ಸಂಘಜೀವಿಯಾದ ಮಾನವನು ಅಲೆಮಾರಿ ಜೀವನಕ್ಕೆ ಇತಿಶ್ರೀ ಹಾಡಿ ನೆಲಸುಜೀವವನ್ನು ಆರಂಭಿಸಿ ಹಂತ ಹಂತವಾಗಿ ಸಮಾಜವನ್ನು ಬೆಳೆಸುತ್ತಾ ಹೋದನು. ತನ್ನ ಮತ್ತು ಸಮಾಜದ ಪುರೋಭಿವೃದ್ಧಿಗಾಗಿ ಅನೇಕಾನೇಕ ಕಟ್ಟುಪಾಡುಗಳನ್ನು, ವಿಧಿ ವಿಧಾನಗಳನ್ನು, ನೀತಿ ನಿಯಮಗಳನ್ನು ರೂಪಿಸಿಕೊಳ್ಳತ್ತಾ ಬಂದನು. ತನ್ನ ಮೇಧಾಶಕ್ತಿಯಿಂದ ಜೀವನವು ಸುಲಲಿತವೂ ಸುಂದರವೂ ಆಗುವಂತೆ ಸಾಧನೆಗಳ ಸರಮಾಲೆಯನ್ನೇ ನಿರ್ಮಿಸಿದನು. ಈ ಎಲ್ಲವನ್ನೂ ಅನೇಕಾನೇಕ ಮಾಧ್ಯಮಗಳ ಮೂಲಕ ದಾಖಲಿಸುತ್ತಾ ಬಂದನು. ಆ ದಾಖಲೆಗಳಲ್ಲಿ ಪ್ರಾಥಮಿಕವೂ ಅಧಿಕೃತವೂ ಆದ ದಾಖಲೆಗಳೇ ಶಾಸನಗಳು.
ನಾಡಿನ ಸಾಂಸ್ಕೃತಿಕ, ಐತಿಹಾಸಿಕ, ಸಾಮಾಜಿಕ, ಸಾಹಿತ್ಯಿಕ, ಮಹತ್ವಗಳನ್ನು ಸಾರುವ ಅಧಿಕೃತ ದಾಖಲೆಗಳೆಂದರೆ ಶಾಸನಗಳು. ಮಾನವನ ಇತಿವೃತ್ತಗಳಗೆ ಕನ್ನಡಿ ಹಿಡಿದಂತಿರುವ ಶಾಸನಗಳು ವಸ್ತುವೈವಿಧ್ಯತೆಯಿಂದ ನಮ್ಮನ್ನು ಚಕಿತಗೊಳಿಸುತ್ತಿವೆ. ಆಯಾಯಾ ಕಾಲದ ಎಲ್ಲರಂಗಗಳ ನಾನಾ ಮಜುಗಳನ್ನು ಪ್ರತಿಫಲಿಸುತ್ತಿವೆ. ತಮಿಳುನಾಡನ್ನು ಬಿಟ್ಟರೆ ಅತಿ ಹೆಚ್ಚು ಸಂಖ್ಯೆಯ ಶಾಸನಗಳು ದೊರಕಿರುವುದು ಕರ್ನಾಟಕದಲ್ಲೆ. ಕರ್ನಾಟಕದ ಸಂಸ್ಕೃತಿಯ ಹಲವು ಮುಖಗಳನ್ನೂ, ಒಳಪದರುಗಳನ್ನೂ ಪರಿಚಯ ಮಾಡಿಕೊಡುತ್ತವೆ. ಕರ್ನಾಟಕದ ಐತಿಹಾಸಿಕ ಪರಂಪರೆಯ ಚಿತ್ರಣವನ್ನು ಕೊಡುವ ಮುಖ್ಯ ಮಾಹಿತಿ ಕೋಶವಾಗಿದ್ದು, ವಾಸ್ತವ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿವೆ. ಡಾ| ಚಿದಾನಂದಮೂರ್ತಿಯವರು ಹೇಳಿರುವಂತೆ ‘ಶಾಸನಗಳು ಕನ್ನಡ ಸಾಹಿತ್ಯದ ತಲಕಾವೇರಿ’.
