Oct 15, 2013

ಬಾದಾಮಿ ಪ್ರದೇಶದ ಐತಿಹಾಸಿಕ ಭಿತ್ತಿಚಿತ್ರಗಳು

ಕರ್ನಾಟಕದ ಕಲಾ ಪರಂಪರೆಯಲ್ಲಿ ಬಾದಾಮಿಯ ಐತಿಹಾಸಿಕ ಭಿತ್ತಿಚಿತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ಕರ್ನಾಟಕದ ಶಿಷ್ಟ ಪರಂಪರೆಯ ಚಿತ್ರಕಲಾ ಇತಿಹಾಸವನ್ನು ಇಲ್ಲಿಂದಲೇ ಆರಂಭಿಸುವ ವಿದ್ವಾಂಸರು ಇವುಗಳನ್ನು ಕುರಿತಾಗಿ ಹಲವು ನಿಟ್ಟಿನಲ್ಲಿ ಅಧ್ಯಯನ ಮಾಡಿದ್ದಾರೆ. ಬಾದಾಮಿ ಪ್ರದೇಶದ ಆಳರಸರು ಅಂದಿನ ಕಲಾವಿದರಿಗೆ ರಾಜಾಶ್ರಯ ನೀಡಿ ಅವರಿಂದ ಚಿತ್ರಗಳನ್ನು ಬರೆಯಿಸುವುದರ ಮೂಲಕ ಕಲಾ ಪೋಷಕರಾಗಿ ಮುಂದಿನ ದಿನಗಳಲ್ಲಿ ಚಿತ್ರರಚನಾ ಪರಂಪರೆಯನ್ನು ಜೀವಂತವಾಗಿಡುವುದರ ಸಲುವಾಗಿ ಅಡಿಪಾಯ ಹಾಕಿ ಕೊಟ್ಟಿದ್ದಾರೆ.
ಬಾದಾಮಿಯ ಐತಿಹಾಸಿಕ ಚಿತ್ರಗಳಿಂದ ಕನ್ನಡಿಗರ ಕಲಾಮಾನ, ಧರ್ಮಾಭಿಮಾನ, ಸಾಂಸ್ಕೃತಿಕ ಜೀವನದ ಶ್ರೀಮಂತಿಕೆ, ನಂಬಿಕೆ, ಆಚರಣೆ, ಸಾಮಾಜಿಕ ಜೀವನಗಳಂತಹ ಸಂಗತಿಗಳನ್ನು ಅರಿತುಕೊಳ್ಳಬಹುದು. ಅಂದಿನ ಜನರ ವೇಷ ಭೂಷಣ, ನಿತ್ಯೋಪಯೋಗಿ ವಸ್ತುಗಳು, ಆಯುಧಗಳು ಸುತ್ತಲಿನ ಪರಿಸರ ಹೀಗೆ ಹತ್ತು ಹಲವು ವಿಷಯಗಳು ಚಿತ್ರಕಲೆಯ ಮೂಲಕ ವ್ಯಕ್ತಗೊಳ್ಳುತ್ತವೆ.
ಬಾದಾಮಿಯ ಪರಿಸರದಲ್ಲಿ ಚಿತ್ರಕಲೆಯ ಪ್ರವಾಹ ಓತಪ್ರೋಹರಿದುಬಂದಿದೆ. ಪ್ರಾಗಿತಿಹಾಸ ಕಾಲದ ಚಿತ್ರಗಳು, ಜನಪದ ಚಿತ್ರಗಳು, ಐತಿಹಾಸಿಕ ಚಿತ್ರಗಳು, ಆಧುನಿಕ ಚಿತ್ರಶೈಲಿಗಳು ಇಲ್ಲಿ ಮಡುಗಟ್ಟಿವೆ. ಇವೆಲ್ಲವುಗಳಲ್ಲಿ ಐತಿಹಾಸಿಕ ಭಿತ್ತಿಚಿತ್ರಗಳಿಗೆ ವಿಶೇಷ ಸ್ಥಾನಮಾನವಿದ್ದು ಅವುಗಳ ಬಗ್ಗೆ ವಿವೇಚಿಸುವುದು ಈ ಲೇಖನದ ಪ್ರಮುಖ ಉದ್ದೇಶವಾಗಿದೆ.
ಬಾದಾಮಿಯ ಐತಿಹಾಸಿಕ ಭಿತ್ತಿಚಿತ್ರಗಳು ವೈಷ್ಣವ ಗುಹಾಲಯ ಮಾತ್ರವಲ್ಲದೆ ಕೆಲವು ಸ್ವಾಭಾವಿಕ ಗುಹಾಲಯ(ಶಿಲಾಶ್ರಯ)ಗಳಲ್ಲಿಯೂ ಕಂಡುಬಂದಿವೆ. ಸ್ವಾಭಾವಿಕ ಶಿಲಾಶ್ರಯಗಳಲ್ಲಿ ಕಂಡುಬಂದಿರುವ ಈ ವರ್ಣ ಚಿತ್ರಗಳು ಕಾಲಮಾನದಿಂದ ವೈಷ್ಣವಗುಹೆಯ ಚಿತ್ರಗಳಿಗಿಂತ ಮೊದಲಿನವು ಎನ್ನಬಹುದು. ಹಾಗಾಗಿ ಬಾದಾಮಿಯ ಐತಿಹಾಸಿಕ ಚಿತ್ರಗಳ ಬಗ್ಗೆ ವಿವೇಚಿಸುವಾಗ ಮೊದಲಿಗೆ ಈ ಶಿಲಾಶ್ರಯ ಚಿತ್ರಗಳ ಕುರಿತು ಹೇಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಾದಾಮಿಯ ಐತಿಹಾಸಿಕ ಚಿತ್ರಗಳನ್ನು ಅ. ಸ್ವಾಭಾವಿಕ ಶಿಲಾಗುಹೆಗಳ (ಶಿಲಾಶ್ರಯ) ಭಿತ್ತಿಚಿತ್ರಗಳು, ಬ. ಮಾನವ ನಿರ್ಮಿತ ಶಿಲಾಗುಹೆಗಳ ಬಿತ್ತಿ ಚಿತ್ರಗಳು ಎಂಬುದಾಗಿ ಎರಡು ರೀತಿಯಲ್ಲಿ ವಿಂಗಡಿಸಬಹುದು.
ಅ. ಸ್ವಾಭಾವಿಕ ಶಿಲಾಗುಹೆಗಳ (ಶಿಲಾಶ್ರಯ) ಭಿತ್ತಿ ಚಿತ್ರಗಳು
ಬಾದಾಮಿ ಸುತ್ತಲೂ ಇರುವ ಬೃಹತ್ ಬೆಟ್ಟಗಳಲ್ಲಿ ಸ್ವಾಭಾವಿಕವಾಗಿ ಶಿಲಾಶ್ರಯ ತಾಣಗಳು ಶಿಲಾಗುಹೆಗಳು ಉಂಟಾಗಿವೆ. ಇವುಗಳಲ್ಲಿ ಕೆಲವು ನೆಲೆಗಳಲ್ಲಿ ಚಾಲುಕ್ಯರ ಕಾಲದ ಪ್ರಾರಂಭಿಕ ಹಂತದ ಚಿತ್ರ ರಚನೆಗಳು ಕಂಡುಬಂದಿವೆ. ಅವು ಈ ಕೆಳಗಿನಂತಿವೆ.
