Apr 25, 2014

‘ಕನ್ನಡಿಗರ ಮೊದಲ ಧರ್ಮ

‘ಕನ್ನಡಿಗರ ಮೊದಲ ಧರ್ಮ ಲಿಂಗಾಯತ’ ಎಂದು ಪ್ರೊ. ಎಂ.ಎಂ. ಕಲಬುರ್ಗಿ­ಯವರು ಹೇಳಿದ ವರದಿ (ಪ್ರವಾ ಏ.19, ಪುಟ 5)ಸಂಬಂಧ ಈ ಬರಹ.
*ಪ್ರಾಚೀನ ಕರ್ನಾಟಕದಲ್ಲಿ ವೃತ್ತಿ ಮೂಲದ ಜಾತಿಗಳು ಮಾತ್ರ ಇದ್ದುವೇ ವಿನಾ ಧರ್ಮಗಳು ಇರ­ಲಿಲ್ಲ. ವಚನಕಾರರು ಸೃಜಿಸಿದ ಧರ್ಮವೇ ಕನ್ನಡಿ­ಗರು ಹುಟ್ಟುಹಾಕಿದ ಮೊಟ್ಟಮೊದಲ ಧರ್ಮ .
ಅವರ ಈ ಅಭಿಪ್ರಾಯ ವಾಸ್ತವವಲ್ಲ. ಶೈವ, ಜೈನ, ಬೌದ್ಧ ಧರ್ಮಗಳು ಕ್ರಿಸ್ತಪೂರ್ವದಿಂದ ಇಲ್ಲಿವೆ. ಅವು ವೃತ್ತಿಧರ್ಮಗಳಲ್ಲ. ‘ಲಿಂಗಾಯತ’ ಧರ್ಮ ಹನ್ನೆರಡನೆಯ ಶತಮಾನದಿಂದ ಈಚೆಗೆ ಕಂಡುಬರುತ್ತದೆ. ಹಳಮೆಯೊಂದೇ ಹಿರಿಮೆ­ಯಲ್ಲ. ಪ್ರಾಚೀನವೆಂಬ ಮಾತ್ರಕ್ಕೆ ಪವಿತ್ರವೆಂದೂ ಅಲ್ಲ. ಸಂಖ್ಯಾಬಲವೂ ಅಳತೆಗೋಲಲ್ಲ. ಎಲ್ಲ ಧರ್ಮಗಳೂ ಏರಿಳಿತವನ್ನು ಕಂಡಿವೆ. ಶ್ರೀವೈಷ್ಣ­ವರು ಹೊರಗಿನಿಂದ ಬಂದವರಾದರೂ, ಮಾಧ್ವ­ಧರ್ಮವು ತಡವಾಗಿ ಕಾಣಿಸಿದರೂ ಅವು ಕನ್ನಡ ನಾಡಿಗೆ ಸೇರಿದ ಮೇಲೆ ಕನ್ನಡ ನಾಡಿನ ಧರ್ಮ­ಗಳೆ­ನಿ­ಸಿವೆ. ಮಾಧ್ವದಂತೆ ಲಿಂಗಾಯತವೂ ತಡ­ವಾಗಿ ಇಲ್ಲಿ ಹುಟ್ಟಿದರೂ ಕನ್ನಡ ನಾಡಿನ ಧರ್ಮವೇ. ಯಾರೂ ಅಲ್ಲಗಳೆದಿಲ್ಲ.

*ಬೌದ್ಧ ಜೈನ ವೈದಿಕ ಶೈವ- ಉತ್ತರ ಭಾರತ­ದಿಂದ ರಾಜ್ಯಕ್ಕೆ ವಲಸೆ ಬಂದ ಧರ್ಮಗಳಾಗಿವೆ.
