ನುಡಿಮುತ್ತುಗಳು
- ಚೀನಾ ಮಹಾಗೋಡೆಯೇನಾದರೂ ನಮ್ಮ ದೇಶದಲ್ಲಿದ್ದಿದ್ದರೆ ಜಗತ್ತಿನ ಅತಿ ಉದ್ದದ ಶೌಚಾಲಯ ಹೊಂದಿರುವ ಖ್ಯಾತಿ ನಮ್ಮದೇ ಆಗಿರುತ್ತಿತ್ತು.
- ತನ್ನ ಮಾತು ಕೇಳುವ ಗಂಡನನ್ನು ಮಹಿಳೆ ಇಷ್ಟಪಡುತ್ತಾಳೆ. ಕಡಿಮೆ ಮಾತನಾಡುವವಳೇ ಹೆಂಡತಿಯಾಗಿ ಬರಲಿ ಎಂದು ಗಂಡ ಅಂದುಕೊಳ್ಳುತ್ತಾನೆ.
- ತಾಯ್ತನ ಎಂಬುದು ಎಲ್ಲ ಸ್ತ್ರೀಯರೂ ಬಯಸುವ ಅವಕಾಶ. ಹಾಗಂತ ಅವಕಾಶ ಸಿಕ್ಕಿತೆಂದು ತಾಯಿಯಾಗಬಾರದು.
- ನಾವು ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಈ ಜಗತ್ತಿಗೆ ಬಂದಿದ್ದೇವೆ ಎಂಬ ವಿಚಾರವೇನೊ ಚೆನ್ನಾಗಿದೆ. ಆದರೆ ಆ ಬೇರೆಯವರು ಏನು ಮಾಡಲು ಬಂದಿದ್ದಾರೆ?
- ಅಕಸ್ಮಾತ್ತಾಗಿ ಹಾವನ್ನು ತುಳಿದು ಕಚ್ಚಿಸಿಕೊಳ್ಳುವುದು ಅರೇಂಜ್ಡ್ ಮ್ಯಾರೇಜ್. ಹಾವಿನ ಮುಂದೆ ನಿಂತು ಕಡಿ, ಕಡಿ ಎಂದುಕುಣಿಯುತ್ತಾ ಕಚ್ಚಿಸಿಕೊಳ್ಳುವುದು ಲವ್ ಮ್ಯಾರೇಜ್.
- ಫೋನ್ ಕಾಲ್ ರಿಸೀವ್ ಮಾಡುವುದಕ್ಕೆ ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರೆಂದರೆ, ರಿಸೀವ್ ಮಾಡಿದ ಮೇಲೆ ದೊಡ್ಡ ಸುಳ್ಳು ಹೇಳಲಿದ್ದೀರೆಂದರ್ಥ.
- ಬೇರೆಯವರಿಗಾಗಿ ಒಳ್ಳೆಯ ಕೆಲಸಮಾಡುತ್ತಲೇ ಹೋದರೆ ಅದು ಸಹಜ ಎನ್ನಿಸಿಬಿಡುತ್ತದೆ. ಗಮನ ಸೆಳೆಯುವುದಕ್ಕಾದರೂ ಕೆಲವೊಮ್ಮೆ ತಪ್ಪು ಮಾಡುತ್ತಿರಬೇಕಾಗುತ್ತದೆ.
- ವಾದ್ರಾ ಪ್ರಧಾನಿಯಾಗಲಿ ಎಂದು ಬಯಸುತ್ತೇನೆ. ಭೂಮಿ ಬಗ್ಗೆ ಈ ವ್ಯಕ್ತಿಯ ಹಸಿವನ್ನು ನೋಡಿದರೆ, ಕಾಶ್ಮೀರ ಹಾಗಿರಲಿ, ಲಾಹೋರ್- ಇಸ್ಲಾಮಾಬಾದ್ಗಳನ್ನು ಉಳಿಸಿಕೊಡಿ ಅಂತ ಪಾಕಿಸ್ತಾನ ಕೇಳಬಹುದು.
- ಭಾರತೀಯ ರಾಜಕಾರಣಿಗಳನ್ನು ಮೂರ್ಖರು ಎನ್ನುವಂತಿಲ್ಲ. ಜನಕ್ಕೆ ಹಾಗೆ ಹೇಳಬಹುದು. ಪ್ರತಿಬಾರಿಯೂ ನೂರು ಕೋಟಿ ಮಂದಿಯನ್ನು ಅವರು ನಂಬಿಸುತ್ತಾರೆ.
- ಹೆಂಗಸರ ಬಳಿ ಉಳಿದುಕೊಳ್ಳಬಹುದಾದ ಒಂದೇ ಒಂದು ರಹಸ್ಯ ಎಂದರೆ- ಅವರ ವಯಸ್ಸು.
