿರುವ ನನ್ನನ್ನು ಬಿಡಿಸು ಬಾ, ನಿನ್ನಿಂದಾಗಿ ನಾನು ಹೊಸ ಲೋಕವನ್ನು ಕಾಣುವಂತೆ ಮಾಡು  ಎಂದು ಪ್ರಿಯತಮೆ ಪ್ರೆಮಿಯಲ್ಲಿ ಬೇಡಿಕೊಳ್ಳುವ ಭಾವಗೀತೆ ಇದಾಗಿದೆ.

                             R   ೨. ನೀ ಸಿಗದೇ ಬಾಳೊಂದು ಬಾಲೆ ಕೃಷ್ಣಾ........ 
ಕವಿ ಏನ್. ಎಸ. ಲಕ್ಷ್ಮಿನಾರಾಯಣ ಭಟ್ಟರು. ಭಾವಗಿತೆಗಳೆಂದರೆ ಮೊದಲು ನೆನಪಾಗುವ ಹೆಸರು ಏನ್. ಎಸ. ಲಕ್ಷ್ಮಿನಾರಾಯಣ ಭಟ್ಟರು. ಶಿವಮೊಗ್ಗದಲ್ಲಿ ಹುಟ್ಟಿದ ಭಟ್ಟರು ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮಾಡಿ, ಬೆಂಗಳುರಿನಲ್ಲಿ ಅಧ್ಯಾಪಕ ವೃತ್ತಿ ಕೈಗೊಂಡವರು. ಇವರು ಉತ್ತಮ ಕವಿಯಷ್ಟೇ ಅಲ್ಲ; ಶ್ರೇಷ್ಠ ವಿಮರ್ಶಕರೂ, ವಾಗ್ಮಿಗಳೂ, ನುರಿತ ಅನುವಾದಕರೂ ಆಗಿದ್ದರೆ.
   ಪ್ರೇಮ ತೆಲುವ ಭಾವವಾದರೆ ವಿರಹ ಆಳಕ್ಕಿಳಿಯುವ ನೋವು. ವಿರಹವೇದನೆಯ ಅನುಭವವಾಗದೆ ಪ್ರೆಮಾನುಭೂತಿ ಪುರ್ನಗೊಳ್ಳದು. ರಾಧಾಕೃಷ್ಣರ ಪ್ರೇಮ, ರುಕ್ಮಿಣಿ-ಸತ್ಯಭಾಮೆಯರು ಕೃಷ್ಣನ ಮೆಲಿತ್ತುರುವ ಪ್ರೇಮ, ಮಿರಾಬಾಯಿಯು ಕೃಷ್ಣನನ್ನೇ ತನ್ನ ಪತಿಯೆಂದು ಭಾವಿಸಿ ಅವನಿಗಾಗಿ ಕಾಯುವ ಪ್ರೇಮ. ಎಲ್ಲ ಬಗೆಯ  ಭಾವಗಳಲ್ಲಿ ಶ್ರೇಷ್ಟವಾದುದು, ಶುದ್ಧ ಸ್ಪಟಿಕದಂತೆ ಹೊಳೆಯುವುದು ಪ್ರೇಮ. ಪ್ರೇಮದ ತೀವ್ರತೆ ವಿರಹದಲ್ಲಿ ವ್ಯಕ್ತವಾಗುವುದು. ವಿರಹದಲ್ಲೇ ಗಟ್ಟಿಗೊಳ್ಳುವುದು. ನಿಜವಾದ  ಪ್ರೇಮ ವಿರಹವೆಂಬ ಅಗ್ನಿದಿವ್ಯದಲ್ಲಿ ಗೆದ್ದು ಬರುವುದು.  ಆ ಶಕ್ತಿ ಪ್ರೆಮಕ್ಕಿದೆ.
     ನೀ ಸಿಗದೇ ಬಾಳೊಂದು ಬಾಳೆ ಕೃಷ್ಣಾ? ಮೀರಾಬಾಯಿಯು  ಗಿರಿಧರನಲ್ಲಿ ನಿವೇದನೆ ಮಾಡುತ್ತಿರುವಳು. ಮೀರಾಬಾಯಿಯ ಭಕ್ತಿಭಾವವನ್ನೂ, ಪ್ರೆಮಭಾವವನ್ನೂ ತಮ್ಮ ಅನೇಕ ಕವನಗಳ ಮೂಲಕ ಲಕ್ಷ್ಮಿನಾರಾಯನಭಟ್ಟರು ಕನ್ನಡಿಗರಿಗೆ ಪರಿಚಯಿಸಿದ್ದಾರೆ. ಆಕೆಯ ಪ್ರೇಮದ ತೀವ್ರತೆಯನ್ನು ಓದುಗರಿಗೆ ಕಾಣಿಸಿದ್ದಾರೆ. ತೊರೆದು ಹೋಗದಿರು ಜೋಗಿ, ಈ ದಿನಾಲ ಮೊರೆಯ ... ಎಂಬ ಗೀತೆಯಲ್ಲಿಯೂ  ಇದೆ ಭಾವ ಮಡುಗಟ್ಟಿದೆ. ಕ್ರುಷ್ಣನಿಲ್ಲದ ಮಿರಾಬಾಯಿಯ ಬಾಳು ಕಮಲವಿಲ್ಲದ ಕೆರೆಯನ್ತಾಗಿದೆ; ಚಂದ್ರನಿಲ್ಲದ ಇರುಳನ್ತಾಗಿದೆ. ಅಣ್ಣ ಸೇರದಾಗಿದೆ, ನಿದ್ದೆ ಬಾರದಾಗಿದೆ, ವಿರಹದ ಬೇಗೆಯಲ್ಲಿ ಜೀವ ಕುದಿಯುತ್ತಿದೆ.
         ಭಾವಗೀತೆಯಂತೆ ಪ್ರಾರಂಭವಾಗುವ ಈ ಗೀತೆ ಮುಕ್ತಾಯದಲ್ಲಿ ಅನುಭಾವಗೀತೆಯಾಗಿ ಕೃಷ್ಣನಿಗೆ ಸಮರ್ಪನೆಗೊಳ್ಳುತ್ತದೆ. ‘ ಒಳಗಿರುವ ಗಿರಿಧರನೇ ಹೊರಗೆ ಬಾರೋ, ಕಣ್ಣೆದುರು ನಿಂತು ರೂಪತೊರೋ ‘  ಪ್ರತಿಯೊಬ್ಬರ ಅಂತರಂಗದಲ್ಲಿ ಅವ್ಯಕ್ತರೂಪದಲ್ಲಿ ಅಡಗಿರುವ ಭಗವಂತ ಹೊರಗೆ ಲೀಲಾರೂಪದಲ್ಲಿ ತೋರುತ್ತಾನೆ.  ಅಂತ ಲೀಲೆಗಳಲ್ಲಿ ಭಗವಂತನನ್ನು ನೋಡುವ ಒಳಗಣ್ಣು  ನಮಗಿರಬೇಕು. ಅಂತ ಒಳಗಣ್ಣನ್ನು ತೆರೆಸಿ ನಿನ್ನ ರೂಪವನ್ನು ನನಗೆ ತೋರು. ನೀನಿಲ್ಲದೆ ನಾನು ಇರಲಾರೆ ಎಂದು ಕೃಷ್ಣನಲ್ಲಿ  ಮೊರೆಯಿಡುತ್ತಾಳೆ  ಮೀರಾ. 

               R     ೩. ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
                     ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ.
ಕವಿ ಕೇ. ಎಸ. ನಿಸಾರ್ ಅಹಮದ್  ಕನ್ನಡ ತಾಯಿಗೆ ನಿತ್ಯೋತ್ಸವವನ್ನು ಹಾಡಿದ ಇವರು  ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಮೈಸೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದ ಇವರು ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅನೇಕ ಸರಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡಿದರು. ಮನಸು ಗಾಂಧಿ ಬಾಜಾರು, ನೆನೆದವರ ಮನದಲ್ಲಿ, ನಿತ್ಯೋತ್ಸವ, ನಾನೆಂಬ ಪರಕೀಯ, ಸಂಜೆ ಐದರ ಮಳೆ, ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಕೆಲವು ಗದ್ಯ ಕೃತಿಗಳನ್ನು ರಚಿಸಿದ್ದಾರೆ. ಶೇಕ್ಸಪಿಯರನ ಕೆಲವು ನಾಟಕಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಜೋಗದ ಸಿರಿ ಬೆಳಕಿನಲ್ಲಿ, ಬೆಣ್ಣೆ ಕದ್ದ ನಮ್ಮ ಕೃಷ್ಣ,  ಮತ್ತದೇ ಬೇಸರ ಅದೇ ಸಂಜೆ,  ಈ ದಿನಾಂತ ಸಮಯದಲಿ,  ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ , ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ    ಮುಂತಾದ ಭಾವಗೀತೆಗಳೂ, ನಾಡಗೀತೆಗಳೂ ನಾಡಿನಾದ್ಯಂತ  ಮನೆಮಾತಾಗಿದೆ. 
       ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ  ಈ ಭಾವಗೀತೆ ಪ್ರಿಯತಮನು ಜೊತೆ ಇಲ್ಲದಿರುವಾಗ ಆ ಸಮಯ ಎಷ್ಟೇ ಸುಂದರವಾಗಿದ್ದರೂ ಆಕೆಯ ಪಾಲಿಗದು ನಿಸ್ಸಾರವಾಗಿ ಕಂಡು ಬರುತ್ತದೆ ಎಂಬುದನ್ನು ಭಾವಪೂರ್ಣವಾಗಿ ಹೇಳುತ್ತದೆ.   ಉದ್ಯೋಗದ ಕಾರಣವೋ  ಅಥವಾ ಬೇರೆ ಅನಿವಾರ್ಯತೆಯೋ ಬಹು ಸಮಯದಿಂದ ಪತಿಯನ್ನು ಬಿಟ್ಟಿರುವ ಪತ್ನಿಗೆ ಕಾಡುವ ದಿನಂಪ್ರತಿಯ ಬೇಸರ ಇದಾಗಿದೆ. ಹೆಣ್ಣಿಗೆ ಸಂಜೆ ಸುಂದರವಾಗಿ ಕಾಣಲು ಆಕೆಯ ಪತಿ ಜೊತೆ ಇರಬೇಕು. ಅವನ ಜೊತೆ ಇಲ್ಲದ ಸಂಜೆ ಅದೆಷ್ಟೇ ಸುಂದರವಾಗಿದ್ದರೂ ಆಕೆಯ ಪಾಲಿಗೆ ಅದು ವ್ಯರ್ಥ. ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ, ಇಂತಹ ಏಕತಾನತೆ ಮನದ ಭಾವನೆಗಳನ್ನು ಹಂಚಿಕೊಳ್ಳಲು ಜೋತೆಗಾರನಿಲ್ಲದ ಸಂಜೆ ಹೆಣ್ಣಿನ ಪಾಲಿಗದು ಹಿಂಸೆಯ ಹೊತ್ತು. ಆಕೆಯ ಮನಸ್ಸು ಹೀಗೆ ರೋಧಿಸುತ್ತಿದೆ- ನಿನ್ನ ಸಾಮಿಪ್ಯವಿಲ್ಲದೆ, ನಿನ್ನ ಮಾತಿನ ಜೊತೆ ಇಲ್ಲದೆ ನನ್ನ ಮನಸ್ಸು ವಿಭ್ರಾಂತಗೊಂಡಿದೆ. ಸಂಜೆಯ ಹೊಂಬಣ್ಣ ಉಳಿದವರ ಕಣ್ಣನ್ನು ತಣಿಸುತ್ತಿದ್ದರೆ ಅದೇ ಹೊಂಬಣ್ಣ ನನ್ನ ಕಣ್ಣನ್ನು ದಣಿಸುತ್ತಿದೆ. ಮಣ್ಣನ್ನೇ ಹೊನ್ನಿನ ಹಣ್ಣಾಗಿಸುವ ಸಂಜೆ ಉಳಿದವರ ಪಾಲಿಗೆ ಸುಂದರವಾಗಿದೆ ಆದರೆ ನನಗೆ ನೀನಿಲ್ಲದೆ ಈ ರಮ್ಯೋದ್ಯಾನ ಬೀಕೋ ಎನಿಸುತ್ತಿದೆ. ನೀನಿಲ್ಲದ ವಿರಹಭಾವ ನನ್ನ ತನುಮನಗಳನ್ನು ಹೀಗೆ ಹಿಂಸಿಸುತ್ತಿದೆ.  ಆಸೆಗಳ ಹಿಂದಿನ ತುಳಿತಕ್ಕೆ ಒಳಗಾದ ಹೊಲದಂತಿದೆ ನನ್ನ ದೇಹ. ಮತ್ತೆ ನೀ ಬರುವೆಯೋ ಬಾರೆಯೋ ಎಂಬ ಸಂದೇಹವೂ ಕಾಡುತ್ತಿದೆ.  ನೀನಿಲ್ಲದೆ ಸೂರ್ಯಾಸ್ತ ಬಣ್ಣ ಕಳೆದು ಪೇಲವಗೊಂಡಿದೆ.  ನನ್ನ ಬದುಕಿನ ಅಮೂಲ್ಯ ಕ್ಷಣಗಳು ನೀನಿಲ್ಲದೆ ವ್ಯರ್ಥವಾಗುತ್ತಿವೆ. ವಿರಹದ ನೋವು ನನ್ನ ನಿತ್ಯದ ಪಾಡಾಗಿದೆ, ನಿತ್ಯದ ಹಾಡಾಗಿದೆ.       
  
                  R    ೪.ಕಾಂತನಿಲ್ಲದ ಮೇಲೆ ಏಕಾಂತವೇತಕೆ  ಗಂಧ ಲೇಪನವ್ಯಾತಕೆ ಈ ದೇಹಕೆ?
ಬೇಂದ್ರೆಯವರ ಹಾಗೆ ಜನಪದ ಲಯ ಗೇಯ ಗುಣಗಳನ್ನು ತಮ್ಮ ರಚನೆಗಳಲ್ಲಿ ತುಳುಕಿಸಿದ ಇನ್ನೂಬ್ಬ ಕವಿ ಡಾ. ಚಂದ್ರಶೇಖರ ಕಂಬಾರ. ಅವರ ಈ ಹಾಡು ಕನ್ನಡ ಭಾವಗಿತೆಗಳ  ಲೋಕದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ.
  ವಿರಹ ಈ ಗೀತೆಯ ಸ್ಥಾಯೀ ಭಾವವಾಗಿದೆ. ದೂರದಲ್ಲಿರುವ ಕಾಂತ  ಅಂದರೆ ತನ್ನ ಗಂಡನನ್ನು ನೆನೆಸಿ ಈಕೆ  ಕೊರಗುತ್ತಾಳೆ. ಆತನ ಸಾಮಿಪ್ಯವಿಲ್ಲದೆ ಏಕಾಮ್ತವೆಮ್ಬುದು ಆಕೆಯನ್ನು ಸುಡುತ್ತಿದೆ. ಕಾಂತನಿಲ್ಲದ ಮೇಲೆ ಏಕಾಂತ ವೇತಕೆ? ಗಂಧ ಲೇಪನವ್ಯಾತಕೆ ಈ ದೇಹಕೆ? ಕಾಂತನು ಜೊತೆ ಇಲ್ಲದೆ  ಒಂದು ಉದಾಸಭಾವ ಆಕೆಯ ದಿನವನ್ನು ಆವರಿಸಿದೆ. ಆದ್ದರಿಂದಲೇ –ಸಹಜವಾಗಿ ಹೆಣ್ಣು ತಾನೂ ಮಾಡಿಕೊಳ್ಳುವ ಶೃಂಗಾರದಿಂದ ದೂರವಿರುತ್ತಾಳೆ.  ಕಾಂತನಿಲ್ಲದ ಮೇಲೆ ಇನ್ಯಾರಿಗಾಗಿ ತಾನು ಸಿಂಗರಿಸಿಕೊಳ್ಳಲಿ? ಎಂದು ತನಗೆ ತಾನೇ ಕೇಳಿಕೊಳ್ಳುತ್ತಾಳೆ.
   ಮಂದ ಮಾರುತವು ಆಕೆಗೆ ಉರಿ ಬಿಸಿಲಿನಂತಾಗಿದೆ.  ಬೆಳದಿಂಗಳೂ ಸುಡುತ್ತಿದೆ ಜಾಜಿ ಹೂವುಗಳು ಸೂಜಿಯಂತೆ ಚುಚ್ಚುತ್ತಿವೆ. ಪ್ರಕೃತಿ ಮತ್ತು ಪರಿಸರವು ಎಷ್ಟೇ ಅನುಕೂಲಕರವಾಗಿದ್ದರೂ ಅವೆಲ್ಲವೂ ಆಕೆಯನ್ನು ಹಿಂಸಿಸುತ್ತವೆ. ಏಕೆಂದರೆ ಅವಳ ಈ ಏಕಾಂತದಲ್ಲಿ ಕಾಂತನಿಲ್ಲ.
    ಮತ್ತೆ ಆಕೆ ಕೇಳುತ್ತಾಳೆ-   ತನ್ನ ಈ ವಿರಹ, ಬಿಸಿಯುಸಿರು ಆತನಿಗೆ ಅರ್ಥವಾಗುವುದಿಲ್ಲವೇ? ಆತನಿಲ್ಲದಿದ್ದರೆ ತನ್ನ ಚೆಲುವಿಗೆ ಏನು ಅರ್ಥ?  ಬಹು ಸಮಯದಿಂದ ಆಟ ದೂರ ಇರುವ ಕಾರಣ  “ ನನ್ನ ಚೆಲುವು ಕಾಮುಕರ ಕಣ್ಣಿಗೆ ಗುರಿಯಾಗಬಹುದು,  ನನ್ನ ಕೈ ಹಿಡಿದ ಸರಿಪುರುಷ ಕರುಣೆಯ ತೋರನೆ?” ಎಂದು  ಆಕೆ ಪ್ರಶ್ನಿಸುತ್ತಾಳೆ.  ಮತ್ತೆ ಆತನಿಗಾಗಿ ಮೊರೆಯಿದುತ್ತಾಳೆ, ಕಾಯುತ್ತಾಳೆ.

                        R ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ .....
ಕವಿ ಎಚ್. ಎಸ. ವೆಂಕಟೇಶ ಮೂರ್ತಿ.
 ಡಾ|| ಎಚ್.ಎಸ. ವೆಂಕಟೇಶ ಮೂರ್ತಿ ಯವರು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೋದಿಗ್ಗೆರೆ ಉರಿನಲ್ಲಿ ಜನಿಸಿದವರು. ಇಂಜನಿಯರಿಂಗ್ ಪದವಿ ಪಡೆದರೂ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡವರು ಮತ್ತು  ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಜೀ.ಎಸ.ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ  ಕಥನಕವನಗಳ ಮೇಲೆ  ಪ್ರೌಢ ಪಬಂಧವನ್ನು ಬರೆದು ಪಿ.ಎಚ್.ಡಿ.ಪದವಿಯನ್ನು ಪಡೆದರು. ಹತ್ತಾರು ಕವನ ಸಂಕಲಗಳನ್ನು ಹೊರತಂದು ಕವಿಗಳೆಂದು ಪ್ರಸಿದ್ಧರಾದರೂ ಇತರ ಸಾಹಿ ತ್ಯ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಇವರ ಕವಿತೆಗಳಲ್ಲಿ ಮಾಸ್ತಿ, ಬೇಂದ್ರೆಯಂಥವರ ಒಳದನಿಯು ಮತ್ತು ಅಡಿಗ, ಅನಂತಮೂರ್ತಿ, ಲಂಕೇಶರ ನವಪ್ರಜ್ಞೆಯ ಹೊಳಹುಗಳು ಕಂಡು ಬರುತ್ತದೆ.
       ವೆಂಕಟೇಶ ಮೂರ್ತಿಯವರ ಪ್ರಸಿದ್ಧವಾದ ಭಾವಗೀತೆ ‘ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ ? ‘ ಸಂಗೀತ ಸಾಹಿತ್ಯ ಪ್ರಿಯರಾದ ಸಹೃದಯರೆಲ್ಲರ ಇಷ್ಟವಾದ ಹಾಡು ಇದು ಎನ್ನಬಹುದು.  ದಾಂಪತ್ಯದ ಸ್ಥಾಯೀ ಭಾವ ಪ್ರೇಮ  ಆದರೆ ಇದು ಅಷ್ಟು ಸುಲಭವಾಗಿ ಬೆಳೆಯಲಾರದು, ಬಲಿಯಲಾರದು ಮಾಗಲಾರದು. ದಂಪತಿಗಳು ಪರಸ್ಪರ  ಹತ್ತಿರವಿದ್ದೂ, ಒನ್ದೆ೩ ಜೀವ ಎರಡು ದೇಹ ಎಂಬಂತೆ ಬದುಕಿದ್ದರೂ ಕೂಡಾ ಒಬ್ಬರ ಅಂತರಂಗವನ್ನು ಇನ್ನೊಬ್ಬರು ಪೂರ್ಣವಾಗಿ ಅರಿಯಲಾರರು. ಎಂಬ ಸತ್ಯವನ್ನು ಕವಿ ಮನಮುಟ್ಟುವ ಉಪಮೆಗಳನ್ನು ನೀಡಿ ಹಾಡಿದ್ದಾರೆ ಕವಿ. ದಂಪತಿಗಳು ಒಬ್ಬರನ್ನೊಬ್ಬರು ಅರ್ಥಮಾದಿಕೊಂದಷ್ಟು ದಾಂಪತ್ಯ ಅರ್ಥಪೂರ್ಣವಾಗುತ್ತದೆ ಪ್ರಾರಂಭದಲ್ಲಿ ಹೊಂದಾಣಿಕೆ ಕಷ್ಟವಾದರೂ ವರ್ಷಕಳೆದಂತೆ ದಾಂಪತ್ಯದಲ್ಲಿ ಪ್ರೇಮ ಮಾಗುತ್ತಾ ಹೋಗುವುದು. ಬೇಂದ್ರೆ ತಮ್ಮ ಕಥೆಯಾದಳು ಹುಡುಗಿ ಎಂಬ ಗಿತೆಯಲ್ಲಿ ‘ಒಗರಿಳಿಯಿತು ಹುಳಿಯಳಿದಿತು   ಬೆಡಗುಳಿಯಿತು ಅಡಗಿ’ ಎಂಬಂತೆ ಪ್ರೇಮ ಮಾಗಿದ ರಸಪುರ್ಣ ಹಣ್ಣಿನಂತಾಗುವುದು ಎಂಬುದು ಎಲ್ಲರ ಒಂದು ಸಾಮಾನ್ಯ ಭಾವನೆ. ಆದರೆ ಕೆಲವರಲ್ಲಿ  ಒಬ್ಬರ ಅಂತರಂಗದ ನಿಜ  ಇನ್ನೊಬ್ಬರಿಗೆ  ಅರಿವಾಗುವುದೇ ಇಲ್ಲ. ಇದೊಂದು ಸೂಕ್ಷ್ಮ ಸತ್ಯವೆನ್ನಬಹುದು. ಪ್ರಾಪಂಚಿಕವಾದ ಕಾರಣಗಳಿಂದ ಅವರು ಒಟ್ಟಿಗಿದ್ದು ತಮ್ಮೆಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದಾಗ್ಯೂ ಜೊತೆಗಿದ್ದ ಜೀವಿಯ ಅಂತರಂಗವನ್ನು ಅರಿಯುವುದು ಸಾಧ್ಯವಾಗದ ಮಾತು. ನಾನೊಂದು ತೀರ, ನೀನೊಂದು ತಿರವಾಗೇ ಸಮಾನ ಅಂತರದಲ್ಲೇ ಸಾಗುತ್ತಿರುತ್ತಾರೆ. ದಾಂಪತ್ಯದಲ್ಲಿ ಇದೊಂದು ಒಪ್ಪಿಕೊಂಡ ಹಿಂಸೆ.
       ನೀರಿನ ಮೇಲೆ ತೆಲುವ ಹಾಯಿದೋಣಿಗೆ ಕಡಲಿನಾಳದ ಅರಿವು,  ಒಂದು ಸಣ್ಣ ಅಂದಾಜು ಕೂಡಾ  ಎಂದಿಗೂ ಆಗುವುದೇ ಇಲ್ಲ.  ಆದರೆ ನೀರ  ಬಿಟ್ಟು ನೆಲದ ಮೇಲೆ ದೋಣಿ ಸಾಗಲಾರದು.  ದೋಣಿ ಇರುವುದೇ ನೀರ ಮೇಲೆ ತೇಲಲು . ಆದರೆ ನೀರೆಂದೂ ತನ್ನ ಮೇಲೆ ತೆಲುವ ದೋಣಿಗೆ ತನ್ನ ಆಳದ ದರ್ಶನ ಮಾಡಿಸಲಾರದು. ಆಳ ನೋಡಬೇಕೆಂದರೆ ದೋಣಿ ನೀರಿನಲ್ಲಿ ಮುಳುಗಬೇಕಷ್ಟೇ!    ಎಷ್ಟೇ ಬಾಗಿ ಬಂದರೂ ನೀಲಿಬಾನಿಗೆ ಭೂಮಿಯ ಚುಂಬನ ಸಾಧ್ಯವಿಲ್ಲದ ಮಾತು.   ಹಾಗೆಯೇ ಸಾವಿರಾರು ಮುಖಗಳ ಚೆಲುವನ್ನು ಹಿಡಿದು ತೋರುವ ಕನ್ನಡಿಗೆ ಒಂದೇ ಒಂದು ಚೆಲುವಾದ ಮುಖವನ್ನು ತನ್ನೊಳಗೇ ಉಳಿಸಿಕೊಳ್ಳಲು ಸಾಧ್ಯವಾಗದು. ಸೂಕ್ಷ್ಮವಾದ ಮನುಷ್ಯ ಸಂಬಂಧದ ಮಗ್ಗುಲೊಂದನ್ನು ಇಷ್ಟು ಸುಂದರವಾಗಿ, ಹಾಡಿರುವ ಕವಿಯನ್ನು ಅಭಿನಂದಿಸಲೇ ಬೇಕು.  
        


 ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು.......
          ಹದಿಹರೆಯದ ಹುಚ್ಚು ಮನಸ್ಸನ್ನು ಇಷ್ಟು ಸುಂದರವಾಗಿ, ಮತ್ತು ಭಾವನೆಯಂತೆಯೇ ಭಾಷೆಯನ್ನೂ ಇಷ್ಟು ನವಿರಾಗಿ ಬಳಸಿ ರಚಿಸಿದ ಕವನ ಕನ್ನಡದಲ್ಲಿ ಹೆಚ್ಚಿಲ್ಲ ಎಂದೇ ಹೇಳಬೇಕು.ಬೇಂದ್ರೆಯವರ ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಂಗ ಬೀರಿ ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ ವರಕವಿ ಬೇಂದ್ರೆಯವರ ಈ  ಕವನವನ್ನು  ತತ್ಸಮಾನ ಕವಿತೆ ಎಂಬಂತೆ ನೆನಪಿಗೆ ಎಳೆದು ತರುವುದು  ಹುಚ್ಚು ಕೊಡಿ ಮನಸು ಕವಿತೆಯ ಹೆಚ್ಚುಗಾರಿಕೆ ಎಂದೇ ಹೇಳಬಹುದು.
         ಹದಿಹರೆಯ ಅದೊಂದು ವ್ಯಕ್ತಿ ಜೀವನದ ವಿಶಿಷ್ಟ ಕಾಲಘಟ್ಟ. ಬಾಲ್ಯದ ಮುಗ್ಧತೆ ಕಳೆದು ಹೋಗಿರುತ್ತದೆ, ಜೀವನದ ಪ್ರೌಢತೆ  ದೂರದ ಮಾತು. ಜಗತ್ತನ್ನೇ ಗೆಲ್ಲುವ ಉತ್ಸಾಹ, ಉನ್ಮಾದ, ದೇಹಬಲ, ಸೊಕ್ಕು, ಆತ್ಮಾಭಿಮಾನ, ಆತ್ಮರತಿ ಎಲ್ಲವೂ ಪ್ರಖರ ಸ್ಥಿತಿಯಲ್ಲಿದ್ದು ಒಂದಕ್ಕೊಂದು ಸೇರಿ ಕಲಸುಮೇಲೋಗರವಾಗಿ  ಮನಸ್ಸು ಹುಚ್ಚು ಕೋಡಿಯಾಗಿ ಹರಿಯುವುದು. ಹದಿಹರೆಯದ ಒಂದು ಸಾಮಾನ್ಯ ಲಕ್ಷಣವೆಂದರೆ ಕನ್ನಡಿ ಮುಂದೆ ನಿಂತು ತನ್ನ ದೇಹ ಸೌಂದರ್ಯವನ್ನು ತಾನೇ ನೋಡಿ ನೋಡಿ ಸಂಭ್ರಮಿಸುವುದು. ಜಗದೆದುರು ಇನ್ನು ಸುಂದರವಾಗಿ ಪ್ರಕತಗೊಲ್ಲಬೇಕೆಂದು ಹವಣಿಸುವುದು,
ಕನ್ನಡಿ ಮುನೇ ನಿಂತು ಮೈಮರೆಯುವುದು, ಮುಗುಳ್ನಗುವುದು, ತೊಟ್ಟ ಬಟ್ಟೆ, ಹಚ್ಚಿದ ಪ್ರಾಸಾದನ ಯಾವುದೂ ಪರಿಪುರ್ಣವಾಗದ ಅಸಮಾಧಾನ.  ಹುಚ್ಚು ಕೊಡಿ ಮನಸು ಅದು ಹದಿನಾರರ ವಯಸು ಕವಿತೆಯ ಮೊದಲ ಸಾಲೇ  ಪೂರ್ಣ ಕವಿತೆಯ ಸಾರಾಂಶದಂತಿದೆ.  ಕವಿ ಎಚ್. ಎಸ. ವೆಂಕಟೇಶ ಮೂರ್ತಿ.