ಜೈನ ವೈದಿಕ ಶೈವ ಉತ್ತರ ಭಾರತದಿಂದ ಬರಲಿಲ್ಲ. ಅವು ಆಸೇತು ಹಿಮಾಚಲವಿದ್ದ ಪುರಾ­ತನ ಧರ್ಮಗಳು. ಜೈನಧರ್ಮ ಉತ್ತರದಿಂದ ಬಂದದ್ದು ಎಂಬುದು ಚರ್ವಿತ ಚರ್ವಣ ಮಾತು. ಉತ್ತರದಲ್ಲಿ ಬರಗಾಲವಾದ ಕಾರಣ ಭದ್ರ­ಬಾಹು, ಸಹಸ್ರಾರು ಮುನಿಗಳು ವಲಸೆ ಬಂದುದು ದಿಟ. ಆದರೆ ಜೈನಧರ್ಮ ಅವರು ಬರು­ವು­ದಕ್ಕೂ ಮೊದಲು ಇಲ್ಲಿತ್ತು. ಜೈನಮುನಿ­ಗಳು ತಾವಾಗಿ ಅಡುಗೆ ಮಾಡಿ ಉಣ್ಣರು. ಅವರು ಗೃಹಸ್ಥರಿಂದ ಆಹಾರ ಪಡೆಯುತ್ತಾರೆ. ಬೃಹತ್ ಪ್ರಮಾಣದ ಮುನಿ ಸಂಘಕ್ಕೆ ಭಿಕ್ಷೆ ನೀಡಲು ಜೈನರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ­ದ್ದರು. ತಮ್ಮ ತಪಸ್ಸಿಗೂ ಆಹಾರಕ್ಕೂ ಇಲ್ಲಿ ನಿರಾತಂಕವೆನಿಸಿ ನೆಲಸಿದರು. ಜೈನಧರ್ಮ ದ್ರಾವಿ­ಡ­­ವೆಂದು ಕೊಂಡಕುಂದರೂ ಪೂಜ್ಯಪಾದರೂ ಪ್ರಾಕೃತ, ಸಂಸ್ಕೃತ ಕೃತಿಗಳಲ್ಲಿ ತಿಳಿಸಿದ್ದಾರೆ. ದ್ರಾವಿಡ ಸಂಘವೆಂಬ ಪ್ರಾಚೀನ ಜೈನ ಮುನಿ­ಸಂಘ­ವಿದೆ. ಆರ್ಯಪೂರ್ವ
 ಜೈನ ದ್ರಾವಿಡರು ದಕ್ಷಿಣ ಭಾರತದಲ್ಲಿ ಹಬ್ಬಿದ್ದರು. ತಮಿಳುನಾಡು ಕರ್ನಾಟಕ ಆಂಧ್ರ ಕೇರಳದಲ್ಲಿ ಕ್ರಿ.ಪೂ. ನಾಲ್ಕ­ನೆಯ ಶತಮಾನದಿಂದ ಕ್ರಿ.ಶ. ಎರಡನೆಯ ಶತ­ಮಾನ­ದವರೆಗೆ ೮೯ ಪ್ರಾಚೀನ ತಮಿಳು ಶಾಸನ­ಗಳು ಸಿಕ್ಕಿವೆ. ಈ ೮೯ರಲ್ಲಿ ೮೫ ಜೈನ ಶಾಸನಗಳು. ಕ್ರಿ.ಪೂ. ಎರಡನೆಯ ಶತಮಾನದ ಶಾಸನಗಳಲ್ಲಿ ಕರ್ನಾಟಕ ಜೈನ ಸನ್ಯಾಸಿನಿಯರ ಪ್ರಭಾವವಿದೆ. ಈ ಬಗೆಯ ಆಧಾರಗಳು ಜೈನಧರ್ಮ ಹೊರಗಿ­ನಿಂದ ವಲಸೆ ಬಂದುದಲ್ಲ, ಅದು ಇಲ್ಲಿಯೇ ಈ ನೆಲದಲ್ಲಿಯೇ ಇದ್ದು ಹಬ್ಬಿದ್ದ ಮೂಲ ದೇಸಿ ಧರ್ಮ­ವೆಂದು ಸಾರುತ್ತಿವೆ. ಕ್ರಿ.ಪೂ. ಆರನೆಯ ಶತ­ಮಾನದಲ್ಲಿ ಮಹಾವೀರ ಜಿನನು ಕರ್ನಾಟಕ­ದ­ವರೆಗೆ ವಿಹರಿಸಿದ ಪ್ರತೀತಿಯೂ ಇದಕ್ಕೆ ಪೂರಕ ಆಧಾರವಾಗಿದೆ.

*ಆತ್ಮ-ಪರಮಾತ್ಮ ಎರಡರಲ್ಲೂ ನಂಬಿಕೆ ಇಲ್ಲದ ಬೌದ್ಧಧರ್ಮ ರಾಜ್ಯದಲ್ಲಿ ಬಹುಬೇಗ ನಾಶವಾಯಿತು.
ಈ ಹೇಳಿಕೆ ನನ್ನಿಯಲ್ಲ. ಚೀನೀ ಪ್ರವಾಸಿ ಹುಮ­ನ­ತ್ಸಾಂಗನು ಆರನೆಯ ಶತಮಾನದಲ್ಲಿ ಈ ರಾಜ್ಯ­ದಲ್ಲಿ ಸಂಚರಿಸಿದಾಗ ನೂರಾರು ಬೌದ್ಧ ವಿಹಾರಗಳಿದ್ದುವು. ಜೈನಧರ್ಮದ ತರುವಾಯ ನಾಡಿನ ಉದ್ದಗಲಗಳಲ್ಲಿ ಹಬ್ಬಿದ್ದುದು ಬೌದ್ಧ­ಧರ್ಮ. ‘ಆತ್ಮಪರಮಾತ್ಮದಲ್ಲಿ ನಂಬಿಕೆ ಇಲ್ಲ’­ದಿ­ದ್ದರೂ ಅದರ ಪ್ರಸರಣಕ್ಕೆ ಅಡ್ಡಿ ಇರಲಿಲ್ಲ. ರಾಜರ ಪ್ರಜೆಗಳ ಪ್ರೀತಿ, ಪ್ರೋತ್ಸಾಹಕ್ಕೆ ಅರೆಕೊರೆ ಇರ­ಲಿಲ್ಲ. ಐಹೊಳೆ, ಕನಗನಹಳ್ಳಿ, ಕದ್ರಿ, ಕೋಳಿ­ವಾಡ, ಡಂಬಳ, ತೊರ್ಕೆ, ರಾಜಘಟ್ಟ, ಬನ­ವಾಸಿ, ಬಳ್ಳಿಗಾವೆ ಮುಂತಾದ ಸ್ಥಳಗಳ ಬೌದ್ಧ ವಿಹಾ­ರ­ಸ್ತೂಪಗಳನ್ನು ಕೆಡವಿ ಧ್ವಂಸ ಮಾಡಿ­ದರು. ಬೌದ್ಧಧರ್ಮದ ಅಭ್ಯುದಯ ಸಹಿಸದೆ ನಾಶ­­ಪಡಿಸಿದ ಪಡೆಗಳನ್ನು ತಾಳಿಕೋಟೆ ಶಾಸನ ದಾಖಲಿಸಿದೆ : ಪರಸಮಯಗಿರಿ ವಜ್ರದಂಡರುಂ, ಜಗದಲುದ್ದಂಡರುಂ, ಬೌದ್ಧ ಸಮಯ ವಿಧ್ವಂಸನ ಪ್ರವೀಣರುಂ, ಅನ್ಯ ಸಮಯಿಗಳ ಬೆನ್ನಬಾರನೆತ್ತು­ವರುಂ –- ಆಗಿದ್ದವರು ವಿರುಪರಸ ಮಹಾ­ಮಂಡ­ಲೇ­ಶ್ವರನು ಮುಂದಾಳು ಆಗಿದ್ದ ಉಗ್ರ ಶಿವ­ಭಕ್ತರು. ಕಾವಿಬಟ್ಟೆ ತೊಟ್ಟು ಕರುಣಾಳು ಬುದ್ಧನ ತತ್ವಗಳನ್ನು ಬೋಧಿಸುತ್ತ ವೈಚಾರಿಕ ಪ್ರಜ್ಞೆ ಬಿತ್ತಿ ವೈಜ್ಞಾನಿಕ ದೃಷ್ಟಿ ಮೂಡಿಸುತ್ತಿದ್ದ ಬೌದ್ಧ ಭಿಕ್ಖುಗಳ ಮೇಲೆರಗಿ ಅವರ ಬೆನ್ನಿನ ಹುರಿ ಕಿತ್ತರು. ನಿರಾಯುಧ ಬೌದ್ಧರನ್ನು ಸಶಸ್ತ್ರ ಸನ್ನ­ದ್ಧರು, ‘ಬೌದ್ಧ ಸಮಯ ವಿಧ್ವಂಸನ ಪ್ರವೀಣರು’ ಬೆಂಬತ್ತಿ ಬೇಟೆ ಆಡಿ ಕೊಂದರು. ಅದರಿಂದಾಗಿ ‘ಬಹುಬೇಗ ನಾಶ’ವಾಗುವುದು ಅನಿವಾರ್ಯ. ‘ಧರ್ಮಗಳ ದಬ್ಬಾಳಿಕೆ ಹೆಚ್ಚಾದಾಗ’ ಎಂಬ ಪ್ರಯೋಗ ಸರಿಯಾದುದು. ಆ ‘ದಬ್ಬಾಳಿಕೆ’ ಮಾಡಿ­ದ­ವರು, ಮುಂಗೈ ಜೋರಿನಿಂದ ದಾಳಿಯೆ­ಸ­ಗಿದ್ದು ಬೌದ್ಧರಲ್ಲ, ಜೈನರಲ್ಲ. ನರಮೇಧ ನಿರ­ತರು ಯಾರೆಂಬುದನ್ನು ಶಾಸನಗಳೂ ವೀರಶೈವ ಪುರಾಣಗಳೂ ದಾಖಲಿಸಿವೆ.

