‘ಕನ್ನಡಿಗರ ಮೊದಲ ಧರ್ಮ ಲಿಂಗಾಯತ’ ಎಂದು ಪ್ರೊ. ಎಂ.ಎಂ. ಕಲಬುರ್ಗಿಯವರು ಹೇಳಿದ ವರದಿ (ಪ್ರವಾ ಏ.19, ಪುಟ 5)ಸಂಬಂಧ ಈ ಬರಹ.
*ಪ್ರಾಚೀನ ಕರ್ನಾಟಕದಲ್ಲಿ ವೃತ್ತಿ ಮೂಲದ ಜಾತಿಗಳು ಮಾತ್ರ ಇದ್ದುವೇ ವಿನಾ ಧರ್ಮಗಳು ಇರಲಿಲ್ಲ. ವಚನಕಾರರು ಸೃಜಿಸಿದ ಧರ್ಮವೇ ಕನ್ನಡಿಗರು ಹುಟ್ಟುಹಾಕಿದ ಮೊಟ್ಟಮೊದಲ ಧರ್ಮ .
ಅವರ ಈ ಅಭಿಪ್ರಾಯ ವಾಸ್ತವವಲ್ಲ. ಶೈವ, ಜೈನ, ಬೌದ್ಧ ಧರ್ಮಗಳು ಕ್ರಿಸ್ತಪೂರ್ವದಿಂದ ಇಲ್ಲಿವೆ. ಅವು ವೃತ್ತಿಧರ್ಮಗಳಲ್ಲ. ‘ಲಿಂಗಾಯತ’ ಧರ್ಮ ಹನ್ನೆರಡನೆಯ ಶತಮಾನದಿಂದ ಈಚೆಗೆ ಕಂಡುಬರುತ್ತದೆ. ಹಳಮೆಯೊಂದೇ ಹಿರಿಮೆಯಲ್ಲ. ಪ್ರಾಚೀನವೆಂಬ ಮಾತ್ರಕ್ಕೆ ಪವಿತ್ರವೆಂದೂ ಅಲ್ಲ. ಸಂಖ್ಯಾಬಲವೂ ಅಳತೆಗೋಲಲ್ಲ. ಎಲ್ಲ ಧರ್ಮಗಳೂ ಏರಿಳಿತವನ್ನು ಕಂಡಿವೆ. ಶ್ರೀವೈಷ್ಣವರು ಹೊರಗಿನಿಂದ ಬಂದವರಾದರೂ, ಮಾಧ್ವಧರ್ಮವು ತಡವಾಗಿ ಕಾಣಿಸಿದರೂ ಅವು ಕನ್ನಡ ನಾಡಿಗೆ ಸೇರಿದ ಮೇಲೆ ಕನ್ನಡ ನಾಡಿನ ಧರ್ಮಗಳೆನಿಸಿವೆ. ಮಾಧ್ವದಂತೆ ಲಿಂಗಾಯತವೂ ತಡವಾಗಿ ಇಲ್ಲಿ ಹುಟ್ಟಿದರೂ ಕನ್ನಡ ನಾಡಿನ ಧರ್ಮವೇ. ಯಾರೂ ಅಲ್ಲಗಳೆದಿಲ್ಲ.
*ಬೌದ್ಧ ಜೈನ ವೈದಿಕ ಶೈವ- ಉತ್ತರ ಭಾರತದಿಂದ ರಾಜ್ಯಕ್ಕೆ ವಲಸೆ ಬಂದ ಧರ್ಮಗಳಾಗಿವೆ.