೧. ಬಾದಾಮಿಯ ಉತ್ತರ ಕೋಟೆಯ ಶಿಲಾಗುಹೆಯ ಭಿತ್ತಿಚಿತ್ರ: ಬಾದಾಮಿಯ ಉತ್ತರ ಬೆಟ್ಟದಲ್ಲಿ ಇರುವ ಬೃಹತ್ ಬಂಡೆಯೊಂದರ ಮೇಲೆ ಇತಿಹಾಸ ಕಾಲದ ಚಿತ್ರಗಳಿವೆ. ಇವುಗಳನ್ನು ಡಾ.ಅ.ಸುಂದರ ಅವರು ಶೋಧಿಸಿದ್ದಾರೆ.
ಇಲ್ಲಿ ಮೊದಲು ಗೋಡೆಗೆ ಹಳದಿ ಬಣ್ಣದ ಹಿನ್ನೆಲೆ ಲೇಪನವನ್ನು ಕೊಟ್ಟು ನಂತರ ಅದರ ಮೇಲೆ ಕೆಂಪು ಬಣ್ಣದಿಂದ ಚಿತ್ರ ರಚಿಸಲಾಗಿದೆ. ಚಿತ್ರಗಳು ರೇಖಾವಿನ್ಯಾಸದಲ್ಲಿವೆ. ಈ ಚಿತ್ರದಲ್ಲಿ ಮಹಿಳೆಯರ ಆಕೃತಿಗಳೇ ವಿಶೇಷವಾಗಿ ಕಂಡುಬಂದಿವೆ. ಒಬ್ಬಳು ಗಣ್ಯಸ್ತ್ರೀ ಕುಳಿತಿದ್ದು ಆಕೆಯ ಬಲಬದಿಗೆ ಇಬ್ಬರು ಎಡಬದಿಗೆ ಮೂವರು ಮಹಿಳೆಯರು ಹೂಗಳನ್ನು ಹಿಡಿದುಕೊಂಡು ನಿಂತಿದ್ದಾರೆ. ಇದು ರಾಣಿಯೋರ್ವಳು ಸಖಿಯರು ಮತ್ತು ಸೇವಕಿಯರಿಂದ ಸುತ್ತುವರಿದಂತೆ ರಚಿತವಾಗಿದೆ. ಇಲ್ಲಿನ ಸ್ತ್ರೀಯರು ಹಿತಮಿತವಾಗಿ ಆಭರಣ ಧರಿಸಿದ್ದು ಇಂತಹುದೇ ಚಿತ್ರವಿನ್ಯಾಸವು ವೈಷ್ಣವ ಗುಹೆಯಲ್ಲಿಯೂ ಕಂಡುಬರುತ್ತದೆ.
ಈ ಚಿತ್ರದ ಸಮೀಪದಲ್ಲಿಯೇ ಇನ್ನೊಂದು ಕಡೆಗೆ ಕಮಲ ಪುಷ್ಪವನ್ನು ಹಿಡಿದ ಗಣ್ಯಸ್ತ್ರೀಯ ಚಿತ್ರವು ಕಂಡುಬಂದಿದ್ದು,ಇದನ್ನು ಡಾ.ಶೀಲಾಕಾಂತ ಪತ್ತಾರ ಇವರು ಶೋಧಿಸಿದ್ದಾರೆ. ಇಲ್ಲಿಯೂ ಸಹಿತ ಮೊದಲು ಬಂಡೆಗೆ ಹಳದಿ ಲೇಪನ ಕೊಟ್ಟು ಅದರ ಮೇಲೆ ಕೆಂಪು ವರ್ಣದಿಂದ ರೇಖಾವಿನ್ಯಾಸದಲ್ಲಿ ಚಿತ್ರ ಬಿಡಿಸಲಾಗಿದೆ. ಇಲ್ಲಿನ ಚಿತ್ರಗಳಲ್ಲಿ ಕಂಡುಬರುವ ಕೆಲವು ಲಕ್ಷಣಗಳು ಬಾದಾಮಿಯ ಶಿಲ್ಪಗಳ ಲಕ್ಷಣಗಳಿಗೆ ಹೋಲಿಕೆಯಾಗುತ್ತವೆ.
೨. ಮಾಲಗಿತ್ತಿ ಶಿವಾಲಯದ ಬಳಿಯ ಶಿಲಾಶ್ರಯ ಭಿತ್ತಿ ಚಿತ್ರ: ಮಾಲಗಿತ್ತಿ ಶಿವಾಲಯದ ಬಳಿಯಲ್ಲಿರುವ ಬತೇರಿಯ ಕೆಳಭಾಗದಲ್ಲಿ ಬೃಹತ್ ಬಂಡೆಯೊಂದಿದೆ. ಅದರ ಮೇಲೆ ಇತಿಹಾಸ ಕಾಲದ ಚಿತ್ರಗಳು ಕಂಡುಬಂದಿವೆ. ಇಲ್ಲಿಯ ಚಿತ್ರಗಳ ರಚನೆಯ ಮೇಲೆ ಹೇಳಲಾದ ವಿಧಾನವನ್ನೇ ಅನುಸರಿಸಿದೆ. ಮೊದಲಿಗೆ ಹಳದಿ ಲೇಪನ ಕೊಟ್ಟು ಅದರ ಮೇಲೆ ಕೆಂಪು ಬಣ್ಣದಿಂದ ಚಿತ್ರ ಬಿಡಿಸಲಾಗಿದೆ. ಸೈನಿಕರು ಖಡ್ಗ, ಢಾಲುಗಳನ್ನು ಹಿಡಿದುಕೊಂಡಿರುವ ದೃಶ್ಯ ಇಲ್ಲಿದೆ.
೩. ಕುಟಕನಕೇರಿಯ ಶಿಲಾಶ್ರಯ ಭಿತ್ತಿಚಿತ್ರ: ಬಾದಾಮಿಯಿಂದ ಸುಮಾರು ೮ ಕಿಲೋ ಮೀಟರ್ ದೂರದಲ್ಲಿರುವ ಕುಟಕನಕೇರಿ ಪ್ರದೇಶದಲ್ಲಿಯೂ ಬಂಡೆಗಳ ಮೇಲೆ ಇತಿಹಾಸ ಕಾಲದ ಚಿತ್ರಗಳಿವೆ. ಇಲ್ಲಿಯೂ ಹಳದಿ ಹಿನ್ನೆಲೆಯ ಲೇಪನದ ಮೇಲೆ ಕೆಂಪುಬಣ್ಣದಿಂದ ಸೈನಿಕರ ಚಿತ್ರಗಳನ್ನು ಚಿತ್ರಿಸಲಾಗಿದೆ. ಖಡ್ಗ, ಢಾಲುಗಳನ್ನು ಹಿಡಿದುಕೊಂಡಿರುವ ಯೋಧರು ಯುದ್ಧದಲ್ಲಿ ತೊಡಗಿದ್ದಾರೆ. ಈ ಪ್ರಕಾರ ರಚನೆಯಾದ ಸ್ವಾಭಾವಿಕ ಶಿಲಾಗುಹೆಯ ಈ ಚಿತ್ರಗಳು ಬಾದಾಮಿಯ ವೈಷ್ಣವ ಗುಹೆಯ ಚಿತ್ರಗಳಿಗಿಂತ ಮುಂಚಿನವಾಗಿದ್ದು ಚಾಲುಕ್ಯರ ಪ್ರಾರಂಭಿಕ ಹಂತದ ಕಲಾಸಕ್ತಿಯನ್ನು ಬಿಂಬಿಸುತ್ತವೆ.
ಬ. ಮಾನವ ನಿರ್ಮಿತ ಶಿಲಾಗುಹೆಗಳ ಚಿತ್ರಗಳು
ಬಾದಾಮಿ ಪರಿಸರದಲ್ಲಿ ಐಹೊಳೆಯ ರಾವಣಫಡಿ ಮತ್ತು ಬಾದಾಮಿಯ ವೈಷ್ಣವ ಗುಹೆಯ ಭಿತ್ತಿ ಚಿತ್ರಗಳು ಈ ಗುಂಪಿಗೆ ಸೇರುತ್ತವೆ.
೧. ರಾವಣಫಡಿ
ಐಹೊಳೆಯ ರಾವಣಫಡಿ ಗುಹಾದೇವಾಲಯದ ಉಪಗುಹೆಯ ಛತ್ತು ಸಂಕೀರ್ಣ ಸಂಯೋಜನೆಯ ವರ್ಣಚಿತ್ರದಿಂದ ತುಂಬಿಕೊಂಡಿರುವುದನ್ನು ಡಾ.ಶೀಲಾಕಾಂತ ಪತ್ತಾರ ಅವರು ಶೋಧಿಸಿದ್ದಾರೆ. ವರ್ಣಚಿತ್ರದ ಬಹುಭಾಗ ನಶಿಸಿಹೋಗಿದ್ದು ಮೂಲದಲ್ಲಿ ಇದ್ದ ವರ್ಣಚಿತ್ರವನ್ನು ಕಷ್ಟಪಟ್ಟು ಅರ್ಥೈಸಿಕೊಳ್ಳಬೇಕಾಗುತ್ತದೆ. ವರ್ಣಚಿತ್ರದ ಅಂಚುಗಳಲ್ಲಿ ಆಲಂಕಾರಿಕ ಚೌಕಟ್ಟು ಸ್ಪಷ್ಟವಾಗಿದೆ. ವರ್ಣಚಿತ್ರಕ್ಕೆ ಬಳಸಲಾದ ಹೀರುಪದರು (absorbent ground) ತಕ್ಕ ಮಟ್ಟಿಗೆ ದಪ್ಪವಾಗಿದೆ. ಭಿತ್ತಿಚಿತ್ರದಲ್ಲಿ ಕಾಣಬರುವ ವ್ಯಕ್ತಿಗಳು ಯೋಧರೆಂದು ಗುರುತಿಸಬಹುದು. ಆದ್ದರಿಂದ ಇದೊಂದು ರಣರಂಗದ ಸನ್ನಿವೇಶವೆಂದು ಹೇಳಬಹುದು. ಯೋಧರ ವಿಶಿಷ್ಟ ಉಡುಪನ್ನು ಇಲ್ಲಿ ಕಾಣಬಹುದು. ಲೋಹದ ಜಾಲಕ, ಈಟಿ, ದುಂಡಗಿನ ಗುರಾಣಿಗಳನ್ನು ಕೂಡ ಗುರುತಿಸಬಹುದು. ಇದೊಂದು ನುರಿತ ಕಲಾವಿದನ ಕಲಾಸೃಷ್ಟಿ ಎಂಬ ಡಾ.ಶೀಲಾಕಾಂತ ಅವರ ಅಭಿಪ್ರಾಯವು ಸೂಕ್ತವೆನಿಸುತ್ತದೆ.
೨. ವೈಷ್ಣವ ಗುಹಾಲಯದ ಭಿತ್ತಿಚಿತ್ರಗಳು
ಕರ್ನಾಟಕದ ಚಿತ್ರಕಲಾ ಇತಿಹಾಸದಲ್ಲಿ ಹಿಂದೂ ಸಂಪ್ರದಾಯಕ್ಕೆ ಸೇರಿದ ಅತ್ಯಂತ ಪ್ರಾಚೀನ ಚಿತ್ರಗಳೆಂದು ಇವುಗಳನ್ನು ಪರಿಗಣಿಸಲಾಗುತ್ತಿದೆ. ಕ್ರಿ.ಶ.೫೭೮ರಲ್ಲಿ ಮಂಗಳೇಶನ ಕಾಲದಲ್ಲಿ ರಚನೆಯಾದ ಬಾದಾಮಿಯ ವೈಷ್ಣವ ಗುಹೆಯ ಭಿತ್ತಿ ಚಿತ್ರಗಳನ್ನು ಕುರಿತಾಗಿ ಹಲವರು ಅಧ್ಯಯನ ಮಾಡಿದ್ದಾರೆ. ಇವುಗಳ ಬಗೆಗೆ ಮೊದಲು ಜನರ ಗಮನ ಸೆಳೆದವರು ಮತ್ತು ಬರೆದವರು ಸ್ಟೈಲ್ಲಾ ಕ್ರಾಮಿಶ್ಟ್ ಎಂಬ ಪಾಶ್ಚಾತ್ಯ ಮಹಿಳೆ. ನಂತರ ೧೯೫೯ರಲ್ಲಿ ಸಿ.ಶಿವರಾಮ ಮೂರ್ತಿಯವರು ವೈಷ್ಣವ ಗುಹೆಯ ಈ ಚಿತ್ರಗಳ ಬಗ್ಗೆ ವಿವರವಾಗಿ ಬರೆದಿದ್ದು, ಚಿತ್ರಗಳ ವಸ್ತು ವಿಷಯ ಬಣ್ಣಗಾರಿಕೆಯನ್ನು ಕುರಿತಂತೆ ಮಾಹಿತಿ ನೀಡುತ್ತಾರೆ. ಕ್ರಿ.ಶ. ೧೯೬೬ರಲ್ಲಿ ಪ್ರಕಟವಾದ ಬಿಜಾಪುರ ಜಿಲ್ಲಾ ಗೆಜೆಟಿಯರ್‌ನಲ್ಲಿ ಈ ವೈಷ್ಣವ ಗುಹೆಯಲ್ಲಿ ಶೈವ ಧರ್ಮಕ್ಕೆ ಸಂಬಂಧಿಸಿದಂತೆ ಚಿತ್ರಗಳಿವೆ. ಶಿವಪಾರ್ವತಿಯರ ಚಿತ್ರಗಳು ಇಲ್ಲಿ ಸುಂದರವಾಗಿವೆ ಎಂದು ಹೇಳಿದೆ. ಆದರೆ ಇಲ್ಲಿ ಚಿತ್ರದ ವಸ್ತು ವಿಷಯವನ್ನು ಗುರುತಿಸುವಲ್ಲಿ ತಪ್ಪಾಗಿದೆ ಎನ್ನಬಹುದು. ಮುಂದೆ ಡಾ.