May 5, 2015

ಶಾಸನಗಳಲ್ಲಿ ಸಾಮಾಜಿಕ ಅಂಶಗಳು


ಒಂದು ಸಮಾಜದ ಸದಸ್ಯರು ತಮ್ಮ ಸ್ವಭಾವ ಜ್ಞಾನಕ್ಕನುಗುಣವಾಗಿ ತಮ್ಮ ಜೀವನವನ್ನು ಹಾಗೂ ತಮ್ಮ ದಿನ ನಿತ್ಯದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಾ ಇರುವಾಗ, ಸ್ವಪ್ರಜ್ಞೆಯಿಂದಲೋ ಅಥವಾ ಅಜಾಗೃತವಾಗಿಯೋ ಸಿದ್ದಪಡಿಸಿ ಬಿಟ್ಟು ಹೋಗಿರುವ ನಿದರ್ಶನಗಳು ಸಮಾಜ ಶಾಸ್ತ್ರೀಯ ಇತಿಹಾಸ ಕಾರನಿಗೆ ಅತ್ಯಾವಶ್ಯಕವಾದವುಗಳು.  ಆ ಮೂಲಾಧಾರಗಳಿಂದ ಬರುವ ಮಾಹಿತಿಧಾರೆಯನ್ನು ಅವಲಂಬಿಸಿಕೊಂಡೇ ಅವನು ತನ್ನ ಅನ್ವೇಷಣಾಯಾನವನ್ನು ಮುಂದುವರಿಸಿಕೊಂಡು ಹೋಗಬೇಕು. ಬೇರೆ ಮಾತುಗಳಲ್ಲಿ ಹೇಳಬೇಕಾದರೆ, ಒಂದು ಸಮಾಜದ ಸದಸ್ಯರು ತಮ್ಮ ಬದುಕನ್ನು ಕುರಿತ ವಿವರಗಳನ್ನು ಅನೌಪಚಾರಿಕಾವಾಗಿಯಾದರೂ ಆಂತರಿಕವಾಗಿ ಕ್ರೂಡೀಕರಿಸಿ ಇಟ್ಟಿರುತ್ತಾರೆ.  ಇಂಥಹ ಕ್ರೂಡೀಕೃತ ಮಾಹಿತಿರತ್ನಗಳ ಭಂಡಾರವೇ ಶಾಸನಗಳು. ಕರ್ನಾಟಕದಲ್ಲಿ ದೊರೆತಿರುವಷ್ಟು ಶಾಸನಗಳು ಭಾರತದ ಇನ್ಯಾವ ಭಾಗದಲ್ಲೂ  ದೊರೆತಿಲ್ಲಎಂಬುದು  ವಿದ್ವಾಂಸರ ಅಬಿಪ್ರಾಯವಾಗಿದೆ.
ಈ ಶಾಸನಗಳಲ್ಲಿ ಸಾಮಾನ್ಯ ಜನರ ಬಾಳಿನ ಕ್ರಮ, ಅವರ ನಂಬಿಕೆ ತಮ್ಮ ವ್ಯಕ್ತಿತ್ವದಲ್ಲಿ ಸಮೀಕರಿಸಿ ಕೊಂಡಿದ್ದ ಸಾಮಾಜಿಕ ಮೌಲ್ಯಗಳು, ಅವರು ಕೈಗೊಂಡಿದ್ದ ಜನೋಪಯೋಗಿ ಕಾರ್ಯಗಳು ಮತ್ತು ಸಮಾಜದಲ್ಲಿ ಮುಖ್ಯವಾಗಿದ್ದ ಸಾಮಾಜಿಕ ಸಂಸ್ಥೆಗಳು ಮುಂತಾಗಿ ಸಮಾಜ ಶಾಸ್ತ್ರೀಯವಾಗಿ ಪ್ರಾಮುಖ್ಯವಾದ ವಿಷಯಗಳ ಬಗ್ಗೆ ಹೆಚ್ಚು ಕಡಿಮೆ ಸ್ಪಷ್ಟವಾದ ಚಿತ್ರಣವನ್ನು ಕಾಣಬಹುದು. ಈ ಲೇಖನದಲ್ಲಿ ಮಧ್ಯಯುಗದ ಕರ್ನಾಟಕ ಸಮಾಜದಲ್ಲಿ ಪ್ರಮುಖವಾಗಿದ್ದ ಕೆಲವು ಸಾಮಾಜಿಕ ಸಂಸ್ಥೆಗಳನ್ನು ಆರಿಸಿಕೊಂಡು, ರಾಜಕೀಯ ಪರಿಸ್ಥಿತಿ ಅಷ್ಟೇನು ಸ್ಥಿರವಾಗಿಲ್ಲದಿದ್ದಾಗ, ಈ ಸಂಸ್ಥೆಗಳು ಎಷ್ಟರ ಮಟ್ಟಿಗೆ ಗತಿಶೀಲವಾಗಿದ್ದು ಕೊಂಡು ಸಮಾಜ ಜೀವನ ವಾಹಿನಿಯು ಸುಸೂತ್ರವಾಗಿ ಸಾಗುವುದಕ್ಕೆ ಹಾಗೂ ಸಮಾಜವು ಸುಭದ್ರವಾಗಿರುವುದಕ್ಕೆ ಸಹಕಾರಿಯಾಗಿದ್ದವು, ಎಂಬುದನ್ನು ವಿಶ್ಲೇಷಿಸಲು ಒಂದು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ. ಸಮಾಜ ಎಂಬ ರಥ ಸುಲಭವಾಗಿ ಮುಂದೆ ಹೋಗಬೇಕಾದರೆ ಸಂಸ್ಥೆಗಳೆಂಬ ಚಕ್ರಗಳು ಸಮರ್ಪಕವಾಗಿರಬೇಕು, ಗಟ್ಟಿಯಾಗಿರಬೇಕು, ಹಾಗಿರಬೇಕಾದರೆ ಅವುಗಳಿಗೆ ಧರ್ಮದ ಅವಲಂಬನೆ ಇರಲೇ ಬೇಕು.
ಕರ್ನಾಟಕ ಸಮಾಜದಲ್ಲಿ ಧರ್ಮವು ಜನ ಜೀವನದ ಉಸಿರೇ ಆಗಿದ್ದಿತು. ಧರ್ಮ ಎಂದರೆ ಕರ್ತವ್ಯ ಸಂಹಿತೆ. ಅದು ಬಿಡುಗಡೆಯ ಮಾರ್ಗ, ಬೆಳಕಿನ ಬೀಡು, ಸರ್ವ ಜೀವಿಯ ಬಗ್ಗೆ ಪ್ರೀತಿ, ಸರ್ವರ ಒಳಿತಿಗಾಗಿ ನಿಸ್ವಾರ್ಥ ಸೇವೆ ಮುಂತಾದ ಸಾರ್ವಕಾಲಿಕ, ಸರ್ವೋಜ್ಜೀವಕ ಮೌಲ್ಯಗಳ ಸಂಚಯ. ಕರ್ನಾಟಕದ ಜನರ ಬದುಕಿನ ಮೌಲ್ಯಗಳಲ್ಲಿ ತ್ಯಾಗ, ವೀರ, ಪರಾರ್ಥಪರತೆ, ಧಾರ್ಮಿಕ ರೀತ್ಯಾ ಹಣ ಸಂಪಾದಿಸಿ ದಾನ ಮಾಡುವುದು, ದೇವಾಲಯಗಳನ್ನು ನಿರ್ಮಿಸುವುದು ಬಹು ಮುಖ್ಯವಾಗಿದ್ದವು. ಅವರು ಈ ಮೌಲ್ಯಗಳ ಅನುಕರಣೆಯಿಂದ ಪುಣ್ಯಬರುತ್ತದೆ ಎಂಬುದಾಗಿ ಎಷ್ಟರ ಮಟ್ಟಿಗೆ ನಂಬಿದ್ದರು ಎಂದರೆ ಅವುಗಳು ಅವರ ವ್ಯಕ್ತಿತ್ವದ ಅವಿಭಾಜ್ಯ ಅಜಂಗವಾಗಿದ್ದಂತೆ ತೋರುತ್ತಿದ್ದಿತು. ಮತ್ತು ಸಮಾಜ ಜೀವನದಲ್ಲಿ ಈ ಮೌಲ್ಯಗಳು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದ್ದವು ಎಂದರೆ ಅವುಗಳು ಒಂದುಪ್ರಮುಖ ಸಾಮಾಜಿಕ ಸಂಸ್ಥೆಯೇ ಆಗಿ ಹೋದಂತೆ ಭಾಸವಾಗುತ್ತಿದ್ದಿತು. ವ್ಯಕ್ತಿಗಳಲ್ಲಿ ರಾಜಭಕ್ತಿ ಎಷ್ಟು ಆಳವಾಗಿ ಬೇರೂರಿತ್ತೆಂದರೆ ಅವರು ತಮ್ಮ ತಮ್ಮ ಪ್ರಭುಗಳಿಗಾಗಿ ಯುದ್ಧಗಳಲ್ಲಿ ಪ್ರಾಣದ ಹಂಗುತೊರೆದು ಹೋರಾಡುತ್ತಿದ್ದರು. ಜೊತೆಗೆ ಅವರು ತಮ್ಮ ದೊರೆಗಳಿಗೆ ಒಳ್ಳೆಯದಾದರೆ ಪ್ರಾಣ ಬಿಡುವುದಾಗಿ ಹರಕೆ ಹೊತ್ತು ಕೊಳ್ಳುತ್ತಿದ್ದರು. ತನ್ನ ಅರಸನಿಗೆ ಮಗ ಹುಟ್ಟಿದಾಗ ಆ ಕಟೆ ಎಂಬಾತನು ತನ್ನ ತಲೆ ತರಿಸಿಕೊಂಡು ಹರಕೆ ಸಲ್ಲಿಸಿದನು, ಯಾದವ ವೀರಬಲ್ಲಾಳನ ಕಾಲದಲ್ಲಿ ಹೊನ್ನಕ್ಕನಾಯಕಿತಿ ಎಂಬಾಕೆಯು ಮಡಿದಾಗ, ಅವಳ ದಾಸಿ ಹೊನ್ನಿ ಸಿಡಿದಲೆ ಕೊಡುವುದರ ಮೂಲಕ ಸತ್ತಳು ಎಂಬುದಾಗಿ ಶಾಸನಗಳು ತಿಳಿಸುತ್ತವೆ. ಅದೇ ರೀತಿ ತಮಗೆ ಅನ್ನವಿಟ್ಟ ದೊರೆಗೆ ಅಥವಾ ಧಣಿಗೆ ನಿಷ್ಟೆಯಿಂದ ಇದ್ದು ಕಾಳಗಗಳಲ್ಲಿ ಹೋರಾಡಿ ಅನ್ನಋಣವನ್ನು ತೀರಿಸುವುದಕ್ಕೆ ಪ್ರಾಣವನ್ನೇ ಅರ್ಪಿಸಲು ಸಿದ್ಧರಾಗಿದ್ದ ಹಲವಾರು ವೀರ ವೀರ ಜೋಳವಾಳಿಗಳನ್ನು ಶಾಸನಗಳಲ್ಲಿನೋಡಬಹುದು. ರಾಜನೋ ರಾಣಿಯೋ ಮೃತ್ಯುವನ್ನಪ್ಪಿದಾಗ  ತಾವೂ ಸತ್ತು ಅವರನ್ನು ಸಾವಿನಲ್ಲೂ ಹಿಂಬಾಲಿಸುವ ಹರಕೆ  ಹೊತ್ತು  ದೇಹತ್ಯಾಗ ಮಾಡಿದ ರೆಟ್ಟಿಯಣ್ಣ, ಅಗ್ನಿ ಪ್ರವೇಶ  ಮಾಡಿದ ರಾಚೆ, ಕೀಳ್ಗುಂಠೆಯಾದ ಅಗರಯ್ಯ, ಸತ್ತರಾಣಿ ಲಚ್ಚದೇವಿಯನ್ನು ಹಿಂಬಾಲಿಸಿ ಹೋಗಲು ಮರಣಿಸಿದ ಬೊಪ್ಪಣ್ಣ ಮೊದಲಾದ ಅನೇಕ ವೇಳೆವಾಳಿಗಳನ್ನು ಶಾಸನಗಳು ಪರಿಚಯಿಸುತ್ತವೆ. ಹೊಯ್ಸಳರ ಕಾಲದಲ್ಲಿ ತಮ್ಮ ದೊರೆಗಳು ಕಾಲವಶರಾದ ಕೂಡಲೇ ತಾವೂ ಸಾವನ್ನಪ್ಪುವುದಾಗಿ ಪ್ರತಿಜ್ಞೆ ಮಾಡಿ, ತಮ್ಮ ಎಡಗಾಲುಗಳಿಗೆ ಗಂಡಪಂಡೇರ ಎಂಬ ಚಿನ್ನದ ಆಭರಣವನ್ನು ಕಟ್ಟಿಕೊಂಡು ತಮ್ಮ ರಾಜರಿಗಾಗಿಯೇ ಬಾಳಿ ಅವರೊಡನೆ ದೇಹತ್ಯಾಗ ಮಾಡುತ್ತಿದ್ದವರನ್ನು ಗರುಡರು ಎಂಬುದಾಗಿ ಕರೆಯಲಾಗುತ್ತಿದ್ದಿತು. ಹೊಯ್ಸಳ ವೀರಬಲ್ಲಾಳನು ಮೃತಪಟ್ಟಾಗ, ಅವನ ಗರುಡ ಕುವರಲಕ್ಷ್ಮ ಮತ್ತು ಅವನ ಪತ್ನಿ ಹಾಗೂ ಲೆಂಕರೆಂಬ ಒಂದು ಸಾವಿರ ವೀರರು ಪ್ರಾಣತ್ಯಾಗ ಮಾಡಿದರು. ಮತ್ತು ಹೊಯ್ಸಳ ಸಂತತಿಯ ಎರೆಯಂಗ, ಬಿಟ್ಟಿದೇವ, ಒಂದನೆಯ ನರಸಿಂಹ, ಎರಡನೆಯ ಬಲ್ಲಾಳ, ಎರಡನೆಯ ನರಸಿಂಹ, ಸೋಮೇಶ್ವರ ಮತ್ತು ಮೂರನೆಯ ನರಸಿಂಹ ದೊರೆಗಳಿಗೆ ಕ್ರಮವಾಗಿ ಗರುಡರಾಗಿ ತಮ್ಮ ಪತ್ನಿಯರು ಹಾಗೂ ಲೆಂಕಲೆಂಕಿಯರೊಂದಿಗೆ ಪ್ರಾಣ ತ್ಯಜಿಸಿ ತಮ್ಮ ತಮ್ಮ ಪ್ರಭುಗಳನ್ನು ಹಿಂಬಾಲಿಸಿದ್ದ ಕಬ್ಬಿಗನಾಡಿನ ಮುಗಿಲ ಎಂಬ ಒಂದೇ ಕುಟುಂಬಕ್ಕೆ ಸೇರಿದ್ದ ಗಂಡನಾರಾಯಣ, ಹೊಯ್ಸಳ ಶೆಟ್ಟಿ, ಕುರೆಯ ನಾಯಕ, ಶಿವನೆಯ ನಾಯಕ, ಲಕ್ಕೆಯ ನಾಯಕ, ಕನ್ನೆಯ ನಾಯಕ, ಮತ್ತು ರಂಗೆಯ ನಾಯಕ ಅವರನ್ನು ಶಾಸನಗಳು ಸ್ತುತಿಸಿವೆ.
ಮಹಿಳೆಯರು ಸಹಗಮನ ಎಂಬ ಇನ್ನೊಂದು ಬಲಿದಾನದ ಕ್ರಮವನ್ನು ಅನುಸರಿಸುತ್ತಿದ್ದರು. ಪತಿಯ ಶವದೊಂದಿಗೆ ಜೀವಂತವಾಗಿಯೇ ಚಿತೆಯೇರಿದ ಸತಿ ಜಕ್ಕಬ್ಬೆ, ಸುಪ್ರಸಿದ್ಧ ಅತ್ತಿಮಬ್ಬೆಯ ತಂಗಿ ಗುಂಡಮ್ಮಬ್ಬೆ, ಎಲ್ಲಿಯೋ ಯುದ್ಧದಲ್ಲಿ ಮಡಿದ ಪತಿಯ ಮೇಲಿನ ಪ್ರೇಮಕ್ಕಾಗಿ ಅನುಗಮನ ಕ್ರಮದಿಂದ ಅಗ್ನಿಪ್ರವೇಶ ಮಾಡಿ ಸತಿಯಾದ ದೇಕಬ್ಬೆರಾಣಿ, ಜನರ ಹಿತರಕ್ಷಣೆಗಾಗಿ ಶತ್ರುವಿನ ವಿರುದ್ಧವೋ ಅಥವಾ ಹುಲಿಯೊಂದಿಗೋ ಅಥವಾ ಗೋರಕ್ಷಣೇಗಾಗಿಯೋ ಕಾದಿ ಮರಣಿಸಿದ ಪತಿಯೊಂದಿಗೆ ಸಾವನ್ನು ಬರಮಾಡಿಕೊಂಡ ಬಸೆ ಬೊಮ್ಮಕ್ಕ, ಬಿಯವ್ವೆ, ಮಾದಿಗೌಡನ ಹೆಂಡತಿ ಮೊದಲಾದ ಸಾಮಾನ್ಯ ಸ್ತರದ ಸ್ತ್ರೀಯನ್ನು ಕುರಿತ ಸಾಕಷ್ಟು ವಿವರಗಳು ಶಾಸನಗಳಲ್ಲಿವೆ.
ಇಷ್ಟು ಮಾತ್ರವಲ್ಲದೆ, ಗ್ರಾಮ ಹಾಗೂ ಊರುಗಳಲ್ಲಿ ಸಮಾಜವಿರೋ ಶಕ್ತಿಗಳ ವಿರುದ್ಧ ಕಾದಾಡಿ ಮೃತ್ಯುವನ್ನು ಸಂತೋಷದಿಂದ ಬರಮಾಡಿಕೊಂಡಿದ್ದ ಅನೇಕ ಸಾಮಾನ್ಯ ವೀರರನ್ನು ಶಾಸನಗಳು ಪರಿಚಯಿಸುತ್ತವೆ. ವ್ಯಾಪಾರಿಗಳನ್ನು ಹಾಗೂ ಪ್ರವಾಸಿಗರನ್ನು ದೋಚುತ್ತಿದ್ದ ದಾರಿಗಳ್ಳರ ವಿರುದ್ಧ ಹೋರಾಡಿ ಮಣ್ಣಾದ ಕಲ್ಲಣ್ಣ, ಮೂಗೂರಿನ ಮಾದಪ್ಪ, ಸೋವಿಸೆಟ್ಟಿ, ಊರಿಗೆ ನುಗ್ಗಿ ದೇಗುಲವನ್ನು ಲೂಟಿ ಮಾಡಿ ಜನರಿಗೆ ತೊಂದರೆ ಮಾಡಿದ ಕಳ್ಳರೊಡನೆ ಕಾದಾಡಿ ಸತ್ತ ತ್ರೈಲೋಕ್ಯ ಸೆಟ್ಟಿ, ಮಾಸಯ್ಯ ಕಲ್ಲಯ್ಯ; ಸ್ತ್ರೀಯರ ಮಾನಪ್ರಾಣಗಳ ರಕ್ಷಣೆಗಾಗಿ ಯಶಸ್ವಿಯಾಗಿ ಕತ್ತಿ ಹಿಡಿದು ಯುದ್ಧಯಮಲೋಕಕ್ಕೆ ಹೋದ ಸೋಮೆಯ, ಎಡವಯ್ಯ ಹಾಗೂ ಅವನ ಮಗ ಜಕ್ಕ, ಸೀಮಾಸಂಭಂಧದ ಕಾಳಗದಲ್ಲಿ ಸತ್ತು ಹೋದ ಈ ಸವೂರಿನ ಮಾಳ ಊರಳಿವು ಹಾಗೂ ಊರ ಹುಯ್ಯಲಿನಲ್ಲಿ ಸೆಣಸಿ ಸತ್ತ ಸಾವುರ, ಗ್ರಾಮಗಳ ಗೋವುಗಳನ್ನು ಹಿಡಿದು ಕೊಂಡು ಹೋಗುತ್ತಿದ್ದವರ ವಿರುದ್ಧ ಬಡಿದಾಡಿ ಗೋರಕ್ಷಣೆಮಾಡಿ,ಇಂತಹ ತುರುಕಾಳಗಗಳಲ್ಲಿ ವೀರಮರಣವನ್ನಪ್ಪಿದ ಚೋಳಾಚಾರಿ, ಚಟ್ಟನಾಯಕ, ಕೇತುಮಲ್ಲ, ಅಗಸನಾಗಿಯಣ್ಣ, ಏಕಾಂಗಿಯಾಗಿ ಸೆಣಸಾಡಿದ ರಾಮೋಜ ಮತ್ತು ಸಾಮಾನ್ಯ ಸ್ತ್ರೀಯಳಾಗಿದ್ದ ಲಕ್ಷ್ಮಮ್ಮ ಗಾವುಂಡಿಯೂ ಸಹ ಗ್ರಾಮಗಳನ್ನು ಗೋವುಗಳನ್ನು ಹುಲಿ ಮುಂತಾದ ದುಷ್ಟಮೃಗಗಳಿಂದ ರಕ್ಷಿಸುವುದಕ್ಕಾಗಿ ಬೇಟೆಯಾಡಿ ಮರಣಿಸಿದ  ನಾಯಗರಾಮ, ಕೇತುರಾಯ್, ರಾಮಮಾವಂತ, ಭೂಮಾದಶೆಟ್ಟಿ  ಹಾಗೂ ನಾದಿಯಣ್ಣ ಮೊದಲಾದವರ ಧೈರ್ಯ ಶೌರ್ಯ, ಪರೋಪಕಾರ ಬುದ್ದಿ ಹಾಗೂ ನಿಸ್ವಾರ್ಥತೆ ಇತ್ಯಾದಿ ಗುಣಗಳನ್ನು ಶಾಸನಗಳು ಎತ್ತಿ ತೋರಿ ಮೆಚ್ಚಿಗೆ ಸೂಚಿಸಿವೆ. ಗ್ರಾಮ ಹಾಗೂ ಊರುಗಳಲ್ಲಿ ತಮ್ಮತಮ್ಮ ವೃತ್ತಿಗಳನ್ನು ಮಾಡಿಕೊಂಡು ಹೋಗುತ್ತಿದ್ದ ಸಾಮಾನ್ಯ ಸ್ತ್ರೀ ಪುರುಷರು ಸಮಾಜ ವಿರೋ ಶಕ್ತಿಗಳು ಎದುರಾದಾಗ, ಹೆದರದೆ, ಸಾಯಲು ಹಿಂಜರಿಯದೆ ಕಾದಾಡಿದ ವರ್ಣನೆಗಳನ್ನು ಓದಿದಾಗ, ಬಹುಶಃ ಅವರಲ್ಲಿ ಇಂತಹ ಧೈರ್ಯ ಸಾಹಸಗಳು ಮಾಡಿಕೊಳ್ಳುವಂತೆ ಮಾಡುತ್ತಿದ್ದ ಒಂದು ಮೌಲ್ಯಾಧಾರಿತ ಸಂಸ್ಥೆ ಇದ್ದರಬೇಕು ಎಂದೆನಿಸುತ್ತದೆ.
ಧಾರ್ಮಿಕ ರೀತ್ಯಾ ದೇಹತ್ಯಾಗ ಮಾಡುವ ಕ್ರಮವೂ ಇದ್ದಿತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ತನ್ನ ಹರಕೆಯ ಪ್ರಕಾರ ಬೀರಯ್ಯ ಎಂಬಾತನು ಅಗ್ನಿ ಪ್ರವೇಶ ಮಾಡಿದನೆಂದು ಶಾಸನವೊಂದು ಹೇಳುತ್ತದೆ. ಜೈನರಲ್ಲಿ ಇಂಥ ಧಾರ್ಮಿಕ ರೀತ್ಯಾ ದೇಹತ್ಯಾಗಕ್ಕೆ ಸಮಾ ಮರಣ ಎನ್ನಲಾಗುತ್ತದೆ. ವಾಸಿಯಾಗದ ರೋಗ, ವೈರಾಗ್ಯ, ತನ್ನಿಂದ ಸಮಾಜಕ್ಕೆ ಏನೂ ಉಪಯೋಗವಿಲ್ಲ ಎಂಬ ಅರಿವು ಉಂಟಾದಾಗ ವ್ಯಕ್ತಿಗಳು ಸನ್ಯಸನ ಅಥವಾ ಸಲ್ಲೇಖನ ವ್ರತವನ್ನು ಕೈಗೊಂಡು ಸಂಪೂರ್ಣವಾಗಿ ಆಹಾರವನ್ನು ತ್ಯಜಿಸಿ ಮೃತ್ಯುದೇವನನ್ನು ಆಹ್ವಾನಿಸುತ್ತಿದ್ದರು. ಅರಿಷ್ಟನೇಮಿಯಂತಹ ಜೈನ ಆಚಾರ್ಯರು, ಮಾರಸಿಂಹನಂಥ ರಾಜರು, ಮುದ್ದೆಗೌಡ ಮೊದಲಾದ ಸಾಧಾರಣ ಶಿಷ್ಯರು, ಹೊಯ್ಸಳ ದಂಡಾಕ ಗಂಗ ರಾಜನ ಕುಟುಂಬದವರು, ಶಾಂತಲೆಯಂತಹ ಮಹಾರಾಣಿಯರು, ಸಾಸಿಮತಿಗಂತಿ, ಅನಂತಾಮತಿಗತಿಯಂಥ ಜೈನ ಸನ್ಯಾಸಿನಿಯರು, ಮಾದವ್ವೆ ಸೋಮಲ ದೇವಿ ಮೊದಲಾದ ಸಾಮಾನ್ಯ ಸ್ತ್ರೀಯರೂ ಸಹ ಸಲ್ಲೇಖನ ವ್ರತದ ಮೂಲಕ ಸಮಾ ಮರಣವನ್ನು ಪಡೆದರು ಎಂಬುದಾಗಿ ಶಾಸನಗಳು ವಿವರಿಸಿವೆ.
ಹೀಗೆ ಉದಾತ್ತ ಉದ್ದೇಶ ಹಾಗೂ ಸಮಾಜದ ಒಳಿತಿಗಾಗಿ ನಿಸ್ವಾರ್ಥತೆಯಿಂದ ಕಾದಾಡಿ ದೇಹತ್ಯಾಗ ಮಾಡಿದ ವೀರರ ಹಾಗೂ ರಾಜನಿಷ್ಟರ ಪತಿಭಕ್ತಿಯಿಂದ ಸತ್ತಪತಿಯೊಡನೆ ಸಹಗಮನ ಕೈಗೊಂಡಿದ್ದ ಸತಿಯರ ಮತ್ತು ಆಧ್ಯಾತ್ಮ ಸಾಧನೆಗಾಗಿ ಧಾರ್ಮಿಕ ವಿಯ ಮೂಲಕ ಪ್ರಾಣ ತೊರೆದ ಧರ್ಮನಿಷ್ಟರ ಹಾಗೂ ಧರ್ಮನಿರತ ಜೈನರ ಗೌರವಾರ್ಥವಾಗಿ ಸಮಾಜವು ಕ್ರಮವಾಗಿ ವೀರಗಲ್ಲು, ಮಾಸ್ತಿಗಲ್ಲು, ಹಾಗೂನಿಸಿಗಲ್ಲುಗಳನ್ನು ನಿಲ್ಲಿಸುವುದರ ಮೂಲಕ ಮತ್ತು ಅವರ ಹೆಸರಿನಲ್ಲಿ, ಅವರ ಸ್ಮರಣಾರ್ಥವಾಗಿ ಹಾಗೂ ಅವರ ಆಶ್ರಿತರಿಗಾಗಿ  ನಾನಾವಿಧವಾದ  ದತ್ತಿಗಳನ್ನು ನೀಡುವುದರ ಮೂಲಕ ಸಮಾಜವು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಿತು. ಎಂಬುದನ್ನು ವಿಷದ ಪಡಿಸುವ ಶಾಸನಗಳಲ್ಲಿ ವಿಫುಲವಾದ ಮಾಹಿತಿ ಸಂಗ್ರಹಗಳೇ ಇವೆ.