- ದೇವರು ಪ್ರತಿಯೊಬ್ಬ ಪುರುಷನಿಗೂ ಒಬ್ಬ ಮಹಿಳೆಯನ್ನು ಸೃಷ್ಟಿಸಿರುತ್ತಾನೆ. ಆಕೆಯಿಂದ ತಪ್ಪಿಸಿಕೊಂಡರೆ, ಜೀವನ ಅದ್ಭುತವಾಗಿರುತ್ತದೆ.
- ಯಾವ ವ್ಯಕ್ತಿಯೂ ಆತನ ಹೆಂಡತಿ ತಿಳಿದುಕೊಂಡಷ್ಟು ಕೆಟ್ಟವನಾಗಿರುವುದಿಲ್ಲ. ಹಾಗೆಯೇ ಅವನ ಅಮ್ಮ ಅಂದುಕೊಂಡಷ್ಟು ಒಳ್ಳೆಯವನೂ ಆಗಿರುವುದಿಲ್ಲ.
- ಮಲಗುವಾಗ ಯಾವ ತೊಂದರೆಗಳನ್ನೂ ಹಾಸಿಗೆಗೆ ತೆಗೆದುಕೊಂಡುಹೋಗಬೇಡಿ ಎನ್ನುತ್ತದೆ ಹಳೆಯ ಉಪದೇಶ. ಆದರೆ ಇವತ್ತಿಗೂ ಹೆಚ್ಚಿನವರು ತಮ್ಮ ಹೆಂಡತಿ ಪಕ್ಕದಲ್ಲೇ ಮಲಗುತ್ತಾರೆ.
- ಕೆಲವು ಗಂಡಸರ ಸಂಕಟ ವಿಚಿತ್ರವಾಗಿರುತ್ತದೆ. ಹೆಂಡತಿಯ ಮೇಕಪ್ ಖರ್ಚು ಭರಿಸಲಾಗುವುದಿಲ್ಲ. ಆದರೆ ಮೇಕಪ್ಗೆ ಖರ್ಚು ಮಾಡದಿದ್ದರೆ ಹೆಂಡತಿಯನ್ನು ಸಹಿಸಲಾಗುವುದಿಲ್ಲ.
- ದಾಂಪತ್ಯ ಚೆನ್ನಾಗಿ ಇರಬೇಕೆಂದರೆ ಮುಖ್ಯವಾಗಿ ಸರಸವಿರಬೇಕು. ಅತಿಮುಖ್ಯವಾಗಿ ಅದು ನಮ್ಮ ಸಂಗಾತಿಯೊಂದಿಗೇ ಇರಬೇಕು.
- ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂಬ ಗಾದೆ ಮಾತಿದೆ. ಹಾಗೆಂದು ತುಪ್ಪ ತಿನ್ನಬೇಕು ಎಂದೆನಿಸಿದಾಗಲೆಲ್ಲ ಸಾಲ ಮಾಡಬಾರದು.
- ನೀವು ಅಂದುಕೊಂಡಂತೆ ಜೀವನ ಸಾಗುತ್ತಿಲ್ಲವೆಂದಾದರೆ ನೀವು ಭವಿಷ್ಯಕ್ಕಿಂತ ಹೆಚ್ಚಾಗಿ ಭೂತಕಾಲದ ಬಗ್ಗೆಯೇ ಯೋಚನೆ ಮಾಡುತ್ತಿದ್ದೀರಿ ಎಂದರ್ಥ. ಹೀಗಾಗಿ ಕಳೆದುಹೋದ ಸಂಗತಿ ಬಿಟ್ಟು ಮುಂದಿನ ಜೀವನದ ಬಗ್ಗೆ ಗಮನಹರಿಸಿ.
- ಅದೃಷ್ಟವೆಂಬುದು ನಿಮ್ಮ ಮನೆಯ ಬಾಗಿಲನ್ನು ಬಡಿಯದಿದ್ದರೆ ಬೇಸರಿಸಿಕೊಳ್ಳಬೇಡಿ. ಬಡಿಯಲು ನಿಮ್ಮ ಮನೆಗೆ ಬಾಗಿಲೇ ಇಲ್ಲದಿರಬಹುದು. ಮೊದಲು ಬಾಗಿಲನ್ನು ನಿಲ್ಲಿಸುವ ಕೆಲಸ ಮಾಡಿ. ಪರಿಶ್ರಮಪಡದಿದ್ದರೆ ಅದೃಷ್ಟವೂ ನಿಮ್ಮ ಮನೆ ತನಕ ಬರುವುದಿಲ್ಲ.