ಸಾಹಿತ್ಯ ಕೃತಿಗಳಲ್ಲಿ ಸಾಂಸ್ಕೃತಿಕ ಮಾಹಿತಿಗಳು ಕೇವಲ ಸೂಚನೆಯ ರೂಪದಲ್ಲಿರುತ್ತವೆ. ಶಾಸನಗಳಿರುವಂತೆ ಸಮೃದ್ಧವಾಗಿ ದೊರೆಕುವುದಿಲ್ಲ, ಶಾಸನಗಳ ಮೇಲಿನ ಬರಹಗಳಂತೆಯೇ ಅದರ ಮೇಲಿರುವ ಶಿಲ್ಪಗಳೂ ಸಾಂಸ್ಕೃತಿಕ ಅಧ್ಯಯನಕ್ಕೆ ಪೋಷಕವಾಗಿವೆ. ಸುಂದರವಾದ ಕನ್ನಡದ ಬಿಡಿಪದ್ಯಗಳು ಕ್ರಿ.ಶ.700ರ ಹೊತ್ತಿಗೆ ಶಾಸನಗಳಲ್ಲಿ ಕಾಣಿಸಿಕೊಂಡು ಪಂಪನ ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯವು ಉತ್ತುಂಗ ಶಿಖರವನ್ನೇರುವಂತೆ ಮಾಡಿದೆ. ಕ್ರಿ.ಶ.700ರ ಬಾದಾಮಿಯ ಶಾಸನದ ಕಪ್ಪೆ ಅರಭಟ್ಟನ ತ್ರಿಪದಿಯು ಇದಕ್ಕೆ ಸಾಕ್ಷಿಯಾಗಿದೆ.
ಮಾಧುರ್ಯಂ, ಬಾದಿಪ್ಪ ಕಲಿಗೆ
ಕಲಿಯುಗ ವಿಪರೀತನ್ ಮಾಧವನೀತಲ್ ಪೆರನಲ್ಲ||
ಹಲವು ಶಾಸನಗಳು ಕವಿಚಕ್ರವರ್ತಿನಂತಹ ಶ್ರೇಷ್ಟ ಕವಿಗಳು ಬರೆದಿದ್ದಾರೆ. ರನ್ನನ ಸ್ವಹಸ್ತಾಕ್ಷರಗಳು ಶ್ರವಣಬೆಳ್ಗೊಳದ ಚಿಕ್ಕ ಬೆಟ್ಟದ ಮೆಲೆ ಇಂದಿಗೂ ಇದೆ. ಹಂಪಿಯಲ್ಲಿ ದೊರೆತಿರುವ ಒಂದು ಶಾಸನ ಚಾಮರಸ ಕವಿ 1430 ಸುಮಾರಿನಲ್ಲಿ ವಾಸವಾಗಿದ್ದ ಪ್ರದೇಸವನ್ನು ಗುರುತಿಸಲು ಸಹಾಯಕವಾಗಿದೆ. ಹೊಯ್ಸಳರ ಕಾಲದ ಜಕಣಾಚಾರಿ, ಡಕಣಾಚಾರಿ, ಮಲ್ಲಿತಮ್ಮರಂತ ಶಿಲ್ಪಿಗಳ ಹೆಸರು ಅವರು ಕೆತ್ತಿದ ವಿಗ್ರಹಗಳ ಪಾದ ಪೀಠಗಳ ಮೇಲೆ ದೊರೆಯುವುದರಿಂದ ತಿಳಿದು ಬರುತ್ತದೆ. ಜಿನವಲ್ಲಭನು ತನ್ನ ಅಣ್ಣನ ಹೆಸರಿನ್ನು ಕಟ್ಟಿಸಿದ ಕವಿತಾಗುಣಾರ್ಣವ ತಟಾಕ ಎಂಬ ಕೆರೆ ಇಂದಿಗೂ ಇದೆ. ಈ ವಿಚಾರವನ್ನು ಹೇಳುವ ಆಂಧ್ರದ ಕರೀಂನಗರ ಜಿಲ್ಲೆಯ ಕುರಿಕ್ಯಾಲು ಶಾಸನ ಪಂಪನ ಇತಿವೃತ್ತಾಂತದ ಬಗೆಗೂ ಮಾಹಿತಿಯನ್ನು ನೀಡುತ್ತದೆ. ಇದು ಪ್ರಸ್ತರ ಶಾಸನಗಳೆಂದು ಕರೆಯುವ ಬಂಡೆಶಾಸನಕ್ಕೆ ಉತ್ತಮ ಉದಾಹರಣೆಯಾಗಿದೆ.
