Tuesday, May 7, 2013

ಕನ್ನಡ’ ಶಬ್ದದ ಮೂಲ – ಒಂದು ಚರ್ಚೆಡಾ. ಚಿ.ಮೂ ಕನ್ನಡ   ಸಂಸ್ಕೃತಿ ನಮ್ಮ ಹೆಮ್ಮೆ ’ ಮತ್ತು ಸಿರಿಗನ್ನಡಂ ಗೆಲ್ಗೆ ಮತ್ತು ಕರುನಾಡಿನ ಮೂಲ(ಕನ್ನಡಪ್ರಭ ೨೭.೩.೨೦೧೩) ಲೇಖನಗಳಲ್ಲಿ ಕರ್ನಾಟಕ ಮತ್ತು ಕನ್ನಡ ಶಬ್ದಗಳ ಮೂಲ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹೀಗೆ ಸೂಚಿಸಿದ್ದಾರೆ.

“ಕರುನಾಡು’ “ಕರ್ನಾಟ” ಅಥವಾ”ಕರ್ನಾಟಕ”  ಕನ್ನಡ ಭಾಷೆಯನ್ನಾಡುವ  ಜನರ ಪ್ರದೇಶ ಎಂಬರ್ಥದಲ್ಲಿ ಕ್ರಿಸ್ತ ಪೂರ್ವ ಸಂಸ್ಕೃತ ಮಹಾಭಾರತದಲ್ಲಿಯೇ ಬಳಕೆಯಾಗಿದೆ. ಆ ಹೆಸರು ಶೂದ್ರಕ , ವರಾಹಮಿಹಿರ , ಸೋಮದೇವ ಇತ್ಯಾದಿ ಸಂಸ್ಕೃತ ಕೃತಿಕಾರರ ಕೃತಿಗಳಲ್ಲಿ ಮಾತ್ರವಲ್ಲದೆ ಕರ್ನಾಟಕದ ಹಿಂದಿನ ನೂರಾರು ಕಾವ್ಯ , ಶಾಸನಗಳಲ್ಲಿ ಉಲ್ಲೇಖವಾಗಿದೆ. ಅದೇ ಅರ್ಥದಲ್ಲಿ 'ಕನ್ನಡನಾಡು’ ಎಂಬ ಪದವೂ ಬಳಕೆಯಾಗಿದೆ. (ಉದಾ. ಕವಿರಾಜಮಾರ್ಗದ “ನಾಡದಾ ಕನ್ನಡದೊಳ್”). ಒಂದಂತೂ ಸ್ಪಷ್ಟ-‘ಕರ್ನಾಟ’ ಅಥವಾ ‘ಕರ್ನಾಟಕ’ವು ದೇಶವಾಚಿ.  ‘ಕನ್ನಡ’ವು ಆ ದೇಶದ ಭಾಷಾವಾಚಿ. ಸಾಮಾನ್ಯವಾಗಿ ದೇಶವಾಚಿ ಪದ ಮೊದಲು  ಭಾಷಾವಾಚಿ ಆಮೇಲಿನದು. (ಇದಕ್ಕೆ ವಿನಾಯ್ತಿ ಇವೆ-ವಿರಳವಾಗಿ). ಉದಾಹರಣೆಗೆ ಫ್ರಾನ್ಸ್-ಫ್ರೆಂಚ್ , ಗ್ರೀಸ್-ಗ್ರೀಕ್ , ಮಹಾರಾಷ್ಟ್ರ-ಮರಾಠಿ , ಬಂಗಾಳ-ಬಂಗಾಳಿ. ಹಾಗೆಯೇ ಕರ್ನಾಟ(ಕ)-ಕನ್ನಡ. “ಕರ್ನಾಟ” ಭೂಪ್ರದೇಶದ ಜನ ಆಡುವ ಭಾಷೆಯೇ ಕನ್ನಡ  ಎಂಬುದು ಸ್ಪಷ್ಟ. ಎಂದರೆ “ಕರ್ನಾಟ: ಎಂಬುದೇ ಸರಳಗೊಂಡು , ಭಿನ್ನ ವ್ಯಂಜನಗಳ ದ್ವಿತ್ವವು , ಏಕವ್ಯಂಜನ ದ್ವಿತವವಾಗಿ, ಪದ ಮಧ್ಯದ –ಟ-ವು ಡ-ಆಗಿ “ಕನ್ನಡ” ಆಗಿದೆ. ಈ ಊಹೆ ಬಹುತೇಕ ನಿಲ್ಲತಕ್ಕದ್ದು. “ಕರ್ನಾಟ'ಕ್ಕೆ ನಾವು ಎನೇ ನಿಷ್ಪತ್ತಿ ಹೇಳಲಿ –ಅದರ ರೂಪಾಂತವೇ , “ಕನ್ನಡ” ,”ಕರ್ನಾಟ” ನಾಡಿನ ಭಾಷೆಯೇ ಕನ್ನಡ (ಕರ್ನಾಟ-ಕನ್ನಡ).

ಆದರೆ  'ಕರುನಾಡು” ಹಲವರು ಭಾವಿಸಿರುವಂತೆ ದೇಶವಾಚಿ ಯಾವ ಪ್ರತ್ಯೇಕ ಪದ ಅಲ್ಲ. ಕನ್ನಡ ನಿಘಂಟು “ಕರುನಾಡು” ಪದವನ್ನು “ಕನ್ನಡನಾಡು” ಎಂಬುದಕ್ಕೆ ಸಮಾನವಾಗಿ ಕೊಟ್ಟು , ಎತ್ತರದ ಪ್ರದೇಶ ಎಂಬರ್ಥ ನೀಡಿರುವುದು ಖಂಡಿತ ಸರಿ ಅಲ್ಲ. “ಕರ್ನಾಟ “ ಪದದಂತೆ “ಕರುನಾಡು” ಪದಕ್ಕೆ ಪ್ರಾಚೀನ ಪ್ರಯೋಗಗಳೇ ಇಲ್ಲ. ತಮಿಳಿನ ಕ್ರಿ.ಶ ೨-೩ ನೇ ಶತಮಾನದ ಶಿಲಪ್ಪದಿಗಾರಂ ಕೃತಿಯಲ್ಲಿ “ಕರುನಾಡರ್”  ( ಕರುನಾಡಿನವನು-ಕನ್ನಡಿಗ) ಎಂಬ ಪ್ರಯೋಗಗಳಿವೆ. ಎಂದರೆ “ಕರ್ನಾಟ” ಎಂಬ ಪದ ತಮಿಳಿನ ಉಚ್ಛಾರಕ್ಕೆ ಅನುಗುಣವಾಗಿ “ಕರುನಾಡು” ಎಂದು ರೂಪಾಂತರಗೊಂಡಿದೆ. ತಮಿಳಿನಲ್ಲಿ ‘ಟ’ ವು ‘ಡ’ ಆಗುತ್ತದೆ. “ಕರ್ನಾಟಕರ್” ಎಂಬುದು ತಮಿಳಿನಲ್ಲಿ “ಕರುನಾಡರ್” ಆಗಿದೆ. ಆಂಗ್ಲರ ಉಚ್ಚಾರದಲ್ಲಿ ‘ಕನ್ನಡ’ವು ‘ಕೆನರ’ ಆದಂತೆ ( South Canara = ದಕ್ಷಿಣ ಕನ್ನಡ) “ಕೆನರ” ಪದದಂತೆ “ಕರುನಾಡು”  ಪದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ. “ಕರುನಾಡು” ಎಂದರೆ ಎತ್ತರದ ಪ್ರದೇಶ ಎಂದರ್ಥ ಕೊಡುವುದು ಸಂಪೂರ್ಣ ಕಲ್ಪಿತ. “ಸಿರಿಗನ್ನಡಂ ಗೆಲ್ಗೆ “ ಎಂಬ ಘೋಷಣೆಯ ಬಗ್ಗೆ ಕನ್ನಡಿಗರು ಹೆಮ್ಮೆಪಟ್ಟುಕೊಳ್ಳುವುದು ಸರಿ. ಆದರೆ ಕರ್ನಾಟಕವನ್ನು “ಕರುನಾಡು” ಎಂದು ಕರೆಯಲು ಯಾವ ಹೆಮ್ಮೆಯ ಕಾರಣವೂ ಇಲ್ಲ.  


ಡಾ. ಚಿ.ಮೂರವರು ’ಕನ್ನಡ’ ಪದದ ಬಗೆಗೆ ನೀಡಿದ ವಿವರಣೆಗಳನ್ನು ಪರಿಶೀಲಿಸಿ ನೋಡಿದಾಗ ಅವುಗಳಲ್ಲಿ ಹುರುಳಿಲ್ಲವೆಂದು ಸ್ಪಷ್ಟವಾಗಿ ಕಾಣುತ್ತದೆ.

(೧) ಡಾ. ಚಿ.ಮೂ ಸಂಸ್ಕೃತ ಮೂಲದ ಮಹಾಭಾರತ ಹಾಗೂ ನಂತರದ ಕಾಲದ ಇತರ ಕೃತಿಗಳಲ್ಲಿ ಬರುವ ಕರ್ನಾಟ(ಕ) ಶಬ್ದವೇ ಮುಂದೆ ’ಕನ್ನಡ’ ಎಂದಾಯಿತು ಎಂದು ವಾದಿಸಿದ್ದಾರೆ. ಆದರೆ ಸಂಸ್ಕೃತದ ಯಾವ ಪ್ರಾತಿಪದಿಕ ಅಥವಾ ಧಾತುಗಳಿಂದ ’ಕರ್ನಾಟ(ಕ) ಪದ ಬಂದಿತೆಂದು ತಿಳಿಸಿಲ್ಲ.  ಮಹಾಭಾರತದಲ್ಲಿ ಬರುವ ’ಕರ್ನಾಟ’ ಪದವನ್ನು ಯಾವ ವಿಚಾರಣೆಗೂ ಒಳಪಡಿಸದೆ , ಅದರಲ್ಲಿ ಇರಬಹುದಾದ ಅರ್ಥಗಳನ್ನು ಒಡೆದು ತೋರಿಸದೆ ಅದೇ ಮೂಲ ಪದವೆಂದು ಪರಿಗಣಿಸಿದ್ದಾರೆ. ಕರ್ನಾಟ(ಕ) ಪದ ಇಂಡೋ-ಆರ್ಯನ್ ಮೂಲದ ಸಂಸ್ಕೃತಕ್ಕೆ ಸೇರಿದುದೆಂದು ಚಿ.ಮೂ ನಂಬಿಕೆ. 
ಮಹಾಭಾರತ ಹೇಗೆ , ಯಾವ ಅಧಾರದಿಂದ ’ಕರ್ನಾಟ(ಕ) ಪದವನ್ನು ರೂಪಿಸಿಕೊಂಡಿತೆಂದು ತೋರಿಸುವ ಹೊಣೆಗಾರಿಕೆ ಅವರ ಮೇಲಿದೆ.  