ಜೈನ ವೈದಿಕ ಶೈವ ಉತ್ತರ ಭಾರತದಿಂದ ಬರಲಿಲ್ಲ. ಅವು ಆಸೇತು ಹಿಮಾಚಲವಿದ್ದ ಪುರಾತನ ಧರ್ಮಗಳು. ಜೈನಧರ್ಮ ಉತ್ತರದಿಂದ ಬಂದದ್ದು ಎಂಬುದು ಚರ್ವಿತ ಚರ್ವಣ ಮಾತು. ಉತ್ತರದಲ್ಲಿ ಬರಗಾಲವಾದ ಕಾರಣ ಭದ್ರಬಾಹು, ಸಹಸ್ರಾರು ಮುನಿಗಳು ವಲಸೆ ಬಂದುದು ದಿಟ. ಆದರೆ ಜೈನಧರ್ಮ ಅವರು ಬರುವುದಕ್ಕೂ ಮೊದಲು ಇಲ್ಲಿತ್ತು. ಜೈನಮುನಿಗಳು ತಾವಾಗಿ ಅಡುಗೆ ಮಾಡಿ ಉಣ್ಣರು. ಅವರು ಗೃಹಸ್ಥರಿಂದ ಆಹಾರ ಪಡೆಯುತ್ತಾರೆ. ಬೃಹತ್ ಪ್ರಮಾಣದ ಮುನಿ ಸಂಘಕ್ಕೆ ಭಿಕ್ಷೆ ನೀಡಲು ಜೈನರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿದ್ದರು. ತಮ್ಮ ತಪಸ್ಸಿಗೂ ಆಹಾರಕ್ಕೂ ಇಲ್ಲಿ ನಿರಾತಂಕವೆನಿಸಿ ನೆಲಸಿದರು. ಜೈನಧರ್ಮ ದ್ರಾವಿಡವೆಂದು ಕೊಂಡಕುಂದರೂ ಪೂಜ್ಯಪಾದರೂ ಪ್ರಾಕೃತ, ಸಂಸ್ಕೃತ ಕೃತಿಗಳಲ್ಲಿ ತಿಳಿಸಿದ್ದಾರೆ. ದ್ರಾವಿಡ ಸಂಘವೆಂಬ ಪ್ರಾಚೀನ ಜೈನ ಮುನಿಸಂಘವಿದೆ. ಆರ್ಯಪೂರ್ವ
ಜೈನ ದ್ರಾವಿಡರು ದಕ್ಷಿಣ ಭಾರತದಲ್ಲಿ ಹಬ್ಬಿದ್ದರು. ತಮಿಳುನಾಡು ಕರ್ನಾಟಕ ಆಂಧ್ರ ಕೇರಳದಲ್ಲಿ ಕ್ರಿ.ಪೂ. ನಾಲ್ಕನೆಯ ಶತಮಾನದಿಂದ ಕ್ರಿ.ಶ. ಎರಡನೆಯ ಶತಮಾನದವರೆಗೆ ೮೯ ಪ್ರಾಚೀನ ತಮಿಳು ಶಾಸನಗಳು ಸಿಕ್ಕಿವೆ. ಈ ೮೯ರಲ್ಲಿ ೮೫ ಜೈನ ಶಾಸನಗಳು. ಕ್ರಿ.ಪೂ. ಎರಡನೆಯ ಶತಮಾನದ ಶಾಸನಗಳಲ್ಲಿ ಕರ್ನಾಟಕ ಜೈನ ಸನ್ಯಾಸಿನಿಯರ ಪ್ರಭಾವವಿದೆ. ಈ ಬಗೆಯ ಆಧಾರಗಳು ಜೈನಧರ್ಮ ಹೊರಗಿನಿಂದ ವಲಸೆ ಬಂದುದಲ್ಲ, ಅದು ಇಲ್ಲಿಯೇ ಈ ನೆಲದಲ್ಲಿಯೇ ಇದ್ದು ಹಬ್ಬಿದ್ದ ಮೂಲ ದೇಸಿ ಧರ್ಮವೆಂದು ಸಾರುತ್ತಿವೆ. ಕ್ರಿ.ಪೂ. ಆರನೆಯ ಶತಮಾನದಲ್ಲಿ ಮಹಾವೀರ ಜಿನನು ಕರ್ನಾಟಕದವರೆಗೆ ವಿಹರಿಸಿದ ಪ್ರತೀತಿಯೂ ಇದಕ್ಕೆ ಪೂರಕ ಆಧಾರವಾಗಿದೆ.
*ಆತ್ಮ-ಪರಮಾತ್ಮ ಎರಡರಲ್ಲೂ ನಂಬಿಕೆ ಇಲ್ಲದ ಬೌದ್ಧಧರ್ಮ ರಾಜ್ಯದಲ್ಲಿ ಬಹುಬೇಗ ನಾಶವಾಯಿತು.
ಈ ಹೇಳಿಕೆ ನನ್ನಿಯಲ್ಲ. ಚೀನೀ ಪ್ರವಾಸಿ ಹುಮನತ್ಸಾಂಗನು ಆರನೆಯ ಶತಮಾನದಲ್ಲಿ ಈ ರಾಜ್ಯದಲ್ಲಿ ಸಂಚರಿಸಿದಾಗ ನೂರಾರು ಬೌದ್ಧ ವಿಹಾರಗಳಿದ್ದುವು. ಜೈನಧರ್ಮದ ತರುವಾಯ ನಾಡಿನ ಉದ್ದಗಲಗಳಲ್ಲಿ ಹಬ್ಬಿದ್ದುದು ಬೌದ್ಧಧರ್ಮ. ‘ಆತ್ಮಪರಮಾತ್ಮದಲ್ಲಿ ನಂಬಿಕೆ ಇಲ್ಲ’ದಿದ್ದರೂ ಅದರ ಪ್ರಸರಣಕ್ಕೆ ಅಡ್ಡಿ ಇರಲಿಲ್ಲ. ರಾಜರ ಪ್ರಜೆಗಳ ಪ್ರೀತಿ, ಪ್ರೋತ್ಸಾಹಕ್ಕೆ ಅರೆಕೊರೆ ಇರಲಿಲ್ಲ. ಐಹೊಳೆ, ಕನಗನಹಳ್ಳಿ, ಕದ್ರಿ, ಕೋಳಿವಾಡ, ಡಂಬಳ, ತೊರ್ಕೆ, ರಾಜಘಟ್ಟ, ಬನವಾಸಿ, ಬಳ್ಳಿಗಾವೆ ಮುಂತಾದ ಸ್ಥಳಗಳ ಬೌದ್ಧ ವಿಹಾರಸ್ತೂಪಗಳನ್ನು ಕೆಡವಿ ಧ್ವಂಸ ಮಾಡಿದರು. ಬೌದ್ಧಧರ್ಮದ ಅಭ್ಯುದಯ ಸಹಿಸದೆ ನಾಶಪಡಿಸಿದ ಪಡೆಗಳನ್ನು ತಾಳಿಕೋಟೆ ಶಾಸನ ದಾಖಲಿಸಿದೆ : ಪರಸಮಯಗಿರಿ ವಜ್ರದಂಡರುಂ, ಜಗದಲುದ್ದಂಡರುಂ, ಬೌದ್ಧ ಸಮಯ ವಿಧ್ವಂಸನ ಪ್ರವೀಣರುಂ, ಅನ್ಯ ಸಮಯಿಗಳ ಬೆನ್ನಬಾರನೆತ್ತುವರುಂ –- ಆಗಿದ್ದವರು ವಿರುಪರಸ ಮಹಾಮಂಡಲೇಶ್ವರನು ಮುಂದಾಳು ಆಗಿದ್ದ ಉಗ್ರ ಶಿವಭಕ್ತರು. ಕಾವಿಬಟ್ಟೆ ತೊಟ್ಟು ಕರುಣಾಳು ಬುದ್ಧನ ತತ್ವಗಳನ್ನು ಬೋಧಿಸುತ್ತ ವೈಚಾರಿಕ ಪ್ರಜ್ಞೆ ಬಿತ್ತಿ ವೈಜ್ಞಾನಿಕ ದೃಷ್ಟಿ ಮೂಡಿಸುತ್ತಿದ್ದ ಬೌದ್ಧ ಭಿಕ್ಖುಗಳ ಮೇಲೆರಗಿ ಅವರ ಬೆನ್ನಿನ ಹುರಿ ಕಿತ್ತರು. ನಿರಾಯುಧ ಬೌದ್ಧರನ್ನು ಸಶಸ್ತ್ರ ಸನ್ನದ್ಧರು, ‘ಬೌದ್ಧ ಸಮಯ ವಿಧ್ವಂಸನ ಪ್ರವೀಣರು’ ಬೆಂಬತ್ತಿ ಬೇಟೆ ಆಡಿ ಕೊಂದರು. ಅದರಿಂದಾಗಿ ‘ಬಹುಬೇಗ ನಾಶ’ವಾಗುವುದು ಅನಿವಾರ್ಯ. ‘ಧರ್ಮಗಳ ದಬ್ಬಾಳಿಕೆ ಹೆಚ್ಚಾದಾಗ’ ಎಂಬ ಪ್ರಯೋಗ ಸರಿಯಾದುದು. ಆ ‘ದಬ್ಬಾಳಿಕೆ’ ಮಾಡಿದವರು, ಮುಂಗೈ ಜೋರಿನಿಂದ ದಾಳಿಯೆಸಗಿದ್ದು ಬೌದ್ಧರಲ್ಲ, ಜೈನರಲ್ಲ. ನರಮೇಧ ನಿರತರು ಯಾರೆಂಬುದನ್ನು ಶಾಸನಗಳೂ ವೀರಶೈವ ಪುರಾಣಗಳೂ ದಾಖಲಿಸಿವೆ.
*ಕೇವಲ ಆತ್ಮವಾದಿಯಾದ ಜೈನಧರ್ಮ ಅರೆಜೀವ ಹಿಡಿದು ಉಳಿಯಿತು .
ಅರೆಜೀವ ಸ್ಥಿತಿ ಬಂದದ್ದು ಹೇಗೆ, ತಂದವರು ಯಾರು ಎಂಬುದನ್ನು ಚರಿತ್ರೆ ನಮೂದಿಸಿದೆ. ಬೌದ್ಧಧರ್ಮದ ಮೇಲೆ ಹರಿಹಾಯ್ದು ಮುಕ್ಕಿದವರೇ ಈ ಕೆಲಸ ಮಾಡಿದರು. ಉಗ್ರ ಶಿವಭಕ್ತರಾದ ಆದಯ್ಯ, ಏಕಾಂತದ ರಾಮಯ್ಯ, ಗೊಗ್ಗರಸ, ವಿರುಪರಸ ಮೊದಲಾದವರ ದಂಡಿನ ಉಪಟಳಕ್ಕೆ ಕೊನೆ ಮೊದಲು ಇರಲಿಲ್ಲ. ಇವರಿತ್ತ ಅಟ್ಟುಳಿಯ ವಿವರಗಳು ಕಲ್ಬರೆಹಗಳಲ್ಲಿ ವೀರಶೈವ ಪುರಾಣಗಳಲ್ಲಿ ಪುಂಖಾನುಪುಂಖವಾಗಿವೆ. ಗೊಗ್ಗರಸನ ಪರಾಕ್ರಮದ ಒಂದು ತುಣುಕು ಅಣ್ಣಿಗೆರೆ ಶಾಸನದಲ್ಲಿದೆ:
ಜೈನಮೃಗ ಬೇಂಟೆಗಾರಂ
ಜೈನಾಗಮಧೂಮಕೇತು ಜೈನ ಕುಠಾರಂ
ಜೈನ ಫಣಿ ವೈನತೇಯಂ
ಜೈನಾಂತಕನೆನಿಸಿ ನೆಗಳ್ದನೀ ಗೊಗ್ಗರಸಂ.
ವಿರುಪರಸನೂ ಅವನ ಸೈನ್ಯವೂ ಕೈಗೊಂಡ ಧರ್ಮಯುದ್ಧ ಮತ್ತು ಮಾಡಿದ ಸಾಹಸ ಕಾರ್ಯಗಳ ಒಂದು ಉದಾಹರಣೆ ತಾಳಿಕೋಟೆ ಶಾಸನದಲ್ಲಿದೆ :-
ಜಿನ ಸಮಯವನ ದಹನದಾವಾನಲರು
ಪರಿಯಳಿಗೆ ಅಣಿಲೆವಾಡ ಉಣಕಲ್ಲು ಸಂಪಗಾಂವಿ
ಅಬ್ಬಲೂರು ಮಾರುಡಿಗೆ ಅಣಂಪೂರು ಕರಹಾಡ ಕೆಂಬಾವಿ
ಬಮ್ಮಕೂರು ಮೊದಲಾಗಿ ಅನಂತ ದೇಶಾಂತರದಲಿ
ಬಸದಿಗಳಂ ಹೊಸೆದು ಮುಕ್ಕಿ ಶಿವಲಿಂಗ ಸಿಂಹಾಸನಮಂ
ಕಂಗೊಳಿಸಿ ಚಲಂ ಮೆರೆದರು.
