Aug 25, 2016

ಶ್ರೀ ಕೃಷ್ಣ ಜನ್ಮಾಷ್ಟಮಿ

💐 ಶ್ರೀ ಕೃಷ್ಣ ಜನ್ಮಾಷ್ಟಮಿ💐

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

ಪುರಾಣ ಹಿನ್ನೆಲೆ
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಶ್ರಾವಣ ಮಾಸದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ 8ನೇ ಮಗನಾಗಿ ಜನಿಸಿದನು. ಮಥುರ (ಈಗಿನ ಉತ್ತರಪ್ರದೇಶದ ಮಥುರ ಜಿಲ್ಲೆ) ಯಾದವ ಕುಲದ ರಾಜಧಾನಿಯಾಗಿತ್ತು.

ಕಂಸ ತಂದೆ ಉಗ್ರಸೇನರನ್ನು ಬಂಧಿಸದಲ್ಲಿಟ್ಟು, ತಾನು ರಾಜನಾಗಿದ್ದನು. ನಂತರ ತನ್ನ ಪ್ರೀತಿಪಾತ್ರಳಾದ ತಂಗಿ ದೇವಕಿಗೆ ಮದುವೆ ಮಾಡುತ್ತಾನೆ. ಅಣ್ಣಕಂಸನು ದೇವಕಿ-ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ, ಅವನಿಗೆ ಒಂದು ಅಶರೀರವಾಣಿ ಕೇಳಿಸಿತು. ಅದರ ಪ್ರಕಾರ ದೇವಕಿಯ ಎಂಟನೇ ಮಗುವೂ ಕಂಸನ ವಧನವನ್ನು ಮಾಡುತ್ತದೆ ಎಂದು.

ಇದನ್ನು ಕೇಳಿದ ಕಂಸನು ದೇವಕಿಯನ್ನು ಆ ತಕ್ಷಣವೇ ಕೊಲ್ಲಲು ಹೊರಟನು. ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಯಲ್ಲಿ ಅರ್ಪಿಸುವುದು ಎಂದು ಹೇಳಿದನು. ಅವರನ್ನು ಬಂಧಿಸಿ ಅವರಿಗೆ ಹುಟ್ಟಿದ 7 ಮಕ್ಕಳನ್ನು ಕೊಂದನು. ಆದರೆ ವಸುದೇವನು 8ನೇ ಮಗು ಕೃಷ್ಣನನ್ನು ಕಂಸನಿಗೆ ತಿಳಿಯದ ಹಾಗೆ ಯಮುನಾ ದಾಟಿ ಗೋಕುಲಕ್ಕೆ ಕರೆದು ಕೊಂಡು ಹೋಗುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿಯಾಗುತ್ತಾಳೆ. ಕೃಷ್ಣ ಗೋಕುಲ ಹಾಗು ವೃಂದಾವನದಲ್ಲಿ ಬಲರಾಮನ ಜತೆ ಬೆಳೆದು, ಕೊನೆಗೆ ಮಥುರಾಗೆ ಬಂದು ಕಂಸನನ್ನು ಕೊಂದನು.

ಕೊಳಲು-ನವಿಲುಗರಿ-ಸುದರ್ಶನ ಚಕ್ರ
ಶ್ರೀಕೃಷ್ಣನು ಹೊಂದಿರುವ ಕೊಳಲು, ನವಿಲುಗರಿ ಶಾಂತಿ ಸಮಯದಲ್ಲಾದರೆ, ಧರ್ಮರಕ್ಷಣೆ ಸಮಯಲ್ಲಿ ಸುದರ್ಶನ ಚಕ್ರವಾಗಿದೆ.

ಎರಡು ದಿನಗಳ ಕಾಲ ಜನ್ಮಾಷ್ಟಮಿ
ಮಥುರೆಯ ಸೆರೆಮನೆಯಲ್ಲಿ ಶ್ರೀ ಕೃಷ್ಣನು ಹುಟ್ಟಿದ ದಿನ ಹಾಗೂ ಮಾರನೆಯ ದಿನ ಗೋಕುಲದಲ್ಲಿ ನ೦ದಗೋಪನ ಮನೆಯಲ್ಲಿ ಕ೦ಡ ಸ೦ಕೇತವಾಗಿ – ಹೀಗೆ ಎರಡು ದಿನಗಳ ಕಾಲ ಜನ್ಮಾಷ್ಟಮಿಯನ್ನು ಆಚರಿಸುವ ಸ೦ಪ್ರದಾಯವಿದೆ. ಅ೦ತೆಯೇ ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣ ದೇವಾಲಯಗಳಲ್ಲಿ ಶ್ರೀ ಕೃಷ್ಣನ ಜನನದ ಅ೦ಗವಾಗಿ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ ಹಾಗೂ ಧಾರ್ಮಿಕ ಪ್ರವಚನಗಳು ಜರುಗುತ್ತವೆ .

ಆಚರಣೆ ವಿಶೇಷತೆ
ಭಾರತದ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣನ ಜೀವಿತಕಾಲದಲ್ಲಿ ನಡೆದ ಘಟನೆಗಳನ್ನು ಬಿಂಬಿಸುವ ಪ್ರದರ್ಶನಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಸಣ್ಣ ಪುಟ್ಟ ಹುಡುಗರು ತಮ್ಮನ್ನು “ಗೋವಿಂದ” ಅಥವಾ “ಗೋಪಾಲ” ಎಂದು ಹೇಳಿಕೊಂಡು ರಸ್ತೆ ಬೀದಿಗಳಲ್ಲಿ ಓಡಾಡುತ್ತಾ ಮೊಸರು – ಹಾಲು ತುಂಬಿದ ಮಣ್ಣಿನ ಗಡಿಗೆಗಳನ್ನು ಒಡೆಯುವರು. ಈ ಮಣ್ಣಿನ ಗಡಿಗೆಗಳನ್ನು ಎತ್ತರದ ಕಟ್ಟಡಗಳ ನಡುವೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟಿರುವರು. ಹುಡುಗರು ಪಿರಮಿಡ್ ಆಕಾರಕ್ಕೆ ಒಬ್ಬರ ಮೇಲೊಬ್ಬರು ನಿಂತು ಬಾಲಕೃಷ್ಣನು ಮಡಿಕೆಯನ್ನು ಮುಟ್ಟಿದ ರೀತಿಯಲ್ಲಿ ಮುಟ್ಟಿ ಒಡೆಯುವರು. ಮಡಿಕೆಗೆ ಕಾಣಿಕೆ ಹಣವನ್ನು ಕಟ್ಟಿರಲಾಗಿರುವುದರಿಂದ ಗೋವಿಂದನಂತೆ ವೇಷ ಧರಿಸಿದ ಹುಡುಗರು ಮಡಿಕೆಯನ್ನು ಒಡೆದು, ಆ ಹಣವನ್ನು ತಮ್ಮಲ್ಲಿ ಹಂಚಿಕೊಳ್ಳುವರು. ಇನ್ನು ಕೆಲವೆಡೆಗಳಲ್ಲಿ ಕಂಬವೊಂದರ ತುದಿಗೆ ಮಡಿಕೆಯನ್ನು ಕಟ್ಟಿದ್ದು, ಆ ಕಂಬಕ್ಕೆ ಎಣ್ಣೆಯನ್ನು ಸವರಿರಲಾಗುತ್ತದೆ. ಹುಡುಗರು ಮಡಿಕೆಯನ್ನು ಮುಟ್ಟಲು ಯತ್ನಿಸುತ್ತಿರುವಾಗ ಆ ಕೆಲಸ ಕಷ್ಟಕರವಾಗಲೆಂದು ಪ್ರೇಕ್ಷಕರು ಅವರ ಮೇಲೆ ನೀರೆರಚುವರು. ಈ ವಿನೋದದಿಂದ ಎಲ್ಲರೂ ಸಂತೋಷಗೊಳ್ಳುವರು.

