Mar 23, 2012

ನವ ವಸಂತ ಯುಗಾದಿ ಹಬ್ಬದ ಶುಭಾಶಯಗಳು


 
 
ಜೀವನದಲ್ಲಿ ಬೇವು ಬೆಲ್ಲದಂತೆ ಬೆರೆಯಲಿ ಕಷ್ಟ-ಸುಖಗಳು, ಈ ಹೊಸ ವರುಷ ಸರ್ವರಿಗೂ ಹರುಷವನ್ನು ತರಲಿ ಎಂದು ಹಾರೈಸುತ್ತೇನೆ. ನವ ವಸಂತ ಯುಗಾದಿ ಹಬ್ಬದ ಶುಭಾಶಯಗಳು.
- ಮಾ.ಕೃ.ಮಂಜು

ಮಾವು-ಬೇವು ಎಲೆಗಳ ತೋರಣದ ಸಿಂಗಾರದ ಯುಗಾದಿ

ಸೌರಮಾನ ಯುಗಾದಿಯನ್ನು ಮೇಷ ರಾಶಿಗೆ ಸೂರ್ಯ ಪ್ರವೇಶಿಸುವ ದಿನದಂದು ಆಚರಿಸಲಾಗುತ್ತದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದರಿಂದ ಏಪ್ರಿಲ್ 14ರಂದು ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪ್ರತಿವರ್ಷದ ಚೈತ್ರಮಾಸದಲ್ಲಿ ಬರುವ ಮೊದಲ ದಿನವನ್ನು ಸಂವತ್ಸರಾದಿ ಪಾಡ್ಯಮಿ ಎಂದು ಪರಿಗಣಿಸಿ ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಚೈತ್ರಮಾಸ ಶುದ್ಧಪಾಡ್ಯಮಿಯಂದು ಆಚರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುವುದನ್ನು ನಾವು ಕಾಣಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವರ್ಷದಲ್ಲಿ ಬರುವ ಮೂರೂವರೆ ದಿನಗಳ ಶುಭಗಳಿಗೆ ಅತ್ಯಂತ ಶ್ರೇಷ್ಠವಾದದು. ಇದರಲ್ಲಿ ಯುಗಾದಿಯೂ ಒಂದಾಗಿದೆ. ಯುಗಾದಿ ದಿನದಂದು ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಯುಗಾದಿ ಹಬ್ಬದ ದಿನದಂದು ಹೊಸ ಕಾರ್ಯ ಚಟುವಟಿಕೆ, ಹೊಸ ಪದಾರ್ಥಗಳ ಖರೀದಿ ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ಆರಂಭಿಸುವುದನ್ನು ನಾವು ಕಾಣಬಹುದು. ಮಲ್ಲಿನಾಥನೆಂಬ 14ನೇ ತೀರ್ಥಂಕರ ಹುಟ್ಟಿದ್ದು ಹಾಗೂ ಆದಿ ತೀರ್ಥಂಕರನ ಮಗ ಭರತ ಚಕ್ರವರ್ತಿ ದಿಗ್ವಿಜಯ ಸಾಧಿಸಿದ್ದು ಯಗಾದಿಯ ದಿನವಾದ್ದರಿಂದ ಯುಗಾದಿ ಹಬ್ಬವು ಜೈನರಿಗೂ ಮಹತ್ವದ ದಿನವಾಗಿದೆ.

ಪೌರಾಣಿಕ ಮಹತ್ವ : ವೇದಗಳ ಕಾಲದಿಂದಲೂ ನಡೆದು ಬಂದಿದ್ದು, ಈ ಕುರಿತಂತೆ ಅಥರ್ವಣ ವೇದ, ಶತಪಥ ಬ್ರಾಹ್ಮಣ, ಧರ್ಮಸಿಂಧು, ನಿರ್ಣಯ ಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಯುಗಾದಿಯ ಬಗ್ಗೆ ಉಲ್ಲೇಖವಿದೆ. ಹೇಮಾದ್ರಿ ಪಂಡಿತನ ಚತುರ್ವರ್ಗ ಚಿಂತಾಮಣ ಎಂಬ ಪುರಾಣ ಗ್ರಂಥದಲ್ಲಿ ಬ್ರಹ್ಮ ದೇವನು ಚೈತ್ರಮಾಸದ ಶುಕ್ಲಪಕ್ಷದ ಮೊದಲನೆಯ ದಿನದ ಸೂರ್ಯೋದಯ ಕಾಲ ಅರ್ಥಾತ್ ಯುಗಾದಿಯಂದು ಭೂಮಂಡಲವನ್ನು ಸೃಷ್ಟಿಸಿದ. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ ಕಾಲಗಣನೆ ಆರಂಭಿಸಿದನೆಂದು ಉಲ್ಲೇಖಿಸಲಾಗಿದೆ.

ಶ್ರೀರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದು ರಾಜ್ಯವಾಳಲು ಪ್ರಾರಂಭಿಸಿದ್ದು, ಶಾಲಿವಾಹನ ಶಕೆ ಆರಂಭವಾದದ್ದು ಕೂಡ ಯುಗಾದಿ ದಿನವೇ ಎಂದು ಹೇಳಲಾಗುತ್ತಿದೆ. ಯುಗಾದಿ ಹಬ್ಬದ ಆಚರಣೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಭಿನ್ನವಾಗಿರುವುದನ್ನು ನಾವು ಕಾಣಬಹುದಾದರೂ ಸಾಮಾನ್ಯವಾಗಿ ಹಬ್ಬದ ದಿನದಂದು ಸೂರ್ಯೋದಯಕ್ಕೂ ಮುನ್ನ ಅಂದರೆ ಮುಂಜಾನೆ ಎದ್ದು ಮಂಗಳ ಸ್ನಾನ ಮಾಡಿ ಶ್ರೀರಾಮನನ್ನು ಸ್ಮರಣೆ ಮಾಡಿ ಹೊಸಬಟ್ಟೆ ತೊಟ್ಟು ಮನೆಯನ್ನೆಲ್ಲ ಮಾವು-ಬೇವು ಎಲೆಗಳ ತೋರಣದಿಂದ ಸಿಂಗರಿಸಿ ಹೊಸವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.

ಬೇವು-ಬೆಲ್ಲ ಕಷ್ಟ-ಸುಖಗಳ ಸಿಹಿ-ಕಹಿ ಸಮ್ಮಿಲನ

ಬಾವುಟ ಹಾರಿಸುವುದು, ಬೇವು-ಬೆಲ್ಲ ತಿನ್ನುವುದು, ಪಂಚಾಂಗ ಶ್ರವಣ, ವಸಂತ ನವರಾತ್ರಿ ಆರಂಭ ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲಪುರುಷನ ಮತ್ತು ವರ್ಷಾಧಿಪತಿಯ ಆರಾಧನೆಯೂ ನಡೆಯುತ್ತದೆ. ಹಬ್ಬದ ದಿನದಂದು ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಮಾಡಿದರೂ ಬೇವು-ಬೆಲ್ಲ ಸೇವಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟ-ಸುಖ ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವಿದೆ. ಬದುಕಿನಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕು ಎಂಬುವುದನ್ನು ಸಾರುವ ಸಂಕೇತವಾಗಿ ಬೇವು-ಬೆಲ್ಲವನ್ನು ಸೇವಿಸಲಾಗುತ್ತಿದೆ.

ವರ್ಷದ ತೊಡಕು : ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷ ತೊಡಕು ಎಂದು ಆಚರಿಸಲಾಗುತ್ತದೆ. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ. ಈ ದಿನ ವಿವಿಧ ಬಗೆಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುವ ಮೂಲಕ ಮನರಂಜನೆಯನ್ನು ಪಡೆಯುತ್ತಾರೆ. ಅಂದು ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದರೆ ಅದನ್ನು ವರ್ಷಪೂರ್ತಿ ಮಾಡುತ್ತಾನೆ ಹಾಗೂ ಅಂದು ದೊರೆತ ಸಂಪತ್ತು ವರ್ಷ ಪೂರ್ತಿ ದೊರೆಯುತ್ತಲೇ ಇರುತ್ತದೆ ಎಂಬ ನಂಬಿಕೆ ಇದೆ.

ಒಂದೆಡೆ ಹೊಸದಾಗಿ ಮದುವೆಯಾದ ಮಗಳು ಅಳಿಯನನ್ನು ಹಬ್ಬಕ್ಕೆ ಆಹ್ವಾನಿಸಿ ಸತ್ಕರಿಸಿದರೆ, ಮತ್ತೊಂದೆಡೆ ಅಕ್ಕ ತಂಗಿಯರು, ಅಣ್ಣ ತಮ್ಮಂದಿರನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡು ಹಬ್ಬದ ಅಡುಗೆ ಬಡಿಸಿ ಸತ್ಕರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇತ್ತೀಚೆಗಿನ ಯಾಂತ್ರಿಕ ಯುಗದಲ್ಲಿ ಯುಗಾದಿ ಹಬ್ಬದ ಆಚರಣೆಗಳಲ್ಲಿ ಒಂದಷ್ಟು ವ್ಯತ್ಯಾಸಗಳು ಆಗಿರಬಹುದಾದರೂ ಹಬ್ಬದ ರಂಗು ಎಂದಿಗೂ ಕಳೆಗುಂದುವುದಿಲ್ಲ ಹಾಗಾಗಿಯೇ ಎಷ್ಟೇ ಯುಗ ಕಳೆದರೂ ಯುಗಾದಿ ಮರಳಿ ಬರುತ್ತಲೇ ಇರುತ್ತದೆ.


ಕೃಪೆ : http://kannada.oneindia.in

Mar 20, 2012

ಬ್ರಿಟಿಷರ ನೋಟಿನಲ್ಲಿ ಕನ್ನಡ


ಸ್ವಾತಂತ್ರ ಪೂರ್ವ ಭಾರತದ ನಾಲ್ಕೇ ನಾಲ್ಕು ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದು ಎಂಬುದು ಹೆಮ್ಮೆ ಪಡಬೇಕಾದ ಒಂದು ವಿಷಯ. 1899 ರಲ್ಲಿ ಬ್ರಿಟಿಷ್ ಇಂಡಿಯಾ ಸರ್ಕಾರದಿಂದ ಮುದ್ರಣಗೊಂಡ ಇಪ್ಪತ್ತು ರೂಪಾಯಿ ನೋಟು.
ಈಸ್ಟ್ ಇಂಡಿಯಾ ಕಂಪನಿಯ ನೂರು ರೂಪಾಯಿ ನೋಟಿನಲ್ಲಿಯೂ ಭಾರತದ ಪ್ರಮುಖ 8 ಭಾಷೆಗಳಲ್ಲಿ 7ನೇ ಸ್ಥಾನದಲ್ಲಿ ಕನ್ನಡ

Mar 19, 2012

ಕಾಸರಗೋಡಿನ ಕನ್ನಡಿಗರ ತ್ಯಾಗ ಮತ್ತು ಬಲಿದಾನಗಳನ್ನು ಕರ್ನಾಟಕ ಮರೆತಿದೆಯೇ..!?





