Jul 14, 2015

ದೇಶ್ಯ-ಅನ್ಯದೇಶ್ಯಗಳು

ದೇಶ್ಯ-ಅನ್ಯದೇಶ್ಯಗಳು
ಯಾವುದೇ ದೇಶದ ಭಾಷೆಯಾಗಲಿ, ಅದು ತನ್ನ ಸುತ್ತಮುತ್ತಣ ಬೇರೆ ಬೇರೆ ಭಾಷೆಗಳ ಸಂಬಂಧವನ್ನು ಪಡೆಯತ್ತಾ, ಆಯಾ ಭಾಷೆಯ ಶಬ್ದಗಳನ್ನು ತನ್ನಲ್ಲಿ ಸೇರಿಸಿಕೊಂಡು ಬೆಳೆಯುತ್ತದೆ.  ನಾವಾಡುವ ಕನ್ನಡ ಭಾಷೆಯಲ್ಲೂ ಈ ತತ್ತ್ವಕ್ಕನುಗುಣವಾಗಿ ಅನೇಕ ಶಬ್ದಗಳು ಸೇರಿವೆ.  ನಮ್ಮ ಕನ್ನಡ ಶಬ್ದಗಳೂ ಕೂಡ ಬೇರೆ ಬೇರೆ ಭಾಷೆಗಳಲ್ಲೂ ಸೇರಿವೆ.  ಭಾಷೆಗಳು ಹೀಗೆ ಕೊಡುಕೊಳ್ಳುವ ವ್ಯವಹಾರದಿಂದ ಬೆಳೆಯುತ್ತವೆ.  ಬೇರೆ ಭಾಷೆಗಳಿಂದ ಹೀಗೆ ಶಬ್ದಗಳನ್ನು ಸೇರಿಸಿಕೊಂಡರೂ ತನ್ನ ಮೂಲ ಶಬ್ದಗಳನ್ನು ಮಾತ್ರ ಕೈಬಿಡಬಾರದು.  ಅವೂ ಇರಬೇಕು; ಪರಭಾಷಾ ಶಬ್ದಗಳೂ ಇರಬೇಕು.  ಆಗಲೆ ಭಾಷೆಯ ಸಂಪತ್ತು ಹೆಚ್ಚುವುದು.  ಈ ಕೆಳಗಿನ ಒಂದು ಉದಾಹರಣೆಯನ್ನು ಗಮನಿಸಿರಿ:-
“ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ ಗುರಿಯಲ್ಲವೆಂದು ನಾವು ತಿಳಿಯಬೇಕು.”
ಈ ವಾಕ್ಯವು ಕನ್ನಡ ಭಾಷೆಯ ವಾಕ್ಯವಾದರೂ, ಕನ್ನಡ ಶಬ್ದಗಳ ಜೊತೆಗೆ ಬೇರೆ ಬೇರೆ ಭಾಷೆಗಳ ಶಬ್ದಗಳೂ ಇದರಲ್ಲಿ ಹೆಚ್ಚಾಗಿವೆ.
(i) ಮೋಟಾರು – ಇದು ಇಂಗ್ಲೀಷ್ ಭಾಷೆಯಿಂದ ಬಂದ ಶಬ್ದ.
(ii) ಜಬರ್ದಸ್ತ್ – ಇದು ಹಿಂದೀ ಭಾಷೆಯಿಂದ ಬಂದ ಶಬ್ದ.
(iii) ಜೀವನ ಮುಖ್ಯ – ಈ ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು.
(iv) ಓಡಾಡು, ಗುರಿ, ನಾವು, ತಿಳಿಯಬೇಕು – ಇವು ಕನ್ನಡ ಭಾಷೆಯ ಶಬ್ದಗಳು.
ಅಲ್ಲದೆ-ಅಲ್ಲಿ, ಇಂದ, ಇನ, ಇಗೆ, ಉ-ಇತ್ಯಾದಿ ಕನ್ನಡ ಪ್ರತ್ಯಯಗಳು ಇಂಗ್ಲೀಷ್, ಹಿಂದಿ, ಸಂಸ್ಕೃತ ಶಬ್ದಗಳ ಮುಂದೆ ಬಂದು, ಅವನ್ನು ಕನ್ನಡ ಶಬ್ದಗಳನ್ನಾಗಿ ಮಾಡಿವೆ.