*ಕೇವಲ ಆತ್ಮವಾದಿಯಾದ ಜೈನಧರ್ಮ ಅರೆಜೀವ ಹಿಡಿದು ಉಳಿಯಿತು .
ಅರೆಜೀವ ಸ್ಥಿತಿ ಬಂದದ್ದು ಹೇಗೆ, ತಂದವರು ಯಾರು ಎಂಬುದನ್ನು ಚರಿತ್ರೆ ನಮೂದಿಸಿದೆ. ಬೌದ್ಧ­ಧರ್ಮದ ಮೇಲೆ ಹರಿಹಾಯ್ದು ಮುಕ್ಕಿ­ದ­ವರೇ ಈ ಕೆಲಸ ಮಾಡಿದರು. ಉಗ್ರ ಶಿವ­ಭಕ್ತ­ರಾದ ಆದಯ್ಯ, ಏಕಾಂತದ ರಾಮಯ್ಯ, ಗೊಗ್ಗ­ರಸ, ವಿರುಪರಸ ಮೊದಲಾದವರ ದಂಡಿನ ಉಪ­ಟ­ಳಕ್ಕೆ ಕೊನೆ ಮೊದಲು ಇರಲಿಲ್ಲ. ಇವರಿತ್ತ ಅಟ್ಟುಳಿಯ ವಿವರಗಳು ಕಲ್ಬರೆಹಗಳಲ್ಲಿ ವೀರ­ಶೈವ ಪುರಾಣಗಳಲ್ಲಿ ಪುಂಖಾನುಪುಂಖವಾಗಿವೆ. ಗೊಗ್ಗ­ರಸನ ಪರಾಕ್ರಮದ ಒಂದು ತುಣುಕು ಅಣ್ಣಿಗೆರೆ ಶಾಸನದಲ್ಲಿದೆ:

ಜೈನಮೃಗ ಬೇಂಟೆಗಾರಂ
ಜೈನಾಗಮಧೂಮಕೇತು ಜೈನ ಕುಠಾರಂ
ಜೈನ ಫಣಿ ವೈನತೇಯಂ
ಜೈನಾಂತಕನೆನಿಸಿ ನೆಗಳ್ದನೀ ಗೊಗ್ಗರಸಂ.
ವಿರುಪರಸನೂ ಅವನ ಸೈನ್ಯವೂ ಕೈಗೊಂಡ ಧರ್ಮ­ಯುದ್ಧ ಮತ್ತು ಮಾಡಿದ ಸಾಹಸ ಕಾರ್ಯ­ಗಳ ಒಂದು ಉದಾಹರಣೆ ತಾಳಿಕೋಟೆ ಶಾಸನದಲ್ಲಿದೆ :-
ಜಿನ ಸಮಯವನ ದಹನದಾವಾನಲರು
ಪರಿಯಳಿಗೆ ಅಣಿಲೆವಾಡ ಉಣಕಲ್ಲು ಸಂಪಗಾಂವಿ
ಅಬ್ಬಲೂರು ಮಾರುಡಿಗೆ ಅಣಂಪೂರು ಕರಹಾಡ ಕೆಂಬಾವಿ
ಬಮ್ಮಕೂರು ಮೊದಲಾಗಿ ಅನಂತ ದೇಶಾಂತರದಲಿ
ಬಸದಿಗಳಂ ಹೊಸೆದು ಮುಕ್ಕಿ ಶಿವಲಿಂಗ ಸಿಂಹಾಸನಮಂ
ಕಂಗೊಳಿಸಿ ಚಲಂ ಮೆರೆದರು.