ನೆನಪಿದೆಯೇ ನಿನಗೆ ?....
ಡಾ. ಜೀ. ಎಸ. ಶಿವರುದ್ರಪ್ಪನವರಿಂದ ರಚಿತವಾದ ಈ ಭಾವಗೀತೆ  ಎಂದೂ ಮರೆಯದ ಹಾಡು ಎನ್ನಬಹುದು. ಹಿಂದಿಯ ಗಜಲ್ ಸಾಮ್ರಾಟ ಜಗಜಿತ್ ಸಿಂಗ್ ಇವರ ಪ್ರಸಿದ್ಧ ಗಜಲ್ ‘ ಕಾಗಜ್ ಕಿ ಕಸ್ತಿ ‘ಅಂದರೆ ಕಾಗದದ ದೋಣಿ ಎಂಬುದನ್ನು ನೆನಪಿಗೆ ತರುವ ಹಾಡಿಡು. ತನಗೆ ಬಂದಿರುವ ಸಿದ್ಧಿ, ಪ್ರಸಿದ್ಧಿ, ಧನ-ದೌಲತ್ತು, ಪ್ರಶಸ್ತಿ-ಪುರಸ್ಕಾರಗಳನ್ನೆಲ್ಲ ಮರಳಿಸುವೆ, ಆದರೆ ಕಳೆದುಹೋದ ನನ್ನ ಬಾಲ್ಯವನ್ನು ಮರಳಿ ಕೊಡು ಎಂದು ಬೇಡುತ್ತಾರೆ ಅಲ್ಲಿಯ ಕವಿ.ನಿಜ, ಕಳೆದು ಹೋದ ಬಾಲ್ಯ ಮರಳಿ ಬಾರದು. ಸುದೈವವೆಂದರೆ ಆ ಬಾಲ್ಯದ ಸವಿ ಸವಿ ನೆನಪು ಚಿರಕಾಲ ನಮ್ಮೊಂದಿಗಿದ್ದು ನಮ್ಮನ್ನು ಸಂತೈಸುತ್ತದೆ. ಬಾಲ್ಯದ ನೆನಪೇ ನಮ್ಮೆಲ್ಲರ ಬದುಕಿನ  ಬಾಳ ಬುತ್ತಿಯಾಗಿದೆ. ಹಾಗು ಬದುಕಿನ ಆಧಾರವಾಗಿದೆ.
      ಶಿವರುದ್ರಪ್ಪನವರ  “ ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳ ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ  ನೆನಪಿದೆಯೇ ನಿನಗೆ ?” ಈ ಭಾವಗೀತೆ ಪ್ರತಿಯೊಬ್ಬರನ್ನೂ ನೆನಪಿನ ದೋಣಿಯಲ್ಲಿ ಅವರವರ ಬಾಲ್ಯಕ್ಕೆ ಕೊಂಡೊಯ್ಯುವ ತಾಕತ್ತಿರುವ ಏಕೈಕ ಗೀತೆ ಎನ್ನಬಹುದು.  ಬಾಲ್ಯ ಎಂದಾಕ್ಷಣ ಪ್ರತಿಯೊಬ್ಬರೂ ಒಂದು ಕ್ಷಣ ಮೌನವಾಗುತ್ತಾರೆ. ಕೆಲವು ಕ್ಷಣ ತಮ್ಮಲ್ಲೇ ತಾವು ಕಳೆದುಹೊಗುತ್ತಾರೆ. ಬಾಲ್ಯದಲ್ಲಿ ಆಡಿದ ಆಟಗಳಿಗೆ ಲೆಕ್ಕವಿಲ್ಲ. ಸ್ನೇಹಿತರೊಂದಿಗೆ ಮಾಡಿದ ಜಗಳಕ್ಕೆ ಕೊನೆಯಿಲ್ಲ. ಬಾಲ್ಯದ ಈ ಎಲ್ಲಾ ನೆನಪುಗಳನ್ನು ಸರಳವಾಗಿ ಸುಂದರವಾಗಿ ಕಟ್ಟಿಕೊಡುವ ಕವನ  ‘ ನೆನಪಿದೆಯೇ ನಿನಗೆ ?”
    ಗೆಳತಿಯ  ಜೊತೆಗೂಡಿ ಕಟ್ಟಿದ ಮರಳಿನ ಮನೆ ಮುಂಗಾರಿನ ಮಳೆಯಲ್ಲಿ ಕೊಚ್ಚಿ ಹೋದದ್ದು ಈ ಮರಳು ನನ್ನದು, ಆ ಮರಳು ನಿನ್ನದು ಎಂದು ಜಗಳವಾಡಿ ಜೊತೆ ಬಿಟ್ಟಿದ್ದು, ಮರುದಿನ ಮತ್ತೆ ಮರಳಿನ ಮನೆ ಕಟ್ಟಿದ್ದು,  ಹೀಗೆ ಬಾಲ್ಯದ ನೆನಪುಗಳ ದಾರಿ ಅನಂತ; ಪ್ರಕಾಶಮಾನ.
   ಕವಿತೆಯ ಕೊನೆಯಲ್ಲಿ ಒಂದು ವಿಷಾದ ಕಾಣಿಸಿಕೊಳ್ಳುತ್ತದೆ. ‘ ಅಂದು ಹರಿದಾ ಹೊಳೆಯೇ ಇಂದೂ ಹರಿಯುತ್ತಲಿಹುದು, ಬಾ ಗೆಳತಿ ಮತ್ತೊಮ್ಮೆ ಆಟ ಆಡೋಣ, ಬಾಲ್ಯದುದ್ಯಾನವ ಮರಳಿ ಕಟ್ಟೋಣ.. ‘   ಆದರಿದು ಸಾಧ್ಯವೇ?      ಈ ಪ್ರಶ್ನೆ ನಮ್ಮನ್ನು ಕ್ಷಣಕಾಲ ಮೌನಕ್ಕೆ ದೂಡುತ್ತದೆ.
    

ದಾಂಪತ್ಯ
   ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ,
 ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ,
ಹಿಂದೆ ಮುಂದೆ ನೋಡದೆ ಎದುರು ಮಾತನಾಡದೆ.
      ಪ್ರೇಮಕವಿ ಎಂದೇ ಹೆಸರು ಪಡೆದ ಕವಿ ಕೇ. ಎಸ. ನರಸಿಂಹಸ್ವಾಮಿಯವರ  ಗೀತೆ ಇದು. ನವದಂಪತಿಗಳ ಪ್ರೆಮಭಾವಗಳಿಗೆ ಅಷ್ಟೇ ಉತ್ಕಟವಾಗಿ ಗೀತರೂಪ ಕೊಟ್ಟು, ಮೈಸೂರು ಮಲ್ಲಿಗೆ ಎಂಬ ಮುದ್ದಾದ ಹೆಸರನ್ನಿಟ್ಟು ಲೋಕಾರ್ಪಣೆ ಮಾಡಿದಾಗ ಕನ್ನಡ ಸಾರಸ್ವತ ಲೋಕದಲ್ಲಿ ರಾತ್ರೋ ರಾತ್ರಿ ಮನೆಮಾತಾದವರು ಈ ಕವಿ. ತಮ್ಮ ಗಿತೆಗಳಲ್ಲಿ ಪ್ರೇಮದ ಉತ್ಕಟತೆಯನ್ನು ವ್ಯಕ್ತಪಡಿಸಿದ ಪರಿಯನ್ನು ನೋಡಿ ಆ ಕಾಲದ ಹಿರಿಯರು ಹುಬ್ಬೆರಿಸಿರಬಹುದು. 
ಆದರೆ ಅವರ ಕವಗಳನ್ನು ಓದಿ  ಅವರ ಸಮಕಾಲೀನರು ಪುಳಕಗೊಂದದ್ದು ಸುಳ್ಳಲ್ಲ. ಮೈಸೂರು ಮಲ್ಲಿಗೆಯ ಕವಗಳೆಲ್ಲ ಇಂದಿಗೂ ಅಂದಿನಷ್ಟೇ ತಾಜಾತನವನ್ನು ಸೂಸುತ್ತಿದೆ. ಆ ವಿಭಾಗದಲ್ಲಿ ಅವನ್ನು ಮೀರಿಸುವ ಕವನಗಳು ಮತ್ತೆ ಬರಲಿಲ್ಲ ಎನ್ನಬಹುದು.
       ಪರಸ್ಪರ ಪರಿಚಯ ಮತ್ತು ಪರಸ್ಪರರ ತಿಳುವಳಿಕೆಗಳಿಲ್ಲದೆ ಮದುವೆಯೆಂಬ ಸಂಸ್ಕಾರದಲ್ಲಿ ಒಂದಾದ,  ಹೊಸ ಬಾಳುವೆಗೆ ಅಡಿಯಿಟ್ಟ,  ಜೊತೆಜೊತೆ ಹೆಜ್ಜೆಗೆ ಮುಂದಾದ ಗಂಡು ಹೆಣ್ಣು ಆಶ್ಚರ್ಯಕರವಾದ ರೀತಿಯಲ್ಲಿ ಬಹುಬೇಗನೆ ಹೊಂದಿಕೊಂಡುಬಿಡುತ್ತಾರೆ. ಇದು ಅಂದಿನ ಸಂದರ್ಭದ ಮಾತು. ಇದು ಕವಿಗೆ ಆಶ್ಚರ್ಯ ತಂದಿದೆ.  ಇದಕ್ಕೆ ಕಾರಣ ಮಾಡುವೆ ಎಂಬ ಬಂಧ ಮತ್ತು ಬೆಸುಗೆಗೆ ಕಾರಣವಾದ ಪ್ರೇಮ. ಕವಿ ಬೆರಗಿನಿಂದ ಹಾಡುತ್ತಾರೆ  ‘     ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ, ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ, ಹಿಂದೆ ಮುಂದೆ ನೋಡದೆ ಎದುರು ಮಾತನಾಡದೆ. ಇಚ್ಚೆಯರಿತು ನಡೆವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ  ಎಂಬಂತಹ ಸಂದರ್ಭ ಇದು.
      ಕೋಣೆಯೊಳಗೆ ಬಾಳೆಯ ಸದ್ದು, ನಗುವರತ್ತೆ ಬಿದ್ದು ಬಿದ್ದು , ಸುಮ್ಮನಿರಲು ಮಾವನವರು,  ಒಳಗೆ ಅಕ್ಕ ಭಾವನವರು ಎಂದು ವಾಕ್ಯವನ್ನು ಅಪುರ್ನಗೊಲಿಸುವ ತುಂಟ ಮಕ್ಕಳು   ವ್ಹಾ  ಅಶ್ಲೀಲತೆಯ ಸೊಂಕಿಲ್ಲದೆ ಸಂಗತಿಗಳನ್ನು ಎಷ್ಟು ಚೆನ್ನಾಗಿ ಬಿಚ್ಚಿಡುತ್ತಾರೆ ಕವಿ.  ಗಂಡಿನ ಸ್ಥಾನದಲ್ಲಿ ನಿಂತು ಹಾಡಿಕೊಲ್ಲುತ್ತಿರುವ ಕವಿ  ‘ಕೊನೆಯೋಳಗಿನ ತಮ್ಮ ಸರಸ ಸಲ್ಲಾಪಕ್ಕೆ ಹೊರಗಿನವರು ಏನೆಂದು ಕೊಳ್ಳಬಹುದು’ ಎಂಬ ಅರಿವಿದ್ದೂ ಅವಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ.
       ‘ ಒಂದು ಗಂಡಿಗೊಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು’ ಇದು ಲೋಕಧರ್ಮ. ಕಾಣದೊಂದ ಕನಸ ಕಂಡು ಮಾತಿಗೊಲಿಯದಮೃತವುಂಡು  ತಮ್ಮ ಕನಸಿನ ಸಾಕಾರಕ್ಕಾಗಿ, ಬಾಲಕಷ್ಟಗಳನ್ನು ಎದುರಿಸುವುದಕ್ಕಾಗಿ ಮುಂದಾಗುತ್ತಾರೆ.   ಇಂತಹ ಒಪ್ನ್ದು ಅನ್ಯೋನ್ಯತೆಗೆ ಕಾರಣವಾಗುವುದು ಪ್ರೇಮ. ಇಂಥಹ ಭೂಲೋಕದ ಅಮೃತವನ್ನು ಹಗುರವಾಗಿ ಕಾಣುವುದು ಸರಿಯಲ್ಲವೆಂದು,  ಕವಿ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾನೆ. ಅಲ್ಲದೆ  ಪ್ರೇಮ ಪುಳಕದ ಪರಿಗೆ ಒಳಗಾದವರಲ್ಲಿ ತಾವೇ ಮೊದಲಲ್ಲು; ತಾವು ಕೊನೆಯವರೂ ಅಲ್ಲ. ಅಂದಮೇಲೆ ಜಗತ್ತು ತಮ್ಮ ಬಗ್ಗೆ ಏನು ಅಂದುಕೊಲ್ಲುವರು ಎಂಬ ಚಿಂತೆ ಮಾಡುವುದು ಸರಿಯಲ್ಲ ಎಂದು ಕವಿ ಭಾವಿಸುತ್ತಾರೆ. ಲೋಕದ ಚೇಷ್ಟೆ-ಕುಚೆಷ್ಟೇಗಳಿಗೆ ಪ್ರೇಮವೇ ಉತ್ತರಕೊಡುವುದು ಎಂದು ಹೇಳುತ್ತಾರೆ.  ಕವಿ ಹಾಡುತ್ತಾರೆ- ಅದಕೆ ಇಂದೇ ಕರೆವುದು, ನನ್ನ ಹುಡುಗಿ ಎನುವುದು, ಹೂವ ಮುಡಿಸಿ ನಗುವುದು, ಅಪ್ಪಿ ಮುತ್ತನಿಡುವುದು.... ಬಾರೆ ನನ್ನ ಶಾರದೆ, ಬಾರೆ ಅತ್ತ ನೋಡದೆ’     ವಾಸ್ತವದಲ್ಲಿ ನಮ್ಮ ಸಮಾಜ ದಾಂಪತ್ಯದ ಸರಸವಿರಸಗಳನ್ನೆಲ್ಲ ರಟ್ಟು ಮಾದುವುದಲ್ಲಿ ಒಪ್ಪುವುದಿಲ್ಲ. ಆದರೆ ಆತ್ಮೀಯರಲ್ಲಿ ಖಾಸಗಿಯಾಗಿ ಹೇಳಿಕೊಳ್ಳಲು ಬಯಸುವ , ಹೇಳಿ ಖುಷಿಪಡಲು ಇಷ್ಟಪಡುವ ಇಂತಹ ಭಾವಕ್ಕೆ ಗೀತೆಯ ರೂಪ ಕೊಟ್ಟು ಕವಿ ಓದುಗರ ವಿಶೇಷ ಮೆಚ್ಚುಗೆ ಗಳಿಸಿದ್ದಾರೆ ಎನ್ನಬಹುದು.
  
                                R    ನಾನು ಬಡವಿ ಆತ  ಬಡವ ಒಲವೆ ನಮ್ಮ ಬದುಕು, ....
     ಬೇಂದ್ರೆಯವರನ್ನು ಭುವನದ ಭಾಗ್ಯ ಎನ್ನುತ್ತಾರೆ. ಕನ್ನಡಿಗರ ಪಾಲಿಗೆ ಅವರು ವರಕವಿ. ನಾಡಿನ ಬಹುಕಾಲದ ಪುಣ್ಯದ ಫಲವಾಗಿ ಬೇಂದ್ರೆ, ಕುವೆಂಪು, ಮಾಸ್ತಿ, ಕಾರಂತರಂಥವರು ಹುತ್ತಿಬರುತ್ತಾರೆ. ಇವರುಗಳಿಗೆಲ್ಲ ನಮ್ಮ ನಮನ. ನೀವು ಮತ್ತೆ ಮತ್ತೆ ಹುಟ್ಟಿಬನ್ನಿ ಎಂಬುದು ಕೋಟಿ ಕನ್ನಡಿಗರ ಪ್ರಾಥನೆ. ಇದೆ ಅವರುಗಳಿಗೆ ಸಂದ ಬಹುದೊಡ್ಡ ಪ್ರಶಸ್ತಿ.
    ಮೂಲತಃ ಮರಾಠಿ ಭಾಷಿಕರಾದರೂ ಬೇಂದ್ರೆ ನಮ್ಮ ಭಾಗ್ಯವೆಂಬಂತೆ ಕನ್ನಡದಲ್ಲಿ ಬೆಳಗಿದರು. ಶ್ರೆಷ್ಥವಾದ ಕವನಗಳನ್ನು ಬರೆದರು. ಅತ್ಯುನ್ನತವಾದ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿದರು ವಿಶೇಷವೆಂದರೆ ಉತ್ತರ ಕರ್ನಾಟಕದ ಆಡುಮಾತಿನ ಸತ್ವವನ್ನು ಮತ್ತು ಅದರ ಮೊನಚನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದರು. ಅವರು ಮಾತಾಡಿದ್ದೇ ಹಾಡಾಯಿತು.  ಅಂತಹ ಜೀವನಾನುಭವ ಮತ್ತು ಕಾವ್ಯ ಪ್ರತಿಭೆ ಅವರ ಅಂತರಂಗದಲ್ಲಿ ತುಂಬಿ ತುಳುಕುತ್ತಿತ್ತು.  ಬಡತನ ಹಾಗೂ ಕಷ್ಟಗಳ ನಡುವೆ ಅವರ ಕಾವ್ಯ ಮಾಗಿದ ರಸಪುರ್ಣ ಹಣ್ಣಾಯಿತು.  ಅವರೇ ಹೇಳಿಕೊಂಡಂತೆಬೆಂದ್ರೆ  ಬೇಂದ್ರೆ ಆಗ್ತಾನ. ಕಷ್ಟಗಳ ನಡುವೆ ನೋಯುವುದು, ಬೇಯುವುದು ಬದುಕನ್ನು ಮಾಗಿಸುತ್ತದೆ ಕಾವ್ಯವನ್ನು ಮಿಗಿಲಾಗಿಸುತ್ತದೆ. ಚಪ್ಪಲಿ ಹೊಲಿಯುವ ಮೋಚಿಗೆ ಕೊಡೆಹಿಡಿದು ನಿಲ್ಲುವ ಮಾನವೀಯ ಅಂತಃ ಕರಣ ಅವರದು. ಜಾನಪದೀಯ ಲಯ ಗೆಯ ಗುಣಗಳನ್ನು ತಮ್ಮ ಕಾವ್ಯಕ್ಕೆ ಹೊಂದಿಸಿಕೊಂಡ ಬೇಂದ್ರೆ ತಮ್ಮ ಕವನಗಳಲ್ಲಿ ಪ್ರೇಮ, ಜಿವನಪ್ರಿತಿಯಿಂದ ಹಿಡಿದು ಆಧ್ಯಾತ್ಮದವರೆಗಿನ ಭಾವಗಳನ್ನು ತುಂಬಿ ತುಳುಕಿಸಿದರು. ಅವರ ನೂರಾರು ಅವರ ನುರಾರುಭಾವಗಿತೆಗಳು ಸಹೃದಯರನ್ನು ತಣಿಸಿವೆ, ಬೆರಗಾಗಿಸಿವೆ ಮತ್ತು ಚಿಂತನೆಗೆ ಹಚ್ಚಿವೆ. ಅವರ ಬೇರೆಬೇರೆ ಕವನ ಸಂಗ್ರಹಗಳಿಂದ ಆಯ್ದ ಒಲವಿನ ಗೀತೆಗಳ ಒಂದು ಸಂಗ್ರಹ   ‘ಒಲವೆ ನಮ್ಮ ಬದುಕು’ ಎಂಭತ್ತರ ದಶಕದಲ್ಲಿ ಹೊರಬಂತು. ಅವರ ಒಲವಿನ ಗಿತೆಗಳೆಲ್ಲ  ನಿಲಾಕಾಶದಲ್ಲಿ ಹೊಳೆವ ತಾರೆಗಳಂತೆ ಮೇಲ್ಮಟ್ಟದವು.  ಆ ಕವನಗಳಿಗೆ ಕನ್ನಡದ ಪ್ರಸಿದ್ಧ ಚಿತ್ರಕಾರ  ಶ್ರೀ ಕೆ .ಕೆ. ಹೆಬ್ಬಾರ್ ಇವರ ರೆಖಾಚಿತ್ರಗಳಿದ್ದು ಇನ್ನಷ್ಟು ಮೆರಗನ್ನು ನೀಡಿವೆ.
       ಬೇಂದ್ರೆಯವರ ಪ್ರಸಿದ್ಧ ಭಾವಗೀತೆ   ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು. ಬಡತನದಲ್ಲಿ ಗಟ್ಟಿಗೊಂಡ ಪ್ರೇಮ  ಆ ದಂಪತಿಗಳ ಪಾಲಿಗೆ ಅದೊಂದೇ ಅವರ ಪಾಲಿನ ಸಂಪತ್ತು.   ಬಡವನ ಮಡದಿ ಹಾಡುತ್ತಲೇ-   ಬಡತನದ ಮಧ್ಯದಲ್ಲಿ ನ ಅರಳಿದ ಒಲವನ್ನು ನಾವು ಎಲ್ಲದಕ್ಕೂ ಅಂದರೆ ಅದಕು ಇದಕು ಎದಕು ಬಳಸಿಕೊಂಡೆವು.    ಆತ ಕೊಟ್ಟ ವಸ್ತು ವಡವೆ  ನನಗೆ ಅವಗೆ ಗೊತ್ತು  ಏನೆಂದು ಕೇಳಿದರೆ ಅವಳೇ ಹೇಳುತ್ತಾಳೆ. ಅದೇನೆಂದರೆ ತೋಳುಗಳಿಗೆ ತೋಳಬಂಧಿ, ಕೆನ್ನೆ ತುಂಬಾ ಮುತ್ತು. ತೋಳಬಂಧಿ ಎಂದರೆ ಆತ  ಒಲವಿಂದ  ತನ್ನ ತೋಳತೆಕ್ಕೆಯಲ್ಲಿ ಆಕೆಯನ್ನು ಬಂಧಿಸಿದ್ದು. ಮುತ್ತಿನ ಹಾರ ವೆಂದರೆ ಕೆನ್ನೆ ತುಂಬಾ ನೀಡಿದ ಪ್ರೀತಿಯ ಮುತ್ತು. ಬಡವನಾದ ಪ್ರೇಮಿ ಮಡದಿಗೆ ಕೊಡಿಸಬಹುದಾದ ಆಭರಣ ಇದೆ ಅಲ್ಲವೇ! 
   ಚಳಿಗೆ ಬಿಸಿಲಿಗೊಂದೆ ಹದನ ಅವನ ಮೈಯ ಮುತ್ತೆ ,
ಅದೇ ಘಳಿಗೆ ಮೈಯ ತುಂಬಾ ನನಗೆ ನವಿರು ಬಟ್ಟೆ.
ಬಡವನಾದ ಪ್ರಿಯತಮ ನನಗೆ ತೊಡಿಸಿದ ಬಟ್ಟೆ ಇದು. ನವಿರು ಬಟ್ಟೆ, ರೋಮಾಂಚನದ ಬಟ್ಟೆ ಕವಿಯ ರಸಿಕತನಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ಮತ್ತೆ ಆಕೆ ಹಾಡುತ್ತಾಳೆ  ಕುಂದು ಕೊರತೆ ತೋರಲಿಲ್ಲ ತೋರಲಿಲ್ಲ ಬೇಕು ಹೆಚ್ಚಿಗೇನು ?  ಹೊಟ್ಟೆಗಿತ್ತ ಜೀವ ಫಲವು ತುಟಿಗೆ ಹಾಲು ಜೇನು. ಆತ ಬರೆ ಒಲವಿಂದಲೇ  ತನ್ನ ಹೊಟ್ಟೆ ತುಂಬಿಸಿದ ಅಂದರೆ ಜೀವಫಲವನ್ನಿತ್ತ  ಅಂದರೆ ಮಗುವನ್ನು ಕೊಟ್ಟ. ತುಟಿಗೆ ಹಾಲು ಜೇನಿನ ಅಮೃತ ಸವಿಯನ್ನು ನೀಡಿದ.  ಒಳವೊಂದನ್ನು ಬಿಟ್ಟು ತನ್ನ ಮಡದಿಗೆ ಬೇರೇನನ್ನು ನೀಡಲಾಗಲಿಲ್ಲವಲ್ಲ ಎಂಬ ಕವಿಯ ನೋವು  ಗೀತೆಯ ಆಳದಲ್ಲೆಲ್ಲೋ ಅಡಗಿರಬಹುದೇ?  ಅದೇನೇ ಇದ್ದರೂ ಒಲವಿಗೆ ಒಲವೊಂದನ್ನು ಬಿಟ್ಟು ಬೇರೆ ಯಾವುದರಿಂದಲೂ ತುಲಾಭಾರ ಮಾಡಿಸಲು ಸಾಧ್ಯವಿಲ್ಲ.   

                          R  ಉತ್ತರ ಧ್ರುವದಿಂ ದಕ್ಷಿಣ ಧ್ರುವಕೆ  ಚುಂಬಕ ಗಾಳಿಯು ಬೀಸುತಿದೆ.
ನಿಸರ್ಗದ ಸೌಂದರ್ಯ ಕವಿಗಳನ್ನು ಮೋಡಿಮಾಡಿದೆ, ಬೆರಗುಗೊಳಿಸಿದೆ.  ಬಹಳಷ್ಟು ಕವಿಗಳು ನಿಸರ್ಗದ ಚೆಲುವನ್ನು ಕೇವಲ ಚೆಲುವಾಗಿ ಕಂಡು ಕವಿತೆಯನ್ನು ರಚಿಸಿದರೆ ಬೇಂದ್ರೆಯವರು ನಿಸರ್ಗದ ಚೆಲುವಿನ ಹಿಂದೆ ಸೃಷ್ಟಿಶಕ್ತಿಯಾದ  ಭಗವಂತನ ನೆಲೆಯ ಸ್ವರೂಪವನ್ನು ಗುರುತಿಸಲು ಮುಂದಾಗುತ್ತಾರೆ. ಬೆಳಗನ್ನು ವರ್ಣಿಸುವ ಅವರ ಕವಿತೆಯಲ್ಲಿ  ಬೇಂದ್ರೆ  “ಶಾಂತಿ ರಸವೆ ಪ್ರೀತಿಯಿಂದ ಮೈದೊರಿತಣ್ಣ, ಇದು ಬರಿ ಬೆಳಗಲ್ಲೋ ಅಣ್ಣ “ ಎನ್ನುತ್ತಾ ಓದುಗರನ್ನು ಬೆಳಗಿನ ಸೌಂದರ್ಯದ ಹಿಂದಿರುವ ಚೈತನ್ಯದ ಕಡೆಗೆ  ನೋಡುವಂತೆ ಮಾಡುತ್ತಾರೆ.
  ಅದೇ ರೀತಿ  ಅನಂತ ಪ್ರಣಯ ಎಂಬ ಕವಿತೆಯಲ್ಲಿ ಸೃಷ್ಟಿಯ ಹಿಂದಿರುವ ಚೈತನ್ಯದ ಒಂದು ಮುಖ್ಯ ರೂಪವಾದ ಪ್ರೆಮಭಾವವನ್ನು ಗುರುತಿಸಿದ್ದಾರೆ ಕವಿ ಬೇಂದ್ರೆ. ಕಣ್ಣಿಗೆ ಕಾಣುವ ಸೂರ್ಯ, ಚಂದ್ರ, ನಕ್ಷತ್ರ ಹಾಗು ನಾವು ವಾಸಿಸುವ ಭೂಮಿ ಇವೆಲ್ಲ ಮೂಲ ಚೈತನ್ಯದ ವ್ಯಕ್ತರೂಪಗಳು.   ಇವುಗಳಲ್ಲಿರುವ ಪರಸ್ಪರ ಆಕರ್ಷಣೆಯೇ ಸೃಷ್ಟಿಯ ಜೀವಂತಿಕೆಯ ಒಂದು ಆಧಾರ ಕ್ರಿಯೆಯಾಗಿ ಮುಂದುವರಿಯುತ್ತಿದೆ. ಭಗವಂತನ ಪ್ರೆಮಭಾವವೇ ಸೃಷ್ಟಿರುಪವಾಯಿತು ಎಂದು ಭಾರತೀಯ ದರ್ಶನಗಳು ಹೇಳುತ್ತವೆ.  ಸೂರ್ಯ ಚಂದ್ರ ಭೂಮಿ ಇವುಗಳ ಸುತ್ತಾಟವು ತ್ರಿಕೋಣ ಪ್ರೇಮಕತೆಯಂತೆ ಇದೆ. ಸೂರ್ಯ ಚಂದ್ರರು ಮಿತ್ರರು. ಆದರೆ ಚಂದ್ರನಿಗೆ ಭೂಮಿಯ ಮೇಲೆ ಆಕರ್ಷಣೆ. ಭೂಮಿ ಸೂರ್ಯನ ಸುತ್ತ ತಿರುಗುತ್ತದೆ. ಈ ಸುತ್ತಾಟ ನಿರಂತರ. ಈ ಪ್ರಣಯ ಅನಂತ ಪ್ರಣಯ ವಾಗಿದೆ.     
       ಭೂಮಿಯಲ್ಲಿಯೂ  ಅಷ್ಟೆ. ಉತ್ತರ ಧ್ರುವವು ದಕ್ಷಿಣ ಧ್ರುವವನ್ನು ಆಕರ್ಷಿಸುತ್ತದೆ, ದಕ್ಷಿನವು ಉತ್ತರವನ್ನು ಆಕರ್ಷಿಸುತ್ತವೆ. ವಿಜ್ಞಾನವೂ ಅದನ್ನೇ ಹೇಳುತ್ತದೆ. ಸಜಾತೀಯ ದ್ರುವಗಳು ದೂರ ದೂರ ಸಾಗುತ್ತವೆ. ವಿಜಾತೀಯ ಧ್ರುವಗಳು ಹತ್ತಿರ ಬರುತ್ತವೆ. ಪುರುಷ-ಪ್ರಕೃತಿ, ಗಂಡು-ಹೆಣ್ಣು ಇವುಗಳ ಆಕರ್ಷಣೆ ಎಂದರೆ ಇದೆ ಅಲ್ಲವು? ಈ ಆಕರ್ಷನೆಯಿಲ್ಲದೆ ಸೃಷ್ಟಿ ಮುಂದುವರಿಯಲಾರದು. ಒಂದು ಹದದಲ್ಲಿ ಏರ್ಪಟ್ಟ ಆಕರ್ಷಣೆ-ವಿಕರ್ಷಣೆಗಳೇ  ಸೃಷ್ಟಿಯ ಜೀವಂತಿಕೆಯ , ಮುಂದುವರಿಕೆಯ ಆಧಾರಕ್ರಿಯೇಯಾಗಿದೆ. ಈ ಪ್ರಣಯಭಾವ  ನಿಂತರೆ ಜಗತ್ತು ಸತ್ತ ಹಾಗೆ.
      ಚಂದ್ರನು ಭೂಮಿಯನ್ನು ಪ್ರಣಯಕ್ಕೆ ಕರೆದರೂ ಭೂಮಿಗೆ ಆತನಲ್ಲಿ ಆಸಕ್ತಿಯಿಲ್ಲ. ಚಂದ್ರನ ಸ್ಥಿತಿಯನ್ನಿ ಕವಿ ಹೀಗೆ ವರ್ಣಿಸುತ್ತಾನೆ  “ ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ.”  ತಿಂಗಳು ತಿಂಗಳು ಚಂದನ ಮೈ ತುಂಬುತ್ತದೆ ಮತ್ತೆ ಸೊರಗುತ್ತದೆ. ಆಸೆ, ನಿರೀಕ್ಷೆ, ನಿರಾಸೆಗಳ ಚಕ್ರದಲ್ಲಿ  ಚಂದ್ರ ಸುತ್ತುತ್ತಾನೆ.
    ಇತ್ತ ಭೂಮಿಯು ಸೂರ್ಯನನ್ನು ಮೆಚ್ಚಿಸಲು ಹೆಣಗುತ್ತಿದೆ.  “ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು. ಮಿತ್ರನ ಮೈತ್ರಿಯ ಒಸಗೆ ಮಸಗದೆಯೆ  ಮರುಕದ ಧಾರೆಯ ಮಸೆಯಿಸಿತು “  ಋತು ಋತುವಿನಲ್ಲೂ ಭೂಮಿ ಹೊಸಹೊಸ ರೀತಿಯಲ್ಲಿ ಸಿಂಗಾರಗೊಂಡು ಮಿತ್ರ ಅಂದರೆ ಸೂರ್ಯನನ್ನು ಆಕರ್ಷಿಸಲು ನೋಡಿತು. ಆದರೆ ಅದು ಸಾಧ್ಯವಾಗದಿರಲು ಮರುಕದ ಧಾರೆಯ ಅಂದರೆ ಮಳೆಯನ್ನೂ ಸುರಿಸಿತು. ಈ ಋತು ಚಕ್ರ ಸೂರ್ಯನ ಆಕರ್ಷಣೆಗೆ ಭೂಮಿ ಹೂಡಿದ ಸಂಚೆ?   ಪ್ರಯತ್ನ ನಿಂತಿಲ್ಲ ಮತ್ತೆ ಮತ್ತೆ ಮುಂದುವರಿದಿದೆ.
      ಸೂರ್ಯ, ಚಂದ್ರ, ಭೂಮಿ ಇವರ ನಡುವಿನ ಪ್ರನಯದಾತವನ್ನು ನಕ್ಷತ್ರಗಳು ಕಣ್ಣು ಮಿಟುಕಿಸದೆ ನೋಡುತ್ತಿವೆ. “ ಅಕ್ಷಿ ನಿಮೀಲನ ಮಾಡದೆ ನಕ್ಷತ್ರದ ಗಣ ಗಗನದಿ ಹಾರಾದಿದೆ.  ಬಿದಿಗೆಯ ಬಿಂಬಾಧರದಲಿ ಇಂದಿಗೂ ಮಿಲನದ ಚಿಹ್ನವು ತೋರದಿದೆ.”     ತುಟಿಯಂತೆ ಕಾಣುವ ಬಿದಿಗೆಯ ಚಂದ್ರ ನಿಗೆ ಇನ್ನೂ ಮಿಲನದ ಭಾಗ್ಯ ಸಿಕ್ಕಿಲ್ಲ.
     ಪುಟ್ಟಣ್ಣ ಕಣಗಾಲರು ತಮ್ಮ ಶರಪಂಜರ ಎಂಬ ಸಿನೆಮಾದಲ್ಲಿ ಈ ಹಾಡನ್ನು ಬಳಸಿಕೊಂಡಿದ್ದಾರೆ

