Jan 26, 2012

ನಮ್ಮ ಭಾರತದ ಸಂವಿಧಾನ

 
 ಭಾರತದ ಸಂವಿಧಾನ

ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ಡಿಸೆಂಬರ್ ೯, ೧೯೪೭ ರಿಂದ ನವೆಂಬರ್ ೨೬, ೧೯೪೯ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ ೨೬, ೧೯೫೦ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ೪೪೪ ವಿಧಿಗಳನ್ನೂ, ೧೦ (ನಂತರ ೧೨) ಅನುಚ್ಛೇದಗಳನ್ನೂ, ಅನೇಕ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.

ಸಂವಿಧಾನದ ಮಹತ್ವ
ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ.

ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು - ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ .

ಸಂವಿಧಾನವು ೩೭೦ನೇ ವಿಧಿ ಮತ್ತು ಸಂವಿಧಾನ ಆಜ್ಞೆ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ ಕುರಿತು), ೧೯೫೪ ರಲ್ಲಿ ಒದಗಿಸಲಾದ ಕೆಲವು ಅಪವಾದಗಳು ಮತ್ತು ಬದಲಾವಣೆಗೊಳಪಟ್ಟು ಜಮ್ಮು ಮತ್ತು ಕಾಶ್ಮೀರರಾಜ್ಯಕ್ಕೆ ಅನ್ವಯಿಸುತ್ತದೆ.
ಇತಿಹಾಸ

ಸಂಪುಟ ಸಮಿತಿ
ಎರಡನೆಯ ಮಹಾಯುದ್ಧವು ಮೇ ೯, ೧೯೪೫ರಂದು ಯೂರೋಪಿನಲ್ಲಿ ಮುಕ್ತಾಯಗೊಂಡಿತು. ಅದೇ ವರ್ಷದ ಜುಲೈನಲ್ಲಿ, ಯುನೈಟೆಡ್ ಕಿಂಗ್‍ಡಮ್ನಲ್ಲಿ ಹೊಸ ಸರಕಾರವು ಅಧಿಕಾರಕ್ಕೆ ಬಂದಿತು. ಈ ಹೊಸ ಸರಕಾರವು ತನ್ನ ಭಾರತೀಯ ಧೋರಣೆ (ಇಂಡಿಯನ್ ಪಾಲಿಸಿ)ಯನ್ನು ಘೋಷಿಸಿ, ಸಂವಿಧಾನದ ಕರಡನ್ನು ತಯಾರು ಮಾಡಲು ಸಮಿತಿಯನ್ನು ರಚಿಸಲು ನಿರ್ಧರಿಸಿತು. ಮೂವರು ಬ್ರಿಟೀಷ್ಮಂತ್ರಿಗಳ ತಂಡವೊಂದು, ಭಾರತದ ಸ್ವಾತಂತ್ರ್ಯದ ಬಗ್ಗೆ, ಪರಿಹಾರ ಹುಡುಕಲು ಭಾರತಕ್ಕೆ ಬಂದಿತು. ಈ ತಂಡವನ್ನು 'ಸಂಪುಟ ಸಮಿತಿ' (Cabinet Mission) ಎಂದು ಕರೆಯಲಾಯಿತು.
ಸಂವಿಧಾನದ ರೂಪುರೇಷೆಗಳನ್ನು ಚರ್ಚಿಸಿದ ಈ ಸಮಿತಿಯು, ಕರಡು ಸಂವಿಧಾನ ರಚನಾ ಸಮಿತಿಯು ಅನುಸರಿಸಬೇಕಾದ ಕಾರ್ಯವಿಧಾನದ ಕೆಲವು ವಿವರಗಳನ್ನು ಸ್ಪಷ್ಟಪಡಿಸಿತು. ಬ್ರಿಟಿಷ್ ಭಾರತದ ಪ್ರಾಂತ್ಯಗಳ ೨೯೬ ಸ್ಥಾನಗಳಿಗೆ ಚುನಾವಣೆಗಳು ೧೯೪೬ರ ಜುಲೈ - ಅಗಸ್ಟ್ ಹೊತ್ತಿಗೆ ಮುಗಿದವು. ಆಗಸ್ಟ್ ೧೫, ೧೯೪೭ರಂದು ಭಾರತದ ಸ್ವಾತಂತ್ರ್ಯದೊಂದಿಗೆ ಸಂವಿಧಾನರಚನಾ ಸಮಿತಿಯು ಸಂಪೂರ್ಣವಾಗಿ ಸ್ವಾಯತ್ತ ಸಭೆಯಾಗಿ ಮಾರ್ಪಟ್ಟಿತು. ಈ ಸಮಿತಿಯು ಡಿಸೆಂಬರ್ ೯, ೧೯೪೭ ರಂದು ತನ್ನ ಕೆಲಸವನ್ನು ಆರಂಭಿಸಿತು.

ಸಂವಿಧಾನ ರಚನಾಸಭೆ
ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆರಿಸಿ, ಆ ಸಭೆಗಳು ಸಂವಿಧಾನರಚನಾ ಸಭೆಯ ಸದಸ್ಯರನ್ನು ಆರಿಸಿದರು.

ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಅಲ್ಲಿ ಇದ್ದರು. ಜವಾಹರ್ ಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಂ ಆಝಾದ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಇವರುಗಳು ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ ಕೆಲವು ಪ್ರಮುಖ ವ್ಯಕ್ತಿಗಳಾಗಿದ್ದರು. ಪರಿಶಿಷ್ಟ ವರ್ಗಗಳಿಗೆ ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು ಆಂಗ್ಲೋ-ಇಂಡಿಯನ್ಸಮುದಾಯವನ್ನು ಫ್ರಾಂಕ್ ಆಂಟನಿ ಅವರೂ ಪಾರ್ಸಿ ಜನರನ್ನು ಎಚ್.ಪಿ. ಮೋದಿ ಅವರೂ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ ಖ್ಯಾತ ಕ್ರೈಸ್ತರಾದ ಹರೇಂದ್ರ ಕುಮಾರ್ ಮುಖರ್ಜಿಯವರು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಇದ್ದರು. ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಬಿ.ಆರ್.ಅಂಬೇಡ್ಕರ್ , ಬಿ.ಎನ್. ರಾಜು ಮತ್ತು ಕೆ.ಎಂ. ಮುನ್ಶಿಯವರೂ ಸಭೆಯ ಸದಸ್ಯರಾಗಿದ್ದರು. ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮಿ ಪಂಡಿತ್ ಪ್ರಮುಖ ಮಹಿಳಾ ಸದಸ್ಯರಾಗಿದ್ದರು. ಡಾ.ಸಚ್ಚಿದಾನಂದ ಸಿನ್ಹಾರವರು ಸಂವಿಧಾನರಚನಾಸಭೆಯ ಮೊದಲ ಅಧ್ಯಕ್ಷರಾಗಿದ್ದರು. ನಂತರ, ಡಾ.ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿಯೂ ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು.

ಸಂವಿಧಾನ ರಚನಾಸಭೆಯು ಎರಡು ವರ್ಷ ೧೧ ತಿಂಗಳು ೧೮ ದಿನಗಳ ಕಾಲದ ಅವಧಿಯಲ್ಲಿ ೧೬೬ ದಿನ ಸಮಾವೇಶಗೊಂಡಿತು. ಈ ಸಮಾವೇಶಗಳಿಗೆ ಸಾರ್ವಜನಿಕರಿಗೂ ಹಾಗು ಪತ್ರಕರ್ತರಿಗೂ ಪ್ರವೇಶವಿತ್ತು.

