Tuesday, May 7, 2013

ಕನ್ನಡ’ ಶಬ್ದದ ಮೂಲ – ಒಂದು ಚರ್ಚೆಡಾ. ಚಿ.ಮೂ ಕನ್ನಡ   ಸಂಸ್ಕೃತಿ ನಮ್ಮ ಹೆಮ್ಮೆ ’ ಮತ್ತು ಸಿರಿಗನ್ನಡಂ ಗೆಲ್ಗೆ ಮತ್ತು ಕರುನಾಡಿನ ಮೂಲ(ಕನ್ನಡಪ್ರಭ ೨೭.೩.೨೦೧೩) ಲೇಖನಗಳಲ್ಲಿ ಕರ್ನಾಟಕ ಮತ್ತು ಕನ್ನಡ ಶಬ್ದಗಳ ಮೂಲ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹೀಗೆ ಸೂಚಿಸಿದ್ದಾರೆ.

“ಕರುನಾಡು’ “ಕರ್ನಾಟ” ಅಥವಾ”ಕರ್ನಾಟಕ”  ಕನ್ನಡ ಭಾಷೆಯನ್ನಾಡುವ  ಜನರ ಪ್ರದೇಶ ಎಂಬರ್ಥದಲ್ಲಿ ಕ್ರಿಸ್ತ ಪೂರ್ವ ಸಂಸ್ಕೃತ ಮಹಾಭಾರತದಲ್ಲಿಯೇ ಬಳಕೆಯಾಗಿದೆ. ಆ ಹೆಸರು ಶೂದ್ರಕ , ವರಾಹಮಿಹಿರ , ಸೋಮದೇವ ಇತ್ಯಾದಿ ಸಂಸ್ಕೃತ ಕೃತಿಕಾರರ ಕೃತಿಗಳಲ್ಲಿ ಮಾತ್ರವಲ್ಲದೆ ಕರ್ನಾಟಕದ ಹಿಂದಿನ ನೂರಾರು ಕಾವ್ಯ , ಶಾಸನಗಳಲ್ಲಿ ಉಲ್ಲೇಖವಾಗಿದೆ. ಅದೇ ಅರ್ಥದಲ್ಲಿ 'ಕನ್ನಡನಾಡು’ ಎಂಬ ಪದವೂ ಬಳಕೆಯಾಗಿದೆ. (ಉದಾ. ಕವಿರಾಜಮಾರ್ಗದ “ನಾಡದಾ ಕನ್ನಡದೊಳ್”). ಒಂದಂತೂ ಸ್ಪಷ್ಟ-‘ಕರ್ನಾಟ’ ಅಥವಾ ‘ಕರ್ನಾಟಕ’ವು ದೇಶವಾಚಿ.  ‘ಕನ್ನಡ’ವು ಆ ದೇಶದ ಭಾಷಾವಾಚಿ. ಸಾಮಾನ್ಯವಾಗಿ ದೇಶವಾಚಿ ಪದ ಮೊದಲು  ಭಾಷಾವಾಚಿ ಆಮೇಲಿನದು. (ಇದಕ್ಕೆ ವಿನಾಯ್ತಿ ಇವೆ-ವಿರಳವಾಗಿ). ಉದಾಹರಣೆಗೆ ಫ್ರಾನ್ಸ್-ಫ್ರೆಂಚ್ , ಗ್ರೀಸ್-ಗ್ರೀಕ್ , ಮಹಾರಾಷ್ಟ್ರ-ಮರಾಠಿ , ಬಂಗಾಳ-ಬಂಗಾಳಿ. ಹಾಗೆಯೇ ಕರ್ನಾಟ(ಕ)-ಕನ್ನಡ. “ಕರ್ನಾಟ” ಭೂಪ್ರದೇಶದ ಜನ ಆಡುವ ಭಾಷೆಯೇ ಕನ್ನಡ  ಎಂಬುದು ಸ್ಪಷ್ಟ. ಎಂದರೆ “ಕರ್ನಾಟ: ಎಂಬುದೇ ಸರಳಗೊಂಡು , ಭಿನ್ನ ವ್ಯಂಜನಗಳ ದ್ವಿತ್ವವು , ಏಕವ್ಯಂಜನ ದ್ವಿತವವಾಗಿ, ಪದ ಮಧ್ಯದ –ಟ-ವು ಡ-ಆಗಿ “ಕನ್ನಡ” ಆಗಿದೆ. ಈ ಊಹೆ ಬಹುತೇಕ ನಿಲ್ಲತಕ್ಕದ್ದು. “ಕರ್ನಾಟ'ಕ್ಕೆ ನಾವು ಎನೇ ನಿಷ್ಪತ್ತಿ ಹೇಳಲಿ –ಅದರ ರೂಪಾಂತವೇ , “ಕನ್ನಡ” ,”ಕರ್ನಾಟ” ನಾಡಿನ ಭಾಷೆಯೇ ಕನ್ನಡ (ಕರ್ನಾಟ-ಕನ್ನಡ).

