ಅಪ್ರಮೇಯ ನೆಲೆಸಿಹ ಪವಿತ್ರ ಪುಣ್ಯಕ್ಷೇತ್ರ ಮಳೂರು
ಆಡಿಸಿದಳು ಯಶೋದೆ ಜಗದೋದ್ಧಾರನ, ಜಗದೋದ್ಧಾರನಾ ಮಗನೆಂದು ತಿಳಿಯುತಾ ಆಡಿಸಿದಳು ಯಶೋಧಾ ಜಗದೋದ್ಧಾರನಾ.....
ಪುರಂದರ ದಾಸರು ರಚಿಸಿದ ಈ ಗೀತೆ ಬಹು ಜನಪ್ರಿಯ. ಈ ಕೃತಿಯನ್ನು ದಾಸರು ರಚಿಸಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ಚನ್ನಪಟ್ಟಣ ಬಳಿ ಇರುವ ದೊಡ್ಡ ಮಳೂರಿನ ಕೃಷ್ಣ ದೇವಾಲಯದಲ್ಲಿ, ಪುರಾತನವಾದ ಈ ದೇವಾಲಯದಲ್ಲಿರುವ ಸುಂದರ ಕೃಷ್ಣನ ಮೂರ್ತಿಯನ್ನು ಕಂಡು ಭಾವಪರವಶರಾಗಿ ದಾಸರು ಈ ರಚನೆ ಮಾಡಿದರೆನ್ನುತ್ತದೆ ಇತಿಹಾಸ.
ಕಣ್ವ ನದಿಯ ದಂಡೆಯ ಮೇಲಿರುವ ಈ ಪುಟ್ಟ ಗ್ರಾಮದ ಹೆಸರು ಜೋಳರ ಕಾಲದ ಹಲವು ದಾಖಲೆಗಳಲ್ಲಿ ದೊರಕುತ್ತದೆ. ದೊಡ್ಡ ಮಳೂರು, ಮಳ್ಳೂರು, ಮರಳೂರು ಇತ್ಯಾದಿ ಹೆಸರುಗಳಿಂದ ಕರೆಸಿಕೊಂಡಿತ್ತು. ಹಿಂದೆ ಇದಕ್ಕೆ ರಾಜೇಂದ್ರ ಸಿಂಹ ನಗರ ಎಂಬ ಹೆಸರಿತ್ತೆಂದೂ ತಿಳಿದುಬರುತ್ತದೆ. ಸಾರಂಗಧರನಿಗೆ ಇಲ್ಲಿ ಕೈಗಳು ಮೊಳೆತುದರಿಂದ ಈ ಸ್ಥಳಕ್ಕೆ ಮೊಳತೂರು ಎಂಬ ಹೆಸರು ಬಂತೆಂದೂ ಕಾಲಾನಂತರದಲ್ಲಿ ಮೊಳತೂರು, ಮಳೂರಾಯಿತೆಂದು ಹೇಳಲಾಗಿದೆ. ಜಗದೇವರಾಯ ಈ ದೇವಸ್ಥಾನಕ್ಕೆ ಪ್ರಾಕಾರ ಕಟ್ಟಿಸಿದರೆಂದು ತಿಳಿದುಬರುತ್ತದೆ. ಈ ಊರು ಒಂದು ಕಾಲದಲ್ಲಿ ವೇದಾಧ್ಯಯನ ಕೇಂದ್ರವಾಗಿತ್ತು. ವೇದಾಧ್ಯಯನದಲ್ಲಿ ಸಾರ್ವಭೌಮತ್ವ ಪಡೆಯಲಿಚ್ಛಿಸುತ್ತಿದ್ದವರು ಇಲ್ಲಿ ಬರುತ್ತಿದ್ದರಂತೆ. ಹೀಗಾಗಿ ಇಲ್ಲಿನ ದೇವಾಲಯದಲ್ಲಿ ಸ್ಥಾಪಿಸಲಾಗಿರುವ ಅಪ್ರಮೇಯ ಎಂದೂ ಹೆಸರು ಬಂದಿದೆ. ಬ್ರಹ್ಮಾನಂದ ಪುರಾಣದ ರೀತ್ಯ ಅಪ್ರಮೇಯ ಎಂದರೆ ಪರಮೋಚ್ಚ ಎಂದು ಅರ್ಥ. ವನವಾಸಿಯಾಗಿದ್ದ ತ್ರೇತಾಯುಗಪುರುಷ ಶ್ರೀರಾಮಚಂದ್ರ ಇಲ್ಲಿ ಅಪ್ರಮೇಯನ ಪೂಜಿಸಿದನೆಂದೂ ಅದಕ್ಕೇ ರಾಮಾಪ್ರಮೇಯ ಎಂದೂ ಕರೆಯುತ್ತಾರೆ ಎನ್ನುತ್ತದೆ ಸ್ಥಳ ಪುರಾಣ.
ಇಲ್ಲಿರುವ ಕೃಷ್ಣಮೂರ್ತಿ ಅತ್ಯಂತ ಮನಮೋಹಕವಾಗಿದೆ. 16 ಕೈಗಳನ್ನುಳ್ಳ ಈ ಮೂರ್ತಿ ಶಂಖ, ಚಕ್ರ, ಗದಾ, ಪದ್ಮಾದಿ ಆಯುಧಗಳನ್ನು ಹಿಡಿದಿದ್ದಾನೆ. ಮೂರ್ತಿಯ ಹಿಂಭಾದಲ್ಲಿರುವ ವೃತ್ತಾಕಾರದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ.
ಶ್ರೀ ವ್ಯಾಸರಾಯರು ಇಲ್ಲಿ ದೇವತಾರ್ಚನೆ ಮಾಡುತ್ತಿದ್ದರು, ಇವರೇ ಇಲ್ಲಿ ಅಂಬೆಗಾಲು ಕೃಷ್ಣನನ್ನು ಪ್ರತಿಷ್ಠಾಪಿಸಿದರು ಎಂದೂ ಹೇಳುತ್ತದೆ ಐತಿಹ್ಯ. ಮುಮ್ಮಡಿ ಕೃಷ್ಣರಾಜ ಒಡೆಯರು ಈ ದೇವಾಲಯಕ್ಕೆ ಭೇಟಿ ನೀಡಿ, ಭಾವಪರವಶರಾಗಿ ದೇವರಿಗೆ ಹಲವು ಬಗೆಯ ಆಭರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಶ್ರೀರಾಮಾನುಜಾಚಾರ್ಯರು ಸಹ ಕೆಲಕಾಲ ಇಲ್ಲಿ ನೆಲೆಸಿ ಶ್ರೀಕೃಷ್ಣ ಭಗವಾನನ ಸೇವೆ ಮಾಡಿದ್ದಾರೆ ಎಂದೂ ಹೇಳುತ್ತಾರೆ ದೇವಾಲಯದ ಅರ್ಚಕರು.
ಮದುವೆಯಾಗಿ ಬಹುಕಾಲ ಮಕ್ಕಳಾಗದ ದಂಪತಿ, ಈ ದೇವಾಲಯಕ್ಕೆ ಆಗಮಿಸಿ ಬೆಣ್ಣೆ ಕೃಷ್ಣನ ಮಂದಿರದಲ್ಲಿ ತೊಟ್ಟಿಲು ಕಟ್ಟುವ ಹರಕೆ ಹೊರುತ್ತಾರೆ. ಮಕ್ಕಳಾದ ಬಳಿಕ ಮಗುವಿನೊಂದಿಗೆ ಆಗಮಿಸಿ ಹರಕೆಯನ್ನೂ ತೀರಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು.ಪ್ರಸ್ತುತ ರಾಮನಗರ ಜಿಲ್ಲೆಯಲ್ಲಿರುವ ದೊಡ್ಡ ಮಳೂರಿನಲ್ಲಿ ಕೃಷ್ಣ ಜನ್ಮಾಷ್ಠಮಿಯ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.