ಇವರು ತಮ್ಮ ‘ಚಲಮೆರೆದ’ದ್ದು ಹೇಗೆ ಎಂಬು­­ದಕ್ಕೆ ಮೇಲೆ ಹೇಳಿರುವ ಊರುಗಳಲ್ಲಿ ಒಂದಾದ ಅಬ್ಬಲೂರಿನಲ್ಲಿ ನಡೆದ ಘಟನೆಯನ್ನು ಅರಿತರೆ ಸಾಕು. ಅಬ್ಬಲೂರಿನ ಶಾಸನ ಮತ್ತು ಸೋಮೇಶ್ವರ ದೇವಾಲಯದಲ್ಲಿರುವ ಚಿತ್ರಶಿಲ್ಪ ‘ಧರ್ಮದ ದಬ್ಬಾಳಿಕೆ ಹೆಚ್ಚಾದು’ದನ್ನು, ಮರೆ­ಮಾಚಲು ಆಗದ ‘ನಗ್ನ ಸತ್ಯ’ವನ್ನು ಬಿತ್ತರಿಸಿವೆ. ಎಲ್ಲೆಲ್ಲಿ ಜೈನ ದೇವಾಲಯಗಳನ್ನು ‘ಹೊಸೆದು ಮುಕ್ಕಿ’ದ್ದನ್ನು ತಾಳಿಕೋಟೆ ಶೈವ ಶಾಸನ ದೊಡ್ಡ ಪಟ್ಟಿ­ಯನ್ನೇ ಕೊಟ್ಟಿದೆ. ಅದರ ಮುಂದುವರಿ­ಕೆಯ ದಾಳಿ ಭಯಂಕರ ರೂಪ ತಾಳಿದ್ದು ಅಬ್ಬ­ಲೂ­ರಲ್ಲಿ. ಅಲ್ಲಿನ ಶಾಸನ, ಹರಿಹರ ಕವಿಯ ಏಕಾಂತರಾಮಿ ತಂದೆಗಳ ರಗಳೆ, ರಾಘವಾಂಕ ಕವಿ ಸೋಮನಾಥ ಚರಿತೆಯ ಪದ್ಯ, ಭೀಮ ಕವಿಯ ಬಸವಪುರಾಣ, ಲಕ್ಕಣದಂಡೇಶನ ಶಿವ­ತತ್ವ­ಚಿಂತಾಮಣಿ, ಗುಬ್ಬಿ ಮಲ್ಲಣಾರ್ಯನ ವೀರ­ಶೈವಾ­ಮೃತ ಪುರಾಣ, ವಿರಕ್ತ ತೋಂಟದಾ­ರ್ಯನ ಸಿದ್ಧೇಶ್ವರ ಪುರಾಣ, ವಿರೂಪಾಕ್ಷ ಪಂಡಿ­ತನ ಚೆನ್ನಬಸವ ಪುರಾಣ, ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯ ಕಥಾಮಣಿಸೂತ್ರ ಮುಂತಾದ ವೀರಶೈವ ಪುರಾಣಗಳಲ್ಲಿ ಹಿಂಸಾರ­ಭ­­ಸ­ಮತಿಗಳು ನರಹತ್ಯೆಯಲ್ಲಿ ನಿರತರಾಗಿ ಹೆಮ್ಮೆ­ಯಿಂದ ಬೀಗಿದ ವರ್ಣನೆಯಿದೆ. ಭೀಮಕವಿ ಬಸವ­ಪುರಾಣದಲ್ಲಿ ಜೈನರ ಮೇಲೂ ಜೈನ ಸನ್ಯಾಸಿ­ಗಳ ಮೇಲೂ ಆಕ್ರಮಣ ಮಾಡಿ, ಹೊಡೆದು ಬಡಿದು ಹಿಂಸಿಸಿದ ವಿಧಾನಗಳನ್ನು ನಿರೂಪಿಸಿದ್ದಾನೆ-.