  
ನೀ ಹೀಂಗ ನೋಡಬೇಡ ನನ್ನ, ನೀ ಹೀಂಗ ನೋಡಬೇಡ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ?
ಬೇಂದ್ರೆಯವರ ಇನ್ನೊಂದು ಮನಕಲಕುವ ಭಾವಗೀತೆ   ನೀ ಹೀಂಗ ನೋಡಬೇಡ ನನ್ನ, ನೀ ಹೀಂಗ ನೋಡಬೇಡ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ? ಬೇಂದ್ರೆ ಹಾಡುತ್ತಾರೆ  ‘ ಎನ್ನ ಪಾಡೆನಗಿರಲಿ  ಅದರ ಹಾಡನ್ನಷ್ಟೆ ನಿದುವೇನು ರಸಿಕ ನಿನಗೆ ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹನಿಸು ನನಗೆ’  ತಮ್ಮ ವೈಯಕ್ತಿಕ ಬದುಕಿನ ಕಷ್ಟ-ನೋವು ಗಳನ್ನೆಲ್ಲ ಹಾಡಾಗಿಸಿದವರು ಬೇಂದ್ರೆ.   ನೀ ಹೀಂಗ ನೋಡಬೇಡ ನನ್ನ, ಎಂಬ ಗೀತೆಯೂ ಕೂಡಾ  ಅಂತಹ ಒಂದು ಕಷ್ಟದ ಸಂದರ್ಭದಲ್ಲಿ ಶೋಕರಸದ ಹಾಡಾಗಿ ಹುಟ್ಟಿದ್ದಾಗಿದೆ. ತಮ್ಮ ಒಂಭತ್ತು ಮಕ್ಕಳಲ್ಲಿ ಆರು ಮಕ್ಕಳನ್ನು ಅಕಾಲಿಕವಾಗಿ ಕಳೆದುಕೊಂಡ ದುರ್ದೈವಿ ಅವರು. ಒಂದೂವರೆ ತಿಂಗಳ ಹೆಣ್ಣು ಮಗು ಲಲಿತಾ ಜೀವ ಬಿಡುತ್ತಿರುವ ಸಂದರ್ಭದಲ್ಲಿ ಅದನ್ನು ಕಾಲಮೇಲೆ ಮಲಗಿಸಿಕೊಂಡ ಅವರ ಹೆಂಡತಿ ತಮ್ಮ ಮಗುವನ್ನು ಉಳಿಸಲು ಏನಾದರೂ ಮಾಡಿ ಎಂಬಂತೆ ಗಂಡನನ್ನು ನೋಡುತ್ತಿದ್ದಾಳೆ. ಸಾವಿನ ಮುಂದೆ ಎಲ್ಲರೂ ಅಸಹಾಯಕರೇ ! ಆಕೆಯ ಆರ್ತ ನೋಟವನ್ನು ಹೇಗೆ ಎದುರಿಸಲಾದೀತು? ಯಾರಿಗೆ ಎದುರಿಸಲಾದೀತು?  ನೀ ಹೀಂಗ ನೋಡಬೇಡ ನನ್ನ,  ನೀ ಹೀಂಗ ನೋಡಬೇಡ ನನ್ನ,  ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ? ನಾವಿಬ್ಬರೂ ಇಲ್ಲ ಅಸಹಾಯಕರು.
    ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ  ಬಂಡಿ
   ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯ ದಂಡಿ?
ಸಂಸಾರವೆಂಬ ದುಃಖ ಸಾಗರದಾಚೆದಡವೊಂದು ಇರುವುದೆಂದು ತಾನೂ ತಿಳಿದಿರುವೆನಾದರೂ ಅದು ಎಲ್ಲಿದೆ ಹೇಗಿದೆ ಎಂದು ತಿಲಿದಿಲ್ಲವೆನ್ನುತ್ತಾನೆ ಕವಿ. ಮರಣಾಸನ್ನ  ಮಗು ಹಾಗು ಅದನ್ನು ಕಾಲ ಮೇಲೆ ಮಲಗಿಸಿಕೊಂಡಿರುವ ಮಡದಿ ಇಬ್ಬರನ್ನೂ ನೋಡಿ     “ಮಲಗಿರುವ ಕುಸು ಮಲಗಿರಲಿ ಅಲ್ಲಿ ಮುಂದಿನದು ದೇವರ ಚಿತ್ತ
                         ನಾ ತಡೀಲಾರೆ ಅದು,ಯಾಕೆ ನೋಡತೀ ಮತ್ತ ಮತ್ತ ನೀ ಇತ್ತ?”   
  ನಾ ತಡೀಲಾರೆ ಅದು – ಸಾವನ್ನು ಯಾರಿಂದ ತಡೆಯಲಾದೀತು? ನನ್ನನ್ನು ನೀ ಹೀಗೇಕೆ ಭರವಸೆಯಿಂದ ನೋಡುವಿ? ನಾನೂ ನಿನ್ನಷ್ಟೇ ಅಸಹಾಯಕ.
    ತಂಬುಳ ಹಾಕದಿದ್ದರೂ ಮಡದಿಯ ತುಟಿ  ಗೋಣಿಯ ಬಾಯೊಳಗಿನ ಕೆಂಪು ಹಣ್ಣಿನಂತೆ ಕೆಂಪಾಗಿರುತ್ತಿದ್ದವು. ಆದರಿಂದು ಆ ತುಟಿ ಬಣ್ಣಗೆಟ್ಟಿದೆ. ತನ್ನ ಕೈ ಹಿಡಿದಿದ್ದರಿಂದಲೇ ಆಕೆಗೆ ಈ ಪರಿ ಕಷ್ಟಗಳನ್ನು ನೋಡಬೇಕಾಯಿತು ಎಂದು ಕವಿ ತನ್ನನ್ನು ತಾನೂ  ಹಳಿದುಕೊಳ್ಳುತ್ತಾನೆ.  “ಸಾವನ ತನ್ನ ಕೈ ಸವರಿತಿಲ್ಲಿ ಬಂತೆನಗೆ ಇಲ್ಲದ ಭೀತಿ”  ಎಂದು ಭಯಗೊಳ್ಳುತ್ತಾನೆ.
  ತಂಪು ಕೊಡುವವನು ಎಂದು ತಿಳಿದು ನೀನು ನನ್ನ ಕೈ ಹಿಡಿದೆ ಆದರೆ ಅದು ಬೂದಿ  ಮುಚ್ಚಿದ ಕೆಂಡದಂತಾಯ್ತು.  ಭೂಮಿ ಮೇಲೆ ಆಕಾಶವೇ ಕಪ್ಪರಿಸಿ ಬಿದ್ದರೂ ಭುಮಿಗೇನೂ ಆಗದು ಎಂದು ನೀನು ತಿಳಿದಿದ್ದೆ. ಹಾಗಂತ ನಂಬಿ ನೀನು ನನ್ನ ಕೈ ಹಿಡಿದೆ. ನನ್ನನ್ನು ನೀನು ದೇವರೆಂದು ತಿಳಿದಿದ್ದೆಯೇನು? ನೋಡೀಗ, ಆಕಾಶವೇ ಕಳಚಿ ಬಿದ್ದಿದೆ. ನನ್ನಿಂದೇನೂ ಮಾಡಲಾಗದು. ಈ ಸಾವಿನೆದುರು ನಾನು ಅಸಹಾಯಕ.
     ಇಬ್ಬನಿ ತೊಳೆದರು ಹಾಲು ಮೆಟ್ಟಿದ ಕವಳಿ  ಕಂಟಿಯ ಹಣ್ಣು   ಕವಳಿ ಕಂಟಿಯ ಹಣ್ಣಿನ ಹಾಗೆ ಹೊಳೆಯುತ್ತಿದ್ದ ನಿನ್ನ ಕಣ್ಣು ಇಂದು ನಿಸ್ತೇಜವಾಗಿದೆ.  ಹುಣ್ಣಿಮೆಯ ಚಂದಿರನ ಹಾಗಿದ್ದ ನಿನ್ನ  ಮುಖ ಇಂದು ಬಾಡಿಹೋಗಿದೆ. ಇ ಸಂದರ್ಭದಲ್ಲಿ ಕವಿ ಬಳಸಿದ ಉಪಮೆ ಕನ್ನಡ ಸಾಹಿತ್ಯದಲ್ಲೇ ಅತ್ಯಪರೂಪದ ಹಾಗೂ ಅತ್ಯಂತ ಸಂವೇದನಾಶೀಲ ಉಪಮೆ ಎಂದು ಗುರುತಿಸಲ್ಪಟ್ಟಿದೆ.    “ ಹುಣ್ಣಿಮೆ ಚಂದಿರನ ಹೆಣ ಬಂತೊ ಮುಗಿಲಾಗ ತೆಳುತಾ ಹಗಲ ”  ಹೆಣದಂತೆ ನಿಸ್ತೇಜಗೊಂಡ ಹೆಂಡತಿಯ ಮುಖ ಹೀಗಿತ್ತು ಎಂದು ಹೇಳಿ ಕವಿ ಓದುಗರಲ್ಲಿ ದಿಗ್ಭ್ರಮೆ ಹುಟ್ಟಿಸುತ್ತಾರೆ. ಹುಣ್ಣಿಮೆಯ ಚಂದ್ರ ಹಗಲಲ್ಲಿ ಕಾಣನು. ಆದರೆ ಇಂದು ಹುಣ್ಣಿಮೆ ಚಂದಿರ ಹೆಣದಂತೆ ನಿಸ್ತೇಜಗೊಂಡು  ಹಗಲ ಹೊತ್ತಿನಲ್ಲಿ ಅಂದರೆ ಅಕಾಲದಲ್ಲಿ ತೇಲಿ ಬರುತ್ತಲಿದೆ ಅದನ್ನು ನಾನು ನೋಡುತ್ತಿದ್ದೇನೆ ಎಂದು ಕವಿ ಶೋಕಿಸುತ್ತಾನೆ.
  ನಮ್ಮ ಹೃದಯವನ್ನು  ಒದ್ದೆಮಾಡಿ ತೊಳೆದು ಸ್ವಚ್ಚವಾಗಿಟ್ಟುಕೊಳ್ಳಲು ಇಂಥ ಹಾಡುಗಳನ್ನು ಮತ್ತೆ ಮತ್ತೆ ಕೇಳಬೇಕು.


.

                         ಬೆಳಗು ಬಾ ಹಣತೆಯನು ನನ್ನೆದೆಯ ಗುಡಿಯಲ್ಲಿ ದಿವ್ಯ ದೀಪಾವಳಿಯ ಶುಭ ಘಳಿಗೆಯಲ್ಲಿ .
 ಕವಿ ಜೀ. ಎಸ. ಶಿವರುದ್ರಪ್ಪ. ಭಾರತಿಯ ಸಂಸ್ಕೃತಿಯ ಮುಖ್ಯ ಲಕ್ಷಣಗಳಲ್ಲಿ ಅದರ ವೈಶಿಷ್ಟಪುರ್ಣವಾದ ಹಬ್ಬಗಳ ಆಚರಣೆಯೂ ಒಂದು.  ವರ್ಷಪೂರ್ತಿ ಹಬ್ಬಗಳು ನಡೆದೇ ಇದ್ದರೂ ಪ್ರತಿ ಹಬ್ಬದ ಹಿಂದಿರುವ ಕಾರಣಗಳೂ ಅಷ್ಟೇ ವೈವಿಧ್ಯಮಯವಾಗಿವೆ. ಧಾರ್ಮಿಕ, ಸಾಮಾಜಿಕ, ಸಾಂಘಿಕ, ಐತಿಹಾಸಿಕ, ಪ್ರಾಕೃತಿಕ, ಸ್ವಾಸ್ಥ್ಯಸಂಬಂಧಿ ಹೀಗೆ ಒಂದಲ್ಲ ಒಂದು ಕಾರಣಗಳು ಹಬ್ಬಗಳ ಹಿಂದೆ ಇದ್ದು ಆಚರಣೆಯನ್ನು ಅರ್ಥಪೂರ್ಣಗೊಳಿಸಿವೆ.   
    ಬೆಳಕಿನ ಹಬ್ಬ ದೀಪಾವಳಿ. ಅಂದು ಮನೆಮನೆಗಳಲ್ಲಿ, ಮಂದಿರಗಳಲ್ಲಿ ಹಣತೆಯನ್ನು ಹಚ್ಚಿ ಬೆಳಗುತ್ತಾರೆ. ಮನೆ-ಮಂದಿರಗಳಲ್ಲಷ್ಟೇ  ಬೆಳಗಿದರೆ ಸಾಲದು  ಮನಮಂದಿರವೂ ಬೆಳಗಬೇಕೆಂಬುದು ಕವಿ ಜೀ. ಎಸ. ಶಿವರುದ್ರಪ್ಪನವರ ಆಶಯ . ದಿವ್ಯ ಡಿಪ್[ಆವಳಿಯ ಸಂದರ್ಭದಲ್ಲಿ ನಮ್ಮ ಎದೆಗುದಿಯಲ್ಲಿ ಮದುಅಗಟ್ಟಿದ ಕಟ್ಟಲು, ಅಜ್ಞಾನ ಹೊರಟು ಹೋಗಲಿ. ಸುಜ್ಞಾನ ಸದ್ಭಾವಗಳು ನಮ್ಮ ಹೃದಯವನ್ನು ಬೆಳಗಲಿ ಎಂದು ಕವಿ ತಮ್ಮ ಬೆಳಗು ಬಾ ಹಣತೆಯನು ಭಾವಗಿತೆಯಲ್ಲಿ ಹಾಡಿದ್ದಾರೆ.
       ಬೆಳಗು ಬಾ ಓ ಗೆಳತಿ ನನ್ನ ಒಲವಿನ ಪ್ರಣತಿ ಶತಮಾನಗಳ ತಿಮಿರ ಮುಸುಕಿದೀ ಮಂದಿರದ ಎದೆಯಾಳದಲಿ .    ಶತಶತಮಾನಗಳಿಂದಲೂ  ನಮ್ಮವರ ಎದೆಯಾಳದಲ್ಲಿ ಜಾತಿಧರ್ಮಗಲೆಂಬ ಸಂಕುಚಿತ ಭಾವ ಮುಧನಂಬಿಕೆಗಳ ಕತ್ತಲೆ ತುಂಬಿದೆ. ಈ ತಿಮಿರವನ್ನು ಓಡಿಸಲು ನಮ್ಮ ಎದೆಯಾಳದಲ್ಲಿ ಹಣತೆಯನ್ನು ಬೆಳಗು ಬಾ ಎಂದು ಕವಿ ಒಲವಿನ ಗೆಳತಿಯಲ್ಲಿ ಕೋರುತ್ತಾರೆ.
     ಎದೆಯೇಮ್ಬುದು ಗುಡಿಯಷ್ಟೇ ಪವಿತ್ರವೂ ಕೂಡಾ. ಅಲ್ಲಿ ಪ್ರತಿನಿತ್ಯವೂ ಪೂಜೆ-ಪುನಸ್ಕಾರಗಳು ನಡೆಯಬೇಕು. ಎದೆಗುಡಿಯನ್ನು  ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಎದೆಗುಡಿಯಲ್ಲಿ ಭಕ್ತಿ ಪ್ರೇಮ ಮುಂತಾದ ಸದ್ಭಾವಗಳಿಂದ ರಂಗವಲ್ಲಿಯನ್ನು ಬಿಡಿಸಿ ಚೊಕ್ಕತವಾಗಿ ಇಟ್ಟುಕೊಳ್ಳಬೇಕು, ಸುಂದರವಾಗಿ ಇಟ್ಟುಕೊಳ್ಳಬೇಕು.  ಜಡವಾಗಿರುವ ನನ್ನಲ್ಲಿ ಚೇತನವನ್ನು ತುಂಬಿರುವ ನೀನು ಸದಾ ನನಗೆ ಪ್ರೆರನೆಯಾಗಿರುವ ನೀನು, ನನ್ನ ಎದೆಗುಡಿಯನ್ನು ಸದಾ ನಿನ್ನ ಒಲವಿನ ಹಣತೆಯಿಂದ ಬೆಳಗುತ್ತಿರು.  ನೀನು ನೀಡಿದ ಆನಂದದಿಂದ ನನ್ನ ಎದೆಯು  ಮಳೆಬಂದ ಮರುದಿನದ ಮುಮ್ಬೇಳಗಿನಂತೆ ಶೋಭಿಸುತ್ತಿದೆ. ಆದ್ದರಿಂದ ನೀನು ನನ್ನ ಅಜ್ಞಾನವನ್ನೂ ಜದತ್ವವನ್ನೂ ಕಳೆಯಲು ಬಾ. ಪ್ರೇಮವೆಂಬ ಹಣತೆಯನ್ನು ಬೆಳಗಿ ನನ್ನ ಎದೆಗುಡಿಯನ್ನು ಸದಾ ಬೆಳಗಲು ಬಾ. ಹೊರಗೆಲ್ಲಾ ದೀಪಾವಳಿ, ಮನೆಯೊಳಗೇ ಸೂತಕದ ಛಾಯೆಯಾದರೆ  ಏನು  ಚೆಂದ? ಮೊದಲು ನಮ್ಮ ಮೈ ಮನ ಬೆಳಗಬೇಕು. ಆಗ ಜಗತ್ತು ಸಹಜವಾಗಿ  ದೇದೀಪ್ಯಮಾನವಾಗಿ ಕಾಣುತ್ತದೆ. 
  
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.....  
  ಯುಗಾದಿ ಇದು ಭಾರತೀಯರು ಆಚರಿಸುವ ಒಂದು ಮುಖ್ಯವಾದ ಹಬ್ಬ. ಹಿಂದೂ ಕಾಲಮಾನ ಪದ್ಧತಿಯ ಪ್ರಕಾರ ಹೊಸ ವರುಷ ಪ್ರಾರಂಭವಾಗುವ ದಿನ. ಅಂದು ಚೈತ್ರಮಾಸದ ಶುಕ್ಲಪಕ್ಷದ ಪ್ರತಿಪದೆ ಅಂದರೆ ಪಾಡ್ಯದ ದಿನ. ಧಾರ್ಮಿಕವಾದ, ಪೌರಾಣಿಕವಾದ ಕಾರಣಗಳ ಜೊತೆಗೆ ಹೊಸವರುಷ ಪ್ರಾರಂಭವಾಗುವ ದಿನವಾದ್ದರಿಂದ  ಸಂಭ್ರಮಾಚರಣೆಯ  ಸಂದರ್ಭವೂ ಹೌದು. ಅದೇ ರೀತಿ ಪ್ರಕೃತಿಯಲ್ಲಿಯೂ ವಸಂತಕಾಲ ಆರಂಭವಾಗುವ ಹೊತ್ತು. ಪ್ರಕೃತಿ ಹೂ ಚಿಗುರುಗಳನ್ನು ಹೊದ್ದು ಅಂದವಾಗಿ ಕಾಣುವ ಸಮಯವೂ ಇದೇ. ಸಹಜವಾಗಿ ಕವಿ ಮನಸ್ಸು ಇದಕ್ಕೆ ಮಾರು ಹೋಗುತ್ತದೆ. ಕವಿ ಬೇಂದ್ರೆಯವರು ಹೊಸವರುಷದ ಮೊದಲ ಹಬ್ಬ ಈ ಯುಗಾದಿಯ ಕುರಿತು ಸುಂದರವಾದ ಗೀತೆಯನ್ನು ರಚಿಸಿದ್ದಾರೆ. ಯುಗಾದಿಯಂದು ಅವರು ಬರೆದ “ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ “ ಹಾಡು ಸಹಜವಾಗಿ ಎಲ್ಲರಿಗೂ ನೆನಪಿಗೆ ಬರುವಷ್ಟು ಪ್ರಸಿದ್ಧವಾಗಿದೆ.   ಹೊಂಗೆ ಹೂವ ತೊಂಗಲಲ್ಲಿ ಭ್ರಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ. ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ.    ಬಿಜೋತ್ಪಾದನೆಯ ಹಿನ್ನೆಲೆಯಲ್ಲಿ ಗಿಡಮರಗಳಲ್ಲಿ ಬಣ್ಣಬಣ್ಣದ ಹೂ ಅರಳುತ್ತವೆ. ಕಂಪನ್ನು ಸುಸುತ್ತವೆ, ದುಂಬಿಗಳನ್ನು ಆಕರ್ಶಿಸಿ ಜೇನನ್ನು ನೀಡಿ  ತನ್ನ ಕೆಲಸವನ್ನು ಮಾಡಿಸಿಕೊಲ್ಲುತ್ತವೆ. ಜೀವಜಾಲದ ನಡುವೆ ಏರ್ಪಟ್ಟ ಒಳ ಒಪ್ಪಂದವಿದು . ಅದೇ ರೀತಿ ಮನುಷ್ಯನ ಕಷ್ಟಕರವಾದ ಕಹಿ ಬಾಳಿನಲ್ಲಿ ಮಕ್ಕಳು ಸಂತೋಷವನ್ನು ಭರವಸೆಯನ್ನು ಹೆಚ್ಚಿಸುತ್ತಾರೆ.
       ಕಮ್ಮನೆ ಬಾಣಕ್ಕೆ ಸೋತು, ಜುಮ್ಮನೆ ಮಾಮರವು ಹೂತು ಕಾಮಗಾಗಿ ಕಾದಿದೆ .ಸುಗ್ಗಿ ಸುಗ್ಗಿ ಸುಗ್ಗಿ ಎಂದು ಹಿಗ್ಗಿ ಗಿಳಿಯ ಸಾಲು ಸಾಲು ತೋರಣದೊಲು ಕೋದಿದೆ. ಕವಿ ಪ್ರಕೃತಿ ವ್ಯಾಪಾರದ ಹಿಂದಿನ ಪ್ರೇರಣೆಯನ್ನು ಇಲ್ಲಿ ಗುರುತಿಸುತ್ತಾನೆ.
      ಪ್ರಕೃತಿಯ ಗಿಡಮರಗಳಿಗೆ – ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು (ಅಖಿಲ ಜೀವ ಜಾತಕೆ. )  ಆದರೆ ಮನುಷ್ಯನಿಗೆ ಮಾತ್ರ  “ ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ “  ಏಕೆ ಹೀಗೆ ಎಂದು ಕವಿ ಪ್ರಶ್ನೆ ಕೇಳುತ್ತಾನೆ. ಕವಿಯ ಬಯಕೆ ಏನೆಂದರೆ ಗಿಡಮರಗಳಿಗೆ ವರುಷಕ್ಕೊಮ್ಮೆ ಹೊಸ ಜನ್ಮ, ಹೊಸ ಬಾಲ್ಯ, ಹೊಸ ಹರೆಯದ  ಅನುಭವವಾದರೆ ಅವಸ್ಥೆಗಳು ಪ್ರಾಪ್ತಿಯಾಗುವುದಾದರೆ ಮನುಷ್ಯನಿಗೆ ಇದಕ್ಕಿಂತಲೂ ಬೇಗ ಅಂದರೆ  “ ನಿದ್ದೆಗೊಮ್ಮೆ ನಿತ್ಯ ಮರಣ ಎದ್ದಸಲ ನವಿನ ಜನನ “ ಏಕಾಗಬಾರದು  ಎಂದು ಕೇಳುತ್ತಾರೆ. ಚಿರಂಜೀವಿಯಾದ ಎಲೆ ಕಾಮದೆವನೆ, - (ಸನತ್ಕುಮಾರನೇ  , ನಿನಗೆ  ಇಂಥ ಲೀಲೆ ಸೇರದೆ? ಗಿಡಮರಗಳ ಪಾಲಿಗೆ ವರ್ಷಂಪ್ರತಿ ಒದಗಿಸಿದ ನವ ಚೈತನ್ಯವನ್ನು ನಮಗೇಕೆ ನಿದಲಾರೆ?  ದಿನದಿನವೂ ಹೊಸ ಜನ್ಮ, ಹೊಸ ಬಾಲ್ಯ, ಹರೆಯ  ಬಂದರೆ ಎಷ್ಟು ಚೆನ್ನಾಗಿತ್ತು ಎಂದು  ಕೇಳುತ್ತಾನೆ. ಪ್ರಕೃತಿಗೆ ಹೊಸ ಹೊಸತನ್ನು ವರುಷ ವರುಷವೂ ನಿಡುವ ಯುಗಾದಿ ಮಾನವನನ್ನು ಮಾತ್ರ ಮರೆತಿದೆ ಎಂಬ ವಿಷಾದವನ್ನು ಕವಿ ವ್ಯಕ್ತಪಡಿಸುತ್ತಾನೆ ಕವಿ.
  
