Apr 10, 2009

ಬಸವಣ್ಣನ ವಚನಗಳ ಭಾವಾರ್ಥ

ಬಸವಣ್ಣನ ವಚನಗಳ ಭಾವಾರ್ಥ

ನೆಲನೊಂದೇ ಹೊಲಗೇರಿ ಶಿವಾಲಯಕ್ಕೆ
ಜಲವೊಂದೇ ಶೌಚಾ ಚಮನಕ್ಕೆ !
ಕುಲವೊಂದೇ ತನ್ನ ತಾನರಿದವಂಗೆ !
ಫಲವೊಂದೇ ಫಡದರ್ಶನ ಮುಕ್ತಿಗೆ
ನಬಿಲವೊಂದೇ ಕೂಡಲ ಸಂಗಮದೇವ ನಿಮ್ಮನರಿದವಂಗೆ

- ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆ ಜಾತಿಯಿಂದಲ್ಲ. ನೆಲ ಒಂದೇ ಅಲ್ಲಿ ಶಿವಾಲಯಕಟ್ಟಿದರೆ ಪುಣ್ಯಕ್ಷೇತ್ರ, ದುರಾಚಾರಿಗಳ ತಾಣವಾದರೆ ಅದು ಹೊಲಗೇರಿ. ನೀರು ಒಂದೇ ಅದು ಪೂಜೆಗೆ ಬಳಸಿದರೆ ತೀರ್ಥ, ಶೌಚಕ್ಕೆ ಬಳಸಿದರೆ ಕೊಳಕು ನೀರು. ಅಂತೆಯೇ ಕಾರ್ಯದಿಂದ ಮಾನವ ಕುಲವೊಂದೆ ಉತ್ತಮ. ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧಮ ಆಯಾಜಾತಿಗಳ ಗುರಿ ಒಂದೇ ಅದುವೇ ಮುಕ್ತಿ ಮೇಲು ಕೀಳೆಂದು ಜಾತಿಯನ್ನು ವಿಂಗಡಿಸುವದನ್ನು ಈ ವಚನದಲ್ಲಿ ಖಂಡಿಸಿದ್ದಾರೆ.
-------------------

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿದ ಮೇಯಿತ್ತು!
ಕೊಂದಹರೆಂಬುದನರಿಯದೆ
ಬೆಂದೊಡಲ ಹೊರೆವುತ್ತಲಿದೆ?
ಅದಂದೆ ಹುಟ್ಟಿತ್ತು ಅದಂದೇ ಹೊಂದಿತ್ತು!!
ಕೊಂದವರುಳಿವರೆ ಕೂಡಲ ಸಂಗಮದೇವ

-ಬಲಿಕೊಡಲೆಂದು ತಂದ ಕುರಿಯು ತನಗೆ ಮುಂದೆ ಸಾವಿದೆ ಎಂದರಿಯದೆ ಬಾಗಿಲಿಗೆ ಕಟ್ಟಿದ ತೋರಣದ ಹಸಿರೆಲೆಗಳನ್ನು ತಿನ್ನುತ್ತಿರುವುದು. ತನ್ನೆದುರಲ್ಲಿ ತನ್ನ ಕೊರಳನ್ನು ಕತ್ತರಿಸಲು ಕತ್ತಿಮಸೆಯುತ್ತಿರುವರು ಎಂಬ ಅರಿವು ಅದಕ್ಕಿಲ್ಲ. ಈ ಮಾನವನಾದರೂ ಬಲಿ ಕುರಿಯಂತೆ, ಸಾವು ಈಗಲೋ ಆಗಲೋ ಬರಲು ಸಿದ್ಧವಾಗಿದ್ದರೂ, ಸುಖಕ್ಕೆ ಬಲಿಗಳಂತಹ ಹೀನ ಕಾರ್ಯಗಳನ್ನೆಸಗುತ್ತಿರುವನು.
-------------------

ದಯವಿಲ್ಲದ ಧರ್ಮವದೇವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ!

-ಎಲ್ಲಾ ಧರ್ಮಗಳು ಪ್ರತಿಪಾದಿಸುವದು ದಯೆ, ದಯವೇ ಧರ್ಮದ ಮೂಲಾಂಶ, ಸಮಷ್ಟಿ ಹಿತವನ್ನು ಸಾಧಿಸಬೇಕಾದರೆ ದಯವಿರಬೇಕು ಸಕಲ ಪ್ರಾಣಿಗಳಲ್ಲಿ. ದಯವೇ ಇಲ್ಲವಲ್ಲ ಅಲ್ಲಿ ದ್ವೇಷ ರಾಗಗಳ ವಿಜೃಂಭಿಸಿ ಸರ್ವನಾಶಕ್ಕೆ ಕಾರಣವಾಗುತ್ತದೆ. ಆಯಾ ಧರ್ಮ ಸ್ಥಾಪಕರು, ಪ್ರವರ್ತಕರು ದಯೆಗೆ ಪ್ರಥಮಸ್ಥಾನ ಕೊಟ್ಟಿದ್ದಲ್ಲದೆ ದಯವೇ ಧರ್ಮದ ಮೂಲಾಂಶವಾಗಿಸಿದ್ದಾರೆ.
-------------------

ಕೊಲುವನೇ ಮಾದಿಗ!
ಹೊಲಸ ತಿಂಬುವನೇ ಹೊಲೆಯ
ಕುಲವೇನೋ ಆವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲ ಸಂಗನ ಶರಣರೇ ಕುಲಜರು!

-ಮಾದಿಗ-ಹೊಲೆಯ ಎಂದು ಊರ ಹೊರಗಿರುವವರನ್ನು ಕರೆಯುವರು. ಆದರೆ ಮಾದಿಗ ಹೊಲೆಯ ಊರೊಳಗಿಲ್ಲವೇ? ಯಜ್ಞಯಾಗಾದಿಗಳ ನೆಪದಲ್ಲಿ ಪಶುಗಳನ್ನು ಆಹುತಿ ಕೊಟ್ಟು ಕೊಂದು ತಿನ್ನುವರು ಹೊಲೆಯರಲ್ಲವೇ? ಮಾದಿಗರಲ್ಲವೇ? ಯಾವನು ಹುಟ್ಟಿದ ಕುಲ ಏನಾದರೂ ಆರಿಗಲಿ, ಯಾರು ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಹಾರೈಸುವನೋ ಅವನೇ ಕುಲಜನು.
-------------------

ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ!!

-ಕಳ್ಳತನ ಮಾಡಬೇಡ,ಕೊಲ್ಲಬೇಡ,ಸಿಟ್ಟುಮಾಡಬೇಡ, ಪರರ ದೂಷಣೆ ಮಾಡಬೇಡ, ಆತ್ಮ ಪ್ರಶಂಶೆಯಲ್ಲಿ ತೊಡಗಬೇಡ - ಇವುಗಳನ್ನು ಪಾಲಿಸುತ್ತ ಬಂದಲ್ಲಿ ಅಂತರಂಗವೂ-ಬಹಿರಂಗವೂ ಶುದ್ಧಿಯಾಗಿರುವುದು, ಇದೇ ಮಾರ್ಗ ದೇವರನೊಲಿಸುಕೊಳ್ಳುವದು. ಆತ್ಮೋದ್ಧಾರಕ್ಕೆ ಆತ್ಮಶುದ್ಧಿಗೆ ಇದೇ ಸರಳ ಮಾರ್ಗ ಎಂಬಂತೆ ಬಸವಣ್ಣ ತಿಳಿಸಿದ್ದಾರೆ.

ಕನ್ನಡ ರತ್ನಗಳು




















ಕನ್ನಡದ ಜನಪದ ಮಹಾಕಾವ್ಯಗಳು

ಕನ್ನಡದ ಜನಪದ ಮಹಾಕಾವ್ಯಗಳು
          ಸಮಾಜದಲ್ಲಿ ನಡೆಯುವ ಸಾಂಸ್ಕೃತಿಕ ಸಂಗತಿಗಳನ್ನು ಮುನ್ನೆಲೆಗೆ ತರುವ ಅಥವಾ ಅಂಚಿಗೆ ಸರಿಸಿಬಿಡುವ ಪ್ರಕ್ರಿಯೆಯು ಅಂತಹ ಸಮಾಜದಲ್ಲಿ ನಡೆಯುತ್ತಿರುವ ಸಾಮಾಜಿಕ ಚಲನವಲನಗಳ ನೇರ ಪರಿಣಾಮ. ಆ ಸಂಗತಿಗಳ ಕಲಾತ್ಮಕ ಮೌಲ್ಯಕ್ಕೂ ಈ ಬಗೆಯ ಅತಿಮಹತ್ವ, ನಿರ್ಲಕ್ಷ್ಯಗಳಿಗೂ ನಿಕಟವಾದ ಸಂಬಂಧವಿರುವುದಿಲ್ಲ. ಕಲಾತ್ಮಕ ಮೌಲ್ಯ ಯಾವುದು, ಎನ್ನುವ ತಿಳಿವಳಿಕೆಯೂ ಬದಲಾಗುತ್ತಿರುತ್ತದೆ. ಈ ಮಾತು ಕರ್ನಾಟಕದ ಜನಪದ ಮಹಾಕಾವ್ಯಗಳ ವಿಷಯದಲ್ಲಿ ನೂರಕ್ಕೆ ನೂರರಷ್ಟು ನಿಜ. ಸಾಹಿತ್ಯ ವಿಮರ್ಶೆಯ ಪ್ರಧಾನಧಾರೆಯು ಎಷ್ಟೋ ಶತಮಾನಗಳ ಕಾಲ ಅವುಗಳ ಅಸ್ತಿತ್ವವನ್ನು ಗುರುತಿಸಲೂ ಇಲ್ಲ, ಅವುಗಳನ್ನೂ ಮೆಚ್ಚಿಕೊಳ್ಳಲೂ ಇಲ್ಲ. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಪ್ರಾರಂಭವಾದ ಜನಪದ ಸಾಹಿತ್ಯದ ಸಂಕಲನ ಕಾರ್ಯವು, ಭೂಮಾಲಿಕ ವರ್ಗಗಳಲ್ಲಿ ಪ್ರಚಲಿತವಾಗಿದ್ದ ಜನಪದಗೀತೆಗಳು ಮತ್ತು ಲಾವಣಿಗಳಿಗೆ ಸೀಮಿತವಾಗಿದ್ದವು. ಎಪ್ಪತ್ತರ ದಶಕದ ಮೊದಲ ವರ್ಷಗಳಲ್ಲಿ ಪ್ರಕಟವಾದ ಮಲೆ ಮಾದೇಶ್ವರ ಕಾವ್ಯ ಮತ್ತು ಮಂಟೇಸ್ವಾಮಿ ಕಾವ್ಯಗಳು ಕೂಡ ಸಾಹಿತ್ಯಕ ಯಾಜಮಾನ್ಯದ ಧೋರಣೆಗಳಲ್ಲಿ ಹೆಚ್ಚಿನ ಬದಲಾವಣೆಯನ್ನು ತರಲಿಲ್ಲ. ಮುಂದಿನ ಇಪ್ಪತ್ತು ವರ್ಷಗಳ ಕಾಲ ಅವುಗಳನ್ನು ಮಾನವಶಾಸ್ತ್ರದ ಕುತೂಹಲವನ್ನು ತಣಿಸುವ ಸಾಮಗ್ರಿಯೆಂದು ಬಗೆಯಲಾಯಿತು. ಅವು ಜಾಣಪದ ಅಧ್ಯಯನಗಳ ವ್ಯಾಪ್ತಿಯಿಂದ ಹೊರಗೆ ಬರಲಿಲ್ಲ. ಈ ಮೌಖಿಕ ಮಹಾಕಾವ್ಯಗಳನ್ನು ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟ ಜಾತಿ/ಸಮುದಾಯಗಳವರು ಹಾಡುತ್ತಿದ್ದರು. ಅವು ಅನುಭವಿಸಿದ ನಿರ್ಲಕ್ಷ್ಯಕ್ಕೆ ಈ ಸಂಗತಿಯೂ ಕಾರಣ. ಫಿನ್ ಲ್ಯಾಂಡಿನ ಮೌಖಿಕ ಮಹಾಕಾವ್ಯವಾದ ಕಾಲೇವಾಲಾವನ್ನು ಅಧ್ಯಯನ ಮಾಡುವ ಅವಕಾಶ ಸಿಕ್ಕಿದ್ದು ಕೂಡ ಮಹತ್ವದ ಬದಲಾವಣೆಗೆ ಕಾರಣವಾಗಿರಬಹುದು.
