Dec 3, 2013

ಕರ್ನಾಟಕ ಶಾಸನ ಶಾಸ್ತ್ರದ ಅವಲೋಕನ

ಶತ ಶತಮಾನಗಳಿಂದ ಸಮಾಜವು ನಡೆದು ಬಂದ ದಾರಿಯನ್ನು ತಿಳಿಯಲು ಅವಶ್ಯಕವಾದ ಮಾಹಿತಿಯನ್ನು ನೀಡುವಲ್ಲಿ ಶಾಸನಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸಿವೆ. ಶಾಸನಗಳು ಸಮಾಜಕ್ಕೆ ಮಾನವನು ನೀಡಿದ ಕೊಡುಗೆಗಳ ಅಮೂಲ್ಯ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಸಮಕಾಲೀನದಾಖಲೆಯ ವಸ್ತುಗಳೊಂದಿಗೆ, ಕಾಲಕಾಲಕ್ಕೆ ಸಂಭವಿಸಿದ ಘಟನೆಗಳ ಬಗೆಗೂವಾಸ್ತವಿಕ ಮಾಹಿತಿಯನ್ನು ಒಳಗೊಂಡಿರುತ್ತದೆ. ಪ್ರಾಚೀನ ಶೋಧನ ಶಾಸ್ತ್ರಗಳ ಪರಿಶೋಧನೆ ಮತ್ತು ಭೂಶೋಧನೆಗಳ ಮೂಲಕ ಬೆಳಕಿಗೆ ಬಂದ ಸಾಕ್ಷಿಗಳಲ್ಲಿ ಕಳೆದ ಐದು ಸಾವಿರ ವರ್ಷಗಳಿಂದಲೂ ಭಾರತದಲ್ಲಿ ಪ್ರಾಚೀನ ನಾಗರೀಕತೆಗಳಾದ ಸರಸ್ವತಿ ನದಿ ನಾಗರೀಕತೆಯೆಂದು ಪ್ರಸಿದ್ಧವಾದ ಸಿಂಧೂ ನದಿ ನಾಗರೀಕತೆ, ಗಂಗಾತೀರದ ನಾಗರೀಕತೆಗಳು  ಕ್ರಿ.ಪೂ. ಮೂರು ಸಾವಿರ ವರ್ಷಗಳ ಹಿಂದೆ ಮಾನವ ಜೀವನದ ಅಧ್ಯಯನಕ್ಕೆ ಸಂಬಂಸಿದಂತೆ ಪ್ರಮುಖವಾದ ಸುಳಿವನ್ನು ಒಳಗೊಂಡಿದೆ.

