Mar 23, 2012

ಮಾವು-ಬೇವು ಎಲೆಗಳ ತೋರಣದ ಸಿಂಗಾರದ ಯುಗಾದಿ

ಸೌರಮಾನ ಯುಗಾದಿಯನ್ನು ಮೇಷ ರಾಶಿಗೆ ಸೂರ್ಯ ಪ್ರವೇಶಿಸುವ ದಿನದಂದು ಆಚರಿಸಲಾಗುತ್ತದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದರಿಂದ ಏಪ್ರಿಲ್ 14ರಂದು ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪ್ರತಿವರ್ಷದ ಚೈತ್ರಮಾಸದಲ್ಲಿ ಬರುವ ಮೊದಲ ದಿನವನ್ನು ಸಂವತ್ಸರಾದಿ ಪಾಡ್ಯಮಿ ಎಂದು ಪರಿಗಣಿಸಿ ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಚೈತ್ರಮಾಸ ಶುದ್ಧಪಾಡ್ಯಮಿಯಂದು ಆಚರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುವುದನ್ನು ನಾವು ಕಾಣಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವರ್ಷದಲ್ಲಿ ಬರುವ ಮೂರೂವರೆ ದಿನಗಳ ಶುಭಗಳಿಗೆ ಅತ್ಯಂತ ಶ್ರೇಷ್ಠವಾದದು. ಇದರಲ್ಲಿ ಯುಗಾದಿಯೂ ಒಂದಾಗಿದೆ. ಯುಗಾದಿ ದಿನದಂದು ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಯುಗಾದಿ ಹಬ್ಬದ ದಿನದಂದು ಹೊಸ ಕಾರ್ಯ ಚಟುವಟಿಕೆ, ಹೊಸ ಪದಾರ್ಥಗಳ ಖರೀದಿ ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ಆರಂಭಿಸುವುದನ್ನು ನಾವು ಕಾಣಬಹುದು. ಮಲ್ಲಿನಾಥನೆಂಬ 14ನೇ ತೀರ್ಥಂಕರ ಹುಟ್ಟಿದ್ದು ಹಾಗೂ ಆದಿ ತೀರ್ಥಂಕರನ ಮಗ ಭರತ ಚಕ್ರವರ್ತಿ ದಿಗ್ವಿಜಯ ಸಾಧಿಸಿದ್ದು ಯಗಾದಿಯ ದಿನವಾದ್ದರಿಂದ ಯುಗಾದಿ ಹಬ್ಬವು ಜೈನರಿಗೂ ಮಹತ್ವದ ದಿನವಾಗಿದೆ.

ಪೌರಾಣಿಕ ಮಹತ್ವ : ವೇದಗಳ ಕಾಲದಿಂದಲೂ ನಡೆದು ಬಂದಿದ್ದು, ಈ ಕುರಿತಂತೆ ಅಥರ್ವಣ ವೇದ, ಶತಪಥ ಬ್ರಾಹ್ಮಣ, ಧರ್ಮಸಿಂಧು, ನಿರ್ಣಯ ಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಯುಗಾದಿಯ ಬಗ್ಗೆ ಉಲ್ಲೇಖವಿದೆ. ಹೇಮಾದ್ರಿ ಪಂಡಿತನ ಚತುರ್ವರ್ಗ ಚಿಂತಾಮಣ ಎಂಬ ಪುರಾಣ ಗ್ರಂಥದಲ್ಲಿ ಬ್ರಹ್ಮ ದೇವನು ಚೈತ್ರಮಾಸದ ಶುಕ್ಲಪಕ್ಷದ ಮೊದಲನೆಯ ದಿನದ ಸೂರ್ಯೋದಯ ಕಾಲ ಅರ್ಥಾತ್ ಯುಗಾದಿಯಂದು ಭೂಮಂಡಲವನ್ನು ಸೃಷ್ಟಿಸಿದ. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ ಕಾಲಗಣನೆ ಆರಂಭಿಸಿದನೆಂದು ಉಲ್ಲೇಖಿಸಲಾಗಿದೆ.

