Aug 21, 2012

ನಾಡಿನ ಗರ್ಭದಲ್ಲಿ ಅವಮಾನದ, ಹತಾಶೆಯ, ಮೌಲ್ಯಗಳ ಸೋಲಿನ ನೋವು

ನಾಡಿನ ಗರ್ಭದಲ್ಲಿ ಅವಮಾನದ, ಹತಾಶೆಯ, ಮೌಲ್ಯಗಳ ಸೋಲಿನ ನೋವು…
- ಬಿ. ಶ್ರೀಪಾದ ಭಟ್

“ಜಟೆಯಿಂದಾಗಲೀ, ಗೋತ್ರದಿಂದಾಗಲೀ, ಹುಟ್ಟಿನಿಂದಾಗಲೀ ಯಾರೂ ಬ್ರಾಹ್ಮಣರಾಗುವುದಿಲ್ಲ, ಇದು ಶುದ್ದ ಸುಳ್ಳು, ಕೇವಲ ಧರ್ಮಗ್ರಂಥಗಳಲ್ಲಿ ಬರೆದಿದೆ ಎಂದ ಮಾತ್ರಕ್ಕೆ ತಲಾಂತರಗಳಿಂದ, ನಿಮ್ಮ ಹಿರಿಯರಿಂದ ನಡೆದುಕೊಂಡು ಬಂದ ಪದ್ಧತಿ ಎಂದ ಮಾತ್ರಕ್ಕೆ ಅವುಗಳನ್ನು ಒಪ್ಪಿಕೊಳ್ಳಲೇ ಬೇಡಿ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ.” –ಬುದ್ಧ
“ಯಾರು ಬಹಳ ನಮ್ರರಾಗಿ ಕೆಳಕೆಳಗೆ ಇಳಿದರೋ ಅವರೆಲ್ಲ ಪಾರಾದರು, ಉಚ್ಚಕುಲೀನರಾಗಿದ್ದು ಅಭಿಮಾನದ ದೋಣಿ ಹತ್ತಿದರೋ ಅವರು ಮುಳುಗಿದರು.” –ಕಬೀರ
“ಆಧುನಿಕ ಹಾಗೂ ಮಾನವೀಯ ಮೌಲ್ಯಗಳಿಗೆ ಹಿಂದೂ ಧರ್ಮದ ಅಂತರಂಗದಲ್ಲಿ ಸ್ಥಳವೇ ಇಲ್ಲ.ಈ ಹಿಂದೂ ಧರ್ಮ ಸಹೋದರತೆ ಹಾಗೂ ಸಮಾನತೆಯನ್ನು ಸದಾ ಹತ್ತಿಕ್ಕುತ್ತುರುತ್ತದೆ. ಅಸ್ಪೃಶ್ಯತೆ ಹಾಗೂ ಜಾತಿ ಪದ್ಧತಿಗಳನ್ನು ತೆಗೆದರೆ ಈ ಹಿಂದೂ ಧರ್ಮದಲ್ಲಿ ಇನ್ನೇನು ಉಳಿಯುವುದಿಲ್ಲ.” –ಅಂಬೇಡ್ಕರ್
“ಅಸ್ಪೃಶ್ಯತೆ ಹಿಂದೂ ಧರ್ಮದ ಭಾಗವೆಂದು ಯಾರಾದರೂ ಸಾಬೀತು ಮಾಡಿದರೆ ಅಂದೇ ಆ ಧರ್ಮ ನನಗೆ ಬೇಕಿಲ್ಲವೆಂದು ಸಾರುವೆ.” –ಮಹಾತ್ಮ ಗಾಂಧಿ
“ಭಾರತೀಯತೆಯ ಹೆಸರಿನಲ್ಲಿ ಎಲ್ಲ ಜಾತಿ-ಮತ ಇತ್ಯಾದಿಗಳನ್ನು ಉಳಿಸಿಕೊಳ್ಳೋದಾದರೆ, ನನಗೆ ಆ ಭಾರತೀಯತೇನೇ ಬೇಡ. ನನಗೆ ಭಾರತೀಯನಾಗೋದಂದ್ರೆ ವಿಶ್ವ ಮಾನವನಾಗೋದು.”  –ಕುವೆಂಪು