(೨) ಮಹಾಭಾರತದ ರಚನೆಗೆ ಮೊದಲು ದಕ್ಷಿಣ ಭಾರತಕ್ಕೆ ಇಂಡೋ-ಆರ್ಯನ್ ಭಾಷೆಗಳು(ಸಂಸ್ಕೃತ)  ಬರುವ ಮೊದಲು ಈಗ ’ಕರ್ನಾಟಕ ’ ಎಂದು ಹೆಸರಾಗಿರುವ ಪ್ರದೇಶಕ್ಕೆ ಸ್ಥಳೀಯರು ಏನೆಂದು ಕರೆಯುತ್ತಿದ್ದರೆಂದು ಅವರು ಸ್ಪಷ್ಟಪಡಿಸುವುದಿಲ್ಲ. ಡಾ. ಚಿ.ಮೂ ಪ್ರಕಾರ ಇಂಡೋ-ಅರ್ಯನ್ ಭಾಷಿಕರು ದಕ್ಷಿಣ ಭಾರತಕ್ಕೆ ಬಂದು ನಿರ್ದಿಷ್ಟ ಪ್ರದೇಶವನ್ನು ’ಕರ್ನಾಟ(ಕ) ’ ಎಂದು ಕರೆದರು. ತಮಿಳರು ಅದನ್ನು ತಮ್ಮ ಉಚ್ಛಾರಣೆಗೆ ಬಗ್ಗಿಸಿ ’ಕರುನಾಡು’ ಎಂದು ಕರೆದರು.

(೩) ಕರ್ನಾಟ(ಕ) ಪದದಲ್ಲಿ ನಾಡು(ಟು) ಪದವಿರುವುದು ಖಚಿತ. ಇಂಡೋ-ಆರ್ಯನ್ ಪದಮೂಲಗಳಿಂದ ’ಕರ್ನಾಟ(ಕ) ಪದವನ್ನು ಬಿಡಿಸಿ ಹೇಳಲು ಸಾಧ್ಯವಿಲ್ಲ. ಆದರೆ ದ್ರಾವಿಡ ಭಾಷಾ ಮೂಲಗಳಿಂದ ’ಕರು+ನಾಡು(ಟು)’ ಪದಗಳನ್ನು ಬಿಚ್ಚಬಹುದು. ಅವುಗಳಿಗೆ ದ್ರಾವಿಡ ಮೂಲದ ಸ್ಪಷ್ಟ ಅರ್ಥಗಳಿವೆ. ನಾಡು(ಟು) ಶಬ್ದ ದ್ರಾವಿಡ ಭಾಷೆಗಳಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವುದು ಖಚಿತ (ಸಿತ್ತನ್ನವಾಸಿಲ್, ಹಲ್ಮಿಡಿ ಶಿಲಾಶಾಸನ) . ಆದರೆ ಇಂಡೋ-ಆರ್ಯನ್ ಭಾಷೆಗಳಲ್ಲಿ ’ನಾ(ಣಾ)ಟ ಪದಗಳು ಕಾಣಸಿಗವು.  


ಅರ+ಕಾಡು=ಅರಕ್ಕಾಡು > ಆರ್ಕಾಟ್. ಇಲ್ಲಿ 'ರ+ಕಾ' ಸಂಸ್ಕೃತಕ್ಕೆ ಹೋಗಿ 'ಅರ್'ಕಾರ ಒತ್ತು ಬಂದು , 'ಡ' ಶಬ್ದ 'ಟ' ಕ್ಕೆ ಬದಲಾಗಿ 'ಆರ್ಕಾಟ್' ಎನ್ನುವ ಸಂಸ್ಕೃತ (ಇಂಡೋ-ಆರ್ಯನ್) ಉಚ್ಛಾರದ  ಪದ ಮೈದಾಳಿದೆ. ಅದರಂತೆಯೇ 'ಕರು+ನಾಡು' ಪದಗಳು ಸಂಸ್ಕೃತದ ಉಚ್ಛಾರಣೆಯಲ್ಲಿ ಕರ್ನಾಟ(ಕ) ಆಗಿ ಬದಲಾಗಿವೆ. ಕರ್ನಾಟ(ಕ) ಪದಕ್ಕೆ ಮಹಾಭಾರತದ ಆಕರ ಆ ಮೂಲಕ ಸಂಸ್ಕೃತ ಮೂಲವನ್ನು ನೀಡುವ ಚಿ.ಮೂ ಭಾಷಾ ವಿಜ್ಞಾನದ ಮೂಲ ತತ್ತ್ವಗಳನ್ನು ಪರಿಗಣಿಸಿಲ್ಲ. 'ಆರ್ಕಾಟ್' ಪದದ ಮೂಲ ಮತ್ತು ಅರ್ಥವನ್ನು  ಕೂಡ ಚಿ.ಮೂ   ಸಂಸ್ಕೃತದಲ್ಲಿ ಕಾಣಬಲ್ಲರು ಎನಿಸುತ್ತದೆ. 

ಅರ+ಕೆರೆ +ನಾಡು > ಅರ್ಕೆರೆ ನಾಡು . ಚಿ.ಮೂ ರವರ ದೃಷ್ಟಿಯಲ್ಲಿ ಅರ್ಕೆರ್ನಾಟ(ಕ) ಪದದಿಂದ ಅರ್ಕೆರೆ (ಅರಕೆರೆ) ನಾಡು ಪದ ಬಂದಿದೆ. 

ಪಾಲ+ಕಾಡು =ಪಾಲಕ್ಕಾಡು >ಪಾಲ್ಘಾಟ್ ಪದದಲ್ಲಿ ಮೂಲದಲ್ಲಿದ್ದ 'ಡ' ಸಂಸ್ಕೃತದತ್ತ ಸರಿದಾಗ 'ಟ'ಕಾರವಾಗಿ ಪಾಲ್ಘಾಟ್ ಪದ ಹುಟ್ಟಿದೆ.
ಕಾರ್ನಾಡು , ಮೂರ್ನಾಡು ಪದಗಳನ್ನು ಚಿ.ಮೂ ಹೇಗೆ ಬಿಡಿಸುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.

(೪) ಕನ್ನಡ ನಿಘಂಟುವಿನಲ್ಲಿ ಕರುನಾಡು=ಎತ್ತರದ ಪ್ರದೇಶ ಎಂದು ಅರ್ಥ ನೀಡಿರುವುದು ಸರಿ. ಅದು ತಪ್ಪೆಂದು ಹೇಳುವಲ್ಲಿ ಡಾ.ಚಿ.ಮೂ ನೀಡಿರುವ ವಿವರಣೆಗಳು ತೀರಾ ದುರ್ಬಲ. ಅವುಗಳಿಗೆ  ಭಾಷಾ ವಿಜ್ಞಾನದ ಯಾವುದೇ ಬೆಂಬಲವಿಲ್ಲ. ’ಕರ್ನಾಟ(ಕ)ದಂತೆ ’ಕರುನಾಡು’ ವಿಗೆ ಪ್ರಾಚೀನ ಪ್ರಯೋಗಗಳೇ ಇಲ್ಲ ಎಂಬ ಅವರ ವಾದ ಸರಿಯಾದುದಲ್ಲ. ಕರುಮೈ (ತಮಿಳು) , ಕರು (ಕಡು=ಎತ್ತರ) ಎನ್ನುವ ಪದಗಳು ಯಾವಾಗಲೂ ಬಳಕೆಯಲ್ಲಿವೆ. ಕಿಟ್ಟೆಲ್ ಕೋಶ   ಶಬ್ದಸಾರದಲ್ಲಿ ಈ ಪದ ಇರುವುದನ್ನು ದಾಖಲಿಸಿದೆ . ಅಶೋಕ ಶಾಸನದಲ್ಲಿರುವ ’ಇಸಿಲ’ (=ಎಯಿಲ್ ತಮಿಳು) ಪದ ಕನ್ನಡಲ್ಲಿ ಎಲ್ಲಿಯೂ , ಎಂದಿಗೂ ಬಳಕೆಯಾಗಿಲ್ಲ. ಆದರೂ ಆ ಪದದ ಲಕ್ಷಣದ ಮೇಲೆ ಅದನ್ನು ಕನ್ನಡ(=ದ್ರಾವಿಡ) ಪದವೆಂದು ಹೇಳಲಾಗಿದೆ. ಇಂತಹ ನೂರಾರು ಪದಗಳನ್ನು ನಾವು ಗುರುತಿಸುವುದು ಸಾಧ್ಯ. ಇಂಡೋ-ಆರ್ಯನ್ ಪ್ರಭಾವ ದಕ್ಷಿಣ ಭಾರತದ ಮೇಲೆ ಆದ ಮೇಲೆ ಲಿಖಿತ ಪರಂಪರೆ ಬಂದಿದ್ದರಿಂದ , ಶಾಸನಕಾರರು ,ಕವಿಗಳು ಸಂಸ್ಕೃತ ಪದಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದುದರಿಂದ ’ಕರುನಾಡು’ ಎಂಬ ಮೂಲ ದ್ರಾವಿಡ ಶಬ್ದ ಬರಹದಲ್ಲಿ ಕಾಣಿಸಿಕೊಂಡಿಲ್ಲ. ಅಥವಾ ’ಅವರು ’ಕರುನಾಡು=ಕನ್ನಡ ಎಂದೇ ಪರಿಗಣಿಸಿರಬಹುದು. ಇಂತಹ ಸಾಧ್ಯತೆ  ದಕ್ಷಿಣ ಭಾರತದ ನದಿಗಳ ಹೆಸರಿಗೂ ಸಲ್ಲುತ್ತದೆ.  