ಕೆರೆಯಂ ಕಟ್ಟಿಸು ಬಾವಿಯಂ ಸವೆಸು, ದೇವಾಗಾರಮಂ ಮಾಡಿಸು…….. ಎಂಬ ಮೊದಲ ಪಾಠವನ್ನು ಮೊದಲಗುರುವಾದ ತಾಯಿಯೋರ್ವಳು ತನ್ನ ಮಗನಿಗೆ ಹೇಳಿಕೊಟ್ಟ ವಿಷಯ ಶಾಸನವೊಂದರಿಂದ ತಿಳಿದು ಬರುತ್ತದೆ. ಹೀಗೆ ಪರಾರ್ಥಪರತೆ ಜನೋಪಯೋಗಿ ಕಾರ್ಯಗಳಲ್ಲಿ ಆಸಕ್ತಿಯನ್ನು ಸಮಾಜದ ಸದಸ್ಯರಲ್ಲಿ ಬೆಳೆಸುವುದು ಅದಂದಿನ ಸಮಾಜೀಕರಣ ಪ್ರಕ್ರಿಯೆಯಲ್ಲಿ ಬಹುಮುಖ್ಯ ವಾಗಿದ್ದಿತು ಎನ್ನಬಹುದು. ಆದ್ದರಿಂದಲೇ ಸತ್ರ, ಕೆರೆ, ಉದ್ಯಾನವನ, ತೋಟತುಡಿಕೆ, ಅಗ್ಗಿಷ್ಟಿಕೆಅರವಟ್ಟಿಗೆ, ಮುಂತಾದ ಸಾರ್ವಜನಿಕ ಉಪಯೋಗಕ್ಕೆ ಬೇಕಾಗುವುದನ್ನು ನಿರ್ಮಿಸಿ ಅವುಗಳ ರಕ್ಷಣೆಗಾಗಿ ಹಾಗೂ ಅವುಗಳಿಂದ ಜನರಿಗೆ ಸದಾ ಪ್ರಯೋಜನಗಳು ಆಗುತ್ತಿರಬೇಕೆಂಬ ಉದ್ದೇಶದಿಂದ ಹಣ, ಭೂಮಿ ಮುಂತಾಗಿ ಹಲವಾರು ದತ್ತಿಗಳನ್ನು ನೀಡಿದ್ದ ಅನೇಕ ಸ್ತ್ರೀ ಪುರುಷರನ್ನು ಶಾಸನಗಳಲ್ಲಿ ಭೇಟಿಮಾಡಬಹುದು.  ಭಾರತೀಯ ಪರಂಪರೆಯಲ್ಲಿ ತಾಯಿ, ತಂದೆ, ಗುರುವಲ್ಲದೆ ಅಥಿತಿಯೂ ಸಹ ದೇವರೆ ಎಂಬುದಾಗಿ ಭಾವಿಸಲಾಗುತ್ತದೆ. ಅನ್ನದಾನವು ಬಹಳ ಶ್ರೇಷ್ಟವಾದುದು, ಎಂಬ ನಂಬಿಕೆ ಮತ್ತು ಅತಿಥಿ ಸತ್ಕಾರ ಪ್ರತಿಯೊಬ್ಬರ ಪವಿತ್ರ ಕರ್ತವ್ಯ ಎಂಬ ಭಾವನೆಯ ಅಬಿವ್ಯಕ್ತಿಯೇ ಸತ್ರ. ಕರ್ನಾಟಕದಲ್ಲಿ ಬಹುಮಟ್ಟಿಗೆ ಸತ್ರಗಳು ದೇಗುಲ, ಬಸದಿ ಹಾಗೂ ಮಠಗಳಿಗೆ ಹೊಂದಿಕೊಂಡು ಇರುತ್ತಿದ್ದವು. ದಂಡಾಪರವಿಗನ ಪತ್ನಿ ರೆಬ್ಬಲದೇವಿ ಸತ್ರಕ್ಕಾಗಿ ತನ್ನ ಮನೆಯನ್ನೇ ಬಿಟ್ಟುಕೊಟ್ಟಳು, ಅನ್ನದಾನವೇ ಮುಖ್ಯವೆಂದು ಬಗೆದು ಜಕ್ಕವ್ವೆ ಸತ್ರವೊಂದನ್ನು ನಿರ್ಮಿಸಿದಳು, ಅಗ್ರಹಾರದ ಪೊಂಬುಚ್ಚಿಯಲ್ಲಿ ನಾಗವರ್ಮಯ್ಯ ವಿಷ್ಣುದೇಗುಲಕ್ಕೆ ಅಕಂಟಿಕೊಂಡಂತೆ ಸತ್ರವನ್ನು ಕಟ್ಟಿಸಿದನು. ಪದ್ಮಬ್ಬರಸಿ ತನ್ನ ಬಸದಿಯ ಅಯಂಗವಾಗಿ ದಾನಶಾಲೆಯನ್ನು ಸ್ಥಾಪಿಸಿದಳು ಮತ್ತು ಸತ್ರಗಳ ರಕ್ಷಣೆಗೆ ಹಾಗೂ ಅವುಗಳಲ್ಲಿ ಬ್ರಾಹ್ಮಣ, ಸನ್ಯಾಸಿ, ಜಂಗಮ ಮತ್ತು ಇತರರ ಊಟಕ್ಕಾಗಿ ಭೂಮಿ, ಗದ್ಯಾಣ, ಮುಂತಾದ ಹಲವುಬಗೆಯ ದತ್ತಿಗಳನ್ನು ಮಾಣಿಕ ಸೆಟ್ಟಿ, ಚಂದವ್ವೆ ಹೆಗ್ಗಡಿತಿ, ಚಾಮಿಕಬ್ಬೆ, ಹೊನ್ನಮವ್ವ ಮೊದಲಾದ ಅನೇಕರು ಕೊಟ್ಟರು ಎಂಬುದಾಗಿ ಶಾಸನಗಳು ವಿಶದಪಡಿಸುತ್ತವೆ.
ಪುಣ್ಯಸಂಪಾದನೆ ಮತ್ತು ಜನೋಪಯೋಗ ಎಂಬ ಸದುದ್ದೇಶಕ್ಕಾಗಿ ಕರ್ಣಾಟಕ ಸಮಾಜದ ಸ್ತ್ರೀಪುರುಷ ಸದಸ್ಯರು ಅನೇಕ ಕೆರೆಗಳನ್ನು ಕಟ್ಟಿದರು. ತಮ್ಮ ಹೆಸರಿನ ಮೇರೆಗೆ ಪಟ್ಟಣ ಸ್ವಾಮಿಗೆರೆ ಮತ್ತು ಮಾಚಲಸಮುದ್ರ ಎಂಬ ಕೆರೆಗಳನ್ನು ಕ್ರಮವಾಗಿ ಪಟ್ಟಣಸ್ವಾಮಿ ಹಾಗೂ ರಾಣಿ ಮೇಚಲದೇವಿಯಂಥ ಸಾಮಾನ್ಯ ಮಹಿಳೆಯರೂ ಶಾಸನಗಳಲ್ಲಿ ಉಲ್ಲೇಖಿತರಾಗಿದ್ದಾರೆ. ಇಂತಹ ಕೆರೆಗಳು ಬಹಳ ಕಾಲ ಜನಸೇವೆಗೆ ಉಪಯುಕ್ತವಾಗುವಂತೆ ಮಾಡಲು ಕೆಲವುಸಲ ಊರಿನವರೆಲ್ಲಾ ಸೇರಿ ಜಮೀನುಗಳನ್ನು, ಹಾಗೂ ಮದುವೆ ಮುಂಜಿ ಸಂದರ್ಭಳಲ್ಲಿ ಕೊಡಲಾಗುತ್ತಿದ್ದ ಒಸಗೆ ದ್ರವ್ಯವನ್ನು ಬಿಟ್ಟುಕೊಡುತ್ತಿದ್ದರು. ಮತ್ತು ನಾಗವರ್ಮ, ಮಣಿಯಬ್ಬೆ, ಗೌರಲದೇವಿಮೊದಲಾದ ಅನೇಕಾನೇಕ ಸ್ತ್ರೀಪುರುಷರು ಹೊಲಗದ್ದೆ, ಚಿನ್ನದ ಗದ್ಯಾಣ, ತೈಲದ ಗಿರಣಿ ಮುಂತಾದ ನಾನಾಬಗೆಯ ದತ್ತಿಗಳನ್ನು ಕೊಟ್ಟಿದ್ದರು. ಎಂಬುದು ಶಾಸನಗಳಿಂದ ಸ್ಪಷ್ಟವಾಗುತ್ತದೆ.
ಅದೇ ರೀತಿ ಎಲ್ಲಾ ಸಾಮಾಜಿಕ ಸ್ತರಗಳಿಗೆ ಸೇರಿದ್ದ ಸ್ತ್ರೀಪುರುಷರು ಆರಾಮ/ಆರವೆ, ಅವಂದರೆ ಸಾರ್ವಜನಿಕ ಉದ್ಯಾನವನ ಬೆಳೆಸುವುದಕ್ಕೆ, ಊರಿನವರಿಗೆ ದಿನನಿತ್ಯ ಬೆಂಕಿಯನ್ನು ಒದಗಿಸಿಕೊಡುವುದಕ್ಕೆ ದೇವಾಲಯ ಮಠ ಅಥವಾ ವೈಕ ಗೃಹಗಳಲ್ಲಿ ಸದಾ ಅಗ್ಗಿಷ್ಟಿಕೆ ಉರಿಯುತ್ತಿರುವಂತೆನೋಡಿಕೊಳ್ಳುವುದಕ್ಕಾಗಿ, ಪ್ರಯಾಣಿಕರ ದಾಹತಣಿಸುವುದಕ್ಕಾಗಿ ಅರವಟ್ಟಿಗೆಗಳನ್ನು ಇಡುವುದಕ್ಕಾಗಿ, ಅವುಗಳಿಗೆ ನೀರುತುಂಬುತ್ತಿದ್ದವರಿಗೆ ವಿವಿಧ ಬಗೆಯ ದತ್ತಿಗಳನ್ನು ನೀಡುತ್ತಿದ್ದರು. ಚಪ್ಪಲದೇವಿಕೆರೆ, ಬಾವಿ, ದೇಗುಲಗಳಲ್ಲದೆ ಅರವೆಯನ್ನು ಮಾಡಿಸಿದಳು. ಅಯ್ಯಪ್ಪದೇವ ತುಡಿಕೆಯನ್ನು ಅನಂದರೆ ಸಣ್ಣ ತೋಟ ಅಥವಾ ಹೂದೋಟವನ್ನು ಬೆಳೆಸಿ ಧರ್ಮಾರ್ಥವಾಗಿ ಬಿಟ್ಟನು. ರಾಮನ್ಯ ಮಹಿಳೆ ಮುದ್ದಲದೇವಿ ಅಗ್ಗಿಷ್ಟಿಗೆಯನ್ನು ನೋಡಿಕೊಳ್ಳಲು ಶಿವಪುರ ಅಗ್ರಹಾರದಲ್ಲಿ ನೀರು ಮಹಾಜನರ ಕೈಯಲ್ಲಿ ೬ ಗದ್ಯಾಣಗಳನ್ನು ಇಟ್ಟಳು. ಉದ್ಯಾನವೊಂದರಲ್ಲಿ ನಾಣಿಮಯ್ಯ ಅರವಟ್ಟಿಗೆಯನ್ನು ಇಡಿಸಿದನು. ತಾಳಗುಂದದ ಅಗ್ರಹಾರದಲ್ಲಿ ನೀರು ತುಂಬುತ್ತಿದ್ದ ಮಾಣಿಗೆ ದಾನಗಳನ್ನು ಕೊಡಲಾಗಿದ್ದಿತು. ನಾಣಿಮಯ್ಯನಾಯಕನು ತನ್ನ ತಂದೆಯ ಪುಣ್ಯಕ್ಕಾಗಿ ಒಂದು ಅರವಟ್ಟಿಗೆಗೆ ೫ ಗದ್ಯಾಣಗಳನ್ನು ಕೊಟ್ಟರೆ, ಮಾದಬ್ಬೆ ತನ್ನ ನೆಲದ ಒಂದುಭಾಗವನ್ನೇ ದಾನ ಮಾಡಿದಳು ಎಂಬುದಾಗಿ ಶಾಸನಗಳು ಇಂತಹ ಸಾರ್ವಜನಿಕ ಸೇವಾಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಉದಾರಿಗಳನ್ನು ಬಣ್ಣಿಸಿವೆ.
ಕರ್ನಾಟಕ ಸಮಾಜದ ಸದಸ್ಯರು ದೇಗುಲ, ಬಸದಿಗಳ ನಿರ್ಮಾಣಕಾರ್ಯದಲ್ಲೂ ಬಹು ಶ್ರದ್ದೆಯನ್ನು ವಹಿಸಿದ್ದರು. ನ್ಯಾಯವಾದ ರೀತಿಯಲ್ಲಿ ಹಣಗಳಿಸಿ ದಾನ ಮಾಡಬೇಕು ಅಥವಾ ಅದನ್ನು ಬಳಸಿ ದೇವಾಲಯಗಳನ್ನು ಕಟ್ಟಿ ದಾನ ಧರ್ಮಗಳನ್ನು ಮಾಡಿ ಪುಣ್ಯಸಂಪಾದನೆ ಮಾಡಿಕೊಳ್ಳಬೇಕು ಎಂಬುದು ಅವರ ಆದರ್ಶವಾಗಿದ್ದಿತು. ಅವರು ಅನೇಕ ದೇಗುಲ ಹಾಗೂ ಬಸದಿಗಳನ್ನು ಕಟ್ಟಿಸಿರುವ ವಿವರಗಳು ಶಾಸನಗಳಲ್ಲಿ ವಿಫುಲವಾಗಿವೆ. ದೇವಾಲಯಗಳನ್ನು ಸ್ಥಾಪಿಸಿ, ಅಲ್ಲಿ ತಮ್ಮ ಹೆಸರನ್ನೇ ಹೊಂದಿರುವ ಶಿವ, ವಿಷ್ಣು, ದೇವರ ಪ್ರತಿಮೆಗಳನ್ನು ಪ್ರತಿಷ್ಟೆ ಮಾಡುತ್ತಿದ್ದ ಪದ್ದತಿ ಇದ್ದಿತು. ಹಬ್ಬೆಯ ನಾಯಕ ಪ್ರತಿಷ್ಟಾಪಿಸಿದ ದೇವರು ಹೆಬ್ಬೇಶ್ವರ. ಲೋಕಮಹಾದೇವಿ ನಿರ್ಮಿಸಿದ ದೇವಸ್ಥಾನ ಲೋಕೇಶ್ವರ ಭಟ್ಟಾರಕ. ವಿವಿಧ ವೃತ್ತಿಗಳವರು ಹಾಗೂ ಸಾಮಾನ್ಯ ಸ್ತ್ರೀಯರೂ ಸಹ ದೇವಾಲಯಗಳನ್ನು ಕಟ್ಟಿದರು ಎಂಬುದು ಗಮನಾರ್ಹವಾದುದು. ಕುಂಭೇಶ್ವರ ದೇವರ ಪ್ರತಿಷ್ಟಾಪಕ ಕುಂಬಾರ ಬಮ್ಮಣ್ಣ. ರೆಬ್ಬಲದೇವಿ ತನ್ನ ಜನ್ಮಸ್ಥಳ ಪೂವಿನ ಪೊಸವಂದಗಿಲೆ ಎಂಬಲ್ಲಿ ಕೇಶವ ದೇವರ ದೇಗುಲವನ್ನು ಸ್ತಾಪಿಸಿದಳು.
ಚಟ್ಟಲದೇವಿ ನಿರ್ಮಿಸಿದ್ದ ಹಲವಾರು ಜಿನಾಲಯಗಳಲ್ಲಿ ಅತ್ಯಂತ ಸುಂದರವಾಗಿದ್ದುದು ಊರ್ವಿತಿಲಕಂ ಎಂಬ ಪಂಚಕೂಟ ಅಥವಾ ಪಂಚಬಸದಿ. ಸಾಂತಿಯಕ್ಕ ಉದ್ಧರೆಯ ಬಸದಿಯ ನಿರ್ಮಾಪಕಳು ಮತ್ತು ಕಡೂತಿಯಲ್ಲಿ ಕಂಬದಯ್ಯ ಹಾಗೂ ಗೋಪಾಲಕೃಷ್ಣದೇವರ ಆಲಯಗಳ ಸ್ಥಾಪನೆಗೆ ಕಾರಣಳಾಗಿದ್ದವಳು. ಜಿರ್ಲೆಮಲ್ಲಮ್ಮ. ಕೆಲವರು ದೇಗುಲ, ಬಸದಿಗಳ ಒಂದೊಂದು ಭಾಗವನ್ನು ಕಟ್ಟಿರುವುದಾಗಿ ಶಾಸನಗಳು ಹೇಳುತ್ತವೆ. ಇಂತಹ ಪವಿತ್ರಾಲಯಗಳು ಸಾರೋದ್ಧಾರವಾಗಿ ಊರ್ಜಿತವಾಗಿರಬೇಕೆಂಬ ಉದ್ದೇಶದಿಂದ ಎಲ್ಲಾ ವೃತ್ತಿಯವರು ಹಾಗೂ ಎಲ್ಲಾ ಸಾಮಾಜಿಕ ಸ್ತರಗಳ ಸದಸ್ಯರು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ದೇವರ ಧೂಪ, ದೀಪ, ನೈವೇದ್ಯ, ಗಂಧ, ನೃತ್ಯೋಪಹಾರ, ಅರಂಗರಂಗಭೋಗ, ಎಲ್ಲಾಬಗೆಯ ಉತ್ಸವ ಇತ್ಯಾದಿಗಳಿಗಾಗಿ ವೈವಿದ್ಯಮಯ ದಾನ ದತ್ತಿಗಳನ್ನು ಅರ್ಪಿಸಿರುವುದು ಶಾಸನಗಳಲ್ಲಿ ಸವಿಸ್ತರವಾಗಿ ವಿಶದೀಕರಿಸಲಾಗಿದೆ.
ಹೀಗೆ ದೇವಾಲಯ, ಬಸದಿಗಳು ಒಂದು ಬಹು ಪ್ರಭಾವಶಾಲಿಯಾಗಿದ್ದ ಧಾರ್ಮಿಕಸಾಮಾಜಿಕ ಸಂಸ್ಥೆಗಳಾಗಿ ಸಮಾಜ ಜೀವನ ಸ್ಥಿರತೆ ಹಾಗೂ ಗತಿಶೀಲತೆಯನ್ನು ಕಾಪಾಡಿಕೊಂಡು ಬಂದವು. ಪ್ರತಿ ಪವಿತ್ರಾಲಯವೂ ಒಂದು ನ್ಯಾಯ ಸ್ಥಾನವೂ, ಒಂದು ವಿದ್ಯಾಲಯವೂ, ನೈತಿಕಆಧ್ಯಾತ್ಮಿಕ ಶಿಕ್ಷಣ ಕೇಂದ್ರವೂ, ಮನರಂಜನಾ ಸಂಸ್ಥೆಯೂ, ಪೂಜಾರಿ, ದೇವದಾಸಿ ಮುಂತಾಗಿ  ವಿವಿಧ ಕಾರ್ಯಕರ್ತರಿಂದ ಕೂಡಿದ ಒಂದು ಬಗೆಯ ಅಕಾರ ಶಾಹಿ ರಚನೆಯೂ, ಜನರಿಗೆ, ಮುಖ್ಯವಾಗಿ ರೈತರಿಗೆ ಬೇಕಾದ ಧನಸಹಾಯ ಮಾಡುತ್ತಿದ್ದ ಬ್ಯಾಂಕೂ ಆಗಿ, ಹೀಗೆ ಸರ್ವೋದ್ದೇಶ ಗತಿಶೀಲ ಸಂಸ್ಥೆಯಾಗಿ ಜನರಿಗೆ ತಕ್ಕ ಮಾರ್ಗದರ್ಶನವನ್ನು ನೀಡುತ್ತಿದ್ದಿತು.
ದೇವಾಲಯದೊಂದಿಗೆ ಕೈಜೋಡಿಸಿ ಅಗ್ರಹಾರ, ಬ್ರಹ್ಮ ಪುರಿ, ಮಠಗಳು ವಿದ್ಯಾಪ್ರಸಾರದ ಕಾರ್ಯವನ್ನು ಮಾಡುತ್ತಿದ್ದವು. ರಾಜರುಗಳ ಹಾಗೂ ಇತರ ಅಕಾರಿಗಳು ಊರು ಹಾಗೂ ಗ್ರಾಮಗಳನ್ನು ಅಗ್ರಹಾರಗಳನ್ನಾಗಿಸಿ ಘನಪಂಡಿತರಾಗಿದ್ದ ಬ್ರಾಹ್ಮಣರನ್ನು ಕರೆಯಿಸಿ ದಾನ ಮಾಡುತ್ತಿದ್ದರು. ಈ ಮಹಾಜನಗಳು ವೈದಿಕ ಸಂಪ್ರದಾಯದ ವಿದ್ಯಾಕೇಂದ್ರಗಳಾಗಿದ್ದ ಅಗ್ರಹಾರಗಳಲ್ಲಿದ್ದುಕೊಂಡು ವಿದ್ಯಾದಾನವನ್ನು ಮಾಡುತ್ತಿದ್ದರು. ನಗರಗಳಲ್ಲಿ ಬ್ರಾಹ್ಮಣರು ಇರುತ್ತಿದ್ದ ಭಾಗಗಳೇ ಬ್ರಹ್ಮಪುರಿಗಳು.   ಶಿಕ್ಷಣ ಕೇಂದ್ರವಾಗಿದ್ದ ಮಠಗಳಲ್ಲಿ ಬಹು ಪ್ರಭಾವ ಶಾಲಿಯಾಗಿದ್ದುದೇ ಬಳ್ಳಿಗಾವೆಯ ಕೋಠಿಯ ಮಠ ಅಥವಾ ಕೇದಾರೇಶ್ವರ ಮಠ ಅಲ್ಲಿದ್ದ ಗುರುಗಳೆಲ್ಲರೂ ಬಹು ಆಳವಾದ  ಪಾಂಡಿತ್ಯವನ್ನು ಹೊಂದಿದ್ದರು, ಅಲ್ಲಿ ಎಲ್ಲಾ ವಿಷಯಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದ್ದಿತು. ಮತ್ತು ನಾನಾಭಾಗಗಳಿಂದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ ಆ ಮಠ ಸನ್ಯಾಸಿ, ಬಿಕ್ಷುಕ, ರೋಗಿ, ಕಲಾವಿದ ಮೊದಲಾದವರಿಗೆ ಆಶ್ರಯ ತಾಣವೂ ಆಗಿದ್ದಿತು. ಹೀಗೆ ಅದು ಕೇವಲ ಶಿಕ್ಷಣ ಕೇಂದ್ರ ಮಾತ್ರವಾಗಿರದೆ ನಿಜವಾದ ಸಾಮಾಜಿಕ ಸಂಸ್ಥೆಯೂ  ಆಗಿದ್ದಿತು. ದೊರೆಗಳಲ್ಲದ ಸಮಾಜದ ಇತರ ಸದಸ್ಯರೂ ಸಹ ವಿದ್ಯಾಕೇಂದ್ರ, ಅಧ್ಯಾಪಕವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಉದಾರವಾಗಿ ದಾನಗಳನ್ನು ನೀಡಿರುವುದನ್ನು ಶಾಸನಗಳು ಉಲ್ಲೇಖಿಸಿವೆ. ಕೇಶವ ದಂಡನಾಯಕನು ತಾಳಗುಂದ ಅಗ್ರಹಾರದಲ್ಲಿ ವೇದಗಳ ವೇದಗಳ ಅಧ್ಯಾಪನಕ್ಕಾಗಿ ಬಯಲನ್ನು ದಾನಮಾಡಿದನಲ್ಲದೆ, ವಿದ್ಯಾರ್ಥಿಗಳ ವಸ್ತ್ರ, ಊಟ, ಅಭ್ಯಂಜನಕ್ಕಾಗಿಯೂ ಬಾಲಶಿಕ್ಷಣಶಾಸ್ತ್ರದವರಿಗೆ ಹಾಗೂ ಕನ್ನಡ ಉಪಾಧ್ಯಾಯನಿಗೆ ದತ್ತಿಗಳನ್ನು ಬಿಟ್ಟುಕೊಟ್ಟನು. ಸ್ತ್ರೀ ವಿದ್ಯಾಭ್ಯಾಸದ ಬಗ್ಗೆ ಶಾಸನಗಳು ಹೇಳಿಕೊಳ್ಳುವಂತಹ ಮಾಹಿತಿಗಳನ್ನು ಒಳಗೊಂಡಿಲ್ಲ ಎಂಬುದು ಸ್ವಲ್ಪ ನಿರಾಸೆಯನ್ನು ಉಂಟುಮಾಡುತ್ತದೆ. ಆದರೂ ಮಹಿಳೆಯರು ಶಿಕ್ಷಣದ ಮಹತ್ವವನ್ನು ಅರಿತಿದ್ದರು. ಆದ್ದರಿಂದ ಉಪಾಧ್ಯಾಯ, ವಿದ್ಯಾರ್ಥಿ ಹಾಗೂ ವಿದ್ಯಾಲಯಗಳಿಗೆ ದಾನಗಳನ್ನು ನೀಡಿದ್ದರು ಎಂಬುದು ಸಮಾಧಾನಕರವಾದ ವಿಷಯವಾಗಿದೆ. ರಾಣಿ ಲಕ್ಷ್ಮಿದೇವಿ ಅಚಲೇಶ್ವರ ದೇಗುಲಕ್ಕೆ ಪಾಂಗಿರಿ ಹಳ್ಳಿಯನ್ನು ದಾನಮಾಡಿ ಅದರ ಆದಾಯವನ್ನು ಋಷಿಗಳ ಆಹಾರ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬಳಸುವಂತೆ ಮಾಡಿದ್ದಳು. ಬನದವೆ ಹೆಗ್ಗಡತಿ ಹಾಗೂ ಶೃಂಗಾರಮ್ಮ ಅಗ್ರಹಾರಗಳನ್ನು ಸ್ಥಾಪಿಸಿದ್ದರೆ, ಧರ್ಮವ್ವೆ ಎಂಬ ಮಹಿಳೆ ಶಾಸ್ತ್ರ ಉಪಾಧ್ಯಾಯರಿಗೆ ಹಾಗೂ ಪುರಾಣ ಓದುತ್ತಿದ್ದ ಪಂಡಿತರಿಗೆ ಭೂದಾನ ಮಾಡಿದಳು. ಹೀಗೆ ಸ್ತ್ರೀಯರು ಸಹ ವಿದ್ಯಾಪೋಷಕರಾಗಿದ್ದರು.
ಸಮಾಜದ ವಿವಿಧ ರಂಗಗಳಲ್ಲಿ ಭಾಗವಹಿಸಲು ಸ್ತ್ರೀಯರಿಗಿದ್ದ ಅವಕಾಶಗಳ ಬಗ್ಗೆ ಶಾಸನಗಳಲ್ಲಿ ವಿವರಣೆಗಳಿವೆ. ತಾಯಿಗೆ ಇಲ್ಲೂ ಪೂಜನೀಯ ಸ್ಥಾನವಿದ್ದಿತು. ತಾಯಿಗಾಗಿ ಪುತ್ರಪುತ್ರಿಯರು ದೇವಾಲಯ, ಬಸದಿ, ಕೆರೆ, ಅಗ್ರಹಾರಗಳನ್ನು ಸ್ಥಾಪಿಸಿದ ಹಾಗೂ ದಾನ ಧರ್ಮಗಳನ್ನು ಮಾಡಿದ ನಿದರ್ಶನಗಳನ್ನು ಶಾಸನಗಳು ಎತ್ತಿ ತೋರಿವೆ. ರಾಜಮಾತೆಯರಲ್ಲದೆ, ಇತರ ತಾಯಂದಿರೂ ಸಹ ತಮ್ಮ ಮಕ್ಕಳಿಗಾಗಿ ಪವಿತ್ರಾಲಗಳನ್ನು ಕಟ್ಟಿಸಿದ್ದರು, ಕೆರೆ,ಬಾವಿಗಳನ್ನು ತೋಡಿಸಿದ್ದರು, ವೀರಗಲ್ಲುಗಳನ್ನು ನೆಡಿಸಿ ದಾನಗಳನ್ನು ಕೊಟ್ಟಿದ್ದರು ಧಾರ್ಮಿಕಕ್ಷೇತ್ರದಲ್ಲಿ ಪಾಲ್ಗೊಳ್ಳಲು ಸ್ತ್ರೀಯರಿಗೆ ಪೂರ್ಣಾವಕಾಶವಿದ್ದಿತು. ಕುಂಕುಮ ಮಹಾದೇವಿ, ಚಾಗಲದೇವಿಯಂತಹ ರಾಣಿಯರೂ, ಹೆಗ್ಗಡಿತಿಚಂದವ್ವೆ, ಸೆಟ್ಟಿತಿ ಗುಂಡಬ್ಬೆ, ದಂಡನಾಯಕಿತಿ ಸಾತವ್ವೆ, ಸಾಧಾರಣ ಸ್ತ್ರೀಯರಾಗಿದ್ದ ಬಿಜವ್ವೆ, ಸೋಮವ್ವೆ, ಮೊದಲಾದವರು ಬಸದಿ, ಶಿವ, ವಿಷ್ಣು ದೇವಸ್ಥಾನಗಳನ್ನು ನಿರ್ಮಿಸಿದರು ಮತ್ತು ಸಾಮಾನ್ಯ ಮಹಿಳೆಯರಾಗಿದ್ದ ಪೋಲಲಬ್ಬೆ, ಗೊಮಬ್ಬೆ, ಬ್ರಾಹ್ಮಣಿ ಸೋರಿಕವ್ವೆ, ಅಯೋಧ್ಯಕ್ಕೆ ಮೊದಲಾದವರು ಮತ್ತು ಬಳಿಕವ್ವೆಗೌಡಿ, ಜಕ್ಕವ್ವೆದಂಡನಾಯಕಿತ್ತಿ, ರಾಜಕುವರಿ ಸುಗ್ಗಲದೇವಿ, ರಾಣಿ ಮೇಚಲದೇವಿ ಮೊದಲಾದ ಸಮಾಜದ ಮೇಲಿನ ಸ್ತರದವರೂ ಪವಿತ್ರಾಲಯಗಳಿಗೆ ಮತ್ತು ದೇವರುಗಳ ವಿವಿಧ ಬಗೆಯ ಸೇವೆಗಳಿಗಾಗಿ ಗ್ರಾಮ, ಹೊಲ, ಗದ್ದೆ, ತೋಟ, ತುಡಿಕೆ, ಗದ್ಯಾಣ, ಎಣ್ಣೆ, ತುಪ್ಪ, ವೀಳೆಯದೆಲೆ, ಅಡಿಕೆ, ದೀಪದ ಕಂಬ ಮುಂತಾದ ಬಗೆಬಗೆಯ ದಾನಗಳನ್ನು ಅರ್ಪಿಸಿದ್ದರು ಎಂಬುದನ್ನು ಶಾಸನಗಳು ಬಣ್ಣಿಸಿವೆ.
ಜೊತೆಗೆ ತಮ್ಮ ಧರ್ಮಗಳ ಕ್ರಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಒಂದು ಆರೋಗ್ಯಕರ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವುದಕ್ಕೆ ಸ್ತ್ರೀಯರು ಬಹುಮಟ್ಟಿಗೆ ಕಾರಣರಾಗಿದ್ದರು. ತಾಯಿಯಾಗಿ, ಪುತ್ರಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಸಾರ್ವಜನಿಕ ಸೇವಾಕಾರ್ಯಗಳಲ್ಲೂ ಪಲ್ಗೊಳ್ಳುತ್ತಿದ್ದರು ಎಂಬುದಾಗಿ ಶಾಸನಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿದೆ. ಇಂತಹ ಮಹಿಳೆಯರಲ್ಲಿ ಅಗ್ರಗಣ್ಯರಾಗಿದ್ದವರು ಹಿರಿಯ ಚಾಲುಕ್ಯ ಅಕಾರಿ ಮಲ್ಲಪ್ಪಯ್ಯ ಮಗಳು ಹಾಗೂ ಚಾಳುಕ್ಯ ಚಮಾಪತಿ ನಾಗದೇವನ ಪತ್ನಿ ಅತ್ತಿಮಬ್ಬೆ ಮತ್ತು ಹೊಯ್ಸಳ ಪ್ರಭು ವಿಷ್ಣುವರ್ಧನನ ರಾಣಿ ಶಾಂತಲೆ.ತನ್ನ ಗಂಡ ಮೃತ್ಯುವಶನಾದಾಗ ತನ್ನ ತಂಗಿಯೂ, ಸವತಿಯೂ ಆಗಿದ್ದ ಗುಂಡಬ್ಬೆ ಸತಿಯಾದಾಗ, ಪುತ್ರ ಅಣ್ಣಿಗ ದೇವನಿಗಾಗಿ ಸಾಯದೆ  ಉಳಿದ ಅತ್ತಿಮಬ್ಬೆ ಜೈನ ಧರ್ಮಾವಲಂಬಿಯಾಗಿ ಉಗ್ರದೀಕ್ಷೆ ವಹಿಸಿದ್ದ ತಪಸ್ವಿನಿ. ಅವಳು ಜೈನ ಧರ್ಮಕ್ಕೆ ಮಾಡಿದ ಸೇವೆ ಸ್ತುತ್ಯರ್ಹವಾದುದು.
ಅವಳು ರನ್ನನಿಂದ ಅಜಿತ ಪುರಾಣ ಪ್ರವಚನ ಮಾಡಿಸಿದಳು. ಮಣಿಕನಕ ಅಲಂಕೃತ ಸಾವಿರದ ಐನೂರು ಜಿನಪ್ರತಿಗಳನ್ನು ಮಾಡಿಸಿ ದಾನ ಮಾಡಿದಳು ಪೊನ್ನನ ಶಾಂತಿಪುರಾಣದ ಸಾವಿರ ಪ್ರತಿಗಳನ್ನು ಸಿದ್ಧಪಡಿಸಿ ಹಂಚಿ ಶಾಸ್ತ್ರ ದಾನ ಮಾಡಿದಳು. ಲಕ್ಕುಂಡಿಯಲ್ಲಿ ಒಂದು ಸುಂದರವಾದ ಬಸದಿಯನ್ನು ಮಾಡಿಸಿದಳು. ಅವಳ ತಪಸ್ಸು, ಕಠೋರ ನಿಯಮಾನುಸರಣೆ,ತ್ಯಾಗ, ಔದಾರ್ಯವನ್ನು ಶಾಸನಗಳು ಕೊಂಡಾಡಿವೆ ಹಾಗೂ ಅವಳ ಅನೇಕ ಪವಾಡಗಳನ್ನು ವಿವರಿಸಿವೆ.
ಇನ್ನೊಬ್ಬ ಮಹಾಸಾದ್ವಿ ಶಾಂತಲೆ ಶಿವಭಕ್ತ ಮಾರಸಿಂಗಮಯ್ಯ ಮತ್ತು ಜಿನ ಭಕ್ತೆ ಮಾಚಿಕಟ್ಟೆಯ ಪ್ರೀತಿಯ ಕುವರಿ ಹಾಗೂ ಹೊಯ್ಸಳ ವಿಷ್ಣುವರ್ಧನ ಪ್ರಿಯ ಪಟ್ಟದ ಅರಸಿ ಅವಳು ಸೌಂದರ್ಯ ಸಿರಿ ಮೊತ್ತವಲ್ಲದೆ, ಅತ್ಯುತ್ತಮ ಕಲಾಶ್ರೀಮಂತಳೂ ಆಗಿದ್ದಳು.ಅವಳ ದಾಂಪತ್ಯ ಆದರ್ಶದ ಗೌರಿಶಂಕರವಾಗಿದ್ದಿತು.
ಶ್ರವಣಬೆಳಗೊಳದಲ್ಲಿ ಗಂಗವಾರಣ ಬಸದಿಯನ್ನು ಮತ್ತು ಕಪ್ಪೆಚೆನ್ನಿಗರಾಯ ದೇಗುಲವನ್ನು ಕಟ್ಟಿಸಿದ ಅವಳು ಸನ್ಯಸನ ವ್ರತದಿಂದ ಮೃತ್ಯುವನ್ನಪ್ಪಿ ದೈಹಿಕವಾಗಿ ಕಣ್ಮರೆಯಾದಳು, ಆದರೆ ಶಾಶ್ವತ ಕೀರ್ತಿಗೆ ಪಾತ್ರಳಾದಳು, ಹೀಗೆ ಕರ್ನಾಟಕದ ಸಮಾಜವೆಂಬ ತೋಟದಲ್ಲಿ ಶಾಂತಲೆ ದೈವಿಕ ಪುಷ್ಪವಾಗಿದ್ದರೆ, ಅತ್ತಿಮಬ್ಬೆ ಅಮೃತಫಲ.
ಸ್ತ್ರೀಯರೂ ಆಡಳಿತ ಚುಕ್ಕಾಣಿಯನ್ನು ಹಿಡಿದು ಸಮರ್ಪಕವಾಗಿ ನಡೆಸಿದರು ಎಂಬುದನ್ನು ಶಾಸನಗಳು ವಿವರವಾಗಿ ತಿಳಿಸಿವೆ. ಕಂಚಿಕಬ್ಬೆ ಅಕ್ಕಾದೇವಿ, ಜೋಗಲಾದೇವಿ, ನಾಳ, ಗೌವಂಡಿ, ಜಕ್ಕಿಯಬ್ಬೆ, ಹಿರಿಯೂರಿನ ಕುಂಜೇಶ್ವರ ದೇಗುಲದ ಯಜಮಾನಿ ಚಂದವ್ವೆ ಮೊದಲಾದವರ ಬಗ್ಗೆ ಶಾಸನಗಳಲ್ಲಿ ಸವಿಸ್ತರವಾದ ವರ್ಣನೆಗಳಿವೆ.
ಇಷ್ಟು ಮಾತ್ರವಲ್ಲದೆ ಹಲವರು ಶಾಸನಗಳಲ್ಲಿ ದೇವದಾಸಿಯರ ಉಲ್ಲೇಖಗಳೂ ಇವೆ. ಕನ್ಯೆಯರನ್ನು ದೇವಾಲಯಗಳಿಗೆ ದಾನಮಾಡಿದರೆ ಪುಣ್ಯಬರುತ್ತದೆ ಎಂಬ ನಂಬಿಕೆಇದ್ದಿತು. ಇಂತಹ ಕನ್ಯೆಯರು ದೇಗುಲಗಳಲ್ಲಿ ಬಸದಿಗಳಲ್ಲಿ ಹಲವಾರು ಸೇವಾಕಾರ್ಯಗಳನ್ನು ಮಾಡುತ್ತಿದ್ದರು. ಅವರಿಗಾಗಿ ರಾಜರಲ್ಲದೆ, ಅಕಾರಿ, ಪುರೋಹಿತ, ಬ್ರಾಹ್ಮಣ, ಸಾಮಾನ್ಯ ಸ್ತ್ರೀ ಪುರುಷರಾದಿಯಾಗಿ ವಿವಿಧ ದಾನಗಳನ್ನು ಕೊಡುತ್ತಿದ್ದರು. ಚಳವ್ವೆ, ಚಾವುಂಡಬ್ಬೆ, ಮಾಲವ್ವೆ, ಲಕ್ಕವ್ವೆ, ಕಲ್ಲವ್ವೆ, ಮೊದಲಾದ ದೇವದಾಸಿಯರು ದೇಗುಲದೇವರುಗಳಿಗೆ ದಾನಧರ್ಮಳನ್ನು ಅರ್ಪಿಸುತ್ತಿದ್ದರಲ್ಲದೆ, ಪವಿತ್ರಾಲಯಗಳನ್ನೂ ಕಟ್ಟಿಸುತ್ತಿದ್ದರು. ಅವರ ಈ ಧರ್ಮಗಳನ್ನು ಸಮಾಜ ಒಪ್ಪಿ ಆದರಿಸುತ್ತಿದ್ದಿತು ಹೀಗೆ ಶಾಸನಗಳಲ್ಲಿ ದೇವದಾಸಿಯರನ್ನು ಗೌರವದಿಂದ ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಸಮಾಜದಲ್ಲಿ ಸ್ತ್ರೀಯರಿಗೆ ವಿವಿಧ ರಂಗಗಳಲ್ಲಿ ಪಾಲ್ಗೊಂಡು ತಮ್ಮ ಕೊಡುಗೆಗಳನ್ನು ಕೊಡುವುದಕ್ಕೆ ಸಾಕಷ್ಟು ಅವಕಾಶಗಳಿದ್ದವು. ಮತ್ತು ಹೆಚ್ಚುಕಡಿಮೆ ಗೌರವಯುತ ಸ್ಥಾನವಿದ್ದಿತು ಎಂಬುದಾಗಿ ಹೇಳಬಹುದು.
ಸಮಾಜದಲ್ಲಿ ಲಭ್ಯವಿದ್ದ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸರಕುಸೇವೆಗಳ ಮೇಲಿನ ಅಕಾರ ಹಾಗೂ ವಿಬಿನ್ನ ಹಂಚಿಕೆಯ ಮತ್ತು ವೃತ್ತಿಗಳ ದೃಷ್ಟಿಕೋನದಿಂದ ವಿವಿಧ ಜಾತಿ/ವರ್ಗಗಳನ್ನು ಗುರುತಿಸಬಹುದು. ವೇದಸಮಾಜದ ರೀತಿನೀತಿಗಳ ಪ್ರಭಾವ ಇಲ್ಲೂ ಹೆಚ್ಚಾಗಿದ್ದಿತೆನ್ನಬಹುದು. ಆದ್ದರಿಂದ ಬ್ರಾಹ್ಮಣರಿಗೆ ಇಲ್ಲೂ ಉನ್ನತ ಸ್ಥಾನ, ಗೌರವಗಳಿದ್ದವು. ಅವರಿಗೆ ವಿದ್ಯಾರಂಗದಲ್ಲಿ ಮಾತ್ರವಲ್ಲದೆ ರಾಜಕೀಯ ಹಾಗೂ ಸಾಮಜಿಕ ಕ್ಷೇತ್ರಗಳಲ್ಲೂ ಅಗ್ರಸ್ಥಾನವಿದ್ದಿತು ಅವರಿಗೆ ದಾನ ಕೊಟ್ಟರೆ ಪುಣ್ಯಲಬಿಸುತ್ತದೆ ಎಂಬ ನಂಬಿಕೆ ಬಲವಾಗಿದ್ದರಿಂದ ರಾಜರುಗಳಲ್ಲದೆ, ಸಮಾಜದ ಎಲ್ಲಾ ಸ್ಥರಗಳ ಸದಸ್ಯರು ಅವರಿಗೆ ನಾನಾ ವಿಧವಾದ ದಾನದತ್ತಿಗಳನ್ನು ನೀಡುತ್ತಿದ್ದರು. ಅವರು ಷಟ್ಕರ್ಮ(ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ, ಪ್ರತಿಗ್ರಹ) ನಿರತರು, ಘನಪಂಡಿತರು ಎಂಬುದಾಗಿ ಶಾಸನಗಳು ಕೊಂಡಾಡಿವೆ. ಅವರು ಸಮಾಜದ ವಿದ್ಯಾವಿಯ ರಕ್ಷಕರೂ, ಪೋಷಕರೂ ಆಗಿದ್ದರು. ಎಲ್ಲರ ಗೌರವಕ್ಕೆ ಪಾತ್ರರಾಗಿ ಇತರ ಧರ್ಮಗಳನ್ನು ಆದರಿಸಿ, ದೊಡ್ಡತನ ತೋರಿ ಮೆರೆದಿದ್ದರು ಎಂಬುದಾಗಿ ಹಲವು ಶಾಸನಗಳು ವರ್ಣಿಸಿವೆ. ಉನ್ನತ ವರ್ಗಕ್ಕೆ ಸೇರಿದ್ದವರು ಆಳುವ ಪ್ರಭುಗಳು, ಅವರ ಪರಿವಾರ ಹಾಗೂ ಅಕಾರಿಗಳು ಮತ್ತು ವೈಶ್ಯರು.
ಸಾಮಾಜಿಕ ಸ್ತರ ವಿನ್ಯಾಸದಲ್ಲಿ ಮುಖ್ಯವಾಗಿದ್ದ ಇತರ ವೃತ್ತಿಪರ ವಿಭಾಗಗಳನ್ನು ಶಾಸನಗಳು ಹೆಸರಿಸಿವೆ. ವಾಸ್ತುವಿದ್ಯೆ, ಶಿಲ್ಪವಿದ್ಯೆ, ಕಾಂಸವಿದ್ಯೆ(ಲೋಹ ವಿಗ್ರಹಗಳ ಮೇಲೆ ಕೆತ್ತನೆ ಕೆಲಸ), ಪತ್ರಚ್ಛೇದ ಹಾಗೂ ಚಿತ್ರಕಲೆಯಲ್ಲಿ ಪ್ರವೀಣರಾಗಿದ್ದ ಮತ್ತು ತಮ್ಮನ್ನು ಸರಸ್ವತಿ ಗಣ ದಾಸಿ ಅಥವಾ ಗಣಮಿತ್ರಿ ಹಾಗೂ ಕಲ್ಕುಟಿಗರೆಂಬುದಾಗಿ ಕರೆದುಕೊಂಡು ಶಾಸನಗಳನ್ನು ಕೆತ್ತುತ್ತಿದ್ದ ಶಿಲ್ಪಿಗಳು, ಇದೇವರ್ಗಕ್ಕೆ ಸೇರಿದ್ದ ಕಬ್ಬಿಣದ ಕೆಲಸದ ಕಮ್ಮಾರ, ಚಿನ್ನದ ಕಾಯಕದ ಅಕ್ಕಸಾಲಿ, ಮರದ ಕೆಲಸದ ಬಡಗಿ, ಹಾಗೂ ಕಂಚಿನ ಕಾಯಕದ ಕಂಚುಗಾರ, ಬಟ್ಟೆಗಳನ್ನು ಶುಭ್ರಗೊಳಿಸುತ್ತಿದ್ದ ಅಗಸ, ಕ್ಷೌರದ ಕೆಲಸದ ನಾವಿದ, ಬಟ್ಟೆಗಳನ್ನು ನೇಯುತ್ತಿದ್ದ ಜೇಡ ಅಥವಾ ನೇಕಾರ, ರೇಷ್ಮೆ ವಸ್ತ್ರಗಳ ನೇಕಾರ ಪಟ್ಟಗಾರ, ವಸ್ತುಖಂಡಿತ ಶೃಂಗಾರ ವಿದ್ಯಾಪ್ರವೀಣ ಎಂಬ ಹೊಗಳಿಕೆಗೆ ಪಾತ್ರವಾಗಿ ಬಟ್ಟೆ ಹೊಲಿಯುತ್ತಿದ್ದ ಚಿಪ್ಪಿಗ, ಗಾಣದಿಂದ ಎಣ್ಣೆ ತೆಗೆದು ಮಾರುತ್ತಿದ್ದ ತೈಲಿಗ ಅಥವಾ ತೆಲ್ಲಿಗ, ಮಣ್ಣಿನ ಮಡಕೆ ಮಾಡುತ್ತಿದ್ದ ಕುಂಬಾರ, ಬಳೆಗಳನ್ನು ಮಾಡಿ ಮಾರುತ್ತಿದ್ದ ಬಳೆಗಾರ, ಬುಟ್ಟಿಗಳನ್ನು ಹೆಣೆದು ವಿಲೇವಾರಿ ಮಾಡಿತ್ತಿದ್ದ ಮೇದ, ವೀಳೆಯದೆಲೆಯನ್ನು ಬೆಳೆಸಿ ಮಾರಾಟ ಮಾಡುತ್ತಿದ್ದ ತಂಬುಲಿಗ, ಮೀನುಗಾರರು, ಚರ್ಮದ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದ ಚರ್ಮಕಾರ ಮುಂತಾದ ವೃತ್ತಿಪರ ಜಾತಿಗಳನ್ನು ಶಾಸನಗಳಲ್ಲಿ ಉಲ್ಲೇಖಿಸಿ ವಿವರಿಸಿವೆ. ಈ ಜಾತಿಗಳ ಸದಸ್ಯರು ಊರಿನ ಬೇರೆಬೇರೆ ಕೇರಿಗಳಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು, ಹೆಚ್ಚು ಕಡಿಮೆ ಎಲ್ಲಾ ಜಾತಿಗಳಲ್ಲಿ ಶ್ರೇಣಿಗಳಿದ್ದವು.
ಆ ಜಾತಿಗಳ ಸದಸ್ಯರು ಒಟ್ಟಾಗಿ ಅಥವಾ ಪ್ರತ್ಯೆಕವಾಗಿ ದೇಗುಲಗಳನ್ನು ಕಟ್ಟಿ, ತಮ್ಮ ವೃತ್ತಿಗಳಿಗೆ ಅನುಗುಣವಾಗಿ ಸೇವೆಗಳನ್ನು, ದಾನಗಳನ್ನು ಮಾಡಿದ್ದಾರೆ ಎಂಬುದು ಶಾಸನಗಳಲ್ಲಿ ಉಲ್ಲೇಖವಿದೆ. ಈ ಸ್ತರವಿನ್ಯಾಸದಲ್ಲಿ ಸದಸ್ಯರಿಗೆ ವೃತ್ತಿಗಳಿಗೆ ಸಂಬಂಸಿದ ನಿಯಮ ಬಹುಮಟ್ಟಿಗೆ ಕಟ್ಟುನಿಟ್ಟಾಗಿರಲಿಲ್ಲವೆಂದೆನಿಸುತ್ತದೆ. ಕಾರಣ ಬ್ರಾಹ್ಮಣರು ಬರೀ ಅಧ್ಯಾಪಕರು ಮಾತ್ರವಾಗಿರದೆ, ಶಸ್ತ್ರವಿದ್ಯಾಪರಿಣತರೂ ಆಗಿದ್ದರು, ಮಂತ್ರಿಗಳಾಗಿ ದಂಡಾಕಾರಿಗಳಾಗಿ ಸೇವೆಸಲ್ಲಿಸುತ್ತಿದ್ದರು. ಶಿಲ್ಪಿ ಮಾತ್ರವಲ್ಲದೆ ಅಕ್ಕಸಾಲಿ, ಬಡಗಿ, ಕಮ್ಮಾರ ಸಹ ಶಾಸನಗಳನ್ನು ಕೆತ್ತಬಹುದಾಗಿದ್ದಿತು. ಹೀಗೆ ಪರಸ್ಪರರ ವೃತ್ತಿಗಳನ್ನು ಮಾಡುವ ಅವಕಾಶವಿದ್ದಿತು ಎಂಬುದು ಸೂಚಿತವಾಗಿದೆ.
ಸಂಕ್ಷೇಪದಲ್ಲಿ ಮಧ್ಯಯುಗದ ಕರ್ನಾಟಕ ಸಮಾಜದಲ್ಲಿ ಆಳುವ ಸಂತತಿಗಳು ಹೆಚ್ಚಿನ ಅಡೆತಡೆಯಿಲ್ಲದೆ ಸುಗಮವಾಗಿ ನಡೆದುಕೊಂಡು ಹೋಗುತ್ತಿದ್ದವು, ಜನಜೀವನವಾಹಿನಿಯ ಹರಿವು ಸುಲಲಿತವಾಗಿ ಸಾಗುತ್ತಿದ್ದಿತು. ಇದಕ್ಕೆ ಈ ಮೌಲ್ಯಾಧಾರಿತ ಸಾಮಾಜಿಕ ಸಂಸ್ಥೆಗಳು ಬಹುಮಟ್ಟಿಗೆ ಕಾರಣವಾಗಿದ್ದವು ಎಂದರೆ ತಪ್ಪಾಗಲಾರದು.
ಚಿತ್ರಗಳು:
೧. ಕರ್ನಾಟಕದ ವೀರಗಲ್ಲುಗಳು  ಡಾ|| ಆರ್. ಶೇಷಶಾಸ್ತ್ರಿ.
೨. ಕರ್ನಾಟಕದ ಪರಂಪರೆ  ಸಂಪುಟ ೧  ಮೈಸೂರು ಸರ್ಕಾರ.
೩. ಕರ್ನಾಟಕದ ಯಾತ್ರೆ  ಜೀರಗೆ ಕಟ್ಟೆ ಬಸವಪ್ಪ.
೪. ತರಂಗ  ವಾರಪತ್ರಿಕೆ.

ಶಾಸನಗಳಲ್ಲಿ ಸಾಂಸ್ಕೃತಿಕ ಅಂಶಗಳು


ಸಂಸ್ಕೃತಿ ಮಾತಿಗೆ ಇಂದು ಇರುವ ಜನಪ್ರಿಯ ಗ್ರಹಿಕೆಯ ಅರ್ಥವು ಇತಿಹಾಸ ಸಂದರ್ಭದಲ್ಲಿ ಅದು ಬಳಕೆಯಾಗುವ ಅರ್ಥಕ್ಕಿಂತ ಭಿನ್ನವಾದುದು. ಸಾಮಾನ್ಯವಾಗಿ ಮನುಷ್ಯನ ವ್ಯವಹಾರಗಳಲ್ಲಿ ಪ್ರಿಯವಾದದ್ದು ಎಂದರೆ ಒಳ್ಳೆಯ ಮಾತು, ವಿನಯದ ನಡವಳಿಕೆ, ಔದಾರ್ಯ, ದಯಾಪರತೆ, ಕಲಾಪ್ರೇಮ ಇವು ಸಾಮಾನ್ಯವಾಗಿ ಸಂಸ್ಕೃತಿ ಎನ್ನಿಸಿಕೊಳ್ಳುತ್ತವೆ. ಆದರೆ ಮನುಷ್ಯನ ಇತಿಹಾಸದಲ್ಲಿ ಮನುಷ್ಯ ಹುಟ್ಟಿನಿಂದ ಸ್ವಾಭಾವಿಕವಾಗಿ ದತ್ತವಾದುವನ್ನು ಬಿಟ್ಟು ಉಳಿದಂತೆ ತನ್ನ ಅಸ್ತಿತ್ವಕ್ಕೆ ಅವನೇ ಸ್ವತಃ ರೂಪಿಸಿಕೊಂಡ ಎಲ್ಲವನ್ನೂ ಸಂಸ್ಕೃತಿ ಪದ ಒಳಗೊಳ್ಳುತ್ತದೆ. ಮನೆ ಕಟ್ಟುವುದು, ವ್ಯವಸಾಯ, ಭಾಷೆ, ಆಹಾರ, ಆಡಳಿತ ವಿಧಾನ, ಆರ್ಥಿಕವ್ಯವಸ್ಥೆ, ಸಾಮಾಜಿಕ ಸಂಬಂಧಗಳು, ಮತಧರ್ಮ, ಇತ್ಯಾದಿಗಳನ್ನು ಒಳಗೊಳ್ಳುವ ಅವನ ಬದುಕಿನ ಸಮಸ್ತವನ್ನೂ ಆ ಸವಿ ಒಳಗೊಳ್ಳುತ್ತದೆ. ಕೂಗುವುದನ್ನು ಅಥವಾ ಧ್ವನಿ ಹೊರಡಿಸುವುದನ್ನು ಮನುಷ್ಯನಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ. ಆದರೆ ಧ್ವನಿಗಳನ್ನು ಕೂಡಿಸಿ ಅವನು ಮಾಡಿ ಕೊಂಡಿರುವ, ಭಾಷೆಯು ಸಂಸ್ಕೃತಿಯ ಒಂದು ನಿದರ್ಶನ. ಹಸಿವಾದಾಗ ಸಿಕ್ಕಿದ್ದನ್ನು ತಿನ್ನುವುದು, ಆ ಆಹಾರದಲ್ಲಿ ಯಾವುದು ಸ್ವೀಕಾರಾರ್ಹ ಅಥವಾ ತ್ಯಾಜ್ಯ ಎಂಬಂತಹ ವಿ ನಿಷೇಧಗಳು ಸಂಸ್ಕೃತಿ. ಮೇಲ್ಕಂಡ ಎರಡು ಅರ್ಥಗಳಲ್ಲಿ ಮುಖ್ಯವಾಗಿ ಎರಡನೆಯದನ್ನಿಟ್ಟುಕೊಂಡು ಶಾಸನಗಳಲ್ಲಿ ಸಾಂಸ್ಕೃತಿಕ ಅಕಂಶಗಳು ಎಂಬುದನ್ನು ಕುರಿತು ವಿವೇಚನೆ ನಡೆಸಲಾಗುತ್ತದೆ.
