ಕನ್ನಡದ ಪ್ರಾಚೀನ ಸಾಹಿತ್ಯದ ಬಗ್ಗೆ ಮಾತನಾಡುವಾಗ, ನಾವು ಕನ್ನಡನಾಡಿನ ಶಿಲಾಶಾಸನಗಳ ಮೊರೆ ಹೋಗಬೇಕಾಗುತ್ತದೆ. ಏಕೆಂದರೆ, ಆ ಕಲ್ಲಿನ ಮೇಲೆ ಕೊರೆದ ಕನ್ನಡದ ಬರವಣಿಗೆಯೇ ನಮ್ಮ ಕನ್ನಡ ಸಾಹಿತ್ಯ ಪರಂಪರೆಯ ಪ್ರಾಚೀನತೆಗೆ ದೊರಕುವ ಸಾಕ್ಷಿ, ಆಕರ ಸಾಮಗ್ರಿಗಳು. ಕರ್ನಾಟಕದಲ್ಲಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚಾಗಿ ಶಾಸನಗಳು ದೊರಕಿವೆ ಎನ್ನುತ್ತಾರೆ, ಶಾಸನತಜ್ಞರು. ಇವಲ್ಲದೆ, ಉತ್ಖನನಗಳು ನಡೆದಾಗ ಆಗೊಮ್ಮೆ ಈಗೊಮ್ಮೆ ಮುಂಚೆ ಸಿಕ್ಕಿರದ, ಈಗ ಬೆಳಕಿಗೆ ಬಂದ ಇನ್ನೂ ಅನೇಕ ಶಾಸನಗಳು ಕನ್ನಡನಾಡಿನ ಸಾಂಸ್ಕೃತಿಕ, ಸಾಹಿತ್ಯಕ ಇತಿಹಾಸವನ್ನು ಕರಾರುವಾಕ್ಕಾಗಿ ನಾವು ತಿಳಿದುಕೊಳ್ಳಲು ಅನುವಾಗುತ್ತವೆ. ಶಾಸನಗಳನ್ನು ಮುಖ್ಯವಾಗಿ ದಾನಶಾಸನಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳು, ನಿಸದಿಗಲ್ಲುಗಳು, ರಾಜಶಾಸನದ ಕಲ್ಲುಗಳು- ಎಂದು ವಿಂಗಡಿಸಬಹುದು. ಅವುಗಳಲ್ಲಿ, ವೀರನೊಬ್ಬನ ಶೌರ್ಯದ ಗುಣಗಾನ ಮಾಡುವ ಶಿಲಾಶಾಸನವೇ ‘ವೀರಗಲ್ಲು’. ಈ ಎಲ್ಲ ಶಾಸನಗಳಲ್ಲಿ ಬರವಣಿಗೆ ಗದ್ಯದಲ್ಲಿ ಇರಬಹುದು, ಪದ್ಯದಲ್ಲಿ ಇರಬಹುದು ಅಥವಾ ಗದ್ಯ-ಪದ್ಯ ರೂಪವಾಗಿರಬಹುದು. ಸಂಪೂರ್ಣ ಕನ್ನಡದಲ್ಲೇ ಇರಬಹುದು, ಆದರೆ, ಕನ್ನಡ-ಸಂಸ್ಕೃತ ಮಿಶ್ರಿತವಾಗಿರುವುದೇ ಹೆಚ್ಚು. ಕ್ರಿಸ್ತಪೂರ್ವ ಮೂರನೆಯ ಶತಮಾನದ ಅಶೋಕನ ಕಾಲದಿಂದಲೂ ಕರ್ನಾಟಕದಲ್ಲಿ ಶಿಲಾಲಿಪಿಗಳು ಮತ್ತು ತಾಮ್ರಪಟಗಳೂ ಸಿಕ್ಕಿವೆ; ಆದರೆ, ಅವು ಪ್ರಾಕೃತ ಅಥವಾ ಸಂಸ್ಕೃತಗಳಲ್ಲಿ ಬರೆದವು. ನಮಗೆ ಸಿಕ್ಕಿರುವ ಕನ್ನಡ ಶಾಸನಗಳಲ್ಲಿ ಕ್ರಿಸ್ತಶಕ ಐದನೆಯ ಶತಮಾನದ ಹಲ್ಮಿಡಿಯ ಶಾಸನವೇ ಅತಿ ಪ್ರಾಚೀನವಾದದ್ದು. ಇದರ ಭಾಷೆ ‘ಪೂರ್ವದ ಹಳೆಗನ್ನಡ’ ಎಂದು ಕರೆಯುವ ಕನ್ನಡದ ಪ್ರಾಚೀನ ಭಾಷಾರೂಪವನ್ನು ಪ್ರತಿನಿಧಿಸುತ್ತದೆ. (ನೋಡಿ: ಅನುಬಂಧ- 1 ರಲ್ಲಿ ಇರುವ ಹಲ್ಮಿಡಿಯ ಶಾಸನದ ಚಿತ್ರ). ಸುಮಾರು ಏಳನೆಯ ಶತಮಾನದ ‘ಕಪ್ಪೆ ಅರಭಟ್ಟನ ಬಾದಾಮಿಯ ಶಾಸನ’ ವು ಅನೇಕ ದೃಷ್ಟಿಗಳಿಂದ ಮಹತ್ವದ್ದಾಗಿದೆ. ಶಾಸನದ ಭಾಷೆ ಹಳಗನ್ನಡ; ಮೊದಲ ಶ್ಲೋಕ ಸಂಸ್ಕೃತದಲ್ಲಿದೆ. ಉಳಿದದ್ದು ‘ತ್ರಿಪದಿ’ಯಲ್ಲಿದೆ. ‘ಕನ್ನಡ ಛಂದಸ್ಸಿನ ತಾಯಿ ಬೇರು’ ಎನ್ನುತ್ತಾರಲ್ಲ, ಪ್ರೊ. ರಂ. ಶ್ರೀ ಮುಗಳಿ ಅವರು, ಆ ತ್ರಿಪದಿಯ ಮಟ್ಟಿನ ಮೊಟ್ಟ ಮೊದಲನೆಯ ರೂಪವು ಅದರಲ್ಲಿದೆ. ‘ಒಬ್ಬ ಕನ್ನಡ ವೀರನ ಆವೇಶಯುತವಾದ ಸ್ವಭಾವಚಿತ್ರವು ಅಲ್ಲಿದೆ. ಅದರಲ್ಲಿ ಭಾವ ಭಾಷೆಗಳ ಯೋಗ್ಯ ಮಿಲನವುಳ್ಳ ಸ್ವಯಂ ಪೂರ್ಣವಾದ ಭಾವಗೀತೆಯ ಸತ್ವವೂ ತುಂಬಿದೆ.’ (ನೋಡಿ, ‘ಕನ್ನಡ ಸಾಹಿತ್ಯ ಚರಿತೆ’್ರ, ಪುಟ 11-12). ‘ತ್ರಿಪದಿ’ಯ ಮಾತು ಬಂತು. ಅದರ ಬಗ್ಗೆ ಆಮೇಲೆ ವಿವೇಚಿಸೊಣ. ಈಗ ಬಾದಾಮಿಯ ಶಾಸನದ ಕಡೆ ತಿರುಗೋಣ. ‘ಬಾದಾಮಿ ಶಾಸನ’ ದ ಮೂಲಪಾಠ : ‘ಅಪಕೀರ್ತಿಗಿಂತ ಮರಣವೇ ಲೇಸು’ ಎಂದು ಬಗೆಯುತ್ತಿದ್ದ ಕಪ್ಪೆ ಅರಭಟ್ಟನೆಂಬ ಸಾಧುಪುರುಷನ ಕೀರ್ತಿಯನ್ನು ಕನ್ನಡದಲ್ಲಿ ತ್ರಿಪದಿಗಳಲ್ಲಿ ಹೊಗಳುವ, ವೀರಗಲ್ಲಿನ ರೂಪದ ಪ್ರಾಚೀನ ಸ್ಮಾರಕ ಈ ತಟ್ಟುಕೊಟಿ ಬಾದಾಮಿ ಶಾಸನ. ಆ ‘ಬಾದಾಮಿ ಶಾಸನ’ ಏನು? ಕಲ್ಲಿನ ಮೇಲೆ ಕೆತ್ತಿದ, ಹತ್ತು ಸಾಲಿನ ಆ ಶಾಸನದ ಮೂಲಪಾಠ, ಹೀಗಿದೆ (ಆಕರ: ಇಂಡಿಯನ್ ಆಂಟಿಕ್ವೆರಿ 10: 61; ಶಾಸನ ಪದ್ಯಮಂಜರಿ, 4, ಪುಟ 2; ‘ಕರ್ಣಾಟಕ ಪರಂಪರೆ’, ಸಂಪುಟ 1, ಪುಟ 222; 266; ‘ಬಾದಾಮಿ ಶಾಸನ’ ಚಿತ್ರಕ್ಕೆ, ಅನುಬಂಧ-2ನ್ನು ನೋಡಿ): ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್ ಕಷ್ಟಜನವರ್ಜಿತನ್ ಕಲಿಯುಗ ವಿಪರೀತನ್ ವರನ್ತೇಜಸ್ವಿನೋಮೃತ್ಯುರ್ನತುಮಾನಾವಖಂಡನಂ ಮೃತ್ಯುಸ್ತತ್ಕ್ಷಣಿಕೋ ದುಃಖಮ್ಮಾನಭಂಗಂ ದಿನೇದಿನೇ ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯ್ಯಂ ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್ಮಾಧವನೀತನ್ ಪೆರನಲ್ಲ ಒಳ್ಳಿತ್ತ ಕೆಯ್ವಾರಾರ್ಪೊಲ್ಲದುಮದರಂತೆ ಬಲ್ಲಿತ್ತು ಕಲಿಗೆ ವಿಪರೀತಾಪುರಾಕೃತಮಿಲ್ಲಿ ಸಂದಿಕ್ಕುಮದು ಬನ್ದು ಕಟ್ಟಿದ ಸಿಂಘಮನ್ಕೆಟ್ಟೊದೆನೆಮಗೆನ್ದು ಬಿಟ್ಟವೋಲ್ಕಕಲಿಗೆವಿ ಪರೀತಂಗಹಿತರ್ಕ್ಕಳ್ಕೆಟ್ಟರ್ಮ್ಮೇಣ್ಸತ್ತರವಿಚಾರಂ (ಆರನೆಯ ಸಾಲಿನಲ್ಲಿ ‘ಪೆರನಲ್ಲ’ ಮತ್ತು ಏಳನೆಯ ಸಾಲಿನಲ್ಲಿ ‘ಅದರಂತೆ’ ಎಂಬ ಕಡೆ, ಈಗಿನ ‘ರ’ ಬದಲು ಮೂಲದಲ್ಲಿ ಶಕಟರೇಫ ಇದೆ. ಲಿಪಿ ಏಳನೆಯ ಶತಮಾನದ ಕನ್ನಡದಲ್ಲಿದೆ.) ಶಾಸನದ ಸುಲಭ ಪಾಠ: ಈ ಶಾಸನದ ಸುಲಭಪಾಠ ಐದು ಪದ್ಯಗಳಲ್ಲಿ ಹೀಗಿದೆ: ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್ ಕಷ್ಟಜನವರ್ಜಿತನ್ ಕಲಿಯುಗ ವಿಪರೀತನ್।।