'ಕಾವ್ಯ ಮತ್ತು ಏಕೀಕರಣ' ಪುಸ್ತಕದಲ್ಲಿನ ಕೆಲವು ಸಾಲುಗಳು :
'ಕಾವ್ಯ ಮತ್ತು ಏಕೀಕರಣ' ಎಂಬ ಈ ಪುಸ್ತಕದಲ್ಲಿ ಕರ್ನಾಟಕ ಏಕೀಕರಣದಲ್ಲಿ ಸಾಹಿತಿಗಳ ಲೇಖನದಿಂದ ಮೂಡಿಬಂದ ಬರಹಗಳು, ಮುಖ್ಯವಾಗಿ ಕಾವ್ಯಧಾರೆಯ ಪಾತ್ರವನ್ನು ಚರ್ಚಿಸುವ ಕಾರ್ಯವನ್ನು ಮಾಡಲಾಗಿದೆ. ಇಂದಿನ ನಮ್ಮ ವಿಶಾಲ ಕರ್ನಾಟಕ ಉದಯವಾಗಿ ಐವತ್ತಾರು ವರ್ಷಗಳು ತುಂಬಿ ಐವತ್ತೇಳನೆಯ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡ ನಾಡು ರೂಪುಗೊಳ್ಳಲು ಪ್ರಮುಖವಾದ ಏಕೀಕರಣವನ್ನು ಅವಲೋಕಿಸುತ್ತಿದೆ, ಈ ಚಳುವಳಿಯ ಕಾವನ್ನು ಹೆಚ್ಚಿಸುವಂತೆ ಮಾಡಿದ ಸಾಹಿತಿಗಳ ಕಾವ್ಯಗಳ ಅವಲೋಕನವು ಸೂಕ್ತವೆನಿಸಿದೆ. ಏಕೀಕರಣವನ್ನು ಸಾಹಿತಿಗಳ ಬರವಣಿಗೆಯ ಮೂಲಕ ನೋಡುವ ಪ್ರಯತ್ನವನ್ನು ಈ ಪುಸ್ತಕ ಪ್ರಾಮಾಣಿಕವಾಗಿ ಮಾಡಿದೆ. ಇಪ್ಪತ್ತಕ್ಕೂ ಹೆಚ್ಚು ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ನೂರಾರು ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಕನ್ನಡ ನಾಡು ಉದಯವಾಯಿತು.
ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಹಲವಾರು ಮಹಾನೀಯರ ಪರಿಶ್ರಮದಿಂದ ಒಂದುಗೂಡಿಸಿದರು. ಆದರೆ ಏಕೀಕರಣದ ಉದ್ದೇಶ ಹಾಗೂ ಅದರ ಸಾರ್ಥಕತೆ ಕನ್ನಡ ನಾಡು ಉದಯವಾಗಿ ಐದು ಕಳೆದರೂ ಉಳಿದಿರುವುದು ಕನ್ನಡಿಗರ ದೌರ್ಭಾಗ್ಯ. ಜೊತೆಗೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಕನ್ನಡದ ನೆಲ-ಜಲ-ಭಾಷೆ-ಸಂಸ್ಕೃತಿಗೆ ಹತ್ತು-ಹಲವು ಆತಂಕಗಳು ಉಳಿದುಕೊಂಡು ಬಂದಿರುವುದು ಒಂದು ದೊಡ್ಡ ಆತಂಕವಾಗಿದೆ. ಮಹಾರಾಷ್ಟ್ರದ ಗಡಿವಿವಾದ, ತಮಿಳುನಾಡಿನ ಕಾವೇರಿ ಜಲವಿವಾದ, ಕೃಷ್ಣಾ ನದಿ ನೀರಿನ ಸಮಸ್ಯೆ, ಕನ್ನಡ ಶಾಲೆಗಳನ್ನು ಮುಚ್ಚುವುದು, ಅನ್ಯಭಾಷಿಗರ ಆಕ್ರಮಣ ಮುಂತಾದ ಸಮಸ್ಯೆಗಳು ಒಂದೆಡೆಯಾದರೆ ಪ್ರಾದೇಶಿಕ ಅಸಮಾನತೆ ಕರ್ನಾಟಕ ಭಾವೈಕ್ಯತೆಗೆ ಪ್ರಮುಖವಾಗಿದೆ.