ಕರ್ನಾಟಕದ ಚರಿತ್ರೆಯ ಆರಂಭದ ಬಗ್ಗೆ ನಾವು ಅವಲಂಬಿಸಲೇ ಬೇಕಾಗಿರುವ ದಾಖಲೆಗಳೆಂದರೆ ಕಲ್ಲಿನ ಮೇಲೆ ಕೆತ್ತಲಾಗಿರುವ ಶಿಲಾಶಾಸನಗಳು, ಕ್ರಿ.ಶ. ೩೫೦ ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಗ್ರಾಮದ ಮಯೂರ ಶರ್ಮ ಎಂಬ ಬ್ರಾಹ್ಮಣ ಯುವಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಮಿಳುನಾಡಿನ ಕಂಚಿಗೆ ಹೋದಾಗ ಅಲ್ಲಿನ ಪಲ್ಲವ ರಾಜಕುಮಾರರು ತಾವು ಕ್ಷತ್ರಿಯರೆಂದು ಬೀಗುತ್ತ ಬಡ ಬ್ರಾಹ್ಮಣನೆಂಬ ಕಾರಣಕ್ಕೆ ಅವನನ್ನು ಅವಮಾನಪಡಿಸಿದ್ದರಿಂದ ಕ್ರೋಧ ತಪ್ತನಾದ ಮಯೂರಶರ್ಮನು ಬ್ರಾಹ್ಮಣ್ಯ ಸೂಚಕ ಚಿಹ್ನೆಗಳನ್ನು ತ್ಯಜಿಸಿ ಶಸ್ತ್ರಗಳನ್ನು ಹಿಡಿದು ಸೈನ್ಯವನ್ನು ಕಟ್ಟಿ ಪಲ್ಲವರನ್ನು ಸೋಲಿಸಿ ಅವರಿಂದ ಪಟ್ಟಾಬಿಶಕ್ತನಾಗುತ್ತಾನೆ, ಅವನಿಂದ ಕದಂಬರಾಜ್ಯ ಆರಂಭವಾಯಿತು.  ಈ ವಿಷಯವು ಕ್ರಿ.ಶ.೪೫೦ರ ಕಾಕುತ್ಸವರ್ಮನ ತಾಳಗುಂದದ ಪ್ರಣವೇಶ್ವರ ದೇವಾಲಯದ ಮುಂದಿನ ಸ್ತಂಭ ಶಾಸನದಿಂದ ತಿಳಿದು ಬರುತ್ತದೆ.
ಮಯೂರಶರ್ಮನ ಗುರು ವೀರಶರ್ಮನೆಂದು ತಾಳಗುಂದ ಶಾಸನ ಹೇಳಿದುದನ್ನು ಆ ಗುರುವು ಮಯೂರಶರ್ಮನ ಅಜ್ಜನೆಂದು ಗುಡ್ನಾಪುರ ಶಾಸನ ತಿಳಿಸುತ್ತದೆ. ಮಯೂರಶರ್ಮನು ಪಲ್ಲವರನ್ನು ಸೋಲಿಸಲು ಸೇನೆಯನ್ನು ಕಟ್ಟಿ ಬಲಿಷ್ಠವಾಗಲು ಚಿತ್ರದುರ್ಗದ ಪಕ್ಕದ ಚಂದ್ರವಳ್ಳಿಯನ್ನು ಆರಿಸಿಕೊಂಡನೆಂಬ ವಿಷಯವು ಚಂದ್ರವಳ್ಳಿಯಲ್ಲಿ ದೊರಕಿರುವ ಅವನೇ ಹಾಕಿಸಿರುವ ಶಾಸನದಿಂದ ತಿಳಿದುಬರುತ್ತದೆ.
ಕನ್ನಡದ ಮೊತ್ತಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಕಾಲದ್ದೇ ಆಗಿರುವುದು ಆಕಸ್ಮಿಕವಲ್ಲ .ಕ್ರಿ. ಶ. ೩೫೦ ರವರೆಗೆ  ಕರ್ನಾಟಕವನ್ನು ಆಳುತ್ತಿದ್ದ ದೊರೆಗಳು ಮೌರ್ಯ, ಶಾತವಾಹನರು, ಪಲ್ಲವರೇ ಮೊದಲಾದ ಕನ್ನಡೇತರ ರಾಜವಂಶಗಳಿಗೆ ಸೇರಿದವರು. ಆಗ ಕನ್ನಡವು ಜನರ ಆಡುಭಾಷೆಯಾಗಿದ್ದರೂ ದೊರೆಗಳು ಕನ್ನಡೇತರರಾಗಿದ್ದರಿಂದ ಕನ್ನಡಕ್ಕೆ ರಾಜರ, ರಾಜಾಸ್ಥಾನದ, ಅಥವಾ ರಾಜಕೀಯದ ಬೆಂಬಲವಾದರೂ ಹೇಗೆದೊರಕೀತು. ಕನ್ನಡವನ್ನು ಮಾತೃಭಾಷೆಯಾಗುಳ್ಳ ಕದಂಬರು ಒಂದು   ಸ್ವತಂತ್ರ  ರಾಜ್ಯವನ್ನು    ಸ್ಥಾಪನೆ ಮಾಡಿದ್ದರಿಂದ ಸಹಜವಾಗಿ ಆ ಭಾಷೆ ರಾಜರ, ಆಡಳಿತದ  ಭಾಷೆಯಾಗಿ ಪರಿಣಮಿಸಿತು. ಭಾಷೆಗೆ ದೊರಕಿದ ಆ ಮಹತ್ವದ ಸ್ಥಾನವು ಕನ್ನಡ ಜನತೆಯ ಹೆಚ್ಚಿನ ಆತ್ಮವಿಶ್ವಾಸದ ಕುರುಹೂ ಆಗಿದೆ.
ಯಾವ ನಾಡು ತನ್ನ ಭಾಷೆಯಲ್ಲಿ ಆಡಳಿತವನ್ನು ನಡೆಸುತ್ತದೆ, ಶಿಕ್ಷಣವನ್ನು ನೀಡುತ್ತದೆ ಆ ನಾಡು ಆರ್ಥಿಕವಾಗಿ ಬೆಳೆಯುತ್ತದೆ, ಸಾಂಸ್ಕೃತಿಕವಾಗಿ ತನ್ನ ವೈಶಿಷ್ಠ್ಯದೊಡನೆ ವಿಕಾಸವಾಗುತ್ತದೆ. ಕ್ರಿ. ಶ. ೪೫೦ ರ ಹಲ್ಮಿಡಿ ಶಾಸನವು ಕನ್ನಡ ಭಾಷೆಯ ಊರ್ಧ್ವಮುಖಿ ಪ್ರಗತಿಯ ಲಕ್ಷಣವಾಗಿರುವುದಲ್ಲದೆ ಕನ್ನಡಿಗರಲ್ಲಿ ಮಾಡಿದ್ದ ಒಂದು ಆತ್ಮೀಯಸಂಕೇತವೂ ಆಗಿದೆ. ಚಿಕ್ಕ ಆದರೆ ಪ್ರಭಾವಶಾಲಿ ಮನೆತನವಾಗಿದ್ದ ಕದಂಬರು ದೂರದ ಉತ್ತರ ಭಾರತದ ಗುಪ್ತ ಚಕ್ರವರ್ತಿಗಳ ಜೊತೆ ರಕ್ತ ಸಂಭಂಧವನ್ನು ಬೆಳೆಸುವಷ್ಟು ಪ್ರಖ್ಯಾತರೂ ಪ್ರಬಲರೂ ಆದರು. ಅವರ ರಾಜ್ಯವು ಸಹಜವಾಗಿಯೇ ಮುಂದೆ ಆರನೆಯ ಶತಮಾನದಲ್ಲಿ ಬಾದಾಮಿ ಚಾಲುಕ್ಯರು ಒಂದು ಚಕ್ರಾಪತ್ಯವನ್ನೇ ಕಟ್ಟಿ ಮೆರೆಯಲು ದೊಡ್ಡ ಪ್ರಚೋದನೆ ನೀಡಿದುದಲ್ಲದೆ ಬೀಜಾಂಕುರವನ್ನೂ ಹಾಕಿತು. ಕ್ರಿ. ಶ. ೬೩೪ ರ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದ ಪ್ರಕಾರ, ಚಾಲುಕ್ಯರ ಮೇಲೆ ದಂಡೆತ್ತಿ ಬಂದ ಉತ್ತರ ಪಥೇಶ್ವರನೆಂದು ಹೆಮ್ಮೆ ಪಡುತ್ತಿದ್ದ ಹರ್ಷವರ್ಧನನನ್ನು ನರ್ಮದೆಯ ತೀರದಲ್ಲಿ ನಡೆದ ನಿರ್ಣಾಯಕ ಯುದ್ಧದಲ್ಲಿ ಪುಲಕೇಶಿಯು ಗೆಲುವನ್ನು ಸಂಪಾದಿಸಿದನು. ಐಹೊಳೆ ಶಾಸನದ ವಿಷಯಕ್ಕೆ ಪೋಷಕವಾಗಿ ಹ್ಯುಯೆನ್‌ತ್ಸಾಂಗನೆಂಬ ಚೀನೀ ಪ್ರವಾಸಿಗನ ಬರಹಗಳು ಸಾಕ್ಷ್ಯಾಧಾರ ಒದಗಿಸುತ್ತವೆ. ಬಾದಾಮಿ ಚಾಲುಕ್ಯರ ಕಾಲದಲ್ಲಿ ಐಹೊಳೆ,ಪಟ್ಟದಕಲ್ಲು ದೇವಾಲಯಗಳು,
ಬಾದಾಮಿಯ ಗುಹಾಂತರ ದೇವಾಲಯಗಳು ನಿರ್ಮಾಣಗೊಂಡವು. ಅವರ ಕಾಲದಲ್ಲೇ ಕನ್ನಡದಲ್ಲಿ ಸಾಹಿತ್ಯ ರಚನೆಗೆ ಅಂಕುರಾರ್ಪಣವಾಯಿತೆಂದು ಹೇಳಲು ಆಧಾರಗಳಿವೆ.  ಅವರ ಕಾಲದಿಂದ ಸಾಹಿತ್ಯಕ ಚಟುವಟಿಕೆಗಳು ಆರಂಭವಾಗಿ, ಸುಂದರ ಕನ್ನಡ ಬಿಡಿಪದ್ಯಗಳು ಶಾಸನಗಳಲ್ಲಿ  ಕ್ರಿ. ಶ. ೭೦೦ ರ ಹೊತ್ತಿಗೆ ಕಾಣಿಸಿಕೊಂಡು ಪಂಪನ ಕಾವ್ಯಗಳ  ಮೂಲಕ  ಕನ್ನಡ ಸಾಹಿತ್ಯವು    ಉತ್ತುಂಗ   ಶಿಖರವನ್ನು ಮುಟ್ಟಿತು. ಕ್ರಿ. ಶ. ೭೦೦ ರ ಬಾದಾಮಿಯ ಕಪ್ಪೆ ಅರಭಟ್ಟನ ಈ ತ್ರಿಪದಿ ಪದ್ಯ ಗಮನಾರ್ಹ.
ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ,  ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್  ಮಾಧವನೀತನ್ ಪೆರನಲ್ಲ||
ಅದೇಕಾಲದ ಶ್ರವಣ ಬೆಳಗೊಳದ ಶಾಸನ ಒಂದರ ಸುಂದರ ಬಿಡಿ ಪದ್ಯ ಹೀಗಿದೆ:
ವಿದ್ಯುಲ್ಲತೆಗಳ ತೆರವೋಲ್ ಮಂಜುವೋಲ್ ತೋರಿ ಬೇಗಂ|
ಪಿರಿಗುಂ ಶ್ರೀರೂಪ ಲೀಲಾಧನವಿಭವ ವಾರಾಶಿಗಳ್, ನಿಲ್ಲವಾರ್ಗ|
ಪರಮಾರ್ಥಂ ಮೆಚ್ಚಿನ್ ಆನ್ ಈ ಧರಣಿಯೊಳಿರನೆಂದು ಸನ್ಯಾಸನಂಗೆ|
ಯ್ದುರು ಸತ್ವನ್ ನಂದಿಸೇನ ಪ್ರವರ ಮುನಿವರನ್ ದೇವಲೋಕಕ್ಕೆ ಸಂದಾನ್||
ಶಾಸನಗಳೇ ಕರ್ನಾಟಕದ ಐತಿಹಾಸಿಕ ಪರಂಪರೆಯ ರಚನೆಗೆ ಒದಗಿಸುವ ಮುಖ್ಯ ಮಾಹಿತಿ ಕೋಶ. ಶಾಸನಗಳು ವಾಸ್ತವ ವಿಷಯಗಳ ದಾಖಲೆಗಳಾದ್ದರಿಂದ ಅವುಗಳಲ್ಲಿ ದೊರಕುವ ವಿಷಯ ಸಂಪತ್ತು ಅಗಾಧವಾದುದು. ಅತ್ತಿಮಬ್ಬೆಯ ಆಧ್ಯಾತ್ಮಿಕ ಬದುಕಿನ ಚಿತ್ರಣವು ಲಕ್ಕುಂಡಿ ಶಾಸನದಲ್ಲಿ ದೊರೆತರೆ ಬೇಲೂರು ಶಾಸನದಲ್ಲಿ ಶಾಂತಲೆಯ ಕಲಾನಿಪುಣತೆಯ ಚಿತ್ರಣವು ಲಬ್ಯವಾಗುತ್ತದೆ. ಕೋಲಾರ ಜಿಲ್ಲೆಯ ಸಾಮಿನಿರ್ಮಡಿ ಎಂಬ ಅಪೂರ್ವ ಮಹಿಳೆಯ ವಿದ್ವತ್ತಿನ ಪರಿಚಯ ಅಲ್ಲಿನ ಶಾಸನದಿಂದ ಲಭ್ಯ. ಹನ್ನೊಂದನೇ ಶತಮಾನದಲ್ಲಿ ರಣಭೈರವಿಯಂತೆ ಹೋರಾಡಿ ಶತ್ರುಗಳನ್ನು ಗೆದ್ದ ವಿಷಯವು ಹಲವು ಶಾಸನಗಳಲ್ಲಿ  ವರ್ಣಿತವಾಗಿದೆ.
ಕ್ರಿ. ಶ. ೧೦೯೦ ರಲ್ಲಿದ್ದ ಸಿರಿಯ ಕೇತಲ ದೇವಿಯನ್ನು ಶಾಸನವೊಂದು ದೇಶ ಭಾಷಾ ವಿದ್ಯಾಧರಿ ಎಂದು ವರ್ಣಿಸಿರುವುದು ಅತ್ಯಂತ ಗಮನಾರ್ಹ. ಅವಳ ಕಾಲಕ್ಕೆ ಕನ್ನಡದಲ್ಲಿ ಸಾಹಿತ್ಯ ಕೃತಿಗಳು ಮೊತ್ತವಲ್ಲದೆ ಗೇಯ ಕೃತಿಗಳೂ ರಚಿತವಾಗಿದ್ದುವೆಂಬ ಸಂಗತಿ ಅದರಿಂದ ಸೂಚಿತವಾಗುತ್ತದೆ.
ಶಾಸನಗಳಲ್ಲಿ ಕರ್ನಾಟಕವನ್ನು ಕಾಲದಿಂದ ಕಾಲಕ್ಕೆ ಆಳಿದ ದೊರೆಗಳು, ಅವರ ಸಾಹಸಿ ಔದಾರ್ಯಗಳು ವಿಸ್ತಾರವಾಗಿ ವರ್ಣಿತವಾಗಿವೆ. ಸ್ವಾರ್ಥಿಗಳಾಗಿದ್ದ ಕ್ರೂರಸ್ವಭಾವದ ದೊರೆಗಳಿದ್ದರು ನಿಜ ಆದರೆ ಅವರ ಸಂಖ್ಯೆ ಕಡಿಮೆ. ಜನತೆಯ ಯೊಗಕ್ಷೇಮಕ್ಕಾಗಿ ಸದಾ ಚಿಂತಿಸುತ್ತಿದ್ದ ಹಲವು ದೊರೆಗಳ ವಿಷಯ ಶಾಸನಗಳಲ್ಲಿ ಬಂದಿವೆ. ಐದನೆಯ ಶತಮಾನದ ರಾಜನೊಬ್ಬನು ಸರ್ವಜೀವ ಬಂಧು ವೆನಿಸಿಕೊಂಡಿದ್ದನು. ಗಂಗರ ದೊರೆಗಳನ್ನು ಸಮ್ಯಕ್ ಪ್ರಜಾಪರಿಪಾಲನೈಕ ರಾಜ್ಯ ಪ್ರಯೋಜನರ್ ಎಂದು ಅವರ ಶಾಸನಗಳು ಕೊಂಡಾಡಿವೆ. ರಾಜ್ಯ, ನಗರ, ಗ್ರಾಮಗಳ ಆಡಳಿತ ವಿಧಾನ, ತೆರಿಗೆ ಸಂಗ್ರಹಣ ರೀತಿ ಇವುಗಳ ಚಿತ್ರವು ಶಾಸನಗಳಿಂದ ತಿಳಿದು ಬರುತ್ತದೆ. ವೀರರ ಶೌರ್ಯ ಸಾಹಸಗಳನ್ನು, ಅವರ ರಾಜನಿಷ್ಟೆಯನ್ನು ದೇಶಪ್ರೇಮವನ್ನು ಶಾಸನಗಳು ಕೊಂಡಾಡಿವೆ. ಆತಕೂರು ಶಾಸನದಲ್ಲಿರುವಂತೆ ಚೋಳರಿಗೂ ರಾಷ್ಟ್ರಕೂಟರಿಗೂ   ನಡೆದ   ಘೋರ ಯುದ್ಧದಲ್ಲಿ ರಾಷ್ಟ್ರಕೂಟರಿಗೆ ಬೆಂಬಲವಾಗಿ ನಿಂತ ಬೂತುಗ ದೊರೆಯ ನೈತಿಕ  ಮನಾಲರನು ಅಪೂರ್ವ ಸಾಹಸವನ್ನು ಮೆರೆಯುತ್ತಾನೆ. ಅದಕ್ಕೆ ಬಹುಮಾನ ಸೂಚಕವಾಗಿ ಏನು ಬೇಕಾದರೂ ಕೇಳು ಎಂದು ಬೂತುಗದೊರೆಯು ಸೂಚಿಸಿದಾಗ ಅವನ ಮನಾಲರನು ದೊರೆಯ ಬಳಿ ಇದ್ದ ಕಾಳಿ  ಎಂಬ ನಾಯಿಯನ್ನು ಮಾತ್ರ ಕೇಳಿ ಪಡೆದು ಅದನ್ನು ಬೇಟೆಗೆ ಕರೆದೊಯ್ದಾಗ ಅದು ಹಂದಿಯೊಂದನ್ನು ಕೊಂದು ತಾನೂ ಸಾಯುತ್ತದೆ. ತನ್ನ ಪ್ರೀತಿಯ ನಾಯಿಯ ಸ್ಮಾರಕವಾಗಿ ಕೆತ್ತಿಸಿರುವ ಶಾಸನದ ಮೇಲೆ ನಾಯಿ ಹಂದಿಗಳ ಕಾದಾಟದ ಚಿತ್ರವಿದೆ. ಈ ಅಪೂರ್ವ ಶಾಸನವು ಚೋಳರ ರಾಷ್ಟ್ರಕೂಟರ ಯುದ್ಧವನ್ನು ಹಿನ್ನೆಲೆಗೆ ಸರಿಸಿ ಮನುಷ್ಯ ಮತ್ತು ಪ್ರಾಣಿಗಳಿಗಿರುವ ಭಾವನಾತ್ಮಕ ಸಂಬಂಧವನ್ನು ಮುಂದುಮಾಡುತ್ತದೆ. ಗಂಗರ ದೊರೆ ಪೆರ್ಮಾನಡಿ ಸತ್ತಾಗ ಅವನ ಸೇವಕ ಅಗರಯ್ಯ ಅವನ ಜೊತೆ ತಾನೂ ಮಡಿದು ತನ್ನ ಸ್ವಾಮಿಭಕ್ತಿಯನ್ನು ಪ್ರಕಟಿಸುವ ವಿಷಯ ದೊಡ್ಡ ಹುಂಡಿ ಶಾಸನದಲ್ಲಿದೆ.
ಇದೇ ರೀತಿ ಗಂಡಂದಿರು ಮಡಿದಾಗ ಅವರ ಪತ್ನಿಯರು ಸಹಗಮನ ಮಾಡಿದ ನೂರಾರು ಶಾಸನಗಳಿವೆ ಕೆಲವು ಶಾಸನಗಳ ಮೇಲೆ ಸತಿಯರಾದ ಸ್ತ್ರೀಯರ ಶಿಲ್ಪಗಳಿರುತ್ತವೆ. ಗುಂಡ್ಲುಪೇಟೆ ತಾಲ್ಲೂಕಿನ ಬೆಳತೂರಿನ ಹನ್ನೊಂದನೆಯ ಶತಮಾನದ ದೇಕಬ್ಬೆ ಶಾಸನದಲ್ಲಿ, ಅವಳು ತನ್ನ ಗಂಡನ ಜೊತೆ ಚಿತೆಯೇರಲು ನಿರ್ಧರಿಸಿದಾಗ ಅವಳ ತಂದೆ ತಾಯಂದಿರು ಮತ್ತು ಸಮಾಜ ಎಷ್ಟು ಕೇಳಿಕೊಂಡರೂ ತನ್ನ ದೃಡನಿರ್ಧಾರವನ್ನು ಬಿಡದೆ ಅಗ್ನಿಪ್ರವೇಶ ಮಾಡಿದ ದುರಂತ ಚಿತ್ರವನ್ನು ನಮ್ಮ ಮುಂದೆ ಇಡಲಾಗಿದೆ. ಚನ್ನಗಿರಿ ತಾಲ್ಲೂಕಿನ ಬೊಮ್ಮೇನಹಳ್ಳಿಯಲ್ಲಿ ಹಿಂದೆ ಇಳಿಬಿಟ್ಟಿರುವ ಜಡೆಯ ಸುಂದರ ಮಾಸ್ತಿಕಲ್ಲುಗಳಿವೆ.
ಕಳ್ಳರು ಊರಿಗೆ ನುಗ್ಗಿ ದನಗಳನ್ನು ಅಪಹರಿಸಿದಾಗ ಕಳ್ಳರನ್ನು ಧೈರ್ಯದಿಂದ ಎದುರಿಸಿ ಆ ದನಗಳನ್ನು ಹಿಂದಿರುಗಿಸಿ ತಾವೂ ಮಡಿದ ಹಲವು ವೀರರ ಶಾಸನಗಳು ದೊರೆಯುತ್ತವೆ. ಆ ವೀರರ ಹೆಣಗಳನ್ನು ತುಳಿಯುತ್ತ ದನಗಳು ಹಿಂದಿರುಗುತ್ತಿರುವುದನ್ನು ಶಿಲ್ಪರೂಪದಲ್ಲಿ ಹಲವೆಡೆ ಕೆತ್ತಲಾಗಿದೆ.
ಹಿಂದಿನ ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ವಿಸ್ತಾರವಾದ ಪರಿಚಯ ಶಾಸನಗಳಿಂದ ದೊರಕುತ್ತದೆ. ಅಗ್ರಹಾರ, ಮಠ, ದೇವಾಲಯಗಳಲ್ಲಿ ನಡೆಯುತ್ತಿದ್ದ ವಿದ್ಯಾಭ್ಯಾಸಕ್ಕೆ ಶ್ರೀಮಂತರು ಉದಾರವಾಗಿ ದತ್ತಿಗಳನ್ನು ನೀಡಿರುವುದು ಶಾಸನೋಕ್ತವಾಗಿದೆ. ಗುಲ್ಬರ್ಗ ಜಿಲ್ಲೆಯ ನಾಗಾವಿ ಎಂಬಲ್ಲಿದ್ದ  ಉನ್ನತ ವಿದ್ಯಾಕೇಂದ್ರಕ್ಕೆ ಹಾಗೆ ದತ್ತಿಗಳನ್ನು ನೀಡಿರುವುದನ್ನು ಅಲ್ಲಿನ ಶಾಸನದಲ್ಲಿ ಬಂದಿವೆ. ಶಿವಮೊಗ್ಗ  ಜಿಲ್ಲೆಯ ಬಳ್ಳಿಗಾವೆಯಲ್ಲಿ ಕೆರೆಯ ಕೋಡಿಯ ಬಳಿ  ಇದ್ದ ಕೇದಾರೇಶ್ವರ ದೇವಾಲಯ ಅಥವಾ ಕೋಡಿಮಠವು ಒಂದು ಉನ್ನತ ಶಿಕ್ಷಣ ಕೇಂದ್ರವಾಗಿದ್ದು ಅಲ್ಲಿ ಶಿಕ್ಷಣ ಪಡೆಯಲು ಭಾರತದ ನಾನಾ ಭಾಗಗಳಿಂದ ಶಿಕ್ಷಣಾರ್ಥಿಗಳು ಬರುತ್ತಿದ್ದರು.
ಆ ಮಠವು ಶಿಕ್ಷಣಕೇಂದ್ರವಾಗಿದ್ದುದಲ್ಲದೆ, ಕಲಾವಿದರಿಗೆ ಅನಾಥರಿಗೆ ಆಶ್ರಯ ಸ್ಥಾನವೂ ಆಗಿದ್ದಿತು. ರೋಗಿಗಳಿಗೆ ಆಸ್ಪತ್ರೆಯೂ ಆಗಿದ್ದಿತು. ಅಲ್ಲಿ ಹೊರ ರೋಗಿಗಳಿಗೆ ಮಾತ್ರವಲ್ಲ ಅಲ್ಲೇ ಆಶ್ರಯ ನೀಡಿದ್ದ ಒಳ ರೋಗಿಗಳಿಗೂ ವೈದ್ಯೋಪಚಾರವನ್ನು ನೀಡುತ್ತಿದ್ದಿತೆಂದು ಅಲ್ಲಿನ ಶಾಸನಗಳು ಮುಕ್ತಕಂಠದಿಂದ ಪ್ರಶಂಸಿಸಿವೆ. ಆ ಮಠವನ್ನು ಹನ್ನೆರಡನೆಯ ಶತಮಾನದ ಕರ್ನಾಟಕ ವಿಶ್ವವಿದ್ಯಾಲಯವೆಂದು ಆಧುನಿಕ ವಿದ್ವಾಂಸರು ಬಣ್ಣಿಸಿರುವುದು ಗಮನಾರ್ಹ.

ಹಲವು ಶಾಸನಗಳನ್ನು  ರನ್ನನಂತಹ ಶ್ರೇಷ್ಟ ಕವಿಗಳು ಬರೆದಿದ್ದರಲ್ಲದೆ, ಅವುಗಳನ್ನು  ರಚಿಸಿದ ಹಲವರು ಶ್ರೇಷ್ಠ ಕವಿಗಳಾಗಿದ್ದು, ಅವರು ಕೇವಲ ಶಾಸನ ಪಾಠಗಳಲ್ಲಿ ಮಾತ್ರ ಉಳಿದಿದ್ದಾರೆ. ಉದಾಹರಣೆಗೆ, ಪಂಪನ ತಮ್ಮ ಜಿನವಲ್ಲಭ ರಚಿಸಿದ ಶಾಸವು ಆಂಧ್ರದ ಕರೀಂನಗರ ಜಿಲ್ಲೆಯ ಕುರಿಕ್ಸಾಲದಲ್ಲಿದ್ದು, ಅವನು ತನ್ನ ಅಣ್ಣನ ಹೆಸರಿನಲ್ಲಿ ನಿರ್ಮಿಸಿದ ಕವಿತಾಗುಣಾರ್ಣವ ತಟಾಕ ಎಂಬ ಕೆರೆ ಇಂದಿಗೂ ಅಲ್ಲಿದೆ. ಪಂಪನ ಕಿರಿಯ ಸಮಕಾಲೀನ ರನ್ನನ ಸ್ವಹಸ್ತಾಕ್ಷರಗಳು ಶ್ರವಣಬೆಳಗೊಳದ ಚಿಕ್ಕ ಬೆಟ್ಟದ ಮೇಲೆ ಇಂದಿಗೂ ಉಳಿದು ಬಂದಿವೆ. ಚಾಮರಸ ಕವಿ (೧೪೩೦) ವಾಸವಾಗಿದ್ದ ಪ್ರದೇಶವನ್ನು ಹಂಪಿಯಲ್ಲಿ ದೊರಕಿರುವ ಒಂದು ಶಾಸನದಿಂದ ಗುರುತಿಸಬಹುದು. ಹೊಯ್ಸಳರ ಕಾಲದ ಮಲ್ಲಿತಮ್ಮರಂತಹ ಶಿಲ್ಪಿಗಳ ಹೆಸರುಗಳು ಅವರು ಕೆತ್ತಿದ ವಿಗ್ರಹಗಳ ಪಾದ ಪೀಠಗಳ ಮೇಲೆ ದೊರೆಯುತ್ತವೆ.
ಭಾರತದಲ್ಲಿ ತಮಿಳುನಾಡನ್ನು ಬಿಟ್ಟರೆ ಅತಿ ಹೆಚ್ಚಿನ ಸಂಖ್ಯೆಯ ಶಾಸನಗಳು ಕರ್ನಾಟಕದಲ್ಲಿ ದೊರೆಯುತ್ತವೆ. ಕೆರೆ ಕಾಲುವೆ ದೇವಾಲಯಗಳನ್ನು ಕಟ್ಟಿಸಿದ್ದಕ್ಕೋ  ವೀರರ ಸ್ಮಾರಕಗಳನ್ನು ನಿರ್ಮಿಸಿ ಅವರ ಮನೆಯವರೆಗೆ ಕೊಟ್ಟ ದತ್ತಿಗಳ ವಿಷಯವನ್ನು ದಾಖಲಿಸುವುದಕ್ಕೋ  ಇಂತಹ ಹಿನ್ನೆಲೆಯಲ್ಲಿ ಆ ಕಾರ್ಯಗಳು ಶಾಶ್ವತವಾಗಿರಲೆಂದು ಕಲ್ಲಮೇಲೆ ಕೆತ್ತಿಸಿರುವ ಕರ್ನಾಟಕ ಸಂಸ್ಕೃತಿಯ ಹಲವು ಮುಖಗಳನ್ನು, ಒಳಪದರುಗಳನ್ನು ಪರಿಚಯ ಮಾಡಿಕೊಡುತ್ತವೆ. ಸಾಹಿತ್ಯ ಕೃತಿಗಳಲ್ಲಿ ಸಾಂಸ್ಕೃತಿಕ ಮಾಹಿತಿ ಇಷ್ಟು ಸಮೃದ್ಧವಾಗಿ ದೊರಕುವುದಿಲ್ಲ ಮಾತ್ರವಲ್ಲ, ಬಹುತೇಕ ಕಡೆ ಅದು ಕೇವಲ ಸೂಚನೆಯ ರೂಪದಲ್ಲಿರುತ್ತದೆ. ಶಾಸನಗಳ ಮೇಲಿನ ಬರಹಗಳಂತೆಯೇ ಅವುಗಳ ಮೇಲಿನ ಶಿಲ್ಪವೂ ಸಾಂಸ್ಕೃತಿಕ ಅಧ್ಯಯನಕ್ಕೆ ಪೋಷಕ. ಕರ್ನಾಟಕ ಸಂಸ್ಕೃತಿಯ ಅಧ್ಯಯನದ ಪುನಾರಚನೆಯಲ್ಲಿ ಶಾಸನಗಳಿಗೆ ಅಗ್ರಸ್ಥಾನಮೀಸಲೆಂಬಲ್ಲಿ ವಿವಾದಕ್ಕೆ ಅವಕಾಶವಿಲ್ಲ.

ಚಿತ್ರಗಳು:
೧. ಕರ್ನಾಟಕದ ಪರಂಪರೆ  ಸಂಪುಟ ೧, ಮೈಸೂರು ಸರ್ಕಾರ.
೨. ಶಾಸನ ಸಂಗ್ರಹ  ಎಂ. ಎಂ. ಅಣ್ಣಿಗೇರಿ ಮತ್ತು ಡಾ|| ಆರ್.ಶೇಷಶಾಸ್ತ್ರಿ.
೩. ಕರ್ನಾಟಕದ ವೀರಗಲ್ಲುಗಳು  ಡಾ|| ಆರ್.ಶೇಷಶಾಸ್ತ್ರಿ.
೪. ಕರ್ನಾಟಕದ ಯಾತ್ರೆ  ಜೀರಗೆಕಟ್ಟೆ ಬಸವಪ್ಪ.
೫. ಹೊಸತು ಹೊಸತು  ಡಾ|| ಎಂ. ಚಿದಾನಂದಮೂರ್ತಿ.

  • ಲೇಖಕರು: ಡಾ|| ಎಂ.ಚಿದಾನಂದ ಮೂರ್ತಿ

May 4, 2015

ತೇಜಸ್ವಿಗೆ ಕುವೆಂಪು ಬರೆದ ಪತ್ರಗಳು

tejasvige kuvempu baredha patragalu  
ಪತ್ರ 1 'ಉದಯರವಿ' ತಾ. 24.1.56 ಪ್ರೀತಿಯ ಚಿರಂಜೀವಿ ತೇಜಸ್ವಿಗೆ, ನೀನು ತಾರೀಖು ಹಾಕದೆ ಬರೆದ ಕಾಗದ ಕೈಸೇರಿತು. ಅದನ್ನೋದಿ ಆಶ್ಚರ್ಯವಾಯಿತು; ಆನಂದವಾಯಿತು; ಸ್ವಲ್ಪ ಚಿಂತೆಗೂ ಕಾರಣವಾಯಿತು. ನಾನು ಬರೆಯುತ್ತಿರುವ ಈ ಕಾಗದವನ್ನು ನೀನು ಹಾಳು ಮಾಡದೆ ನಾಲ್ಕಾರು ಸಾರಿ ಶಾಂತ ಮನಸ್ಸಿನಿಂದ ಓದಿ ಇಟ್ಟುಕೊ; ಅಥವಾ ನೀನು ಬರುವಾಗ ನನಗೇ ತಂದುಕೊಡು. ನಾವೆಲ್ಲರೂ ಇಲ್ಲಿ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮ ಎಂದು ಕೇಳಿ ಸಂತೋಷ. ನಿನ್ನ ರತ್ನಾಕರ ಮಾವ ಕಾಗದ ಬರೆದಿದ್ದರು- ನಾಯಿಮರಿಗೆ ಹುಚ್ಚು ಹಿಡಿದಂತೆ ಆಗಿತ್ತು ಎಂದು. ನಿನ್ನ ಜಯಕ್ಕ ಕಾಗದ ಬರೆದಿದ್ದರಂತೆ- ನೀನೇನೋ ಇಂಜಕ್ಷನ್ ತೆಗೆದುಕೊಳ್ಳುತ್ತಿದ್ದೀಯ ಎಂದು! ಏನು ಸಮಾಚಾರ? ನಿನ್ನ ಕಾಗದದಲ್ಲಿ ಆ ವಿಚಾರವೇ ಇಲ್ಲವಲ್ಲ. ನೀನು ಹಿಂದೆ ಕಳುಹಿಸಿದ ಕವನಗಳು ತಲುಪಿದುವು. ಅವನ್ನು ಪ್ರೀತಿಯಿಂದಲೂ ಹೆಮ್ಮೆಯಿಂದಲೂ ಓದಿದ್ದೇನೆ. ಇಟ್ಟುಕೊಂಡಿದ್ದೇನೆ. ಆ ವಿಚಾರವಾಗಿ ನಿನಗೆ ಬರೆಯಬೇಕೆಂದಿದ್ದೆ. ಅಷ್ಟರಲ್ಲಿ ನಿನ್ನಿಂದ ಮತ್ತೊಂದು ಕಾಗದ ಬಂದಿತು. ನಿನ್ನ ಆ ಕವನಗಳು ಹಸುಳೆಯ ಮೊದಲ ತೊದಲಂತೆ ಮನೋಹರವಾಗಿವೆ. ಆ ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸುತ್ತೇನೆ. ಅಂದು ನಾನು ತಿಳಿಸಿದಂತೆ- ನೀನು ಕನ್ನಡ ಛಂದಸ್ಸಿನ ಸ್ಥೂಲ ಪರಿಚಯವನ್ನಾದರೂ ಮಾಡಿಕೊಳ್ಳಬೇಕು. ಏಕೆಂದರೆ ಸಾಹಿತ್ಯದ ಭಾಷೆಗೆ ವ್ಯಾಕರಣ ಶುದ್ಧಿ ಹೇಗೆ ಆವಶ್ಯಕವೋ ಹಾಗೆಯೇ ಕಾವ್ಯಕ್ಕೆ ಛಂದಸ್ಸಿನ ಅರಿವು ಬೇಕು. ಬೈಸಿಕಲ್ಲನ್ನು ಚೆನ್ನಾಗಿ ಕಲಿತ ಮೇಲೆ ಕೈಬಿಟ್ಟೋ ಕಾಲುಬಿಟ್ಟೋ ಸವಾರಿ ಮಾಡುವ ಪ್ರವೀಣನಂತೆ ನುರಿತ ಮೇಲೆ ಕವಿ ಛಂದಸ್ಸನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಸ್ವಾತಂತ್ರ್ಯ ಪಡೆಯುತ್ತಾನೆ. ಆದರೆ ಮೊದಲು ಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು. ನನ್ನ ಅನುಭವವನ್ನೇ ನಿನಗೆ ಹೇಳುತ್ತಿದ್ದೇನೆ. ಛಂದಸ್ಸು ಮಾತ್ರವಲ್ಲದೆ ಭಾಷೆಯೂ ಮುಖ್ಯ. ಹಾಗೆಯೇ ಆಲೋಚನೆ ಭಾವಗಳೂ ಮುಖ್ಯ. ಭಾಷೆಯನ್ನು ಪೂರ್ವ ಸಾಹಿತ್ಯಾಭ್ಯಾಸದಿಂದ ಪಡೆಯಬೇಕು. ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿ ಕೊಡುತ್ತದೆ. ವಿಚಾರ ಬಹಳ ದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದ್ದೇನೆ. ಒಟ್ಟಿನಲ್ಲಿ ಹೇಳುವುದಾದರೆ, ನಿನ್ನ ಪ್ರಥಮ ಪ್ರಯತ್ನದಲ್ಲಿಯೆ, ನೀನು ದೃಢಮನಸ್ಸಿನಿಂದ ಕಾರ್ಯೋನ್ಮುಖಿಯಾದರೆ, ಮುಂದೆ ಒಳ್ಳೆಯ ಫಲವಾಗುವ ಸೂಚನೆ ಇದೆ. ನೀನು ಮೊನ್ನೆ ಬರೆದ ಕಾಗದವನ್ನೋದಿ, ನಿನ್ನಲ್ಲಿ ಇದುವರೆಗೂ ಸುಪ್ತವಾಗಿದ್ದ ಯಾವುದೋ ಶಕ್ತಿ, ಆಶೆ, ಅಭೀಪ್ಸೆ, ಉದ್ಧಾರಾಕಾಂಕ್ಷೆ ಈಗ ತಾನೆ ಕಣ್ಣು ತೆರೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನೀನು ಹುಟ್ಟುವ ಮೊದಲೂ ಹುಟ್ಟಿದ ಮೇಲೆಯೂ ನಾನು ಶ್ರೀಗುರುದೇವನಲ್ಲಿ ಮಾಡುತ್ತಿದ್ದ ಪ್ರಾರ್ಥನೆ ಈಗ ತಾನೆ ನೆರವೇರಲು ಪ್ರಾರಂಭವಾಗಿದೆಯೋ ಏನೋ ಎನ್ನಿಸುತ್ತಿದೆ. 'ಜೇನಾಗುವಾ' ಎಂಬ ನನ್ನ ಕವನ ಸಂಗ್ರಹದಲ್ಲಿರುವ ಕೆಲವು ಕವನಗಳನ್ನು ಓದಿ ನೋಡಿದರೆ ನಿನಗೆ ಗೊತ್ತಾಗುತ್ತದೆ. ನೀನೀಗ ಹದಿನೇಳನೆಯ ವರ್ಷವನ್ನು ದಾಟಿ ಹದಿನೆಂಟನೆಯದಕ್ಕೆ ಕಾಲಿಟ್ಟಿದ್ದೀಯೆ. ತಾರುಣ್ಯೋದಯದ ಈ ಸಂದರ್ಭದಲ್ಲಿ ಬದುಕು ಹಳೆಯ ಪೊರೆಯನ್ನು ಕಳಚಿ ಹೊಸಪೊರೆಯ ಹೊಸ ಬದುಕಿಗೆ ಹೋಗಬೇಕಾದದ್ದು ಸ್ವಾಭಾವಿಕವೆ. ನೀನು ಶ್ರೀರಾಮಾಯಣದರ್ಶನಂ ಓದಿದುದು ನಿಜಕ್ಕೂ ನನಗೆ ವಿಸ್ಮಯಕಾರಿಯಾಗಿದೆ. ತುಂಬ ಸಂತೋಷವೂ ಆಗಿದೆ. ಆದರೆ ಅದರಲ್ಲಿ ಯಾವ ಒಂದು ಸನ್ನಿವೇಶದಿಂದಲೂ ಪ್ರತ್ಯೇಕವಾಗಿ ಆವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ. ಆದರೆ ಅದು ನಿನ್ನ ಲೌಕಿಕವಾದ ಓದಿಗೂ ಆಚರಣೆಗೂ ಅಡ್ಡಿಯಾಗದಂತೆ ಸಂಯಮದಿಂದ ವರ್ತಿಸುವುದು ಒಳ್ಳೆಯದು. ಏಕೆಂದರೆ ನಾನು ಹಿಂದೆ ನಿನಗೆ ಹೇಳಿದಂತೆ ಎಂತಹ ಮಹೋನ್ನತ ಪ್ರತಿಭೆಯಾದರೂ, ಲೋಕದಲ್ಲಿ ಅದು ಪ್ರಕಟನಗೊಳ್ಳುವಾಗ, ಲೌಕಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಠೆಗಳ ಚೌಕಟ್ಟಿನಲ್ಲಿಯೆ ವಿಕಾಸಗೊಳ್ಳಬೇಕಾದುದು ಅನಿವಾರ್ಯ. ನೀನು ಹೇಗಾದರೂ ಪ್ರಯತ್ನ ಮಾಡಿ ಈ ಸಲದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಮುಂದಿನ ವರ್ಷ ಮೈಸೂರಿಗೇ ಬಂದರೆ ಇಲ್ಲಿ ನಿನ್ನ ಬುದ್ಧಿಯ ಮತ್ತು ಹೃದಯದ ಉನ್ಮೀಲನಕ್ಕೂ ವಿಕಾಸಕ್ಕೂ ಯಥೇಚ್ಛವಾದ ಅವಕಾಶ ದೊರೆಯುತ್ತದೆ. ನಿನ್ನ ಅಣ್ಣನ ಲೈಬ್ರರಿಯೆ ನಿನಗೆ ಸಾಕು ಜಗತ್ತಿನ ಅತ್ಯುತ್ತಮತೆಯನ್ನೆಲ್ಲ ಪಡೆಯುವುದಕ್ಕೆ. ಬೇರೆಯ ವಿಚಾರ ವಿನಿಮಯಾದಿಗಳಿಗೂ ಹೆಚ್ಚು ಅವಕಾಶ ಪಡೆಯಬಹುದು. ಈಗಿನ ವಿದ್ಯಾಭ್ಯಾಸ ಕ್ರಮದಲ್ಲಿಯೆ ದೋಷಗಳಿರಬಹುದು. ಆದರೆ ಅದು ಬದಲಾಗುವವರೆಗೆ ಅದರಲ್ಲಿಯೆ ನಡೆಯಬೇಕಲ್ಲವೆ? ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವ ತನಕ ಅದನ್ನೇ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು. ಆದ್ದರಿಂದ ಲಾಜಿಕ್ (ತರ್ಕಶಾಸ್ತ್ರ) ಮುಂತಾದ ವಿಷಯ ನಿನಗೆ ಹಿಡಿಸದಿದ್ದಲ್ಲಿ ಪರೀಕ್ಷೆಗೆ ಬೇಕಾಗುವಷ್ಟನ್ನಾದರೂ ಓದಿಕೊಂಡು ತೇರ್ಗಡೆ ಹೊಂದಬೇಕು. ನಾನೂ ನಿನ್ನ ಹಾಗೆಯೇ ಎಸ್‌ಎಸ್‌ಎಲ್‌ಸಿ ಓದುವಾಗ ಸೈನ್ಸನ್ನೇ ತೆಗೆದುಕೊಂಡಿದ್ದೆ. ನನಗೆ ಅಷ್ಟೇನು ರುಚಿಸದಿದ್ದರೂ ಹೇಗೋ ಓದಿ ಪರೀಕ್ಷೆಯ ಹೊತ್ತಿಗೆ ತಿಳಿದುಕೊಂಡು ಪಾಸಾದೆ. ನೀನೂ ಹಾಗೆಯೆ ಮಾಡು, ಈಗ ನೀನು ಆರ್ಟ್ಸ್ ತೆಗೆದುಕೊಂಡಿದ್ದೀಯೆ, ನಿನಗೇನೂ ಕಷ್ಟವಾಗದು. ಇಂಗ್ಲಿಷ್ ಭಾಷೆಯದೊಂದೇ ತೊಂದರೆ ಅಲ್ಲವೆ? ಆದರೆ ಹೇಳುತ್ತೇನೆ ಕೇಳು. ನೀನೇನಾದರೂ ಉತ್ತಮ ಲೇಖಕ, ಸಾಹಿತಿ, ಕವಿ, ಆಲೋಚಕ ಎಲ್ಲ ಆಗಬೇಕೆಂದು ಸಂಕಲ್ಪವಿದ್ದರೆ ಇಂಗ್ಲಿಷ್ ಭಾಷೆಯನ್ನೂ ಚೆನ್ನಾಗಿ ಕಲಿಯುವುದು ಒಳಿತು. ನನ್ನ ಇಂಗ್ಲಿಷ್ ಲೈಬ್ರರಿ ನಿನಗೆ ಜಗತ್ತಿನ ರತ್ನಗಳನ್ನೆಲ್ಲ ದಾನ ಮಾಡಬಲ್ಲುದು. ಆದ್ದರಿಂದ ಯಾವ ವಿಚಾರದಲ್ಲಿಯೂ ದುಡುಕಿ ಅವಸರದ ನಿರ್ಣಯ ತೆಗೆದುಕೊಳ್ಳಬೇಡ. ಸಂದೇಹವಿದ್ದರೆ ನನಗೆ ಬರೆ. ನಿಮ್ಮ ಪರೀಕ್ಷೆ ಬಹುಶಃ ಬಹಳ ಸಮೀಪವಿರಬೇಕು. ಸದ್ಯಕ್ಕೆ ಬೇರೆ ಎಲ್ಲವನ್ನೂ ಬದಿಗಿಟ್ಟು ಅದರ ಕಡೆ ಲಕ್ಷ್ಯ ಕೊಡು. ಪರೀಕ್ಷೆಯು ಮುಗಿದೊಡನೆಯೇ ಬೇಕಾದಷ್ಟು ಸಮಯವಿರುತ್ತದೆ, ಉಳಿದುದಕ್ಕೆ. ಅಂತೂ ನಿನ್ನಲ್ಲಿ ನಡೆಯುತ್ತಿರುವ ವ್ಯಾಪಾರ ನಿನ್ನ ವಯಸ್ಸಿಗೆ ಸಹಜವಾದದ್ದೆ. ಆದರೆ ಆ ದಾರಿಯಲ್ಲಿ ಮುಂದೆ ನಡೆದವರ ಹಿತವಚನದಂತೆ ಸ್ವಲ್ಪ ಕಾಲ ನಡೆಯುವುದು ಶ್ರೇಯಸ್ಕರ. ನಾನು ನಿತ್ಯವೂ ದೇವರ ಮನೆಯಲ್ಲಿ ಧ್ಯಾನ ಮಾಡುವಾಗ ನಿನ್ನ ಕ್ಷೇಮ, ಶ್ರೇಯಸ್ಸು, ಅಭ್ಯುದಯ, ಸುಖ ಶಾಂತಿ ಏಳ್ಗೆಗಳಿಗಾಗಿ ಗುರುದೇವನನ್ನೂ ಜಗನ್ಮಾತೆಯನ್ನೂ ಪ್ರಾರ್ಥಿಸುತ್ತೇನೆ. ಅವರು ನಿನಗೆ ಬೆಳಕು ತೋರುತ್ತಾರೆ. ಆದರೆ ನೀನು ಯಾವ ಚಂಚಲತೆಗೂ ಉದ್ರೇಕಕ್ಕೂ ವಶನಾಗದೆ ದೃಢವಾಗಿ ಮುನ್ನಡೆಯಬೇಕಾದುದು ನಿನ್ನ ಪವಿತ್ರ ಕರ್ತವ್ಯ. ನಿನಗೆ ಏನೇನು ನೆರವು ಬೇಕೋ ಅವನ್ನೆಲ್ಲ ಕೊಡಲು ನಾನೂ ನಿನ್ನಮ್ಮನೂ ಸಿದ್ಧರಿದ್ದೇವೆ. ನಿನ್ನ ಮತ್ತು ಇತರ ಮಕ್ಕಳ ಶ್ರೇಯಸ್ಸಿಗೆ ತಾನೆ ನಾವು ಬದುಕುತ್ತಿರುವುದು! ನೀನು ಶ್ರೇಯಸ್ಸಿನ ಕಡೆಗೆ ಒಂದು ಹೆಜ್ಜೆ ಇಟ್ಟರೆ ನನಗೆ ಪರಮಾನಂದವಾಗುತ್ತದೆ. ನನಗೆ ಗುರುದೇವನು ದಯಪಾಲಿಸಿರುವ ಎಲ್ಲ ಸಾಹಿತ್ಯದ ಆಧ್ಯಾತ್ಮಿಕ ಮತ್ತು ಲೌಕಿಕ ಸಂಪತ್ತೆಲ್ಲ ನಿನಗೆ ಮೀಸಲು, ನೀನು ಅದಕ್ಕೆ ಹೃದಯ ತೆರೆದು ಕೈ ಚಾಚಿದರೆ! ನಿನ್ನ ಉಪಾಧ್ಯಾಯರುಗಳೊಡನೆ ತಾಳ್ಮೆಯಿಂದ ವರ್ತಿಸು. ಅವರ ಆಲೋಚನೆಗಳು ನಿನಗೆ ಹಿಡಿಸದಿದ್ದರೂ ಅಸಭ್ಯವಾಗಿ ವಾದಿಸುವ ಗೋಜಿಗೆ ಹೋಗದಿರು. ನಿನ್ನ ಅಮ್ಮ ಆಶೀರ್ವಾದ ಕಳಿಸುತ್ತಾರೆ. ನಿನ್ನ ತಮ್ಮ ಮತ್ತು ತಂಗಿಯರು ಪ್ರೀತಿ ತಿಳಿಸುತ್ತಾರೆ. ಅವರಿಗೂ ಕಾಗದ ಬರೆದರೆ ಎಷ್ಟು ಸಂತೋಷಪಡುತ್ತಾರೆ!! ಆಶೀರ್ವಾದಗಳು. -ಕುವೆಂಪು * * * ಪತ್ರ 2 'ಉದಯರವಿ' 4.5.75 ಚಿ|| ತೇಜಸ್ವಿಗೆ, ನಿನ್ನ ತಾರೀಖಿಲ್ಲದ ಕಾಗದ ತಲುಪಿತು. ನಿನ್ನ 'ನಿಗೂಢ ಮನುಷ್ಯರು' ಸಿನಿಮಾ ಆಗುವ ವಿಚಾರ ಪತ್ರಿಕೆಯಲ್ಲಿ ಬಂದ ಹಾಗಿತ್ತು. ಯಾರಾದರೂ ಮಾಡಲಿ, ಚೆನ್ನಾಗಿ ಜಾತಿ ಪಕ್ಷಪಾತದ ಸೋಂಕಿಲ್ಲದೆ ಮಾಡಬೇಕಾದ್ದು ಮುಖ್ಯ. ಈಗ ಬ್ಯಾಂಕಿನ ಬಡ್ಡಿಯನ್ನು ಏರಿಸಿದ್ದಾರೆ 20%ಕ್ಕೆ. ನಾನು 30000 ಬೆಳೆಸಾಲ ತೆಗೆದುಕೊಳ್ಳುತ್ತೇನೆ ಎಂದು ಬರೆದಿದ್ದೀಯ? ಬೆಳೆಸಾಲ ಎಂದರೆ ಏನು? ಯಾವಾಗ ತೀರಿಸಬೇಕು? ನೀನು ಹಿಂದೆಯೇ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದನ್ನೆಲ್ಲ ತೀರಿಸಿಯಾಯಿತೇ? ಅದಕ್ಕೆ ಎಷ್ಟು ಬಡ್ಡಿ ಹಾಕಿದ್ದರು ಅಥವಾ ಹಾಕಿದ್ದಾರೆ. ಆ ಸಾಲಕ್ಕೂ ಈ ಸಾಲಕ್ಕೂ ಏನು ವ್ಯತ್ಯಾಸ? ಏತಕ್ಕಾಗಿ ಈ ಹೊಸ ಸಾಲ ಎತ್ತುತ್ತೀಯಾ? ಈ ಸಾರಿ ಫಸಲು ಚೆನ್ನಾಗಿರುವುದರಿಂದ ಸಾಲವನ್ನೆಲ್ಲಾ ತೀರಿಸಿ ಬಿಡುತ್ತೇನೆ ಎನ್ನುತ್ತಿದ್ದಿ. ಆದರೆ ಸಾಲ ತೀರಿಸುವುದಕ್ಕೆ ಬದಲಾಗಿ 30000 ಎತ್ತುತ್ತೇನೆ ಎಂದು ಬರೆದಿದ್ದೀಯಲ್ಲಾ? ನಾನೀಗ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು 'ಬೆರಳ್ಗೆ ಕೊರಳ್' ನಾಟಕವನ್ನು ಅಚ್ಚು ಹಾಕಿಸುತ್ತಿದ್ದೇನೆ. ಎರಡಕ್ಕೂ ಒಟ್ಟು ಸುಮಾರು 35-40 ಸಾವಿರವಾಗುತ್ತದೆ. ಅಲ್ಲದೆ ತಾರಿಣಿಯ ಮನೆ ಕಟ್ಟಲೂ ಪ್ರಾರಂಭಿಸಿಯಾಗಿದೆ. ಅದಕ್ಕೂ ಬಹಳ ಬೇಕಾಗುತ್ತದೆ. ಆದ್ದರಿಂದ ತೊಂದರೆಯಾಗಿದೆ. ಆದ್ದರಿಂದ 30000 ಕೊಡಲು ಸಾಧ್ಯವಿಲ್ಲ. ಏನಾದರೂ ಅಲ್ಪಕ್ಕೆ ಪ್ರಯತ್ನ ಮಾಡಬಹುದೇನೋ ಬ್ಯಾಂಕಿನ ಲೆಖ್ಖ ನೋಡಿ ಹೇಳಬೇಕಾಗುತ್ತದೆ. ಅಲ್ಲದೆ ಫಿಕ್ಸೆಡ್ ಡಿಪಾಸಿಟ್ಟುಗಳನ್ನು ಅರ್ಧದಲ್ಲಿ ತೆಗೆಯಲಾಗುವುದಿಲ್ಲ. ಒಂದುವೇಳೆ ನಿನಗೆ ಕೊಟ್ಟರೆ ನನಗೆ ಬೇಕಾದಾಗ ಯಾವಾಗ ಒಟ್ಟಿಗೆ ತೀರಿಸಲು ಸಾಧ್ಯವಾಗುತ್ತದೆ? ಪುಸ್ತಕಕ್ಕೆ ಕೊಡಬೇಕಾದ್ದನ್ನು ಒಂದು ವೇಳೆ ತಾತ್ಕಾಲಿಕವಾಗಿ ನಿನಗೆ ಕೊಟ್ಟರೆ ಪುಸ್ತಕ ಅಚ್ಚು ಮುಗಿದೊಡನೆ ಪ್ರೆಸ್ಸಿನವರಿಗೆ ಕೊಡಲು ನೀನು ತಟಕ್ಕನೆ ಕೊಡಲು ಸಾಧ್ಯವಾಗುತ್ತದೆಯೆ? ಹಿಂದೆ ನಿನ್ನ ಜೀಪಿನ ವ್ಯವಹಾರದಲ್ಲಿ 8000 ಮತ್ತು ಸ್ಕೂಟರಿನ ವ್ಯವಹಾರದಲ್ಲಿ 4000 ಕೊಟ್ಟಿದ್ದನ್ನೆ ಇದುವರೆಗೂ ಹಿಂದಿರುಗಿಸಲು ನಿನಗೆ ಸಾಧ್ಯವಾಗಿಲ್ಲ!!! ನೀನು ಹಿಂದೆ ಬ್ಯಾಂಕಿನಿಂದ ನಿನಗೆ 80000 ಸ್ಯಾಂಕ್ಷನ್ ಆಗಿದೆ ಎಂದು ಹೇಳುತ್ತಿದ್ದೆ. ಅದೆಲ್ಲಾ ಏನಾಯಿತು? ತೋಟದ ಜಮಾ ಖರ್ಚು ವೆಚ್ಚ ವಿವರ ಇಡುತ್ತಿದ್ದೀಯಾ? ನಾನು ಕೇಳಿದ್ದಕ್ಕೆಲ್ಲ ತುಸು ವಿವರವಾಗಿ ತಿಳಿಸುತ್ತೀಯ ಎಂದು ನಂಬಿದ್ದೇನೆ. ತಾರಿಣಿ-ಪ್ರಾರ್ಥನಾ ಈಗ ಇಲ್ಲಿಯೆ ಮನೆಯಲ್ಲಿ ಇದ್ದಾರೆ. ಚಿದಾನಂದರು ಮೊನ್ನೆ ದೆಹಲಿಗೆ, ಇಂಟರ್‌ವ್ಯೂಗೆ ಹೋಗಿದ್ದಾರೆ. ಐದಾರು ದಿನಗಳಾಗುತ್ತದಂತೆ ಅವರು ಬರುವುದು. ಅವರಿಗೆ ಸೋವಿಯತ್ PhD ಸ್ಕಾಲರ್‌ಷಿಪ್ ಸಿಗುವ ಸಂಭವವಿದೆಯಂತೆ. ಮೂರುವರ್ಷ ರಷ್ಯಾದಲ್ಲಿರುವುದಕ್ಕೂ ಹೋಗಿಬರುವುದಕ್ಕೂ ಅವರೇ ಖರ್ಚು ಕೊಡುತ್ತಾರಂತೆ. ಮೊನ್ನೆ ಪ್ರಭುಶಂಕರ್ ಗುನ್ನರ್‌ಮಿರ್‌ಡಾಲ್ ಅರ್ಥಶಾಸ್ತ್ರಜ್ಞನ The Challenge of world poverty (ದಿ ಛಾಲೆಂಜ್ ಆಫ್ ವರ್ಲ್ಡ್ ಪಾವರ್ಟಿ) ಪುನಃ ಓದಲು ಕೊಟ್ಟಿದ್ದಾರೆ. ಆದರೆ Soft States ಇಂಡಿಯಾದಲ್ಲಿ ಆಗುತ್ತಿರುವ ಅವಿವೇಕ ಅನ್ಯಾಯಕ್ಕೆಲ್ಲ ಮೂಲ ಕಾರಣಗಳನ್ನು ಚೆನ್ನಾಗಿ ವಿಶ್ಲೇಷಿಸಿದ್ದಾನೆ. ಎಷ್ಟು ಹೊರದೇಶಗಳಿಂದ ಸಾಲವೆತ್ತಿದರೂ ನಮ್ಮ ದೇಶದಲ್ಲಿಯೆ ಆರ್ಥಿಕ ಮತ್ತು ಸಾಮಾಜಿಕ ಕ್ರ್ರಾಂತಿ ಆಗದಿದ್ದರೆ ಎಂದಿಗೂ ಈ ಬಡತನ ಹೋಗುವುದಿಲ್ಲ ಎಂದು ಬರೆದಿದ್ದಾನೆ. ಚಿ|| ರಾಜೇಶ್ವರಿ ನಮಗೆ ಬರೆದ ಕಾಗದದಲ್ಲಿ ಮೊದಲ ಮಳೆಗೆ ಶೇಕಡ 30% ಹೂವು ಮಾತ್ರ ಅರಳಿವೆ. ಇನ್ನೊಂದು ಮಳೆ ಚೆನ್ನಾಗಿ ಆದರೆ ಉಳಿದ ಹೂ ಅರಳಬಹುದು ಎಂದು ಬರೆದಿದ್ದಳು. ನೀನು ಬರೆದಿರುವ ಭಾರಿ ಮಳೆಗಳಿಗೆ ಹೂವು ಪೂರ್ತಿ ಅರಳಿದುವೆ? ಮುಂದಿನ ಫಸಲು ಹೇಗಾಗುತ್ತಿದೆ? ಆಶೀರ್ವಾದಗಳೊಂದಿಗೆ -ಕುವೆಂಪು * ಅಂದಹಾಗೆ, ಕನ್ನಡ ಸಾಂಸ್ಕೃತಿಕ ಲೋಕದ ಪ್ರಸಿದ್ಧರು ತೇಜಸ್ವಿ ಅವರೊಂದಿಗೆ ಸಂವಾದಿಸಿರುವ ಪತ್ರಗಳೆಲ್ಲ ಒಟ್ಟಾಗಿ, 'ತೇಜಸ್ವಿ ಪತ್ರಗಳು' (ಪ್ರ: ಕನಸು ಪ್ರಕಾಶನ, ದೇರ್ಲ, ದಕ್ಷಿಣ ಕನ್ನಡ) ಹೆಸರಿನಲ್ಲಿ ಈಗ ಪುಸ್ತಕರೂಪ ತಾಳಿವೆ. ನರೇಂದ್ರ ರೈ ದೇರ್ಲ ಅವರು ಸಂಪಾದಿಸಿರುವ ಈ ಕೃತಿ (660 ಪುಟ, 700ಕ್ಕೂ ಹೆಚ್ಚು ಪತ್ರಗಳು) ಮೇ 10ರಂದು ಪುತ್ತೂರಿನಲ್ಲಿ ಬಿಡುಗಡೆ ಆಗಲಿದೆ. 
source : prajavani.net

ಶಾಸನಗಳಲ್ಲಿ ಆರ್ಥಿಕ ಸಂಗತಿಗಳು


ಶಾಸನ ಎಂದರೆ ಕೌಟಿಲ್ಯನ ಪ್ರಕಾರ ರಾಜರ ಆಜ್ಞೆಯನ್ನು ತಿಳಿಸುವ ಬರಹ. ಅರ್ಥ ಶಾಸ್ತ್ರದ ಈ ನಿರ್ವಚನ ರಾಜ್ಯದ ಏನೆಲ್ಲ ಸಂಗತಿಗಳನ್ನು ಒಳಗೊಳ್ಳುತ್ತದೆ. ಎಂದರೆ ಆಡಳಿತದ ಸಂಗತಿಗಳ ಸಾರುವಿಕೆ ಎಂದೂ ಅರ್ಥೈಸಬಹುದು. ಅರ್ಥದ ಮೇಲೆ ಈ ಪ್ರಪಂಚ ವಿಶೇಷವಾಗಿ ನಿಂತಿದೆ ಎಂದರೆ ಯಾರೂ ಸಂಪೂರ್ಣ ಅಲ್ಲಗಳೆಯುವಂತಿಲ್ಲ. ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳು ಪ್ರತಿಯೊಂದು ಜೀವನದ ಜೊತೆಗೆ ಸಕಾರಾತ್ಮಕವೋ ಇಲ್ಲವೆ ನಕಾರಾತ್ಮಕವೋ ಆಗಿ ಒಂದಿಲ್ಲೊಂದು ರೀತಿಯಲ್ಲಿ ಹೊಂದಿಕೊಂಡಿವೆ.ಮನುಷ್ಯ ಸಮಾಜ ಜೀವಿ ಎಂಬುದು ಈಗ ಸರ್ವವಿದಿತ ಸಂಗತಿ. ಒಂದು ಕಾಲದಲ್ಲಿ ಮನುಷ್ಯ ಪ್ರಾಣಿಗಳಂತೆ ಇರುವಾಗ ಅರ್ಥದ ಸಮಸ್ಯೆ ಇಷ್ಟಿಲ್ಲ. ಆದರೆ ಸಮಾಜವೆಂಬ ಸಂಸ್ಥೆಯನ್ನು ಕಟ್ಟಿಕೊಂಡಾಗ ಕೂಡ ಒಂದಿಷ್ಟು ಕಾಲ ಸುಖದಿಂದ ಇದ್ದಿರಬಹುದು. ಆದರೆ ಎಲ್ಲವಸ್ತುಗಳು ಸಮಾನಬೆಲೆಯವು ಆಗಿರುವುದಿಲ್ಲ. ಆಗ ಬೇರೊಂದು   ಮಾನದಂಡದ ಅವಶ್ಯಕತೆಯುಂಟಾಗುತ್ತದೆ.
ಯಾವುದನ್ನು ಎಲ್ಲಕಡೆಯಲ್ಲೂ ಕೊಡಬಹುದು ಮತ್ತು ಬೇಕಾದ ವಸ್ತುಗಳನ್ನು ಪಡೆಯಬಹುದು. ಎಲ್ಲಕಡೆಯಲ್ಲೂ ಚಲಾವಣೆಗೆ ಹೊಂದುವ ಮಾಧ್ಯಮದ ಅವಶ್ಯಕತೆ ಉಂಟಾಯಿತು, ನಾಣ್ಯಪದ್ದತಿಯು ಜಾರಿಯಲ್ಲಿ ಬಂದಿತು. ಇಂದಿಗೂ ನಿಮಾನ ಪದ್ದತಿ (ಜಛಿತಿಥಿತಿ) ಹಾಗೂ ನಾಣ್ಯವಿನಿಮಯ ಪದ್ದತಿ ಎರಡೂ ಜಾರಿಯಲ್ಲಿವೆ. ಆದರೆ ನಿಮಾನ ಪದ್ದತಿ ಈಗ ಹಳ್ಳಿಗಳಲ್ಲಿ ಮಾತ್ರ ಕಂಡು ಬರುತ್ತದೆ, ಅದೂ ಉತ್ತರ ಕರ್ನಾಟಕದಲ್ಲಿ.
ಕರ್ನಾಟಕ ಎಂದರೆ ಇಲ್ಲಿ ಕವಿರಾಜ ಮಾರ್ಗದಲ್ಲಿ ಹೇಳಿದ ಕಾವೇರಿಯಿಂದ ಗೋದಾವರೀ ತೀರಗಳ ಮಧ್ಯದ ಪ್ರದೇಶ ಎಂದಿಟ್ಟುಕೊಂಡು ಈ ವಿಸ್ತಾರವಾದ ಭೂಭಾಗದಲ್ಲಿನ ಸಂಗತಿಗಳನ್ನು ಸುಮಾರು ೨೬೦೦ ವರ್ಷಗಳ ಚಾರಿತ್ರಿಕ ಸಂಗತಿಗಳನ್ನು ವಿವರಿಸುವ ಪ್ರಯತ್ನವನ್ನು ಮಾಡಿದೆ. ಕಾಲವೂ ವಿಸ್ತಾರ, ದೇಶವೂ ವಿಶಾಲ, ಮತ್ತೆ ಅನೇಕ ಸಂಗತಿಗಳು ಅಧ್ಯಯನದ ಮುಷ್ಟಿಗೇ ಬಂದಿಲ್ಲ, ಇಲ್ಲವೇ ಸುಸಂಬದ್ಧವಾದ ಅಧ್ಯಯನವೇ ಆಗಿಲ್ಲ. ಆದುದರಿಂದ ಇಂದು ಯಾರೇ ಆಗಲಿ ಸ್ವಲ್ಪ ಗಂಬೀರವಾದ ಹಾಗೂ ವಿಶ್ಲೇಷಣಾತ್ಮಕವಾದ ಅಧ್ಯಯನವನ್ನು ಆರಂಬಿಸಿದರೆ ಅನೇಕ ಹೊಸಸಂಗತಿಗಳು ಹೊರಬೀಳುತ್ತವೆ, ಇದುವರೆಗಿನ ತಿಳುವಳಿಕೆಯ ಆಯಾಮಗಳನ್ನೇ ಬದಲಿಸಿಬಿಡುತ್ತವೆ. ಒಂದು ಉದಾಹರಣೆಯಿಂದ ಹೇಳುವುದಾದರೆ ಪಲ್ಲವರು ಮೊದಲು ಕರ್ನಾಟಕದವರು  ಆಮೇಲೆ ತಮಿಳುನಾಡಿನವರು
ಅವರ ಮೊದಲ ರಾಜಧಾನಿ ವಿಜಯ ವೈಜಕೇಯಿ ಎಂದರೆ  ಬನವಾಸಿ. (ಎಪಿ.ಇಂಡಿಕಾ.ಸಂ.೧,ಪು.೬, ಶಾಸನಪಾಠ). ಈ ಸಂಗತಿ ಇಂದಿನ ಯಾವ ಪಠ್ಯಪುಸ್ತಕದಲ್ಲೂ ಕಾಣಬರದು. ಅರ್ಥಾತ್ ನಮ್ಮ ಮುಂದೆ ಇಂದು ಇರುವ ಅನೇಕ ಸಂಗತಿಗಳನ್ನು ಯಥಾಸ್ಥಿತಿಯಲ್ಲಿ ಸ್ವೀಕರಿಸುವಂತಿಲ್ಲ. ಇನ್ನು ಆರ್ಥಿಕ ಸಂಗತಿಗಳ ಸಮಗ್ರ ಅಧ್ಯಯನ ಆಗೇ ಇಲ್ಲದಿರುವಾಗ ಆ ಬಗೆಗೆ ಕೂಲಂಕುಷವಾಗಿ ವಿವರ ಕೊಡುತ್ತೇನೆ  ಎನ್ನುವುದು ಒಂದು ದಾರ್ಷ್ಟ್ಯದ ಮಾತು. ಶಾಸನಗಳಲ್ಲಿ ವಿಫುಲವಾದ ಸಾಮಗ್ರಿಯು ದೊರೆಯುತ್ತದೆ. ಒಂದುರಾಜ್ಯ ಎಂದರೆ ದೇಶ,  ಕೋಶ, ದುರ್ಗ, ಪುರ, ರಾಷ್ಟ್ರ, ಸ್ವಾಮಿ, ಅಮೂಲ್ಯಜನಪದ, ದಂಡ, ಬಲ, ಮಿತ್ರ ಹಾಗೂ ಜನಪದ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ರಾಜನಿಗೆ ಮಹಿಷೀ, ಖಡ್ಗ, ಕುಮಾರ, ದ್ರವಿಣ(ಸಂಪತ್ತು), ಅಶ್ವ, ಗಜ ಹಾಗೂ ಮಂತ್ರಿ ಮುಂತಾಗಿ ಸಪ್ತಾಂಗಗಳಿವೆ. ಆರ್ಥಿಕ ಹಣಪ್ರಪಂಚದ ವ್ಯವಸ್ಥೆ. ಹಣ ಅಥವಾ ಪಣ ಯಾವುದು ಕಾರ್ಷಪಣದಿಂದ ಬಂದಿವೆಯೊ ಅದರ ವ್ಯವಸ್ಥೆ. ಕಾರ್ಷಪಣ ಎಂದರೆ ಚಿನ್ನ ರೂಪಾಯಿ ಮೂಲತಃ ರೂಪ್ಯ ಎಂದರೆ ಬೆಳ್ಳಿಯಿಂದ ಆದದ್ದು. ಚಿನ್ನ ಬೆಳ್ಳಿ ಇವು ಕಲೆತರೆ ಅಚ್ಚಬಂಗಾರ ಹಾಗೂ ಹಾಗೂ ಅಚ್ಚ ಬೆಳ್ಳಿ ಇವು ಬುಲಿಯನ್ ಎನಿಸಿಕೊಳ್ಳುತ್ತದೆ. ಹಿಂದೂ ರಾಜರ ಕಾಲದಲ್ಲಿ ಚಿನ್ನ ವಿಶೇಷವಾಗಿ ನಾಣ್ಯದ ಧಾತುವಾಗಿತ್ತು. ಸೀಸ ಹಾಗೂ ತಾಮ್ರಲೋಹಗಳೂ ನಾಣ್ಯದ ಧಾತುಗಳಾಗಿದ್ದವೆಂದು ಲೋಹದ್ರಮ್ಮ ಕರಿಯ ದ್ರಮ್ಮ, ಎಂಬ ಮಾತುಗಳಿಂದ ತಿಳಿದುಬರುತ್ತದೆ. ಬೆಳ್ಳಿಯನ್ನು ವಿಶೇಷವಾಗಿ ಮುಸಲ್ಮಾನರ ರಾಜ್ಯಾಡಳಿತ ಕಾಲದಲ್ಲಿ ನಾಣ್ಯಸೃಷ್ಟಿಗೆ ಬಳಸಿದುದು ಕಂಡುಬರುತ್ತದೆ. ದ್ರಮ್ಮ (ಡ್ರ್ಯಾಂ) ಎಂಬ ಗ್ರೀಕ್ ನಾಣ್ಯ, ಅಣಂತೆಯೇ ದೀನಾರ (ಡಿನೇರಿಯಸ್) ರೋಮನ್ ನಾಣ್ಯ ಇವುಗಳ ಪ್ರಸಕ್ತ ಶಾಸನಗಳಲ್ಲಿಯೂ, ವಡ್ಡಾರಾಧನೆಯಲ್ಲಿಯೂ ಮತ್ತು ಬಸವಣ್ಣನವರ ವಚನಗಳಲ್ಲಿಯೂ ಬಂದಿದ್ದು ಕರ್ನಾಟಕದ ಜನತೆ ಇವನ್ನು ತಮ್ಮ ಜೀವನದ ವ್ಯವಹಾರದಲ್ಲಿ ಬಳಸುತ್ತಿದ್ದಾರೆಂದು ಅಬಿವ್ಯಕ್ತವಾಗುತ್ತದೆ. ಇವುಗಳು ಈಗ ಹೇಗೆ ಅಪರಿಚಿತವೋ ಹಾಗೆಯೇ ಹಿಂದಿನ ಕಾಲದ ಇನ್ನೂ ಅನೇಕ ಪಾರಿಭಾಷಿಕ ಪದಗಳು ಸದ್ಯಕ್ಕೆ ಅರ್ಥವಾಗದಿರಬಹುದು ಇಲ್ಲವೆ ವಿದ್ವಾಂಸರಲ್ಲಿ ಬಿನ್ನಾಬಿಪ್ರಾಯಗಳನ್ನು ಹೊಂದಿರಬಹುದು. ಬಿನ್ನಾಬಿಪ್ರಾಯಗಳನ್ನು ಬದಿಗಿಟ್ಟು ವಸ್ತುಸ್ಥಿತಿಯನ್ನು ಸಾಮಾನ್ಯ ರೀತಿಯಲ್ಲಿ ನೋಡಬೇಕಾಗಿದೆ.
ಕರ್ನಾಟಕದ ಆರ್ಥಿಕ ಸಂಗತಿಗಳನ್ನು ದೇಶದ ಉತ್ಪಾದನೆ, ವ್ಯಾಪಾರ ಹಾಗೂ ಆಯವ್ಯಯ ಎಂಬ ಮೂರು ನಾಲ್ಕು ವಿಭಾಗಗಳಲ್ಲಿ ಪರಿಶೀಲಿಸಬಹುದು.
೧. ಉತ್ಪಾದನೆ: ಇಂದಿನಂತೆಯೇ ಪ್ರಾಚೀನ ಕಾಲದಲ್ಲಿಯೂ ಕರ್ನಾಟಕದಲ್ಲಿ ವ್ಯವಸಾಯವೇ ಬಹುಮುಖ್ಯವಾದ ಜೀವನೋಪಾಯವಾಗಿತ್ತು. ಭೂಮಿತಾಯಿಯ ಮಕ್ಕಳು  ನಾವು, ಕುರಿ ಸಾಕಾಣಿಕೆ ಆಡುಸಾಕಾಣಿಕೆ, ಎಮ್ಮೆ ಮತ್ತು ಹಸುಸಾಕಾಣಿಕೆ ಇವೂ ನಮ್ಮವರ ಉದ್ಯಮಗಳಾಗಿದ್ದವು. ಗೋಸಾಸ, (ಗೋಸಹಸ್ರ) ಗೋಮಾಳ ಇತ್ಯಾದಿಗಳನ್ನು ಇಲ್ಲಿ ಜ್ಞಾಪಕಕ್ಕೆ ತಂದುಕೊಳ್ಳಬೇಕು. ಕೃಷಿಮಷಿಗಳ ಪ್ರಸ್ತಾಪ ಪಂಪ ಮಾಡಿದ್ದಾನೆ(ಆದಿ. ಪು. ೧೧೧೦೭) ಕೃಷಿ ಎಂದರೆ ಒಕ್ಕಲುತನದಿಂದ ಲೋಕವೆ  ತಣಿಯುತ್ತಿತ್ತು.
ನೆಲನುಂ ಬೆಳೆಗೆ ಪಾರ್ವರುಂ ಪ್ರಜೆಯುಂ ತಣಿಗೆ , ಎಂಬ ಮಾತುಗಳಲ್ಲಿ ಜ್ಞಾಪಿಸಿಕೊಳ್ಳಬಹುದು. ದಾನವನ್ನು ಕೊಡುವ ವಸ್ತುಗಳಲ್ಲಿ ಭೂದಾನವೇ ಶ್ರೇಷ್ಠವೆಂದು ಪರಿಗಣಿಸಲಾಗುತ್ತಿತ್ತು. ಮತ್ತು ಭೂದಾನಕ್ಕೆ ಸಂಬಂಧಪಟ್ಟ ಶಾಸನಗಳ ಸಂಖ್ಯೆಯೇ ಅಕ. ಸಾಗುವಳಿಯ ಜಮೀನಿನ ಮೇಲೆ ಕಂದಾಯವನ್ನು ನಿಗದಿಪಡಿಸಲಾಗುತ್ತಿತ್ತು ಮಳೆಯಿಂದ ಬೆಳೆಯುವ ಭೂಮಿ ದೇವಮಾತೃಕೆ (ಬೆದ್ದಲುಒಣಹರಿ), ನದೀತಟಾಕ ಕೆರೆತೊರೆ ಇತ್ಯಾದಿಗಳಿಂದ ಬೆಳೆಯುವ ಭೂಮಿ ನದೀಮಾತೃಕೆ(ಗದ್ದೆ), ಬಾವಿ, ಕೊಡ ಇತ್ಯಾದಿಗಳಿಂದ ಸಾಗುವಳಿಗೊಳ್ಳುವುದು ತೋಟ ತುಡಿಕೆ. ಇವನ್ನೇ ಮುಸಲ್ಮಾನರ ಆಳ್ವಿಕೆಯಲ್ಲಿ ಖುಷ್ಕಿ, ತರಿ ಎಂದು ಕರೆದಿರುವರು. ಈ ವಿಭಜನೆ ಇಂದಿಗೂ ಬಳಕೆಯಲ್ಲಿದೆ. ಮಣ್ಣಿನ ಗುಣವನ್ನು ಕೂಡ ಆಶ್ರಯಿಸಿ ಹೊಲಗಳನ್ನು ಎರೆ(ಕರಿಕೆಯ್) ಕಿಸುಗಾಡ್, ಕೆಂಗಾಡು, ಮಳಲಕೆಯಿ, ಮೊರಡಿ ಮುಂತಾಗಿ ವಿಭಜಿಸಿದುದು ಕಂಡುಬರುತ್ತದೆ.
ಪ್ರಾಚೀನ ಕರ್ನಾಟಕದಲ್ಲಿಯೂ ಈಗಿನ ಹಾಗೆಯೇ ಭತ್ತ, ಕಬ್ಬು, ತೆಂಗು, ಅಡಕೆ,ಬಾಳೆ, ಈಳೆ, ನಿಂಬೆ, ಮಾವು, ಮಾದಲ, ಹಲಸು, ನೇರಳೆ, ಮಲ್ಲಿಗೆ, ಸಂಪಿಗೆ, ಸುರಗಿ, ಅದಿರ್ಮುತ್ತೆ, ಪಾದರಿ, ಗೊಜ್ಜಿಗೆ(ಸೇವಂತಿಗೆ), ದವನ ಹಾಗೂ ಮರುಗಗಳನ್ನು ಬೆಳೆಯುತ್ತಿದ್ದರು. ಒಂದೊಂದು ಊರಿಗೂ ಅಲ್ಲಿನ ದೇವಸ್ಥಾನಕ್ಕೆ ಆನಿಕೊಂಡೋ ಇಲ್ಲವೆ ಊರ ಹೊರಗೆ ಹೂದೋಟಗಳಿರುತ್ತಿದ್ದವು. ಅವುಗಳನ್ನು ಮಾಡುವ ಮಾಲೆಕಾರ(ಹೂಗಾರ, ಫುಲಾಣಿ) ಜನರಿಗೆ ರಾಜ ಭಂಡಾರದಿಂದ ಹೂ ನೀಡುವ ಬಗ್ಗೆ ಕಂದಾಯದಲ್ಲಿ ಒಂದಿಷ್ಟು ರಿಯಾಯ್ತಿ ಬಿಟ್ಟುದು ಮುಂತಾಗಿ ವಿವರಗಳು ಬರುತ್ತವೆ.
ಉದಾ: ಮಾಲಕಾರಂಗೆ ಬಿಟ್ಟೋಡು ಅರ್ಧವಿಸವಿ. ಇಮ್ಮಡಿ  ಪುಲಕೇಶಿಯ ಚಿಕ್ಕಪ್ಪ ಮಂಗಳೇಶನು ಮಾಡಿಸಿದ ಕಲ್ಮನೆಗೆ( ಗುಹಾದೇವಾಲಯಕ್ಕೆ) ಲಂಜಿಗೇಸರ ಊರನ್ನು ಮತ್ತು ಮಾಲಕಾರಂಗೆ ರಾಜನು ನೀಡಿದ ದತ್ತಿಯನ್ನು ಒಂದು ಶಾಸನ ದಾಖಲಿಸಿದೆ. ದೇವಾಲಯದ ಕೈಂಕರ್ಯಕ್ಕೆ ಊರಿನ ಕಂದಾಯವನ್ನು ಬಿಡುತ್ತಿದ್ದರು. ಎಂಬುದು ಇಲ್ಲಿಂದ ಸ್ಪಷ್ಟವಿದೆ. ಅರ್ಧವಿಸವಿ ಅವಂದು ಬಳಕೆಯಲ್ಲಿದ್ದ ನಾಣ್ಯವನ್ನು ಸೂಚಿಸುತ್ತದೆ. ಬೆದ್ದಲು ಭೂಮಿಯಲ್ಲಿ ಜೋಳ, ದ್ವಿದಳಧಾನ್ಯಗಳು, ಹತ್ತಿ, ಹರಳು, ಎಳ್ಳು, ಸಾಸುವೆ, ಕೊತ್ತಂಬರಿ, ಸಜ್ಜೆ, ನವಣೆ, ಶಾವಿ(ರಾಜಾನ್ನ), ಹಾರಕ, ಕೋದ್ರ, ಗೋ ಇತ್ಯಾದಿಗಳನ್ನು ಬೆಳೆಯುತ್ತಿದ್ದರು. ನೀರಾವರಿಯು ಮುಖ್ಯವಾಗಿ ನದಿ, ಬಾವಿ, ಕೆರೆ  ಹಾಗೂ ಕೂಪಗಳನ್ನು ಅವಲಂಬಿಸಿತ್ತು. ರಾಜರು, ಶ್ರೀಮಂತರು, ಮಠಾಪತಿಗಳು ಮತ್ತು ಗ್ರಾಮಮುಖ್ಯಸ್ಥರು ಕೆರೆ, ಕಾಲುವೆ, ಕಟ್ಟೆ, ಸೇತುವೆ ಕಟ್ಟಿಸುತ್ತಿದ್ದರು. ಆ ಸೌಲಭ್ಯವನ್ನು ಪಡೆದವರು ಬೆಳೆಯಲ್ಲಿ ೧೦/೧ಎಂದರೆ ದಶಬಂದ ಅಥವಾ ಪತ್ತೆಸಿದ್ದಿ, ಫಸಲನ್ನು ಕೊಡಬೇಕಾಗಿದ್ದಿತು. ಶ್ರವಣ ಬೆಳಗೊಳ ತೀರ್ಥಕ್ಕೆ ಒಡೆಯರಾದ ಮತಿಸಾಗರಪಂಡಿತ ಭಟಾರಕರು ಕಾವೇರಿ ನದಿಯ ದಡದಲ್ಲಿ ಪೆರ್ಬಾಣ ಹಳ್ಳಿಯಲ್ಲಿ (ಈಗಿನ ಶ್ರೀರಂಗ ಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮ)
ಕಟ್ಟೆಯನ್ನು ಕಟ್ಟಿಸಿ ಅದಕ್ಕೆ ಆ ಹಳ್ಳಿಯನ್ನು ಕೊಂಡವರು ಅಲ್ಲಿನ ನೀರಾವರಿ ಸೌಲಭ್ಯವನ್ನು ಬಳಸಿಕೊಂಡುದಕ್ಕೆ ಕೊಡಬೇಕಾದ ಕಂದಾಯದ ವಿವರಗಳನ್ನು ಚೆನ್ನಾಗಿ ವಿವರಿಸಿದೆ. ಕಟ್ಟೆಯನ್ನು ಕಟ್ಟಿದ ವರ್ಷ ಅರಣಿಯ ಒಂದು ಗದ್ಯಾಣ, ಎರಡನೆಯ ವರ್ಷ ಪತ್ತೊನ್ದಿ (೧೦/೧) ಮೂರನೆಯ ವರ್ಷಏಳಳವಿ (೭/೧) ಅನಂತರದಲ್ಲಿ ಎಲ್ಲಾ ಕಾಲಕ್ಕೂ ಐದಳವಿ(೫/೧) ಕೊಡಬೇಕು. ಕ್ರಿ.ಶ. ೫ನೆಯ ಶತಮಾನದ ಹಲ್ಮಿಡಿಯ ಶಾಸನದ ಕಾಲದಲ್ಲಿ ೧೦/೧ ಇದ್ದದ್ದು ಕ್ರಿ.ಶ ೧೦ನೆಯ ಶತಮಾನದಲ್ಲಿ ೫/೧ ಆದದ್ದು ತುಂಬ ಗಮನಾರ್ಹವಾದ ಅದಂಶ.(ಟoಠಿ ಟ್ಛ ಜಿqಜ್ಞಿಜ)ಸೂಚ್ಯಾಂಕ ಏರಿದುದರ ಪರಿಣಾಮ ವಿದೆಂದು ತೋರುತ್ತದೆ.ಸುಮಾರು ಐದುನೂರು ವರ್ಷಗಳಲ್ಲಿ ಗದ್ದೆಯ ಭೂಮಿಯ ಮೇಲೆ ಹಾಕಿದ ಕಂದಾಯ ಎರಡುಪಟ್ಟಾಗಿದೆ  ಎಂಬುದು ಆರ್ಥಿಕ ವ್ಯವಸ್ಥೆಯ ದರ್ಪಣವಾಗಿದೆ.

ಈ ದೃಷ್ಟಿಯಿಂದ ಈಶಾಸನ (ಎಪಿ. ಕ. ಸಂ.೧೯೯೭) ಮಹತ್ವದ  ದಖಲೆಯಾಗಿದೆ. ತರಿ, ಖುಷ್ಕಿ ಭೂಮಿಗಳನ್ನು ಪರಿಗಣಿಸಿ ಕಂದಾಯವನ್ನು ನಿರ್ಧರಿಸಲಾಗುತ್ತದೆ. ಕಟ್ಟುಗುತ್ತಿಗೆ ಆಗಲೂ ಇತ್ತು.
೨. ಕೈಗಾರಿಕೆಗಳು : ಕೃಷಿಗೆ ಬೇಕಾದ ಹಾಗೆಯೇ ಯುದ್ಧಕ್ಕೆ ಬೇಕಾದ ಸಲಕರಣೆಗಳನ್ನು ಆಯುಧಗಳನ್ನು ಉತ್ಪಾದಿಸುವ ಕಮ್ಮಾರರ, ಪಂಚಕಾರುಕರ (ಇವರಲ್ಲಿ ಅಕ್ಕಸಾಲಿಗರು ಮೊದಲಾದವರು ಬರುತ್ತಾರೆ) ಕುಟುಂಬಗಳು  ಇದ್ದಂತೆ ನೇಕಾರರ ಗುಂಪೂ ಬಹಳ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ರೇಷ್ಮೆಯ ಉದ್ಯಮ ಪ್ರಾಯಶಃ ಚೀನಾದೇಶದಿಂದ ಇಲ್ಲಿಗೆ ಬಂದಿರಬೇಕು ಚೀನಾಂಬರ ಎಂದು ರೇಷ್ಮೆ ವಸ್ತ್ರಕ್ಕೆ ಕರೆದಿರುವುದೇ ಇದಕ್ಕೆ ಸಾಕ್ಷಿ. ಪಟ್ಟಗಾರರು ಎಂದೂ ಹೇಳಿರಬಹುದು. ನೇಕಾರರು ಹತ್ತಾರು ವಸ್ತ್ರಗಳನ್ನಲ್ಲದೆ. ರೇಷ್ಮೆ ಮುಂತಾದ ನವುರಾದ ವಸ್ತ್ರಗಳನ್ನು ನೇಯುತ್ತಿದ್ದರು. ನೇಯ್ಗೆಯ ಮಗ್ಗಗಳ ಮೇಲೆ ತೆರಿಗೆಗಳನ್ನು ಹಾಕುತ್ತಿದ್ದುದು ಅದರ ವಿಶೇಷ ಬೆಳವಣಿಗೆಯನ್ನು ಸೂಚಿಸುತ್ತದೆ. ಇದಕ್ಕೆ ಮಗ್ಗದೆರೆ ಎಂದು ಹೇಳುತ್ತಿದ್ದರು. ಚಿಪ್ಪಿಗಸಿಂಪಿಗ ಅಥವಾ ಸೂಜಿಯ ಕಾಯಕದ ಬದುಕುವ ಬಗೆ ಅಸ್ತಿತ್ವದಲ್ಲಿತ್ತು. ಮೇದಾರಿಕೆ( ಬೊಂಬುಗಳನ್ನು ಸೀಳಿ ಬುಟ್ಟಿ ಹಾಗೂ ಚಾಪೆ, ಮೊರ ಇತ್ಯಾದಿಗಳನ್ನು ಮಾಡುವುದು) ಇದ್ದಿತು. ಕುಂಬಾರಿಕೆ, ಎಣ್ಣೆಯ ಕೈಗಾರಿಕೆಯು ತುಂಬಾ ಪ್ರಚಾರದಲ್ಲಿದ್ದಿತು. ತೆಲ್ಲಿಗರೆಂದು ಇವರನ್ನು ಕರೆಯುತ್ತಿದ್ದರು. ಎಣ್ಣೆಯ ಗಾಣಗಳ ಮೇಲೆ ತೆರಿಗೆಗಳನ್ನು ಹಾಕಿದುದಕ್ಕೆ ದಾಖಲೆಗಳಿವೆ. ಕಬ್ಬಿನ ಗಾಣಗಳಲ್ಲಿಆಲೆಮನೆಗಳಲ್ಲಿಬೆಲ್ಲ ಹಾಗೂ ಸಕ್ಕರೆಯನ್ನು ಉತ್ಪಾದಿಸುತ್ತಿದ್ದರು. ವಚನ ಯುಗದಲ್ಲಿ ಅನೇಕ ಕಾಯಕಗಳ ಉಲ್ಲೇಖವಿದೆ. ಕಾಯಕವೇ ಕೈಲಾಸ ಎಂಬ ನುಡಿಯನ್ನು ಇಲ್ಲಿ ನೆನೆಯಬಹುದು.
೩. ಗಣಿ ಉದ್ಯಮಗಳು :ಪ್ರಾಚೀನ ಕರ್ನಾಟಕ ಎಂದರೆ ಮೌರ್ಯರ ಕಾಲಕ್ಕೆ ಮುಂಚೆಯೇ ಚಿನ್ನದ ಗಣಿಕೆಲಸ ಇಲ್ಲಿ ನಡೆದಿತ್ತು ಎಂಬುದಾಗಿ ಡಾ||ಥಾಫರ್ ಮೊದಲಾದವರ ಉತ್ಖಲನಗಳಲ್ಲಿ ಕಂಡುಬಂದಿದೆ. ದೇವನಾಂ ಪ್ರಿಯದರ್ಶಿಯೂ ಅಶೋಕನೂ ಒಬ್ಬನೇ ಎಂದು ತಿಳಿಸಿದ ಮಸ್ಕಿ ಶಾಸನದ ಸುತ್ತ ಸುತ್ತಣ ಪ್ರದೇಶದ ಅಧ್ಯಯನದಲ್ಲಿ ಇದು ಸ್ಪಷ್ಟವಿದೆ. ಇಂದಿಗೂ ಈ ಪ್ರದೇಶದ ಹಟ್ಟಿಯಲ್ಲಿ ಗಣಿಗಾರಿಕೆ ಉದ್ಯಮ ಅಸ್ತಿತ್ವದಲ್ಲಿದೆ.  ಕೋಲಾರ ಚಿನ್ನದ ಗಣಿಗಳೂ ಬಹು ಪ್ರಾಚೀನ, ಕೋಲಾರ ಜಿಲ್ಲೆಯ ಹುನಕುಂದ ಮತ್ತು ಬಿಜಾಪುರ ಜಿಲ್ಲೆಯ ಹುನಗುಂದ ಸ್ಥಳಗಳ ಬಳಿಯಲ್ಲಿ ಚಿನ್ನದ ಗಣಿಗೆಲಸಗಳ ಅವಶೇಷಗಳಿವೆ.  ಜಲಗಿನಅಕಾರಿ ಎಂಬ ಪದವಿಯೂ ಚಿನ್ನದ ಕೆಲಸದ ಮೇಲಿನ ಸುಂಕಾಕಾರಿಯನ್ನು ಸೂಚಿಸುತ್ತಿರಬಹುದು. ಜರಗಿನ ತೆರೆ ಎಂಬ ಒಂದು ತೆರಿಗೆ ಉತ್ತರ ಕರ್ನಾಟಕದ ಶಾಸನಗಳಲ್ಲಿ ಕಂಡುಬರುತ್ತದೆ. ಜರಗಿನ ಪ್ರಸ್ತಾಪ ಬಸವಣ್ಣನವರ ಒಂದು ವಚನದಲ್ಲಿ ಬಂದಿದೆ. ಶ್ರೀಶೈಲದಲ್ಲಿರುವ ಹಾಟಕೇಶ್ವರ ದೇವಾಲಯದ ಲಿಂಗವನ್ನು ಹಾಗೆ ಕರೆಯಲು ಅದು ಒಂದೊಮ್ಮೆ ಚಿನ್ನವನ್ನು(ಹಾಟಕ) ನೀಡುತ್ತಿದ್ದುದೇ ಕಾರಣ.
ಇಂಗಳದ ಹಾಳ ಎಂಬ ಗ್ರಾಮಗಳ ಬಳಿಯಲ್ಲಿ ತಾಮ್ರ ಲೋಹವನ್ನು ಉತ್ಪಾದಿಸುತ್ತರೆಂದು ತಿಳಿದುಬಂದಿದೆ. ಶಹಪುರ ತಾಲ್ಲೂಕಿನ ಗೋಗಿಯ ಬಳಿಯ ಹಾರನಗೆರೆಯಲ್ಲಿ ಬೂದಿದಿಣ್ಣೆ (Ash mount) ದೊರಕಿದ್ದು ಹತ್ತಿರದಲ್ಲಿ ಇಂಗಿನ ಹಾಳದಲ್ಲಿ ತಾಮ್ರ ಉತ್ಪಾದಿಸುತ್ತಿದ್ದರೆಂದು ಇತ್ತೀಚೆಗೆ ತಿಳಿದು ಬಂದಿದೆ. ಇಲ್ಲಿ ಶಾತವಾಹನರ ಕಾಲದ ಟಂಕಸಾಲೆ ಒಂದಿದ್ದುದಾಗಿಯೂ ಅಲ್ಲಿ ದೊರೆತ ಅನುಪಯುಕ್ತ ನಾಣ್ಯಗಳ ರಾಶಿಯ ಮೂಲಕ ಗೊತ್ತಾಗಿದೆ. ಈ ನಾಣ್ಯಗಳಿಗೆ ಮಿಶ್ರಲೋಹ (Alloy) ಬಳಸಿರುವುದು ಗಮನಾರ್ಹ.
ಉಪ್ಪು ಮಾರಾಟದ ವಸ್ತುಗಳಲ್ಲೊಂದಾಗಿತ್ತು. ಅನೇಕ ಕಡೆಗೆ ಉಪ್ಪಿನ ಮಾಳಿಗಳಿವೆ. ಗುಲ್ಬರ್ಗ ಜಿಲ್ಲೆಯ ಸುರಪುರ ತಾಲ್ಲೂಕಿನ ಬೈಚಬಾಳದಲ್ಲಿ ೧೯೫೦೬೦ ರ ವರೆಗೂ ಉಪ್ಪಿನ ಉದ್ಯಮ ಚಾಲ್ತಿಯಲ್ಲಿದ್ದಿತು. ಈ ಕಾರ್ಯದಲ್ಲಿ ತೊಡಗಿಸಿಕೊಂಡ ಕುಟುಂಬಗಳಿಗೆ ಉಪ್ಪಾರರು ಎಂದು ಹೇಳಲಾಗುತ್ತಿತ್ತು. ಉಪ್ಪಿನ ಬಾವಿಗಳು(ಕೂಪಗಳು) ಇನ್ನೂ ಕಾಣಸಿಗುತ್ತವೆ. ಉಪ್ಪಿನಿಕ ಗವುಡಗಳು ದೇವರ್ಗೆ ಬಿಟ್ಟ ಆಯ(ಸುರಪುರ ತಾಲ್ಲೂಕಿನ ಶಾಸನಗಳು ಕ್ರಿ.ಶ.೧೧೪೪ ಹಗರಟಿಯ ಶಾಸನ) ಎಂಬ ವಾಕ್ಯ ಉಪ್ಪಿನ ವ್ಯಾಪಾರದ ವಿಷಯವನ್ನು ತಿಳಿಸುತ್ತದೆ. ಗ್ರಾಮನಾಂ ಉಪ್ಪಿನ ಕೆರೆ ಇತ್ಯಾದಿಗಳು ಈ ಉದ್ಯಮದ ಅಸ್ತಿತ್ವವನ್ನು ಸೂಚಿಸುತ್ತವೆ.  ಗಣಿಗಳಿಂದ ರಾಜ್ಯಗಳಿಗೆ ತುಂಬ ಆದಾಯವಿರುತ್ತಿತ್ತು. ಕೌಟಿಲ್ಯನ ಪ್ರಕಾರ ಗಣಿಗಳು ರಾಜ್ಯದ ರಾಜನ ಆಸ್ತಿ. ಮನುಸ್ಮೃತಿಯಲ್ಲಿ ಖಾಸಗಿಯವರೂ ಗಣಿಗಾರಿಕೆ ಮಾಡಬಹುದೆಂದಿದೆ. ಕ್ರಿ.ಶ.೧೧೧೨ ನೆಯ ಶತಮಾನದ ಕೃತಿ ಮಾನಸೋಲ್ಲಾಸ ಚಿನ್ನದ ಗಣಿ, ಬೆಳ್ಳಿಯಗಣಿ, ರತ್ನಗಳಗಣಿ ಇತ್ಯಾದಿಗಳ ಮೇಲೆ ತೆರಿಗೆಗಳನ್ನು ಹಾಕಬೇಕೆಂದು ವಿಸುತ್ತದೆ. ಬಳ್ಳಿಗಾವೆಯ ವರ್ತಕರು ಇಂದ್ರನೀಲ, ಚಂದ್ರಕಾಂತ, ಮುತ್ತು, ಮಾಣಿಕ್ಯ, ವಜ್ರ, ವೈಡೂರ್ಯ, ಪುಷ್ಯರಾಗ, ಇತ್ಯಾದಿ ರತ್ನಗಳ ವ್ಯಾಪಾರವನ್ನು ಮಾಡುತ್ತಿದ್ದರು. ಬಳ್ಳಾರಿಜಿಲ್ಲೆಯಲ್ಲಿ ವಜ್ರದ ಗಣಿಗಳಿದ್ದುವೆಂದು ಮಾರ್ಕೊಪೋಲೊ, ಇಬ್ನಾಬತೂತ, ತವೆರ್ನಿಯರ್, ಮೊದಲಾದ ಪ್ರವಾಸಿಗರ ಬರವಣಿಗೆಯಿಂದ ತಿಳಿದು ಬರುತ್ತದೆ. ಗುಂಟಕಲ್ ಬಳಿಯ ವಜ್ರಕರೂರಲ್ಲಿ ಇಂದಿಗೂ ಆಗಾಗ ವಜ್ರಗಳು ದೊರೆಯುತ್ತವೆ. ವಜ್ರ, ಬಿಜ್ಜ ಇವು ವಜ್ರದ ಅಸ್ತಿತ್ವವನ್ನು ಸೂಚಿಸುತ್ತವೆ. ವಿಜಯನಗರದ ಬೀದಿಗಳ ರತ್ನದ ವ್ಯಾಪಾರ ಯಾರಿಗೆ ಗೊತ್ತಿಲ್ಲ.
ಸಿಂಹಾಸನಗಳನ್ನು ಕಲಾಕಾರರು ರಾಜರುಗಳಿಗೆ ಏರ್ಪಡಿಸುತ್ತಿದ್ದಿರಬೇಕು ಆದರೆ ಲೋಹಾಸನಗಳ ಪ್ರಶಸ್ತಿ ಶಾಸನಗಳಲ್ಲಿಯೂ ಪಂಪಾದಿ ಕವಿಗಳ ಕಾವ್ಯದಲ್ಲಿಯೂ ಕಂಡುಬರುತ್ತಿದ್ದು ಅನೇಕ ಶ್ರೀಮಂತರು ಇವುಗಳನ್ನು ಕೊಡಲು ಬಳಸುತ್ತಿರಬೇಕು. ಅಕಂದರೆ ಇವುಗಳನ್ನು ಲೋಹಾರರು ಉತ್ಪಾದಿಸುತ್ತಿರಬೇಕು.
೪. ಸಾಲ ಮತ್ತು ಮಾರಾಟದ ವ್ಯವಸ್ಥೆ : ಕೊಟ್ಟವನು ಕೋಡಂಗಿ ಇಸಗೊಂಡವನು ಈರಭದ್ರ, ಎಂಬ ಗಾದೆ ಕೊಡು ಕೊಳ್ಳುವಿಕೆ (ಸಾಲ) ವನ್ನು ನಿರಾಕರಿಸಿದರೂ ಸಾಲದ ಕಾರ್ಯ ನಿಲ್ಲುವಂತಿಲ್ಲ. ಜನತೆ, ದೇಶ ಕೊರತೆಗಳ ಪೂರೈಕೆಗೆ ಆಗಾಗ ಸಾಲಮಾಡಲೇ ಬೇಕಾಗುತ್ತದೆ. ಎಲ್ಲರೂ ಮೋಸಗಾರರಿದ್ದಿಲ್ಲ. ಎಲ್ಲೋ ಕೆಲವು ಶ್ರೀಮಂತರು, ಸಾಹುಕಾರರು, ದೇವಾಲಯಗಳು ಗ್ರಾಮಸಭೆಗಳು, ಮಹಾರಾಜನ ಸಮಿತಿಗಳು ಹಣವನ್ನು ಸಾಲವಾಗಿ ಕೊಡುತ್ತಿದ್ದವು. ಕೊಟ್ಟ ಸಾಲವನ್ನು ವಸೂಲು ಮಾಡುವುದಕ್ಕೆ ಸಿಬ್ಬಂದಿಯೂ ಇರುತ್ತಿತ್ತು, ಸಾಲದ ವಸೂಲಿಗೆ ಹೋದ ವ್ಯಕ್ತಿಗಳಿಗೆ ಸಾಲ ತೆಗೆದುಕೊಂಡವರು ಊಟದ ವ್ಯವಸ್ಥೆ ಇತ್ಯಾದಿಗಳನ್ನು ಮಾಡಬೇಕಿತ್ತು. ರಾಷ್ಟ್ರಕೂಟ ಮುಮ್ಮಡಿಕೃಷ್ಣನ ಕಾಲದ ತಮಿಳು ನಾಡಿನ ಶಾಸನಗಳಲ್ಲಿ ಅನೇಕ ಕಡೆಗೆ ಇದರ ಪ್ರಸ್ತಾಪ ಬರುತ್ತದೆ.  ಸಾಲ ಹಾಗೂ ಬಡ್ಡಿ ಇವು ಜೊತೆಜೊತೆಗೆ ಹೋಗುವ ಜೋಡೆತ್ತಿನ ಬಂಡಿ. ಭಕ್ತಾದಿಗಳು ಕೊಡುವ ದೇವಸ್ಥಾನದ ನಂದಾದೀಪಕ್ಕೆ, ಜೀರ್ಣೋದ್ದಾರಕ್ಕೋ, ಅರವಟ್ಟಿಗೆಗೋ, ಕೆರೆಗೋ ಇಲ್ಲವೆ ಕೆರೆಯ ದುರಸ್ಥಿಗೋ ಕೊಡುತ್ತಿದ್ದ ಹಣವನ್ನು  ಪುದುವಟ್ಟಾಗಿಸಿ ಅದಕ್ಕೆ ಬರುವ ಬಡ್ಡಿಯಿಂದ ಕಾರ್ಯಗಳನ್ನು ಎಸಗಬೇಕೆಂದು ಅನೇಕ ಶಾಸನಗಳಲ್ಲಿ ಬರೆದಿದೆ. ಎಪಿ.ಕ. ಎಪಿ.ಇಂಡಿಕಾಯಾವುದೇ ಶಾಸನ ಸಂಪುಟ ತೆಗೆದರೂ ಸುಲಭವಾಗಿ ಕಾಣಬಹುದಾದ ವಿಷಯ ವರ್ತಕ ಶ್ರೇಣಿಗಳು, ದೇವಾಲಯದ ಧರ್ಮದರ್ಶಿಗಳು ಊರ ಸಭೆಗಳು ಈ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು.
ಮಾರಾಟದ ಸೌಲಭ್ಯ ಊರೂರಲ್ಲಿಯೂ ದೇವಸ್ಥಾನ ಇಲ್ಲವೆ ಅದರ ಬಳಿಯಲ್ಲಿ ಅಲಂಗಡಿಗಳ ಮುಖಾಂತರ ನಡೆಯುತ್ತಿತ್ತು. ದೇವಸ್ಥಾನದ ನಿರ್ಮಾಣ ನಗರೀಕರಣದ ಕಾರ್ಯದಲ್ಲಿ ಒಂದಂಗ ಎಂಬುದು ತರಿಕೆರೆತಾಲ್ಲೂಕಿನ ಅಮೃತಾಪುರ ಶಾಸನ ಬಹಳ ಸೊಗಸಾಗಿ ಚಿತ್ರಿಸಿದೆ. (ಎಪಿ.ಕ ಸಂಪುಟ೬ ಬಿ.ಎಲ್.ರೈಸ್) ಸಂತೆಗಳು ವ್ಯಾಪಾರಗದ ಕೇಂದ್ರಗಳು ವಾರಕ್ಕೊಮ್ಮೆ ನಿಗದಿತ ದಿನದಂದು ಹತ್ತಾರು ಹಳ್ಳಿಗಳ ಮಧ್ಯೆ ಒಂದು ಮೈದಾನದಲ್ಲಿ ಸಂತೆಗಳು ನೆರೆಯುತ್ತಿದ್ದವು. ಅಲ್ಲಿ ನಿಮಾನಪದ್ದತಿ ಹಾಗೂ ನಾಣ್ಯ ವಿನಿಮಯ ಪದ್ದತಿ ಎರಡೂ ಅಸ್ಥಿತ್ವದಲ್ಲಿದ್ದವು. ವಸ್ತುಗಳ ಧಾರಣೆ ಮತ್ತು ಧಾರಣೆಗಳ ಮೇಲೆ ಸರ್ಕಾರದ ಹತೋಟಿ ಇದ್ದುದಕ್ಕೆ ಎಲ್ಲಿಯೂ ದಾಖಲೆಗಳು ದೊರೆಯುವುದಿಲ್ಲ. ಇಸ್ಲಾಂ ಧರ್ಮದಲ್ಲೂ ಎಷ್ಟಾದರೂ ಲಾಭವನ್ನು ಪಡೆಯಬಹುದು. ಇದಕ್ಕೆ ಹತೋಟಿ ಇಲ್ಲ. ಅಲ್ಲಿ ಸಾಲಕೊಡುವುದು ಬಡ್ಡಿಪಡೆಯುವುದು ಪಾಪಕಾರ್ಯ. ಬಸವಾದಿ ಪ್ರಮಥರೂ ಕಡಬಡ್ಡಿಯ ಕೊಡಬಾರದು, ಎಂದೇ ಸೂಚಿಸಿದ್ದಾರೆ. ಸಾಲವನುಕೊಟ್ಟವರು ಬಹಳ ಭಯಾನಕ ರೀತಿ ವಸೂಲಾತಿ ಮಾಡುತ್ತಿದ್ದರು ಇದು ಎಲ್ಲ ದೇಶಗಳಲ್ಲೂ ಕಂಡುಬಂದ ಸಂಗತಿ ಶೈಲಾಕರು ತಮ್ಮಲ್ಲಿ ಸಾವಿರಾರು ಇಂದಿನ ಡಾನ್ ಗಳು ಅವರ ಪರಂಪರೆಯೆ (ಶೇಕ್ಸ್‌ಪಿಯರ್‌ನ ಮರ್ಚೆಂಟ್‌ಆಫ್‌ವೆನಿಸ್) ಡಾ|| ಎ. ಎಸ್. ಅಳ್ತೇಕರ್ ಹಾಗೂ ಡಾ|| ಅಪ್ಪಾದೊರೈ ಅವರ ಕೃತಿಗಳು ಈ ದಿಶೆಯಲ್ಲಿ ಸಾಕಷ್ಟು ಬೆಳಕನ್ನು ಚೆಲ್ಲುತ್ತವೆ. ವರ್ತಕರು ಹಾಗೂ ವರ್ತಕ ಶ್ರೇಣಿಗಳು ಮಾರಾಟದ ಅಪತಿಗಳು. ಒಂದೇ ಬಗೆಯ ಪುಕ್ಕಗಳನ್ನುಳ್ಳ ಪಕ್ಷಿಗಳು ಒಂದೆಡೆ ಸೇರುವಂತೆ ಇರುವಂತೆ ವಲಸೆ ಹೋಗುವಂತೆ ಒಂದೊಂದು ಬಗೆಯ ಜನತೆ ಸಂತೆಗಳಲ್ಲಿ ಸೇರುತ್ತಿದ್ದರು. ಸಂತೆಯಿಂದ ಸಂತೆಗೆ ಪ್ರಯಾಣ ಬೆಳೆಸುತ್ತಿದ್ದರು. ಯಾವುದಾದರೂ ಕ್ರಮವನ್ನು ಕಾರ್ಯವನ್ನು ಕೈಗೊಳ್ಳಬೇಕಾದರೆ. ಒಂದು ಪಂಗಡದವರು  (ಒಂದು ಜಾತಿಯವರು) ಒಂದೆಡೆ ಒಟ್ಟಿಗೆ ಸೇರಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದರು. ಉದಾ:ಐಯ್ಯಾ ಹೊಳೆ ಐನೂರ್ವರು, ಉಗುರ ಮೂನೂರ್ವರು, ನಾನಾದೇಶಿಗಳು, ಮುಂಮರಿದಂಡಗಳು  ಇತ್ಯಾದಿ. ವೈಶ್ಯಾನ್ವಯ, ವೀರಬಣಂಜುಗಳು ಮುಂತಾಗಿಯೂ ಇವರನ್ನು ಗುರುತಿಸಲಾಗುತ್ತದೆ. ಇವರು ಶ್ರೀಮಂತರಾಗಿರುತ್ತಿದ್ದರು. ತತ್ಕಾರಣ ಸಮಾಜದ ಮೇಲೆ, ರಾಜನ ಮೇಲೆ, ತಮ್ಮ ಪ್ರಭಾವವನ್ನು ಬೀರುತ್ತಿದ್ದರು. ಊರಿನ, ರಾಜ್ಯದ, ತಮ್ಮ ಪ್ರಭಾವವನ್ನು ಬೀರುತ್ತಿದ್ದರು. ಊರಿನ, ರಾಜ್ಯದ, ರಾಜನ ಆರ್ಥಿಕ ವ್ಯವಸ್ಥೆಯ ಕಟ್ಟಡದಲ್ಲಿ ಮೂಲಸ್ಥಂಬವೆಂದು ಭಾವಿಸಲಾಗುತ್ತಿತ್ತು. ಇವರನ್ನು ಪಟ್ಟಣಗಳಲ್ಲಿ ವ್ಯಾಪಾರಸ್ಥರ ಮುಖ್ಯವ್ಯಕ್ತಿಯನ್ನು ಪಟ್ಟಣಸ್ವಾಮಿ ಎಂದು ಘೋಷಿಸಲಾಗುತ್ತಿತ್ತು. ಆಯ್ಯಾವೊಳೆ ೫೦೦ ಹಾಗೂ ಉಗುರು ೩೦೦ ಇವುಗಳನ್ನು ಸಂಘಗಳು ಎಂದು ಗುರುತಿಸಲಾಗಿದೆ. ವೀರಬಣಂಜು ಇದು ವೀರವಣಿಕ್ ಶಬ್ದದ ತದ್ಭವ. ಇವರು ಉದಾರಿಗಳೂ ಆಗಿದ್ದು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಇವರು ವ್ಯಾಪಾರದಲ್ಲಿ ಸಂಘಟನೆಯನ್ನು ಕಟ್ಟಿಕೊಂಡಿದ್ದರೆಂದು ತಿಳಿದು ಬರುತ್ತದೆ. ವ್ಯಾಪಾರಿಗಳು ವಸ್ತುಗಳನ್ನು ತರಿಸುತ್ತಿದ್ದರು ಮತ್ತು ದೂರಕ್ಕೆ ಕಳಿಸುತ್ತಿದ್ದರು. ಇದೇ ಆಮದು ಮತ್ತು ರಫ್ತು. ಶಾಸನಗಳಲ್ಲಿ ಉಲ್ಲೇಖಗೊಂಡಿರುವ ಸಾಮಗ್ರಿಗಳ ಪಟ್ಟಿಯನ್ನು ತಯಾರಿಸಬಹುದು. ಆದರೂ ಶಾಸನಗಳಲ್ಲಿ ಬಂದಿರುವ ಸಂಗತಿಗಳು ವ್ಯಾಪಾರಗಳು ಮಾಡುತ್ತಿದ್ದ ವ್ಯಾಪಾರದ ಸ್ಥೂಲ ವಿವರಗಳೇ ವಿನಾ ಅವು ಅವರ ಲೆಕ್ಕದ ಕಡತ(ಕಡಿತ) ಗಳಲ್ಲ. ಅವರ ಲೆಕ್ಕದ ಪುಸ್ತಕಗಳಲ್ಲ. ರಾಜನ ರಾಜ್ಯದ ಆಯ ವ್ಯಯದ ಕಡತಗಳು ಇದ್ದಿರಬಹುದು.
ರಾಜ್ಯಕ್ಕೆ ಹೊಸ ಕ್ಷೇತ್ರಗಳು ಮಂಡಲಗಳು ಸೇರಿದಾಗ ಅವುಗಳನ್ನು ಕಡಿತಕ್ಕೆ ಸೇರಿಸಿದ ಉಲ್ಲೇಖಗಳು ದೊರೆಯುತ್ತವೆ. ರಾಜನ ಆದಾಯವನ್ನು ನೋಡಿಕೊಳ್ಳುವ ವ್ಯಕ್ತಿಯೇ ಭಂಡಾರಿ. ಬಸವಣ್ಣನವರು ಬಿಜ್ಜಳನ ಭಂಡಾರಿ ಆಗಿದ್ದರೆಂಬುದು ಲೋಕವಿಶ್ರುತ ಸಂಗತಿ. ರಾಜರು ಆಮದು ರಪ್ತಿನ ವಸ್ತುಗಳ ಮೇಲೆ ಸುಂಕವನ್ನು ಹಾಕುತ್ತಿದ್ದರು. ಸಾಮಾನ್ಯವಾಗಿ ಆಮದಿನ ವಸ್ತುಗಳು ಮುತ್ತು, ಮಾಣಿಕ್ಯ, ರತ್ನ, ವಜ್ರ, ವೈಡೂರ್ಯ, ಇಂದ್ರನೀಲ, ಚಂದ್ರಕಾಂತ, ಕುದುರೆಗಳು ಇತ್ಯಾದಿ. ಮಸಾಲೆ ಸಾಂಬಾರಿನ ಪದಾರ್ಥಗಳು ವಿಶೇಷವಾಗಿ ಮೆಣಸು, ಏಲಕ್ಕಿ, ಜೀರಿಗೆ, ಸಾಸಿವೆ, ಕೊತ್ತಂಬರಿ, ಇಂಗು, ಶುಂಠಿ, ಹಿಪ್ಪುಲಿ, ಅಲ್ಲ(ಹಸಿರುಶುಂಠಿ), ಅರಿಶಿನ, ಚೆಕ್ಕೆ, ನಾರು, ಬೇರು(ಔಷದಿಯ) ವಸ್ತುಗಳು, ಕರ್ನಾಟಕದ ಪ್ರದೇಶದಿಂದ ರಫ್ತಾಗುತ್ತಿದ್ದವು. ಎಂದು ಹೇಳಬಹುದು. ಬಳ್ಳಿಗಾವೆಯ ವರ್ತಕರು ಮತ್ತು ಬೇರೆಕಡೆಯವರು ಚೇರ ಚೋಳ, ಪಾಂಡ್ಯ, ತೆಲುಂಗ, ಮಗಧ, ಸೌರಾಷ್ಟ್ರ ಮುಂತಾದ ಭಾರತೀಯ ಪ್ರದೇಶಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಗಿ ತಿಳಿದುಬಂದಿದೆ. ಅದಂತೆಯೇ ಚೀನಾ, ಗ್ರೀಸ್, ರೋಮ್, ಅರಬ್, ದೇಶಗಳಿಂದ ಕುದುರೆಗಳುಖರ್ಜೂರ ಇತ್ಯಾದಿ ವಸ್ತುಗಳು ಆಮದಾಗುತ್ತಿದ್ದವು, ಪಶ್ಚಿಮಕರಾವಳಿಗುಂಟ ಇರುವ ಬಂದರುಗಳು ಈ ಕಾರ್ಯಕ್ಕೆ ನೆಲೆಗಳಾಗಿದ್ದವು. ಎತ್ತು, ಕತ್ತೆ, ಕೋಣ, ಕುದುರೆ, ತೆಪ್ಪ, ದೋಣಿ, ಹಡಗು, ಇವು ಮನುಷ್ಯನಲ್ಲದೆ ಸಾಕಣಿಕೆಯ ಸೌಕರ್ಯಗಳಾಗಿದ್ದವು. ಈ ಸಾರಿಗೆಯ ವಸ್ತುಗಳವಾಹನಗಳಮೇಲೆ ಬಿನ್ನ ಬಿನ್ನ ರೀತಿಯಲ್ಲಿ ಸುಂಕವನ್ನು ಹಾಕಲಾಗುತ್ತಿತ್ತು. ಸುಂಕಗಳು ವಸ್ತುಗಳ ರೂಪದಲ್ಲಿ ಇಲ್ಲವೇ ನಾಣ್ಯದ ರೂಪದಲ್ಲಿ ಇರಬಹುದಾಗಿತ್ತೆಂದು ತಿಳಿದುಬರುತ್ತದೆ.
೫. ನಾಣ್ಯಪದ್ದತಿ : ಮೌರ್ಯರಿಂದ ಮೈಸೂರ ಅರಸರವರೆಗೆ ಹಲವು ರಾಜಮನೆತನಗಳು ಇಲ್ಲಿ ಆಳಿವೆ. ಅವೆಂದರೆಮೌರ್ಯರು, ಶಾತವಾಹನರು, ವಾಕಾಟಕರು, ಪಲ್ಲವರು, ಕದಂಬರು, ಗಂಗರು, ಬಾಣರು, ವಿಷ್ಣುಕುಂಡಿನರು, ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು,  ಕಲಚೂರ್ಯರು, ಸೆವುಣರು, ಹೊಯ್ಸಳರು, ವಿಜಯನಗರದ ಅರಸರು, ಸ್ವಾದಿ, ಕೆಳದಿ, ಅಚಿಲ,ಚೌಟ, ಬಂಗ, ಮೈಸೂರು, ಬಹಮನೀ, ಆದಿಲ್ ಷಾಹಿ, ಬರೀದ್ ಷಾಹಿ, ಮೊಘಲರು, ನಿಜಾಮರು, ಸುರಪುರ, ಸವಣರು, ಚಿತ್ರದುರ್ಗ ಹೀಗೆ ಹತ್ತು ಹಲವು ರಾಜಮನೆತನಗಳು ನಾಣ್ಯಗಳನ್ನು ಟಂಕಿಸಿದರು.  ಅಚ್ಚಿಸಿದರು.
ಇದೇ ಒಂದು ದೊಡ್ಡ ಅಧ್ಯಯನ. ನಾಣ್ಯಗಳನ್ನು ಟಂಕಿಸುತ್ತಿದ್ದ ಸ್ಥಳಗಳಿಗೆ ಟಂಕಸಾಲೆಗಳೆಂದೂ ಕಮ್ಮಟಗಳೆಂದೂ ಕರೆತ್ತಿದ್ದರು. ನಿರುಪಯುಕ್ತ ನಾಣ್ಯಗಳೂ ಮತ್ತು ಚಲಾವಣೆಯಲ್ಲಿರುವ ನಾಣ್ಯಗಳು ಆಗಾಗ ಈಗ ೧೦೧೫ ವರ್ಷಗಳಿಂದ ಶಹಪುರ ತಾಲ್ಲೊಕಿನ ಗೋರಿಯ ಬಳಿಯ ಹಾರನಗೆರೆಯ ಗ್ರಾಮದ ಹಳ್ಳದ ಬಳಿಯಲ್ಲಿ ಜನರಿಗೆ ದೊರೆತಿರುವುದು ಒಂದು ಅದ್ಭುತ ಶೋಧ. ಇವುಗಳಲ್ಲಿ ಕೆಲವು ಸಂಪೂರ್ಣ ಆಕಾರ(ವೃತ್ತಾಕಾರ) ಗಳನ್ನು ಹೊಂದಿಲ್ಲ. ಇನ್ನೂ ಕೆಲವುಗಳ ಮೇಲೆ ಹಿಂಬದಿ ಹಾಗೂ ಮುಂಬದಿ ಎರಡೂ ಪಕ್ಕಗಳಲ್ಲಿ ಬೇರೆ ಬೇರೆಯಾಗಿ ಹಾಕಬೇಕಾದ ಚಿಹ್ನೆಗಳನ್ನು ಮುಂಬದಿಯಲ್ಲೇ ಅಚ್ಚೊತ್ತಿದ್ದಾರೆ. ಮುಂಬದಿಯಲ್ಲಿ ರಾಙೂ ಗೋತಮಿಪುತಸ ಸಿರಿಸಾತ ಕಂಣಿಸ ಎಂಬ ಉಲೇಖವನ್ನು ಈ ನಾಣ್ಯಗಳು ಹೊಂದಿದ್ದು ಈ ಸ್ಥಳದ ಆಸುಪಾಸಿನಲ್ಲಿ ಎಲ್ಲೋ ಒಂದು ಶಾತವಾಹನರ ರಾಜ್ಯದಲ್ಲಿ ಟಂಕಸಾಲೆ ಇದ್ದುದನ್ನು ಸೂಚಿಸುತ್ತವೆ.ಈ ಭೂಭಾಗ ಶಾತವಾಹನರ ರಾಜ್ಯದಲ್ಲಿತ್ತೆನ್ನುವುದಕ್ಕೆ ಹತ್ತಿರದ ಹಾಳಾದ ಸನ್ನತಿಯಲ್ಲಿ ಶಾತವಾಹನರ  ಶಾಸನ ಸಿಕ್ಕಿರುವುದೇ ಸಾಕ್ಷಿ. ನಾಣ್ಯಗಳಲ್ಲಿ ಪ್ರಸಿದ್ದವಾದದ್ದು ಗದ್ಯಾಣ ಅಥವಾ ಪೊನ್ ಪಣ, ಅಡ್ಡ, ಹಾಗ, ಬೇಳೆ, ವೀಸ, ಬಿನ್ನ ಬೆಲೆಯ ಪ್ರಟ್ಯೇಕ ನಾಣ್ಯಗಳು. ಕಾಕಿಣಿ(ಕವಡೆ), ನಿಷ್ಕ ಹಗೂ ಧರಣ ಎಂಬ ನಾಣ್ಯಗಳ ಉಲ್ಲೇಖವೂ ಶಾಸನಗಳಲ್ಲಿ ದೊರೆಯುತ್ತದೆ. ಕವಡೆಕಾಸು, ವೀಸ ಇವು ಅತ್ಯಂತ ಕನಿಷ್ಠವಾದವು ಎಂದು ತೋರುತ್ತದೆ. ಬ್ರಹ್ಮಶಿವ ಸಮಯಪರೀಕ್ಷೆಯಲ್ಲಿ(೧೦೬೯ಕ್ರಿ.ಶ.) ವೀಸ ಕನಿಷ್ಟ ನಾಣ್ಯವೆಂದು ತಿಳಿಸಿದ್ದಾನೆ.
ಕೂಸಿಗೆ ಕುತ್ತ ವಾದೊಡೆ
ದೇಶದ ಬಳರಿಯರ್ಗೆ ಕುಡುವರೊಳರ್ಚನೆಯಂ
ಶಾಸನ ದೇವತೆಗೆಂದೊಡೆ
ವೀಸದ ಪುಷ್ಪಮುವನೀಯರಗುಲಿವೆಂಡಿರ್|
ಜೈನ ಅಥವಾ ಜೈನೇತರ(?) ಸ್ತ್ರೀಯರನ್ನು ಧರ್ಮಹಂತರೆಂದು ಬಯ್ದಿದ್ದಾನೆ. ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಖಾಜಿ ಪೇಟ ಶಾಸನದಲ್ಲಿ ದ್ರಮ್ಮ ನಾಣ್ಯದ ಉಲ್ಲೇಖ ಮೂರುಸಲಬಂದಿದ್ದು, ಅದು ಜನಬಳಕೆಯಲ್ಲಿ ಇದ್ದಿತ್ತೆಂಬುದು ಸ್ಪಷ್ಟವಿದೆ. ದೀನಾರ ನಾಣ್ಯಗಳ ನಿ ಬೆಂಗಳೂರು ಬಳಿ ದೊರಕಿದ್ದು ಆ ನಾಣ್ಯಗಳು ಈ ದೇಶದಲ್ಲಿ ಪ್ರಚಲಿತವಾಗಿದ್ದವೆಂಬುದನ್ನು ತಿಳಿಸುತ್ತವೆ.
೬. ಅಳತೆಗಳು ಮತ್ತು ತೂಕಗಳು : ಭೂಮಿಯ ಅಳತೆ, ಕಾಳಿನ ಅಳತೆ ಹಾಗೂ ಎಣ್ಣೆ ತುಪ್ಪ ಇತ್ಯಾದಿ ದ್ರವಗಳ ಅಳತೆ ಹಾಗೂ ಲೋಹಗಳ ತೂಕ ಶಾಸನಗಳಲ್ಲಿ ಕಾಣಬರುತ್ತವೆ. ಭೂಮಿಯನ್ನು ಅಳೆಯುವಲ್ಲಿ ಮತ್ತರು, ನಿವರ್ತನ, ಕಂಬ/ಕಮ್ಮ, ಗೇಣ್ ಹಾಗೂ ಕೋಲ್ ಶಬ್ದಗಳಿದ್ದರೆ. ಇನ್ನೊಂದು ಬಗೆಯಲ್ಲಿ ಎಂದರೆ ಬೀಜಹರಿಯ ರೂಪದಲ್ಲೂ ಭೂಮಿಯನ್ನು ಅಳೆಯಲಾಗುತ್ತಿತ್ತು. ಖಂಡುಗ, ಉಡಿ ಇತ್ಯಾದಿ. ಉದಾಹರಣೆಗೆ ಎರಡುಸಲಕ್ಕೆ ಗದ್ದೆ ಇಕ್ಕಂಡುಗ ಬೆದ್ದಲ್ ಇತ್ಯಾದಿ. ಕೋಲುಗಳು ರಾಜ್ಯದಿಂದ ರಾಜ್ಯಕ್ಕೆ, ಊರಿಂದ ಊರಿಗೆ ಒಮ್ಮೂಮ್ಮೆ ಎರಡೆರಡು ಕೋಲ್ ಅಳತೆಗಳು ಇರುತ್ತಿದ್ದವು. ಇವು ಒಂದು ಊರಿಂದ ಬಿನ್ನ ಬಿನ್ನವಾದ ಅಳತೆಯನ್ನು ಒಳಗೊಂಡಿರುತ್ತಿದ್ದವು.
ಕೊಳಗ,ಮಾನ, ಬಳ್ಳ, ಸೇರು, ವೀಸ, ದಡೆ(೧೨ಸೇರು), ಮಣ, ತೊಲ, ಹೇರು, ಇತ್ಯಾದಿಗಳ ಉಲ್ಲೇಖಗಳು ದೊರೆಯುತ್ತವೆ. ಸೆಟ್ಟಿಯ ಬಳ್ಳ ಕಿರಿದು ಎಂಬಲ್ಲಿ ಮೋಸದ ಹೊಳಹೂ ಇದೆ. ಸರ್ಕಾರಗಳು ಇವುಗಳ ಮೇಲೆ ಹತೋಟಿ ಇಟ್ಟುಕೊಂಡಿದ್ದವೋ ಇಲ್ಲವೋ ತಿಳಿಯದು. ಆದರೆ ಚಿನ್ನದ ನಾಣ್ಯಗಳ ತೂಕದಲ್ಲಿ ಸಾರ್ವತ್ರಿಕ ಸಮಾನತೆ ಇರಬೇಕು. ಒಂದು ಟಂಕಸಾಲೆಯಲ್ಲಿ ನಿರ್ಮಾಣಗೊಂಡ ನಾಣ್ಯದಂತೆ ಎಂಬಲ್ಲಿ ಸಮಾನ ತೂಕವನ್ನು ಸೂಚಿಸುತ್ತದೆ. ಚಿನ್ನ ಬೆಳ್ಳಿಯ ನಾಣ್ಯಗಳ ತೂಕಮೌಲ್ಯರಾಜ್ಯಾಡಳಿತಗಳ ಹತೋಟಿಯಲ್ಲಿರಬೇಕು. ಅಳತೆ ಮತ್ತು ತೂಕಗಳ ಮೇಲೆ ರಾಜ್ಯದ ಮುದ್ರೆ ಇರಬೇಕೆಂದು ಅರ್ಥಶಾಸ್ತ್ರ ಹೇಳಿದೆ.
೭. ಆಯವ್ಯಯ : ರಾಜ್ಯದ ಆದಾಯವನ್ನು ಸಾಮಾನ್ಯವಾಗಿ ಎರಡು ಭಾಗಗಳಲ್ಲಿ ವಿಂಗಡಿಸಿ ಅಭ್ಯಶಿಸಲಾಗುತ್ತಿತ್ತು. ತೆರಿಗೆಗಳು ಮತ್ತು ಇತರ ಆಕರಗಳು. ತೆರಿಗೆಗಳಿಂದ ಬರುತ್ತಿದ್ದ ಆದಾಯವೇ ಹೆಚ್ಚು ಅವುಗಳ ಸಂಖ್ಯೆ ಅಸಂಖ್ಯಾತ. ಇತರ ಆಕರಗಳು ಅಲ್ಪ. ಉತ್ತರಾಕಾರಿಗಳಿಲ್ಲದ ಆಸ್ತಿ ರಾಜನ ಬೊಕ್ಕಸಕ್ಕೆ ಸೇರುತ್ತಿತ್ತು. ರಾಜನ ರಾಣಿಯರು, ಮಕ್ಕಳೂ ವೈಯಕ್ತಿಕ ಆದಾಯವನ್ನು ತಮ್ಮತಮ್ಮ ಖರ್ಚಿಗೆ ಪಡೆದಿರುತ್ತಿದ್ದರು. ಅವರ ಆದಾಯವನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೇ ಮನೆವಾರ್ತೆ. ರಾಜನು ಶ್ರೀಮಂತರ ಇಲ್ಲವೇ ಪರಮಂಡಲಗಳನ್ನು ಗೆದ್ದಾಗ. ಅವರ ಆದಾಯ ರಾಜ್ಯಾದಾಯಕ್ಕೆ ಸೇರುರುತ್ತಿತ್ತು. ಶ್ರೀಮಂತರ ಆಸ್ತಿಯನ್ನು ಅವನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿತ್ತು. ಅವರು ನಿರಂಕುಶಮತಿಗಳಲ್ಲವೇ?
೮. ತೆರಿಗೆಗಳು :ಕರ್ನಾಟಕದಲ್ಲಿ ಶಾಸನಗಳನ್ನು ಅಧ್ಯಯನಕ್ಕೆ ಎತ್ತಿಕೊಂಡರೆ ಮೇಲುನೋಟಕ್ಕೆ ಸಾಕಷ್ಟು ತೋರರೂಪದಲ್ಲಿ ಘೋರರೂಪದಲ್ಲಿ, ತೆರಿಗೆಗಳು ಕಂಡುಬರುತ್ತವೆ. ಅವುಗಳ ಸಂಖ್ಯೆ ಅಸಂಖ್ಯಾತ. ಎಷ್ಟೋಸಲ ಅವುಗಳ ಅರ್ಥವೂ ಅಸ್ಪಷ್ಠ. ಪ್ರತಿಯೊಂದನ್ನು ಪ್ರತ್ಯೇಕ ವಿವರಿಸುವುದು ಈ ಕಿರುಲೇಖನದಲ್ಲಿ ಅಸಾಧ್ಯದ ಸಂಗತಿ. ಕರ್ನಾಟಕದಲ್ಲಿ ಪ್ರಚಲಿತವಾಗಿದ್ದ ಕೆಲವು ಮುಖ್ಯ ತೆರಿಗೆಗಳು. ಅಟ್ಟದೆಱ, ಆರುವಣ(ಷಟ್ಟಂಗ), ಆಯಿಲದೆಱ(ಕುದುರೆಗಳ ಥಡಿಗಳನ್ನು ಮಾಡಿ ಮಾರುವಲ್ಲಿ ಕೊಡುವ ತೆರಿಗೆ) ಉಟ್ಟ ಸಾಮಂತದೆಱ, ಒಸಗೆದೆಱ, ಕತ್ತರಿವಣ, ಕನ್ನಡಿವಣ, ಕಾಣಿಕೆ ಹಣಗಳು, ಕಿರುಕುಳ (ಕಿರುತೆರಿಗೆ) ಕುಮಾರ ಗದ್ಯಾಣ, ಕುಂಬಱಬಟ್ಟೆ, ಕುಱಂಬದೆರೆ, ಕುಳ, ಕುಳಿಯಸುಂಕ, ಕೂಟಕ ಕೊಡತಿವಣ, ಕೊಡವೀಸ, ಕೊಳ್ಳಿ ಗಾಣದೆಱ, ಜಲ್ಲಂ, ಡೊಂಕಿ, ತಳ, ತಳಭಂಡದ ಸುಂಕ, ಮುಂತಾದ ಸುಂಕಗಳನ್ನು ಹೇರುತ್ತಿದ್ದರು.
ವ್ಯಯದ ಕಡೆಗೆ ಬಂದರೆ ಸೈನ್ಯಕ್ಕೆ ವಿಶೇಷ ಖರ್ಚಾಗುತ್ತಿತ್ತು, ಉತ್ತರಕರ್ನಾಟಕ ಗೋದಾವರೀ ದಂಡಕಾರಣ್ಯ ಗಿಡವಿಲ್ಲದಂತೆ ಆದುದಕ್ಕೆ ಸುಮಾರು ಎರಡು ಸಾವಿರ ವರ್ಷಗಳು ರಾಜಮಹಾರಾಜರ ಲಕ್ಷಾಲಕ್ಷ ಸೇನಾಪಡೆ ಆ ನಾಡನ್ನು ತೊತ್ತಳದುಳಿದುದು, ತೆರಿಗೆಗಳನ್ನು ಸಂಗ್ರಹಿಸುವ ಅಕಾರಿಗಳು ಬರುತ್ತಿದ್ದರು. ಧರ್ಮ ಶಾಸ್ತ್ರಗಳುಸೃತಿಗಳುಕಾಳಿದಾಸಾದಿಗಳ ಕಾವ್ಯಗಳು ರಾಜ್ಯಾಡಳಿತವನ್ನು ನಡೆಸುವವರಿಗೆ ಆದರ್ಶಗಳನ್ನು ಮುಂದಿಟ್ಟಿವೆ. ಪ್ರಜೆಗಳಿಂದ ಗಳಿಸಿದ ಹಣವನ್ನು ಮತ್ತೆ ಪ್ರಜೆಗಳಿಗೇ ಖರ್ಚುಮಾಡಬೇಕೆಂದು ಹೇಳಿದೆ. ಅಶೋಕ, ದಿಲೀಪ, ಮೊದಲಾದವರ ಸಂಖ್ಯೆ ಅಲ್ಪ, ಅವರು ಪ್ರಜೆಗಳಿಗೆ ತೆರಿಗೆಗಳಿಂದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರು. ರಾಮರಾಜ್ಯದ ಆದರ್ಶವೂ ಭಾಗವತ ಮೊದಲಾದ ಪುರಾಣಗಳ ಆದರ್ಶವೂ, ರಾಮಾಯಣ ಮಹಾಭಾರತದ ಆದರ್ಶವೂ ಆ ಜನದ ಮುಂದೆ ಹಿಂದೆ ಇದ್ದಿತು. ಶಾಸನಗಳಲ್ಲಿ ಬರುವ ಪದ್ಯಗಳು ಆರ್ಥಿಕ ಜೀವನವನ್ನು ಸಮತೋಲನದಲ್ಲಿ ಇಡಲು ಪ್ರಯತ್ನ ಪಟ್ಟಿವೆ. ಆಧುನಿಕ ಆರ್ಥಿಕ ತತ್ವಗಳನ್ನು ಪ್ರಾಚೀನ ಕಾಲಕ್ಕೆ ಅನ್ವಯಿಸುವುದು ಉತ್ತಮವಲ್ಲವೆಂದು ತೋರುತ್ತದೆ. ಶಾಸನಗಳು ಆರ್ಥಿಕ ವ್ಯವಸ್ಥೆಯ ಮೇಲೆ ಹೊಳಹನ್ನು ಹಾಕುತ್ತವೆ. ಆದರೆ ಕೂಲಂಕುಶವಿವರಗಳನ್ನು ನೀಡುವುದಿಲ್ಲ ಆ ಕಾರ್ಯ ಅವುಗಳ ಉದ್ದೇಶಕ್ಕೆ ಬೇರೆಯಾದದ್ದು.
ಚಿತ್ರಗಳು:
೧. ಕರ್ನಾಟಕದ ಪರಂಪರೆ  ಸಂಪುಟ ೧, ೨  ಪ್ರ. ಮೈಸೂರು ಸರ್ಕಾರ.
೨. ಹಸಿರು ಹೊನ್ನು  ಬಿ. ಜಿ. ಎಲ್. ಸ್ವಾಮಿ.
೩. ಕರ್ನಾಟಕದ ಯಾತ್ರೆ  ಜೀರಗೆ ಕಟ್ಟೆ ಬಸವಪ್ಪ.
೪. Anchor Printed Canvas.