         


 ತುಂಬಿ ಬಂದಿತ್ತ ತಂಗಿ ತುಂಬಿ ಬಂದಿತ್ತ
ದ. ರಾ ಬೇಂದ್ರೆಯವರು ಕವಿಗಳಷ್ಟೇ ಅಲ್ಲ; ನಾಟಕಕಾರರೂ ಕೂಡಾ. ಅವರ ಸಾಯೋಆಟ  ಎಂಬುದು ಅತ್ಯುತ್ತಮ ವಿಡಂಬನಾತ್ಮಕ ನಾಟಕವಾಗಿ ರಂಗಭೂಮಿಯಲ್ಲಿ ಪ್ರಯೋಗಗೊಂದು ಮನೆಮಾತಾದದದ್ದು ಎಲ್ಲರಿಗೂ ತಿಳಿದ ವಿಚಾರವೇ.  ಹಿಂದೆ ಅವರು ತಲೆದಂಡ ಎಂಬ ನಾಟಕವನ್ನು ಬರೆದಿದ್ದರು. ಆದರೆ ಅದೇಕೋ ಪ್ರಕಟವಾಗಲಿಲ್ಲ. ನಂತರ ಗಿರೀಶ್ ಕಾರ್ನಾಡ್ ಅವರು ಅದೇ ವಸ್ತುವನ್ನು ಇಟ್ಟುಕೊಂಡು  ಅಂದರೆ ಬಸವಣ್ಣನ ಜಿವನವನ್ನಾಧರಿಸಿ ಬೇಂದ್ರೆಯವರ ಅನುಮತಿಯನ್ನು ಪಡೆದು ಅದೆ ಹೆಸರಿನಲ್ಲಿ ನಾಟಕವನ್ನು ಬರೆದರು. ಬೇಂದ್ರೆಯವರ ತಲೆದಂಡ ನಾಟಕದಲ್ಲಿ ಬಸವಣ್ಣನವರ ಸಮಾಧಿಯ ಕೆಲಸ ನಡೆಯುತ್ತಿರುವಾಗ ಅಲ್ಲಿಗೆ ಬರುವ ಜಂಗಮನೊಬ್ಬ  ಏಕತಾರಿ ಹಿಡಿದು ಬಸವಣ್ಣನವರ ಕುರಿತು ತುಂ,ತುಂ,   ತುಂ,ತುಂ,   ತುಂ,ತುಂ,   ತುಂ,ತುಂ,   ತುಂಬಿ ಬಂದಿತ್ತ ತಂಗಿ ತುಂಬಿ ಬಂದಿತ್ತ ಎಂದು ಹಾಡುತ್ತಾನೆ. ಗೀ ಗೀ ಪದದ ಗತ್ತಿನಲ್ಲಿ ಹಾಡನ್ನು ಹೆಣೆಯಲಾಗಿದೆ.  ೧೯೪೭ ರಲ್ಲಿ ಸ್ವತಃ ಬೇಂದ್ರೆಯವರೇ ಏಕತಾರಿ ಹಿಡಿದು ಈ ಹಾಡನ್ನು ಹಾದಿ ತೋರಿಸಿದರಂತೆ. ಆ ಹಾಡನ್ನು ಎಚ್. ಎಂ.ವಿ ಕಂಪನಿ ಅಂದಿನ ಗ್ರಾಮೊಪೋನಿನಲ್ಲಿ ಧ್ವನಿಮುದ್ರಿಸಿಕೊಂದಿತ್ತು.  ಮೂರು ನುಡಿಯನ್ನು ಒಳಗೊಂಡಿರುವ ಈಹಾದು ಬಸವಣ್ಣನವರ ಜೀವನದ ಮೂರು ಹಂತವನ್ನು ವರ್ಣಿಸುತ್ತಾ ಸಾಗುತ್ತದೆ.
       “ಬೆಳಕಿಗಿಂತ ಬೆಳ್ಳಗೆ ಇತ್ತ, ಗಾಳಿಗಿಂತ ತೆಳ್ಳಗೆ ಇತ್ತ “
ದೀನದಲಿತರ ಉದ್ಧಾರಕ್ಕಾಗಿ ಆತ್ಮವೊಂದು ಭೂಮಿಗೆ ಬಂದಿತ್ತು. ಪತಿತೊದ್ಧಾರದ ಈ ಶಕ್ತಿ ಬೆಳಕಿಗಿಂತ ಬೆಳ್ಳಗೆ ಇತ್ತು, ಗಾಳಿಗಿಂತ ತೆಳ್ಳಗೆ ಇತ್ತು ಎಂದು ಹಾಡಿನಲ್ಲಿ ವರ್ಣಿಸಲಾಗಿದೆ. ಬಸವಣ್ಣನವರ ವ್ಯಕ್ತಿತ್ವವೂ ಹಾಗೆಯೇ ಇತ್ತು. ಭಗವದ್ಗೀತೆಯಲ್ಲಿ ಹೇಳಿದ ಹಾಗೆ  “ ನೈನಂ ಚಿಂದಂತಿ    ಶಸ್ತ್ರಾಣಿ, ನೈನಂ ದಹತಿ ಪಾವಕಃ “ ಎಂಬಂತೆ ಆತ್ಮವನ್ನು ಶಸ್ತ್ರವು ತುಂಡರಿಸಲಾರದು,  ಬೆಂಕಿಯು ಸುದಲಾರದು.  ಅವತಾರವೆತ್ತಿಬಂದ ಆ ಶಕ್ತಿಯನ್ನು ತಡೆಯಲಾದೀತೆ? ಸಗರನ ಮಕ್ಕಳ ಉದ್ಧಾರಕ್ಕೆ  ಜಡಿಯಿಂದಿಳಿದ ಗಂಗೆಯ ಹಾಗೆ ಛಂಗನೆ ನೆಗೆದು ಬಂತು. ಗಂಗೆ ಹರಿದು ಬಂದಂತೆ ಬಸವಣ್ಣನವರು ಜನ್ಮವೆತ್ತಿ ಬಂಡು ಸಮಾನತೆಯ ತತ್ವವನ್ನು ನಾಡಿನ ಮೂಳೆ ಮೂಲೆಗೂ ಹರಡಿದರು. ಅವರ ತತ್ವವು  “ಅಡಿಮುಡಿಗೂಡಿ ನಡುವಂತೆಲ್ಲ ಮುಳುಗಿಸಿ ಬಿಟ್ಟಿತ್ತ ತಂಗಿ ತುಂಬಿ ಬಂದಿತ್ತ ತುಂ,ತುಂ, ತುಂ,ತುಂ,   ತುಂ,ತುಂ,   ತುಂ,ತುಂ,   ತುಂಬಿ ಬಂದಿತ್ತ  ತಂಗಿ ತುಂಬಿ ಬಂದಿತ್ತ   .“     ಸಂಪೂರ್ಣ ತುಂಬಿತ್ತು ಎಂಬುದರ ತೀವ್ರತೆಯನ್ನು ಸಾರಲು ತುಂ ತುಂ ತುಂ,ತುಂ,   ತುಂ,ತುಂ,   ತುಂ,ತುಂ,   ಎಂದು ಹಲವು ಬಾರಿ ಬಳಸಿದ್ದಾರೆ.
   ಬಸವಣ್ಣನವರ ಬದುಕು ಹೇಗೆ ಅಂದಿನ ಸಮಾಜವನ್ನು ಮೆಳಕ್ಕೆತ್ತಿತು, ಹಾಗೂ  ಅವರ ತತ್ವಾದರ್ಶಗಳ ಕಂಪು ಹೇಗೆ ಹರಡಿತು ಎಂಬುದನ್ನು ಎರಡನೇ ನುಡಿಯಲ್ಲಿ ಹಾಡಿದ್ದಾರೆ.
      ಮರ್ಮದ ಮಾತು ಆಡಿದಾಂಗ ಮರ್ಮಕ ಮುಟ್ಟಿತ್ತ , ಬೆಳಕಿಗೆ ಮರಳಿ ಕಮಲವರಲಿ ಜೆನ ಬಿಟ್ಟಿತ್ತ ತಂಗಿ  ತುಂಬಿ ಬಂದಿತ್ತ...     ಧರ್ಮದ ಮರ್ಮವನ್ನು ನಮ್ಮ ಮರ್ಮಕ್ಕೆ ಮುಟ್ಟುವ ಹಾಗೆ ಅಂದರೆ ನಮ್ಮ  ಒಳಮನಸ್ಸಿಗೆ ಮುಟ್ಟುವ ಹಾಗೆ ಬಸವಣ್ಣನವರು  ಹೇಳಿದರು.   “ ಬೆಳಕಿನೆಡೆಗೆ ಹೊರಳುವ ಕಮಲದ ಹಾಗೆ “  ಅಂದರೆ ಜನರು ಮೂಢ ನಂಬಿಕೆಗಳನ್ನು  ತೊರೆದು ನಿಜವಾದ ಧರ್ಮದ ಕಡೆಗೆ ಸಾಗಿದರು ಎಂಬುದನ್ನು ಈ ಮಾತು ಧ್ವನಿಸುತ್ತದೆ.  ಜೇನನು ಬಿಟ್ಟಿತ್ತು ಅಂದರೆ ಮಾನವ ಧರ್ಮದ ಶ್ರೆಶ್ಥತೆಯನ್ನು ಅವರು ತೋರಿದರು ಎಂದರ್ಥ. 
       ಹಾಗಿದ್ದಾಗ್ಯೂ ಬಸವಣ್ಣನವರ ಅಂತ್ಯ ದುರಂತ ಕಂಡಿತು.   ಇದು ಆ ಕಾಲದ ಕಟು ಸತ್ಯ.  ಈ ಕಾಲಧರ್ಮವನ್ನು ಕವಿ   “ ಇರುಳ ಮಬ್ಬಿನ್ಯಾಗ  ಹಗಲಿನ ಬೆಳಕು ಕರಗಿದಂತಿತ್ತ “ ಎಂದು ಮೂರನೆ ನುಡಿಯಲ್ಲಿ ಹಾಡಿದ್ದಾರೆ. ಅವರ ತತ್ವವು ದುಬಿಯ ಗುಂಜಾರವಾದ ಹಾಗೆ ಒಂದು ಗುಂಗನ್ನು ಕಲ್ಯಾಣದಲ್ಲಿ ಉಳಿಸಿತು ಎನ್ನಬಹುದು.
    ಓದಿದಂತೆಲ್ಲ ಹೊಸ ಹೊಸ ಅರ್ಥವನ್ನೂ ಆಯಾಮವನ್ನೂ ನೀಡುತ್ತಾ ಸಾಗುವ ಈ  ಹಾಡು  ಬೇಂದ್ರೆಯವರ ಶ್ರೇಷ್ಠ ಕವಿತೆಗಳಲ್ಲಿ ಒಂದು . 
                                         ಕರಡಿಯ ಕುಣಿತ ...
     ಹತ್ತೊಂಬತ್ತನೆಯ ಶತಮಾನದ ಷರಿಪ್ ಸಾಹೇಬರಿಗೂ ಇಪ್ಪತ್ತನೆಯ ಶತಮಾನದ ಬೇಂದ್ರೆಗೂ ಒಂದು ಹೋಲಿಕೆಯಿದೆ. ಅದೇನೆಂದರೆ ಇಬ್ಬರೂ ಸಾಮಾನ್ಯ ಘಟನೆಯೊಂದನ್ನು ವರ್ಣಿಸುತ್ತ ಅಸಾಮಾನ್ಯ ತಿರುಳನ್ನು ಬೋಧಿಸುವರು. ಸರಳತೆ ಬೇಂದ್ರೆಯವರ ಒಂದು ಲಕ್ಷಣ. ಅವರ ಕವನಗಳು ನಿರಾಭರಣ ಸುಂದರಿಯರಂತೆ ಕಂಗೊಳಿಸುತ್ತವೆ.  ಮತ್ತು ನಿಜವಾದ ಕಲಾ ರಸಿಕರು ಇಂಥ ಕವನದ ಚೆಲುವನ್ನು ಅರಿಯಬಲ್ಲರು.
     ಬೇಂದ್ರೆ ತಮ್ಮ  ‘ ಕರಡಿಯ ಕುಣಿತ ‘ ಕವನದಲ್ಲಿ ಸಾಮಾನ್ಯ ಸಂದರ್ಭವನ್ನು ಇಟ್ಟುಕೊಂಡು ಶೋಷಣೆಯ ಸಂಕೀರ್ಣತೆಯನ್ನು ಬಿಚ್ಚಿಡುತ್ತಾರೆ.   ಕಬ್ಬಿಣ  ಕೈ ಕಡಗ ಕುನಿಕೊಳು ಕೂದಲು ಕಂಬಳಿ ಹೊದ್ದಾಂವ  ಬಂದಾನ, ಎಂದು ಪ್ರಾರಂಭವಾಗುವ ಗೀತೆಯ ಮೊದಲನೆಯ ನುಡಿಯಲ್ಲಿ ಕರಡಿಯ ನುದಿಸುವಾತನ ಚಿತ್ರ  ನಮ್ಮ ಕಣ್ಮುಂದೆ ನಿಂತಂತಾಗುತ್ತದೆ.  ಕುನಿಸುವಾತನ ಕರ್ಕಶ ವ್ಯಕ್ತಿತ್ವ  ಕ ಕಾರದ ಅನೇಕ ಪದಗಳನ್ನು ಬಳಸುವ ಮೂಲಕ ಧ್ವನಿತವಾಗಿದೆ.
    ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ ಜಾಮ್ಬವಂತನ ಹಿಡಿದು ತಂದಾನ. ಕಾಡಿನ ಜೇನುಂಡು ಸ್ವಚ್ಚಂದವಾಗಿ  ಬೆಳೆದಿದ್ದ ಕರಡಿಗೆ ಕರಾಳ ದಿನಗಳು ಪ್ರಾರಂಭವಾದವು. ಕರಡಿಯಾದರೋ  ಸಾಮಾನ್ಯದ್ದಲ್ಲ. ರಾಮಾವತಾರದಲ್ಲಿ ರಾಮನಿಗೆ ನೆರವು ನೀಡಿದೆ. ಕೃಷ್ಣಾವತಾರದಲ್ಲಿ ಕೃಷ್ಣನೊಂದಿಗೆ ಸೆಣಸಾಡಿ ಬಲಿಷ್ಠ ಪ್ರಾಣಿ ಎನಿಸಿದೆ. ಆದರೆ ಈಗ ಮಾನವನ ಕುಟಿಲತೆಯಿಂದಾಗಿ ಕಷ್ಟದ ದಿನಗಳು ಪ್ರಾರಂಭವಾದವು. ಮತ್ತೆ ಕುಣಿಸುವಾತನಿಂದ ‘ ದಣಿಯರ ಮನೆಮುಂದೆ ಕಾವಲು ಮಾಡಣ್ಣ ಎಂಬ ಆದೇಶ.
   ಕುಣಿಸುವಾತ  ಮಹಿಳೆಯರನ್ನು ಹೀಗೆ ಕರೆಯುತ್ತಾನೆ-    ಬಂದಾರ ಬಂದವ್ವ, ಕಂದನ ತರ್ರವ್ವ, ಅಂಜಿಕಿ ಗಿಂಜಿಕಿ ಕೊಂದಾನ. ರೋಮರೋಮಗಳಲಿ ಭಿಮರಕ್ಷೆಯ ಬಲ ಕೊರಳಾಗ ಕಟ್ಟಿರಿ ಒಂದಾನ.    ಕರಡಿಯ ಕುದಲಿಂದ ಮಾಡಿದ  ತಾಯತವನ್ನು ಮಕ್ಕಳಿಗೆ ಕಟ್ಟುವಂತೆ ತಾಯಂದಿರನ್ನು ಬೇಡುತ್ತಾನೆ. ಆ ಮೂಲಕ ತನ್ನ ಚರಿತಾರ್ಥವನ್ನು  ಸುಗಮಗೊಳಿಸುವ ಹುನ್ನಾರು.
   ಮತ್ತೆ ‘ ಕುನಿಯಲೇ ಮಗನ ಅಂದಾಗ  “ ಮುದ್ದು ಕೂಸಿನ ಹಾಗೆ ಮುಸುಮುಸು ಮಾಡುತ್ತಾ, ಕುಣಿದಾನ, ಕುಣಿತದ ಛಂದಾನ”.       ಕರಡಿಗೆ ಕುಣಿಯುವುದು ಕಷ್ಟವಾದರೂ   “ ಕುಣಿಸುವವರ ಹೊಟ್ಟೆ ತಣ್ಣಗಿರಲಿ ಎಂದು ಮುಗಿಲಿಗೆ ಕೈ ಮುಗಿದು ನಿಂದಾನ.”      ಎಷ್ಟಿದ್ದರೂ ಕರಡಿ ಒಂದು ಪ್ರಾಣಿ. ಅದು ಮಾನವನ ಧೂರ್ತತೆಗೆ  ಸಮನಲ್ಲ.   “ ಮನಬಲ್ಲ ಮಾನವ ಕುಣಿದಾನ , ಕುಣಿಸ್ಯಾನ, ಪ್ರಾಣದ ಈ ಪ್ರಾಣಿ ಹಿಂದಾನ.”      ಕರಡಿ, ಕವಲೆತ್ತು, ಕೊದಗಗಳನ್ನು ಕುಣಿಸುವವ ನರನ ಬುದ್ಧಿಯ ಕುಣಿತ ಕರಡಿಯ ಕುಣಿತಕ್ಕಿಂತ ಮಿಗಿಲಾಗಿದೆ  ಎನ್ನುತ್ತಾ ಕವಿ ಗೀತೆಗೆ ಮುಕ್ತಾಯ ಹಾಡುತ್ತಾನೆ.            

                     

                                       ಭ್ರಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ.
ಕವಿ ಬೇಂದ್ರೆಯವರು ತಮ್ಮೊಳಗೆ ಕಾವ್ಯ ಸೃಷ್ಟಿಯಾಗುವ ಬಗೆ ಹೇಗಿರುತ್ತದೆ ಎಂಬ ಕುರಿತು ಸುಂದರ ಭಾವಗಿತೆಯೊಂದನ್ನು ರಚಿಸಿದ್ದಾರೆ.  ಈ ಕವಿತೆಯ ಶೀರ್ಷಿಕೆಯು  ಭಾವಗೀತೆ ಎಂದೇ ಆಗಿದೆ.  ಇದು ಅವರ ಗರಿ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. “ ಕವಿಯ ಕಾವ್ಯಪಕ್ಷಿಯು  ಮನೋ ಆಕಾಶದಲ್ಲಿ ಹಾರುತ್ತಿರುವಾಗ ಉದುರಿದ ಗರಿಗಳೇ ತಮ್ಮ ಕವನಗಳು “ ಎಂದು ಅವರು ಹೇಳಿಕೊಂಡಿದ್ದಾರೆ.
   ಭ್ರಂಗದ ಬೆನ್ನೇರಿ ಬಂತು ಕಲ್ಪನಾ ವಿಳಾಸ ಈ ಹಾಡಿಗೊಂದು ಹಿನ್ನೆಲೆ ಇದೆ. ಕವಿಕುಲಗುರು ಕಾಳಿದಾಸ ತನ್ನ ಅಭಿಜ್ಞಾನ ಶಾಕುಂತಲಾ ನಾಟಕದಲ್ಲಿ ರಾಜಕುಮಾರ  ದುಷ್ಯಂತ ಮೊದಲಬಾರಿಗೆ  ಶಕುಂತಲೆಯನ್ನು ಭೇಟಿಯಾದ  ಪ್ರಸಂಗವನ್ನು ಹೀಗೆ ವರ್ಣಿಸಿದ್ದಾನೆ. ಆಶ್ರಮದ ಪೂಜೆಗೆ ಹೂವನ್ನು ಆಯುತ್ತಿರುವಾಗ ಶಕುಂತಲೆಗೆ ದುಂಬಿಯೊಂದು ತೊಂದರೆಯನ್ನು  ಕೊಡುತ್ತದೆ. ಆಗ ಅಲ್ಲಿಗೆ ಬಂದ ದುಷ್ಯಂತ ದುಂಬಿಯನ್ನು ದುರಮಾಡಿ ಆಕೆಗೆ ಆದ ತೊಂದರೆಯನ್ನು ಪರಿಹರಿಸಿದ. ದುಷ್ಯಂತ ಹಾಗು ಶಕುಂತಲೆಯ  ಮೊದಲ ಭೇಟಿಗೆ ಕಾರಣವಾದ ಆ ದುಂಬಿಯ ಹಿಂದೆ ಹೊರಟಿತ್ತು ಕಾಳಿದಾಸನ ಕಲ್ಪನಾ ವಿಲಾಸ.  ಕತೆ ಮುಂದುವರಿದು ಜಗದ್ವಿಖ್ಯಾತ  ನಾಟಕ ಸೃಷ್ಟಿಯಾದದ್ದು ಈಗ ಇತಿಹಾಸ. ಇದೆ ಹಿನ್ನೆಲೆಯನ್ನು ಇಟ್ಟುಕೊಂಡು  “ ಒಂದು ಎಳೆಯನ್ನು ಆಧಾರವಾಗಿ ಇಟ್ಟುಕೊಂಡು ಹೊರಡುವ ಕವಿಯ ಕಲ್ಪನೆ ಹೇಗೆ ದುಂಬಿಯ ಹಾಗೆ ಅತ್ತಿತ್ತ ಹಾರಾಡುತ್ತದೆಯೋ , ಹೂವಿಂದ ಹೂವಿಗೆ ನೆಗೆಯುತ್ತದೆಯೋ , ನಾದದ ಬೆನ್ನೇರಿ ಹೊರಡುತ್ತದೆಯೋ  ಹಾಗೆ ಹೊರತು ಕವಿತೆಯನ್ನು ಸೃಷ್ಟಿಸುತ್ತದೆ ಎಂಬುದು ಬೇಂದ್ರೆಯವರ ಅಭಿಪ್ರಾಯ.
    ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಳಾಸ  ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ.  ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ.  // ಭೃಂಗದ ಬೆನ್ನೇರಿ .......          ಬೇಂದ್ರೆಯವರ ಕಾವ್ಯ ಸೃಷ್ಟಿ ಉಸಿರಾಟದಷ್ಟೇ ಸಹಜ. ಒಂದು ನಾದದ ಗುಂಗನ್ನು ಸೃಷ್ಟಿಸಿ ಹೊರಟ ಕವಿ ಕಲ್ಪನೆಗೆ ಅತ್ಯಂತ ಸಹಜವೆಂಬಂತೆ ಪ್ರಾಸವು ಜೋತೆಗುದುತ್ತಿತ್ತು.  ಎಷ್ಟೆಂದರೂ ಅವರು ವರಕವಿಯಲ್ಲವೇ?  ಪದಗಳ ಬಾಣ ಅವರ ಬತ್ತಳಿಕೆಯಲ್ಲಿ ಅಕ್ಷಯವಾಗಿದೆ.
    ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ,    ತನ್ನ ದೈವ ರೇಷೆ ತಾನೇ ಬರೆಯುವಂತೆ ಭಾಲಾ ,  ಹೇಗೆ ಜೇಡ ತನ್ನ ಮೈ ಗ್ರಂಥಿಯಿಂದಲೇ ನೂಲನ್ನು ಸೃಷ್ಟಿಸಿ  ಬಲೆ ನೆಯುತ್ತದೆಯೋ ಹಾಗೆಯೇ ಕವಿ ತನ್ನ ಜೀವನಾನುಭಾವದಿಂದಲೇ ಕಾವ್ಯದ ವಸ್ತುವನ್ನು ಕಂಡುಕೊಳ್ಳುತ್ತಾನೆ ಅಲ್ಲದೆ ತಾನು  ಸೃಷ್ಟಿಸಿದ ಕಾವ್ಯದ   ಗಟ್ಟಿತನದಿಂದಲೇ ತನ್ನ ಹಣೆಬರಹ ಬರೆಯಲ್ಪಡುತ್ತದೆ ಎಂದು ನಂಬುತ್ತಾನೆ. 
  ಮಾತು ಮಾತು ಮಥಿಸಿ ಬಂತು ನಾದದ ನವನಿತಾ, ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೇ ಪ್ರೀತಾ, ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗಿತಾ//    ಮಾತು ಮಾತು ಮಥಿಸಿ ಹಾಡಾಯಿತು. ಅಲ್ಲಿ ಹುಟ್ಟಿದ್ದು ನಾದದ ನವನೀತ.  -ಅಂದರೆ ಬೆಣ್ಣೆ-  ಅಂದರೆ ನಿರುದ್ದೆಶವಾದ ಪ್ರೀತಿ ಹುಟ್ಟಿತು.  ಸ್ವಾರ್ಥವಿಲ್ಲದ ಅರ್ಥದ ಮಿತಿಗೆ ಒಳಪಡದ ಭಾವ ಹುಟ್ಟಿತು, ಅದೇ ಭಾವಗಿತೆಯಾಯಿತು. ಎನ್ನುತ್ತಾರೆ ಕವಿ.    

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ ....
ಭಾವಸಂಗಮ ಎಂಬ ಧ್ವನಿಸುರುಳಿಯ ಮೂಲಕ ಸಂಗೀತ ಮತ್ತು  ಸಾಹಿತ್ಯಾಸಕ್ತರ ಮನಗೆದ್ದ ಈ ಭಾವಗೀತೆ  ಮಧುರವಾಗಿರುವುದಷ್ಟೇ ಅಲ್ಲ; ತುಂಬಾ ಅರ್ಥಗರ್ಭಿತವೂ ಆಗಿದೆ. ಮೌನವಾಗಿ ಕುಳಿತು, ಒಮ್ಮೆ ನಾವಿರುವ ಈ ವಿಶ್ವದ ಬಗ್ಗೆ , ಅದರ ವಿಶಾಲತೆಯ ಬಗೆಗೆ, ಅದು ರೂಡಿಸಿದ, ರೂಪಿಸಿದ ಈ ಭೂಮಿಯ ಜಿವಚಕ್ರಗಳ ಬಗೆಗೆ ಯೋಚಿಸಿದರೆ ಸಾಕು, ಈ ಅಗಾಧ ಬ್ರಹ್ಮಾಂಡದ ಹಿಂದಿರುವ ಶಕ್ತಿಯ ಬಗ್ಗೆ ನಮಗೆ ಭಕ್ತಿಯೂ, ಬೆರಗೂ ಉಂಟಾಗುವುದು.
    ಜಗತ್ತೆಲ್ಲ ಮಲಗಿರುವ ಒಂದು ರಾತ್ರಿಯಲ್ಲಿ ಬಯಲಿಗೆ ಬಂದು ಆಕಾಶದೆಡೆ ಸುಮ್ಮನೆ ಒಂದಿಷ್ಟು ಹೊತ್ತು ನೋಡುತ್ತಾ ಕುಳಿತರೆ ಸಾಕು  ಈ ಕವಿತೆಯ ಭಾವ ನಮ್ಮನ್ನು ಆವರಿಸುತ್ತಾ ಹೋಗುವುದು. ಆ ಭಾವವಿಸ್ಮಯದಲ್ಲಿ ನಮ್ಮ ಅಸ್ತಿತ್ವ, ಅಹಂಕಾರ ಎಲ್ಲವೂ ಕರಗಿಹೊಗುವವು. ನಮ್ಮ ಹೊರಗೆ ಮತ್ತು ನಮ್ಮ ಒಳಗೆ ಎರಡೂ ಕಡೆ ನಿಗೂಢವು  ಆವರಿಸಿ ನಿಂತಿದೆ. ಗೀತೆಯೇನೋ ತುಂಬಾ ಸರಳವೂ ಲಯಬದ್ಧವು ಆಗಿದೆ ಆದರೆ ಆ ಗೀತೆಯ ಭಾವಾರ್ಥ ನಮ್ಮನ್ನು ಆವರಿಸುವ ಪರಿ ಮಾತ್ರ ಅದ್ಭುತ.
ತುದಿಮೊದಲು ತಿಳಿಯದೀ ನಿಲಿಯಲಿ ಭಾನು, ಚುಕ್ಕಿ, ಹೂವು ಹಕ್ಕಿ, ಮುಗಿಲು ಎಲ್ಲವೂ ಹರಡಿಕೊಂಡಿದೆ. ಇವನ್ನೆಲ್ಲ ಈ ನೀಲಿಯ ಆಕಾಶದಲ್ಲಿ ಇತ್ತವರು ಯಾರು? ಈ ಸುಂದರ ಬದುಕನ್ನೂ, ಜೀವಂತಿಕೆಯನ್ನೂ ಇಲ್ಲಿ ಹೀಗೆ ತೇಲಿಬಿಟ್ಟವರಾರು?  
 “ ಒಂದೊಂದು ಜೀವಕು ಒಂದೊಂದು ಬಣ್ಣ,    ಒಂದೊಂದು ಜೀವಕು ಒಂದೊಂದು ಕಣ್ಣ “   ನಮ್ಮೆಲ್ಲರ ಬದುಕಿನಲ್ಲಿ ವೈವಿಧ್ಯತೆ ಹಾಸು ಹೊಕ್ಕಾಗಿದೆ. ಮತ್ತು ಅವನ್ನು ನೋಡುವ ಕಣ್ಣಿನಲ್ಲೂ ಮತ್ತಿಷ್ಟು ವೈವಿಧ್ಯಮಯ ದೃಷ್ಟಿಕೋನಗಳಿವೆ.  ಈ ಅಸೀಮ ವೈವಿಧ್ಯತೆ  ಜಗತ್ತಿನ ಸೌಂದರ್ಯವಾಗಿದೆ, ಜಗತ್ತಿನ ಶಕ್ತಿಯಾಗಿದೆ,  ಮತ್ತು ಜಗತ್ತಿಗೆ ಪ್ರೇರಣೆಯಾಗಿದೆ.  ‘ ಯಾವುದೋ ಬಗೆಯಲ್ಲಿ ಎಲ್ಲರಿಗೂ ಅನ್ನ ‘      ಪ್ರಕೃತಿಯ ಅದ್ಭುತ ಶಕ್ತಿಯೇ ಇದು- ಅಸೀಮವಾದ ಅಗಾಧವಾದ ಸಾಧ್ಯತೆಗಳು  ಮತ್ತು ಅವನ್ನೆಲ್ಲ ಬಂಧಿಸಿದ ಏಕಸೂತ್ರಶಕ್ತಿ  ನಮ್ಮೆಲ್ಲರ ಬದುಕನ್ನು ನಡೆಸುತ್ತವೆ.ಯಾವೊಂದು ಸಂಗತಿಯೂ ಒಂದೆಡೆ ಕೇಂದ್ರಿಕೃತವಾಗಲು  ಪ್ರಕೃತಿ ಬಿಡದು. ಮತ್ತು ಎಲ್ಲವಕ್ಕೂ ಅದರದ್ದೇ ಆದ ಮಹತ್ವದ ಸ್ಥಾನಮಾನವನ್ನು ಕಲ್ಪಿಸಿರುವುದು. ಆದ್ದರಿಂದಲೇ ಈ ಜಗತ್ತಿನಲ್ಲಿ ಬಡವ-ಶ್ರೀಮಂತ ಎನ್ನದೆ ಎಲ್ಲರ ಬದುಕೂ ಸಾಗಿದೆ. ಪ್ರತಿಯೊಬ್ಬರೂ ಅವರವರಿಗೆ ಬೇಕಾದ ರೀತಿಯಲ್ಲಿ ಬದುಕನ್ನು ಅರ್ಥೈಸಿಕೊಂಡು ನಡೆಯುತ್ತಾರೆ. ಜಗತ್ತಿ ಅಸಲೀ  ಸೌಂದರ್ಯವೇ  ಅದರ ವೈವಿಧ್ಯತೆ, ಜೀವಂತಿಕೆ ಮತ್ತು ಏಕಸೂತ್ರತೆ.
   “ ಯಾವದೀ ಮಾಯೆ ಯಾವ ಬಿಂಬದಾ ನೆರಳು “     ನೂರಾರು ನದಿ ಸೇರಿಯೂ ಕಡಲು ತುಂಬಿಲ್ಲ, ನಿರಂತರ ಮಳೆ ಸುರಿಸಿಯೂ ಮೋಡಗಳು ಬತ್ತಿಲ್ಲ. ಕೋಟಿ ತಾರೆಗಳನ್ನು ತನ್ನೊಡಲಲ್ಲಿ ಇತ್ತು ಕೊಂಡರೂ ಆಕಾಶ ತುಂಬಿಲ್ಲ, ಹಾಗಿದ್ದರೆ ಈ ಅಗಾಧತೆಯು ಯಾವುದೋ ಅದ್ಭುತ ಶಕ್ತಿಯ ನೆರಳಲ್ಲದೆ ಇನ್ನೇನು?  ಈ ಸಾಲು ಭಾರತೀಯ ವೇದಾಂತದ ದರ್ಶನ ಮಾಡಿಸುತ್ತದೆ.
                                