ಇದಲ್ಲದೇ ಅಖಂಡ ಕರ್ನಾಟಕವನ್ನು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ವಿಭಜಿಸಲು ಯೋಚಿಸುತ್ತಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ. ಜೊತೆಗೆ ಕನ್ನಡ ಭಾಷೆಯ ಅಳಿವು-ಉಳಿವನ್ನು ಕಾಡುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ ಸರ್ಕಾರ ಅನುಸರಿಸುತ್ತಿರುವ ಇಂಗ್ಲೀಷ್ ಪರವಾದ ನೀತಿಗಳು. ಸರ್ಕಾರದಲ್ಲಿ ಕನ್ನಡ ಆಡಳಿತ ಭಾಷೆಯಲ್ಲಿ ಸಮರ್ಪಕವಾಗಿ ಜಾರಿಯಾಗದೇ ಉಳಿದಿದೆ. ಇಂತಹ ಹಲವಾರು ಸಮಸ್ಯೆಗಳು ಕರ್ನಾಟಕ ಮತ್ತು ಕನ್ನಡ ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಮಾರಕವಾಗಿದೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಿ, ಶಿಕ್ಷಣ ಸೌಲಭ್ಯ, ವಸತಿ ಸೌಲಭ್ಯ ಇತ್ಯಾದಿಗಳಿಗೆ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಅದೆಷ್ಟೋ ಬಾರಿ ಕನ್ನಡವೇ ಆಡಳಿತ ಭಾಷೆ ಎಂದು ಕಾಗದದ ಮೂಲಕ ಪ್ರಕಟಿಸಲಾಗಿದೆ, ಅದನ್ನು ಸಮರ್ಪಕವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ. ವಿಧಾನಸೌಧದ ಆಡಳಿತದಲ್ಲೇ ಕನ್ನಡ ದುರ್ಬಲವಾಗಿರುವುದನ್ನು ಕಾಣಬಹುದು. ಗೋಕಾಕ್ ಚಳುವಳಿಯಾಗದಿದ್ದರೆ ಕನ್ನಡ ವಿದ್ಯಾರ್ಥಿಗಳ ಸ್ಥಿತಿ ವಿಪರೀತ ಕೆಡುತ್ತಿತ್ತು. ಪ್ರತಿನಿತ್ಯ ಇಂಗ್ಲಿಷ್ ಶಾಲೆಗಳು ಸ್ಥಾಪನೆಯಾಗುತ್ತಿದ್ದರೂ, ಅವರನ್ನು ತಡೆಯುವ ಅಥವಾ ನಿಯಂತ್ರಿಸುವ ಪ್ರಯತ್ನಕ್ಕೆ ಸರ್ಕಾರ ಕೈಹಾಕಿಲ್ಲ. ಬದಲಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಕಾರ್ಯವನ್ನು ಮಾಡುತ್ತಿರುವುದು ಕನ್ನಡಿಗರ ದುರಂತವೇ ಸರಿ.
ಕನ್ನಡನಾಡಿನಲ್ಲಿ ತುಂಬಿ ತುಳುಕುತ್ತಿರುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಮಹಾಜನ್ ಆಯೋಗದ ಶಿಫಾರಸ್ಸು ಶೀಘ್ರವೇ ಜಾರಿಗೆ ಬರಲಿ ಎಂದು ಹಂಬಲಿಸುವ, ಬೆಳಗಾವಿಯಲ್ಲಿ ನಡೆಯುತ್ತಿರುವ ಮರಾಠಿಗರ ಪುಂಡಾಟಿಕೆಗೆ ಕಡಿವಾಣ ಹಾಕಿ, ಕಾಸರಗೂಡಿನಂತಹ ಅಚ್ಚಕನ್ನಡ ನೆಲಗಳನ್ನು ಸೇರಿಸುವ ದಿನ ಹತ್ತಿರ ಬರಲಿ ಎಂಬುದೇ ಎಲ್ಲ ಕನ್ನಡಿಗರ ಆಸೆ-ಹಾರೈಕೆ. ಕರ್ನಾಟಕದ ಯಾವ ಭಾಗದಲ್ಲಿ ನೆಲೆಸಿದ್ದರೂ ಕನ್ನಡಿಗರೆಲ್ಲರೂ ಭಾವನಾತ್ಮಕವಾಗಿಯೂ ಒಂದಾಗಬೇಕಾಗಿದೆ. ಈ ಮೂಲಕ ನಮ್ಮ ಎದುರಿಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ.
ಸಾವಿರಾರು ವರ್ಷಗಳ ಭಾಷಿಕ-ಸಾಂಸ್ಕೃತಿಕ ಚರಿತ್ರೆಯನ್ನು ಹೊಂದಿರುವ ಕನ್ನಡದ ಪ್ರದೇಶಗಳು ಬ್ರಿಟಿಷರ ಒಡೆದು ಆಳು ಎಂಬ ನೀತಿಯಿಂದಾಗಿ ಗುರುತೂ ಸಿಗದಂತೆ ಛಿದ್ರೀಕರಣಗೊಂಡ ನಂತರ ಸುಮಾರು ಒಂದು ನೂರ ಐವತ್ತು ವರ್ಷಗಳ ನಂತರ ಒಂದುಗೂಡಿದವು. ಇಂದಿನ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಾದೇಶಿಕ ಭೇದಭಾವದ ವಿಷಬೀಜವನ್ನು ಬಿಟ್ಟಿ ಸುಂದರ ಕನ್ನಡನಾಡನ್ನು ಒಡೆಯುವ ಸಂಚು ಮಾಡುತ್ತಿದ್ದಾರೆ. ಇಂಥಹ ನಾಡದ್ರೋಹಿಗಳಿಗೆ ಪಾಠ ಕಲಿಸಬೇಕಾದ ಅಗತ್ಯತೆಯಿದೆ.
ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಕನ್ನಡಿಗರೇ ಆಗಿರುವುದು ಸ್ಪಷ್ಟ. ಕನ್ನಡಿಗರ ಉದಾರೀಭಾವ, ಅತಿಥಿ ಸತ್ಕಾರ ಸಂಸ್ಕೃತಿ, ಭಾಷಾಭಿಮಾನ ಇಲ್ಲದಿದ್ದರೂ ಅನ್ಯಭಾಷಿಗರು ನಮ್ಮ ನಾಡಿನ ಮೇಲೆ ದಾಳಿ ಮಾಡಿ ಕನ್ನಡ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ. ಕನ್ನಡಿಗರು ತಮ್ಮ ನೆಲದಲ್ಲೇ ಪರಕೀಯರ ದಾಸ್ಯದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೆಲೆಗಾಗಿ ಬಂದ ಮರಾಠಿಗರು ಬೆಳಗಾವಿಯಲ್ಲಿ ನೆಲೆಗೊಂಡು ಈಗ ತಮ್ಮದೆಂದು ಹೇಳುವ ಹಾಗೆ, ಅನ್ಯಭಾಷಿಕರ ಬೀಡಾಗಿರುವ ಬೆಂಗಳೂರಿಗೆ ಅದೇ ಸ್ಥಿತಿ ಒದಗಬಹುದು. ಕನ್ನಡಿಗರು ಭಾಷಾಭಿಮಾನವನ್ನು ಬೆಳಸಿಕೊಂಡು ಹೋರಾಟಕ್ಕೆ ನಿಲ್ಲದಿದ್ದರೆ, ಈ ಕನ್ನಡನಾಡಿನ ಏಕೀಕರಣಕ್ಕಾಗಿ ಒಂದುಗೂಡುವಂತೆ ಮಾಡಿದ ಮಹನೀಯರ ಶ್ರಮಕ್ಕೆ ಬೆಲೆಯಿಲ್ಲದಂತಾಗುತ್ತದೆ. ಕನ್ನಡದ ಹೋರಾಟಕ್ಕಾಗಿ ಸದಾ ಹಾತೊರೆಯುವ ಮನಸು ಕನ್ನಡಿಗರಲ್ಲಿ ಜಾಗೃತವಾಗುವ ಪಥದತ್ತ ಸಾಗಲು ಏಕೀಕರಣ ಚಳುವಳಿಯಲ್ಲಿ ನಮ್ಮ ಕವಿವರ್ಯರು ರಚಿಸಿಕೊಟ್ಟ ಕಾವ್ಯ ಚಿಲುಮೆಯ ಬೆಳಕು ಈಗಿನ ಕಾಲದಲ್ಲೂ ಮೂಡಿಬರಬೇಕಾದ ಅನಿವಾರ್ಯತೆಯಿದೆ. ಆ ಬೆಳಕಿನಿಂದ ನವಕರ್ನಾಟಕ ಉದಯವಾಗಲೆಂಬ ಆಶಯದಿಂದ ಕನ್ನಡ ಕಾರ್ಯ ಮಾಡಲು ಪ್ರತಿಯೊಬ್ಬ ಕನ್ನಡಿಗನೂ ಶ್ರಮಿಸಬೇಕಾಗಿದೆ.
ಕೃತಿ : ಕಾವ್ಯ ಮತ್ತು ಏಕೀಕರಣ
ಲೇಖಕರು : ಮಂಜುನಾಥ.ಎಂ.ಕೆ, ಮಾಕಳಿ ಗ್ರಾಮ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ :
ಪ್ರಕಾಶಕರು : ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು.