Oct 23, 2017

ನಾಥ ಪಂಥ

ಮಾನವ ದೇಹದಲ್ಲಿ ಸುಪ್ತವಾಗಿರುವ ಕುಂಡಲಿನೀ ಶಕ್ತಿಯನ್ನು ಚಾಲನಗೊಳಿಸಿ ಎಂಟು ಚಕ್ರಗಳ ಮೂಲಕ ಒಯ್ದು, ಒಂಭತ್ತನೆಯ ಸಹಸ್ರಾರಚಕ್ರದಲ್ಲಿ ನಿಲ್ಲಿಸಿದಾಗ ಸಮಾಧಿಸ್ಥಿತಿಯುಂಟಾಗಿ ಪರಮಾರ್ಥದರ್ಶನವಾಗುತ್ತದೆ. ಈ ದರ್ಶನ ಪಡೆದಂಥ ವ್ಯಕ್ತಿ ಆನಂದಪೂರ್ಣನಾಗುತ್ತಾನೆ. ಲೋಕದ ಎಲ್ಲ ಬಂಧಕಸಾಮಗ್ರಿಯನ್ನು ಕೊಡವಿ ಹಾಕುವುದರಿಂದ ಅವಧೂತ ಎನಿಸುತ್ತಾನೆ. ಸಮಾಧಿಯ ತಿರುಳು ಸಮರಸಕರಣ. ಅಂದರೆ, ತಾನು, ಪರಮೇಶ್ವರ ಪ್ರಪಂಚ ಇತ್ಯಾದಿ ಭೇದಗಳಿಲ್ಲದೆ ಸರ್ವವೂ ಶಿವಮಯವಾಗುವುದು ಎಂದರ್ಥ. ಈ ವೈವಿಧ್ಯಮಯ ಪ್ರಪಂಚ ಶಕ್ತಿಯ ವಿಲಸಿತ. ಈ ಶಕ್ತಿಯಾದರೋ ಶಿವನಿಂದ ಬೇರೆಯಾದುದಲ್ಲ. ಸೃಷ್ಟಿಯಾಗಬೇಕಾದರೆ ಮೂಲಭೂತನಾದ ಶಿವನ ಶಕ್ತಿಯ ಮೂಲಕವೇ ಆಗಬೇಕು. ಶಿವಶಕ್ತಿಯರ ಪರಮಾರ್ಥ ಐಕ್ಯವನ್ನು ಅನುಭವಿಸುವಂಥ ನಾಥ-ಅವಸ್ಥೆಯಲ್ಲಿರುವುದೇ ಯೋಗದ ಗುರಿ. ಈ ಸ್ಥಿತಿಯನ್ನು ಪಡೆಯಲು ಕುಂಡಲಿನೀಚಾಲನ ಪ್ರಧಾನ ಸಹಾಯಕವಾದುದರಿಂದ ಅದನ್ನು ಪ್ರಚೋದಿಸುವ ಆಸನ, ಪ್ರಾಣಾಯಾಮಾದಿಗಳಿಗೆ ಈ ಪಂಥ ಆದ್ಯ ಗಮನ ನೀಡುತ್ತದೆ. ಈ ರೀತಿ ಹಠಯೋಗದ ಮೇಲೆ ಆಸ್ಥೆಯನ್ನು ಹೊಂದಿ ತಾಂತ್ರಿಕ ಪ್ರಕ್ರಿಯೆಗಳನ್ನು ಹೊಂದಿಸಿಕೊಂಡ ಈ ಮಾರ್ಗದ ಅನುಯಾಯಿಗಳು ಅವರದೇ ಆದ ಲಾಂಛನವನ್ನು ರೂಪಿಸಿಕೊಂಡಿದ್ದಾರೆ. ಭಸ್ಮಧಾರಣ, ಉಣ್ಣೆಯ ಜನಿವಾರ, ನಾದ (ಕೊಂಬು), ಮುದ್ರಾ (ಕಿವಿಯುಂಗರ) – ಇವು ಈ ಸಿದ್ಧಯೋಗಿಗಳನ್ನು ಇತರರಿಂದ ಬೇರ್ಪಡಿಸುತ್ತವೆ. ದೀಕ್ಷೆ ಪಡೆದ ಯೋಗಿಗಳ ಹೆಸರು ನಾಥ ಎಂಬುದರಲ್ಲಿ ಕೊನೆಯಾಗುತ್ತದೆ. ಮೂವತ್ತೆರಡು ಲಕ್ಷಣಗಳುಳ್ಳ ಶಿಷ್ಯ ಮೂವತ್ತಾರು ಲಕ್ಷಣಗಳುಳ್ಳ ಗುರುವಿನಲ್ಲಿ ದೀಕ್ಷೆ ಪಡೆಯುತ್ತಾನೆ. ಜ್ಞಾನ, ವಿವೇಕ, ನಿರಾಲಂಬ, ಸಂತೋಷ, ಶೀಲ, ಸಹಜ ಮತ್ತು ಶೂನ್ಯ – ಈ ಎಂಟು ಗುಣಗಳಲ್ಲಿ ನಾಲ್ಕು ನಾಲ್ಕು ವಿಭಾಗ ಮಾಡಿ ಮೂವತ್ತೆರಡು ಲಕ್ಷಣಗಳನ್ನು ಹೇಳಿದ್ದಾರೆ. ಒಬ್ಬ ಗುರು ಅನೇಕರಿಗೆ ದೀಕ್ಷೆ ಕೊಡುವುದನ್ನು ನಿಷೇಧಿಸಲಾಗಿದೆ. ಈ ಮಾರ್ಗಾನುಯಾಯಿಗಳನ್ನು ನಾಥಯೋಗಿಗಳು, ಸಿದ್ಧಯೋಗಿಗಳು ಅಥವಾ ಅವಧೂತರು ಎಂದು ಕರೆಯಲಾಗುತ್ತದೆ. ಜನಸಾಮಾನ್ಯರಲ್ಲಿ ಇವರನ್ನು ಕಾನ್​ಫಟಿ ಯೋಗಿಗಳು (ಕಿವಿ ಹರಿದವರು) ಎನ್ನಲಾಗುತ್ತದೆ. ಕಾಪಾಲಿಕ ಪಂಥ ಇವರೊಡನೆ ಸೋದರಸಂಬಂಧ ಹೊಂದಿದೆ.ನಾಥ ಪಂಥ – ಭಾರತದ ಒಂದು ಪ್ರಸಿದ್ಧ ಯೋಗಪಂಥ. ಗೋರಖ್​ನಾಥ ಈ ವಿಶಿಷ್ಟ ಪಂಥದ ಪ್ರವರ್ತಕ. ಆತನ ಗುರು ಹಾಗೂ ಆದಿನಾಥನ ಶಿಷ್ಯ ಮತ್ಸ್ಯೇಂದ್ರನಾಥ ಇದರ ಸ್ಥಾಪಕ ಎನ್ನಲಾಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿಗಳೆಂಬ ಅಷ್ಟಾಂಗಗಳಿಂದ ಕೂಡಿದ ಈ ಯೋಗಪಂಥಕ್ಕೆ ಬಹಳ ಪ್ರಾಚೀನ ಇತಿಹಾಸವಿದೆ. ಯಾವುದೊಂದು ದಾರ್ಶನಿಕ ಒಲವನ್ನೂ ಹೇರಿಕೊಳ್ಳದೆ, ಎಲ್ಲ ವಿಚಾರವೇತ್ತರೂ ಅನುಸರಿಸಬಹುದಾದ ಈ ಯೋಗಮಾರ್ಗದ ಅರಿವು ಗುರುವಿನ ನೆರವಿಲ್ಲದೆ ಸಾಧ್ಯವಿಲ್ಲ; ಗುರುವಿಗೂ ಭಗವಂತನಿಗೂ ಭೇದವಿಲ್ಲ. ಇದೇ ಈ ಮಾರ್ಗದಲ್ಲಿನ ಮುಖ್ಯ ಅಂಶ. ಈ ಪ್ರಕ್ರಿಯೆಯ ಜೊತೆಗೆ ಗುರು ಪರಮಾತ್ಮರ ಐಕ್ಯ. ಶಿಷ್ಯನ ನಡವಳಿಕೆ ಮೊದಲಾದ ಕೆಲವು ತಾಂತ್ರಿಕ ಅನುಷ್ಠಾನಗಳೂ ಸೇರಿ ಇದೊಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆದಿದೆ.
