ಒಂದು ಸಮಾಜದ ಸದಸ್ಯರು ತಮ್ಮ ಸ್ವಭಾವ ಜ್ಞಾನಕ್ಕನುಗುಣವಾಗಿ ತಮ್ಮ ಜೀವನವನ್ನು ಹಾಗೂ ತಮ್ಮ ದಿನ ನಿತ್ಯದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಾ ಇರುವಾಗ, ಸ್ವಪ್ರಜ್ಞೆಯಿಂದಲೋ ಅಥವಾ ಅಜಾಗೃತವಾಗಿಯೋ ಸಿದ್ದಪಡಿಸಿ ಬಿಟ್ಟು ಹೋಗಿರುವ ನಿದರ್ಶನಗಳು ಸಮಾಜ ಶಾಸ್ತ್ರೀಯ ಇತಿಹಾಸ ಕಾರನಿಗೆ ಅತ್ಯಾವಶ್ಯಕವಾದವುಗಳು. ಆ ಮೂಲಾಧಾರಗಳಿಂದ ಬರುವ ಮಾಹಿತಿಧಾರೆಯನ್ನು ಅವಲಂಬಿಸಿಕೊಂಡೇ ಅವನು ತನ್ನ ಅನ್ವೇಷಣಾಯಾನವನ್ನು ಮುಂದುವರಿಸಿಕೊಂಡು ಹೋಗಬೇಕು. ಬೇರೆ ಮಾತುಗಳಲ್ಲಿ ಹೇಳಬೇಕಾದರೆ, ಒಂದು ಸಮಾಜದ ಸದಸ್ಯರು ತಮ್ಮ ಬದುಕನ್ನು ಕುರಿತ ವಿವರಗಳನ್ನು ಅನೌಪಚಾರಿಕಾವಾಗಿಯಾದರೂ ಆಂತರಿಕವಾಗಿ ಕ್ರೂಡೀಕರಿಸಿ ಇಟ್ಟಿರುತ್ತಾರೆ. ಇಂಥಹ ಕ್ರೂಡೀಕೃತ ಮಾಹಿತಿರತ್ನಗಳ ಭಂಡಾರವೇ ಶಾಸನಗಳು. ಕರ್ನಾಟಕದಲ್ಲಿ ದೊರೆತಿರುವಷ್ಟು ಶಾಸನಗಳು ಭಾರತದ ಇನ್ಯಾವ ಭಾಗದಲ್ಲೂ ದೊರೆತಿಲ್ಲಎಂಬುದು ವಿದ್ವಾಂಸರ ಅಬಿಪ್ರಾಯವಾಗಿದೆ.
ಈ ಶಾಸನಗಳಲ್ಲಿ ಸಾಮಾನ್ಯ ಜನರ ಬಾಳಿನ ಕ್ರಮ, ಅವರ ನಂಬಿಕೆ ತಮ್ಮ ವ್ಯಕ್ತಿತ್ವದಲ್ಲಿ ಸಮೀಕರಿಸಿ ಕೊಂಡಿದ್ದ ಸಾಮಾಜಿಕ ಮೌಲ್ಯಗಳು, ಅವರು ಕೈಗೊಂಡಿದ್ದ ಜನೋಪಯೋಗಿ ಕಾರ್ಯಗಳು ಮತ್ತು ಸಮಾಜದಲ್ಲಿ ಮುಖ್ಯವಾಗಿದ್ದ ಸಾಮಾಜಿಕ ಸಂಸ್ಥೆಗಳು ಮುಂತಾಗಿ ಸಮಾಜ ಶಾಸ್ತ್ರೀಯವಾಗಿ ಪ್ರಾಮುಖ್ಯವಾದ ವಿಷಯಗಳ ಬಗ್ಗೆ ಹೆಚ್ಚು ಕಡಿಮೆ ಸ್ಪಷ್ಟವಾದ ಚಿತ್ರಣವನ್ನು ಕಾಣಬಹುದು. ಈ ಲೇಖನದಲ್ಲಿ ಮಧ್ಯಯುಗದ ಕರ್ನಾಟಕ ಸಮಾಜದಲ್ಲಿ ಪ್ರಮುಖವಾಗಿದ್ದ ಕೆಲವು ಸಾಮಾಜಿಕ ಸಂಸ್ಥೆಗಳನ್ನು ಆರಿಸಿಕೊಂಡು, ರಾಜಕೀಯ ಪರಿಸ್ಥಿತಿ ಅಷ್ಟೇನು ಸ್ಥಿರವಾಗಿಲ್ಲದಿದ್ದಾಗ, ಈ ಸಂಸ್ಥೆಗಳು ಎಷ್ಟರ ಮಟ್ಟಿಗೆ ಗತಿಶೀಲವಾಗಿದ್ದು ಕೊಂಡು ಸಮಾಜ ಜೀವನ ವಾಹಿನಿಯು ಸುಸೂತ್ರವಾಗಿ ಸಾಗುವುದಕ್ಕೆ ಹಾಗೂ ಸಮಾಜವು ಸುಭದ್ರವಾಗಿರುವುದಕ್ಕೆ ಸಹಕಾರಿಯಾಗಿದ್ದವು, ಎಂಬುದನ್ನು ವಿಶ್ಲೇಷಿಸಲು ಒಂದು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ. ಸಮಾಜ ಎಂಬ ರಥ ಸುಲಭವಾಗಿ ಮುಂದೆ ಹೋಗಬೇಕಾದರೆ ಸಂಸ್ಥೆಗಳೆಂಬ ಚಕ್ರಗಳು ಸಮರ್ಪಕವಾಗಿರಬೇಕು, ಗಟ್ಟಿಯಾಗಿರಬೇಕು, ಹಾಗಿರಬೇಕಾದರೆ ಅವುಗಳಿಗೆ ಧರ್ಮದ ಅವಲಂಬನೆ ಇರಲೇ ಬೇಕು.
ಕರ್ನಾಟಕ ಸಮಾಜದಲ್ಲಿ ಧರ್ಮವು ಜನ ಜೀವನದ ಉಸಿರೇ ಆಗಿದ್ದಿತು. ಧರ್ಮ ಎಂದರೆ ಕರ್ತವ್ಯ ಸಂಹಿತೆ. ಅದು ಬಿಡುಗಡೆಯ ಮಾರ್ಗ, ಬೆಳಕಿನ ಬೀಡು, ಸರ್ವ ಜೀವಿಯ ಬಗ್ಗೆ ಪ್ರೀತಿ, ಸರ್ವರ ಒಳಿತಿಗಾಗಿ ನಿಸ್ವಾರ್ಥ ಸೇವೆ ಮುಂತಾದ ಸಾರ್ವಕಾಲಿಕ, ಸರ್ವೋಜ್ಜೀವಕ ಮೌಲ್ಯಗಳ ಸಂಚಯ. ಕರ್ನಾಟಕದ ಜನರ ಬದುಕಿನ ಮೌಲ್ಯಗಳಲ್ಲಿ ತ್ಯಾಗ, ವೀರ, ಪರಾರ್ಥಪರತೆ, ಧಾರ್ಮಿಕ ರೀತ್ಯಾ ಹಣ ಸಂಪಾದಿಸಿ ದಾನ ಮಾಡುವುದು, ದೇವಾಲಯಗಳನ್ನು ನಿರ್ಮಿಸುವುದು ಬಹು ಮುಖ್ಯವಾಗಿದ್ದವು. ಅವರು ಈ ಮೌಲ್ಯಗಳ ಅನುಕರಣೆಯಿಂದ ಪುಣ್ಯಬರುತ್ತದೆ ಎಂಬುದಾಗಿ ಎಷ್ಟರ ಮಟ್ಟಿಗೆ ನಂಬಿದ್ದರು ಎಂದರೆ ಅವುಗಳು ಅವರ ವ್ಯಕ್ತಿತ್ವದ ಅವಿಭಾಜ್ಯ ಅಜಂಗವಾಗಿದ್ದಂತೆ ತೋರುತ್ತಿದ್ದಿತು. ಮತ್ತು ಸಮಾಜ ಜೀವನದಲ್ಲಿ ಈ ಮೌಲ್ಯಗಳು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದ್ದವು ಎಂದರೆ ಅವುಗಳು ಒಂದುಪ್ರಮುಖ ಸಾಮಾಜಿಕ ಸಂಸ್ಥೆಯೇ ಆಗಿ ಹೋದಂತೆ ಭಾಸವಾಗುತ್ತಿದ್ದಿತು. ವ್ಯಕ್ತಿಗಳಲ್ಲಿ ರಾಜಭಕ್ತಿ ಎಷ್ಟು ಆಳವಾಗಿ ಬೇರೂರಿತ್ತೆಂದರೆ ಅವರು ತಮ್ಮ ತಮ್ಮ ಪ್ರಭುಗಳಿಗಾಗಿ ಯುದ್ಧಗಳಲ್ಲಿ ಪ್ರಾಣದ ಹಂಗುತೊರೆದು ಹೋರಾಡುತ್ತಿದ್ದರು. ಜೊತೆಗೆ ಅವರು ತಮ್ಮ ದೊರೆಗಳಿಗೆ ಒಳ್ಳೆಯದಾದರೆ ಪ್ರಾಣ ಬಿಡುವುದಾಗಿ ಹರಕೆ ಹೊತ್ತು ಕೊಳ್ಳುತ್ತಿದ್ದರು. ತನ್ನ ಅರಸನಿಗೆ ಮಗ ಹುಟ್ಟಿದಾಗ ಆ ಕಟೆ ಎಂಬಾತನು ತನ್ನ ತಲೆ ತರಿಸಿಕೊಂಡು ಹರಕೆ ಸಲ್ಲಿಸಿದನು, ಯಾದವ ವೀರಬಲ್ಲಾಳನ ಕಾಲದಲ್ಲಿ ಹೊನ್ನಕ್ಕನಾಯಕಿತಿ ಎಂಬಾಕೆಯು ಮಡಿದಾಗ, ಅವಳ ದಾಸಿ ಹೊನ್ನಿ ಸಿಡಿದಲೆ ಕೊಡುವುದರ ಮೂಲಕ ಸತ್ತಳು ಎಂಬುದಾಗಿ ಶಾಸನಗಳು ತಿಳಿಸುತ್ತವೆ. ಅದೇ ರೀತಿ ತಮಗೆ ಅನ್ನವಿಟ್ಟ ದೊರೆಗೆ ಅಥವಾ ಧಣಿಗೆ ನಿಷ್ಟೆಯಿಂದ ಇದ್ದು ಕಾಳಗಗಳಲ್ಲಿ ಹೋರಾಡಿ ಅನ್ನಋಣವನ್ನು ತೀರಿಸುವುದಕ್ಕೆ ಪ್ರಾಣವನ್ನೇ ಅರ್ಪಿಸಲು ಸಿದ್ಧರಾಗಿದ್ದ ಹಲವಾರು ವೀರ ವೀರ ಜೋಳವಾಳಿಗಳನ್ನು ಶಾಸನಗಳಲ್ಲಿನೋಡಬಹುದು. ರಾಜನೋ ರಾಣಿಯೋ ಮೃತ್ಯುವನ್ನಪ್ಪಿದಾಗ ತಾವೂ ಸತ್ತು ಅವರನ್ನು ಸಾವಿನಲ್ಲೂ ಹಿಂಬಾಲಿಸುವ ಹರಕೆ ಹೊತ್ತು ದೇಹತ್ಯಾಗ ಮಾಡಿದ ರೆಟ್ಟಿಯಣ್ಣ, ಅಗ್ನಿ ಪ್ರವೇಶ ಮಾಡಿದ ರಾಚೆ, ಕೀಳ್ಗುಂಠೆಯಾದ ಅಗರಯ್ಯ, ಸತ್ತರಾಣಿ ಲಚ್ಚದೇವಿಯನ್ನು ಹಿಂಬಾಲಿಸಿ ಹೋಗಲು ಮರಣಿಸಿದ ಬೊಪ್ಪಣ್ಣ ಮೊದಲಾದ ಅನೇಕ ವೇಳೆವಾಳಿಗಳನ್ನು ಶಾಸನಗಳು ಪರಿಚಯಿಸುತ್ತವೆ. ಹೊಯ್ಸಳರ ಕಾಲದಲ್ಲಿ ತಮ್ಮ ದೊರೆಗಳು ಕಾಲವಶರಾದ ಕೂಡಲೇ ತಾವೂ ಸಾವನ್ನಪ್ಪುವುದಾಗಿ ಪ್ರತಿಜ್ಞೆ ಮಾಡಿ, ತಮ್ಮ ಎಡಗಾಲುಗಳಿಗೆ ಗಂಡಪಂಡೇರ ಎಂಬ ಚಿನ್ನದ ಆಭರಣವನ್ನು ಕಟ್ಟಿಕೊಂಡು ತಮ್ಮ ರಾಜರಿಗಾಗಿಯೇ ಬಾಳಿ ಅವರೊಡನೆ ದೇಹತ್ಯಾಗ ಮಾಡುತ್ತಿದ್ದವರನ್ನು ಗರುಡರು ಎಂಬುದಾಗಿ ಕರೆಯಲಾಗುತ್ತಿದ್ದಿತು. ಹೊಯ್ಸಳ ವೀರಬಲ್ಲಾಳನು ಮೃತಪಟ್ಟಾಗ, ಅವನ ಗರುಡ ಕುವರಲಕ್ಷ್ಮ ಮತ್ತು ಅವನ ಪತ್ನಿ ಹಾಗೂ ಲೆಂಕರೆಂಬ ಒಂದು ಸಾವಿರ ವೀರರು ಪ್ರಾಣತ್ಯಾಗ ಮಾಡಿದರು. ಮತ್ತು ಹೊಯ್ಸಳ ಸಂತತಿಯ ಎರೆಯಂಗ, ಬಿಟ್ಟಿದೇವ, ಒಂದನೆಯ ನರಸಿಂಹ, ಎರಡನೆಯ ಬಲ್ಲಾಳ, ಎರಡನೆಯ ನರಸಿಂಹ, ಸೋಮೇಶ್ವರ ಮತ್ತು ಮೂರನೆಯ ನರಸಿಂಹ ದೊರೆಗಳಿಗೆ ಕ್ರಮವಾಗಿ ಗರುಡರಾಗಿ ತಮ್ಮ ಪತ್ನಿಯರು ಹಾಗೂ ಲೆಂಕಲೆಂಕಿಯರೊಂದಿಗೆ ಪ್ರಾಣ ತ್ಯಜಿಸಿ ತಮ್ಮ ತಮ್ಮ ಪ್ರಭುಗಳನ್ನು ಹಿಂಬಾಲಿಸಿದ್ದ ಕಬ್ಬಿಗನಾಡಿನ ಮುಗಿಲ ಎಂಬ ಒಂದೇ ಕುಟುಂಬಕ್ಕೆ ಸೇರಿದ್ದ ಗಂಡನಾರಾಯಣ, ಹೊಯ್ಸಳ ಶೆಟ್ಟಿ, ಕುರೆಯ ನಾಯಕ, ಶಿವನೆಯ ನಾಯಕ, ಲಕ್ಕೆಯ ನಾಯಕ, ಕನ್ನೆಯ ನಾಯಕ, ಮತ್ತು ರಂಗೆಯ ನಾಯಕ ಅವರನ್ನು ಶಾಸನಗಳು ಸ್ತುತಿಸಿವೆ.
ಮಹಿಳೆಯರು ಸಹಗಮನ ಎಂಬ ಇನ್ನೊಂದು ಬಲಿದಾನದ ಕ್ರಮವನ್ನು ಅನುಸರಿಸುತ್ತಿದ್ದರು. ಪತಿಯ ಶವದೊಂದಿಗೆ ಜೀವಂತವಾಗಿಯೇ ಚಿತೆಯೇರಿದ ಸತಿ ಜಕ್ಕಬ್ಬೆ, ಸುಪ್ರಸಿದ್ಧ ಅತ್ತಿಮಬ್ಬೆಯ ತಂಗಿ ಗುಂಡಮ್ಮಬ್ಬೆ, ಎಲ್ಲಿಯೋ ಯುದ್ಧದಲ್ಲಿ ಮಡಿದ ಪತಿಯ ಮೇಲಿನ ಪ್ರೇಮಕ್ಕಾಗಿ ಅನುಗಮನ ಕ್ರಮದಿಂದ ಅಗ್ನಿಪ್ರವೇಶ ಮಾಡಿ ಸತಿಯಾದ ದೇಕಬ್ಬೆರಾಣಿ, ಜನರ ಹಿತರಕ್ಷಣೆಗಾಗಿ ಶತ್ರುವಿನ ವಿರುದ್ಧವೋ ಅಥವಾ ಹುಲಿಯೊಂದಿಗೋ ಅಥವಾ ಗೋರಕ್ಷಣೇಗಾಗಿಯೋ ಕಾದಿ ಮರಣಿಸಿದ ಪತಿಯೊಂದಿಗೆ ಸಾವನ್ನು ಬರಮಾಡಿಕೊಂಡ ಬಸೆ ಬೊಮ್ಮಕ್ಕ, ಬಿಯವ್ವೆ, ಮಾದಿಗೌಡನ ಹೆಂಡತಿ ಮೊದಲಾದ ಸಾಮಾನ್ಯ ಸ್ತರದ ಸ್ತ್ರೀಯನ್ನು ಕುರಿತ ಸಾಕಷ್ಟು ವಿವರಗಳು ಶಾಸನಗಳಲ್ಲಿವೆ.
