Jan 4, 2012

ಚನ್ನಪಟ್ಟಣದ ಪಾಳೆಯಗಾರರು ಮತ್ತು ಇಮ್ಮಡಿ ಜಗದೇವರಾಯ

ಚನ್ನಪಟ್ಟಣದ ಪಾಳೆಯಗಾರರು ಮತ್ತು ಇಮ್ಮಡಿ ಜಗದೇವರಾಯ:ಚನ್ನಪಟ್ಟಣ ಇತ್ತೀಚೆಗೆ ರಚನೆಯಾಗಿರುವ ರಾಮನಗರ ಜಿಲ್ಲೆಯ ಒಂದು ತಾಲೋಕು ಕೇಂದ್ರವಾಗಿದ್ದು ೧೫ ರಿಂದ ೧೭ನೇಶತಮಾನದವರೆಗೂ ಪ್ರಭಾವಿ ಪಾಳೆಯಗಾರರ ಆಳ್ವಿಕೆಯಲ್ಲಿತ್ತು. ಚನ್ನಪಟ್ಟಣದ ಪಾಳೆಯಗಾರರಲ್ಲಿ ಪ್ರಸಿದ್ಧರಾಗಿದ್ದ ರಾಣಾ ವಂಶದ ಪೆದ್ದ ಜಗದೇವರಾಯನೆಂಬುವವನು ಕ್ರಿ ಶ ೧೫೭೦ ರಲ್ಲಿ ಚನ್ನಪಟ್ಟಣದ ಅಧಿಕಾರಿಯಾಗಿ ನೇಮಿಸಲ್ಪಟ್ಟನು. ಇವನು ರಾಣಾ ವಂಶದಲ್ಲಿ ‘ಜಗದೇವರಾಯ’ನೆಂದು ಮೊದಲಿಗೆ ಕರೆಯಲ್ಪಟ್ಟ ತಿಮ್ಮಣ್ಣನಾಯಕನ ಮಗ.
ಇಮ್ಮಡಿ ಜಗದೇವರಾಯ ಈ ವಂಶದ ಪ್ರಸಿದ್ಧ ಪಾಳೆಯಗಾರ. ಅಪಾರ ಧೈರ್ಯಶಾಲಿಯೂ, ಶೂರನೂ ಆಗಿದ್ದ ಈತ ಪೆದ್ದ(ಪೇದ) ಜಗದೇವರಾಯನ ಸಹೋದರ.
ಆಗಾಗ ವಿಜಯನಗರ ಸಾಮ್ರಾಜ್ಯದ ಮೇಲೇ ದಂಡೆತ್ತಿ ಬರುತ್ತಿದ್ದ ವಿಜಾಪುರದ ಶಾಹೀ ಸುಲ್ತಾನರನ್ನು ಬಗ್ಗು ಬಡಿಯುವಲ್ಲಿ ಇಮ್ಮಡಿ ಜಗದೇವರಾಯನ ಪಾತ್ರ ಮಹತ್ವದ್ದು. ತನ್ನಂತಹ ಅನೇಕ ಪಾಳೆಯಗಾರ ಸಂಸ್ಥಾನಗಳೊಂದಿಗೆ ಸಮನ್ವಯ ಸಾಧಿಸಿ ಸೈನ್ಯಗಳನ್ನು ಕಲೆಹಾಕಿಕೊಂಡು ಹೋಗಿ ಶಾಹೀ ಸುಲ್ತಾನರನ್ನು ಹಿಮ್ಮೆಟ್ಟಿಸಿದನು. ಆಗಿನ ಶಾಹೀ ಸೈನ್ಯದ ದಂಡನಾಯಕರಾಗಿದ್ದ ಮುತುರ್ಜಾಖಾನ್, ಖಾನ್-ಖಾನ್, ನೂರ್-ಖಾನ್ ಮುಂತಾದವರನ್ನು ಇಮ್ಮಡಿ ಜಗದೇವರಾಯನ ನೇತೃತ್ವದ ಸೈನ್ಯ ಸೋಲಿಸಿ ಓಡಿಸಿತು.

ಇಮ್ಮಡಿ ಜಗದೇವರಾಯನ ಶೌರ್ಯ-ಸಾಧನೆಗಳನ್ನು ಮೆಚ್ಚಿದ ವಿಜಯನಗರದ ಪ್ರಭುಗಳು, ೯ ಲಕ್ಷ ಪಘೋಡ(ಆ ಕಾಲದ ಚಾಲ್ತಿಯಲ್ಲಿದ್ದ ಹಣ)ಗಳ ವರಮಾನವಿದ್ದ ಜಿಲ್ಲೆಯೊಂದನ್ನು ಕೊಡುಗೆಯಾಗಿ ನೀಡಿದರು. ಶಾಹೀ ಸುಲ್ತಾನರ ನಿರಂತರ ದಾಳಿಯಿಂದ ಕಂಗೆಟ್ಟಿದ್ದ ವಿಜಯನಗರದ ಅರಸರು ಈ ಪ್ರದೇಶವನ್ನು ನಿಯಂತ್ರಿಸಲು ಸತತ ಹೆಣಗಾಡುತ್ತಿದ್ದರು. ಪೂರ್ವದ ಬಾರಾಮಹಲಿನಿಂದ(ಇಂದಿನ ಸೇಲಂ)-ಪಶ್ಚಿಮಘಟ್ಟಗಳವರೆಗಿನ ವಿಶಾಲ ಭಾಗ ಚನ್ನಪಟ್ಟಣ ಪಾಳೆಯಗಾರ ಸಂಸ್ಥಾನ(ಇಮ್ಮಡಿ ಜಗದೇವರಾಯನ)ದ ಆಳ್ವಿಕೆಗೆ ಒಳಪಟ್ಟಿತ್ತು. ಚನ್ನಪಟ್ಟಣವು ಈ ಪ್ರದೇಶದ ಹೃದಯ ಭಾಗದಲ್ಲಿದ್ದುದರಿಂದ ಸಹಜವಾಗಿಯೇ ಅದು ಇಮ್ಮಡಿ ಜಗದೇವರಾಯನ ರಾಜಧಾನಿಯಾಯಿತು. ‘ಚನ್ನಪಟ್ಟಣದ ಪಾಳೆಯಗಾರರು’ ಪ್ರಸಿದ್ಧಿಗೆ ಬಂದಿದ್ದು ಇಮ್ಮಡಿ ಜಗದೇವರಾಯನ ನಂತರವೇ ಎಂಬುದು ಇತಿಹಾಸದ ಗಮನಾರ್ಹ ಸಂಗತಿ. ಪಾಳೆಯಗಾರರಿಗೆ ಸಹಜವಾಗಿ ಸೈನ್ಯ-ಸಂಪನ್ಮೂಲದ ಕೊರತೆ ಬಹಳವಾಗಿದ್ದುದರಿಂದ ಇಮ್ಮಡಿ ಜಗದೇವರಾಯನ ನಂತರ ಈ ವಿಶಾಲ ಭೂಪ್ರದೇಶವೊಂದನ್ನು ನಿಯಂತ್ರಿಸುವುದು ಅವನ ವಾರಸುದಾರರಿಗೆ ಸಾಧ್ಯವಾಗದೇ ಹೋಯಿತು. ಇದರಿಂದ ಇನ್ನಷ್ಟು ಮರಿ ಪಾಳೆಯಗಾರರ ಹುಟ್ಟಿಕೊಂಡು ತಮ್ಮನ್ನು ಸ್ವತಂತ್ರರೆಂದು ಘೋಷಿಸಿಕೊಂಡರು. ಪರಿಣಾಮ ಚನ್ನಪಟ್ಟಣ ಸಂಸ್ಥಾನ ಮತ್ತೆ ಚಿಕ್ಕ ಪ್ರಾಂತ್ಯವಾಗಿಯೇ ಉಳಿಯಿತು. ಈ ಹೊತ್ತಿಗಾಗಲೇ ವಿಜಯನಗರದ ಅರಸರ ಪ್ರಾಬಲ್ಯವೂ ತಗ್ಗಿತ್ತು.