ಜಿನಮುನಿಗಳ ತಲೆಗಳಂ ಕೆಡಹುತ ಮುಳಿದು
ಜಿನರೂಪಗಳ ತಲೆಗಳನರಿದು ಹುಡಿಗುಟ್ಟಿ,
ಹಾರಿ ಕೆಡಹುತ ಜಿನ ಬಸದಿಗಳನೇರಿ ಜಾರುತ
ದಾಳಿ ದಬ್ಬಾಳಿಕೆ ನಡಸಿದರು.

ವಿರಕ್ತ ತೋಂಟದಾರ್ಯ  ಕವಿ ‘ಸಿದ್ಧೇಶ್ವರ ಪುರಾಣ’­ದಲ್ಲಿ - ‘ಮಹಾಶೂರ ಏಕಾಂತ ರಾಮ­ಯ್ಯನು ಹುರುಪೇರಿ ತನ್ನ ಮೊನಚು ಕತ್ತಿ ಝಳಪಿ­ಸುತ್ತ ಅಬ್ಬಲೂರಿನ ಜೈನರ ಕೇರಿಗೆ ನುಗ್ಗಿದನು. ಜಿನ­ಬಿಂಬಗಳನ್ನು ಕಿತ್ತೆಸೆದು ಶಿವಲಿಂಗಗಳನ್ನು ನೆಟ್ಟನು. ಜೈನರ ತಲೆಗಳನ್ನು ಕತ್ತರಿಸಿ ಕೀರ್ತಿಗಳಿಸಿ­ದನು’ ಮುಂತಾಗಿ ಮಾಹಿತಿ ಒದಗಿಸಿದ್ದಾನೆ. ಶಾಂತ­ ನಿರಂಜನ ಕವಿ ಅಬ್ಬಲೂರು ಚರಿತೆ ಕಾವ್ಯದಲ್ಲಿ ಜೈನರ ಮೇಲೆ ಆದ ಮಾರಣ ಹೋಮ­­ವನ್ನೂ ಜೈನರನ್ನೂ ದಿಗಂಬರ ಮುನಿಗ­ಳನ್ನೂ ಹೆಂಗಸರನ್ನೂ ಕೊಂದು, ಹಿಂಸಿಸಿ, ಇಡೀ ಕೇರಿ­ಯನ್ನು ಸ್ಮಶಾನವನ್ನಾಗಿಸಿದ್ದನ್ನೂ ತನ್ಮಯ­ನಾಗಿ ತಿಳಿಸಿದ್ದಾನೆ. ‘ಸೋಮೇಶ್ವರ ದೇವರು ಏಕಾಂತದ ರಾಮಯ್ಯನಿಗೆ ಜಿನಭಕ್ತರನ್ನೂ ಜಿನ­ಮುನಿ­ಗಳನ್ನೂ ಎಳೆದು ಬಿಸುಡಲು ಅಪ್ಪಣೆ ಮಾಡಿ­ದರು. ಅದರಂತೆ ಜೈನರನ್ನೂ ಜೈನಯತಿ­ಗಳನ್ನೂ ದರದರನೆ ಎಳೆದು ತಂದು ರಾಮಯ್ಯನ ಮುಂದೆ ನಿಲ್ಲಿಸಿದರು. ರಾಮಯ್ಯನು ಅವರ ಮೂಗು, ಕೈ, ನಾಲಗೆಗಳನ್ನು ಕತ್ತರಿಸಿ ವಿಕಲಾಂಗ­ಗೊಳಿಸಿ­ದನು. ಹೊಟ್ಟೆಗೆ ತಿವಿದನು. ಬೀದಿಯಲ್ಲಿ ನೆತ್ತರು ಹರಿಯಿತು, ಭೂತಗಳು ನಲಿದುವು. ಹದ್ದು ಕಾಗೆಗಳು ರಕ್ತ ಕುಡಿದು ಕುಣಿದುವು. ಜೈನರ ಕತ್ತರಿಸಿದ ತಲೆಗಳು, ಮುಂಡಗಳು ಚೆಲ್ಲಾ­ಪಿಲ್ಲಿ ಬಿದ್ದುವು. ಗೊಳೋ ಅಳುತ್ತ ಜೈನ ಮಹಿಳೆಯರು ತಮ್ಮ ಗಂಡಂದಿರ ಹರಣ ಉಳಿಸಿ­ದರೆ ಜೈನಧರ್ಮ ತೊರೆದು ಇಷ್ಟಲಿಂಗ ಧರಿಸಿ ಲಿಂಗಾಯತರಾಗುವುದಾಗಿ ಬೇಡಿಕೊಳ್ಳುತ್ತಿ­ದ್ದರು’. ಈ ವರ್ಣನೆ ವಿವರಣೆ ಬೇಕೆ!