ಇಷ್ಟು ಮಾತ್ರವಲ್ಲದೆ, ಗ್ರಾಮ ಹಾಗೂ ಊರುಗಳಲ್ಲಿ ಸಮಾಜವಿರೋ ಶಕ್ತಿಗಳ ವಿರುದ್ಧ ಕಾದಾಡಿ ಮೃತ್ಯುವನ್ನು ಸಂತೋಷದಿಂದ ಬರಮಾಡಿಕೊಂಡಿದ್ದ ಅನೇಕ ಸಾಮಾನ್ಯ ವೀರರನ್ನು ಶಾಸನಗಳು ಪರಿಚಯಿಸುತ್ತವೆ. ವ್ಯಾಪಾರಿಗಳನ್ನು ಹಾಗೂ ಪ್ರವಾಸಿಗರನ್ನು ದೋಚುತ್ತಿದ್ದ ದಾರಿಗಳ್ಳರ ವಿರುದ್ಧ ಹೋರಾಡಿ ಮಣ್ಣಾದ ಕಲ್ಲಣ್ಣ, ಮೂಗೂರಿನ ಮಾದಪ್ಪ, ಸೋವಿಸೆಟ್ಟಿ, ಊರಿಗೆ ನುಗ್ಗಿ ದೇಗುಲವನ್ನು ಲೂಟಿ ಮಾಡಿ ಜನರಿಗೆ ತೊಂದರೆ ಮಾಡಿದ ಕಳ್ಳರೊಡನೆ ಕಾದಾಡಿ ಸತ್ತ ತ್ರೈಲೋಕ್ಯ ಸೆಟ್ಟಿ, ಮಾಸಯ್ಯ ಕಲ್ಲಯ್ಯ; ಸ್ತ್ರೀಯರ ಮಾನಪ್ರಾಣಗಳ ರಕ್ಷಣೆಗಾಗಿ ಯಶಸ್ವಿಯಾಗಿ ಕತ್ತಿ ಹಿಡಿದು ಯುದ್ಧಯಮಲೋಕಕ್ಕೆ ಹೋದ ಸೋಮೆಯ, ಎಡವಯ್ಯ ಹಾಗೂ ಅವನ ಮಗ ಜಕ್ಕ, ಸೀಮಾಸಂಭಂಧದ ಕಾಳಗದಲ್ಲಿ ಸತ್ತು ಹೋದ ಈ ಸವೂರಿನ ಮಾಳ ಊರಳಿವು ಹಾಗೂ ಊರ ಹುಯ್ಯಲಿನಲ್ಲಿ ಸೆಣಸಿ ಸತ್ತ ಸಾವುರ, ಗ್ರಾಮಗಳ ಗೋವುಗಳನ್ನು ಹಿಡಿದು ಕೊಂಡು ಹೋಗುತ್ತಿದ್ದವರ ವಿರುದ್ಧ ಬಡಿದಾಡಿ ಗೋರಕ್ಷಣೆಮಾಡಿ,ಇಂತಹ ತುರುಕಾಳಗಗಳಲ್ಲಿ ವೀರಮರಣವನ್ನಪ್ಪಿದ ಚೋಳಾಚಾರಿ, ಚಟ್ಟನಾಯಕ, ಕೇತುಮಲ್ಲ, ಅಗಸನಾಗಿಯಣ್ಣ, ಏಕಾಂಗಿಯಾಗಿ ಸೆಣಸಾಡಿದ ರಾಮೋಜ ಮತ್ತು ಸಾಮಾನ್ಯ ಸ್ತ್ರೀಯಳಾಗಿದ್ದ ಲಕ್ಷ್ಮಮ್ಮ ಗಾವುಂಡಿಯೂ ಸಹ ಗ್ರಾಮಗಳನ್ನು ಗೋವುಗಳನ್ನು ಹುಲಿ ಮುಂತಾದ ದುಷ್ಟಮೃಗಗಳಿಂದ ರಕ್ಷಿಸುವುದಕ್ಕಾಗಿ ಬೇಟೆಯಾಡಿ ಮರಣಿಸಿದ ನಾಯಗರಾಮ, ಕೇತುರಾಯ್, ರಾಮಮಾವಂತ, ಭೂಮಾದಶೆಟ್ಟಿ ಹಾಗೂ ನಾದಿಯಣ್ಣ ಮೊದಲಾದವರ ಧೈರ್ಯ ಶೌರ್ಯ, ಪರೋಪಕಾರ ಬುದ್ದಿ ಹಾಗೂ ನಿಸ್ವಾರ್ಥತೆ ಇತ್ಯಾದಿ ಗುಣಗಳನ್ನು ಶಾಸನಗಳು ಎತ್ತಿ ತೋರಿ ಮೆಚ್ಚಿಗೆ ಸೂಚಿಸಿವೆ. ಗ್ರಾಮ ಹಾಗೂ ಊರುಗಳಲ್ಲಿ ತಮ್ಮತಮ್ಮ ವೃತ್ತಿಗಳನ್ನು ಮಾಡಿಕೊಂಡು ಹೋಗುತ್ತಿದ್ದ ಸಾಮಾನ್ಯ ಸ್ತ್ರೀ ಪುರುಷರು ಸಮಾಜ ವಿರೋ ಶಕ್ತಿಗಳು ಎದುರಾದಾಗ, ಹೆದರದೆ, ಸಾಯಲು ಹಿಂಜರಿಯದೆ ಕಾದಾಡಿದ ವರ್ಣನೆಗಳನ್ನು ಓದಿದಾಗ, ಬಹುಶಃ ಅವರಲ್ಲಿ ಇಂತಹ ಧೈರ್ಯ ಸಾಹಸಗಳು ಮಾಡಿಕೊಳ್ಳುವಂತೆ ಮಾಡುತ್ತಿದ್ದ ಒಂದು ಮೌಲ್ಯಾಧಾರಿತ ಸಂಸ್ಥೆ ಇದ್ದರಬೇಕು ಎಂದೆನಿಸುತ್ತದೆ.
ಧಾರ್ಮಿಕ ರೀತ್ಯಾ ದೇಹತ್ಯಾಗ ಮಾಡುವ ಕ್ರಮವೂ ಇದ್ದಿತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ತನ್ನ ಹರಕೆಯ ಪ್ರಕಾರ ಬೀರಯ್ಯ ಎಂಬಾತನು ಅಗ್ನಿ ಪ್ರವೇಶ ಮಾಡಿದನೆಂದು ಶಾಸನವೊಂದು ಹೇಳುತ್ತದೆ. ಜೈನರಲ್ಲಿ ಇಂಥ ಧಾರ್ಮಿಕ ರೀತ್ಯಾ ದೇಹತ್ಯಾಗಕ್ಕೆ ಸಮಾ ಮರಣ ಎನ್ನಲಾಗುತ್ತದೆ. ವಾಸಿಯಾಗದ ರೋಗ, ವೈರಾಗ್ಯ, ತನ್ನಿಂದ ಸಮಾಜಕ್ಕೆ ಏನೂ ಉಪಯೋಗವಿಲ್ಲ ಎಂಬ ಅರಿವು ಉಂಟಾದಾಗ ವ್ಯಕ್ತಿಗಳು ಸನ್ಯಸನ ಅಥವಾ ಸಲ್ಲೇಖನ ವ್ರತವನ್ನು ಕೈಗೊಂಡು ಸಂಪೂರ್ಣವಾಗಿ ಆಹಾರವನ್ನು ತ್ಯಜಿಸಿ ಮೃತ್ಯುದೇವನನ್ನು ಆಹ್ವಾನಿಸುತ್ತಿದ್ದರು. ಅರಿಷ್ಟನೇಮಿಯಂತಹ ಜೈನ ಆಚಾರ್ಯರು, ಮಾರಸಿಂಹನಂಥ ರಾಜರು, ಮುದ್ದೆಗೌಡ ಮೊದಲಾದ ಸಾಧಾರಣ ಶಿಷ್ಯರು, ಹೊಯ್ಸಳ ದಂಡಾಕ ಗಂಗ ರಾಜನ ಕುಟುಂಬದವರು, ಶಾಂತಲೆಯಂತಹ ಮಹಾರಾಣಿಯರು, ಸಾಸಿಮತಿಗಂತಿ, ಅನಂತಾಮತಿಗತಿಯಂಥ ಜೈನ ಸನ್ಯಾಸಿನಿಯರು, ಮಾದವ್ವೆ ಸೋಮಲ ದೇವಿ ಮೊದಲಾದ ಸಾಮಾನ್ಯ ಸ್ತ್ರೀಯರೂ ಸಹ ಸಲ್ಲೇಖನ ವ್ರತದ ಮೂಲಕ ಸಮಾ ಮರಣವನ್ನು ಪಡೆದರು ಎಂಬುದಾಗಿ ಶಾಸನಗಳು ವಿವರಿಸಿವೆ.
ಹೀಗೆ ಉದಾತ್ತ ಉದ್ದೇಶ ಹಾಗೂ ಸಮಾಜದ ಒಳಿತಿಗಾಗಿ ನಿಸ್ವಾರ್ಥತೆಯಿಂದ ಕಾದಾಡಿ ದೇಹತ್ಯಾಗ ಮಾಡಿದ ವೀರರ ಹಾಗೂ ರಾಜನಿಷ್ಟರ ಪತಿಭಕ್ತಿಯಿಂದ ಸತ್ತಪತಿಯೊಡನೆ ಸಹಗಮನ ಕೈಗೊಂಡಿದ್ದ ಸತಿಯರ ಮತ್ತು ಆಧ್ಯಾತ್ಮ ಸಾಧನೆಗಾಗಿ ಧಾರ್ಮಿಕ ವಿಯ ಮೂಲಕ ಪ್ರಾಣ ತೊರೆದ ಧರ್ಮನಿಷ್ಟರ ಹಾಗೂ ಧರ್ಮನಿರತ ಜೈನರ ಗೌರವಾರ್ಥವಾಗಿ ಸಮಾಜವು ಕ್ರಮವಾಗಿ ವೀರಗಲ್ಲು, ಮಾಸ್ತಿಗಲ್ಲು, ಹಾಗೂನಿಸಿಗಲ್ಲುಗಳನ್ನು ನಿಲ್ಲಿಸುವುದರ ಮೂಲಕ ಮತ್ತು ಅವರ ಹೆಸರಿನಲ್ಲಿ, ಅವರ ಸ್ಮರಣಾರ್ಥವಾಗಿ ಹಾಗೂ ಅವರ ಆಶ್ರಿತರಿಗಾಗಿ ನಾನಾವಿಧವಾದ ದತ್ತಿಗಳನ್ನು ನೀಡುವುದರ ಮೂಲಕ ಸಮಾಜವು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಿತು. ಎಂಬುದನ್ನು ವಿಷದ ಪಡಿಸುವ ಶಾಸನಗಳಲ್ಲಿ ವಿಫುಲವಾದ ಮಾಹಿತಿ ಸಂಗ್ರಹಗಳೇ ಇವೆ.
ಕೆರೆಯಂ ಕಟ್ಟಿಸು ಬಾವಿಯಂ ಸವೆಸು, ದೇವಾಗಾರಮಂ ಮಾಡಿಸು…….. ಎಂಬ ಮೊದಲ ಪಾಠವನ್ನು ಮೊದಲಗುರುವಾದ ತಾಯಿಯೋರ್ವಳು ತನ್ನ ಮಗನಿಗೆ ಹೇಳಿಕೊಟ್ಟ ವಿಷಯ ಶಾಸನವೊಂದರಿಂದ ತಿಳಿದು ಬರುತ್ತದೆ. ಹೀಗೆ ಪರಾರ್ಥಪರತೆ ಜನೋಪಯೋಗಿ ಕಾರ್ಯಗಳಲ್ಲಿ ಆಸಕ್ತಿಯನ್ನು ಸಮಾಜದ ಸದಸ್ಯರಲ್ಲಿ ಬೆಳೆಸುವುದು ಅದಂದಿನ ಸಮಾಜೀಕರಣ ಪ್ರಕ್ರಿಯೆಯಲ್ಲಿ ಬಹುಮುಖ್ಯ ವಾಗಿದ್ದಿತು ಎನ್ನಬಹುದು. ಆದ್ದರಿಂದಲೇ ಸತ್ರ, ಕೆರೆ, ಉದ್ಯಾನವನ, ತೋಟತುಡಿಕೆ, ಅಗ್ಗಿಷ್ಟಿಕೆಅರವಟ್ಟಿಗೆ, ಮುಂತಾದ ಸಾರ್ವಜನಿಕ ಉಪಯೋಗಕ್ಕೆ ಬೇಕಾಗುವುದನ್ನು ನಿರ್ಮಿಸಿ ಅವುಗಳ ರಕ್ಷಣೆಗಾಗಿ ಹಾಗೂ ಅವುಗಳಿಂದ ಜನರಿಗೆ ಸದಾ ಪ್ರಯೋಜನಗಳು ಆಗುತ್ತಿರಬೇಕೆಂಬ ಉದ್ದೇಶದಿಂದ ಹಣ, ಭೂಮಿ ಮುಂತಾಗಿ ಹಲವಾರು ದತ್ತಿಗಳನ್ನು ನೀಡಿದ್ದ ಅನೇಕ ಸ್ತ್ರೀ ಪುರುಷರನ್ನು ಶಾಸನಗಳಲ್ಲಿ ಭೇಟಿಮಾಡಬಹುದು. ಭಾರತೀಯ ಪರಂಪರೆಯಲ್ಲಿ ತಾಯಿ, ತಂದೆ, ಗುರುವಲ್ಲದೆ ಅಥಿತಿಯೂ ಸಹ ದೇವರೆ ಎಂಬುದಾಗಿ ಭಾವಿಸಲಾಗುತ್ತದೆ. ಅನ್ನದಾನವು ಬಹಳ ಶ್ರೇಷ್ಟವಾದುದು, ಎಂಬ ನಂಬಿಕೆ ಮತ್ತು ಅತಿಥಿ ಸತ್ಕಾರ ಪ್ರತಿಯೊಬ್ಬರ ಪವಿತ್ರ ಕರ್ತವ್ಯ ಎಂಬ ಭಾವನೆಯ ಅಬಿವ್ಯಕ್ತಿಯೇ ಸತ್ರ. ಕರ್ನಾಟಕದಲ್ಲಿ ಬಹುಮಟ್ಟಿಗೆ ಸತ್ರಗಳು ದೇಗುಲ, ಬಸದಿ ಹಾಗೂ ಮಠಗಳಿಗೆ ಹೊಂದಿಕೊಂಡು ಇರುತ್ತಿದ್ದವು. ದಂಡಾಪರವಿಗನ ಪತ್ನಿ ರೆಬ್ಬಲದೇವಿ ಸತ್ರಕ್ಕಾಗಿ ತನ್ನ ಮನೆಯನ್ನೇ ಬಿಟ್ಟುಕೊಟ್ಟಳು, ಅನ್ನದಾನವೇ ಮುಖ್ಯವೆಂದು ಬಗೆದು ಜಕ್ಕವ್ವೆ ಸತ್ರವೊಂದನ್ನು ನಿರ್ಮಿಸಿದಳು, ಅಗ್ರಹಾರದ ಪೊಂಬುಚ್ಚಿಯಲ್ಲಿ ನಾಗವರ್ಮಯ್ಯ ವಿಷ್ಣುದೇಗುಲಕ್ಕೆ ಅಕಂಟಿಕೊಂಡಂತೆ ಸತ್ರವನ್ನು ಕಟ್ಟಿಸಿದನು. ಪದ್ಮಬ್ಬರಸಿ ತನ್ನ ಬಸದಿಯ ಅಯಂಗವಾಗಿ ದಾನಶಾಲೆಯನ್ನು ಸ್ಥಾಪಿಸಿದಳು ಮತ್ತು ಸತ್ರಗಳ ರಕ್ಷಣೆಗೆ ಹಾಗೂ ಅವುಗಳಲ್ಲಿ ಬ್ರಾಹ್ಮಣ, ಸನ್ಯಾಸಿ, ಜಂಗಮ ಮತ್ತು ಇತರರ ಊಟಕ್ಕಾಗಿ ಭೂಮಿ, ಗದ್ಯಾಣ, ಮುಂತಾದ ಹಲವುಬಗೆಯ ದತ್ತಿಗಳನ್ನು ಮಾಣಿಕ ಸೆಟ್ಟಿ, ಚಂದವ್ವೆ ಹೆಗ್ಗಡಿತಿ, ಚಾಮಿಕಬ್ಬೆ, ಹೊನ್ನಮವ್ವ ಮೊದಲಾದ ಅನೇಕರು ಕೊಟ್ಟರು ಎಂಬುದಾಗಿ ಶಾಸನಗಳು ವಿಶದಪಡಿಸುತ್ತವೆ.
ಪುಣ್ಯಸಂಪಾದನೆ ಮತ್ತು ಜನೋಪಯೋಗ ಎಂಬ ಸದುದ್ದೇಶಕ್ಕಾಗಿ ಕರ್ಣಾಟಕ ಸಮಾಜದ ಸ್ತ್ರೀಪುರುಷ ಸದಸ್ಯರು ಅನೇಕ ಕೆರೆಗಳನ್ನು ಕಟ್ಟಿದರು. ತಮ್ಮ ಹೆಸರಿನ ಮೇರೆಗೆ ಪಟ್ಟಣ ಸ್ವಾಮಿಗೆರೆ ಮತ್ತು ಮಾಚಲಸಮುದ್ರ ಎಂಬ ಕೆರೆಗಳನ್ನು ಕ್ರಮವಾಗಿ ಪಟ್ಟಣಸ್ವಾಮಿ ಹಾಗೂ ರಾಣಿ ಮೇಚಲದೇವಿಯಂಥ ಸಾಮಾನ್ಯ ಮಹಿಳೆಯರೂ ಶಾಸನಗಳಲ್ಲಿ ಉಲ್ಲೇಖಿತರಾಗಿದ್ದಾರೆ. ಇಂತಹ ಕೆರೆಗಳು ಬಹಳ ಕಾಲ ಜನಸೇವೆಗೆ ಉಪಯುಕ್ತವಾಗುವಂತೆ ಮಾಡಲು ಕೆಲವುಸಲ ಊರಿನವರೆಲ್ಲಾ ಸೇರಿ ಜಮೀನುಗಳನ್ನು, ಹಾಗೂ ಮದುವೆ ಮುಂಜಿ ಸಂದರ್ಭಳಲ್ಲಿ ಕೊಡಲಾಗುತ್ತಿದ್ದ ಒಸಗೆ ದ್ರವ್ಯವನ್ನು ಬಿಟ್ಟುಕೊಡುತ್ತಿದ್ದರು. ಮತ್ತು ನಾಗವರ್ಮ, ಮಣಿಯಬ್ಬೆ, ಗೌರಲದೇವಿಮೊದಲಾದ ಅನೇಕಾನೇಕ ಸ್ತ್ರೀಪುರುಷರು ಹೊಲಗದ್ದೆ, ಚಿನ್ನದ ಗದ್ಯಾಣ, ತೈಲದ ಗಿರಣಿ ಮುಂತಾದ ನಾನಾಬಗೆಯ ದತ್ತಿಗಳನ್ನು ಕೊಟ್ಟಿದ್ದರು. ಎಂಬುದು ಶಾಸನಗಳಿಂದ ಸ್ಪಷ್ಟವಾಗುತ್ತದೆ.
ಅದೇ ರೀತಿ ಎಲ್ಲಾ ಸಾಮಾಜಿಕ ಸ್ತರಗಳಿಗೆ ಸೇರಿದ್ದ ಸ್ತ್ರೀಪುರುಷರು ಆರಾಮ/ಆರವೆ, ಅವಂದರೆ ಸಾರ್ವಜನಿಕ ಉದ್ಯಾನವನ ಬೆಳೆಸುವುದಕ್ಕೆ, ಊರಿನವರಿಗೆ ದಿನನಿತ್ಯ ಬೆಂಕಿಯನ್ನು ಒದಗಿಸಿಕೊಡುವುದಕ್ಕೆ ದೇವಾಲಯ ಮಠ ಅಥವಾ ವೈಕ ಗೃಹಗಳಲ್ಲಿ ಸದಾ ಅಗ್ಗಿಷ್ಟಿಕೆ ಉರಿಯುತ್ತಿರುವಂತೆನೋಡಿಕೊಳ್ಳುವುದಕ್ಕಾಗಿ, ಪ್ರಯಾಣಿಕರ ದಾಹತಣಿಸುವುದಕ್ಕಾಗಿ ಅರವಟ್ಟಿಗೆಗಳನ್ನು ಇಡುವುದಕ್ಕಾಗಿ, ಅವುಗಳಿಗೆ ನೀರುತುಂಬುತ್ತಿದ್ದವರಿಗೆ ವಿವಿಧ ಬಗೆಯ ದತ್ತಿಗಳನ್ನು ನೀಡುತ್ತಿದ್ದರು. ಚಪ್ಪಲದೇವಿಕೆರೆ, ಬಾವಿ, ದೇಗುಲಗಳಲ್ಲದೆ ಅರವೆಯನ್ನು ಮಾಡಿಸಿದಳು. ಅಯ್ಯಪ್ಪದೇವ ತುಡಿಕೆಯನ್ನು ಅನಂದರೆ ಸಣ್ಣ ತೋಟ ಅಥವಾ ಹೂದೋಟವನ್ನು ಬೆಳೆಸಿ ಧರ್ಮಾರ್ಥವಾಗಿ ಬಿಟ್ಟನು. ರಾಮನ್ಯ ಮಹಿಳೆ ಮುದ್ದಲದೇವಿ ಅಗ್ಗಿಷ್ಟಿಗೆಯನ್ನು ನೋಡಿಕೊಳ್ಳಲು ಶಿವಪುರ ಅಗ್ರಹಾರದಲ್ಲಿ ನೀರು ಮಹಾಜನರ ಕೈಯಲ್ಲಿ ೬ ಗದ್ಯಾಣಗಳನ್ನು ಇಟ್ಟಳು. ಉದ್ಯಾನವೊಂದರಲ್ಲಿ ನಾಣಿಮಯ್ಯ ಅರವಟ್ಟಿಗೆಯನ್ನು ಇಡಿಸಿದನು. ತಾಳಗುಂದದ ಅಗ್ರಹಾರದಲ್ಲಿ ನೀರು ತುಂಬುತ್ತಿದ್ದ ಮಾಣಿಗೆ ದಾನಗಳನ್ನು ಕೊಡಲಾಗಿದ್ದಿತು. ನಾಣಿಮಯ್ಯನಾಯಕನು ತನ್ನ ತಂದೆಯ ಪುಣ್ಯಕ್ಕಾಗಿ ಒಂದು ಅರವಟ್ಟಿಗೆಗೆ ೫ ಗದ್ಯಾಣಗಳನ್ನು ಕೊಟ್ಟರೆ, ಮಾದಬ್ಬೆ ತನ್ನ ನೆಲದ ಒಂದುಭಾಗವನ್ನೇ ದಾನ ಮಾಡಿದಳು ಎಂಬುದಾಗಿ ಶಾಸನಗಳು ಇಂತಹ ಸಾರ್ವಜನಿಕ ಸೇವಾಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಉದಾರಿಗಳನ್ನು ಬಣ್ಣಿಸಿವೆ.
