ಬ್ರಹ್ಮಗಿರಿಯೆಂಬ ಸ್ಥಳದ ಪ್ರಾಮುಖ್ಯಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಅದು ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ, ಮೊಳಕಾಲ್ಮೂರು ತಾಲ್ಲೂಕಿನ ಸಿದ್ದಾಪುರದ ಸಮೀಪದಲ್ಲಿ ಇದೆ. ಸಿದ್ದಾಪುರವೂ ಈ ಪ್ರದೇಶದ ಪುರಾತತ್ವ ಶೋಧನೆಯಲ್ಲಿ ಬಹಳ ಮುಖ್ಯವಾದ ತಾಣ. 1891 ರಷ್ಟು ಹಿಂದೆಯೇ, ಬ್ರಹ್ಮಗಿರಿಯಲ್ಲಿ, ಕ್ರಿ.ಪೂ. 250 ಕ್ಕೆ ಸೇರಿದ ಎರಡು ಅಪ್ರಧಾನ(ಮೈನರ್) ಬಂಡೆ ಶಾಸನಗಳನ್ನು ಶೋಧಿಸಲಾಯಿತು. ಅವು ಅಶೋಕ ಚಕ್ರವರ್ತಿಯ ಶಾಸನಗಳು. ಈ ಸಂಶೋಧನೆಯನ್ನು ಮಾಡಿದವರು ಬಿ.ಎಲ್ ರೈಸ್ ಅವರು. ಮೌರ್ಯ ಸಾಮ್ರಾಜ್ಯದ ದಕ್ಷಿಣ ಗಡಿಗಳನ್ನು ಗುರುತಿಸುವ ಕೆಲಸದಲ್ಲಿ ಈ ಸಂಶೋಧನೆಯಿಂದ ಬಹಳ ಸಹಾಯವಾಯಿತು. ಈ ಶಾಸನಗಳು, ಕನ್ನಡ ಭಾಷೆಯ ಪ್ರಾಚೀನತೆಯನ್ನು ತೀರ್ಮಾನಿಸುವುದರಲ್ಲಿಯೂ ಮುಖ್ಯವಾದ ಪಾತ್ರವನ್ನು ವಹಿಸಿದವು. ಏಕೆಂದರೆ, ಈ ಶಾಸನದಲ್ಲಿ ಬರುವ ‘ಇಸಿಲ’ ಎಂಬ ಪದವು, ದಿನಾಂಕ ಸಹಿತವಾದ ಶಾಸನಗಳಲ್ಲಿ ದೊರಕಿರುವ, ಕನ್ನಡ ಭಾಷೆಯ ಪದಗಳಲ್ಲಿ ಅತ್ಯಂತ ಪ್ರಾಚೀನವಾದುದು. ಈ ಪದದ ಅರ್ಥ ‘ಕೋಟೆ’ ಎಂದು. ಈ ಪ್ರದೇಶವನ್ನು ಕೂಡ ಇಸಿಲ ಎಂದೇ ಕರೆಯಲಾಗಿದೆ. ಇಸಿಲವು ಸುವರ್ಣಗಿರಿಯ ಮಹಾಮಾತ್ರರ ರಾಜಧಾನಿಯಾಗಿತ್ತು.
