Sep 27, 2012

ಮಹಾಭಾರತದ ಹದಿನೆಂಟು ಪರ್ವಗಳ ಸಂಕ್ಷಿಪ್ತ ಚಿತ್ರ


1. ಆದಿಪರ್ವ: ಪರಿಚಯ, ವಿಶ್ವ ಸೃಷ್ಟಿ ಯ ವಿವರ ( ಸೃಷ್ಟಿ ಮತ್ತು ಮಹಾಭಾರತ) , ಹಿನ್ನೆಲೆ, ಪಾಂಡವ ಮತ್ತು ಕೌರವರ ಜನನ ಹಾಗೂ ಬೆಳವಣಿಗೆ

2. ಸಭಾಪರ್ವ: ಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ

3. ಅರಣ್ಯಕಪರ್ವ: ಹನ್ನೆರಡು ವರ್ಷದ ವನವಾಸ

4. ವಿರಾಟಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ

5. ಉದ್ಯೋಗಪರ್ವ: ಯುದ್ಧದ ತಯಾರಿ

6. ಭೀಷ್ಮಪರ್ವ: ಯುದ್ಧ ಆರಂಭ, ಭೀಷ್ಮ ಕೌರವರ ಸೇನಾನಿ - ಕೃಷ್ಣನಿಂದ
ಭಗವದ್ಗೀತೆ ಉಪದೇಶ

7. ದ್ರೋಣಪರ್ವ: ಯುದ್ಧದ ಮುಂದುವರಿಕೆ, ದ್ರೋಣರ ಸೇನಾಧಿಪತ್ಯದಲ್ಲಿ

8. ಕರ್ಣಪರ್ವ: ಕರ್ಣನ ಸೇನಾಧಿಪತ್ಯ, ಕರ್ಣಾವಸಾನ

9. ಶಲ್ಯಪರ್ವ: ಶಲ್ಯನ ಸೇನಾಧಿಪತ್ಯ

10. ಸೌಪ್ತಿಕಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ

11. ಸ್ತ್ರೀಪರ್ವ: ಗಾಂಧಾರಿಯ ವಿಲಾಪ

12. ಶಾಂತಿಪರ್ವ: ಯುಧಿಷ್ಠಿರನ ಪಟ್ಟಾಭಿಷೇಕ, ಭೀಷ್ಮನಿಂದ ಸಲಹೆ

13. ಅನುಶಾಸನಪರ್ವ: ಭೀಷ್ಮನ ಕೊನೆಯ ಮಾತುಗಳು

14. ಅಶ್ವಮೇಧಿಕಪರ್ವ: ಯುಧಿಷ್ಠಿರನಿಂದ ಅಶ್ವಾಮೇಧ ಯಜ್ಞ

15. ಆಶ್ರಮವಾಸಿಕಪರ್ವ: ಧೃತರಾಷ್ಟ್ರ, ಗಾಂಧಾರಿ, ಕುಂತಿಯರ ಆಶ್ರಮವಾಸ, ಕೊನೆಗೆ
ಮರಣ

16. ಮೌಸಲಪರ್ವ: ಯಾದವರಲ್ಲಿ ಕಲಹ ("ಯಾದವೀ ಕಲಹ")

17. ಮಹಾಪ್ರಸ್ತಾನಿಕಪರ್ವ: ಪಾಂಡವರ ಮರಣದ ಮೊದಲ ಭಾಗ

18. ಸ್ವರ್ಗಾರೋಹಣಪರ್ವ: ಪಾಂಡವರ ಸ್ವರ್ಗಾರೋಹಣ

Sep 17, 2012

ಹಳೆಯ ಹಳ್ಳಿಯ ಲೆಕ್ಕಗಳು


ತೂಕ ಹಾಗೂ ಅಳತೆಗೆ ಸಂಬಂಧಿಸಿದಂತೆ

ಹಿಂದೆ ತೂಕವನ್ನು "ರೂಪಾಯಿ"ಗಳಿಂದಲೇ ಕಂಡುಕೊಂಡಿದ್ದು ನಮಗೆ ಕಂಡುಬರುತ್ತದೆ. ೨೪ ಬೆಳ್ಳಿ "ರೂಪಾಯಿ"ಗಳ ತೂಕವನ್ನು ಒಂದು "ಸೇರು" ಎಂದು ಮಾಡಿಕೊಂಡಿದ್ದರಿಂದ, ಅದರ ಅಳತೆಗೆ ತಕ್ಕಂತೆ " ಸೇರಿ"ನ ಸೃಷ್ಟಿಯಾಗಿರುವುದನ್ನು ನಾವು ಗಮನಿಸುತ್ತೇವೆ. ಹೀಗೆ "ಪಾವು", "ಚಟಾಕು", "ಗಜ", "ಅಂಗುಲ", "ಮೈಲಿ", "ಹರಿದಾರಿ" "ಎಕರೆ" ಮುಂತಾದ ಅಳತೆಮಾನಗಳು ಹಾಗೂ "ತೊಲ", "ಪಲ್ಲ", "ಖಂಡುಗ" ಮುಂತಾದ ತೂಕಮಾನಗಳು ಬಂದು ಸೇರಿಕೊಂಡಿವೆ. ಉದಾಹರಣೆಗೆ, ಒಂದು ಸೇರು ಎಂದರೆ, ೨೪ ಬೆಳ್ಳಿ "ರೂಪಾಯಿ"ಗಳ ತೂಕ ಅಥವಾ ನಾಲ್ಕು "ಪಾವು" ಎಂದೂ ಹಾಗೂ ಒಂದು "ಗಜ" ಎಂಬುದನ್ನು ಮೂರು "ಅಡಿ" ಎಂದು ಹೇಳಲಾಗುತ್ತದೆ. ಇವುಗಳ ಪ್ರಕಾರ ತೂಕ ಹಾಗು ಅಳತೆಗಳನ್ನು ನಾವು ಈ ರೀತಿ ವಿಂಗಡಿಸಬಹುದಾಗಿದೆ.
೧ ಬೆಳ್ಳಿ ರೂಪಯಿ ತೂಕ = ೧ ತೊಲ
೧ ಪಾವು = ೪ ಚಟಾಕು
೧ ಸೇರು = ೪ ಪಾವು ಅಥವ ೨೪ ಬೆಳ್ಳಿ ರೂಪಯಿಗಳ ತೂಕ
೧ ಇಬ್ಬಳಿಗೆ = ಐದೂವರೆ ಸೇರು (ದೊಡ್ದ ಇಬ್ಬಳಿಗೆಯಾದರೆ ೬ ಸೇರು)
೧ ಪಲ್ಲ = ೧೦೦ ಸೇರು
೧ ಕೊಳಗ = ೨ ಇಬ್ಬಳಿಗೆ ಅಥವ ೧೧ ಸೇರು
೧ ಖಂಡುಗ = ೪೦ ಇಬ್ಬಳಿಗೆ ಅಥವ ೨೦ ಕೊಳಗ

೧ ಅಡಿ = ೧೨ ಅಂಗುಲ ಅಥವ ಇಂಚು
೧ ಗಜ = ೩ ಅಡಿ ಅಥವ ೩೬ ಅಂಗುಲ
೧ ಗುಂಟೆ = ೨೨೦ ಚದರ ಗಜ
೧ ಎಕರೆ = ೪೦ ಗುಂಟೆ