ಆದರೆ  'ಕರುನಾಡು” ಹಲವರು ಭಾವಿಸಿರುವಂತೆ ದೇಶವಾಚಿ ಯಾವ ಪ್ರತ್ಯೇಕ ಪದ ಅಲ್ಲ. ಕನ್ನಡ ನಿಘಂಟು “ಕರುನಾಡು” ಪದವನ್ನು “ಕನ್ನಡನಾಡು” ಎಂಬುದಕ್ಕೆ ಸಮಾನವಾಗಿ ಕೊಟ್ಟು , ಎತ್ತರದ ಪ್ರದೇಶ ಎಂಬರ್ಥ ನೀಡಿರುವುದು ಖಂಡಿತ ಸರಿ ಅಲ್ಲ. “ಕರ್ನಾಟ “ ಪದದಂತೆ “ಕರುನಾಡು” ಪದಕ್ಕೆ ಪ್ರಾಚೀನ ಪ್ರಯೋಗಗಳೇ ಇಲ್ಲ. ತಮಿಳಿನ ಕ್ರಿ.ಶ ೨-೩ ನೇ ಶತಮಾನದ ಶಿಲಪ್ಪದಿಗಾರಂ ಕೃತಿಯಲ್ಲಿ “ಕರುನಾಡರ್”  ( ಕರುನಾಡಿನವನು-ಕನ್ನಡಿಗ) ಎಂಬ ಪ್ರಯೋಗಗಳಿವೆ. ಎಂದರೆ “ಕರ್ನಾಟ” ಎಂಬ ಪದ ತಮಿಳಿನ ಉಚ್ಛಾರಕ್ಕೆ ಅನುಗುಣವಾಗಿ “ಕರುನಾಡು” ಎಂದು ರೂಪಾಂತರಗೊಂಡಿದೆ. ತಮಿಳಿನಲ್ಲಿ ‘ಟ’ ವು ‘ಡ’ ಆಗುತ್ತದೆ. “ಕರ್ನಾಟಕರ್” ಎಂಬುದು ತಮಿಳಿನಲ್ಲಿ “ಕರುನಾಡರ್” ಆಗಿದೆ. ಆಂಗ್ಲರ ಉಚ್ಚಾರದಲ್ಲಿ ‘ಕನ್ನಡ’ವು ‘ಕೆನರ’ ಆದಂತೆ ( South Canara = ದಕ್ಷಿಣ ಕನ್ನಡ) “ಕೆನರ” ಪದದಂತೆ “ಕರುನಾಡು”  ಪದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ. “ಕರುನಾಡು” ಎಂದರೆ ಎತ್ತರದ ಪ್ರದೇಶ ಎಂದರ್ಥ ಕೊಡುವುದು ಸಂಪೂರ್ಣ ಕಲ್ಪಿತ. “ಸಿರಿಗನ್ನಡಂ ಗೆಲ್ಗೆ “ ಎಂಬ ಘೋಷಣೆಯ ಬಗ್ಗೆ ಕನ್ನಡಿಗರು ಹೆಮ್ಮೆಪಟ್ಟುಕೊಳ್ಳುವುದು ಸರಿ. ಆದರೆ ಕರ್ನಾಟಕವನ್ನು “ಕರುನಾಡು” ಎಂದು ಕರೆಯಲು ಯಾವ ಹೆಮ್ಮೆಯ ಕಾರಣವೂ ಇಲ್ಲ.  