ಸಿಂಧೂನದಿ ನಾಗರೀಕತೆಯಲ್ಲಿ ಮುದ್ರೆಗಳು ಹಾಗೂ ಪಟ್ಟಿಕೆಗಳು ಮತ್ತು ವಿಶೇಷ ಸಂದರ್ಭದಗಳಲ್ಲಿ ಇತರ ವಸ್ತುಗಳ ಮೇಲೂ ಬರೆದಿರುವ ಬರಹದ ಚಿನ್ಹೆಗಳು ಕಂಡುಬರುತ್ತವೆ.ಈವರೆವಿಗೂ ಪ್ರಾಚೀನ ಭಾರತದ ಈ ಲಿಪಿಯನ್ನು ಸಂಪೂರ್ಣವಾಗಿ  ಅಧ್ಯಯನ ಮಾಡದಿರುವುದರಿಂದ ಮುದ್ರೆಗಳು ಹಾಗೂ ಪಟ್ಟಿಕೆಗಳ ಮೇಲೆ ಬರೆದಿರುವ ಬರಹದ ವಿಚಾರವು ನಮಗೆ ಹೊಳೆಯುವುದಿಲ್ಲ. ಸಾಹಿತ್ಯದ ಮೂಲಕ ತಿಳಿದುಬರುವಂತೆ ಜನರು ವರ್ಣನಾನುಕ್ರಮದ ಈ ಲಿಪಿಯನ್ನು ಅಬಿವೃದ್ಧಿಪಡಿಸಿದ್ದರೂ ಸಹಾ ನಮಗೆ ಅವುಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲ. ಹಾಗಿದ್ದರೂ ಸಹಾ ಕ್ರಿ.ಪೂ. ೫ನೆಯ ಶತಮಾನಕ್ಕೆ ಮೊದಲೇ ಭಾರತೀಯರು ವರ್ಣಮಾಲೆಯ ಲಿಪಿಗಳನ್ನು ಅಬಿವೃದ್ಧಿಪಡಿಸಿ ಬಳಸುತ್ತಿದ್ದರೆಂದು ತಿಳಿದು ಬರುತ್ತದೆ.
ಭಾರತದ ಉದ್ದಗಲಕ್ಕೂ ಶಾಸನಗಳನ್ನು ಕೆತ್ತಿಸಿದ ಕೀರ್ತಿಯು ಮೌರ್ಯ ಚಕ್ರವರ್ತಿ ಅಶೋಕನಿಗೆ ಸಲ್ಲುತ್ತದೆ. ಅವನ ಶಾಸನಗಳು ಉತ್ತರದಲ್ಲಿ ನೇಪಾಳದಿಂದ ಆಫ್ಘಾನಿಸ್ಥಾನ ದವರೆಗೂ ದಕ್ಷಿಣದಲ್ಲಿ ಕರ್ನಾಟಕದ ಚಿತ್ರದುರ್ಗದಲ್ಲೂ,ಪಶ್ಚಿಮದಲ್ಲಿ ಗುಜರಾತಿ ನಿಂದ ಬಿಹಾರದವರೆಗು,ಪೂರ್ವದಲ್ಲಿ ಒರಿಸ್ಸಾದಿಂದ ಬಂಗಾಳದವರೆಗೂ ಕಂಡು ಬರುತ್ತದೆ. ಈ ಶಾಸನಗಳು ಬ್ರಾಹ್ಮೀ, ಖರೋಷ್ಟಿ, ಗ್ರೀಕ್ ಮತ್ತು ಅರಾಬಿಕ್ ಲಿಪಿಯಲ್ಲಿವೆ. ಬ್ರಾಹ್ಮೀ ಮತ್ತು ಖರೋಷ್ಠಿ ಲಿಪಿಗಳನ್ನು ಪ್ರಾಕೃತ ಭಾಷೆಯಲ್ಲಿ ಕಂಡರಿಸಲಾಗಿದೆ. ಗ್ರೀಕ್ ಮತ್ತು ಅರಾಬಿಕ್ ಲಿಪಿಗಳನ್ನು ಆಯಾ ಭಾಷೆಯಲ್ಲಿಯೇ ಕಂಡರಿಸಲಾಗಿದೆ. ಈ ಎಲ್ಲಾ ಲಿಪಿಗಳ ವರ್ಣಮಾಲೆಗಳು ಪೂರ್ಣವಾಗಿ  ವೃದ್ಧಿಹೊಂದಿದೆ. ತಮಿಳು ನಾಡಿನ ಗುಹೆಗಳಲ್ಲಿ ಬ್ರಾಹ್ಮೀಲಿಪಿಯನ್ನು ಪ್ರಾಚೀನ ತಮಿಳು ಲಿಪಿಯಲ್ಲಿ ಕಂಡರಿಸಲಾಗಿದೆ. ಇದೇ ಶೈಲಿಯನ್ನು ಅಶೋಕನ ಕಾಲದ ಶ್ರೀಲಂಕಾ ಶಾಸನಗಳಲ್ಲಿಯೂ ಕಾಣಬಹುದು. ನಂತರದಲ್ಲಿ ತಮಿಳು ಆಗ್ನೇಯ ರಾಷ್ಟ್ರಗಳಾದ ಬರ್ಮಾ,ಜಾವಾ, ಸುಮಾತ್ರ, ಇಂಡೋನೇಷಿಯಾ ಮತ್ತಿತರ ಆಗ್ನೇಯ ರಾಷ್ಟ್ರಗಳವರೆಗೂ ಹಬ್ಬಿತು.
ಕ್ರಿ.ಶ ಮೂರನೆಯ ಶತಮಾನದ ನಂತರ ಶಾಸಗಳಲ್ಲಿ ಕ್ರಮೇಣ ಸಂಸ್ಕೃತವು ಪ್ರಾಕೃತ ಭಾಷೆಯ ಸ್ಥಾನವನ್ನು ಆಕ್ರಮಿಸಿಕೊಂಡಿತು. ಸಂಸ್ಕೃತವು ಶಾಸನ ಭಾಷೆಯಾಗಿ ಆಧುನಿಕ ಕಾಲದವರೆಗೂ ಮುಂದುವರೆಯಿತು. ಇಂದಿಗೂ ಸಹಾ ವಿಶೇಷ ಸಂದರ್ಭಗಳಲ್ಲಿ ಸಂಸ್ಕೃತವನ್ನು ಶಾಸನ ಭಾಷೆಯಾಗಿ ಬಳಸಲಾಗುತ್ತದೆ. ಹಾಗಿದ್ದರೂ ಸಹಾ ಕ್ರಿ.ಶ ೫ನೇ ಶತಮಾನದ ಮಧ್ಯಭಾಗದಿಂದ ಕನ್ನಡ ಭಾಷೆಯು ಶಾಸನ ಭಾಷೆಯಾಗಿ ಮುನ್ನಡೆಯನ್ನು ಸಾಸಿತು. ಕನ್ನಡದ ಅತಿಪ್ರಾಚೀನ ಶಾಸನವು ಕರ್ನಾಟಕದ ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ಕಂಡು ಬಂದಿತು. ಅಶೋಕನ ಶಾಸನಗಳ ಬ್ರಾಹ್ಮೀಲಿಪಿಯು ಕ್ರಮೇಣ ಬದಲಾವಣೆಯನ್ನು ಹೊಂದಿ ವಿವಿಧ ಲಿಪಿಗಳಿಗೆ ಜನ್ಮನೀಡಿದ ನಂತರ ಆಯಾ ಭಾಷೆಯ ಹೆಸರಿನಿಂದ ಪ್ರಸಿದ್ಧವಾಯಿತು. ಎಂದು ತಿಳಿಯಲು ಸ್ವಾರಸ್ಯವಾಗಿದೆ, ಈ ಮಾತೃಲಿಪಿಯಿಂದ ಸಂಸ್ಕೃತ ಮತ್ತು
ದ್ರಾವಿಡ ಭಾಷೆಗಳಿಗೆ ವಿವಿಧ ಲಿಪಿಗಳನ್ನು ಬಳಸಿ ಅವುಗಳನ್ನು ಪಡೆಯಲಾಯಿತು. ಆ ಲಿಪಿಗಳು ಪಂಜಾಬಿ, ಗುಜರಾತಿ, ನೇವಾರಿ, ಒರಿಯಾ, ಬಂಗಾಲಿ, ದೇವನಾಗರಿ ಹಾಗು ಕನ್ನಡ, ತಮಿಳು, ತೆಲುಗು, ಮಲಯಾಳಂ ಸಂಸ್ಕೃತ ಹಾಗು ದ್ರಾವಿಡ ಭಾಷೆ ಗಳಿಗೆ ಬಳಸಿದ ಇತರ ಲಿಪಿಗಳು ಮತ್ತೊಂದು ಕಡೆ ಬ್ರಾಹ್ಮಿಯ ಮೂಲಕ್ಕೆ ಋಣಿಯಾಗಿದೆ. ಕ್ರಿ.ಶ ೫೬ ನೆಯ ಶತಮಾನದಲ್ಲಿ ಅಸ್ಥಿತ್ವಕ್ಕೆ ಬಂದ ಗ್ರಂಥಲಿಪಿ ಮತ್ತು ವಟ್ಟೆಳುತ್ತು ಎಂಬ ಪ್ರಮಾಣಪೂರ್ಣವಾದ ಲಿಪಿಯು ಕೆಲವು ತಮಿಳು ಶಾಸನಗಳಲ್ಲಿ ಬಳಸಲ್ಪಟಿದ್ದು ತಮ್ಮ ಮೂಲವನ್ನು ಬ್ರಾಹ್ಮಿಗೇ ಒಯ್ಯುತ್ತದೆ.
ಕ್ರಿ. ಪೂ. ೩ ನೆಯ ಶತಮಾನದಿಂದ ಕ್ರಿ.ಶ. ೧೨ ನೆಯ ಶತಮಾನದವರೆಗೆ ಕರ್ನಾಟಕದ ಬ್ರಾಹ್ಮೀಲಿಪಿಯು ಸ್ಪಷ್ಟವಾದ ಬದಲಾವಣೆಗಳನ್ನು ಹೊಂದಿ ಅನಂತರದ ಶತಮಾನಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಹೊಂದಿತು. ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ತಲಕಾಡಿನ ಗಂಗರು, ರಾಷ್ಟ್ರಕೂಟರು, ಕಲ್ಯಾಣಿಚಾಲುಕ್ಯರು, ಕಲಚೂರಿಗಳು, ಸೇವುಣರು ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಒಡೆಯರು ಮತ್ತಿತರ ಸಾಮಂತ ರಾಜವಂಶಗಳು ಬ್ರಾಹ್ಮೀಲಿಪಿಯಲ್ಲಿ ಸ್ಪಷ್ಟವಾದ ಬದಲಾವಣೆಯ ಚಿನ್ಹೆಗಳನ್ನು ಕ್ರಿ.ಶ ೫ ನೆಯ ಶತಮಾನದ ನಂತರ ಕಂಡವು. ಕ್ರಿ.ಶ ೫ ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದ ದಕ್ಷಿಣ ಭಾರತದ   ಬ್ರಾಹ್ಮಿಯು ೧೦೦೦ ವರ್ಷಗಳಲ್ಲಿ  ಸ್ಪಷ್ಟವಾದ ಬದಲಾವಣೆಗಳನ್ನು ಹೊಂದಿ ಮುದ್ರಣ ತಂತ್ರಜ್ಞಾನವು ಅಸ್ತಿತ್ವಕ್ಕೆ ಬಂದ ನಂತರ ಸ್ಥಿರರೂಪವನ್ನು ಪಡೆಯಿತು. ಕನ್ನಡ ಮತ್ತು ತೆಲುಗು ಶಾಸನಗಳು ಒಂದೇ ರೀತಿಯ ಲಿಪಿಯನ್ನು ಬಳಸುತ್ತಿದ್ದುದರಿಂದ  ತಮ್ಮ ಮೂಲವನ್ನು ಮಾತೃಲಿಪಿಯಾದ ಬ್ರಾಹ್ಮೀಗೆ ಒಯ್ದು ಋಣಿಯಾಗಿದೆ. ಆದ್ದರಿಂದ ಕನ್ನಡತೆಲುಗು ಅಥವಾ ತೆಲುಗುಕನ್ನಡ ಲಿಪಿ ಎಂದು ಕ್ರಿ.ಶ ೧೫ ನೆಯ ಶತಮಾನದಲ್ಲಿ ಕರೆಯಲಾಯಿತು. ಇಂದಿಗೂ ಸಹಾ ಇವೆರಡೂ ಲಿಪಿಯಲ್ಲೂ ಕೆಲವು ಅಕ್ಷರಗಳ ಹೊರತು, ಉಳಿದೆಲ್ಲಾ ಅಕ್ಷರಗಳು ಸಮನಾಗಿವೆ. ಕನ್ನಡ ಅಥವಾ ತೆಲುಗು ಮಾತನಾಡುವ ಕ್ಷೇತ್ರದಿಂದ ಬಂದ ವ್ಯಕ್ತಿಯು ಬೇರೆ ಕ್ಷೇತ್ರದಲ್ಲಿ ಜಾರಿಯಲ್ಲಿರುವ ಲಿಪಿಯನ್ನು ಸುಲಭವಾಗಿ ಓದಬಹುದು. ಒಂದು ಶತಮಾನದಲ್ಲಿ ಶಶೈಲಿಯ ಅತ್ಯಲ್ಪ ವ್ಯತ್ಯಾಸದೊಂದಿಗೆ ಪ್ರಾದೇಶಿಕ ಬಿನ್ನತೆಯಿಂದ ಕೂಡಿದ ಲಿಪಿಗಳಾದವು. ಲಿಪಿಗಳು ನಗರವೈವಿಧ್ಯ ಗ್ರಾಮೀಣ ವೈವಿಧ್ಯದಿಂದ ಕೂಡಿದ್ದು ಅಕ್ಷರಗಳು ಪ್ರಾಚೀನಲಿಪಿಶಾಸ್ತ್ರದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತಿದ್ದರೂ ಸಹಾ ಅವಸರದಲ್ಲಿ ಅಥವಾ ಅಲಕ್ಷ್ಯದಿಂದ ಬರೆದಂತಿರುತ್ತದೆ. ಉದಾಹರಣೆಗೆ ಹಲ್ಮಿಡಿ ಶಾಸನದಲ್ಲಿ ಬಳಸಿರುವ ಕನ್ನಡ ಲಿಪಿಯಲ್ಲಿ ಅಲಂದಿನ ಕಾಲದ ಇದೇ ವಂಶಸ್ಥರ ಇತರ ಶಾಸನಗಳ ಲಿಪಿಗಳಲ್ಲಿ ಕಂಡುಬರುವ ಚೌಕತಲೆಯು ಕಂಡುಬರುವುದಿಲ್ಲ.
ಕಾಕುತ್ಸವರ್ಮನ ಕಾಲದ ಶಿವಮೊಗ್ಗ ಜಿಲ್ಲೆಯ ತಾಳಗುಂದ ಶಾಸನ, ಉತ್ತರ ಕರ್ನಾಟಕದ ಬನವಾಸಿಯ ಮೃಗೇಶವರ್ಮನ ಶಾಸನಗಳು ಕನ್ನಡ ಲಿಪಿಯ ಉತ್ತಮ ಉದಾಹರಣೆಗಳಾಗಿವೆ. ತಾಮ್ರಪತ್ರಗಳಲ್ಲಿ ಕಂಡುಬರುವ ಲಿಪಿಗಳಲ್ಲಿ ಬಿನ್ನ ಶೈಲಿಯ ಲಿಪಿಗಳಿರುತ್ತವೆ. ಒರಟು ಕಲ್ಲಿನ ಮೇಲೆ ಕಂಡರಿಸಿರುವ ಅಕ್ಷರಗಳಲ್ಲಿ ಕಲ್ಲು ಒರಟಾದ್ದರಿಂದ ಅದೇ ಬಿನ್ನತೆಯನ್ನು ಹೊಂದಿರುತ್ತದೆ. ಕ್ರಿ.ಶ ೧೧೧೨ ನೆಯ ಶತಮಾನದ ಹೊಯ್ಸಳ ಲಿಪಿಯು ಅತ್ಯಂತ ಅಲಂಕಾರಿಕವಾಗಿದ್ದು ಕೆಲವು ಲಿಪಿಗಳು ಪ್ರಾಣಿ, ಪಕ್ಷಿಗಳ ಇತ್ಯಾದಿ ಚಿತ್ರಗಳನ್ನು ನೆನಪಿಸುತ್ತವೆ. ಕ್ರಿ.ಶ ೯ ರಿಂದ ೧೨ ನೆಯ ಶತಮಾನದ ಕನ್ನಡ ಲಿಪಿಗಳಾದ ವ’  ಮ’ ಮತ್ತ್ಙುಯ’ ಅಕ್ಷರಗಳು ರೂಪಾಂತರಗೊಂಡಿವೆ. ಹಸ್ತಪ್ರತಿಗಳಲ್ಲಿ ಬಳಸಿರುವ ಲಿಪಿಗಳು ಶಾಸನಗಲ್ಲಿ ಕಂಡುಬರುವಂತೆ ಒಂದೇ ರೀತಿಯ ಬೆಳವಣಿಗೆಯನ್ನು ತೋರಿದರೂ ಸಹಾ ಅನೇಕ ಸಂದರ್ಭಗಳಲ್ಲಿ ತಮ್ಮದೇ ಆದ ಬಿನ್ನಶೈಲಿಯನ್ನು ಹೊಂದಿರುತ್ತವೆ.
ವಿವಿಧ ಶತಮಾನಗಳಿಗೆ ಸಂಬಂಸಿದ ಕರ್ನಾಟಕದ ಶಾಸನಗಳನ್ನು ನಾವೀಗ ಅವಲೋಕಿಸಬಹುದು. ಕ್ರಿ.ಪೂ ೩ ನೆಯ ಶತಮಾನದಿಂದ ಕ್ರಿ.ಶ ೩ ನೆಯ ಶತಮಾನದವರೆಗೆ ಕರ್ನಾಟಕದಲ್ಲಿ ಶಾಸನಗಳು ಪ್ರಾಕೃತ ಭಾಷೆಯಲ್ಲಿತ್ತು. ಅತಿ ಶೀಘ್ರದಲ್ಲಿಯೇ ಕ್ರಿ.ಶ ೪ ನೆಯ ಶತಮಾನದಲ್ಲಿ ಸಂಸ್ಕೃತವು ಮುನ್ನಡೆಯನ್ನು ಸಾಸಿತು. ಕ್ರಿ.ಶ ೫ನೆಯ ಶತಮಾನದ ನಂತರವೂ ಸಂಸ್ಕೃತದ ಬಳಕೆಯು ಆಧುನಿಕ ಕಾಲದವರೆಗೂ ಮುಂದುವರೆದು, ಇಂದಿಗೂ ಸಹಾ ಶಾಸನ ಭಾಷೆಯಾಗಿ ಬಳಸಲ್ಪಡುತ್ತಿದೆ. ಕ್ರಮೇಣ ಕನ್ನಡವು ಅತ್ಯಂತ ಪ್ರಸಿದ್ಧಿ ಹಾಗೂ ಪ್ರಾಮುಖ್ಯತೆಯನ್ನು ಪಡೆಯಿತು. ಹೀಗಿದ್ದರೂ ಸಹಾ ಕರ್ನಾಟಕವು ತಮಿಳುನಾಡು, ಕೇರಳ, ಆಂದ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಆವೃತವಾಗಿರುವುದರಿಂದ, ಹಾಗೂ ಚೋಳರು, ಕರ್ನಾಟಕದ ಗಡಿಭಾಗದಲ್ಲಿನ ಮುಸ್ಲಿಮರು ಮತ್ತು ಮರಾಠರನ್ನು ಒಳಗೊಂಡಂತೆ ಹಲವಾರು ರಾಜಮನೆತನಗಳು ಆಳಿರುವುದರಿಂದ ತಮಿಳು, ತೆಲುಗು, ಮರಾಠಿ, ಅರಾಬಿ, ಪರ್ಷಿಯನ್, ಇಂಗ್ಲಿಷ್, ಮಲಯಾಳಂ, ಇತ್ಯಾದಿ ಭಾಷೆಗಳ ಶಾಸನಗಳು ನಮಗೆ ದೊರೆಯುತ್ತವೆ. ಕನ್ನಡ ಮತ್ತು ಸಂಸ್ಕೃತ ಶಾಸನಗಳು ಕ್ರಿ. ಶ ೪೫ ನೆಯ ಶತಮಾನಗಳ ನಂತರವೂ ಪ್ರಧಾನವಾಗಿದ್ದರೂ ಸಹಾ ವಿಶೇಷ ಸಂದರ್ಭಗಳಲ್ಲಿ ವಿಶೇಷವಾಗಿ ಗಡಿಭಾಗಗಳಲ್ಲಿರುವ ಶಾಸನಗಳಲ್ಲಿ ಮೇಲ್ಕಂಡ ಕಾರಣಗಳಿಂದಾಗಿ ಒಂದಕ್ಕಿಂತ ಹೆಚ್ಚಿನ ಲಿಪಿ ಹಾಗೂ ಭಾಷೆಯಲ್ಲಿ ಇರುತ್ತದೆ.
ಶಾಸನಗಳನ್ನು ವಿಶಾಲಾರ್ಥದಲ್ಲಿ ಶಿಲಾಶಾಸನಗಳು ಮತ್ತು ತಾಮ್ರ ಶಾಸನಗಳೆಂದು ವಿಭಜಿಸಬಹುದು. ಶಿಲಾಶಾಸನಗಳು ಬಂಡೆಗಳು, ಶಿಲಾಫಲಕಗಳು, ದೇವಾಲಯದ ಗೋಡೆಗಳು, ಕಂಭಗಳು ಹಾಗೂ ಹಲವಾರು ಕಡೆಗಳಲ್ಲಿ ಕಡೆದಿರುವ ಶಾಸನಗಳನ್ನು ಒಳಗೊಂಡಿರುತ್ತವೆ. ವೀರಗಲ್ಲು ಶಾಸನಗಳು ಹಾಗೂ ಸ್ಮಾರಕ ಶಾಸನಗಳೂ ಇವೆ. ವೀರಗಲ್ಲಿನ ಶಾಸನಗಳನ್ನು ಶಿಲ್ಪಗಳ ಹಂತ ಹಂತದ ಮಧ್ಯದಲ್ಲಿರುವ ಶಿಲಾಪಟ್ಟಿಕೆಗಳ ಮೇಲೆ ಕೆತ್ತಲ್ಪಟ್ಟಿರುತ್ತವೆ. ಈ ಹಂತಗಳು ಮೂರರಿಂದ ಐದು ಅಥವಾ ಕೆಲವು ಸಂದರ್ಭಗಳಲ್ಲಿ ಇನ್ನೂ ಹೆಚ್ಚಾಗಿರುತ್ತದೆ. ಸತಿ’ ಅಥವಾ ಮಹಾಸತಿ’ ಕಲ್ಲಿನ ಶಾಸನಗಳು ರಣರಂಗದಲ್ಲಿ ತಮ್ಮ ಪತಿಯ ಮರಣಾನಂತರ ಸತಿ’ಯಾದ ವೀರರ ಪತ್ನಿಯರ ಸ್ಮರಣಾರ್ಥಕವಾಗಿರುತ್ತದೆ.  ಕೆಲವು ಶಾಸನಗಳು  ರಣರಂಗದಲ್ಲಿ ವೀರರೊಂದಿಗೆ  ಹೋರಾಡಿ  ಮಡಿದ  ಪ್ರಾಣಿಗಳಾದ  ಆನೆ, ನಾಯಿಗಳ ಸ್ಮರಣಾರ್ಥಕವಾಗಿದ್ದು ವೀರನ ಪಕ್ಕದ್ದಲ್ಲಿ  ಕೆತ್ತಲ್ಪಟ್ಟಿರುತ್ತದೆ. ಇತರ ಸ್ಮಾರಕಶಿಲೆಗಳಾದ ನಿಷಿಗಲ್ಲುಗಳಲ್ಲಿ, ಸಲ್ಲೇಖನವ್ರತದಿಂದ ದೇಹತ್ಯಾಗ ಮಾಡಿದ ಜೈನ ಸನ್ಯಾಸಿಗಳ ಉಲ್ಲೇಖವಿರುತ್ತದೆ. ಶತಮಾನದ  ಆದಿಯಿಂದಲೂ ಇಂತಹ ಸ್ಮಾರಕ ಶಿಲೆಗಳು ದೊರೆಯುತ್ತವೆ.
ಶಿಲ್ಪವಿರುವ ವೀರಗಲ್ಲುಗಳಲ್ಲಿ ಯುದ್ಧ ಹಾಗೂ ಗೋಹರಣ ಸಂದರ್ಭಗಳಲ್ಲಿ ಹೋರಾಡುತ್ತಿರುವ ವೀರನ ಶಿಲ್ಪ ಮತ್ತು ವೀರರನ್ನು ಸ್ವರ್ಗದ ಸುರಾಂಗನೆಯರು ಪುಷ್ಪಕ ವಿಮಾನದಲ್ಲಿ ಕೊಂಡೊಯ್ಯುವ ಶಿಲ್ಪ ಮತ್ತು ಮೇಲಿನ ಹಂತದಲ್ಲಿ ವೀರನು ತನ್ನ ಜೀವಿತಾವಯಲ್ಲಿ ಪೂಜಿಸುತ್ತಿದ್ದ ದೈವ ಅಥವಾ ವೀರರನ್ನೇ ಸ್ವರ್ಗದಲ್ಲಿರುವವರು ಪೂಜಿಸುತ್ತಿರುವ ಶಿಲ್ಪವನ್ನು ಕೆಳಭಾಗದಿಂದ ಮೇಲ್ಭಾಗದವರೆಗೆ ಹಂತ ಹಂತವಾಗಿ ಕೆತ್ತಿರುತ್ತಾರೆ. ಶಿಲ್ಪಗಳ ಹಂತ ಹಂತಗಳ ಮಧ್ಯಭಾಗದಲ್ಲಿರುವ ಶಿಲಾಪಟ್ಟಿಕೆಗಳಲ್ಲಿ ಕಂಡರಿಸಿರುವ ಶಾಸನಗಳಲ್ಲಿ ಯುದ್ಧದ ವಿವರ ಹಾಗೂ ವೀರನ ವಿವರಗಳು, ಯುದ್ಧದಲ್ಲಿ ವೀರನ ಮರಣಾನಂತರ ಅವನ ಕುಟುಂಬದವರಿಗೆ ನೀಡಿದ ದಾನಗಳ ವಿವರಗಳಿದ್ದು ಮೇಲಿನಿಂದ ಕೆಳಭಾಗದವೆರೆಗೆ ಕೆತ್ತಿರುತ್ತಾರೆ. ಅನೇಕ ಶಾಸನಗಳಲ್ಲಿ ಅಲಂದಿನ ಕಾಲದಲ್ಲಿ ರಾಜ್ಯವಾಳುತ್ತಿದ್ದ ರಾಜನ ಹೆಸರು ಹಾಗೂ ಕಾಲದ ನಿರೂಪಣೆಯಿರುತ್ತದೆ. ತಾಮ್ರಪತ್ರಗಳನ್ನು ರಾಜವಂಶದವರು ಹಾಗೂ ಇತರ ಸಂಸ್ಥೆಗಳು ನೀಡಿರುತ್ತವೆ.
ಅಂದವಾಗಿ ಸಜ್ಜುಗೊಳಿಸಿದ ಒಂದು ಅಥವಾ ಹೆಚ್ಚಿನ ತಾಮ್ರಪತ್ರಗಳ ಮೇಲೆ ಶಾಸನವನ್ನು ಕಂಡರಿಸಿದ ಕ್ರಮಸಂಖ್ಯೆಯನ್ನು ನೀಡಲಾಗಿರುತ್ತದೆ. ಒಂದಕ್ಕಿಂತ ಹೆಚ್ಚು ತಾಮ್ರಪತ್ರಗಳಿದ್ದಲ್ಲಿ ಮೇಲಿನ ಮಧ್ಯಭಾಗದಲ್ಲಿ ರಂಧ್ರವನ್ನು ಮಾಡಿ, ಎಲ್ಲ ತಾಮ್ರ ಪತ್ರಗಳನ್ನು ಒಂದು ಉಂಗುರದಿಂದ ಸೇರಿಸಿ ಉಂಗುರದ ಮೇಲೆ ರಾಜಮುದ್ರೆಯನ್ನು ಹೊಂದಿದ್ದು, ತಾಮ್ರಪತ್ರದಲ್ಲಿ ದಾಖಲಿಸಿರುವ ದಾನವನ್ನು ನೀಡಿದ ರಾಜ ಅಥವಾ ಚಕ್ರವರ್ತಿಯ ಹೆಸರಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ಶಿಲಾಶಾಸನಗಳನ್ನು ಹಾಕಿಸಿದ ಅನೇಕ ಉಲ್ಲೇಖಗಳಿವೆ. ಶಿಲಾಶಾಸನಗಳಲ್ಲಿ ಉಲ್ಲೇಖಿಸಿರುವ ದಾನಗಳು ತಾಮ್ರಪತ್ರದಲ್ಲಿಯೂ ಕಂಡುಬರುತ್ತದೆ.
ಶಿಲಾಶಾಸನಗಳಲ್ಲಿ ಬಹುಪಾಲು ದಾನದ ರೂಪದಲ್ಲಿದ್ದು, ದೇವಾಲಯದ ನಿರ್ಮಾಣವನ್ನೋ ಅಥವಾ ಇತರ ಭವನವನ್ನೋ, ಶ್ರೇಷ್ಠರಾದ ಪಿತೃಗಳ ಆತ್ಮೋನ್ನತಿಗಾಗಿ ಅಥವಾ ದೇವಾಲಯದ ದೇವರಿಗಾಗಿ, ರಾಣಿಯರು ಅಥವಾ ದಂಡ ನಾಯಕರು ಅಥವಾ ಸಾಧಾರಣ ವ್ಯಕ್ತಿಗಳಿಂದ ನಿರ್ಮಿತವಾದ ದೇವಾಲಯವನ್ನೋ ಅಥವಾ ಇತರ ಭವನಗಳ ನಿರ್ಮಾಣವನ್ನೋ ಉಲ್ಲೇಖಿಸಲ್ಪಟ್ಟಿರುತ್ತದೆ, ಕೆಲವು ಶಾಸನಗಳು ಎರಡು ಬಿನ್ನ ಮತಧರ್ಮಗಳ ವಿವಾದವನ್ನು ಬಗೆಹರಿಸುವುದು, ಬರಗಾಲದಲ್ಲಿ ಕೃಷಿತೆರಿಗೆಯನ್ನು ಮನ್ನಾ ಮಾಡಿರುವುದು ಅಥವಾ ಬ್ರಾಹ್ಮಣರಿಗೆ ಹಳ್ಳಿಯನ್ನು ದಾನನೀಡಿದ ವಿಷಯವನ್ನು ದಾಖಲಿಸಿರುವುದು ಇತ್ಯಾದಿ. ವಿಗ್ರಹಗಳ ಪಾದಪೀಠಗಳ ಮೇಲಿರುವ ಶಾಸನದಿಂದ ಅವುಗಳನ್ನು ಪ್ರತಿಷ್ಠಾಪಿಸಿದ ವಿವರ ಇತ್ಯಾದಿಗಳನ್ನು ಒಳಗೊಂಡಿರುವುದನ್ನು ಅನೇಕ ವಿಗ್ರಹಗಳಲ್ಲಿ ಕಾಣಬಹುದು.
ಪ್ರಾಚೀನ ಸಮಾಜದ ಅಧ್ಯಯನದಲ್ಲಿ ಶಾಸನಗಳ ಪ್ರಾಮುಖ್ಯತೆ:
ಶಾಸನಗಳು ಪ್ರಾಕೃತ, ಸಂಸ್ಕೃತ ಅಥವಾ ಪ್ರಾದೇಶಿಕ ಭಾಷೆಗಳಲ್ಲಿರಲಿ, ಪ್ರಾರಂಭದಲ್ಲಿ ಸಂಕ್ಷಿಪ್ತವಾಗಿದ್ದು, ಶತಮಾನಗಳು ಕಳೆದಂತೆ ಹೆಚ್ಚು ವಿವರಣಾತ್ಮಕವಾಗುತ್ತವೆ. ಒಟ್ಟಿನಲ್ಲಿ ಪ್ರಾಕೃತ ಶಾಸನಗಳು ನೇರ ವಿವರಣೆಯನ್ನು ನೀಡುತ್ತವೆ, ಕನ್ನಡ ಮತ್ತು ಸಂಸ್ಕೃತ ಶಾಸನಗಳು ಮಧ್ಯಯುಗದಲ್ಲಿ ಅಥವಾ ನಂತರದ ಯುಗದಲ್ಲಿ ಹೆಚ್ಚು ಹೆಚ್ಚು ವಿವರಣಾತ್ಮಕವಾಗಿರುವುದು ಕಂಡುಬರುತ್ತದೆ. ಶಾಸನದ ಪ್ರಾರಂಭದಲ್ಲಿ ದಾನಿಯ ಇಷ್ಟದೈವದ ಪ್ರಣಾಮವಿದ್ದು, ಅದು ಕೇವಲ ಕೆಲವೇ ನುಡಿಗಳಲ್ಲಿರುತ್ತದೆ. ಅವು ಓಂ ನಮಃ ಶಿವಾಯ’ ಓಂ ನಮೋ ವಿಷ್ಣುವೇ’ ಓಂ ನಮೋ ಜಿನೇಂದ್ರಾಯ’ ಅಥವಾ ಓಂ ನಮೋ ಸಿದ್ಧಾನಿ’ ಇತ್ಯಾದಿ ಕೆಲವು ಸಂದರ್ಭಗಳಲ್ಲಿ ಪ್ರಾರ್ಥನಾ ಶ್ಲೋಕಗಳು ಅಥವಾ ಆಯಾ ದೇವರುಗಳ ಸ್ತೋತ್ರರೂಪದಲ್ಲಿರುತ್ತದೆ. ಇದಾದ ನಂತರ ಆಳುವ ಚಕ್ರವರ್ತಿ ಅಥವಾ ರಾಜನ ಅವನ ರಾಣಿಯರ, ದಂಡನಾಯಕರ, ಸ್ಥಳೀಯ ಅಕಾರಿಗಳ ವಂಶವಿವರಣೆ ಅಥವಾ ಕುಟುಂಬದ ಸಾಧನೆ ಇತ್ಯಾದಿಗಳನ್ನು ಉಲ್ಲೇಖಿಸಲಾಗುತ್ತದೆ. ಇದಾದ ನಂತರ ಶಾಸನದ ಮುಖ್ಯೋದ್ದೇಶವಾದ ದೇವಾಲಯದ ನಿರ್ಮಾಣ, ದಾನದ ವಿವರ ಇತ್ಯಾದಿಗಳಿರುತ್ತವೆ. ಸಾಮಾನ್ಯವಾಗಿ ದೇವರ ನಿತ್ಯಪೂಜೆ, ಉತ್ಸವ, ದೇವಾಲಯದಲ್ಲಿ ಪ್ರತಿಷ್ಟಾಪಿಸಿರುವ ಅನ ದೇವತೆಗಳ ವಿವರಗಳನ್ನು ಒಳಗೊಂಡಿರುತ್ತದೆ. ದೇವಾಲಯಕ್ಕೆ ಹೊಂದಿಕೊಂಡಂತಿರುವ ಪಾಠಶಾಲೆ ಅಥವಾ ಘಟಿಕಾಚಲದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಮೇಲ್ವಿಚಾರಣೆ, ದಾನಿ ಹಾಗೂ ಅವನ ಕುಟುಂಬವರ್ಗ, ಇತರ ದೇವಾಲಯದ ಪರಿಚಾರಕರು ಇತ್ಯಾದಿ ವಿವರಗಳಿರುತ್ತದೆ. ಬಹುಪಾಲು ದಾನಗಳು ಖುಷ್ಕಿ ಹಾಗೂ ನೀರಾವರಿ ಹೊಲದ ರೂಪದಲ್ಲಿರುತ್ತದೆ. ಕೆಲವು ದಾನಗಳು ಎಣ್ಣೆಯ ಗಾಣ, ನಿರಂತರ ದೀಪದ ಸೇವೆ, ಗೋವು ಇತ್ಯಾದಿಗಳಾಗಿರುತ್ತವೆ. ಗೋವುಗಳು ದೇವಾಲಯಕ್ಕೆ ಅವಶ್ಯಕವಾದ ಹಾಲು ತುಪ್ಪಗಳನ್ನು ಪೂರೈಸುತ್ತವೆ. ದಾನಗಳು ಹಣದ ರೂಪದಲ್ಲಿ, ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಪಾತ್ರೆಗಳು, ಜಾಗಟೆ, ಗಂಟೆ ಮತ್ತಿತರ ದೇವಾಲಯಕ್ಕೆ ಅಗತ್ಯವಾದ ವಸ್ತುಗಳಾಗಿರುತ್ತವೆ. ಇವುಗಳನ್ನು ಶಶಾಸನದಲ್ಲಿ ಉಲ್ಲೇಖಿಸಲ್ಪಟ್ಟಿರುತ್ತದೆ.
ಕಾಲವನ್ನು ತಿಳಿಸುವ ಭಾಗದಲ್ಲಿ ಶಕವರ್ಷ ಅಥವಾ ಕಲಿಯುಗ ವರ್ಷ, ಕಾಲಚಕ್ರದ ವರ್ಷ, ತಿಥಿ, ದಿನ, ಮತ್ತಿತರ ವಿಶೇಷ ಸಂದರ್ಭಗಳಾದ ಸೂರ್ಯ ಮತ್ತು ಚಂದ್ರಗ್ರಹಣ ಇವೆಲ್ಲವೂ ದಾನನೀಡಲು ಪ್ರಶಸ್ತವಾದ ಸಂದರ್ಭಗಳಾಗಿವೆ. ಮುಕ್ತಾಯದ ಹಂತದಲ್ಲಿ ಶಾಪವಾಕ್ಯಗಳು ಅಥವಾ ದೇವಾಲಕ್ಕೆ ನೀಡಿರುವ ದಾನವನ್ನು ಸಂರಕ್ಷಿಸಬೇಕೆಂಬ ಸಲಹೆ ಹಾಗೂ ಸಂರಕ್ಷಿಸದವರಿಗೆ ಶಾಪವಿರುತ್ತದೆ. ಸಾಮಾನ್ಯವಾಗಿ ಶಾಪವಾಕ್ಯಗಳನ್ನು ವ್ಯಾಸ, ಮನು ಇತ್ಯಾದಿಗಳಿಂದ ಆಯ್ದು ಕಂಡರಿಸಲಾಗಿದೆ. ದಾನವನ್ನು ಸಂರಕ್ಷಿಸುವವನಿಗೆ ಶ್ರೇಷ್ಠತೆಯನ್ನೂ, ದಾನವನ್ನು ಕಳವು ಮಾಡುವವನು ಅಥವಾ ಹಾಳು ಮಾಡುವವನಿಗೆ ಪಾಪ ಬೀತಿಯನ್ನು ಒತ್ತಿ ಹೇಳಲಾಗುತ್ತದೆ. ವಿಶೇಷವಾಗಿ ಮಧ್ಯಕಾಲೀನ ಶಾಸನಗಳಲ್ಲಿ ಶಾಪವು ಒರಟು ಭಾಷೆಯಲ್ಲಿ ಮೂಡಿಬಂದಿರುತ್ತದೆ. ಇಷ್ಟೆಲ್ಲಾ ಎಚ್ಚರಿಕೆಗಳಿದ್ದರೂ ಸಹಾ ಜನರು ದಾನಗಳನ್ನು ಕಳವು ಅಥವಾ ನಾಶಪಡಿಸುತ್ತಿದ್ದರೆಂದು ಕಂಡುಬರುತ್ತದೆ.
ಕನ್ನಡ ಶಾಸನಗಳಲ್ಲಿ ಬಹುಪಾಲು ಗದ್ಯದಲ್ಲಿಯೂ, ಕೆಲವು ಪದ್ಯದಲ್ಲಿಯೂ, ಕೆಲವು ಚಂಪೂ ಶೈಲಿಯಲ್ಲಿಯೂ ಇರುತ್ತವೆ. ಸಂಸ್ಕೃತ ಶಾಸನಗಳೂ ಸಹ ಚಂಪೂ ಶೈಲಿಯಲ್ಲಿದ್ದು, ಸುಂದರಕಾವ್ಯದಂತಿರುತ್ತದೆ. ಕೆಲವು ಶಾಸನಕವಿಗಳು ಶ್ರೇಷ್ಠಮಟ್ಟದ ಕವಿಗಳಾಗಿರಬಹುದೆಂದು ಶಾಸನದ ಭಾಷೆಯ ಪ್ರೌಡಿಮೆಯಿಂದ ತಿಳಿಯಬಹುದು. ಕದಂಬರ ಕಾಲದ ಶಿವಮೊಗ್ಗ ಜಿಲ್ಲೆಯ ತಾಳಗುಂದ ಶಾಸನ, ಉತ್ತರ ಕರ್ನಾಟಕದ ಬನವಾಸಿ ಮತ್ತು ಗುಡ್ನಾಪುರ ಶಾಸನ, ಐಹೊಳೆಯ ಶಾಸನ ಮತ್ತು ಚಾಲುಕ್ಯ ಎರಡನೆಯ ಪುಲಕೇಶಿಯ ಶಾಸನ ಕನ್ನಡದ ಆದಿಕವಿ ಪಂಪನ ಉಲ್ಲೇಖವಿರುವ ಕುರಿಕ್ಯಾಲ ಶಾಸನ, ಕದಂಬರ ಕಾಲದ ಕೆಲವು ತಾಮ್ರಪತ್ರಗಳು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರ ಕಾಲದಲ್ಲಿ ಶ್ರೇಷ್ಠ ಸಾಹಿತ್ಯ ಗುಣದಿಂದ ಕೂಡಿದ ಶಾಸನಗಳ ಉದಾಹರಣೆಗಳಿವೆ.  ಸ್ಮರಣಾರ್ಹವಾದ ಮತ್ತೊಂದು ಮುಖ್ಯವಾದ ಅದಂಶವೆಂದರೆ, ಶಾಸನಗಳು ವೇದ, ಪುರಾಣಗಳಿಂದಲೂ, ಶ್ರೇಷ್ಠಕವಿಗಳಾದ ಕಾಳಿದಾಸ, ಭಾರವಿ, ಬಾಣ, ಭವಭೂತಿ, ಮೊಘ, ಶ್ರೀಹರ್ಷ ಇತ್ಯಾದಿಗಳ ಕಾವ್ಯ ನಾಟಕಗಳಿಂದಲೂ ಹಾಗೂ ಮನು, ಯಾಜ್ಞವಲ್ಕ್ಯ, ನಾರದ ಸಂಹಿತೆಗಳು ಮತ್ತು ಕೌಟಿಲ್ಯನ ಕೃತಿಗಳು, ಆಗಮಗಳು ಮತ್ತಿತರ ಪ್ರಾಚೀನ ಜ್ಯೋತಿಷ್ಯ, ವೈದ್ಯ, ತಂತ್ರಜ್ಞಾನ ಇತ್ಯಾದಿ ಕೃತಿಗಳಿಂದಲೇ ಬಹು ಪ್ರಭಾವಿತವಾಗಿರುವುದನ್ನು ಕಾಣಬಹುದು.
ಪ್ರಾಚೀನ ಹಾಗೂ ಮಧ್ಯಕಾಲೀನ ಭಾರತದ ಚರಿತ್ರೆಯನ್ನು ರಚಿಸಲು ಶಾಸನಗಳು, ನಾಣ್ಯಗಳು ಬಹುಮುಖ್ಯ ಆಧಾರಗಳಾಗಿವೆ. ಯಾವುದೇ ಪ್ರದೇಶದ ಇತಿಹಾಸ ರಚನೆಯಲ್ಲಿ ಸಮಕಾಲೀನ ದಾಖಲೆಗಳು ಪ್ರಮುಖವಾದವು. ಶಾಸನಗಳಲ್ಲಿ ದಾಖಲಿಸಿರುವ ಘಟನೆಗಳು ನಡೆದ ಸ್ಥಳ, ರಾಜಕೀಯ, ಸಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತಿತರ ವಿಚಾರಗಳ ಸ್ಪಷ್ಟ ಮಾಹಿತಿಯನ್ನು ನೀಡುತ್ತವೆ. ಕರ್ನಾಟಕವು ಇದಕ್ಕೆ ಸಾಕ್ಷಿಯಾಗಿದೆ. ಶಾಸನಗಳಿಂದ ಆಡಳಿತ ವಿಧಾನಗಳು, ಆಡಳಿತಗಾರರು ಅನುಸರಿಸುತ್ತಿದ್ದ ಆದರ್ಶ ಧ್ಯೇಯಗಳು, ಕೃಷಿಲೆಕ್ಕ, ನಾಣ್ಯಪದ್ದತಿ, ತೆರಿಗೆ ಪದ್ದತಿ, ಚಕ್ರವರ್ತಿಯು ಆಡಳಿತದಲ್ಲಿನ ಸಾಮಾನ್ಯ ಆಡಳಿತದ ವಿವರಗಳು, ಪ್ರಾಂತೀಯ, ವಿಭಾಗೀಯ, ಉಪವಿಭಾಗೀಯಗಳ ಹಳ್ಳಿಗಳು, ಅಗ್ರಹಾರಗಳು, ಸೈನ್ಯಾಡಳಿತ, ಪ್ರಾಚೀನ ನ್ಯಾಯಸಂಹಿತೆಗೆ ಅನುಗುಣವಾದ ನ್ಯಾಯ ಶಾಸ್ತ್ರದ ಅಧ್ಯಯನವನ್ನು ಮಾಡಬಹುದು. ಶಾಸನಗಳ ಕಣ್ತಪ್ಪಿಸಿದ ವಾಸ್ತವ ಘಟನೆಗಳು ಯಾವುದೂ ಇಲ್ಲವೆಂದೇ ಹೇಳಬಹುದು.
ವೀರಗಲ್ಲಿನ ಶಾಸನಗಳು ಸಾಮಾನ್ಯವಾಗಿ ಯುದ್ಧದ ವಿವರಗಳು, ತುರುಗಾಳಗ, ಆಪತ್ತಿನಲ್ಲಿರುವ ಸ್ತ್ರೀಯರ ಸಂರಕ್ಷಣೆಯಲ್ಲಿ ಅನೇಕ ವೀರರು ಭಾಗವಹಿಸಿದ ವಿವರಗಳಿರುತ್ತವೆ. ಅನೇಕ ವೀರಗಲ್ಲುಗಳು ಈ ಶ್ಲೋಕವನ್ನು ಹೊಂದಿರುತ್ತವೆ.
ಜಿತೇನ ಲಭ್ಯತೇ ಲಕ್ಷ್ಮೀಃ ಮೃತೇನಾಪಿ ಸುರಂಗನಾಃ 
ಕ್ಷಣ ವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ ||
(ಗೆಲಿದರೆ ಸಿರಿ  ಸೊಬಗು, ಮಡಿದರೆ ಸುರಕನ್ನಿಕೆ ನಿಮಿಷದಲಿ ಅಳಿವುದೀ ಕಾಯ ಕಾಳಗದಲಿ ಅಳಿವೆನೆಂಬ ಕೊರಗೇಕೆ?)
ಈ ಶ್ಲೋಕದ ಮೇಲೆ ಮಹಾಭಾರತದ ರಣರಂಗದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ನೀಡಿದ ಬೋಧನೆಯ ಪ್ರಭಾವವಿದೆ. (ನೋಡಿಭಗವದ್ಗೀತೆ ಅಧ್ಯಾಯ ೨. ಶ್ಲೋಕ ೨೫. ಹತೋವ ಪ್ರಾಪ್ಯಸೇ ಸ್ವರ್ಗಂ ಜಿತ್ವಾವಾ ಭೋಕ್ಷ್ಯಸೇ ಮಹೀಂ…)
ದಾನ ಶಾಸನಗಳು ಶಿವ, ವಿಷ್ಣು, ಜಿನ ಇತ್ಯಾದಿ ಶ್ಲೋಕಗಳನ್ನು ಹೊಂದಿದ್ದು, ಶಾಸನದ ಮೇಲ್ಭಾಗದಲ್ಲಿರುವ ಶಿಲ್ಪವು ಆಯಾ ದೈವ ಭಕ್ತಿಗೆ ಅನುಗುಣವಾಗಿರುತ್ತದೆ. ಇದು ಶಾಸನದಲ್ಲಿ ಉಕ್ತವಾಗಿರುವ ದಾನಿಯ ದೈವ ಭಕ್ತಿಯನ್ನು ತಿಳಿಯಲು ಸಹಾಯ ಮಾಡುತ್ತದೆ. ಅನೇಕ ಶಾಸನಗಳಲ್ಲಿ ರಾಜವಂಶದ ಮನೆದೇವರ ಸ್ತೋತ್ರಗಳಿರುತ್ತವೆ. ಕರ್ನಾಟದ ಶಾಸನಗಳಲ್ಲಿ ನಮೂದಿಸಿರುವ ಕಾಲಗಳಲ್ಲಿ ಸಾಧಾರಣವಾಗಿ ಶಕವರ್ಷದ ಉಲ್ಲೇಖವಿರುತ್ತದೆ. ಕೆಲವು ಶಾಸನಗಳಲ್ಲಿ ಕಲಿಶಕೆ ಅಥವಾ ಕಲಿಯುಗ ಸಂವತ್ಸರವು ಯುಷ್ಠಿರ ಶಕೆ ಎಂದೂ ಪ್ರಸಿದ್ದವಾಗಿದ್ದು, ಅದರ ಉಲ್ಲೇಖವಿರುತ್ತದೆ. ಇದು ಕ್ರಿ.ಪೂ ೩೧೦೧೦೨ ರಲ್ಲಿ ನಡೆದ ಮಹಾಭಾರತ ಯುದ್ಧದ ಕಾಲದಿಂದ ಆರಂಭವಾಗಿದೆ. ಶಕವರ್ಷವು ಕ್ರಿ.ಶ ೭೮ ರಿಂದ ಪ್ರಾರಂಭವಾಗಿ ಅನೇಕ ಶಾಸನಗಳಲ್ಲಿ ರಾಜನು ಪಟ್ಟಕ್ಕೆ ಬಂದ ಕಾಲದಿಂದ ಲೆಕ್ಕಮಾಡಿ ರಾಜ್ಯ ಸಂವತ್ಸರವೆಂಬ ಪ್ರಾದೇಶಿಕ ವರ್ಷವನ್ನು ಉಲ್ಲೇಖಿಸಿರುತ್ತದೆ. ಅವುಗಳಲ್ಲಿ ಕ್ರಿ.ಶ. ೧೦೭೫೭೬ ರಲ್ಲಿದ್ದ ಕಲ್ಯಾಣಿಚಾಲುಕ್ಯದವನಾದ ಆರನೆಯ ತ್ರಿಭುವನಮಲ್ಲ ವಿಕ್ರಮಾದಿತ್ಯನ ಹೆಸರಿನ ಪ್ರಾರಂಭವಾದ ವಿಕ್ರಮ ಸಂವತ್ಸರವು ಬಹು ಮುಖ್ಯವಾದುದು.
ಅನೇಕ ಸಂಸ್ಕೃತ ಶಾಸನಗಳು ಹಾಗೂ ಕೆಲವು ಅನ್ಯಭಾಷೆಯ ಶಾಸನಗಳಿದ್ದರೂ ಸಹಾ, ಕರ್ನಾಟಕದ ಪ್ರಾಚೀನ ಶಾಸನಗಳ ಭಾಷೆಯು ಹಲ್ಮಿಡಿ ಶಾಸನದ ಕಾಲದ ಭಾಷೆಯಾಗಿದ್ದು ಅನೇಕ ಶಾಸನಗಳು ಶ್ರೇಷ್ಠ ಸಾಹಿತ್ಯದ ಪ್ರಕಾರದಲ್ಲಿದೆ. ಸಾಹಿತ್ಯಕೃತಿಗಳಲ್ಲಿರುವ ಸಂಸ್ಕೃತ ಛಂದಸ್ಸು, ಅಲಂಕಾರ, ಶೈಲಿಗಳು ಶಾಸನಗಳ ಮೇಲೆ ಪ್ರಭಾವ ಬೀರಿದೆ. ಕನ್ನಡ ಶಾಸನಗಳಿಗೆ ಸಂಬಂಸಿದಂತೆ, ಮೊಟ್ಟಮೊದಲ ಶಾಸನವಾದ ಕ್ರಿ.ಶ  ೫ನೇ ಶತಮಾನದ ಶಾಸನದಲ್ಲಿಯೇ ಉನ್ನತ ಮಟ್ಟದ ಸಂಸ್ಕೃತದ ಪ್ರಭಾವವನ್ನು ಬಿಂಬಿಸುತ್ತದೆ. ಹಲ್ಮಿಡಿ ಶಾಸನವೇ ಸಂಸ್ಕೃತ ಶ್ಲೋಕದಿಂದ ಪ್ರಾರಂಭವಾಗಿದೆ. ಹೀಗಿದ್ದರೂ ಸಹಾ ಕನ್ನಡ ಭಾಷೆ ಮತ್ತು ವ್ಯಾಕರಣವು ಪ್ರಾರಂಭವಾಗಿದೆ. ಹೀಗಿದ್ದರೂ ಸಹಾ ಕನ್ನಡಭಾಷೆ ಮತ್ತು ವ್ಯಾಕರಣವು ಕ್ರಮೇಣ ಗಮನಾರ್ಹ ಬದಲಾವಣೆಯನ್ನು ಹೊಂದಿತು.
ಕ್ರಿ.ಶ ೫ ರಿಂದ ೮ ನೇಯ ಶತಮಾನದ ಶಾಸನಗಳಲ್ಲಿನ ವ್ಯಾಕರಣದ ಪ್ರಯೋಗಗಳು ತಮಿಳು ರೂಪಗಳಂತೆ ಇದ್ದವು. (ಉದಾ: ಕೊಟ್ಟಾನ್, ವಿಟ್ಟಾನ್ ಇತ್ಯಾದಿ.) ಇವು ಮೂಲದ್ರಾವಿಡ ಸ್ಥಿತಿಯನ್ನು ಸೂಚಿಸುತ್ತದೆ. ಅನಂತರದ ಶತಮಾನಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಹೊಂದಿ, ಅದಂತಿಮವಾಗಿ ಕ್ರಿ.ಶ. ೫ ನೆಯ ಶತಮಾನದ ಆಧುನಿಕ ಶೈಲಿಯನ್ನು ತಲುಪಿತು. ಅನಂತರ ಕನ್ನಡಲಿಪಿಯಲ್ಲಿ ಕೇವಲ ಕೆಲವು ಬದಲಾವಣೆಗಳನ್ನು ಗಮನಿಸಬಹುದು. ಜಿಹ್ವಾಮೂಲೀಯ, ಉಪಧ್ಮಾನೀಯ, ಪದಾಂತ್ಯದ ಅನುನಾಸಿಕಗಳು ತ್ಯಜಿಸಲ್ಪಟ್ಟುವು. ರ, ಳಗಳ ಸಾಮಾನ್ಯ ರೂಪವನ್ನು ಉಳಿಸಿಕೊಳ್ಳಲಾಯಿತು. ಕನ್ನಡ ಭಾಷೆಯು ಕ್ರಿ.ಶ ೫ ರಿಂದ ೨೦ ನೆಯ ಶತಮಾನದವರೆಗೂ ಸ್ಪಷ್ಟವಾದ ಬದಲಾವಣೆಗಳನ್ನು ಹೊಂದಿದ್ದು, ಅದರ ಪ್ರಕ್ರಿಯೆ ಇನ್ನೂ ಮುಂದುವರೆಯುತ್ತಿದೆ.
ಅದಂತಿಮವಾಗಿ ಪ್ರಾಚೀನ ಹಾಗು ಮಧ್ಯಕಾಲೀನ ಕರ್ನಾಟಕವನ್ನು ಒಳಗೊಂಡಂತೆ ಭಾರತದ ಚರಿತ್ರೆಯನ್ನು ಪುನರ್ರ‍ಚಿಸಲು ವಿಶಶೇಷವಾಗಿ ಶಶಾಸನಗಳು ಮುಖ್ಯವಾದ ಆಕರಗಳಾಗಿವೆ. ಕ್ರಿ.ಶ ೧೮೩೭೩೮ ರಲ್ಲಿ ಜೇಮ್ಸ್‌ಪ್ರಿನ್ಸೆಪ್ ಅವರ ಬ್ರಾಹ್ಮಿಯ ರೂಪನಿಷ್ಪತ್ತಿಯು ಶಾಸನಾಧ್ಯಯನಕ್ಕೆ ಹೊಸ ಕ್ಷಿತಿಜವನ್ನು ನೀಡಿತು. ಕನ್ನಡ ಶಾಸನಗಳು ಅಪರಿಮಿತವಾದ ಅತಿಮುಖ್ಯವಾದ ಮೂಲಸಾಮಗ್ರಿಯನ್ನು ಹೊಂದಿದ್ದು ಕರ್ನಾಟಕದ ಇತಿಹಾಸದ ಪುನರ್ರ‍ಚನೆ ಅಷ್ಟೇ ಅಲ್ಲದೆ ಸಮಸ್ತ ಭವ್ಯಭಾರತದ ಇತಿಹಾಸ ರಚನೆಗೂ ಆಕರವಾಗಿದೆ.
ಚಿತ್ರಗಳು
೧. ಭಾರತದ ಪ್ರೌಡ ಇತಿಹಾಸ ಮೂಲ: ಮುಜುಂದಾರ್, ಅನುವಾದ: ಎನ್.ಎಸ್.ಶಶಾರದಾಪ್ರಸಾದ್.
೨. ಕನ್ನಡ ಲಿಪಿಯ ಉಗಮ ಮತ್ತು ವಿಕಾಸ ಡಾ|| ಎ.ವಿ.ನರಸಿಂಹಮೂರ್ತಿ.
೩. ಮಣಿಹ ಸಂ. ಪ್ರೊ.ಎಂ.ವಿ.ಸೀತಾರಾಮಯ್ಯ ಮತ್ತು ಡಾ|| ಆರ್.ಶ ಶೇಷಶಶಾಸ್ತ್ರಿ (ಪ್ರಧಾನ ಸಂ. ಡಾ|| ಸಿದ್ಧಯ್ಯ ಪುರಾಣಿಕ).
೪. ಕರ್ನಾಟಕದ ವೀರಗಲ್ಲುಗಳು ಡಾ|| ಆರ್. ಶೇಷಶಶಾಸ್ತ್ರಿ.
೫. ತರಂಗ ವಾರಪತ್ರಿಕೆ (ದಿ. ೭೧೧೨೦೦೨.)

ಕೃಪೆ : http://kanaja.in/archives/10231

Nov 1, 2013

ಬ್ರಹ್ಮಗಿರಿ

 ಬ್ರಹ್ಮಗಿರಿಯೆಂಬ ಸ್ಥಳದ ಪ್ರಾಮುಖ್ಯಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಅದು ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ, ಮೊಳಕಾಲ್ಮೂರು ತಾಲ್ಲೂಕಿನ ಸಿದ್ದಾಪುರದ ಸಮೀಪದಲ್ಲಿ ಇದೆ. ಸಿದ್ದಾಪುರವೂ ಈ ಪ್ರದೇಶದ ಪುರಾತತ್ವ ಶೋಧನೆಯಲ್ಲಿ ಬಹಳ ಮುಖ್ಯವಾದ ತಾಣ. 1891 ರಷ್ಟು ಹಿಂದೆಯೇ, ಬ್ರಹ್ಮಗಿರಿಯಲ್ಲಿ, ಕ್ರಿ.ಪೂ. 250 ಕ್ಕೆ ಸೇರಿದ ಎರಡು ಅಪ್ರಧಾನ(ಮೈನರ್) ಬಂಡೆ ಶಾಸನಗಳನ್ನು ಶೋಧಿಸಲಾಯಿತು. ಅವು ಅಶೋಕ ಚಕ್ರವರ್ತಿಯ ಶಾಸನಗಳು. ಈ ಸಂಶೋಧನೆಯನ್ನು ಮಾಡಿದವರು ಬಿ.ಎಲ್ ರೈಸ್ ಅವರು. ಮೌರ್ಯ ಸಾಮ್ರಾಜ್ಯದ ದಕ್ಷಿಣ ಗಡಿಗಳನ್ನು ಗುರುತಿಸುವ ಕೆಲಸದಲ್ಲಿ ಈ ಸಂಶೋಧನೆಯಿಂದ ಬಹಳ ಸಹಾಯವಾಯಿತು. ಈ ಶಾಸನಗಳು, ಕನ್ನಡ ಭಾಷೆಯ ಪ್ರಾಚೀನತೆಯನ್ನು ತೀರ್ಮಾನಿಸುವುದರಲ್ಲಿಯೂ ಮುಖ್ಯವಾದ ಪಾತ್ರವನ್ನು ವಹಿಸಿದವು. ಏಕೆಂದರೆ, ಈ ಶಾಸನದಲ್ಲಿ ಬರುವ ‘ಇಸಿಲ’ ಎಂಬ ಪದವು, ದಿನಾಂಕ ಸಹಿತವಾದ ಶಾಸನಗಳಲ್ಲಿ ದೊರಕಿರುವ, ಕನ್ನಡ ಭಾಷೆಯ ಪದಗಳಲ್ಲಿ ಅತ್ಯಂತ ಪ್ರಾಚೀನವಾದುದು. ಈ ಪದದ ಅರ್ಥ ‘ಕೋಟೆ’ ಎಂದು. ಈ ಪ್ರದೇಶವನ್ನು ಕೂಡ ಇಸಿಲ ಎಂದೇ ಕರೆಯಲಾಗಿದೆ. ಇಸಿಲವು ಸುವರ್ಣಗಿರಿಯ ಮಹಾಮಾತ್ರರ ರಾಜಧಾನಿಯಾಗಿತ್ತು.
ಇತಿಹಾಸಪೂರ್ವದಲ್ಲಿಯೇ, ಈ ಪ್ರದೇಶಗಳಲ್ಲಿ ಮನುಷ್ಯವಸತಿ ಇತ್ತೆಂದು ಹೇಳಲು ಪುರಾವೆಗಳು ದೊರಕಿವೆ. ಆದ್ದರಿಂದ, ಬ್ರಹ್ಮಗಿರಿಗೆ ವಿಶೇಷ ಮಹತ್ವ ಬಂದಿದೆ. ಈ ಪ್ರದೇಶದಲ್ಲಿ, ಉತ್ಖನನಗಳು ಪ್ರಾರಂಭವಾಗಿದ್ದು 1940 ರಲ್ಲಿ. ಎಂ.ಎಚ್. ಕೃಷ್ಣ ಅವರು ಈ ತಂಡದ ನಾಯಕರಾಗಿದ್ದರು.(ಇಂಡಿಯನ್ ಆರ್ಕಿಯಲಾಜಿಕಲ್ ರಿಪೋರ್ಟ್ಸ್, ಮೈಸೂರು ಆರ್ಕಿಯಲಾಜಿಕಲ್ ಡಿಪಾರ್ಟ್ ಮೆಂಟ್, 1940 ರ ವರದಿ, ಪುಟ 63) ಈ ಉತ್ಖನನವನ್ನು, 1947ರಲ್ಲಿ, ಆರ್.ಈ. ಮಾರ್ಟಿಮರ್ ವೀಲರ್ ಅವರು, ‘ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ’ದ ಪರವಾಗಿ ಮುಂದುವರಿಸಿದರು. 1956 ರಲ್ಲಿ ಎಂ. ಶೇಷಾದ್ರಿಯವರು ಮತ್ತು 1965 ಹಾಗೂ 1978 ರಲ್ಲಿ ಅಮಲಾನಂದ ಘೋಷ್ ಅವರು, ಈ ಕೆಲಸಕ್ಕೆ ಇನ್ನಷ್ಟು ವ್ಯಾಪಕವಾದ ನೆಲೆಗಳನ್ನು ದೊರಕಿಸಿಕೊಟ್ಟರು.
ಈ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಉತ್ಖನನ ನಡೆಸಿದ ಎಂ.ಎಚ್. ಕೃಷ್ಣ ಅವರು, ಅನೇಕ ವಾಸ್ತುರಚನೆಗಳು ಮತ್ತು ಪುರಾತನ ಸಾಮಗ್ರಿಗಳನ್ನು ಹೊಂದಿದ್ದ, ಹದಿನಾರು ನೀಳವಾದ ಹಾಗೂ ಅಗಲ ಕಿರಿದಾದ ಗುಂಡಿಗಳನ್ನು(ಟ್ರೆಂಚ್ಸ್) ಕಂಡುಹಿಡಿದರು. ಬೇರೆ ಬೇರೆ ಆಳಗಳಲ್ಲಿ ಹಾಗೂ ಕಾಲಘಟ್ಟಗಳಲ್ಲಿ ರೂಪಿತವಾಗಿದ್ದ ಐದು ಪದರಗಳನ್ನು ಅವರು ಗುರುತಿಸಿದರು. ಅವುಗಳಿಗೆ ಅನುಕ್ರಮವಾಗಿ, ಮೈಕ್ರೋಲಿಥಿಕ್, ನಿಯೋಲಿಥಿಕ್, ಕಬ್ಬಿಣದ ಯುಗ, ಮೌರ್ಯಯುಗ ಮತ್ತು ಚಾಳುಕ್ಯ-ಹೊಯ್ಸಳ ಯುಗ ಎಂಬ ಹೆಸರುಗಳನ್ನು ಕೊಡಲಾಯಿತು. ಇವುಗಳಲ್ಲಿ ಮೊದಲನೆಯದು(ಮೈಕ್ರೊಲಿಥಿಕ್) ರೊಪ್ಪ ಎಂಬ ಹಳ್ಳಿಯ ಹತ್ತಿರ ಇತ್ತು. ಆದ್ದರಿಂದ, ಕೃಷ್ಣ ಅವರು ಅದನ್ನು ರೊಪ್ಪ ಸಂಸ್ಕೃತಿ ಎಂದೇ ಕರೆದರು. ಮಾರ್ಟಿಮರ್ ವೀಲರ್ ಅವರು ಕೃಷ್ಣ ಸಂಗ್ರಹಿಸಿದ ಸಾಮಗ್ರಿಗಳಲ್ಲಿ, ಬಹಳ ಚಿಕ್ಕ ತ್ರಿಕೋನ ಮತ್ತು ವಜ್ರಾಕಾರದ ಗುರುತುಗಳಿರುವ ವಸ್ತುಗಳನ್ನು ಕಂಡುಹಿಡಿದರು. ಇವುಗಳನ್ನು ‘ರೌಲೆಟೆಡ್ ವೇರ್’ ಎಂದು ಕರೆಯುತ್ತಾರೆ. ಅವರು ಈ ರಚನೆಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದರು. ಮೊದಲನೆಯದು ನಿಯೋಲಿಥಿಕ್ ಅಥವಾ ನಿಯೋಲಿಥಿಕ್-ಚಾಕೋಲಿಥಿಕ್ ಯುಗ. ಎರಡನೆಯದು ಮೆಗಾಲಿಥಿಕ್ ಸಂಸ್ಕೃತಿ ಮತ್ತು ಮೂರನೆಯದು ಆದಿಮ ಐತಿಹಾಸಿಕ ಸಂಸ್ಕೃತಿ. 1956 ರಲ್ಲಿ ಮತ್ತೆ ಈ ಪ್ರದೇಶದಲ್ಲಿ ಅನ್ವೇಷಣೆ ನಡೆಸಿದ ಎಂ. ಶೇಷಾದ್ರಿಯವರು, ಜಾಸ್ಪರ್, ಅಗೇಟ್, ಕಾರ್ನೀಲಿಯನ್, ಓಪಲ್ ಮತ್ತು ಚರ್ಟ್ ಗಳಿಂದ ತಯಾರಿಸಿದ್ದ ಅನೇಕ ಉಪಕರಣಗಳನ್ನು ಕಂಡುಹಿಡಿದರು. ಅವುಗಳನ್ನು ವೀಲರ್ ಅವರು ಹೆಸರಿಸಿದ ಮೊದಲ ಯುಗಕ್ಕೆ ಸೇರಿಸಲಾಯಿತು. 1965 ಮತ್ತು 1978 ರಲ್ಲಿ ಅಮಲಾನಂದ ಘೋಷ್ ಅವರು ನಡೆಸಿದ ಉತ್ಖನನಗಳಲ್ಲಿ, ಕಪ್ಪುಬಣ್ಣ ಹಚ್ಚಿದ ಕೆಂಪುಮಣ್ಣಿನ ವಸ್ತುಗಳು, ಯಾವುದೋ ಬಟ್ಟೆಯ ತುಣುಕುಗಳು ಮತ್ತು ಎರಡು ತಾಮ್ರದ ವಸ್ತುಗಳು ಸಿಕ್ಕಿದವು.
ಇನ್ನು ಮುಂದೆ ಈ ಕಾಲಘಟ್ಟಗಳನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಳ್ಳೋಣ. ನಿಯೋಲಿಥಿಕ್ ಯುಗವು, ಮೊದಲನೆಯ ಸಹಸ್ರಮಾನದ ಪ್ರಾರಂಭದಿಂದ ಹಿಡಿದು ಕ್ರಿ.ಪೂ. ಎರಡನೆಯ ಶತಮಾನದವರೆಗೆ ಹರಡಿಕೊಂಡಿದೆ. ಈ ಯುಗದಲ್ಲಿ ಲೋಹದ ಸಾಮಗ್ರಿಗಳಿಗಿಂತ ಹೆಚ್ಚಾಗಿ ಕಲ್ಲಿನ ಸಾಮಗ್ರಿಗಳು ದೊರಕುತ್ತವೆ. ಡೊಲರೈಟಿನಿಂದ ತಯಾರಿಸಲಾದ, ನುಣುಪಾಗಿ ಮೆರುಗು(ಪಾಲಿಷ್) ಮಾಡಲಾದ ಕಲ್ಲಿನ ಕೊಡಲಿಗಳು ಇಲ್ಲಿ ದೊರೆತಿವೆ. ಇವಲ್ಲದೆ, ಸಮಾನಾಂತರವಾದ ಬದಿಗಳನ್ನು ಹೊಂದಿರುವ ಬ್ಲೇಡುಗಳು, ಅರ್ಧಚಂದ್ರಾಕಾರದ ಚಿಕ್ಕ ಉಪಕರಣಗಳು, ಕೊಕ್ಕಿನಂತೆ ಕೊರೆಯುವ ಮೊನೆಯುಳ್ಳ ಉಪಕರಣಗಳು ಮತ್ತು ಎಲೆಯ ಆಕಾರದ ಉಪಕರಣಗಳೂ ಇಲ್ಲಿ ಸಿಕ್ಕಿವೆ. ಒರಟಾದ ಕೆತ್ತನೆಗಳು ಅಥವಾ ರೇಖಾಚಿತ್ರಗಳನ್ನು ಹೊಂದಿರುವ ಮಡಕೆಗಳೂ ಇಲ್ಲಿ ಲಭ್ಯವಾದವು. ಈ ಪಾತ್ರೆಗಳು ವೃತ್ತಾಕಾರದವೋ ಅಥವಾ ಕಿರಿಯಾಳದವೋ ಆಗಿರುತ್ತಿದ್ದವು. ಈ ಯುಗದಲ್ಲಿ, ವಯಸ್ಕರು ಮತ್ತು ಮಕ್ಕಳ ಶವಸಂಸ್ಕಾರಗಳನ್ನು ಬೇರೆ ಬೇರೆ ರೀತಿಯಲ್ಲಿ ಮಾಡುತ್ತಿದ್ದರು. ಮಕ್ಕಳ ಕೈಕಾಲುಗಳನ್ನು ಮಡಿಸಿ ಕುಂಭಪಾತ್ರೆಯೊಳಗೆ ಇಟ್ಟು ಹುಗಿಯುತ್ತಿದ್ದರು. ಆದರೆ ವಯಸ್ಸಾದವರನ್ನು, ಗುಂಡಿಗಳಲ್ಲಿ ಉದ್ದಕ್ಕೆ ಮಲಗಿಸಿ, ಹುಗಿಯುತ್ತಿದ್ದರು.
ಎರಡನೆಯ ಹಂತದಲ್ಲಿ, ಲೋಹಗಳ ಬಳಕೆಯು ಅಧಿಕ ಪ್ರಮಾಣದಲ್ಲಿ ಮೊದಲಾಯಿತು.(ಕ್ರಿ.ಪೂ. 2 ನೆಯ ಶತಮಾನದಿಂದ ಕ್ರಿ.ಶ. 1 ನೆಯ ಶತಮಾನದವರೆಗಿನ ಕಾಲ.) ಕೃಷಿ ಮತ್ತು ಯುದ್ಧಗಳೆರಡರಲ್ಲಿಯೂ ಲೋಹಗಳನ್ನು ಬಳಸುತ್ತಿದ್ದರು. ಕುಡುಗೋಲುಗಳು, ಭರ್ಜಿಗಳು, ಬಾಣದ ತಲೆಗಳು, ಮತ್ತು ಕತ್ತಿಗಳು ಇಂತಹ ಉಪಕರಣಗಳಲ್ಲಿ ಕೆಲವು. ಈ ಕಾಲದ ಮಡಕೆಗಳು ಬೇರೆ ಬಗೆಯವು. ಅವುಗಳನ್ನು ಮೂರು ಗುಂಪಗಳಾಗಿ ವಿಂಗಡಿಸಲಾಗಿದೆ: ಬಹಳ ನಯವಾಗುವಂತೆ ಪಾಲಿಷ್ ಮಾಡಿದ ಕಪ್ಪು-ಕೆಂಪು ಪಾತ್ರೆಗಳು, ಸಂಪೂರ್ಣವಾಗಿ ಕಪ್ಪು ಬಣ್ಣದ ಪಾತ್ರೆಗಳು ಮತ್ತು ಮಂಕುಕೆಂಪು ಬಣ್ಣದ ಒರಟಾದ ಅಥವಾ ಹೊಳೆಯುವ ಪಾತ್ರೆಗಳು.
ಈ ಕಾಲದಲ್ಲಿ ಶವಸಂಸ್ಕಾರದ ವಿಧಾನಗಳು ಮತ್ತೆ ಬದಲಾಗಿದ್ದವು. ಸತ್ತವರನ್ನು ಕಲ್ಲಿನ ಸಿಸ್ಟುಗಳಲ್ಲಿ ಹುಗಿಯುತ್ತಿದ್ದರು ಅಥವಾ ನೆಲದಲ್ಲಿ ಆಳವಾದ ಗುಂಡಿ ತೆಗೆದು, ಸುತ್ತಲೂ ದೊಡ್ಡ ಬಂಡೆಗಳನ್ನು ಇಟ್ಟು, ಅವುಗಳ ನಡುವೆ ಹೆಣವನ್ನು ಇಡುತ್ತಿದ್ದರು. ಆ ದೊಡ್ಡ ಕಲ್ಲುಗಳನ್ನು ವೃತ್ತಾಕಾರದಲ್ಲಿ ಅಥವಾ ಒಂದರೊಳಗೊಂದಿರುವ ವೃತ್ತಗಳ ಆಕಾರದಲ್ಲಿ ಜೋಡಿಸುತ್ತಿದ್ದರು. ಈ ಸಿಸ್ಟುಗಳ ಒಳಗೆ, ಕಬ್ಬಿಣದ ಉಪಕರಣಗಳು, ಮಣಿಗಳು ಮತ್ತು ಮಡಕೆಗಳನ್ನು ಇಡುತ್ತಿದ್ದರು. ಕೆಲವು ಕಡೆ ಚಿನ್ನದ ಮಣಿಗಳು ಮತ್ತು ತಾಮ್ರದ ಬಳೆಗಳೂ ದೊರಕಿವೆ. ಇವೆಲ್ಲವನ್ನೂ ಇಟ್ಟ ನಂತರ ಮೇಲೆ ಹಸಿ ಮಣ್ಣನ್ನು ಮುಚ್ಚುತ್ತಿದ್ದರು.
ಮೂರನೆಯ ಯುಗವು ಸಹಜವಾಗಿಯೇ ಹೆಚ್ಚು ಪ್ರಗತಿ ಪಡೆದಿದೆ. ಇದು ಇತಿಹಾಸದ ಮೊದಲ ಹಂತ. ಕ್ರಿ.ಶ. ಒಂದರಿಂದ ಮೂರನೆಯ ಶತಮಾನದವರೆಗೆ ಈ ಯುಗದ ಹರಹು ಇದೆ. ಇಲ್ಲಿ ಸಿಕ್ಕಿರುವ ಮಡಕೆಗಳನ್ನು ವೇಗವಾಗಿ ತಿರುಗುವ ಚಕ್ರದ ನೆರವಿನಿಂದ ತಯಾರಿಸಲಾಗಿದೆ. ಈ ಹಂತದಲ್ಲಿ ತಟ್ಟೆಗಳು, ಮಡಕೆಗಳು, ಬಟ್ಟಲುಗಳು ಮತ್ತು ಬಿಳಿಯ ಬಣ್ಣದಲ್ಲಿ ರೇಖಾಕೃತಿಗಳನ್ನು ಬಿಡಿಸಿರುವ ಕುಂಡಗಳನ್ನು(ವೇಸಸ್) ನೋಡಬಹುದು. ಹಾಗೆಯೇ ಚಿನ್ನ, ಹಿತ್ತಾಳೆ, ಜೇಡಿಮಣ್ಣು ಮತ್ತು ಚಿಪ್ಪುಗಳಿಂದ(ಷೆಲ್) ತಯಾರಿಸಿದ ಒಡವೆಗಳೂ ಇಲ್ಲಿ ಸಿಕ್ಕಿವೆ.
ಅಶೋಕನ ಶಾಸನಗಳನ್ನು ಮೊದಲನೆಯ ಯುಗದಲ್ಲಿ ಜೀವಿಸಿದ್ದ ಜನರಿಗಾಗಿ ಸ್ಥಾಪಿಸಲಾಯಿತೆಂದು ಗ್ರಹಿಸಲಾಗಿದೆ. ಹೀಗೆ, ಬ್ರಹ್ಮಗಿರಿಯು ಕರ್ನಾಟಕದ ಪ್ರಮುಖ ಉತ್ಖನನ ಕ್ಷೇತ್ರಗಳಲ್ಲಿ ಒಂದು. 

ಹಲ್ಮಿಡಿ ಶಾಸನ

  ಹಲ್ಮಿಡಿ ಶಾಸನಹಲ್ಮಿಡಿ ಶಾಸನವು ಕನ್ನಡ ಭಾಷೆಯಲ್ಲಿ ಸಿಕ್ಕಿರುವ ಅತ್ಯಂತ ಹಳೆಯ ಶಾಸನ. ಇದರ ಕಾಲವು ಕ್ರಿ.ಶ. 450. ಇದು ಪ್ರಕಟವಾಗಿದ್ದು 1936 ರಲ್ಲಿ. ಪ್ರಸಿದ್ಧ ಇತಿಹಾಸಜ್ಞರಾದ ಎಂ.ಎಚ್. ಕೃಷ್ಣ ಅವರು ಈ ಶಾಸನದ ಪಠ್ಯ ಮತ್ತು ವಿವರವಾದ ವಿಶ್ಲೇಷಣೆಯನ್ನು ಪ್ರಕಟಿಸಿದರು.
ಈ ಶಾಸನವು ಹಾಸನ ಜಿಲ್ಲೆಯ ಬೇಲೂರಿನ ಸಮೀಪದಲ್ಲಿರುವ ಹಲ್ಮಿಡಿ ಎಂಬ ಹಳ್ಳಿಯಲ್ಲಿ ಸಿಕ್ಕಿತು. ಈಗ ಇದನ್ನು ಕರ್ನಾಟಕ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯ ನಿರ್ದೇಶಕರ ಕಚೇರಿಯ ಆವರಣದಲ್ಲಿ ಇಡಲಾಗಿದೆ.(ಮೈಸೂರು) ಹಲ್ಮಿಡಿಯಲ್ಲಿ ಇದರ ಫೈಬರ್ ಗ್ಲಾಸ್ ನಕಲೊಂದನ್ನು ಪ್ರತಿಷ್ಠಾಪಿಸಲಾಗಿದೆ.
ಶಾಸನಶಿಲೆಯು ನಾಲ್ಕು ಅಡಿ ಎತ್ತರ, ಒಂದು ಅಡಿ ಅಗಲ ಮತ್ತು ಮುಕ್ಕಾಲು ಅಂಗುಲ ದಪ್ಪ ಇದೆ. ಈ ಶಾಸನದಲ್ಲಿ ಹದಿನಾರು ಸಾಲುಗಳಿವೆ. ಮೊದಲ ಸಾಲನ್ನು ಶಿಲೆಯ ಮೇಲುಭಾಗದಲ್ಲಿ ಕುದುರೆ ಲಾಳದ ಆಕೃತಿಯಲ್ಲಿ ಕೆತ್ತಲಾಗಿದೆ. ನಂತರದ ಹದಿನಾಲ್ಕು ಸಾಲುಗಳು ಶಾಸನದ ಫಲಕದ ಮೇಲೆ ಬರೆಯಲ್ಪಟ್ಟಿವೆ. ಕೊನೆಯ ಸಾಲನ್ನು, ಶಾಸನದ ಬಲ ಬದಿಯಲ್ಲಿ ಕೆಳಗಿನಿಂದ ಮೇಲೆ ಕೆತ್ತಲಾಗಿದೆ. ಸುಮಾರು ಇಪ್ಪತ್ತು ಕಡೆ ಶಾಸನದ ಲಿಪಿಯನ್ನು ಸ್ಪಷ್ಟವಾಗಿ ಓದಲು ಕಷ್ಟವಾಗುತ್ತದೆ. ಆದರೂ ಅದನ್ನು ಚೆನ್ನಾಗಿ ಸಂರಕ್ಷಣೆ ಮಾಡಲಾಗಿದೆಯಂದೇ ಹೇಳಬಹುದು.
ಮೊದಲ ಹದಿನೈದು ಸಾಲುಗಳ ಲಿಪಿಯು ಪಶ್ಚಿಮ ಘಟ್ಟಗಳ ಗವಿಗಳಲ್ಲಿ ದೊರೆತಿರುವ ಗುಹಾಲಿಪಿಯನ್ನು ಅಂತೆಯೇ ಶಾತವಾಹನರ ಕಾಲದ ಶಾಸನಗಳ ಲಿಪಿಯನ್ನು ಹೋಲುತ್ತದೆ. ಕದಂಬರ ಕಾಕುಸ್ಥವರ್ಮನ ತಾಳಗುಂದದ ಶಾಸನದ ಲಿಪಿಗೂ ಇದಕ್ಕೂ ಆಂಶಿಕವಾದ ಹೋಲಿಕೆಯಿದೆ. ಶಾಸನದಲ್ಲಿ ಅದರ ಕಾಲವನ್ನು ತಿಳಿಸಿಲ್ಲ. ಆದರೂ ವಿದ್ವಾಂಸರು ಇದರ ಕಾಲವನ್ನು ಕ್ರಿ.ಶ. 450 ಎಂದು ತೀರ್ಮಾನಿಸಿದ್ದಾರೆ. ಈ ನಿರ್ಣಯವು ಶಾಸನದಲ್ಲಿ ಪ್ರಸ್ತಾಪಿತವಾಗಿರುವ ಚಾರಿತ್ರಿಕ ವ್ಯಕ್ತಿಗಳು, ಅದರ ಭಾಷಿಕ ನೆಲೆಗಳು ಮುಂತಾದ ಸಂಗತಿಗಳನ್ನು ಅವಲಂಬಿಸಿದೆ.
ಭಟಾರಿ ಎನ್ನುವವನ ಮಗನಾದ ವಿಜ ಅರಸನಿಗೆ ಹಲ್ಮಿಡಿ ಮತ್ತು ಮೂಳುವಳ್ಳಿ ಎಂಬ ಹಳ್ಳಿಗಳನ್ನು ದಾನವಾಗಿ ಕೊಟ್ಟ ಸಂಗತಿಯನ್ನು ಈ ಶಾಸನವು ದಾಖಲೆ ಮಾಡುತ್ತದೆ. ಈ ದಾನವನ್ನು ಬಾಣ ಮತ್ತು ಸೇಂದ್ರಿಕ ಎಂಬ ಪ್ರದೇಶಗಳ ವೀರರ ಸಮ್ಮುಖದಲ್ಲಿ ನೀಡಲಾಯಿತು. ಕದಂಬರಿಗೂ ಕೇಕಯರಿಗೂ ನಡೆದ ಯುದ್ಧದಲ್ಲಿ ವಿಜ ಅರಸನು ತೋರಿಸಿದ ಪರಾಕ್ರಮಕ್ಕೆ ಪ್ರತಿಫಲವಾಗಿ ಈ ದಾನವನ್ನು ಕೊಟ್ಟಿದ್ದರು.ಈ ಹಳ್ಳಿಗಳಲ್ಲಿರುವ ಗದ್ದೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಬ್ರಾಹ್ಮಣರಿಗೆ ಕೊಡಬೇಕೆಂಬ ಸೂಚನೆಯನ್ನು ಶಾಸನದ ಕೊನೆಯ ಭಾಗವು ದಾಖಲೆ ಮಾಡುತ್ತದೆ. ಆ ಬ್ರಾಹ್ಮಣರಿಗೆ ಭೂಕಂದಾಯವನ್ನು ಕೊಡುವುದರಿಂದಲೂ ವಿನಾಯತಿಯನ್ನು ನೀಡಲಾಗಿತ್ತು.
ಸಂಸ್ಕೃತದಲ್ಲಿರುವ ಮೊದಲ ಸಾಲು ವಿಷ್ಣುವಿನ ಪ್ರಾರ್ಥನೆಯಾಗಿದೆ. ಅದರ ಶೈಲಿಯು ಅಲಂಕಾರಭರಿತವೂ ಪಾಂಡಿತ್ಯಪೂರ್ಣವೂ ಆಗಿದೆ. ಶಾಸನದ ಮಿಕ್ಕ ಸಾಲುಗಳು ಕನ್ನಡದಲ್ಲಿವೆ. ಆದರೆ, ಅವು ಕೂಡ ಸಂಸ್ಕೃತದಿಂದ ತೆಗೆದುಕೊಂಡ ಸಮಾಸಪದಗಳಿಂದ ನಿಬಿಡವಾಗಿವೆ. ಇಡೀ ಶಾಸನದಲ್ಲಿ ಸುಮಾರು ಇಪ್ಪತ್ತೈದು ಕನ್ನಡ ಪದಗಳಿವೆ. ಇಲ್ಲಿನ ಭಾಷೆಯು ಕನ್ನಡದ ವಿಕಾಸದಲ್ಲಿ ಮೊಲ ಹಂತವೆಂದು ತಿಳಿಯಲಾದ ಪೂರ್ವದ ಹಳಗನ್ನಡದಲ್ಲಿದೆ. ಪ್ರಥಮಾ ವಿಭಕ್ತಿ ಪ್ರತ್ಯದ ದೀರ್ಘೀಕರಣ ಮತ್ತು ಸಪ್ತಮೀ ವಿಭಕ್ತಿ ಪ್ರತ್ಯವಾಗಿ ‘ಉಳ್’ ಎಂಬ ರೂಪದ ಬಳಕೆಗಳು ಈ ಶಾಸನದ ಅನನ್ಯ ವ್ಯಾಕರಣರೂಪಗಳಲ್ಲಿ ಕೆಲವು. ಇಲ್ಲಿ ಬಳಸಲಾಗಿರುವ ಕರ್ಮಣೀ ಪ್ರಯೋಗವು ಕ್ರಿ.ಶ. 450 ರಷ್ಟು ಹಿಂದೆಯೇ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವವು ಆಗಿತ್ತೆನ್ನುವುದಕ್ಕೆ ಪುರಾವೆಯಾಗಿದೆ.
ಈ ಶಾಸನದಲ್ಲಿರುವ ಕೆಲವು ಪದಗಳ ಖಚಿತವಾದ ಅರ್ಥದ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆಗಿನ ಕಾಲದಲ್ಲಿ ಜಯಶಾಲಿಗಳೂ ಪರಾಕ್ರಮಿಗಳೂ ಆದ ಯೋಧರಿಗೆ ಸೂಕ್ತವಾದ ದತ್ತಿಗಳನ್ನು ನೀಡುವ ಪದ್ಧತಿಯು ಇತ್ತೆಂದು ಇದರಿಂದ ತಿಳಿದು ಬರುತ್ತದೆ. ಇಂತಹ ಕೊಡುಗೆಯನ್ನು ಹೋರಾಡಿ ಮೃತರಾದ ವೀರರ ಕುಟುಂಬವರ್ಗದವರಿಗೆ ಕೊಡುವ ಪದ್ಧತಿಯೂ ಇತ್ತು.
ಹೀಗೆ ಹಲ್ಮಿಡಿ ಶಾಸನವು ಕನ್ನಡದ ಸಂದರ್ಭದಲ್ಲಿ ಬಹಳ ಮಹತ್ವದ ದಾಖಲೆಯಾಗಿದೆ.
ಮರೆತ ಮಾತು: ಈಚೆಗೆ ಡಾ. ಷ. ಶೆಟ್ಟರ್ ಅವರು ಗಂಗ ರಾಜವಂಶಕ್ಕೆ ಸೇರಿದ ಕೊಂಗುಣಿವರ್ಮನ ಒಂದು ಶಾಸನವು, ಹಲ್ಮಿಡಿ ಶಾಸನಕ್ಕಿಂತ ಹಿಂದಿನದೆಂದು ಅಭಿಪ್ರಾಯ ಪಟ್ಟಿದ್ದಾರೆ.
ಹಲ್ಮಿಡಿ ಶಾಸನದ ಪಠ್ಯ
ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ಕಲಭೋg[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ zಸೇನ್ದ್ರಕ ಬಣೋಭಯ ದೇಶದಾ ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕೞ್ದೋನ್ ಮಹಾಪಾತಕನ್ ಸ್ವಸ್ತಿ ಭಟ್ಟರ್ಗ್ಗೀಗೞ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ 

ಗಂಗಾಧರಂ ಶಾಸನ



ಕನ್ನಡದ ಮೊಟ್ಟಮೊದಲ ಹಿರಿಯ ಕವಿಯಾದ ಪಂಪನ ಜೀವನಚರಿತ್ರೆಯನ್ನು ಮರುರೂಪಿಸುವುದರಲ್ಲಿ, ಗಂಗಾಧರಂ ಶಾಸನ ಅಥವಾ ಜಿನವಲ್ಲಭನ ಶಾಸನವು ಮಹತ್ವದ ಪಾತ್ರವನ್ನು ವಹಿಸಿದೆ. ಈ ಶಾಸನವು ಆಂಧ್ರಪ್ರದೇಶದ ಕರೀಂ ನಗರ ಜಿಲ್ಲೆಯ, ಗಂಗಾಧರಂ ಮಂಡಲಕ್ಕೆ ಸೇರಿದ ಕುರ್ಕ್ಯಾಲ ಎಂಬ ಹಳ್ಳಿಯಲ್ಲಿ ಒಂದು ಬೆಟ್ಟದ ಮೇಲೆ ಸಿಕ್ಕಿತು. ಪಿ.ವಿ. ಪರಬ್ರಹ್ಮ ಶಾಸ್ತ್ರಿಗಳು 1976 ರಲ್ಲಿ ಸಂಪಾದಿಸಿ, ಪ್ರಕಟಿಸಿದ ‘Inscriptions of Andhrapradesh, Kareem Nagar DIstrict’ ಎಂಬ ಕೃತಿಯಲ್ಲಿ ಈ ಶಾಸನವನ್ನು ನೋಡಬಹುದು. ಇದನ್ನು ಸ್ಥಾಪಿಸಿದವನು ಪಂಪನ ತಮ್ಮನಾದ ಜಿನವಲ್ಲಭ. ಇದರಲ್ಲಿ ಜಿನವಲ್ಲಭನನ್ನು ಕುರಿತು ಹೇರಳವಾದ ಮಾಹಿತಿ ಸಿಗುವುದಲ್ಲದೆ, ಪಂಪನನ್ನು ಕುರಿತಂತೆಯೂ ಮುಖ್ಯವಾದ ಸಂಗತಿಗಳು ಗೊತ್ತಾಗುತ್ತವೆ.



ಜಿನವಲ್ಲಭನು ಪಾಂಡಿತ್ಯ ಮತ್ತು ಸಾಂಪತ್ತಿಕ ಸ್ಥಿತಿಗತಿಗಳೆಂಬ ಎರಡು ನೆಲೆಗಳಲ್ಲಿಯೂ ಶ್ರೀಮಂತನಾಗಿದ್ದನು. ಅವನಿಗೆ ಸಂಗೀತ ಮತ್ತು ಗಮಕಗಳಲ್ಲಿ ಪರಿಣತಿಯಿತ್ತು. ಅವನು ಅನೇಕ ಜೈನ ಬಸದಿಗಳು, ಕೊಳಗಳು ಮತ್ತು ಉದ್ಯಾನಗಳನ್ನು ನಿರ್ಮಿಸಿದ್ದನು. ಎಲ್ಲಕ್ಕಿಂತ ಮುಖ್ಯವಾಗಿ ಪಂಪ ಮತ್ತು ಜಿನವಲ್ಲಭರಿಬ್ಬರೂ ಭೀಮಪ್ಪಯ್ಯ ಮತ್ತು ಅಬ್ಬಣಬ್ಬೆಯರ ಮಕ್ಕಳೆಂದು ಈ ಶಾಸನವು ಸ್ಪಷ್ಟಪಡಿಸುತ್ತದೆ. ಅಬ್ಬಣಬ್ಬೆಯು ಉತ್ತರ ಕರ್ನಾಟಕದ ಅಣ್ಣಿಗೇರಿಯಿಂದ ಬಂದವಳೆಂಬ ಸಂಗತಿಯೂ ಇಲ್ಲಿಯೇ ತಿಳಿಯುತ್ತದೆ. ಪಂಪನ ಆಶ್ರಯದಾತನಾದ ಅರಿಕೇಸರಿಯು, ಧರ್ಮಪುರಿ ಅಗ್ರಹಾರವನ್ನು ಪಂಪನಿಗೆ ದತ್ತಿಯಾಗಿ ನೀಡಿದನೆಂಬ ವಿಷಯವನ್ನೂ ಈ ಶಾಸನದಲ್ಲಿ ಹೇಳಲಾಗಿದೆ.



ಗಂಗಾಧರಂ ಶಾಸನವು ಕನ್ನಡ, ಸಂಸ್ಕೃತ ಮತ್ತು ತೆಲುಗುಗಳಲ್ಲಿ ರಚಿತವಾಗಿದೆ. ಇಲ್ಲಿರುವ ತೆಲುಗು ಕಂದಪದ್ಯಗಳು ಆ ಭಾಷೆಯಲ್ಲಿ ದೊರಕಿರುವ ಅತ್ಯಂತ ಹಳೆಯ ಕಂದಪದ್ಯಗಳೆಂದು ಹೇಳಲಾಗಿದೆ. ಹೀಗೆ, ಈ ಶಾಸನವು ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಮುಖ್ಯವಾಗಿದೆ.



ಶಾಸನದ ಪಠ್ಯ :


ಓಂ ನಮಃ ಸಿದ್ಧೇಭ್ಯಃ ಸ್ವಸ್ತಿ ಸಮಸ್ತ ಸಕಳ ಕಳಾಳಾಪ ಪ್ರವೀಣಂ ಭವ್ಯರತ್ನಾಕರ[ಂ] ಗುಣಪಕ್ಷಪಾತಿ ಬೆಂಗಿನಾಡ ಸಪ್ತಗಮ್ರಗಳೊಳಗಣ ವಂಗಿಪರ್ರ ಕಮ್ಮೆ ಬ್ರಾಹ್ಮಣಂ ಜಮದಗ್ನಿ ಪಂಚಾರ್ಷೇಯಂ ಶ್ರೀವತ್ಸಗೋತ್ರಂ ಗುಂಡಿಕಱ್ರ ನಿಡುಂಗೊಣ್ಡೆಯ್ ಅಭಿಮಾನಚನ್ದ್ರನ ಮರ್ಮ್ಮಂ ಭೀಮಪಯ್ಯನ ಬೆಳ್ವೊಲದ ಅಣ್ನಿಗೆರೆಯ ಜೋಯಿಸಸಿಂಘನ ಮರ್ಮ್ಮಳ್ ಅಬ್ಬಣಬ್ಬೆಯ ಮಗಂ ಕೊಣ್ಡಕುನ್ದೆಯ ದೇಸಿಗಗಣದ ಪೊತ್ಥಗೆಯ ಬೞಯ ಪಣ್ಡರಂಗವಲ್ಲಿಯ ಜಯಣನ್ದಿಸಿದ್ಧಾನ್ತಭಟಾರರ ಗುಡ್ಡಂ ಜಿನವಲ್ಲಭಂ ಸಬ್ಬಿನಾಡ ನಟ್ಟನಡುವಣ ಧರ್ಮ್ಮವುರದ್ ಉತ್ತರ ದಿಗ್ಭಾಗದ ವೃಷಭಗಿರಿಯೆಂಬ ಅನಾದಿ ಸಂಸಿದ್ಧ ತೀರ್ತ್ಥದ ದಕ್ಷಿಣದಿಶಾಭಾಗದಿ ಈ ಸಿದ್ಧಶಿಲೆಯೊಳ್ ತಮ್ಮ ಕುಲದೈವಮ್ ಆದ್ಯನ್ತ ಜಿನಬಿಂಬಂಗಳುಮಂ ಚಕ್ರೇಶ್ವರಿಯುಮಂ ಪೆಱವು ಜಿನಪ್ರತಿಮೆಗಳುಮಂ ತ್ರಿಭುವನತಿಲಕಮ್ ಎಂಬ ಬಸದಿಯುಮಂ ಕವಿತಾಗುಣಾರ್ಣ್ನವಮ್ gಎಂಬ ಕೆಱಯುಮಂ ಮದನವಿಳಾಸಮ್ ಎಂಬ ಬನಮುಮಂ ಮಾಡಿಸಿದಂ ಭ್ರಾತದ್ಧರ್ಮ್ಮಪುರಂ ಪ್ರಯಾಮಕಿಮತೋ ಜೈನಾಭಿಷೇಕೋತ್ಸವ ಕ್ಷೀರಪ್ಲಾವಿತ ತುಂಗ ಶೃಂಗ ವೃಷಭಕ್ಷೆಣಿದ್ಧ್ರಮೀಕ್ಷಾಮಹೇ ಯಾತ್ರಾಯಾತ ಸಮಸ್ತ ಭವ್ಯಜನತಾ ಸನ್ಮಾನ ದಾನೋದ್ಯತಂ ಪಂಪಾರ್ಯ್ಯಾನುಜಮತ್ರ ಭೀಮತನುಜಂ ಸಮಕ್ತ್ವರತ್ನಾಕರಂ ಗೀತಂ ಗಾತುಮ್ ಅನೇಕ ಭೇದ ಸುಭಗಂ ಕಾವ್ಯಾನಿಸೋಚ್ಚಾವಚಂ ವಾಚಾವಾಚಯಿತುಂ ಪ್ರಿಯಾಣಿವದಿತುಂ ಸಾಧೂಪಕರ್ತ್ತುಂ ಸತಂ ಬೋಗಾನ್ ಸೇವಿತುಮಂಗನಾರಮಯಿತುಂ ಪೂಜಾಂ ವಿಧಾತುಂ ಜಿನೇ ಜಾನೀತೇ ಜಿನವಲ್ಲಭಳ್ ಪರರ್ಮ ಇದಂ ಪಂಪಾಭಿದಾನಾನುಜಃ ಅಜಸ್ರ ಜಿನವನ್ದನಾಗತ ಮುಈಶ್ವರ ಶ್ರಾವಕ ಪ್ರಜಾಸ್ತವರವ ಪ್ರತಿಧ್ವನಿತ ಶಬ್ದಕೋಳಾಹಳೈ[ಃ] ಅಧಿಷ್ಠಿತ ದಿಗಂಬರೋ ವೃಷಭಶೈಲ ಏಷಸ್ವಯಂ ಪರಾಂ ವದತಿ ವಾಚಕಾಭರಣ ಕೀರ್ತ್ತಿಮಾಕಳ್ಪತಃ ಬಗೆಯಲಳುಂಬಮ್ ಈ ಬಗೆಯನ್ ಆರ್ಬ್ಬಗೆವೊರ್ಬ್ಬಗೆ ಗಾಸೆಯಲ್ತು ದಿಟ್ಟಿಗೆ ಪೊಲನಲ್ತು ನೀಳ್ದ ಸಱಯೊಳ ಜಿನಬಿಂಬಮನ್ ಈತನ್ ಈಗಳ್ ಎಂತು ಆಗಱಸಿದಪ್ಪೊನ್ ಎನ್ದು ಬಗೆವನ್ನೆವರಂ ಜಿನಬಿಂಬಮ್ ಅಲ್ಲಿ ತೊಟ್ಟಗೆ ನೆಗಳ್ದಿೞ್ದುವೇಂ ಚರಿತಂ ಅಚ್ಚರಿಯೋ ಜಿನವಲ್ಲಭೇನ್ದ್ರನಾ ಇದು ಕವಿತಾಗುಣಾರ್ಣ್ನವನ ಕೀರ್ತ್ತಿಯ ಮೂರ್ತ್ತಿವೊಲಾಗಿ ದಕ್ಷಿಣಾರ್ದ್ಧದ ವೃಷಭಾದ್ರಿಯಕ್ಕೆ ವೃಷಭೇಶ್ವರಬಿಂಬ ಸನಾಥಮೆಂಬ್ ಅಲಂಪೊದವೆ ನಿಜದ್ವಿಜಾವಸಥ ಪರ್ವ್ವತಮಂ ಜಿನಚೈತ್ಯಮ್ ಆಗೆ ಮಾಡಿದ ಜಿನವಲ್ಲಭಂಗೆ ಜಿನವಲ್ಲಭ್ನ್ ಅಪ್ಪುದುಮ್ ಒಂದು ಛೋದ್ಯಮೋ ಚದುರ ಮೈಮೆಯ ಸತ್ಕವಿತ್ವದ ಸನ್ದ ಪಂಪನ ತಮ್ಮನ್ ಓವ್ವದೆ ಪೊಗೞ್ತೆಯೇ ಬಾಜಿಸಲ್ ಬರೆಯಲ್ ಕವಿತ್ವದ ತತ್ವದೊಳ್ ಪುದಿದು ನೇರ್ಪ್ಪಡೆ ಪೇೞಲ್ ಉರ್ವ್ವಿಗಪೂರ್ವ್ವಮ್ ಆ ಆಗಿರೆ ಬಲ್ಲೊನ್ ಅಪ್ಪುದರಿನ್ ಒರ್ವ್ವನೆ ವಾಗ್ವಧೂವರವಲ್ಲಭಂ ಜಿನವಲ್ಲಭಂ ವಿನುತ ಚಳುಕ್ಯವಂಶಪತಿ ಮಿಕ್ಕರಿಕೇಸರಿ ಸನ್ದ ವಿಕ್ರಮಾರ್ಜ್ಜುನವಿಜಯಕ್ಕೆ ಧರ್ಮ್ಮವುರಂಮ್ ಎನ್ದು ಮದೀಯಮ್ ಇದೆನ್ದು ಕೀರ್ತ್ತಿಶಾಸನಮೆನೆ ಕೊಟ್ಟ ಶಾಸನದ ಪಂಪನ ನಂಬಿದುದೊಂದು ಜೈನಶಾಸನದ ನೆಗೞ್ತೆಯಂ ವೃಷಭಪರ್ವ್ವತಮನ್ತದು ತಾನೆ ಪೇೞದೇ ಎಸಗಲ್ಗಾಳಿ ಪುಗಲ್ ಪತಂಗಕಿರಣಂ ಸಾರಲ್ಮಿಗಂ ಪಾಱಲ್ ಆಗಸದೊಳ್ ಪಕ್ಕಿಗಳಲ್ಲಿ ಸಲ್ಲವೆನಿಸಿರ್ೞ್ದನ್ಯೋದಯಂ ಧರ್ಮ್ಮದೊಳ್ ಜಸಮಂ ಪೊಂಪುೞಮಾಡೆ ಮೆಚ್ಚಿ ಹರಿಗಂ ಪಂಪಂಗೆ ಗೊಟ್ಟಾ ದ್ವಿಜಾವಸಥ ಗ್ರಾಮಮದೇನ್ ನೆಗೞ್ತೆಯ ಕಳಾಪ ಗ್ರಾಮಮಂ ಪೋಲ್ತುದೋ ಬರೆದುದೇ ತಾಂಬ್ರಶಾಸನಮಂ ಆದೇಯಮೇ ಧರ್ಮ್ಮವುರಂ ನೆಗೞ್ತೆವೆತ್ತರಿಗನ ಕೊಟ್ಟುದೇ ನೆಗೞ್ದ ಪಂಪನ ಪೆತ್ತುದೇ ಪೇೞಮ್ ಎನ್ದು ನೀಮ್ಮರುಳೆ ಪಲರ್ಮ್ಮೆಯುಂ ಪಲಬರಂ ಬೆಸಗೊಳ್ಳದೆ ಪೋಗಿ ನೋಡ ಸುನ್ದರ ವೃಷಭಾಚಲೋನ್ನತ ಶಿಳಾತಳದೊಳ್ ಬರೆದಕ್ಕರಂಗಳಂ ಜಿನಭವನಂಬುಲೆತ್ತಿಂಚುಟ ಜಿನಪೂಜಲ್ ಸೇಯುಚುನ್ನಿ ಜಿನಮುನುಲಕು ನತ್ತಿನಯನ್ನದಾನಂ ಬೀವುಟಂ ಜಿನವಲ್ಲಭಂ ಬೋಲಂಗಲರೆ ಜಿನಧರ್ಮ್ಮಪರುಲ್ ದಿನಕರು ಸರಿವೆಲ್ಗುದುಮನಿ ಜಿನವಲ್ಲಭುನೊಟ್ಟನೆತ್ತು ಜಿತಕವಿನನುಂ ಮನುಜುಲ್ಗಲರೇ ಧಾತ್ರಿಂ ವಿನಿತಿಚ್ಚುದುನನಿಯ ವೃತ್ತವಿಬುಧಕವೀನ್ದ್ರುಲ್ ಒಕ್ಕೊಕ್ಕಗುಣಂ ಕಲ್ಗುದುರೊಕ್ಕೊಣ್ಡಿಗಾಕ್ ಒಕ್ಕಲಕ್ಕಲೇವೆವ್ವರಿಕಿಂ ಲೆಕ್ಕಿಂಪನ್ ಒಕ್ಕಿಲಕ್ಕಕು ಮಿಕ್ಕಿಲಿ ಗುಣಪಕ್ಷಪಾತಿ ಗುಣಮಣಿಗಣಂಬುಲ್ ಎನ್ದು ಲೋಕಮೆಲ್ಲಂ ಪೊಗೞೆ ನೆಗೞ್ದ ಜಿನವಲ್ಲಭ ಸುಧರ್ಮ್ಮ ಸನ್ತತಿಯೊಳ್ ತೊಟ್ಟ ಗುಣಾವಳಿಯನ್ ಈ ವೃಷಭಗಿರಿಯ ಸಿದ್ಧಶಿಲೆಯೊಳ್ ಎಱೆಯಮ್ಮಂ ಟಂಕೋತ್ಕೀರ್ಣ್ನಮ್ ಮಾಡಿದಂ

ಬಾದಾಮಿ ಶಾಸನ (ಕಪ್ಪೆ ಅರಭಟ್ಟನ ಶಾಸನ)