ಕರ್ನಾಟಕದ ಹಿಂದಿನ ಶಿಕ್ಷಣ ವ್ಯವಸ್ಥೆಯ ವಿಸ್ತಾರವಾದ ಪರಿಚಯ ಶಾಸನಗಳಿಂದ ದೊರೆಕುತ್ತದೆ. ಅಗ್ರಹಾರ, ಮಠ, ದೇವಾಲಯಗಳಲ್ಲಿ ನಡೆಯುತ್ತಿದ್ದ ವಿದ್ಯಾಭ್ಯಾಸಕ್ಕೆ ಶ್ರೀಮಂತರು ಉದಾರವಾಗಿ ದತ್ತಿಗಳನ್ನು ನೀಡಿರುವುದು ಶಾಸನೋಕ್ತವಾಗಿವೆ. ಗುಲ್ಬರ್ಗ ಜಿಲ್ಲೆಯ ನಾಗಾವಿ ಎಂಬಲ್ಲಿದ್ದ ಉನ್ನತ ವಿದ್ಯಾಕೇಂದ್ರಕ್ಕೆ ಹಾಗೆ ದತ್ತಿಗಳನ್ನು ನೀಡಿರುವುದನ್ನು ಅಲ್ಲಿನ ಶಾಸನವು ತಿಳಿಸುತ್ತದೆ. ಹನ್ನೆರಡನೇ ಶತಮಾನದ ಕರ್ನಾಟಕದ ವಿಶ್ವವಿದ್ಯಾನಿಲಯವೆಂದು ಆಧುನಿ ವಿದ್ವಾಂಸರು ಬಣ್ಣಿಸುವ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯಲ್ಲಿ ಕೆರೆಯ ಕೋಡಿಯ ಬಳಿ ಇದ್ದ ಕೋಡಿಮಠವೆಂದು ಕರೆಯುತ್ತಿದ್ದ ಕೇದಾರೇಶ್ವರ ದೇವಾಲಯ ಉನ್ನತ ಶಿಕ್ಷಣದ ಕೇಂದ್ರವಾಗಿತ್ತು. ಅಲ್ಲಿ ಶಿಕ್ಷಣವನ್ನು ಪಡೆಯಲು ದೇಶದ ನಾನಾ ಭಾಗಗಳಿಂದ ಶಿಕ್ಷಣಾರ್ಥಿಗಳು ಬರುತ್ತಿದ್ದರು. ಈ ಮಠವು ಕಲಾವಿದರಿಗೆ, ಅನಾಥರಿಗೆ ಆಶ್ರಯ ಸ್ಥಾನವೂ ಅಗಿತ್ತು. ರೋಗಿಗಳಿಗೆ ಆಸ್ಪತ್ರೆಯೂ ಆಗಿ ವೈದ್ಯೋಪಚಾರವನ್ನು ನೀಡುತ್ತಿತ್ತೆಂದು. ಬಳ್ಳಿಗಾವಿ ಶಾಸನವು ತಿಳಿಸುತ್ತದೆ.