ಆಶಯಗಳ ನಿಷ್ಕರ್ಷೆ


 ಸಂವಿಧಾನದ ಮೂಲ ತತ್ವಗಳನ್ನು ಜವಹರಲಾಲ್ ನೆಹರುರವರು ತಮ್ಮ ಆಶಯಗಳ ನಿಷ್ಕರ್ಷೆ ಯಲ್ಲಿ ಸ್ಪಷ್ಟಪಡಿಸಿದ್ದಾರೆ :
ಭಾರತವು ಸ್ವತಂತ್ರ, ಸಾರ್ವಭೌಮ, ಗಣರಾಜ್ಯ.;
ಭಾರತವು ಹಿಂದಿನ ಬ್ರಿಟಿಷ್ ಭಾರತದ ಪ್ರದೇಶಗಳು, ಭಾರತದ ರಾಜ್ಯಗಳು ಮತ್ತು ಭಾರತವನ್ನು ಸೇರಬಯಸುವ ಇತರ ಪ್ರದೇಶಗಳ ಒಕ್ಕೂಟ.
ಒಕ್ಕೂಟವನ್ನು ಸೇರುವ ಪ್ರದೇಶಗಳು ಸ್ವಾಯತ್ತ ಘಟಕಗಳಾಗಿದ್ದು ಒಕ್ಕೂಟಕ್ಕೆ ಒಪ್ಪಿಸಿದ ಅಧಿಕಾರಗಳ ಹೊರತಾಗಿ ಸರಕಾರದ ಮತ್ತು ಆಡಳಿತದ ಎಲ್ಲ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಚಲಾಯಿಸಬಲ್ಲವಾಗಿರುತ್ತವೆ ;
ಸ್ವತಂತ್ರ ಸಾರ್ವಭೌಮ ಭಾರತದ ಮತ್ತು ಅದರ ಸಂವಿಧಾನದ ಎಲ್ಲಾ ಅಧಿಕಾರಗಳು ಮತ್ತು ಅಧಿಕರಣಗಳು ಭಾರತದ ಪ್ರಜೆಗಳಿಂದ ದೊರೆಯಲ್ಪಡುತ್ತವೆ;
ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಕಾನೂನಿನ ಮುಂದೆ ಸಮಾನ ಸ್ಥಾನಮಾನ ಮತ್ತು ಅವಕಾಶಗಳು; ಮತ್ತು ಕಾನೂನು ಮತ್ತು ಸಾರ್ವಜನಿಕ ಸದಾಚಾರದ ಮಿತಿಗಳಲ್ಲಿನ ಮಾತು, ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಆರಾಧನೆ, ಉದ್ಯೋಗ, ಸಂಗ-ಸಹವಾಸ ಮತ್ತು ಕೃತ್ಯಗಳ ಮೂಲಭೂತ ಹಕ್ಕುಗಳು ಆಶ್ವಾಸಿತವಾಗಿದೆ ಮತ್ತಿವುಗಳು ಒದಗಿಸಲ್ಪಡುತ್ತವೆ;
ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ಆದಿವಾಸಿ ಪ್ರಾಂತ್ಯಗಳಿಗೆ, ದೀನ ಮತ್ತು ಹಿಂದುಳಿದ ವರ್ಗಗಳಿಗೆ ಸಮರ್ಪಕ ಸಂರಕ್ಷಣೆಗಳು ಒದಗಿಸಲಾಗುತ್ತದೆ;
ಭಾರತ ಗಣರಾಜ್ಯದ ಭೂಮಿ, ಸಾಗರ ಮತ್ತು ವಾಯು ಪರಿಮಿತಿಗಳ ಸಾರ್ವಭೌಮತೆಯನ್ನು ಎಲ್ಲಾ ನಾಗರೀಕ ದೇಶಗಳಂತೆ ನ್ಯಾಯವಾಗಿ ಮತ್ತು ಕಾನೂನಿಗನುಸಾರವಾಗಿ ಕಾಪಾಡಲ್ಪಡುತ್ತದೆ;
ಈ ದೇಶವು ಲೋಕಶಾಂತಿ ಮತ್ತು ಮನುಕುಲದ ಉದ್ಧಾರಕ್ಕೆ ತನ್ನ ಸಂಪೂರ್ಣ ಮತ್ತು ಮನಸಾರ ಪ್ರಯತ್ನವನ್ನು ಮಾಡುವುದು.
ವೈಶಿಷ್ಟ್ಯಗಳು
ಸಮಾಜೋದ್ಧಾರಕ್ಕೆ ಒತ್ತು
ಭಾರತ ಸಂವಿಧಾನದ ಮುಕ್ತ ಪ್ರಜಾಪ್ರಭುತ್ವದ ಸಿದ್ಧಾಂತಗಳ ನಿರೂಪಣೆಯಲ್ಲಿ ಪಾಶ್ಚಿಮಾತ್ಯ ನ್ಯಾಯಶಾಸ್ತ್ರದ ಪ್ರಭಾವ ಗಮನೀಯವಾದುದು.ಆದರೆ ಈ ಸಂವಿಧಾನ ವೈಶಿಷ್ಟ್ಯವೆಂದರೆ ಇದರಲ್ಲಿರುವ ಸಾಮಾಜಿಕ ಅಸಮಾನತೆಗಳನ್ನು ಕೊನೆಗೊಳಿಸುವ ಉದ್ದೇಶವುಳ್ಳ ತತ್ವಗಳು ಮತ್ತು ಸಮಾಜೋದ್ಧಾರದ ಆಕಾಂಕ್ಷೆಗಳು. ಸಂವಿಧಾನ ತಜ್ಞ ಗ್ರಾನ್ವಿಲ್ ಆಸ್ಟಿನನ, "ಸರ್ವೋದ್ಧಾರಕ್ಕೆ ಸಮಾಜವನ್ನು ಪುನಶ್ಚೇತನಗೊಳಿಸಲು ಪ್ರಾಯಶಃ ಬೇರೆ ಯಾವ ದೇಶದ ಸಂವಿಧಾನವೂ ಇಷ್ಟು ಒತ್ತು ನೀಡಿಲ್ಲ" ಎಂದು ಅಭಿಪ್ರಾಯಿಸಿದ್ದಾನೆ.

ಕೇಂದ್ರೀಕರಣ
ಈ ಸಂವಿಧಾನದ ಅಡಿಯಲ್ಲಿ ಹೆಚ್ಚು ಅಧಿಕರಣ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಯ ಕೈಗಳಲ್ಲಿ ಕ್ರೂಢಿಕೃತವಾಗಿದೆ. ಭಾರತದಲ್ಲಿ ಹಲವಾರು ಜಾತಿ, ಪಂಗಡ, ಪ್ರಾಂತ್ಯಗಳು ತಮ್ಮದೇ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಈ ಕೇಂದ್ರೀಕರಣವನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬೆಂಬಲಿಗರು ಪ್ರಾದೇಶಿಕ ಪ್ರಾಮುಖ್ಯತೆಯುಳ್ಳ ವಿಕೇಂದ್ರೀಕೃತ ಪಂಚಾಯತಿ ಪದ್ಧತಿಯನ್ನು ಅಳವಡಿಸಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಜವಹರಲಾಲ್ ನೆಹರುರವರಂತಹ ಆಧುನಿಕತೆಯ ಬೆಂಬಲಿಗ ನೇತಾರರ ಅಭಿಪ್ರಾಯ ಮೇಲ್ಗೈ ಹೊಂದಿ, ಪ್ರಬಲ ಕೇಂದ್ರೀಕೃತ ಸಂಸದೀಯ ರಾಜ್ಯಗಳ ಒಕ್ಕೂಟ ವ್ಯವಸ್ಥಯನ್ನು ಅಳವಡಿಸಲಾಯಿತು.

ಸಂವಿಧಾನ ಸ್ಥಾಪನೆಯ ನಂತರದ ವರ್ಷಗಳಲ್ಲಿ ಕ್ರಮೇಣ ಪ್ರಾಂತ್ಯಗಳು ಮತ್ತು ಪಂಗಡಗಳು ತಮ್ಮ ವೈಶಿಷ್ಟ್ಯಗಳ ನಿಟ್ಟಿನಲ್ಲಿ ಹೆಚ್ಚು ಅಧಿಕಾರಗಳನ್ನು ಬಯಸಿವೆ. ಈ ಬೆಳವಣಿಗೆ ಸಂವಿಧಾನದ ಕೇಂದ್ರೀಕರಣ ತತ್ವಗಳಿಗೆ ಅಸಮ್ಮತವಾಗಿದೆ. ಆದರೆ ಸಂವಿಧಾನದಲ್ಲಿ ಅಳವಡಿತ ಇತರ ನಿಯಂತ್ರಣಗಳಾದ ಚುನಾವಣ ಪ್ರಾಧಿಕಾರ,ಸರ್ವೋಚ್ಛ ನ್ಯಾಯಲಯ ಮತ್ತು ಮುಂತಾದವುಗಳು ಸಮತೋಲನವನ್ನು ಕಾಪಾಡುತ್ತವೆ. ಇತ್ತೀಚೆಗೆ ಪ್ರಾಂತೀಯ ರಾಜಕೀಯ ಪಕ್ಷಗಳು ಹೆಚ್ಚು ಜನಪ್ರಿಯತೆ ಹೊಂದುತ್ತಿರುವುದರಿಂದ, ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳುಸಾಮಾನ್ಯವಾಗಿ, ಅಧಿಕಾರ ಹೆಚ್ಚು ವಿಕೇಂದ್ರೀಕೃತವಾಗುತ್ತಿದೆ.

ಬೇರೆ ದೇಶಗಳ ಸಂವಿಧಾನಗಳಿಂದ ಅಳವಡಿಸಿಗೊಂಡ ತತ್ವಗಳು

ಸಂವಿಧಾನದ ಅಂತಿಮ ರೂಪವು ಅನೇಕ ಇತರ ಸಮಕಾಲೀನ ಸಂವಿಧಾನಗಳ ಬೇರೆಬೇರೆ ತತ್ವಗಳಿಗೆ ಋಣಿಯಾಗಿದೆ.

ಬ್ರಿಟನ್ನಿನ ಸಂವಿಧಾನ
ಸರಕಾರದ ಸಂಸದೀಯ ಸ್ವರೂಪ
ಏಕಸ್ವಾಮ್ಯ ಪೌರತ್ವ
ನ್ಯಾಯದ ಪ್ರಭುತ್ವ
ಲೋಕಸಭಾಧ್ಯಕ್ಷ ಮತ್ತವರ ಪಾತ್ರ
ಶಾಸನೆ ರಚನೆಯ ವಿಧಾನ
ನ್ಯಾಯ ನಿರ್ಧರಿಸುವ ಕಾರ್ಯವಿಧಾನ (ಲೇಖನ ೧೩)
 ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ
ಮೂಲಭೂತ ಹಕ್ಕುಗಳು
ರಾಜ್ಯಗಳ ಒಕ್ಕೂಟದ ಸರ್ಕಾರದ ಮಾದರಿ
ನ್ಯಾಯಾಂಗದ ಸ್ವಾತಂತ್ರ್ಯತೆ ಮತ್ತು ಶಾಸಕಾಂಗದ ನಿರ್ಧಾರಗಳನ್ನು ಪರಿಶೀಲಿಸುವ ಅಧಿಕಾರ.
ರಾಷ್ಟ್ರಪತಿಗೆ ಮಹಾಸೇನಾಧಿಪತಿಯ ಪಟ್ಟ (ಲೇಖನ ೫೨)
ನ್ಯಾಯ ನಿರ್ಧರಿಸುವ ಕಾರ್ಯವಿಧಾನ (ಲೇಖನ ೧೩)
ಐರ್ಲೆಂಡ್ ದೇಶದ ಸಂವಿಧಾನ  ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತು

ಫ್ರಾನ್ಸ್ ದೇಶದ ಸಂವಿಧಾನ  ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃ‍ತ್ವ ಆದರ್ಶಗಳು
ಕೆನಡಾ ದೇಶದ ಸಂವಿಧಾನ  ರಾಜ್ಯಗಳ ಒಕ್ಕೂಟದೊಂದಿಗೆ ಪ್ರಬಲ ಕೇಂದ್ರ ಸರ್ಕಾರದ ಮಾದರಿ
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೇಲುಳಿದ ಶಕ್ತಿಗಳು

ಆಸ್ಟ್ರೇಲಿಯ ದೇಶದ ಸಂವಿಧಾನ  ಪ್ರಸ್ತುತ ವಿಷಯಗಳ ಪಟ್ಟಿ
ರಾಜ್ಯಗಳ ಮಧ್ಯ ಅನಿರ್ಭಂದಿತ ವ್ಯಾಪರ - ವಹಿವಾಟಿಗೆ ಸ್ವಾತಂತ್ರ್ಯ

ಸೋವಿಯಟ್ ಒಕ್ಕೂಟದ ಸಂವಿಧಾನ  ಮೂಲಭೂತ ಹಕ್ಕುಗಳು
ಸರ್ಕಾರಿ ಕಾರ್ಯನೀತಿಯ ತಾಕೀತುಗಳು

ಜಪಾನ್ ದೇಶದ ಸಂವಿಧಾನ  ಮೂಲಭೂತ ಕರ್ತವ್ಯಗಳು (ಲೇಖನ ೫೧-ಎ)

ಜರ್ಮನಿ ದೇಶದ ಸಂವಿಧಾನ
 ತುರ್ತು ಪರಿಸ್ಥಿತಿಯ ಎರ್ಪಾಡು (ಲೇಖನ ೩೬೮)
 ಭಾರತ ಸಂವಿಧಾನದ ಪೀಠಿಕೆ

 ಭಾರತದ ಸಂವಿಧಾನದ ಪೀಠಿಕೆಯು ಈ ಕೆಳಗಿನಂತಿದೆ:

  
ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ:ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ;ಗಳನ್ನು ದೊರಕಿಸಿ,ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ನಾಹಿಸಲು ನಿರ್ಧರಿಸಿ;ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ.    
ಪೀಠಿಕೆಯು ಭಾರತದ ಸಂವಿಧಾನದ ಒಂದು ಅಂಗವಲ್ಲ; ಏಕೆಂದರೆ ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ,ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣ ಸರ್ವೋಚ್ಛ ನ್ಯಾಯಾಲಯವು ಪೀಠಿಕೆಯನ್ನು ಸಂವಿಧಾನದ ಒಂದು ಅಂಗವಾಗಿ ಪರಿಗಣಿಸಿದೆ. ಇದಕ್ಕೆ ಉದಾಹರಣೆ, 'ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ' ಪ್ರಕರಣ. ಅದಾಗ್ಯೂ, ಪೀಠಿಕೆಯನ್ನು ಸಂವಿಧಾನದ ಲೇಖನದಲ್ಲಿ ದ್ವಂದ್ವ ಇದ್ದಾಗ ಮಾತ್ರ, ಮತ್ತಷ್ಟು ಅರ್ಥವತ್ತಾಗಿಸುವ ಸಾಧನವನ್ನಾಗಿ ಬಳಸಬಹುದೇ ಹೊರತು, ಹಕ್ಕು ಸಾಧಿಸುವ ಸಂವಿಧಾನದ ಒಂದು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗದು.

ಪೀಠಿಕೆಯ ಮೂಲಪ್ರತಿಯಲ್ಲಿ "ಸಾರ್ವಭೌಮ, ಪ್ರಜಾಪ್ರಭುತ್ವ, ಗಣರಾಜ್ಯ" ಎಂದಿತ್ತು. ಎರಡು ಹೆಚ್ಚಿನ ಪದಗಳಾದ "ಸಮಾಜವಾದಿ" ಮತ್ತು "ಜಾತ್ಯಾತೀತ" ಪದಗಳನ್ನು ೧೯೭೬ರಲ್ಲಿ ಸಂವಿಧಾನದ ೪೨ನೆ ತಿದ್ದುಪಡಿಯಲ್ಲಿ ಸೇರಿಸಲಾಯಿತು. ಆ ಸಮಯದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಿದ್ದರಿಂದ, ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯವೆ ಎಂಬುದನ್ನು ಹಿಂದಿನ ಅನುಭವದ ಆಧಾರದಲ್ಲಿ ಪರಿಶೀಲಿಸಿ,ಸರ್ದಾರ್ ಸ್ವರಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ತಿದ್ದುಪಡಿಯನ್ನು ಕಾರ್ಯಗತಗೊಳಿಸಬಹುದೆಂದು ಶಿಫಾರಸು ಮಾಡಿತು.

ಪೀಠಿಕೆಯ ಮಹತ್ವ

ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರುಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಪಡಿಸಿರುವ ಹಾಗು ತಿದ್ದುಪಡಿ ಮಾಡಲು ಸಾದ್ಯವಿಲ್ಲದ ಆಶಯಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಪೀಠಿಕೆಯು ಸಂವಿಧಾನದ ಒಂದು ಭಾಗವಾದರೂ ಅದನ್ನು ಅಥವಾ ಅದರ ಯಾವುದೇ ಅಂಶವನ್ನು ಕಾನೂನಿಗನುಸಾರವಾಗಿ ಜಾರಿ(ಹೇರು) ಮಾಡುವಂತಿಲ್ಲ.

ಪೀಠಿಕೆಯ ಮೊದಲ ಪದಗಳು - "ನಾವು, ಜನಗಳು " - ಭಾರತದಲ್ಲಿ ಅಧಿಕಾರ ಜನಗಳ ಕೈನಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು, ಭಾರತದ ಪ್ರತಿಯೂಬ್ಬ ನಾಗರೀಕ ಹಾಗು ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ. ಕೊನೆಯದಾಗಿ ಅದರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ - ನವೆಂಬರ್ ೨೬ ೧೯೪೯ ಎಂದು ಹೇಳುತ್ತದೆ.