नाथ पंथ नहीं था सनातन धर्म का विरोधी
ಈ ಪಂಥ ಭಾರತದ ಎಲ್ಲೆಡೆಯಲ್ಲಿಯೂ ಪ್ರಚಾರದಲ್ಲಿರುವುದಕ್ಕೆ ಇದು ಸರ್ವಜನ ಸಾಧಾರಣವಾಗಿರುವುದೇ ಕಾರಣ. ಇದರ ಜನಪ್ರಿಯತೆಗೆ ಗೋರಖ್​ನಾಥನ ಬಗೆಗೆ ಹೊರಟಿರುವ ವಿವಿಧ ಜನಪದ ಕಥೆಗಳೇ ಸಾಕ್ಷಿ. 15ನೆಯ ಶತಮಾನದಲ್ಲಿ ಪ್ರಸಿದ್ಧನಾಗಿದ್ದ ಈತ ಕಬೀರನ ಸಮಕಾಲೀನ ಹಾಗೂ ವಿರೋಧಿಯಾಗಿದ್ದನೆಂದು ಉತ್ತರಭಾರತದಲ್ಲಿ ಪ್ರಚಲಿತವಾಗಿದೆ. 14ನೆಯ ಶತಮಾನದ ಕೊನೆಯಲ್ಲಿ ಗೋರಖ್​ನಾಥನ ಜೊತೆ ಶಿಷ್ಯನಾದ ಧರ್ಮನಾಥ ಕಚ್ಛ್ ಪ್ರದೇಶದಲ್ಲಿ ತನ್ನ ಪಂಥದ ತತ್ತ್ವಗಳನ್ನು ಪ್ರಚುರಪಡಿಸಿದನೆಂದು ಪಶ್ಚಿಮ ಭಾರತದಲ್ಲಿ ಹೇಳುತ್ತಾರೆ. ನೇಪಾಳದಲ್ಲಿಯೂ ಈತನ ಹೆಸರು ಏಳನೆಯ ಶತಮಾನದ ದೊರೆ ನರೇಂದ್ರದೇವನೊಡನೆ ಕೇಳಿಬರುತ್ತದೆ. ಇನ್ನೊಂದು ನೇಪಾಳೀ ಕಥೆಯ ಪ್ರಕಾರ ಗೋರಖ್​ನಾಥ ನೀರಿನ ಮೂಲಗಳನ್ನೆಲ್ಲ ಒತ್ತಟ್ಟಿಗೆ ಸೇರಿಸಿ ಅದರ ಮೇಲೆ ಕುಳಿತು ಹನ್ನೆರಡು ವರ್ಷಗಳ ಜಲಕ್ಷಾಮವನ್ನು ಉಂಟುಮಾಡಿದನಂತೆ. ಆ ನೀರನ್ನು ಹೇಗೆ ಬಿಡುಗಡೆ ಮಾಡಿದನೆಂಬುದರಲ್ಲಿ ಬೌದ್ಧ, ಬ್ರಾಹ್ಮಣ ಕಥೆಗಳು ಭಿನ್ನವಾಗಿವೆ. ಬಹುಶಃ ಇದು ಐತಿಹಾಸಿಕ ಘಟನೆಯೊಂದನ್ನು ಸೂಚಿಸಬಹುದು. ಜನಪದ ಕಥೆಗಳಲ್ಲಿ ಗೋರಖ್​ನಾಥನನ್ನು ಶಿವನೆಂದೇ ಪರಿಗಣಿಸಲಾಗಿದೆ. ಈಗಲೂ ಗೋರಖ್​ಪುರ್ ಜಿಲ್ಲೆಯ ಗೋರಖ್​ನಾಥ್ ಎಂಬಲ್ಲಿ ಈತನ ದೇವಾಲಯವಿದೆ. ನೇಪಾಳದಲ್ಲಿ ಈ ಪಂಥದ ಆದಿಪುರುಷ ಆದಿನಾಥನನ್ನು ಆರ್ಯ ಅವಲೋಕಿತೇಶ್ವರನೆಂದು ಗುರುತಿಸುತ್ತಾರೆ. ಗೋರಖ್​ನಾಥನೂ ಅವನ ಶಿಷ್ಯರೂ ಮೊದಲು ಬೌದ್ಧರಾಗಿದ್ದರೆಂತಲೂ ಅನಂತರ ಈಶ್ವರಭಕ್ತರಾದರೆಂತಲೂ ಟಿಬೆಟನ್ ಕಥೆಗಳು ಸಾರುತ್ತವೆ.
भेष बारह पंथ गोरख डिब्बी ट्रस्ट सभा ...
(ಕೃಪೆ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ)