ಬೊಮ್ಮನಾಯಕನಹಳ್ಳಿ ಶಿವದೇವಾಲಯ
ಬಣ್ಣದ ಬೊಂಬೆಗಳಿಗೆ ಹೆಸರಾದ ಚನ್ನಪಟ್ಟಣ ಉಪ ವಿಭಾಗಕ್ಕೆ ಒಳಪಟ್ಟ ಬೊಮ್ಮನಾಯಕನಹಳ್ಳಿ ಒಂದು ಪುಟ್ಟ ಗ್ರಾಮ. ಗ್ರಾಮ ಪುಟ್ಟದಾದರೂ ಇದರ ಇತಿಹಾಸ ಮಾತ್ರ ಬಹು ದೊಡ್ಡದು. ಕರುನಾಡನ್ನಾಳಿದ ಗಂಗರ ಕಾಲದಲ್ಲಿಯೇ ಈ ಊರು ಇತ್ತೆಂದು ಹೇಳಲಾಗುತ್ತದೆ.
ಮಂಡನಾಯಕ, ಹೊನ್ನನಾಯಕರೆಂಬ ಪಾಳೆಯಗಾರರ ಸೋದರ ಬೊಮ್ಮನಾಯಕ ಆಳಿದ ಈ ಊರಿಗೆ ಬೊಮ್ಮನಾಯಕನ ಹಳ್ಳಿ ಎಂಬ ಹೆಸರು ಬಂದಿದೆ.ಊರಿನಲ್ಲಿರುವ ಪುರಾತನ ದೇವಾಲಯಗಳಲ್ಲಿರುವ ವಿಗ್ರಹಗಳು, ಭಗ್ನಗೊಂಡಿರುವ ಉರುಟ ಕಲ್ಲಿನ ಹಳೆಯ ನಂದಿ, ದೇವಾಲಯದ ಬಳಿ ಸಿಕ್ಕಿರುವ ವೀರಗಲ್ಲುಗಳು ಹೋಯ್ಸಳರ ಕಾಲದ ಶಿಲ್ಪಗಳನ್ನು ಹೋಲುವ ಕಾರಣ ಊರಿಗೆ 450-500 ವರ್ಷಗಳ ಇತಿಹಾಸ ಇದ್ದಿರಬಹುದೆಂದು ಅಂದಾಜಿಸಲಾಗಿದೆ.
ಪುರಾತನವಾದ ಆದರೆ, ಶಿಲ್ಪಕಲಾ ವೈಭವವಿಲ್ಲದ ಸಾಧಾರಣ ಕಲ್ಲುಕಟ್ಟಡದ ಈ ದೇಗುಲದ ಬಿತ್ತಿಗಳ ಮೇಲೆ ಹಾಗೂ ಛಾವಣಿಯ ಮೇಲೆ ಗಿಡಗಂಟಿ ಬೆಳೆದು ಶಿಥಿಲವಾಗಿದೆ. ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ. ಹೀಗಾಗೇ ದೇವಾಲಯದಲ್ಲಿದ್ದ ಪುರಾತನ ಶಿವಲಿಂಗವನ್ನು ಶಿವಪಾರ್ವತಿ ಕಲ್ಯಾಣ ಮಂಟಪ ಟ್ರಸ್ಟ್‌ನವರು ಸ್ಥಳಾಂತರಿಸಿ, ಪುರ ಪ್ರವೇಶದ ಆರಂಭದಲ್ಲಿಯೇ ಇರುವ ಎರಡೂವರೆ ಎಕರೆ ವಿಶಾಲ ಜಾಗದಲ್ಲಿ ಸಿಮೆಂಟ್ ಇಟ್ಟಿಗೆಯಿಂದ ನಿರ್ಮಿಸಿರುವ ಗಟ್ಟಿಮುಟ್ಟಾದ ಭವ್ಯ ಹಾಗೂ ಆಕರ್ಷಕವಾದ ವರ್ಣಮಯ ದೇಗುಲದಲ್ಲಿ ಹಳೆಯ ಶಿವಲಿಂಗವನ್ನೇ ಶಾಸ್ತ್ರೋಕ್ತವಾಗಿ ಮರು ಪ್ರತಿಷ್ಠಾಪಿಸಿದ್ದಾರೆ.
ಭವ್ಯ, ಸುಸಜ್ಜಿತವಾದ ಆರ್.ಸಿ.ಸಿ. ಛಾವಣಿಯ ದೇವಾಲಯದ ಮೇಲೆ ಧ್ಯಾನಾರೂಢನಾದ 20 ಅಡಿ ಎತ್ತರದ ಶಿವನ ಮೂರ್ತಿಯನ್ನೇ ಸ್ಥಾಪಿಸಲಾಗಿದೆ. ಭಕ್ತರಿಗೆ ಅನುಕೂಲವಾಗಲೆಂದು ಸುಸಜ್ಜಿತವಾದ ಕಲ್ಯಾಣ ಮಂಟಪ ಹಾಗೂ ದೇವಾಲಯದ ಸುತ್ತಲೂ ಹಸಿರು ಹುಲ್ಲು ಹಾಸಿನ ಉದ್ಯಾನ, ನೀರಿನ ಕಾರಂಜಿ ನಿರ್ಮಿಸಲಾಗಿದೆ.