೧ ಮೈಲಿ = ೮ ಫರ್ಲಾಂಗು
೧ ಹರಿದಾರಿ = ೪ ಮೈಲಿ
೧ ಗಾವುದ = ೧೨ ಹರಿದಾರಿ

ನಾನು ನೋಡಿದಂತೆ ಸಣ್ಣವನಾಗಿದ್ದಾಗ, ಅಪ್ಪ ಶಾಲಾ ಯೂನಿಫಾರಂ ಬಟ್ಟೆ ಹಾಕಲು ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದದ್ದು ಹಾಗೂ ಅಲ್ಲಿ ಬಟ್ಟೆಯನ್ನು ಗಜದಲ್ಲೇ ಅಳತೆ ಮಾಡುತ್ತಿದ್ದದ್ದು ನನಗೆ ನೆನಪಿದೆ. ಇನ್ನು ಭತ್ತದ ನಾಟಿಗೂ ಮೊದಲು ಪೈರಿನ ಹೊಟ್ಟಿಲಿಗೆ ಬಿತ್ತನೆ ಭತ್ತದ ಅಳತೆಯನ್ನು ಸೇರಿನಲ್ಲಿ ಈಗಲೂ ಅಳೆದು ಉಪಯೋಗಿಸುವುದು ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಒಂದು ಎಕರೆಗೆ ಸುಮಾರು ಮೂವತ್ತು ಸೇರು ಬಿತ್ತನೆ ಭತ್ತವನ್ನು ಉಪಯೋಗಿಸುತ್ತಾರೆ. ಇನ್ನು ತೂಕದಲ್ಲಿ ನೋಡಿದರೆ, ಬೆಣ್ಣೆ, ತುಪ್ಪ ಮುಂತಾದ ಖಾದ್ಯಗಳನ್ನು "ಸೇರು", "ಪಾವು" ಎಂದೇ ತೂಗುವುದು ವಾಡಿಕೆಯಾಗಿತ್ತು. ಅದಕ್ಕಾಗಿಯೇ ತೂಕದ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ,
ಅಚ್ಚೇರು ಬೆಣ್ಣೆ = ಅರ್ಧ ಸೇರು ಬೆಣ್ಣೆ = ೧೨ ಬೆಳ್ಳಿ ರೂಪಾಯಿಗಳ ತೂಕ ಅಥವ ೨ ಪಾವು
ಅರ್ಪಾವು ತುಪ್ಪ = ಅರ್ಧ ಪಾವು ತುಪ್ಪ

ಹಳ್ಳಿ ಅಳತೆಯಲ್ಲಿ ಕಾಣಬಹುದಾದ ಇನ್ನೊಂದು ವಿಷೇಶ ಎಂದರೆ, ಸೇರು, ಪಾವು, ಇಬ್ಬಳಿಗೆ, ಕೊಳಗ ಹೀಗೆ ಯಾವುದನ್ನೇ ಉಪಯೋಗಿಸಿ ಭತ್ತ, ರಾಗಿ ಅಥವಾ ಬೇರೆ ಯಾವುದೇ ಧಾನ್ಯಗಳನ್ನು ಅಳೆಯುವಾಗ "ಹೆಚ್ಚಲಿ" ಎಂಬ ಪದವನ್ನು ಸಾಮಾನ್ಯವಾಗಿ ಉಪಯೋಗಿಸುತ್ತಿರುತ್ತಿದ್ದರು. ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಧಾನ್ಯ ಹಾಗೇ ಹೆಚ್ಚಲಿ ಎಂಬುದು. ಎರಡನೆಯದಾಗಿ ೭, ೧೧ ಮತ್ತು ೧೭ ಸಂಖ್ಯೆಗಳು ಅಶುಭ ಹಾಗು ಅವುಗಳನ್ನು ಉಪಯೋಗಿಸಬಾರದೆಂಬ ನಂಬಿಕೆ. ಈ ಕಾರಣಗಳಿಂದ, "ಆರು" ಆದ ನಂತರ "ಹೆಚ್ಚಲಿ" ನಂತರ "ಎಂಟು" ಎಂದೂ, ಹತ್ತಾದ ನಂತರ "ಹೆಚ್ಚಲಿ" ನಂತರ "ಹನ್ನೆರಡು ಎಂದೂ, "ಹದಿನಾರು" ಆದ ನಂತರ "ಹೆಚ್ಚಲಿ" ನಂತರ "ಹದಿನೆಂಟು" ಎಂದೂ ಬಳಸುತ್ತಿದ್ದರು. ಹೀಗೆ ಏಳು, ಹನ್ನೊಂದು ಮತ್ತು ಹದಿನೇಳು ಸಂಖ್ಯೆಗಳನ್ನು ಉಪಯೋಗಿಸುತ್ತಿರಲಿಲ್ಲ. ಹಾಗೇ ಕೆಲವು ಸಂಖ್ಯೆಗಳನ್ನು ಶುಭ ಸಂಖ್ಯೆಗಳೆಂದು ನಂಬಿ ಉಪಯೋಗಿಸುತ್ತಿದ್ದದ್ದೂ ಉಂಟು. ಅವು ಯಾವುವೆಂದರೆ, ಐದು, ಒಂಬತ್ತು ಮತ್ತು ಹನ್ನೆರಡು.