ಡಾ. ಚಿ.ಮೂರವರು ’ಕನ್ನಡ’ ಪದದ ಬಗೆಗೆ ನೀಡಿದ ವಿವರಣೆಗಳನ್ನು ಪರಿಶೀಲಿಸಿ ನೋಡಿದಾಗ ಅವುಗಳಲ್ಲಿ ಹುರುಳಿಲ್ಲವೆಂದು ಸ್ಪಷ್ಟವಾಗಿ ಕಾಣುತ್ತದೆ.

(೧) ಡಾ. ಚಿ.ಮೂ ಸಂಸ್ಕೃತ ಮೂಲದ ಮಹಾಭಾರತ ಹಾಗೂ ನಂತರದ ಕಾಲದ ಇತರ ಕೃತಿಗಳಲ್ಲಿ ಬರುವ ಕರ್ನಾಟ(ಕ) ಶಬ್ದವೇ ಮುಂದೆ ’ಕನ್ನಡ’ ಎಂದಾಯಿತು ಎಂದು ವಾದಿಸಿದ್ದಾರೆ. ಆದರೆ ಸಂಸ್ಕೃತದ ಯಾವ ಪ್ರಾತಿಪದಿಕ ಅಥವಾ ಧಾತುಗಳಿಂದ ’ಕರ್ನಾಟ(ಕ) ಪದ ಬಂದಿತೆಂದು ತಿಳಿಸಿಲ್ಲ.  ಮಹಾಭಾರತದಲ್ಲಿ ಬರುವ ’ಕರ್ನಾಟ’ ಪದವನ್ನು ಯಾವ ವಿಚಾರಣೆಗೂ ಒಳಪಡಿಸದೆ , ಅದರಲ್ಲಿ ಇರಬಹುದಾದ ಅರ್ಥಗಳನ್ನು ಒಡೆದು ತೋರಿಸದೆ ಅದೇ ಮೂಲ ಪದವೆಂದು ಪರಿಗಣಿಸಿದ್ದಾರೆ. ಕರ್ನಾಟ(ಕ) ಪದ ಇಂಡೋ-ಆರ್ಯನ್ ಮೂಲದ ಸಂಸ್ಕೃತಕ್ಕೆ ಸೇರಿದುದೆಂದು ಚಿ.ಮೂ ನಂಬಿಕೆ. 
ಮಹಾಭಾರತ ಹೇಗೆ , ಯಾವ ಅಧಾರದಿಂದ ’ಕರ್ನಾಟ(ಕ) ಪದವನ್ನು ರೂಪಿಸಿಕೊಂಡಿತೆಂದು ತೋರಿಸುವ ಹೊಣೆಗಾರಿಕೆ ಅವರ ಮೇಲಿದೆ.  

(೨) ಮಹಾಭಾರತದ ರಚನೆಗೆ ಮೊದಲು ದಕ್ಷಿಣ ಭಾರತಕ್ಕೆ ಇಂಡೋ-ಆರ್ಯನ್ ಭಾಷೆಗಳು(ಸಂಸ್ಕೃತ)  ಬರುವ ಮೊದಲು ಈಗ ’ಕರ್ನಾಟಕ ’ ಎಂದು ಹೆಸರಾಗಿರುವ ಪ್ರದೇಶಕ್ಕೆ ಸ್ಥಳೀಯರು ಏನೆಂದು ಕರೆಯುತ್ತಿದ್ದರೆಂದು ಅವರು ಸ್ಪಷ್ಟಪಡಿಸುವುದಿಲ್ಲ. ಡಾ. ಚಿ.ಮೂ ಪ್ರಕಾರ ಇಂಡೋ-ಅರ್ಯನ್ ಭಾಷಿಕರು ದಕ್ಷಿಣ ಭಾರತಕ್ಕೆ ಬಂದು ನಿರ್ದಿಷ್ಟ ಪ್ರದೇಶವನ್ನು ’ಕರ್ನಾಟ(ಕ) ’ ಎಂದು ಕರೆದರು. ತಮಿಳರು ಅದನ್ನು ತಮ್ಮ ಉಚ್ಛಾರಣೆಗೆ ಬಗ್ಗಿಸಿ ’ಕರುನಾಡು’ ಎಂದು ಕರೆದರು.