ವೀರಶೈವ ಪುರಾಣಗಳ ವರ್ಣನೆಗೆ, ಶಾಸನ­ಗಳ ದಾಖಲೆಗಳಿಗೆ ಜೀವ ತುಂಬಿವೆ ಅಬ್ಬಲೂರಿನ ಶಿಲ್ಪಗಳು. ಜೈನರ ಕಗ್ಗೊಲೆಯ ದೃಶ್ಯಾವಳಿ ನಡೆದ ಹಿಂಸಾಕಾಂಡದ ಚಿತ್ರೀಕರಣದಂತಿವೆ. ಜೈನ­ ಹೆಂಗಸರನ್ನು ಅಂಗಲಾಚಿದರೂ ಬಿಡದೆ ವಿವಸ್ತ್ರ­ಗೊಳಿಸಿರುವುದು, ನಿರಾಯುಧರಾದ ದಿಗಂಬರ ಮುನಿಗಳ ತಲೆ ಕತ್ತರಿಸುತ್ತಿರುವುದು, ಇಬ್ಬಾಯಿ ಕತ್ತಿಯಿಂದ ಎದೆಗೆ ತಿವಿಯುವುದು, ಮರದ ಕೊಂಬೆ ರೆಂಬೆಗೆ ಜೈನರನ್ನೂ ಗುರು­ಗಳನ್ನೂ ನೇತಾಡಿಸಿ ಹಿಂಸಿಸುತ್ತಿರುವುದು, ಸುತ್ತಿಗೆ­ಯಿಂದ ಜಿನಬಿಂಬಗಳನ್ನು ಒಡೆದು ತುಂಡರಿ­ಸು­ವುದು, ಜೈನರ ರಕ್ತವನ್ನು ಕಾಗೆಗಳಿಗೆ ಊಡುತ್ತಿ­ರು­ವುದು, ದನಗಳ ರಾಸನ್ನು ಜೈನರ ಮೇಲೆ ಹಾಯಿಸುವುದು, ಕೊಂದ ಹೆಣಗಳ ಮೇಲೆ ಓಡಾಡು­ವುದು - ಮುಂತಾದ ವ್ಯಾಖ್ಯಾನ ನಿರ­ಪೇಕ್ಷ ದಾರುಣ ಚಿತ್ರಗಳು ‘ಧರ್ಮದ ದಬ್ಬಾಳಿಕೆ ಹೆಚ್ಚಾದು’ದಕ್ಕೆ ಸಾಕ್ಷಿ ಹೇಳುತ್ತಿವೆ. ಬೌದ್ಧರು, ಜೈನರು ಅನ್ಯಧರ್ಮದ ಮೇಲೆ ದಾಳಿ ದಬ್ಬಾಳಿಕೆ ಮಾಡಲಿಲ್ಲ. ಬೇರೆ ಧರ್ಮೀಯರ ಮನೆ ಮಠ ಮಂದಿರ ನಾಶಪಡಿಸಲಿಲ್ಲ. ಹೆಂಗಸರ ಮಾನ­ಹಾನಿ ಮಾಡಲಿಲ್ಲ. ಕೊಲೆಗೈಯಲಿಲ್ಲ. ಆಯುಧ ಹಿಡಿದು ಕೊಲೆ ಮಾಡುವುದಾಗಿ ಬಲಾತ್ಕಾರ­ದಿಂದ ಹೆದರಿಸಿ ಬೆದರಿಸಿ ಮತಾಂತರಕ್ಕೆ ತೊಡಗ­ಲಿಲ್ಲ. ಆದರೂ ಬೌದ್ಧರನ್ನು ‘ಬಹುಬೇಗನಾಶ’ ಮಾಡಿ­ದ­ವರು, ಜೈನರನ್ನು ‘ಅರೆಜೀವ ಹಿಡಿದು ಉಳಿಯು’ವಂತೆ ಮಾಡಿದವರು ಯಾರು ಎಂಬುದು ಶಾಸನ, ಕಾವ್ಯಗಳಲ್ಲಿ ನಮೂದಾ­ಗಿದೆ.
*ವಲಸೆ ಬಂದ (?) ಧರ್ಮಗಳು ನಮ್ಮ ಸಾಹಿತ್ಯ ಹಾಗೂ ಜೀವನ ಕ್ಷೇತ್ರ ಎರಡರ ಮೇಲೂ ಗಾಢ ಪ್ರಭಾವ ಬೀರಿದವು. ರಾಮಾ­ಯಣ, ಮಹಾಭಾರತ, ‘ತೀರ್ಥಂಕರ’ ಪುರಾಣ­ಗಳನ್ನೇ ಓದುವುದು ಕನ್ನಡಿಗರಿಗೆ ಅನಿವಾರ್ಯ­ವಾಯಿತು. ಅವುಗಳಿಂದ ನಮ್ಮ ಅರಿವು ವಿಸ್ತಾರ­ವಾದರೂ ಅಸ್ಮಿತೆ ನಾಶವಾಯಿತು.
ಇದು ವಿರೋಧಾಭಾಸದ ಮಾತು. ಸತ್ವ ಇರು­ವು­ದರಿಂದ ಗಾಢಪ್ರಭಾವ ಬೀರಿದುವು. ಅದು ಆರೋಗ್ಯ­ಕಾರಿ ಪ್ರಭಾವ. ರಾಮಾಯಣ ಮಹಾ­ಭಾರತ ಭಾರತೀಯ ಸಾರಸರ್ವಸ್ವದ ಎರಡು ಮಹಾ­­ಕಾವ್ಯಗಳು. ಅವನ್ನು ಓದುವುದು ಅಗತ್ಯ­ವಾದರೂ ಅನಿವಾರ್ಯವೇನೂ ಆಗಿರಲಿಲ್ಲ. ತೀರ್ಥಂಕರ ಪುರಾಣಗಳು ಇನ್ನಷ್ಟು ವೈವಿಧ್ಯ ವಿಸ್ತಾರ ತಂದಿವೆ. ಹಾಗೆಯೇ ವೀರಶೈವ ಪುರಾಣ­ಗಳೂ ವಚನಗಳೂ ಕೀರ್ತನೆಗಳೂ ಮತ್ತಷ್ಟು ವೈಭವ ವೈವಿಧ್ಯ ವಿಸ್ತಾರಗಳನ್ನು ತಂದಿವೆ.
‘ಅಸ್ಮಿತೆ ನಾಶವಾಯಿತು’ ಎಂಬುದು ಒಪ್ಪತಕ್ಕ ಮಾತಲ್ಲ. ಯಾವುದು ನಮ್ಮ ಅಸ್ಮಿತೆ? ಜೈನರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಸಂವರ್ಧ­ಕರು. ನಾಡುನುಡಿಗಳ ಅಭಿಮಾನವನ್ನು ರೂಪಿಸಿ ರೂಢಿ­ಸಿ­ದರು. ಸಂಸ್ಕೃತ ಪ್ರಾಕೃತಗಳ ಪ್ರಭಾವ­ವನ್ನು ಪ್ರತಿಭಟಿಸಿ ಕನ್ನಡವನ್ನೂ ಕನ್ನಡಿಗರನ್ನೂ ಕಾಪಾಡಿ­ದರು. ಜನರನ್ನು ಒಂದುಗೂಡಿಸುವ, ಒಟ್ಟಿಗೆ ಬಾಳುವ, ಪರಧರ್ಮವನ್ನು ಸಹಿಸುವ, ಪರವಿಚಾರವನ್ನು ಆಲಿಸುವ ಸೌಹಾರ್ದದಿಂದ ಪುದುವಾಳುವ ಸಂಸ್ಕೃತಿಯನ್ನು ಬಿತ್ತಿದರು. ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಈ ನಾಡಿನದು ಸಮನ್ವಯ ಸಂಸ್ಕೃತಿ. ಶೈವ, ಜೈನ, ಬೌದ್ಧ, ಲಿಂಗಾಯತ, ವೈಷ್ಣವ ಧರ್ಮಗಳು ಕನ್ನಡಿಗರ ಹೆಮ್ಮೆಯ ಧರ್ಮಗಳು.
ಕೃಪೆ : ಪ್ರಜಾವಾಣಿ