1।। ವರನ್ ತೇಜಸ್ವಿನೋ ಮೃತ್ಯುರ್ ನ ತು ಮಾನ-ಅವಖಂಡನಂ ಮೃತ್ಯುಸ್ ತತ್ಕ್ಷಣಿಕೋ ದುಃಖಮ್ ಮಾನಭಂಗಂ ದಿನೇದಿನೇ।।2।। ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ ಬಾಧಿಪ್ಪ ಕಲಿಗೆ। ಕಲಿಯುಗವಿಪರೀತನ್ ಮಾಧವನ್ ಈತನ್ ಪೆರನಲ್ಲ।।3।। ಒಳ್ಳಿತ್ತ ಕೆಯ್ವಾರಾರ್ ಪೊಲ್ಲದುಮ್ ಅದರಂತೆ ಬಲ್ಲಿತ್ತು ಕಲಿಗೆ। ವಿಪರೀತಾ ಪುರಾಕೃತಮ್ ಇಲ್ಲಿ ಸಂದಿಕ್ಕುಮ್ ಅದು ಬಂದು।।4।। ಕಟ್ಟಿದ ಸಿಂಘಮನ್ ಕೆಟ್ಟೊದೆನ್ ಎಮಗೆಂದು ಬಿಟ್ಟವೋಲ್ ಕಲಿಗೆ। ವಿಪರೀತಂಗ್ ಅಹಿತರ್ಕ್ಕಳ್ ಕೆಟ್ಟರ್ ಮೇಣ್ ಸತ್ತರ್ ಅವಿಚಾರಂ।।5।। *** ಶಾಸನದ ಭಾವಾರ್ಥ : ಬಾದಾಮಿ ಶಾಸನದ ಕನ್ನಡ ಹಳಗನ್ನಡವಾದರೂ, ಅದು ಬೇಗ ಅರ್ಥವಾಗದಷ್ಟು ಕಷ್ಟಪದಗಳಿಂದ ಕೂಡಿದ್ದೇನಲ್ಲ. ಆ ಪದ್ಯಗಳ ಅರ್ಥವನ್ನು ಸ್ಥೂಲವಾಗಿ ಹೀಗೆ ಹೇಳಬಹುದು: ‘ಈ ಕಪ್ಪೆ ಅರಭಟ್ಟ ಎಂಬುವನು ತನ್ನನ್ನು ಆಶ್ರಯಿಸಿದ ಎಲ್ಲ ಒಳ್ಳೆಯ ಜನರ ಪ್ರೀತಿಪಾತ್ರನು; ಕೆಟ್ಟ ಕೆಲಸ ಮಾಡುವ ತನಗೆ ಆಗದ ಜನರನ್ನು ಕೊನೆಗಾಣಿಸುವ, ಕಲಿಯುಗಕ್ಕೇ ವಿಪರೀತನೆನಿಸುವಷ್ಟು ಧೀರನು, ಇವನು! ।।1।। ‘ತೇಜಸ್ವಿಗಳಾದವರಿಗೆ ಶ್ರೇಷ್ಠವಾದುದು ಯಾವುದು? (ವೀರ)ಮರಣವೇ ಹೊರತು ಮಾನಭಂಗವಲ್ಲ ; ಏಕೆಂದರೆ, ಮೃತ್ಯು ತತ್ಕಾಲಕ್ಕೆ ಕ್ಷಣಿಕವಾದ ದುಃಖವನ್ನು ತಂದೊಡ್ಡಬಹುದು, ಆದರೆ, ಮಾನಭಂಗ? ಅದು ಅನುದಿನವೂ ದುಃಖವನ್ನು ತರುತ್ತಲೇ ಇರುತ್ತದೆ! ।।2।। ‘ಇವನು ಒಳ್ಳೆಯವರಿಗೆ ಒಳ್ಳೆಯವನು, ಸಾಧುವಾದ ಮನುಷ್ಯ; ಮಧುರವಾದ ನಡತೆಯುಳ್ಳ ಸದಾಚಾರದವನಿಗೆ ಮಾಧುರ್ಯದ ಮನುಷ್ಯ; ಬಾಧಿಸುವ ಕಲಿಗೆ (ಅಂದರೆ, ಶೂರನಿಗೆ) ಇವನು ವಿಪರೀತನಾದ ಕಲಿಯುಗ. ಇವನು ವಿಷ್ಣುವೇ ಹೊರತು ಬೇರೆಯಲ್ಲ ।।3।। ‘ಒಳ್ಳೆಯದನ್ನು ಮಾಡುವವರಿಗೂ ಕೆಡಕನ್ನು ಮಾಡುವವರಿಗೂ ಅವರವರಿಗೆ ಇವನು ಅದನ್ನೇ ಇನ್ನೂ ಹೆಚ್ಚಾಗಿ ಮಾಡುತ್ತಾನೆ. ಇವನು ಕಲಿಗೆ ವಿಪರೀತನು. ಹಿಂದಿನ ಜನ್ಮದಲ್ಲಿ ಜನರು ಏನು ಮಾಡಿದ್ದರೋ ಅವರವರ ಕರ್ಮಾನುಸಾರ ಆ ಫಲವನ್ನು ಅವರು ಇವನಿಂದ ಪಡೆಯುತ್ತಾರೆ।।4।। ‘ಕಟ್ಟಿದ ಸಿಂಹವನ್ನು ಬಿಟ್ಟರೆ ಏನು ಕೆಟ್ಟುಹೋಯ್ತು- ಎಂದು ಅದನ್ನು ಬಿಟ್ಟಂತೆ ಈಗ ಆಗಿದೆ. ಈ ಸಿಂಹಸ್ವರೂಪನಾದ, ಕಲಿಗೆ ವಿಪರೀತನಾಗಿರುವ ಇವನ ಕೈಗೆ ಸಿಕ್ಕು ಶತ್ರುಗಳು ಕೆಟ್ಟರು ಅಥವಾ ಸತ್ತರು. ಇದು ಅವರವರ ಅವಿಚಾರದ ಫಲ ।।