ಕಾಸರಗೋಡಿನ ಕನ್ನಡಿಗರ ತ್ಯಾಗ ಮತ್ತು ಬಲಿದಾನಗಳನ್ನು ಕರ್ನಾಟಕ ಮರೆತಿದೆಯೇ..!?
by  ಕುಮಾರ ರೈತ

”ಕಾಸರಗೋಡು, ಕರ್ನಾಟಕದ ಕನ್ಯಾಕುಮಾರಿ. ಉತ್ತರದಲ್ಲಿ ಬೆಳಗಾವಿ, ಬಳ್ಳಾರಿಗಳಂತೆ ದಕ್ಷಿಣ ಕನ್ನಡದಲ್ಲಿ ನಮ್ಮದು ಕರ್ನಾಟಕದ ಕನ್ಯಾಕುಮಾರಿ. ಕನ್ನಡನಾಡಿನ ಈ ತೆಂಕಣ ಬಾಗಿಲನ್ನು ತೆರೆದಿಟ್ಟು ಕನ್ನಡಿಗರು ಎಚ್ಚರತಪ್ಪಿ ನಿದ್ರೆ ಹೋದುದ್ದೇ ಆದರೆ ನಮ್ಮ ಜನರಿಗೂ, ನಮ್ಮ ನಾಡಿಗೂ ಅಮೂಲ್ಯವಾದ ಕನ್ನಡ ಸಂಸ್ಕೃತಿಗೂ ಪ್ರಮಾದ ಒದಗುವುದರಲ್ಲಿ ಸಂಶಯವಿಲ್ಲ. ವಿಶಾಲ ಕೇರಳ ಚಳವಳಿಯು ಆರಂಭವಾಗಿ ಹತ್ತು ವರ್ಷಗಳು ಸಂದುಹೋದವು. ದಕ್ಷಿಣ ಕನ್ನಡ, ಕೊಡಗು, ನೀಲಗಿರಿ ಜಿಲ್ಲೆಗಳು ಮಲಬಾರಿನೊಂದಿಗೆ ಜತೆಗೊಂಡು ಕೇರಳ ಸಂಸ್ಥಾನ ಅಥವಾ ಪಶ್ಚಿಮ ಪ್ರಾಂತ ಸಂಸ್ಥಾನವೊಂದು ನಿರ್ಮಾಣವಾಗಬೇಕೆಂದು ಈ ಚಳವಳಿಯು ಪ್ರಬಲವಾಗುತ್ತಾ ನಡೆದಿದೆ. ಈ ಚಳವಳಿಯ ಮರ್ಮವನ್ನು ತಿಳಿದುಕೊಂಡು ಕನ್ನಡಿಗರು ಅದನ್ನು ಸಕಾಲದಲ್ಲಿಯೇ ಪ್ರತಿಭಟಿಸದೇ ಹೋದರೆ ಸ್ವಲ್ಪಕಾಲದೊಳಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡಾದರೂ ಮಲಬಾರಿನವರ ಮಡಿಲಿಗೆ ಬೀಳಬೇಕಾಗಬಹುದು”

ಭಾಷಾವಾರು ಪ್ರಾಂತ್ಯ ರಚನೆಯಾಗುವುದಕ್ಕೂ ಒಂಭತ್ತು ವರ್ಷಗಳಿಗೂ ಮೊದಲೇ ಶ್ರೀಧರ ಕಕ್ಕಿಲಾಯರು ಹೇಳಿದ್ದ ಖಚಿತ ಅಭಿಪ್ರಾಯವಿದು. ಇವರು ಕಾಸರಗೋಡಿನ ಸುಪ್ರಸಿದ್ಧ ವಕೀಲರಾಗಿದ್ದರು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಸತತ ೨೫ ವರ್ಷ ಹೋರಾಟ ಮಾಡಿದರು. ಅವರ ಜೀವಿತಾವಧಿಯವರೆಗೂ ಈ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೪೭ರ ಡಿಸೆಂಬರ್ನಲ್ಲಿ ಕಾಸರಗೋಡಿನ ಬೋರ್ಡ್ ಹೈಸ್ಲೂಲ್ ಆವರಣದಲ್ಲಿ ೩೧ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆತು. ಈ ಸಂದರ್ಭದಲ್ಲಿ ಹೊರಬಂದ ಸ್ಮರಣ ಸಂಚಿಕೆ ‘ತೆಂಕುನಾಡು’ ಸ್ಮರಣ ಸಂಚಿಕೆಯಲ್ಲಿ ಶ್ರೀಧರ ಕಕ್ಕಿಲಾಯರ ಈ ಲೇಖನ ಪ್ರಕಟವಾಯಿತು. ಅದರ ಶೀರ್ಷಿಕೆ ‘ಕನ್ನಡ-ಮಲೆಯಾಳ ಸಮಸ್ಯೆ’

ಇದನ್ನೆಲ್ಲ ಪ್ರಸ್ತಾಪಿಸಲು ಕಾರಣವಿದೆ. ಕಾಸರಗೋಡಿಗೆ ಹೋದಾಗಲೆಲ್ಲ ನಾನು ಭೇಟಿ ಕೊಡುವ ಖಾಯಂ ಸ್ಥಳಗಳ ಸಾಲಿನಲಿಬೇಕಲ್ ಕೋಟೆ ಸೇರಿದೆ. ಇಲ್ಲಿ ಪ್ರಾಣದೇವರ ಗುಡಿಯಿದೆ. ಹೊರಭಾಗದಲ್ಲಿ ಗುಡಿ ಹೆಸರನ್ನು ಕನ್ನಡದಲ್ಲಿ ಬರೆಯಲಾಗಿದೆ. ಬೇಕಲ್ ಕೋಟೆ ನಿರ್ಮಾಣ ಮಾಡಿದ್ದು ಕನ್ನಡಿಗ ರಾಮನಾಯಕ. (ಟಿಪ್ಪು ಸುಲ್ತಾನ್ ಸೈನ್ಯದ ದಂಡನಾಯಕ ( ಮೂಲತಃ ಬೇಕಲ್ ಕೋಟೆ ಕನ್ನಡ ಪ್ರದೇಶ. ಇದಕ್ಕೆ ಅನೇಕ ಕುರುಹುಗಳಿವೆ. ಕೋಟೆ ಇರುವ ಊರಿನ ಹೆಸರು ‘ಅಗಸರ ಹೊಳೆ. ಈ ಎರಡೂ ಪದಗಳು ಅಚ್ಚಗನ್ನಡ.

ಫೇಸ್ ಬುಕ್ನಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಟಿಪ್ಪಣಿ ಹಾಕಿದ್ದೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಪತ್ರಕರ್ತ ರಮೇಶ್ ಎಸ್ ಪೆರ್ಲ (ಕೇರಳಕ್ಕೆ ಸೇರಿದ ಕಾಸರಗೋಡು ಜಿಲ್ಲೆಗೆ ಪೆರ್ಲ ಸೇರಿದೆ) ಅವರು “ನಿಮಗೆ ಕನ್ನಡಿಗರಿಗೆ ಬೇರೆ ಕೆಲಸವಿಲ್ಲ. ಮಂಗಳೂರು ಸಹ ಕೇರಳಕ್ಕೆ ಸೇರಬೇಕು” ಎಂದು ಕಾಮೆಂಟ್ ಮಾಡಿದರು ಈ ಪ್ರತಿಕ್ರಿಯೆ ನನ್ನ ಮನಸಿಗೆ ನೋವುಂಟು ಮಾಡಿತು. ಕರ್ನಾಟಕಕ್ಕೆ ಕಾಸರಗೋಡನ್ನು ಸೇರಿಸಲು ಅಲ್ಲಿನ ಕನ್ನಡಿಗರು ಮಾಡಿದ ಹೋರಾಟ-ತ್ಯಾಗ-ಬಲಿದಾನಗಳ ಬಗ್ಗೆ ಕಿಂಚಿತ್ತು ಗೊತ್ತಿದ್ದರೂ ಇಂಥ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಈ ಪ್ರತಿಕ್ರಿಯೆಂದ ನನಗೆ ದಿಗ್ಬ್ರಮೆಯೂ ಆಗಿದೆ. ಏಕೆಂದರೆ ಕೇರಳಿಗರು ಮಂಗಳೂರು ತಮ್ಮದು ಎಂದು ಧ್ವನಿ ಎತ್ತಲು ಕಾಯುತ್ತಲೇ ಇದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕನ್ನಡನಾಡಿನ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಪತ್ರಕರ್ತರೊಬ್ಬರು ಇಂಥ ಧ್ವನಿ ಎತ್ತಿದರೆ ಆತಂಕವಾಗದೇ ಇರುತ್ತದೆಯೇ?

ಕಾಸರಗೋಡು ಕರ್ನಾಟಕದ್ದು. ಕರ್ನಾಟಕಕ್ಕೆ ಸೇರಬೇಕು ಎಂದು ಹೋರಾಟ ಮಾಡಿದವರು ಮನೆಮಾತು ತುಳು ಆಗಿದ್ದ ಕನ್ನಡಿಗರು. ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಸಂಭಸವಿಸಬಹುದಾದ ಅಪಾಯವನ್ನು ಇವರು ಶೀಘ್ರವಾಗಿ ಗ್ರಹಿಸಿದರು. ಇದರ ಪರಿಣಾಮವಾಗಿ ಕರ್ನಾಟಕ ಪ್ರಾಂತೀಕರಣ ಸಮಿತಿ ರಚನೆಯಾತು. ಶ್ರೀಉಮೇಶರಾಯರು, ಶ್ರೀಕಳ್ಳಿಗೆ ಮಹಾಬಲ ಭಂಡಾರಿ ಮೊದಲಾದವರು ಅದರ ಮುಂದಾಳತ್ವ ವಹಿಸಿದ್ದರು. ಇಷ್ಟರಲ್ಲಿ ಶ್ರೀಧರ ಕಕ್ಕಿಲಾಯರು ಮಂಗಳೂರಿನಲ್ಲಿಯೂ ವಕೀಲಿಕೆ ಮಾಡತೊಡಗಿದ್ದರು. ಇವರು ಸಮಿತಿಯ ಆಗುಹೋಗುಗಳಲ್ಲಿ ಮುಖ್ಯಪಾತ್ರ ವಹಿಸತೊಡಗಿದರು.

ಭಾಷಾವಾರು ಪ್ರಾಂತ ರಚನೆ ಸಲುವಾಗಿ ಕೇಂದ್ರ ಸರ್ಕಾರ ಫಜಲಾಲಿ ಎಂಬುವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತು. ಇದರಲ್ಲಿ ಕೇರಳದ ಕೆ.ಎಂ. ಫಣಿಕರ್ ಸದಸ್ಯರು. ಆಯೋಗದವರು ಮಂಗಳೂರಿಗೂ ಬಂದರು. ಈ ಸಂದರ್ಭದಲ್ಲಿ ಆಯೋಗದ ಮುಖ್ಯಸ್ಥ ಫಜಲಾಲಿ ಅವರಿಗೆ ಅನಾರೋಗ್ಯ. ಇವರು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರು. ಇದರ ಪರಿಣಾಮ ಇವರ ಗೈರುಹಾಜರಿಯಲ್ಲಿ ಕೆ.ಎಂ ಫಣಿಕರ್ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಂತಾತು.

ಬೆನೆಗಲ್ ಶಿವರಾಯರು, ಜನಾಬ್ ಎಂ.ಎಸ್. ಮೊಗ್ರಾಲ್, ಶ್ರೀವೈಕುಂಠ ಬಾಳಿಗಾ, ಕೆ.ಎಸ್.ಹೆಗ್ಡೆ, ಎಂ. ಉಮೇಶ್ ರಾವ್ ಆಯೋಗದ ಮುಂದೆ ಸಾಕ್ಷಿ ಹೇಳಿದರು. ಕಕ್ಕಿಲಾಯರು ವಾದ ಮಂಡಿಸಿದರು. ಇದನೆಲ್ಲ ಆಲಿಸುವಂತೆ ನಟಿಸುತ್ತಿದ್ದ ಕೆ.ಎಂ ಫಣಿಕರ್ ಅವರು ಕೂಡ ಸಾಕ್ಷಿ ನುಡಿದವರ ಮಾತು ಅನುಮೋದಿಸಿದರು. ‘ಚಂದ್ರಗಿರಿ ನದಿ ಉತ್ತರ ಭಾಗದ ಮೇಲೆ ಕೇರಳಿಗರಿಗೆ ಯಾವುದೇ ಹಕ್ಕು ಇಲ್ಲ’ ಎಂದರು. ಇದಕ್ಕೆ ಉದಾಹರಣೆಯಾಗಿ “ಹಿಂದೆ ‘ಚಂದ್ರಗಿರಿ ನದಿ ದಾಟಿದ ಕೇರಳದ ನಾಯರ್ ಸ್ತ್ರೀಯರು ಸಮುದಾಯದಿಂದ ಬಹಿಷ್ಕೃತರಾಗುತ್ತಿದ್ದ ಸಂಗತಿಯನ್ನೂ ಸ್ವತಃ ಉಲ್ಲೇಖಿಸಿದರು’ ಇದರಿಂದ ಹೋರಾಟಗಾರರಿಗೆ ಕರ್ನಾಟಕಕ್ಕೆ ಸೇರಲಿದೆ ಎಂಬ ನಂಬಿಕೆ.

ನವೆಂಬರ್ ೧, ೧೯೫೬ರಲ್ಲಿ ಇವರ ನಂಬಿಕೆ ಹುಸಿಯಾತು. ಕಾಸರಗೋಡು ಪ್ರದೇಶ ಕೇರಳಕ್ಕೆ ಸೇರಿದ ಆದೇಶ ಹೊರಬಿತ್ತು. ಕಾಸರಗೋಡುಕನ್ನಡಿಗರ ನಂಬಿಕೆಗೆ ಫಣಿಕರ್ ದ್ರೋಹ ಬಗೆದರು. ಹೋರಾಟಗಾರರು ಸುಮ್ಮನಾಗಲಿಲ್ಲ. ಕರ್ನಾಟಕ ಪ್ರಾಂತೀಕರಣ ಸಮೀತಿ ನೇತೃತ್ವದಲ್ಲಿಹೋರಾಟ ಮುಂದುವರೆಸಿದರು. ಶ್ರೀಧರ ಕಕ್ಕಿಲಾಯ, ದೇಶಭಕ್ತ ಎಂ ಉಮೇಶರಾಯರು, ಕಯ್ಯಾರ ಕಿಯ್ಯಣ ರೈ, ಕೆ.ಆರ್ ಕಾರಂತ, , ಶ್ರೀಕಳ್ಳಿಗೆಮಹಾಬಲ ಭಂಡಾರಿ ಮತ್ತು ಕಾಸರಗೋಡು ಮತ್ತು ೧೯೫೨ರಲ್ಲಿ ಕಾಸರಗೋಡು ಪ್ರದೇಶದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬೆನಗಲ್ಶಿವರಾಯರು ಕೂಡ ಹೋರಾಟದ ಮುಂಚೂಣಿಯಲ್ಲಿದ್ದರು. ಬೆನಗಲ್ ಶಿವರಾಯರು ಸಂಸತ್ನಲ್ಲಿಯೂ ಈ ವಿಷಯ ಪ್ರಸ್ತಾಪಿಸಿದರು. ರಾಷ್ಟ್ರನಾಯಕರೆನ್ನಿಸಿಕೊಂಡಿದ್ದ ಪ್ರಧಾನಿ ನೆಹ್ರು ಅವರೊಂದಿಗೂ ಈ ವಿಷಯ ಪ್ರಸ್ತಾಪಿಸಿ ಸಾಕಷ್ಟು ಮನವಿಪತ್ರಗಳನ್ನು ನೀಡಿದ್ದರು.

ಕಾಸರಗೋಡಿನಲ್ಲಿ ಬೃಹತ್ ಜಾಥಾ-ಸತ್ಯಾಗ್ರಹಗಳು ಆರಂಭವಾದವು. ಕಾಸರಗೋಡು ಪ್ರದೇಶದ ೨೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳುಶಾಲಾ-ಕಾಲೇಜುಗಳನ್ನು ತೊರೆದು ಹೋರಾಟದಲ್ಲಿ ತೊಡಗಿಸಿಕೊಂಡರು. ಎಂ. ಉಮೇಶರಾಯರ ನೇತೃತ್ವದ ಬೃಹತ್ ಸಭೆ, ಭಾಷಾವಾರುಪಾಂತ ವಿಂಗಡಣಾ ಆಯೋಗದ ಪಕ್ಷಪಾತಿ ವರದಿ ಖಂಡಿಸಿ ನಿರ್ಣಯ ತೆಗೆದುಕೊಂಡಿತು. ಮದ್ರಾಸಿನ ನ್ಯಾಯ ವಿಧಾಯಕ ಸಭೆ ಕೂಡ ವರದಿಮೇಲೆ ಸತತ ಚರ್ಚೆ ನಡೆಸಿತು. ಕಾಸರಗೋಡು, ಕರ್ನಾಟಕಕ್ಕೆ ಸೇರಬೇಕೆಂದು ನಿರ್ಣಯ ಮಾಡಿತು. ಧೀಮಂತ ನಾಯಕರಾದ ಕಾಮರಾಜ್, ಸಿ. ಸುಬ್ರಮಣ್ಯಂ ಮತ್ತು ಭಕ್ತವತ್ಸಲ ಅವರು ಕಾಸರಗೋಡು ಕನ್ನಡಿಗರ ಬೇಡಿಕೆ ನ್ಯಾಯಯುತವೆಂದು ಅಭಿಪ್ರಾಯಪಟ್ಟರು. ಈ ನಂತರ ಭಾಷಾವಾರುಪ್ರಾಂತ ವಿಂಗಡಣಾ ಆಯೋಗದ ವರದಿ ಕುರಿತ ಅಸಮಾಧಾನಗಳ ಪರಿಹಾರಕ್ಕಾಗಿ ಜವಾಹರ್ ಲಾಲ್ ನೆಹ್ರು, ಪಂತ್, ಧೇಬರ್ ಮತ್ತು ಆಲಿಅವರಿದ್ದ ಸಮೀತಿ ರಚಿತಗೊಂಡಿತು. ಇದರಿಂದಲೂ ತಮಗೆ ನ್ಯಾಯ ದೊರೆಯಬಹುದೆಂದು ಹೋರಾಟಗಾರರು ನಿರೀಕ್ಷಿಸಿದ್ದರು. ಆದರೆ ಈಬಾರಿಯೂ ಅವರ ನಂಬಿಕೆ ನಿಜವಾಗಲಿಲ್ಲ.

ಅತ್ತ ಬೆಳಗಾವಿ ತನ್ನದೆಂದು ಮಹಾರಾಷ್ಟ್ರ ಕ್ಯಾತೆ ತೆಗೆಯತೊಡಗಿತು. ಈ ವಿವಾದ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟಿನ ನಿವೃತ್ತಮುಖ್ಯ ನ್ಯಾಯಾಧೀಶ ಮೆಹರ್ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿತು.ವಿವಾದ ಇತ್ಯರ್ಥಕ್ಕಾಗಿ ಈ ಆಯೋಗ ಪ್ರಾಮಾಣಿಕಪ್ರಯತ್ನ ಮಾಡಿತು. ಕಾಸರಗೋಡಿನ ಕುರಿತು ಸಾಕ್ಷ್ಯಾಧಾರ ಸಂಗ್ರಹಿಸುವ ಸಲುವಾಗಿ ಎಂ. ಮಹಾಜನ್ ಕಾಸರಗೋಡಿಗೆ ಬಂದರು. ಕರ್ನಾಟಕಪ್ರಾಂತೀಕರಣ ಸಮೀತಿಂದ ಅವರಿಗೆ ಕಾಸರಗೋಡು ಕರ್ನಾಟಕ್ಕೆ ಸೇರಬೇಕು ಎಂಬುದನ್ನು ಪ್ರತಿಪಾದಿಸುವ ಅನೇಕ ಆಧಾರಗಳಿದ್ದ ಪತ್ರವನ್ನುನೀಡಲಾತು. ಈ ವಿಸ್ತಾರ ವರದಿಯನ್ನು ಶ್ರೀಧರ ಕಕ್ಕಿಲಾಯರು ಸಿದ್ಧಪಡಿಸಿದ್ದರು. ಸಮೀತಿ ಪರವಾಗಿ ಅತ್ಯಂತ ಪ್ರಬಲವಾಗಿ ಕೆ.ಆರ್. ಕಾರಂತರುವಾದಿಸಿದರು.

ನ್ಯಾಯಮೂರ್ತಿ ಮೆಹರ್ಚಂದ್ ಅವರು ಮಂಗಳೂರಿಗೂ ಭೇಟಿ ನೀಡಿ ಸಾಕ್ಷಿಗಳನ್ನು ಸಂಗ್ರಹಿಸಿದರು. ಅಲ್ಲಿ ತುಳು, ಕನ್ನಡ, ಕೊಂಕಣಿಮಾತನಾಡುವವರು ಕಾಸರಗೋಡು ಅಚ್ಚ ಕನ್ನಡ ಪ್ರದೇಶ ಎಂದು ಸಾಕ್ಷಿ ಹೇಳಿದರು. ಗಮನಾರ್ಹ ಅಂಶವೆಂದರೆ ಮಲೆಯಾಳಂಮಾತೃಭಾಷೆಯಾಗಿರುವ ಸಮುದಾಯಗಳು ಕೂಡ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಇದೇ ನ್ಯಾಯ ಎಂದು ಹೇಳಿದ್ದು.

ಈ ಬಾರಿ ಕಾಸರಗೋಡು ಹೋರಾಟಗಾರರ ನಂಬಿಕೆ ಸುಳ್ಳಾಗಲಿಲ್ಲ. ಕಾಸರಗೋಡು ಪ್ರದೇಶ ಕರ್ನಾಟಕಕ್ಕೆ ಸೇರಬೇಕೆಂದು ಮತ್ತು ಬೆಳಗಾವಿ ಕರ್ನಾಟಕಕ್ಕೆ ಸೇರಿರುವುದು ಸಮಂಜಸ-ನ್ಯಾಯಯುತವೆಂದು ಮಹಾಜನ್ ಆಯೋಗ ವರದಿ ನೀಡಿತು. ಚಂದ್ರಗಿರಿ ನದಿಯ ಉತ್ತರ ಭಾಗದ ೭೧ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದು ಹೇಳಲಾಗಿತ್ತು. ಈ ವರದಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಲಿಲ್ಲ. ಇದನ್ನುಜಾರಿಗೊಳಿಸುವಂತೆ ಮಾಡುವ ಸಲುವಾಗಿ ಮತ್ತೆ ಹೋರಾಟ ಪ್ರಾರಂಭವಾತು. ೧೯೫೭, ೧೯೬೦, ೧೯೬೫ ಮತ್ತು ೧೯೬೭ ರ ಚುನಾವಣೆಗಳಫಲಿತಾಂಶ ಈ ಹೋರಾಟದ ಧ್ವನಿಯನ್ನು ಎತ್ತಿ ಹಿಡಿಯಿತು. ಆದರೂ ಕೇಂದ್ರ ಸರ್ಕಾರ ಕಣ್ಣು ತೆರೆಯಲಿಲ್ಲ.