ಇವರು ತಮ್ಮ ‘ಚಲಮೆರೆದ’ದ್ದು ಹೇಗೆ ಎಂಬುದಕ್ಕೆ ಮೇಲೆ ಹೇಳಿರುವ ಊರುಗಳಲ್ಲಿ ಒಂದಾದ ಅಬ್ಬಲೂರಿನಲ್ಲಿ ನಡೆದ ಘಟನೆಯನ್ನು ಅರಿತರೆ ಸಾಕು. ಅಬ್ಬಲೂರಿನ ಶಾಸನ ಮತ್ತು ಸೋಮೇಶ್ವರ ದೇವಾಲಯದಲ್ಲಿರುವ ಚಿತ್ರಶಿಲ್ಪ ‘ಧರ್ಮದ ದಬ್ಬಾಳಿಕೆ ಹೆಚ್ಚಾದು’ದನ್ನು, ಮರೆಮಾಚಲು ಆಗದ ‘ನಗ್ನ ಸತ್ಯ’ವನ್ನು ಬಿತ್ತರಿಸಿವೆ. ಎಲ್ಲೆಲ್ಲಿ ಜೈನ ದೇವಾಲಯಗಳನ್ನು ‘ಹೊಸೆದು ಮುಕ್ಕಿ’ದ್ದನ್ನು ತಾಳಿಕೋಟೆ ಶೈವ ಶಾಸನ ದೊಡ್ಡ ಪಟ್ಟಿಯನ್ನೇ ಕೊಟ್ಟಿದೆ. ಅದರ ಮುಂದುವರಿಕೆಯ ದಾಳಿ ಭಯಂಕರ ರೂಪ ತಾಳಿದ್ದು ಅಬ್ಬಲೂರಲ್ಲಿ. ಅಲ್ಲಿನ ಶಾಸನ, ಹರಿಹರ ಕವಿಯ ಏಕಾಂತರಾಮಿ ತಂದೆಗಳ ರಗಳೆ, ರಾಘವಾಂಕ ಕವಿ ಸೋಮನಾಥ ಚರಿತೆಯ ಪದ್ಯ, ಭೀಮ ಕವಿಯ ಬಸವಪುರಾಣ, ಲಕ್ಕಣದಂಡೇಶನ ಶಿವತತ್ವಚಿಂತಾಮಣಿ, ಗುಬ್ಬಿ ಮಲ್ಲಣಾರ್ಯನ ವೀರಶೈವಾಮೃತ ಪುರಾಣ, ವಿರಕ್ತ ತೋಂಟದಾರ್ಯನ ಸಿದ್ಧೇಶ್ವರ ಪುರಾಣ, ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ, ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯ ಕಥಾಮಣಿಸೂತ್ರ ಮುಂತಾದ ವೀರಶೈವ ಪುರಾಣಗಳಲ್ಲಿ ಹಿಂಸಾರಭಸಮತಿಗಳು ನರಹತ್ಯೆಯಲ್ಲಿ ನಿರತರಾಗಿ ಹೆಮ್ಮೆಯಿಂದ ಬೀಗಿದ ವರ್ಣನೆಯಿದೆ. ಭೀಮಕವಿ ಬಸವಪುರಾಣದಲ್ಲಿ ಜೈನರ ಮೇಲೂ ಜೈನ ಸನ್ಯಾಸಿಗಳ ಮೇಲೂ ಆಕ್ರಮಣ ಮಾಡಿ, ಹೊಡೆದು ಬಡಿದು ಹಿಂಸಿಸಿದ ವಿಧಾನಗಳನ್ನು ನಿರೂಪಿಸಿದ್ದಾನೆ-.