ಕರ್ನಾಟಕ ಸಮಾಜದ ಸದಸ್ಯರು ದೇಗುಲ, ಬಸದಿಗಳ ನಿರ್ಮಾಣಕಾರ್ಯದಲ್ಲೂ ಬಹು ಶ್ರದ್ದೆಯನ್ನು ವಹಿಸಿದ್ದರು. ನ್ಯಾಯವಾದ ರೀತಿಯಲ್ಲಿ ಹಣಗಳಿಸಿ ದಾನ ಮಾಡಬೇಕು ಅಥವಾ ಅದನ್ನು ಬಳಸಿ ದೇವಾಲಯಗಳನ್ನು ಕಟ್ಟಿ ದಾನ ಧರ್ಮಗಳನ್ನು ಮಾಡಿ ಪುಣ್ಯಸಂಪಾದನೆ ಮಾಡಿಕೊಳ್ಳಬೇಕು ಎಂಬುದು ಅವರ ಆದರ್ಶವಾಗಿದ್ದಿತು. ಅವರು ಅನೇಕ ದೇಗುಲ ಹಾಗೂ ಬಸದಿಗಳನ್ನು ಕಟ್ಟಿಸಿರುವ ವಿವರಗಳು ಶಾಸನಗಳಲ್ಲಿ ವಿಫುಲವಾಗಿವೆ. ದೇವಾಲಯಗಳನ್ನು ಸ್ಥಾಪಿಸಿ, ಅಲ್ಲಿ ತಮ್ಮ ಹೆಸರನ್ನೇ ಹೊಂದಿರುವ ಶಿವ, ವಿಷ್ಣು, ದೇವರ ಪ್ರತಿಮೆಗಳನ್ನು ಪ್ರತಿಷ್ಟೆ ಮಾಡುತ್ತಿದ್ದ ಪದ್ದತಿ ಇದ್ದಿತು. ಹಬ್ಬೆಯ ನಾಯಕ ಪ್ರತಿಷ್ಟಾಪಿಸಿದ ದೇವರು ಹೆಬ್ಬೇಶ್ವರ. ಲೋಕಮಹಾದೇವಿ ನಿರ್ಮಿಸಿದ ದೇವಸ್ಥಾನ ಲೋಕೇಶ್ವರ ಭಟ್ಟಾರಕ. ವಿವಿಧ ವೃತ್ತಿಗಳವರು ಹಾಗೂ ಸಾಮಾನ್ಯ ಸ್ತ್ರೀಯರೂ ಸಹ ದೇವಾಲಯಗಳನ್ನು ಕಟ್ಟಿದರು ಎಂಬುದು ಗಮನಾರ್ಹವಾದುದು. ಕುಂಭೇಶ್ವರ ದೇವರ ಪ್ರತಿಷ್ಟಾಪಕ ಕುಂಬಾರ ಬಮ್ಮಣ್ಣ. ರೆಬ್ಬಲದೇವಿ ತನ್ನ ಜನ್ಮಸ್ಥಳ ಪೂವಿನ ಪೊಸವಂದಗಿಲೆ ಎಂಬಲ್ಲಿ ಕೇಶವ ದೇವರ ದೇಗುಲವನ್ನು ಸ್ತಾಪಿಸಿದಳು.
ಚಟ್ಟಲದೇವಿ ನಿರ್ಮಿಸಿದ್ದ ಹಲವಾರು ಜಿನಾಲಯಗಳಲ್ಲಿ ಅತ್ಯಂತ ಸುಂದರವಾಗಿದ್ದುದು ಊರ್ವಿತಿಲಕಂ ಎಂಬ ಪಂಚಕೂಟ ಅಥವಾ ಪಂಚಬಸದಿ. ಸಾಂತಿಯಕ್ಕ ಉದ್ಧರೆಯ ಬಸದಿಯ ನಿರ್ಮಾಪಕಳು ಮತ್ತು ಕಡೂತಿಯಲ್ಲಿ ಕಂಬದಯ್ಯ ಹಾಗೂ ಗೋಪಾಲಕೃಷ್ಣದೇವರ ಆಲಯಗಳ ಸ್ಥಾಪನೆಗೆ ಕಾರಣಳಾಗಿದ್ದವಳು. ಜಿರ್ಲೆಮಲ್ಲಮ್ಮ. ಕೆಲವರು ದೇಗುಲ, ಬಸದಿಗಳ ಒಂದೊಂದು ಭಾಗವನ್ನು ಕಟ್ಟಿರುವುದಾಗಿ ಶಾಸನಗಳು ಹೇಳುತ್ತವೆ. ಇಂತಹ ಪವಿತ್ರಾಲಯಗಳು ಸಾರೋದ್ಧಾರವಾಗಿ ಊರ್ಜಿತವಾಗಿರಬೇಕೆಂಬ ಉದ್ದೇಶದಿಂದ ಎಲ್ಲಾ ವೃತ್ತಿಯವರು ಹಾಗೂ ಎಲ್ಲಾ ಸಾಮಾಜಿಕ ಸ್ತರಗಳ ಸದಸ್ಯರು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ದೇವರ ಧೂಪ, ದೀಪ, ನೈವೇದ್ಯ, ಗಂಧ, ನೃತ್ಯೋಪಹಾರ, ಅರಂಗರಂಗಭೋಗ, ಎಲ್ಲಾಬಗೆಯ ಉತ್ಸವ ಇತ್ಯಾದಿಗಳಿಗಾಗಿ ವೈವಿದ್ಯಮಯ ದಾನ ದತ್ತಿಗಳನ್ನು ಅರ್ಪಿಸಿರುವುದು ಶಾಸನಗಳಲ್ಲಿ ಸವಿಸ್ತರವಾಗಿ ವಿಶದೀಕರಿಸಲಾಗಿದೆ.
ಹೀಗೆ ದೇವಾಲಯ, ಬಸದಿಗಳು ಒಂದು ಬಹು ಪ್ರಭಾವಶಾಲಿಯಾಗಿದ್ದ ಧಾರ್ಮಿಕಸಾಮಾಜಿಕ ಸಂಸ್ಥೆಗಳಾಗಿ ಸಮಾಜ ಜೀವನ ಸ್ಥಿರತೆ ಹಾಗೂ ಗತಿಶೀಲತೆಯನ್ನು ಕಾಪಾಡಿಕೊಂಡು ಬಂದವು. ಪ್ರತಿ ಪವಿತ್ರಾಲಯವೂ ಒಂದು ನ್ಯಾಯ ಸ್ಥಾನವೂ, ಒಂದು ವಿದ್ಯಾಲಯವೂ, ನೈತಿಕಆಧ್ಯಾತ್ಮಿಕ ಶಿಕ್ಷಣ ಕೇಂದ್ರವೂ, ಮನರಂಜನಾ ಸಂಸ್ಥೆಯೂ, ಪೂಜಾರಿ, ದೇವದಾಸಿ ಮುಂತಾಗಿ ವಿವಿಧ ಕಾರ್ಯಕರ್ತರಿಂದ ಕೂಡಿದ ಒಂದು ಬಗೆಯ ಅಕಾರ ಶಾಹಿ ರಚನೆಯೂ, ಜನರಿಗೆ, ಮುಖ್ಯವಾಗಿ ರೈತರಿಗೆ ಬೇಕಾದ ಧನಸಹಾಯ ಮಾಡುತ್ತಿದ್ದ ಬ್ಯಾಂಕೂ ಆಗಿ, ಹೀಗೆ ಸರ್ವೋದ್ದೇಶ ಗತಿಶೀಲ ಸಂಸ್ಥೆಯಾಗಿ ಜನರಿಗೆ ತಕ್ಕ ಮಾರ್ಗದರ್ಶನವನ್ನು ನೀಡುತ್ತಿದ್ದಿತು.