ಆದರೆ ಕಾಸರಗೋಡಿನ ಹೋರಾಟಗಾರರು ಸುಮ್ಮನಾಗಲಿಲ್ಲ. ಸತತ ಪ್ರತಿಭಟನೆ, ಸತ್ಯಾಗ್ರಹ ಮತ್ತು ಸಭೆಗಳನ್ನು ನಡೆಸತೊಡಗಿದರು. ಮಾರ್ಚ್ ೧೨, ೧೯೭೧ರಂದು ಕಾಸರಗೋಡಿನಲ್ಲಿ ಬೃಹತ್ ಸಮ್ಮೇಳನ ನಡೆಸಿ ಕಾಸರಗೋಡು ಕರ್ನಾಟಕಕ್ಕೆ ಸೇರಲೇಬೇಕೆಂದು ನಿರ್ಣಯಕೈಗೊಂಡು ಇದರ ಪ್ರತಿಗಳನ್ನು ಕೇರಳ, ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳಿಗೆ ತಲುಪಿಸಿದರು. ಆದರೆ ಕರ್ನಾಟಕದ ಅಧಿಕಾರಸ್ಥರಾಜಕಾರಣಿಗಳ ಮಂದಗಾಮಿ ಧೋರಣೆಂದ ಇದುವರೆಗೂ ಕಾಸರಗೋಡು ಹೋರಾಟಕ್ಕೆ ನ್ಯಾಯ ದೊರೆತಿಲ್ಲ.

ಮಹಾಜನ್ ಆಯೋಗದ ವರದಿ ಜಾರಿಯಾಗದೇ ಇರುವ ಸಂದರ್ಭದಲ್ಲಿಯೂ ಕೇರಳದ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ಸರ್ಕಾರ,ಮಲೆಯಾಳಂ ಭಾಷಿಕರು ಅಧಿಕವಾಗಿರುವ ಪ್ರದೇಶಗಳನ್ನು ಕಾಸರಗೋಡಿಗೆ ಸೇರಿಸಿ ಜಿಲ್ಲೆ ಮಾಡಿತು. ಇದಕ್ಕೆ ಕರ್ನಾಟಕ ಸರ್ಕಾರತಡೆಯೊಡ್ಡಬೇಕಾಗಿತ್ತು. ಆದರೆ ನೆಲ-ಜಲದ ಬಗ್ಗೆ ಕಾಳಜಿಲ್ಲದ ಜನ ಅಧಿಕಾರ ಮಾಡಿದ ಪರಿಣಾಮ ತಡೆ ಸಾಧ್ಯವಾಗಲಿಲ್ಲ

ಕಾಸರಗೋಡು ಕೇರಳದಲ್ಲಿಯೇ ಉಳಿಯಬೇಕು, ಮಂಗಳೂರು ಕೂಡ ಕೇರಳಕ್ಕೆ ಸೇರಬೇಕು ಎಂದು ಹೇಳುವವರು ಈ ಅಂಶ ನೆನಪಿನಲ್ಲಿಡಲೇಬೇಕು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಸಲುವಾಗಿ ಅಲ್ಲಿನ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ನೂರಾರು ಮಹಿಳೆಯರು ಜೈಲು ಕಂಡಿದ್ದಾರೆ. ಶಾಲಾ-ಕಾಲೇಜು ತೊರೆದು ಹೋರಾಟ ನಡೆಸಿದ ವಿದ್ಯಾರ್ಥಿಗಳು ಲಾಠಿಯೇಟು ತಿಂದು ಸೆರೆವಾಸ ಅನುಭವಿಸಿದ್ದಾರೆ. ೧೯೬೭ರಲ್ಲಿ ನಡೆದ ಹೋರಾಟದಲ್ಲಿ ಶಾಂತರಾಮ ಮತ್ತು ಸುಧಾಕರ ಎಂಬ ವಿದ್ಯಾರ್ಥಿಗಳು ಕೇರಳ ಪೋಲಿಸರ ಗೋಲಿಬಾರಿಗೆ ಬಲಿಯಾಗಿದ್ದಾರೆ. ಈಗ ಹೇಳಿ ಕಾಸರಗೋಡು, ಕೇರಳದಲ್ಲಿಯೇ ಇರಬೇಕೇ…!?

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಿದ ಕರ್ನಾಟಕ ಸರ್ಕಾರ ಕಾಸರಗೋಡು ಪ್ರದೇಶ ಕರ್ನಾಟಕಕ್ಕೆ ಸೇರಲೇಬೇಕೆಂಬ ನಿರ್ಣಯತೆಗೆದುಕೊಳ್ಳಬೇಕಿತ್ತು. ದುರಾದೃಷ್ಟವಶಾತ್ ಈ ನಿರ್ಣಯ ಆಗಿಲ್ಲ. ಹಾಗಿದ್ದರೆ ಕಾಸರಗೋಡು ಕನ್ನಡಿಗರ ಹೋರಾಟ-ತ್ಯಾಗ ಮತ್ತುಬಲಿದಾನಗಳನ್ನು ಕರ್ನಾಟಕ ಸರ್ಕಾರ ಮರೆತಿದೆಯೇ..!?

ಕೃಪೆ : ನಿಲುಮೆ

Mar 16, 2012

ಶತಕ ವೀರ ಸಚಿನ್

100 ಸೆಂಚೂರಿಯ ಸರದಾರ ಅಭಿನಂದನೆಗಳ ಮಹಾಪೂರ ಪ್ರೀತಿಯ ಸಚಿನ್ ಗೆ ಕೋಟಿ ಕೋಟಿ ಭಾರತೀಯರ ಹಾರೈಕೆಗಳು......


ಕ್ರಿಕೆಟ್ ಪ್ರೇಮಿಗಳು ಕಳೆದ ಒಂದು ವರ್ಷದಿಂದ ಕಾತರದಿಂದ ಕಾಯುತ್ತಿದ್ದ ಸಚಿನ್ ಅವರ  ಶತಕಗಳ ಶತಕದ ಕನಸನ್ನು ಸಚಿನ್ ಇಂದು ನನಸುಗೊಳಿಸಿದರು. ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನದಲ್ಲಿ ಶುಕ್ರವಾರ ಶತಕ ಸಂಭ್ರಮದ ದಿನವಾಗಿದೆ. ಬಾಂಗ್ಲಾದೇಶ ನಡೆದ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಸಚಿನ್, ತಮ್ಮ ವೃತ್ತಿ ಜೀವನದಲ್ಲಿ 100ನೇ ಶತಕದ ದಾಖಲೆ ಬರೆದಿದ್ದಾರೆ. 

Mar 15, 2012

ಕರ್ನಾಟಕವನ್ನು ಆಳಿದ್ದ ಪ್ರಮುಖ ರಾಜಮನೆತನಗಳು


ಕರ್ನಾಟಕವನ್ನು ಆಳಿದ್ದ ಪ್ರಮುಖ ರಾಜಮನೆತನಗಳು

1. 3ನೆಯ ಶತಮಾನಕ್ಕಿಂತ ಮುಂಚೆ - ಶಾತವಾಹನರು  -ಶ್ರೀಮುಖ, ಗೌತಮಿಪುತ್ರ
2. ಕ್ರಿ.ಶ. 325-540 - ಕದಂಬರು - ಮಯೂರವರ್ಮ
3. 325-999 - ಗಂಗರು - ಅವಿನೀತ, ದುರ್ವಿನೀತ, ರಾಚಮಲ್ಲ
4. 500-757 - ಬಾದಾಮಿ ಚಾಲುಕ್ಯರು - ಮಂಗಳೇಶ, ಪುಲಿಕೇಶಿ
5. 757-973 - ರಾಷ್ಟ್ರಕೂಟರು - ಕೃಷ್ಣ, ಗೋವಿಂದ, ನೃಪತುಂಗ
6. 973-1198 - ಕಲ್ಯಾಣದ ಚಾಲುಕ್ಯರು - ವಿಕ್ರಮಾದಿತ್ಯ
7. 1198-1312- ದೇವಗಿರಿ ಯಾದವರು - ಸಿಂಗಾಹನ
8. 1000-1346- ಹೊಯ್ಸಳರು - ವಿಷ್ಣುವರ್ಧನ
9. 1336-1565- ವಿಜಯನಗರದ ಅರಸರು - ಕೃಷ್ೞದೇವರಾಯ
10. 1347-1527 ಬಹಮನಿ ಸುಲ್ತಾನರು - ಮಹಮದ್ ಷಾ ೧,೨
11. 1490-1696 -  ಬಿಜಾಪುರ ಸುಲ್ತಾನರು - ಯೂಸುಫ್ ಆದಿಲ್ ಷಾ, ಇಬ್ರಾಹಿಮ್ ಆದಿಲ್ ಷಾ
12. 1500-1763 -  ಕೆಳದಿಯ ಅರಸರು - ಚೌಡಪ್ಪನಾಯಕ, ರಾಣಿ ಚನ್ನಮ್ಮ, ಶಿವಪ್ಪನಾಯಕ
13. 1399-1761 - ಮೈಸೂರು ಒಡೆಯರು - ರಣಧೀರ ಕಂಠೀರವ, ಚಿಕ್ಕದೇವರಾಯ
14. 1761-1799 - ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
15. 1800-1831 - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್
16. 1800 - ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವನ್ನು ಬ್ರಿಟಿಷರ ಆಡಳಿತದಲ್ಲಿದ್ದ ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ ನಿಜಾಮರುಗಳ ನಡುವೆ ಹರಿದು ಹಂಚಲಾಯಿತು.  17. 1831-1881 ಬ್ರಿಟಿಷರು - ಆಂಗ್ಲರ ಆಧಿಪತ್ಯ
18. 1881-1950 - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
19. 1956 - ಇಂದಿನ ಕರ್ನಾಟಕದ ರಚನೆ

ಕನ್ನಡ ಕಟ್ಟುವಿಕೆಯ ಹತ್ತು ಹಲವು ವಿಷಯಗಳು



ಕನ್ನಡ ಕಟ್ಟುವಿಕೆಯ ಹತ್ತು ಹಲವು ವಿಷಯಗಳು-ಡಾ. ಪಂಡಿತಾರಾಧ್ಯ
(ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ ಹಲವು ವಿಚಾರಗಳನ್ನು ತಿಳಿಸಲು ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿರುವ ಡಾ.ಪಂಡಿತಾರಾಧ್ಯ ಅವರು ಕರಪತ್ರವೊಂದನ್ನು ಸಿದ್ಧಪಡಿಸಿದ್ದರು. ಆ ಕರಪತ್ರದ ಪೂರ್ಣಪಾಠವಿಲ್ಲಿದೆ.)

೩ನೇ ಶತಮಾನದ ಅಶೋಕನ ಶಾಸನಗಳಲ್ಲಿ ಬ್ರಾಹ್ಮೀ ಲಿಪಿಯಲ್ಲಿರುವ ಪ್ರಾಕೃತ ಭಾಷೆಯ ಅಂಕಿಗಳು ಮೊದಲಬಾರಿಗೆ ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫೬ ಎನ್ನುವುದನ್ನು ೨೦೦, ೫೦, ೬ ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಕ್ರಿಶ.೬ನೇ ಶತಮಾದ ಕದಂಬ ರವಿವರ್ಮನ ಸಂಸ್ಕೃತ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ.