(೫) ಕರ್ನಾಟಹದಂತಹ ವಿಶಾಲವಾದ ಪ್ರದೇಶವನ್ನು ಅದರ ಭೌಗೋಳೀಕ ಲಕ್ಷಣಗಳಿಂದ ಗುರುತಿಸಬಹುದೇ ಹೊರತು ಸೀಮಿತ ವೀಕ್ಷಣೆಗಳಿಂದ ಅದಕ್ಕೆ ಹೆಸರಿಡಲಾಗದು. ಪ್ರಾಚೀನ ಕಾಲದಲ್ಲಿ ತಮಿಳು-ಕನ್ನಡ-ತೆಲುಗು-ತುಳುಗಳು ಮಾತ್ರ ಅಸ್ತಿತ್ವದಲ್ಲಿದ್ದವು. ಅವುಗಳ ನಡುವೆ ಹೆಚ್ಚಿನ ವ್ಯತ್ಯಾಸಗಳಿರಲಿಲ್ಲ. ಗೋದಾವರಿ (ಬಿಳಿಹೊಳೆ) , ಕೃಷ್ಣಾ (ಕರಿಹೊಳೆ) , ಕಾವಾ(ಲಾ)ರ್ (ಕಾವೇರಿ) ದಕ್ಷಿಣ ಭಾರತದ ಮೂರು ದೊಡ್ದ ನದಿಗಳು. ಈ ಮೂರು ನದಿಗಳು ಹುಟ್ಟುವ ಪ್ರದೇಶವನ್ನು ಗಮನಿಸಿದ ಜನ ಅದನ್ನು ಕರುನಾಡು (ಎತ್ತರದ ಪ್ರದೇಶ ) ಎಂದು ಕರೆದರು. ಯಾವುದೇ ನದಿಗಿರುವ ಮೂರು ಅವಸ್ಥೆಗಳಲ್ಲಿ ಮೊದಲಿನ ಎರಡು ಅವಸ್ಥೆಗಳು ಅವುಗಳು ಹುಟ್ಟುವ ಎತ್ತರದ ಪ್ರದೇಶಕ್ಕೆ ಸೇರಿರುತ್ತದೆ. ಈ ಮೂರು ನದಿಗಳ ಆರಂಭಿಕ ಎರಡು ಅವಸ್ಥೆಗಳು ಕರ್ನಾಟಕದಲ್ಲಿವೆ. ಒಂದು ಪ್ರದೇಶ ಕುರಿತಾದಂತೆ ನೀರಿನ ಹರಿವಿಗಿಂತಲೂ ಹೆಚ್ಚು ಮನದಟ್ಟಾಗುವ ವೀಕ್ಷಣೆ ಮತ್ತೊಂದಿಲ್ಲ.

(೬) ಕುರು(=ಕರು) . ಕೋಡು ಪದಗಳನ್ನು ಹೊಂದಿರುವ ನೂರಾರು ಊರುಗಳು . ಪ್ರದೇಶಗಳು , ಪದಗಳು ಕರ್ನಾಟಕದಲ್ಲಿ ಹರಡಿವೆ. ಈ ಊರುಗಳಿಗೆ ಎಂದಿನಿಂದ ಆ ಹೆಸರುಗಳು ಬಂದವೆಂದು ಯಾರಿಗೂ ಗೊತ್ತಿಲ್ಲ. ಅವು ಕರ್ನಾಟಕದಷ್ಟೇ ಪ್ರಾಚೀನ. ಆದ್ದರಿಂದ ’ಕುರು, ಕೋಡು’ ಹೆಸರಿನ ಯಾವುದೇ ಸ್ಥಳ ಸಾಹಿತ್ಯ , ಶಾಸನಗಳಲ್ಲಿ ಉಲ್ಲೇಖವಾಯಿತೆಂದರೆ ಅದು ಅ ಶಾಸನದ ಕಾಲದ್ದೆಂದು ಅರ್ಥವಲ್ಲ. ಆ ಕಾಲದಲ್ಲಿ ಅದರ ಹೆಸರು ಬರಹ ರೂಪದಲ್ಲಿ ಕಾಣಿಸಿಕೊಂಡಿತೆಂದು ಅರ್ಥ.

ಮೇಲಿನ ಅಂಶಗಳಿಂದ ಓಕ್ಲಹ್ಯಾಂ ಅಲುಗಿನ ತತ್ತ್ವ (Oklhaham Razor) ಬಳಸಿ ಡಾ. ಚಿ,ಮೂ ರವರು ಇಂಡೋ-ಆರ್ಯನ್ ಮೂಲದಿಂದ ’ ಕರ್ನಾಟ(ಕ)-ಕನ್ನಡ’ ಪದವನ್ನು ತಂದಿರುವುದು ತಪ್ಪೆಂದು ಹೇಳಬಹುದು 

Saturday, May 4, 2013

ಕಂಬಾರರ ಎರಡು ಕಾದಂಬರಿಗಳು


‘ಕಂಬಾರರ ಎರಡು ಕಾದಂಬರಿಗಳು’ ಪುಸ್ತಕದ ಒಳನೋಟ :