“ಗಾಂಧೀಜಿಯವರು ಆಸ್ತಿಕರಾಗಿಲ್ಲದಿದ್ದರೆ ಮೇಲ್ಜಾತಿಯವರು ಹಾಗೂ ಭಾರತದ ಸಂಘಪರಿವಾರ ಬಾಪೂ ಅವರನ್ನು ಸೈದ್ಧಾಂತಿಕವಾಗಿ ಎಂದೋ  ಮುಗಿಸಿಬಿಡುತ್ತಿದ್ದರು.” –ಅಸ್ಗರ್ ಅಲಿ ಇಂಜಿನಿಯರ್
ಬಹಳ ಹಿಂದೆ ಲಂಕೇಶರ ಬ್ರಾಹ್ಮಣ ಸ್ನೇಹಿತರೊಬ್ಬರು ಲಂಕೇಶರ ಬಳಿ ಹೇಳುತ್ತಿದ್ದರು, “ಸರ್ ನಾನು ಕೂಡ ದೇವಸ್ಥಾನಗಳಿಗೆ ಹೋಗುವುದಿಲ್ಲ, ಬಿಯರ್ ಕುಡಿಯುತ್ತೇನೆ, ಜನಿವಾರವನ್ನು ಕೂಡ ಹಾಕುವುದಿಲ್ಲ.” ಅದಕ್ಕೆ ಲಂಕೇಶರು ಅತ್ಯಂತ ಮಾರ್ಮಿಕವಾಗಿ ಹೇಳಿದ್ದು “ಅಲ್ಲ ಕಣಯ್ಯ, ಇದೆಲ್ಲ ಸರಿ ಆದರೆ ನಿನ್ನ ಮನಸ್ಸಿಗೆ ಹಾಕಿಕೊಂಡ ಜನಿವಾರ ಎಂದು ತೆಗೆಯುತ್ತೀಯ?”
ಅಷ್ಟೇ ಅಲ್ಲವೆ? ಸಂಪ್ರದಾಯನಿಷ್ಟ ಬ್ರಾಹ್ಮಣರು ಮತ್ತು ಆಧುನಿಕರೆನಿಸಿಕೊಂಡ ಬ್ರಾಹ್ಮಣರು ಇಬ್ಬರೂ ತಮ್ಮ ಮನಸ್ಸಿಗೆ ಹಾಕಿಕೊಂಡ ಜನಿವಾರ ಕಳಚಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಇವರು ಜೀವವಿರೋಧಿಗಳು ಮತ್ತು ವಿತಂಡವಾದಿಗಳಾಗಿ ನಿಂತ ನೀರಾಗುತ್ತಾರೆ. ತಮ್ಮ ಸಂಪ್ರದಾಯ,ತಮ್ಮ ಧರ್ಮಭೀರುತ್ವ, ತಮ್ಮ ಭೂತಗಳನ್ನು ನೆನೆಸಿಕೊಳ್ಳುವಾಗ, ಅದನ್ನು ವೈಭವೀಕರಿಸಿ ಮಾತನಾಡುವಾಗ, ಮೀಸಲಾತಿಯನ್ನು ಹಂಗಿಸಿ ಕೊಂಕು ನುಡಿಯುವಾಗ, ಶೂದ್ರರನ್ನು, ತಳಸಮುದಾಯದವರನ್ನು ವಿನಾಕಾರಣ ಅವಮಾನಿಸುವಾಗ ಈ ಸಂಪ್ರದಾಯನಿಷ್ಟ ಬ್ರಾಹ್ಮಣರು ಹಾಗೂ ಆಧುನಿಕ ಬ್ರಾಹ್ಮಣರು ಒಂದೇ ಧ್ವನಿಯಲ್ಲಿ, ಸಮಾನ ಪಾತಳಿಯಲ್ಲಿ ಮಾತನಾಡುತ್ತಾರೆ. ಇವರು ಎಂಜಲು ಮಡೆಸ್ನಾನದಂತಹ ಅಮಾನವೀಯ ಆಚರಣೆಗಳ ಬಗ್ಗೆ ಸಂಪ್ರದಾಯದ ಹೆಸರಿನಲ್ಲಿ ಅದರ ಪರವಹಿಸಿಯೋ ಇಲ್ಲವೇ ಜಾಣ ಮೌನ, ಮರೆ ಮೋಸದ ಮುಖವಾಡವನ್ನು ತೊಡುತ್ತಾರೆ.
40ರ ದಶಕದಲ್ಲಿ ಕುವೆಂಪುರವರ ಸಮತಾವಾದದ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಎತ್ತಿ ಹಿಡಿಯುವ, ಪುರೋಹಿತಶಾಹಿಯ ಅನೀತಿ ಒಳ ಹುನ್ನಾರಗಳನ್ನು ತೋರಿಸುವ ಜನಪರ ನಾಟಕ “ಶೂದ್ರ ತಪಸ್ವಿ”ಯನ್ನು ಆಗ ಎಲ್ಲಿ ಇದು ಸನಾತನ ವೈದಿಕ ಧರ್ಮವನ್ನು ಶಿಥಿಲಗೊಳಿಸುತ್ತದೆಯೋ ಎನ್ನುವ ಭೀತಿಯಲ್ಲಿ ಮಾಸ್ತಿಯವರು ವಿರೋಧಿಸಿದಾಗಿನಿಂದ ಹಿಡಿದು, ಕುವೆಂಪುರವರು “ನಿರಂಕುಶಮತಿಗಳಾಗಿ”, “ನೂರು ದೇವರನ್ನು ನೂಕಾಚೆ ದೂರ,” ಎಂದು ವಿಚಾರ ಕ್ರಾಂತಿಗೆ ಆಹ್ವಾನ ನೀಡಿದಾಗ ಅದನ್ನು ವೈದಿಕ ನೆಲೆಗಟ್ಟಿನಲ್ಲಿ ನಿಂತು ವಿರೋಧಿಸಿದ ಯಥಾಸ್ಥಿತಿವಾದಿಗಳಾದ ದೇವುಡುರವರಿಂದ ಹಿಡಿದು, ತಮ್ಮ ಗುಪ್ತ ಕಾರ್ಯಸೂಚಿಗಳಿಗೆ, ವೈದಿಕ ಚಿಂತನೆಗಳಿಗೆ ಧಕ್ಕೆಯುಂಟಾಗುತ್ತಿದೆ ಎನ್ನುವ ಭ್ರಮೆಯಿಂದ ಎಚ್.ನಾಗವೇಣಿಯವರಂತಹ ಕನ್ನಡದ ಪ್ರಮುಖ ಲೇಖಕಿಯ ವಿರುದ್ಧ, ಅವರ ಅರ್ಥಪೂರ್ಣ ಕಾದಂಬರಿ “ಗಾಂಧಿ ಬಂದ”ದ ವಿರುದ್ಧ ಹಾಸ್ಯಾಸ್ಪದವಾಗಿ ಚೀರಾಡುವುದು, ಅಂದಿನಿಂದ ಇಂದಿನವರೆಗೆ ಇವರ ದುರಂತದ ಮುಖವನ್ನು ತೋರಿಸುತ್ತದೆ.
ಈ ಎರಡೂ ವಿಷಯಗಳಲ್ಲಿಯೂ ಈ ಬಿಲ್ಲುವಿದ್ಯಾಪ್ರವೀಣರು ತಳಸಮುದಾಯದವರನ್ನೂ, ಶೂದ್ರರನ್ನು ಬಾಣಗಳಂತೆ ಬಳಸಿಕೊಂಡಿದ್ದಾರೆ. ಕಡೆಗೂ ಈ ರಕ್ತ ಸಿಕ್ತ ಬಾಣ ಮಾತ್ರ ತನ್ನ ಕತ್ತು ಮುರಿದುಕೊಳ್ಳುತ್ತದೆ. ಆದರೆ ಅದನ್ನು ಪ್ರಯೋಗಿಸಿದಾತ ಶ್ರೇಷ್ಟ ಬಿಲ್ಲುಗಾರನೆನೆಸಿಕೊಳ್ಳುತ್ತಾನೆ. ಪ್ರಾಚೀನ ಭಾರತದಲ್ಲಿ, ಬಹುವಾಗಿ ಆಧುನಿಕ ಭಾರತದಲ್ಲಿ, ವರ್ತಮಾನದಲ್ಲಿಯೂ ಕೂಡ ಬ್ರಾಹ್ಮಣರು ಈ ಪರಿಣಿತ ಬಿಲ್ಲುಗಾರರಾಗಿಯೇ ಗುರುತಿಸಲ್ಪಡುತ್ತಾರೆ.
