Jan 12, 2016

ಯುವ ಚೈತನ್ಯದ ಚಿಲುಮೆ - ಸ್ವಾಮಿ ವಿವೇಕಾನಂದ

೧೨-೧-೧೮೬೩ ಇತಿಹಾಸ ಎಂದೂ ಮರೆಯಲಾರದ ದಿನ. ಅಂದು ಭಾರತೀಯ ಸನಾತನ ಸಂಸ್ಕೃತಿಯ ಪುನರುತ್ಥಾನದ ಹರಿಕಾರ, ಅಪ್ರತಿಮ ವಾಗ್ಮಿ, ಅನುಪಮ ಮಾನವತಾವಾದಿ ಸ್ವಾಮಿ ವಿವೇಕಾನಂದರು ಹುಟ್ಟಿದ ದಿನ. ನಾವೀಗ ವಿವೇಕಾನಂದರ 153ನೇ ವರ್ಷಾಚರಣೆಯಲ್ಲಿದ್ದೇವೆ. ಯುವ ಜನರಿಗೆ ಪ್ರೇರಕ ಶಕ್ತಿಯಾದ, ನವ ಚೈತನ್ಯದ ಚಿಲುಮೆಯಾದ ವಿವೇಕಾನಂದರನ್ನು ಲೇಖನವೊಂದರಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಅವರ ವ್ಯಕ್ತಿತ್ವದ ತೃಣಮಾತ್ರ ಪರಿಚಯ ಮಾಡಿಸುವ ಪ್ರಯತ್ನ ಇದು.....

ಇತ್ತೀಚೆಗೆ ಭಾರತದಲ್ಲಿ ಕೂಡ ಫೆಬ್ರವರಿ ೧೪ರಂದು ವ್ಯಾಲೆಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನ ಆಚರಿಸಲಾಗುತ್ತಿದೆ. ಇದು ನಮ್ಮ ಸಂಸ್ಕೃತಿ ಖಂಡಿತಾ ಅಲ್ಲ. ಸಂಸ್ಕೃತಿಯ ನೆಲವೀಡು ಭಾರತದಲ್ಲಿ ಜನಿಸಿದ ನಾವು ಪ್ರತಿ ನಿತ್ಯ ಮಾತೃ ದೇವೋಭವ, ಪಿತೃದೇವೋ ಭವ, ಆಚಾರ್ಯ ದೇವೋ ಭವ ಎಂದು ಹೇಳುತ್ತೇವೆ. ಹೀಗಾಗಿ ನಾವು ಇಷ್ಟು ದಿನ ಪ್ರತ್ಯೇಕವಾಗಿ ಅಮ್ಮಂದಿರ ದಿನ, ಅಪ್ಪಂದಿರ ದಿನವನ್ನೂ ಆಚರಿಸುತ್ತಿರಲಿಲ್ಲ. ನಿತ್ಯವೂ ನಾವು ಮಾತಾಪಿತೃಗಳನ್ನು ಗುರುಗಳನ್ನು ಭಗವಂತನೆಂದೇ ಪೂಜಿಸುತ್ತಿದ್ದೆವು.

ಉದಾರೀಕರಣ, ಜಾಗತೀಕರಣದ ಫಲವಾಗಿ, ಪಾಶ್ಚಾತ್ಯ ಅನುಕರಣೆಯಿಂದ ಮದರ್ಸ್ ಡೇ, ಫಾದರ್ಸ್ ಡೇಗಳೂ ಭಾರತಕ್ಕೆ ಕಾಲಿಟ್ಟಿವೆ. ಇದೆಲ್ಲಾ ಸರಿ ಈ ದೇಶದ ಮುಂದಿನ ಪ್ರಜೆಗಳಾದ ಯುವಜನರಿಗೆ ಒಂದು ದಿನ ಬೇಡವೇ. ಅಂಥ ಒಂದು ದಿನವನ್ನು ಯುವಕರಿಗೆ ಕೊಟ್ಟ ಶ್ರೇಯ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತದೆ. ವಿಶ್ವಾದ್ಯಂತ ಕೂಡ ವಿವೇಕಾನಂದರ ಜಯಂತಿಯನ್ನು ಯುವ ದಿನವೆಂದೇ ಆಚರಿಸುತ್ತಾರೆ. ಇದಕ್ಕೆ ವಿಶ್ವಮನ್ನಣೆಯೂ ದೊರೆತಿದೆ.

ಇಡೀ ಮನುಕುಲಕ್ಕೆ ಯುವ ಜನತೆಗೆ ಆದರ್ಶ ಪ್ರಾಯರಾದ ಸ್ವಾಮಿ ವಿವೇಕಾನಂದರ ಸಾಧನೆಯಾದರೂ ಏನು? ಅವರನ್ನೇಕೆ ವಿಶ್ವ ಸ್ಮರಿಸುತ್ತದೆ. ಇದನ್ನು ಭಾರತೀಯರಾದ ಪ್ರತಿಯೊಬ್ಬರೂ ತಿಳಿಯಲೇ ಬೇಕು. ಅದು ನಮ್ಮ ಕರ್ತವ್ಯ ಕೂಡ.

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಒಂದು ಮಾತು ಹೇಳಿದ್ದಾರೆ. ‘ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮೀ ವಿವೇಕಾನಂದರನ್ನು ಓದಿ’ ಎಂದು. ಅಂದರೆ ಸ್ವಾಮೀಜಿ ಅವರ ಬದುಕೇ ಇಡೀ ಭಾರತದ ಚಿತ್ರಣ.  ಅವರ ಜೀವನವೇ ಒಂದು ಯಶೋಗಾಥೆ.

swamy Vivekananda, ಸ್ವಾಮಿ ವಿವೇಕಾನಂದ ಸಂದೇಶಗಳುನರೇಂದ್ರರೇನೂ ಹುಟ್ಟು ಸನ್ಯಾಸಿಯಲ್ಲ. ಅವರು ಈ ವಿಶ್ವದ ಗಮನ ಸೆಳೆದಿದ್ದು ಕೇವಲ ೭ ವರ್ಷಗಳ ಅವಧಿಯಲ್ಲಿ. ಅವರು ಯುಗಪುರುಷರೆನಿಸಿದ್ದು ೧೮೯೩-೧೯೦೦ರ ನಡುವಿನ ಕೇವಲ ಸಪ್ತ ವರ್ಷಗಳಲ್ಲಿ. ಆ ಸಪ್ತ ವರ್ಷದಲ್ಲಿ ಅವರ ಕೀರ್ತಿ

, ಖ್ಯಾತಿ ಸಪ್ತದ್ವೀಪಾ ವಸುಂದರಾ ಎನ್ನುವಂತೆ ಇಡೀ ವಿಶ್ವಕ್ಕೇ ಹಬ್ಬಿತ್ತು. ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಅಮೆರಿಕ, ಇಂಗ್ಲೆಂಡ್, ಯುರೋಪ್ ಹಾಗೂ ಭಾರತದಲ್ಲಿ ಅವರು ಮಾಡಿದ ಭಾಷಣ, ಬರೆದ ಪತ್ರಗಳು, ನಡೆಸಿದ ಚರ್ಚೆ ಇಂದಿಗೂ ಆಕರ ಗ್ರಂಥಗಳಾಗಿವೆ. ವಿಶ್ವಜಾಗೃತಿಯ ಸೋಪಾನಗಳಾಗಿವೆ. ಹೀಗಾಗಿಯೇ ವಿಶ್ವ ಅವರನ್ನು ಯುಗಾಚಾರ್ಯ ಎಂದು ಗುರುತಿಸಿದ್ದು.
ಸ್ವಾಮಿ ವಿವೇಕಾನಂದರ ಬಗ್ಗೆ ಕಗ್ಗದ ಕವಿ ಶ್ರೇಷ್ಠ ಡಿ.ವಿ.ಜಿ. ಹೀಗೆ ಹೇಳುತ್ತಾರೆ:ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತ ಪ್ರತಿಭಾ ಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು, ಅದು ಒಮ್ಮೆ ಲೀಲೆಯಿಂದ ಸಮುದ್ರ ತಳಕ್ಕೆ ಧುಮುಕುವುದು, ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು. ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದ ಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ, ಒಂದು ಲಘುತೆ, ಒಂದು ಆವೇಶ, ಒಂದು ವಿಲಾಸ - ಇವು ಆ  swamy Vivekananda, ಸ್ವಾಮಿ ವಿವೇಕಾನಂದ ಸಂದೇಶಗಳುಬುದ್ಧಿಯ ಗುಣಗಳು. ಅವರು ಸಂಸ್ಕೃತದಲ್ಲಿ ವ್ಯಾಕರಣ ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲಿಷಿನಲ್ಲಿ ಕಾವ್ಯ ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ ತತ್ತ್ವ ಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯ ವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ಧೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ, ಸಕಲ ಜನಮನೋಗ್ರಾಹಿಯಾದ ಹಾಸ್ಯ ವಿನೋದ ರಸಿಕತೆ, ಹೃದಯವಿದ್ರಾವಕವಾದ ಗಾನಮಾಧುರ್ಯ ಇದೆಲ್ಲವೂ ಅವರಲ್ಲಿ ಸಮ್ಮಿಳಿತವಾಗಿದ್ದವು. ಈ ನಾನಾ ಗುಣಶಕ್ತಿಗಳಿಗೆ ಕಿರೀಟಪ್ರಾಯವಾಗಿದ್ದುದು ಶ್ರೀರಾಮಕೃಷ್ಣ ಪರಮಹಂಸ ಗುರುಗಳ ಅನುಗ್ರಹ’’.

ಡಿವಿಜಿ ಅವರ ಮನದಾಳದ ಈ ಮಾತುಗಳು ಇಡೀ ವಿವೇಕಾನಂದರ ಮೇರು ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಪರಿಚಯಿಸಿಬಿಡುತ್ತವೆ. ಅವರ ಅಭಿಪ್ರಾಯದ ಕೊನೆಯ ಸಾಲುಗಳು ಗುಣಶಕ್ತಿಗಳಿಗೆ ಕಿರೀಟಪ್ರಾಯವಾದದ್ದು ಶ್ರೀರಾಮಕೃಷ್ಣ ಪರಮಹಂಸ ಎಂಬುದನ್ನು ಸಾರುತ್ತವೆ. ನರೇಂದ್ರದತ್ತರು ವಿವೇಕಾನಂದರಾದದ್ದೇ ರಾಮಕೃಷ್ಣ ಪರಮಹಂಸರಿಂದ.

swamy Vivekananda, ಸ್ವಾಮಿ ವಿವೇಕಾನಂದ ಸಂದೇಶಗಳುಬಾಲ್ಯದಿಂದಲೂ ದೇವರ ಅನ್ವೇಷಣೆಯಲ್ಲಿ ತೊಡಗಿದ್ದ ನರೇಂದ್ರದತ್ತರು ದೇವರಿದ್ದಾನೆಯೇ

? ಅವನಿದ್ದಲ್ಲಿ ಅವನು ಯಾವ ರೀತಿ ಇದ್ದಾನೆ? ಇದ್ದರೆ ನಮಗೇಕೆ ಕಾಣುವುದಿಲ್ಲ ? ಮನುಷ್ಯನೊಂದಿಗೆ ಅವನ ಸಂಬಂಧವೇನು? ಎಲ್ಲೆಲ್ಲೂ ಅಕ್ರಮ, ಅನ್ಯಾಯ ತುಂಬಿರುವ ಈ ವಿಶ್ವವನ್ನು ಅವನು ನಿರ್ಮಿಸಿದನೇಕೆ? ಎಂಬಿತ್ಯಾದಿ ಪ್ರಶ್ನೆ ಕೇಳಿ ತಾಯಿ, ತಂದೆ, ಗುರುಗಳಿಗೆ ಇರುಸು ಮುರುಸು ಉಂಟು ಮಾಡುತ್ತಿದ್ದರು.
ಬಾಲ್ಯದಿಂದಲೂ ಬಲು ತಂಟೆಕೋರರಾಗಿದ್ದ ನರೇಂದ್ರ, ತಾಯಿ ಬೈದರೂ, ಹೊಡೆದರೂ ಜಗ್ಗುತ್ತಿರಲಿಲ್ಲ. ಆದರೆ, ತಲೆಯ ಮೇಲೆ ತಾಯಿ ನೀರು ಚುಮುಕಿಸಿ ಶಿವಶಿವ ಎಂದರೆ ಮಂತ್ರಮುಗ್ಧರಾದವರಂತೆ ತಟಸ್ಥರಾಗಿಬಿಡುತ್ತಿದ್ದರು. ನರೇಂದರು ಚಿಕ್ಕವರಾಗಿದ್ದಾಗ, ಒಂದು ದಿನ ಬೆಳಗ್ಗೆ ತಾಯಿಗೆ ಹನುಮಂತ ಎಲ್ಲಿದ್ದಾನೆ ತೋರಿಸು ಎಂದು ಹಠ ಹಿಡಿದರು, ಆಗ ತಾಯಿ ಊರಂಚಿನ ಬಾಳೆಯ ತೋಟದಲ್ಲಿದ್ದಾನೆ ಎಂದು ಹೇಳಿ ಕಾಟ ತಪ್ಪಿಸಿಕೊಂಡರು. ಆದರೆ ತಾಯಿಯ ಮಾತನ್ನು ವೇದ ವಾಕ್ಯ ಎಂದು ತಿಳಿದ ನರೇಂದ್ರರು ಬಾಳೆಯ ತೋಟಕ್ಕೆ ಹೋಗಿ ಹುಡುಕಾಡಿದರು, ಹನುಮನಿಗಾಗಿ ಕಾದು ಕುಳಿತರು. ಸಂಜೆಯಾಯಿತು, ರಾತ್ರಿಯಾಯಿತು ವಿಚಲಿತರಾಗದೆ ಆಂಜನೇಯ ಬಂದೇ ಬರುತ್ತಾನೆ ಎಂದು ನಿರೀಕ್ಷಿಸಿದರು. ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ಹುಡುಕಾಡಿದ ತಾಯಿ ಭುವನೇಶ್ವರಿ ದೇವಿ ಬಾಳೆಯ ತೋಟಕ್ಕೆ ಹೋಗಿ, ಶ್ರೀರಾಮದೇವರ ಆಣತಿಯ ಮೇರೆಗೆ ಹನುಮ ಇಂದು ಬೇರೆಡೆ ಹೋಗಿದ್ದಾನೆ ಇನ್ನೊಂದು ದಿನ ಕಾಣಿಸುತ್ತಾನೆ ಬಾ ಎಂದು ಮಗನನ್ನು ಸಮಾಧಾನ ಮಾಡಿ ಮನೆಗೆ ಕರೆತಂದರು. ತನ್ನ ಮಾತಿನ ಬಗ್ಗೆ, ದೇವರ ಬಗ್ಗೆ ಮಗನಿಗಿರುವ ನಂಬಿಕೆಗೆ ತಾಯಿ ಅವಕ್ಕಾಗಿದ್ದರು.

swamy Vivekananda, ಸ್ವಾಮಿ ವಿವೇಕಾನಂದ ಸಂದೇಶಗಳುಹೀಗೆ ಭಗವಂತನ ಅನ್ವೇಷಣೆಯಲ್ಲಿದ್ದ ನರೇಂದ್ರರಿಗೆ ಭಗವಂತನಿದ್ದಾನೆಂಬ ಉತ್ತರ ಸಿಕ್ಕಿದ್ದು