- ನಿಮಗೇನು ಅನ್ನಿಸುತ್ತೆ ಎಂಬುದರ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆದರೆ ನೀವು ಏನು ತಿಳಿದುಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧಾರ ತೆಗೆದುಕೊಳ್ಳಿ. ಏಕೆಂದರೆ ಆ ನಿರ್ಧಾರ ಹೆಚ್ಚು ಗಟ್ಟಿಯಾಗಿರುತ್ತದೆ
- ಜಗತ್ತಿನಲ್ಲಿ ನೀವು ನೋಡುತ್ತಿರುವ ಸಂಗತಿಗಳು ನಿಮ್ಮ ಯೋಚನೆಯ ಪ್ರತಿಫಲನಗಳಷ್ಟೇ.ನೀವು ಒಳ್ಳೆಯ ರೀತಿಯಲ್ಲಿ ಯೋಚಿಸಿದರೆ ಜಗತ್ತು ಒಳ್ಳೆಯದಾಗಿರುತ್ತದೆ. ಕೆಟ್ಟ ರೀತಿಯಲ್ಲಿ ಯೋಚಿಸಿದರೆ ಅದೂ ಕೆಟ್ಟದಾಗಿರುತ್ತದೆ.
- ಕ್ರಿಯೆ ಮತ್ತು ಯಶಸ್ಸಿನ ನಡುವೆ ಅವಿನಾಭಾವ ಸಂಬಂಧವಿದೆ. ನೀವು ಕೆಲಸವನ್ನೇ ಆರಂಭಿಸದಿದ್ದರೆ ಯಶಸ್ಸು ಕಾಣಲು ಸಾಧ್ಯವೇ ಇಲ್ಲ. ಹೀಗಾಗಿ ಯಶಸ್ಸಿನ ಬೆನ್ನು ಹತ್ತುವ ಮೊದಲು ಯಾವುದಾದರೊಂದು ಕೆಲಸ ಆರಂಭಿಸಿ.
- ನಿಮ್ಮಲ್ಲಿರುವ ಜ್ಞಾನ ಎಂದರೆ ಡಬ್ಬದಲ್ಲಿರುವ ಪೈಂಟ್ ಇದ್ದಂತೆ. ಅದನ್ನು ಗೋಡೆಗೆ ಬಳಿದಾಗಲೇ ಅದರ ಮಹತ್ವ ತಿಳಿಯೋದು. ಬರೀ ಡಬ್ಬದಲ್ಲಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ನಿಮ್ಮ ಜ್ಞಾನದಿಂದ ಸುತ್ತಲಿನ ಗೋಡೆಗೆ ವಿವೇಕದ ಬಣ್ಣ ಬಳಿಯಿರಿ.
- ಜೀವನದ ಸಾರ್ಥಕ್ಯ ನೀವು ಎಷ್ಟು ಖುಷಿಯಲ್ಲಿದ್ದೀರಿಎಂಬುದರಮೇಲೆ ನಿರ್ಧಾರವಾಗುವುದಿಲ್ಲ. ಆದರೆ ನಿಮ್ಮಿಂದ ಬೇರೆಯವರು ಎಷ್ಟು ಸಂತೋಷಪಡುತ್ತಾರೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಹೀಗಾಗಿ ನಿಮ್ಮ ಸುತ್ತ ಇರುವವರನ್ನು ಖುಷಿಯಾಗಿಡಲು ಪ್ರಯತ್ನಿಸಿ.
- ನಿಮಗೆ ಹಾರಲು ಸಾಧ್ಯವಿಲ್ಲವೇ? ಹಾಗಾದರೆ ಓಡಿ. ನಿಮ್ಮಲ್ಲಿ ಓಡಲು ಶಕ್ತಿ ಇಲ್ಲವೇ, ನಡೆದಾಡಿ. ನಿಮಗೆ ನಡೆಯಲೂ ಆಗದಿದ್ದರೆ ತೆವಳಿಕೊಂಡು ಹೋಗಿ. ನೀವು ಏನೇ ಮಾಡಿ, ಮುನ್ನಡೆಯುತ್ತಲೇ ಇರಿ. ಎಲ್ಲಿಯೂ ನಿಲ್ಲಬೇಡಿ.
- ಸುಗಮ ರಸ್ತೆಯಿಂದ ಉತ್ತಮ ಚಾಲಕರಾಗಲು ಸಾಧ್ಯವಿಲ್ಲ. ಮೋಡಗಳಿಲ್ಲದ ಆಕಾಶ ಉತ್ತಮ ಪೈಲಟ್ಗಳನ್ನು ತರಬೇತುಗೊಳಿಸದು.ತೊಂದರೆರಹಿತ ಜೀವನ ಉತ್ತಮ ಮನುಷ್ಯರನ್ನು ರೂಪಿಸಲಾರದು. ಹೀಗಾಗಿ ನನಗೇ ಏಕೆ ಸಮಸ್ಯೆಗಳು ಎಂದು ಕೇಳಬೇಡಿ.