          ಆದರೆ, ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ-ರಾಜಕೀಯ ಬದಲಾವಣೆಗಳು, ಅಕಡೆಮಿಕ್ ಅಧ್ಯಯನದ ಸ್ವರೂಪ ಮತ್ತು ಆಯ್ಕೆಗಳನ್ನು ಸಂಪೂರ್ಣವಾಗಿ ಪರಿವರ್ತಿಸಿವೆ. ಈಗ ಜಾನಪದ ಮಹಾಕಾವ್ಯಗಳನ್ನು ಇದುವರೆಗೆ ಮನ್ನಣೆ ಪಡೆದಿದ್ದ ಶ್ರೇಷ್ಠ ಸಾಹಿತ್ಯಕೃತಿಗಳಿಗೆ ಸರಿಸಮನಾಗಿ ಪರಿಗಣಿಸಲಾಗುತ್ತಿದೆ. ಸಂಸ್ಕೃತಿವಿಮರ್ಶೆಯ ದಿಕ್ಕಿನಲ್ಲಿ ಚಲಿಸಸುತ್ತಿರುವ ವಿಮರ್ಶಕರಿಗೂ ಇವು ಅಧ್ಯಯನದ ಅಮೂಲ್ಯ ಆಕರಗಳಾಗಿ ಕಂಡಿವೆ. ಈಗ ಸಾಹಿತ್ಯವೆಂಬ ಕಲೆಯನ್ನು ಕುರಿತ ವಿಚಾರಗಳು ಬಹಳ ವ್ಯಾಪಕವಾದ ಹಿನ್ನೆಲೆಯನ್ನು ಹೊಂದಿವೆ. ಪ್ರಮಾಣ/ಶಿಷ್ಟ ಭಾಷೆಯ ಚೌಕಟ್ಟುಗಳನ್ನು ಮೀರುವುದು ಕೂಡ ಗುಣವೇ ಇರಬಹುದೆಂಬ ನಿಲುವು ಈಗ ಮಾನ್ಯವಾಗಿದೆ.
          ಜನಪದ ಮಹಾಕಾವ್ಯಗಳು ಮೌಖಿಕವಾಗಿರುವುದರಿಂದ, ಅವುಗಳನ್ನು ಲಿಖಿತ ರೂಪದಲ್ಲಿ ಪ್ರಕಟಿಸಿದಾಗ ಕೆಲವು ಪರಿಮಿತಿಗಳು ಏರ್ಪಡುತ್ತವೆ. ಅವುಗಳ ಚಲನಶೀಲಗುಣವು ಇಲ್ಲವಾಗುತ್ತದೆ. ಅಂತೆಯೇ ಗೇಯತೆಯೂ ಕೂಡ ಊಹೆಯ ವಸ್ತುವಾಗಿಬಿಡುತ್ತದೆ. ಈ ಕಾವ್ಯಗಳ ಸಂವಹನ ಮತ್ತು ಸಂರಕ್ಷಣದ ಕೆಲಸದಲ್ಲಿ ಹಾಡುಗಾರರು-ನಿರೂಪಕರು ಮುಖ್ಯವಾದ ಪಾತ್ರ ವಹಿಸುತ್ತಾರೆ. ಅವರಿಗೆ ತಾವು ನಿರೂಪಿಸುತ್ತಿರುವ ಕಥೆಯ ಸ್ಥೂಲವಾದ ರೂಪುರೇಷೆಗಳು ತಿಳಿದಿರುತ್ತವೆ. ಹಾಗೆಯೇ ಯಾವುದೇ ಸಂದರ್ಭದಲ್ಲಿ ಬಳಸಬಹುದಾದ ಕೆಲವು ಸೂತ್ರರೂಪದ ವಿನ್ಯಾಸಗಳು(ಫಾರ್ಮುಲಾಯಿಕ್ ಪ್ಯಾಟ್ರನ್ಸ್) ಗೊತ್ತಿರುತ್ತವೆ. ಆದ್ದರಿಂದಲೇ ಅವರು ನೀಡುವ ಪ್ರತಿಯೊಂದು