Feb 7, 2012

ಕನ್ನಡ ಬಳಸಿ ಕನ್ನಡ ಉಳಿಸಿ


        ಕನ್ನಡ ರಾಜ್ಯ ಉದಯವಾಗಿ 55 ವರ್ಷಗಳೇ ಕಳೆದರೂ ಕೂಡ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಭದ್ರವಾದ ನೆಲೆಯಿಲ್ಲದಾಗಿರುವುದು ಸೋಚನೀಯ ಸ್ಥಿತಿಯಾಗಿದೆ. ಕನ್ನಡ ನಾಡು ಉದಯವಾಗಲು ಸಾವಿರಾರು ಮಹಾನೀಯರ ಹೋರಾಟ ವ್ಯರ್ಥವಾಗುತ್ತಿದೆ ಅನಿಸುತ್ತದೆ. ಏಕೆಂದರೆ ಇದುವರೆಗೂ ಕನ್ನಡ ಭಾಷೆ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಜಾರಿಯಾಗಿಲ್ಲ. ಕೇವಲ ಹಳ್ಳಿಗಳಲ್ಲಿ ಮಾತ್ರ ಕನ್ನಡ ಬಳಸುವವರನ್ನು ಕಾಣಬಹುದಾಗಿದೆ. ನಗರಗಳನ್ನು ನೋಡುವುದಾದರೆ ಅನ್ಯ ಭಾಷೆಗಳ ದರ್ಬಾರಿನಲ್ಲಿ ಕನ್ನಡ ತನ್ನ ಮೂಲ ನೆಲೆಯನ್ನು ಕಳೆದುಕೊಂಡಿದೆ. ಉದಾಹರಣೆಗೆ ರಾಜಧಾನಿ ಬೆಂಗಳೂರನ್ನೇ ನೋಡುವುದಾದರೆ ಶೇ.50ಕ್ಕೂ ಹೆಚ್ಚಿನ ಜನರು ಅನ್ಯ ಭಾಷಿಗರ ನೆಲೆಯಾಗಿದೆ. ಮುಂದೊಂದು ದಿನ ಬೆಂಗಳೂರು ಬೇರೆ ಭಾಷಿಗರ ತಾಣವಾಗಿ ಮಾರ್ಪಟ್ಟು ಕನ್ನಡ ಭಾಷಿಗರು ಬೆಂಗಳೂರಿನಲ್ಲಿ ನೆಲೆ ಕಳೆದುಕೊಳ್ಳಬೇಕಾಗಿ ಬರಬಹುದರಲ್ಲಿ ಯಾವುದೇ ಅನುಮಾನವಿಲ್ಲ. 
      ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಜನರನ್ನು ಭಾಗವಹಿಸಿವಂತೆ ಮಾಡುವಲ್ಲಿ ಕವಿಗಳ ಪಾತ್ರ ತುಂಬಾ ದೊಡ್ಡದು. ಕವಿಗಳು ತಮ್ಮ ಕವಿತೆಗಳ ಮೂಖಾಂತರ ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದದು ಈಗ ಇತಿಹಾಸ. ಈಗ ಅಂತಹದೇ ಪರಿಸ್ಥಿತಿ ಎದುರಾಗಿದೆ. ಕವಿಗಳು ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸಬೇಕಾಗಿದೆ. ಈ ಹಿಂದಿನ ಕವಿಗಳ ಕವಿಗಳು ಈಗಲೂ ಪ್ರಸ್ತುತವಾಗಿವೆ. ಅವುಗಳಲ್ಲಿ ಕೆಲವನ್ನು ಈ ಕೆಳಕಂಡಂತೆ ಕಾಣಬಹುದು.

ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ!
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರ 
ಗರ್ಜಿಸುವುದ ಕಲಿತು ಸಿಂಹವಾಗಿ!
ಮೇಲಿನ ರಾಷ್ಟ್ರಕವಿ ಕುವೆಂಪುರವರ ಕವಿತೆ ಈಗ ತುಂಬಾ ಪ್ರಸ್ತುತವಾಗಿದೆ. ಕನ್ನಡದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯಲ್ಲಿ ಮರಾಠಿಗರ ದಬ್ಬಾಳಿಕೆಗೆ ಕೊನೆಯಿಲ್ಲದಾಗಿದೆ. ಇಂಥ ಪ್ರಕರಣ ಎಷ್ಟೋ ಇವೆ. ಉದಾ: ಕೇರಳದಲ್ಲಿರುವ ಕಾಸರಗೂಡು ಪ್ರದೇಶ ಅಪ್ಪಟ ಕನ್ನಡ ನೆಲೆಗೆ ರಕ್ಷಣೆ ಇಲ್ಲದಾಗಿದೆ.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲಹಿನ ನಿಧಿಯು ಸದಭಿಮಾನದ ಗೂಡು
ಈ ಕಾವ್ಯವನ್ನು ಏಕೀಕರಣದಲ್ಲಿ ಹುಯಿಲಗೊಳ ನಾರಾಯಣರಾವ್ ಅವರು ಕನ್ನಡ ರಾಜ್ಯದ ಉದಯವಾಗಲೀ ಎಂಬ ಆಶಯದಿಂದ ಬರೆದರು. 56ವರ್ಷಗಳು ಕಳೆದರೂ ಸದಭಿಮಾನದ ಗೂಡಾಗಿ ನಿರ್ಮಾಣವಾಗಿಲ್ಲ. ಇಂಥ ಕವಿತೆಗಳು ಇಂದಿಗೂ ಕನ್ನಡಿಗರಲ್ಲಿ ಜಾಗೃತಿಯ ಕಹಳೆ ಮೊಳಗಿಸಲು ಸಹಕಾರಿಯಾಗಿವೆ.

ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ
ಕನ್ನಡವೇ ಎನ್ನುಸಿರು ಹೆತ್ತೆನ್ನ ತಾಯಿ
ಕನ್ನಡವೇ ಧನ ಧಾನ್ಯ ಕನ್ನಡವೇ ಮನೆ ಮಾನ್ಯ
ಕನ್ನಡವೇ ಎನಗಾಯ್ತು ಕಣ್ಣು ಕಿವಿ ಬಾಯಿ
ಬೆನಗಲ್ ರಾಮರಾವ್ ರ ಈ ಕವಿತೆಯಲ್ಲಿ ಕನ್ನಡವೆಂದರೇ ಕೇವಲ ನುಡಿಯಲ್ಲ. ಪ್ರತಿಯೊಬ್ಬ ಕನ್ನಡಿಗರ ಜೀವನ ಹಾಗೂ ಉಸಿರಾಗಬೇಕಿದೆ.

ಹಚ್ಚೇವು ಕನ್ನಡದ ದೀಪ 
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ
ಹಚ್ಚೇವು ಕನ್ನಡದ ದೀಪ
ಡಿ.ಎಸ್.ಕರ್ಕಿಯವರ ಸಾಲುಗಳಂತೆ ಕನ್ನಡದ ದೀಪ ಎಲ್ಲರ ಮನಗಳಲ್ಲಿ ಬೆಳಗಲಿ ಎಂಬುದು ನನ್ನ ಅಭಿಲಾಷೆ.

     ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಈ ಚೆನ್ನವೀರ ಕಣವಿಯವರ ಮಾತುಗಳಂತೆ ಕೇವಲ ಕರ್ನಾಟಕ ಎಂಬ ರಾಜ್ಯ  ಇದ್ದರೆ ಸಾಲುದು ಕರ್ನಾಟಕ ರಾಜ್ಯದಲ್ಲಿ ಬದುಕುವ ಎಲ್ಲರ ಉಸಿರು, ಜೀವನ ಕನ್ನಡವಾಗಬೇಕು. ಕನ್ನಡದ ಹೋರಾಟಕ್ಕೆ ಕುವೆಂಪುರವರ ಈ ಕೆಳಕಂಡ ಸಾಲುಗಳು ಸದಾ  ಸ್ಪೂರ್ತಿದಾಯಕವಾಗಿರುತ್ತವೆ. 
ಕನ್ನಡಕ್ಕಾಗಿ ಕೈ ಎತ್ತು ಅದು ಕಲ್ಪವೃಕ್ಷವಾಗುತ್ತದೆ
ಕನ್ನಡಕ್ಕಾಗಿ ಕೊರಳೆತ್ತು ಅದು ಪಾಂಚಜನ್ಯವಾಗುತ್ತದೆ
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು
ಅದೇ ಗೋವರ್ಧನಗಿರಿಯಾಗುತ್ತದೆ.

ಕನ್ನಡ ನುಡಿ ನದಿಯಂತೆ ಸದಾ ಹರಿಯುತ್ತಿರಲಿ. ಕನ್ನಡ ಬಳಸಿ, ಕನ್ನಡ ಬೆಳೆಸಿ, ಕನ್ನಡ ಉಳಿಸಿ. 
- ಮಾ.ಕೃ.ಮಂಜುನಾಥ್