ಅರ್ವೆಲ್ ಹೇಳಿದ ಹಾಗೆ “ದ್ವಂದಾಲೋಚನೆಯೆಂದರೆ ಏಕಕಾಲದಲ್ಲಿ,ಮನಸ್ಸಿನಲ್ಲಿ ಎರಡು ತದ್ವಿರುದ್ಧ ನಂಬಿಕೆಗಳನ್ನು ಇಟ್ಟುಕೊಳ್ಳುವುದು ಮತ್ತು ಅವುಗಳನ್ನು ಸ್ವೀಕರಿಸುವುದು. ಈ ದ್ವಂದಾಲೋಚನೆಯ ಉಪಯೋಗದ ಫಲವಾಗಿ ತಾನು ವಾಸ್ತವವನ್ನು ಭಂಗಗೊಳಿಸುತ್ತಿಲ್ಲವೆನ್ನುವ ಸಮಾಧಾನ ಅವನಿಗಿರುತ್ತದೆ.” ಎನ್ನುವ ಮಾತು ಇಂದಿನ ಆಧುನಿಕತೆಯ ವಿಚಾರಗಳನ್ನು ಬೆಳೆಸಿಕೊಂಡ ಅನೇಕ ಬ್ರಾಹ್ಮಣರ ಪಾಲಿಗೆ ಸತ್ಯ. Intellectual pride ಅನ್ನು  ಬೇರೆಯವರಲ್ಲಿ ಕೀಳರಿಮೆಯನ್ನು ಹುಟ್ಟು ಹಾಕುವುದಕ್ಕಾಗಿಯೇ ಬಳಸಿಕೊಳ್ಳುತ್ತಿರುವುದು ಆಧುನಿಕತೆಯ ಒಂದು ಕೆಟ್ಟ ಚಟ. ಆದರೆ ಈ ದುಷ್ಚಟಕ್ಕೆ ತಳಸಮುದಾಯದವರು ಬಲಿಯಾಗುತ್ತಿರುವುದು ಮಾತ್ರ ಒಂದು ದುರಂತ. ಇದನ್ನು 2002 ರಲ್ಲಿ ಜರುಗಿದ ಗುಜರಾತ್ ಹತ್ಯಾಕಾಂಡದಲ್ಲಿ ಸ್ಪಷ್ಟವಾಗಿ ಗುರಿತಿಸಬಹುದು. ಅಲ್ಲಿ ಮುಸ್ಲಿಂರ ವಿರುದ್ಧ ಜನಾಂಗೀಯ ದ್ವೇಷ ಹುಟ್ಟು ಹಾಕಿದವರು, ವಿಷಪೂರಿತ ಭಾಷಣ ಮಾಡಿ ರೊಚ್ಚಿಗೆಬ್ಬಿಸಿದವರು ಸಂಘಪರಿವಾರದವರು, ಮೇಲ್ಜಾತಿಯ ಜನ, ಆದರೆ ವಿನಾಕಾರಣ ಈ ರೀತಿ ರೊಚ್ಚಿಗೆದ್ದು ಅನಗತ್ಯವಾಗಿ ಹತ್ಯಾಕಾಂಡದಲ್ಲಿ ನೇರವಾಗಿ ಭಾಗವಹಿಸಿ, ಕೊಲೆ ಕೇಸಿನಲ್ಲಿ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿರುವವರು ದಲಿತರು, ಆದಿವಾಸಿಗಳು.
ಅದಕ್ಕೇ ಕುವೆಂಪು ಶೂದ್ರರಿಗೆ, ದಲಿತರಿಗೆ ಅತ್ಯಂತ ಮಾರ್ಮಿಕವಾಗಿ ಹೇಳಿದ್ದು “ಈ ಪುರೋಹಿತಶಾಹಿಯನ್ನು, ವೈದಿಕ ಪರಂಪರೆಯನ್ನು ಎದುರಿಸಬೇಕೆಂದರೆ ಮೊದಲು ನಿಮ್ಮ ತಲೆಗಳನ್ನು ಶುಚಿಗೊಳಿಸಿಕೊಳ್ಳಿ, ನಿಮ್ಮ ತಲೆಯಲ್ಲಿರುವ ಪುರೋಹಿತ ಪರಂಪರೆಯ ಬಗೆಗಿನ, ಪಂಚಾಗದ ಬಗೆಗಿನ, ಬ್ರಾಹ್ಮಣೀಕರಣದ ಬಗೆಗಿನ ಗುಪ್ತ ವ್ಯಾಮೋಹವನ್ನು ಸಂಪೂರ್ಣವಾಗಿ ತೊಡೆದು ಹಾಕುವವರೆಗೂ ನೀವು ಈ ಪುರೋಹಿತಶಾಹಿ ಎಂಬ ಹುಲಿಯನ್ನು ಎದುರಿಸುವುದು ಒಂದು ಸೋಲೇ ಸರಿ.”
