Feb 8, 2016

ಬೆಂಗಳೂರು ಹಾಗು ವೆಂಗಿಮಂಡಲ

 

ಬೆಂಗಳೂರು ಹಾಗು ವೆಂಗಿಮಂಡಲ

ಬೆಂಗಳೂರು ಈ ಪದದ ಮೂಲ ‘ಬೆಂದಕಾಳೂರು’ ಎಂದು ಹೇಳಲಾಗುತ್ತಿದೆ. ಈ ನಿರುಕ್ತಿಗಾಗಿ ಒಂದು ಕತೆಯನ್ನೇ ಕಟ್ಟಲಾಗಿದೆ.
ಆದರೆ, ಕೆಳಗೆ ಕೊಟ್ಟ ಅಂಶಗಳನ್ನು ಗಮನಿಸಿರಿ:

ವೆಂಗ ಅಥವಾ ಬೆಂಗ ಪದದಿಂದ ಪ್ರಾರಂಭವಾಗುವ ೧೩ ಗ್ರಾಮಗಳು ಕರ್ನಾಟಕದಲ್ಲಿವೆ:
೧. ಬೆಂಗಳೂರು (ಬೆಂಗಳೂರು ತಾಲೂಕು/ ಬೆಂಗಳೂರು ಜಿಲ್ಲೆ)
೨. ಬೆಂಗನೂರು (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೩. ಬೆಂಗಳೆ (ಶಿರಸಿ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೪. ಬೆಂಗೂರು (ಮಡಿಕೇರಿ ತಾಲೂಕು/ ಕೊಡಗು ಜಿಲ್ಲೆ)
೫. ಬೆಂಗೇರಿ (ಹುಬ್ಬಳ್ಳಿ ತಾಲೂಕು/ ಧಾರವಾಡ ಜಿಲ್ಲೆ)
೬. ಬೆಂಗ್ರೆ (ಭಟಕಳ್ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೭. ವೆಂಗಲಪ್ಪನ ಹಳ್ಳಿ (ಮಾಗಡಿ ತಾಲೂಕು/ ಬೆಂಗಳೂರು ಜಿಲ್ಲೆ)
೮. ವೆಂಗಲಮ್ಮನ ಹಳ್ಳಿ (ಮಧುಗಿರಿ ತಾಲೂಕು/ ತುಮಕೂರು ಜಿಲ್ಲೆ)
೯. ವೆಂಗಲಮ್ಮನ ಹಳ್ಳಿ (ಕೊರಟಗೆರೆ ತಾಲೂಕು/ ತುಮಕೂರು ಜಿಲ್ಲೆ)
೧೦. ವೆಂಗಲಾಪುರ (ಹೊಸದುರ್ಗ ತಾಲೂಕು/ ಬಳ್ಳಾರಿ ಜಿಲ್ಲೆ)
೧೧. ವೆಂಗಸಂದ್ರ (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೧೨. ವೆಂಗಳಾಪುರ (ದೇವದುರ್ಗ ತಾಲೂಕು/ ರಾಯಚೂರು ಜಿಲ್ಲೆ)
೧೩. ವೆಂಗಳಾಪುರ(ಡಿ) (ಸಿಂಧನೂರು ತಾಲೂಕು/ ರಾಯಚೂರು ಜಿಲ್ಲೆ)

ಈ ಸ್ಥಳನಾಮಗಳನ್ನು ಪರಿಶೀಲಿಸಿದಾಗ, ಇವೆಲ್ಲವುಗಳ ಪೂರ್ವಪದ ‘ವೆಂಗ’ ಅಥವಾ ‘ಬೆಂಗ’ ಇದ್ದದ್ದು ಕಂಡು ಬರುವದು. ಕನ್ನಡ, ತಮಿಳು, ತೆಲುಗು,ತುಳು ಹಾಗು ಮಲೆಯಾಳಮ್ ಎನ್ನುವ ಪಂಚದ್ರಾವಿಡ ಭಾಷೆಗಳು ಪ್ರತ್ಯೇಕವಾಗುವ ಸಮಯದಲ್ಲಿ ‘ವೆಂಕ’ ಎನ್ನುವ ಮೂಲಪದವು ‘ವೆಂಗ’ ಹಾಗೂ ‘ಬೆಂಗ’ ವಾಗಿದ್ದರಲ್ಲಿ ಅಚ್ಚರಿ ಏನಿಲ್ಲ. ಅರ್ಥಾತ್, ಈ ಎಲ್ಲ ಸ್ಥಳನಾಮಗಳ ಅರ್ಥವೆಂದರೆ ಈ ಸ್ಥಳಗಳು ವೆಂಕನ ಊರುಗಳು.
ಈ ವೆಂಕನು ಯಾರು?
ಅನೇಕ ದಾಕ್ಷಿಣಾತ್ಯರ ಕುಲದೈವವಾದ ವೆಂಕಪ್ಪನೇ ಈ ವೆಂಕನು!