ಹಕ್ಕಿ ಹಾರುತಿದೆ ನೋಡಿದಿರಾ?
    ಸಾಮಾನ್ಯ ಮಾನವನ ದೃಷ್ಟಿ ತತ್ಕಾಲಕ್ಕೆ ಸಿಮಿತವಾಗಿರುತ್ತದೆ; ಆದರೆ ಕವಿಯ ನೋಟ ಕಾಲಾತೀತವಾಗಿರುತ್ತದೆ; ದೆಹಾತೀತವಾಗಿರುತ್ತದೆ. ಈ ಮಾತನ್ನು ಪುಷ್ಟೀಕರಿಸುವ ಒಂದು ಶ್ರೇಷ್ಠವಾದ ಕವನ ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ ......  ಹಲವು ವೈಶಿಷ್ಟ್ಯವನ್ನು ಹೊಂದಿರುವ ಈ ಕವಿತೆಯನ್ನು ಸ್ವತಃ ಬೇಂದ್ರೆಯವರೇ ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದಲ್ಲಿ ಓದಿದಾಗ ಸಾರಸ್ವತ ಲೋಕ ಮಂತ್ರಮುಗ್ಧವಾಯಿತು.  ಮುಂದೆ ೧೯೩೨ರಲ್ಲಿ ಗರಿ ಕವನ ಸಂಕಲನದ ಒಂದು ಕವಿತೆಯಾಗಿ ಪ್ರಕಟವಾಯಿತು. 
      ಈ ಕವನ ಒಂದೊಂದು ಸಾಲೂ ಅರ್ಥಗರ್ಭಿತವಾಗಿದೆ. ನಿರಂತರವಾಗಿ ಹಾರಿತ್ತಿರುವ ಹಕ್ಕಿ ಎಂದರೆ ಇಲ್ಲಿ ಕಾಲ ಎಂದರ್ಥ. ಕಾಲವನ್ನು ಬಿಟ್ಟು ಯಾವುದೂ ಇಲ್ಲ. ಇಡೀ ಬ್ರಹ್ಮಾಂಡವೇ ಕಾಲಗರ್ಭದಲ್ಲಿ ಸೇರಿಕೊಂಡಿದೆ. ಇಂತಹ ದೊಡ್ಡ ಸಂಗತಿಯನ್ನು ಒಂದು ಪಕ್ಷಿಗೆ ಹೋಲಿಸಿ ಹಾಡಿರುವ ರೀತಿ ಅನನ್ಯ.
       ಇರುಳಿರುಳಳಿದು ದಿನದಿನ ಬೆಳಗೆ  ಸುತ್ತಮುತ್ತಲು ಮೇಲಕೆ ಕೆಳಗೆ, ಎವೆ  ತೆರೆದಿಕ್ಕುವ ಹೊತ್ತಿನ ಒಳಗೆ, ಗಾವುದ ಗಾವುದ ಗಾವುದ ಮುಂದೆ ಹಕ್ಕಿ ಹಾರುತಿದೆ ನೋಡಿದಿರಾ?    ಕಾಲವನ್ನು ಅಲೆಯುವ ಅತ್ಯಂತ ಚಿಕ್ಕ ಮಾಪಮ ಕ್ಷಣ.  ಅಂದರೆ ಕಣ್ಣು ರೆಪ್ಪೆ ಬಡಿದುಕೊಳ್ಳಲು ತೆಗೆದುಕೊಳ್ಳುವ ಸಮಯ. ಇಷ್ಟು ಚಿಕ್ಕ ಸಮಯವನ್ನು ಬಿಡದೆ ಕಾಲಪಕ್ಷಿ ಮುಂದಕ್ಕೆ, ಮುಂದಕ್ಕೆ ಸಾಗುತ್ತಿದೆ.  ಕಾಲಪಯಣ ನಿರಂತರ. ನಿನ್ನೆ, ಇಂದು ನಾಳೆಯೆನ್ನದೆ ಸುತ್ತ, ಮುತ್ತ, ಮೇಲೆ, ಕೆಳಗೆ ಎನ್ನದೆ ದಶದಿಕ್ಕುಗಳಿಗೂ ವ್ಯಾಪಿಸಿರುವ ಕಾಲ ಎವೆ ತೆರೆದಿಕ್ಕುವ  ಹೊತ್ತಿನ ಒಳಗೆ ನಾವು ಗುರುತಿಸಬಹುದಾದ ಒಂದು ಕಾಲಬಿಂದುವಿನಿಂದ ಆಚೆ ದಾಟಿ ಆಗಿರುತ್ತದೆ. ಇಂತಹ ಬೆರಗಿನ ಕಡೆಗೆ ಓದುಗರ ಗಮನವನ್ನು ಸೆಳೆಯಲೋ ಎಂಬಂತೆ  “ ಹಕ್ಕಿ ಹಾರುತಿದೆ ನೋಡಿದಿರಾ? “ ಎಂದು ಪ್ರತಿ ಸಾಲಿನ ಕೊನೆಯಲ್ಲೂ ಕೇಳುತ್ತಾ ಸಾಗುತ್ತಾರೆ.
     ಕರಿ ನೆರೆ ಬಣ್ಣದ ಪುಚ್ಚಗಳುಂಟು, ಬಿಳಿಹೊಳೆ  ಬಣ್ಣದ ಗರಿಗರಿಯುಂಟು,  ಎಂದು ಸಾಗುವ  ಎರಡನೇ ನುಡಿಯು ಕಪ್ಪು, ಬಿಳಿ, ಮತ್ತು ನಡುವಿನ ಗೋದಿಬಣ್ಣದ ಜನಾಂಗಗಳ ವಿವರಣೆಯಾಗಿದೆ. ಅಲ್ಲದೆ ಈ ನುಡಿಯನ್ನು  ಭೂತಕಾಲ, ವರ್ತಮಾನಕಾಲ, ಮತ್ತು ಭವಿಷ್ಯತ್ ಕಾಲವನ್ನು ಒಳಗೊಂಡ ಕಾಲಪಕ್ಷಿ ಎಂದೂ  ಈ ಸಾಲನ್ನು ಅರ್ಥೈಸಬಹುದು.
   ಕಾಲಪಕ್ಷಿಯು  ಸೂರ್ಯಚಂದ್ರರನ್ನು ತನ್ನೆರಡು ಕಣ್ಣುಗಳನ್ನು ಮಾಡಿಕೊಂಡು ಇಡೀ ಬ್ರಹ್ಮಾಂಡವನ್ನು ತನ್ನೊಳಗೆ ಸೇರಿಸಿಕೊಂಡು ನಕ್ಷತ್ರಗಳ ಮಾಲೆಯನ್ನು ಧರಿಸಿಕೊಂಡು ಸಾಗುತ್ತದೆ.
   ಈ ಕಾಲಪಕ್ಷಿ ರಾಜ್ಯ-ಸಾಮ್ರಾಜ್ಯಗಳನ್ನು ತೇಲಿಸುತ್ತ ಮುಳುಗಿಸುತ್ತಾ ಸಾಗಿದೆ ಸಾರ್ವಭೌಮರೆಂದು ಮೆರೆಯುವ ಅಹಂಕಾರಿಗಳ ನೆತ್ತಿಯನ್ನು ಕುಕ್ಕಿ ಕುಕ್ಕಿ ಸಾಗಿದೆ. ಅಂತಹ ಹಕ್ಕಿಯನ್ನು ನೀವು ನೋಡಿದ್ದೀರಾ?  ಇದು ಸಾಮಾನ್ಯ ಹಕ್ಕಿಯಲ್ಲ ಎಂಬ ಬೆರಗನ್ನು ಮೂಡಿಸುತ್ತದೆ. ಅಂದು ಬ್ರಿಟಿಷ ಸಾಮ್ರಾಜ್ಯ ಜಗತ್ತನೇ ಆಳುತ್ತಿತ್ತು. ಆ  ಸಾಮ್ರಾಜ್ಯವಾದಿಗಳನ್ನು ಅಣಕಿಸುವ ಮತ್ತು ವಿರೋಧಿಸುವ ಒಂದು ಹಾಡೂ ಇದಾಗಿದೆ.
   ಕಾಲಪಕ್ಷಿ ವಿನಾಶವನ್ನಷ್ಟೇ ಮಾಡುತ್ತಿಲ್ಲ.   ಯುಗಯುಗಗಳ ಹಣೆ ಬರಹವ ಒರಸಿ, ಮನ್ವಂತರಗಳ ಭಾಗ್ಯವ ತೆರೆಸಿ  ಹೊಸಕಾಲದ ಹಸುಮಕ್ಕಳ ಹರಸಿ ... ಹಕ್ಕಿ ಹಾರುತಿದೆ ನೋಡಿದಿರಾ?          ಮುಂದೆ ,  ಬೆಳ್ಳಿಯ ಹಳ್ಳಿಯ ಮೆರೆಯ ಮಿರಿ, ತಿಂಗಳೂರಿನ  ನೀರನು ಹಿರಿ, ಮಂಗಳಲೋಕದ ಅಂಗಳಕೇರಿ   ಹಕ್ಕಿ ಹಾರುತಿದೆ ನೋಡಿದಿರಾ? 
 ಮುಂದೊಂದು ದಿನ ಮಾನವ ಬೆಳ್ಳಿ ಅಂದರೆ ಶುಕ್ರಗ್ರಹ, ಚಂದಿರ, ಮತ್ತು ಮಂಗಳ ಲೋಕಗಳನ್ನು ತಮ್ಮ ಮನೆಗಳನ್ನಾಗಿ ಮಾಡಿಕೊಂಡಾನು.  ಅಂತಹ ಒಳ್ಳೆಯ ಕಾಲದತ್ತ ಹಕ್ಕಿ ಹಾರುತಿದೆ ನೋಡಿದಿರಾ?   ಇಲ್ಲಿ ಕವಿಯ ಮುನ್ನೋಟ ಮತ್ತು ಆಶಾವಾದ ವ್ಯಕ್ತವಾಗಿದೆ. 
         
          

ಬೆಳಗು- ಸಂಜೆ
   R   ೧.  ಮೂಡಲ ಮನೆಯ ಮುತ್ತಿನ ನೀರಿನ  ಎರಕವಾ ಹೊಯ್ದ ನುಣ್ಣನೆ ಎರಕವಾ  ಹೊಯ್ದ.
 ಬೆಳಗನ್ನು ಭವ್ಯವಾದ ಉಪಮೆಗಳಿಂದ ದಿವ್ಯವಾಗಿ ಚಿತ್ರಿಸಿದವರು ಬೇಂದ್ರೆಯವರು.ಬೇಂದ್ರೆಯವರಿಗೆ ಬೆಳಗು ಮತ್ತು ಶ್ರಾವಣ ಎರಡೂ ಅತ್ಯಂತ ಇಷ್ಟದ ಕಾವ್ಯವಸ್ತು.   ಮೂಡಲ ಮನೆಯ ಮುತ್ತಿನ ನೀರಿನ  ಎರಕವಾ ಹೊಯ್ದ ನುಣ್ಣನೆ ಎರಕವಾ  ಹೊಯ್ದ.  ಈ ಭಾವಗೀತೆ ಒಂದು ಗೀತರೂಪಕದ ರೀತಿಯಲ್ಲಿ ಕನ್ನಡದ ಶ್ರೇಷ್ಠ ಭಾವಗೀತೆಯಾಗಿ ಉಳಿದಿದೆ.
    ಮೂಡಣವೆಂಬ ಮನೆಯಿಂದ ಮುಂಜಾವಿನ ಹೊತ್ತಿನಲ್ಲಿ ಮುತ್ತಿನ ನೀರಿನ ಎರಕವನ್ನು ಯಾರೋ ಹೊಯ್ದಿದ್ದಾರೆ. ಬೆಳಗಿನ ಬಾಗಿಲನ್ನು ತೆರೆದಾಗ ಆ ಬೆಳಕ ಧಾರೆಯು ಜಗತ್ತಿನ ಬಳಿ ಬಂದು ಎಲ್ಲವನ್ನೂ ತೋಯ್ದು ನಿಂತಿದೆ. ಮುಂಜಾವಿನ ಈ ನೋಟವನ್ನು, ಮುತ್ತಿನ ಹನಿಗಳು ಮೂಡುವ ಈ  ನಸುಕನ್ನು ಇನ್ನೂ ಭವ್ಯವಾಗಿ ಹೇಳಲು ಹೇಗೆ ಸಾಧ್ಯ? ಇದಕ್ಕೂ ಮಿಗಿಲಾಗಿ ಹೇಳಬೇಕೆಂದರೆ ಬೇಂದ್ರೆಯವರೇ ಇನ್ನೊಮ್ಮೆ ಹುಟ್ಟಿ ಬರಬೇಕಷ್ಟೆ!  ಪೂರ್ವ ದಿಗಂತದಿಂದ ಮೇಲಕ್ಕೆ ಚಿಮ್ಮುವ ಅರುಣೋದಯದ ಹೊಂಗಿರಣವನ್ನು ರತ್ನದ ರಸದ ಕಾರಂಜಿಗೆ ಹೋಲಿಸಿದ್ದಾರೆ. ಅದೇ ಸಮಯದಲ್ಲಿ ಪುಳಕಗೊಂಡ ಮುಗ್ಗು ಪಟಪಟನೆ ಅರಳಿ ಪರಿಮಳವನ್ನು ಹೊರ ಚೆಲ್ಲುತ್ತದೆ. 
    ಮುಂದಿನ ನುಡಿಗಳಲ್ಲಿ ಕವಿ ನಮ್ಮನ್ನು ಬೆರಗಿಗೆ ದೂಡುತ್ತಾನೆ.  ಆ ಸಮಯದಲ್ಲಿ ಎಲೆಗಳ ಮೇಲೆ ಮತ್ತು ಹೂಗಳ ಒಳಗೆ ಅಮೃತದ ಬಿಂದುವಿನಂತಹ ಇಬ್ಬನಿಗಳು ಮೂಡುವವು. ಕವಿಯ ಪ್ರಶ್ನೆ ಏನೆಂದರೆ ಈ ಬೆಳ್ಳಂಬೆಳಿಗ್ಗೆ  ಮುಗಿಲಿನ ಮೇಲಿಂದ ಈ ಅಮೃತದ ಬಿಂದುಗಳನ್ನು ಇಲ್ಲಿ ತಂದಿರಿಸಿದವರು ಯಾರು?   ಕವಿ ಇಲ್ಲಿ ನಮ್ಮನ್ನು ಅಲೌಕಿಕವಾದ ಶಕ್ತಿಯ ಕಡೆಗೆ ಗಮನ ಸೆಳೆಯುತ್ತಾನೆ.
     ಈ ಹಾಡಿನ ಒಂದೊಂದು ನುಡಿಯೂ ಅಪೂರ್ವವಾದ ಹೋಲಿಕೆಗಳಿಂದ ಓದುಗರನ್ನು ವಿಸ್ಮಯಗೊಳಿಸುತ್ತದೆ.     ಪ್ರಕೃತಿಯು  ಬೀಸುವ ತಂಗಾಳಿಯ ಕೈಯಲ್ಲಿ ಹೂವಿನ ಬೀಸಣಿಕೆಯನ್ನು ಕೊಟ್ಟಿದೆಯಂತೆ . ಎಷ್ಟೊಂದು ನವಿರಾದ ಉಪಮೆ ಇದು!  ಬೆಳಗಿನ ಆಹ್ಲಾದಕರ ಸಂದರ್ಭಕ್ಕೆ ಸೌಂದರ್ಯಕ್ಕೆ ಜೀವಂತಿಕೆಗೆ ಇದೊಂದು ಅನನ್ಯವಾದ ನುಡಿಚಿತ್ರ. ಹೂವುಗಳಿಗೆ ಮುತ್ತುವ ದುಂಬಿಗಳ ದಂಡಿಗೆ ಗಂಧವನ್ನೂ ಮಕರಂದವನ್ನೂ ಸವರಿ ಎಲ್ಲೆಡೆ ಹರಡುವಂತೆ ಹಾರಿ ಬಿಡಲಾಗಿದೆ. 
       ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳಾ ಹಾಡು              ಹಾಡುವುದು ಹಕ್ಕಿಗಳಾದರೂ   ನಸುಕಿನಲ್ಲಿ ನೋಡುಗರಿಗೆ ಮರಗಳೇ ಹಾದುತ್ತಿವೆಯೇನೋ  ಎಂದು ಭಾಸವಾಗುತ್ತದೆ. ಹಕ್ಕಿಗಳು ಗಿಡಮರಗಳ ಕೊರಳಾಗಿವೆ.  ಹಕ್ಕಿ ಮತ್ತು ಮರದ ಸಂಬಂಧ ಅದು  ಅವಿನಾ ಸಂಬಂಧ. ಒಂದು ಇನ್ನೊಂದರ ದನಿಯಾಗುವ ಮಧುರ ಬಾಂಧವ್ಯ. ಆ ಸಮಯದಲ್ಲಿ ಪಕ್ಷಿಗಳ ಕಲರವದಿಂದ ಇಡೀ ಕಾಡಿನ ನಾಡು ಗಂಧರ್ವರ ಸೀಮೆಯೇ ಆಯಿತು. ಹೊತ್ತೇರುತ್ತಿದ್ದಂತೆ ಅವು ಮನುಷ್ಯನ ಆರ್ಭಟದ ಚಟುವಟಿಕೆಗೆ ಹೆದರಿ ಸುಮ್ಮನಾಗುತ್ತವೆ ಎಂಬುದು ಬೇರೆ ಮಾತು.   ಗಂಧರ್ವರ ಸೀಮೆಯೆಂಬುದು  ಕವಿ ಆ ಸಂದರ್ಭಕ್ಕೆ ನೀಡಿದ ಭವ್ಯವಾದ ಉಪಮೆ  ಮತ್ತು ಗೌರವ.
   ಬಗೆಬಗೆಯಲ್ಲಿ  ನಮ್ಮ ಪಂಚೆಂದ್ರಿಯಗಳಿಗೂ  ಆನಂದವನ್ನು ನೀಡಿದ ಬೆಳಗು ನಮ್ಮ ಮೈ ಮನವನ್ನು ತನ್ಮಯಗೊಳಿಸುವುದು. ಆ ತನ್ಮಯತೆಯಲ್ಲಿ ದೈವದ ಸಾಕ್ಷಾತ್ಕಾರವಾಗುವುದು. ತನ್ಮಯವೀ ದೇಹ, ದೇವರದೀ ಮನಸಿನಾ ಗೇಹಾ.     ಮನಸ್ಸು ದೇವರು ನೆಲೆಸುವ ಮನೆ  ಅಂತಹ ಪವಿತ್ರ ಮನಸಿರುವುದು ಈ ನಮ್ಮ ದೇಹದಲ್ಲಿ ತಾನೆ!
      ಕೊನೆಯ ನುಡಿಯಲ್ಲಿ ಕವಿ ನಮ್ಮನ್ನು ಬೆಳಗಿನಾಚೆಯ ದೈವತ್ವದ ಕಡೆಗೆ ನೋಡುವಂತೆ ಮಾಡುತ್ತಾನೆ. ಶಾಂತಿ ರಸವೇ ಪ್ರೀತಿಯಿಂದ ಮೈದೋರಿತಣ್ಣ  ಇದು ಬರಿ ಬೆಳಗಲ್ಲೋ  ಅಣ್ಣ.  ನಿಜ ಇದು ಬರಿ ಬೆಳಗಲ್ಲ  ಇದು ಬರಿ ಬೆಡಗಲ್ಲ.   

R೨.  ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ  ಸೋ ..... ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು.
ನವೋದಯ ಮತ್ತು ನವ್ಯ ಪ್ರಕಾರಗಳ ಸಮನ್ವಯ ಕವಿ ಎಂದೇ ಪ್ರಸಿದ್ಧರಾದ ಚೆನ್ನವೀರ ಕಣವಿಯವರ ಈ ಹಾಡು ಸೋನೆ ಮಳೆಯ ಹಿನ್ನಲೆಯಲ್ಲಿ ಕಾಣುವ ಮುಂಜಾನೆಯನ್ನು ಸುಂದರವಾಗಿ ಕಟ್ಟಿಕೊಡುವ ಕವನವಾಗಿದೆ. ಮುಂಜಾನೆ ಅದು ಎಂತೆ ಇರಲಿ, ಎಲ್ಲೇ ಇರಲಿ ಜೀವಸಂಕುಲಕ್ಕೆಲ್ಲ ನವ ಚೈತನ್ಯವನ್ನು ನೀಡುವ ಸಂದರ್ಭವಾಗಿದೆ. ಪ್ರಾಣಿ ಪಕ್ಷಿಗಳೆಲ್ಲ ಮುಂಜಾನೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಪುಳಕಗೊಂಡರೆ ಕವಿಮನಸ್ಸು ಅಲ್ಲಿ ಧ್ಯಾನಸ್ಥವಾಗುತ್ತದೆ.  ಅದು ಹೊಂಗನಸನ್ನು ಕಾಣುತ್ತದೆ; ನಾಳಿನ ಬದುಕಿಗೆ ಬೇಕಾದ ಭರವಸೆಯನ್ನು ತಾಳುತ್ತದೆ.
      ಈ ಹಾಡು  ತುಂಬಾ ಸರಳವಾಗಿದೆ. ಹಾಗು ಅಷ್ಟೇ ಸರಳವಾಗಿದೆ ಕೂಡಾ. ತುಂತುರಿನ ಸೋನೆ ಮಳೆಯ ಹಿನ್ನೆಲೆಯಲ್ಲಿ ಬೆಳಗು ಎಷ್ಟು ಸುಂದರವಾಗಿರಬಹುದು. ಅಹ್ಲಾದಕರವಾಗಿರಬಹುದು, ತಾಜಾ ಆಗಿರಬಹುದು. ಅಂತಹ ಬೆಳಗನ್ನು ಕಲ್ಪಿಸಿಕೊಳ್ಳಲು ಸಾಧ್ಯವಾದರೆ ಆಗ ಮನಸ್ಸು ಗರಿಗೆದರುತ್ತದೆ. ಆ ಬೆಳಗಿನಲ್ಲಿ ಭಾಗಿಯಾಗಲು ಮನಸ್ಸು ಹಾತೊರೆಯುತ್ತದೆ.
      ತುಂತುರು ಮಳೆ ಬೆಳಗಿನಲ್ಲಿ ಸೋ ... ಎಂದು ಶ್ರುತಿ ಹಿಡಿದು ಸುರಿಯುತ್ತಿದೆ. ಅದೇ ಹೊತ್ತಿನಲ್ಲಿ ತೆಂಗಿನ ಗರಿಗಳ ನಡುವೆ ನುಸುಳಿ ಬರುವ ಸುಳಿಗಾಳಿ ವಿಶಿಷ್ಟ ಧ್ವನಿ ಮಾಡಿ    ಹಿಮ್ಮೇಳವನ್ನು ಒದಗಿಸುತ್ತದೆ.
      ಹುಲ್ಲೆಸಳು,  ಹೂ ಪಕಳೆಗಳ ಮೇಲೆ ಮಳೆಹನಿ ಮುಂಜಾನೆಯ ಎಲೆ ಬಿಸಿಲಿಗೆ ಮುತ್ತಂತೆ ಹೊಳೆಯುತ್ತವೆ. ಸೂರ್ಯ ದೇವನಿಗೆ ಮುತ್ತಿನಾರತಿ ಎತ್ತಿದಂತೆ ಕಾಣುತ್ತಿದೆ. ಅದೇ ಹೊತ್ತಿಗೆ ಹಕ್ಕಿಗಳು ಶುಭಮಸ್ತು ಶುಭಮಸ್ತು ಎಂದು ಹಾಡುತ್ತಿವೆ.
        ಸೋನೆಮಳೆಯಲ್ಲಿ ತೊಯ್ದ ಇಳೆವೆಣ್ಣು  ಅಂದರೆ ಭೂಮಿತಾಯಿ ಹೂಗಳ ಮಕರಂದವನ್ನು ಅರಿಸಿಣದಂತೆ ತನ್ನ ಮೈಗೆ ಪೂಸಿಕೊಂಡ  ಮದುಮಗಳಂತೆ ಕಾಣುತ್ತಿದೆ. ಈ ಅಂದವನ್ನು ನೋಡಿ ಮೇಲ್ಮುಗಿಲ ಹಿಂದಿರುವ ನೇಸರ ಮುಗುಳ್ನಗುತ್ತಿದ್ದಾನೆ. ಈ ನಗು ಮದುಮಗಳನ್ನು ಛೇಡಿಸುವ ತುಂಟ ನಗು ಇರಬಹುದೇ?
         ಉಷೆಯ ನುಣ್ಗಂಪಿನಲಿ ಹರ್ಷ ಭಾಷ್ಪಗಳಂತೆ
        ಮರದ ಹನಿ ಪಟಪಟನೆ ಉದುರುತಿತ್ತು.
        ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದ ಮನ
         ಮುಂಬಾಳ ಸವಿಗನಸ ನೆಯುತಿತ್ತು.
     ಹೀಗೆ ಕವಿಯ ಮನಸ್ಸು ಕಾಣುವ ಮುನ್ನೋಟ ಹಾಗೂ ಆಶಾವಾದ ನಮ್ಮೆಲ್ಲರ ಬಾಳಿನ ಆಶಯವೂ ಆಗಿದೆಯಲ್ಲವೇ?
                     
      
                    R   ಕಣ್ಗಳ ತೊಳೆ ಈ ಕೆಂಪಿನಲಿ  ಸುಂದರ ಸಂಧ್ಯಾರಾಗದಲಿ
     ಸೂರ್ಯೋದಯ ಸೂರ್ಯಾಸ್ತಗಳು ಜಗತ್ತಿನ ಅತ್ಯಂತ ಸುಂದರ ಕ್ಷಣಗಳು. ಅಲ್ಲದೆ ಅವು ಪವಿತ್ರವಾದ ಕ್ಷಣಗಳೂ ಕೂಡಾ. ಪ್ರಾತಃ ಸ್ಮರಣೆ ಇದ್ದಹಾಗೆ ಸಂಧ್ಯಾವಂದನೆ ಕೂಡಾ ನಮ್ಮ ಸಂಸ್ಕೃತಿ ರುಧಿಸಿದ ಒಂದು ಸಂಸ್ಕಾರ. ಬದುಕು ಯಾಂತ್ರಿಕವಾಗುತ್ತಿರುವ ಈಚಿನ ದಿನಗಳಲ್ಲಿ  ದಿನಂ ಪ್ರತಿ ಬರುವ ಈ ಎರಡು ಸಂದರ್ಭಗಳ ಶಾಂತತೆಯನ್ನು  ದಿವ್ಯತೆಯನ್ನು ಕಣ್ತುಂಬಿ ಕೊಳ್ಳುವವರು ಯಾರು?  ಈಗ ಯಾರಿಗೂ ಬಿಡುವಿಲ್ಲ.
     ಕವಿ ಜೀ. ಎಸ. ಶಿವರುದ್ರಪ್ಪನವರು ಸಂಧ್ಯಾರಾಗ ಎಂಬ ತಮ್ಮ ಕವಿತೆಯಲ್ಲಿ ಸುಂದರ ಸಂಜೆಯ ದಿವ್ಯಾನುಭೂತಿಯ  ಬಗ್ಗೆ ಓದುಗರ ಗಮನವನ್ನು ಸೆಳೆದಿದ್ದಾರೆ. ಅದು ಸೂರ್ಯಾಸ್ತದ ಸಮಯ ಪಡುವಣ ಬಾನಿನ ತುಂಬಾ ರಕ್ತವರ್ಣ. ಆ ಕೆಂಪು ನನ್ನ ಕಣ್ಣಿನ ಕೊಲೆಯನ್ನು ತೊಳೆಯಲಿ  ಎನ್ನುತ್ತಾರೆ ಕವಿ. ಸಂಧ್ಯಾಕಾಲದ ಬಾನಂಚಿನ ಕೆಂಪನ್ನು ಕಣ್ತುಂಬಿಕೊಳ್ಳುವ ಮೂಲಕ  ಕವಿ, ಆ ದಿನ ತಾನೂ ಅನಿವಾರ್ಯ ಕಾರಣಗಳಿಂದ, ಏನೆಲ್ಲಾ ಕೆಟ್ಟದ್ದನ್ನು  ನೋಡಿ  ನನ್ನ  ಕಣ್ಣುಗಳು ಕೊಳೆಯಾಗಿವೆಯೋ ಆ ಕೊಳೆಯೆಲ್ಲವನ್ನು ತೊಳೆದುಕೊಳ್ಳಲು ಕವಿ ಬಯಸಿದ್ದಾನೆ.
      ಈ ಸೂರ್ಯಾಸ್ತದ ಸಮಯ ಒಂದು ಸುಂದರ ನೋಟವಷ್ಟೇ ಅಲ್ಲ;  ಅದೊಂದು ಸುಂದರ ಸಂದರ್ಭ. ತಂಗಾಳಿಯಿರಬಹುದು, ಗುಡಿಗೆ ಮರಳುವ ಹಕ್ಕಿಗಳ ನೋಟವಿರಬಹುದು,  ಆ ಸಂದರ್ಭದಲ್ಲಿ ಒಂದು ಸಮಯೋಚಿತ ರಾಗಾಲಾಪ ನಮಗರಿವಿಲ್ಲದಂತೆ ನಮ್ಮ ಮೈ ಮನವನ್ನು ಆವರಿಸುವುದೋ ನಮ್ಮನ್ನು ಹೇಗೆ ತಲ್ಲೀನ ಗೊಳಿಸುವುದೋ ಹಾಗೆ ಈ ಸಂಧ್ಯಾರಾಗ ಎಂಬ ಕವಿತೆಯೂ ಕೂಡಾ. 
  