ಶಾಸನಗಳು ಇಂದಿಗೂ ನಮ್ಮ ಗ್ರಾಮೀಣ ಸಮಾಜದಲ್ಲಿ ಜನರೊಡನೆಯೇ ಇವೆ. ಯಾವುದೋ ಒಂದು ಕಾಲದ ರಾಜಕೀಯ ವಿಷಯವನ್ನೋ ಒಂದು ಘಟನೆಯನೋ ಅಥವಾ ಯಾರದೋ ಬಲಿದಾನವನ್ನು ಕುರಿತೋ ಶಾಸನ ಹೇಳುತ್ತಿದ್ದಿರ ಬಹುದು. ಅವುಗಳಲ್ಲಿ ಏನಿದೆಯೆಂಬ ತಿಳುವಳಿಕೆ ಇಲ್ಲದಿದ್ದರೂ, ಅವುಗಳ ಬಗೆಗೆ ತಮ್ಮದೇ ಆದ ಕಥೆಗಳನ್ನು, ವಾದಗಳನ್ನು ಮತ್ತು ಅನೇಕ ಕಲ್ಪನೆಗಳನ್ನು ಜನರು ಹೊಂದಿರುತ್ತಾರೆ. ಎಷ್ಟೋ ಶಾಸನಗಳು, ವೀರಗಲ್ಲು ಮಾಸ್ತಿಕಲ್ಲುಗಳು ಗ್ರಾಮದೇವತೆಗಳಾಗಿ ಕುಲದೈವಗಳಾಗಿ ಮಾರ್ಪಾಟಾಗಿವೆ. ಅವುಗಳ ಬಗೆಗೆ ಜನರಿಗೆ ಭಯಭಕ್ತಿಯಿದೆ. ಆಯಾ ಜನಗಳ ತಿಳಿವಳಿಕೆಗನುಗುಣವಾಗಿ ಅವುಗಳೊಡನೆ ವ್ಯವಹರಿಸುತ್ತಾರೆ. ಒಬ್ಬ ಇತಿಹಾಸಕಾರನಿಗೆ ಅಥವಾ ಅದರ ಬಗೆಗೆ ಜ್ಞಾನವಿರುವವನಿಗೆ ಅವು ಕೇವಲ ಒಂದು ಬರಹದ ಕಲ್ಲು ಆದರೆ ಗ್ರಾಮೀಣರಿಗೆ ಅವರ ಬದುಕಿನ ಅವಿಭಾಜ್ಯ ಅಂಗವಾಗಿರುತ್ತದೆ. ಅವುಗಳೊಂದಿಗೆ ತಲೆತಲಾಂತರದಿಂದ ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಈ ಪರಿಣಾಮವಾಗಿ ಪ್ರತಿಯೊಬ್ಬರೂ ಶಾಸನಗಳನ್ನು ಕುರಿತು ತಮ್ಮದೇ ಆದ ಭಾವನೆಗಳನ್ನು ಬೆಳೆಸಿಕೊಂಡಿರುತ್ತಾರೆ. ಈ ಭಾವನೆಗಳ ಅಧ್ಯಯನ ನಡೆಸಿದರ ಗ್ರಾಮ್ಯ ಸಮಾಜದ ಕಲ್ಪನಾಜಗತ್ತನ್ನು ಪ್ರವೇಶಿಸ ಬಹುದು. ಪೂರ್ವಿಕರ ನಿರ್ಮಾಣಗಳು ಈಗಿನವರಲ್ಲಿ ಹೇಗೆ ಪ್ರಸ್ತುತ-ಅಪ್ರಸ್ತುತವಾಗಿದೆಯೆಂಬ ವಿವರಗಳೂ ದೊರೆಯುತ್ತವೆ. ಗ್ರಾಮೀಣ ಅನಕ್ಷರಸ್ಥರ ಮುಗ್ಧಲೋಕದ ಪರಿಚಯವಾಗುತ್ತದೆ.