ಜಿನಮುನಿಗಳ ತಲೆಗಳಂ ಕೆಡಹುತ ಮುಳಿದು
ಜಿನರೂಪಗಳ ತಲೆಗಳನರಿದು ಹುಡಿಗುಟ್ಟಿ,
ಹಾರಿ ಕೆಡಹುತ ಜಿನ ಬಸದಿಗಳನೇರಿ ಜಾರುತ
ದಾಳಿ ದಬ್ಬಾಳಿಕೆ ನಡಸಿದರು.
ವಿರಕ್ತ ತೋಂಟದಾರ್ಯ ಕವಿ ‘ಸಿದ್ಧೇಶ್ವರ ಪುರಾಣ’ದಲ್ಲಿ - ‘ಮಹಾಶೂರ ಏಕಾಂತ ರಾಮಯ್ಯನು ಹುರುಪೇರಿ ತನ್ನ ಮೊನಚು ಕತ್ತಿ ಝಳಪಿಸುತ್ತ ಅಬ್ಬಲೂರಿನ ಜೈನರ ಕೇರಿಗೆ ನುಗ್ಗಿದನು. ಜಿನಬಿಂಬಗಳನ್ನು ಕಿತ್ತೆಸೆದು ಶಿವಲಿಂಗಗಳನ್ನು ನೆಟ್ಟನು. ಜೈನರ ತಲೆಗಳನ್ನು ಕತ್ತರಿಸಿ ಕೀರ್ತಿಗಳಿಸಿದನು’ ಮುಂತಾಗಿ ಮಾಹಿತಿ ಒದಗಿಸಿದ್ದಾನೆ. ಶಾಂತ ನಿರಂಜನ ಕವಿ ಅಬ್ಬಲೂರು ಚರಿತೆ ಕಾವ್ಯದಲ್ಲಿ ಜೈನರ ಮೇಲೆ ಆದ ಮಾರಣ ಹೋಮವನ್ನೂ ಜೈನರನ್ನೂ ದಿಗಂಬರ ಮುನಿಗಳನ್ನೂ ಹೆಂಗಸರನ್ನೂ ಕೊಂದು, ಹಿಂಸಿಸಿ, ಇಡೀ ಕೇರಿಯನ್ನು ಸ್ಮಶಾನವನ್ನಾಗಿಸಿದ್ದನ್ನೂ ತನ್ಮಯನಾಗಿ ತಿಳಿಸಿದ್ದಾನೆ. ‘ಸೋಮೇಶ್ವರ ದೇವರು ಏಕಾಂತದ ರಾಮಯ್ಯನಿಗೆ ಜಿನಭಕ್ತರನ್ನೂ ಜಿನಮುನಿಗಳನ್ನೂ ಎಳೆದು ಬಿಸುಡಲು ಅಪ್ಪಣೆ ಮಾಡಿದರು. ಅದರಂತೆ ಜೈನರನ್ನೂ ಜೈನಯತಿಗಳನ್ನೂ ದರದರನೆ ಎಳೆದು ತಂದು ರಾಮಯ್ಯನ ಮುಂದೆ ನಿಲ್ಲಿಸಿದರು. ರಾಮಯ್ಯನು ಅವರ ಮೂಗು, ಕೈ, ನಾಲಗೆಗಳನ್ನು ಕತ್ತರಿಸಿ ವಿಕಲಾಂಗಗೊಳಿಸಿದನು. ಹೊಟ್ಟೆಗೆ ತಿವಿದನು. ಬೀದಿಯಲ್ಲಿ ನೆತ್ತರು ಹರಿಯಿತು, ಭೂತಗಳು ನಲಿದುವು. ಹದ್ದು ಕಾಗೆಗಳು ರಕ್ತ ಕುಡಿದು ಕುಣಿದುವು. ಜೈನರ ಕತ್ತರಿಸಿದ ತಲೆಗಳು, ಮುಂಡಗಳು ಚೆಲ್ಲಾಪಿಲ್ಲಿ ಬಿದ್ದುವು. ಗೊಳೋ ಅಳುತ್ತ ಜೈನ ಮಹಿಳೆಯರು ತಮ್ಮ ಗಂಡಂದಿರ ಹರಣ ಉಳಿಸಿದರೆ ಜೈನಧರ್ಮ ತೊರೆದು ಇಷ್ಟಲಿಂಗ ಧರಿಸಿ ಲಿಂಗಾಯತರಾಗುವುದಾಗಿ ಬೇಡಿಕೊಳ್ಳುತ್ತಿದ್ದರು’. ಈ ವರ್ಣನೆ ವಿವರಣೆ ಬೇಕೆ!
