Oct 20, 2014

ಮೈಸೂರು ಸಮೀಪ ಬೌದ್ಧ ಧರ್ಮದ ಕುರುಹು ಪತ್ತೆ !

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿಯ ಹುರ ಗ್ರಾಮದಲ್ಲಿ ಬೌದ್ಧ ಧರ್ಮದ ಪ್ರಾಚೀನ ನೆಲೆಯೊಂದನ್ನು ಮೈಸೂರು ವಿಶ್ವವಿದ್ಯಾ ನಿಲಯದ ಕನ್ನಡ ಪ್ರಾಧ್ಯಾಪಕ ಡಾ.ಎಂ.ಜಿ. ಮಂಜುನಾಥ್ ಪತ್ತೆ ಹಚ್ಚಿದ್ದಾರೆ.
ಮೈಸೂರಿನಿಂದ ದಕ್ಷಿಣಕ್ಕೆ ಸುಮಾರು 45 ಕಿ. ಮೀ. ದೂರದಲ್ಲಿರುವ ಹುರದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಬೌದ್ಧ ಚೈತ್ಯಾಲಯವೊಂದರ ಗಜಪೃಷ್ಠಾಕಾರದ ಕಟ್ಟಡವೊಂದರ ಆವಶೇಷಗಳು ಹಾಗೂ ಭಗ್ನವಾಗಿರುವ ಬುದ್ಧನ ಮೂರ್ತಿಯು ಕ್ಷೇತ್ರ ಕಾರ್ಯದ ವೇಳೆ ದೊರೆತಿದೆ.