ಕನ್ನಡದ ಪ್ರಾಚೀನ ಸಾಹಿತ್ಯದ ಬಗ್ಗೆ ಮಾತನಾಡುವಾಗ, ನಾವು ಕನ್ನಡನಾಡಿನ ಶಿಲಾಶಾಸನಗಳ ಮೊರೆ ಹೋಗಬೇಕಾಗುತ್ತದೆ. ಏಕೆಂದರೆ, ಆ ಕಲ್ಲಿನ ಮೇಲೆ ಕೊರೆದ ಕನ್ನಡದ ಬರವಣಿಗೆಯೇ ನಮ್ಮ ಕನ್ನಡ ಸಾಹಿತ್ಯ ಪರಂಪರೆಯ ಪ್ರಾಚೀನತೆಗೆ ದೊರಕುವ ಸಾಕ್ಷಿ, ಆಕರ ಸಾಮಗ್ರಿಗಳು. ಕರ್ನಾಟಕದಲ್ಲಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚಾಗಿ ಶಾಸನಗಳು ದೊರಕಿವೆ ಎನ್ನುತ್ತಾರೆ, ಶಾಸನತಜ್ಞರು. ಇವಲ್ಲದೆ, ಉತ್ಖನನಗಳು ನಡೆದಾಗ ಆಗೊಮ್ಮೆ ಈಗೊಮ್ಮೆ ಮುಂಚೆ ಸಿಕ್ಕಿರದ, ಈಗ ಬೆಳಕಿಗೆ ಬಂದ ಇನ್ನೂ ಅನೇಕ ಶಾಸನಗಳು ಕನ್ನಡನಾಡಿನ ಸಾಂಸ್ಕೃತಿಕ, ಸಾಹಿತ್ಯಕ ಇತಿಹಾಸವನ್ನು ಕರಾರುವಾಕ್ಕಾಗಿ ನಾವು ತಿಳಿದುಕೊಳ್ಳಲು ಅನುವಾಗುತ್ತವೆ. ಶಾಸನಗಳನ್ನು ಮುಖ್ಯವಾಗಿ ದಾನಶಾಸನಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳು, ನಿಸದಿಗಲ್ಲುಗಳು, ರಾಜಶಾಸನದ ಕಲ್ಲುಗಳು- ಎಂದು ವಿಂಗಡಿಸಬಹುದು. ಅವುಗಳಲ್ಲಿ, ವೀರನೊಬ್ಬನ ಶೌರ್ಯದ ಗುಣಗಾನ ಮಾಡುವ ಶಿಲಾಶಾಸನವೇ ‘ವೀರಗಲ್ಲು’. ಈ ಎಲ್ಲ ಶಾಸನಗಳಲ್ಲಿ ಬರವಣಿಗೆ ಗದ್ಯದಲ್ಲಿ ಇರಬಹುದು, ಪದ್ಯದಲ್ಲಿ ಇರಬಹುದು ಅಥವಾ ಗದ್ಯ-ಪದ್ಯ ರೂಪವಾಗಿರಬಹುದು. ಸಂಪೂರ್ಣ ಕನ್ನಡದಲ್ಲೇ ಇರಬಹುದು, ಆದರೆ, ಕನ್ನಡ-ಸಂಸ್ಕೃತ ಮಿಶ್ರಿತವಾಗಿರುವುದೇ ಹೆಚ್ಚು. ಕ್ರಿಸ್ತಪೂರ್ವ ಮೂರನೆಯ ಶತಮಾನದ ಅಶೋಕನ ಕಾಲದಿಂದಲೂ ಕರ್ನಾಟಕದಲ್ಲಿ ಶಿಲಾಲಿಪಿಗಳು ಮತ್ತು ತಾಮ್ರಪಟಗಳೂ ಸಿಕ್ಕಿವೆ; ಆದರೆ, ಅವು ಪ್ರಾಕೃತ ಅಥವಾ ಸಂಸ್ಕೃತಗಳಲ್ಲಿ ಬರೆದವು. ನಮಗೆ ಸಿಕ್ಕಿರುವ ಕನ್ನಡ ಶಾಸನಗಳಲ್ಲಿ ಕ್ರಿಸ್ತಶಕ ಐದನೆಯ ಶತಮಾನದ ಹಲ್ಮಿಡಿಯ ಶಾಸನವೇ ಅತಿ ಪ್ರಾಚೀನವಾದದ್ದು. ಇದರ ಭಾಷೆ ‘ಪೂರ್ವದ ಹಳೆಗನ್ನಡ’ ಎಂದು ಕರೆಯುವ ಕನ್ನಡದ ಪ್ರಾಚೀನ ಭಾಷಾರೂಪವನ್ನು ಪ್ರತಿನಿಧಿಸುತ್ತದೆ. (ನೋಡಿ: ಅನುಬಂಧ- 1 ರಲ್ಲಿ ಇರುವ ಹಲ್ಮಿಡಿಯ ಶಾಸನದ ಚಿತ್ರ). ಸುಮಾರು ಏಳನೆಯ ಶತಮಾನದ ‘ಕಪ್ಪೆ ಅರಭಟ್ಟನ ಬಾದಾಮಿಯ ಶಾಸನ’ ವು ಅನೇಕ ದೃಷ್ಟಿಗಳಿಂದ ಮಹತ್ವದ್ದಾಗಿದೆ. ಶಾಸನದ ಭಾಷೆ ಹಳಗನ್ನಡ; ಮೊದಲ ಶ್ಲೋಕ ಸಂಸ್ಕೃತದಲ್ಲಿದೆ. ಉಳಿದದ್ದು ‘ತ್ರಿಪದಿ’ಯಲ್ಲಿದೆ. ‘ಕನ್ನಡ ಛಂದಸ್ಸಿನ ತಾಯಿ ಬೇರು’ ಎನ್ನುತ್ತಾರಲ್ಲ, ಪ್ರೊ. ರಂ. ಶ್ರೀ ಮುಗಳಿ ಅವರು, ಆ ತ್ರಿಪದಿಯ ಮಟ್ಟಿನ ಮೊಟ್ಟ ಮೊದಲನೆಯ ರೂಪವು ಅದರಲ್ಲಿದೆ. ‘ಒಬ್ಬ ಕನ್ನಡ ವೀರನ ಆವೇಶಯುತವಾದ ಸ್ವಭಾವಚಿತ್ರವು ಅಲ್ಲಿದೆ. ಅದರಲ್ಲಿ ಭಾವ ಭಾಷೆಗಳ ಯೋಗ್ಯ ಮಿಲನವುಳ್ಳ ಸ್ವಯಂ ಪೂರ್ಣವಾದ ಭಾವಗೀತೆಯ ಸತ್ವವೂ ತುಂಬಿದೆ.’ (ನೋಡಿ, ‘ಕನ್ನಡ ಸಾಹಿತ್ಯ ಚರಿತೆ’್ರ, ಪುಟ 11-12). ‘ತ್ರಿಪದಿ’ಯ ಮಾತು ಬಂತು. ಅದರ ಬಗ್ಗೆ ಆಮೇಲೆ ವಿವೇಚಿಸೊಣ. ಈಗ ಬಾದಾಮಿಯ ಶಾಸನದ ಕಡೆ ತಿರುಗೋಣ. ‘ಬಾದಾಮಿ ಶಾಸನ’ ದ ಮೂಲಪಾಠ : ‘ಅಪಕೀರ್ತಿಗಿಂತ ಮರಣವೇ ಲೇಸು’ ಎಂದು ಬಗೆಯುತ್ತಿದ್ದ ಕಪ್ಪೆ ಅರಭಟ್ಟನೆಂಬ ಸಾಧುಪುರುಷನ ಕೀರ್ತಿಯನ್ನು ಕನ್ನಡದಲ್ಲಿ ತ್ರಿಪದಿಗಳಲ್ಲಿ ಹೊಗಳುವ, ವೀರಗಲ್ಲಿನ ರೂಪದ ಪ್ರಾಚೀನ ಸ್ಮಾರಕ ಈ ತಟ್ಟುಕೊಟಿ ಬಾದಾಮಿ ಶಾಸನ. ಆ ‘ಬಾದಾಮಿ ಶಾಸನ’ ಏನು? ಕಲ್ಲಿನ ಮೇಲೆ ಕೆತ್ತಿದ, ಹತ್ತು ಸಾಲಿನ ಆ ಶಾಸನದ ಮೂಲಪಾಠ, ಹೀಗಿದೆ (ಆಕರ: ಇಂಡಿಯನ್‌ ಆಂಟಿಕ್ವೆರಿ 10: 61; ಶಾಸನ ಪದ್ಯಮಂಜರಿ, 4, ಪುಟ 2; ‘ಕರ್ಣಾಟಕ ಪರಂಪರೆ’, ಸಂಪುಟ 1, ಪುಟ 222; 266; ‘ಬಾದಾಮಿ ಶಾಸನ’ ಚಿತ್ರಕ್ಕೆ, ಅನುಬಂಧ-2ನ್ನು ನೋಡಿ): ಕಪ್ಪೆ ಅರಭಟ್ಟನ್‌ ಶಿಷ್ಟಜನಪ್ರಿಯನ್‌ ಕಷ್ಟಜನವರ್ಜಿತನ್‌ ಕಲಿಯುಗ ವಿಪರೀತನ್‌ ವರನ್ತೇಜಸ್ವಿನೋಮೃತ್ಯುರ್ನತುಮಾನಾವಖಂಡನಂ ಮೃತ್ಯುಸ್ತತ್ಕ್ಷಣಿಕೋ ದುಃಖಮ್ಮಾನಭಂಗಂ ದಿನೇದಿನೇ ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯ್ಯಂ ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್ಮಾಧವನೀತನ್‌ ಪೆರನಲ್ಲ ಒಳ್ಳಿತ್ತ ಕೆಯ್ವಾರಾರ್ಪೊಲ್ಲದುಮದರಂತೆ ಬಲ್ಲಿತ್ತು ಕಲಿಗೆ ವಿಪರೀತಾಪುರಾಕೃತಮಿಲ್ಲಿ ಸಂದಿಕ್ಕುಮದು ಬನ್ದು ಕಟ್ಟಿದ ಸಿಂಘಮನ್ಕೆಟ್ಟೊದೆನೆಮಗೆನ್ದು ಬಿಟ್ಟವೋಲ್ಕಕಲಿಗೆವಿ ಪರೀತಂಗಹಿತರ್ಕ್ಕಳ್ಕೆಟ್ಟರ್ಮ್ಮೇಣ್ಸತ್ತರವಿಚಾರಂ (ಆರನೆಯ ಸಾಲಿನಲ್ಲಿ ‘ಪೆರನಲ್ಲ’ ಮತ್ತು ಏಳನೆಯ ಸಾಲಿನಲ್ಲಿ ‘ಅದರಂತೆ’ ಎಂಬ ಕಡೆ, ಈಗಿನ ‘ರ’ ಬದಲು ಮೂಲದಲ್ಲಿ ಶಕಟರೇಫ ಇದೆ. ಲಿಪಿ ಏಳನೆಯ ಶತಮಾನದ ಕನ್ನಡದಲ್ಲಿದೆ.) ಶಾಸನದ ಸುಲಭ ಪಾಠ: ಈ ಶಾಸನದ ಸುಲಭಪಾಠ ಐದು ಪದ್ಯಗಳಲ್ಲಿ ಹೀಗಿದೆ: ಕಪ್ಪೆ ಅರಭಟ್ಟನ್‌ ಶಿಷ್ಟಜನಪ್ರಿಯನ್‌ ಕಷ್ಟಜನವರ್ಜಿತನ್‌ ಕಲಿಯುಗ ವಿಪರೀತನ್‌।।1।। ವರನ್‌ ತೇಜಸ್ವಿನೋ ಮೃತ್ಯುರ್‌ ನ ತು ಮಾನ-ಅವಖಂಡನಂ ಮೃತ್ಯುಸ್‌ ತತ್ಕ್ಷಣಿಕೋ ದುಃಖಮ್‌ ಮಾನಭಂಗಂ ದಿನೇದಿನೇ।।2।। ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ ಬಾಧಿಪ್ಪ ಕಲಿಗೆ। ಕಲಿಯುಗವಿಪರೀತನ್‌ ಮಾಧವನ್‌ ಈತನ್‌ ಪೆರನಲ್ಲ।।3।। ಒಳ್ಳಿತ್ತ ಕೆಯ್ವಾರಾರ್‌ ಪೊಲ್ಲದುಮ್‌ ಅದರಂತೆ ಬಲ್ಲಿತ್ತು ಕಲಿಗೆ। ವಿಪರೀತಾ ಪುರಾಕೃತಮ್‌ ಇಲ್ಲಿ ಸಂದಿಕ್ಕುಮ್‌ ಅದು ಬಂದು।।4।। ಕಟ್ಟಿದ ಸಿಂಘಮನ್‌ ಕೆಟ್ಟೊದೆನ್‌ ಎಮಗೆಂದು ಬಿಟ್ಟವೋಲ್‌ ಕಲಿಗೆ। ವಿಪರೀತಂಗ್‌ ಅಹಿತರ್ಕ್ಕಳ್‌ ಕೆಟ್ಟರ್‌ ಮೇಣ್‌ ಸತ್ತರ್‌ ಅವಿಚಾರಂ।।5।। *** ಶಾಸನದ ಭಾವಾರ್ಥ : ಬಾದಾಮಿ ಶಾಸನದ ಕನ್ನಡ ಹಳಗನ್ನಡವಾದರೂ, ಅದು ಬೇಗ ಅರ್ಥವಾಗದಷ್ಟು ಕಷ್ಟಪದಗಳಿಂದ ಕೂಡಿದ್ದೇನಲ್ಲ. ಆ ಪದ್ಯಗಳ ಅರ್ಥವನ್ನು ಸ್ಥೂಲವಾಗಿ ಹೀಗೆ ಹೇಳಬಹುದು: ‘ಈ ಕಪ್ಪೆ ಅರಭಟ್ಟ ಎಂಬುವನು ತನ್ನನ್ನು ಆಶ್ರಯಿಸಿದ ಎಲ್ಲ ಒಳ್ಳೆಯ ಜನರ ಪ್ರೀತಿಪಾತ್ರನು; ಕೆಟ್ಟ ಕೆಲಸ ಮಾಡುವ ತನಗೆ ಆಗದ ಜನರನ್ನು ಕೊನೆಗಾಣಿಸುವ, ಕಲಿಯುಗಕ್ಕೇ ವಿಪರೀತನೆನಿಸುವಷ್ಟು ಧೀರನು, ಇವನು! ।।1।। ‘ತೇಜಸ್ವಿಗಳಾದವರಿಗೆ ಶ್ರೇಷ್ಠವಾದುದು ಯಾವುದು? (ವೀರ)ಮರಣವೇ ಹೊರತು ಮಾನಭಂಗವಲ್ಲ ; ಏಕೆಂದರೆ, ಮೃತ್ಯು ತತ್ಕಾಲಕ್ಕೆ ಕ್ಷಣಿಕವಾದ ದುಃಖವನ್ನು ತಂದೊಡ್ಡಬಹುದು, ಆದರೆ, ಮಾನಭಂಗ? ಅದು ಅನುದಿನವೂ ದುಃಖವನ್ನು ತರುತ್ತಲೇ ಇರುತ್ತದೆ! ।।2।। ‘ಇವನು ಒಳ್ಳೆಯವರಿಗೆ ಒಳ್ಳೆಯವನು, ಸಾಧುವಾದ ಮನುಷ್ಯ; ಮಧುರವಾದ ನಡತೆಯುಳ್ಳ ಸದಾಚಾರದವನಿಗೆ ಮಾಧುರ್ಯದ ಮನುಷ್ಯ; ಬಾಧಿಸುವ ಕಲಿಗೆ (ಅಂದರೆ, ಶೂರನಿಗೆ) ಇವನು ವಿಪರೀತನಾದ ಕಲಿಯುಗ. ಇವನು ವಿಷ್ಣುವೇ ಹೊರತು ಬೇರೆಯಲ್ಲ ।।3।। ‘ಒಳ್ಳೆಯದನ್ನು ಮಾಡುವವರಿಗೂ ಕೆಡಕನ್ನು ಮಾಡುವವರಿಗೂ ಅವರವರಿಗೆ ಇವನು ಅದನ್ನೇ ಇನ್ನೂ ಹೆಚ್ಚಾಗಿ ಮಾಡುತ್ತಾನೆ. ಇವನು ಕಲಿಗೆ ವಿಪರೀತನು. ಹಿಂದಿನ ಜನ್ಮದಲ್ಲಿ ಜನರು ಏನು ಮಾಡಿದ್ದರೋ ಅವರವರ ಕರ್ಮಾನುಸಾರ ಆ ಫಲವನ್ನು ಅವರು ಇವನಿಂದ ಪಡೆಯುತ್ತಾರೆ।।4।। ‘ಕಟ್ಟಿದ ಸಿಂಹವನ್ನು ಬಿಟ್ಟರೆ ಏನು ಕೆಟ್ಟುಹೋಯ್ತು- ಎಂದು ಅದನ್ನು ಬಿಟ್ಟಂತೆ ಈಗ ಆಗಿದೆ. ಈ ಸಿಂಹಸ್ವರೂಪನಾದ, ಕಲಿಗೆ ವಿಪರೀತನಾಗಿರುವ ಇವನ ಕೈಗೆ ಸಿಕ್ಕು ಶತ್ರುಗಳು ಕೆಟ್ಟರು ಅಥವಾ ಸತ್ತರು. ಇದು ಅವರವರ ಅವಿಚಾರದ ಫಲ ।।5।।’ *** ಕನ್ನಡದಲ್ಲಿ ‘ತ್ರಿಪದಿ’: ‘ತ್ರಿಪದಿ’ ಎಂದೊಡನೆ ನಮಗೆ ಥಟ್ಟನೆ ನೆನಪಾಗುವುದು ಸರ್ವಜ್ಞನ ನುಡಿಮುತ್ತುಗಳು. ಪ್ರತಿಯಾಬ್ಬ ಕನ್ನಡಿಗನೂ ಒಂದೆರಡಾದರೂ ಸರ್ವಜ್ಞ ವಚನಗಳನ್ನು ನೆನಪಿಟ್ಟುಕೊಂಡು, ಸಮಯೋಚಿತವಾಗಿ ತನ್ನ ಮಾತುಕತೆಗಳಲ್ಲಿ ಅವನ್ನು ಬಳಸುವದರಿಂದಲೇ ಅವನು ಎಷ್ಟು ಜನಪರ ಕವಿ, ಆ ಬಗೆಯ ಪದ್ಯರೂಪ ಜನರ ಎಷ್ಟೊಂದು ಮೆಚ್ಚುಗೆಯ ಪದಬಂಧ - ಎಂದೆಲ್ಲ ಹೊಗಳಿ ಹಾಡಲು ಕಾರಣವಾಗುತ್ತದೆ. ಈ ‘ತ್ರಿಪದಿ’ಗೆ ಕನ್ನಡಸಾಹಿತ್ಯದಲ್ಲಿ ವಿಶೇಷ ಸ್ಥಾನವುಂಟು. ‘ತ್ರಿಪದಿಯೇ ಕನ್ನಡ ವೃತ್ತಗಳ ಗಾಯತ್ರಿ’- ಎಂದರು, ಪ್ರೊ. ದ.ರಾ. ಬೇಂದ್ರೆ ಅವರು. ಎಷ್ಟು ಅರ್ಥಪೂರ್ಣವಾದದ್ದು, ಈ ಮಾತು! ಪ್ರಸಿದ್ಧವಾದ ‘ಓಂ ತತ್‌ ಸವಿತೃ ವರೇಣ್ಯಂ। ಭರ್ಗೋ ದೇವಸ್ಯ ಧೀಮಹಿ। ಧಿಯೋ ಯೋ ನ: ಪ್ರಚೋದಯಾತ್‌।।’ ಸಂಸ್ಕೃತ ಮಂತ್ರದ ಛಂದಸ್ಸು ‘ಗಾಯತ್ರಿ’ ಎಂದು. ಗಾಯತ್ರಿಯಂತೆಯೇ, ತ್ರಿಪದಿಯೂ ಮೂರುಸಾಲಿನ ಪದ್ಯ. ವೈದಿಕ ವೃತ್ತಗಳಲ್ಲಿ ಗಾಯತ್ರಿ ಅತಿ ಪ್ರಾಚೀನ ಮತ್ತು ಅತಿ ಗೌರವಾನ್ವಿತ; ತ್ರಿಪದಿಯೂ ಕೂಡ ಹಾಗೆಯೇ ಕನ್ನಡ ವೃತ್ತಗಳಲ್ಲಿ ಬಹಳ ಹಳೆಯ ಕಾಲದ್ದು ಮತ್ತು ಬಹಳ ಹೆಚ್ಚುಗಾರಿಕೆಯುಳ್ಳದ್ದು. ಕನ್ನಡದಲ್ಲಿ ತ್ರಿಪದಿಯ ಪ್ರಾಚೀನತೆಯನ್ನೂ, ಮಹತ್ವವನ್ನೂ ಹೀಗೆ ಅನೇಕರು ವಿಶ್ಲೇಷಿಸಿದ್ದಾರೆ. ಅದರಲ್ಲಿ ಗಮನಾರ್ಹವಾದದ್ದು ಡಾ.ಎಂ. ಚಿದಾನಂದ ಮೂರ್ತಿಗಳ ‘ತ್ರಿಪದಿ- ಅದರ ಸ್ವರೂಪ ಮತ್ತು ಇತಿಹಾಸ’- ಎಂಬ ವಿಸ್ತೃತ ಲೇಖನ. (ನೋಡಿ: ‘ಛಂದೋತರಂಗ’, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ, 1993, ಪುಟ 88-133), ಬಾದಾಮಿಯ ಶಾಸನದ ತ್ರಿಪದಿಗಳನ್ನು ಅಲ್ಲಿ ಅವರು ಉದಾಹರಣೆಗೆ ತೆಗೆದುಕೊಂಡಿದ್ದಾರೆ. (ಹೊರನೋಟಕ್ಕೆ) ತ್ರಿಪದಿ ನೋಡಲು ಮೂರು ಸಾಲಿನ ಪದ್ಯವಾದರೂ, ಓದಿದಾಗ ಅದು ನಾಲ್ಕು ಸಾಲಿನ ಪದ್ಯವಾಗುತ್ತದೆ. ಬಾದಾಮಿಯ ಶಾಸನದ ತ್ರಿಪದಿಯನ್ನೇ ತೆಗೆದುಕೊಳ್ಳಿ. ಅಲ್ಲಿ ಎರಡನೆಯ ಪಾದದ ಪುನರಾವರ್ತನೆಯ ವಿಷಯವನ್ನು ಒಂದು ಅಡ್ಡ ಗೀಟಿನಿಂದ ಸೂಚಿಸಬಹುದು- ಎಂಬುದು ಅವರ ಅಭಿಪ್ರಾಯ. ‘ಕನ್ನಡ ಕೈಪಿಡಿ’ (ಸಂ. ಬಿ. ಎಂ. ಶ್ರೀಕಂಠಯ್ಯ, ಸಂಪುಟ 1, 1955, ಪುಟ 124)ಯಲ್ಲಿಯೂ ಸಹ, ‘ಗೆರೆಗಳು ಮೂಲದಲ್ಲಿದ್ದಂತೆ ಕೊಟ್ಟಿದೆ; ಎರಡನೆ ಪಂಕ್ತಿಯ ಗೆರೆ ಪುನರಾವೃತ್ತಿಯನ್ನು ಸೂಚಿಸುತ್ತದೆ.’-ಎಂದಿದ್ದರೂ, ಬಾದಾಮಿ ಶಾಸನದ ಚಿತ್ರದಲ್ಲಿ ಯಾವುದೇ ಗೆರೆಯೂ ಕಾಣಿಸುತ್ತಿಲ್ಲ! ಈ ಕಪ್ಪೆ ಅರಭಟ್ಟ ಯಾರು ? : ಸರಿ, ವಿಕ್ರಮಾರ್ಜಿತ ಸತ್ತ್ವದ ಮೃಗೇಂದ್ರ, ಕೆಚ್ಚೆದೆಯ ಕನ್ನಡವೀರ, ಧರ್ಮಭೀರು ಈ ಶಾಸನದ ನಾಯಕ. ಇವನ ಶೌರ್ಯ ಔದಾರ್ಯಾದಿಗಳನ್ನು ಚಿತ್ರಿಸುವುದರ ಮೂಲಕ, ಲಲಿತವಾದ ಓಟದಿಂದಲೂ ಕಾವ್ಯ ಸೌಂದರ್ಯದಿಂದಲೂ ಎಲ್ಲರಿಂದಲೂ ಮಾನ್ಯವಾಗಿ, ಕನ್ನಡ ಸಂಸ್ಕೃತಿಯನ್ನೇ ಬಾದಾಮಿ ಶಾಸನದ ತ್ರಿಪದಿಗಳು ಬಣ್ಣಿಸಿವೆ, ಉಲ್ಲೇಖಾರ್ಹವಾಗಿವೆ- ಎನ್ನೋಣ. ಚಿಕ್ಕದಾಗಿ, ಚೊಕ್ಕವಾಗಿ ಮಾಡಿದ ವ್ಯಕ್ತಿಚಿತ್ರಣ ಸಿಕ್ಕಿದಂತಾಯ್ತು. ಆದರೆ, ಈ ‘ಕಪ್ಪೆ ಅರಭಟ್ಟ’ ಎಂಬುವನು ಯಾರು? ಇನ್ನೂ ಗೊತ್ತಿಲ್ಲ. ಕನ್ನಡದಲ್ಲಿ ಬಹಳ ಹಿಂದೆ, ಹಳಗನ್ನಡದ ಕಾಲದಲ್ಲಿ ‘ಅರಂ’ (ಇಲ್ಲಿ, ‘ರ’ ಈಗ ಬಳಕೆಯಲ್ಲಿಲ್ಲದ ‘ಶಕಟರೇಫ’!) ಪದ ಇತ್ತು. ಆ ‘ಅರಂ’ ಎಂಬ ಪದ ‘ಧರ್ಮ’ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿತ್ತು. (ಉದಾಹರಣೆಗೆ, ‘ಅರವಟ್ಟಿಗೆ’ = ದಾರಿಹೋಕರಿಗೆ ನೀರು ಇತ್ಯಾದಿಗಳನ್ನು ದಾನವಾಗಿ ನೀಡುವ ಧರ್ಮಶಾಲೆ, ಧರ್ಮಛತ್ರ). ಪ್ರೊ. ಎನ್‌. ಎಸ್‌. ಲಕ್ಷ್ಮೀನಾರಾಯಣ ಭಟ್ಟರು ಅಭಿಪ್ರಾಯ ಪಡುತ್ತಾರೆ: ತುಂಬಾ ದಾನ ಧರ್ಮಗಳನ್ನೆಸಗುತ್ತಿದ್ದ ಯಾರೋ ಪುಣ್ಯಾತ್ಮ ‘ಅರಭಟ್ಟ’ ಇವನಿರಬೇಕು. ಜನರ ಬಾಯಲ್ಲಿ, ಹೆಸರಾದವರ ಗುಣವಿಶೇಷಣಗಳು, ವೃತ್ತಿವೈಶಿಷ್ಟ್ಯಗಳು ಅವರ ಹೆಸರಿಗೆ ಅಂಟಿಕೊಳ್ಳುವುದು ಅಸಹಜವೇನಲ್ಲ. ಈ ‘ಧರ್ಮಭಟ್ಟ’ನೂ ಹಾಗೆ ‘ಅರಭಟ್ಟ’ನಾಗಿರಬಹುದೇ?-ಎಂದು. ಹಾಗಾದರೆ, ಈ ‘ಕಪ್ಪೆ’ ಏನು? ಇದಕ್ಕೊಂದು ಸಮಾಧಾನವಿದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಮಾನಾರ್ಥಕ ಪದಗಳನ್ನು ಹುಟ್ಟುಹಾಕುವಾಗ ಅನುವಾದ-ಸ್ವೀಕರಣ(ಟ್ರಾನ್ಸ್‌ಸ್‌ಲೇಷನ್‌-ಲೋನ್‌)ಪದಗಳನ್ನು ಬಳಕೆಲ್ಲಿ ತರುವುದುಂಟು. ಹಲ್ಲು-ಪುಡಿ (ಟೂತ್‌-ಪೌಡರ್‌), ಭಗೀರಥ-ಪ್ರಯತ್ನ (ಹರ್ಕ್ಯುಲಿಯನ್‌ ಟಾಸ್ಕ್‌), ಹಂಸಗೀತೆ(ಸ್ವಾನ್‌-ಸಾಂಗ್‌)ಗಳು ಹೀಗೆ ಬಂದವು. ಇದರಂತೆ, ಹಿಂದೆ ಸಂಸ್ಕೃತದ ‘ರಾಜಕುಮಾರ’ ‘ರಾಜಕುಮಾರಿ’ ‘ರಾಜಹಂಸ’ ‘ರಾಜಕೀರ’ ‘ರಾಜಜಂಬೂ’ ಪದಗಳಿಗೆ ನಾವು ಬಳಸಿದ್ದುದು ಅನುಕ್ರಮವಾಗಿ ಅರಗುವರ, ಅರಗುವರಿ, ಅರಸಂಚೆ, ಅರಗಿಳಿ, ಅರನೇರಳೆ-ಗಳು. ಇಲ್ಲಿನ ‘ಅರ’ವನ್ನು ಗಮನಿಸಿ. ಪ್ರೊ. ತೀ ನಂ ಶ್ರೀ ಅವರು ಒಂದು ಕಡೆ, ‘ಅರಸು’ ‘ಅರಸನ’ ಪದದೊಂದಿಗೆ ಬೇರೆ ಕನ್ನಡ ಪದಗಳು ಸೇರಿ, ಸಮಾಸವಾದಾಗ, ಆ ಪದದ ‘ಸು’ ‘ಸನ’ ಲೋಪವಾಗುವುದನ್ನು ಸೂಚಿಸುತ್ತ, ‘ಅರಸು+ಗಿಳಿ=ಅರಗಿಳಿ’, ‘ಅರಸು+ಮನೆ=ಅರಮನೆ’ಗಳ, ಪ್ರಯೋಗವನ್ನು ತೋರಿಸುತ್ತಾರೆ. ಇದನ್ನು ಉದಾಹರಿಸುತ್ತ, ಪ್ರೊ. ಚಿದಾನಂದಮೂರ್ತಿಗಳು ನಮ್ಮ ಬಾದಾಮಿಶಾಸನದ ನಾಯಕ ‘ಕಪ್ಪೆಅರ(ಸ) ಭಟ್ಟ’ ಎಂಬ ದೊರೆ ಇರಬಹುದೇ?- ಎಂದು ಕೇಳುತ್ತಾರೆ. ‘-ಅರ’ (ಅಥವಾ ‘ರ’) ಎಂದು ಕೊನೆಗೊಳ್ಳುವ ಅನೇಕ ಹೆಸರುಗಳು ಶಾಸನಗಳಲ್ಲಿ ದೊರೆಯುತ್ತವೆ. ಉದಾಹರಣೆಗೆ, ಕನ್ನರ, ಸಾಂತರ, ಕರ್ಕರ, ಗೋವಿಂದರ, ಕತ್ಯರ. ಇವುಗಳು ಅನುಕ್ರಮವಾಗಿ, ಕನ್ನರಸ, ಸಾಂತರಸ, ಕರ್ಕರಸ, ಗೋವಿಂದರಸ, ಕತ್ಯರಸ ಎಂಬುವುಗಳ ಸವೆದುಹೋದ ರೂಪ ಎಂದು ಅವರು ತೀರ್ಮಾನಿಸುತ್ತಾರೆ. (ನೋಡಿ: ಚಿದಾನಂದಮೂರ್ತಿ, ಪ್ರಬುದ್ಧ ಕರ್ನಾಟಕ 48:3, 1966, ಪುಟ 58-59; 49:1, 1967, ಪುಟ167). ಅವರು ಮುಂದುವರಿದು, ತೀನಂಶ್ರೀ ಅವರ ಅಭಿಪ್ರಾಯದಂತೆ, ‘ಈ ಹೆಸರು ಕಪ್ಪೆ+ ಅರಭಟ್ಟ’ ಅಲ್ಲ; ಕಪ್ಪೆಯರ+ ಭಟ್ಟ ಇರಬೇಕು ಎಂದು ತಿಳಿಸುತ್ತಾ, ಇದನ್ನು ಒಪ್ಪಿದರೆ ಕಪ್ಪೆಯರ ಎಂಬುದು ‘ಕಪ್ಪೆಯರಸ’ ಎಂಬುದರ ಸಂಕ್ಷಿಪ್ತ್ತರೂಪವಾಗಿರಬೇಕೆಂದು ಊಹಿಸುತ್ತಾರೆ. ಇಲ್ಲಿನ ‘ಕಪ್ಪೆ’? ‘ಅರಸಿಯ ಕೆರೆ’ ಈಗ ‘ಅರಸೀಕೆರೆ’ ಆಗಿದೆ (ನೋಡಿ ಅರಸೀಕೆರೆ ಶಾಸನ 33, 5 ಅಕ 79; 31, 5 ಅಕ 77). ‘ಕಾಶಿ’ಯ ‘ಅಪ್ಪ’ ‘ಕಾಶ್ಯಪ್ಪ, ವಿಶ್ವನಾಥ’ ನಾದಂತೆ, ಕೃಷ್ಣಯ್ಯ ಗೌಡ ‘ಕೃಷ್ಣೇಗೌಡ’ ಆದಂತೆ, ಜವರಯ್ಯ ಗೌಡ ‘ಜವರೇಗೌಡ’ ಆದಂತೆ, ‘ಕಪ್ಪಯ್ಯ ಅರಸ ಭಟ್ಟ’ ಜನರ ಬಾಯಲ್ಲಿ ‘ಕಪ್ಪೇ ಅರ ಭಟ್ಟ’ ಆದನೇ? ‘ಕಪ್ಪೆ’ಗೆ ನಾವೀಗ ‘ವಟಗುಟ್ಟುವ ನೀರೊಳಗೆ ಜೀವಿಸುವ ಪ್ರಾಣಿ’ ಎಂದು ಒಂದೇ ಅರ್ಥ ಇಟ್ಟುಕೊಳ್ಳಬೇಕಾದ್ದಿಲ್ಲ. ‘ಕಪ್ಪು’ ಮೈಬಣ್ಣದಿಂದ ‘ಕಪ್ಪಯ್ಯ’ ಬಂದಿರಬಹುದು. ಮೈಸೂರಿನ ನಮ್ಮ ಸರಸ್ವತೀಪುರದ ಹತ್ತಿರ ಇರುವ ‘ಕನ್ನೇಗೌಡನ ಕೊಪ್ಪಲು’ ಮೊದಲು ಸುತ್ತಮುತ್ತಲ ನೆಲಕ್ಕಿಂತ ಎತ್ತರದ ಜಾಗದಲ್ಲಿ ಇದ್ದಿರಬೇಕು. ಅದು ಕೃಷ್ಣಯ್ಯ ಕನ್ಹಯ್ಯ ಕನ್ನಯ್ಯ ಕನ್ನೇಗೌಡ ಇದ್ದ ಜಾಗ. ಹಾಗೆಯೇ, ‘ಎತ್ತರದ ಜಾಗ’ ಎಂಬ ಅರ್ಥದಲ್ಲಿ ಕೊಪ್ಪಲು ‘ಕೊಪ್ಪೆ’ಯಾಗಿ, ‘ಕೊಪ್ಪೆ’ ಯ ಅರಸ ಈ ‘ಕಪ್ಪೆಅರಭಟ್ಟ’ ಇರಬಹುದೇ? ಸಂಶೋಧಕರಿಗೆ ಒಂದು ಒಳ್ಳೆಯ ಆಹಾರವಾಗಿ ‘ಕಪ್ಪೆ ಅರಭಟ್ಟ’ನ ಇತಿವೃತ್ತ ಇನ್ನೂ ಉಳಿದಿದೆ! (ಆಕರ: ಪ್ರಾ. ನರಸಿಂಹ ಮೂರ್ತಿಗಳ ‘ಕನ್ನಡನಾಡಿನ ಶಾಸನಗಳು’; ‘ಕರ್ನಾಟಕ ಪರಂಪರೆ’ ಸಂಪುಟ 1; ಹಲ್ಮಿಡಿ ಶಾಸನ, ಚಿತ್ರ 12; ಬಾದಾಮಿ ಶಾಸನ, ಚಿತ್ರ 38)

ಕೃಪೆ :Read more at: http://kannada.oneindia.com/column/hari/2004/040204badami-shasana.html