ಜನ್ಮಾಷ್ಟಮಿಯಂದು ಅನೇಕ ಆಧ್ಯಾತ್ಮಿಕ ಆಚರಣೆ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಜನ್ಮಾಷ್ಟಮಿ ದಿನದಂದು ಕೃಷ್ಣನ ಭಕ್ತರು 24 ಗಂಟೆಗಳ ಕಾಲ ಉಪವಾಸವನ್ನು ಮಾಡುತ್ತಾರೆ. ಜನ್ಮಾಷ್ಟಮಿ ಉಪವಾಸ ಮಾಡುವಾಗ ಕೆಲವರು ಹಣ್ಣನ್ನು ತಿಂದರೆ ಇನ್ನುಳಿದವರು ಏನನ್ನೂ ತಿನ್ನದೆ ಕೇವಲ ನೀರನ್ನು ಮಾತ್ರ ಕುಡಿದು ಮಧ್ಯರಾತ್ರಿಯವರೆಗೆ ಪ್ರಾರ್ಥನೆ ಮಾಡುತ್ತಿರುತ್ತಾರೆ. ಶ್ರೀ ಕೃಷ್ಣನಿಗೆ ಸಿಹಿತಿಂಡಿಯೆಂದರೆ ಬಹಳ ಪ್ರೀತಿಯೆಂದು ಬಗೆ ಬಗೆಯ ಸಿಹಿತಿನಿಸುಗಳನ್ನು ಸಿದ್ಧಮಾಡಿಕೊಳ್ಳುತ್ತಾರೆ. ಚಕ್ಕುಲಿ, ಕೋಡುಬಳೆ, ತೆಂಗೊಳಲು, ಕಡಲೆಕಾಳು ಉಸಲಿ , ಸಿಹಿ ಅವಲಕ್ಕಿ, ಮೊಸರವಲಕ್ಕಿ, ರವೆ ಉಂಡೆ, ಮುಂತಾದ ತಿಂಡಿಗಳಿಂದ ಕೃಷ್ಣನಿಗೆ ನೈವೇದ್ಯ ಮಾಡುತ್ತಾರೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಉತ್ಸವ:
ಉಡುಪಿಯಲ್ಲಿ ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ.

ವಿಟ್ಲಪಿಂಡಿ ಉತ್ಸವದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣ ಮೂರ್ತಿಯನ್ನು ಚಿನ್ನದ ರಥದಲ್ಲಿ, ಅನಂತೇಶ್ವರ ಹಾಗೂ ಚಂದ್ರ ಮೌಳೀಶ್ವರ ಉತ್ಸವ ಮೂರ್ತಿಗಳನ್ನು ರತ್ನದ ರಥದಲ್ಲಿರಿಸಿ ಮೆರವಣಿಗೆ ನಡೆಸಲಾಗುತ್ತದೆ. ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಮಡಕೆಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷಧಾರಿಗಳು ಒಡೆಯುತ್ತ ಮೆರವಣಿಗೆ ಸಾಗುತ್ತದೆ. ಉತ್ಸವ ಮುಗಿದ ಬಳಿಕ ಮಣ್ಣಿನ ಮೂರ್ತಿಗಳನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಈ ಸಂಭ್ರಮದ ವೈಭವದಲ್ಲಿ ನೂರಾರು ಹುಲಿವೇಷಧಾರಿಗಳು ನಗರದಲ್ಲಿ ಕಂಡು ಬರುತ್ತದೆ.ಭಕ್ತರಿಗೆ ಪ್ರಸಾದವಾಗಿ ನೀಡಲು ಹಾಗೂ ಕೃಷ್ಣನಿಗೆ ಅರ್ಪಿಸಲು ಚಕ್ಕುಲಿ ಉಂಡೆ ರೆಡಿ ಮಾಡಲಾಗುತ್ತದೆ.

Aug 4, 2016

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು.





 1. ಅಮೇರಿಕಾ.

    a. ಮೂಲಭೂತ ಹಕ್ಕುಗಳು.
    b. ಉಪರಾಷ್ಟ್ರಪತಿ.
    c. ನ್ಯಾಯಾಂಗ ವ್ಯವಸ್ಥೆ.


2. ರಷ್ಯಾ.

    a. ಮೂಲಭೂತ ಕರ್ತವ್ಯಗಳು.


3. ಬ್ರಿಟನ್.

    a. ಏಕ ನಾಗರಿಕತ್ವ.
    b. ಸಂಸದೀಯ ಸರ್ಕಾರ.


4. ಐರ್ಲೆಂಡ್(ಐರಿಷ್).

    a. ರಾಜ್ಯ ನಿರ್ದೇಶಕ ತತ್ವಗಳು.


5. ಜರ್ಮನಿ.

    a. ತುರ್ತು ಪರಿಸ್ಥಿತಿಗಳು.


6. ಕೆನಡಾ.

    a. ಒಕ್ಕೂಟ ಸರ್ಕಾರ.
    b. ಸಂಯುಕ್ತ ಸರ್ಕಾರ.


7. ಆಸ್ಟ್ರೇಲಿಯಾ.

    a. ಸಮವರ್ತಿ ಪಟ್ಟಿಗಳು.


8. ದಕ್ಷಿಣ ಆಫ್ರಿಕಾ.

    a. ಸಂವಿಧಾನದ ತಿದ್ದುಪಡಿಗಳು