, ಭಗವತ್ ಸಾಕ್ಷಾತ್ಕಾರವಾಗಿದ್ದು ದಕ್ಷಿಣೇಶ್ವರದಲ್ಲಿ ಶ್ರೀರಾಮಕೃಷ್ಣರ ಶಿಷ್ಯರಾದ ಬಳಿಕ. ಕಾಳಿದೇವಿಯನ್ನು ದೇವರೆಂದು ಒಪ್ಪಿದ ನರೇಂದ್ರರನ್ನು ೧೮೮೬ರಲ್ಲಿ ಪರಮಹಂಸರು ಕೆಲಕಾಲ ನಿರ್ವಿಕಲ್ಪ ಸಮಾಧಿ ಸ್ಥಿತಿಯಲ್ಲಿರಿಸಿ ದೈವಸಾಕ್ಷಾತ್ಕಾರ ಮಾಡಿಸಿದ್ದರು. ೧೮೮೭ರ ಜನವರಿಯಲ್ಲಿ ವಿರಾಜಹೋಮ ಮಾಡಿ ಸನ್ಯಾಸ ಸ್ವೀಕರಿಸಿದ ನರೇಂದ್ರರು ಮೊದಲಿಗೆ ಸಚ್ಚಿದಾನಂದ ಎಂಬ ಹೆಸರು ಪಡೆದರು, ನಂತರ ವಿವಿಧೀಶಾನಂದ ಎಂಬ ಹೆಸರು ಪಡೆದು ದೇಶ ಪರ್ಯಟನೆ ಮಾಡಿದರು. ೧೮೯೨ರಲ್ಲಿ ಕನ್ಯಾಕುಮಾರಿಗೆ ಬಂದು ಕೊರೆಯುವ ಚಳಿಯಲ್ಲಿ ಸಮುದ್ರದಲ್ಲಿ ಈಜಿ ಕನ್ಯಾಕುಮಾರಿಯ ಬೆಟ್ಟದ ಮೇಲೆ ಶಿಲೆಯಂತೆ ನಿಂತು ಅಖಂಡ ಭಾರತವನ್ನು ಅಡಿಯಿಂದ ಮುಡಿಯವರೆಗೆ ದರ್ಶಿಸಿದರು. ಭಾರತಾಂಬೆಯ ಸಂದೇಶ ಆಲಿಸಿದರು. ಅಮೆರಿಕದಲ್ಲಿ ನಡೆಯಲಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರ್ಧಾರ ಮಾಡಿದರು. ಆಗ ಈ ವಿದೇಶ ಪ್ರವಾಸಕ್ಕೆ ನೆರವು ನೀಡಿದ ಖೇತಡಿಯ ಮಹಾರಾಜ ಅಜಿತ್‌ಸಿಂಹ ತಮ್ಮಲ್ಲಿ ವಿವೇಕವನ್ನೂ  ಮತ್ತು ದರಿದ್ರ ನಾರಾಯಣನ ಸೇವೆಯಲ್ಲಿ  ಆನಂದವನ್ನು ಪಡೆಯುತ್ತಿದ್ದ ವಿವಿಧೀಶಾನಂದ(ನರೇಂದ್ರ)ರಿಗೆ ವಿವೇಕಾನಂದ ಎಂಬ ಹೆಸರು ನೀಡಿದರು.
ಹೊಸ ಸೂರ್ಯನ ಉದಯ: ಅಜಿತ ಸಿಂಹರ ಆರ್ಥಿಕ ನೆರವು ಪಡೆದು ೧೮೯೩ರ ಮೇ ೩೧ರಂದು ಮುಂಬೈ ಬಂದರಿನಿಂದ ಹೊರಟು ಚೀಣಾ, ಹಾಂಕಾಂಗ್ ಮತ್ತು ಜಪಾನ್ ಮಾರ್ಗವಾಗಿ ಅಮೆರಿಕಕ್ಕೆ ತಲುಪಿದ ವಿವೇಕಾನಂದರು ೧೮೯೩ರ ಸೆಪ್ಟೆಂಬರ್ ೧೧ರಂದು ಸೋಮವಾರ ಶಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಕೆಲವೇ ನಿಮಿಷಗಳ ಭಾಷಣ ಅವರನ್ನು ಯುಗಪುರುಷನನ್ನಾಗಿ ಮಾಡಿತು. ಭಾರತದ ಸನಾತನ ಧರ್ಮದ ಹಿರಿಮೆ ವಿಶ್ವಕ್ಕೇ ತಿಳಿಯಿತು. ಅಂದು ವಿಶ್ವದಲ್ಲಿ ಹೊಸ ಸೂರ್ಯನ ಉದಯವಾಗಿತ್ತು.