ಪೀಠಿಕೆಯ ಕೆಲವು ಪದಗಳ ನಿರೂಪಣೆ

ಸಾರ್ವಭೌಮ

 ಸಾರ್ವಭೌಮ ಎಂಬ ಪದದ ಅರ್ಥ ಪರಮಾಧಿಕಾರ ಅಥಾವ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಬಾಹ್ಯವಾಗಿ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಭಾರತ ಇಲ್ಲ ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ.  
ಸಮಾಜವಾದಿ

 ಸಮಾಜವಾದಿ ಪದವು ಪೀಠಿಕೆಗೆ ೧೯೭೬ರಲ್ಲಿ ೪೨ನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿತು. ಇದರ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ ಭಾರತ ಸರಕಾರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ತತ್ತ್ವಾರ್ಥ ಒಂದು ಸುಖೀ ರಾಜ್ಯದ ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ.  

 ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದೆ. ಇವುಗಳಲ್ಲಿ ಅಸ್ಪೃಶ್ಯತೆ ಮತ್ತು ಜೀತಪದ್ಧತಿ ನಿವಾರಣೆ, ಸಮಾನ ಭತ್ಯೆ ಮಸೂದೆ ಮತ್ತು ಬಾಲಕಾರ್ಮಿಕ ನಿಷೇಧ ಮಸೂದೆ ಸೇರಿವೆ.

ಜಾತ್ಯತೀತ

 ಜಾತ್ಯತೀತ ಎಂಬ ಪದವನ್ನು ಪೀಠಿಕೆಗೆ ೧೯೭೬ರ ೪೨ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ.ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ.ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ.  
ಪ್ರಜಾಪ್ರಭುತ್ವ

 ಪ್ರಜಾಪ್ರಭುತ್ವವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ. ಭಾರತದ ಎಲ್ಲ ೧೮ ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.  
ಗಣತಂತ್ರ

 ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ದವಾದದ್ದು. ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ತರು ವಂಶ ಪಾರಂಪರೆಯ ಆಧಾರದ ಮೇಲೆ ಜೀವಮಾನದವರೆಗೆ ಅಥವಾ ಸಿಂಹಾಸನವನ್ನು ತ್ಯಜಿಸುವವರೆಗೆ ನೇಮಿತಗೊಳ್ಳುತ್ತಾರೆ. ಪ್ರಜಾಪ್ರಭುತ್ವದ ಗಣತಂತ್ರದಲ್ಲಿ, ಆ ರಾಜ್ಯದ ಮುಖ್ಯಸ್ತನನ್ನು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಆರಿಸಲಾಗುವುದು. ರಾಷ್ಟ್ರಪತಿಯನ್ನು ೫ ವರ್ಷಗಳ ಒಂದು ನಿರ್ಧಿಷ್ಟ ಅವಧಿಗೆ ಚುನಾಯಿಸಲಾಗುವುದು.  
ಅನುಚ್ಛೇಧಗಳು

 ಅನುಚ್ಛೇಧಗಳನ್ನು ಸಂವಿಧಾನದ ತಿದ್ದುಪಡಿಯ ಮುಖಾಂತರ ಸೇರಿಸಬಹುದು. ಪ್ರಚಲಿತದಲ್ಲಿರುವ ೧೨ ಅನುಚ್ಛೇಧಗಳು ಇವುಗಳನ್ನು ಒಳಗೊಂಡಿವೆ. ರಾಜ್ಯ ಸರ್ಕಾರ ಹಾಗು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರ ಪರಮಾವದಿ; ಉನ್ನತ ಅಧಿಕಾರಿಗಳ ಸಂಬಳ(ವರಮಾನ);ಪ್ರಮಾಣವಚನಗಳ ವಿಧಗಳು; ರಾಜ್ಯಸಭೆ(ರಾಜ್ಯಗಳ ಪರಿಷತ್ತು - ಸಂಸತ್ತಿನ ಮೇಲ್ಮನೆ)ಯಲ್ಲಿ ಪ್ರತಿ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಇಂತಿಷ್ಟು ಎಂದು ಸ್ಥಾನಗಳನ್ನು ನಿಗದಿಪಡಿಸುವುದು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಡಳಿತ ಮತ್ತು ನಿಯಂತ್ರಣಕ್ಕೆ ವಿಶೇಷ ಏರ್ಪಾಟು ಕಲ್ಪಿಸುವುದು;ಅಸ್ಸಾಮಿನಲ್ಲಿರುವ ಬುಡಕಟ್ಟು ಪ್ರದೇಶಗಳ ಆದಳಿತಕ್ಕೆ ಏರ್ಪಾಟು ಕಲ್ಪಿಸುವುದು; ಕೇಂದ್ರ(ಕೇಂದ್ರ ಸರ್ಕಾರ),ರಾಜ್ಯ ಹಾಗು ದ್ವಂದ್ವ ಜವಾಬ್ದಾರಿಗಳ ಪಟ್ಟಿಗಳು; ಅಧಿಕೃತ ಭಾಷೆಗಳು ; ಸ್ಥಳ ಮತ್ತು ಅವಧಿಯ ಸುಧಾರಣೆ ; ಭಾರತದೊಂದಿಗೆ ಸಿಕ್ಕಿಂನ ಸಂಯೋಗ; ಸಂಸತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರ ಪಕ್ಷಾಂತರ ವಿರುದ್ದ ವಿಶೇಷ ಏರ್ಪಾಟು ಕಲ್ಪಿಸುವುದು ; ಗ್ರಾಮೀಣ ಅಭಿವೃದ್ಧಿ ; ಮತ್ತು ನಗರ ಯೋಜನೆ .

ತಿದ್ದುಪಡಿಗಳು

ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಈ ಕೆಳಗಿನ ಪ್ರಕ್ರಿಯೆಗಳಿವೆ:
ಸಂಸತ್ತಿನಲ್ಲಿ ಸಾಮಾನ್ಯ ಬಹುಮತದಿಂದ: ಸಂಸತ್ತಿನಲ್ಲಿ ತಿದ್ದುಪಡಿ ಮತಕ್ಕೆ ಬಂದಾಗ ಅಲ್ಲಿರುವ ಅರ್ಧಕ್ಕಿಂತ ಹೆಚ್ಚು ಸಂಸದೀಯರ ಅಂಗೀಕಾರವಿದ್ದರೆ, ಈ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು.
ಸಂಸತ್ತಿನಲ್ಲಿ ವಿಶೇಷ ಬಹುಮತದಿಂದ: ಸಂಸತ್ತಿನಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರು ಹಾಜರಿದ್ದು, ಅವರಲ್ಲಿ ೩ರಲ್ಲಿ ೨ ಭಾಗ ಸಂಸದೀಯರು ತಿದ್ದುಪಡಿಯನ್ನು ಅಂಗೀಕರಿಸಿದರೆ ಅ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು.
ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ಬಗೆಗಿನ ತಿದ್ದುಪಡಿಗಳಿಗೆ ಮೇಲಿನಂತೆ ಸಂಸತ್ತಿನ ವಿಶೇಷ ಬಹುಮತವಿದ್ದು, ಅದರೊಂದಿಗೆ ಕನಿಷ್ಟ ಅರ್ಧ ರಾಜ್ಯಗಳ ಶಾಸನಸಭೆಗಳಲ್ಲಿ ವಿಶೇಷ ಬಹುಮತ ಗಳಿಸಿದರೆ, ಈ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು.

ಮೇಲಿನಂತೆ ಸಂವಿಧಾನ ತಿದ್ದುಪಡಿ ಒಂದು ಕಠಿಣ ಪ್ರಕ್ರಿಯೆಯಾದರೂ, ಭಾರತದ ಸಂವಿಧಾನ ಪ್ರಪಂಚದ ಅತೀ ತಿದ್ದಲ್ಪಟ್ಟ ಸಂವಿಧಾನಗಳಲ್ಲಿ ಒಂದಾಗಿದೆ. ಮೊಟ್ಟಮೊದಲ ತಿದ್ದುಪಡಿ ಸಂವಿಧಾನದ ಅಳವಡಿಕೆಯ ಒಂದು ವರ್ಷದೊಳಗೆಯೆ ಆಯಿತು. ಇದರಲ್ಲಿ ಹಲವಾರು ಸಣ್ಣ ಬದಲಾವಣೆಗಳನ್ನು ಮಾಡಲಾಯಿತು. ನಂತರದಿಂದ ವರ್ಷಕ್ಕೆ ಸರಾಸರಿ ೨ ತಿದ್ದುಪಡಿಗಳಷ್ಟು ಆಗಿವೆ. ಈ ಸಂವಿಧಾನ ಸವಿಸ್ತಾರವಾಗಿರುವುದರಿಂದ, ಬೇರೆ ಜನತಂತ್ರ ದೇಶಗಳಲ್ಲಿ ವಿಶೇಷ ಕಾಯಿದೆ (ordinance) ಮೂಲಕ ಜಾರಿಗೆ ತರಬಲ್ಲ ಕಾಯಿದೆಗಳನ್ನು ಭಾರತದಲ್ಲಿ ತಿದ್ದುಪಡಿಯಿಂದ ಮಾತ್ರ ತರಲಾಗುತ್ತದೆ.