ಪ್ರದರ್ಶನವೂ(ಪರ್ಫಾಮನ್ಸ್) ಹೊಸ ಪಠ್ಯವೊಂದಕ್ಕೆ ಜನ್ಮ ಕೊಡುತ್ತದೆ. ಅಲ್ಲದೆ ಪ್ರತಿಯೊಬ್ಬ ಗಾಯಕನೂ ತಾನು ಹಾಡುತ್ತಿರುವ ಕಾವ್ಯದ ತನ್ನದೇ ಆದ ಆವೃತ್ತಿಯನ್ನು ಹೊಂದಿರುತ್ತಾನೆ. ಅದು ಅವನಿಗೆ ಗುರುಪರಂಪರೆಯಿಂದ ಹರಿದು ಬಂದಿರುತ್ತದೆ.ಅವರು ಅದನ್ನು ಹಾಡುವ ಧಾರ್ಮಿಕ ಮತ್ತು ಆಚರಣಾತ್ಮಕ ಸಂದರ್ಭಗಳು ಆಯಾ ಪಠ್ಯದ ಸ್ವರೂಪವನ್ನು ನಿರ್ಧರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಬಗೆಯ ಚಲನಶೀಲತೆ ಮತ್ತು ಪ್ರತಿಯೊಂದು ಪೀಳಿಗೆಯ ಗಾಯಕರು ಹೊಸದಾಗಿ ಸೇರಿಸುವ ವಿವರಗಳು, ಆ ಕಾವ್ಯದ ಐತಿಹಾಸಿಕತೆಯನ್ನು ಕಂಡುಕೊಳ್ಳುವ ಕೆಲಸದಲ್ಲಿ ಕೊಂಚ ಅಡ್ಡಿಯಾಗುತ್ತವೆ.
          ಅನೇಕ ಜನಪದ ಕಾವ್ಯಗಳ ಅಸ್ತಿತ್ವವಿರುವುದು ಒಂದು ನಿರ್ದಿಷ್ಟ ಸಮುದಾಯದ ನಂಬಿಕೆಗಳು ಮತ್ತು ಇತಿಹಾಸದ ಚೌಕಟ್ಟಿನಲ್ಲಿ. ಅವು ಆ ಸಮುದಾಯದ ಸಂಸ್ಕೃತಿ, ಪುರಾಣ ಮತ್ತು ಅಲಿಖಿತ ಇತಿಹಾಸಗಳ ಬೃಹತ್ ಭಂಡಾರವಾಗಿರುತ್ತವೆ. ಆದ್ದರಿಂದ ಅವು ಅವರ ಅನುದಿನದ ಚಟುವಟಿಕೆಗಳನ್ನು ಧೋರಣೆಗಳನ್ನು ನಿರ್ಧರಿಸುವ ಮಾರ್ಗದರ್ಶಿಗಳಾಗಿರುತ್ತವೆ. ಆಗ ಅವುಗಳ ಸಾಹಿತ್ಯಕ ಮೌಲ್ಯವು ಕೊಂಚ ಬದಿಗೆ ಸರಿಯುತ್ತದೆ. ಈ ಕಾವ್ಯಗಳನ್ನು ಅಂತಹ ಚೌಕಟ್ಟಿನಿಂದ ಬೇರ್ಪಡಿಸಿ, ಇತರ ಸಾಹಿತ್ಯಕೃತಿಗಳ ಸಾಲಿನಲ್ಲಿ ಪರಿಶೀಲಿಸುವುದು ಅತ್ಯಗತ್ಯ. ಿವುಗಳನ್ನು ಹೀಗೆ ಸೆಕ್ಯುಲರ್ ಆಗಿ ಮಾರ್ಪಡಿಸುವುದರ ಪರಿಣಾಮ ಮತ್ತು ಪ್ರಯೋಜನಗಳನ್ನು ಕುರಿತು ವಿವರವಾಗಿ ಯೋಚಿಸಬೇಕಾಗಿದೆ.
          ಮಲೆ ಮಾದೇಶ್ವರ ಕಾವ್ಯ ಮತ್ತುಮಂಟೇಸ್ವಾಮಿ ಕಾವ್ಯಗಳು, ಕರ್ನಾಟಕದ ಮುಖ್ಯವಾದ ಜನಪದ ಮಹಾಕಾವ್ಯಗಳು. ಚಾಮರಾಜನಗರ ಜಿಲ್ಲೆಯ ಮಲೆಮಾದೇಶ್ವರ ಬೆಟ್ಟದಲ್ಲಿ ಮಾದೇಶ್ವರನ ದೇವಾಲಯವಿದೆ. ಅಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಸಾವಿರಾರು ಜನ ಸೇರುತ್ತಾರೆ. ಈ ಕಾವ್ಯವನ್ನು ಹಾಡುವ ವೃತ್ತಿಗಾಯಕರ ಸಮುದಾಯವೇ ಇದೆ. ಅವರು ಹಲವು ಸನ್ನಿವೇಶಗಳಲ್ಲಿ ಇಂತಹ ಹಾಡುವಿಕೆಯಲ್ಲಿ ತೊಡಗುತ್ತಾರೆ. ಈ ಮಾತು ಮಂಟೇಸ್ವಾಮಿಯವರ ವಿಷಯದಲ್ಲೂ ನಿಜ. ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳಲ್ಲಿ ಈ ಕಾವ್ಯಗಳು ಇಂದಿಗೂ ಅನೇಕ ಸಮುದಾಯಗಳಲ್ಲಿ ಜೀವಂತವಾಗಿವೆ. ಎರಡೂ ಕಾವ್ಯಗಳು ದಲಿತರು ಹಾಗೂ ಮೇಲುವರ್ಗದವರ ನಡುವಿನ ಮುಖಾಮುಖಿ ಮತ್ತು ಸಂಘರ್ಷಗಳನ್ನು ಚಿತ್ರಿಸುತ್ತವೆ. ಬಸವಣ್ಣ ಮತ್ತು ಮಂಟೇಸ್ವಾಮಿಯವರ ನಡುವಿನ ಮುಖಾಮುಖಿಯು ಶತಮಾನಗಳ ಚರಿತ್ರೆಯನ್ನು ಹಿಡಿಯುವ ಪ್ರಬಲವಾದ ರೂಪಕ. ಇಂತಹ ಮಹಾಕಾವ್ಯಗಳು, ಶತಮಾನಗಳಿಂದ ನಾಗರಿಕತೆಯು ರೂಪುಗೊಂಡಿರುವ ಬಗೆಯನ್ನು, ಮಹಾನ್ ಕಥನಗಳಲ್ಲಿ ದಾಖಲೆ ಮಾಡುತ್ತವೆ. ಅನೇಕ ಕಾವ್ಯಗಳು ವಿಭಿನ್ನ ಸಮುದಾಯಗಳ ಅಸ್ಮಿತೆಯ ಸಾಕ್ಷಿಗಳಾಗುತ್ತವೆ. ಹಾಲುಮತದ ಮಹಾಕಾವ್ಯ ಮತ್ತು ಮೈಲಾರಲಿಂಗನ ಕಾವ್ಯಗಳು ಅನುಕ್ರಮವಾಗಿ ಕುರುಬರು ಮತ್ತು ಗೊಲ್ಲರ ಸಮುದಾಯಗಳ ಜೀವನಕ್ರಮ ಮತ್ತು ಇತಿಹಾಸದ ಸುತ್ತ ರೂಪಿತವಾಗಿವೆ. ಕೃಷ್ಣಗೊಲ್ಲರ ಕಾವ್ಯ, ಜುಂಜಪ್ಪನ ಕಾವ್ಯ, ಎಲ್ಲಮ್ಮನ ಕಾವ್ಯ, ಕುಮಾರರಾಮನ ಕಾವ್ಯ ಮತ್ತು ಕರಾವಳಿ ಕರ್ನಾಟಕದ ಸಿರಿ ಮಹಾಕಾವ್ಯಗಳು ಕರ್ನಾಟಕದ ಪ್ರಮುಖ ಜನಪದ ಮಹಾಕಾವ್ಯಗಳು. ತುಳು ಭಾಷೆಯಲ್ಲಿ ರಚಿತವಾಗಿರುವ ಪಾಡ್ದನಗಳನ್ನು ವಿಶೇಷವಾಗಿ ಹೆಸರಿಸಬೇಕು. ಸಿರಿ ಮಹಾಕಾವ್ಯವೂ ಒಂದು ಪಾಡ್ದನವೇ. ಈ ಕಾವ್ಯಗಳನ್ನು ಕನ್ನಡ ಸಾಹಿತ್ಯ ಪರಂಪರೆಯ ಪ್ರಧಾನ ಧಾರೆಯೊಳಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಅದರಿಂದ ಕನ್ನಡ ಸಾಹಿತ್ಯವು ಇನ್ನಷ್ಟು ಶ್ರೀಮಂತವಾಗುತ್ತದೆ. 