ದೇವಾಲಯದೊಂದಿಗೆ ಕೈಜೋಡಿಸಿ ಅಗ್ರಹಾರ, ಬ್ರಹ್ಮ ಪುರಿ, ಮಠಗಳು ವಿದ್ಯಾಪ್ರಸಾರದ ಕಾರ್ಯವನ್ನು ಮಾಡುತ್ತಿದ್ದವು. ರಾಜರುಗಳ ಹಾಗೂ ಇತರ ಅಕಾರಿಗಳು ಊರು ಹಾಗೂ ಗ್ರಾಮಗಳನ್ನು ಅಗ್ರಹಾರಗಳನ್ನಾಗಿಸಿ ಘನಪಂಡಿತರಾಗಿದ್ದ ಬ್ರಾಹ್ಮಣರನ್ನು ಕರೆಯಿಸಿ ದಾನ ಮಾಡುತ್ತಿದ್ದರು. ಈ ಮಹಾಜನಗಳು ವೈದಿಕ ಸಂಪ್ರದಾಯದ ವಿದ್ಯಾಕೇಂದ್ರಗಳಾಗಿದ್ದ ಅಗ್ರಹಾರಗಳಲ್ಲಿದ್ದುಕೊಂಡು ವಿದ್ಯಾದಾನವನ್ನು ಮಾಡುತ್ತಿದ್ದರು. ನಗರಗಳಲ್ಲಿ ಬ್ರಾಹ್ಮಣರು ಇರುತ್ತಿದ್ದ ಭಾಗಗಳೇ ಬ್ರಹ್ಮಪುರಿಗಳು. ಶಿಕ್ಷಣ ಕೇಂದ್ರವಾಗಿದ್ದ ಮಠಗಳಲ್ಲಿ ಬಹು ಪ್ರಭಾವ ಶಾಲಿಯಾಗಿದ್ದುದೇ ಬಳ್ಳಿಗಾವೆಯ ಕೋಠಿಯ ಮಠ ಅಥವಾ ಕೇದಾರೇಶ್ವರ ಮಠ ಅಲ್ಲಿದ್ದ ಗುರುಗಳೆಲ್ಲರೂ ಬಹು ಆಳವಾದ ಪಾಂಡಿತ್ಯವನ್ನು ಹೊಂದಿದ್ದರು, ಅಲ್ಲಿ ಎಲ್ಲಾ ವಿಷಯಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದ್ದಿತು. ಮತ್ತು ನಾನಾಭಾಗಗಳಿಂದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ ಆ ಮಠ ಸನ್ಯಾಸಿ, ಬಿಕ್ಷುಕ, ರೋಗಿ, ಕಲಾವಿದ ಮೊದಲಾದವರಿಗೆ ಆಶ್ರಯ ತಾಣವೂ ಆಗಿದ್ದಿತು. ಹೀಗೆ ಅದು ಕೇವಲ ಶಿಕ್ಷಣ ಕೇಂದ್ರ ಮಾತ್ರವಾಗಿರದೆ ನಿಜವಾದ ಸಾಮಾಜಿಕ ಸಂಸ್ಥೆಯೂ ಆಗಿದ್ದಿತು. ದೊರೆಗಳಲ್ಲದ ಸಮಾಜದ ಇತರ ಸದಸ್ಯರೂ ಸಹ ವಿದ್ಯಾಕೇಂದ್ರ, ಅಧ್ಯಾಪಕವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಉದಾರವಾಗಿ ದಾನಗಳನ್ನು ನೀಡಿರುವುದನ್ನು ಶಾಸನಗಳು ಉಲ್ಲೇಖಿಸಿವೆ. ಕೇಶವ ದಂಡನಾಯಕನು ತಾಳಗುಂದ ಅಗ್ರಹಾರದಲ್ಲಿ ವೇದಗಳ ವೇದಗಳ ಅಧ್ಯಾಪನಕ್ಕಾಗಿ ಬಯಲನ್ನು ದಾನಮಾಡಿದನಲ್ಲದೆ, ವಿದ್ಯಾರ್ಥಿಗಳ ವಸ್ತ್ರ, ಊಟ, ಅಭ್ಯಂಜನಕ್ಕಾಗಿಯೂ ಬಾಲಶಿಕ್ಷಣಶಾಸ್ತ್ರದವರಿಗೆ ಹಾಗೂ ಕನ್ನಡ ಉಪಾಧ್ಯಾಯನಿಗೆ ದತ್ತಿಗಳನ್ನು ಬಿಟ್ಟುಕೊಟ್ಟನು. ಸ್ತ್ರೀ ವಿದ್ಯಾಭ್ಯಾಸದ ಬಗ್ಗೆ ಶಾಸನಗಳು ಹೇಳಿಕೊಳ್ಳುವಂತಹ ಮಾಹಿತಿಗಳನ್ನು ಒಳಗೊಂಡಿಲ್ಲ ಎಂಬುದು ಸ್ವಲ್ಪ ನಿರಾಸೆಯನ್ನು ಉಂಟುಮಾಡುತ್ತದೆ. ಆದರೂ ಮಹಿಳೆಯರು ಶಿಕ್ಷಣದ ಮಹತ್ವವನ್ನು ಅರಿತಿದ್ದರು. ಆದ್ದರಿಂದ ಉಪಾಧ್ಯಾಯ, ವಿದ್ಯಾರ್ಥಿ ಹಾಗೂ ವಿದ್ಯಾಲಯಗಳಿಗೆ ದಾನಗಳನ್ನು ನೀಡಿದ್ದರು ಎಂಬುದು ಸಮಾಧಾನಕರವಾದ ವಿಷಯವಾಗಿದೆ. ರಾಣಿ ಲಕ್ಷ್ಮಿದೇವಿ ಅಚಲೇಶ್ವರ ದೇಗುಲಕ್ಕೆ ಪಾಂಗಿರಿ ಹಳ್ಳಿಯನ್ನು ದಾನಮಾಡಿ ಅದರ ಆದಾಯವನ್ನು ಋಷಿಗಳ ಆಹಾರ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬಳಸುವಂತೆ ಮಾಡಿದ್ದಳು. ಬನದವೆ ಹೆಗ್ಗಡತಿ ಹಾಗೂ ಶೃಂಗಾರಮ್ಮ ಅಗ್ರಹಾರಗಳನ್ನು ಸ್ಥಾಪಿಸಿದ್ದರೆ, ಧರ್ಮವ್ವೆ ಎಂಬ ಮಹಿಳೆ ಶಾಸ್ತ್ರ ಉಪಾಧ್ಯಾಯರಿಗೆ ಹಾಗೂ ಪುರಾಣ ಓದುತ್ತಿದ್ದ ಪಂಡಿತರಿಗೆ ಭೂದಾನ ಮಾಡಿದಳು. ಹೀಗೆ ಸ್ತ್ರೀಯರು ಸಹ ವಿದ್ಯಾಪೋಷಕರಾಗಿದ್ದರು.
ಸಮಾಜದ ವಿವಿಧ ರಂಗಗಳಲ್ಲಿ ಭಾಗವಹಿಸಲು ಸ್ತ್ರೀಯರಿಗಿದ್ದ ಅವಕಾಶಗಳ ಬಗ್ಗೆ ಶಾಸನಗಳಲ್ಲಿ ವಿವರಣೆಗಳಿವೆ. ತಾಯಿಗೆ ಇಲ್ಲೂ ಪೂಜನೀಯ ಸ್ಥಾನವಿದ್ದಿತು. ತಾಯಿಗಾಗಿ ಪುತ್ರಪುತ್ರಿಯರು ದೇವಾಲಯ, ಬಸದಿ, ಕೆರೆ, ಅಗ್ರಹಾರಗಳನ್ನು ಸ್ಥಾಪಿಸಿದ ಹಾಗೂ ದಾನ ಧರ್ಮಗಳನ್ನು ಮಾಡಿದ ನಿದರ್ಶನಗಳನ್ನು ಶಾಸನಗಳು ಎತ್ತಿ ತೋರಿವೆ. ರಾಜಮಾತೆಯರಲ್ಲದೆ, ಇತರ ತಾಯಂದಿರೂ ಸಹ ತಮ್ಮ ಮಕ್ಕಳಿಗಾಗಿ ಪವಿತ್ರಾಲಗಳನ್ನು ಕಟ್ಟಿಸಿದ್ದರು, ಕೆರೆ,ಬಾವಿಗಳನ್ನು ತೋಡಿಸಿದ್ದರು, ವೀರಗಲ್ಲುಗಳನ್ನು ನೆಡಿಸಿ ದಾನಗಳನ್ನು ಕೊಟ್ಟಿದ್ದರು ಧಾರ್ಮಿಕಕ್ಷೇತ್ರದಲ್ಲಿ ಪಾಲ್ಗೊಳ್ಳಲು ಸ್ತ್ರೀಯರಿಗೆ ಪೂರ್ಣಾವಕಾಶವಿದ್ದಿತು. ಕುಂಕುಮ ಮಹಾದೇವಿ, ಚಾಗಲದೇವಿಯಂತಹ ರಾಣಿಯರೂ, ಹೆಗ್ಗಡಿತಿಚಂದವ್ವೆ, ಸೆಟ್ಟಿತಿ ಗುಂಡಬ್ಬೆ, ದಂಡನಾಯಕಿತಿ ಸಾತವ್ವೆ, ಸಾಧಾರಣ ಸ್ತ್ರೀಯರಾಗಿದ್ದ ಬಿಜವ್ವೆ, ಸೋಮವ್ವೆ, ಮೊದಲಾದವರು ಬಸದಿ, ಶಿವ, ವಿಷ್ಣು ದೇವಸ್ಥಾನಗಳನ್ನು ನಿರ್ಮಿಸಿದರು ಮತ್ತು ಸಾಮಾನ್ಯ ಮಹಿಳೆಯರಾಗಿದ್ದ ಪೋಲಲಬ್ಬೆ, ಗೊಮಬ್ಬೆ, ಬ್ರಾಹ್ಮಣಿ ಸೋರಿಕವ್ವೆ, ಅಯೋಧ್ಯಕ್ಕೆ ಮೊದಲಾದವರು ಮತ್ತು ಬಳಿಕವ್ವೆಗೌಡಿ, ಜಕ್ಕವ್ವೆದಂಡನಾಯಕಿತ್ತಿ, ರಾಜಕುವರಿ ಸುಗ್ಗಲದೇವಿ, ರಾಣಿ ಮೇಚಲದೇವಿ ಮೊದಲಾದ ಸಮಾಜದ ಮೇಲಿನ ಸ್ತರದವರೂ ಪವಿತ್ರಾಲಯಗಳಿಗೆ ಮತ್ತು ದೇವರುಗಳ ವಿವಿಧ ಬಗೆಯ ಸೇವೆಗಳಿಗಾಗಿ ಗ್ರಾಮ, ಹೊಲ, ಗದ್ದೆ, ತೋಟ, ತುಡಿಕೆ, ಗದ್ಯಾಣ, ಎಣ್ಣೆ, ತುಪ್ಪ, ವೀಳೆಯದೆಲೆ, ಅಡಿಕೆ, ದೀಪದ ಕಂಬ ಮುಂತಾದ ಬಗೆಬಗೆಯ ದಾನಗಳನ್ನು ಅರ್ಪಿಸಿದ್ದರು ಎಂಬುದನ್ನು ಶಾಸನಗಳು ಬಣ್ಣಿಸಿವೆ.
ಜೊತೆಗೆ ತಮ್ಮ ಧರ್ಮಗಳ ಕ್ರಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಒಂದು ಆರೋಗ್ಯಕರ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವುದಕ್ಕೆ ಸ್ತ್ರೀಯರು ಬಹುಮಟ್ಟಿಗೆ ಕಾರಣರಾಗಿದ್ದರು. ತಾಯಿಯಾಗಿ, ಪುತ್ರಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಸಾರ್ವಜನಿಕ ಸೇವಾಕಾರ್ಯಗಳಲ್ಲೂ ಪಲ್ಗೊಳ್ಳುತ್ತಿದ್ದರು ಎಂಬುದಾಗಿ ಶಾಸನಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿದೆ. ಇಂತಹ ಮಹಿಳೆಯರಲ್ಲಿ ಅಗ್ರಗಣ್ಯರಾಗಿದ್ದವರು ಹಿರಿಯ ಚಾಲುಕ್ಯ ಅಕಾರಿ ಮಲ್ಲಪ್ಪಯ್ಯ ಮಗಳು ಹಾಗೂ ಚಾಳುಕ್ಯ ಚಮಾಪತಿ ನಾಗದೇವನ ಪತ್ನಿ ಅತ್ತಿಮಬ್ಬೆ ಮತ್ತು ಹೊಯ್ಸಳ ಪ್ರಭು ವಿಷ್ಣುವರ್ಧನನ ರಾಣಿ ಶಾಂತಲೆ.ತನ್ನ ಗಂಡ ಮೃತ್ಯುವಶನಾದಾಗ ತನ್ನ ತಂಗಿಯೂ, ಸವತಿಯೂ ಆಗಿದ್ದ ಗುಂಡಬ್ಬೆ ಸತಿಯಾದಾಗ, ಪುತ್ರ ಅಣ್ಣಿಗ ದೇವನಿಗಾಗಿ ಸಾಯದೆ ಉಳಿದ ಅತ್ತಿಮಬ್ಬೆ ಜೈನ ಧರ್ಮಾವಲಂಬಿಯಾಗಿ ಉಗ್ರದೀಕ್ಷೆ ವಹಿಸಿದ್ದ ತಪಸ್ವಿನಿ. ಅವಳು ಜೈನ ಧರ್ಮಕ್ಕೆ ಮಾಡಿದ ಸೇವೆ ಸ್ತುತ್ಯರ್ಹವಾದುದು.