ಇತಿಹಾಸಪೂರ್ವದಲ್ಲಿಯೇ, ಈ ಪ್ರದೇಶಗಳಲ್ಲಿ ಮನುಷ್ಯವಸತಿ ಇತ್ತೆಂದು ಹೇಳಲು ಪುರಾವೆಗಳು ದೊರಕಿವೆ. ಆದ್ದರಿಂದ, ಬ್ರಹ್ಮಗಿರಿಗೆ ವಿಶೇಷ ಮಹತ್ವ ಬಂದಿದೆ. ಈ ಪ್ರದೇಶದಲ್ಲಿ, ಉತ್ಖನನಗಳು ಪ್ರಾರಂಭವಾಗಿದ್ದು 1940 ರಲ್ಲಿ. ಎಂ.ಎಚ್. ಕೃಷ್ಣ ಅವರು ಈ ತಂಡದ ನಾಯಕರಾಗಿದ್ದರು.(ಇಂಡಿಯನ್ ಆರ್ಕಿಯಲಾಜಿಕಲ್ ರಿಪೋರ್ಟ್ಸ್, ಮೈಸೂರು ಆರ್ಕಿಯಲಾಜಿಕಲ್ ಡಿಪಾರ್ಟ್ ಮೆಂಟ್, 1940 ರ ವರದಿ, ಪುಟ 63) ಈ ಉತ್ಖನನವನ್ನು, 1947ರಲ್ಲಿ, ಆರ್.ಈ. ಮಾರ್ಟಿಮರ್ ವೀಲರ್ ಅವರು, ‘ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ’ದ ಪರವಾಗಿ ಮುಂದುವರಿಸಿದರು. 1956 ರಲ್ಲಿ ಎಂ. ಶೇಷಾದ್ರಿಯವರು ಮತ್ತು 1965 ಹಾಗೂ 1978 ರಲ್ಲಿ ಅಮಲಾನಂದ ಘೋಷ್ ಅವರು, ಈ ಕೆಲಸಕ್ಕೆ ಇನ್ನಷ್ಟು ವ್ಯಾಪಕವಾದ ನೆಲೆಗಳನ್ನು ದೊರಕಿಸಿಕೊಟ್ಟರು.
ಈ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಉತ್ಖನನ ನಡೆಸಿದ ಎಂ.ಎಚ್. ಕೃಷ್ಣ ಅವರು, ಅನೇಕ ವಾಸ್ತುರಚನೆಗಳು ಮತ್ತು ಪುರಾತನ ಸಾಮಗ್ರಿಗಳನ್ನು ಹೊಂದಿದ್ದ, ಹದಿನಾರು ನೀಳವಾದ ಹಾಗೂ ಅಗಲ ಕಿರಿದಾದ ಗುಂಡಿಗಳನ್ನು(ಟ್ರೆಂಚ್ಸ್) ಕಂಡುಹಿಡಿದರು. ಬೇರೆ ಬೇರೆ ಆಳಗಳಲ್ಲಿ ಹಾಗೂ ಕಾಲಘಟ್ಟಗಳಲ್ಲಿ ರೂಪಿತವಾಗಿದ್ದ ಐದು ಪದರಗಳನ್ನು ಅವರು ಗುರುತಿಸಿದರು. ಅವುಗಳಿಗೆ ಅನುಕ್ರಮವಾಗಿ, ಮೈಕ್ರೋಲಿಥಿಕ್, ನಿಯೋಲಿಥಿಕ್, ಕಬ್ಬಿಣದ ಯುಗ, ಮೌರ್ಯಯುಗ ಮತ್ತು ಚಾಳುಕ್ಯ-ಹೊಯ್ಸಳ ಯುಗ ಎಂಬ ಹೆಸರುಗಳನ್ನು ಕೊಡಲಾಯಿತು. ಇವುಗಳಲ್ಲಿ ಮೊದಲನೆಯದು(ಮೈಕ್ರೊಲಿಥಿಕ್) ರೊಪ್ಪ ಎಂಬ ಹಳ್ಳಿಯ ಹತ್ತಿರ ಇತ್ತು. ಆದ್ದರಿಂದ, ಕೃಷ್ಣ ಅವರು ಅದನ್ನು ರೊಪ್ಪ ಸಂಸ್ಕೃತಿ ಎಂದೇ ಕರೆದರು. ಮಾರ್ಟಿಮರ್ ವೀಲರ್ ಅವರು ಕೃಷ್ಣ ಸಂಗ್ರಹಿಸಿದ ಸಾಮಗ್ರಿಗಳಲ್ಲಿ, ಬಹಳ ಚಿಕ್ಕ ತ್ರಿಕೋನ ಮತ್ತು ವಜ್ರಾಕಾರದ ಗುರುತುಗಳಿರುವ ವಸ್ತುಗಳನ್ನು ಕಂಡುಹಿಡಿದರು. ಇವುಗಳನ್ನು ‘ರೌಲೆಟೆಡ್ ವೇರ್’ ಎಂದು ಕರೆಯುತ್ತಾರೆ. ಅವರು ಈ ರಚನೆಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದರು. ಮೊದಲನೆಯದು ನಿಯೋಲಿಥಿಕ್ ಅಥವಾ ನಿಯೋಲಿಥಿಕ್-ಚಾಕೋಲಿಥಿಕ್ ಯುಗ. ಎರಡನೆಯದು ಮೆಗಾಲಿಥಿಕ್ ಸಂಸ್ಕೃತಿ ಮತ್ತು ಮೂರನೆಯದು ಆದಿಮ ಐತಿಹಾಸಿಕ ಸಂಸ್ಕೃತಿ. 1956 ರಲ್ಲಿ ಮತ್ತೆ ಈ ಪ್ರದೇಶದಲ್ಲಿ ಅನ್ವೇಷಣೆ ನಡೆಸಿದ ಎಂ. ಶೇಷಾದ್ರಿಯವರು, ಜಾಸ್ಪರ್, ಅಗೇಟ್, ಕಾರ್ನೀಲಿಯನ್, ಓಪಲ್ ಮತ್ತು ಚರ್ಟ್ ಗಳಿಂದ ತಯಾರಿಸಿದ್ದ ಅನೇಕ ಉಪಕರಣಗಳನ್ನು ಕಂಡುಹಿಡಿದರು. ಅವುಗಳನ್ನು ವೀಲರ್ ಅವರು ಹೆಸರಿಸಿದ ಮೊದಲ ಯುಗಕ್ಕೆ ಸೇರಿಸಲಾಯಿತು. 1965 ಮತ್ತು 1978 ರಲ್ಲಿ ಅಮಲಾನಂದ ಘೋಷ್ ಅವರು ನಡೆಸಿದ ಉತ್ಖನನಗಳಲ್ಲಿ, ಕಪ್ಪುಬಣ್ಣ ಹಚ್ಚಿದ ಕೆಂಪುಮಣ್ಣಿನ ವಸ್ತುಗಳು, ಯಾವುದೋ ಬಟ್ಟೆಯ ತುಣುಕುಗಳು ಮತ್ತು ಎರಡು ತಾಮ್ರದ ವಸ್ತುಗಳು ಸಿಕ್ಕಿದವು.
ಇನ್ನು ಮುಂದೆ ಈ ಕಾಲಘಟ್ಟಗಳನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಳ್ಳೋಣ. ನಿಯೋಲಿಥಿಕ್ ಯುಗವು, ಮೊದಲನೆಯ ಸಹಸ್ರಮಾನದ ಪ್ರಾರಂಭದಿಂದ ಹಿಡಿದು ಕ್ರಿ.