(೩) ಕರ್ನಾಟ(ಕ) ಪದದಲ್ಲಿ ನಾಡು(ಟು) ಪದವಿರುವುದು ಖಚಿತ. ಇಂಡೋ-ಆರ್ಯನ್ ಪದಮೂಲಗಳಿಂದ ’ಕರ್ನಾಟ(ಕ) ಪದವನ್ನು ಬಿಡಿಸಿ ಹೇಳಲು ಸಾಧ್ಯವಿಲ್ಲ. ಆದರೆ ದ್ರಾವಿಡ ಭಾಷಾ ಮೂಲಗಳಿಂದ ’ಕರು+ನಾಡು(ಟು)’ ಪದಗಳನ್ನು ಬಿಚ್ಚಬಹುದು. ಅವುಗಳಿಗೆ ದ್ರಾವಿಡ ಮೂಲದ ಸ್ಪಷ್ಟ ಅರ್ಥಗಳಿವೆ. ನಾಡು(ಟು) ಶಬ್ದ ದ್ರಾವಿಡ ಭಾಷೆಗಳಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವುದು ಖಚಿತ (ಸಿತ್ತನ್ನವಾಸಿಲ್, ಹಲ್ಮಿಡಿ ಶಿಲಾಶಾಸನ) . ಆದರೆ ಇಂಡೋ-ಆರ್ಯನ್ ಭಾಷೆಗಳಲ್ಲಿ ’ನಾ(ಣಾ)ಟ ಪದಗಳು ಕಾಣಸಿಗವು.  


ಅರ+ಕಾಡು=ಅರಕ್ಕಾಡು > ಆರ್ಕಾಟ್. ಇಲ್ಲಿ 'ರ+ಕಾ' ಸಂಸ್ಕೃತಕ್ಕೆ ಹೋಗಿ 'ಅರ್'ಕಾರ ಒತ್ತು ಬಂದು , 'ಡ' ಶಬ್ದ 'ಟ' ಕ್ಕೆ ಬದಲಾಗಿ 'ಆರ್ಕಾಟ್' ಎನ್ನುವ ಸಂಸ್ಕೃತ (ಇಂಡೋ-ಆರ್ಯನ್) ಉಚ್ಛಾರದ  ಪದ ಮೈದಾಳಿದೆ. ಅದರಂತೆಯೇ 'ಕರು+ನಾಡು' ಪದಗಳು ಸಂಸ್ಕೃತದ ಉಚ್ಛಾರಣೆಯಲ್ಲಿ ಕರ್ನಾಟ(ಕ) ಆಗಿ ಬದಲಾಗಿವೆ. ಕರ್ನಾಟ(ಕ) ಪದಕ್ಕೆ ಮಹಾಭಾರತದ ಆಕರ ಆ ಮೂಲಕ ಸಂಸ್ಕೃತ ಮೂಲವನ್ನು ನೀಡುವ ಚಿ.ಮೂ ಭಾಷಾ ವಿಜ್ಞಾನದ ಮೂಲ ತತ್ತ್ವಗಳನ್ನು ಪರಿಗಣಿಸಿಲ್ಲ. 'ಆರ್ಕಾಟ್' ಪದದ ಮೂಲ ಮತ್ತು ಅರ್ಥವನ್ನು  ಕೂಡ ಚಿ.ಮೂ   ಸಂಸ್ಕೃತದಲ್ಲಿ ಕಾಣಬಲ್ಲರು ಎನಿಸುತ್ತದೆ. 

ಅರ+ಕೆರೆ +ನಾಡು > ಅರ್ಕೆರೆ ನಾಡು . ಚಿ.ಮೂ ರವರ ದೃಷ್ಟಿಯಲ್ಲಿ ಅರ್ಕೆರ್ನಾಟ(ಕ) ಪದದಿಂದ ಅರ್ಕೆರೆ (ಅರಕೆರೆ) ನಾಡು ಪದ ಬಂದಿದೆ. 

ಪಾಲ+ಕಾಡು =ಪಾಲಕ್ಕಾಡು >ಪಾಲ್ಘಾಟ್ ಪದದಲ್ಲಿ ಮೂಲದಲ್ಲಿದ್ದ 'ಡ' ಸಂಸ್ಕೃತದತ್ತ ಸರಿದಾಗ 'ಟ'ಕಾರವಾಗಿ ಪಾಲ್ಘಾಟ್ ಪದ ಹುಟ್ಟಿದೆ.
ಕಾರ್ನಾಡು , ಮೂರ್ನಾಡು ಪದಗಳನ್ನು ಚಿ.ಮೂ ಹೇಗೆ ಬಿಡಿಸುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.