ಅವಳು ರನ್ನನಿಂದ ಅಜಿತ ಪುರಾಣ ಪ್ರವಚನ ಮಾಡಿಸಿದಳು. ಮಣಿಕನಕ ಅಲಂಕೃತ ಸಾವಿರದ ಐನೂರು ಜಿನಪ್ರತಿಗಳನ್ನು ಮಾಡಿಸಿ ದಾನ ಮಾಡಿದಳು ಪೊನ್ನನ ಶಾಂತಿಪುರಾಣದ ಸಾವಿರ ಪ್ರತಿಗಳನ್ನು ಸಿದ್ಧಪಡಿಸಿ ಹಂಚಿ ಶಾಸ್ತ್ರ ದಾನ ಮಾಡಿದಳು. ಲಕ್ಕುಂಡಿಯಲ್ಲಿ ಒಂದು ಸುಂದರವಾದ ಬಸದಿಯನ್ನು ಮಾಡಿಸಿದಳು. ಅವಳ ತಪಸ್ಸು, ಕಠೋರ ನಿಯಮಾನುಸರಣೆ,ತ್ಯಾಗ, ಔದಾರ್ಯವನ್ನು ಶಾಸನಗಳು ಕೊಂಡಾಡಿವೆ ಹಾಗೂ ಅವಳ ಅನೇಕ ಪವಾಡಗಳನ್ನು ವಿವರಿಸಿವೆ.
ಇನ್ನೊಬ್ಬ ಮಹಾಸಾದ್ವಿ ಶಾಂತಲೆ ಶಿವಭಕ್ತ ಮಾರಸಿಂಗಮಯ್ಯ ಮತ್ತು ಜಿನ ಭಕ್ತೆ ಮಾಚಿಕಟ್ಟೆಯ ಪ್ರೀತಿಯ ಕುವರಿ ಹಾಗೂ ಹೊಯ್ಸಳ ವಿಷ್ಣುವರ್ಧನ ಪ್ರಿಯ ಪಟ್ಟದ ಅರಸಿ ಅವಳು ಸೌಂದರ್ಯ ಸಿರಿ ಮೊತ್ತವಲ್ಲದೆ, ಅತ್ಯುತ್ತಮ ಕಲಾಶ್ರೀಮಂತಳೂ ಆಗಿದ್ದಳು.ಅವಳ ದಾಂಪತ್ಯ ಆದರ್ಶದ ಗೌರಿಶಂಕರವಾಗಿದ್ದಿತು.
ಶ್ರವಣಬೆಳಗೊಳದಲ್ಲಿ ಗಂಗವಾರಣ ಬಸದಿಯನ್ನು ಮತ್ತು ಕಪ್ಪೆಚೆನ್ನಿಗರಾಯ ದೇಗುಲವನ್ನು ಕಟ್ಟಿಸಿದ ಅವಳು ಸನ್ಯಸನ ವ್ರತದಿಂದ ಮೃತ್ಯುವನ್ನಪ್ಪಿ ದೈಹಿಕವಾಗಿ ಕಣ್ಮರೆಯಾದಳು, ಆದರೆ ಶಾಶ್ವತ ಕೀರ್ತಿಗೆ ಪಾತ್ರಳಾದಳು, ಹೀಗೆ ಕರ್ನಾಟಕದ ಸಮಾಜವೆಂಬ ತೋಟದಲ್ಲಿ ಶಾಂತಲೆ ದೈವಿಕ ಪುಷ್ಪವಾಗಿದ್ದರೆ, ಅತ್ತಿಮಬ್ಬೆ ಅಮೃತಫಲ.
ಸ್ತ್ರೀಯರೂ ಆಡಳಿತ ಚುಕ್ಕಾಣಿಯನ್ನು ಹಿಡಿದು ಸಮರ್ಪಕವಾಗಿ ನಡೆಸಿದರು ಎಂಬುದನ್ನು ಶಾಸನಗಳು ವಿವರವಾಗಿ ತಿಳಿಸಿವೆ. ಕಂಚಿಕಬ್ಬೆ ಅಕ್ಕಾದೇವಿ, ಜೋಗಲಾದೇವಿ, ನಾಳ, ಗೌವಂಡಿ, ಜಕ್ಕಿಯಬ್ಬೆ, ಹಿರಿಯೂರಿನ ಕುಂಜೇಶ್ವರ ದೇಗುಲದ ಯಜಮಾನಿ ಚಂದವ್ವೆ ಮೊದಲಾದವರ ಬಗ್ಗೆ ಶಾಸನಗಳಲ್ಲಿ ಸವಿಸ್ತರವಾದ ವರ್ಣನೆಗಳಿವೆ.
ಇಷ್ಟು ಮಾತ್ರವಲ್ಲದೆ ಹಲವರು ಶಾಸನಗಳಲ್ಲಿ ದೇವದಾಸಿಯರ ಉಲ್ಲೇಖಗಳೂ ಇವೆ. ಕನ್ಯೆಯರನ್ನು ದೇವಾಲಯಗಳಿಗೆ ದಾನಮಾಡಿದರೆ ಪುಣ್ಯಬರುತ್ತದೆ ಎಂಬ ನಂಬಿಕೆಇದ್ದಿತು. ಇಂತಹ ಕನ್ಯೆಯರು ದೇಗುಲಗಳಲ್ಲಿ ಬಸದಿಗಳಲ್ಲಿ ಹಲವಾರು ಸೇವಾಕಾರ್ಯಗಳನ್ನು ಮಾಡುತ್ತಿದ್ದರು. ಅವರಿಗಾಗಿ ರಾಜರಲ್ಲದೆ, ಅಕಾರಿ, ಪುರೋಹಿತ, ಬ್ರಾಹ್ಮಣ, ಸಾಮಾನ್ಯ ಸ್ತ್ರೀ ಪುರುಷರಾದಿಯಾಗಿ ವಿವಿಧ ದಾನಗಳನ್ನು ಕೊಡುತ್ತಿದ್ದರು. ಚಳವ್ವೆ, ಚಾವುಂಡಬ್ಬೆ, ಮಾಲವ್ವೆ, ಲಕ್ಕವ್ವೆ, ಕಲ್ಲವ್ವೆ, ಮೊದಲಾದ ದೇವದಾಸಿಯರು ದೇಗುಲದೇವರುಗಳಿಗೆ ದಾನಧರ್ಮಳನ್ನು ಅರ್ಪಿಸುತ್ತಿದ್ದರಲ್ಲದೆ, ಪವಿತ್ರಾಲಯಗಳನ್ನೂ ಕಟ್ಟಿಸುತ್ತಿದ್ದರು. ಅವರ ಈ ಧರ್ಮಗಳನ್ನು ಸಮಾಜ ಒಪ್ಪಿ ಆದರಿಸುತ್ತಿದ್ದಿತು ಹೀಗೆ ಶಾಸನಗಳಲ್ಲಿ ದೇವದಾಸಿಯರನ್ನು ಗೌರವದಿಂದ ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಸಮಾಜದಲ್ಲಿ ಸ್ತ್ರೀಯರಿಗೆ ವಿವಿಧ ರಂಗಗಳಲ್ಲಿ ಪಾಲ್ಗೊಂಡು ತಮ್ಮ ಕೊಡುಗೆಗಳನ್ನು ಕೊಡುವುದಕ್ಕೆ ಸಾಕಷ್ಟು ಅವಕಾಶಗಳಿದ್ದವು. ಮತ್ತು ಹೆಚ್ಚುಕಡಿಮೆ ಗೌರವಯುತ ಸ್ಥಾನವಿದ್ದಿತು ಎಂಬುದಾಗಿ ಹೇಳಬಹುದು.