ವೆಂಕ, ವೆಂಗ ಹಾಗೂ ಬೆಂಗ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಕರ್ನಾಟಕದ ಹೊರಗೂ ದೊರೆಯುತ್ತವೆ. ಭಾರತದ ಮಾಜಿ ಪ್ರಧಾನಿಯಾದ ಪಿ.ವಿ. ನರಸಿಂಹರಾಯರು ‘ವೆಂಗಲ್’ ಊರಿನವರು. ವೆಂಗಲ್ ಅಂದರೆ ‘ವೆಂಕ+ಕಲ್’. (ಕಲ್ ಪದದಿಂದ ಅಂತ್ಯವಾಗುವ ಅನೇಕ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ನಿಜಗಲ್, ಹಾನಗಲ್, ಭಟಕಳ್ ಇ.) ಆಂಧ್ರಪ್ರದೇಶದಲ್ಲಿರುವ ಮತ್ತೊಂದು ದೊಡ್ಡ ಊರೆಂದರೆ ವೆಂಗನ್ನಪಲೇಮ್. ತಿರುಪತಿ ಗಿರಿಯೊಡೆಯ ವೆಂಕಪ್ಪನ ಹೆಸರು ‘ವೆಂಕಟೇಶ’ ಎನ್ನುವದನ್ನು ಗಮನಿಸಿ. ಇದು ವೆಂಕಟ+ಈಶ ಎನ್ನುವ ಎರಡು ಪದಗಳಿಂದಾಗಿದೆ. ಹಾಗಿದ್ದರೆ ವೆಂಕಟ ಅಂದರೆ ಯಾರು? ವೆಂಕಟ ಇದು ವೆಂಕ ಅಥವಾ ವೆಂಗ ಹೆಸರುಗಳ ಮತ್ತೊಂದು ರೂಪವಷ್ಟೆ. ಈ ವೆಂಕ, ವೆಂಗ ಹೆಸರಿನ ಮೂಲನಿವಾಸಿಗಳ ಸಮುದಾಯವು ‘ವೆಂಗಿಮಂಡಲ’ ಎನ್ನುವ ಪ್ರದೇಶದ ನಿವಾಸಿಯಾಗಿರಲೇಬೇಕು.

ಕರ್ನಾಟಕದ ಹೆಸರಾಂತ ಸಾಹಿತಿಗಳಾದ ಮುಳಿಯ ತಿಮ್ಮಪ್ಪಯ್ಯನವರ ಅಭಿಪ್ರಾಯದಲ್ಲಿ ಈ ವೆಂಗಿಮಂಡಲವು ವಿಂಧ್ಯಪರ್ವತದ ತಪ್ಪಲಿನಲ್ಲಿತ್ತು. ಅವರ “ಕನ್ನಡ ನಾಡೂ ದೇಸಿ ಸಾಹಿತ್ಯವೂ” ಕೃತಿಯಲ್ಲಿ ತಮ್ಮ ಅನುಮಾನಕ್ಕೆ ಅನೇಕ supportಗಳನ್ನು ನೀಡಿದ್ದಾರೆ. ಆ ಪ್ರದೇಶದಲ್ಲಿರುವ ಕೆಲವು ಹೆಸರುಗಳನ್ನು ಗಮನಿಸಿದಾಗ (ಉದಾಹರಣೆಗೆ: ಭಾರತದ ಮಾಜಿ ಕ್ರಿಕೆಟ್ ನಾಯಕರಾದ ‘ವೆಂಗಸರಕಾರ’), ತಿಮ್ಮಪ್ಪಯ್ಯನವರ ಊಹೆಗೆ ಬಲ ಬರುತ್ತದೆ.

ಈ ಅಂಶಗಳನ್ನು ಗಮನಿಸಿದಾಗ, ‘ಬೆಂಗಳೂರು’ ಇದು ‘ವೆಂಗಳೂರು’(=ವೆಂಕನ ಊರು) ಎನ್ನುವದು ಸ್ಪಷ್ಟವಾಗುತ್ತದೆ ಹಾಗು ‘ಬೆಂದಕಾಳೂರು’ ಎಂದು ಅರ್ಥೈಸುವದು ಹಾಸ್ಯಾಸ್ಪದ ದಂತಕತೆ ಎಂದು ಭಾಸವಾಗುವದು.

ಮುಳಿಯ ತಿಮ್ಮಪ್ಪಯ್ಯನವರು ತಮ್ಮ ಲೇಖನದಲ್ಲಿ ‘ವೆಳ್’ ಪದವು ವೇಕ (ಬೇಕ) ಪದವಾಗಿ ಮಾರ್ಪಟ್ಟು, ಅದರಿಂದ ‘ವೆಂಗಿ’ ಪದದ ಉತ್ಪನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ‘ವೆಳ್’ ,‘ಬೆಳ್’ ಹಾಗೂ ವೇಕ (ಬೇಕ) ಪದದಿಂದ ಪ್ರಾರಂಭವಾಗುವ ೨೨೦ ಊರುಗಳು ಕರ್ನಾಟಕದಲ್ಲಿವೆ. ಕೆಲವು ಉದಾಹರಣೆಗಳು:

ಬೇಲಕುಡ, ಬೇಲಕುಣಿ, ಬೇಲುರಾ, ಬೇಲೂರು, ಬೆಳ್ಳಟ್ಟಿ, ಬೇಲಕೆರೆ, ಬೇಲಧಾರಾ, ಬೇಲಾತೂರು, ಬೇಲನಾಯಕನಹಳ್ಳಿ. ಬೇಲುಂಡಗಿ, ಬೇಲೆಕೇರಿ, ಬೇಲೆಗೇರಿ, ಬೇಲೇರಿ, ಬೆಳಂದೂರು, ಬೆಳಂಬರ, ಬೆಳಕಂದ, ಬೆಳಕವಾಡಿ, ಬೆಳಕುಪ್ಪೆ, ಬೆಳಕೆ, ಬೆಳಕೆರೆ, ಬೆಳಕೊಟ್ಟಾ, ಬೆಳಗರಹಳ್ಳಿ, ಬೆಳಗಲಿ, ಬೆಳಗಲ್, ಬೆಳಗಾಲ, ಬೆಳಗಾವಿ, ಬೆಳಗುಂಡಾ, ಬೆಳಮಾ, ಬೆಳವಟಗಿ, ಬೆಳವಡಿ, ಬೆಳಹಾರ, ಬೆಳವಲಕೊಪ್ಪ, ಬೆಳ್ಳಹಳ್ಳಿ, ಬೆಳ್ಳಾವಿ, ಬೆಳ್ಳೂರು, ಬೇಕವಾಡ, ಬೇಗೂರು, ಬೇಗೋಡಿ , ವೇಲಾಪಿ ಇತ್ಯಾದಿ.