(೪) ಕನ್ನಡ ನಿಘಂಟುವಿನಲ್ಲಿ ಕರುನಾಡು=ಎತ್ತರದ ಪ್ರದೇಶ ಎಂದು ಅರ್ಥ ನೀಡಿರುವುದು ಸರಿ. ಅದು ತಪ್ಪೆಂದು ಹೇಳುವಲ್ಲಿ ಡಾ.ಚಿ.ಮೂ ನೀಡಿರುವ ವಿವರಣೆಗಳು ತೀರಾ ದುರ್ಬಲ. ಅವುಗಳಿಗೆ  ಭಾಷಾ ವಿಜ್ಞಾನದ ಯಾವುದೇ ಬೆಂಬಲವಿಲ್ಲ. ’ಕರ್ನಾಟ(ಕ)ದಂತೆ ’ಕರುನಾಡು’ ವಿಗೆ ಪ್ರಾಚೀನ ಪ್ರಯೋಗಗಳೇ ಇಲ್ಲ ಎಂಬ ಅವರ ವಾದ ಸರಿಯಾದುದಲ್ಲ. ಕರುಮೈ (ತಮಿಳು) , ಕರು (ಕಡು=ಎತ್ತರ) ಎನ್ನುವ ಪದಗಳು ಯಾವಾಗಲೂ ಬಳಕೆಯಲ್ಲಿವೆ. ಕಿಟ್ಟೆಲ್ ಕೋಶ   ಶಬ್ದಸಾರದಲ್ಲಿ ಈ ಪದ ಇರುವುದನ್ನು ದಾಖಲಿಸಿದೆ . ಅಶೋಕ ಶಾಸನದಲ್ಲಿರುವ ’ಇಸಿಲ’ (=ಎಯಿಲ್ ತಮಿಳು) ಪದ ಕನ್ನಡಲ್ಲಿ ಎಲ್ಲಿಯೂ , ಎಂದಿಗೂ ಬಳಕೆಯಾಗಿಲ್ಲ. ಆದರೂ ಆ ಪದದ ಲಕ್ಷಣದ ಮೇಲೆ ಅದನ್ನು ಕನ್ನಡ(=ದ್ರಾವಿಡ) ಪದವೆಂದು ಹೇಳಲಾಗಿದೆ. ಇಂತಹ ನೂರಾರು ಪದಗಳನ್ನು ನಾವು ಗುರುತಿಸುವುದು ಸಾಧ್ಯ. ಇಂಡೋ-ಆರ್ಯನ್ ಪ್ರಭಾವ ದಕ್ಷಿಣ ಭಾರತದ ಮೇಲೆ ಆದ ಮೇಲೆ ಲಿಖಿತ ಪರಂಪರೆ ಬಂದಿದ್ದರಿಂದ , ಶಾಸನಕಾರರು ,ಕವಿಗಳು ಸಂಸ್ಕೃತ ಪದಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದುದರಿಂದ ’ಕರುನಾಡು’ ಎಂಬ ಮೂಲ ದ್ರಾವಿಡ ಶಬ್ದ ಬರಹದಲ್ಲಿ ಕಾಣಿಸಿಕೊಂಡಿಲ್ಲ. ಅಥವಾ ’ಅವರು ’ಕರುನಾಡು=ಕನ್ನಡ ಎಂದೇ ಪರಿಗಣಿಸಿರಬಹುದು. ಇಂತಹ ಸಾಧ್ಯತೆ  ದಕ್ಷಿಣ ಭಾರತದ ನದಿಗಳ ಹೆಸರಿಗೂ ಸಲ್ಲುತ್ತದೆ.  