ಸಮಾಜದಲ್ಲಿ ಲಭ್ಯವಿದ್ದ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸರಕುಸೇವೆಗಳ ಮೇಲಿನ ಅಕಾರ ಹಾಗೂ ವಿಬಿನ್ನ ಹಂಚಿಕೆಯ ಮತ್ತು ವೃತ್ತಿಗಳ ದೃಷ್ಟಿಕೋನದಿಂದ ವಿವಿಧ ಜಾತಿ/ವರ್ಗಗಳನ್ನು ಗುರುತಿಸಬಹುದು. ವೇದಸಮಾಜದ ರೀತಿನೀತಿಗಳ ಪ್ರಭಾವ ಇಲ್ಲೂ ಹೆಚ್ಚಾಗಿದ್ದಿತೆನ್ನಬಹುದು. ಆದ್ದರಿಂದ ಬ್ರಾಹ್ಮಣರಿಗೆ ಇಲ್ಲೂ ಉನ್ನತ ಸ್ಥಾನ, ಗೌರವಗಳಿದ್ದವು. ಅವರಿಗೆ ವಿದ್ಯಾರಂಗದಲ್ಲಿ ಮಾತ್ರವಲ್ಲದೆ ರಾಜಕೀಯ ಹಾಗೂ ಸಾಮಜಿಕ ಕ್ಷೇತ್ರಗಳಲ್ಲೂ ಅಗ್ರಸ್ಥಾನವಿದ್ದಿತು ಅವರಿಗೆ ದಾನ ಕೊಟ್ಟರೆ ಪುಣ್ಯಲಬಿಸುತ್ತದೆ ಎಂಬ ನಂಬಿಕೆ ಬಲವಾಗಿದ್ದರಿಂದ ರಾಜರುಗಳಲ್ಲದೆ, ಸಮಾಜದ ಎಲ್ಲಾ ಸ್ಥರಗಳ ಸದಸ್ಯರು ಅವರಿಗೆ ನಾನಾ ವಿಧವಾದ ದಾನದತ್ತಿಗಳನ್ನು ನೀಡುತ್ತಿದ್ದರು. ಅವರು ಷಟ್ಕರ್ಮ(ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ, ಪ್ರತಿಗ್ರಹ) ನಿರತರು, ಘನಪಂಡಿತರು ಎಂಬುದಾಗಿ ಶಾಸನಗಳು ಕೊಂಡಾಡಿವೆ. ಅವರು ಸಮಾಜದ ವಿದ್ಯಾವಿಯ ರಕ್ಷಕರೂ, ಪೋಷಕರೂ ಆಗಿದ್ದರು. ಎಲ್ಲರ ಗೌರವಕ್ಕೆ ಪಾತ್ರರಾಗಿ ಇತರ ಧರ್ಮಗಳನ್ನು ಆದರಿಸಿ, ದೊಡ್ಡತನ ತೋರಿ ಮೆರೆದಿದ್ದರು ಎಂಬುದಾಗಿ ಹಲವು ಶಾಸನಗಳು ವರ್ಣಿಸಿವೆ. ಉನ್ನತ ವರ್ಗಕ್ಕೆ ಸೇರಿದ್ದವರು ಆಳುವ ಪ್ರಭುಗಳು, ಅವರ ಪರಿವಾರ ಹಾಗೂ ಅಕಾರಿಗಳು ಮತ್ತು ವೈಶ್ಯರು.
ಸಾಮಾಜಿಕ ಸ್ತರ ವಿನ್ಯಾಸದಲ್ಲಿ ಮುಖ್ಯವಾಗಿದ್ದ ಇತರ ವೃತ್ತಿಪರ ವಿಭಾಗಗಳನ್ನು ಶಾಸನಗಳು ಹೆಸರಿಸಿವೆ. ವಾಸ್ತುವಿದ್ಯೆ, ಶಿಲ್ಪವಿದ್ಯೆ, ಕಾಂಸವಿದ್ಯೆ(ಲೋಹ ವಿಗ್ರಹಗಳ ಮೇಲೆ ಕೆತ್ತನೆ ಕೆಲಸ), ಪತ್ರಚ್ಛೇದ ಹಾಗೂ ಚಿತ್ರಕಲೆಯಲ್ಲಿ ಪ್ರವೀಣರಾಗಿದ್ದ ಮತ್ತು ತಮ್ಮನ್ನು ಸರಸ್ವತಿ ಗಣ ದಾಸಿ ಅಥವಾ ಗಣಮಿತ್ರಿ ಹಾಗೂ ಕಲ್ಕುಟಿಗರೆಂಬುದಾಗಿ ಕರೆದುಕೊಂಡು ಶಾಸನಗಳನ್ನು ಕೆತ್ತುತ್ತಿದ್ದ ಶಿಲ್ಪಿಗಳು, ಇದೇವರ್ಗಕ್ಕೆ ಸೇರಿದ್ದ ಕಬ್ಬಿಣದ ಕೆಲಸದ ಕಮ್ಮಾರ, ಚಿನ್ನದ ಕಾಯಕದ ಅಕ್ಕಸಾಲಿ, ಮರದ ಕೆಲಸದ ಬಡಗಿ, ಹಾಗೂ ಕಂಚಿನ ಕಾಯಕದ ಕಂಚುಗಾರ, ಬಟ್ಟೆಗಳನ್ನು ಶುಭ್ರಗೊಳಿಸುತ್ತಿದ್ದ ಅಗಸ, ಕ್ಷೌರದ ಕೆಲಸದ ನಾವಿದ, ಬಟ್ಟೆಗಳನ್ನು ನೇಯುತ್ತಿದ್ದ ಜೇಡ ಅಥವಾ ನೇಕಾರ, ರೇಷ್ಮೆ ವಸ್ತ್ರಗಳ ನೇಕಾರ ಪಟ್ಟಗಾರ, ವಸ್ತುಖಂಡಿತ ಶೃಂಗಾರ ವಿದ್ಯಾಪ್ರವೀಣ ಎಂಬ ಹೊಗಳಿಕೆಗೆ ಪಾತ್ರವಾಗಿ ಬಟ್ಟೆ ಹೊಲಿಯುತ್ತಿದ್ದ ಚಿಪ್ಪಿಗ, ಗಾಣದಿಂದ ಎಣ್ಣೆ ತೆಗೆದು ಮಾರುತ್ತಿದ್ದ ತೈಲಿಗ ಅಥವಾ ತೆಲ್ಲಿಗ, ಮಣ್ಣಿನ ಮಡಕೆ ಮಾಡುತ್ತಿದ್ದ ಕುಂಬಾರ, ಬಳೆಗಳನ್ನು ಮಾಡಿ ಮಾರುತ್ತಿದ್ದ ಬಳೆಗಾರ, ಬುಟ್ಟಿಗಳನ್ನು ಹೆಣೆದು ವಿಲೇವಾರಿ ಮಾಡಿತ್ತಿದ್ದ ಮೇದ, ವೀಳೆಯದೆಲೆಯನ್ನು ಬೆಳೆಸಿ ಮಾರಾಟ ಮಾಡುತ್ತಿದ್ದ ತಂಬುಲಿಗ, ಮೀನುಗಾರರು, ಚರ್ಮದ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದ ಚರ್ಮಕಾರ ಮುಂತಾದ ವೃತ್ತಿಪರ ಜಾತಿಗಳನ್ನು ಶಾಸನಗಳಲ್ಲಿ ಉಲ್ಲೇಖಿಸಿ ವಿವರಿಸಿವೆ. ಈ ಜಾತಿಗಳ ಸದಸ್ಯರು ಊರಿನ ಬೇರೆಬೇರೆ ಕೇರಿಗಳಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು, ಹೆಚ್ಚು ಕಡಿಮೆ ಎಲ್ಲಾ ಜಾತಿಗಳಲ್ಲಿ ಶ್ರೇಣಿಗಳಿದ್ದವು.
ಆ ಜಾತಿಗಳ ಸದಸ್ಯರು ಒಟ್ಟಾಗಿ ಅಥವಾ ಪ್ರತ್ಯೆಕವಾಗಿ ದೇಗುಲಗಳನ್ನು ಕಟ್ಟಿ, ತಮ್ಮ ವೃತ್ತಿಗಳಿಗೆ ಅನುಗುಣವಾಗಿ ಸೇವೆಗಳನ್ನು, ದಾನಗಳನ್ನು ಮಾಡಿದ್ದಾರೆ ಎಂಬುದು ಶಾಸನಗಳಲ್ಲಿ ಉಲ್ಲೇಖವಿದೆ. ಈ ಸ್ತರವಿನ್ಯಾಸದಲ್ಲಿ ಸದಸ್ಯರಿಗೆ ವೃತ್ತಿಗಳಿಗೆ ಸಂಬಂಸಿದ ನಿಯಮ ಬಹುಮಟ್ಟಿಗೆ ಕಟ್ಟುನಿಟ್ಟಾಗಿರಲಿಲ್ಲವೆಂದೆನಿಸುತ್ತದೆ. ಕಾರಣ ಬ್ರಾಹ್ಮಣರು ಬರೀ ಅಧ್ಯಾಪಕರು ಮಾತ್ರವಾಗಿರದೆ, ಶಸ್ತ್ರವಿದ್ಯಾಪರಿಣತರೂ ಆಗಿದ್ದರು, ಮಂತ್ರಿಗಳಾಗಿ ದಂಡಾಕಾರಿಗಳಾಗಿ ಸೇವೆಸಲ್ಲಿಸುತ್ತಿದ್ದರು. ಶಿಲ್ಪಿ ಮಾತ್ರವಲ್ಲದೆ ಅಕ್ಕಸಾಲಿ, ಬಡಗಿ, ಕಮ್ಮಾರ ಸಹ ಶಾಸನಗಳನ್ನು ಕೆತ್ತಬಹುದಾಗಿದ್ದಿತು. ಹೀಗೆ ಪರಸ್ಪರರ ವೃತ್ತಿಗಳನ್ನು ಮಾಡುವ ಅವಕಾಶವಿದ್ದಿತು ಎಂಬುದು ಸೂಚಿತವಾಗಿದೆ.
ಸಂಕ್ಷೇಪದಲ್ಲಿ ಮಧ್ಯಯುಗದ ಕರ್ನಾಟಕ ಸಮಾಜದಲ್ಲಿ ಆಳುವ ಸಂತತಿಗಳು ಹೆಚ್ಚಿನ ಅಡೆತಡೆಯಿಲ್ಲದೆ ಸುಗಮವಾಗಿ ನಡೆದುಕೊಂಡು ಹೋಗುತ್ತಿದ್ದವು, ಜನಜೀವನವಾಹಿನಿಯ ಹರಿವು ಸುಲಲಿತವಾಗಿ ಸಾಗುತ್ತಿದ್ದಿತು. ಇದಕ್ಕೆ ಈ ಮೌಲ್ಯಾಧಾರಿತ ಸಾಮಾಜಿಕ ಸಂಸ್ಥೆಗಳು ಬಹುಮಟ್ಟಿಗೆ ಕಾರಣವಾಗಿದ್ದವು ಎಂದರೆ ತಪ್ಪಾಗಲಾರದು.
ಚಿತ್ರಗಳು:
೧. ಕರ್ನಾಟಕದ ವೀರಗಲ್ಲುಗಳು ಡಾ|| ಆರ್. ಶೇಷಶಾಸ್ತ್ರಿ.
೨. ಕರ್ನಾಟಕದ ಪರಂಪರೆ ಸಂಪುಟ ೧ ಮೈಸೂರು ಸರ್ಕಾರ.
೩. ಕರ್ನಾಟಕದ ಯಾತ್ರೆ ಜೀರಗೆ ಕಟ್ಟೆ ಬಸವಪ್ಪ.
೪. ತರಂಗ ವಾರಪತ್ರಿಕೆ.