ಹಣಕ್ಕೆ ಸಂಬಂಧಿಸಿದಂತೆ

ಈ ಮೊದಲೇ ಹೇಳಿದಂತೆ ಹಿಂದೆ "ಕಾಸು"ಗಳು ಬಹುಪಾಲು ಎಲ್ಲಾ ಅಳತೆಗಳಲ್ಲೂ ಪ್ರಧಾನ ಪಾತ್ರ ವಹಿಸುತ್ತಿದ್ದದ್ದು ನಮಗೆ ಕಾಣುತ್ತದೆ. ಮೂರು ಕಾಸಿನ ಒಂದು ಬಿಲ್ಲೆ, ಇಂಥ ನಾಲ್ಕು ಬಿಲ್ಲೆಗಳು ಸೇರಿದರೆ ಹನ್ನೆರಡು "ಕಾಸು" ಅಥವಾ ಒಂದು "ಆಣೆ"ಯಾಗುತ್ತದೆ. ಇಂದಿನ "ನಾಲ್ಕಾಣೆ", "ಎಂಟಾಣೆ", "ಹನ್ನೆರಡಾಣೆ", "ಹದಿನಾರಾಣೆ"ಗಳು ಈ ಹಿನ್ನಲೆಯಿಂದಲೇ ಬಂದಿರುವುದು ನಮಗೆ ತಿಳಿದ ಸಂಗತಿಯಾಗಿದೆ. ಈಗಲೂ ನಾವು ಈ "ಆಣೆ"ಗಳನ್ನು ಉಪಯೋಗಿಸುತ್ತೇವೆ. ಇದರ ಪ್ರಕಾರ ನಾವು ನಾಣ್ಯಗಳನ್ನು ಈ ಕೆಳಗೆ ಹೇಳಿರುವ ರೀತಿ ವಿಂಗಡಿಸಬಹುದಾಗಿದೆ.
ಚಲಾವಣೆಯಲ್ಲಿದ್ದ ನಾಣ್ಯಗಳು ಮತ್ತು ಉಪಯೋಗಿಸುತ್ತಿದ್ದ ಲೋಹಗಳು:
೧ ಕಾಸು (ತಾಮ್ರ)
೩ ಕಾಸು (ತಾಮ್ರ)
೬ ಕಾಸು (ನಿಕ್ಕಲ್)
೧ ಆಣೆ = ೧೨ ಕಾಸು (ನಿಕ್ಕಲ್)
೨ ಆಣೆ = ೨೪ ಕಾಸು (ನಿಕ್ಕಲ್)
೪ ಆಣೆ (ಬೆಳ್ಳಿ)
೮ ಆಣೆ (ಬೆಳ್ಳಿ)
೧ ರೂಪಾಯಿ = ೧೯೨ ಕಾಸು (ಬೆಳ್ಳಿ)

ಜೊತೆಗೆ ನಾಣ್ಯವಲ್ಲದಿದ್ದರೂ "ದುಡ್ಡು", "ಪಾವಲಿ" "ಹಣ ಅಥವ ವರಹ" ಹಾಗು "ದುಗ್ಗಾಣಿ" ಎಂಬ ಪದಗಳು ವ್ಯವಹಾರಿಕವಾಗಿ ಉಪಯೋಗಿಸಲ್ಪಡುತ್ತಿದ್ದವು. ಇವುಗಳನ್ನು "ಕಾಸು" ಮತ್ತು "ಆಣೆ"ಗಳಲ್ಲಿ ಹೇಳಬಹುದಾದರೆ:
೧ ದುಡ್ಡು = ೪ ಕಾಸು
೧ ಪಾವಲಿ = ೪ ಆಣೆ
೧ ಹಣ ಅಥವ ವರಹ= ೪ ಆಣೆ ಪಾವಲಿ
೧ ದುಗ್ಗಾಣಿ = ೮ ಕಾಸು ಅಥವಾ ೨ ದುಡ್ಡು ಎಂದು ಹೇಳಲಾಗುತ್ತಿತ್ತು.

ಈಗಿನ ಖೋಟಾ ನೋಟುಗಳು ಇರುವಂತೆ, ಹಿಂದೆಯೂ ನಾಣ್ಯಗಳ ನಕಲು ಮಾಡಲಾಗುತ್ತಿತ್ತು. ಬೆಳ್ಳಿಕಾಸಿನ ನಕಲನ್ನು "ಸೀಸ"ದಲ್ಲಿ ಮಾಡುತ್ತಿದ್ದರು. ಆದುದರಿಂದ, ನಾಣ್ಯವನ್ನು ಚಿಮ್ಮಿಸಿ ಅದರ ಶಬ್ಧದ ಆಧಾರದ ಮೇಲೆ ಅದು "ಬೆಳ್ಳಿ" ಅಥವ "ಸೀಸ"ದಿಂದ ಮಾಡಲ್ಪಟ್ಟಿದೆ ಎಂಬುದನ್ನು ಗುರುತಿಸುತ್ತಿದ್ದರು. "ಹಣ", "ವರಹ" ಎಂಬ ಪದಗಳನ್ನು ಸಾಮಾನ್ಯವಾಗಿ ಮದುವೆ ಮುಂತಾದ ಸಮಾರಂಭಗಲ್ಲಿ ಹೆಚ್ಚು ಉಪಯೋಗಿಸುತ್ತಿದ್ದರು. ಮದುವೆಗಳಲ್ಲಿ ನೀಡುವ ಉಡುಗೊರೆಯ ಹಣದ (ಮುಯ್ಯಿ) ಪಟ್ಟಿ ಬರೆಯುವಾಗ "ವಧುವಿಗೆ ಸೋದರಮಾವನಿಂದ ನಾಲ್ಕು ವರಹ" ಅಥವಾ "ವರನಿಗೆ ಚಿಕ್ಕಪ್ಪನಿಂದ ಹತ್ತು ಹಣ" ಎಂದು ಹೇಳುತ್ತಿದ್ದರು. ಕೆಲವು ಭಾಗಗಳಲ್ಲಿ "ಆಗ", "ಅಡ್ಡ" ಮುಂತಾದ ಪದಗಳನ್ನು ಈ ಕೆಳಗಿನ ಅರ್ಥದಲ್ಲಿ ಉಪಯೋಗಿಸುತ್ತಿದ್ದರು.
ಆಗ = ಒಂದು
ಅಡ್ಡ = ಎರಡು
ದುಡ್ಡು = ನಾಲ್ಕು
ದುಗ್ಗಾಣಿ = ಎಂಟು

ಗೌರಿ ಗಣೇಶ ಹಬ್ಬದ ಶುಭಾಶಯಗಳು