ಪ್ರಸ್ತುತದ ಈ ಪುಸ್ತಕದಲ್ಲಿ ಕಂಬಾರರ ಕಾದಂಬರಿಗಳಲ್ಲಿ 'ಸಿಂಗಾರೆವ್ವ ಮತ್ತು ಅರಮನೆ' ಹಾಗೂ 'ಶಿಖರಸೂರ್ಯ' ಕಾದಂಬರಿಗಳನ್ನು ಮಾತ್ರ ಅಧ್ಯಯನದ ವಿಷಯವಾಗಿ ತೆಗೆದುಕೊಂಡು ಅವುಗಳು ಬಿಚ್ಚಿಡುವ ವಿಶೇಷ ಅಂಶಗಳನ್ನು ವಿಶ್ಲೇಷಣಾತ್ಮಕ ದೃಷ್ಟಿಯಿಂದ ಅಭ್ಯಸಿಸಿ ಈ ಪುಸ್ತಕವನ್ನು ರಚಿಸಿದ್ದೇನೆ. ಈ ವಿಶ್ಲೇಷಣಾತ್ಮಕ ಅಧ್ಯಯನದ ಸಾರವನ್ನು ಈ ಕೆಳಗಿನಂತೆ ವಿವರಿಸುತ್ತೇನೆ.
 'ಸಿಂಗಾರೆವ್ವ ಮತ್ತು ಅರಮನೆ' ಕಾದಂಬರಿಯ ವಸ್ತು ವಿಶ್ಲೇಷಣೆ ಅಧ್ಯಾಯದಲ್ಲಿ ಚರಿತ್ರೆಯ ಪುಟಗಳಿಂದ ತೆಗೆದುಕೊಂಡ ಈ ಕಾದಂಬರಿಯ ಕಥಾವಸ್ತುವಿನಲ್ಲಿ ಊಳಿಗಮಾನ್ಯ ವ್ಯವಸ್ಥೆ ತನ್ನ ಹುಸಿ ಪ್ರತಿಷ್ಠೆ, ಕ್ರೌರ್ಯ ಮತ್ತು ತನ್ನ ದೌರ್ಬಲ್ಯಗಳಿಂದ ನಿಧಾನವಾಗಿ ಅಧಃಪತನಗೊಳ್ಳುವ ಕಟುವಾಸ್ತವ ಚಿತ್ರಣವಿದೆ. ಕಾದಂಬರಿಯ ಮುಖ್ಯವಸ್ತು ಶ್ರೀಮಂತಿಕೆ ಮತ್ತು ಅದರ ಅವನತಿ. ನಂಪುಂಸಕನೂ ಕ್ರೂರಿಯೂ ಆದ ದೇಸಾಯಿಯ ಪಾತ್ರದ ಮೂಲಕ ನೈತಿಕ ಪತನವನ್ನು ನಿರೂಪಿಸಲಾಗಿದೆ. ಜೊತೆಗೆ ಕಾದಂಬರಿಯಲ್ಲಿ ಗಂಡು ಹೆಣ್ಣುಗಳು ಉಸಿಗಟ್ಟಿಸುವ ಸಂಪ್ರದಾಯದ ಸುಳಿಯಲ್ಲಿ ಸಿಕ್ಕಿಬಿದ್ದು ಹೊರಬರಲು ಪ್ರತಿಭಟಿಸುತ್ತ ಅದರಿಂದ ಹೊರಬರಲು ಪ್ರಯತ್ನಿಸಿದರೂ ಮತ್ತೆ ಅದರ ಕೇಂದ್ರದಲ್ಲಿ ಸಿಕ್ಕು ಅವನತಿಯನ್ನು ಹೊಂದುವ ಚಿತ್ರಣವಿದೆ. ಜನಸಾಮಾನ್ಯರು ಕಂಡರಿಯದ ಅರಮನೆಯ ಸ್ವಾರ್ಥ ಮತ್ತು ಕ್ರೂರ ಮುಖಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ಹೀಗೆ ಊಳಿಗಮಾನ್ಯ ವ್ಯವಸ್ಥೆಯ ಸ್ವಪ್ರತಿಷ್ಠೆ, ಅಹಂಕಾರ, ಕ್ರೌರ್ಯಗಳು ಹಾಗೂ ತನ್ನ ದೌರ್ಬಲ್ಯಗಳಿಂದ ದುರಂತಗಳ ಸರಮಾಲೆಯ ಕಥಾ ಸಾರಾಂಶವನ್ನು ಒಳಗೊಂಡ ಈ ಕಾದಂಬರಿ ಕಂಬಾರರ ಸೃಜನಶೀಲತೆಯಲ್ಲಿ ಅದ್ಭುತವಾಗಿ ಮೂಡಿಬಂದಿದೆ.
'ಶಿಖರಸೂರ್ಯ' ಕಾದಂಬರಿಯ ವಸ್ತು ವಿಶ್ಲೇಷಣೆ ಅಧ್ಯಾಯದಲ್ಲಿ  ಇತಿಹಾಸಕಾರರು ನಿರೂಪಿಸುವ ಜಾನಪದ ಕಥಾಹಂದರವನ್ನುಳ್ಳ ಶಿಖರಸೂರ್ಯ ಕಾದಂಬರಿಯ ವಿಶ್ಲೇಷಣೆಯಿದೆ. ಆಧುನಿಕತೆಯ ಬಿರುಗಾಳಿಗೆ ಸಿಕ್ಕು ನಲಗುತ್ತಿರುವ ಪರಂಪರಾಗತ ಮೌಲ್ಯಗಳನ್ನು ಪುನಃ ಸ್ಥಾಪಿಸುವ ಧೋರಣೆ ಈ ಕಾದಂಬರಿಯಲ್ಲಿದೆ. ಕ್ಷಿಪ್ರ ಪ್ರಗತಿ, ದುರಾಸೆ, ಸ್ವಾರ್ಥ, ಮೈಗಳ್ಳತನ, ಮತ್ಸರಗಳು ಕೈಗಾರೀಕರಣದ ಅನಂತರದ ಆಧುನಿಕ ಬದುಕಿಗೆ ಬಂದ ಕೊಡುಗೆಗಳಾಗಿವೆ. ಅಭಿವೃದ್ಧಿಯ ಗುಂಗಿನಲ್ಲಿರುವ ಸಮಾಜಕ್ಕೆ ಇವೆಲ್ಲ ಸಹಜವೆನಿಸಿರುವಾಗ ಆಧುನಿಕಪೂರ್ವ ನೆಮ್ಮದಿಯ ಬದುಕಿನ ಆಕಾರಗಳನ್ನು ನೆನಪಿಸಿಕೊಡಲು ಈ ಕಾದಂಬರಿ ಪ್ರಯತ್ನಿಸುತ್ತದೆ. ಪ್ರಾಮಾಣಿಕ ದುಡಿಮೆಯಿಂದ ಲಭ್ಯವಾಗುವ ಸಂಪತ್ತನ್ನು ಹಂಚಿಕೊಂಡು ಉಣ್ಣುತ್ತ ಸರಳತೆಯಿಂದ ಬದುಕಿದ ಪರಂಪರಾಗತ ಜೀವನ ಶೈಲಿಗೆ ಆಧುನಿಕ ಜೀವನ ಕ್ರಮಗಳು ಆಘಾತವನ್ನುಂಟು ಮಾಡುತ್ತವೆ. ಧಾನ್ಯದಿಂದ ಚಿನ್ನ ಮಾಡುವ ಮಂತ್ರವು ಆಧುನಿಕತೆಯ ದೈಹಿಕ ಶ್ರಮವಿಲ್ಲದೇ ಪೊಳ್ಳು ಸತ್ಯದಿಂದ ಬದುಕುವ ಸ್ಥಿತಿ ಬಹುಕಾಲ ಬಾಳುವುದಿಲ್ಲವೆಂದು ಕಾದಂಬರಿ ನಿರೂಪಿಸುತ್ತದೆ.
ಕಂಬಾರರ ಕಾದಂಬರಿಗಳ ತೌಲನಿಕ ಅಧ್ಯಯನ ಎಂಬ ಅಧ್ಯಾಯದಲ್ಲಿ ಅಧ್ಯಯನದಲ್ಲಿ ಬಳಸಿರುವ ಸಿಂಗಾರೆವ್ವ ಮತ್ತು ಅರಮನೆ ಹಾಗೂ ಶಿಖರಸೂರ್ಯ ಕಾದಂಬರಿಗಳಲ್ಲಿನ ವಿಶಿಷ್ಟತೆಗಳು, ಅವುಗಳು ಹೊಂದಿರುವ ಸಾಮ್ಯತೆ ಮತ್ತು ಭಿನ್ನತೆಗಳನ್ನು ಗುರುತಿಸಲಾಗಿದೆ. ಕಂಬಾರರ ವಿಶಿಷ್ಟ ಕಲಾಪ್ರತಿಭೆಯಲ್ಲಿ ಮೂಡಿಬಂದ ವಿಭಿನ್ನ ನೆಲೆಗಳ ಕಾದಂಬರಿಗಳನ್ನು ತೌಲನಿಕ ಅಧ್ಯಯನ ಕ್ರಮದಿಂದ ಅವುಗಳಲ್ಲಿನ ಸಾಮಾನ್ಯವಾದ ಅಂಶಗಳ ಜೊತೆಗೆ ಅವುಗಳು ಹೊಂದಿರಬಹುದಾದ ವಿಶೇಷತೆಯನ್ನು ಈ ಅಧ್ಯಾಯದಲ್ಲಿ ಉದಾಹರಣಾಸಹಿತವಾಗಿ ವಿವರಿಸುವ ಪ್ರಯತ್ನ ಮಾಡಿದ್ದೇನೆ.
ಕೊನೆಯ ಭಾಗವಾದ ಕಾದಂಬರಿಗಳಲ್ಲಿನ ವಸ್ತು, ತಂತ್ರ, ಭಾಷೆ ಮತ್ತು ಆಶಯ ಎಂಬ ಅಧ್ಯಾಯದಲ್ಲಿ ಕಂಬಾರರ ಸೃಜನಶೀಲ ಪ್ರತಿಭೆಯಲ್ಲಿ ರಚನೆಯಾದ ಈ ಕಾದಂಬರಿಗಳಲ್ಲಿನ ಕಥಾವಸ್ತು, ಬಳಸಿರುವ ತಂತ್ರಗಾರಿಕೆ, ವಿಶೇಷವಾದ ಭಾಷೆಯ ಬಳಕೆ  ಮತ್ತು ಕಾದಂಬರಿಗಳು ಬಿಚ್ಚಿಡುವ ಆಶಯಗಳನ್ನು ಈ ಅಧ್ಯಾಯದಲ್ಲಿ ಕಾಣಬಹುದಾಗಿದೆ. ಕಂಬಾರರು ಊಳಿಗಮಾನ್ಯ ವ್ಯವಸ್ಥೆಯ ಅವಸಾನದ ದಿನಗಳನ್ನು ವರ್ಣಿಸುವ ಕಥಾವಸ್ತುವನ್ನು ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿಯಲ್ಲಿ ಬಳಸಿದರೆ, ಜನಪದ ಪುರಾಣದಲ್ಲಿನ ಕಥಾಹಂದರವನ್ನು ಶಿಖರಸೂರ್ಯದಲ್ಲಿ ಬಳಸಿದ್ದಾರೆ. ಎರಡೂ ಕಾದಂಬರಿಗಳಲ್ಲೂ ಭಿನ್ನ ಭಿನ್ನವಾದ ತಂತ್ರಗಾರಿಕೆಯನ್ನು ಬಳಸಿ ಕಾದಂಬರಿಗಳನ್ನು ರೂಪಿಸಿದ್ದಾರೆ. ಕಂಬಾರರು ರಚನೆಯಲ್ಲಿ ಬಳಸಿದ ಉತ್ತರ ಕರ್ನಾಟಕದ ಗ್ರಾಮ್ಯ ಮತ್ತು ಶಿಷ್ಟ ಭಾಷೆಗಳ ಬಳಕೆ ಮಾಡಿ ಕಾದಂಬರಿಗಳನ್ನು ನಿರ್ಮಿಸಿದ್ದಾರೆ. ಕೊನೆಯದಾಗಿ ಕಾದಂಬರಿಗಳು ಬಿಚ್ಚಿಡುವ ಆಶಯಗಳನ್ನು ಈ ಅಧ್ಯಾಯದಲ್ಲಿ ಚರ್ಚಿಸಿದ್ದೇನೆ.
ಈ ಪುಸ್ತಕದ ರಚನೆಗಾಗಿ ಆಯ್ದುಕೊಂಡಿರುವ ಕಂಬಾರರ 'ಸಿಂಗಾರೆವ್ವ ಮತ್ತು ಅರಮನೆ' ಹಾಗೂ 'ಶಿಖರಸೂರ್ಯ' ಕಾದಂಬರಿಗಳಲ್ಲಿ ಪ್ರತಿಯೊಂದು ಪಾತ್ರವೂ, ಪ್ರತಿಯೊಂದು ಘಟನೆಯೂ ಪ್ರಮುಖವಾದವುಗಳು ಮತ್ತು ಪ್ರತಿಯೊಂದು ವಿಶಿಷ್ಟತೆಯಿಂದ ಕೂಡಿರುವಂಥವುಗಳು. ಇಂತಹ ವಿವಿಧ ನೆಲೆಗಳ ಪಾತ್ರ-ಸನ್ನಿವೇಶಗಳನ್ನು ಈ ಕೃತಿಯ ಮೂಲಕ ಬಿಚ್ಚಿಡುವ ಯತ್ನ ನನ್ನದಾಗಿದೆ. ಕಂಬಾರರ ಕೃತಿಗಳಲ್ಲಿ ಬಹುಮುಖಿ ನೆಲೆಯ ಪಾತ್ರ, ಸನ್ನಿವೇಶಗಳ ಸೃಷ್ಟಿಯನ್ನು ಕಾಣಬಹುದು. ಪ್ರತಿಯೊಂದು ಅಂಶವು ಅವರಿಗೆ ಪ್ರಾಮುಖ್ಯತೆಯಾಗಿರುತ್ತದೆ. ಈ ವಿಶಿಷ್ಟ ಗುಣದಲ್ಲ್ಲಿ ಕುವೆಂಪುರವರನ್ನು ಮಾತನ್ನು ಗಮನಿಸಬಹುದು. ಅದು 'ಮಲೆಗಳಲ್ಲಿ ಮಧುಮಗಳು' ಕಾದಂಬರಿಯ ಮೊದಲಲ್ಲಿ ನೀಡಿರುವ ಸಾಲುಗಳು ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ, ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದೂ ಇಲ್ಲ ವ್ಯರ್ಥ, ನೀರೆಲ್ಲವೂ ತೀರ್ಥ. ಹೀಗೆ ಯಾವುದೇ ಒಂದು ಕೃತಿಯ ಪ್ರತಿಯೊಂದು ಘಟನೆಗಳು, ಪ್ರತಿಯೊಂದು ಪಾತ್ರಗಳು ಸಹಾ ಪ್ರಮುಖವಾಗುವುದನ್ನು ಕಂಬಾರರ ಈ ಕಾದಂಬರಿಗಳ ಮುಖಾಂತರ ತಿಳಿಯಬಹುದು.
ಒಟ್ಟಾರೆಯಾಗಿ ನನ್ನ ಅರಿವಿನ ಮಿತಿ ಮತ್ತು ಸಾಧ್ಯತೆಯಲ್ಲಿ ಚಂದ್ರಶೇಖರ ಕಂಬಾರರ 'ಸಿಂಗಾರೆವ್ವ ಮತ್ತು ಅರಮನೆ' ಹಾಗೂ 'ಶಿಖರಸೂರ್ಯ' ಕಾದಂಬರಿಗಳನ್ನು ವಿಶ್ಲೇಷಣಾತ್ಮಕ ದೃಷ್ಟಿಯಿಂದ ನೋಡುವ ಪ್ರಯತ್ನವಾಗಿ ಈ ಪುಸ್ತಕ ರಚನೆಯಾಗಿದೆ. ಒಟ್ಟಾರೆ ಈ ಕಾದಂಬರಿಗಳನ್ನು ಸಮಗ್ರವಾಗಿ ಚರ್ಚಿಸುವ ಕೆಲಸ ಈ ಪುಸ್ತಕದ ಮೂಲಕ ನಡೆದಿದೆನ್ನಬಹುದು ಹಾಗೂ ಕಂಬಾರರ ಕಲಾಕೃತಿಗಳನ್ನು ಅಭ್ಯಸಿಸುವ ಅವಕಾಶ ಈ ಮೂಲಕ ಲಭಿಸಿದೆ.