೧೯೭೪ರ ಕೇಶವಾನಂದ ಭಾರತಿ ವಿರುದ್ಧ ಕೇರಳಾ ರಾಜ್ಯ ಸರ್ಕಾರ ಮೊಕದ್ದಮೆಯಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿದ ಒಂದು ಪ್ರಮುಖ ತೀರ್ಪಿನಲ್ಲಿ ಸಂವಿಧಾನದತ್ತ ನ್ಯಾಯಾಂಗ ಪರಿಶೀಲನೆಯ ಶಕ್ತಿಯನ್ನು ಶಾಸಕಾಂಗದ ಸಂವಿಧಾನದ ತಿದ್ದುಪಡಿಗಳನ್ನೂ ಪರಿಶೀಲಿಸುವುದಕ್ಕೆ ವಿಸ್ತರಿಸಿ ಸಂವಿಧಾನದ ಮೂಲಭೂತ ತತ್ವಗಳ ವ್ಯಾಖ್ಯಾನವನ್ನು ಸ್ಥಾಪಿಸಿತು. ಇದರಡಿಯಲ್ಲಿ ೩೯ನೇ ತಿದ್ದುಪಡಿಯನ್ನು ಮತ್ತು ೪೨ನೇ ತಿದ್ದುಪಡಿಯ ಭಾಗಗಳನ್ನು ಅಸಂವಿಧಾನಿಕ ಎಂದು ಘೋಷಿಸಿ ಅವನ್ನು ತಗೆದೆ ಹಾಕಿತು. ಎಚ್.ಎಮ್.ಸೀರ್ವಾಯ್‍ರಂತಃ ಕೆಲ ಸಂವಿಧಾನಿಕ ತಜ್ಞರು ಇದು ಸಂವಿಧಾನ ಶಿಲ್ಪಿಗಳ ಆಶಯಗಳ ಉಲ್ಲಂಘನೆಯೆಂದು ಅಭಿಪ್ರಾಯಿಸಿದ್ದಾರೆ. ಭಾರತದ ಸಂವಿಧಾನ ಇಲ್ಲಿಯವರೆಗೂ ೧೦೮ ತಿದ್ದುಪಡಿಗಳನ್ನು ಕಂಡಿದ್ದು, ಇತ್ತೀಚೆಗೆ ೨೦೧೦ ನೇ ಇಸ್ವಿ ಮಾಚ್ ೯ರಂದು ರಾಜ್ಯಸಭೆಯಲ್ಲಿ ಮಹಿಳಾ ವಿಧೆಯಕ ಅಂಗೀಕಾರವಾಗಿ ರಾಷ್ತ್ರಪತಿಗಲಳ ಅಂಕಿತಕ್ಕಾಗಿ ಹೋಗಿದೆ. 