                                R ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ ಆಗ ಸಂಜಿ ಆಗಿತ್ತ.
     ರಾಗರತಿ ಎಂಬ ಹೆಸರಿನ ಈ ಕವನದಲ್ಲಿ ಬೇಂದ್ರೆಯವರು ಹೆಣ್ಣೊಬ್ಬಳ ಭಾವವಿಕಾರವನ್ನು ಸಂಧ್ಯಾಕಾಲದ ಪ್ರಕೃತಿ ಸೌಂದರ್ಯದೊಡನೆ ಸಮೀಕರಿಸಿ ವರ್ಣಿಸಿದ್ದಾರೆ. ಹೆಣ್ಣೊಬ್ಬಳ ಮನದಲ್ಲಿ ಮಲಗಿರುವ ಬಯಕೆಯು ಅಕಾಲದಲ್ಲಿ ಹೆದೆಯಾದಿಸುತ್ತಿರುವ ವರ್ಣನೆಯು ಈ ಭಾವಗೀತೆಯ ತಿರುಳಾಗಿದೆ.
     ಮುಗಿಲ ಮಾರಿಗೆ ಅಂದರೆ  ಆಕಾಶವೆಂಬ ಮುಖಕ್ಕೆ ರಾಗರತಿ ಅಂದರೆ ಕೆಂಬಣ್ಣದ ನಂಜು ಅಂದರೆ ವಿಷವು ಏರಿತ್ತು ಆಗ ಸಂಜೆ ಆಗಿತ್ತು. ಸೂರ್ಯಾಸ್ತದ ಸಮಯದಲ್ಲಿ ರಕ್ತರಂಜಿತವಾದ  ಪಡುವಣ ಭಾನು ನಂಜಿನ ರೀತಿಯಲ್ಲಿ ಕೆಂಪಾಗಿತ್ತು. ಆ ಸಮಯದಲ್ಲಿ ನೆಲದಂಚಿನ ಮಂಜಿನ ಮುಸುಕು – ಅಂದರೆ ವಾಸ್ತವದ ಪ್ರಜ್ಞೆ , ತಿಳುವಳಿಕೆ ಮಲಗಿಕೊಂಡಿತ್ತು.  ಸಂಜೆಯ ಸಮಯ ಹೆಣ್ಣೊಬ್ಬಳ ಬಯಕೆಯ ನನ್ಜೆರಲು ಅದು ಸರಿಯಾದ ಸಮಯವಲ್ಲ. ಈ ತಿಳುವಳಿಕೆ ಆಕೆಯಲ್ಲಿ ಮಲಗಿತ್ತು ಅಂದರೆ ಇರಲಿಲ್ಲ ಎಂದರ್ಥ.
    ಬೀದಿಗೆ ಚಂದಿರ ಅಂದರೆ ಹುಣ್ಣಿಮೆಯ ಮರುದಿನದ ಚಂದಿರ ಆ ಸಂಜೆ   ಸೂರ್ಯ ಚಂದ್ರ ಇಬ್ಬರು ಪಶ್ಚಿಮದಲ್ಲೇ ಇದ್ದಾರೆ. ಚಂದ್ರನೋ  ರೇಖೆಯ ರೀತಿಯಲ್ಲಿ ಕಾಣುತ್ತಿದ್ದಾನೆ. ಆಗಷ್ಟೇ ತೊಗಚಿ ಹೂವಿನ ರೀತಿಯಲ್ಲಿ ಮೂಡಿದ ಚಂದ್ರ ಹತ್ತಿರದಲ್ಲೆ ಇದ್ದ ಬೆಳ್ಳಿಯ  ಅಂದರೆ ಶುಕ್ರ ಗ್ರಹದ ಜೊತೆಯಾಗುತ್ತಾನೆ. ಇರುಳ ಹೆರಳಿನ ಅರಳು ಮಲ್ಲಿಗೆಯಂತೆ ಕಂಡ ಚಂದ್ರ ಬಿಂಬಕ್ಕೆ ಬೆಳ್ಳಿ ಜಾಳಿಗೆ ಹಿಡಿಯುವ ರೀತಿಯಲ್ಲಿ ಅತ್ತ ಇತ್ತ ಮಿಸುಕಾಡುತ್ತಿದ್ದ. 
    ಆದರೆ ಬೊಗಸೆಗಣ್ಣಿನ ಬಯಕೆಯ ಹೆಣ್ಣು ನಿರುತರಲು ಬಾವಿಗೆ ಹೊರಟಿದ್ದಳು. ನಿರಿನೋಮ್ದಿಗೆ ಮನೆಗೆ ಮರಳುತ್ತಿದ್ದಳು. ಆದರೆ ಆಕೆಯ ಮನಸ್ಸು ಮನೆಗೆ ಮರಳಲು ಸಿದ್ಧವಿಲ್ಲ.  ಅಕಾಲದಲ್ಲಿ ಹುಟ್ಟಿದ ಬಯಕೆಯನ್ನು ತಹಬಂದಿಗೆ ತರಲು ಆಗುತ್ತಿಲ್ಲ. ಸಾಕಿದ ಬೆಕ್ಕು ಕೈಕಾಲಡಿಗೆ ಸಿಕ್ಕಿ  ನಡಿಗೆಗೆ ತೊಂದರೆ ಕೊಡುವ ರೀತಿಯಲ್ಲಿ ಆಕೆಯೇ  ಸಾಕಿ ಬೆಳೆಸಿದ ಬಯಕೆ ಆಕೆಗೆ ಮನೆಗೆ ಮರಳಲು ತೊಂದರೆ ಕೊಡುತ್ತಿತ್ತು. ಬೆಕ್ಕಿನ ಹಾಗೆ ಮಳ್ಳಗಾಳಿ ಆಕೆಯ ಸೆರಗನ್ನು ಹಿಡಿದು ಎಳೆತಿತ್ತು ಆಕೆಯ ಬಯಕೆಯ ಪರಿಯನ್ನು ನೋಡಿ ಬೆರಗಾಗಿತ್ತು. ಮತ್ತೆ ಆಕೆಯ ಮನದ ಗೆಳೆಯ  ನಡೆದಂತೆ ಅನುಸರಿಸಿ ಬರುವ ನೆರಳಿನಂತೆ.  ಹಿಂದೆ ಹಿಂದೇ ಬರುತ್ತಿದ್ದಾನೆ. –ಕೈ ಕಾಲಿಗೆ ತೊಡರುವ ಬೆಕ್ಕು ಸೆರಗು ಹಿಡಿದು ಚೀಷ್ಟೆ ಮಾಡುವ ಗಾಳಿ, ಹಿಂದೆ ಹಿಂದೆ ಬರುವ ಮನದ ಗಿಣಿ ಇವೆಲ್ಲ ಆಕೆಯ ಬಯಕೆ, ಮತ್ತೆ ಆಕೆಯ ಗೆಳೆಯನೇ ಆಗಿದ್ದಾನೆ.
   ಹೀಗೆ ಸಂಜೆ ಹೊತ್ತಲ್ಲಿ ನೀರಿಗೆ ಹೊರಟ ಹಳ್ಳಿಯ ಹೆಣ್ಣುಮಗಳ ಮನದೊಳಗಿನ ಭಾವನೆಯನ್ನು ಬಯಲು ಮಾಡುವ ವಿಶಿಷ್ಟ ರೀತಿ ಬೇಂದ್ರೆಗೆ ಮಾತ್ರ ಸಾಧ್ಯವೇನೋ!
   

ಎಲ್ಲಿರುವುದು ನಾ ಸೇರುವ ಊರು  ?
ಬಲ್ಲಿದರರಿಯದ, ಯಾರು ಕಾಣದ
ಎಲ್ಲಿಯೂ ಇರದಾ ಊರು .
   ಪ್ರತಿಯೊಬ್ಬ ಮನುಷ್ಯ ಒಂದಲ್ಲ ಒಂದು ಸಂದರ್ಭದಲ್ಲಿ ಅಥವಾ ಜೀವನದ ಯಾವುದೋ ಒಂದು ಕಾಲಘಟ್ಟದಲ್ಲಿ ನಮ್ಮೆಲ್ಲರ ಬದುಕಿನ ಆಚೆಗೆ ಇರಬಹುದಾದ ಬದಕಿನ ಬಗ್ಗೆ ಕುತೂಹಲಗೊಳ್ಳುತ್ತಾನೆ.  ನಮ್ಮ ಸಂಸ್ಕೃತಿ ಬಿಂಬಿಸಿ ಬೆಳೆಸಿದ ಜನ್ಮ ಜನ್ಮಾಂತರದ ಕಲ್ಪನೆ ಇದಕ್ಕೆ ಕಾರಣವಿರಬಹುದು. ಈ ಜೀವನಯಾತ್ರೆಯ ನಂತರ ನಾವು ಸೇರುವ ಉರು ಯಾವುದೂ? ಈ ಭಾವಸಾಗರದ ಆಚೆಯ  ದಡ ಹೇಗಿದೆ? ನಾವಲ್ಲಿ ತಲುಪಬಹುದೇ? ಇಂತಹ ಕುತೂಹಲ ಎಲ್ಲರಿಗೂ ಬರುವುದು ಸಹಜ. ಜ್ಞಾನಿಗಳನ್ನು ಈ ಪ್ರಶ್ನೆ ಜಿಜ್ಞಾಸೆಯಾಗಿ ಕಾಡಬಹುದು.
   ಕನ್ನಡದ ಇನ್ನೊಬ್ಬ ಕವಿ ಹೀಗೆ ಹಾಡಿದ್ದಾರೆ. -  ಈಚೆಗಾನು ಆಚೆಗಾತ ನಡುವೆ ಹೊಳೆಯು ಹರಿದಿದೆ.  ಅಚ್ಚು ಮೆಚ್ಸಿನಾತನೊಲ್ಮೆ ನನ್ನನಾಚೆ ಕರೆದಿದೆ.      ಪರಲೋಕದ ಆ ಸೆಳೆತ ನಮ್ಮನ್ನು ಅಂತರ್ಮುಖಿಯನ್ನಾಗಿಸುತ್ತದೆ. ಆಗ ಮನಸ್ಸು  “ ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ “  ಎಂದು ಭಾವಿಸುತ್ತದೆ.    ಕೊನೆಗೆ ನಾ ಸೇರುವ ಊರು ಯಾವುದು ? ಅದು ಎಲ್ಲಿದೆ? ಹೇಗಿದೆ? ಅದನ್ನು ಈಗಾಗಲೇ ಯಾರು ನೋಡಿದ್ದಾರೆ? ಅಲ್ಲಿರುವವರು ಯಾರು? ಎಂಥವರು  ಎಂಬೆಲ್ಲ ಪ್ರಶ್ನೆಗಳು ಕಾಡುವುದು ನಿಜವೇ, ಸಹಜವೇ.
     ಬಲ್ಲವರರಿಯದ ಆ ಉರು.        ಆ ಊರನ್ನು ನಿಜದಲ್ಲಿ ಯಾರೂ ಇನ್ನೂ  ನೋಡಿಲ್ಲ. ಬಲ್ಲವರು ಕೂಡಾ, ಋಷಿಮುನಿಗಳು ಕೂಡಾ ನೋಡಿಲ್ಲ. ಆದರೆ ಅವರು ಅದನ್ನು ಬಯಸಿದ್ದಾರೆ. ಏಕೆಂದರೆ ಆ ಊರು ಭವ ಭಯವಿಲ್ಲದ ಊರಂತೆ. ಮತ್ತದು ನಮ್ಮೆಲ್ಲರ ತವರುರಂತೆ.
    ಈ  ಗೀತೆಯ ಮೊದಲರ್ಧ ಭಾವ  ಇದಾದರೆ ಮುಂದಿನ ನುಡಿಯ ಅರ್ಥ ಭಿನ್ನವಾಗಿದೆ.   ಕವಿ  ಎಲ್ಲಿರುವುದು ನಾ ಸೇರುವ ಉರು ಎಂದು ಮೊದಲು ಪ್ರಶ್ನಿಸಿದರೆ  ಇಲ್ಲಿ ನಾ ಬಯಸುವ ಉರು ಇಲ್ಲೇ ಇದೆ ಎನ್ನುತ್ತಾರೆ. ಕವಿ ಈಗಿರುವ ಬದುಕಿನಿಂದ ವಿಮುಖರಾಗಿಲ್ಲ. ಅಲ್ಲಿರುವುದು ನಾ ಸೇರುವ ಊರು ಬಲ್ಲಿದರರಿತಾ ಆ ಊರು ಎಲ್ಲಿಯೂ ಇರುವಾ ಊರು  ಎನ್ನುತ್ತಾರೆ.
   ಜ್ಞಾನಿಗಳಿರುವುದೇ ಆ ಉರು
ಧ್ಯಾನದ ಮೇರೆಯೇ ಆ ಊರು
ನಾನಿಹ ಊರು, ಸಮೀಪದ ಊರು
ಮೌನತೆ ಯಾಳುವ ಉರು 
ಅದು ಜೀರುಂಡೆ ಯಾ  ಧ್ವನಿಯಾಳುವ ಮಲೆನಾಡಲ್ಲದೆ ಮತ್ತಾವುದು?  ತನ್ನ ಉರುಂನು, ಮಲೆನಾಡನ್ನು ಬಿಟ್ಟಿರಲಾರದ ಕವಿ ಹೀಗೆ ಹಾಡುವುದು ಸಹಜವೇ! 

   ಕಾಣದಾ ಕಡಲಿಗೆ ಹಂಬಲಿಸಿದೆ ಮನ
          ತೊರೆಯ ಹಂಬಲ     ಜಿ ಎಸ. ಶಿವರುದ್ರಪ್ಪ ನವರ ಒಂದು  ಪ್ರಸಿದ್ಧ ಭಾವಗೀತೆ . ಕಾಣದಾ ಕಡಲಿಗೆ ಹಂಬಲಿಸಿದೆ ಮನ ಈ ಗೀತೆ ಅವರ ಚೆಲುವು- ಒಲವು ಕವನ ಸಂಗ್ರಹದಲ್ಲಿದೆ. ಇದೇ ಕವಿ ತಮ್ಮ ಇನ್ನೊಂದು ಪ್ರಸಿದ್ಧ ಭಾವಗೀತೆ ವೇದಾಂತಿ ಹೇಳಿದನು ಎಂಬ ಗಿತೆಯಲ್ಲಿ   ಕವಿಗೂ   ವೇದಾಂತಿಗೂ   ಸ್ಪಷ್ಟ ವ್ಯತ್ಯಾಸವನ್ನು ಗುರುತಿಸುತ್ತಾರೆ. ವೇದಾಂತಿ ಹೊನ್ನೆಲ್ಲ ಮಣ್ಣು   ಎಂದು ಹೇಳಿದರೆ ಬದುಕನ್ನು ಬಹುವಾಗಿ ಪ್ರೀತಿಸುವ ಕವಿ ಮಣ್ಣೆಲ್ಲ ಹೊನ್ನು ಹೊನ್ನು ಎಂದು ಹಾಡುತ್ತಾನೆ. ಸಾಮಾನ್ಯವಾಗಿ ಎಲ್ಲಾ ಕವಿಗಳೂ ಬದುಕನ್ನು ಪ್ರೀತಿಸುತ್ತಾರೆ ಮತ್ತು ಪ್ರಾಕೃತಿಕವಾದ ಚೆಲುವು ಒಲವುಗಳಿಗೆ ಮರುಳಾಗುತ್ತಾರೆ. ಆದಾಗ್ಯೂ  ಒಂದಲ್ಲ ಒಂದು ಕಾಲಘಟ್ಟದಲ್ಲಿ ಬಹಳಷ್ಟು ಕವಿಗಳು ನಮ್ಮೆಲ್ಲರ ಬದುಕಿನ ಆಚೆ ಏನಿದೆ ಎಂಬ ವೈದಾಂತಿಕ ಕುತೂಹಲದಲ್ಲಿ ಸಿಕ್ಕಿಕೊಳ್ಳುತ್ತಾರೆ. ಆಸ್ತಿಕಭಾವದಲ್ಲಿ ಹೇಳುವುದಾದರೆ ನಮ್ಮೆಲ್ಲರ ಬದುಕಿನ ಹಿಂದೆ ಯಾವುದೋ ಒಂದು ಶಕ್ತಿ ಇದೆ, ಒಂದು ಪ್ರೇರಣೆಯಿದೆ, ಒಂದು ಮಾತೃ ಹೃದಯವಿದೆ. ಆ ಶಕ್ತಿಯೇ ಈ ಸುಂದರ ಬದುಕನ್ನು ಮುನ್ನಡೆಸುತ್ತದೆ. ಈ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಕವಿ ಹೃದಯ ಈ ವಿಷಯದಲ್ಲಿ ಭಾವುಕವಾಗುತ್ತದೆ. ಬದುಕಿನಾಚೆಯ ಆ ಅಗೋಚರ ಪ್ರಪಂಚ ಹೇಗಿರಬಹುದೆಂದು ಕುತೂಹಲಗೊಂಡು  ಅದಕ್ಕಾಗಿ ಕವಿ ಮನಸ್ಸು ಹಂಬಲಿಸುತ್ತದೆ. ತೊರೆಯ ಹಂಬಲ ಎಂಬ ಈ ಗೀತೆಯನ್ನು ಇಂತಹ ಒಂದು ವೇದಾಂತದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬಹುದು.
      ಮೇಲ್ನೋಟಕ್ಕೆ ಈ ಕವಿತೆಯಲ್ಲಿ ಚಿಕ್ಕ ತೊರೆಯೊಂದು ಕಡಲನ್ನು ಸೇರುವ ಹಂಬಲದಲ್ಲಿ ಹೇಗೆ ಸಾಗುತ್ತದೆ ಎಂಬುದರ ವರ್ಣನೆ ಇರುವಂತೆ ಕಂಡು ಬರುತ್ತದೆ. ಸಹಜವಾಗಿ ಚಿಕ್ಕ ತೊರೆಗೆ ಕಡಲಿನ ಸ್ವರೂಪ, ಆಳ, ಅಗಲಗಳ ಪರಿಚಯವಿಲ್ಲ. ಆದರೆ - ತಾನು ಆ ಕಡಲಿಗೆ ಸೇರಬೇಕೆಂಬ ಹಂಬಲವಿದೆ. ಅದೇ ಹೊತ್ತಿಗೆ ಅನುಮಾನವೂ ಕಾಡುತ್ತದೆ ಕೊನೆಯಲ್ಲಿ ತಾನೂ ಕಡಲಿಗೆ ಸೇರಬಲ್ಲೇನೆ? ಎಂದು ಸೇರುವೆ? ಅಥವಾ ಪಯಣದ ದಾರಿಯಲ್ಲಿ ಇಂಗಿ ಮರೆಯಾಗುವೇನೆ?    ತೊರೆಯ  ಹಂಬಲದ ತೀವ್ರತೆ ಹಾಡಿನ ಸಾಲು ಸಾಲಿನಲ್ಲಿ ವ್ಯಕ್ತವಾಗಿದೆ.   ಕಾಣಬಲ್ಲೆನೆ ಒಂದು ದಿನ ಕಡಲನು  ಕೂಡಬಲ್ಲೇನೆ ಒಂದು ದಿನ?
   ಕಡಲಿನ ಮೊರೆತದ ಜೋಗುಳ ಒಳಗಿವಿಗೆಂದೂ ಕೇಳುತಿದೆ   ಮತ್ತದೇ ಕವಿಯ ಮನಸ್ಸು ಬದುಕಾನಚೆಯ ಜೀವದ ಅಮೂರ್ತ ಆಯಾಮದೆಡೆ ಚಿಂತಿಸುತ್ತದೆ, ಹಂಬಲಿಸುತ್ತದೆ. ಕಡಲಿನ ಮೊರೆತ ತೊರೆಗೆ ಜೋಗುಳದಂತೆ ಕೇಳುತ್ತದೆ. ಬದುಕಿನ ಅನಿವಾರ್ಯವಾದ ಓಟದಿಂದ ಆಯಾಸಗೊಂಡ ನಮ್ಮೆಲ್ಲರ ಒಳಮನಸ್ಸು ವಿಶ್ರಾಂತಿಯನ್ನು ಬಯಸುತ್ತದೆ. ಅದು ಒಂದರೆಘಳಿಗೆಯ ವಿಶ್ರಾಂತಿಯಲ್ಲ . ತಾಯಿಯ ತೊಡೆಯ ಮೇಲೆ ಮಲಗಿ ಆಕೆ ಹಾಡುವ ಜೋಗುಳವನ್ನು ಕೇಳುತ್ತ ಮೈ ಮರೆತು ಮಲಗುವ ಮಗುವಿನ ನಿರಾಮಯತೆಯನ್ನು ಅದು  ಬಯಸುತ್ತದೆ.
      ಹಾಡಿನ ಒಂದೊಂದು ನುಡಿಯೂ ಅರ್ಥಗರ್ಭಿತವಾಗಿದೆ; ಭಾವಪೂರ್ಣವಾಗಿದೆ.  ಎಂತಿರುವುದು ಆ ಕಡಲು? ಎಲ್ಲಿರುವುದು ಆ ಕಡಲು? ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿರುವುದಂತೆ!   ಮುಂದಿನ ನುಡಿಯಲ್ಲಿ  “ ಜಟಿಲ ಕಾನನದ ಕುಟಿಲ ಪಥಗಳಲಿ ಹರಿಯುವ ತೊರೆ ನಾನು “ ಇದು ನಮ್ಮ ಇಂದಿನ ಬದುಕನ್ನು ಬಿಂಬಿಸುವ ಮಾತಾಗಿದೆ. ಇಂದಿನ ಬದುಕು ಸರಳವಾಗಿಲ್ಲ. ಸುಗಮದ ಆನಂದದಾಯಕವಾದ ದಾರಿ ಇದಕ್ಕಿಲ್ಲ. ಜಟಿಲ ಕಾನನದ ಕುಟಿಲ ಪಥಗಳಲ್ಲಿ ಸಾಗಬೇಕಾಗಿದೆ. ಇಂತಹ ಕಠಿಣ ಪಥಗಳಲ್ಲಿ ಸಾಗಿ ನಾನು ಕೊನೆಗೆ ನಿನ್ನನ್ನು ಸೇರಬಲ್ಲೇನೆ?   ಸಣ್ಣ ತೊರೆಗೆ ಇಂತಹ ಅನುಮಾನವೊಂದು ಕಾಡುವುದು ಸಹಜ.
  ಕೇಳುತ್ತಾ ಹೋದಂತೆ ಈ ಗೀತೆ ನಮ್ಮನ್ನು  ಗಂಭೀರವಾಗಿಸುತ್ತದೆ, ನಮ್ಮನ್ನು  ಮೌನಕ್ಕೆ ದೂಡುತ್ತದೆ.   
  
ಮೊದಲದಿನ ಮೌನ .......
     ಪ್ರೇಮಕವಿ ಕೆ. ಎಸ.  ನರಸಿಂಹಸ್ವಾಮಿ  ಅವರು ದಾಂಪತ್ಯ ಜೀವನದ ಎಲ್ಲಾ ಮಗ್ಗಲುಗಳನ್ನು ಹಾಡಾಗಿಸಿದ್ದಾರೆ.  ಎಲ್ಲಾ ಭಾವಗಳಲ್ಲಿ ಪ್ರೆಮಭಾವವೇ ಹೆಚ್ಚು ಆಪ್ತ ಮತ್ತು ಆಕರ್ಷಕ.  ಪ್ರೇಮಗೀತೆಗಳನ್ನು ಹಾಡದ ಕವಿಗಳಿಲ್ಲ. ಅದರಲ್ಲೂ ದಾಂಪತ್ಯದ ಅನುಕ್ಷಣದ ಸೊಗಸನ್ನು , ಸುಖವನ್ನು  ಕವಿ ತುಂಬಾ ಸರಳವಾಗಿ,  ನವಿರಾಗಿ, ನವೀನವಾಗಿ ಚಿತ್ರಿಸಿದ್ದಾರೆ.    ಮದುವೆ ಮತ್ತು ಅದರ ಆಚೀಚಿನ ಸಂದರ್ಭದ ಗೀತೆಗಳಂತೂ ಅವರಿಗೆ ಹೆಸರನ್ನು ತಂದ ಸರ್ವಶ್ರೇಷ್ಥ  ರಚನೆಗಳೆನ್ನಬಹುದು.   ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಣಿನ ಮೊದಲ, ಎರಡನೆಯ, ಮತ್ತು ಮೂರನೆಯ ದಿನಗಳು ಹೇಗಿರುತ್ತವೆ?  ಆ ದಿನಗಳಲ್ಲಿ ಆಕೆಯ ಭಾವತೀವ್ರತೆ ಎಂಥಹದ್ದು ? ಎಂಬುದನ್ನು ತುಂಬಾ ಚೆಂದದ ಹಾಡಾಗಿಸಿದ್ದಾರೆ.    ಕೆ. ಎಸ. ನರಸಿಂಹಸ್ವಾಮಿ . 
   ಮೊದಲ ದಿನ ಮೌನ ... ನಿಜ,  ಹೆಣ್ಣು ತಾನು  ಹುಟ್ಟಿ, ಬೆಳೆದು, ನಲಿದ ತವರು ಮನೆಯನ್ನು   ಏಕಾಏಕಿ ಬಿಟ್ಟು, ಪ್ರೆಮವೊಂದನ್ನೇ ನಂಬಿ ಎಂದೂ ಕಾಣದ,   ಯಾರ ಪರಿಚಯವೂ  ಇಲ್ಲದ, ಅಷ್ಟೇಕೆ ಸ್ವತಃ ಕೈಹಿಡಿದ ಗಂಡನ ಪರಿಚಯವೇ ಸರಿಯಾಗಿ ಆಗಿರದ ಸಂದರ್ಭದಲ್ಲಿ ಆತನ ಮನೆಗೆ ಬಂದಾಗ ಆಕೆಯ ಮನೋಸ್ಥಿತಿ ಹೇಗಿರಬಹುದು?
      ಮೊದಲದಿನ ಮೌನ, ಅಳುವೇ ತುಟಿಗೆ ಬಂದಂತೆ, ಆದರೆ ಅಳಬಾರದಲ್ಲ, ಅತ್ತು ಲಘುವಾಗಬಾರದೆಂಬ ಸಣ್ಣ ಎಚ್ಚರಿಕೆಯೂ ಇರಬಹುದು.  “ ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ“  ಹೊಸಮನೆಯ ಬಂಧು ಬಾಂಧವರೆಲ್ಲ ಈಕೆಯನ್ನು ಕಂಡೂ ಕಾಣದಂತೆ ಗಮನಿಸುತ್ತಿದ್ದಾರೆ. ಇದು ಆಕೆಗೂ ತಿಳಿದಿದೆ. ಮನೆ ತುಂಬಿದ  ಹೊಸ ಹುಡುಗಿ ಹೇಗಿದ್ದಾಳೆ ಎಂದು ಆ ಕಣ್ಣುಗಳೆಲ್ಲ ಅಳೆಯುತ್ತಿವೆ.  ಕಂಡೂ ಕಾಣದಂತೆ ಬಂದು ಇರಿವ ಅವರ ಕನ್ನೋಟಗಳನ್ನು ಆಕೆ ಎದುರಿಸಲಾರಳು . ಆದರೆ ಅದು ಅನಿವಾರ್ಯ. ಆಕೆಗೆ ಅನಿಸುವುದು ಹೀಗೆ, ‘ ನನ್ನ ಜೀವನದ ಸಂಭ್ರಮದ ಜಾತ್ರೆ, ತವರಿನಲ್ಲಿ ನಲಿದ ಆ ದಿನಗಳು ಮುಗಿದೇ ಹೋಯಿತು   ಎಂದು.
      ಆದರೆ ಇದೇ ದುಗುಡ, ಒತ್ತಡದ ಭಾವ ಎರಡನೆಯ ದಿನ ತುಸು ಕಡಿಮೆಯಾದಂತೆ ಅನಿಸುವುದು.   ಮದುಮಗಳು ನಿಧಾನಕ್ಕೆ ತೆರೆದುಕೊಳ್ಳುವಳು. “ ಎರಡನೆಯ ಹಗಲು ಇಲಿಮುಖವಿಲ್ಲ ಇಷ್ಟು ನಗು ಮುಗುತಿಗು ಮಿಂಚು ಒಳ ಹೊರಗೂ “   ದಟ್ಟ ಅರಣ್ಯದಲ್ಲಿ ದಾರಿತಪ್ಪಿದವಳಂತಿದ್ದ ಅವಳ ಮೊದಲದಿನದ ಮುಖಭಾವ ಇಂದಿಲ್ಲ. ಅವಳ ಮುಖದಲ್ಲಿ ಒಂದು ತಿಳಿಯಾದ ಪ್ರಸನ್ನತೆ ಕಾಣಿಸಿಕೊಳ್ಳಲೋ ಬೇಡವೋ ಎಂಬಂತೆ  ಅನುಮಾನದಿಂದ ಸುಳಿದು ಮರೆಯಾಗುತ್ತಿದೆ.      ಕವಿಯ ಅಂದಾಜು ಎಷ್ಟು ಸೊಗಸಾಗಿದೆ ನೋಡಿ, ಮೂಗುತಿಯ ಮಿಂಚು ಒಳ ಹೊರಗೂ . ಅವಳ ಮುಗುಳ್ನಗುವಿಗೆ ಒಂದು ಅನುಮಾನ- ಪ್ರಕಟಗೊಳ್ಳಲೋ  ಬೇಡವೋ ಎಂದು. ಆಕೆ ಮೆಲ್ಲಗೆ ಒಂದೊಂದೇ ಮಾತನಾಡಿ ಮನೆ ಮಂದಿಯೊಂದಿಗೆ ಬೆರೆಯಲು ಮುಂದಾಗುತ್ತಾಳೆ. ಆಕೆಯ ಅಂದಿನ ಮಾತು ಹೀಗಿತ್ತೆಂದು ಕವಿ ಹೇಳುತ್ತಾರೆ- ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು     ಮತ್ತೆ ಅದು ಬೇಲಿಯೊಳಗೆ ಹಾವು ಹರಿದಂತೆ ಇರುವ ಮಾತು.  ಬೇಲಿಯೊಳಗೆ ಕಾಣಿಸಿ ಕೊಂಡ ಹಾವು ಸರಕ್ಕನೆ ಮರೆಯಾಗಿ ಹೋಗುವಂತೆ ಆಕೆಯ ಮಾತು ಇತ್ತು.   ಮೂರನೆಯ  ಸಂಜೆ ಆಕೆ ಸಂಜೆ ಮಲ್ಲಿಗೆಯಂತೆ ಅರಳುತ್ತಾಳೆ. ಹೆರಳಿನ ತುಂಬ ಮೂಡಿದ ಹೂವಿಗೂ ಜೀವ ಬಂದಂತೆಕಾಣುತ್ತಿದೆ.   “ ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ ಹುಣ್ಣಿಮೆಯ ಹಾಲು ಹರಿದಂತೆ “  ಮುಂದಿನ ದಿನಗಳೆಲ್ಲ ಆ ದಂಪತಿಗಳ ಪಾಲಿಗೆ ಹುಣ್ಣಿಮೆಯ ದಿನಗಳೇ ಆಗಿರುವುದು. ಆಕೆ ಚೆಲ್ಲಿದ ಬೆಳದಿಂಗಳು ಆತನ ಮೈಮನಗಳನ್ನು ಬೆಳಗುವುದು.   ಆದರಿಷ್ಟೇ- ಮೊದಲದಿನ ಮಾತ್ರ ಮೌನ.......
   