ಇದು ಅಂದಿಗೆ ಅಲ್ಪ ಪ್ರಮಾಣದಲ್ಲಿದ್ದರೆ ಇಂದು 21ನೇ ಶತಮಾನದಲ್ಲಿ ಶೂದ್ರರಲ್ಲಿ, ದಲಿತರಲ್ಲಿನ ಬ್ರಾಹ್ಮಣೀಕರಣ ತಾರಕಕ್ಕೇರುತ್ತಿದೆ. ಇದನ್ನು ನಾವು ಶ್ರೀರಾಮುಲು ಎನ್ನುವ ಹಿಂದುಳಿದ ಶೂದ್ರ ರಾಜಕಾರಣಿಯ ಮುಖಾಂತರ ವಿವೇಚಿಸಬಹುದು. ಆಳದಲ್ಲಿ ಮುಗ್ಧರಂತೆ, ಮಗುವಿನಂತೆ ಕಾಣುವ ಈ ಶ್ರೀರಾಮುಲು ಇಂದು ಕರ್ನಾಟಕ ರಾಜಕಾರಣದಲ್ಲಿ ಭ್ರಷ್ಟ, ಹುಂಬ, ಗೊತ್ತುಗುರಿಯಿಲ್ಲದ, ಅರ್ಥಹೀನ ರಾಜಕಾರಣಿಯಾಗಿ ಕಂಗೊಳಿಸುತ್ತಾರೆ. ಇವರು ತಮ್ಮ ಹುಂಬತನದಿಂದ ಗಣಿಚೋರರಾದ ರೆಡ್ಡಿಗಳ ಜೊತೆ ಸೇರಿಕೊಂಡು ಇಡೀ ಬಳ್ಳಾರಿಯನ್ನು ರೆಡ್ಡಿಗಳ ಸರ್ವಾಧಿಕಾರತ್ವಕ್ಕೆ ವಹಿಸಲು ನೆರವಾದರು. ಬಿಜೆಪಿಗೆ ಆಪರೇಷನ್ ಕಮಲ ರುಚಿ ತೋರಿಸಿ ನಮ್ಮ ರಾಜ್ಯದಲ್ಲಿಯೇ ಭ್ರಷ್ಟತೆಗೆ ಒಂದು ಹೊಸ ಪದ್ಧತಿಯನ್ನೇ ಸೃಷ್ಟಿಸಿದರು. ಇಂದು ಬಳ್ಳಾರಿಯ ಉಪಚುನಾವಣೆಯನ್ನು ಅಸಹ್ಯವಾಗಿ, ಭ್ರಷ್ಟಾಚಾರದಿಂದ ಗೆದ್ದಿರುವ ಈ ಶ್ರೀರಾಮುಲು ಇನ್ನು ತನ್ನ ಆನೀತಿ, ಭ್ರಷ್ಟ ಗೆಲುವಿನ ಠೇಕಾಂರದಿಂದ, ಮತ್ತದೇ ತನ್ನ ಗೊತ್ತು ಗುರಿಯಿಲ್ಲದ ಅಪ್ರಬುದ್ಧ ರಾಜಕಾರಣದಿಂದ ಇನ್ನು ಈ ರಾಜ್ಯದ ರಾಜಕಾರಣದಲ್ಲಿ ಹುಟ್ಟು ಹಾಕಲಿರುವ ಅನಾಹುತಾಕಾರಿ, ಆತ್ಮಹತ್ಯಾತ್ಮಕ ನಡೆಗಳು, ಆ ಮೂಲಕ ಹುಟ್ಟಿಕೊಳ್ಳುವ ರಾಜಕೀಯ ಅತಂತ್ರ ಸ್ಥಿತಿ, ಇಂತಹ ಬೌದ್ಧಿಕ ದಿವಾಳಿತನದ ಶೂದ್ರ ನಾಯಕನ ಹಿಂದೆ ಕೇವಲ ಆ ಕ್ಷಣದ ಉತ್ಸಾಹದಲ್ಲಿ ನೆರೆಯುವ, ಭವಿಷ್ಯದ ಅರಿವೇ ಇಲ್ಲದ ಹಿಂದುಳಿದ ವರ್ಗಗಳ ಜನತೆ. ಈ ತರಹದ ನಾಯಕನನ್ನು ಅರಾಧಿಸುವ ಜನತೆ ಆ ಮೂಲಕ ಪ್ರಜಾಪ್ರಭುತ್ವಕ್ಕೆ ತಂದೊಡ್ಡುವ ಸೋಲು. ಅತ್ತ ಕುಮಾರಾಸ್ವಾಮಿ ಅವರ ನಿಗೂಢ, ಅವಾಂತಕಾರಿ, ಸ್ವೇಚ್ಛಾಚಾರಿ ನಡೆಗಳು ಪ್ರಜ್ಞಾವಂತರಲ್ಲಿ ನಡುಕ ಹುಟ್ಟಿಸುತ್ತಿವೆ.
ಇವು ಈ ಶೂದ್ರ ಶಕ್ತಿಗಳು ಹುಟ್ಟುಹಾಕುತ್ತಿರುವ ದುರಂತಮಯ ವರ್ತಮಾನ ಹಾಗೂ ಭವಿಷ್ಯ. ಇಲ್ಲಿ ಇವರೇ ನಿಗೂಢ ಬಾಣ ಹಾಗೂ ಬಿಲ್ಲು. ಆದರೆ ನಿಜದ ಬಿಲ್ಲುಗಾರರಾದ ಸುಷ್ಮಾ ಸ್ವರಾಜ್, ಅಡ್ವಾನಿ, ಅನಂತಕುಮಾರ್, ನಾಗಪುರದ ಕೇಶವ ಕೃಪಾ, ಹಾಗು ಸಂಘ ಪರಿವಾರ ಈ ಶೂದ್ರರನ್ನು ಉಂಡ ನಂತರ ಬಾಳೆ ಎಲೆ ಬಿಸಾಡುವಂತೆ ಬಿಸಾಡಿ ಈಗ ತಾವು ಮಾತ್ರ ಡಿಟರ್ಜೆಂಟ್ ಸೋಪಿನಂತೆ ಹುಸಿ ಬಿಳುಪನ್ನು ತೋರುತ್ತ ದಿಲ್ಲಿ ಎನ್ನುವ ಮಾಯಾವಿಯ ಗದ್ದುಗೆಗೆ ಕೈ ಚಾಚುತ್ತಿದ್ದಾರೆ.
ಬಲಿಷ್ಟ ಜಾತಿಗಳ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲು ಉತ್ತರ ಭಾರತದ ಅಹಿಂದ ವರ್ಗಗಳು 90ರ ದಶಕದಲ್ಲಿ ಹಾಗೂ ಇಲ್ಲಿವರೆಗೂ ಅಲ್ಲಿನ ಸಮಯಸಾಧಕ, ಜಾತೀವಾದಿ ರಾಜಕಾರಣಿಗಳ ಕೈಯಲ್ಲಿ ಸಿಲುಕಿಕೊಂಡು ಈಗ ಅತ್ಯಂತ ಉಸಿರುಗಟ್ಟಿಸುವ, ಕೊಳೆತ ಸ್ಥಿತಿಗೆ ತಲುಪುತ್ತಿರುವುದು ನಮ್ಮ ರಾಜ್ಯದ ಅಹಿಂದ ವರ್ಗಗಳಿಗೆ ಪಾಠವಾಗದಿದ್ದರೆ ಇಲ್ಲಿ ಭವಿಷ್ಯದಲ್ಲಿ ಪ್ರತಿಗಾಮಿ ಪರಿಸ್ಥಿತಿಯೇ ಉಂಟಾಗುವುದು, ಜೊತೆಗೆ ಈ ನಮ್ಮ ನಾಡು ತನ್ನ ಗರ್ಭದಲ್ಲಿ ತುಂಬಿಕೊಳ್ಳಲಿರುವುದು ಅವಮಾನದ, ಹತಾಶೆಯ, ಮೌಲ್ಯಗಳ ಸೋಲಿನ ನೋವುಗಳನ್ನು. ಇದು ಗರ್ಭಪಾತವಾದರೆ ಅದರ ತೀವ್ರವಾದ ಮೊದಲ ಹಾಗೂ ಕೊನೆಯ ಹೊಡೆತ ಬೀಳುವುದು ಈ ಅಹಿಂದ ವರ್ಗಗಳಿಗೆ. ಇದರಿಂದ ಉಂಟಾಗುವ ದೊಡ್ದ ದುರಂತ ಇಡೀ ರಾಜ್ಯವನ್ನು ಮತ್ತೆ ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯುವ ಸಾಧ್ಯತೆಗಳಿವೆ.