ಬ್ರಾಹ್ಮೀ ಲಿಪಿಯ ದಕ್ಷಿಣದ ಕವಲಿನಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳೂ ಇವೆ. ಕ್ರಿ.ಶ. ೮ನೆಯ ಶತಮಾನದಿಂದ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ. ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದಾರೆ.

ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ. ಕನ್ನಡ ಅಂಕಿಗಳನ್ನೇ ಬಳಸುತ್ತಿದ್ದ ರಾಜ್ಯದ ದೊಡ್ಡ ಪತ್ರಿಕೆಗಳು ಈಗ ಕನ್ನಡ ಅಂಕಿಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿಲ್ಲ. ಕರ್ಮವೀರ, ಕಸ್ತೂರಿ, ಹೊಸತು ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳುತ್ತಿರುವುದು ಮೆಚ್ಚುವಂಥದು. ಸಂಜೆವಾಣಿ ಸುದ್ದಿಯ ದಿನಾಂಕವನ್ನು ಮಾತ್ರ ಕನ್ನಡ ಅಂಕಿಗಳಲ್ಲಿ ನಮೂದಿಸುತ್ತಿದೆ! ಕನ್ನಡ ಪ್ರಭದ ಅಂತರಜಾಲದ ಅಕ್ಷರ ಆವೃತ್ತಿಯಲ್ಲಿ ಮಾತ್ರ ಕನ್ನಡ ಅಂಕಿಗಳಿವೆ! ಪ್ರಜಾವಾಣಿಯ ಮಾಸಿಕ ಪುರವಣಿ ಸಾಹಿತ್ಯ ಸಂಚಿಕೆಯ ಸಂಖ್ಯೆ ಮಾತ್ರ ಕನ್ನಡ ಅಂಕಿಯಲ್ಲಿದೆ! ಸಂಯುಕ್ತ ಕರ್ನಾಟಕ, ಹೊಸ ದಿಗಂತ ಮೊದಲಾದವುಗಳಲ್ಲಿ ಭಾನುವಾರದ ಪುರವಣಿಗಳ ಪುಟಸಂಖ್ಯೆಗಳು ಮಾತ್ರ ಕನ್ನಡ ಅಂಕಿಗಳಲ್ಲಿವೆ! ರಾಜ್ಯ ಸರಕಾರದ ಮಾಸಪತ್ರ್ರಿಕೆ ಜನಪದ ಮುಖಪುಟದಲ್ಲಿ ವರ್ಷವನ್ನು ಮಾತ್ರ ಕನ್ನಡ ಅಂಕಿಗಳಲ್ಲಿ ಪ್ರಕಟಿಸುತ್ತಿದೆ! ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆಂದೋಲನ, ಮೈಸೂರು ಮಿತ್ರಗಳಂತೆ ರಾಜ್ಯದ ವಿವಿಧ ಜಿಲ್ಲಾ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿರುವುದು ಅಭಿಮಾನದ ಸಂಗತಿ.

ರಾಜಧಾನಿಯ ಮಾಧ್ಯಮಗಳು ಬಳಸುತ್ತಿರುವ ಕನ್ನಡವು ಪ್ರತಿರೋಧ ಸಾಮರ್ಥ್ಯವನ್ನೇ ಕಳೆದುಕೊಂಡ ಏಡ್ಸ್ ರೋಗಿಯಂತಾಗಿದೆ. ಅದಕ್ಕೆ ತುರ್ತಾಗಿ ಕರ್ನಾಟಕದ ವಿವಿಧ ಪ್ರದೇಶಗಳಿಂದ ಆರೋಗ್ಯಕರ ರಕ್ತದಾನವಾಗಬೇಕಿದೆ. ವೈಜ್ಞಾನಿಕ ಮನೋಭಾವವನ್ನು ಬೆಳಸಬೇಕಾದ ಮಾಧ್ಯಮಗಳು ಒಂದೇ ಉಸಿರಿನಲ್ಲಿ ಮತೀಯ ಮೂಲಭೂತವಾದದ ಮೌಢ್ಯವನ್ನೂ ಇಂಗ್ಲಿಷ್ ಗುಲಾಮಗಿರಿಯನ್ನೂ ಪ್ರತಿಪಾದನೆ ಮಾಡುವುದು ಸ್ಪರ್ಧಾತ್ಮಕವೆನ್ನುವಂತೆ ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ.

ಕನ್ನಡವು ಅಭಿಜಾತ(ಶಾಸ್ತ್ರೀಯ) ಭಾಷೆಯೆಂಬ ತೋರಿಕೆಯ ಅಭಿಮಾನವನ್ನು ಪ್ರಕಟಿಸುವ ಕನ್ನಡದ ಮಾಧ್ಯಮಗಳು ಕನ್ನಡ ಭಾಷೆಯ ವೈಶಿಷ್ಟ್ಯ, ಸೂಕ್ಷ್ಮಗಳನ್ನು ಓದುಗರಿಗೆ ಪರಿಚಯಿಸುವ ಗೋಜಿಗೆ ಹೋಗದೆ ಅನಗತ್ಯವಾಗಿ ಇಂಗ್ಲಿಷ್ ಅಕ್ಷರ, ಪದ, ಪದಪುಂಜಗಳನ್ನು ಬಳಸುತ್ತಿವೆ. ಶಾಲಾ ಪತ್ರಿಕೆಯಲ್ಲಿ ಎಳೆಯರು ವಿನೋದಕ್ಕಾಗಿ ‘ತಾEA ದೇವರು!’ ಎಂದು ಬರೆಯುವಂತೆ ಕನ್ನಡದ ದೊಡ್ಡ ಪತ್ರಿಕೆ ತನ್ನ ಹೆಸರಿನ ಆದ್ಯಕ್ಷರಗಳಾದ ವಿ ಕ ಗಳನ್ನು ಇಂಗ್ಲಿಷಿನ ವಿ ಕೆ ಎಂದು ಬದಲಾಯಿಸಿ ಅದನ್ನು ಕನ್ನಡ ಪದ ‘ಲವಲವಿಕೆ’ಯಲ್ಲಿರುವ ‘ವಿಕೆ’ ಜೊತೆ ಕಸಿಮಾಡಿ ಕನ್ನಡ ಪದವನ್ನು ‘ಲವಲ’ ಎಂದು ಅರ್ಥಹೀನವಾಗಿಸಿ, ವಿಕಲಾಂಗ(‘ವಿಕಲಚೇತನ’!)ಗೊಳಿಸಿದೆ. ಇಂಥ ಕನ್ನಡ ಮುರುಕತನವನ್ನು ರಾಜಧಾನಿಯ ಮಾಧ್ಯಮಗಳು ಎಗ್ಗಿಲ್ಲದೆ ಮಾಡುತ್ತಿವೆ. ವಿಜಯ Next(ನೆಕ್ಸ್ಟ್) ಎಂಬ ಕಲಬೆರಕೆ ಹೆಸರಿನ ಕನ್ನಡ ಪತ್ರಿಕೆಯಲ್ಲಿ ಇಂಗ್ಲಿಷ್ ಪದಪುಂಜ, ವ್ಯಾಕರಣ ರಚನೆಗಳ ಬಳಕೆ ಹೆಚ್ಚಿದೆ. ಕೆಲವು ಕನ್ನಡ ಸಂಪಾದಕರು ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬೆರಸುವ ಗೀಳಿನಿಂದ ನರಳುತ್ತಿರುವಂತಿದೆ. ಇಂಗ್ಲಿಷಿನಲ್ಲಿ ಮಾತನಾಡುವಾಗ, ಬರೆಯುವಾಗ ಒಂದು ಕನ್ನಡ ಪದವೂ ನುಸುಳದಂತೆ ಎಚ್ಚರವಹಿಸುವವರು ಕನ್ನಡದ ಬಗ್ಗೆಯೂ ಅಷ್ಟೇ ಪ್ರಬುದ್ಧರಾಗಿ ವರ್ತಿಸುವುದು ಯಾವಾಗ?

ಎಫ್.ಎಂ. ರೇಡಿಯೋ ಕನ್ನಡ ವಾಹಿನಿಗಳಲ್ಲಿ ಇಂಗ್ಲಿಷ್ ಕಲಬೆರಕೆಯ ಅಬದ್ಧ ರೂಪಗಳು ಜುಗುಪ್ಸೆಯನ್ನು ಉಂಟುಮಾಡುತ್ತವೆ. ದೃಶ್ಯ ಮಾಧ್ಯಮದ ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು ‘ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ‘ಜಿಲ್ಲಾ ಜರ್ನಿ’ ಇತ್ಯಾದಿ ಇಂಗ್ಲಿಷಿನಲ್ಲಿವೆ. ಎಲ್ಲ ವಾಹಿನಿಗಳಲ್ಲಿ ಕನ್ನಡ ಪದಗಳು ಮತ್ತು ಕನ್ನಡ ಅಂಕಿಗಳನ್ನೇ ಬಳಸಬೇಕು.

ರಾಜ್ಯ ಸರಕಾರದ ಎಲ್ಲ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-೨: ವೈವ : ೭೮:೨೦೦೧-೦೨ ದಿನಾಂಕ ೩೧-೮-೨೦೦೧). ರಾಜ್ಯಗಳಲ್ಲಿ ನೋಂದಣಿಯಾಗುವ ಎಲ್ಲ ವಾಹನಗಳೂ ಆಯಾ ರಾಜ್ಯದ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ಕಡ್ಡಾಯವಾಗಿ ನೋಂದಣಿ ಫಲಕಗಳನ್ನು ಪ್ರದರ್ಶಿಸುವುದು ದೇಶಾದ್ಯಂತ ಏಕರೂಪವಾಗಿ ಜಾರಿಗೆ ಬರುವಂತೆ ಒತ್ತಾಯಿಸಬೇಕು. ಕರ್ನಾಟಕದ ಎಲ್ಲ ಸಾರಿಗೆ ಬಸ್ಸುಗಳ ಮಾರ್ಗಫಲಕಗಳಲ್ಲಿ ಮಾರ್ಗಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು. ಬಸ್ ಚೀಟಿಗಳೂ ಕನ್ನಡ ಅಂಕಿಗಳಲ್ಲಿರಬೇಕು.

ಮಕ್ಕಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯ ಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ (೨೦೧೧). ಇದರಿಂದ ಮಕ್ಕಳು ಎಳೆಯ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಮಾನದ ಅನಂತರ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋನ್ನತ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುತ್ತಿರುವುದು ಆತಂಕದ ಸಂಗತಿ.

