Dec 4, 2012

ಕಾಳಿಯೊಡನೆ ಕಳೆದ ನೆನಪು...



ಕಾಳಿಯೊಡನೆ ಕಳೆದ ನೆನಪು...

ಸುಮಾರು 12 ಶತಮಾನಗಳ ಹಿಂದೆ ಯಜಮಾನನನ್ನು ರಕ್ಷಿಸಿ ತಾನು ಪ್ರಾಣಬಿಟ್ಟ `ಕಾಳಿ'ಯ ಕಥೆಯಿದು. ರಾಷ್ಟ್ರಕೂಟ ಚಕ್ರೇಶ್ವರ ಮುಮ್ಮಡಿ ಕೃಷ್ಣನ ಅಚ್ಚುಮೆಚ್ಚಿನ ನಾಯಿ ಕಾಳಿ. ಯಜಮಾನನಿಗಾಗಿ ವೀರ ಮರಣಹೊಂದಿದ ನಿಮಿತ್ತ ಸ್ಥಾಪನೆಗೊಂಡ ಇದರ ವೀರಗಲ್ಲು ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ಅತಕೂರಿನಿಂದ ಈಗ ಬೆಂಗಳೂರಿನ ವಸ್ತುಸಂಗ್ರಹಾಲಯ ಸೇರಿದೆ. ಇತಿಹಾಸ ನೆನಪಿಸುತ್ತಿದೆ.
ತನ್ನ ಆಪ್ತ ಗಂಗ ದೊರೆ ಇಮ್ಮಡಿ ಬೂತುಗನ ಬಲಗೈ ಬಂಟನಾದ ಗಂಗ ದಂಡನಾಯಕ ಮಣಲೇರನಿಗೆ ಕಾಣಿಕೆ ರೂಪದಲ್ಲಿ ಕಾಳಿಯನ್ನು ನೀಡಿದ್ದ ಮುಮ್ಮಡಿ ಕೃಷ್ಣ. ಕಾಣಿಕೆ ರೂಪದಲ್ಲಿ ಬಂದ ಈ ಶ್ವಾನ ಮುಂದೊಂದು ದಿನ ತನಗಾಗಿ ತನ್ನ ಜೀವವನ್ನೇ ಪಣಕ್ಕಿಡುತ್ತದೆ ಎಂಬ ಅರಿವೂ ಇರಲಿಲ್ಲ ಮಣಲೇರನಿಗೆ. ಇದರ ಫಲವೇ ಕಾಳಿಯ ವೀರಗಲ್ಲು.
ಕಾಳಿಯನ್ನು ನೀಡಿದ್ದೇಕೆ?
ಕ್ರಿ.ಶ. 949ರ ಕಾಲವದು. ಮುಮ್ಮಡಿ ಕೃಷ್ಣನ ಆಳ್ವಿಕೆಯ ಅವಧಿ. ಚೋಳ ದೇಶದ ಮೇಲೇರಿ ಕಾಂಚೀಪುರ ಮತ್ತು ಚೋಳ ರಾಜಧಾನಿ ತಂಜಾವೂರುಗಳನ್ನು ಆಕ್ರಮಿಸಿ ಸದೆಬಡಿಯುವಲ್ಲಿ ಕೃಷ್ಣ ಯಶ ಸಾಧಿಸಿದ್ದ. ಚೋಳರ ಈ ಸೋಲು ಮುಂದಿನ ನಾಲ್ಕು ದಶಕಗಳ ಕಾಲ ಅವರು ತಲೆಯೆತ್ತದಂತೆ ಮಾಡಿತು. ರಾಷ್ಟ್ರಕೂಟ ಸೈನ್ಯವು ಇಡೀ ತಮಿಳು ನಾಡನ್ನು ವಶಪಡಿಸಿಕೊಂಡು, ರಾಮೇಶ್ವರದಲ್ಲಿ ಕೃಷ್ಣನ ಜಯಸ್ತಂಭವನ್ನು ನಿಲ್ಲಿಸಿತು. ಈ ಗೆಲುವಿಗೆ ಕಾರಣೀಕರ್ತನಾದವನು ಬೂತುಗ ಹಾಗೂ ಮಣಲೇರ.
ಇದರಿಂದ ಸಂತುಷ್ಟನಾದ ಕೃಷ್ಣ ಕಾಣಿಕೆ ನೀಡಲು ಮುಂದಾದಾಗ, ತನಗೆ `ಕಾಳಿ'ಯನ್ನು ನೀಡುವಂತೆ ಮಣಲೇರ ಕೋರಿದ. ಭೂಮಿ, ಚಿನ್ನ, ಆಭರಣ ಯಾವುದಕ್ಕೂ ಆಸೆ ಪಡದೆ ಕಾಳಿಯನ್ನು ಕೋರಿದ ಮಣಲೋಕನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಕೃಷ್ಣ, ಅವನ ಆಸೆ ನೆರವೇರಿಸಿದ. ಹಾಗೆಯೇ, ಬೂತುಗನು ಕೂಡ ಮಣಲೇರನಿಗೆ ಬೆಳ್ತೊಲದ ಎಂದರೆ ಈಗಿನ ಮಂಡ್ಯ ಜಿಲ್ಲೆಯ `ಅತಕೂರು ಪನ್ನೆರಡು' ಪ್ರದೇಶವನ್ನು ಬಿಟ್ಟು ಕೊಟ್ಟ.
ಹೆಚ್ಚಿದ ಹಂದಿಯ ಉಪಟಳ
ಒಮ್ಮೆ ಅತಕೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿ, ಬೆಳೆಗಳ ನಾಶಕ್ಕೆ ತೊಡಗಿತು. ಅವುಗಳ ನಾಶಕ್ಕೆ ಮಣಲೇರನು ಕಾಳಿಯೊಡನೆ ಹಂದಿಗಳ ಬೇಟೆಗೆ ಹೊರಟ.
ಅಗ ಭಾರೀ ಗಾತ್ರದ ಕಾಡು ಹಂದಿಯೊಂದು ಧುತ್ತೆಂದು ಮಣಲೇರ ಮತ್ತು ಕಾಳಿಯ ಮುಂದೆ ದಾರಿಗಡ್ಡವಾಗಿ ನಿಂತಿತು. ಕಾಳಿ ಮತ್ತು ಹಂದಿಯ ನಡುವೆ ನಡೆದ ಭೀಕರ ಹೋರಾಟದಲ್ಲಿ ಕಾಳಿಯು ಹಂದಿಯನ್ನು ಕೊಂದುಹಾಕಿತಾದರೂ, ತೀವ್ರವಾಗಿ ಗಾಯಗೊಂಡ ಕಾರಣ ಕೊನೆಯುಸಿರೆಳೆಯಿತು, ತನ್ನ ಯಜಮಾನನಿಗಾಗಿ ಪ್ರಾಣ ಬಿಟ್ಟಿತು!
ಮಣಲೇರನಿಗೆ ದುಃಖ ಸಹಿಸಲಾಗಲಿಲ್ಲ. ತನ್ನನ್ನು ಕಾಪಾಡಿದ ಕಾಳಿಗೆ ಏನಾದರೂ ಗೌರವ ಸಲ್ಲಿಸಲೇಬೇಕೆಂದು ಅಂದುಕೊಂಡ. ಸ್ವಾಮಿ ನಿಷ್ಠೆ ಮೆರೆದ ಕಾಳಿಯ ಮೇಲಿನ ಗೌರವ, ಪ್ರೀತಿಗಳಿಂದ ಆತ ತನ್ನ ಆಡಳಿತ ಪ್ರದೇಶವಾದ ಅತಕೂರಿನ ಪ್ರಸಿದ್ಧ `ಚಲ್ಲಲಿಂಗೇಶ್ವರ ಸ್ವಾಮಿ' ದೇವಾಲಯದ ಬಳಿ ನಾಯಿಯ ಸಮಾಧಿಯನ್ನು ನಿರ್ಮಿಸಿದ. ಹಾಗೆಯೇ, ಅದಕ್ಕೊಂದು ವೀರಗಲ್ಲನ್ನು ನೆಡಿಸಿ ಶಾಸನ ಹಾಕಿಸಿದ.
ವೀರಗಲ್ಲನ್ನು ಪ್ರತಿ ನಿತ್ಯ ಪೂಜಿಸಲು ಒಬ್ಬ ಗೊರವನನ್ನು ನೇಮಿಸಿದ. ಶಾಸನದಲ್ಲಿ `ಕಾಳಿಯನ್ನು ಪೂಜಿಸದೆ ಊಟ ಮಾಡಿದರೆ ನಾಯಿ ಕೊಂದ ಶಾಪ ತಟ್ಟುವುದು' ಎಂಬ ಮಾತು ಕೂಡ ಇದೆ. ಈ ವೀರಗಲ್ಲನ್ನು ಈಗ ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ.
ಹಂದಿಯೊಂದಿಗಿನ ಸೆಣಸಾಟ, ಹೊಡೆತ ತಪ್ಪಿಸಿಕೊಳ್ಳಲು ಹೆಣಗಾಟ, ಕೋಪದಿಂದ ಕೆರಳಿರುವ ನಾಯಿ- ಹಂದಿ ಮುಂತಾದ ದೃಶ್ಯಗಳು ವೀರಗಲ್ಲಿನ ಮೇಲೆ ಕೆತ್ತಲಾಗಿದ್ದು, ನೋಡುಗರನ್ನು ನಿಬ್ಬೆರಗಾಗಿಸುತ್ತದೆ. ಉಗ್ರವಾಗಿ ಕಾದಾಡುತ್ತಿರುವ ಉಬ್ಬು ಚಿತ್ರವೂ ಸಹ ಜೀವಕಳೆಯಿಂದ ಕೂಡಿ ಹೃನ್ಮನಗಳನ್ನಾಕರ್ಷಿಸುತ್ತದೆ.
  source : prajavani