ವೀರಶೈವ ಪುರಾಣಗಳ ವರ್ಣನೆಗೆ, ಶಾಸನಗಳ ದಾಖಲೆಗಳಿಗೆ ಜೀವ ತುಂಬಿವೆ ಅಬ್ಬಲೂರಿನ ಶಿಲ್ಪಗಳು. ಜೈನರ ಕಗ್ಗೊಲೆಯ ದೃಶ್ಯಾವಳಿ ನಡೆದ ಹಿಂಸಾಕಾಂಡದ ಚಿತ್ರೀಕರಣದಂತಿವೆ. ಜೈನ ಹೆಂಗಸರನ್ನು ಅಂಗಲಾಚಿದರೂ ಬಿಡದೆ ವಿವಸ್ತ್ರಗೊಳಿಸಿರುವುದು, ನಿರಾಯುಧರಾದ ದಿಗಂಬರ ಮುನಿಗಳ ತಲೆ ಕತ್ತರಿಸುತ್ತಿರುವುದು, ಇಬ್ಬಾಯಿ ಕತ್ತಿಯಿಂದ ಎದೆಗೆ ತಿವಿಯುವುದು, ಮರದ ಕೊಂಬೆ ರೆಂಬೆಗೆ ಜೈನರನ್ನೂ ಗುರುಗಳನ್ನೂ ನೇತಾಡಿಸಿ ಹಿಂಸಿಸುತ್ತಿರುವುದು, ಸುತ್ತಿಗೆಯಿಂದ ಜಿನಬಿಂಬಗಳನ್ನು ಒಡೆದು ತುಂಡರಿಸುವುದು, ಜೈನರ ರಕ್ತವನ್ನು ಕಾಗೆಗಳಿಗೆ ಊಡುತ್ತಿರುವುದು, ದನಗಳ ರಾಸನ್ನು ಜೈನರ ಮೇಲೆ ಹಾಯಿಸುವುದು, ಕೊಂದ ಹೆಣಗಳ ಮೇಲೆ ಓಡಾಡುವುದು - ಮುಂತಾದ ವ್ಯಾಖ್ಯಾನ ನಿರಪೇಕ್ಷ ದಾರುಣ ಚಿತ್ರಗಳು ‘ಧರ್ಮದ ದಬ್ಬಾಳಿಕೆ ಹೆಚ್ಚಾದು’ದಕ್ಕೆ ಸಾಕ್ಷಿ ಹೇಳುತ್ತಿವೆ. ಬೌದ್ಧರು, ಜೈನರು ಅನ್ಯಧರ್ಮದ ಮೇಲೆ ದಾಳಿ ದಬ್ಬಾಳಿಕೆ ಮಾಡಲಿಲ್ಲ. ಬೇರೆ ಧರ್ಮೀಯರ ಮನೆ ಮಠ ಮಂದಿರ ನಾಶಪಡಿಸಲಿಲ್ಲ. ಹೆಂಗಸರ ಮಾನಹಾನಿ ಮಾಡಲಿಲ್ಲ. ಕೊಲೆಗೈಯಲಿಲ್ಲ. ಆಯುಧ ಹಿಡಿದು ಕೊಲೆ ಮಾಡುವುದಾಗಿ ಬಲಾತ್ಕಾರದಿಂದ ಹೆದರಿಸಿ ಬೆದರಿಸಿ ಮತಾಂತರಕ್ಕೆ ತೊಡಗಲಿಲ್ಲ. ಆದರೂ ಬೌದ್ಧರನ್ನು ‘ಬಹುಬೇಗನಾಶ’ ಮಾಡಿದವರು, ಜೈನರನ್ನು ‘ಅರೆಜೀವ ಹಿಡಿದು ಉಳಿಯು’ವಂತೆ ಮಾಡಿದವರು ಯಾರು ಎಂಬುದು ಶಾಸನ, ಕಾವ್ಯಗಳಲ್ಲಿ ನಮೂದಾಗಿದೆ.
*ವಲಸೆ ಬಂದ (?) ಧರ್ಮಗಳು ನಮ್ಮ ಸಾಹಿತ್ಯ ಹಾಗೂ ಜೀವನ ಕ್ಷೇತ್ರ ಎರಡರ ಮೇಲೂ ಗಾಢ ಪ್ರಭಾವ ಬೀರಿದವು. ರಾಮಾಯಣ, ಮಹಾಭಾರತ, ‘ತೀರ್ಥಂಕರ’ ಪುರಾಣಗಳನ್ನೇ ಓದುವುದು ಕನ್ನಡಿಗರಿಗೆ ಅನಿವಾರ್ಯವಾಯಿತು. ಅವುಗಳಿಂದ ನಮ್ಮ ಅರಿವು ವಿಸ್ತಾರವಾದರೂ ಅಸ್ಮಿತೆ ನಾಶವಾಯಿತು.
ಇದು ವಿರೋಧಾಭಾಸದ ಮಾತು. ಸತ್ವ ಇರುವುದರಿಂದ ಗಾಢಪ್ರಭಾವ ಬೀರಿದುವು. ಅದು ಆರೋಗ್ಯಕಾರಿ ಪ್ರಭಾವ. ರಾಮಾಯಣ ಮಹಾಭಾರತ ಭಾರತೀಯ ಸಾರಸರ್ವಸ್ವದ ಎರಡು ಮಹಾಕಾವ್ಯಗಳು. ಅವನ್ನು ಓದುವುದು ಅಗತ್ಯವಾದರೂ ಅನಿವಾರ್ಯವೇನೂ ಆಗಿರಲಿಲ್ಲ. ತೀರ್ಥಂಕರ ಪುರಾಣಗಳು ಇನ್ನಷ್ಟು ವೈವಿಧ್ಯ ವಿಸ್ತಾರ ತಂದಿವೆ. ಹಾಗೆಯೇ ವೀರಶೈವ ಪುರಾಣಗಳೂ ವಚನಗಳೂ ಕೀರ್ತನೆಗಳೂ ಮತ್ತಷ್ಟು ವೈಭವ ವೈವಿಧ್ಯ ವಿಸ್ತಾರಗಳನ್ನು ತಂದಿವೆ.
‘ಅಸ್ಮಿತೆ ನಾಶವಾಯಿತು’ ಎಂಬುದು ಒಪ್ಪತಕ್ಕ ಮಾತಲ್ಲ. ಯಾವುದು ನಮ್ಮ ಅಸ್ಮಿತೆ? ಜೈನರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಸಂವರ್ಧಕರು. ನಾಡುನುಡಿಗಳ ಅಭಿಮಾನವನ್ನು ರೂಪಿಸಿ ರೂಢಿಸಿದರು. ಸಂಸ್ಕೃತ ಪ್ರಾಕೃತಗಳ ಪ್ರಭಾವವನ್ನು ಪ್ರತಿಭಟಿಸಿ ಕನ್ನಡವನ್ನೂ ಕನ್ನಡಿಗರನ್ನೂ ಕಾಪಾಡಿದರು. ಜನರನ್ನು ಒಂದುಗೂಡಿಸುವ, ಒಟ್ಟಿಗೆ ಬಾಳುವ, ಪರಧರ್ಮವನ್ನು ಸಹಿಸುವ, ಪರವಿಚಾರವನ್ನು ಆಲಿಸುವ ಸೌಹಾರ್ದದಿಂದ ಪುದುವಾಳುವ ಸಂಸ್ಕೃತಿಯನ್ನು ಬಿತ್ತಿದರು. ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಈ ನಾಡಿನದು ಸಮನ್ವಯ ಸಂಸ್ಕೃತಿ. ಶೈವ, ಜೈನ, ಬೌದ್ಧ, ಲಿಂಗಾಯತ, ವೈಷ್ಣವ ಧರ್ಮಗಳು ಕನ್ನಡಿಗರ ಹೆಮ್ಮೆಯ ಧರ್ಮಗಳು.
ಕೃಪೆ : ಪ್ರಜಾವಾಣಿ