5।।’ *** ಕನ್ನಡದಲ್ಲಿ ‘ತ್ರಿಪದಿ’: ‘ತ್ರಿಪದಿ’ ಎಂದೊಡನೆ ನಮಗೆ ಥಟ್ಟನೆ ನೆನಪಾಗುವುದು ಸರ್ವಜ್ಞನ ನುಡಿಮುತ್ತುಗಳು. ಪ್ರತಿಯಾಬ್ಬ ಕನ್ನಡಿಗನೂ ಒಂದೆರಡಾದರೂ ಸರ್ವಜ್ಞ ವಚನಗಳನ್ನು ನೆನಪಿಟ್ಟುಕೊಂಡು, ಸಮಯೋಚಿತವಾಗಿ ತನ್ನ ಮಾತುಕತೆಗಳಲ್ಲಿ ಅವನ್ನು ಬಳಸುವದರಿಂದಲೇ ಅವನು ಎಷ್ಟು ಜನಪರ ಕವಿ, ಆ ಬಗೆಯ ಪದ್ಯರೂಪ ಜನರ ಎಷ್ಟೊಂದು ಮೆಚ್ಚುಗೆಯ ಪದಬಂಧ - ಎಂದೆಲ್ಲ ಹೊಗಳಿ ಹಾಡಲು ಕಾರಣವಾಗುತ್ತದೆ. ಈ ‘ತ್ರಿಪದಿ’ಗೆ ಕನ್ನಡಸಾಹಿತ್ಯದಲ್ಲಿ ವಿಶೇಷ ಸ್ಥಾನವುಂಟು. ‘ತ್ರಿಪದಿಯೇ ಕನ್ನಡ ವೃತ್ತಗಳ ಗಾಯತ್ರಿ’- ಎಂದರು, ಪ್ರೊ. ದ.ರಾ. ಬೇಂದ್ರೆ ಅವರು. ಎಷ್ಟು ಅರ್ಥಪೂರ್ಣವಾದದ್ದು, ಈ ಮಾತು! ಪ್ರಸಿದ್ಧವಾದ ‘ಓಂ ತತ್ ಸವಿತೃ ವರೇಣ್ಯಂ। ಭರ್ಗೋ ದೇವಸ್ಯ ಧೀಮಹಿ। ಧಿಯೋ ಯೋ ನ: ಪ್ರಚೋದಯಾತ್।।’ ಸಂಸ್ಕೃತ ಮಂತ್ರದ ಛಂದಸ್ಸು ‘ಗಾಯತ್ರಿ’ ಎಂದು. ಗಾಯತ್ರಿಯಂತೆಯೇ, ತ್ರಿಪದಿಯೂ ಮೂರುಸಾಲಿನ ಪದ್ಯ. ವೈದಿಕ ವೃತ್ತಗಳಲ್ಲಿ ಗಾಯತ್ರಿ ಅತಿ ಪ್ರಾಚೀನ ಮತ್ತು ಅತಿ ಗೌರವಾನ್ವಿತ; ತ್ರಿಪದಿಯೂ ಕೂಡ ಹಾಗೆಯೇ ಕನ್ನಡ ವೃತ್ತಗಳಲ್ಲಿ ಬಹಳ ಹಳೆಯ ಕಾಲದ್ದು ಮತ್ತು ಬಹಳ ಹೆಚ್ಚುಗಾರಿಕೆಯುಳ್ಳದ್ದು. ಕನ್ನಡದಲ್ಲಿ ತ್ರಿಪದಿಯ ಪ್ರಾಚೀನತೆಯನ್ನೂ, ಮಹತ್ವವನ್ನೂ ಹೀಗೆ ಅನೇಕರು ವಿಶ್ಲೇಷಿಸಿದ್ದಾರೆ. ಅದರಲ್ಲಿ ಗಮನಾರ್ಹವಾದದ್ದು ಡಾ.ಎಂ. ಚಿದಾನಂದ ಮೂರ್ತಿಗಳ ‘ತ್ರಿಪದಿ- ಅದರ ಸ್ವರೂಪ ಮತ್ತು ಇತಿಹಾಸ’- ಎಂಬ ವಿಸ್ತೃತ ಲೇಖನ. (ನೋಡಿ: ‘ಛಂದೋತರಂಗ’, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ, 1993, ಪುಟ 88-133), ಬಾದಾಮಿಯ ಶಾಸನದ ತ್ರಿಪದಿಗಳನ್ನು ಅಲ್ಲಿ ಅವರು ಉದಾಹರಣೆಗೆ ತೆಗೆದುಕೊಂಡಿದ್ದಾರೆ. (ಹೊರನೋಟಕ್ಕೆ) ತ್ರಿಪದಿ ನೋಡಲು ಮೂರು ಸಾಲಿನ ಪದ್ಯವಾದರೂ, ಓದಿದಾಗ ಅದು ನಾಲ್ಕು ಸಾಲಿನ ಪದ್ಯವಾಗುತ್ತದೆ. ಬಾದಾಮಿಯ ಶಾಸನದ ತ್ರಿಪದಿಯನ್ನೇ ತೆಗೆದುಕೊಳ್ಳಿ. ಅಲ್ಲಿ ಎರಡನೆಯ ಪಾದದ ಪುನರಾವರ್ತನೆಯ ವಿಷಯವನ್ನು ಒಂದು ಅಡ್ಡ ಗೀಟಿನಿಂದ ಸೂಚಿಸಬಹುದು- ಎಂಬುದು ಅವರ ಅಭಿಪ್ರಾಯ. ‘ಕನ್ನಡ ಕೈಪಿಡಿ’ (ಸಂ. ಬಿ. ಎಂ. ಶ್ರೀಕಂಠಯ್ಯ, ಸಂಪುಟ 1, 1955, ಪುಟ 124)ಯಲ್ಲಿಯೂ ಸಹ, ‘ಗೆರೆಗಳು ಮೂಲದಲ್ಲಿದ್ದಂತೆ ಕೊಟ್ಟಿದೆ; ಎರಡನೆ ಪಂಕ್ತಿಯ ಗೆರೆ ಪುನರಾವೃತ್ತಿಯನ್ನು ಸೂಚಿಸುತ್ತದೆ.’-ಎಂದಿದ್ದರೂ, ಬಾದಾಮಿ ಶಾಸನದ ಚಿತ್ರದಲ್ಲಿ ಯಾವುದೇ ಗೆರೆಯೂ ಕಾಣಿಸುತ್ತಿಲ್ಲ! ಈ ಕಪ್ಪೆ ಅರಭಟ್ಟ ಯಾರು ? : ಸರಿ, ವಿಕ್ರಮಾರ್ಜಿತ ಸತ್ತ್ವದ ಮೃಗೇಂದ್ರ, ಕೆಚ್ಚೆದೆಯ ಕನ್ನಡವೀರ, ಧರ್ಮಭೀರು ಈ ಶಾಸನದ ನಾಯಕ. ಇವನ ಶೌರ್ಯ ಔದಾರ್ಯಾದಿಗಳನ್ನು ಚಿತ್ರಿಸುವುದರ ಮೂಲಕ, ಲಲಿತವಾದ ಓಟದಿಂದಲೂ ಕಾವ್ಯ ಸೌಂದರ್ಯದಿಂದಲೂ ಎಲ್ಲರಿಂದಲೂ ಮಾನ್ಯವಾಗಿ, ಕನ್ನಡ ಸಂಸ್ಕೃತಿಯನ್ನೇ ಬಾದಾಮಿ ಶಾಸನದ ತ್ರಿಪದಿಗಳು ಬಣ್ಣಿಸಿವೆ, ಉಲ್ಲೇಖಾರ್ಹವಾಗಿವೆ- ಎನ್ನೋಣ. ಚಿಕ್ಕದಾಗಿ, ಚೊಕ್ಕವಾಗಿ ಮಾಡಿದ ವ್ಯಕ್ತಿಚಿತ್ರಣ ಸಿಕ್ಕಿದಂತಾಯ್ತು. ಆದರೆ, ಈ ‘ಕಪ್ಪೆ ಅರಭಟ್ಟ’ ಎಂಬುವನು ಯಾರು? ಇನ್ನೂ ಗೊತ್ತಿಲ್ಲ. ಕನ್ನಡದಲ್ಲಿ ಬಹಳ ಹಿಂದೆ, ಹಳಗನ್ನಡದ ಕಾಲದಲ್ಲಿ ‘ಅರಂ’ (ಇಲ್ಲಿ, ‘ರ’ ಈಗ ಬಳಕೆಯಲ್ಲಿಲ್ಲದ ‘ಶಕಟರೇಫ’!) ಪದ ಇತ್ತು. ಆ ‘ಅರಂ’ ಎಂಬ ಪದ ‘ಧರ್ಮ’ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿತ್ತು. (ಉದಾಹರಣೆಗೆ, ‘ಅರವಟ್ಟಿಗೆ’ = ದಾರಿಹೋಕರಿಗೆ ನೀರು ಇತ್ಯಾದಿಗಳನ್ನು ದಾನವಾಗಿ ನೀಡುವ ಧರ್ಮಶಾಲೆ, ಧರ್ಮಛತ್ರ). ಪ್ರೊ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಅಭಿಪ್ರಾಯ ಪಡುತ್ತಾರೆ: ತುಂಬಾ ದಾನ ಧರ್ಮಗಳನ್ನೆಸಗುತ್ತಿದ್ದ ಯಾರೋ ಪುಣ್ಯಾತ್ಮ ‘ಅರಭಟ್ಟ’ ಇವನಿರಬೇಕು. ಜನರ ಬಾಯಲ್ಲಿ, ಹೆಸರಾದವರ ಗುಣವಿಶೇಷಣಗಳು, ವೃತ್ತಿವೈಶಿಷ್ಟ್ಯಗಳು ಅವರ ಹೆಸರಿಗೆ ಅಂಟಿಕೊಳ್ಳುವುದು ಅಸಹಜವೇನಲ್ಲ. ಈ ‘ಧರ್ಮಭಟ್ಟ’ನೂ ಹಾಗೆ ‘ಅರಭಟ್ಟ’ನಾಗಿರಬಹುದೇ?-ಎಂದು. ಹಾಗಾದರೆ, ಈ ‘ಕಪ್ಪೆ’ ಏನು? ಇದಕ್ಕೊಂದು ಸಮಾಧಾನವಿದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಮಾನಾರ್ಥಕ ಪದಗಳನ್ನು ಹುಟ್ಟುಹಾಕುವಾಗ ಅನುವಾದ-ಸ್ವೀಕರಣ(ಟ್ರಾನ್ಸ್‌ಸ್‌ಲೇಷನ್-ಲೋನ್)ಪದಗಳನ್ನು ಬಳಕೆಲ್ಲಿ ತರುವುದುಂಟು. ಹಲ್ಲು-ಪುಡಿ (ಟೂತ್-ಪೌಡರ್), ಭಗೀರಥ-ಪ್ರಯತ್ನ (ಹರ್ಕ್ಯುಲಿಯನ್ ಟಾಸ್ಕ್), ಹಂಸಗೀತೆ(ಸ್ವಾನ್-ಸಾಂಗ್)ಗಳು ಹೀಗೆ ಬಂದವು. ಇದರಂತೆ, ಹಿಂದೆ ಸಂಸ್ಕೃತದ ‘ರಾಜಕುಮಾರ’ ‘ರಾಜಕುಮಾರಿ’ ‘ರಾಜಹಂಸ’ ‘ರಾಜಕೀರ’ ‘ರಾಜಜಂಬೂ’ ಪದಗಳಿಗೆ ನಾವು ಬಳಸಿದ್ದುದು ಅನುಕ್ರಮವಾಗಿ ಅರಗುವರ, ಅರಗುವರಿ, ಅರಸಂಚೆ, ಅರಗಿಳಿ, ಅರನೇರಳೆ-ಗಳು. ಇಲ್ಲಿನ ‘ಅರ’ವನ್ನು ಗಮನಿಸಿ. ಪ್ರೊ. ತೀ ನಂ ಶ್ರೀ ಅವರು ಒಂದು ಕಡೆ, ‘ಅರಸು’ ‘ಅರಸನ’ ಪದದೊಂದಿಗೆ ಬೇರೆ ಕನ್ನಡ ಪದಗಳು ಸೇರಿ, ಸಮಾಸವಾದಾಗ, ಆ ಪದದ ‘ಸು’ ‘ಸನ’ ಲೋಪವಾಗುವುದನ್ನು ಸೂಚಿಸುತ್ತ, ‘ಅರಸು+ಗಿಳಿ=ಅರಗಿಳಿ’, ‘ಅರಸು+ಮನೆ=ಅರಮನೆ’ಗಳ, ಪ್ರಯೋಗವನ್ನು ತೋರಿಸುತ್ತಾರೆ. ಇದನ್ನು ಉದಾಹರಿಸುತ್ತ, ಪ್ರೊ. ಚಿದಾನಂದಮೂರ್ತಿಗಳು ನಮ್ಮ ಬಾದಾಮಿಶಾಸನದ ನಾಯಕ ‘ಕಪ್ಪೆಅರ(ಸ) ಭಟ್ಟ’ ಎಂಬ ದೊರೆ ಇರಬಹುದೇ?- ಎಂದು ಕೇಳುತ್ತಾರೆ. ‘-ಅರ’ (ಅಥವಾ ‘ರ’) ಎಂದು ಕೊನೆಗೊಳ್ಳುವ ಅನೇಕ ಹೆಸರುಗಳು ಶಾಸನಗಳಲ್ಲಿ ದೊರೆಯುತ್ತವೆ. ಉದಾಹರಣೆಗೆ, ಕನ್ನರ, ಸಾಂತರ, ಕರ್ಕರ, ಗೋವಿಂದರ, ಕತ್ಯರ. ಇವುಗಳು ಅನುಕ್ರಮವಾಗಿ, ಕನ್ನರಸ, ಸಾಂತರಸ, ಕರ್ಕರಸ, ಗೋವಿಂದರಸ, ಕತ್ಯರಸ ಎಂಬುವುಗಳ ಸವೆದುಹೋದ ರೂಪ ಎಂದು ಅವರು ತೀರ್ಮಾನಿಸುತ್ತಾರೆ. (ನೋಡಿ: ಚಿದಾನಂದಮೂರ್ತಿ, ಪ್ರಬುದ್ಧ ಕರ್ನಾಟಕ 48:3, 1966, ಪುಟ 58-59; 49:1, 1967, ಪುಟ167). ಅವರು ಮುಂದುವರಿದು, ತೀನಂಶ್ರೀ ಅವರ ಅಭಿಪ್ರಾಯದಂತೆ, ‘ಈ ಹೆಸರು ಕಪ್ಪೆ+ ಅರಭಟ್ಟ’ ಅಲ್ಲ; ಕಪ್ಪೆಯರ+ ಭಟ್ಟ ಇರಬೇಕು ಎಂದು ತಿಳಿಸುತ್ತಾ, ಇದನ್ನು ಒಪ್ಪಿದರೆ ಕಪ್ಪೆಯರ ಎಂಬುದು ‘ಕಪ್ಪೆಯರಸ’ ಎಂಬುದರ ಸಂಕ್ಷಿಪ್ತ್ತರೂಪವಾಗಿರಬೇಕೆಂದು ಊಹಿಸುತ್ತಾರೆ. ಇಲ್ಲಿನ ‘ಕಪ್ಪೆ’? ‘ಅರಸಿಯ ಕೆರೆ’ ಈಗ ‘ಅರಸೀಕೆರೆ’ ಆಗಿದೆ (ನೋಡಿ ಅರಸೀಕೆರೆ ಶಾಸನ 33, 5 ಅಕ 79; 31, 5 ಅಕ 77). ‘ಕಾಶಿ’ಯ ‘ಅಪ್ಪ’ ‘ಕಾಶ್ಯಪ್ಪ, ವಿಶ್ವನಾಥ’ ನಾದಂತೆ, ಕೃಷ್ಣಯ್ಯ ಗೌಡ ‘ಕೃಷ್ಣೇಗೌಡ’ ಆದಂತೆ, ಜವರಯ್ಯ ಗೌಡ ‘ಜವರೇಗೌಡ’ ಆದಂತೆ, ‘ಕಪ್ಪಯ್ಯ ಅರಸ ಭಟ್ಟ’ ಜನರ ಬಾಯಲ್ಲಿ ‘ಕಪ್ಪೇ ಅರ ಭಟ್ಟ’ ಆದನೇ? ‘ಕಪ್ಪೆ’ಗೆ ನಾವೀಗ ‘ವಟಗುಟ್ಟುವ ನೀರೊಳಗೆ ಜೀವಿಸುವ ಪ್ರಾಣಿ’ ಎಂದು ಒಂದೇ ಅರ್ಥ ಇಟ್ಟುಕೊಳ್ಳಬೇಕಾದ್ದಿಲ್ಲ. ‘ಕಪ್ಪು’ ಮೈಬಣ್ಣದಿಂದ ‘ಕಪ್ಪಯ್ಯ’ ಬಂದಿರಬಹುದು. ಮೈಸೂರಿನ ನಮ್ಮ ಸರಸ್ವತೀಪುರದ ಹತ್ತಿರ ಇರುವ ‘ಕನ್ನೇಗೌಡನ ಕೊಪ್ಪಲು’ ಮೊದಲು ಸುತ್ತಮುತ್ತಲ ನೆಲಕ್ಕಿಂತ ಎತ್ತರದ ಜಾಗದಲ್ಲಿ ಇದ್ದಿರಬೇಕು. ಅದು ಕೃಷ್ಣಯ್ಯ ಕನ್ಹಯ್ಯ ಕನ್ನಯ್ಯ ಕನ್ನೇಗೌಡ ಇದ್ದ ಜಾಗ. ಹಾಗೆಯೇ, ‘ಎತ್ತರದ ಜಾಗ’ ಎಂಬ ಅರ್ಥದಲ್ಲಿ ಕೊಪ್ಪಲು ‘ಕೊಪ್ಪೆ’ಯಾಗಿ, ‘ಕೊಪ್ಪೆ’ ಯ ಅರಸ ಈ ‘ಕಪ್ಪೆಅರಭಟ್ಟ’ ಇರಬಹುದೇ? ಸಂಶೋಧಕರಿಗೆ ಒಂದು ಒಳ್ಳೆಯ ಆಹಾರವಾಗಿ ‘ಕಪ್ಪೆ ಅರಭಟ್ಟ’ನ ಇತಿವೃತ್ತ ಇನ್ನೂ ಉಳಿದಿದೆ! (ಆಕರ: ಪ್ರಾ. ನರಸಿಂಹ ಮೂರ್ತಿಗಳ ‘ಕನ್ನಡನಾಡಿನ ಶಾಸನಗಳು’; ‘ಕರ್ನಾಟಕ ಪರಂಪರೆ’ ಸಂಪುಟ 1; ಹಲ್ಮಿಡಿ ಶಾಸನ, ಚಿತ್ರ 12; ಬಾದಾಮಿ ಶಾಸನ, ಚಿತ್ರ 38)
ಕೃಪೆ :Read more at: http://kannada.oneindia.com/column/hari/2004/040204badami-shasana.html
ಕ್ರಿ.ಶ. 7ನೆಯ ಶತಮಾನದ ಬಾದಾಮಿ ಶಾಸನವು ಅನೇಕ ಕಾರಣಗಳಿಗಾಗಿ ಮುಖ್ಯವಾಗಿದೆ. ಇದು ಕರ್ನಾಟಕದ ಅಜ್ಞಾತ ವೀರನೊಬ್ಬನ ಗುಣಗಳನ್ನು ಮುಕ್ತವಾಗಿ ವಿವರಿಸುತ್ತದೆ. ಇದು ಕನ್ನಡ ಮತ್ತು ಸಂಸ್ಕೃತಗಳಲ್ಲಿ ರಚಿತವಾಗಿರುವ ದ್ವಿಭಾಷಾ ಶಾಸನ. ಆದರೆ, ಕಪ್ಪೆ ಅರಭಟ್ಟನನ್ನು ಕುರಿತ ಪದ್ಯಗಳೆಲ್ಲವೂ ಕನ್ನಡದಲ್ಲಿ ಮತ್ತು ಆ ಭಾಷೆಯ ಅತ್ಯಂತ ಹಳೆಯ ಛಂದೋರೂಪಗಳಲ್ಲಿ ಒಂದಾದ ತ್ರಿಪದಿಯಲ್ಲಿ ರಚಿತವಾಗಿವೆ. ತ್ರಿಪದಿಯು ದ್ರಾವಿಡ ಮೂಲಗಳಿಂದ ಒಡಮೂಡಿರುವ ಸಂಭವವಿದೆ. ಈ ಶಾಸನವು ಕನ್ನಡದಲ್ಲಿ ಸಿಕ್ಕಿರುವ ಮೊಟ್ಟಮೊದಲ ತ್ರಿಪದಿಗಳನ್ನು ಒಳಗೊಂಡಿದೆ.
ಕೃಪೆ : ಕಣಜ.ಇನ್
ಕೃಪೆ :Read more at: http://kannada.oneindia.com/column/hari/2004/040204badami-shasana.html
ಕ್ರಿ.ಶ. 7ನೆಯ ಶತಮಾನದ ಬಾದಾಮಿ ಶಾಸನವು ಅನೇಕ ಕಾರಣಗಳಿಗಾಗಿ ಮುಖ್ಯವಾಗಿದೆ. ಇದು ಕರ್ನಾಟಕದ ಅಜ್ಞಾತ ವೀರನೊಬ್ಬನ ಗುಣಗಳನ್ನು ಮುಕ್ತವಾಗಿ ವಿವರಿಸುತ್ತದೆ. ಇದು ಕನ್ನಡ ಮತ್ತು ಸಂಸ್ಕೃತಗಳಲ್ಲಿ ರಚಿತವಾಗಿರುವ ದ್ವಿಭಾಷಾ ಶಾಸನ. ಆದರೆ, ಕಪ್ಪೆ ಅರಭಟ್ಟನನ್ನು ಕುರಿತ ಪದ್ಯಗಳೆಲ್ಲವೂ ಕನ್ನಡದಲ್ಲಿ ಮತ್ತು ಆ ಭಾಷೆಯ ಅತ್ಯಂತ ಹಳೆಯ ಛಂದೋರೂಪಗಳಲ್ಲಿ ಒಂದಾದ ತ್ರಿಪದಿಯಲ್ಲಿ ರಚಿತವಾಗಿವೆ. ತ್ರಿಪದಿಯು ದ್ರಾವಿಡ ಮೂಲಗಳಿಂದ ಒಡಮೂಡಿರುವ ಸಂಭವವಿದೆ. ಈ ಶಾಸನವು ಕನ್ನಡದಲ್ಲಿ ಸಿಕ್ಕಿರುವ ಮೊಟ್ಟಮೊದಲ ತ್ರಿಪದಿಗಳನ್ನು ಒಳಗೊಂಡಿದೆ.
ಕಪ್ಪೆ ಅರಭಟ್ಟನಿಗೂ ಕಪ್ಪೆಗೂ ಯಾವ ಸಂಬಂಧವೂ ಇಲ್ಲ. ಈ ಪದವನ್ನು ಕಪ್ಪೆಯರ ಭಟ್ಟ(ತೀ.ನಂ.ಶ್ರೀ.) ಮತ್ತು ಕಪ್ಪಡಿ ಯರ ಭಟ್ಟ (ಎಂ. ಎಂ. ಕಲಬುರ್ಗಿ) ಎಂಬುದಾಗಿ ಅರ್ಥೈಸಲಾಗಿದೆ. ಎರಡೂ ವಿವರಣೆಗಳು ಅವನ ವಂಶನಾಮದಿಂದ ಸ್ಫೂರ್ತಿ ಪಡೆದಿವೆ.
ಈ ಶಾಸನದ ಅರ್ಥವನ್ನು ಹೀಗೆ ಸಂಗ್ರಹಿಸಬಹುದು: ಅರಭಟ್ಟನನ್ನು ಒಳ್ಳೆಯ ಜನರು ಇಷ್ಟಪಡುತ್ತಾರೆ ಮತ್ತು ದುಷ್ಟರು ಅವನಿಗೆ ಹೆದರುತ್ತಾರೆ. ಅವನು ತನ್ನ ಬಗ್ಗೆ ಸರಿಯಾಗಿ ನಡೆದುಕೊಳ್ಳುವವರಿಗೆ ತಾನೂ ಒಳ್ಳೆಯವನು. ಆದರೆ, ತನಗೆ ತೊಂದರೆ ಕೊಡುವವರಿಗೆ ಅವನು ಅತ್ಯಂತ ಕ್ರೂರಿಯಾಗಿರುತ್ತಾನೆ. ಈ ಗುಣದಲ್ಲಿ ಅವನು ಸಾಕ್ಷಾತ್ ವಿಷ್ಣುವಿಗೆ ಸರಿಸಮಾನ. ತಮ್ಮ ಪೂರ್ವಜನ್ಮದ ಕರ್ಮಗಳ ಪರಿಣಾಮವಾಗಿ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುವ ಜನರು ಇರುತ್ತಾರೆ. ಸ್ವಲ್ಪವೂ ವಿಚಾರ ಮಾಡದ ಇಂತಹವರು, ಪಂಜರದಲ್ಲಿ ಸೆರೆಯಾಗಿರುವ ಸಿಂಹವನ್ನು ಹಿಂದೆ ಮುಂದೆ ನೋಡದೆ ಹೊರಗೆ ಬಿಡುವ ಮೂರ್ಖರಂತೆ, ಸತ್ತು ನಾಶವಾಗುತ್ತಾರೆ.
ಈ ಶಾಸನವನ್ನು ಬಾದಾಮಿ ಪಟ್ಟಣದ ಉತ್ತರ ಗುಡ್ಡದ ಒಂದು ಬದಿಯಲ್ಲಿ ನೆಲಮಟ್ಟದಿಂದ ಸುಮಾರು ಹತ್ತು ಹನ್ನೆರಡು ಅಡಿ ಎತ್ತರದಲ್ಲಿ ಕಂಡರಿಸಲಾಗಿದೆ. ಊರಿನ ನೈರುತ್ಯ ಭಾಗದಲ್ಲಿರುವ ಕೃತಕವಾದ ಕೊಳಕ್ಕೆ ಇದು ಎದುರಾಗಿದೆ. ಈ ಶಾಸನವು 2 ಅಡಿ, 10 1/3 ಅಂಗುಲ ಅಗಲ ಮತ್ತು 3 ಅಡಿ 4 1/2 ಅಂಗುಲ ಎತ್ತರದ ಚದುರಳತೆಯ ಜಾಗದಲ್ಲಿ ಲಿಖಿತವಾಗಿದೆ. ಶಾಸನದ ಅರ್ಥವು ಸ್ಪಷ್ಟವಾಗಿಲ್ಲ. ಆದರೆ ಅದು ಸ್ಥಳೀಯ ವೀರನೂ ಸಂತನೂ ಆದ ಕಪ್ಪೆ ಅರಭಟ್ಟನ ಗುಣವರ್ಣನವೆಂಬ ಸಂಗತಿಯು ಸ್ಪಷ್ಟವಾಗಿದೆ. ಶಾಸನದ ಕೆಳಗೆ ಸುಮಾರು ವೃತ್ತಾಕಾರದ ಪ್ರದೇಶದೊಳಗೆ ಹತ್ತು ದಳಗಳಿರುವ ಕಮಲದಂತೆ ಕಾಣುವ ಹೂವನ್ನು ಕೆತ್ತಲಾಗಿದೆ. ಅದರಿಂದ ಒಂದು ವಸ್ತ್ರ ವಿನ್ಯಾಸವು ನೇತಾಡುತ್ತಿರುವಂತೆ ಕೆತ್ತಲಾಗಿದೆ.
ಈ ಶಾಸನದಲ್ಲಿ ಬಳಸಿರುವ ಕನ್ನಡವು ಪೂರ್ವದ ಹಳಗನ್ನಡವು ಹಳಗನ್ನಡವಾಗಿ ಪರಿವರ್ತನೆಯಾಗುತ್ತದ್ದ ಹಂತಕ್ಕೆ ಸೇರಿದ್ದು, ಪದರಚನೆ ಮತ್ತು ವಾಕ್ಯರಚನೆಗೆ ಸಂಬಂಧಿಸಿದ ಕೆಲವು ಅಂಶಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತವೆ.
ಹೀಗೆ ಬಾದಾಮಿಯ ಶಾಸನವು ಭಾಷಾಶಾಸ್ತ್ರ, ಛಂದಸ್ಸು ಮತ್ತು ಸಾಹಿತ್ಯ ಎಂಬ ಮೂರು ನೆಲೆಗಳಿಂದಲೂ ಬಹಳ ಮುಖ್ಯವಾದುದು.
ಶಾಸನದ ಮೂಲಪಾಠ
ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್ ಕಷ್ಟಜನವರ್ಜಿತನ್ ಕಲಿಯುಗ ವಿಪರೀತನ್ ವರನ್ತೇಜಸ್ವಿನೋ ಮೃತ್ತ್ಯರ್‍ನತು ಮಾನಾವಖಣ್ಡನಂ ಮೃತ್ತ್ಯುಸ್ತತ್ಕ್ಷಣಿಕೋ ದುಃಖಮ್ ಮಾನಭಂಗನ್ ದಿನೇದಿನೇ ಸಾಧುಗೆ ಸಾಧು ಮಾಧೂರ್ಯ್ಯಂಗೆ ಮಾಧೂರ್ಯ್ಯಂ ಬಾಧಿಪ್ಪ ಕಲಿಗೆ ವಿಪರೀತನ್ ಮಾಧವನೀತನ್ ಪೆರನಲ್ಲ ಒಳ್ಳಿತ್ತ ಕೆಯ್ವೊರ್ ಆರ್ ಪ್ಪೊಲ್ಲದುಮ್ ಅದರನ್ತೆ ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತಂ ಇಲ್ಲಿ ಸನ್ಧಿಕ್ಕುಂ ಅದು ಬಂದು ಕಟ್ಟಿದ ಸಿಂಘಮನ್ ಕೆಟ್ಟೊದ್ ಎಮಗೆನ್ದು ಬಿಟ್ಟವೊಲ್ ಕಲಿಗೆ ವಿ[]ರೀತ ಅಹಿತರ್ಕ್ಕಳ್ ಕೆಟ್ಟರ್ ಮೇಣ್ ಸತ್ತರ್ ಅವಿಚಾರಮ್. ಕೃಪೆ : ಕಣಜ.ಇನ್