ಮೇಲಿನ ಉದಾಹರಣೆಯಿಂದ ನಮ್ಮ ಕನ್ನಡ ಭಾಷೆಯಲ್ಲಿ ಪರ ಭಾಷೆಯ ಶಬ್ದಗಳು ಸೇರಿಕೊಂಡಿವೆ ಎಂಬುದು ಗೊತ್ತಾಗುವುದು.  ನಮ್ಮ ಕನ್ನಡ ಭಾಷೆ ದ್ರಾವಿಡ ವರ್ಗಕ್ಕೆ ಸೇರಿದ ಭಾಷೆಯೆಂದು ತಿಳಿದಿದ್ದೀರಿ.  ಸಂಸ್ಕೃತ ಭಾಷೆ ಆರ್ಯರ ಭಾಷೆ.  ಆರ‍್ಯರಿಗೂ ದ್ರಾವಿಡರಿಗೂ ಬಹು ಪ್ರಾಚೀನ ಕಾಲದಿಂದಲೇ ಸಂಬಂಧ ಬೆಳೆದು, ಅವರಾಡುತ್ತಿದ್ದ ಸಂಸ್ಕೃತ-ಪ್ರಾಕೃತ ಭಾಷೆಗಳ ಶಬ್ದಗಳು ವಿಶೇಷವಾಗಿ ಅಂದಿನಿಂದಲೇ ಸೇರುತ್ತ ಬಂದವು.  ಅನಂತರ ಬೇರೆ ಬೇರೆ ವಿದೇಶೀಯರ ಸಂಪರ್ಕದಿಂದ, ಪಾರ್ಸಿ ಭಾಷಾ ಶಬ್ದಗಳೂ, ಇಂಗ್ಲೀಷ್, ಪೋರ್ಚುಗೀಸ್ ಭಾಷಾಶಬ್ದಗಳೂ ಸೇರಿಹೋದವು.  ಹೀಗೆ ಬೇರೆ ಬೇರೆ ಭಾಷೆಗಳಿಂದ ಬಂದ ಶಬ್ದಗಳಾವುವು? ನಮ್ಮ ಅಚ್ಚಗನ್ನಡ ಭಾಷಾಶಬ್ದಗಳಾವುವು? ಎಂಬುದನ್ನು ಸ್ಥೂಲವಾಗಿ ತಿಳಿಯಬಹುದು.
ಅಚ್ಚಗನ್ನಡ ಶಬ್ದಗಳನ್ನು ದೇಶ್ಯ ಶಬ್ದಗಳೆನ್ನುತ್ತೇವೆ.  ಉಳಿದವುಗಳನ್ನು ಅನ್ಯದೇಶ್ಯ ಶಬ್ದಗಳೆನ್ನುತ್ತೇವೆ.  ಅಲ್ಲದೆ ಸಂಸ್ಕೃತ-ಪ್ರಾಕೃತ ಶಬ್ದಗಳನೇಕವನ್ನು ಕನ್ನಡಭಾಷೆಯ ಗುಣಕ್ಕನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆಗಳಿಂದ ಮತ್ತು ಹೆಚ್ಚಿನ ವ್ಯತ್ಯಾಸಗಳಿಂದ ಮಾರ್ಪಡಿಸಿಕೊಂಡು, ಅವಕ್ಕೆ ತದ್ಭವಗಳು ಎಂಬ ಹೆಸರಿಟ್ಟಿದ್ದೇವೆ.  ಕೆಲವು ಸಂಸ್ಕೃತ ಶಬ್ದಗಳನ್ನು ಯಾವ ವ್ಯತ್ಯಾಸವನ್ನೂ ಮಾಡದೆ ಅದೇ ಅರ್ಥದಲ್ಲಿ ಉಪಯೋಗಿಸುತ್ತೇವೆ.  ಅವನ್ನು ತತ್ಸಮಗಳು ಎನ್ನುತ್ತೇವೆ.  ಈಗ ಈ ಎಲ್ಲಾ ದೇಶ್ಯ, ಅನ್ಯದೇಶ್ಯ, ತತ್ಸಮ, ತದ್ಭವಗಳ ವಿಚಾರವಾಗಿ ಸ್ಥೂಲವಾಗಿ ತಿಳಿದುಕೊಳ್ಳೋಣ.
ದೇಶ್ಯ ಅಚ್ಚಗನ್ನಡ ಶಬ್ದಗಳು
ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ, ತೆವರು, ತಗ್ಗು, ಇಳಿ, ನೇಸರು, ತಿಂಗಳು, ಕಲ್ಲು, ನೆಲ್ಲು, ಹೊಳೆ, ಹೋಗು, ಹೊಗು, ಬರು, ತಿನ್ನು, ಒಂದು, ಎರಡು, ನೂರು, ಹೆಚ್ಚು, ಕಡಿಮೆ, ಮೆಲ್ಲಗೆ, ಚೆನ್ನಾಗಿ, ತಿಳಿವಳಿಕೆ, ನಡೆವಳಿಕೆ, ನೀರು, ಮೀನು, ಬಾನು, ಬೋನ, ಅರಸು, ಹುಡುಕು, ಅಗಿ, ಅಲರು, ಅರೆ, ನುರಿ, ಉಡು, ತೊಡು, ಕೈ, ಕಾಲು, ಬಾಯಿ, ಕಣ್ಣು, ತಲೆ, ಕಿವಿ, ಮೂಗು, ಕೆನ್ನೀರು, ಬೆನ್ನೀರು, ಬೆಚ್ಚಗೆ, ತಣ್ಣಗೆ, ಕಮ್ಮಗೆ, ಸಣ್ಣ, ದೊಡ್ಡ, ಬಿಳಿದು, ಕರಿದು, ಹಿರಿದು, ಜೇನು, ತುಪ್ಪ, ಹಾಲು, ಮೊಸರು, ಮಜ್ಜಿಗೆ, ಅವು, ಕರು, ಆಕಳು, ತುರು, ನೆರೆ, ಸೇರು, ಕಾರು, ಹೀರು, ಸೋರು, ಸಾರು, ಹುಳಿ, ಹುರುಳಿ, ಹುಲ್ಲು, ರಾಗಿ, ಜೋಳ, ಬೆಲ್ಲ, ಎಳ್ಳು, ಎಣ್ಣೆ, ಬೆಣ್ಣೆ -ಇತ್ಯಾದಿಗಳು.

(೧) ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು
ಭೂಮಿ, ಪೃಥ್ವಿ, ನದಿ, ಆರ‍್ಯ, ಅನಾರ‍್ಯ, ರಾತ್ರಿ, ದಿವಸ, ಸಂಧ್ಯಾ, ಸಂಸ್ಥಾ, ರಾಮ, ಲಕ್ಷ್ಮಣ, ಭರತ, ಶತೃಘ್ನ, ಮಹಾಭಾರತ, ಕುಮಾರ, ಪಿತೃ, ಮಾತೃ, ಸಹೋದರ, ಸಹೋದರಿ, ಅಂಗ, ಅಂಗವಿಕಲ, ಸಂಗ, ಸಂಗಮ, ಸಮಾಗಮ, ದೇವತಾ, ಯಾತ್ರಾ, ದೇವಾಲಯ, ಋಷಿ, ಮುನಿ, ಋಣ, ಋತು, ವೇದ, ಪುರಾಣ, ಶಾಸ್ತ್ರ, ಶಾಸ್ತ್ರೀ, ಆಗಮ, ಉಪನಿಷತ್ತು, ಅರಣ್ಯ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಪಂಚ, ತ್ರಯ, ದಶ, ಏಕ, ಅಷ್ಟ, ಸಪ್ತ, ಆದಿತ್ಯವಾರ, ಸೋಮವಾರ, ಮಂಗಳವಾರ, ಬುಧವಾರ, ನಕ್ಷತ್ರ, ಗ್ರಹ, ಗೃಹ, ಗೃಹಿಣೀ, ಗೃಹಸ್ಥ, ಬ್ರಹ್ಮಚಾರಿ, ವಿದ್ಯಾರ್ಥಿ, ಅನ್ನ, ಪಕ್ವಾನ್ನ, ತೀರ್ಥ, ಅಸಾಧ್ಯ, ಅಶಕ್ಯ, ಅಶಕ್ತ, ಅಶಕ್ತಿ, ನಿಶ್ಶಕ್ತಿ, ವಿಶೇಷ, ಜ್ಞಾನ, ವಿದ್ಯಾ, ವಿದ್ಯಾರ್ಜನೆ, ಶಾಲಾ, ವಿಶ್ವವಿದ್ಯಾಲಯ, ಘಟಿಕಾ, ಘಟಿಕೋತ್ಸವ, ವಿವಾಹ, ಲಗ್ನ, ಲಗ್ನಪತ್ರ, ಪುತ್ರ, ಮಿತ್ರ, ಕಳತ್ರ, ಆಗಮ, ಆದೇಶ, ಲೋಪ, ಅಗ್ರಹಾರ, ಪುರ, ಪುರಿ, ನಗರ, ಗ್ರಾಮ, ಅಧಿಕಾರ, ಮಂತ್ರಿ, ರಾಜನ್, ರಾಣಿ, ಚಕ್ರವರ್ತಿ, ಸಾಮಂತ, ಮಂಡಲೇಶ್ವರ, ಸಾಮ್ರಾಜ್ಯ, ಚಕ್ರಾಧಿಪತ್ಯ, ಶಬ್ದ, ಅಕ್ಷರ, ಪದ, ಪ್ರಕೃತಿ, ವಾಕ್ಯ, ಗ್ರಂಥ, ಸಂಪುಟ, ಮತ, ಧರ್ಮ, ಮೋಕ್ಷ, ಸ್ವರ್ಗ, ನರಕ, ವಿಷಯ, ಅಧ್ಯಾಯ, ಪ್ರಕರಣ, ಪರಿಚ್ಛೇದ, ಆಮ್ಲಜನಕ, ಜಲಜನಕ, ವಿಮಾನ, ಆಕಾಶ, ಫಲ, ಫಲಾಹಾರ, ಗಂಧ, ಚಂದನ, ಲೇಪನ, ಕುಂಕುಮ, ಶಿರ, ಹಸ್ತ, ಪಾದ, ನೇತ್ರ, ಮುಖ, ದಂತ, ಪಂಙ್ತಿ, ನಕ್ಷೆ, ಲೇಖನ, ಲೇಖ, ಪತ್ರ, ಶತ್ರು, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ನೈಋತ್ಯ, ಆಗ್ನೇಯ, ಈಶಾನ್ಯ, ವಾಯುವ್ಯ, ಆಕಾಶ, ಗಗನ, ವಾಯು, ವಾಯುಮಂಡಲ, ಜಗತ್, ಮಹಾ, ಉನ್ನತ, ಶಿಖರ, ರಾಶಿ, ಪುಂಜ, ಪುಷ್ಪ, ಪತ್ರಾವಳಿ, ಫಲಾವಳಿ, ಫಲ, ಭೋಜನ, ಭುಂಜನ, ಸರ್ಪ, ಉರಗ, ಔಷಧ, ವೈದ್ಯ, ಆಯುಷ್ಯ, ವರ್ಷ, ಯುಗ, ಶತ, ಶತಮಾನ, ಶತಕ, ವರ್ತಮಾನ, ಸಂಗ್ರಹ, ಯುದ್ಧ, ಗದಾ, ದಂಡ, ಬಾಣ, ಬಾಣಪ್ರಯೋಗ, ಧನು, ದರಿದ್ರ, ದೀನ, ದಲಿತ, ಮಾರ್ಗ, ಮಧ್ಯ, ಧೂಲಿ, ದ್ವಾರ, ಗುಹಾ, ಸಹಸ್ರ, ಪಾಡ್ಯಮೀ, ಏಕಾದಶೀ, ದ್ವಾದಶೀ, ದೀಕ್ಷಾ, ದೈನ್ಯ, ದಿನಾಂಕ, ಸ್ಮಾರಕ, ಪಕ್ಷ, ತಿಥಿ, ಪಂಚಾಂಗ, ಪಂಚಾಲ, ದ್ರೌಪದಿ, ಧೃತರಾಷ್ಟ್ರ, ಕಾವೇರಿ, ಕೃಷ್ಣಾ, ಗೋದಾವರಿ, ನರ್ಮದಾ, ಬ್ರಹ್ಮಪುತ್ರಾ, ಗಂಗಾ, ಯಮುನಾ, ಸರಸ್ವತಿ, ಶಿವ, ವಿಷ್ಣು, ಬ್ರಹ್ಮ, ಮಹೇಶ, ಈಶ್ವರ, ನಶ್ವರ -ಇತ್ಯಾದಿ.

(ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು
ಅರ್ಜಿ, ಕಚೇರಿ, ತಯಾರ್, ಬದಲ್, ಕಾರ್ಖಾನೆ, ಖಾನೇಷುಮಾರ್, ಸರ‍್ಕಾರ, ರೈತ, ಸಲಾಮು, ಕಾನೂನು, ಜಮೀನು, ಬದಲಾವಣೆ, ಚುನಾವಣೆ, ಮಂಜೂರು, ಹುಕುಂ, ದರ್ಬಾರು, ಅಸಲಿ, ನಕಲಿ, ರಸ್ತೆ, ಕುರ್ಚಿ, ಜಮೀನ್‌ದಾರ್, ಗುಲಾಮ, ಖಾಜಿ, ಸುಬೇದಾರ್, ದಪೇದಾರ್, ಹವಾಲ್ದಾರ್, ದಾಖಲ್, ದುಕಾನ್, ಅಮಲ್ದಾರ್, ಸವಾರ, ದವಾಖಾನೆ, ಕಾಗದ, ಬಂದೂಕ, ಹುಜೂರು, ಖಾವಂದ್, ಜನಾಬ್, ಮಹಲ್, ಕಿಲ್ಲಾ-ಮುಂತಾದವುಗಳು.

(ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು
ರೋಡ್, ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ‍್ಮೋನಿಯಂ, ಬೆಂಚ್, ಪ್ಲೇಗು, ಮೈಲು, ಪೋಲೀಸ್, ಪೋಸ್ಟ್, ಕಾರ್ಡು, ಕವರು, ಟಿಕೆಟ್, ಹೊಟೆಲ್, ಚೇರಮನ್, ರೂಂ, ಸ್ಕೂಲ್, ಕಾಲೇಜ್, ಯೂನಿವರ್ಸಿಟಿ, ರಿಕಾರ್ಡ್, ಆಕ್ಸಿಜನ್, ಹೈಡ್ರೋಜನ್, ಆಸಿಡ್, ಫ಼ೀಸ್, ರಿಜಿಸ್ಟರ್, ಫರ್ನಿಚರ್, ಜೈಲ್, ಡ್ರೆಸ್, ಬೂಟ್ಸ್, ಪುಟ್‌ಪಾತ್, ಬೈಸ್‌ಕಲ್, ಸ್ಕೂಟರ್, ಜಾಮಿಟ್ರಿ, ಮಿಷನ್, ಡಿಗ್ರಿ, ಡಾಕ್ಟರ್, ಪ್ಲಾನ್, ಬ್ರೆಡ್, ಕಾಫೀ, ಟೀ, ಬೋರ್ಡ್, ಪೆಟ್ರೋಲ್, ಲೈಟ್, ಎಲೆಕ್ಟ್ರಿಕ್, ಡಿಪಾರ್ಟ್‌ಮೆಂಟ್, ಗವರ್ನಮೆಂಟ್, ಅಪಾಯಿಂಟ್‌ಮೆಂಟ್, ಆರ್ಡರ್, ಪ್ರೈಮರಿ, ಮಿಡಲ್, ನರ್ಸರಿ, ಹೈಸ್ಕೂಲ್, ಅಗ್ರಿಕಲ್ಚರ್, ಸೋಪ್, ಹ್ಯಾಂಡ್‌ಬಿಲ್, ಬುಕ್, ನೋಟ್ಸ್, ಪೇಜ್, ಎಸ್.ಎಸ್.ಎಲ್.ಸಿ., ಬಿ.ಎ., ಎಂ.ಎ., ಎಲ್‌ಎಲ್.ಬಿ., ಆನರ್ಸ್, ಮಾಷ್ಟರ್, ಲೆಕ್ಚರರ್, ಪ್ರೊಫೆಸರ್, ರೀಡರ್, ಲೈಬ್ರರಿ, ಪ್ರೆಸ್, ಡ್ರೈವರ್, ನಂಬರ್, ಮಾರ್ಕ್ಸ್, ಪಾಸ್, ಫೇಲ್, ಸೈನ್ಸ್, ಅಡ್ವಾನ್ಸ್, ಮ್ಯಾಪ್, ಸಿನೆಮಾ, ಫಿಲ್ಮ್, ಸರ್ಟಿಫೀಕೇಟ್, ಲೀವ್, ಎಜ್ಯುಕೇಷನ್, ಕಾಂಗ್ರೇಸ್, ಪಾರ್ಟಿ, ಕ್ರಿಕೆಟ್, ಪುಟ್‌ಬಾಲ್, ವಾಲಿಬಾಲ್, ಹಾಕಿ, ಟ್ರೈನಿಂಗ್, ಕ್ರಾಪ್‌ಕಟಿಂಗ್, ಡಿಸ್ಟ್ರಿಕ್ಟ್, ಸರ್ಕಲ್, ಸೊಸೈಟಿ, ಮಿಲ್, ಪೆನ್ಸಿಲ್, ಪೆನ್, ಇಂಕ್, ಬಾಟಲ್, ಸ್ಪೀಡ್, ಸ್ವಿಚ್, ಲೈಟ್, ಬಲ್ಬ್-ಇತ್ಯಾದಿಗಳು.

(ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು
ಅಲಮಾರು, ಸಾಬೂನು, ಪಾದ್ರಿ, ಮೇಜು, ಜಂಗಾಲು, ಬಟಾಟೆ-ಇತ್ಯಾದಿಗಳು.
[ಕೃಪೆ-ಕಣಜ.ಕಾಂ]