(೫) ಕರ್ನಾಟಹದಂತಹ ವಿಶಾಲವಾದ ಪ್ರದೇಶವನ್ನು ಅದರ ಭೌಗೋಳೀಕ ಲಕ್ಷಣಗಳಿಂದ ಗುರುತಿಸಬಹುದೇ ಹೊರತು ಸೀಮಿತ ವೀಕ್ಷಣೆಗಳಿಂದ ಅದಕ್ಕೆ ಹೆಸರಿಡಲಾಗದು. ಪ್ರಾಚೀನ ಕಾಲದಲ್ಲಿ ತಮಿಳು-ಕನ್ನಡ-ತೆಲುಗು-ತುಳುಗಳು ಮಾತ್ರ ಅಸ್ತಿತ್ವದಲ್ಲಿದ್ದವು. ಅವುಗಳ ನಡುವೆ ಹೆಚ್ಚಿನ ವ್ಯತ್ಯಾಸಗಳಿರಲಿಲ್ಲ. ಗೋದಾವರಿ (ಬಿಳಿಹೊಳೆ) , ಕೃಷ್ಣಾ (ಕರಿಹೊಳೆ) , ಕಾವಾ(ಲಾ)ರ್ (ಕಾವೇರಿ) ದಕ್ಷಿಣ ಭಾರತದ ಮೂರು ದೊಡ್ದ ನದಿಗಳು. ಈ ಮೂರು ನದಿಗಳು ಹುಟ್ಟುವ ಪ್ರದೇಶವನ್ನು ಗಮನಿಸಿದ ಜನ ಅದನ್ನು ಕರುನಾಡು (ಎತ್ತರದ ಪ್ರದೇಶ ) ಎಂದು ಕರೆದರು. ಯಾವುದೇ ನದಿಗಿರುವ ಮೂರು ಅವಸ್ಥೆಗಳಲ್ಲಿ ಮೊದಲಿನ ಎರಡು ಅವಸ್ಥೆಗಳು ಅವುಗಳು ಹುಟ್ಟುವ ಎತ್ತರದ ಪ್ರದೇಶಕ್ಕೆ ಸೇರಿರುತ್ತದೆ. ಈ ಮೂರು ನದಿಗಳ ಆರಂಭಿಕ ಎರಡು ಅವಸ್ಥೆಗಳು ಕರ್ನಾಟಕದಲ್ಲಿವೆ. ಒಂದು ಪ್ರದೇಶ ಕುರಿತಾದಂತೆ ನೀರಿನ ಹರಿವಿಗಿಂತಲೂ ಹೆಚ್ಚು ಮನದಟ್ಟಾಗುವ ವೀಕ್ಷಣೆ ಮತ್ತೊಂದಿಲ್ಲ.

(೬) ಕುರು(=ಕರು) . ಕೋಡು ಪದಗಳನ್ನು ಹೊಂದಿರುವ ನೂರಾರು ಊರುಗಳು . ಪ್ರದೇಶಗಳು , ಪದಗಳು ಕರ್ನಾಟಕದಲ್ಲಿ ಹರಡಿವೆ. ಈ ಊರುಗಳಿಗೆ ಎಂದಿನಿಂದ ಆ ಹೆಸರುಗಳು ಬಂದವೆಂದು ಯಾರಿಗೂ ಗೊತ್ತಿಲ್ಲ. ಅವು ಕರ್ನಾಟಕದಷ್ಟೇ ಪ್ರಾಚೀನ. ಆದ್ದರಿಂದ ’ಕುರು, ಕೋಡು’ ಹೆಸರಿನ ಯಾವುದೇ ಸ್ಥಳ ಸಾಹಿತ್ಯ , ಶಾಸನಗಳಲ್ಲಿ ಉಲ್ಲೇಖವಾಯಿತೆಂದರೆ ಅದು ಅ ಶಾಸನದ ಕಾಲದ್ದೆಂದು ಅರ್ಥವಲ್ಲ. ಆ ಕಾಲದಲ್ಲಿ ಅದರ ಹೆಸರು ಬರಹ ರೂಪದಲ್ಲಿ ಕಾಣಿಸಿಕೊಂಡಿತೆಂದು ಅರ್ಥ.

ಮೇಲಿನ ಅಂಶಗಳಿಂದ ಓಕ್ಲಹ್ಯಾಂ ಅಲುಗಿನ ತತ್ತ್ವ (Oklhaham Razor) ಬಳಸಿ ಡಾ. ಚಿ,ಮೂ ರವರು ಇಂಡೋ-ಆರ್ಯನ್ ಮೂಲದಿಂದ ’ ಕರ್ನಾಟ(ಕ)-ಕನ್ನಡ’ ಪದವನ್ನು ತಂದಿರುವುದು ತಪ್ಪೆಂದು ಹೇಳಬಹುದು 

No comments:

Post a Comment