ಸರ್ವೋನ್ನತ ನ್ಯಾಯಾಲಯವು ಪುರಸ್ಕರಿಸಿದ ಸರಕಾರದ ಭಾಷಾ ನೀತಿಯಿಂದ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮವಾಗಿದೆ. ಇದರಿಂದ ಹಿಂದುಳಿದ ವರ್ಗಗಳ ಮಕ್ಕಳಂತೆ ಮುಂದುವರೆದ ವರ್ಗಗಳ ಮಕ್ಕಳೂ ಮಾತೃಭಾಷೆಯಲ್ಲಿಯೇ ಕಲಿಯುವುದರಿಂದ ಎಲ್ಲ ವರ್ಗಗಳ ಮಕ್ಕಳಿಗೆ ಸಮಾನ ಸ್ಪರ್ಧೆಯ ಅವಕಾಶ ದೊರೆಯುತ್ತದೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಸೌಲಭ್ಯಗಳಿರುವ ಮುಂದುವರೆದ ಮಕ್ಕಳ ಜೊತೆ, ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಸೌಲಭ್ಯಗಳಿಲ್ಲದ ಹಿಂದುಳಿದ ವರ್ಗಗಳ ಮಕ್ಕಳು ಇಂಗ್ಲಿಷನ್ನೂ ಕಲಿಯುತ್ತಾ ಸ್ಪರ್ಧಿಸಬೇಕಾಗುವುದರಿಂದ ಅವರ ನಡುವಿನ ಅಸಮಾನತೆಯ ಅಂತರ ಹೆಚ್ಚುವಂತಾಗುತ್ತದೆ. ಅದರ ಬದಲು ಎಲ್ಲ ಮಕ್ಕಳೂ ತಮ್ಮ ಮಾತೃಭಾಷೆಯಲ್ಲಿಯೇ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಸಮಾನವಾಗಿ ಮುಂದುವರೆಯಲು ಸಾಧ್ಯವಾಗುವುದು ಮಹತ್ವದ ಸಂಗತಿ.

ಮಕ್ಕಳು ಐದನೆಯ ತರಗತಿಯಿಂದ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲು ಆರಂಭಿಸುವುದರಿಂದ ಅವರಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ, ಅನಿವಾರ್ಯತೆಯಾಗಲಿ ಇರುವುದಿಲ್ಲ. ಅವರು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯವನ್ನು ಇಂಗ್ಲಿಷಿನಲ್ಲಿ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದಲ್ಲಿಯೇ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವೂ ಮಕ್ಕಳ ಶಿಕ್ಷಣ ಹಕ್ಕಿನ ವಿರುದ್ಧವೂ ಆಗುತ್ತದೆ. ಸರ್ವೋನ್ನತ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮಥ್ರ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.

ಸರ್ವೋನ್ನತ ನ್ಯಾಯಾಲಯ ಅನುಮೋದಿಸಿದ್ದ ಕರ್ನಾಟಕ ಸರಕಾರದ ಭಾಷಾನೀತಿಯನ್ನು ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿ, ಅದರ ಇತ್ಯರ್ಥವನ್ನು ಹದಿನಾಲ್ಕು ವರ್ಷಗಳವರೆಗೆ ವಿಳಂಬಿಸಿ, ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಿತಗೊಳಿಸಿರುವುದು ಮಕ್ಕಳ ಶಿಕ್ಷಣದ ಹಕ್ಕಿನ ಉಲ್ಲಂಘನೆಯೇ ಆಗಿದೆ. ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಯಾರ ಮಾತೃಭಾಷೆಯೂ ಅಲ್ಲದ ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ, ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಹಕ್ಕಿನ ಅವಕಾಶವನ್ನು ಶಾಶ್ವತವಾಗಿ ತಪ್ಪಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವದು ಈ ಸಂಶಯಕ್ಕೆ ಪುಷ್ಟಿಯನ್ನು ನೀಡುವಂತಿದೆ.

‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದಕ್ಕೆ ಕೆಲವರು ಮಾತ್ರ ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ಬಹುಮತದ ಆಧಾರದ ಮೇಲೆ ನಿರ್ಧರಿಸುವುದಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮಾತ್ರ ನಿರ್ಧರಿಸುತ್ತಾರೆ. ಮಾತೃಭಾಷೆಯಲ್ಲದ ಭಾಷೆಯನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸುವುದು ಗುಣಮಟ್ಟದ ಶಿಕ್ಷಣಕ್ಕೆ ಕಾರಣ ಎಂದು ಶಿಕ್ಷಣ ತಜ್ಞರು ಯಾರೂ ಹೇಳಿಲ್ಲ. ಅದಕ್ಕೆ ಬದಲಾಗಿ ಮಕ್ಕಳ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದೇ ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಕಲಿಸುವುದು ಮಾತ್ರ ಶೈಕ್ಷಣಿಕವಾಗಿ ಮುಖ್ಯ.

ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿಯೇ ಕಲಿಸಬೇಕು. ಅದನ್ನು ಯಾರೂ ಬೇಡವೆನ್ನುತ್ತಿಲ್ಲ. ಇಂಗ್ಲಿಷ್ ಮಾತೃಭಾಷೆಯ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುವಂತೆ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಅದನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಅವರು ಮಕ್ಕಳೊಂದಿಗೆ ಸಹಜವಾಗಿ ಸರಳವಾದ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಲಿಸುವುದರಿಂದ ಮಕ್ಕಳು ಇಂಗ್ಲಿಷ್ನಲ್ಲಿ ಮಾತನಾಡುವುದನ್ನು ಮೊದಲು ಕಲಿಯುತ್ತಾರೆ. ಅನಂತರ ಇಂಗ್ಲಿಷಿನಲ್ಲಿ ಓದುವುದು ಬರೆಯುವುದನ್ನು ಕಲಿಸಬೇಕು. ಹಾಗೆ ಮಾಡದೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅಕ್ಷರ, ಪುಸ್ತಕಗಳನ್ನು ಓದಿಸುತ್ತಿರುವುದರಿಂದ ಉದ್ದೇಶೀತ ಪ್ರಯೋಜನವಾಗುತ್ತಿಲ್ಲ. ಯಾವಾಗಬೇಕಾದರೂ ಶೈಕ್ಷಣಿಕವಾದ ಸರಿಯಾದ ಕ್ರಮದಲ್ಲಿ ಸುಲಭವಾಗಿ ಕಲಿಯಬಹುದಾದುದನ್ನು ಶೈಕ್ಷಣಿಕವಲ್ಲದ ಕ್ರಮದಲ್ಲಿ ಪ್ರಾಥಮಿಕ ಒಂದನೆಯ ತರಗತಿಯಿಂದಲೇ ಕಡ್ಡಾಯವಾಗಿ ಕಲಿಸಬೇಕೆಂದು ವಾದಿಸುವುದರಲ್ಲಿ ಅರ್ಥವಿಲ್ಲ.

ಸ್ವಾತಂತ್ರ್ಯಾನಂತರ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗಿಕರಿಸಿದ್ದೇವೆ. ಕನ್ನಡವು ಕನ್ನಡಿಗರೆಲ್ಲರ ತಾಯಿ, ನಾಡದೇವಿ ಎನ್ನುವುದು ಅಮೂರ್ತ ಕಲ್ಪನೆ. ಅದನ್ನು ಸ್ವಾತಂತ್ರ್ಯಪೂರ್ವದಲ್ಲಿದ್ದಂತೆ ಖಾಸಗಿ ನಂಬಿಕೆಯ ಮತಧರ್ಮದ ದೇವತೆಗಳಾದ ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ ಮೊದಲಾದವುಗಳ ಜೊತೆ ಸಮೀಕರಿಸಕೂಡದು. ಕನ್ನಡ ತಾಯಿ, ನಾಡದೇವಿಯ ಹೆಸರಿನಲ್ಲಿ ಮತಧರ್ಮದ ದೇವತೆಯ ವಿಗ್ರಹ ಸ್ಥಾಪಿಸುವುದು, ಪೂಜಾ ಕ್ರಮವನ್ನು ನಡೆಸುವುದು, ಅಂಬಾರಿಯಲ್ಲಿ ಮೆರೆಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ಕುವೆಂಪು ಅವರು ಹೇಳಿರುವಂತೆ ‘ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬಂದು’, ಮೊಗೇರಿ ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘ಕನ್ನಡವೆಂದರೆ ತಾಯಿಯೆ, ದೇವಿಯೇ, ನಾನೂ ನೀನೂ ಅವರು’ ಎಂಬ ಜನಪರ ನೆಲೆಯಲ್ಲಿ ಕನ್ನಡವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಸುವ ಹೊಣೆ, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಸಂಕಲ್ಪವನ್ನು ಸಂವಿಧಾನದಲ್ಲಿ ಸ್ವೀಕರಿಸಿರುವ ನಮ್ಮೆಲ್ಲರ ಮೇಲಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ಧಾರ್ಮಿಕ ವ್ಯಕ್ತಿಗಳೂ ಎಲ್ಲರೊಂದಿಗೆ ಸಮಾನ ಗೌರವದಿಂದ ಭಾಗವಹಿಸಬಹುದು. ಆದರೆ ಇಲ್ಲಿ ಅವರನ್ನು ಧಾರ್ಮಿಕ ವೇದಿಕೆಗಳಲ್ಲಿ ಸ್ತುತಿಸುವಂತೆ ‘ದಿವ್ಯ ಸಾನ್ನಿಧ್ಯ’ ಎಂದು ವಿಶೇಷವಾಗಿ ಸಂಬೋಧಿಸುವುದು ಅನುಚಿತ. ಪರಿಷತ್ತು ಈ ದಿವ್ಯಸನ್ನಿಯಿಂದ ಗುಣಮುಖವಾಗಬೇಕು.
ಕೃಪೆ : ನಿಲುಮೆ

Mar 7, 2012

ಅಲಂಕಾರಗಳು

ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ ಒಡವೆ, ವಸ್ತ್ರ , ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ . ಈ ಅಲಂಕಾರದಿಂದ ಜನರು ಆಕರ್ಷಿತರಾಗುತ್ತಾರೆ . ಕಟ್ಟಡ ಅಥವಾ ಗೋಡೆಯ ಸೌಂದರ್ಯವನ್ನು ಹೆಚ್ಚಿಸಲು ಸುಂದರ ವಸ್ತುಗಳಿಂದ ಅಲಂಕರಿಸುತ್ತೇವೆ. ಅಲ್ಲಿಗೆ ಅಲಂಕಾರವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು ಎಂದಾಯಿತು . ಹಾಗೆಯೇ ಮಾತನಾಡುವಾಗಲೂ ಕೇಳುವವರಿಗೆ ಹಿತವಾಗುವಂತೆ ಚಮತ್ಕಾರದ ರೀತಿಯಲ್ಲಿ ಮಾತಾನಾಡುವುದು ಉಂಟು.
ಉದಾ : ಪೂರ್ವ ದಿಕ್ಕಿನಲ್ಲಿ ಸೂರ್ಯ ಮೂಡಿದನು ಎಂದು ಹೇಳುವ ಬದಲಿಗೆ, ಪೂರ್ವ ದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತೈದೆಯ ಹಣೆಯ ಕುಂಕುಮದಂತೆ ಶೋಭಿಸುತ್ತಿದ್ದನು ಎಂದು ಹೇಳಿದಾಗ ಮಾತಿನ ಸೌಂದರ್ಯ ಹೆಚ್ಚುವುದು.