  
ನೇಗಿಲು ಹಿಡಿದು ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ .. 
    ರೈತರು ದೇಶದ ಬೆನ್ನೆಲಬು ಎನ್ನುತ್ತಾರೆ. ಕೃಷಿ ಪ್ರಧಾನವಾದ  ನಮ್ಮ ದೇಶದಲ್ಲಿ ಕೃಷಿಕರಿಗೆ ಎಷ್ಟು  ಮಹತ್ವ ಸಿಗಬೇಕಿತ್ತೋ ಅಷ್ಟು ಸಿಗುತ್ತಿಲ್ಲ ಎನ್ನಬಹುದು. ರೈತ್ಯರೇನಾದರೂ ಅನ್ನವನ್ನು ಬೆಳೆಯುವುದನ್ನು  ನಿಲ್ಲಿಸಿದರೆ ಅಥವಾ ನಿಧಾನಗೊಳಿಸಿದರೆ  ಆಗ ಲೋಕಕ್ಕೆ ಅವನಿರುವಿಕೆ ಮತ್ತು ಮಹತ್ವ ಅರ್ಥವಾಗುವುದು.. ರೈತ ಜನರ ಮಹತ್ವವನ್ನು ಸಾರುವ ಮತ್ತು ಲೋಕಕ್ಕೆ ಅವರ ಅನಿವಾರ್ಯತೆಯನ್ನು ಬಿಂಬಿಸುವ  “ ನೇಗಿಲಯೋಗಿ ”   ಈ ಹಾಡು ಕುವೆಂಪು ಅವರಿಂದ ರಚಿತವಾಗಿದೆ. ಕರ್ನಾಟಕದಾದ್ಯಂತ ಈ ಹಾಡು ರೈತಗೀತೆ ಎಂದೆ ಬಿಂಬಿತವಾಗಿದೆ. ರೈತ ಸಮಾವೇಶಗಳಲ್ಲೆಲ್ಲ ಕಡ್ಡಾಯವೆಂಬಂತೆ  ಈ ಅರ್ಥಪೂರ್ಣವಾದ ಹಾಡನ್ನು ಹಾಡಲಾಗುತ್ತದೆ.
     ನಿಜ, ರೈತನ ಜೀವನ ಒಬ್ಬ ಸಂತನ ಜೀವನದ ಹಾಗೇ ಸಾಗುವುದು. ನಿಸ್ವಾರ್ಥಿಯಾದ ಆತ ಯೋಗಿಯಂತೆ ಬಾಳುತ್ತಾನೆ.  ರೈತ ತನ್ನ ಕರ್ಮವನ್ನೇ ಪೂಜೆಯೆಂದು  ಭಾವಿಸಿ ನಿರಂತರವಾದ ದುಡಿಮೆಯಲ್ಲಿ ತೊಡಗುತ್ತಾನೆ. ಆಳಾಗಿ ದುಡಿ ಅರಸನಾಗಿ ಉಣ್ಣು ಎನ್ನುವರು ಅದೇರೀತಿ   “ಕಷ್ಟದೊಳನ್ನವ ದುಡಿವನೆ ತ್ಯಾಗಿ, ಸೃಷ್ಟಿಯ ನಿಯಮದೊಳವನೇ ಭೋಗಿ “  ಅಂದರೆ ಯಾರು ಕಷ್ಟದಿಂದ ಅನ್ನವನ್ನು ಬೆಳೆಯುತ್ತಾರೋ ಅವರೇ ಅದನ್ನು ಉಣ್ಣಲು ಅರ್ಹರು.    ನಿಜವಾದ ತ್ಯಾಗಿಯೇ ಭೋಗಕ್ಕೆ ಅರ್ಹರು. ಉಣ್ಣುವ ಸಮಯದಲ್ಲಿ ಆತ್ಮವಿಮರ್ಶೆಗೆ ಹಚ್ಚುವ ಹಾಡು ಇದಾಗಿದೆ.
      ಲೋಕದಲ್ಲಿ ಏನೇ ನಡೆಯಲಿ  ತನ್ನ ಕರ್ತವ್ಯವನ್ನು ಬಿಟ್ಟು ರೈತ ಬೇರೇನನ್ನೂ ಯೋಚಿಸುವುದಿಲ್ಲ.  “ರಾಜ್ಯಗಳುದಿಸಲಿ,  ರಾಜ್ಯಗಳಳಿಯಲಿ  ರೈತಮಾತ್ರ  ಬಿತ್ತುವುದನು ಬಿಡುವುದೇ ಇಲ್ಲ”    ಹಾಗೆ ನೋಡಿದರೆ  ಪ್ರಪಂಚದ ನಾಗರಿಕತೆಯೆಲ್ಲವೂ ನೇಗಿಲಿನ ಆಶ್ರಯದಲ್ಲಿ ಬಾಳಿ ಬದುಕಿದೆ.   ವಿಪರ್ಯಾಸವೆಂದರೆ ರೈತರ ದುಡಿಮೆಯ ಹೆಚ್ಚಿನ ಫಲವನ್ನು ರೈತರು ಉಣ್ಣುವುದಿಲ್ಲ.  ರೈತರ ದುಡಿಮೆಯ ಆಧಾರದಲ್ಲಿ  ದೊರೆಗಳು ದರ್ಪದಿ ಆಳಿದರು    ಕೇವಲ ದೊರೆಗಳಷ್ಟೇ ಅಲ್ಲ;    “ ನೇಗಿಲ ಬಳದೊಳು ವಿರರು ಮೆರೆದರು, ಶಿಲ್ಪಿಗಲೆಸೆದರು, ಕವಿಗಳು ಬರೆದರೂ “       ಮಾನವಕೋಟಿಯ  ಜೀವಂತಿಕೆ ರೈತರ ಮೇಲೆಯೇ ನಿಂತಿದೆಯಲ್ಲವೇ?   ಹಾಡಿನ ಕೊನೆಯ ಸಾಲಂತೂ ತುಂಬಾ ಅರ್ಥಪೂರ್ಣವಾಗಿದೆ,  ನೇಗಿಲ ಮೇಲೆಯೇ ನಿಂತಿದೆ ಧರ್ಮ.     ಲೋಕಾರೂಡಿಯಲ್ಲಿ ಇರುವ ಮಾತಿನಂತೆ  ಓದಿ ಓದಿ ಮರುಳಾದ ಕೂಚುಭಟ್ಟ  ಓದಲಿಲ್ಲ ನಮ್ಮ ರೈತ ಅನ್ನ  ಕೊಟ್ಟ.   ಅಂದರೆ ಬೇರಾವ ಜನವರ್ಗ ಇಲ್ಲದಿದ್ದರೂ  ಜಗತ್ತು  ಕೆಲದಿನಗಳ ವರೆಗೆ ಮುಂದುವರಿಯಬಹುದು. ಆದರೆ ರೈತರಿಲ್ಲದಿದ್ದರೆ ಸ್ಥಿತಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.  ರೈತಜನರ ನಿಸ್ವಾರ್ಥ ಬದುಕು,  ಅವರ ಮನೋಧರ್ಮ, ಮುಗ್ಧತೆ, ಕ್ರಿಯಾಶೀಲತೆ, ಲೋಕಕ್ಕೆ ಆದರ್ಶ ಮತ್ತು ಅನಿವಾರ್ಯ. ಅವರನ್ನೂ , ಮತ್ತು ಅವರಲ್ಲಿರುವ ಆ  ಗುಣಗಳನ್ನೂ ಕಾಪಿಡುವುದು. ಲೋಕದ ಮೊದಲ ಆದ್ಯತೆಯಾಗಬೇಕು.  ಇಡೀ ಮನುಕುಲದ ನಾಗರಿಕತೆ, ಧರ್ಮ, ಸಂಸ್ಕೃತಿ, ಸಾಧನೆ, ಎಲ್ಲವೂ ನೇಗಿಲ ಹೊತ್ತ ರೈತನ ಇನ್ನೊಂದು ಹೆಗಲನ್ನೇ ಆಧರಿಸಿದೆ.
   
                              ಪ್ರಕೃತಿಯಂತೆ ಕವಿಯ ಮನಸು
 ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಳಾಸ ಎಂಬಂತೆ ಕವಿಯ ಕಲ್ಪನಾ ವಿಹಾರಕ್ಕೆ ಸೀಮೆಯೇ ಇಲ್ಲ. ಕವಿ ಮನಸ್ಸು ತಳೆಯುವ ರೂಪ  ಅದು ವಿಪುಲ ರೂಪವಾಗಿದೆ. ಅವನ ಮನಸ್ಸು ಬಾನಿನಷ್ಟು ಅಗಲವಾಗಿದೆ ಸಾಗರದಷ್ಟು ಆಳವಾಗಿದೆ. ಹೀಗೆಂದು ಜಿ ಎಸ. ಶಿವರುದ್ರಪ್ಪನವರು  ತಮ್ಮ ಕವಿಯ ಮನಸು ಎಂಬ ಕವದಲ್ಲಿ ಕವಿಮನಸಿನ ಸ್ವರೂಪವನ್ನು ವಿವರಿದ್ದಾರೆ. ಐವತ್ತರ ದಶಕದಲ್ಲಿ ರಚನೆಗೊಂಡ ಈ ಕವನ ಅವನ ಸಾಮಗಾನ ಎಂಬ ಕವನ ಸಂಕಲನದಲ್ಲಿ ಪ್ರಕಟಗೊಂಡಿದೆ.
  ಕವಿಯ ಮನಸ್ಸು ಪ್ರಕೃತಿಯಂತೆ ವಿಪುಲ ರೂಪವನ್ನು ಧರಿಸಿ ನಲಿಯುತ್ತದೆ. ತಿಳಿದವರು ಹೇಳುತ್ತಾರೆ – ಪ್ರಕೃತಿಯು ಬ್ರಹ್ಮನ ಎದೆಗನಸಿನ ಸೃಷ್ಟಿಯಂತೆ! ಆ ಬ್ರಹ್ಮ ಸೃಷ್ಟಿ ಅದ್ಭುತ ಮತ್ತು ಅನನ್ಯ ಎಂದೇ ಹೇಳಬಹುದು. ಜೀವ ಸಂಕುಲದ ಲೀಲೆ ನಡೆವ ಇನ್ನೊಂದು ಎಡೆ ನಮಗೆ ಕಾಣಸಿಗದು. ವಿಕಾಸಗೊಳ್ಳುತ್ತಿರುವ ಈ ಪ್ರಕೃತಿ ಪರಿಪೂರ್ಣತೆಯೆಡೆಗೆ  ಮುಖ ಮಾಡಿದೆ. ಎಲ್ಲರ ಒಳಿತು  ಎಲ್ಲರ ಸಹಬಾಳ್ವೆಗೆ ತುಡಿಯುವ ಪ್ರಕೃತಿ  “ ಸರ್ವೇ ಜನಾಃ ಸುಖಿನೋ ಭವಂತು ಮಂತ್ರವನ್ನು ಪಥಿಸುತ್ತದೆ. ಪ್ರಕೃತಿಯಲ್ಲಿ ವೈವಿಧ್ಯತೆಗಳಿದ್ದರೂ  ವಿರೋಧಾಭಾಸಗಲಿಲ್ಲ.  ಹಾಗೆಯೇ ಕವಿ ಮನಸ್ಸು ಕೂಡಾ ಪ್ರಕೃತಿಯಂತೆ ಸ್ವಚ್ಛ ಸುಂದರ ಬಹುರೂಪಧರಿಸಿ ಮಿಡಿಯುವಂತಹದ್ದು. ಪ್ರಕೃತಿಯ ಒಟ್ಟಾರೆ ಆಶಯ ಏನಿದೆಯೋ ಅದು ಕವಿಯ ಆಶಯವೂ ಆಗಿದೆ.       ಈ ಕವಿತೆ ಯಲ್ಲಿ ಪ್ರಕೃತಿಯ ಮನಸಿನಂತೆ ಕವಿಯ ಮನಸೂ ಇದೆ. ಎಂದು ಕವಿ ಹೇಳುತ್ತಾನೆ. ಪ್ರಕೃತಿ ಕೋಟಿ ಕಲ್ಪಗಳನ್ನು ದಾಟಿ ಮುನ್ನಡೆದಿರುವಂತೆ  ಕವಿಯ ಮನಸಿನ ಪಯಣವೂ ನಿರಂತರವಾಗಿದೆ. ನೆಲದವ್ವನ ಮೃದು ಮನಸ್ಸಿನ ತುಡಿತವೇ ಕವಿಮನಸ್ಸು . ಬಾನಿನಂತೆ ವಿಶಾಲವಾಗಿದೆ ಕವಿ ಮನಸ್ಸು. ಅಲ್ಲಿ ತೇಲಾಡುವ ಮೋಡಗಳು ಮಳೆಸುರಿಸಿ ನೆಲದ ದಾಹವನ್ನು ತಿರಿಸುವುದೋ ಕವಿಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಹಾಡು ನೊಂದವರ ಕಷ್ಟಕ್ಕೆ ಮಿಡಿಯುವಂಥದ್ದು.  ಜಿ ಎಸ. ಶಿವರುದ್ರಪ್ಪನವರ ಸುಂದರ ಭಾವ ಗಿತೆಗಳಲ್ಲಿ ಇದೂ ಒಂದಾಗಿದೆ.
    
 R ನೀನು ಮುಗಿಲು  ನಾನು ನೆಲ
    ಗಂಡು ಹೆಣ್ಣಿನ ಪ್ರೇಮ ಸಂಬಂಧವನ್ನು ಕವಿಗಳು ಪ್ರಕ್ರತಿಯಲ್ಲಿರುವ ಹಲವು ವಸ್ತು-ವಿಷಯಗಳಿಗೆ ಹೋಲಿಸಿ ಬಗೆಬಗೆಯಲ್ಲಿ ಕವಿತೆ ಕಟ್ಟಿ ಹಾಡಿದ್ದಾರೆ. ಆ ಸಂಬಂಧ  ನದಿ ಮತ್ತು ಕಡಲಿನ ಸಂಬಂಧದಂತಿದೆ, ಹೂವು ದುಂಬಿಯ ಪ್ರೇಮ ಸಂಬಂಧದಂತಿದೆ, ತರು ಲತೆಗಳ ಅವಲಂಬನೆಯಂತಿದೆ , ನೆಲ ಮುಗಿಲಿನ ಆಕರ್ಶಣೆಯಂತೆಯೂ ಇದೆ. ಕವಿ ಜಿ. ಎಸ. ಶಿವರುದ್ರಪ್ಪನವರು ನೆಲ ಮುಗಿಲಿನ ನಡುವೆ ಇಂಥ ಪ್ರನಯಭಾವವನ್ನು ಕಂಡು ನೀನು ಮುಗಿಲು ನಾನು ನೆಲ  ನಿನ್ನ ಒಲವೆ ನನ್ನ ಬಲ ಎಂದು ಹಾಡಿದ್ದಾರೆ. ವಾಸ್ತವದಲ್ಲಿ ಇಡೀ ಬ್ರಹ್ಮಾಂಡವೇ ಪ್ರಕೃತಿ ಮತ್ತು ಪುರುಷ ಎಂಬ ಎರಡು ನೆಲೆಗಳಲ್ಲಿ ನಿಂತು ಕ್ರಿಯಾಶೀಲಗೊಳ್ಳುತ್ತಾ ಸಾಗುತ್ತದೆ. ಸಾಮಾನ್ಯ ಜೀವೋತ್ಪತ್ತಿಯ ಸಂಬಂಧದಿಂದ  ಹಿಡಿದು ಸೃಷ್ಟಿಯ ಎಲ್ಲ ಸಮತೊಲನಗಳನ್ನು  ಈ ಆಕರ್ಷಣೆ ವಿಕರ್ಷಣೆಗಳ ಮೂಲಕವೇ ಸಾಧಿಸಿದಂತಿದೆ.   
       ಈ ಕವಿತೆಯಲ್ಲಿ ಕವಿ ಪ್ರಕೃತಿಯ ಸ್ಥಾನದಲ್ಲಿ ನಿಂತು  ಪುರುಷನನ್ನು ಕರೆಯುತ್ತಾ ಹಾಡುತ್ತಾರೆ.ನೀನು ಮುಗಿಲು ನಾನು ನೆಲ, ನಿನ್ನ ಒಲವೆ ನನ್ನ ಬಲ   ಅಂದರೆ ಮುಗಿಲ ದೀಪಗಳಾದ ಸೂರ್ಯಚಂದ್ರರು ನಕ್ಷತ್ರಗಳು ತೋರಿದ ಒಲವೇ ಈ ಭೂಮಿಯ ಬಲದಂತಿದೆ.  ಶಾಖ ಶಕ್ತಿ ಬೆಳಕು ಈ ಯಾವ ನೆಲೆಯಲ್ಲಿ ನೋಡಿದರೂ ಸೂರ್ಯನಿಲ್ಲದೆ ಭೂಮಿಯಲ್ಲಿ, ಜೀವನವೇ ಇಲ್ಲ. ಸೂರ್ಯ ಚಂದ್ರ ನಕ್ಷತ್ರಗಳನ್ನು ಹೊಂದಿರುವ ಆಕಾಶದ ಆಶಿರ್ವಾದವೇ ಈ ಭೂಮಿಯ ಬಲ.  ಹೆಣ್ಣು ಗಂಡಿನ ಸಂಬಂಧವೂ ಇದೆ ತೆರನಾಗಿದೆ. ಹೆಣ್ಣು ಪುರುಷನನ್ನು ಉನ್ನತ ಸ್ಥಾನದಲ್ಲಿ ಕಲ್ಪಿಸಿಕೊಂಡು ಕರೆಯುತ್ತಾಳೆ.
   ನಾನು ಎಳೆವೆ ನೀನು ಮಣಿವೆ, ನಾನು ಕರೆವೆ ನೀನು ಸುರಿವೆ    ನಾನು ಮೋಡವನ್ನು ಆಕರ್ಷಿಸುವೆ, ನೀನು ಮಳೆಯನ್ನೂ ಸುರಿವೆ, ಇದರಿಂದಾಗಿ ನಾನು ಸಸ್ಯಶ್ಯಾಮಲೆಯಾಗಿ ನಳನಳಿಸುವೆ.ನಾನಚಲದ  ತುಟಿಯೆತ್ತುವೆ. ನೀ ಮಳೆಯೊಳು ಮುತ್ತನಿಡುವೆ ನೀ  ಸುರಿಸುವ ಮಳೆ ನನಗೆ ನೀನಿತ್ತ ಮುತ್ತಿನ ಸುರಿಮಳೆ. ಪರ್ವತಗಳೆಂಬ ತುಟಿಗೆ ಮುಗಿಲು ಮಳೆಹನಿಗಳ ಮುತ್ತುಗಳನ್ನು ಸುರಿಸುವುದು  ಅಂತೆಯೇ  ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ.  ಸೂರ್ಯ ಚಂದ್ರ ನಕ್ಷತ್ರಗಳೆಂಬ ಕಣ್ಣನ್ನು ತೆರೆದು ಬಣ್ಣವನ್ನು ಅಂದರೆ ಬೆಳಕನ್ನು ನೀನು ಸುರಿಸುವೆ. ನಿನ್ನ ಬೆಳಕಿನ ಶಕ್ತಿಯಿಂದ ನಾನು ಅಂದರೆ ಭೂಮಿ ಹಸಿರಾದೆ, ಬಸಿರಾದೆ, ಅಲ್ಲದೆ ನೀನೇ  ನನ್ನ ಉಸಿರಾದೆ. 
  ಹಾಡಿನ ಕೊನೆಯ ನುಡಿ ತುಂಬಾ ಸುಂದರವಾಗಿದೆ.   ನೀನು ಗಂಡು, ನಾನು ಹೆಣ್ಣು, ನೀನು ರೆಪ್ಪೆ ನಾನು ಕಣ್ಣು   ಕಣ್ಣು ರೆಪ್ಪೆಯಿಂದ  ರಕ್ಷಿಸಲ್ಪಡುತ್ತದೆ. ಹೆಣ್ಣು ಗಂಡಿನಿಂದ ರಕ್ಷಿಸಲ್ಪಡುವವಳು.  ಎತ್ತರದ ಮುಗಿಲೇ, ನೀನು ಗಂಡು, ನಿನ್ನ ಆಸರೆ, ಒಲವು ನನಗೆ ಶ್ರೀರಕ್ಷೆ ಎನ್ನುತ್ತದೆ ಈ ವಸುಂಧರೆ. ಈ ಹಾಡನ್ನು ಸಾಮಾನ್ಯ ಪ್ರೇಮಗೀತೆ ಯಂತೆಯೂ ಹಾಡಬಹುದು. ಇಲ್ಲವೇ ಭೂಮಿ ಮತ್ತು ಆಕಾಶಗಳ ಸಂಬಂಧದ ಹಿನ್ನೆಲೆಯಲ್ಲಿಯೂ ಅರ್ಥಮಾಡಿಕೊಳ್ಳಬಹುದು.  


ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು....             
ಕವಿ ಜಿ. ಎಸ. ಶಿವರುದ್ರಪ್ಪನವರ ಸರಳ, ಸುಂದರ ಹಾಗು ಪುಟ್ಟದಾದ ಒಂದು ಭಾವಗೀತೆ ವೇದಾಂತಿ ಹೇಳಿದನು. ಇದು ಕಾರ್ತೀಕ ಕವನಸಂಗ್ರಹದಿಂದ ಆಯ್ದ ಗೀತೆ. ಕವಿ ಇಲ್ಲಿ ವೇದಾಂತಿಗೂ  ಕವಿಗೂ ಇರುವ ವ್ಯತ್ಯಾಸವನ್ನು ಗುರುತಿಸುತ್ತಾರೆ. ಕವಿಯ ಜೀವನದೃಷ್ಟಿ  ವೇದಾಂತಿಯ ಜೀವನದೃಷ್ಟಿಗಿಂತ ಭಿನ್ನ. ಕವಿಯು ತನ್ನ ಸುತ್ತ ಹರಡಿದ ಪ್ರಕೃತಿಯ ಮತ್ತು ಬದುಕಿನ ಸೌಂದರ್ಯವನ್ನು ಆಸ್ವಾದಿಸುತ್ತಾನೆ.  ಆನಂದಿಸುತ್ತಾನೆ.     ಆದರೆ ಒಬ್ಬ ವೇದಾಂತಿ ಈ ಜಗತ್ತಿನ ಸೌಂದರ್ಯಕ್ಕೆ ವಿಮುಖನಾಗಿ ತನ್ನದೇ ಚಿಂತನೆಯಲ್ಲಿ ಬದುಕುತ್ತಿರುತ್ತಾನೆ.   ವೇದಾಂತಿಯ ದೃಷ್ಟಿಯಲ್ಲಿ ಈ ಜಗತ್ತು ನಶ್ವರವಾದುದು.  ಆತ ಈ ಬದುಕಿನಾಚೆಯ ಪಾರಲೌಕಿಕ ಬದುಕಿನ ಬಗೆಗೆ ಹೆಚ್ಚು ಆಸಕ್ತನಾಗಿರುತ್ತಾನೆ. ಆತ ಮುಕ್ತಿಯ ಹಂಬಲದಲ್ಲಿ ಆಧ್ಯಾತ್ಮದ ಸಾಧನೆಯ ಹಾದಿಯಲ್ಲಿ ಸಾಗುತ್ತಾನೆ. ವೇದಾಂತಿಯ ಪ್ರಕಾರ ಈ ಜಗತ್ತಿನ ಸೌಂದರ್ಯ ಅದು ಮುಖ್ಯವಾಗಿ  ಹೆಣ್ಣು- ಹೊನ್ನು- ಮಣ್ಣಿನ ಸೌಂದರ್ಯ  ಅಥವಾ ಆಕರ್ಷಣೆ ಇವು ಅವನ ಸಾಧನೆಗೆ ಅಡ್ಡಿಯಾಗುತ್ತವೆ. ಕಾರಣ ಅವನ ದೃಷ್ಟಿ ಜೀವನದಿಂದ ವುಮುಖವಾಗಿರುತ್ತದೆ. ಆದರೆ ಅದೇ ಕವಿಯ ದೃಷ್ಟಿ ಜೀವನ್ಮುಖಿ ಯಾಗಿರುತ್ತದೆ. ಅವನು ತನಗೆ ಸಿಕ್ಕಿದ ಬಾಳಿನ ಚೆಲುವನ್ನು ಉಂಡು ಆಸ್ವಾದಿಸಿ ಧನ್ಯನಾಗಬೇಕೆಂದು ಬಯಸುತ್ತಾನೆ. ಅವನಿಗೆ ಈ ಜಗತ್ತಿನ ಪ್ರತಿಯೊಂದು ಸಂಗತಿಯೂ ಸುಂದರವಾಗಿ, ಭಾವಪೂರ್ಣವಾಗಿ, ಜೀವಂತವಾಗಿ ಕಾಣುತ್ತದೆ.   
ವೆದಾಂತಿಗೆ ಹೊನ್ನೆಲ್ಲ ಮಣ್ಣಾಗಿ ಕಂಡರೆ ಕವಿಗೆ ಮಣ್ಣಿನ ಕಣ ಕಣವೂ ಹೊನ್ನಿನಷ್ಟು ಸುಂದರವೂ, ಬೆಲೆಯುಳ್ಳದ್ದು ಆಗಿ ಕಾಣಿಸುತ್ತದೆ. ವೇದಾಂತಿ ಹೇಳುತ್ತಾನೆ ಈ ಹೆಣ್ಣು ಮಾಯೆ ಮಾಯೆ ಏಕೆಂದರೆ ಆತನ ಸಾಧನೆಗೆ ಹೆಣ್ಣು ಒಂದು ಅಡ್ಡಿ.  ಆದರೆ ಕವಿಯು ಹೆಣ್ಣಿನ ಚೆಲುವಿಗೆ ಮನಸೋಲುತ್ತಾನೆ. ಬಹುತೇಕ ಕವಿ-ಕಲಾವಿದರ ಕಲಾ ಸೃಷ್ಟಿಗೆ ಹೆಣ್ಣು ಪ್ರೇರಣೆಯಾಗಿದೆ.ಪ್ರಕೃತಿಗೆ ಮನಸೋಲದ ಪುರುಷನಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಯೋಚಿಸುವುದು, ನಡೆಯುವುದು ಅದೊಂದು ವಿಕೃತಿ ಎನ್ನಬಹುದು. ಕವಿ  ಹೆಣ್ಣಿನ ಸಾಂಗತ್ಯ ತಂದ ಬಲದಿಂದ ತಾನೂ ಸ್ವರ್ಗವನ್ನೇ ಗೆಲ್ಲಬಲ್ಲೆ ಎಂದು ಗರ್ವದಿಂದ ಹೇಳಿಕೊಳ್ಳುತ್ತಾನೆ. ವೇದಾಂತಿಯ ಪ್ರಕಾರ ಈ ಬದುಕು ಶೂನ್ಯ. ಇದು ನಿಸ್ಸಾರವಾದುದು. ಜನ್ಮಗಳ ಜಂಜಾಟದಿಂದ  ಮುಕ್ತಿಯನ್ನು ಪಡೆದು ಶಾಶ್ವತವಾದ ಆನಂದದಲ್ಲಿ ಲೀನವಾಗಬೇಕು ಎಂದು ವೇದಾಂತಿ ಬಯಸುತ್ತಾನೆ. ಆದರೆ ಕವಿಗೆ ಈ ಬದುಕೇ ಶ್ರೇಷ್ಠ,   ಅನನ್ಯ,  ಮತ್ತು ಅನ್ಯತ್ರ ಅಲಭ್ಯ. ಏಕೆಂದರೆ ಪರಲೋಕವನ್ನು ಯಾರು ನೋಡಿದ್ದಾರೆ? ಕವಿ ತಾನೂ ಇಲ್ಲೇ ಬದುಕಿ ಧನ್ಯನಾಗುತ್ತೇನೆ ಎನ್ನುತ್ತಾನೆ. 
  ಈ ಹಾಡನ್ನು ಪುಟ್ಟಣ್ಣ ಕಣಗಾಲ ಅವರು ತಮ್ಮ ಮಾನಸ ಸರೋವರ ಎಂಬ ಸುಂದರ ಸಿನೆಮಾದಲ್ಲಿ ಬಳಸಿಕೊಂಡಿದ್ದಾರೆ.  