ಕನ್ನಡ ಅಂಕಿಗಳ ವಿಕಾಸ

ಕನ್ನಡ ಅಂಕಿಗಳ ವಿಕಾಸ

Apr 5, 2009

ಭಾರತೀಯ ಭಾಷೆಗಳ ಪಟ್ಟಿ


ಭಾರತೀಯ ಭಾಷೆಗಳ ಪಟ್ಟಿ:
  • ಹಿಂದಿ - ಭಾರತ ಸರ್ಕಾರದ ಅಧಿಕೃತ ಭಾಷೆ. ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು, ಚಂದಿಗಡ, ಬಿಹಾರ, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಝಾರ್ಕಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಂಚಲ ರಾಜ್ಯಗಳ ಅಧಿಕೃತ ಭಾಷೆ.
  • ಆಂಗ್ಲ - ಭಾರತ ಸರ್ಕಾರದ ಅಧಿಕೃತ ಭಾಷೆ
  • ಒಡಿಯಾ - ಒರಿಸ್ಸ ರಾಜ್ಯದ ಅಧಿಕೃತ ಭಾಷೆ
  • ಬೆಂಗಾಲಿ - ಪಶ್ಚಿಮ ಬಂಗಾಳ ರಾಜ್ಯದ ಅಧಿಕೃತ ಭಾಷೆ
  • ಕನ್ನಡ - ಕರ್ನಾಟಕ ರಾಜ್ಯದ ಅಧಿಕೃತ ಭಾಷೆ
  • ಮಲೆಯಾಳಂ - ಕೇರಳ ರಾಜ್ಯದ ಹಾಗು ಲಕ್ಷದ್ವೀಪ ಸಂಘ ರಾಜ್ಯ ಕ್ಷೇತ್ರದ ಅಧಿಕೃತ ಭಾಷೆ
  • ಮರಾಠಿ - ಮಹಾರಾಷ್ಟ್ರ ರಾಜ್ಯದ ಅಧಿಕೃತ ಭಾಷೆ
  • ಅಸ್ಸಾಮೀಸ್ - ಅಸ್ಸಾಂ ರಾಜ್ಯದ ಅಧಿಕೃತ ಭಾಷೆ
  • ಬೋಡೊ - ಅಸ್ಸಾಂ ರಾಜ್ಯದ ಅಧಿಕೃತ ಭಾಷೆ
  • ಪಂಜಾಬಿ - ಪಂಜಾಬ್ ರಾಜ್ಯದ ಅಧಿಕೃತ ಭಾಷೆ
  • ಕಾಷ್ಮೀರಿ - ಜಮ್ಮು ಮತ್ತು ಕಶ್ಮೀರ ರಾಜ್ಯದ ಅಧಿಕೃತ ಭಾಷೆ
  • ಡೋಗ್ರಿ - ಜಮ್ಮು ಮತ್ತು ಕಶ್ಮೀರ ರಾಜ್ಯದ ಅಧಿಕೃತ ಭಾಷೆ
  • ಗುಜರಾತಿ - ಗುಜರಾತ್ ರಾಜ್ಯದ ಅಧಿಕೃತ ಭಾಷೆ
  • ತಮಿಳು - ತಮಿಳುನಾಡು ಮತ್ತು ಪೊಂಡಿಚೆರಿ ರಾಜ್ಯದ ಅಧಿಕೃತ ಭಾಷೆ
  • ತೆಲುಗು - ಆಂಧ್ರ ಪ್ರದೇಶ ರಾಜ್ಯದ ಅಧಿಕೃತ ಭಾಷೆ
  • ಉರ್ದು - ಜಮ್ಮು ಮತ್ತು ಕಶ್ಮೀರ ರಾಜ್ಯದ ಅಧಿಕೃತ ಭಾಷೆ
  • ಕೊಂಕಣಿ - ಗೋವ ರಾಜ್ಯದ ಅಧಿಕೃತ ಭಾಷೆ
  • ಮೈಥಿಲಿ - ಬಿಹಾರ ರಾಜ್ಯದ ಅಧಿಕೃತ ಭಾಷೆ
  • ಮಣಿಪುರಿ - ಮಣಿಪುರ ರಾಜ್ಯದ ಅಧಿಕೃತ ಭಾಷೆ
  • ನೆಪಾಲಿ - ಸಿಕ್ಕಿಂ ರಾಜ್ಯದ ಅಧಿಕೃತ ಭಾಷೆ
  • ಸಂಸ್ಕೃತ - ಉತ್ತರಾಂಚಲ ರಾಜ್ಯದ ಅಧಿಕೃತ ಭಾಷೆ
  • ಸಿಂಧಿ
ಭಾರತದ ಇತರ ಭಾಷೆಗಳು:
  • ಕೊಡವ
  • ಭೋಜ್‌ಪುರೀ
  • ತುಳು

ಕೃಪೆ : ವಿಕಿಪೀಡಿಯ