ಅಲಂಕಾರಗಳು

  • ವಿಶಾಲ ಅರ್ಥದಲ್ಲಿ ಕಾವ್ಯದ ರಮಣೀಯತೆ ಅಥವಾ ಅದರ ಸೌಂದರ್ಯಕ್ಕೆ ಕಾರಣವಾಗುವ ‘ಶಬ್ದ’ ಮತ್ತು ‘ಅರ್ಥ’ಗಳ ವೈಚಿತ್ರವನ್ನು “ಅಲಂಕಾರ” ಎನ್ನಬಹುದು. ಅಲಂಕಾರವು ಸಾಮಾನ್ಯವಾದ ಭಾಷೆಗೆ ಮಂತ್ರಶಕ್ತಿಯನ್ನು ತಂದುಕೊಡುವ ಸಾಧನ. ಹಾಗಾಗಿ ಭಾರತೀಯ ಕಾವ್ಯ ಮೀಮಾಂಸೆಯ ಪ್ರಮುಖ ಲಾಕ್ಷಣಿಕನಾದ ದಂಡಿ – “ಕಾವ್ಯಶೋಭಾಕರನ್ ಧರ್ಮಾನಲಂಕಾರಾನ್ ಪ್ರಚಕ್ಷತೇ” ಎಂದಿದ್ದಾನೆ.
  • ಭಾರತೀಯ ಕಾವ್ಯಮೀಮಾಂಸೆಯ ಪ್ರಮುಖ ಪ್ರಸ್ಥಾನಗಳಾಗಿ ಅಲಂಕಾರಗಳನ್ನು ಗುರ್ತಿಸುತ್ತೇವೆ. ವಾಸ್ತವವಾಗಿ ಅಲಂಕಾರವನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
  • ೧.ಅಲಂಕಾರ ಪ್ರಸ್ಥಾನ : ಇದರಲ್ಲಿ ಪ್ರಮುಖ ಅಲಂಕಾರಿಕನಾದ ಭಾಮಹನನ್ನು ಮುಖ್ಯವಾಗಿಟ್ಟುಕೊಂಡು ಅಲಂಕಾರ ಪ್ರಸ್ಥಾನದ ಸಾಮಾನ್ಯ ಸಮೀಕ್ಷೆಯನ್ನು ಮಾಡಲಾಗಿದೆ.
  • ೨.ಶಬ್ದಾಲಂಕಾರಗಳು  : ಇದರಲ್ಲಿ ಪ್ರಮುಖವಾಗಿ ಅನುಪ್ರಾಸ ಯಮಕ ಮತ್ತು ಚಿತ್ರಕವಿತ್ವಗಳ ಬಗ್ಗೆ ಹೇಳಲಾಗುತ್ತದೆ.
  • ೩.ಅರ್ಥಾಲಂಕಾರಗಳು : ಇದರಲ್ಲಿ ಎಂಟು ಪ್ರಮುಖ ಅಲಂಕಾರಗಳಾದ – ಉಪಮೆ, ದೀಪಕ, ರೂಪಕ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ, ಶ್ಲೇಷೆ, ಅತಿಶಯೋಕ್ತಿ ಮತ್ತು ಸ್ವಭಾವೋಕ್ತಿಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡಲಾಗುತ್ತದೆ.

ಅಲಂಕಾರ ಪ್ರಸ್ಥಾನ

ಕಾವ್ಯವನ್ನು ಕುರಿತು ಚರ್ಚಿಸುವಾಗ ವಿಶಾಲ ಅರ್ಥವನ್ನು ಬಯಸಿ, ರಸವನ್ನುಅಲಂಕಾರವೆಂದೆ ಪರಿಗಣಿಸಿ, ಕಾವ್ಯದಲ್ಲಿ ಅಲಂಕಾರಗಳೇ ಮುಖ್ಯವವೆಂದು ಪ್ರತಿಪಾದಿಸಿದ ಕಾವ್ಯಮೀಮಾಂಸಕರಾದ ಭಾಮಹ, ಉದ್ಬಟ, ರುದ್ರಟ, ಜಯದೇವ ಮೊದಲಾದವರ ಒಟ್ಟು ಚರ್ಚೆಯನ್ನು ‘ಅಲಂಕಾರ ಪ್ರಸ್ಥಾನ’ವೆಂದು ಕರೆಯಬಹುದು. ಅಲಂಕಾರ ಪ್ರಸ್ಥಾನದ ಪ್ರಭಾವವೂ ಗಾಢವಾಗಿದ್ದ ಕಾವ್ಯಮೀಮಾಂಸೆಯನ್ನು ‘ಅಲಂಕಾರ ಶಾಸ್ತ್ರ’ವೆಂದು ಹೇಳಲಾಗುತ್ತದೆ.
  • ಭಾರತೀಯ ಕಾವ್ಯಮೀಮಾಂಸೆಯ ಪ್ರಮುಖ ಅಲಂಕಾರಿಕನಾದ ಭಾಮಹನು “ಕಾವ್ಯಾಲಂಕಾರ” ಎಂಬ ಕೃತಿಯನ್ನು ರಚಿಸಿದ್ದಾನೆ. ಇದರ ಮೊದಲ ಪರಿಚ್ಛೇದದಲ್ಲಿ ಕಾವ್ಯದ ಲಕ್ಷಣ, ಪ್ರಯೋಜನ, ವಿಭಾಗ ಈ ಮೊದಲಾದ ಸಾಮಾನ್ಯ ವಿಚಾರವೂ, ಎರಡು, ಮೂರನೇ ಪರಿಚ್ಛೇದದಲ್ಲಿ ಸುಮಾರು ೪೦ ಅಲಂಕಾರಗಳ ನಿರೂಪಣೆಯೂ, ನಾಲ್ಕನೆಯದರಲ್ಲಿ ೧೦ ಕಾವ್ಯ ದೋಷಗಳನ್ನೂ, ಐದನೆಯದರಲ್ಲಿ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ದೋಷಗಳ ವಿಷಯವೂ, ಆರನೆಯದರಲ್ಲಿ ಶಬ್ದಶುದ್ಧಿಯನ್ನು ಕುರಿತ ಕೆಲವು ಸೂಚನೆಗಳು ಬಂದಿವೆ.
  • ಇವುಗಳಲ್ಲಿ ವಸ್ತುತಃ ತರ್ಕ ವ್ಯಾಕರಣಗಳಿಗೆ ಸೇರತಕ್ಕ ಕೊನೆಯ ಎರಡು ಪರಿಚ್ಛೇದಗಳನ್ನು ಬಿಟ್ಟರೆ, ಅಲಂಕಾರಗಳ ನಿರೂಪಣೆಯೇ ಭಾಮಹನ ಗ್ರಂಥದ ಪ್ರಧಾನ ವಿಷಯ. ಇವನು ರಸಕ್ಕೆ ಹೆಚ್ಚಿನ ಸ್ಥಾನವನ್ನೇನೂ ಕೊಟ್ಟಿಲ್ಲ. ಶೃಂಗಾರಾದಿ ರಸಗಳನ್ನು ಸ್ಪಷ್ಟವಾಗಿ ದರ್ಶಿಸಿದ್ದರೆ ರಸವದಲಂಕಾರವಾಗುವುದೆಂದು ಹೇಳಿ ಮುಗಿಸುತ್ತಾನೆ.
  • ಭಾಮಹನ ಮತದಂತೆ ಎಲ್ಲ ಕಾವ್ಯವೂ ಅದು ಮಹಾಕಾವ್ಯವಾಗಿರಲಿ, ಮುಕ್ತವಾಗಿರಲಿ ‘ವಕ್ರೋಕ್ತಿ’ ಯಿಂದ ಕೂಡಿರಬೇಕು. ಕಾವ್ಯದ ಶಬ್ದದಲ್ಲಿಯೂ ಲೋಕರೂಢಿಗೆ ಮೀರಿದ ಒಂದು ಅತಿಶಯವಿರುವುದೇ ಅತಿಶಯೋಕ್ತಿ ಅಥವಾ ವಕ್ರೋಕ್ತಿ. ವಕ್ರೋಕ್ತಿಯಿಲ್ಲದೆ ಅಲಂಕಾರವಿಲ್ಲ. ಸ್ವಭಾವೋಕ್ತಿಯನ್ನು ಕೆಲವರು ಮಾತ್ರ ಅಲಂಕಾರವೆಂದು ಕರೆಯುತ್ತಾರೆ.

ಶಬ್ದಾಲಂಕಾರಗಳು

  • ಭಾಮಹನಿಗಿಂತ ದಂಡಿಗೆ ಶಬ್ದಾಲಂಕಾರಗಳ ಮೇಲೆ ಹೆಚ್ಚು ಆಸಕ್ತಿ. ಇವನ ಕೃತಿ “ಕಾವ್ಯಾದರ್ಶ”. ಇದರ ಮೊದಲನೆಯ ಪರಿಚ್ಛೇದದ ಬಹುಭಾಗವು ವೈದರ್ಭ, ಗೌಡ ಎಂಬ ಎರಡು ಕಾವ್ಯಮಾರ್ಗಗಳ ವಿಭೇದಗಳನ್ನು ಪ್ರತಿಪಾದಿಸುವುದಕ್ಕೆ ಮೀಸಲಾಗಿದೆ. ಎರಡನೆ ಪರಿಚ್ಛೇದದಲ್ಲಿ ಅರ್ಥಾಲಂಕಾರಗಳೂ, ಮೂರನೆಯದರಲ್ಲಿ ಶಬ್ದಾಲಂಕಾರಗಳೂ, ದೋಷಗಳೂ ನಿರೂಪಿತವಾಗಿವೆ.
  • ದಂಡಿಯ ಒಲವೆಲ್ಲವೂ ವೈದರ್ಭದ ಮಾರ್ಗದ ಕಡೆಗಿದೆ. ಶ್ಲೇಷ, ಪ್ರಸಾದ, ಸಮತೆ, ಮಾಧುರ್ಯ, ಸುಕುಮಾರತೆ, ಅರ್ಥವ್ಯಕ್ತಿ, ಉದಾರತ್ವ, ಓಜಸ್ಸು, ಕಾಂತಿ, ಸಮಾಧಿ – ಈ ಹತ್ತು ಗುಣಗಳು ವೈದರ್ಭ ಮಾರ್ಗದ ಪ್ರಾಣಗಳು.
  • “ಕಾವ್ಯಶೋಭಾಕರಾನ್ ಧರ್ಮಾನ್ ಅಲಂಕಾರಾನ್ ಪ್ರಚಕ್ಷತೇ”| – ದಂಡಿ, ಕಾವ್ಯಕ್ಕೆ ಸೊಗಸು ಕೊಡುವ ಧರ್ಮಗಳನ್ನು ಅಲಂಕಾರಗಳೆಂದು ಕರೆದಿದ್ದಾನೆ.
  • ಶಬ್ದಾಲಂಕಾರಗಳಲ್ಲಿ ಮೂರು ಬಗೆಗಳಿವೆ. ಅವುಗಳೆಂದರೆ – ೧.ಅನುಪ್ರಾಸ : ಅಂದರೆ ಅಕ್ಷರಗಳ ಆವೃತ್ತಿ. ಇದರಲ್ಲಿ ಒಂದೊ, ಎರಡೊ. ಮೂರೊ ಅಕ್ಷರಗಳು ಮತ್ತೆ ಮತ್ತೆ ಬಂದರೆ ಅದನ್ನು “ವೃತ್ತ್ಯಾನುಪ್ರಾಸ” ಎನ್ನುತ್ತಾರೆ. ಎರಡು ಅಕ್ಷರಗಳು ಜತೆಜತೆಯಾಗಿ ಹಲವು ಕಡೆ ಬಂದರೆ, ಅದನ್ನು “ಛೇಕಾನುಪ್ರಾಸ” ಎನ್ನುವರು.
  • ೨.ಯಮಕ : ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ, ಒಂದು ಪದ್ಯದ ಆದಿ, ಮಧ್ಯ, ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದಕ್ಕೆ ಯಮಕ ಎನ್ನುತ್ತಾರೆ.
  • ೩.ಚಿತ್ರಕವಿತ್ವ :ಅಕ್ಷರಗಳನ್ನು, ಪದಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ಇತರ ಶಬ್ದ ವೈಚಿತ್ರಕ್ಕೆ ‘ಚಿತ್ರಕವಿತ್ವ’ ಎನ್ನುತ್ತಾರೆ. ಇದನ್ನು ಶಬ್ದವೈಖರಿ, ಅಭ್ಯಾಸಬಲ, ಬುದ್ಧಿ ಸಾಮರ್ಥ್ಯ ಇವು ಇದ್ದ ಹಾಗೆಲ್ಲಾ ಕಲ್ಪಿಸಿ ರಚಿಸಬಹುದು.