ಶಿವರಾಮ ಕಾರಂತ ಅವರು ಈ ಚಿತ್ರಗಳ ವಸ್ತುವಿಷಯ, ವರ್ಣಗಾರಿಕೆ, ಚಿತ್ರಶೈಲಿಗಳ ಕುರಿತಾಗಿ ಚರ್ಚಿಸಿದ್ದು, ಇವು ಅಜಂತಾದಂತೆ ಉತ್ತಮ ಮಟ್ಟದವುಗಳಲ್ಲ ಎಂದು ಹೇಳುತ್ತಾರೆ. ಕ್ರಿ.ಶ. ೧೯೭೮ರಲ್ಲಿ ಎಂ.ಎಸ್.ನಾಗರಾಜರಾವ್ ಅವರು ಈ ಚಿತ್ರಗಳ ಬಗ್ಗೆ ಬರೆಯುತ್ತ ಒಂದು ಕಾಲದಲ್ಲಿ ಇಡೀ ಗುಹೆ ವರ್ಣಚಿತ್ರಗಳಿಂದ ವುತ್ತು ವರ್ಣದಿಂದ ಅಲಂಕರಿಸಲ್ಪಟ್ಟಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕ್ರಿ.ಶ. ೧೯೮೨ರಲ್ಲಿ ಚಾಲುಕ್ಯ ಶ್ರೀ ಎಂಬ ಪುಸ್ತಕದಲ್ಲಿ ಲೇಖನ ಬರೆದ ಡಾ.ಅ.ಸುಂದರ ಅವರು ಈ ಚಿತ್ರಗಳ ವಸ್ತುವಿಷಯಗಳ ಬಗೆಗೆ ಗಮನ ಸೆಳೆಯುತ್ತಾರೆ. ಡಾ.ಸಿಂದಗಿ ರಾಜಶೇಖರ ಅವರು ಚಾಲುಕ್ಯರ ಕಲೆ ಮತ್ತು ವಾಸ್ತುಶಿಲ್ಪವನ್ನು ಹೇಳುವಾಗ ಈ ಚಿತ್ರಗಳ ಬಗೆಗೆ ವಿವರಣೆ ಕೊಡುತ್ತಾರೆ. ಆಮೇಲೆ ಡಾ.ಎಸ್.ಸಿ.ಪಾಟೀಲ ಅವರು ಜನಪದ ಭಿತ್ತಿಚಿತ್ರಗಳ ಬಗ್ಗೆ ಅಧ್ಯಯನ ಮಾಡುವಾಗ ಇವುಗಳನ್ನು ಸಾಂದರ್ಭಿಕವಾಗಿ ಪ್ರಸ್ತಾಪ ಮಾಡಿದ್ದಾರೆ. ಹಾಗೆಯೇ ಡಾ.ಅ.ಲ.ನರಸಿಂಹನ್ ಅವರು ಈ ಚಿತ್ರಗಳನ್ನು ತಮ್ಮ ಅಧ್ಯಯನದಲ್ಲಿ ಹೆಸರಿದ್ದಾರೆ. ಇತ್ತೀಚೆಗೆ ಡಾ.ಶೀಲಾಂಕಾಂತ ಪತ್ತಾರ ಅವರು ತಮ್ಮ ಬಾದಾಮಿಯ ಸಾಂಸ್ಕೃತಿಕ ಅಧ್ಯಯನದ ಸಂದರ್ಭದಲ್ಲಿ ಈ ವೈಷ್ಣವ ಗುಹೆಯ ಚಿತ್ರಗಳನ್ನು ಕುರಿತಂತೆ ಮತ್ತೊಮ್ಮೆ ಚರ್ಚೆಗೊಳಪಡಿಸಿದ್ದಾರೆ. ಆ ಮೇಲೆ ಉತ್ತರ ಕರ್ನಾಟಕದ ಭಿತ್ತಿಚಿತ್ರಗಳ ಬಗ್ಗೆ ಅಧ್ಯಯನ ಮಾಡಿದ ಡಾ.ಯಾದಪ್ಪ ಪರದೇಶಿ ಇವರು ಈ ಚಿತ್ರಗಳ ಬಗ್ಗೆ ವಿಸ್ತೃತವಾದ ವಿಶ್ಲೇಷಣೆ ವಿವರಣೆಗಳನ್ನು ನೀಡಿದ್ದಾರೆ.
ಇಂತಹ ಗಂಭೀರ ಸ್ವರೂಪದ ಅಧ್ಯಯನಗಳಲ್ಲದೇ ಪತ್ರಿಕಾ ಲೇಖನಗಳು ಕಿರು ಮಾಹಿತಿಗಳು ಈ ಚಿತ್ರಗಳ ಬಗ್ಗೆ ಬಂದಿವೆ. ಇವುಗಳಲ್ಲದೆ ಸಾಮಾನ್ಯವಾಗಿ ಭಾರತ ಮತ್ತು ಕರ್ನಾಟಕದ ಪ್ರಾಚೀನ ಚಿತ್ರ ಪರಂಪರೆಯನ್ನು ಹೇಳುವ ಸಂದರ್ಭದಲ್ಲಿ ಹೆಚ್ಚಿನ ಜನರು ಈ ಚಿತ್ರಗಳನ್ನು ಉಲ್ಲೇಖಿಸಿರುವುದು ಕಂಡುಬರುತ್ತದೆ.
ಈ ರೀತಿ ಅನೇಕ ಜನರಿಂದ ಅಧ್ಯಯನಕ್ಕೊಳಪಟ್ಟ ಈ ಚಿತ್ರಗಳ ವಸ್ತುವಿಷಯ ಮತ್ತು ಬಣ್ಣಗಾರಿಕೆಯ ಬಗ್ಗೆ ಹೆಚ್ಚಿನ ಚರ್ಚೆಯಾಗಿದೆ. ಆದ್ದರಿಂದ ಆ ವಿವರಗಳನ್ನು ಬದಿಗಿಟ್ಟು ಚಿತ್ರಕ್ಕಿಂತ ಮೊದಲು ತಯಾರಿಸಿಕೊಳ್ಳುವ ಭಿತ್ತಿ ತಯಾರಿಕೆ ಚಿತ್ರ ರಚನಾ ಪರಿಕರಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿಲ್ಲವಾದ್ದರಿಂದ ಈ ಬಗ್ಗೆ ಕೆಲವು ಅಂಶಗಳನ್ನು ಇಲ್ಲಿ ಚರ್ಚಿಸ ಲಾಗಿದೆ.
ಭಿತ್ತಿ ಸಿದ್ಧತಾ ವಿಧಾನ
ಪ್ರಾಚೀನ ಭಿತ್ತಿಚಿತ್ರಗಳ ರಚನೆಯಲ್ಲಿ ಭಿತ್ತಿ ಸಿದ್ಧಗೊಳಿಸುವುದು ಪ್ರಮುಖ ಹಂತವಾಗಿತ್ತು. ಚಿತ್ರಗಳನ್ನು ರಚಿಸಲು ಈ ಭಿತ್ತಿಯ ಪದರ ಆಧಾರವಾಗಿರುವುದರಿಂದ ಇದನ್ನು ವಿಶೇಷವಾದ ಕಾಳಜಿಯಿಂದ ಸಿದ್ಧಗೊಳಿಸುತ್ತಿದ್ದರು. ಭಿತ್ತಿಯನ್ನು ಹೇಗೆ ಸಿದ್ಧಗೊಳಿಸಬೇಕು ಎನ್ನುವ ಬಗ್ಗೆ ಅನೇಕ ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಮಾಹಿತಿ ಲಭ್ಯವಿದೆ. ವಿಷ್ಣು ಧರ್ಮೋತ್ತರ ಪುರಾಣ, ಮಾನಸೋಲ್ಲಾಸ, ಸಮರಾಂಗಣ ಸೂತ್ರಧಾರ, ಶಿಲ್ಪರತ್ನ, ನಾರದಶಿಲ್ಪ, ಕಾಶ್ಯಪಶಿಲ್ಪ ಶಾಸ್ತ್ರ, ಶಿವತತ್ವರತ್ನಾಕರ ಮುಂತಾದ ಗ್ರಂಥಗಳಲ್ಲಿ ಭಿತ್ತಿ ಸಿದ್ಧಗೊಳಿಸುವ ಹಂತಗಳು ಮತ್ತು ಅದಕ್ಕೆ ಬೇಕಾಗುವ ಪರಿಕರಗಳನ್ನು ಹೇಳಲಾಗಿದೆ. ಈ ಗ್ರಂಥಗಳಲ್ಲಿ ಚಿತ್ರ ರಚನೆಯ ಪರಿಕರಗಳನ್ನು ಯಾವ ಮೂಲಗಳಿಂದ ಹೇಗೆ ತಯಾರಿಸಿಕೊಳ್ಳಬೇಕು ಎನ್ನುವ ಮಾಹಿತಿಯೂ ಲಭ್ಯವಿದೆ.
ಭಿತ್ತಿ ಸಿದ್ಧಗೊಳಿಸುವಲ್ಲಿ ಎರಡು ಪ್ರಕಾರಗಳಿವೆ. ಮೊದಲನೆಯದು ಮಣ್ಣಿನ ಭಿತ್ತಿ. ಎರಡನೆಯದು ಗಾರೆಭಿತ್ತಿ. ಮಣ್ಣಿನ ಭಿತ್ತಿಯು ಪ್ರಾಚೀನ ಕಾಲದಿಂದ ಬಳಕೆಯಲ್ಲಿದ್ದು ಕ್ರಿ.ಶ.೧೨ನೆಯ ಶತಮಾನದ ನಂತರ ಅದರ ಉಪಯೋಗ ಕಡಿಮೆಯಾಗಿ ಗಾರೆಭಿತ್ತಿ ಬಳಕೆಗೆ ಬಂದಿತು. ಬಾದಾಮಿಯ ಭಿತ್ತಿಚಿತ್ರಗಳು ಕ್ರಿ.ಶ.೬ನೇ ಶತಮಾನದಲ್ಲಿ ರಚನೆಯಾಗಿವೆ. ವಿಷ್ಣು ಧರ್ಮೋತ್ತರ ಗ್ರಂಥದಲ್ಲಿ ಮಣ್ಣಿನ ಭಿತ್ತಿಯ ತಯಾರಿಕೆಯ ಬಗ್ಗೆ ಮಾಹಿತಿ ಇದೆ. ಹಾಗಾಗಿ ಬಾದಾಮಿಯ ಭಿತ್ತಿಚಿತ್ರ ರಚನೆಯಲ್ಲಿಯೂ ಮಣ್ಣಿನ ಭಿತ್ತಿ ತಯಾರಿಸಿ ಚಿತ್ರ ರಚಿಸಲಾಗಿದೆ. ಮಣ್ಣಿನ ಭಿತ್ತಿ ಸಿದ್ಧತೆಯಲ್ಲಿ ಜಿಗುಟಾದ ಮಣ್ಣು ಪ್ರಮುಖವಾಗಿದ್ದು ಇದರೊಂದಿಗೆ ಅನೇಕ ವಸ್ತುಗಳನ್ನು ಮಿಶ್ರಣ ಮಾಡುತ್ತಾರೆ.
ಮೊದಲಿಗೆ ಚಿತ್ರ ರಚನೆ ಮಾಡಬೇಕಾದ ಶಿಲಾಗುಹೆಯ ಗೋಡೆಯನ್ನು ಸಂಸ್ಕರಿಸಿಕೊಳ್ಳುತ್ತಾರೆ. ಆ ಮೇಲೆ ಜಿಗುಟಾದ ಮಣ್ಣು, ಇಟ್ಟಿಗೆಯ ಪುಡಿ, ನಾರು ಪದಾರ್ಥ, ಬಾಳೆಹಣ್ಣಿನ ತಿರುಲು, ಬಿಲ್ವ ಪತ್ರಿಕಾಯಿ ಅಂಟು, ಲೋಳೆ ರಸ, ಜೇನಮೇಣ, ಕಾಕಂಬಿ ಮುಂತಾದ ವಸ್ತುಗಳ ಮಿಶ್ರಣವನ್ನು ತಯಾರಿಸಿ ತಿಂಗಳವರೆಗೆ ನೆನೆ ಹಾಕಲಾಗುವುದು. ಈ ಮಿಶ್ರಣ ಹದವಾಗಿ ನೆನೆದು ಪಕ್ವಗೊಂಡ ನಂತರ ಸಂಸ್ಕರಿಸಿದ ಗೋಡೆಗೆ ಲೇಪಿಸುತ್ತಾರೆ. ಹಲವು ಸಲ ಪುನಃ ಪುನಃ ಮಿಶ್ರಣ ಲೇಪಿಸಿ ಸಮತಟ್ಟುಗೊಳಿಸುತ್ತಾರೆ. ನಂತರ ಈ ಭಿತ್ತಿ ಸ್ವಲ್ಪ ಒಳಗಿದ ಮೇಲೆ ಅದಕ್ಕೆ ಶಂಖಚೂರ್ಣ, ಸುಣ್ಣ, ವಜ್ರಲೇಪ, ಸಾಲಲೇಪ, ಸಾಲಮರ, ಅಶೋಕ ವೃಕ್ಷ, ಕಾಕುವ ಎಂಬ ಗಿಡ, ಕಬ್ಬಿನ ಹಾಲು ಇವುಗಳ ಮಿಶ್ರಣದಿಂದ ಲೇಪಿಸಿ ನುಣುಪುಗೊಳಿಸಲಾಗುತ್ತದೆ. ಆಮೇಲೆ ಇದು ಒಣಗುತ್ತ ಬಂದಂತೆ ಹಿನ್ನೆಲೆ ಲೇಪನ ಕೊಟ್ಟು ಅದರ ಮೇಲೆ ಚಿತ್ರ ರಚಿಸಬೇಕು ಎನ್ನುವ ಮಾಹಿತಿ ವಿಷ್ಣು ಧರ್ಮೋತ್ತರ ಗ್ರಂಥದಲ್ಲಿದೆ. ಇದಕ್ಕೆ ಅನುಸಾರವಾಗಿಯೇ ಬಾದಾಮಿಯ ಭಿತ್ತಿಚಿತ್ರಗಳ ಭಿತ್ತಿಯನ್ನು ತಯಾರಿಸಲಾಗಿದೆ. ಇದೇ ಪದ್ಧತಿಯನ್ನು ಅಜಂತಾದಲ್ಲಿ ಅನುಸರಿಸಿರುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು.
ಪರಿಕರಗಳು
ಚಿತ್ರರಚನೆಗಾಗಿ ಬೇಕಾಗುವ ಸೀಸುಕಡ್ಡಿ, ಬಣ್ಣ, ಕುಂಚಗಳು ಅಂಟುದ್ರಾವಕಗಳನ್ನು ಇಲ್ಲಿನ ಕಲಾವಿದರು ಸ್ವತಃ ತಾವೇ ತಯಾರಿಸಿಕೊಂಡಿದ್ದಾರೆ. ಇಂದಿನ ಸೀಸುಕಡ್ಡಿಯನ್ನು ಹಿಂದೆ ವರ್ತಿಕಾ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದನ್ನು ಬೇರೆ ಬೇರೆ ವಿಧಾನಗಳಿಂದ ಪ್ರಾಚೀನ ಕಲಾವಿದರು ತಯಾರಿಸಿಕೊಳ್ಳುತ್ತಿದ್ದರು. ಹೆಸರು, ಉದ್ದಿನಬೇಳೆ, ಗೋಧಿ, ಬಾರ್ಲಿ ಕಾಳಿನ ಹಿಟ್ಟುಗಳನ್ನು ಕಲಿಸಿ ಕಣದಕ ಹಾಗೆ ನಾದಿಕೊಂಡು, ಕಡ್ಡಿಗಳನ್ನು ತಯಾರಿಸಿ, ಒಣಗಿಸಿ, ಸುಟ್ಟು ಕಪ್ಪಾಗಿ ಮಾಡಿಕೊಂಡು ಚಿತ್ರಕ್ಕಾಗಿ ಉಪಯೋಗಿಸುತ್ತಿದ್ದರು. ಇದಲ್ಲದೆ ಇಟ್ಟಿಗೆ ಪುಡಿ, ಕಪ್ಪು ಪಾಟೀಕಲ್ಲಿನ ಪುಡಿಗಳ ಮಿಶ್ರಣದಿಂದ ಮೇಲೆ ಹೇಳಲಾದ ವಿಧಾನದಿಂದ ವರ್ತಿಕಾ ತಯಾರಿಸುತ್ತಿದ್ದರು. ಇವುಗಳ ಜೊತೆಗೆ ವಿವಿಧ ಬಳ್ಳಿಗಳು, ಸಸ್ಯಗಳನ್ನು ಸುಟ್ಟು ಅವುಗಳ ಇದ್ದಿಲುಗಳನ್ನು ವರ್ತಿಕಾದಂತೆ ಬಳಸುತ್ತಿದ್ದರು.
ಬಣ್ಣಗಳಿಗಾಗಿ ವಿವಿಧ ಖನಿಜ ಮೂಲಗಳು, ಸಸ್ಯ ಮೂಲಗಳು ಪ್ರಾಣಿ ಮೂಲಗಳನ್ನು ಬಳಸಿಕೊಳ್ಳುತ್ತಿದ್ದರು. ಅದರಂತೆ ಅಂಟು ದ್ರಾವಣಕ್ಕಾಗಿಯೂ ಸಸ್ಯ ಮತ್ತು ಪ್ರಾಣಿ ಮೂಲದ ಜಿಗುಟು ಪದಾರ್ಥಗಳನ್ನು ಬಾದಾಮಿಯ ಐತಿಹಾಸಿಕ ಕಾಲದ ಚಿತ್ರಕಲಾವಿದರು ಬಳಸಿ ಕೊಂಡಿರುವುದು ತಿಳಿದುಬರುತ್ತದೆ.
ಚಿತ್ರಗಳ ವಿವರಣೆ
ವರ್ಣಚಿತ್ರಗಳನ್ನು ರಚಿಸಲಾಗಿರುವ ವೈಷ್ಣವ ಗುಹೆಯು ಗರ್ಭಗುಡಿ, ಮಂಟಪ ಮತ್ತು ಮೊಗಸಾಲೆಗಳನ್ನು ಹೊಂದಿದೆ. ಮಂಟಪದ ಹಿಂದಣ ಗೋಡೆಯನ್ನು ಕೊರೆದು ಗರ್ಭಗೃಹ ನಿರ್ಮಿಸಲಾಗಿದೆ. ಗುಹೆಯ ಮುಂಭಾಗದಲ್ಲಿ ಕಂಬ ಮತ್ತು ಅರ್ಧ ಕಂಬಗಳನ್ನು ಕೆತ್ತಲಾಗಿದೆ. ಗುಹೆಯ ಮೇಲ್ಚಾವಣಿಯ ಹೊರಚಾಚಿದ ಬಾಗುಭಾಗದಲ್ಲಿ ಭಿತ್ತಿಚಿತ್ರಗಳು ಕಂಡುಬಂದಿವೆ. ಆದರೆ ಇಂದು ಇಲ್ಲಿ ಚಿತ್ರಗಳು ಉಳಿದಿಲ್ಲ. ಗುರುತಿಸಲಾಗದಂತೆ ನಾಶವಾಗಿ ಹೋಗಿವೆ. ಅವುಗಳನ್ನು ಪ್ರತಿ ಮಾಡಿಟ್ಟ ಅನಿವಾಸಿ ತಂಡದವರು ಮತ್ತು ಮಿಣಜಿಗಿಯವರ ಪ್ರತಿಕೃತಿಗಳಿಂದ ಹಾಗೂ ಧಾರವಾಡದ ಶಿಲ್ಪಿ ಡಿ.ಎಚ್.ಕುಲಕರ್ಣಿ ಇವರ ವೈಯಕ್ತಿಕ ಸಂಗ್ರಹದಲ್ಲಿರುವ ಪ್ರತಿಕೃತಿಗಳಿಂದಲೂ ಈ ಚಿತ್ರಗಳ ಬಗ್ಗೆ ತಿಳಿದುಕೊಳ್ಳಬಹುದು.
ಬಾದಾಮಿಯ ೩ನೆಯ ಗುಹೆಯ ಮೇಲ್ಚಾವಣಿಯ ಚಾಚುಭಾಗದಲ್ಲಿ ಕಂಡುಬಂದಿರುವ ಇಲ್ಲಿನ ಚಿತ್ರಗಳು ಉದ್ದವಾದ ಪಟ್ಟಿಕೆಯಲ್ಲಿ ರಚನೆಯಾಗಿವೆ. ಚಿತ್ರದಲ್ಲಿ ಮುಖ್ಯವಾಗಿರುವ ದೃಶ್ಯ ಅರಮನೆಯ ಒಳಾಂಗಣವನ್ನು ಬಿಂಬಿಸುತ್ತದೆ. ಇಲ್ಲಿನ ಚಿತ್ರದ ಮಧ್ಯಭಾಗದಲ್ಲಿರುವ ವ್ಯಕ್ತಿಯು ಸುಂದರವಾದ ಆಸನದ ಮೇಲೆ ಕುಳಿತಿದ್ದಾನೆ. ಈತನ ಎದುರಿನಲ್ಲಿ ನೃತ್ಯ ಸಂಗೀತ ಕಾರ್ಯಕ್ರಮವು ನಡೆಯುತ್ತದೆ. ಮೇಲಿನ ಬಾಲ್ಕನಿಯಲ್ಲಿ ನಿಂತಿರುವ ಹಲವಾರು ಜನರೂ ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ಮಧ್ಯದಲ್ಲಿ ಕುಳಿತ ಪ್ರಮುಖ ವ್ಯಕ್ತಿಯ ಕೊರಳಲ್ಲಿ ಪದಕಗಳನ್ನು ಹೊಂದಿದ ಹಾರವಿದ್ದು, ಯಜ್ಞೋಪವೀತ ಧರಿಸಿದ್ದಾನೆ. ರಾಜನಂತೆ ಕಾಣುವ ಈ ವ್ಯಕ್ತಿಯ ಪಾದದ ಬಳಿಯಲ್ಲಿ ಹಲವಾರು ಗಣ್ಯವ್ಯಕ್ತಿಗಳು ಕುಳಿತಿದ್ದಾರೆ. ಎಡಬದಿಗೆ ವಾದ್ಯವೃಂದದವರಿದ್ದು ನೃತ್ಯಕಾರ್ಯಕ್ರಮದಲ್ಲಿ ಒಬ್ಬಳು ಸ್ತ್ರೀ ಒಬ್ಬ ಪುರುಷ ನರ್ತಿಸುತ್ತಿದ್ದಾರೆ.
ಒಂದು ಬದಿಯಲ್ಲಿ ರಾಜ ಪರಿವಾರದವರು ನೃತ್ಯ ವೀಕ್ಷಿಸಲು ಕಂಬಗಳನ್ನು ಹೊಂದಿದ ಮಂಟಪದಲ್ಲಿ ತೆಳು ಪರದೆಯೊಂದನ್ನು ಕಟ್ಟಿ ಮರೆಮಾಡಲಾಗಿದೆ. ಇದು ಇಂದ್ರನ ವೈಜಯಂತ ಅರಮನೆಯ ದೃಶ್ಯವಾಗಿರಬಹುದು. ಆ ನೃತ್ಯವು ಭರತ ಮತ್ತು ಊರ್ವಶಿ, ಇಲ್ಲವೆ ತಂಡು ಮತ್ತು ಊರ್ವಶಿಯರದಾಗಿರಬಹುದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿತ್ತು. ಆದರೆ ವಿದ್ವಾಂಸರ ಎಲ್ಲಾ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಡಾ.ಶೀಲಾಕಾಂತ ಪತ್ತಾರ ಅವರು ಇದು ಇಂದ್ರನ ಆಸ್ಥಾನದ ದೃಶ್ಯವಾಗಿರದೆ ಚಾಲುಕ್ಯ ಅರಸನ ಚಿತ್ರವಾಗಿದೆ ಎಂದು ಹೇಳುತ್ತಾರೆ. ಇದು ಹೆಚ್ಚು ಸೂಕ್ತವಾದದ್ದು ಎನ್ನಬಹುದು.
ಇನ್ನೊಂದು ಚಿತ್ರವು ಪಕ್ಕದಲ್ಲಿದ್ದು, ಅದು ರಾಜನ ಒಡ್ಡೋಲಗವನ್ನು ಪ್ರತಿಬಿಂಬಿಸುತ್ತದೆ. ರಾಜ ಮತ್ತು ರಾಣಿ ಜೊತೆಯಾಗಿ ಸುಂದರವಾದ ಆಸನಗಳಲ್ಲಿ ಕುಳಿತಿದ್ದಾರೆ. ಮುಂದುಗಡೆ ಪರಿವಾರದವರು, ಸೇವಕ ಸೇವಕಿಯರು ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಿಂದುಗಡೆ ಎತ್ತರದಲ್ಲಿ ಇಂದ್ರನು ಕಾಣಿಸಿಕೊಂಡು ದೊರೆಯನ್ನು ಹರಸುತ್ತಿರುವಂತೆ ಚಿತ್ರಿಸಲಾಗಿದೆ. ಇಲ್ಲಿ ಚಿತ್ರಿತವಾದ ರಾಜನು ಸುಖಾಸೀನನಾಗಿ ಕುಳಿತಿದ್ದು, ಬಲಗಾಲನ್ನು ಪೀಠ ಒಂದರ ಮೇಲೆ ಇಟ್ಟಿದ್ದಾನೆ. ಎಡಗೈಯನ್ನು ಮೊಣಕಾಲಿನ ಮೇಲಿಂದ ಇಳಿಯಬಿಟ್ಟಿದ್ದು, ಬಲಗೈಯಲ್ಲಿ ಯಜ್ಞೋಪವೀತ ತೂಗುತ್ತಿದೆ. ತಲೆಯ ಮೇಲೆ ಉದ್ದನೆಯ ಕಿರೀಟ ಧರಿಸಿದ್ದಾನೆ ರಾಜನ ಬಲಗಡೆಗೆ ನೆಲದ ಮೇಲೆ ಅನೇಕ ಜನರು ಕುಳಿತಿದ್ದಾರೆ. ಎಡಭಾಗದಲ್ಲಿನ ಮತ್ತೊಂದು ಆಸನದ ಮೇಲೆ ರಾಣಿಯು ಕುಳಿತಿದ್ದು ಪರಿಚಾರಿಕೆಯರು ಅವಳ ಸುತ್ತಲೂ ಸೇವೆಯಲ್ಲಿ ತೊಡಗಿದ್ದಾರೆ. ರಾಣಿಯ ಕಿವಿಯಲ್ಲಿ ಪತ್ರಕುಂಡಲಗಳು, ಹಣೆಯಲ್ಲಿರುವ ಮುಂಗುರುಳುಗಳು, ತೆಳುವಾದ ವಸ್ತ್ರವಿನ್ಯಾಸಗಳು ಅವಳ ಅಂದವನ್ನು ಹೆಚ್ಚಿಸಿವೆ.
ಈ ಚಿತ್ರದಲ್ಲಿನ ಹಿನ್ನೆಲೆಯ ಸ್ಥಳಾವಕಾಶವು ಅರಮನೆಯ ಒಳಕೋಣೆಯೊಂದರ ದೃಶ್ಯವನ್ನು ಸೂಚಿಸುತ್ತದೆ. ಈ ದೃಶ್ಯದಲ್ಲಿ ನೀಲಿ, ಕೆಂಪು, ಹಸಿರು ಮತ್ತು ಬೂದುವರ್ಣದಲ್ಲಿ ಕಾವಲುಗಾರರನ್ನು ಚಿತ್ರಿಸಿದೆ. ಈ ಚಿತ್ರವು ಚಾಲುಕ್ಯ ದೊರೆಗಳ ರಾಜ ವೈಭವವನ್ನು ತೋರಿಸುವ ದೃಶ್ಯವಾಗಿದ್ದು, ಇದರಲ್ಲಿ ಚಿತ್ರಿಸಲಾದ ರಾಜ ರಾಣಿಯರು ಕೀರ್ತಿವರ್ಮ ಮತ್ತು ಆತನ ರಾಣಿ ಹಾಗೂ ಪರಿವಾರದವರಾಗಿದ್ದಾರೆ ಎಂದು ಶಿವರಾಮಮೂರ್ತಿಯವರು ತರ್ಕಿಸುತ್ತಾರೆ.
ಈ ಗುಹೆಯ ಇನ್ನೆರಡು ಗಮನಾರ್ಹ ಚಿತ್ರಗಳೆಂದರೆ, ಗಗನದಲ್ಲಿ ಹಾರುತ್ತಿರುವ ವಿದ್ಯಾಧರ ದಂಪತಿಗಳಾಗಿವೆ. ಒಂದು ಚಿತ್ರದಲ್ಲಿ ಒಬ್ಬರು ಇನ್ನೊಬ್ಬರ ಕೊರಳು ಅಪ್ಪಿ ಹಿಡಿದು ಹಾರುತ್ತಿದ್ದರೆ, ಇನ್ನೊಂದರಲ್ಲಿ ವಿಧ್ಯಾದರನೊಬ್ಬನು ವೀಣೆಯನ್ನು ನುಡಿಸುತ್ತಿದ್ದಾನೆ. ಇಲ್ಲಿ ಪುರುಷರನ್ನು ಬೂದು ವರ್ಣದಲ್ಲಿ ಚಿತ್ರಿಸಿದ್ದರೆ ಸ್ತ್ರೀಯರಿಗೆ ಹಸಿರು, ನೀಲಿ ವರ್ಣಗಳನ್ನು ಲೇಪಿಸಲಾಗಿದೆ. ಈ ಚಿತ್ರಗಳನ್ನು ರಚಿಸಿದ ಕಲಾವಿದರ ಬಗ್ಗೆ ಹೆಚ್ಚಿಗೆ ತಿಳಿದುಬರದಿದ್ದರೂ ಮನೋದಾರುಣನ್ ಎಂಬ ಕಲಾವಿದ ಇವುಗಳನ್ನು ರಚಿಸಿರುವ ಬಗ್ಗೆ ವಿದ್ವಾಂಸರು ತರ್ಕಿಸಿದ್ದಾರೆ.
ಬಾದಾಮಿಯ ವೈಷ್ಣವ ಗುಹೆಯ ಭಿತ್ತಿ ಚಿತ್ರಗಳು ಉತ್ತಮ ಸಂಯೋಜನಾ ಕೃತಿಗಳಾಗಿವೆ. ಹಿಂದಿನ ಪ್ರಾರಂಭಿಕ ಹಂತದ ಕೃತಿಗಳಾದ ಉತ್ತರ ಬೆಟ್ಟದ ಶಿಲಾಶ್ರಯ ಚಿತ್ರಗಳು, ರಾವಣಫಡಿ ಗುಹೆ ಚಿತ್ರಗಳಿಗಿಂತ ಇಲ್ಲಿನ ಕೃತಿಗಳಲ್ಲಿ ಯೋಜನಾಬದ್ಧ ಸಂಯೋಜನೆ ಕಂಡುಬರುವುದು. ಮುಖ್ಯ ಚಿತ್ರವನ್ನು ದೊಡ್ಡದಾಗಿಯೂ ಉಳಿದ ಚಿತ್ರಗಳನ್ನು ಚಿಕ್ಕದಾಗಿಯೂ ಇಲ್ಲಿ ಚಿತ್ರಿಸಿದ್ದು ಶಿಲ್ಪಶಾಸ್ತ್ರಗಳ ನಿರ್ದೇಶನ ಅನುಸರಿಸಿದಂತೆ ಗೋಚರಿಸುತ್ತದೆ. ಇಲ್ಲಿಯ ಚಿತ್ರದಲ್ಲಿ ಸಂಯೋಜಿಸಿರುವ ಅರಮನೆಯ ಒಳಾಂಗಣ ದೃಶ್ಯದಲ್ಲಿ ಕಂಬಗಳು, ಕಮಾನುಗಳು, ಕ್ಲಿಪ್‌ಗೆ ಅಳವಡಿಸಿದ ಪರದೆಗಳು, ಮಹಡಿಯ ಬಾಲ್ಕನಿಗಳು, ಕಿಟಕಿ ಬಾಗಿಲುಗಳು ಅದಕ್ಕೆ ಅಳವಡಿಸಿದ ಕದಗಳು, ಸಿಂಹಾಸನ ಮತ್ತು ಇತರ ಪೀಠಗಳು ಆ ಕಾಲದ ಅರಮನೆಯ ಒಳಾಂಗಣದ ವೈಭವವನ್ನು ತಿಳಿಸಿಕೊಡುತ್ತವೆ.
ಬಾದಾಮಿ ಚಿತ್ರಗಳ ಪ್ರಮುಖ ಲಕ್ಷಣಗಳು
೧. ಇಲ್ಲಿನ ಚಿತ್ರಗಳಲ್ಲಿ ಉಕ್ತಿಗಳು ನೀಳವಾಗಿದ್ದು, ಕೆನ್ನೆ, ಗಲ್ಲ, ತುಟಿ, ಸ್ತನಗಳು, ಕಣ್ಣುಗಳನ್ನು ಉತ್ಪ್ರೇಕ್ಷಿಸಿ ತೋರಿಸಲಾಗಿದೆ.
೨. ಮುಖಗಳ ಆಕಾರದಲ್ಲಿ ದುಂಡು ಹಾಗೂ ಅಂಡಾಕಾರಗಳು ಪ್ರಧಾನವಾಗಿವೆ.
೩. ಒಂದೇ ವರ್ಣದ ಎರಡು ಮೂರು ಛಾಯೆಗಳನ್ನು ಬಳಸಿದ್ದು ಹೆಚ್ಚು ಕಂಡುಬರುವುದಿಲ್ಲ. ಬದಲಾಗಿ ಪ್ರತಿಭಾಗಕ್ಕೂ ಬೇರೆ ಬೇರೆ ವರ್ಣ ಬಳಸಲಾಗಿದೆ.
೪. ಚಿತ್ರಗಳಿಗೆ ಸೂಕ್ಷ್ಮವಾದ ಬಾಹ್ಯ ರೇಖೆಗಳನ್ನು ಎಳೆಯಲಾಗಿದೆ.
೫. ಮನುಷ್ಯ ಚಿತ್ರಗಳಲ್ಲಿ ಆಕೃತಿಗಳಿಗೆ ನೀಲಿ, ಹಸಿರು, ಕಂದು, ತಿಳಿಕೆಂಪು ಬಣ್ಣದ ಮೈಬಣ್ಣ ಲೇಪಿಸಲಾಗಿದೆ. ಆ ಮೂಲಕ ಒಟ್ಟು ಚಿತ್ರದ ವರ್ಣ ಸಾಮರಸ್ಯ ಉಜ್ವಲಗೊಳಿಸಲಾಗಿದೆ.
ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಯಾದಪ್ಪ ಪರದೇಶಿ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ಎ. ಮುರಿಗೆಪ್ಪ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