ಇಲ್ಲಿ ಒಂದು ಕಾಲದಲ್ಲಿ ಸ್ವಘೋಷಿತವಾಗಿಯೇ ಸಹಜವಾಗಿಯೇ ಹುಟ್ಟಿಕೊಂಡ, ಬೆಳೆದುಬಂದ ಸಮಾಜವಾದಿ ತತ್ವಗಳು, ಜನಪರ ಕಾಳಜಿಗಳು, ಪ್ರಗತಿಪರ ನೀತಿಗಳು, ನ್ಯಾಯವಂತಿಕೆ ಕೊನೆ ಉಸಿರೆಳೆಯುತ್ತಿವೆ. ಏಕೆಂದರೆ ಕಳೆದ 5 ವರ್ಷಗಳಿಂದ ಕರ್ನಾಟಕದಲ್ಲಿ ಆಡಳಿತ ಯಂತ್ರವೇ ಇಲ್ಲ. ಇಲ್ಲಿ ಮನೆಯಲ್ಲಿ ಮನೆಯೊಡೆಯನಿದ್ದನೋ ಇಲ್ಲವೋ ಎನ್ನುವ ಪ್ರಶ್ನೆಯೇ ಇಲ್ಲ. ಏಕೆಂದರೆ ಹೊಸ್ತಿಲಲ್ಲಿ ಹುಲ್ಲು ತುಂಬಿರುವ ಮನೆಯಲ್ಲಿ ಮನೆಯೊಡೆಯನಿಲ್ಲವೇ ಇಲ್ಲ. ಅಭಿವೃದ್ದಿಯ ಯೋಜನೆಗಳು, ಕನಸುಗಳು, ಸಮತಾವಾದದ ನೀತಿ ಕಾರ್ಯಗತವಾಗಿದೆಯೇ ಇಲ್ಲವೇ ಎನ್ನುವ ಪ್ರಶ್ನೆಯೇ ಇಲ್ಲ. ಏಕೆಂದರೆ ಪ್ರಭುತ್ವ ಇದನ್ನು ಗಣನೆಗೂ ಕೂಡ ತೆಗೆದುಕೊಂಡಿಲ್ಲ, ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ. ಅವುಗಳನ್ನು ಯಾರು ಕೂಡ ಕನಸಿರಲೂ ಇಲ್ಲ. ಇದು ಕಟುವಾದ, ಭೀಕರ ವಾಸ್ತವ. ಇದು ಉತ್ಪ್ರೇಕ್ಷೆಯಲ್ಲ. ಹೊಸ ನಡೆಗೆ, ಹೊಸ ಚಿಂತನೆಗೆ, ಹೊಸ ಕನಸುಗಳಿಗೆ, ಹೊಸ ಪಲ್ಲಟಗಳಿಗೆ, ಹೊಸ ನಾಯಕನಿಗೆ ಕಾಯುತ್ತಿದೆ ಈ ರಾಜ್ಯ. ಪ್ರಗತಿಪರ ಸಂಘಟನೆಗಳಿಗೆ,ವೈಚಾರಿಕ ಶಕ್ತಿಗಳಿಗೆ ಇದು ಅತ್ಯಂತ ಸವಾಲಿನ ಆದರೆ ಅಷ್ಟೇ ಜೀವಂತಿಕೆಗಾಗಿ space ಇರುವ ಕಾಲ ಕೂಡ.
ಕೃಪೆ : http://www.vartamaana.com