swamy Vivekananda, ಸ್ವಾಮಿ ವಿವೇಕಾನಂದ ಸಂದೇಶಗಳುಅಂದು ಸರ್ವಧರ್ಮ ಸಭೆಯನ್ನೊಮ್ಮೆ ದಿಟ್ಟಿಸಿ ನೋಡಿದ ಸ್ವಾಮೀಜಿ

, ಮಾತೆ ಸರಸ್ವತಿಯನ್ನೂ, ತಮ್ಮ ಗುರುದೇವನನ್ನೂ ನೆನೆದು ಅಮೆರಿಕದ ನನ್ನ ಭ್ರಾತೃ, ಭಗಿನಿಯರೆ ಎಂದು ಸಂಬೋಧಿಸಿ ನೆರೆದಿದ್ದ ಎಲ್ಲರಲ್ಲೂ ಭ್ರಾತೃತ್ವದ ಭಾವನೆ ಹುಟ್ಟು ಹಾಕಿದ್ದರು.
ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿ ಭಾಷಣ ಕೇಳಿದ ಬಳಿಕ ಅಮೆರಿಕದ ಪ್ರಮುಖ ಪತ್ರಿಕೆ ಹೀಗೆ ಬರೆಯಿತು. ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರೇ ಶ್ರೇಷ್ಠ ವ್ಯಕ್ತಿ. ಅವರ ಭಾಷಣ ಕೇಳಿದ ಬಳಿಕ ಇಂತಹ ಸುಸಂಸ್ಕೃತರ ದೇಶಕ್ಕೆ ನಾವು ಧರ್ಮ ಪ್ರಚಾರಕರನ್ನು ಕಳುಹಿಸುವುದು ಮೂರ್ಖತನವಾದೀತು.’’  ಸ್ವಾಮೀಜಿ ಅವರ ಭಾಷಣ ಭಾರತದ ಮೇಲೆ ಇಡೀ ವಿಶ್ವ ಸಮುದಾಯಕ್ಕಿದ್ದ ತಪ್ಪು ಕಲ್ಪನೆಗಳನ್ನು ದೂರ ಮಾಡಿತು. ಇಡೀ ವಿಶ್ವವೇ ಭಾರತದತ್ತ ಗೌರವದಿಂದ ನೋಡುವಂತೆ ಮಾಡಿತು. ಭಾರತದ ಬಗ್ಗೆ ವಿಶ್ವಕ್ಕೇ ಗೌರವ ಮೂಡಿಸಿದ ಆ ಮಹಾನ್ ಚೇತನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಅಲ್ಲವೇ?

ಜನನ: ೧೮೬೩-೧೯೦೨ರ ಅವಧಿಯಲ್ಲಿ ಈ ಭೂಮಿಗೆ ಭೇಟಿ ನೀಡಿದ್ದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು ಭಾರತೀಯ ಸನಾತನ ಸಂಸ್ಕೃತಿಯ ಹರಿಕಾರ. ಆಧುನಿಕ ಯುಗಮಾನದ ಅಗತ್ಯಗಳಿಗೆ ಅನುಗುಣವಾಗಿ, ನವ ವಿಶ್ವದ ನೂತನ ಪ್ರಶ್ನೆಗಳಿಗೂ ಉತ್ತರ ಕೊಟ್ಟು ಬಾಳುವಷ್ಟು ಜೀವಾಳ ಸನಾತನ ಹಿಂದೂ ಧರ್ಮದಲ್ಲಿ ಖಂಡಿತವಾಗಿಯೂ ಇದೆ ಎಂದು ಪ್ರತಿಪಾದಿಸಿದ ಧರ್ಮೋದ್ಧಾರಕ, ಅಪ್ರತಿಮ ವಾಗ್ಮಿ, ಅನುಪಮ ಮಾನವತಾವಾದಿ, ವೀರ ಸನ್ಯಾಸಿ ವಿವೇಕಾನಂದರು.