*ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.*
*ಬಾಲ ಗಣಪತಿ*
ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
*ತರುಣ ಗಣಪತಿ*
ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
*ಭಕ್ತಿ ಗಣಪತಿ*
ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.
*ವೀರ ಗಣಪತಿ*
ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
*ಶಕ್ತಿ ಗಣಪತಿ*
ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
*ದ್ವಿಜ ಗಣಪತಿ*
"ದ್ವಿಜ" ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.
*ಸಿದ್ಧಿ ಗಣಪತಿ*
ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
*ಉಚ್ಚಿಷ್ಟ ಗಣಪತಿ*
ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.
*ವಿಘ್ನ ಗಣಪತಿ*
ಗಣಪತಿಯನ್ನು "ವಿಘ್ನೇಶ್ವರ, ವಿಘ್ನನಾಶಕ" ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.
*ಕ್ಷಿಪ್ರ ಗಣಪತಿ*
ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
*ಹೇರಂಬ ಗಣಪತಿ*
ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.
*ಲಕ್ಷ್ಮೀ ಗಣಪತಿ*
ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
*ಮಹಾ ಗಣಪತಿ*
"ಮಹಾ" ಎಂಬ ಮಾತೇ "ಶ್ರೇಷ್ಟ" ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.
*ವಿಜಯ ಗಣಪತಿ*
ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ "ವಿಜಯ"ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.
*ನೃತ್ಯ ಗಣಪತಿ*
ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?
*ಊರ್ಧ್ವ ಗಣಪತಿ*
ಊರ್ಧ್ವ ಗಣಪತಿ ಎಂದರೆ" ಉದ್ದವಾಗಿ ಇರುವ ಗಣಪತಿ" ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.
*ಏಕಾಕ್ಷರ ಗಣಪತಿ*
"ಏಕಾಕ್ಷರ ಗಣಪತಿ"ಯು ಹೆಸರೇ ಸೂಚಿಸುವಂತೆ "ಒಂದೆ ಅಕ್ಷರದ "ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
*ವರದ ಗಣಪತಿ*
ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ "ಮೂರನೆ ಕಣ್ಣು" ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
*ತ್ರಯಾಕ್ಷರ ಗಣಪತಿ*
ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.
*ಕ್ಷಿಪ್ರ ಪ್ರಸಾದ ಗಣಪತಿ*
ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.
*ಹರಿದ್ರ ಗಣಪತಿ*
ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.
*ಏಕದಂತ ಗಣಪತಿ*
ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.
*ಸೃಷ್ಟಿ ಗಣಪತಿ*
ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.
*ಉದ್ಧಂಡ ಗಣಪತಿ*
ಉದ್ಧಂಡ ಗಣಪತಿಯು ವಿಶ್ವದಲ್ಲಿ 'ಧರ್ಮವನ್ನು ಪರಿಪಾಲಿಸುತ್ತಾನೆ" . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
*ಋಣಮೋಚನ ಗಣಪತಿ*
ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.
*ದುಂಧಿ ಗಣಪತಿ*
ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.
*ದ್ವಿಮುಖ ಗಣಪತಿ*
ದ್ವಿಮುಖ ಗಣಪತಿಯು ಹೆಸರೇ ಸೂಚಿಸುವಂತೆ, ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡೆಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
*ತ್ರಿಮುಖ ಗಣಪತಿ*
ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು, ಚಿನ್ನದ ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.
*ಸಿಂಹ ಗಣಪತಿ*
ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
*ಯೋಗ ಗಣಪತಿ*
ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.
*ದುರ್ಗಾ ಗಣಪತಿ*
ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು, ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.
*ಸಂಕಷ್ಟ ಹರ ಗಣಪತಿ*
ಗಣಪತಿಯ ಈ ಅದ್ಭುತ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತದೆ.
💐 *ಸರ್ವೇ ಜನಃ ಸುಖಿನೋ ಭವಂತು* 💐