ಪೂ. ಎರಡನೆಯ ಶತಮಾನದವರೆಗೆ ಹರಡಿಕೊಂಡಿದೆ. ಈ ಯುಗದಲ್ಲಿ ಲೋಹದ ಸಾಮಗ್ರಿಗಳಿಗಿಂತ ಹೆಚ್ಚಾಗಿ ಕಲ್ಲಿನ ಸಾಮಗ್ರಿಗಳು ದೊರಕುತ್ತವೆ. ಡೊಲರೈಟಿನಿಂದ ತಯಾರಿಸಲಾದ, ನುಣುಪಾಗಿ ಮೆರುಗು(ಪಾಲಿಷ್) ಮಾಡಲಾದ ಕಲ್ಲಿನ ಕೊಡಲಿಗಳು ಇಲ್ಲಿ ದೊರೆತಿವೆ. ಇವಲ್ಲದೆ, ಸಮಾನಾಂತರವಾದ ಬದಿಗಳನ್ನು ಹೊಂದಿರುವ ಬ್ಲೇಡುಗಳು, ಅರ್ಧಚಂದ್ರಾಕಾರದ ಚಿಕ್ಕ ಉಪಕರಣಗಳು, ಕೊಕ್ಕಿನಂತೆ ಕೊರೆಯುವ ಮೊನೆಯುಳ್ಳ ಉಪಕರಣಗಳು ಮತ್ತು ಎಲೆಯ ಆಕಾರದ ಉಪಕರಣಗಳೂ ಇಲ್ಲಿ ಸಿಕ್ಕಿವೆ. ಒರಟಾದ ಕೆತ್ತನೆಗಳು ಅಥವಾ ರೇಖಾಚಿತ್ರಗಳನ್ನು ಹೊಂದಿರುವ ಮಡಕೆಗಳೂ ಇಲ್ಲಿ ಲಭ್ಯವಾದವು. ಈ ಪಾತ್ರೆಗಳು ವೃತ್ತಾಕಾರದವೋ ಅಥವಾ ಕಿರಿಯಾಳದವೋ ಆಗಿರುತ್ತಿದ್ದವು. ಈ ಯುಗದಲ್ಲಿ, ವಯಸ್ಕರು ಮತ್ತು ಮಕ್ಕಳ ಶವಸಂಸ್ಕಾರಗಳನ್ನು ಬೇರೆ ಬೇರೆ ರೀತಿಯಲ್ಲಿ ಮಾಡುತ್ತಿದ್ದರು. ಮಕ್ಕಳ ಕೈಕಾಲುಗಳನ್ನು ಮಡಿಸಿ ಕುಂಭಪಾತ್ರೆಯೊಳಗೆ ಇಟ್ಟು ಹುಗಿಯುತ್ತಿದ್ದರು. ಆದರೆ ವಯಸ್ಸಾದವರನ್ನು, ಗುಂಡಿಗಳಲ್ಲಿ ಉದ್ದಕ್ಕೆ ಮಲಗಿಸಿ, ಹುಗಿಯುತ್ತಿದ್ದರು.
ಎರಡನೆಯ ಹಂತದಲ್ಲಿ, ಲೋಹಗಳ ಬಳಕೆಯು ಅಧಿಕ ಪ್ರಮಾಣದಲ್ಲಿ ಮೊದಲಾಯಿತು.(ಕ್ರಿ.ಪೂ. 2 ನೆಯ ಶತಮಾನದಿಂದ ಕ್ರಿ.ಶ. 1 ನೆಯ ಶತಮಾನದವರೆಗಿನ ಕಾಲ.) ಕೃಷಿ ಮತ್ತು ಯುದ್ಧಗಳೆರಡರಲ್ಲಿಯೂ ಲೋಹಗಳನ್ನು ಬಳಸುತ್ತಿದ್ದರು. ಕುಡುಗೋಲುಗಳು, ಭರ್ಜಿಗಳು, ಬಾಣದ ತಲೆಗಳು, ಮತ್ತು ಕತ್ತಿಗಳು ಇಂತಹ ಉಪಕರಣಗಳಲ್ಲಿ ಕೆಲವು. ಈ ಕಾಲದ ಮಡಕೆಗಳು ಬೇರೆ ಬಗೆಯವು. ಅವುಗಳನ್ನು ಮೂರು ಗುಂಪಗಳಾಗಿ ವಿಂಗಡಿಸಲಾಗಿದೆ: ಬಹಳ ನಯವಾಗುವಂತೆ ಪಾಲಿಷ್ ಮಾಡಿದ ಕಪ್ಪು-ಕೆಂಪು ಪಾತ್ರೆಗಳು, ಸಂಪೂರ್ಣವಾಗಿ ಕಪ್ಪು ಬಣ್ಣದ ಪಾತ್ರೆಗಳು ಮತ್ತು ಮಂಕುಕೆಂಪು ಬಣ್ಣದ ಒರಟಾದ ಅಥವಾ ಹೊಳೆಯುವ ಪಾತ್ರೆಗಳು.
ಈ ಕಾಲದಲ್ಲಿ ಶವಸಂಸ್ಕಾರದ ವಿಧಾನಗಳು ಮತ್ತೆ ಬದಲಾಗಿದ್ದವು. ಸತ್ತವರನ್ನು ಕಲ್ಲಿನ ಸಿಸ್ಟುಗಳಲ್ಲಿ ಹುಗಿಯುತ್ತಿದ್ದರು ಅಥವಾ ನೆಲದಲ್ಲಿ ಆಳವಾದ ಗುಂಡಿ ತೆಗೆದು, ಸುತ್ತಲೂ ದೊಡ್ಡ ಬಂಡೆಗಳನ್ನು ಇಟ್ಟು, ಅವುಗಳ ನಡುವೆ ಹೆಣವನ್ನು ಇಡುತ್ತಿದ್ದರು. ಆ ದೊಡ್ಡ ಕಲ್ಲುಗಳನ್ನು ವೃತ್ತಾಕಾರದಲ್ಲಿ ಅಥವಾ ಒಂದರೊಳಗೊಂದಿರುವ ವೃತ್ತಗಳ ಆಕಾರದಲ್ಲಿ ಜೋಡಿಸುತ್ತಿದ್ದರು. ಈ ಸಿಸ್ಟುಗಳ ಒಳಗೆ, ಕಬ್ಬಿಣದ ಉಪಕರಣಗಳು, ಮಣಿಗಳು ಮತ್ತು ಮಡಕೆಗಳನ್ನು ಇಡುತ್ತಿದ್ದರು. ಕೆಲವು ಕಡೆ ಚಿನ್ನದ ಮಣಿಗಳು ಮತ್ತು ತಾಮ್ರದ ಬಳೆಗಳೂ ದೊರಕಿವೆ. ಇವೆಲ್ಲವನ್ನೂ ಇಟ್ಟ ನಂತರ ಮೇಲೆ ಹಸಿ ಮಣ್ಣನ್ನು ಮುಚ್ಚುತ್ತಿದ್ದರು.
ಮೂರನೆಯ ಯುಗವು ಸಹಜವಾಗಿಯೇ ಹೆಚ್ಚು ಪ್ರಗತಿ ಪಡೆದಿದೆ. ಇದು ಇತಿಹಾಸದ ಮೊದಲ ಹಂತ. ಕ್ರಿ.ಶ. ಒಂದರಿಂದ ಮೂರನೆಯ ಶತಮಾನದವರೆಗೆ ಈ ಯುಗದ ಹರಹು ಇದೆ. ಇಲ್ಲಿ ಸಿಕ್ಕಿರುವ ಮಡಕೆಗಳನ್ನು ವೇಗವಾಗಿ ತಿರುಗುವ ಚಕ್ರದ ನೆರವಿನಿಂದ ತಯಾರಿಸಲಾಗಿದೆ. ಈ ಹಂತದಲ್ಲಿ ತಟ್ಟೆಗಳು, ಮಡಕೆಗಳು, ಬಟ್ಟಲುಗಳು ಮತ್ತು ಬಿಳಿಯ ಬಣ್ಣದಲ್ಲಿ ರೇಖಾಕೃತಿಗಳನ್ನು ಬಿಡಿಸಿರುವ ಕುಂಡಗಳನ್ನು(ವೇಸಸ್) ನೋಡಬಹುದು. ಹಾಗೆಯೇ ಚಿನ್ನ, ಹಿತ್ತಾಳೆ, ಜೇಡಿಮಣ್ಣು ಮತ್ತು ಚಿಪ್ಪುಗಳಿಂದ(ಷೆಲ್) ತಯಾರಿಸಿದ ಒಡವೆಗಳೂ ಇಲ್ಲಿ ಸಿಕ್ಕಿವೆ.
ಅಶೋಕನ ಶಾಸನಗಳನ್ನು ಮೊದಲನೆಯ ಯುಗದಲ್ಲಿ ಜೀವಿಸಿದ್ದ ಜನರಿಗಾಗಿ ಸ್ಥಾಪಿಸಲಾಯಿತೆಂದು ಗ್ರಹಿಸಲಾಗಿದೆ. ಹೀಗೆ, ಬ್ರಹ್ಮಗಿರಿಯು ಕರ್ನಾಟಕದ ಪ್ರಮುಖ ಉತ್ಖನನ ಕ್ಷೇತ್ರಗಳಲ್ಲಿ ಒಂದು.