ಲೇಖನಗಳು
ಭಾಗ ೧ - ಲೇಖನಗಳು ೧-೪ ಕೇಂದ್ರ ಮತ್ತು ಅದರ ಆಡಳಿತದ ಮೇಲೆ
ಭಾಗ ೨ - ಲೇಖನಗಳು ೫-೧೧ ಪೌರತ್ವ ದ ಮೇಲೆ
ಭಾಗ ೩ - ಲೇಖನಗಳು ೧೨-೩೫ ಮೂಲಭೂತ ಹಕ್ಕುಗಳು
ಲೇಖನಗಳು ೧೪-೧೮ ಸಮಾನತೆಯ ಹಕ್ಕು,
ಲೇಖನಗಳು ೧೯-೨೨ ಸ್ವಾತಂತ್ರ್ಯದ ಹಕ್ಕು,
ಲೇಖನಗಳು ೨೩-೨೪ ಶೋಷಣೆಯ ವಿರುದ್ಧ ಹಕ್ಕು,
ಲೇಖನಗಳು ೨೫-೨೮ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು,
ಲೇಖನಗಳು ೨೯-೩೧ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು,
ಲೇಖನಗಳು ೩೨-೩೫ ಸಾಂವಿಧಾನಿಕ ಪರಿಹಾರದ ಹಕ್ಕು.
ಭಾಗ ೪ - ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತುಗಳನ್ನೊಳಗೊಂಡ ಲೇಖನಗಳಾದ ೩೬ - ೫೧
ಭಾಗ ೪(ಎ) ಲೇಖನ ೫೧ ಅ ಒಳಗೊಂಡಿದೆ - ಪ್ರತಿ ಭಾರತೀಯ ನಾಗರಿಕನ ಮೂಲಭೂತ ಕರ್ತವ್ಯಗ್ಳನ್ನೊಳಗೊಂಡಿದೆ.
ಭಾಗ ೫ - ಕೆಂದ್ರದ ಕುರಿತು ಲೇಖನಗಳನ್ನೊಳಗೊಂಡಿದೆ.ಅಧ್ಯಾಯ ೧ - ಲೇಖನಗಳು ೫೨-೭೮ ಕಾರ್ಯಾಂಗ ದ ಬಗ್ಗೆ
ಲೇಖನಗಳು ೫೨-೭೩ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಗಳ ಬಗ್ಗೆ,
ಲೇಖನಗಳು ೭೪-೭೫ ಮಂತ್ರಿ ಪರಿಷತ್ತಿನ ಮೇಲೆ,
ಲೇಖನ ೭೬ ಭಾರತದ ಮುಖ್ಯ ಅಟಾರ್ನಿ,
ಲೇಖನಗಳು ೭೭-೭೮ ಸರಕಾರದ ವ್ಯವಹಾರಗಳನ್ನು ನಡೆಸುವ ಬಗ್ಗೆಅಧ್ಯಾಯ ೨ - ಲೇಖನಗಳು ೭೯-೧೨೨ ಸಂಸತ್ತು ಬಗ್ಗೆ.
ಲೇಖನಗಳು ೭೯-೮೮ ಸಂಸತ್ತಿನ ಸಂವಿಧಾನದ ಬಗ್ಗೆ,
ಲೇಖನಗಳು ೮೯-೯೮ ಸಂಸತ್ತಿನ ಅಧಿಕಾರಿಗಳ ಬಗ್ಗೆ,
ಲೇಖನಗಳು ೯೯-೧೦೦ ವ್ಯವಹಾರಗಲನ್ನು ನಡೆಸುವ ಬಗ್ಗೆ,
ಲೇಖನಗಳು ೧೦೧-೧೦೪ ಸದಸ್ಯರ ಉಚ್ಚಾಟನೆಯ ಬಗ್ಗೆ,
ಲೇಖನಗಳು ೧೦೫-೧೦೬ ಸಂಸತ್ತು ಮತ್ತು ಸಂಸತ್ಸದಸ್ಯರ ಅಧಿಕಾರ, ಸೌಕರ್ಯಗಳು, ಮತ್ತು ವಿಶೇಷಾಧಿಕಾರಗಳ ಬಗ್ಗೆ,
ಲೇಖನಗಳು ೧೦೭-೧೧೧ ಶಾಸಕಾಂಗದ ಕಾರ್ಯವಿಧಾನದ ಬಗ್ಗೆ,
ಲೇಖನಗಳು ೧೧೨-೧೧೭ ಆರ್ಥಿಕ ವಿಚಾರಗಳ ಕಾರ್ಯವಿಧಾನದ ಬಗ್ಗೆ,
ಲೇಖನಗಳು ೧೧೮-೧೨೨ ಸಾಮಾನ್ಯ ಕಾರ್ಯವಿಧಾನಗಳ ಬಗ್ಗೆ.ಅಧ್ಯಾಯ ೩ - ಲೇಖನ ೧೨೩ ರಾಷ್ಟ್ರಪತಿಗಳ ಶಾಸಕಾಂಗ ಅಧಿಕಾರಗಳ ಬಗ್ಗೆ.
ಲೇಖನ ೧೨೩ ಸಂಸತ್ತಿನ ವಿರಾಮಕಾಲದಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಝ್ನೆ ಹೊರಡಿಸುವ ಬಗ್ಗೆಅಧ್ಯಾಯ ೪ - ಲೇಖನಗಳು ೧೨೪-೧೪೭ ಕೇಂದ್ರ ನ್ಯಾಯಾಂಗದ ಬಗ್ಗೆ.
ಲೇಖನಗಳು ೧೨೪-೧೪೭ ಪರಮೋಚ್ಛ ನ್ಯಾಯಾಲಯದ (ಸುಪ್ರೀಂ ಕೋರ್ಟ್) ರಚನೆ ಮತ್ತು ಸಂವಿಧಾನಗಳ ಬಗ್ಗೆಅಧ್ಯಾಯ ೫ - ಲೇಖನಗಳು ೧೪೮-೧೫೧ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಬಗ್ಗೆ.
ಲೇಖನಗಳು ೧೪೮ - ೧೫೧ ಕಾಂಪ್ಟ್ರೋಲರ್ ಮತ್ತು ಆಡಿಟರ್-ಜನರಲ್‍ನ ಅಧಿಕಾರಗಳು ಮತ್ತು ಕರ್ತವ್ಯಗಳ ಬಗ್ಗೆ
ಭಾಗ ೬ - ರಾಜ್ಯಗಳ ಬಗ್ಗೆ ಲೇಖನಗಳು.ಅಧ್ಯಾಯ ೧ - ಲೇಖನ ೧೫೨ ಭಾರತದ ರಾಜ್ಯದ ಸಾಮಾನ್ಯ ವ್ಯಾಖ್ಯಾನ
ಲೇಖನ ೧೫೨ - ಭಾರತದ ರಾಜ್ಯದ ವ್ಯಾಖ್ಯಾನದಿಂದ ಜಮ್ಮು ಮತ್ತು ಕಾಶ್ಮೀರದ ಹೊರಪಡಿಸುವಿಕೆಅಧ್ಯಾಯ ೨ - ಲೇಖನಗಳು ೧೫೩-೧೬೭ ಕಾರ್ಯಾಂಗದ ಬಗ್ಗೆ
ಲೇಖನಗಳು ೧೫೩-೧೬೨ ರಾಜ್ಯಪಾಲರ ಬಗ್ಗೆ,
ಲೇಖನಗಳು ೧೬೩-೧೬೪ ಮಂತ್ರಿ ಪರಿಷತ್ತಿನ ಮೇಲೆ,
ಲೇಖನ ೧೬೫ ರಾಜ್ಯದ ಅಡ್ವೋಕೇಟ್-ಜನರಲ್ ರ ಬಗ್ಗೆ.
ಲೇಖನಗಳು ೧೬೬-೧೬೭ ಸರಕಾರದ ವ್ಯವಹಾರಗಳನ್ನು ನಡೆಸುವ ಬಗ್ಗೆ.ಅಧ್ಯಾಯ ೩ - ಲೇಖನಗಳು ೧೬೮ - ೨೧೨ ರಾಜ್ಯಗಳ ಶಾಸಕಾಂಗದ ಬಗ್ಗೆ.
ಲೇಖನಗಳು ೧೬೮ - ೧೭೭ ಸಾಮಾನ್ಯ ಮಾಹಿತಿ
ಲೇಖನಗಳು ೧೭೮ - ೧೮೭ ರಾಜ್ಯ ಶಾಸಕಾಂಗದ ಅಧಿಕಾರಿಗಳ ಬಗ್ಗೆ,
ಲೇಖನಗಳು ೧೮೮ - ೧೮೯ ಕಾರ್ಯನಿರ್ವಣೆಯ ಬಗ್ಗೆ,
ಲೇಖನಗಳು ೧೯೦ - ೧೯೩ ಸದಸ್ಯರನ್ನು ವಜಾ ಮಾಡುವ ಬಗ್ಗೆ,
ಲೇಖನಗಳು ೧೯೪ - ೧೯೫ ಸಭೆಯ ಮತ್ತದರ ಸದಸ್ಯರ ಅಧಿಕಾರಗಳು, ಸವಲತ್ತುಗಳು ಮತ್ತು ಕಾನೂನಿಕ ಸಂರಕ್ಷಣೆಗಳು,
ಲೇಖನಗಳು ೧೯೬ - ೨೦೧ ಶಾಸಕಾಂಗದ ಕಾರ್ಯವಿಧಾನದ ಬಗ್ಗೆ,
ಲೇಖನಗಳು ೨೦೨ - ೨೦೭ ಅರ್ಥಿಕ ವಿಷಯಗಳಲ್ಲಿ ಕಾರ್ಯವಿಧಾನಗಳ ಬಗ್ಗೆ,
ಲೇಖನಗಳು ೨೦೮ - ೨೧೨ ಇತರೆ ಸಾಮಾನ್ಯ ಕಾರ್ಯವಿಧಾನಗಳ ಬಗ್ಗೆ.ಅಧ್ಯಾಯ ೪ - ಲೇಖನ ೨೧೩ ರಾಜ್ಯಪಾಲರ ಶಾಸಕಾಂಗ ಅಧಿಕಾರಗಳ ಬಗ್ಗೆ
ಲೇಖನ ೨೧೩ - ರಾಷ್ಟ್ರಪತಿಗೆ ಸಂಸತ್ತು ಸಭೆಯಲ್ಲಿಲ್ಲದ ಕಾಲದಲ್ಲಿ ವಿಧೇಯಕಗಳನ್ನು ನೀಡುವ ಅಧಿಕಾರದ ಬಗ್ಗೆ.ಅಧ್ಯಾಯ ೫ - ಲೇಖನಗಳು ೨೧೪ - ೨೩೧ ರಾಜ್ಯಗಳ ಉಚ್ಛನ್ಯಾಯಾಲಯಗಳ ಬಗ್ಗೆ.
ಲೇಖನಗಳು ೨೧೪ - ೨೩೧ ರಾಜ್ಯಗಳ ಉಚ್ಛನ್ಯಾಯಾಲಯಗಳ ಬಗ್ಗೆ.ಅಧ್ಯಾಯ ೬ - ಲೇಖನಗಳು ೨೩೩ - ೨೩೭ ಅಧೀನ ನ್ಯಾಯಾಲಯಗಳ ಬಗ್ಗೆ.
ಲೇಖನಗಳು ೨೩೩ - ೨೩೭ ಅಧೀನ ನ್ಯಾಯಾಲಯಗಳ ಬಗ್ಗೆ
ಭಾಗ ೭ - ಮೊದಲನೆ ಅನುಚ್ಛೇಧದ 'ಬಿ' ಭಾಗದಲ್ಲಿರುವ ರಾಜ್ಯಗಳ ಬಗ್ಗೆ ಲೇಖನಗಳು.
ಲೇಖನ ೨೩೮ ಲೇಖನ ೨೩೮ರ ರದ್ದುಪಡಿಸುವಿಕೆ. ಅದರ ಬದಲು ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ.
ಭಾಗ ೮ - ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಲೇಖನಗಳು
ಲೇಖನಗಳು ೨೩೯ - ೨೪೨ ಆಳ್ವಿಕೆ, ಸಚಿವ ಸಂಪುಟದ ರಚನೆ ಮತ್ತು ಉಚ್ಛ ನ್ಯಾಯಾಲಯಗಳ ಬಗ್ಗೆ
ಭಾಗ ೯ - ಪಂಚಾಯತಿ ಪದ್ಧತಿಯ ಬಗ್ಗೆ ಲೇಖನಗಳು
ಲೇಖನಗಳು ೨೪೩ - ೨೪೩ಓ ಗ್ರಾಮ ಸಭೆ ಮತ್ತು ಪಂಚಾಯತಿ ಪದ್ಧತಿಯ ಬಗ್ಗೆ
ಭಾಗ ೯ಎ - ನಗರಪಾಲಿಕೆಗಳ ಬಗ್ಗೆ ಲೇಖನಗಳು.
ಲೇಖನಗಳು ೨೪೩ಪಿ - ೨೪೩ಜೆಡ್‍ಜಿ ನಗರಪಾಲಿಕೆಗಳ ಬಗ್ಗೆ
ಭಾಗ ೧೦ - ಪರಿಶಿಷ್ಟ ಪಂಗಡಗಳಿರುವ ಪ್ರದೇಶಗಳ ಬಗ್ಗೆ ಲೇಖನಗಳು.
ಲೇಖನಗಳು ೨೪೪ - ೨೪೪ಎ ಆಳ್ವಿಕೆ, ಸಚಿವ ಸಂಪುಟದ ರಚನೆ ಮತ್ತು ಶಾಸನಸಭೆಗಳ ಬಗ್ಗೆ.
ಭಾಗ ೧೧ - ಕೇಂದ್ರ ಮತ್ತು ರಾಜ್ಯಗಳ ಸಂಭಂಧಗಳ ಬಗ್ಗೆ.ಅಧ್ಯಾಯ ೧ - ಲೇಖನಗಳು ೨೪೫ - ೨೫೫ ಶಾಸಕಾಂಗದ ಅಧಿಕಾರಗಳ ವಿತರಣೆಯ ಬಗ್ಗೆ