ಕನ್ನಡನಾಡಿನ ಶಾಸನಗಳ ಒಂದು ವೈಶಿಷ್ಟ್ಯವೆಂದರೆ ವೀರಗಲ್ಲುಗಳು, ಮಾಸ್ತಿಕಲ್ಲುಗಳು, ಆತ್ಮಾಹುತಿಯ ಕಲ್ಲುಗಳು. ಸ್ವಾಮಿನಿಷ್ಠೆಗಾಗಿ, ಊರೊಳಿತಿಗಾಗಿ, ದುಷ್ಟಶಿಕ್ಷೆಗಾಗಿ, ಶತ್ರುಗಳೊಡನೆ ಅಥವಾ ಕ್ರೂರಪ್ರಾಣಿಗಳೊಡನೆ ಪರಾಕ್ರಮದಿಂದ ಹೋರಾಡಿ ವೀರಮರಣಹೊಂದಿದ ಕಲಿಗಳ ಸ್ಮಾರಕಗಳನ್ನು ವೀರಗಲ್ಲುಗಳೆನ್ನುತ್ತಾರೆ.
“ಜಿತೇನ ಲಭ್ಯತೇ ಲಕ್ಷೀ: ಮೃತೇ ನಾಪಿ ಸುರಾಂಗನಾ|
ಕ್ಷಣ ವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ||”
ಯುದ್ಧದಲ್ಲಿ ಹೋರಾಡಿ ಮಡಿದರೆ ಸ್ವರ್ಗ, ಸುರಾಂಗನೆಯರು ಕೈಹಿಡಿದು ಸ್ವರ್ಗಕ್ಕೆ ಕರೆದೊಯ್ಯುತ್ತಾರೆ, ವಿಜಯಿಗಳಾದೆ ಮನ್ನಣೆಯೊಂದಿಗೆ ಲಕ್ಷ್ಮೀ ಲಭಿಸುತ್ತಾಳೆ. ಕ್ಷಣಮಾತ್ರದಲ್ಲಿ ಅಳಿಯುವ ದೇಹಕ್ಕಾಗಿ ಚಿಂತಿಸ ಬೇಕಿಲ್ಲ. ಎಂಬುದು ವೀರಯುಗದ ಬಲವಾದ ನಂಬಿಕೆಯಾಗಿತ್ತು. ಸಾಮಾನ್ಯವಾಗಿ ವೀರಗಲ್ಲುಗಳು ಹೋರಾಟದಲ್ಲಿ ಮಡಿದ ಯೋಧನನ್ನು ಅಪ್ಸರೆಯರು ಬಂದು ವಿಮಾನದಲ್ಲಿ ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ಶಿಲ್ಪದಿಂದ ಅಲಂಕೃತವಾಗಿರುತ್ತವೆ. ಕೆಳಗೆ ಶಾಸನದ ವಿವರಗಳನ್ನು ಕೊರೆದಿರುವುದು ಬಹುತೇಕ ವೀರಗಲ್ಲುಗಳಲ್ಲಿ ಕಂಡು ಬರುತ್ತವೆ. ವೀರಗಲ್ಲುಗಳಲ್ಲಿ ‘ಶಾಸನಸಹಿತ ವೀರಗಲ್ಲು’ ‘ಶಾಸನ ರಹಿತ ವೀರಗಲ್ಲು’ಗಳಿವೆ. ವೀರಗಲ್ಲುಗಳಲ್ಲಿ ಅನೇಕ ಪ್ರಭೇದಗಳೂ ಇವೆ. ರಣರಂಗದಲ್ಲಿ ಕಲಿತನವನ್ನು ಪ್ರದರ್ಶಿಸಿ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದವರಿಗೆ ಹಾಕಿಸುತ್ತಿದ್ದ ‘ಯುದ್ಧ ಬೀರರ ವೀರಗಲು’್ಲಗಳು, ‘ತುರು’ ಎಂದರೆ ಪಶು ಹಸು ಎಂಬ ಅರ್ಥ ಬರುತ್ತದೆ. ಗೋಸಂಪತ್ತು ನಾಡಿನ ಸಮೃದ್ಧಿಯ ಸಂಕೇತವಾಗಿತ್ತು. ಗೋಗ್ರಹಣವಾದಾಗ ಶತ್ರುವಿನೊಂದಿಗೆ ಹೋರಾಡಿದ ವೀರರಿಗೆ ಹಾಕಿಸುತ್ತಿದ್ದ ‘ತುರುಗೋಳ್’ ವೀರಗಲ್ಲು, ಹೆಣ್ಣು ಮಕ್ಕಳ ಪ್ರಾಣ, ಮಾನಗಳಿಗೆ ಕುತ್ತು ಬಂದಾಗ ತಮ್ಮ ಪ್ರಾಣವನ್ನೇ ಮುಡುಪಿಟ್ಟು ಹೋರಾಡಿದವರಿಗೆ ಹಾಕಿಸುತ್ತಿದ್ದ ‘ಪೆಣ್ಣುಯ್ಯಲ್’ ವೀರಗಲ್ಲು, ಊರಿಗೆ ಯಾವುದೇ ತೆರೆನಾದ ವಿಪತ್ತು ಸಂಭವಿಸಿದರು ಊರುಳಿವಿಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿದ ಕಲಿಗಲಿಗೆ ಹಾಕಿಸುತ್ತಿದ್ದ ‘ಊರುಳಿವು ವೀರಗಲ್ಲು’ ವಿನೋದ, ಪೌರುಷ ಪ್ರದರ್ಶನದ ದ್ಯೋತಕವಾದ, ಸಪ್ತವ್ಯಸನಗಳಲ್ಲಿ ಒಂದಾದ ಬೇಟೆ ಬಹುತೇಕ
ವೇಳೆ ಕಾಡು ಪ್ರಾಣಿಗಳ ಉಪಟಳದಿಂದ ರಕ್ಷಿಸುವ ಸಲುವಾಗಿ ನಡೆಯುತ್ತಿತ್ತು. ಬೇಟೆ ಸಂದರ್ಭದಲ್ಲಿ ಮರಣಹೋದಿದ ಶೂರರಿಗೆ, ಪೌರುಷವನ್ನು ಪ್ರದರ್ಶಿಸಿ ಪ್ರಾಣ ತ್ಯಜಿಸಿದ ತಮ್ಮ ನೆಚ್ಚಿನ ಪ್ರಾಣಿಗಳಿಗೆ ಹಾಕಿಸುತ್ತಿದ್ದ ಶಾಸನಗಳೇ ‘ಬೇಟೆ’ ವೀರಗಲ್ಲುಗಳು.
ವೇಳೆ ಕಾಡು ಪ್ರಾಣಿಗಳ ಉಪಟಳದಿಂದ ರಕ್ಷಿಸುವ ಸಲುವಾಗಿ ನಡೆಯುತ್ತಿತ್ತು. ಬೇಟೆ ಸಂದರ್ಭದಲ್ಲಿ ಮರಣಹೋದಿದ ಶೂರರಿಗೆ, ಪೌರುಷವನ್ನು ಪ್ರದರ್ಶಿಸಿ ಪ್ರಾಣ ತ್ಯಜಿಸಿದ ತಮ್ಮ ನೆಚ್ಚಿನ ಪ್ರಾಣಿಗಳಿಗೆ ಹಾಕಿಸುತ್ತಿದ್ದ ಶಾಸನಗಳೇ ‘ಬೇಟೆ’ ವೀರಗಲ್ಲುಗಳು.
ಆತಕೂರು ನಾಯಿ ಶಾಸನ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.