  ಬಾದಾಮಿ ಶಾಸನ (ಕಪ್ಪೆ ಅರಭಟ್ಟನ ಶಾಸನ)ಕ್ರಿ.ಶ. 7ನೆಯ ಶತಮಾನದ ಬಾದಾಮಿ ಶಾಸನವು ಅನೇಕ ಕಾರಣಗಳಿಗಾಗಿ ಮುಖ್ಯವಾಗಿದೆ. ಇದು ಕರ್ನಾಟಕದ ಅಜ್ಞಾತ ವೀರನೊಬ್ಬನ ಗುಣಗಳನ್ನು ಮುಕ್ತವಾಗಿ ವಿವರಿಸುತ್ತದೆ. ಇದು ಕನ್ನಡ ಮತ್ತು ಸಂಸ್ಕೃತಗಳಲ್ಲಿ ರಚಿತವಾಗಿರುವ ದ್ವಿಭಾಷಾ ಶಾಸನ. ಆದರೆ, ಕಪ್ಪೆ ಅರಭಟ್ಟನನ್ನು ಕುರಿತ ಪದ್ಯಗಳೆಲ್ಲವೂ ಕನ್ನಡದಲ್ಲಿ ಮತ್ತು ಆ ಭಾಷೆಯ ಅತ್ಯಂತ ಹಳೆಯ ಛಂದೋರೂಪಗಳಲ್ಲಿ ಒಂದಾದ ತ್ರಿಪದಿಯಲ್ಲಿ ರಚಿತವಾಗಿವೆ. ತ್ರಿಪದಿಯು ದ್ರಾವಿಡ ಮೂಲಗಳಿಂದ ಒಡಮೂಡಿರುವ ಸಂಭವವಿದೆ. ಈ ಶಾಸನವು ಕನ್ನಡದಲ್ಲಿ ಸಿಕ್ಕಿರುವ ಮೊಟ್ಟಮೊದಲ ತ್ರಿಪದಿಗಳನ್ನು ಒಳಗೊಂಡಿದೆ.
ಕಪ್ಪೆ ಅರಭಟ್ಟನಿಗೂ ಕಪ್ಪೆಗೂ ಯಾವ ಸಂಬಂಧವೂ ಇಲ್ಲ. ಈ ಪದವನ್ನು ಕಪ್ಪೆಯರ ಭಟ್ಟ(ತೀ.ನಂ.ಶ್ರೀ.) ಮತ್ತು ಕಪ್ಪಡಿ ಯರ ಭಟ್ಟ (ಎಂ. ಎಂ. ಕಲಬುರ್ಗಿ) ಎಂಬುದಾಗಿ ಅರ್ಥೈಸಲಾಗಿದೆ. ಎರಡೂ ವಿವರಣೆಗಳು ಅವನ ವಂಶನಾಮದಿಂದ ಸ್ಫೂರ್ತಿ ಪಡೆದಿವೆ.
ಈ ಶಾಸನದ ಅರ್ಥವನ್ನು ಹೀಗೆ ಸಂಗ್ರಹಿಸಬಹುದು: ಅರಭಟ್ಟನನ್ನು ಒಳ್ಳೆಯ ಜನರು ಇಷ್ಟಪಡುತ್ತಾರೆ ಮತ್ತು ದುಷ್ಟರು ಅವನಿಗೆ ಹೆದರುತ್ತಾರೆ. ಅವನು ತನ್ನ ಬಗ್ಗೆ ಸರಿಯಾಗಿ ನಡೆದುಕೊಳ್ಳುವವರಿಗೆ ತಾನೂ ಒಳ್ಳೆಯವನು. ಆದರೆ, ತನಗೆ ತೊಂದರೆ ಕೊಡುವವರಿಗೆ ಅವನು ಅತ್ಯಂತ ಕ್ರೂರಿಯಾಗಿರುತ್ತಾನೆ. ಈ ಗುಣದಲ್ಲಿ ಅವನು ಸಾಕ್ಷಾತ್ ವಿಷ್ಣುವಿಗೆ ಸರಿಸಮಾನ. ತಮ್ಮ ಪೂರ್ವಜನ್ಮದ ಕರ್ಮಗಳ ಪರಿಣಾಮವಾಗಿ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುವ ಜನರು ಇರುತ್ತಾರೆ. ಸ್ವಲ್ಪವೂ ವಿಚಾರ ಮಾಡದ ಇಂತಹವರು, ಪಂಜರದಲ್ಲಿ ಸೆರೆಯಾಗಿರುವ ಸಿಂಹವನ್ನು ಹಿಂದೆ ಮುಂದೆ ನೋಡದೆ ಹೊರಗೆ ಬಿಡುವ ಮೂರ್ಖರಂತೆ, ಸತ್ತು ನಾಶವಾಗುತ್ತಾರೆ.
ಈ ಶಾಸನವನ್ನು ಬಾದಾಮಿ ಪಟ್ಟಣದ ಉತ್ತರ ಗುಡ್ಡದ ಒಂದು ಬದಿಯಲ್ಲಿ ನೆಲಮಟ್ಟದಿಂದ ಸುಮಾರು ಹತ್ತು ಹನ್ನೆರಡು ಅಡಿ ಎತ್ತರದಲ್ಲಿ ಕಂಡರಿಸಲಾಗಿದೆ. ಊರಿನ ನೈರುತ್ಯ ಭಾಗದಲ್ಲಿರುವ ಕೃತಕವಾದ ಕೊಳಕ್ಕೆ ಇದು ಎದುರಾಗಿದೆ. ಈ ಶಾಸನವು 2 ಅಡಿ, 10 1/3 ಅಂಗುಲ ಅಗಲ ಮತ್ತು 3 ಅಡಿ 4 1/2 ಅಂಗುಲ ಎತ್ತರದ ಚದುರಳತೆಯ ಜಾಗದಲ್ಲಿ ಲಿಖಿತವಾಗಿದೆ. ಶಾಸನದ ಅರ್ಥವು ಸ್ಪಷ್ಟವಾಗಿಲ್ಲ. ಆದರೆ ಅದು ಸ್ಥಳೀಯ ವೀರನೂ ಸಂತನೂ ಆದ ಕಪ್ಪೆ ಅರಭಟ್ಟನ ಗುಣವರ್ಣನವೆಂಬ ಸಂಗತಿಯು ಸ್ಪಷ್ಟವಾಗಿದೆ. ಶಾಸನದ ಕೆಳಗೆ ಸುಮಾರು ವೃತ್ತಾಕಾರದ ಪ್ರದೇಶದೊಳಗೆ ಹತ್ತು ದಳಗಳಿರುವ ಕಮಲದಂತೆ ಕಾಣುವ ಹೂವನ್ನು ಕೆತ್ತಲಾಗಿದೆ. ಅದರಿಂದ ಒಂದು ವಸ್ತ್ರ ವಿನ್ಯಾಸವು ನೇತಾಡುತ್ತಿರುವಂತೆ ಕೆತ್ತಲಾಗಿದೆ.
ಈ ಶಾಸನದಲ್ಲಿ ಬಳಸಿರುವ ಕನ್ನಡವು ಪೂರ್ವದ ಹಳಗನ್ನಡವು ಹಳಗನ್ನಡವಾಗಿ ಪರಿವರ್ತನೆಯಾಗುತ್ತದ್ದ ಹಂತಕ್ಕೆ ಸೇರಿದ್ದು, ಪದರಚನೆ ಮತ್ತು ವಾಕ್ಯರಚನೆಗೆ ಸಂಬಂಧಿಸಿದ ಕೆಲವು ಅಂಶಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತವೆ.
ಹೀಗೆ ಬಾದಾಮಿಯ ಶಾಸನವು ಭಾಷಾಶಾಸ್ತ್ರ, ಛಂದಸ್ಸು ಮತ್ತು ಸಾಹಿತ್ಯ ಎಂಬ ಮೂರು ನೆಲೆಗಳಿಂದಲೂ ಬಹಳ ಮುಖ್ಯವಾದುದು.
ಶಾಸನದ ಮೂಲಪಾಠ
ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್ ಕಷ್ಟಜನವರ್ಜಿತನ್ ಕಲಿಯುಗ ವಿಪರೀತನ್ ವರನ್ತೇಜಸ್ವಿನೋ ಮೃತ್ತ್ಯರ್‍ನತು ಮಾನಾವಖಣ್ಡನಂ ಮೃತ್ತ್ಯುಸ್ತತ್ಕ್ಷಣಿಕೋ ದುಃಖಮ್ ಮಾನಭಂಗನ್ ದಿನೇದಿನೇ ಸಾಧುಗೆ ಸಾಧು ಮಾಧೂರ್ಯ್ಯಂಗೆ ಮಾಧೂರ್ಯ್ಯಂ ಬಾಧಿಪ್ಪ ಕಲಿಗೆ ವಿಪರೀತನ್ ಮಾಧವನೀತನ್ ಪೆರನಲ್ಲ ಒಳ್ಳಿತ್ತ ಕೆಯ್ವೊರ್ ಆರ್ ಪ್ಪೊಲ್ಲದುಮ್ ಅದರನ್ತೆ ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತಂ ಇಲ್ಲಿ ಸನ್ಧಿಕ್ಕುಂ ಅದು ಬಂದು ಕಟ್ಟಿದ ಸಿಂಘಮನ್ ಕೆಟ್ಟೊದ್ ಎಮಗೆನ್ದು ಬಿಟ್ಟವೊಲ್ ಕಲಿಗೆ ವಿ[]ರೀತ ಅಹಿತರ್ಕ್ಕಳ್ ಕೆಟ್ಟರ್ ಮೇಣ್ ಸತ್ತರ್ ಅವಿಚಾರಮ್. 

ಕೃಪೆ : ಕಣಜ.ಇನ್

ಆತಕೂರು ಶಾಸನ

 "ಕ್ರಿ.ಶ.950 ರಲ್ಲಿ ಸ್ಥಾಪನೆಯಾದ ಆತಕೂರು ಶಾಸನವು, ಕನ್ನಡಭಾಷೆಯ ಶಾಸನಗಳ ಸಮುದಾಯದಲ್ಲಿಯೇ ಆನನ್ಯವಾದುದು. ಅದು ದಕ್ಷಿಣ ಕರ್ನಾಟಕದ ಮಂಡ್ಯ ಜಿಲ್ಲೆಯ ಆತಕೂರು ಎಂಬ ಹಳ್ಳಿಯಲ್ಲಿ ದೊರಕಿತು. ಈಗ ಅದನ್ನು ಬೆಂಗಳೂರಿನ ಸರ್ಕಾರೀ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಈ ಶಾಸನವನ್ನು ರಾಷ್ಟ್ರಕೂಟ ರಾಜವಂಶಕ್ಕೆ ಸೇರಿದ ಕನ್ನರದೇವನ (ಮೂರನೆಯ ಕೃಷ್ಣ) ಆಳ್ವಿಕೆಯಲ್ಲಿ ಸ್ಥಾಪಿಸಲಾಯಿತು. ಕಾಳಿ ಎಂಬ ನಾಯಿಯ ಪರಾಕ್ರಮವನ್ನು ಪ್ರಶಂಸೆ ಮಾಡುವ ದಾಖಲೆ, ಎನ್ನುವುದು ಇದರ ವಿಶೇಷ.
ಬೂತುಗನೆಂಬ ರಾಜನು, ಮನಲಾರ ಎನ್ನುವವನ ನೆರವಿನಿಂದ ಚೋಳ ರಾಜನಾದ ರಾಜಾದಿತ್ಯನನ್ನು ಕೊಲ್ಲುತ್ತಾನೆ. ಕೃತಜ್ಞನಾದ ರಾಜನು, ಮನಲಾರನಿಗೆ ಅವನು ಬಯಸಿದ ವಸ್ತುವನ್ನು ನೀಡುವ ಆಶ್ವಾಸನೆ ಕೊಡುತ್ತಾನೆ. ಮನಲಾರನು ತನ್ನ ಪರಾಕ್ರಮಕ್ಕೆ ಪ್ರತಿಯಾಗಿ ಕಾಳಿ ಎಂಬ ನಾಯಿಯನ್ನು ಕೊಡಬೇಕೆಂದು ಕೇಳಿಕೊಳ್ಳುತ್ತಾನೆ. ರಾಜನು ಅವನ ಕೋರಿಕೆಯನ್ನು ಈಡೇರಿಸುತ್ತಾನೆ. ಸ್ವಲ್ಪ ಕಾಲದ ನಂತರ ಕಾಳಿಯು ಕಾಡುಹಂದಿಯ ಸಂಗಡ ಹೋರಾಡುವಾಗ ಸತ್ತುಹೋಗುತ್ತದೆ. ಮನಲಾರನಿಗೆ ಬಹಳ ದುಃಖವಾಗುತ್ತದೆ.
ಕಾಳಿಯ ಪರಾಕ್ರಮ ಮತ್ತು ನಿಷ್ಠೆಗಳ ಸ್ಮಾರಕವಾಗಿ, ಮನಲಾರನು ಒಂದು ವೀರಗಲ್ಲನ್ನು ನಿಲ್ಲಿಸುತ್ತಾನೆ. ಅದರಲ್ಲಿ ಆ ಹೋರಾಟದ ಪ್ರಸ್ತಾಪವಿದೆ. ಆ ಸ್ಥಳದಲ್ಲಿ ಎಡೆಬಿಡದೆ ಪೂಜೆಗಳನ್ನು ನಡೆಸಲು ಅಗತ್ಯವಾದ ದತ್ತಿಯನ್ನು ಕೂಡ ಮನಲಾರನು ನೀಡುತ್ತಾನೆ.
ಈ ಶಾಸನವು ಬೂತುಗನು ಮನಲಾರನಿಗೆ ನೀಡಿದ ಕೊಡುಗೆಗಳನ್ನೂ ಅಂತಯೇ ಮನಲಾರನು ಆ ವೀರಗಲ್ಲಿನ ಸಂರಕ್ಷಣೆಗೆಂದು ನೀಡಿದ ದಾನಗಳನ್ನೂ ನಿರೂಪಿಸುತ್ತದೆ. ಒಂದು ನಾಯಿಯನ್ನು ಗೌರವಿಸಲೆಂದು ಶಾಸನವನ್ನೇ ನಿರ್ಮಿಸಿದ ಈ ಘಟನೆಯು, ರಾಷ್ಟ್ರಕೂಟರು ಮತ್ತು ಚೋಳರ ನಡುವೆ ಇನ್ನೊಂದು ಯುದ್ಧಕ್ಕೆ ಕಾರಣವಾಗುತ್ತದೆ.
ಶಾಸನದ ಪೂರ್ಣಪಾಠ
ಸ್ವ ಸ(ಶ)ಕ[ನೃಪ ಕಾಲಾತೀತ ಸಂವತ್ಸರ ಸ(ಶ)ತಙ್ಗಳ್ ಎಣ್ಟುನೂಱ್ ಎೞ್ಪತ್ತೆರಡನೆಯ ಶೌ(ಸೌ)ಮ್ಯಮ್ ಎಂಬ ಸಂವತ್ಸರಮ್ ಪ್ರವರ್ತ್ತಿಸೆ ಸ್ವಸ್ತಿ ಅಮೋಘವರಿಷದೇವ ಶ್ರೀಪೃಥುವಿವಲ್ಲs ಪರಮೇಶ್ವರ ಪರಮ ಭಟ್ಟಾರಕ ಪಾದಪಂಕಜಭ್ರಮರಂ ನೃಪತ್ರಿಣೇತ್ರನ್ ಆನೆವೆಡಂಗಂ ವನಗಜಮಲ್ಲಂ ಕಚ್ಚೆಗಂ ಕ್ರಿ(ಕೃ)ಷ್ಣರಾಜಂ ಶ್ರೀಮತ್ ಕನ್ನರದೇವಂ..... ೞು(?) ವಜಂ ಚೋಳರಾಜಾದಿತ್ಯನ ಮೇಲೆ [ಬ]ನ್ದು ತಕ್ಕೋಲಡೊಳ್ ಕಾದಿ ಕೊಂದು ಬಿಜಯಂ ಗೆಯ್ಯುತ್ತಿೞ್ದು ಸ್ವ[ಸ್ತ] [ಸ]ತ್ಯವಾಕ್ಯ ಕೊಂಗುಣಿವರ್ಮ್ಮ ಧರ್ಮ್ಮಮಹಾರಾಜಾಧಿರಾಜಂ ಕೋಳಾಲಪುರವರೇಶ್ವರಂ ನನ್ದಗಿರಿನಾಥಂ ಶ್ರೀಮತ್ ಪೆರ್ಮ್ಮಾನಡಿಗಳ್ ನನೆಯಗಂಗ ಜಯ[ದ್ ಉ]ತ್ತರಂಗ ಗಂಗ [ಗಾಂ]ಗೇಯ ಗಂಗ ನಾರಾಯಣ ತನ್ ಆಳು ಸ್ವಸ್ತಿ ಸಕಲಲೋಕ ಪರಿತಾಪವಿಹತ [ಪ್ರ]ಭಾವತಾರಿ[ತ] ಗಂಗ ಪ್ರಭಾವೋದರ ಸಾಗರವಂಶ ವಳಭಿಪುರವರೇಶ್ವರನ್ ಉದಾರ ಭಗೀರಥನ್ ಇಱವಬೆಡೆಂUಂ ಸಾ[ಗರ] ತ್ರಿಣೇತ್ರಂ ಸೆಣಸೆ ಮೂಗರಿವೊಂ ಕದನೈಕ ಸೂ(ಶೂ)ದ್ರಕಂ ಬೂತುಗನ್ ಅಂಕಕಾರಂ ಶ್ರೀಮತ್ ಮಣಲತರತ[ಂಗ]ನುವರದೊಳ ಮೆಚ್ಚಿ ಬೇಡಿಕೊಳ್ಳ್ ಎನ್ದೊಡೆ ದಯೆಯ ಮೆಱೆವೊ(ಳ್) ಎಂಬ ಕಾಳಿಯಂ ದಯೆಗೆಯ್ಯ್ ಎಂದು ಕೊಣ್ಡನಾ ನಾಯ[ಂ] ಕೇೞಲೆನಾಡ ಬೆಳತೂರ ಪಡುವಣ ದೆಸೆಯ ಮೊಱದಿಯೊಳ್ ಪಿರಿ[ದು ಪ]ಂಡಿಗೆ ವಿಟ್ಟೊಡೆ ಪಂಡಿಯುಂ ನಾಯುಂ ಒಡ ಸತ್ತುವದರ್ಕ್ಕೆಯ್ ಅತ್ತುಕೂರೊಳ್ ಚಲ್ಲೇಶ್ವರದ ಮುಂದೆ ಕಲ್ಲನ್ ನಡಿಸಿ ಪಿರಿಯ ಕೆಱೆಯ ಕೆಳಗೆ ಮಳ್ತಿಕಾಳಂಗದೊಳ್ ಇರ್ಕ್ಕ(ರ್ಖ)ಂಡುಗ ಮಣ್ಣ[ಂ] ಕೊಟ್ಟರ್ ಆ ಮಣ್ಣನ್ ಒಕ್ಕಲ್ ನಾಡನ್ ಆಳ್ವ್ವೆಂನ್ ಊರನ ಆಳ್ವೊರ್ ಈ ಮಣ್ಣನ್ ಅೞದೊನ್ ಆ ನಾಯ ಗೆಯ್ದ ಪಾಪಮ[ಂ] ಕೊಂಡೊಂನ್ ಆ ಸ್ಥಾನಮನ್ ಆಳ್ವ ಗೊರವನ್ ಆ ಕಲ್ಲಂ ಪೂಜಿಸದ್ ಉಣ್ಡರ್ ಅಪ್ಪೊಡೆ ನಾಯ ಗೆಯ್ದ ಪಾಪಮಂ ಕೊಣ್ಡ[ನ್] ಓಂ ಊಱದ್ ಇದಿರಾಂತ ಚೋಳ ಚತುರಂಗಬಲಂಗಳನ್ ಅಟ್ಟಿ ಮುಟ್ಟಿ ತಳ್ತ್ ಇಱವೆಡೆಗ ಓರ್ವರ್ ಅಪ್ಪೊಡಂ ಇದಿರ್ಚ್ಚುವ ಗಣ್ಡರನ್ ಆಂಪೆವ್ ಎನ್ದು ಪೊಟ್ಟಾಳಿಸುವ ಬೀ(ವೀ)ರರಂ ನೆಱೆಯೆ ಕೋಣೆ(ಣ)ಮೆ ಚೋಳನೆ ಸ(ಶ)ಕ್ತಿಯಾಗೆ ತಳ್ತ್ ಇಱದುದನ್ ಆವೆ(ಮೆ) ಕಂಣ್ಡೆವ ಎನೆ ಮೆಚ್ಚದೊರ್ ಆರ್ ಸ್ಸಾಗರ ತ್ರಣೇತ್ರಂ ನರಪತಿ ಬೆನ್ನೊಳ್ ಇೞದೊನ್ ಇದಿರ್ ಆಂತುದು ವೈರಿಸಮೂದಂ ಇಲ್ಲಿ ಮಚ್ಚರಿಸುವರ್ ಎಲ್ಲರುಂ ಸೆರಗುವಾಳ್ದಪೋರ್ ಇಂತಿರೆನ್ ಎನ್ದು ಸಿಂಗದ್ ಅಂತಿರೆ ಹರಿ ಬೀ(ವೀ)ರಲಕ್ಷ್ಮಿ ನೆರವಾಗಿರೆ ಚೋೞ[] ಕೋಟೆಯ್ ಎಂಬ ಸಿಂಧುರದ ಶಿರಾಗ್ರಮಂ ಬಿರಿಯೆ ಪಾಯಿದಂ ಕಂದನೈಕ ಸೂ(ಶೂ)ದ್ರಕಂ ಓಂ ಸ್ವಸ್ತಿ ಶ್ರೀ ಎಱೆಯಪನ ಮಗಂ ರಾಚಮಲ್ಲನಂ ಬೂತುಗಂ ಕಾದಿ ಕೊನ್ದು ತೊಂಬತ್ತಱು ಸಾಸಿರಮುಮಂ ಆಳುತ್ತಿರೆ ಕನ್ನರದೇವ[ಂ] ಚೋಳನಂ ಕಾದುವನ್ದು ಬೂತುಗಂ ರಜಾದಿತ್ಯನಂ ಬಿಸುಗೆಯೆ ಕಳ್ಳನಾಗಿ ಗುರಿಗ್ ಇಱದು ಕಾದಿ ಕೊಂದು ಬನವಸೆ ಪನಿಚ್ನಾರ್ಛಾಸಿರಮುಂ ಬೆಳ್ವೊಲ ಮೂನೂರುಂ ಪುರಿಗೆಱೆ ಕಿಸುಕಾಡ್ ಎಳ್ಪತ್ತುಂ ಬಾಘೆನಾಡ್ ಎಳ್ಪತ್ತುವ(ಮ)ಂ ಬೂತುಗಂಗೆ ಕನ್ನರದೇವಂ ಮೆಚ್ಚುಗೊಟ್ಟಂ ಬೂತುಗನುಂ ಮಣಲರತನ ಮುಂದೆ ನಿಂದ ಇಱದುದರ್ಕ್ಕೆ ಮೆಚ್ಚಿ ಆತುಕೂರ್ ಪನ್ನೆರಡುಂ ಬೆಳ್ವೊಲದ ಕೋಟೆಯೂರುಮಂ ಬಾಳ್ಗ[ಂ] [ಮೆ]ಚ್ಚುಗೊಟ್ಟಂ ಮಙ್ಗಳ ಮಹಾಶ್ರೀ 

ಅಶೋಕನ ಬಂಡೆ ಶಾಸನಗಳು


 ಅಶೋಕನ ಬಂಡೆ ಶಾಸನಗಳು


ಚಕ್ರವರ್ತಿ ಅಶೋಕನ ಬಂಡೆ ಶಾಸನಗಳು ದೊರೆತಿರುವ ಮುಖ್ಯವಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅಶೊಕನು ಕ್ರಿಸ್ತಪೂರ್ವ 272-232 ರ ಅವಧಿಯಲ್ಲಿ ರಾಜ್ಯಭಾರ ಮಾಡಿದನು. ಅವನು ಮೌರ್ಯವಂಶದ ಮೂರನೆಯ ದೊರೆ. ಅವನ ಸಾಮ್ರಾಜ್ಯದ ದಕ್ಷಿಣದ ಗಡಿಗೆರೆಗಳನ್ನು ಈ ಶಾಸನಗಳು ಸೂಚಿಸುತ್ತವೆ. ಕರ್ನಾಟಕದಲ್ಲಿರುವ ಅಶೋಕನ ಶಾಸನಗಳು, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ, ಕೊಪ್ಪಳ ಜಿಲ್ಲೆಯ ಕೊಪ್ಪಳ, ಬಳ್ಳಾರಿ ಜಿಲ್ಲೆಯ ನಿಟ್ಟೂರು ಮತ್ತು ಉದೆಗೊಳು ಹಾಗೂ ರಾಯಚೂರು ಜಿಲ್ಲೆಯ ಮಸ್ಕಿಗಳಲ್ಲಿ ನಿಕ್ಷಿಪ್ತವಾಗಿವೆ. ಕರ್ನಾಟಕದಲ್ಲಿ ಒಟ್ಟು ಹನ್ನೊಂದು ಇಂತಹ ಶಾಸನಗಳು ದೊರಕಿವೆ. ಅವೆಲ್ಲವನ್ನೂ ಪ್ರಾಕೃತ ಭಾಷೆ ಮತ್ತು ಬ್ರಾಹ್ಮೀ ಲಿಪಿಯಲ್ಲಿ ಬರೆಯಲಾಗಿದೆ. ನೇರವಾಗಿ, ಅಶೋಕನ ಹೆಸರನ್ನು ಹೇಳುವ ಶಾಸನಗಳು ಇಡೀ ದೇಶದಲ್ಲಿ ಎರಡೇ ಎರಡು. ಅವುಗಳಲ್ಲಿ ಒಂದು ಮಸ್ಕಿಯ ಶಾಸನ. ಉಳಿದ ಶಾಸನಗಳಲ್ಲಿ ಅವನನ್ನು ‘ದೇವಾನಾಂ ಪ್ರಿಯ’ ಎಂದು ಕರೆಯಲಾಗಿದೆ. ಕೊಪ್ಪಳದ ಶಾಸನಗಳು, ಗವಿಮಠ ಮತ್ತು ಪಾಲ್ಕಿಗುಂಡು ಎಂಬ ಗುಡ್ಡಗಳಲ್ಲಿಯೂ ಸಿದ್ದಾಪುರದ ಶಾಸನವು ಎಮ್ಮೆತಮ್ಮನ ಗುಂಡು ಎಂಬ ಸ್ಥಳದಲ್ಲಿಯೂ ದೊರೆತಿವೆ.
ಬೌದ್ಧಧರ್ಮದ ತತ್ವಗಳನ್ನು ಪ್ರಸಾರ ಮಾಡುವುದು ಮತ್ತು ಚಕ್ರವರ್ತಿ ಅಶೋಕನ ಅನುಭವಗಳನ್ನು ಹಂಚಿಕೊಳ್ಳುವುದು ಈ ಶಾಸನಗಳ ಮುಖ್ಯ ಉದ್ದೇಶಗಳು. ಅವು ತಮಗೆ ಸಮಕಾಲೀನವಾದ ಜೀವನದ ವಿವರಗಳನ್ನು ಕೊಡುವುದರಿಂದ ಮತ್ತು ಅಶೋಕನು ಎದುರಿಸಿದ ಮಾನಸಿಕ ಸಂಘರ್ಷಗಳಿಗೆ ಕನ್ನಡಿ ಹಿಡಿಯುವುದರಿಂದ, ಬಹಳ ಮಹತ್ದದ ದಾಖಲೆಗಳಾಗಿವೆ. ಒಬ್ಬ ವ್ಯಕ್ತಿಯು ತನ್ನ ಹಿರಿಯರು, ಬಂಧುಗಳು ಮತ್ತು ಮಿತ್ರರೊಡನೆ ವ್ಯವಹರಿಸುವಾಗ ಅನುಸರಿಸಬೇಕಾದ ಅನೇಕ ವಿಧಿ ನಿಷೇಧಗಳನ್ನು ವಿವರಿಸುವುದರಿಂದಲೂ ಈ ಶಾಸನಗಳು ಮಹತ್ವದ ಸಾಂಸ್ಕೃತಿಕ ದಾಖಲೆಗಳಾಗಿವೆ. ಕರ್ನಾಟಕದಲ್ಲಿರುವ ಅಶೋಕನ ಶಾಸನಗಳನ್ನು ಕುರಿತು ಪ್ರಸಿದ್ಧ ಇತಿಹಾಸಜ್ಞರಾದ ರೊಮಿಲಾ ಥಾಪರ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಬಹಳ ಮುಖ್ಯವಾಗಿವೆ.
ಅವುಗಳ ಒಂದು ಭಾಗವನ್ನು ಇಲ್ಲಿ ನೀಡಲಾಗಿದೆ :
“ಕರ್ನಾಟಕದಲ್ಲಿ, ಬಂಡೆಗಳ ಮೇಲ್ಮೆಯ ಮೇಲೆ ಕೆತ್ತಿರುವ ಅಶೋಕನ ಶಾಸನಗಳು ಅನೇಕ. ಏಕೆಂದರೆ, ಅದು ಬಂಗಾರವು ದೊರೆಯುವ ಪ್ರದೇಶವಾಗಿದ್ದು, ಅಲ್ಲಿ ಮೌರ್ಯಸಾಮ್ರಾಟರು ಗಣಿಗಾರಿಕೆ ಮಾಡಿದಂತೆ ತೋರುತ್ತದೆ. ಕುತೂಹಲಕಾರಿಯಾದ ಸಂಗತಿಯೆಂದರೆ, ಇದು ದ್ರಾವಿಡ ಪ್ರದೇಶ. ಇಲ್ಲಿ ಇದಕ್ಕೆ ಮೊದಲು ಯಾವುದೇ ಲಿಪಿಯನ್ನು ಬಳಸುತ್ತಿರಲಿಲ್ಲ. ಆದರೆ, ಇಲ್ಲಿನ ಎಲ್ಲ ಶಾಸನಗಳೂ ಪ್ರಾಕೃತಭಾಷೆ ಮತ್ತು ಬ್ರಾಹ್ಮೀ ಲಿಪಯಲ್ಲಿ ರಚಿತವಾಗಿವೆ. ಪ್ರಾಕೃತವಾದರೋ ಉತ್ತರ ಭಾರತದ ಇಂಡೋ ಆರ್ಯನ್ ಭಾಷೆ. ಹೀಗಾಗಿ ಅಧಿಕಾರಿಗಳು ಶಾಸನಗಳನ್ನು ಪ್ರಾಕೃತದಲ್ಲಿ ಓದಿ ಹೇಳಿ, ಅನಂತರ ಅವುಗಳನ್ನು ಸ್ಥಳೀಯ ಸಮುದಾಯದ ಭಾಷೆಗಳಿಗೆ ಅನುವಾದಿಸಿ ಹೇಳಬೇಕಾಗುತ್ತಿತ್ತು. ವಾಯುವ್ಯ ಭಾರತದಲ್ಲಿ, ಇಂತಹುದೇ ಶಾಸನಗಳನ್ನು ಗ್ರೀಕ್ ಮತ್ತು ಅರಮಾಯಿಕ್ ಭಾಷೆಗಳಿಗೆ ಅನುವಾದಿಸಲಾಗಿತ್ತು. ಅಂತಹುದೇನೂ ಇಲ್ಲಿ ನಡೆಯಲಿಲ್ಲ. ಇಲ್ಲಿ, ಸ್ಥಳೀಯವಾದ ಲಿಪಿಯೂ ಇರಲಿಲ್ಲವೆನ್ನುವುದು ಇದಕ್ಕೆ ಕಾರಣವಾಗಿರಬಹುದು. ಪ್ರಾಯಶಃ ರಾಜಕೀಯವಾದ ಪರಿಗಣನೆಯಲ್ಲಿ ಈ ಪ್ರದೇಶಕ್ಕೆ ಹೆಚ್ಚಿನ ಮಹತ್ವವೂ ಇರಲಿಲ್ಲವೇನೋ. ಏಕೆಂದರೆ ಇಲ್ಲಿ ಸಣ್ಣಪುಟ್ಟ ಪಾಳೆಪಟ್ಟುಗಳಿದ್ದವೇ ಹೊರತು ದೊಡ್ಡ ರಾಜ್ಯಗಳಿರಲಿಲ್ಲ. ಮೌಖಿಕತೆಯನ್ನು ಮೂಲನೆಲೆಯಾಗಿ ಹೊಂದಿದ್ದ ಸಮಾಜದಲ್ಲಿ, ಸಾಕ್ಷರತೆಯನ್ನೇ ಅಧಿಕಾರದ ಚಿಹ್ನಯಾಗಿ ಸ್ಥಾಪಿಸುವುದೂ ಇದರ ಉದ್ದೇಶವಾಗಿರಬಹುದು. ಪ್ರಾಯಶಃ ಈ ಶಾಸನಗಳನ್ನೂ ಇದೇ ನೆಲೆಯಲ್ಲಿ ನೋಡಲಾಗುತ್ತಿತ್ತು“ 