ಲೇಖನಗಳು ೨೪೫ - ೨೫೫ ಶಾಸಕಾಂಗದ ಸಂಬಂಧಗಳ ವಿತರಣೆಯ ಬಗ್ಗೆಅಧ್ಯಾಯ ೨ - ಲೇಖನಗಳು ೨೫೬ - ೨೬೩ ಆಡಳಿತದ ಸಂಭಂಧಗಳು
ಲೇಖನಗಳು ೨೫೬ - ೨೬೧ - ಸಾಮಾನ್ಯ
ಲೇಖನಗಳು ೨೬೨ - ನೀರಿನ ವಿವಾದಗಳ ಬಗ್ಗೆ.
ಲೇಖನಗಳು ೨೬೩ - ರಾಜ್ಯಗಳ ಮಧ್ಯೆ ಸಂಯೋಜನೆಯ ಬಗ್ಗೆ.
ಭಾಗ ೧೨ - ಹಣಕಾಸು, ಸ್ವತ್ತು, ಒಪ್ಪಂದಗಳು ಮತ್ತು ದಾವೆಗಳ ಬಗ್ಗೆ.ಅಧ್ಯಾಯ ೧ - ಲೇಖನಗಳು ೨೬೪ - ೨೯೧ ಹಣಕಾಸಿನ ಬಗ್ಗೆ
ಲೇಖನಗಳು ೨೬೪ - ೨೬೭ ಸಾಮಾನ್ಯ
ಲೇಖನಗಳು ೨೬೮ - ೨೮೧ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಆದಾಯದ ಹಂಚುವಿಕೆ ಬಗ್ಗೆ
ಲೇಖನಗಳು ೨೮೨ - ೨೯೧ ಇತರೆ ಹಣಕಾಸಿನ ಬಗ್ಗೆ ಮುನ್ನೇರ್ಪಾಡುಗಳುಅಧ್ಯಾಯ ೨ - ಲೇಖನಗಳು ೨೯೨ - ೨೯೩ ಸಾಲಗಳ ಬಗ್ಗೆ
ಲೇಖನಗಳು ೨೯೨ - ೨೯೩ ರಾಜ್ಯಗಳು ಸಾಲ ಮಾಡುವ ಬಗ್ಗೆಅಧ್ಯಾಯ ೩ - ಲೇಖನಗಳು ೨೯೪ - ೩೦೦ ಸ್ವತ್ತು, ಒಪ್ಪಂದಗಳು, ಹಕ್ಕುಗಳು, ಹೊಣೆಗಾರಿಕೆ, ಅಭಾರಗಳು ಮತ್ತು ದಾವೆಗಳ ಬಗ್ಗೆ
ಲೇಖನಗಳು ೨೯೪ - ೩೦೦ ಸ್ವತ್ತುಗಳ ಹಕ್ಕುಗಳು, ಹೊಣೆಗಾರಿಕೆ ಮತ್ತು ಅಭಾರಗಳು ಉತ್ತರಾಧಿಕಾರದ ಬಗ್ಗೆ.ಅಧ್ಯಾಯ ೪ - ಲೇಖನ ೩೦೦ಎ ಸ್ವತ್ತಿನ ಮೇಲಿನ ಹಕ್ಕುಗಳ ಬಗ್ಗೆ
ಲೇಖನ ೩೦೦ಎ - ಜನರ ಸ್ವತ್ತುಗಳನ್ನು ಕಾನೂನುಬಾಹಿರವಾಗಿ ತಗೆದುಕೊಳ್ಳದಿರುವ ಬಗ್ಗೆ
ಭಾಗ ೧೩ - ಭಾರತದ ಸಂಸ್ಥಾನದ ಒಳಗೆ ವ್ಯಾಪಾರ ಮತ್ತು ವಾಣಿಜ್ಯಗಳ ಬಗ್ಗೆ ಲೇಖನಗಳು
ಲೇಖನಗಳು ೩೦೧ - ೩೦೫ ವ್ಯಾಪಾರ ಮತ್ತು ವಾಣಿಜ್ಯಗಳ ಸ್ವಾತಂತ್ರ್ಯತೆ ಹಾಗು ಅದರ ಮೇಲೆ ಸಂಸತ್ತು ಮತ್ತು ರಾಜ್ಯಗಳಿಗೆ ನಿರ್ಬಂಧನೆಗಳನ್ನು ಹೇರುವ ಅಧಿಕಾರದ ಬಗ್ಗೆ
ಲೇಖನ ೩೦೬ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ.
ಲೇಖನ ೩೦೭ - ಲೇಖನ ೩೦೧ ರಿಂದ ೩೦೪ರಲ್ಲಿರುವ ಕಾರ್ಯಗಳನ್ನು ನಡೆಸುವ ಪ್ರಾಧಿಕಾರವನ್ನು ನೇಮಿಸುವ ಬಗ್ಗೆ.
ಭಾಗ ೧೪ - ರಾಜ್ಯ ಮತ್ತು ಕೇಂದ್ರದಡಿಯಲ್ಲಿರುವ ಸೇವೆಗಳ ಬಗ್ಗೆ ಲೇಖನಗಳುಅಧ್ಯಾಯ ೫ - ಲೇಖನಗಳು ೩೦೮ - ೩೧೪ ಸೇವೆಗಳ ಬಗ್ಗೆ
ಲೇಖನಗಳು ೩೦೮ - ೩೧೩ ಸೇವೆಗಳ ಬಗ್ಗೆ
ಲೇಖನ ೩೧೪ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಇಪ್ಪತೆಂಟನೇ ತಿದ್ದುಪಡಿ) ಕಾಯಿದೆ, ೧೯೭೨, ಎಸ್. ೩ (೨೯-೮-೧೯೭೨ರಿಂದ ಜಾರಿಗೆ).ಅಧ್ಯಾಯ ೨ - ಲೇಖನಗಳು ೩೧೫ - ೩೨೩ ಲೋಕಸೇವ ಆಯೋಗಗಳ ಬಗ್ಗೆ
ಲೇಖನಗಳು ೩೧೫ - ೩೨೩ ಲೋಕಸೇವ ಆಯೋಗಗಳ ಬಗ್ಗೆ
ಭಾಗ ೧೪ಎ - ಆಯೋಗಗಳ ಬಗ್ಗೆ ಲೇಖನಗಳು
ಲೇಖನಗಳು ೩೨೩ಎ - ೩೨೩ಬಿ
ಭಾಗ ೧೫ - ಚುನಾವಣೆಗಳ ಬಗೆಗಿನ ಲೇಖನಗಳನ್ನು ಒಳಗೊಂಡಿದೆ
ಲೇಖನೆಗಳು ೩೨೪ - ೩೨೯ ಚುನಾವಣೆಗಳ ಬಗ್ಗೆ
ಲೇಖನ ೩೨೯ ಎ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ನಲ್ವತ್ತನಾಲ್ಕನೇ ತಿದ್ದುಪಡಿ) ಕಾಯಿದೆ, ೧೯೭೮, ಎಸ್.೩೬ (೨೦-೬-೧೯೭೯ರಿಂದ ಜಾರಿಗೆ).
ಭಾಗ ೧೬ - ಕೆಲ ವರ್ಗಗಳಿಗೆ ವಿಶೇಷ ಸವಲತ್ತುಗಳನ್ನು ಒದಗಿಸುವ ಬಗ್ಗೆ ಲೇಖನಗಳು.
ಲೇಖನಗಳು ೩೩೦ -೩೪೨ ಮೀಸಲಾತಿಯ ಬಗ್ಗೆ
ಭಾಗ ೧೭ - ಅಧಿಕೃತ ಭಾಷೆಗಳ ಬಗ್ಗೆ ಲೇಖನಗಳುಅಧ್ಯಾಯ ೧ - ಲೇಖನಗಳು ೩೪೩ - ೩೪೪ ಕೇಂದ್ರದ ಭಾಷೆಯ ಬಗ್ಗೆ
ಲೇಖನಗಳು ೩೪೩ - ೩೪೪ ಕೇಂದ್ರದ ಅಧಿಕೃತ ಭಾಷೆಯ ಬಗ್ಗೆ
ಅಧ್ಯಾಯ ೨ - ಲೇಖನಗಳು ೩೪೫ - ೩೪೭ ಪ್ರಾಂತೀಯ ಭಾಷೆಗಳ ಬಗ್ಗೆ
ಲೇಖನಗಳು ೩೪೫ -೩೪೭ ಪ್ರಾಂತೀಯ ಭಾಷೆಗಳ ಬಗ್ಗೆಅಧ್ಯಾಯ ೩ - ಲೇಖನಗಳು ೩೪೮ - ೩೪೯ ಸರ್ವೋಚ್ಛ ನ್ಯಾಯಾಲಯ, ಉಚ್ಛ ನ್ಯಾಯಾಲಯಗಳ ಭಾಷೆಗಳ ಬಗ್ಗೆ, ಇತ್ಯಾದಿ
ಲೇಖನಗಳು ೩೪೮ - ೩೪೯ ಸರ್ವೋಚ್ಛ ನ್ಯಾಯಾಲಯ, ಉಚ್ಛ ನ್ಯಾಯಾಲಯಗಳ ಭಾಷೆಗಳ ಬಗ್ಗೆ, ಇತ್ಯಾದಿಅಧ್ಯಾಯ ೪ - ಲೇಖನಗಳು ೩೫೦ - ೩೫೧ ವಿಶೇಷ ನಿರ್ದೇಶಕಗಳ ಬಗ್ಗೆ
ಲೇಖನ ೩೫೦ - ಅಹವಾಲುಗಳನ್ನು ಸಲ್ಲಿಸುವಲ್ಲಿ ಉಪಯೋಗಿಸಬೇಕಾಗಿರುವ ಭಾಷೆಯ ಬಗ್ಗೆ.
ಲೇಖನ ೩೫೦ ಎ - ಮಾತೃಭಾಷೆಯಲ್ಲಿ ಪ್ರಾಥಮಿಕ ಮಟ್ಟದಲ್ಲಿ ಶಿಕ್ಷಣ ದೊರೆಸುವಿಕೆಯ ಬಗ್ಗೆ
ಲೇಖನ ೩೫೦ಬಿ - ಭಾಷಾ ಅಲ್ಪಸಂಖ್ಯಾತರಿಗೆ ವಿಶೇಷ ಅಧಿಕಾರಿ ನೇಮಕದ ಬಗ್ಗೆ.
ಲೇಖನ ೩೫೧ - ಹಿಂದಿ ಭಾಷೆಯ ಬೆಳವಣೆಗೆಯ ಬಗ್ಗೆ ನಿರ್ದೇಶಕ.
ಭಾಗ ೧೮ - ತುರ್ತುಪರಿಸ್ಥಿತಿಗಳ ಮುನ್ನೇರ್ಪಾಡಿನ ಬಗ್ಗೆ ಲೇಖನಗಳು
ಲೇಖನಗಳು ೩೫೨ - ೩೫೯ - ತುರ್ತು ಪರಿಸ್ಥಿತಿಗಳ ಮುನ್ನೇರ್ಪಾಡುಗಳು.
ಲೇಖನ ೩೫೯ಎ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಅರವತ್ತಮೂರನೇ ತಿದ್ದುಪಡಿ) ಕಾಯಿದೆ, ೧೯೮೯, ಎಸ್. ೩ (೬-೧-೧೯೯೦ರಿಂದ ಜಾರಿಗೆ).ಲೇಖನ ೩೬೦ - ಹಣಕಾಸಿನ ತುರ್ತು ಪರಿಸ್ಥಿತಿಗಳಿಗೆ ಮುನ್ನೇರ್ಪಾಡುಗಳು.
ಭಾಗ ೧೯ - ಇತರೆ ವಿಷಯಗಳು
ಲೇಖನಗಳು ೩೬೧ - ೩೬೧ಎ - ಇತರೆ ವಿಷಯಗಳು
ಲೇಖನ ೩೬೨ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಇಪ್ಪತ್ತೇಳನೇ ತಿದ್ದುಪಡಿ) ಕಾಯಿದೆ, ೧೯೭೧, ಎಸ್.೨ .
ಲೇಖನಗಳು ೩೬೩ - ೩೬೭ - ಇತರೆ
ಭಾಗ ೨೦ - ಸಂವಿಧಾನದ ತಿದ್ದುಪಡಿಯ ಬಗೆಗಿನ ಲೇಖನಗಳು.
ಲೇಖನ ೩೬೮ - ಶಾಸನಸಭೆಗಿರುವ ಸಂವಿಧಾನವನ್ನು ತಿದ್ದುವ ಅಧಿಕಾರಗಳು ಮತ್ತದನ್ನು ಮಾಡುವ ವಿಧಾನ.
ಭಾಗ ೨೧ - ತಾತ್ಕಾಲಿಕ, ಹಂಗಾಮಿ ಮತ್ತು ವಿಶೇಷ ಮುನ್ನೇರ್ಪಾಡುಗಳ ಬಗ್ಗೆ ಲೇಖನಗಳು
ಲೇಖನಗಳು ೩೬೯ -೩೭೮ಎ ತಾತ್ಕಾಲಿಕ, ಹಂಗಾಮಿ ಮತ್ತು ವಿಶೇಷ ಮುನ್ನೇರ್ಪಾಡುಗಳ ಬಗ್ಗೆ
ಲೇಖನಗಳು ೩೭೯ - ೩೯೧ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ.
ಲೇಖನ ೩೯೨ - ಸಂಕಷ್ಟ ಪರಿಸ್ಥಿತಿಗಳನ್ನು ನಿವಾರಿಸಲು ರಾಷ್ಟ್ರಪತಿಯ ಅಧಿಕಾರಗಳು.
ಭಾಗ ೨೨ - ಸಂಕ್ಷಿಪ್ತ ಶೀರ್ಷಿಕೆ, ಪ್ರಾರಂಭದ ದಿನ, ಹಿಂದಿ ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆಯ ಬಗ್ಗೆ ಲೇಖನಗಳು
ಲೇಖನಗಳು ೩೯೩ -೩೯೫ ಪ್ರಾರಂಭವಾಗುವ ದಿನ, ಹಿಂದಿ ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆ

ಟೀಕೆಗಳು

 ಪಾಶ್ಚಿಮಾತ್ಯ ಸಂವಿಧಾನಗಳಿಂದ ಪ್ರೇರಿತ ಭಾರತದ ಸಂವಿಧಾನವು ಅವುಗಳಿಗಿಂತ ಭಿನ್ನವಾಗಿದೆ, ಹೇಗೆಂದರೆ ಶಾಸಕಾಂಗ ವನ್ನು ನಾಡಿನ ಪ್ರಧಾನ ಕಾನೂನು ರಚಿಸುವ ಅಂಗವನ್ನಾಗಿ ಸಂವಿಧಾನವು ಎತ್ತಿ ಹಿಡಿಯುತ್ತದೆ. ಈ ರೀತಿಯಾಗಿ ಶಾಸಕಾಂಗವು ಕಾರ್ಯಾಂಗ ಮತ್ತುನ್ಯಾಯಾಂಗ ಗಳಿಗಿಂತ ಬಲಿಷ್ಠವಾಗಿದೆ. ಸಂವಿಧಾನದ ಮೂಲಭೂತ ವಿನ್ಯಾಸವು ಮಜಬೂತಾಗಿದ್ದರೂ, ಅಧಿಕಾರಶಾಹೀ ವರ್ಗಕ್ಕೆ ದುರುಪಯೋಗದ ಆಸ್ಪದ ಕೊಡುವುದೆಂಬ ಟೀಕೆಯೂ ಸೇರಿದೆ. ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರ ಹಾಗೂ ಬಡತನಗಳೇ ಇದಕ್ಕೆ ಸಾಕ್ಷಿಗಳಾಗಿವೆ.

ಕೃಪೆ : ವಿಕಿಪೀಡಿಯ