ಅರ್ಥಾಲಂಕಾರಗಳು

ಕವಿಗಳು ಅರ್ಥ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದರೆ ಅದು ಅರ್ಥಾಲಂಕಾರ. ಅರ್ಥಾಲಂಕಾರದಲ್ಲಿ ಎಂಟು ವಿಧ ಅವುಗಳೆಂದರೆ :-
  1. ಉಪಮಾಲಂಕಾರ
  2. ದೀಪಕಾಲಂಕಾರ
  3. ರೂಪಕಾಲಂಕಾರ
  4. ಉತ್ಪ್ರೇಕ್ಷಾಲಂಕಾರ
  5. ಅರ್ಥಾಂತರನ್ಯಾಸ ಅಲಂಕಾರ
  6. ಅತಿಶಯೋಕ್ತಿ ಅಲಂಕಾರ
  7. ಶ್ಲೇಷಾಲಂಕಾರ
  8. ಸ್ವಭಾವೋಕ್ತಿ ಅಲಂಕಾರ

ಉಪಮಾಲಂಕಾರ

ಎರಡು ವಸ್ತುಗಳು ಪರಸ್ಪರವಾಗಿ ಇರುವ ಸಾದೃಶ್ಯ (ಸಮಾನವಾದ) ಹೋಲಿಕೆಯನ್ನು ತಿಳಿಸುವುದೇ ಉಪಮಾಲಂಕಾರ. ಇದರಲ್ಲಿ ಎರಡು ಬಗೆ – ೧.ಪೂರ್ಣೋಪಮೆ, ೨.ಲುಪ್ತೋಪಮೆ
ಉಪಮಾಲಂಕಾರದಲ್ಲಿ, ಉಪಮೇಯ = ಯಾವ ವಸ್ತುವನ್ನು ಹೋಲಿಸುತ್ತೇವೆಯೋ ಆ ವಸ್ತು, ಉಪಮಾನ = ಯಾವ ವಸ್ತುವಿಗೆ ಹೋಲಿಸುತ್ತೇವೆಯೋ ಆ ವಸ್ತು, ಸಮಾನಧರ್ಮ = ಉಪಮೇಯ, ಉಪಮಾನಗಳಲ್ಲಿ ಕಂಡು ಬರುವ ಸಮಾನಗುಣ, ಉಪಮಾವಾಚಕ = ಅಂತೆ, ಹಾಗೆ, ವೊಲ್, ಅಂಗ ಎಂಬ ನಾಲ್ಕು ಅಂಶಗಳಿರುತ್ತವೆ. ಉದಾ ೧ : ಮಗುವಿನ ಮುಖವು ಚಂದ್ರನಂತೆ ಮನೋಹರವಾಗಿವೆ
ಉಪಮೇಯ = ಮಗುವಿನ ಮುಖ
ಉಪಮಾನ = ಚಂದ್ರ
ಸಮಾನಧರ್ಮ = ಮನೋಹರ
ಉಪಮಾವಾಚಕ = ಅಂತೆ
ಸಮನ್ವಯ : ಇಲ್ಲಿ ಉಪಮೇಯವಾದ ಮಗುವಿನ ಮುಖವನ್ನು ಉಪಮಾನವಾದ ಚಂದ್ರನಿಗೆ ಸಮಾನವಾಗಿ ( ಸಾದೃಶ್ಯ) ಹೋಲಿಸಲಾಗಿದೆ. ಆದ್ದರಿಂದ ಇದು ಉಪಮಾಲಂಕಾರ.
ಇಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಮತ್ತು ಉಪಮಾವಾಚಕ – ಈ ನಾಲ್ಕೂ ಅಂಶಗಳಿರುವುದರಿಂದ ಇದು ಪೂರ್ಣ ಉಪಮಾಲಂಕಾರ ಎಂದೆನ್ನಿಸಿಕೊಳ್ಳುತ್ತದೆ.
ಉದಾ ೨ : ಸೀತೆಯ ಮುಖ ಕಮಲದಂತೆ ಇದೆ.
ಉಪಮೇಯ = ಸೀತೆಯ ಮುಖ
ಉಪಮಾನ = ಕಮಲ
ಉಪಮಾವಾಚಕ = ಅಂತೆ
ಇಲ್ಲಿ ಸಮಾನಧರ್ಮ ಇಲ್ಲ.
ಆದ್ದರಿಂದ ಇದಕ್ಕೆ ಲುಪ್ತೋಪಮಾಲಂಕಾರ ಎಂದು ಹೆಸರು.

ರೂಪಕಾಲಂಕಾರ

ಉಪಮೇಯ ಉಪಮಾನಗಳಲ್ಲಿ ಹೋಲಿಕೆಯು ಬೇಧವಿಲ್ಲದೆ ವರ್ಣಿತವಾದರೆ ಅದು ರೂಪಕಾಲಂಕಾರ ( ಉಪಮೇಯ , ಉಪಮಾನ ಎರಡೂ ಒಂದೇ ಎಂದು ವರ್ಣಿಸುವುದು )
ಉದಾ : ಸೀತೆಯ ಮುಖ ಕಮಲ
ಉಪಮೇಯ = ಸೀತೆಯ ಮುಖ
ಉಪಮಾನ = ಕಮಲ
ಸಮನ್ವಯ : ಇಲ್ಲಿ ಉಪಮೇಯವಾದ ಸೀತೆಯ ಮುಖಕ್ಕೂ ಉಪಮಾನವಾದ ಕಮಲಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಆದ್ದರಿಂದ ಇದು ರೂಪಕಾಲಂಕಾರ

ಉತ್ಪ್ರೇಕ್ಷಾಲಂಕಾರ

ಉಪಮೇಯವನ್ನು ಉಪಮಾನವನ್ನಾಗಿ ಸಂಭಾವಿಸಿ ಅಂದರೆ ಕಲ್ಪಿಸಿ ವರ್ಣಿಸುವುದನ್ನು ಉತ್ಪ್ರೇಕ್ಷಾಲಂಕಾರ ಎನ್ನುವರು.
ಉದಾ : ಸೀತೆಯ ಮುಖ ಕಮಲವೋ ಎಂಬಂತೆ ಅರಳಿತು
ಉಪಮೇಯ = ಸೀತೆಯ ಮುಖ
ಉಪಮಾನ = ಕಮಲ
ಸಮನ್ವಯ : ಇಲ್ಲಿ ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲವೆಂದು ಕಲ್ಪಿಸಿ ಹೇಳಲಾಗಿದೆ.

ಅರ್ಥಾಂತರನ್ಯಾಸಾಲಂಕಾರ

ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಧನೆ ಮಾಡುವುದನ್ನು ಅರ್ಥಾಂತರನ್ಯಾಸಾಲಂಕಾರ ಎನ್ನುವರು .
ಉದಾ : ರಾಮನು ಉಂಡಮನೆಗೆ ಕೇಡು ಬಗೆದ .
ಕೃತಘ್ನರು ಏನನ್ನೂ ಮಾಡುವರು.
ರಾಮನು ಉಂಡ ಮನೆಗೆ ಕೇಡು ಬಗೆದ. ( ವಿಶೇಷ ವಾಕ್ಯ )
ಕೃತಘ್ನರು ಏನನ್ನೂ ಮಾಡುವರು. ( ಸಾಮಾನ್ಯ ವಾಕ್ಯ )
ಸಮನ್ವಯ : ಇಲ್ಲಿ ಉಪಮಾನವಾದ “ಕೃತಘ್ನರು ಏನನ್ನೂ ಮಾಡುವರು.” ( ಸಾಮಾನ್ಯ ವಾಕ್ಯ ) , ರಾಮನು ಉಂಡ ಮನೆಗೆ ಕೇಡು ಬಗೆದ ( ವಿಶೇಷ ವಾಕ್ಯ ) ಎಂಬ ಮಾತನ್ನು ಸಮರ್ಥಿಸಲಾಗಿದೆ ಆದ್ದರಿಂದ ಇದು ಅರ್ಥಾಂತರನ್ಯಾಸಾಲಂಕಾರ.

ದೃಷ್ಟಾಂತ ಅಲಂಕಾರ

ಎರಡು ಬೇರೆಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತ ಅಲಂಕಾರ
ಉದಾ : ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ
ಉಪಮೇಯ = ತಾಯಿಗಿಂತ ಬಂಧುವಿಲ್ಲ
ಉಪಮಾನ = ಉಪ್ಪಿಗಿಂತ ರುಚಿಯಿಲ್ಲ
ಸಮನ್ವಯ : ಇಲ್ಲಿ ಉಪಮೇಯವಾದ ತಾಯಿಗಿಂತ ಬಂಧುವಿಲ್ಲ ಹಾಗೂ ಉಪಮಾನವಾದ ಉಪ್ಪಿಗಿಂತ ರುಚಿಯಿಲ್ಲ ಎರಡೂ ಬಿಂಬ ಪ್ರತಿಬಿಂಬ ಭಾವದಂತೆ ಇರುವುದುರಿಂದ ಇದು ದೃಷ್ಟಾಂತ ಅಲಂಕಾರ

ಶ್ಲೇಷಾಲಂಕಾರ

ಒಂದಕ್ಕಿಂತ ಹೆಚ್ಚು ಅರ್ಥಕೊಡುವ ಪದಶಕ್ತಿಗೆ ಶ್ಲೇಷಾ ಎಂದು ಹೆಸರು. ಬೇರೆಬೇರೆ ಅರ್ಥ ನೀಡುವಂತಿದ್ದರೆ ಅದು ಶ್ಲೇಷಾಲಂಕಾರ
ಉದಾ : ಕುರುಕುಲಾರ್ಕನು ಅರ್ಕನು ಅಸ್ತಂಗತರಾದರು.
ಉಪಮೇಯ = ಕುರುಕುಲಾರ್ಕನು ( ಕುರು ವಂಶಕ್ಕೆ ಸೂರ್ಯನಂತಿರುವವನು = ದುರ್ಯೋಧನ )
ಉಪಮಾನ = ಅರ್ಕ ( ಸೂರ್ಯ )
ಸಮನ್ವಯ : ಬೇರೆಬೇರೆ ಅರ್ಥ ಹೊಂದಿದ ಅರ್ಕ ಎಂಬ ಪದ ಉಪಮೇಯಕ್ಕೆ ( ದುರ್ಯೋಧನ ) ಉಪಮಾನವಾದ ( ಸೂರ್ಯ ) ಬೇರೆಬೇರೆ ಅರ್ಥ ನೀಡುತ್ತದೆ. ಆದ್ದರಿಂದ ಇದು ಶ್ಲೇಷಾಲಂಕಾರ