ಕೃತಿ : ಕಂಬಾರರ ಎರಡು ಕಾದಂಬರಿಗಳು
ಲೇಖಕರು : ಮಂಜುನಾಥ.ಎಂ.ಕೆ
ಪ್ರಕಾಶಕರು : ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು. ಪೋನ್ : 9880802551

ನನ್ನ ಪುಸ್ತಕ 'ಕಾವ್ಯ ಮತ್ತು ಏಕೀಕರಣ'


‘ಕಾವ್ಯ ಮತ್ತು ಏಕೀಕರಣ’ ಪುಸ್ತಕದಲ್ಲಿನ ಕೆಲವು ಸಾಲುಗಳು : 

‘ಕಾವ್ಯ ಮತ್ತು ಏಕೀಕರಣ’ ಎಂಬ ಈ ಪುಸ್ತಕದಲ್ಲಿ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಾಹಿತಿಗಳ ಲೇಖನಿಯಿಂದ ಮೂಡಿಬಂದ ಬರಹಗಳು, ಅದರಲ್ಲೂ ಮುಖ್ಯವಾಗಿ ಕಾವ್ಯಧಾರೆಯ ಪಾತ್ರವನ್ನು ಚರ್ಚಿಸುವ ಕಾರ್ಯ ಮಾಡಲಾಗಿದೆ. ಇಂದಿನ ನಮ್ಮ ವಿಶಾಲ ಕರ್ನಾಟಕ ಉದಯವಾಗಿ ಐವತ್ತಾರು ವರ್ಷಗಳು ತುಂಬಿ ಐವತ್ತೇಳನೆಯ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡ ನಾಡು ರೂಪುಗೊಳ್ಳಲು ಪ್ರಮುಖವಾದ ಏಕೀಕರಣ ಚಳುವಳಿಯನ್ನು ಅವಲೋಕಿಸುತ್ತ, ಈ ಚಳುವಳಿಯ ಕಾವನ್ನು ಹೆಚ್ಚುವಂತೆ ಮಾಡಿದ ಸಾಹಿತಿಗಳ ಕಾವ್ಯಗಳ ಅವಲೋಕನ ಮಾಡುವುದು ಸೂಕ್ತವೆನಿಸಿದೆ. ಏಕೀಕರಣವನ್ನು ಸಾಹಿತಿಗಳ ಬರವಣಿಗೆಯ ಮೂಲಕ ನೋಡುವ ಪ್ರಯತ್ನವನ್ನು ಈ ಪುಸ್ತಕ ಪ್ರಾಮಾಣಿಕವಾಗಿ ಮಾಡಿದೆ. ಇಪ್ಪತ್ತಕ್ಕೂ ಹೆಚ್ಚು ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ನೂರಾರು ವರ್ಷಗಳ ದೀರ್ಘವಾದ ಹೋರಾಟದ ಫಲವಾಗಿ ಕನ್ನಡ ನಾಡು ಉದಯವಾಯಿತು. 

ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಹಲವಾರು ಮಹಾನೀಯರ ಪರಿಶ್ರಮದಿಂದ ಒಂದುಗೂಡಿಸಿದರು. ಆದರೆ ಏಕೀಕರಣದ ಉದ್ದೇಶ ಹಾಗೂ ಅದರ ಸಾರ್ಥಕತೆ ಕನ್ನಡ ನಾಡು ಉದಯವಾಗಿ ಐದು ದಶಕಗಳು ಕಳೆದರೂ ಹಾಗೆಯೇ ಉಳಿದಿರುವುದು ಕನ್ನಡಿಗರ ದೌರ್ಭಾಗ್ಯ. ಜೊತೆಗೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಕನ್ನಡದ ನೆಲ-ಜಲ-ಭಾಷೆ-ಸಂಸ್ಕೃತಿಗೆ ಸಂಬಂಧಿಸಿದಂತೆ ಹತ್ತು-ಹಲವು ಆತಂಕಗಳು ಇಂದಿಗೂ ಉಳಿದುಕೊಂಡು ಬಂದಿರುವುದು ಒಂದು ದೊಡ್ಡ ಆತಂಕವಾಗಿದೆ. ಮಹಾರಾಷ್ಟ್ರದ ಗಡಿವಿವಾದ, ತಮಿಳುನಾಡಿನ ಕಾವೇರಿ ಜಲವಿವಾದ, ಕೃಷ್ಣಾ ನದಿ ನೀರಿನ ಸಮಸ್ಯೆ, ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು, ಅನ್ಯಭಾಷಿಗರ ಆಕ್ರಮಣ ಮುಂತಾದ ಸಮಸ್ಯೆಗಳು ಒಂದೆಡೆಯಾದರೆ ಪ್ರಾದೇಶಿಕ ಅಸಮಾನತೆ ಕರ್ನಾಟಕ ಭಾವೈಕ್ಯತೆಗೆ ಪ್ರಮುಖ ಅಡ್ಡಿಯಾಗಿದೆ. 

ಇದಲ್ಲದೇ ಅಖಂಡ ಕರ್ನಾಟಕವನ್ನು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ವಿಭಜಿಸಲು ಯೋಚಿಸುತ್ತಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ. ಜೊತೆಗೆ ಕನ್ನಡ ಭಾಷೆಯ ಅಳಿವು-ಉಳಿವನ್ನು ಕಾಡುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ ಸರಕಾರ ಅನುಸರಿಸುತ್ತಿರುವ ಇಂಗ್ಲೀಷ್ ಪರವಾದ ನೀತಿಗಳು. ಸರ್ಕಾರದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಸಮರ್ಪಕವಾಗಿ ಜಾರಿಯಾಗದೇ ಉಳಿದಿದೆ. ಇಂಥಹ ಹಲವಾರು ಸಮಸ್ಯೆಗಳು ಕರ್ನಾಟಕದ ಹಾಗೂ ಕನ್ನಡ ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಮಾರಕವಾಗಿವೆ. 

ಕರ್ನಾಟಕದಲ್ಲಿ ಕನ್ನಡಿಗರಿಗೆ ನೌಕರಿ, ಶಿಕ್ಷಣ ಸೌಲಭ್ಯ, ವಸತಿ ಸೌಲಭ್ಯ ಇತ್ಯಾದಿಗಳಿಗೆ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಅದೆಷ್ಟೋ ಬಾರಿ ಕನ್ನಡವೇ ಆಡಳಿತ ಭಾಷೆ ಎಂದು ಕಾಗದದ ಮೂಲಕ ಘೋಷಿಸಿರುವುದು, ಅದನ್ನು ಸಮರ್ಪಕವಾಗಿ ಜಾರಿಗೆ ತರಲು ಇಂದಿಗೂ ಸಾಧ್ಯವಾಗಿಲ್ಲ. ವಿಧಾನಸೌಧದ ಆಡಳಿತದಲ್ಲೇ ಕನ್ನಡ ದುರ್ಬಲವಾಗಿರುವುದನ್ನು ಕಾಣಬಹುದು. ಗೋಕಾಕ್ ಚಳುವಳಿಯಾಗದಿದ್ದರೆ ಕನ್ನಡ ವಿದ್ಯಾರ್ಥಿಗಳ ಸ್ಥಿತಿ ವಿಪರೀತ ಕೆಡುತ್ತಿತ್ತು. ಪ್ರತಿನಿತ್ಯ ಇಂಗ್ಲೀಷ್ ಶಾಲೆಗಳು ಸ್ಥಾಪನೆಯಾಗುತ್ತಿದ್ದರೂ, ಅವುಗಳನ್ನು ತಡೆಯುವ ಅಥವಾ ನಿಯಂತ್ರಿಸುವ ಪ್ರಯತ್ನಕ್ಕೆ ಸರ್ಕಾರ ಕೈಹಾಕಿಲ್ಲ. ಬದಲಿಗೆ ಕನ್ನಡ ಶಾಲೆಗಳನ್ನು ಮುಚ್ಚುವ ಕಾರ್ಯವನ್ನು ಮಾಡುತ್ತಿರುವುದು ಕನ್ನಡಿಗರ ದುರಂತವೇ ಸರಿ. 

ಕನ್ನಡನಾಡಿನಲ್ಲಿ ತುಂಬಿ ತುಳುಕುತ್ತಿರುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಮಹಾಜನ್ ಆಯೋಗದ ಶಿಫಾರಸ್ಸು ಶೀಘ್ರವೇ ಜಾರಿಗೆ ಬರಲಿ ಎಂದು ಹಂಬಲಿಸುವ, ಬೆಳಗಾವಿಯಲ್ಲಿ ನಡೆಯುತ್ತಿರುವ ಮರಾಠಿಗರ ಪುಂಡಾಟಿಕೆಗೆ ಕಡಿವಾಣ ಹಾಕಿ, ಕಾಸರಗೂಡಿನಂತಹ ಅಚ್ಚಕನ್ನಡ ನೆಲಗಳನ್ನು ಸೇರಿಸಿಕೊಳ್ಳುವ ದಿನ ಹತ್ತಿರ ಬರಲಿ ಎಂಬುದೇ ಎಲ್ಲ ಕನ್ನಡಿಗರ ಆಸೆ-ಹಾರೈಕೆ. ಕರ್ನಾಟಕದ ಯಾವ ಭಾಗದಲ್ಲಿ ನೆಲೆಸಿದ್ದರೂ ಕನ್ನಡಿಗರೆಲ್ಲರೂ ಭಾವನಾತ್ಮಕವಾಗಿಯೂ ಒಂದಾಗಬೇಕಾಗಿದೆ. ಈ ಮೂಲಕ ನಮ್ಮ ಎದುರಿಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ. 

ಸಾವಿರಾರು ವರ್ಷಗಳ ಭಾಷಿಕ-ಸಾಂಸ್ಕೃತಿಕ ಚರಿತ್ರೆಯನ್ನು ಹೊಂದಿರುವ ಕನ್ನಡದ ಪ್ರದೇಶಗಳು ಬ್ರಿಟಿಷರ ಒಡೆದು ಆಳು ಎಂಬ ನೀತಿಯಿಂದಾಗಿ ಗುರುತೂ ಸಿಗದಂತೆ ಛಿದ್ರೀಕರಣಗೊಂಡು ನಂತರ ಸುಮಾರು ಒಂದು ನೂರ ಐವತ್ತು ವರ್ಷಗಳ ಬಳಿಕ ಒಂದುಗೂಡಿದವು. ಇಂದಿನ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಾದೇಶಿಕ ಭೇದಭಾವದ ವಿಷಬೀಜವನ್ನು ಬಿತ್ತಿ ಸುಂದರ ಕನ್ನಡನಾಡನ್ನು ಒಡೆಯುವ ಸಂಚು ಮಾಡುತ್ತಿದ್ದಾರೆ. ಇಂಥಹ ನಾಡದ್ರೋಹಿಗಳಿಗೆ ಪಾಠ ಕಲಿಸಬೇಕಾದ ಅಗತ್ಯತೆಯಿದೆ. 

ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಕನ್ನಡಿಗರೇ ಆಗಿರುವುದು ಸ್ಪಷ್ಟ. ಕನ್ನಡಿಗರ ಉದಾರೀಭಾವ, ಅತಿಥಿ ಸತ್ಕಾರ ಸಂಸ್ಕೃತಿ, ಭಾಷಾಭಿಮಾನ ಇಲ್ಲದಿರುವುದರಿಂದಲೇ ಅನ್ಯಭಾಷಿಗರು ನಮ್ಮ ನಾಡಿನ ಮೇಲೆ ದಾಳಿ ಮಾಡಿ ಕನ್ನಡ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಾರೆ. ಕನ್ನಡಿಗರು ತಮ್ಮ ನೆಲದಲ್ಲೇ ಪರಕೀಯರ ದಾಸ್ಯದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೆಲೆಗಾಗಿ ಬಂದ ಮರಾಠಿಗರು ಬೆಳಗಾವಿಯಲ್ಲಿ ನೆಲೆಗೊಂಡು ಈಗ ತಮ್ಮದೆಂದು ಹೇಳುವ ಹಾಗೆ, ಅನ್ಯಭಾಷಿಕರ ಬೀಡಾಗಿರುವ ಬೆಂಗಳೂರಿಗೆ ಅದೇ ಸ್ಥಿತಿ ಒದಗಬಹುದು. ಕನ್ನಡಿಗರು ಭಾಷಾಭಿಮಾನವನ್ನು ಬೆಳಸಿಕೊಂಡು ಹೋರಾಟಕ್ಕೆ ನಿಲ್ಲದಿದ್ದರೆ, ಈ ಕನ್ನಡನಾಡಿನ ಏಕೀಕರಣಕ್ಕಾಗಿ ಹೋರಾಡಿ ಒಂದುಗೂಡುವಂತೆ ಮಾಡಿದ ಮಹನೀಯರ ಶ್ರಮಕ್ಕೆ ಬೆಲೆಯಿಲ್ಲದಾಗುತ್ತದೆ. ಕನ್ನಡದ ಹೋರಾಟಕ್ಕಾಗಿ ಸದಾ ಹಾತೊರೆಯುವ ಮನಸು ಕನ್ನಡಿಗರಲ್ಲಿ ಜಾಗೃತವಾಗುವ ಪಥದತ್ತ ಸಾಗಲು ಏಕೀಕರಣ ಚಳುವಳಿಯಲ್ಲಿ ನಮ್ಮ ಕವಿವರ್ಯರು ರಚಿಸಿಕೊಟ್ಟ ಕಾವ್ಯ ಚಿಲುಮೆಯ ಬೆಳಕು ಈಗಿನ ಕಾಲದಲ್ಲೂ ಮೂಡಿಬರಬೇಕಾದ ಅನಿವಾರ್ಯತೆಯಿದೆ. ಆ ಬೆಳಕಿನಿಂದ ನವಕರ್ನಾಟಕ ಉದಯವಾಗಲೆಂಬ ಆಶಯದಿಂದ ಕನ್ನಡ ಕಾರ್ಯ ಮಾಡಲು ಪ್ರತಿಯೊಬ್ಬ ಕನ್ನಡಿಗನೂ ಶ್ರಮಿಸಬೇಕಾಗಿದೆ. 


ಕೃತಿ : ಕಾವ್ಯ ಮತ್ತು ಏಕೀಕರಣ
ಲೇಖಕರು : ಮಂಜುನಾಥ.ಎಂ.ಕೆ
ಪ್ರಕಾಶಕರು : ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು. ಪೋನ್ : 9880802551

Thursday, May 2, 2013

ಶಬ್ದಮಣಿದರ್ಪಣ

ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ (ಉಪಲಬ್ಧ) ಗ್ರಂಥಗಳಲ್ಲಿ ಶಬ್ದಮಣಿದರ್ಪಣವು ಮೊಟ್ಟ ಮೊದಲನೆಯದು. ಕೇಶಿರಾಜ ೨ನೇ ನಾಗವರ್ಮನ ಕೃತಿಗಳಾದ “ಶಬ್ದಸ್ಮೃತಿ” ಮತ್ತು “ಕಾವ್ಯಾವಲೋಕನ” ಗ್ರಂಥಗಳ ಸೂತ್ರ, ವೃತ್ತಿ, ಹಾಗೂ ಪ್ರಯೋಗಗಳನ್ನು ಆಧರಿಸಿದ್ದಾನೆಂದು ವೈಯಾಕರಣರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನವಾಗಿ ಇದು ವಿಧಾತ್ಮಕ ಅಥವಾ ಆದರ್ಶ ರೀತಿಯ ವ್ಯಾಕರಣ. ಆದರೆ ವಿವರಣಾತ್ಮಕ ಮತ್ತು ವರ್ಣನಾತ್ಮಕ ರೀತಿಯ ನಿರೂಪಣಾ ದೃಷ್ಟಿಯನ್ನೂ ಒಳಗೊಂಡಿದೆ. ಡಾ.ಡಿ.ಎಲ್.ನರಸಿಂಹಾಚಾರ್ ಅವರು ಸಂಪಾದಿಸಿರುವ ಶಬ್ದಮಣಿದರ್ಪಣವು ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಮೈಸೂರು ವಿಶ್ವವಿದ್ಯಾನಿಲಯದ ಪದವಿಗೆ ಬೋಧಿಸಲ್ಪಡುತ್ತಿದೆ. ಇದರಲ್ಲಿ ೩೪೩ ಕಂದಪದ್ಯಗಳಿವೆ.

ಕೇಶಿರಾಜನ ಶಬ್ದಮಣಿದರ್ಪಣ ದ ಇತಿವೃತ್ತ

 • ಕೇಶಿರಾಜನು ರಚಿಸಿದ ಶಬ್ದಮಣಿದರ್ಪಣವು ಸಮಗ್ರವೂ ಸ್ವಾರಸ್ಯಕರವೂ ಆದ ವ್ಯಾಕರಣ ಗ್ರಂಥ. ಇಡೀ ಕೃತಿ ಕಂದಪದ್ಯಗಳ ರೂಪದಲ್ಲಿದೆ. ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಶಬ್ದಮಣಿದರ್ಪಣವು ಸಂಸ್ಕೃತ ವ್ಯಾಕರಣ ಗ್ರಂಥಗಳನ್ನು ಅನುಸರಿಸಿ ರಚಿಸಲ್ಪಟ್ಟಿದೆ. ಆದರೂ ಇದರಲ್ಲಿ ಕನ್ನಡಕ್ಕೆ ಮಾತ್ರವಿರುವ ವಿಶೇಷ ಸಂಗತಿಗಳ ಕುರಿತೂ ಹೇಳಲಾಗಿದೆ.
 • “ಶಬ್ದಮಣಿದರ್ಪಣ”ವು ೧೩ನೇ ಶತಮಾನಕ್ಕೆ ಮೊದಲು ಹಳಗನ್ನಡ ಭಾಷಾಸ್ಥಿತಿಗತಿಗಳು ಹೇಗಿದ್ದುವೆಂಬುದನ್ನು ಸವಿಸ್ತಾರವಾಗಿ, ಸಪ್ರಮಾಣ ವಿವೇಚನೆಯಿಂದ ವರ್ಣಿಸುತ್ತದೆ.
 • ಕೇಶಿರಾಜನು ಬರೆದ ಶಬ್ದಮಣಿದರ್ಪಣವನ್ನು ಜೆ.ಗ್ಯಾರೆಟ್ ಎನ್ನುವವರು ಕ್ರಿ.ಶ. ೧೮೬೮ರಲ್ಲಿ ಪ್ರಕಟಿಸಿದರು. ಕ್ರಿ.ಶ.೧೮೭೨ರಲ್ಲಿ ರೆವೆರಂಡ್ ಕಿಟ್ಟೆಲ್ ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದರು. ಕ್ರಿ.ಶ. ೧೯೫೧ರಲ್ಲಿ ಡಿ.ಕೆ.ಭೀಮಸೇನರಾಯರು ಹಾಗು ೧೯೫೮ರಲ್ಲಿ ಡಿ.ಎಲ್.ನರಸಿಂಹಾಚಾರ್ ಅವರು ಪರಿಷ್ಕೃತ ಕೃತಿಗಳನ್ನು ರಚಿಸಿದ್ದಾರೆ.
 • ಶಬ್ದಮಣಿದರ್ಪಣದಲ್ಲಿ ‘ಸಂಧಿ ಪ್ರಕರಣ’ ‘ನಾಮಪ್ರಕರಣ’, ‘ಸಮಾಸ ಪ್ರಕರಣ’ ‘ತದ್ಧಿತಪ್ರಕರಣ’ ‘ಆಖ್ಯಾತಪ್ರಕರಣ’ ‘ಧಾತುಪ್ರಕರಣ’ ‘ಅಪಭ್ರಂಶ ಪ್ರಕರಣ’ ‘ಅವ್ಯಯಪ್ರಕರಣ’ ಎಂಬ ಹೆಸರಿನ ಎಂಟು ಅಧ್ಯಾಯಗಳಿವೆ. ಈ ಕೃತಿಯಲ್ಲಿ ಅಧ್ಯಾಯಗಳಿಗೆ “ಪ್ರಕರಣ” ಎನ್ನಲಾಗುತ್ತದೆ. ಕಂದಪದ್ಯಗಳಿಗೆ ‘ಸೂತ್ರ’ವೆಂದೂ, ಗದ್ಯರೂಪದ ವಿವರಣೆಗೆ ‘ವೃತ್ತಿ’ಯೆಂದೂ, ವ್ಯಾಕರಣದ ಉದಾಹರಣೆಗಳಿಗೆ ‘ಪ್ರಯೋಗ’ವೆಂದು ಕರೆದು, ತನ್ನ ಗ್ರಂಥಕ್ಕೆ ೨ನೇ ನಾಗವರ್ಮನ “ಶಬ್ದಸ್ಪೃತಿ ಮತ್ತು ಕಾವ್ಯಾವಲೋಕನ” ಗ್ರಂಥಗಳ ‘ಸೂತ್ರ’, ‘ವೃತ್ತಿ’ ಮತ್ತು ‘ಪ್ರಯೋಗ’ಗಳನ್ನು ಆಧರಿಸಿದ್ದಾನೆ. ಆದರೆ ಎಲ್ಲಿಯೂ ಅಪ್ಪಿ ತಪ್ಪಿಯೂ ೨ನೇ ನಾಗವರ್ಮನನ್ನಾಗಲಿ, ಅವನ ಕೃತಿಗಳನ್ನಾಗಲಿ ಉಲ್ಲೇಖಿಸದಿರುವುದು ಅಚ್ಚರಿಯನ್ನು ಉಂಟುಮಾಡುತ್ತದೆ.
ಸೂತ್ರಂ|| ಕ್ರಮದಿಂದೆ ಸಂಧಿ ನಾಮಂ
ಸಮಾಸಮಾ ತದ್ಧಿತಂ ಪೊದಳ್ದಾಖ್ಯಾತಂ|
ಸಮುದಿತ ಧಾತುವಪಭ್ರಂ
ಶಮವ್ಯಯಂ ಸಂಧಿ ಶಬ್ದಮಣಿದರ್ಪಣದೊಳ್||
(ಶಬ್ದಮಣಿದರ್ಪಣ-ಪೀಠಿಕೆ-೮)
ಈತನ ಮೇಲೆ ಸಂಸ್ಕೃತ ವೈಯಾಕರಣರ ಪ್ರಭಾವ ಅಪಾರವಾಗಿದೆ. ಒಟ್ಟು ಗ್ರಂಥವನ್ನು ನಾಲ್ಕು ಪಾದಗಳಾಗಿ ವಿಂಗಡಿಸಿಕೊಂಡಿದ್ದಾನೆ.
 • ೧ನೇ ಪಾದದಲ್ಲಿ ಅಕ್ಷರ ಸಂಜ್ಞೆ, ಸಂಧಿ, ಅವ್ಯಯಗಳ ವಿಚಾರವನ್ನೂ,
 • ೨ನೇ ಪಾದದಲ್ಲಿ ಲಿಂಗ, ಸಂಸ್ಕೃತ ಶಬ್ದಗಳ ಸ್ವೀಕರಣ, ವಿಭಕ್ತಿಗಳ ವಿಚಾರವನ್ನೂ,
 • ೩ನೇ ಪಾದದಲ್ಲಿ ಸಮಾಸ, ಆಖ್ಯಾತಪ್ರತ್ಯಯ, ವಚನ, ಸಂಖ್ಯಾವಾಚಕ, ತದ್ಧಿತ ಮೊದಲಾದುವನ್ನೂ
 • ೪ನೇ ಪಾದದಲ್ಲಿ ಧಾತು ಮತ್ತು ಕೃದಂತ ವಿಷಯಗಳನ್ನೂ ಪ್ರಸ್ತಾಪಿಸಿದ್ದಾನೆ.
 • ಕೇಶಿರಾಜ ತನ್ನ ವ್ಯಾಕರಣಕ್ಕೆ ಶ್ರೀವಿಜಯನಿಂದ ತೊಡಗಿ ಪಂಪನವರೆಗೆ ಸುಮಾರು ೪೦೦ ವರ್ಷಗಳ ಕಾಲದ ಭಾಷೆಯನ್ನು ಆಧರಿಸಿರುವನು. ಜೊತೆಗೆ ತನ್ನ ವ್ಯಾಕರಣಕ್ಕೆ ಗಜಗ, ಗುಣನಂದಿ, ಮನಸಿಜ, ಅಸಗ, ಚಂದ್ರಭಟ್ಟ, ಗುಣವರ್ಮ, ಪೊನ್ನ, ಸುಜನೋತ್ತಂಸ, ನಾಗವರ್ಮ, ನಾಗಚಂದ್ರ, ನೇಮಿಚಂದ್ರ, ಹಂಸರಾಜ, ಬ್ರಹ್ಮಶಿವ ಮೊದಲಾದ ಕವಿಗಳ, ವೈಯಾಕರಣರ ಗ್ರಂಥಗಳಿಂದ ಉದಾಹರಣೆಗಳನ್ನು ತೆಗೆದುಕೊಂಡಿದ್ದಾನೆ.
ಸೂತ್ರಂ|| ಗಜಗನ ಗುಣನಂದಿಯ ಮನ
ಸಿಜನಸಗನ ಚಂದ್ರಭಟ್ಟ ಗುಣವರ್ಮ ಶ್ರೀ
ವಿಜಯರ ಪೊನ್ನ ಪಂಪನ
ಸುಜನೋತ್ತಂಸನ ಸುಮಾರ್ಗಮಿದರೊಳೆ ಲಕ್ಷ್ಯಂ
(ಶಬ್ದಮಣಿದರ್ಪಣ-ಪೀಠಿಕೆ-೫)