''64 ಸೆಂ.ಮೀ. ಅಗಲ ಮತ್ತು 64 ಸೆಂ.ಮೀ. ಎತ್ತರದ ಕಣಶಿಲೆಯಲ್ಲಿ ನಿರ್ಮಿತವಾದ, ಪದ್ಮಾಸನದಲ್ಲಿ ವ್ಯಾಖ್ಯಾನ ಮುದ್ರೆಯಲ್ಲಿ ಕುಳಿತ ಭಂಗಿಯ ಬುದ್ಧನ ಶಿಲ್ಪದ ತಲೆ ಹಾಗೂ ಬಲಗೈ ಭಿನ್ನವಾಗಿದೆ. ಮೂರ್ತಿಯ ಕಾಲುಗಳವರೆಗಿನ ಪಂಚೆಯ ನೆರಿಗೆಗಳು ಮತ್ತು ಎದೆಯ ಮೇಲಿನ ಉತ್ತರೀಯದ ಗಂಟುಗಳು ಸಹ ಸ್ಪಷ್ಟವಾಗಿ ಕಾಣುವಂತಿವೆ. ವ್ಯಾಖ್ಯಾನ ಮುದ್ರೆಯ ತುಂಡಾದ ಬಲಗೈಯನ್ನು ಅಲ್ಲಿಯೇ ತುಸು ದೂರದಲ್ಲಿರುವ ಅರಳೀ ಮರವೊಂದರ ಕೆಳಗೆ ನಾಗರಕಲ್ಲು ಗಳೊಡನೆ ಪ್ರತಿಷ್ಠಾಪಿಸಲಾಗಿದೆ. ಬುದ್ಧನ ಈ ಶಿಲ್ಪವು ಕ್ರಿ.ಶ. ಸುಮಾರು 6-7ನೇ ಶತಮಾನದ್ದಿರಬಹುದು'' ಎಂದು ಡಾ. ಎಂ.ಜಿ. ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ರಕ್ಷಣೆಗೆ ಆಗ್ರಹ: ''ಕ್ರಿ.ಪೂ. 3ನೇ ಶತಮಾನದಲ್ಲಿ ಮೌರ್ಯ ಚಕ್ರವರ್ತಿ ಅಶೋಕನು ಏರ್ಪಡಿಸಿದ್ದ ಬೌದ್ಧ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಮೊಗ್ಗಲೀಪುತ್ತತಿಸ್ಸ ಎಂಬ ಬೌದ್ಧ ಬಿಕ್ಕು ಬೌದ್ಧ ಧರ್ಮ ಪ್ರಚಾರಕ್ಕೆ ಮಹಿಷ ಮಂಡಲಕ್ಕೆ ಎಂದರೆ ಇಂದಿನ ಮೈಸೂರು ಪ್ರದೇಶಕ್ಕೆ ಮಹಾದೇವ ಎಂಬ ಬೌದ್ಧ ಬಿಕ್ಕು ಎನ್ನುವವನನ್ನು ಕಳುಹಿಸಿದ ಸಂಗತಿಯು ಶ್ರೀಲಂಕೆಯ ಬೌದ್ಧ ಧರ್ಮ ಗ್ರಂಥಗಳಾದ ದೀಪವಂಸ ಹಾಗೂ ಮಹಾವಂಸಗಳಿಂದ ತಿಳಿದುಬಂದಿದೆ. ಆದರೆ, ಮೈಸೂರಿನ ಪ್ರದೇಶದಲ್ಲಿ ಇದುವರೆಗೂ ಬೌದ್ಧ ಧರ್ಮಕ್ಕೆ ಸೇರಿದ ಯಾವ ಕುರುಹುಗಳೂ ದೊರೆತಿರಲಿಲ್ಲ. ಪ್ರಸ್ತುತ ಹುರ ಗ್ರಾಮದಲ್ಲಿ ದೊರೆತಿರುವ ಬೌದ್ಧ ಧರ್ಮದ ಆವಶೇಷಗಳ ಸಂಶೋಧನೆಯಿಂದ ಈ ಪ್ರದೇಶದಲ್ಲಿ ಕ್ರಿ.ಶ. 6-7ನೇ ಶತಮಾನದವರೆಗೂ ಬೌದ್ಧ ಧರ್ಮ ಅಸ್ತಿತ್ವದಲ್ಲಿತ್ತೆಂದು ಖಚಿತ ವಾಗುತ್ತದೆ. ಈ ಸಂಶೋಧನೆಯ ಬಗ್ಗೆ ವಿಸ್ತೃತವಾದ ಪ್ರಬಂಧವೊಂದನ್ನು ಪ್ರಕಟಿಸ ಲಾಗುವುದು'' ಎಂದು ತಿಳಿಸಿದ್ದಾರೆ.
''ಪ್ರಸ್ತುತ ಈ ಚೈತ್ಯಾಲಯವಿದ್ದ ಸ್ಥಳದಲ್ಲಿ ಪಾಯ ತೋಡಿ ಕಟ್ಟಡವೊಂದನ್ನು ಕಟ್ಟುತ್ತಿರುವುದರಿಂದ, ಚೈತ್ಯಾಲಯದ ಆವಶೇಷಗಳು ನಾಶವಾಗುತ್ತಿವೆ. ಪ್ರಾಚೀನ ಸ್ಮಾರಕ ನಾಶಪಡಿಸುವುದು ಶಿಕ್ಷಾರ್ಹ ಅಪರಾಧ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಅಥವಾ ಪುರಾತತ್ವ ಇಲಾಖೆ ಅಧಿಕಾರಿಗಳು ಆ ನಿರ್ಮಾಣ ಕಾರ್ಯವನ್ನು ನಿಲ್ಲಿಸಬೇಕು. ಈ ಸ್ಥಳದಲ್ಲಿ ವೈಜ್ಞಾನಿಕವಾಗಿ ಉತ್ಖನನವನ್ನು ನಡೆಸಿ, ಆ ಬೌದ್ಧವಶೇಷಗಳನ್ನು ಸಂರಕ್ಷಿಸಬೇಕು'' ಎಂದು ಒತ್ತಾಯಿಸಿದ್ದಾರೆ. ಈ ಕ್ಷೇತ್ರ ಕಾರ್ಯದಲ್ಲಿ ಉಪನ್ಯಾಸಕ ದೊಡ್ಡ ಸ್ವಾಮಿ, ವಿದ್ಯಾರ್ಥಿಗಳಾದ ಕೆ.ವಿ. ಮುರುಳಿ, ಎಂ.ಕೆ. ಮಂಜುನಾಥ್, ಎಂ. ಮುನಿ ಕೆಂಪೇ ಗೌಡ ಸಹಕರಿಸಿದರು ಎಂದು ತಿಳಿಸಿದ್ದಾರೆ.
http://vijaykarnataka.indiatimes.com/articleshow/44879655.cms