ದೇವಾಲಯದ ಸುತ್ತಲೂ ತಲಾ 10 ಅಡಿ ಎತ್ತರವಿರುವ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಬಾಳೆಯ ಕಂದಿನ ಅಲಂಕಾರದಲ್ಲಿ ನವದುರ್ಗೆಯರನ್ನು ನೋಡಲು ನೂರು ಕಣ್ಣೂ ಸಾಲದು.
ಇಲ್ಲಿಯೂ ಎಲ್ಲ ದೇವಾಲಯಗಳಂತೆ ಪ್ರಥಮ ವಂದಿತ ವಿಘ್ನ ನಿವಾರಕ ಗಣಪನಿದ್ದಾನೆ. ದೇವಾಲಯ ಪ್ರವೇಶಿಸಿದೊಡನೆಯೇ ಪಾರ್ವತಿ ಪುತ್ರ ಗಣಪನ ದರ್ಶನವಾಗುತ್ತದೆ. ನಂತರ ಭಕ್ತರನ್ನು ಹರಸಲೆಂದೇ ನಿಂತಿರುವ ಆಳೆತ್ತರದ ಎದುರು ಮುಖದ ಆಂಜನೇಯ ಸ್ವಾಮಿಯ ದರ್ಶನ ಪಡೆಯುತ್ತಾರೆ. ಇಲ್ಲಿ ಮತ್ತೊಂದು ವಿಶೇಷವಿದೆ ನವಗ್ರಹ ಪ್ರತಿಷ್ಠಾಪನೆ ಮಾಡುವಂತೆ ಇಲ್ಲಿ ನವದುರ್ಗೆಯರನ್ನು ಒಂದೇ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ೯ ಬಾರಿ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದು ಊರಿನ ಜನರ ನಂಬಿಕೆ. ಇದರ ಪಕ್ಕದಲ್ಲಿಯೇ ನಾಗರಕಲ್ಲು ಹಾಗೂ ಅಶ್ವತ್ಥನಾರಾಯಣಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ.
ಎಲ್ಲ ದೇವಾಲಯಗಳಂತೆಯೇ ಇಲ್ಲಿಯೂ ನವಗ್ರಹ ಮಂಟಪವಿದೆ. ಪ್ರಧಾನ ದೇವಾಲಯದ ಗರ್ಭಗೃಹದಲ್ಲಿ ನಾಗಭೂಷಣನಾದ ಸರ್ವಾಲಂಕೃತ ಪರಶಿವನ ದರ್ಶನ ಮನೋಹರ. ಪ್ರತಿವರ್ಷ ಕಾರ್ತೀಕ ಮಾಸದ ಕೊನೆಯ ಸೋಮವಾರ ಲಕ್ಷದೀಪೋತ್ಸವ ಜರುಗತ್ತದೆ.
ಈ ಊರಿನಿಂದ ಬೇವೂರು ಮಂಡ್ಯಕ್ಕೆ ಹೋಗುವ ಮಾರ್ಗದಲ್ಲಿ ಪುಟ್ಟದೊಂದು ಮಂಟಪದಾಕಾರದ ಗುಡಿಯಿದೆ, ಇಲ್ಲಿರುವ ದೇವತೆಗೆ ಕೊಂಡಕ್ಬಿದ್ದಮ್ಮ ಎಂದು ಕರೆಯುತ್ತಾರೆ. ಸನಿಹದಲ್ಲೇ ಗ್ರಾಮದೇವತೆ ಪಟಾಲಮ್ಮನ ಗುಡಿಯಿದೆ. ರಕ್ಕಸನ ರುಂಡವನ್ನು ಕೈಯಲ್ಲಿ ಹಿಡಿದ, ಕೋರೆಹಲ್ಲುಗಳುಳ್ಳ ಚತುರ್ಭುಜೆ ತಾಯಿ ಪುರಜನರನ್ನು ಇಲ್ಲಿ ರಕ್ಷಿಸಲು ನೆಲೆಸಿದ್ದಾಳೆ.
ಶಿವ ಪಾರ್ವತಿ ಕಲ್ಯಾಣಮಂಟಪ ಟ್ರಸ್ಟ್ ಅಧ್ಯಕ್ಷರಾಗಿರುವ ಸಮಾಜ ಸೇವಕ ಸಿ. ದೇವರಾಜ್ ದೇವಾಲಯದ ಜೀರ್ಣೋದ್ಧಾರಕ್ಕೆ ಮುಖ್ಯ ಕಾರಣರಾಗಿದ್ದಾರೆ.