Jan 24, 2012

ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಜಾತ್ರೆ


ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಜಾತ್ರೆ

Kengal Anjaneya
ಚನ್ನಪಟ್ಟಣದ ಇತಿಹಾಸ ಪ್ರಸಿದ್ದ, ಐಯ್ಯನಗುಡಿ ಜಾತ್ರೆಯೆಂದೇ ಈ ಭಾಗದ ಜನರಲ್ಲಿ ಹಾಸುಹೊಕ್ಕಾಗಿರುವ ಚನ್ನಪಟ್ಟಣ ತಾಲ್ಲೂಕಿನ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಜಾತ್ರೆ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬ್ರಹ್ಮರಥೋತ್ಸವ ಕಾರ್ಯಕ್ರಮವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ, ವೇದ ಮಂತ್ರ, ಘೋಷಗಳ ನಾದದಲ್ಲಿ ವಿಜೃಂಭಣೆಯಿಂದ ಸೋಮವಾರ ನೆರವೇರಿತು.

ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ನಡೆದ ಈ ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ತಾಲ್ಲೂಕು ತಹಶೀಲ್ದಾರ್ ಎಸ್.ಆರ್.ಕೃಷ್ಣಯ್ಯ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಚಂದ್ರಶೇಖರಯ್ಯ, ಶಾಸಕ ಎಂ.ಸಿ.ಅಶ್ವಥ್ ಹಾಗೂ ಇತರ ಗಣ್ಯ ಭಕ್ತಾದಿಗಳು ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಮೂರ್ತಿಗಳನ್ನು ಹೊತ್ತ ರಥ ಚಲಿಸುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತಾದಿಗಳು ಧನ್ಯತಾ ಭಾವದಿಂದ ತಮ್ಮ ಇಷ್ಟದೈವಕ್ಕೆ ಹೂವು, ಹಣ್ಣು, ಜವನ ಎಸೆಯುವ ಮೂಲಕ ಭಗವಂತನನ್ನು ಕಣ್ಮನಗಳಲ್ಲಿ ತುಂಬಿಕೊಂಡರು. ನಂತರ ಗೋವು ಮತ್ತು ಅಶ್ವಪೂಜೆ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಹೂವಿನ ಪಲ್ಲಕ್ಕಿ ಉತ್ಸವಗಳಲ್ಲಿ ಭಕ್ತರು ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾದರು.

ದೇಗುಲದ ಇತಿಹಾಸ : ಸುಮಾರು 300 ವರ್ಷಗಳ ಇತಿಹಾಸವಿರುವ ಈ ದೇಗುಲ ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದೆ. ಸರ್ವಧರ್ಮ ಸಹಿಷ್ಣುತೆಯುಳ್ಳ ಈ ದೇವಾಲಯವನ್ನು 12 ಬಾರಿ ಪ್ರದಕ್ಷಿಣೆ ಹಾಕಿದರೆ ತಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದ ಸಂಕಲ್ಪ ಈಡೇರುತ್ತದೆ ಎಂಬ ನಂಬಿಕೆ ಈ ಭಾಗದ ಜನತೆಯಲ್ಲಿದೆ.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕಣ್ವ ಕ್ಷೇತ್ರಾಂತರ್ಗತ ಹಾಗೂ ವ್ಯಾಸ ಮಹರ್ಷಿಗಳು ಕೆಂಪುಕಲ್ಲಿನಿಂದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಈ ಕ್ಷೇತ್ರದಲ್ಲಿ ಆ ಕಾಲದಲ್ಲಿ ಹುಲಿಗಳು ಹೆಚ್ಚಾಗಿದ್ದ ಕಾರಣ ಇದಕ್ಕೆ ಹುಲಿಮುತ್ತಿಗೆ ದೊಡ್ಡಿ ಎಂದೂ ಕರೆಯಲಾಗುತ್ತಿತ್ತು. ಈ ಹುಲಿಗಳು ಅಲ್ಲಿನ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದವು. ಅಂದಿನ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಹುಲಿಗಳ ಉಪಟಳ ತಾಳಲಾರದೆ ಭಗವಂತನ ಮೊರೆ ಹೋಗಿದ್ದರಂತೆ.

ಒಂದು ದಿನ ಓರ್ವ ರೈತ ಈ ಮಾರ್ಗವಾಗಿ ಎತ್ತಿನಗಾಡಿಯಲ್ಲಿ ತನ್ನ ಊರಿಗೆ ತೆರಳುತ್ತಿದ್ದಾಗ ವಿಶ್ರಾಂತಿಗಾಗಿ ಈ ಕ್ಷೇತ್ರದಲ್ಲಿ ಉಳಿದುಕೊಂಡನಂತೆ. ಬೆಳಿಗ್ಗೆ ಎದ್ದು ನೋಡಿದಾಗ ತನ್ನ ಹಸುಗಳನ್ನು ಕಾಣದೆ ಕಂಗಾಲಾಗಿರುವಾಗ ಭಗವಂತ ಪ್ರತ್ಯಕ್ಷನಾಗಿ ನನ್ನ ಮೂರ್ತಿ ಬಳಿ ನಿನ್ನ ಹಸುಗಳಿವೆ ಎಂದನಂತೆ.

ಆಗ ರೈತ ಶ್ರೀ ಆಂಜನೇಯನ ಮೂರ್ತಿ ಬಳಿ ಧಾವಿಸಿದಾಗ ತನ್ನ ಹಸುಗಳು ಮೂರ್ತಿ ಬಳಿ ಇದ್ದುದನ್ನು ಕಂಡು ಬೆರಗಾದನಂತೆ. ಹಸುಗಳ ಜೊತೆ ಹುಲಿಯೂ ಸಹ ಅಲ್ಲಿಯೇ ಇದ್ದುದನ್ನು ಕಂಡನಂತೆ. ಇದರಿಂದ ಪ್ರೇರಿತರಾದ ಮೈಸೂರಿನ ದಿವಾನರು ಈ ದೇವಾಲಯದ ಅಭಿವೃದ್ದಿಗಾಗಿ 10 ಎಕರೆ ಜಮೀನನ್ನು ನೀಡಿ, ಶ್ರೀ ಆಂಜನೇಯಸ್ವಾಮಿಗೆ ಒಂದು ಚಿನ್ನದ ಕಣ್ಣು ಹಾಗೂ ಮೀಸೆಯನ್ನು ಕೊಡುಗೆಯಾಗಿ ನೀಡಿದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಆಂಜನೇಯಸ್ವಾಮಿ ಪ್ರಸಾದದಿಂದ ಜನಿಸಿದರೆಂಬ ಹಿನ್ನಲೆಯಲ್ಲಿ ಈ ದೇವಾಲಯವನ್ನು ಅವರ 60ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಜೀರ್ಣೋದ್ದಾರ ಮಾಡಲಾಗಿದೆ.

ಮೂಲಸೌಲಭ್ಯಗಳ ಕೊರತೆ : ಪುರಾಣ ಪ್ರಸಿದ್ದವಾಗಿರುವ ಈ ದೇವಾಲಯ ಮೂಲಭೂತ ಸೌಲಭ್ಯಗಳಿಂದ ಇಂದಿಗೂ ವಂಚಿತವಾಗಿದೆ. ಕುಡಿಯುವ ನೀರು. ಶೌಚಾಲಯದ ಅಭಾವ, ಸ್ವಚ್ಛತೆ ಸಿಬ್ಬಂದಿ ಕೊರತೆ ದೇವಾಲಯಕ್ಕೆ ಆಗಮಿಸುವ ಭಕ್ತರನ್ನು ಕಾಡುತ್ತಿದೆ. ಪ್ರತಿವರ್ಷ ಇಲ್ಲಿ ಸಾವಿರಾರು ವಿವಾಹ ಕಾರ್ಯಗಳು ನಡೆಯುತ್ತಿದ್ದು, ಇಲ್ಲಿನ ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಜಿಲ್ಲಾಡಳಿತ ಗಮನಹರಿಸದಿರುವುದು ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡಿದೆ.