Oct 15, 2013

ಬಾದಾಮಿ ಪ್ರದೇಶದ ಐತಿಹಾಸಿಕ ಭಿತ್ತಿಚಿತ್ರಗಳು

ಕರ್ನಾಟಕದ ಕಲಾ ಪರಂಪರೆಯಲ್ಲಿ ಬಾದಾಮಿಯ ಐತಿಹಾಸಿಕ ಭಿತ್ತಿಚಿತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ಕರ್ನಾಟಕದ ಶಿಷ್ಟ ಪರಂಪರೆಯ ಚಿತ್ರಕಲಾ ಇತಿಹಾಸವನ್ನು ಇಲ್ಲಿಂದಲೇ ಆರಂಭಿಸುವ ವಿದ್ವಾಂಸರು ಇವುಗಳನ್ನು ಕುರಿತಾಗಿ ಹಲವು ನಿಟ್ಟಿನಲ್ಲಿ ಅಧ್ಯಯನ ಮಾಡಿದ್ದಾರೆ. ಬಾದಾಮಿ ಪ್ರದೇಶದ ಆಳರಸರು ಅಂದಿನ ಕಲಾವಿದರಿಗೆ ರಾಜಾಶ್ರಯ ನೀಡಿ ಅವರಿಂದ ಚಿತ್ರಗಳನ್ನು ಬರೆಯಿಸುವುದರ ಮೂಲಕ ಕಲಾ ಪೋಷಕರಾಗಿ ಮುಂದಿನ ದಿನಗಳಲ್ಲಿ ಚಿತ್ರರಚನಾ ಪರಂಪರೆಯನ್ನು ಜೀವಂತವಾಗಿಡುವುದರ ಸಲುವಾಗಿ ಅಡಿಪಾಯ ಹಾಕಿ ಕೊಟ್ಟಿದ್ದಾರೆ.
ಬಾದಾಮಿಯ ಐತಿಹಾಸಿಕ ಚಿತ್ರಗಳಿಂದ ಕನ್ನಡಿಗರ ಕಲಾಮಾನ, ಧರ್ಮಾಭಿಮಾನ, ಸಾಂಸ್ಕೃತಿಕ ಜೀವನದ ಶ್ರೀಮಂತಿಕೆ, ನಂಬಿಕೆ, ಆಚರಣೆ, ಸಾಮಾಜಿಕ ಜೀವನಗಳಂತಹ ಸಂಗತಿಗಳನ್ನು ಅರಿತುಕೊಳ್ಳಬಹುದು. ಅಂದಿನ ಜನರ ವೇಷ ಭೂಷಣ, ನಿತ್ಯೋಪಯೋಗಿ ವಸ್ತುಗಳು, ಆಯುಧಗಳು ಸುತ್ತಲಿನ ಪರಿಸರ ಹೀಗೆ ಹತ್ತು ಹಲವು ವಿಷಯಗಳು ಚಿತ್ರಕಲೆಯ ಮೂಲಕ ವ್ಯಕ್ತಗೊಳ್ಳುತ್ತವೆ.
ಬಾದಾಮಿಯ ಪರಿಸರದಲ್ಲಿ ಚಿತ್ರಕಲೆಯ ಪ್ರವಾಹ ಓತಪ್ರೋಹರಿದುಬಂದಿದೆ. ಪ್ರಾಗಿತಿಹಾಸ ಕಾಲದ ಚಿತ್ರಗಳು, ಜನಪದ ಚಿತ್ರಗಳು, ಐತಿಹಾಸಿಕ ಚಿತ್ರಗಳು, ಆಧುನಿಕ ಚಿತ್ರಶೈಲಿಗಳು ಇಲ್ಲಿ ಮಡುಗಟ್ಟಿವೆ. ಇವೆಲ್ಲವುಗಳಲ್ಲಿ ಐತಿಹಾಸಿಕ ಭಿತ್ತಿಚಿತ್ರಗಳಿಗೆ ವಿಶೇಷ ಸ್ಥಾನಮಾನವಿದ್ದು ಅವುಗಳ ಬಗ್ಗೆ ವಿವೇಚಿಸುವುದು ಈ ಲೇಖನದ ಪ್ರಮುಖ ಉದ್ದೇಶವಾಗಿದೆ.
ಬಾದಾಮಿಯ ಐತಿಹಾಸಿಕ ಭಿತ್ತಿಚಿತ್ರಗಳು ವೈಷ್ಣವ ಗುಹಾಲಯ ಮಾತ್ರವಲ್ಲದೆ ಕೆಲವು ಸ್ವಾಭಾವಿಕ ಗುಹಾಲಯ(ಶಿಲಾಶ್ರಯ)ಗಳಲ್ಲಿಯೂ ಕಂಡುಬಂದಿವೆ. ಸ್ವಾಭಾವಿಕ ಶಿಲಾಶ್ರಯಗಳಲ್ಲಿ ಕಂಡುಬಂದಿರುವ ಈ ವರ್ಣ ಚಿತ್ರಗಳು ಕಾಲಮಾನದಿಂದ ವೈಷ್ಣವಗುಹೆಯ ಚಿತ್ರಗಳಿಗಿಂತ ಮೊದಲಿನವು ಎನ್ನಬಹುದು. ಹಾಗಾಗಿ ಬಾದಾಮಿಯ ಐತಿಹಾಸಿಕ ಚಿತ್ರಗಳ ಬಗ್ಗೆ ವಿವೇಚಿಸುವಾಗ ಮೊದಲಿಗೆ ಈ ಶಿಲಾಶ್ರಯ ಚಿತ್ರಗಳ ಕುರಿತು ಹೇಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಾದಾಮಿಯ ಐತಿಹಾಸಿಕ ಚಿತ್ರಗಳನ್ನು ಅ. ಸ್ವಾಭಾವಿಕ ಶಿಲಾಗುಹೆಗಳ (ಶಿಲಾಶ್ರಯ) ಭಿತ್ತಿಚಿತ್ರಗಳು, ಬ. ಮಾನವ ನಿರ್ಮಿತ ಶಿಲಾಗುಹೆಗಳ ಬಿತ್ತಿ ಚಿತ್ರಗಳು ಎಂಬುದಾಗಿ ಎರಡು ರೀತಿಯಲ್ಲಿ ವಿಂಗಡಿಸಬಹುದು.
ಅ. ಸ್ವಾಭಾವಿಕ ಶಿಲಾಗುಹೆಗಳ (ಶಿಲಾಶ್ರಯ) ಭಿತ್ತಿ ಚಿತ್ರಗಳು
ಬಾದಾಮಿ ಸುತ್ತಲೂ ಇರುವ ಬೃಹತ್ ಬೆಟ್ಟಗಳಲ್ಲಿ ಸ್ವಾಭಾವಿಕವಾಗಿ ಶಿಲಾಶ್ರಯ ತಾಣಗಳು ಶಿಲಾಗುಹೆಗಳು ಉಂಟಾಗಿವೆ. ಇವುಗಳಲ್ಲಿ ಕೆಲವು ನೆಲೆಗಳಲ್ಲಿ ಚಾಲುಕ್ಯರ ಕಾಲದ ಪ್ರಾರಂಭಿಕ ಹಂತದ ಚಿತ್ರ ರಚನೆಗಳು ಕಂಡುಬಂದಿವೆ. ಅವು ಈ ಕೆಳಗಿನಂತಿವೆ.
೧. ಬಾದಾಮಿಯ ಉತ್ತರ ಕೋಟೆಯ ಶಿಲಾಗುಹೆಯ ಭಿತ್ತಿಚಿತ್ರ: ಬಾದಾಮಿಯ ಉತ್ತರ ಬೆಟ್ಟದಲ್ಲಿ ಇರುವ ಬೃಹತ್ ಬಂಡೆಯೊಂದರ ಮೇಲೆ ಇತಿಹಾಸ ಕಾಲದ ಚಿತ್ರಗಳಿವೆ. ಇವುಗಳನ್ನು ಡಾ.ಅ.ಸುಂದರ ಅವರು ಶೋಧಿಸಿದ್ದಾರೆ.
ಇಲ್ಲಿ ಮೊದಲು ಗೋಡೆಗೆ ಹಳದಿ ಬಣ್ಣದ ಹಿನ್ನೆಲೆ ಲೇಪನವನ್ನು ಕೊಟ್ಟು ನಂತರ ಅದರ ಮೇಲೆ ಕೆಂಪು ಬಣ್ಣದಿಂದ ಚಿತ್ರ ರಚಿಸಲಾಗಿದೆ. ಚಿತ್ರಗಳು ರೇಖಾವಿನ್ಯಾಸದಲ್ಲಿವೆ. ಈ ಚಿತ್ರದಲ್ಲಿ ಮಹಿಳೆಯರ ಆಕೃತಿಗಳೇ ವಿಶೇಷವಾಗಿ ಕಂಡುಬಂದಿವೆ. ಒಬ್ಬಳು ಗಣ್ಯಸ್ತ್ರೀ ಕುಳಿತಿದ್ದು ಆಕೆಯ ಬಲಬದಿಗೆ ಇಬ್ಬರು ಎಡಬದಿಗೆ ಮೂವರು ಮಹಿಳೆಯರು ಹೂಗಳನ್ನು ಹಿಡಿದುಕೊಂಡು ನಿಂತಿದ್ದಾರೆ. ಇದು ರಾಣಿಯೋರ್ವಳು ಸಖಿಯರು ಮತ್ತು ಸೇವಕಿಯರಿಂದ ಸುತ್ತುವರಿದಂತೆ ರಚಿತವಾಗಿದೆ. ಇಲ್ಲಿನ ಸ್ತ್ರೀಯರು ಹಿತಮಿತವಾಗಿ ಆಭರಣ ಧರಿಸಿದ್ದು ಇಂತಹುದೇ ಚಿತ್ರವಿನ್ಯಾಸವು ವೈಷ್ಣವ ಗುಹೆಯಲ್ಲಿಯೂ ಕಂಡುಬರುತ್ತದೆ.
ಈ ಚಿತ್ರದ ಸಮೀಪದಲ್ಲಿಯೇ ಇನ್ನೊಂದು ಕಡೆಗೆ ಕಮಲ ಪುಷ್ಪವನ್ನು ಹಿಡಿದ ಗಣ್ಯಸ್ತ್ರೀಯ ಚಿತ್ರವು ಕಂಡುಬಂದಿದ್ದು,ಇದನ್ನು ಡಾ.ಶೀಲಾಕಾಂತ ಪತ್ತಾರ ಇವರು ಶೋಧಿಸಿದ್ದಾರೆ. ಇಲ್ಲಿಯೂ ಸಹಿತ ಮೊದಲು ಬಂಡೆಗೆ ಹಳದಿ ಲೇಪನ ಕೊಟ್ಟು ಅದರ ಮೇಲೆ ಕೆಂಪು ವರ್ಣದಿಂದ ರೇಖಾವಿನ್ಯಾಸದಲ್ಲಿ ಚಿತ್ರ ಬಿಡಿಸಲಾಗಿದೆ. ಇಲ್ಲಿನ ಚಿತ್ರಗಳಲ್ಲಿ ಕಂಡುಬರುವ ಕೆಲವು ಲಕ್ಷಣಗಳು ಬಾದಾಮಿಯ ಶಿಲ್ಪಗಳ ಲಕ್ಷಣಗಳಿಗೆ ಹೋಲಿಕೆಯಾಗುತ್ತವೆ.
೨. ಮಾಲಗಿತ್ತಿ ಶಿವಾಲಯದ ಬಳಿಯ ಶಿಲಾಶ್ರಯ ಭಿತ್ತಿ ಚಿತ್ರ: ಮಾಲಗಿತ್ತಿ ಶಿವಾಲಯದ ಬಳಿಯಲ್ಲಿರುವ ಬತೇರಿಯ ಕೆಳಭಾಗದಲ್ಲಿ ಬೃಹತ್ ಬಂಡೆಯೊಂದಿದೆ. ಅದರ ಮೇಲೆ ಇತಿಹಾಸ ಕಾಲದ ಚಿತ್ರಗಳು ಕಂಡುಬಂದಿವೆ. ಇಲ್ಲಿಯ ಚಿತ್ರಗಳ ರಚನೆಯ ಮೇಲೆ ಹೇಳಲಾದ ವಿಧಾನವನ್ನೇ ಅನುಸರಿಸಿದೆ. ಮೊದಲಿಗೆ ಹಳದಿ ಲೇಪನ ಕೊಟ್ಟು ಅದರ ಮೇಲೆ ಕೆಂಪು ಬಣ್ಣದಿಂದ ಚಿತ್ರ ಬಿಡಿಸಲಾಗಿದೆ. ಸೈನಿಕರು ಖಡ್ಗ, ಢಾಲುಗಳನ್ನು ಹಿಡಿದುಕೊಂಡಿರುವ ದೃಶ್ಯ ಇಲ್ಲಿದೆ.
೩. ಕುಟಕನಕೇರಿಯ ಶಿಲಾಶ್ರಯ ಭಿತ್ತಿಚಿತ್ರ: ಬಾದಾಮಿಯಿಂದ ಸುಮಾರು ೮ ಕಿಲೋ ಮೀಟರ್ ದೂರದಲ್ಲಿರುವ ಕುಟಕನಕೇರಿ ಪ್ರದೇಶದಲ್ಲಿಯೂ ಬಂಡೆಗಳ ಮೇಲೆ ಇತಿಹಾಸ ಕಾಲದ ಚಿತ್ರಗಳಿವೆ. ಇಲ್ಲಿಯೂ ಹಳದಿ ಹಿನ್ನೆಲೆಯ ಲೇಪನದ ಮೇಲೆ ಕೆಂಪುಬಣ್ಣದಿಂದ ಸೈನಿಕರ ಚಿತ್ರಗಳನ್ನು ಚಿತ್ರಿಸಲಾಗಿದೆ. ಖಡ್ಗ, ಢಾಲುಗಳನ್ನು ಹಿಡಿದುಕೊಂಡಿರುವ ಯೋಧರು ಯುದ್ಧದಲ್ಲಿ ತೊಡಗಿದ್ದಾರೆ. ಈ ಪ್ರಕಾರ ರಚನೆಯಾದ ಸ್ವಾಭಾವಿಕ ಶಿಲಾಗುಹೆಯ ಈ ಚಿತ್ರಗಳು ಬಾದಾಮಿಯ ವೈಷ್ಣವ ಗುಹೆಯ ಚಿತ್ರಗಳಿಗಿಂತ ಮುಂಚಿನವಾಗಿದ್ದು ಚಾಲುಕ್ಯರ ಪ್ರಾರಂಭಿಕ ಹಂತದ ಕಲಾಸಕ್ತಿಯನ್ನು ಬಿಂಬಿಸುತ್ತವೆ.
ಬ. ಮಾನವ ನಿರ್ಮಿತ ಶಿಲಾಗುಹೆಗಳ ಚಿತ್ರಗಳು
ಬಾದಾಮಿ ಪರಿಸರದಲ್ಲಿ ಐಹೊಳೆಯ ರಾವಣಫಡಿ ಮತ್ತು ಬಾದಾಮಿಯ ವೈಷ್ಣವ ಗುಹೆಯ ಭಿತ್ತಿ ಚಿತ್ರಗಳು ಈ ಗುಂಪಿಗೆ ಸೇರುತ್ತವೆ.
೧. ರಾವಣಫಡಿ
ಐಹೊಳೆಯ ರಾವಣಫಡಿ ಗುಹಾದೇವಾಲಯದ ಉಪಗುಹೆಯ ಛತ್ತು ಸಂಕೀರ್ಣ ಸಂಯೋಜನೆಯ ವರ್ಣಚಿತ್ರದಿಂದ ತುಂಬಿಕೊಂಡಿರುವುದನ್ನು ಡಾ.ಶೀಲಾಕಾಂತ ಪತ್ತಾರ ಅವರು ಶೋಧಿಸಿದ್ದಾರೆ. ವರ್ಣಚಿತ್ರದ ಬಹುಭಾಗ ನಶಿಸಿಹೋಗಿದ್ದು ಮೂಲದಲ್ಲಿ ಇದ್ದ ವರ್ಣಚಿತ್ರವನ್ನು ಕಷ್ಟಪಟ್ಟು ಅರ್ಥೈಸಿಕೊಳ್ಳಬೇಕಾಗುತ್ತದೆ. ವರ್ಣಚಿತ್ರದ ಅಂಚುಗಳಲ್ಲಿ ಆಲಂಕಾರಿಕ ಚೌಕಟ್ಟು ಸ್ಪಷ್ಟವಾಗಿದೆ. ವರ್ಣಚಿತ್ರಕ್ಕೆ ಬಳಸಲಾದ ಹೀರುಪದರು (absorbent ground) ತಕ್ಕ ಮಟ್ಟಿಗೆ ದಪ್ಪವಾಗಿದೆ. ಭಿತ್ತಿಚಿತ್ರದಲ್ಲಿ ಕಾಣಬರುವ ವ್ಯಕ್ತಿಗಳು ಯೋಧರೆಂದು ಗುರುತಿಸಬಹುದು. ಆದ್ದರಿಂದ ಇದೊಂದು ರಣರಂಗದ ಸನ್ನಿವೇಶವೆಂದು ಹೇಳಬಹುದು. ಯೋಧರ ವಿಶಿಷ್ಟ ಉಡುಪನ್ನು ಇಲ್ಲಿ ಕಾಣಬಹುದು. ಲೋಹದ ಜಾಲಕ, ಈಟಿ, ದುಂಡಗಿನ ಗುರಾಣಿಗಳನ್ನು ಕೂಡ ಗುರುತಿಸಬಹುದು. ಇದೊಂದು ನುರಿತ ಕಲಾವಿದನ ಕಲಾಸೃಷ್ಟಿ ಎಂಬ ಡಾ.ಶೀಲಾಕಾಂತ ಅವರ ಅಭಿಪ್ರಾಯವು ಸೂಕ್ತವೆನಿಸುತ್ತದೆ.
೨. ವೈಷ್ಣವ ಗುಹಾಲಯದ ಭಿತ್ತಿಚಿತ್ರಗಳು
ಕರ್ನಾಟಕದ ಚಿತ್ರಕಲಾ ಇತಿಹಾಸದಲ್ಲಿ ಹಿಂದೂ ಸಂಪ್ರದಾಯಕ್ಕೆ ಸೇರಿದ ಅತ್ಯಂತ ಪ್ರಾಚೀನ ಚಿತ್ರಗಳೆಂದು ಇವುಗಳನ್ನು ಪರಿಗಣಿಸಲಾಗುತ್ತಿದೆ. ಕ್ರಿ.ಶ.೫೭೮ರಲ್ಲಿ ಮಂಗಳೇಶನ ಕಾಲದಲ್ಲಿ ರಚನೆಯಾದ ಬಾದಾಮಿಯ ವೈಷ್ಣವ ಗುಹೆಯ ಭಿತ್ತಿ ಚಿತ್ರಗಳನ್ನು ಕುರಿತಾಗಿ ಹಲವರು ಅಧ್ಯಯನ ಮಾಡಿದ್ದಾರೆ. ಇವುಗಳ ಬಗೆಗೆ ಮೊದಲು ಜನರ ಗಮನ ಸೆಳೆದವರು ಮತ್ತು ಬರೆದವರು ಸ್ಟೈಲ್ಲಾ ಕ್ರಾಮಿಶ್ಟ್ ಎಂಬ ಪಾಶ್ಚಾತ್ಯ ಮಹಿಳೆ. ನಂತರ ೧೯೫೯ರಲ್ಲಿ ಸಿ.ಶಿವರಾಮ ಮೂರ್ತಿಯವರು ವೈಷ್ಣವ ಗುಹೆಯ ಈ ಚಿತ್ರಗಳ ಬಗ್ಗೆ ವಿವರವಾಗಿ ಬರೆದಿದ್ದು, ಚಿತ್ರಗಳ ವಸ್ತು ವಿಷಯ ಬಣ್ಣಗಾರಿಕೆಯನ್ನು ಕುರಿತಂತೆ ಮಾಹಿತಿ ನೀಡುತ್ತಾರೆ. ಕ್ರಿ.ಶ. ೧೯೬೬ರಲ್ಲಿ ಪ್ರಕಟವಾದ ಬಿಜಾಪುರ ಜಿಲ್ಲಾ ಗೆಜೆಟಿಯರ್‌ನಲ್ಲಿ ಈ ವೈಷ್ಣವ ಗುಹೆಯಲ್ಲಿ ಶೈವ ಧರ್ಮಕ್ಕೆ ಸಂಬಂಧಿಸಿದಂತೆ ಚಿತ್ರಗಳಿವೆ. ಶಿವಪಾರ್ವತಿಯರ ಚಿತ್ರಗಳು ಇಲ್ಲಿ ಸುಂದರವಾಗಿವೆ ಎಂದು ಹೇಳಿದೆ. ಆದರೆ ಇಲ್ಲಿ ಚಿತ್ರದ ವಸ್ತು ವಿಷಯವನ್ನು ಗುರುತಿಸುವಲ್ಲಿ ತಪ್ಪಾಗಿದೆ ಎನ್ನಬಹುದು. ಮುಂದೆ ಡಾ.ಶಿವರಾಮ ಕಾರಂತ ಅವರು ಈ ಚಿತ್ರಗಳ ವಸ್ತುವಿಷಯ, ವರ್ಣಗಾರಿಕೆ, ಚಿತ್ರಶೈಲಿಗಳ ಕುರಿತಾಗಿ ಚರ್ಚಿಸಿದ್ದು, ಇವು ಅಜಂತಾದಂತೆ ಉತ್ತಮ ಮಟ್ಟದವುಗಳಲ್ಲ ಎಂದು ಹೇಳುತ್ತಾರೆ. ಕ್ರಿ.ಶ. ೧೯೭೮ರಲ್ಲಿ ಎಂ.ಎಸ್.ನಾಗರಾಜರಾವ್ ಅವರು ಈ ಚಿತ್ರಗಳ ಬಗ್ಗೆ ಬರೆಯುತ್ತ ಒಂದು ಕಾಲದಲ್ಲಿ ಇಡೀ ಗುಹೆ ವರ್ಣಚಿತ್ರಗಳಿಂದ ವುತ್ತು ವರ್ಣದಿಂದ ಅಲಂಕರಿಸಲ್ಪಟ್ಟಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕ್ರಿ.ಶ. ೧೯೮೨ರಲ್ಲಿ ಚಾಲುಕ್ಯ ಶ್ರೀ ಎಂಬ ಪುಸ್ತಕದಲ್ಲಿ ಲೇಖನ ಬರೆದ ಡಾ.ಅ.ಸುಂದರ ಅವರು ಈ ಚಿತ್ರಗಳ ವಸ್ತುವಿಷಯಗಳ ಬಗೆಗೆ ಗಮನ ಸೆಳೆಯುತ್ತಾರೆ. ಡಾ.ಸಿಂದಗಿ ರಾಜಶೇಖರ ಅವರು ಚಾಲುಕ್ಯರ ಕಲೆ ಮತ್ತು ವಾಸ್ತುಶಿಲ್ಪವನ್ನು ಹೇಳುವಾಗ ಈ ಚಿತ್ರಗಳ ಬಗೆಗೆ ವಿವರಣೆ ಕೊಡುತ್ತಾರೆ. ಆಮೇಲೆ ಡಾ.ಎಸ್.ಸಿ.ಪಾಟೀಲ ಅವರು ಜನಪದ ಭಿತ್ತಿಚಿತ್ರಗಳ ಬಗ್ಗೆ ಅಧ್ಯಯನ ಮಾಡುವಾಗ ಇವುಗಳನ್ನು ಸಾಂದರ್ಭಿಕವಾಗಿ ಪ್ರಸ್ತಾಪ ಮಾಡಿದ್ದಾರೆ. ಹಾಗೆಯೇ ಡಾ.ಅ.ಲ.ನರಸಿಂಹನ್ ಅವರು ಈ ಚಿತ್ರಗಳನ್ನು ತಮ್ಮ ಅಧ್ಯಯನದಲ್ಲಿ ಹೆಸರಿದ್ದಾರೆ. ಇತ್ತೀಚೆಗೆ ಡಾ.ಶೀಲಾಂಕಾಂತ ಪತ್ತಾರ ಅವರು ತಮ್ಮ ಬಾದಾಮಿಯ ಸಾಂಸ್ಕೃತಿಕ ಅಧ್ಯಯನದ ಸಂದರ್ಭದಲ್ಲಿ ಈ ವೈಷ್ಣವ ಗುಹೆಯ ಚಿತ್ರಗಳನ್ನು ಕುರಿತಂತೆ ಮತ್ತೊಮ್ಮೆ ಚರ್ಚೆಗೊಳಪಡಿಸಿದ್ದಾರೆ. ಆ ಮೇಲೆ ಉತ್ತರ ಕರ್ನಾಟಕದ ಭಿತ್ತಿಚಿತ್ರಗಳ ಬಗ್ಗೆ ಅಧ್ಯಯನ ಮಾಡಿದ ಡಾ.ಯಾದಪ್ಪ ಪರದೇಶಿ ಇವರು ಈ ಚಿತ್ರಗಳ ಬಗ್ಗೆ ವಿಸ್ತೃತವಾದ ವಿಶ್ಲೇಷಣೆ ವಿವರಣೆಗಳನ್ನು ನೀಡಿದ್ದಾರೆ.
ಇಂತಹ ಗಂಭೀರ ಸ್ವರೂಪದ ಅಧ್ಯಯನಗಳಲ್ಲದೇ ಪತ್ರಿಕಾ ಲೇಖನಗಳು ಕಿರು ಮಾಹಿತಿಗಳು ಈ ಚಿತ್ರಗಳ ಬಗ್ಗೆ ಬಂದಿವೆ. ಇವುಗಳಲ್ಲದೆ ಸಾಮಾನ್ಯವಾಗಿ ಭಾರತ ಮತ್ತು ಕರ್ನಾಟಕದ ಪ್ರಾಚೀನ ಚಿತ್ರ ಪರಂಪರೆಯನ್ನು ಹೇಳುವ ಸಂದರ್ಭದಲ್ಲಿ ಹೆಚ್ಚಿನ ಜನರು ಈ ಚಿತ್ರಗಳನ್ನು ಉಲ್ಲೇಖಿಸಿರುವುದು ಕಂಡುಬರುತ್ತದೆ.
ಈ ರೀತಿ ಅನೇಕ ಜನರಿಂದ ಅಧ್ಯಯನಕ್ಕೊಳಪಟ್ಟ ಈ ಚಿತ್ರಗಳ ವಸ್ತುವಿಷಯ ಮತ್ತು ಬಣ್ಣಗಾರಿಕೆಯ ಬಗ್ಗೆ ಹೆಚ್ಚಿನ ಚರ್ಚೆಯಾಗಿದೆ. ಆದ್ದರಿಂದ ಆ ವಿವರಗಳನ್ನು ಬದಿಗಿಟ್ಟು ಚಿತ್ರಕ್ಕಿಂತ ಮೊದಲು ತಯಾರಿಸಿಕೊಳ್ಳುವ ಭಿತ್ತಿ ತಯಾರಿಕೆ ಚಿತ್ರ ರಚನಾ ಪರಿಕರಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿಲ್ಲವಾದ್ದರಿಂದ ಈ ಬಗ್ಗೆ ಕೆಲವು ಅಂಶಗಳನ್ನು ಇಲ್ಲಿ ಚರ್ಚಿಸ ಲಾಗಿದೆ.
ಭಿತ್ತಿ ಸಿದ್ಧತಾ ವಿಧಾನ
ಪ್ರಾಚೀನ ಭಿತ್ತಿಚಿತ್ರಗಳ ರಚನೆಯಲ್ಲಿ ಭಿತ್ತಿ ಸಿದ್ಧಗೊಳಿಸುವುದು ಪ್ರಮುಖ ಹಂತವಾಗಿತ್ತು. ಚಿತ್ರಗಳನ್ನು ರಚಿಸಲು ಈ ಭಿತ್ತಿಯ ಪದರ ಆಧಾರವಾಗಿರುವುದರಿಂದ ಇದನ್ನು ವಿಶೇಷವಾದ ಕಾಳಜಿಯಿಂದ ಸಿದ್ಧಗೊಳಿಸುತ್ತಿದ್ದರು. ಭಿತ್ತಿಯನ್ನು ಹೇಗೆ ಸಿದ್ಧಗೊಳಿಸಬೇಕು ಎನ್ನುವ ಬಗ್ಗೆ ಅನೇಕ ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಮಾಹಿತಿ ಲಭ್ಯವಿದೆ. ವಿಷ್ಣು ಧರ್ಮೋತ್ತರ ಪುರಾಣ, ಮಾನಸೋಲ್ಲಾಸ, ಸಮರಾಂಗಣ ಸೂತ್ರಧಾರ, ಶಿಲ್ಪರತ್ನ, ನಾರದಶಿಲ್ಪ, ಕಾಶ್ಯಪಶಿಲ್ಪ ಶಾಸ್ತ್ರ, ಶಿವತತ್ವರತ್ನಾಕರ ಮುಂತಾದ ಗ್ರಂಥಗಳಲ್ಲಿ ಭಿತ್ತಿ ಸಿದ್ಧಗೊಳಿಸುವ ಹಂತಗಳು ಮತ್ತು ಅದಕ್ಕೆ ಬೇಕಾಗುವ ಪರಿಕರಗಳನ್ನು ಹೇಳಲಾಗಿದೆ. ಈ ಗ್ರಂಥಗಳಲ್ಲಿ ಚಿತ್ರ ರಚನೆಯ ಪರಿಕರಗಳನ್ನು ಯಾವ ಮೂಲಗಳಿಂದ ಹೇಗೆ ತಯಾರಿಸಿಕೊಳ್ಳಬೇಕು ಎನ್ನುವ ಮಾಹಿತಿಯೂ ಲಭ್ಯವಿದೆ.
ಭಿತ್ತಿ ಸಿದ್ಧಗೊಳಿಸುವಲ್ಲಿ ಎರಡು ಪ್ರಕಾರಗಳಿವೆ. ಮೊದಲನೆಯದು ಮಣ್ಣಿನ ಭಿತ್ತಿ. ಎರಡನೆಯದು ಗಾರೆಭಿತ್ತಿ. ಮಣ್ಣಿನ ಭಿತ್ತಿಯು ಪ್ರಾಚೀನ ಕಾಲದಿಂದ ಬಳಕೆಯಲ್ಲಿದ್ದು ಕ್ರಿ.ಶ.೧೨ನೆಯ ಶತಮಾನದ ನಂತರ ಅದರ ಉಪಯೋಗ ಕಡಿಮೆಯಾಗಿ ಗಾರೆಭಿತ್ತಿ ಬಳಕೆಗೆ ಬಂದಿತು. ಬಾದಾಮಿಯ ಭಿತ್ತಿಚಿತ್ರಗಳು ಕ್ರಿ.ಶ.೬ನೇ ಶತಮಾನದಲ್ಲಿ ರಚನೆಯಾಗಿವೆ. ವಿಷ್ಣು ಧರ್ಮೋತ್ತರ ಗ್ರಂಥದಲ್ಲಿ ಮಣ್ಣಿನ ಭಿತ್ತಿಯ ತಯಾರಿಕೆಯ ಬಗ್ಗೆ ಮಾಹಿತಿ ಇದೆ. ಹಾಗಾಗಿ ಬಾದಾಮಿಯ ಭಿತ್ತಿಚಿತ್ರ ರಚನೆಯಲ್ಲಿಯೂ ಮಣ್ಣಿನ ಭಿತ್ತಿ ತಯಾರಿಸಿ ಚಿತ್ರ ರಚಿಸಲಾಗಿದೆ. ಮಣ್ಣಿನ ಭಿತ್ತಿ ಸಿದ್ಧತೆಯಲ್ಲಿ ಜಿಗುಟಾದ ಮಣ್ಣು ಪ್ರಮುಖವಾಗಿದ್ದು ಇದರೊಂದಿಗೆ ಅನೇಕ ವಸ್ತುಗಳನ್ನು ಮಿಶ್ರಣ ಮಾಡುತ್ತಾರೆ.
ಮೊದಲಿಗೆ ಚಿತ್ರ ರಚನೆ ಮಾಡಬೇಕಾದ ಶಿಲಾಗುಹೆಯ ಗೋಡೆಯನ್ನು ಸಂಸ್ಕರಿಸಿಕೊಳ್ಳುತ್ತಾರೆ. ಆ ಮೇಲೆ ಜಿಗುಟಾದ ಮಣ್ಣು, ಇಟ್ಟಿಗೆಯ ಪುಡಿ, ನಾರು ಪದಾರ್ಥ, ಬಾಳೆಹಣ್ಣಿನ ತಿರುಲು, ಬಿಲ್ವ ಪತ್ರಿಕಾಯಿ ಅಂಟು, ಲೋಳೆ ರಸ, ಜೇನಮೇಣ, ಕಾಕಂಬಿ ಮುಂತಾದ ವಸ್ತುಗಳ ಮಿಶ್ರಣವನ್ನು ತಯಾರಿಸಿ ತಿಂಗಳವರೆಗೆ ನೆನೆ ಹಾಕಲಾಗುವುದು. ಈ ಮಿಶ್ರಣ ಹದವಾಗಿ ನೆನೆದು ಪಕ್ವಗೊಂಡ ನಂತರ ಸಂಸ್ಕರಿಸಿದ ಗೋಡೆಗೆ ಲೇಪಿಸುತ್ತಾರೆ. ಹಲವು ಸಲ ಪುನಃ ಪುನಃ ಮಿಶ್ರಣ ಲೇಪಿಸಿ ಸಮತಟ್ಟುಗೊಳಿಸುತ್ತಾರೆ. ನಂತರ ಈ ಭಿತ್ತಿ ಸ್ವಲ್ಪ ಒಳಗಿದ ಮೇಲೆ ಅದಕ್ಕೆ ಶಂಖಚೂರ್ಣ, ಸುಣ್ಣ, ವಜ್ರಲೇಪ, ಸಾಲಲೇಪ, ಸಾಲಮರ, ಅಶೋಕ ವೃಕ್ಷ, ಕಾಕುವ ಎಂಬ ಗಿಡ, ಕಬ್ಬಿನ ಹಾಲು ಇವುಗಳ ಮಿಶ್ರಣದಿಂದ ಲೇಪಿಸಿ ನುಣುಪುಗೊಳಿಸಲಾಗುತ್ತದೆ. ಆಮೇಲೆ ಇದು ಒಣಗುತ್ತ ಬಂದಂತೆ ಹಿನ್ನೆಲೆ ಲೇಪನ ಕೊಟ್ಟು ಅದರ ಮೇಲೆ ಚಿತ್ರ ರಚಿಸಬೇಕು ಎನ್ನುವ ಮಾಹಿತಿ ವಿಷ್ಣು ಧರ್ಮೋತ್ತರ ಗ್ರಂಥದಲ್ಲಿದೆ. ಇದಕ್ಕೆ ಅನುಸಾರವಾಗಿಯೇ ಬಾದಾಮಿಯ ಭಿತ್ತಿಚಿತ್ರಗಳ ಭಿತ್ತಿಯನ್ನು ತಯಾರಿಸಲಾಗಿದೆ. ಇದೇ ಪದ್ಧತಿಯನ್ನು ಅಜಂತಾದಲ್ಲಿ ಅನುಸರಿಸಿರುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು.
ಪರಿಕರಗಳು
ಚಿತ್ರರಚನೆಗಾಗಿ ಬೇಕಾಗುವ ಸೀಸುಕಡ್ಡಿ, ಬಣ್ಣ, ಕುಂಚಗಳು ಅಂಟುದ್ರಾವಕಗಳನ್ನು ಇಲ್ಲಿನ ಕಲಾವಿದರು ಸ್ವತಃ ತಾವೇ ತಯಾರಿಸಿಕೊಂಡಿದ್ದಾರೆ. ಇಂದಿನ ಸೀಸುಕಡ್ಡಿಯನ್ನು ಹಿಂದೆ ವರ್ತಿಕಾ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದನ್ನು ಬೇರೆ ಬೇರೆ ವಿಧಾನಗಳಿಂದ ಪ್ರಾಚೀನ ಕಲಾವಿದರು ತಯಾರಿಸಿಕೊಳ್ಳುತ್ತಿದ್ದರು. ಹೆಸರು, ಉದ್ದಿನಬೇಳೆ, ಗೋಧಿ, ಬಾರ್ಲಿ ಕಾಳಿನ ಹಿಟ್ಟುಗಳನ್ನು ಕಲಿಸಿ ಕಣದಕ ಹಾಗೆ ನಾದಿಕೊಂಡು, ಕಡ್ಡಿಗಳನ್ನು ತಯಾರಿಸಿ, ಒಣಗಿಸಿ, ಸುಟ್ಟು ಕಪ್ಪಾಗಿ ಮಾಡಿಕೊಂಡು ಚಿತ್ರಕ್ಕಾಗಿ ಉಪಯೋಗಿಸುತ್ತಿದ್ದರು. ಇದಲ್ಲದೆ ಇಟ್ಟಿಗೆ ಪುಡಿ, ಕಪ್ಪು ಪಾಟೀಕಲ್ಲಿನ ಪುಡಿಗಳ ಮಿಶ್ರಣದಿಂದ ಮೇಲೆ ಹೇಳಲಾದ ವಿಧಾನದಿಂದ ವರ್ತಿಕಾ ತಯಾರಿಸುತ್ತಿದ್ದರು. ಇವುಗಳ ಜೊತೆಗೆ ವಿವಿಧ ಬಳ್ಳಿಗಳು, ಸಸ್ಯಗಳನ್ನು ಸುಟ್ಟು ಅವುಗಳ ಇದ್ದಿಲುಗಳನ್ನು ವರ್ತಿಕಾದಂತೆ ಬಳಸುತ್ತಿದ್ದರು.
ಬಣ್ಣಗಳಿಗಾಗಿ ವಿವಿಧ ಖನಿಜ ಮೂಲಗಳು, ಸಸ್ಯ ಮೂಲಗಳು ಪ್ರಾಣಿ ಮೂಲಗಳನ್ನು ಬಳಸಿಕೊಳ್ಳುತ್ತಿದ್ದರು. ಅದರಂತೆ ಅಂಟು ದ್ರಾವಣಕ್ಕಾಗಿಯೂ ಸಸ್ಯ ಮತ್ತು ಪ್ರಾಣಿ ಮೂಲದ ಜಿಗುಟು ಪದಾರ್ಥಗಳನ್ನು ಬಾದಾಮಿಯ ಐತಿಹಾಸಿಕ ಕಾಲದ ಚಿತ್ರಕಲಾವಿದರು ಬಳಸಿ ಕೊಂಡಿರುವುದು ತಿಳಿದುಬರುತ್ತದೆ.
ಚಿತ್ರಗಳ ವಿವರಣೆ
ವರ್ಣಚಿತ್ರಗಳನ್ನು ರಚಿಸಲಾಗಿರುವ ವೈಷ್ಣವ ಗುಹೆಯು ಗರ್ಭಗುಡಿ, ಮಂಟಪ ಮತ್ತು ಮೊಗಸಾಲೆಗಳನ್ನು ಹೊಂದಿದೆ. ಮಂಟಪದ ಹಿಂದಣ ಗೋಡೆಯನ್ನು ಕೊರೆದು ಗರ್ಭಗೃಹ ನಿರ್ಮಿಸಲಾಗಿದೆ. ಗುಹೆಯ ಮುಂಭಾಗದಲ್ಲಿ ಕಂಬ ಮತ್ತು ಅರ್ಧ ಕಂಬಗಳನ್ನು ಕೆತ್ತಲಾಗಿದೆ. ಗುಹೆಯ ಮೇಲ್ಚಾವಣಿಯ ಹೊರಚಾಚಿದ ಬಾಗುಭಾಗದಲ್ಲಿ ಭಿತ್ತಿಚಿತ್ರಗಳು ಕಂಡುಬಂದಿವೆ. ಆದರೆ ಇಂದು ಇಲ್ಲಿ ಚಿತ್ರಗಳು ಉಳಿದಿಲ್ಲ. ಗುರುತಿಸಲಾಗದಂತೆ ನಾಶವಾಗಿ ಹೋಗಿವೆ. ಅವುಗಳನ್ನು ಪ್ರತಿ ಮಾಡಿಟ್ಟ ಅನಿವಾಸಿ ತಂಡದವರು ಮತ್ತು ಮಿಣಜಿಗಿಯವರ ಪ್ರತಿಕೃತಿಗಳಿಂದ ಹಾಗೂ ಧಾರವಾಡದ ಶಿಲ್ಪಿ ಡಿ.ಎಚ್.ಕುಲಕರ್ಣಿ ಇವರ ವೈಯಕ್ತಿಕ ಸಂಗ್ರಹದಲ್ಲಿರುವ ಪ್ರತಿಕೃತಿಗಳಿಂದಲೂ ಈ ಚಿತ್ರಗಳ ಬಗ್ಗೆ ತಿಳಿದುಕೊಳ್ಳಬಹುದು.
ಬಾದಾಮಿಯ ೩ನೆಯ ಗುಹೆಯ ಮೇಲ್ಚಾವಣಿಯ ಚಾಚುಭಾಗದಲ್ಲಿ ಕಂಡುಬಂದಿರುವ ಇಲ್ಲಿನ ಚಿತ್ರಗಳು ಉದ್ದವಾದ ಪಟ್ಟಿಕೆಯಲ್ಲಿ ರಚನೆಯಾಗಿವೆ. ಚಿತ್ರದಲ್ಲಿ ಮುಖ್ಯವಾಗಿರುವ ದೃಶ್ಯ ಅರಮನೆಯ ಒಳಾಂಗಣವನ್ನು ಬಿಂಬಿಸುತ್ತದೆ. ಇಲ್ಲಿನ ಚಿತ್ರದ ಮಧ್ಯಭಾಗದಲ್ಲಿರುವ ವ್ಯಕ್ತಿಯು ಸುಂದರವಾದ ಆಸನದ ಮೇಲೆ ಕುಳಿತಿದ್ದಾನೆ. ಈತನ ಎದುರಿನಲ್ಲಿ ನೃತ್ಯ ಸಂಗೀತ ಕಾರ್ಯಕ್ರಮವು ನಡೆಯುತ್ತದೆ. ಮೇಲಿನ ಬಾಲ್ಕನಿಯಲ್ಲಿ ನಿಂತಿರುವ ಹಲವಾರು ಜನರೂ ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ಮಧ್ಯದಲ್ಲಿ ಕುಳಿತ ಪ್ರಮುಖ ವ್ಯಕ್ತಿಯ ಕೊರಳಲ್ಲಿ ಪದಕಗಳನ್ನು ಹೊಂದಿದ ಹಾರವಿದ್ದು, ಯಜ್ಞೋಪವೀತ ಧರಿಸಿದ್ದಾನೆ. ರಾಜನಂತೆ ಕಾಣುವ ಈ ವ್ಯಕ್ತಿಯ ಪಾದದ ಬಳಿಯಲ್ಲಿ ಹಲವಾರು ಗಣ್ಯವ್ಯಕ್ತಿಗಳು ಕುಳಿತಿದ್ದಾರೆ. ಎಡಬದಿಗೆ ವಾದ್ಯವೃಂದದವರಿದ್ದು ನೃತ್ಯಕಾರ್ಯಕ್ರಮದಲ್ಲಿ ಒಬ್ಬಳು ಸ್ತ್ರೀ ಒಬ್ಬ ಪುರುಷ ನರ್ತಿಸುತ್ತಿದ್ದಾರೆ.
ಒಂದು ಬದಿಯಲ್ಲಿ ರಾಜ ಪರಿವಾರದವರು ನೃತ್ಯ ವೀಕ್ಷಿಸಲು ಕಂಬಗಳನ್ನು ಹೊಂದಿದ ಮಂಟಪದಲ್ಲಿ ತೆಳು ಪರದೆಯೊಂದನ್ನು ಕಟ್ಟಿ ಮರೆಮಾಡಲಾಗಿದೆ. ಇದು ಇಂದ್ರನ ವೈಜಯಂತ ಅರಮನೆಯ ದೃಶ್ಯವಾಗಿರಬಹುದು. ಆ ನೃತ್ಯವು ಭರತ ಮತ್ತು ಊರ್ವಶಿ, ಇಲ್ಲವೆ ತಂಡು ಮತ್ತು ಊರ್ವಶಿಯರದಾಗಿರಬಹುದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿತ್ತು. ಆದರೆ ವಿದ್ವಾಂಸರ ಎಲ್ಲಾ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಡಾ.ಶೀಲಾಕಾಂತ ಪತ್ತಾರ ಅವರು ಇದು ಇಂದ್ರನ ಆಸ್ಥಾನದ ದೃಶ್ಯವಾಗಿರದೆ ಚಾಲುಕ್ಯ ಅರಸನ ಚಿತ್ರವಾಗಿದೆ ಎಂದು ಹೇಳುತ್ತಾರೆ. ಇದು ಹೆಚ್ಚು ಸೂಕ್ತವಾದದ್ದು ಎನ್ನಬಹುದು.
ಇನ್ನೊಂದು ಚಿತ್ರವು ಪಕ್ಕದಲ್ಲಿದ್ದು, ಅದು ರಾಜನ ಒಡ್ಡೋಲಗವನ್ನು ಪ್ರತಿಬಿಂಬಿಸುತ್ತದೆ. ರಾಜ ಮತ್ತು ರಾಣಿ ಜೊತೆಯಾಗಿ ಸುಂದರವಾದ ಆಸನಗಳಲ್ಲಿ ಕುಳಿತಿದ್ದಾರೆ. ಮುಂದುಗಡೆ ಪರಿವಾರದವರು, ಸೇವಕ ಸೇವಕಿಯರು ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಿಂದುಗಡೆ ಎತ್ತರದಲ್ಲಿ ಇಂದ್ರನು ಕಾಣಿಸಿಕೊಂಡು ದೊರೆಯನ್ನು ಹರಸುತ್ತಿರುವಂತೆ ಚಿತ್ರಿಸಲಾಗಿದೆ. ಇಲ್ಲಿ ಚಿತ್ರಿತವಾದ ರಾಜನು ಸುಖಾಸೀನನಾಗಿ ಕುಳಿತಿದ್ದು, ಬಲಗಾಲನ್ನು ಪೀಠ ಒಂದರ ಮೇಲೆ ಇಟ್ಟಿದ್ದಾನೆ. ಎಡಗೈಯನ್ನು ಮೊಣಕಾಲಿನ ಮೇಲಿಂದ ಇಳಿಯಬಿಟ್ಟಿದ್ದು, ಬಲಗೈಯಲ್ಲಿ ಯಜ್ಞೋಪವೀತ ತೂಗುತ್ತಿದೆ. ತಲೆಯ ಮೇಲೆ ಉದ್ದನೆಯ ಕಿರೀಟ ಧರಿಸಿದ್ದಾನೆ ರಾಜನ ಬಲಗಡೆಗೆ ನೆಲದ ಮೇಲೆ ಅನೇಕ ಜನರು ಕುಳಿತಿದ್ದಾರೆ. ಎಡಭಾಗದಲ್ಲಿನ ಮತ್ತೊಂದು ಆಸನದ ಮೇಲೆ ರಾಣಿಯು ಕುಳಿತಿದ್ದು ಪರಿಚಾರಿಕೆಯರು ಅವಳ ಸುತ್ತಲೂ ಸೇವೆಯಲ್ಲಿ ತೊಡಗಿದ್ದಾರೆ. ರಾಣಿಯ ಕಿವಿಯಲ್ಲಿ ಪತ್ರಕುಂಡಲಗಳು, ಹಣೆಯಲ್ಲಿರುವ ಮುಂಗುರುಳುಗಳು, ತೆಳುವಾದ ವಸ್ತ್ರವಿನ್ಯಾಸಗಳು ಅವಳ ಅಂದವನ್ನು ಹೆಚ್ಚಿಸಿವೆ.
ಈ ಚಿತ್ರದಲ್ಲಿನ ಹಿನ್ನೆಲೆಯ ಸ್ಥಳಾವಕಾಶವು ಅರಮನೆಯ ಒಳಕೋಣೆಯೊಂದರ ದೃಶ್ಯವನ್ನು ಸೂಚಿಸುತ್ತದೆ. ಈ ದೃಶ್ಯದಲ್ಲಿ ನೀಲಿ, ಕೆಂಪು, ಹಸಿರು ಮತ್ತು ಬೂದುವರ್ಣದಲ್ಲಿ ಕಾವಲುಗಾರರನ್ನು ಚಿತ್ರಿಸಿದೆ. ಈ ಚಿತ್ರವು ಚಾಲುಕ್ಯ ದೊರೆಗಳ ರಾಜ ವೈಭವವನ್ನು ತೋರಿಸುವ ದೃಶ್ಯವಾಗಿದ್ದು, ಇದರಲ್ಲಿ ಚಿತ್ರಿಸಲಾದ ರಾಜ ರಾಣಿಯರು ಕೀರ್ತಿವರ್ಮ ಮತ್ತು ಆತನ ರಾಣಿ ಹಾಗೂ ಪರಿವಾರದವರಾಗಿದ್ದಾರೆ ಎಂದು ಶಿವರಾಮಮೂರ್ತಿಯವರು ತರ್ಕಿಸುತ್ತಾರೆ.
ಈ ಗುಹೆಯ ಇನ್ನೆರಡು ಗಮನಾರ್ಹ ಚಿತ್ರಗಳೆಂದರೆ, ಗಗನದಲ್ಲಿ ಹಾರುತ್ತಿರುವ ವಿದ್ಯಾಧರ ದಂಪತಿಗಳಾಗಿವೆ. ಒಂದು ಚಿತ್ರದಲ್ಲಿ ಒಬ್ಬರು ಇನ್ನೊಬ್ಬರ ಕೊರಳು ಅಪ್ಪಿ ಹಿಡಿದು ಹಾರುತ್ತಿದ್ದರೆ, ಇನ್ನೊಂದರಲ್ಲಿ ವಿಧ್ಯಾದರನೊಬ್ಬನು ವೀಣೆಯನ್ನು ನುಡಿಸುತ್ತಿದ್ದಾನೆ. ಇಲ್ಲಿ ಪುರುಷರನ್ನು ಬೂದು ವರ್ಣದಲ್ಲಿ ಚಿತ್ರಿಸಿದ್ದರೆ ಸ್ತ್ರೀಯರಿಗೆ ಹಸಿರು, ನೀಲಿ ವರ್ಣಗಳನ್ನು ಲೇಪಿಸಲಾಗಿದೆ. ಈ ಚಿತ್ರಗಳನ್ನು ರಚಿಸಿದ ಕಲಾವಿದರ ಬಗ್ಗೆ ಹೆಚ್ಚಿಗೆ ತಿಳಿದುಬರದಿದ್ದರೂ ಮನೋದಾರುಣನ್ ಎಂಬ ಕಲಾವಿದ ಇವುಗಳನ್ನು ರಚಿಸಿರುವ ಬಗ್ಗೆ ವಿದ್ವಾಂಸರು ತರ್ಕಿಸಿದ್ದಾರೆ.
ಬಾದಾಮಿಯ ವೈಷ್ಣವ ಗುಹೆಯ ಭಿತ್ತಿ ಚಿತ್ರಗಳು ಉತ್ತಮ ಸಂಯೋಜನಾ ಕೃತಿಗಳಾಗಿವೆ. ಹಿಂದಿನ ಪ್ರಾರಂಭಿಕ ಹಂತದ ಕೃತಿಗಳಾದ ಉತ್ತರ ಬೆಟ್ಟದ ಶಿಲಾಶ್ರಯ ಚಿತ್ರಗಳು, ರಾವಣಫಡಿ ಗುಹೆ ಚಿತ್ರಗಳಿಗಿಂತ ಇಲ್ಲಿನ ಕೃತಿಗಳಲ್ಲಿ ಯೋಜನಾಬದ್ಧ ಸಂಯೋಜನೆ ಕಂಡುಬರುವುದು. ಮುಖ್ಯ ಚಿತ್ರವನ್ನು ದೊಡ್ಡದಾಗಿಯೂ ಉಳಿದ ಚಿತ್ರಗಳನ್ನು ಚಿಕ್ಕದಾಗಿಯೂ ಇಲ್ಲಿ ಚಿತ್ರಿಸಿದ್ದು ಶಿಲ್ಪಶಾಸ್ತ್ರಗಳ ನಿರ್ದೇಶನ ಅನುಸರಿಸಿದಂತೆ ಗೋಚರಿಸುತ್ತದೆ. ಇಲ್ಲಿಯ ಚಿತ್ರದಲ್ಲಿ ಸಂಯೋಜಿಸಿರುವ ಅರಮನೆಯ ಒಳಾಂಗಣ ದೃಶ್ಯದಲ್ಲಿ ಕಂಬಗಳು, ಕಮಾನುಗಳು, ಕ್ಲಿಪ್‌ಗೆ ಅಳವಡಿಸಿದ ಪರದೆಗಳು, ಮಹಡಿಯ ಬಾಲ್ಕನಿಗಳು, ಕಿಟಕಿ ಬಾಗಿಲುಗಳು ಅದಕ್ಕೆ ಅಳವಡಿಸಿದ ಕದಗಳು, ಸಿಂಹಾಸನ ಮತ್ತು ಇತರ ಪೀಠಗಳು ಆ ಕಾಲದ ಅರಮನೆಯ ಒಳಾಂಗಣದ ವೈಭವವನ್ನು ತಿಳಿಸಿಕೊಡುತ್ತವೆ.
ಬಾದಾಮಿ ಚಿತ್ರಗಳ ಪ್ರಮುಖ ಲಕ್ಷಣಗಳು
೧. ಇಲ್ಲಿನ ಚಿತ್ರಗಳಲ್ಲಿ ಉಕ್ತಿಗಳು ನೀಳವಾಗಿದ್ದು, ಕೆನ್ನೆ, ಗಲ್ಲ, ತುಟಿ, ಸ್ತನಗಳು, ಕಣ್ಣುಗಳನ್ನು ಉತ್ಪ್ರೇಕ್ಷಿಸಿ ತೋರಿಸಲಾಗಿದೆ.
೨. ಮುಖಗಳ ಆಕಾರದಲ್ಲಿ ದುಂಡು ಹಾಗೂ ಅಂಡಾಕಾರಗಳು ಪ್ರಧಾನವಾಗಿವೆ.
೩. ಒಂದೇ ವರ್ಣದ ಎರಡು ಮೂರು ಛಾಯೆಗಳನ್ನು ಬಳಸಿದ್ದು ಹೆಚ್ಚು ಕಂಡುಬರುವುದಿಲ್ಲ. ಬದಲಾಗಿ ಪ್ರತಿಭಾಗಕ್ಕೂ ಬೇರೆ ಬೇರೆ ವರ್ಣ ಬಳಸಲಾಗಿದೆ.
೪. ಚಿತ್ರಗಳಿಗೆ ಸೂಕ್ಷ್ಮವಾದ ಬಾಹ್ಯ ರೇಖೆಗಳನ್ನು ಎಳೆಯಲಾಗಿದೆ.
೫. ಮನುಷ್ಯ ಚಿತ್ರಗಳಲ್ಲಿ ಆಕೃತಿಗಳಿಗೆ ನೀಲಿ, ಹಸಿರು, ಕಂದು, ತಿಳಿಕೆಂಪು ಬಣ್ಣದ ಮೈಬಣ್ಣ ಲೇಪಿಸಲಾಗಿದೆ. ಆ ಮೂಲಕ ಒಟ್ಟು ಚಿತ್ರದ ವರ್ಣ ಸಾಮರಸ್ಯ ಉಜ್ವಲಗೊಳಿಸಲಾಗಿದೆ.
ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಯಾದಪ್ಪ ಪರದೇಶಿ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ಎ. ಮುರಿಗೆಪ್ಪ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