ಕೇಶಿರಾಜನ ವೈಯಕ್ತಿಕ ಪರಿಚಯ /ಇತರ ಕೃತಿಗಳು

ಕೇಶಿರಾಜನ ಕಾಲ ಸುಮಾರು ಕ್ರಿ.ಶ.೧೨೬೦. ಈತನು ಜನ್ನನ ಸೋದರಳಿಯ.ಪ್ರಸಿದ್ಧ ಕವಿ ಹಾಗೂ ವಿದ್ವಾಂಸರ ಮನೆತನಕ್ಕೆ ಸೇರಿದವನು. ಈತನ ತಂದೆ ಹಳಗನ್ನಡ ಕಾವ್ಯ ಸಂಕಲನ ಗ್ರಂಥವಾದ “ಸೂಕ್ತಿಸುಧಾರ್ಣವ”ದ ಕರ್ತೃ ಯೋಗಿಪ್ರವರ ಚಿದಾನಂದ ಮಲ್ಲಿ ಕಾರ್ಜುನ; ತಾಯಿಯ ತಂದೆ ಕವಿಯೂ ಯಾದವಕಟಕಾಚಾರ್ಯನೂ ಆಗಿದ್ದ “ಸುಮನೋಬಾಣ” ಎಂದು ಶಬ್ದಮಣಿದರ್ಪಣದ ಆದಿಯಲ್ಲಿ ಕೇಶಿರಾಜನೇ ಹೇಳಿದ್ದಾನೆ.ಸುಮನೋಬಾಣಾನು ಇಮ್ಮಡಿ ನರಸಿಂಹನ ಆಸ್ಥಾನದಲ್ಲಿದ್ದ.(೧೨೩೦) ಅವನ ಅನಂತನಾಥಪುರಾಣದಲ್ಲಿ ಅದರ ಸೂಚನೆ ಯಿದೆ. ಕೇಶಿರಾಜ ಚೋಳರಾಜನಾದ ಇಮ್ಮಡಿ ನರಸಿಂಹನ ಹಗೂ ಅವನ ಮಗ ಸೋಮೇಶ್ವರನ ಆಳ್ವಿಕೆಯ ಕಾಲದಲ್ಲಿ ಜೀವಿಸಿದ್ದನೆಂದು ವಿದ್ವಾಂಸರು ಹೇಳುತ್ತಾರೆ. ಇಮ್ಮಡಿ ನರಸಿಂಹನ ಆಳ್ವಿಕೆಯಕಾಲ ೧೨೨೦-೩೮. ಅಲ್ಲದೇ ಅವನ ಮಗನಾದ ಸೋಮೇಶ್ವರನ ಕಾಲ ೧೨೩೩-೬೭. ಈ ಕಾಲಘಟ್ಟದಲ್ಲಿಯೇ ಕೇಶಿರಾಜನ ಶಬ್ದಮಣಿದರ್ಪಣ ರಚನೆಯಾದದ್ದು.
ವ್ಯಾಕರಣವನ್ನು ವಿವರಿಸುವ ಶಬ್ದಮಣಿದರ್ಪಣ ಈತನ ಪ್ರಖ್ಯಾತ ಕೃತಿ.
ಸೂತ್ರಂ|| ಕವಿ ಸುಮನೋಬಾಣನ ಯಾ
-ದವಕಟಕಾಚಾರ್ಯನೆಸೆವ ದೌಹಿತ್ರನೆ ನಾಂ|
ಕವಿ ಕೇಶವನೆಂ ಯೋಗಿ
ಪ್ರವರಚಿದಾನಂದ ಮಲ್ಲಿಕಾರ್ಜುನ ಸುತನೆಂ||
(ಶಬ್ದಮಣಿದರ್ಪಣ-ಪೀಠಿಕೆ-೨)
ಇತರ ಕೃತಿಗಳು
 • ಪ್ರಬೋಧಚಂದ್ರ,
 • ಚೋಳಪಾಲಕ ಚರಿತ,
 • ಕಿರಾತ,
 • ಸುಭದ್ರಾ ಹರಣ,
 • ಶ್ರೀ ಚಿತ್ರಮಾಲೆ.- ಆದರೆ ಇವು ಯಾವುವೂ ಪ್ರಸ್ತುತ ಲಭ್ಯವಿಲ್ಲವಾಗಿವೆ.

ಪೀಠಿಕೆ/ಪೂರ್ವಪ್ರಕರಣ/ಸಂಜ್ಞಾಪ್ರಕರಣ

ಇದರಲ್ಲಿ ಮಾತಿನ ಅಧಿದೇವತೆ ವಾಗ್ದೇವಿಯನ್ನು ಸ್ತುತಿಸಲಾಗಿದೆ. ಮಾತೆಂಬ ಶಾಸ್ತ್ರದಿಂದ ಶಾರದೆಯನ್ನು ಪೂಜಿಸಿ, ನಮಸ್ಕರಿಸುತ್ತಿದ್ದೇನೆ ಎನ್ನುವಾಗ ವಾಣಿಯ ಪರಿಶುದ್ಧತೆ ಮತ್ತು ಪಾರಮಾರ್ಥಿಕ ಮಹತ್ವಗಳೆರಡೂ ರಸವತ್ತಾಗಿ ಮೂಡಿಬಂದಿವೆ. ಭಾರತೀಯ ಕಾವ್ಯ ಮೀಮಾಂಸಕರು ನನಗೆ ವ್ಯಾಕರಣಶಾಸ್ತ್ರ ಗ್ರಂಥವನ್ನು ಬರೆ ಎಂದು ಒತ್ತಾಯಿಸಿದ್ದರಿಂದ, ನಾನು ಶಬ್ದಸಾಮರ್ಥ್ಯವೆಂಬ ಗುಣವನ್ನು ಹೊಂದಿದ ಕೃತಿ ರಚಿಸಿ, ಅದಕ್ಕೆ “ಶಬ್ದಮಣಿದರ್ಪಣ”ವೆಂಬ ಹೆಸರಿಟ್ಟಿದ್ದೇನೆ. ಇದು ಲಕ್ಷಣವಾದ ವ್ಯಾಕರಣಶಾಸ್ತ್ರವಾಗಿದೆ. ಈ ಗ್ರಂಥವನ್ನು ಮೀಮಾಂಸಕರು ಕೇಳಬೇಕು. ಇದರಲ್ಲಿ ‘ಅಷ್ಟ ದಶ ದೋಷ’ವೇನಾದರೂ ಇದ್ದರೆ, ಅದು ನಿಮ್ಮ ಗಮನಕ್ಕೆ ಬಂದರೆ, ಪ್ರೀತಿಯಿಂದ ತಿದ್ದಿ ಸರಿಪಡಿಸಿ. ಒಂದು ವೇಳೆ ಈ ಕೃತಿಯಲ್ಲಿ ದೋಷ ಕಂಡು ಬಂದರೆ, ಅದನ್ನು ದೊಡ್ಡದು ಮಾಡದೆ, ಗುಣದೋಷಗಳನ್ನು ಪೃಥಿಕರಿಸಿ, ಗುಣವನ್ನು ಮಾತ್ರ ಸ್ವೀಕರಿಸ ಬೇಕೆಂದು ವಿನಯ ಪೂರ್ವಕವಾಗಿ ಅರಿಕೆ ಮಾಡಿಕೊಂಡಿದ್ದಾನೆ.
ಸೂತ್ರಂ|| ಶ್ರೀವಾಗ್ದೇವಿಗೆ ಶಬ್ದದಿ
ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳು
ದ್ಫಾವಿಪ ನಿರ್ಮಳಮೂರ್ತಿಗಿ
ಳಾವಂದ್ಯೆಗೆ ಶಾಸ್ತ್ರಮುಖದೊಳವನತನಪ್ಪೆಂ
(ಶಬ್ದಮಣಿದರ್ಪಣ-ಪೀಠಿಕೆ-೧)
ಸೂತ್ರಂ|| ಅವಧರಿಪುದು ವಿಬುಧರ್ ದೋ
ಷವಿದರೊಳೇನಾನುಮುಳ್ಳೊಡಂ ಪ್ರಿಯದಿಂ ತಿ
ರ್ದುವುದು ಗುಣಯುಕ್ತಮುಂ ದೋ
ಷವಿದೂರಮುಮಾಗೆ ಮೆಚ್ಚಿ ಕೈಕೊಳ್ವುದಿದಂ
(ಶಬ್ದಮಣಿದರ್ಪಣ-ಪೀಠಿಕೆ-೪)

ಶಬ್ದಮಣಿದರ್ಪಣ – ನಲ್ನುಡಿಗನ್ನಡಿ

ಶ್ರೀ ಕೇಶಿರಾಜರ ಶಬ್ದಮಣಿದರ್ಪಣಕ್ಕೆ ೯೮೫ ಪುಟದ ವಿಸ್ತೃತವಾದ ವ್ಯಾಖ್ಯಾನವನ್ನು, ಬೆಂಗಳೂರು ಸರ್ಕಾರಿ ವಾಣಿವಲಾಸ ಜೂನಿಯರ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀ ಭುವನಹಳ್ಳಿ ಪದ್ಮನಾಭಶರ್ಮರು ೧೯೭೫/1975 ರಲ್ಲಿ ಬರೆದು ೧೯೭೬ ರಲ್ಲಿ ಪ್ರಕಟಿಸಿದ್ದಾರೆ. ಅದನ್ನು ಬಹಳಷ್ಟು ವಿದ್ವಾಂಸರು ಗಮನಿಸಿದಂತೆ ಕಾಣುವುದಿಲ್ಲ. (ಅವರೇ ಶ್ರೀಮದ್ ಭಟ್ಟಾಕಳಂಕದೇವ ವಿರಚಿತ “ಕರ್ಣಾಟಕ ಶಬ್ದಾನುಶಾಸನ”ಕ್ಕೂ ವ್ಯಾಖ್ಯಾನ ಬರೆದು, ೧೯೬೭ರಲ್ಲಿ ಪ್ರಕಟಿಸಿದ್ದಾರೆ.) ಅದರ ಬಗ್ಗೆ ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಜಿ.ನಾರಾಯಣ, (ಮಾಜಿ ಬೆಂಗಳೂರು ಮೇಯರ್) ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಅದೇ ಗ್ರಂಥದಲ್ಲಿ ಬರೆದ, ಅವರ ಅಭಿಪ್ರಾಯವನ್ನು ನೋಡಿದರೆ ಗ್ರಂಥದ ಪರಿಚಯ ಸಾಮಾನ್ಯ ಮಟ್ಟಿಗೆ ತಿಳಿಯುವುದು.