ದನಗಳ ಜಾತ್ರೆ : ಜಾತ್ರೆಯ ಅಂಗವಾಗಿ 9 ದಿನಗಳ ಕಾಲ ದನಗಳ ಜಾತ್ರೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ತರಹೇವಾರಿ ರಾಸುಗಳು ಇಲ್ಲಿ ಜಮಾವಣೆಗೊಳ್ಳುತ್ತವೆ. ಸಾವಿರಾರು ರಾಸುಗಳನ್ನು ಮಾರುವುದು ಕೊಳ್ಳುವುದರಿಂದ ಇಲ್ಲಿ ಕೋಟ್ಯಾಂತರ ರೂ. ವಹಿವಾಟು ನಡೆಯುವುದು ವಿಶೇಷ.

ದನಗಳ ಜಾತ್ರೆ ಕಳೆದ ವಾರದಿಂದಲೂ ಭರ್ಜರಿಯಾಗಿ ನಡೆಯುತ್ತಿದೆ. ಕೆಂಗಲ್ ಸುತ್ತಮುತ್ತ ಸುಮಾರು ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರು ರಾಸುಗಳ ಓಡಾಟ ಮತ್ತು ರಾಸುಗಳನ್ನು ಕೊಳ್ಳಲು ಬಂದಿರುವ ಗಿರಾಕಿಗಳ ಸುತ್ತಾಟ ನಡೆದಿದೆ. ವರ್ಷದ ಆರಂಭದಲ್ಲಿ ಸಂಕ್ರಾಂತಿ ಸಮಯದಲ್ಲಿ ರಾಸುಗಳಿಗೆ ವಿಶೇಷ ಪೂಜೆ ಮಾಡುವ ದಿನದಂದೇ ಆರಂಭವಾಗುವ ಈ ದನಗಳ ಜಾತ್ರೆ ಅತಿ ವಿಶೇಷವಾಗಿದ್ದು, ಈ ಭಾಗದಲ್ಲಿ ಹೆಸರುವಾಸಿಯಾಗಿದೆ. ಜ.22ರವರೆಗೆ ಈ ದನಗಳ ಜಾತ್ರೆ ನಡೆಯಲಿದೆ.

ಇಲ್ಲಿನ ರಾಸುಗಳನ್ನು ಕೊಳ್ಳಲು ಜಿಲ್ಲೆಯ ವಿವಿಧ ರಾಜ್ಯಗಳ ಗಿರಾಕಿಗಳಲ್ಲದೆ, ನೆರೆಯ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಸಹ ಆಗಮಿಸಿದ್ದಾರೆ. ಇಲ್ಲಿ ರಾಸುಗಳು 10, 15 ಸಾವಿರದಿಂದ ಹಿಡಿದು, ಒಂದೂವರೆ ಲಕ್ಷದವರೆಗೆ ವ್ಯಾಪಾರಗೊಂಡ ಉದಾಹರಣೆಗಳು ಇವೆ. ಈ ಬಾರಿಯ ಜಾತ್ರೆಗೆ ತಾಲ್ಲೂಕು ಆಡಳಿತ ವಿಶೇಷ ಆಸಕ್ತಿ ವಹಿಸಿ ಬೆಳಕು ಮತ್ತು ನೀರಿನ ವ್ಯವಸ್ಥೆಯನ್ನು ಸಹ ಮಾಡಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಾಗುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಈ ದನಗಳ ಜಾತ್ರೆ ಗಮನಸೆಳೆಯುತ್ತಿದೆ. ರಥೋತ್ಸವವು ಮುಗಿದ ನಂತರ ಜಾತ್ರಾ ಮಹೋತ್ಸವ ಕೊನೆಗೊಳ್ಳಲಿದೆ.