ನಿನ್ನದೇ ನೆಲ, ನಿನ್ನದೇ ಜಲ, ನಿನ್ನದೆ ಆಕಾಶ, ಕಿಂಚಿತ್ತು ಅನುಮಾನಕೆ ಇಲ್ಲವೋ ಅವಕಾಶ.
        ಕವಿ ಜಿ.ಎಸ. ಶಿವರುದ್ರಪ್ಪನವರ ನಿನ್ನದೇ  ನೆಲ ಎಂಬ ಗೀತೆಯನ್ನು ಒಂದು ದೇಶಭಕ್ತಿ ಗೀತೆ ಎಂದೂ ಅರ್ಥೈಸಬಹುದು, ಅಥವಾ  ವಿಶ್ವ ನಿಯಾಮಕ ಶಕ್ತಿಯ ಹಿರಿಮೆಯನ್ನು ಸಾರುವ ಗೀತೆಯೆಂದೂ ತಿಳಿಯಬಹುದು. ಹಾಡಿನ ಮೊದಲ ನುಡಿಯೇ ಕವಲು ದಾರಿಯನ್ನು ಮುಂದಿಟ್ಟು  ಸಾಗುತ್ತದೆ.
  ನಿನ್ನದೇ ನೆಲ, ನಿನ್ನದೇ ಜಲ, ನಿನ್ನದೆ ಆಕಾಶ, ಕಿಂಚಿತ್ತು ಅನುಮಾನಕೆ ಇಲ್ಲವೋ ಅವಕಾಶ. ಈ ನೆಲ, ಈ ಜಲ, ಈ ಆಕಾಶ ಇವು ಯಾರವು? ಭಾರತ ದೇಶ ನನ್ನ ತಾಯ್ನಾಡು. ಆದ್ದರಿಂದ ಈ ಪುಣ್ಯ ಭೂಮಿ ಮತ್ತು ಇಲ್ಲ  ಹರಿದ ನದಿಗಳೆಲ್ಲವೂ  ಭರತ ಮಾತೆಯದು. ಈ ಅರ್ಥದಲ್ಲಿ ಮುಂದುವರಿದರೆ ಇದೊಂದು ದೇಶಭಕ್ತಿ ಗೀತೆ. ಇನ್ನು ಜಗತ್ತನ್ನೆಲ್ಲ ಸೃಷ್ಟಿಸಿದವನು ದೇವಾನು. ಆದ್ದರಿಂದ ಈ ನೆಲ, ಜಲ, ಆಕಾಶಗಳು ನಿಶ್ಚಿತವಾಗಿಯೂ ಅವನ ಕರುಣೆಯ ಸೃಷ್ಟಿಯೇ ಆಗಿದೆ. ಈ ಮಾತಿನಲ್ಲಿ ಅನುಮಾನಕ್ಕೆ ಆಸ್ಪದವೇ ಇಲ್ಲ ಎಂಬುದು ಕವಿಯ ದೃಢವಾದ  ನಂಬಿಕೆ.
ಈ ನೆಲ, ಜಲ ಆಕಾಶಗಳು ಖಂಡಿತವಾಗಿಯೂ ನನ್ನದಲ್ಲ. ಈ ಪ್ರಕೃತಿ ನನ್ನದು ಎಂದು ಭಾವಿಸಿ ನನಗಾಗಿಯೇ ಇದೆ ಎಂದು ತಿಳಿದು ಇವುಗಳ ಮೇಲೆ ಹಕ್ಕನ್ನು ಸ್ಥಾಪಿಸಲು ಸಾಧ್ಯವಿಲ್ಲ. ದಬ್ಬಾಳಿಕೆ ನಡೆಸಲು ಆಗದು. ಪ್ರಕೃತಿ ಎಲ್ಲರವು.  ಪ್ರಕೃತಿಯ ಎಲ್ಲಾ ಚರಾಚರ ಸಂಗತಿಗಳ ಮೇಲೆ ಅವಲಂಬಿತವಾಗಲು ಅದು ಎಲ್ಲರಿಗೂ ತೆರೆಯಲ್ಪಟ್ಟಿದೆ. 
  ಇನ್ನು ಈ ದೇಶದ ಇತಿಹಾಸದ ಉದ್ದಕ್ಕೂ ಇಲ್ಲಿನ ನೆಲ ಜಲ ಆಕಾಶಗಳ ಪಾತ್ರ ಬಹು ದೊಡ್ಡದು. ಇವು ದೇಶವಾಸಿಗಳ ಬದುಕಿನ ರಕ್ಷಾಕವಚವೂ ಆಗಿದೆ. ಇಲ್ಲಿನ ಮಣ್ಣಿನ ಕಣಕಣವು ನಮಗೆ ಪವಿತ್ರ. ಇದರ ರಕ್ಷಣೆ ನನ್ನ ಹೊಣೆ. ಭಾರತಮಾತೆ ನಮ್ಮೆಲ್ಲರ ತಾಯಿ ಎಂಬ ನಿತ್ಯಸತ್ಯವು, ಪ್ರೇರಣೆಯೂ ನಮ್ಮ ಕನಸನ್ನು ಬೆಳೆಸಿದೆ, ನಮಗೆ ನನಸನ್ನು ಕಾಣಿಸಿದೆ. ನೆಲದ ರಕ್ಷಣೆಗಾಗಿ ಸಿಡಿಗುಂಡಿಗೂ  ಎದೆಯನ್ನು ಒಡ್ಡುವಂತೆ ಮಾಡಿದೆ. ಮತ್ತು ಶಾಂತಿ ಸಹಬಾಲ್ವೆಯು ಈ ನೆಲದ ಧರ್ಮವೆಂದು ಸಾರುವಂತೆ ಮಾಡಿದೆ. ಈ ನೆಲಜಲಗಳು ಭಾರತೀಯರ ಹೆಗಲ ಮೇಲೆ ಕನಸನ್ನು ಹೊರಿಸಿದೆ. ಮತ್ತೆ ಈ ನೆಲಜಲಗಳೇ ಅವರಲ್ಲಿ ಭವಿಷ್ಯದ ಭರವಸೆಗಳನ್ನು ಮೂಡಿಸುವ ಕಾರ್ಯವನ್ನೂ ಮಾಡಿವೆ. ಮಾಡುತ್ತಿವೆ.  ಆದ್ದರಿಂದ   ನಿನ್ನದೇ ನೆಲ ನಿನ್ನದೇ ಜಲ  ಈ ಹಾಡು ಭಾರತೀಯರಲ್ಲಿ ದೆಶಭಕ್ತಿಯನ್ನೂ ನೆಲಜಲಗಳ ಬಗ್ಗೆ ಅಭಿಮಾನವನ್ನೂ ಬೆಳೆಸುವ ಹಾಡಾಗಿದೆ.    


   “ಬಂತಿದೋ ಶೃಂಗಾರ ಮಾಸ ...”
ಬೇಂದ್ರೆಯವರ ಇನ್ನೊಂದು ಪ್ರಣಯ ಗೀತೆ “ ದೀಪ” ಬೇಂದ್ರೆಯವರ ಪನಯ ಗಿತೆಗಳಲ್ಲಿ ಕಾಣುವುದು ವೈಯಕ್ತಿಕ ಕಾಮನೆಯಲ್ಲ ಅದು ಇಡೀ ಪ್ರಕೃತಿಯಲ್ಲಿ ಅಂದರೆ ಸೂರ್ಯ, ಚಂದ್ರ, ನಕ್ಷತ್ರ, ಬಾನು, ಭೂಮಿ ಇವುಗಳನ್ನು ಒಳಗೊಂಡ ಬ್ರಹ್ಮಾಂಡ ಮಟ್ಟದಲ್ಲಿ ಕಂಡುಬರುವ ಪ್ರಣಯ ಭಾವದ ರೂಪಕ ಚಿತ್ರವಾಗಿದೆ.
    ಉತ್ತರಭಾರತದ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ನದಿಗೆ ಆರತಿ ಎತ್ತುವುದು, ನದಿಗಳಲ್ಲಿ ಚಿಕ್ಕ ಚಿಕ್ಕ ದಿಪಗಳನ್ನು ತೇಲಿ ಬಿಡುವುದು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ನಡೆದು ಬಂದ ಪದ್ಧತಿ.  ಸಪತ್ನಿಕರಾಗಿ ಪ್ರಯಾಗಕ್ಕೆ ಬಂದ ಬೇಂದ್ರೆಯವರು   ಒಂದು ಮುಂಜಾನೆ ಅಂದರೆ ಸುರ್ಯೋದಯಕ್ಕೂ ಮೊದಲು ರಾತ್ರಿಯ ನಾಲ್ಕನೇ ಪ್ರಹರದಲ್ಲಿ  ಗಂಗಾ ಯಮುನಾ ನದಿಗಳ ಸಂಗಮದಲ್ಲಿ  ದಿಪಗಳನ್ನು ತೇಲಿಬಿಡುವ ಧಾರ್ಮಿಕ ಪೂಜೆಯಲ್ಲಿ ಪಾಲ್ಗೊಂಡರು. ಚೈತ್ರ ಶುದ್ಧ ಹುಣ್ಣಿಮೆಯ ದಿನವಾದ್ದರಿಂದ ಮುಳುಗುತ್ತಿರುವ ಚಂದ್ರನೂ ಪೂರ್ಣ ಪ್ರಮಾಣದಲ್ಲಿ ಬೆಳದಿಂಗಳನ್ನು ಚೆಲ್ಲುತ್ತಿದ್ದಾನೆ.
ತ್ರಿವೇಣಿ ಸಂಗಮದ ಆ ಪರಿಸರದಲ್ಲಿ ಬೇಂದ್ರೆಯವರ ಕವಿ ಮನಸ್ಸು  ಇಂಥದ್ದೊಂದು ಸುಂದರ ಪ್ರೇಮಗೀತೆಯನ್ನು ಹಾಡಿದೆ.  ನಾದಲೀಲೆ ಎಂಬ ಕವನ ಸಂಕಲನದಲ್ಲಿ ಪ್ರಕಟಗೊಂಡಿದೆ. ಅಲ್ಲದೆ ಶೃಂಗಾರಮಾಸ  ಎಂಬ ಕಲಾತ್ಮಕ ಸಿನೇಮಾದಲ್ಲೂ  ಈ ಹಾಡನ್ನು ಬಳಸಿಕೊಂಡಿದ್ದಾರೆ.
ಇಲ್ಲಿ ಶೃಂಗಾರ ಮಾಸ ವೆಂದರೆ  ಚೈತ್ರಮಾಸ. ಹುಣ್ಣಿಮೆಯ ನಾಲ್ಕನೇ ಪ್ರಹಾರ ಎಂದರೆ ಸುರ್ಯೋದಯಕ್ಕೂ ಮೊದಲಿನ ಹೊತ್ತು. ಕಂತುವ ಅಂದರೆ ಮುಳುಗುವ ಚಂದ್ರನೂ ಪೂರ್ಣ ಬಿಂಬದೊಂದಿಗೆ ಕಂಗೊಳಿಸುತ್ತಿದ್ದಾನೆ.  ಬೆಳದಿಂಗಳನ್ನು ಚೆಲ್ಲಿ ಇಡೀ ಜೀವರಾಶಿಯನ್ನೂ, ಪ್ರೇಮಿಗಳನ್ನೂ ಆತ ಹರಸಿದ್ದಾನೆ.  ಕಿರಿ ಬೆರಳಲಿ ಬೆಳ್ಳಿ ಹರಳು ಅಂದರೆ ರಾತ್ರಿಯ ನಾಲ್ಕನೇ ಪ್ರಹಾರ. ಉಂಗುರ ಧರಿಸುವ ನಾಲ್ಕನೇ ಬೆರಳಲ್ಲಿ ಬೆಳ್ಳಿ ಅಂದರೆ ಶುಕ್ರ ಮಿನುಗುತ್ತಿದ್ದಾನೆ. ಕರಿಕುರುಳೋಳು  ಚಿಕ್ಕಿ ಹರಳು ಅಂದರೆ ನೀಲಾಕಾಶವೆಂಬ  ಹೆರಳಿನಲ್ಲಿ ಅಲ್ಲಲ್ಲಿ ಮಿನುಗುತ್ತಿರುವ ತಾರೆಗಳು. ಆ ಸಮಯದಲ್ಲಿ ತೆರಳಿದಳು ಇದೋ ತರಳೆ ಇರುಳು ತನ್ನರಸನ ಅರಸಲು. ಚಂದ್ರನನ್ನು ಪಡೆಯಲು ಇರುಳು ಪ್ರತ್ನಿಸುತ್ತಿದೆ. ಆದರೆ ಆ ಸಮಯ ಇರುಳು ಅಳಿಯುವ ಸಮಯ  ಕವಿ ಹಾಡುತ್ತಾರೆ  ತೆರಳಿದಳಿದೋ ತರಳೆ ಇರುಳು ತನ್ನರಸನ ಅರಸಲು . ಆ ಪ್ರಯತ್ನ ಇನ್ನೂ ಹಾಗೆಯೇ ಸಾಗಿದೆ.
      ಗಂಗಾ ನದಿಯ ನೀರು ಬಿಳಿ ಛಾಯೆಯನ್ನು ಹೊಂದಿದ್ದರೆ ಯಮುನೆಯದು ಕಪ್ಪು ಛಾಯೆಯನ್ನು ಹೊಂದಿದೆ. ಗಂಗೆ ಯಮುನೆ ಕೂಡಿ ಹರಿದು ಸಂಗಮ ಜಲ ಬಿಳಿದು ಕರಿದು ತಿಂಗಳ ನಗೆ ಮೆರೆವರಿದು ಮುಳುಗುವ ಚಂದ್ರನದ್ದಾದರೂ ಈ ಸಂಗಮದ ಮೇಲೆ ಬಿದ್ದ ಹಾಲ್ ಬೆಳದಿಂಗಳು ಮೇರೆ ಮೀರಿ ಬೆಳಗುತ್ತಿದೆ.
     ಪಂಥದಿಂದ ಮನೆಯ ತೊರೆದು ಈ ನುಡಿಯಲ್ಲಿ ಪತಿ ಪತ್ನಿಯರಲ್ಲಿ ಯಾವುದೇ ಮನಸ್ತಾಪವಿದ್ದರೂ ಇಲ್ಲಿಗೆ ಬಂದಾಗ ಅವನ್ನೆಲ್ಲ ಮರೆತು ಅವರು ಒಂದಾಗುತ್ತಾರೆ ಎಂದು ಕವಿ ಹಾಡಿದ್ದಾರೆ.   ಕೊನೆಯಲ್ಲಿ ನಾನು ನೀನು ಕೂಡಿ ಬಂದು ಈ ನದಿಗಳ ತದಿಗೆ ನಿಂದು ಸಾನುರಾಗದಿಂದಲಿಂದು ದೀಪ ತೇಲಿ ಬಿಟ್ಟೆವು  ಎಂದು ಹಾಡುತ್ತಾರೆ. ಸಾನುರಾಗದಿಂದ ಒಟ್ಟಾಗಿ ಬೆಳದಿಂಗಳು ಚೆಲ್ಲಿದ  ಈ ಬ್ರಾಹ್ಮೀ ಮುಹೂರ್ತದಲ್ಲಿ  ದೀಪವನ್ನು ತೇಲಿಬಿಡುವ ಆ ನೋಟ ಎಷ್ಟು ಸುಂದರವಾಗಿರಬಹುದು? ಎಷ್ಟು ಭಾವಪೂರ್ಣವಾಗಿರಬಹುದು?

   ಬಾ ಭೃಂಗವೆ ಬಾ ವಿರಾಗಿಯಂದದಿ
ಪರಾಗ ಎಂಬ ಹೆಸರಿನ ಈ ಗೀತೆ ಬೇಂದ್ರೆಯವರ ಪ್ರಸಿದ್ಧ ಭಾವಗೀತೆಗಳಲ್ಲಿ ಒಂದು. ಹೇಳಬೇಕಾದ ಒಂದು ಪುಟ್ಟ ಸಂಗತಿಯನ್ನು ಚಿಕ್ಕದಾಗಿ ಚೊಕ್ಕದಾಗಿ ಸುಂದರವಾಗಿ ಜೋಡಿಸಿ ಒಂದು ಹಾದಾಗಿಸಿದ್ದಾರೆ ವರಕವಿ ದ. ರಾ. ಬೇಂದ್ರೆ.  ಬಾ ಭೃಂಗವೆ ಬಾ , ವಿರಾಗಿಯಂದದಿ ಭ್ರಮಿಸುವೆ ನೀನೇಕೆ? ಕಂಪಿನ ಕರೆಯಿರೆ ಸರಾಗವಾಗಿರೆ ಬೇರೆಯ ಕರೆ ಬೇಕೇ?  ಇಲ್ಲಿ ಒಂದು ಹೂವು ದುಂಬಿಯನ್ನು ಕರೆಯುತ್ತಾ ಇದೆ- ನೀನೇಕೆ ವಿರಾಗಿಯ ಹಾಗೆ ಸುತ್ತೆಲ್ಲ ಓಡಾಡುತ್ತಿರುವೆ?   ನನ್ನ ಕರೆ ನಿನಗೆ ಕೇಳಿಸದೆ? ನನ್ನ ಕರೆ ನಿನಗೆ ಸಾಕಾಗದೆ?  ನನ್ನದು ಕಂಪಿನ ಕರೆ ನಾನು ಅರಳಿದ ಹೂವು ನಿನ್ನನ್ನು ಕರೆಯಲೆಂಬಂತೆ ನನ್ನ ಕಂಪನ್ನೆಲ್ಲ ಸುತ್ತಲು ಹರಡಿರುವೆ. ನಿನ್ನನ್ನು ಸ್ವಾಗತಿಸುತ್ತಿರುವೆ. ಆದರೆ ನಿನೆಕೋ ಉದಾಸನಂತೆ ರಾಗಕ್ಕೆ ವಿಮುಖನಾದ ವಿರಾಗಿಯಂತೆ ಸುತ್ತೆಲ್ಲೋ ಓಡಾಡುತ್ತಿರುವೆ. ಬಾ, ಬಳಿಗೆ ಬಾ ನನ್ನ ಬಳಿಗೆ ಬಾ ಎಂದು ಕರೆದಿದೆ.
     ಮತ್ತೆ ಹೂ ಹೇಳುತ್ತಿದೆ “ ಬರಲಿಹ ಕಾಯಿಯ ಪಾಡಿನ ರುಚಿಯು ಇದರೊಳು ಮಡಗಿಹುದು. ನಾಳಿನ ಹಣ್ಣಿನ ರಸವು ಇಲ್ಲಿಯ ಮಕರಂದದೊಳಡಗಿಹುದು ‘   ನಾನು ಮಕರಂದವನ್ನು ಸಿದ್ಧಪಡಿಸಿ, ಪುಷ್ಪಪಾತ್ರೆಯೊಳಿಟ್ಟು  ಕಾಯುತ್ತಿರುವೆ. ಇದು ಮುಂದೆ ಬರುವ ಹಣ್ಣಿನ ರಸವನ್ನು ತನ್ನಲ್ಲಿ ಆಡಗಿಸಿಕೊಂಡಿದೆ.   ಆದರೆ ನೀನಿಲ್ಲದೆ ನಾನು ಕಾಯಾಗೆನು, ಹನ್ನಗೆನು. ನಾನು ಕಾಯಾಗಿ, ಹಣ್ಣಾಗಿ ಸಂಭ್ರಮಿಸಲು ಸಾರ್ಥಕಗೊಳ್ಳಲು ನಿನ್ನ ಸ್ಪರ್ಶದ, ಮಿಲನದ ಸುಯೋಗ ಬೇಕು. ಆದ್ದರಿಂದ ವಿರಾಗಿಯಂತೆ ತಿರುಗಾಡಬೇಡ, ಬಾ, ಬಾ, ನನ್ನ ಬಳಿಗೆ ಬಾ “ 
  ಮೂರನೆ ನುಡಿಯಲ್ಲಿ ಕವನದ ನಿಜವಾದ ಒಳಗುಟ್ಟು ರಟ್ತಾಗುವುದು. ಇಲ್ಲಿ ದುಂಬಿಯನ್ನು ಕರೆಯುತ್ತಿರುವುದು ಹುದೋಟದ ಹೂವಲ್ಲ; ಕವಿಯ ಎದೆಯಲ್ಲಿ ಬಿರಿದು ನಿಂತ ಭಾವಕುಸುಮ.  ಈ ಭಾವಕ್ಕೆ ಹೀಚಾಗುವ ಕಾಯಾಗುವ ಹಣ್ಣಾಗುವ ಫಲರೂಪವನ್ನು  ಪಡೆಯಲು ದುಂಬಿಯ ಮಿಲನದ ಅಗತ್ಯವಿದೆ. ದುಮ್ಬಿಯೆಂದರೆ ಕವಿ. ತುಂಬಿ ತುಳುಕುತ್ತಿರುವ ಭಾವವನ್ನು ಕವನವಾಗಿಯೋ ಕಾವ್ಯವಾಗಿಯೋ ಹೊರಹಾಕಲು ಕವಿ ನೆಪ ಮಾತ್ರಕ್ಕಾದರೂ ಬೇಕೇ ಬೇಕು. ಮಕರಂದ ಸಹಿತ ಅರಳಿನಿಂತ ಹೂವಿಗೆ ದುಂಬಿಯ ಮೂಲಕ ಪರಾಗ ಸ್ಪರ್ಶ ನಡೆಯಲೇ ಬೇಕು. ಹಾಗೆಯೇ ಕವಿಯ ಒಳಗೆ ಧುಮಿಧುಮಿಸುತ್ತಿರುವ ಭಾವಧಾರೆ ಕಾವ್ಯಧಾರೆಯಾಗಿ ಹೊರಬರಲು ಕವಿ ಕಾಲುವೆಯಾಗಿ ತೆರೆದುಕೊಳ್ಳಲೇ  ಬೇಕು. ಕವಿ ಇಲ್ಲಿ ದುಂಬಿಯ ಕೆಲಸವನ್ನು ಮಾಡಬೇಕು.  ನಿಜವಾದ ಕಾವ್ಯ ಅದು ಎದೆಯೊಳಗಿನ ಭಾವ ಕವಿ ಅದಕ್ಕೆ ರೂಪಕೊಡುವ ನೆಪಮಾತ್ರನಷ್ಟೇ!  
 

  ಇನ್ನು ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ......   
ಜನಪದ ಧಾಟಿಯಲ್ಲಿ ಬರೆದ ಈ ಹಾಡು ಬೇಂದ್ರೆಯವರ ಜನಪ್ರಿಯ ಹಾಡುಗಳಲ್ಲಿ ಒಂದು. ಬಾಳಪ್ಪ ಹುಕ್ಕೆರಿಯವರು ತಮ್ಮ ಸಿರಿಕಂಠದಿಂದ ಹಾಡಿ  ನಾಡಿನಾದ್ಯಂತ ಈ ಹಾಡನ್ನು ಜನಪ್ರಿಯಗೊಳಿಸಿದರು. ಅಲ್ಲದೇ ತಾವೂ ಜನಪ್ರಿಯರಾದರು. ಪ್ರಣಯಭಂಗದಿಂದ  ಹುಚ್ಚಳಂತಾದ ಜೋಗತಿಯೊಬ್ಬಳು  ಹಾಡುವ ಹಾಡಿದು.   ಕಾವ್ಯ ಬೇಂದ್ರೆಯವರಿಗೆ ಉಸಿರಾಟದಷ್ಟು ಸಹಜವಾಗಿತ್ತು ಎಂದು ಹೇಳಲು ಅವರಿಂದ ರಚಿತವಾದ ಇಂತಹ ಹಾಡುಗಳೇ ಕಾರಣ.  ಒಂದು ಲಯ ಹಿಡಿದು ಹೊರಟರೆ ಪದಗಳು ತನಗೆ ತಾನೇ ಬಂದು ಅವರ ಮನಸ್ಸಿನ ಭಾವಕ್ಕೆ ಕಾವ್ಯರೂಪವನ್ನು ಕೊಡುತ್ತಿತ್ತು.       ಅದಕ್ಕೆ ಅವರೇ ಒಂದು ಮಾತು ಹೇಳುತ್ತಾರೆ-  ಕಟ್ಟೋರೆಲ್ಲ ಕವಿಗಳಲ್ಲ;   ಹುಟ್ಟೋರೆಲ್ಲ ಭವಿಗಳಲ್ಲ . ಕರು ಕೂಡಾ ಕಟ್ಟಿದ್ದುಂಟು ಬಸವಣ್ಣನೂ  ಹುಟ್ಟಿದ್ದುಂಟು
  ಹುಬ್ಬಳ್ಳಿಯಿಂದ ಧಾರವಾಡಕ್ಕೆ ವ್ಯಾಪಾರದ ನೆಪ ಹೊತ್ತು ಬಂದು ಭೇಟಿಯಾಗುತ್ತಿದ್ದ ಸೆಟ್ಟರ ಹುಡುಗ ಇತ್ತೀಚಿಗೆ ಬರುತ್ತಿಲ್ಲ.   ಆಗ ಬೇಸರಗೊಂಡ ಜೋಗತಿ  “ ಇನ್ನು ಯಾಕ ಬರಲಿಲ್ಲಾವ  ಹುಬ್ಬಳ್ಳಿಯಾವ ? ವಾರದಾಗ ಮೂರು ಸರ್ತಿ ಬಂದು ಹೋಗಾಂವ “ ಎಂದು ಹಾಡುತ್ತಾಳೆ.   ಭಾರಿಜರದ ವಾರಿ ರುಮ್ಮಾಲ ಸುತ್ತಿಕೊಂಡಾವ,       ತುಂಬು ಮೀಸಿ ತೀಡಿಕೋತ ಹುಬ್ಬು ಹಾರಸಾಂವ        ಮಾತುಮಾತಿಗೂ ನಕ್ಕು ನಗಿಸಿ ಆಡಿಸ್ಯಾಡಂವ        ಏನೋ  ಅಂದರ ಏನೋ ಕಟ್ಟಿ ಹಾಡ ಹಾಡಾವ .      ಇದು ಸೆಟ್ಟರ ಹುಡುಗನ ರುಪವಾದರೆ ಇನ್ನು  ಅವನು ಶ್ರೀಮಂತಿಕೆಯ ಡೌಲನ್ನಷ್ಟೇ  ತೋರಿಸುವವನಲ್ಲ ಅವನು ರಸಿಕನು ಕೂಡಾ ಆಗಿದ್ದಾನೆ.
  ಆಕೆ ಹೇಳುತ್ತಾಳೆ, - ಆತ ಸೂಳೆಯರನ್ನೆಲ್ಲ  ಬಿಟ್ಟು ನನ್ನನ್ನು ಅರಸಿ ಬಂದಿದ್ದಾನೆ. ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾನ, ಜೋಗತೇರಿಗೆ ಮೂಗುತಿ ಅಂತ ನನಗೇ ಅಂದಾನ.   ಆತ ನನ್ನನ್ನು ಹೀಗೆ ಸತಾಯಿಸುತ್ತಾನೆ 
 ಇರು ಅಂದರ ಬರತೇನಂತ ಎದ್ದು ಹೊರಡಾವ           ಮಾರಿ ತೆಳಗ ಹಾಕಿತೆಂದರ ಇದ್ದು ಬಿಡಾವ          ಹಿಡಿ ಹಿಡಿಲೇ ರೊಕ್ಕ ತೆಗೆದು ಹಿಡಿ ಹಿಡಿ ಅನ್ನಾವ        ಖರೇ ಅಂತ ಕೈಮಾಡಿದರ ಹಿಡಿದು ಬಿಡಾಂವ    ಮತ್ತೆ ಆಕೆ ಹಾಡುತ್ತಾಳೆ- ಆತ ನನ್ನ ಮನಸ್ಸಿನಲ್ಲಿ ಮನೆ ಮಾಡಿದ್ದಾನೆ.   ಕಣ್ಣಿನಾಗಿನ ಗೊಂಬಿ ಹಾಂಗ ಎದ್ಯಾಗ ನೆಟ್ಟಾವ  ಸೆಟ್ಟರ ಹುಡುಗ ಹೆಣ್ಣು ಮಕ್ಕಳನ್ನು ಮರಳು ಮಾಡುವುದರಲ್ಲಿ ಪರಿಣತ ಎಂದು ಆಕೆಗೆ ತಿಳಿದಿದೆ. ಆದರೆ ಆತ ತನಗೆ ಮಾತುಕೊಟ್ಟಿದ್ದಾನೆ  ಜನ್ಮ ಜನ್ಮಕೂ ಗೆಣ್ಯಾ ಆಗಿ ಬರತೇನಂದಾನ ಎದೆಮ್ಯಾಗಿನ ಗೆಣತಿ ಮಾಡಿ ಇಟ್ಟು ಕೊಂಡಾವ ಇನ್ನು ಯಾಕ ಬರಲಿಲ್ಲಾವ ...
  ಸೆಟ್ಟರ ಹುಡುಗ ವಾರಕ್ಕ ಮೂರು ಬಾರಿ ಬಂದು ಬೇಟಿಯಾಗುತ್ತಿದ್ದ ಆದರೆ ಈಚೆಗೆ ಆತನ ಸುಳಿವೇ ಇಲ್ಲ ಜೋಗತಿ ಸಹಜವಾಗಿ ಆತಂಕ ಗೊಳ್ಳುತ್ತಾಳೆ. ಆತ ತನ್ನ ಮೇಲೆ ಕೊಪಗೊಂಡಿರಬಹುದೇ?  ಎಂದು ಶಂಕೆಗೆ ಒಳಗಾಗುತ್ತಾಳೆ. “ಸೆಟ್ಟರ ಹುಡುಗ ಸೆಟಗೊಂಡೋದ ಅಂತ ನನ ಜೀವಾ ಹಾದಿ ಬೀದಿ ಹುಡುಕತೈತ್ರೆ  ಬಿಟ್ಟು ಎಲ್ಲಿ ಹ್ಯಾಂವಾ ?”      ಇನ್ನು ಯಾಕ ಬರಲಿಲ್ಲಾವ    ಈ ಹಾಡನ್ನು ೧೯೩೫ ರಲ್ಲಿ ಬೇಂದ್ರೆ ರಚಿಸಿದ್ದರು. ಆ ಕಾಲದ ಸಮಾಜ ವ್ಯವಸ್ಥೆ ಮತ್ತು ಜೀವನ ಪದ್ಧತಿಗಳು ಈ ಗೀತೆಯಲ್ಲಿ ಬಿಂಬಿತವಾಗಿದೆ. ಹಾಡು ಕೇಳುತ್ತಾ ಹೋದಂತೆ ದೃಶ್ಯಗಳು ನಮ್ಮ ಮನಃ ಪಟಲದ ಮೇಲೆ ಮೂಡುತ್ತಾ ಹೋಗುತ್ತದೆ. ಹಾಡಿನ ರಚನೆ ಅಷ್ಟು ಶಕ್ತಿಶಾಲಿಯಾಗಿದೆ.