ತಮಿಳುನಾಡಿನಲ್ಲಿರುವ ವೆಲ್ಲೂರು, ಕೋಲ್ಕತ್ತಾದ ಹತ್ತಿರವಿರುವ ಬೇಲೂರು ಇವೆಲ್ಲ ವೇಳರ (=ವೆಂಗಿಗಳ) ಹರಡುವಿಕೆಗೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದಲ್ಲಿರುವ ‘ವೇರೂಳ’ ಇದು ವೇಳೂರಿನ ಅಪಭ್ರಂಶವಾಗಿರಬೇಕು.
ಶ್ರೀಕೃಷ್ಣನ ಅಣ್ಣನಾದ ಬಲರಾಮನಿಗೆ ತಮಿಳರು ‘ವೇಲಾಯುಧನ್’ ಎಂದು ಕರೆಯುತ್ತಾರೆ. ಈ ಬಲರಾಮನ ಹೆಂಡತಿಯು ರೇವತಿಯು; ಅರ್ಥಾತ್ ‘ರೇವಾ’ ಪಟ್ಟಣದಿಂದ ಬಂದವಳು. ರೇವಾ ಪಟ್ಟಣವು ವೆಂಗಿಮಂಡಲದ ರಾಜಧಾನಿಯಾಗಿತ್ತು. ಅಂದರೆ, ವೇಲನಾಡಿನಲ್ಲಿರುವ(=ವೆಂಗಿನಾಡಿನಲ್ಲಿರುವ) ಬಲರಾಮನು, ವೆಂಗಿಮಂಡಲದ ರಾಜಧಾನಿಯಾದ ರೇವತಿಯನ್ನು ಮದುವೆಯಾಗಿದ್ದನು ಎಂದರ್ಥವಾಯಿತು. ಬಲರಾಮನ ತಮ್ಮನಾದ ಶ್ರೀಕೃಷ್ಣನು ‘ಕನ್ನಯ್ಯ’ನು, ಅಂದರೆ ಕನ್ನ ಕುಲಜನು(=ಕನ್ನಡಿಗನು). ಅರ್ಥಾತ್, ವೆಂಗಿಮಂಡಲದ ನಿವಾಸಿಗಳು ಕನ್ನಡಿಗರು ಎನ್ನುವದಕ್ಕೆ ಅಪ್ರತ್ಯಕ್ಷ ಪುರಾವೆ.

ಬಲರಾಮನಿಗೆ ಹಲಾಯುಧ ಎನ್ನುವ ಹೆಸರೂ ಇದೆ. ಕರ್ನಾಟಕದಲ್ಲಿ ‘ಹಲ’ ಪದದಿಂದ ಪ್ರಾರಂಭವಾಗುವ ೧೦೩ ಸ್ಥಳಗಳಿವೆ.
ಉದಾಹರಣೆಗಳು: ಹಲಗಣಿ, ಹಲಗತ್ತಿ, ಹಲಗೇರಿ, ಹಲಕೂರು, ಹಲಕೋಡಾ, ಹಲಗನಹಳ್ಳಿ, ಹಲಗಾ, ಹಲಗೊರ್ಟಾ, ಹಲಘಟ್ಟ, ಹಲಚೇರ,, ಹಲಗಡ್ಲಾ, ಹಲಕುಂಡಿ, ಹಲವರ್ತಿ, ಹಲವಳ್ಳಿ, ಹಲಸುಲಿಗೆ, ಹಲಸೂರು, ಹಲಸೆ, ಹಲಹಳ್ಳಿ, ಹಲಿಕೆ,ಹಲಿಯಾಳ ಇತ್ಯಾದಿ.

‘ಹಲ’ ವಂಶದ ರಾಜರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಸರೂರಿನ ಪ್ರಸಿದ್ಧ ರಾಜರಾಗಿದ್ದರು.

ಕನ್ನಡಿಗರು ವಿಂಧ್ಯ ಪರ್ವತದ ತಪ್ಪಲಿನಿಂದ ಕಾವೇರಿಯವರೆಗೂ ವ್ಯಾಪಕವಾಗಿ ವಾಸಿಸುತ್ತಿದ್ದದು ಈ ಸ್ಥಳನಾಮಗಳಿಂದ ಸಿದ್ಧವಾಗುತ್ತದೆ.
ಟಿಪ್ಪಣಿ: ವೇಲಾಯುಧನ್ ಈತನು ‘ಮುರುಗ’ನೇ ಹೊರತು ‘ಬಲರಾಮ’ ಅಲ್ಲ ಎಂದು ಹಂಸಾನಂದಿಯವರು ತಿಳಿಸಿದ್ದಾರೆ. ಈ ಸೂಚನೆಯು ಸರಿಯಾಗಿದೆ. ಒಪ್ಪಿಕೊಳ್ಳುತ್ತೇನೆ.