ಶ್ರೀರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದು ರಾಜ್ಯವಾಳಲು ಪ್ರಾರಂಭಿಸಿದ್ದು, ಶಾಲಿವಾಹನ ಶಕೆ ಆರಂಭವಾದದ್ದು ಕೂಡ ಯುಗಾದಿ ದಿನವೇ ಎಂದು ಹೇಳಲಾಗುತ್ತಿದೆ. ಯುಗಾದಿ ಹಬ್ಬದ ಆಚರಣೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಭಿನ್ನವಾಗಿರುವುದನ್ನು ನಾವು ಕಾಣಬಹುದಾದರೂ ಸಾಮಾನ್ಯವಾಗಿ ಹಬ್ಬದ ದಿನದಂದು ಸೂರ್ಯೋದಯಕ್ಕೂ ಮುನ್ನ ಅಂದರೆ ಮುಂಜಾನೆ ಎದ್ದು ಮಂಗಳ ಸ್ನಾನ ಮಾಡಿ ಶ್ರೀರಾಮನನ್ನು ಸ್ಮರಣೆ ಮಾಡಿ ಹೊಸಬಟ್ಟೆ ತೊಟ್ಟು ಮನೆಯನ್ನೆಲ್ಲ ಮಾವು-ಬೇವು ಎಲೆಗಳ ತೋರಣದಿಂದ ಸಿಂಗರಿಸಿ ಹೊಸವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.

ಬೇವು-ಬೆಲ್ಲ ಕಷ್ಟ-ಸುಖಗಳ ಸಿಹಿ-ಕಹಿ ಸಮ್ಮಿಲನ

ಬಾವುಟ ಹಾರಿಸುವುದು, ಬೇವು-ಬೆಲ್ಲ ತಿನ್ನುವುದು, ಪಂಚಾಂಗ ಶ್ರವಣ, ವಸಂತ ನವರಾತ್ರಿ ಆರಂಭ ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲಪುರುಷನ ಮತ್ತು ವರ್ಷಾಧಿಪತಿಯ ಆರಾಧನೆಯೂ ನಡೆಯುತ್ತದೆ. ಹಬ್ಬದ ದಿನದಂದು ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಮಾಡಿದರೂ ಬೇವು-ಬೆಲ್ಲ ಸೇವಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟ-ಸುಖ ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವಿದೆ. ಬದುಕಿನಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕು ಎಂಬುವುದನ್ನು ಸಾರುವ ಸಂಕೇತವಾಗಿ ಬೇವು-ಬೆಲ್ಲವನ್ನು ಸೇವಿಸಲಾಗುತ್ತಿದೆ.

ವರ್ಷದ ತೊಡಕು : ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷ ತೊಡಕು ಎಂದು ಆಚರಿಸಲಾಗುತ್ತದೆ. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ. ಈ ದಿನ ವಿವಿಧ ಬಗೆಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುವ ಮೂಲಕ ಮನರಂಜನೆಯನ್ನು ಪಡೆಯುತ್ತಾರೆ. ಅಂದು ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದರೆ ಅದನ್ನು ವರ್ಷಪೂರ್ತಿ ಮಾಡುತ್ತಾನೆ ಹಾಗೂ ಅಂದು ದೊರೆತ ಸಂಪತ್ತು ವರ್ಷ ಪೂರ್ತಿ ದೊರೆಯುತ್ತಲೇ ಇರುತ್ತದೆ ಎಂಬ ನಂಬಿಕೆ ಇದೆ.

ಒಂದೆಡೆ ಹೊಸದಾಗಿ ಮದುವೆಯಾದ ಮಗಳು ಅಳಿಯನನ್ನು ಹಬ್ಬಕ್ಕೆ ಆಹ್ವಾನಿಸಿ ಸತ್ಕರಿಸಿದರೆ, ಮತ್ತೊಂದೆಡೆ ಅಕ್ಕ ತಂಗಿಯರು, ಅಣ್ಣ ತಮ್ಮಂದಿರನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡು ಹಬ್ಬದ ಅಡುಗೆ ಬಡಿಸಿ ಸತ್ಕರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇತ್ತೀಚೆಗಿನ ಯಾಂತ್ರಿಕ ಯುಗದಲ್ಲಿ ಯುಗಾದಿ ಹಬ್ಬದ ಆಚರಣೆಗಳಲ್ಲಿ ಒಂದಷ್ಟು ವ್ಯತ್ಯಾಸಗಳು ಆಗಿರಬಹುದಾದರೂ ಹಬ್ಬದ ರಂಗು ಎಂದಿಗೂ ಕಳೆಗುಂದುವುದಿಲ್ಲ ಹಾಗಾಗಿಯೇ ಎಷ್ಟೇ ಯುಗ ಕಳೆದರೂ ಯುಗಾದಿ ಮರಳಿ ಬರುತ್ತಲೇ ಇರುತ್ತದೆ.


ಕೃಪೆ : http://kannada.oneindia.in