Jan 13, 2012

ದೇವರ ಹೊಸಹಳ್ಳಿ ಬ್ರಹ್ಮರಥೋತ್ಸವ ಸಂಭ್ರಮ

ಚನ್ನಪಟ್ಟಣ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದೇವರಹೊಸಹಳ್ಳಿ ಶ್ರೀ ಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದಶುಕ್ರವಾರನೆರವೇರಿತು. ಮಧ್ಯಾಹ್ನ 1ಗಂಟೆಯಿಂದ 2ಯೊಳಗೆ ತುಲಾ ಲಗ್ನದಲ್ಲಿ ಯಾತ್ರಾದಾನಪೂರ್ವಕ ಮಹಾರಥವನ್ನು ಭಕ್ತಾಧಿಗಳು ಎಳೆಯುವ ಮೂಲಕ ವಿಜೃಂಭಣೆಯಿಂದ ನೆರವೇರಿಸಿದರು.ಗೋವು, ಅಶ್ವಪೂಜೆ, ಗಜಪೂಜೆ, ಮಂಟಪೋತ್ಸವ, ತಿರುಪ್ಪಾವಡಿಸೇವೆ, ಅನ್ನರಾಶಿ ಪೂಜೆ, ಮಜ್ಜಿಗೆ, ಪಾನಕ ವಿತರಣೆ, ಅಪೂರ್ವ ಡಿ.ಸಾಗರ್ ಅವರಿಂದ ನೃತ್ಯಸೇವೆ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಜರುಗಿದವು.
ಸಂಜೆ ಡೋಲೋತ್ಸವ, ಮಂದಹಾಸ ದೀಪೋತ್ಸವ, ತೆಪ್ಪೋತ್ಸವ, ವರ್ಣರಂಜಿತ ಬಾಣಬಿರುಸುಗಳ ಪ್ರದರ್ಶನ ಭಕ್ತಾಧಿಗಳ ಮನಸ್ಸಿನಲ್ಲಿ ಉಲ್ಲಾಸ ಉಂಟು ಮಾಡಿತು. ಇಂದು ಬೆಳಿಗ್ಗೆಯಿಂದಲೇ ಭಗವಂತನ ದರ್ಶನ ಪಡೆಯಲು ಸಾವಿರಾರು ಮಂದಿ ಭಕ್ತಾಧಿಗಳು ಸಾಲುಗಟ್ಟಿ ನಿಂತಿದ್ದರು.

ಬ್ರಹ್ಮರಥೋತ್ಸವ ಸಂದರ್ಭದಲ್ಲಿ ತಾಲೂಕಿನ ಹಲವಾರು ಮುಖಂಡರು, ಹಿರಿಯರು, ಸುತ್ತಮುತ್ತಲ ತಾಲೂಕುಗಳ ಭಕ್ತಾದಿಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.
ಕ್ಷೇತ್ರದ ಮಹಿಮೆ : ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ತಾಲ್ಲೂಕಿನಲ್ಲಿ ಮಂತ್ರಸಿದ್ದಿ ಮಹಾ ಸಂಜೀವಿನಿ ಕ್ಷೇತ್ರವೆಂದು ದೇವರಹೊಸಹಳ್ಳಿ ಖ್ಯಾತಿವೆತ್ತು, ಚೈತನ್ಯದ ತಾಣವಾಗಿ ಪ್ರಸಿದ್ಧಿ ಪಡೆದುಕೊಂಡಿದೆ. ಮಧ್ವ ಸಿದ್ಧಾಂತ ಹರಿ ಸರ್ವೋತ್ತಮ ತತ್ವ ಪ್ರತಿಪಾದಕರಲ್ಲಿ ಒಬ್ಬರಾದ ಶ್ರೀವ್ಯಾಸರಾಜರು ನಿತ್ಯಾನುಷ್ಠಾನಕ್ಕೆ ಕಣ್ವ ನದಿಗೆ ಹೋಗುವುದು ಪ್ರಸಿದ್ಧಿಯಾಗಿತ್ತು.

ಅಬ್ಬೂರು ಮಠದ ವಾಯುವ್ಯಕ್ಕೆ ದೊಡ್ಡ ಬೆಟ್ಟವಿದ್ದು, ವ್ಯಾಸರಾಜರು ಒಮ್ಮೆ ಶ್ರೀಮಾರುತಿಯ ನಾಮ ಜಪಿಸುತ್ತ ದೊಡ್ಡ ಬೆಟ್ಟದ ಮಧ್ಯಭಾಗದಲ್ಲಿರುವ ಹುಲಿಗವಿಯ ಮೂಲಕ ಹೋಗುವಾಗ ದೊಡ್ಡ ಬಂಡೆಯಲ್ಲಿ ಉಗ್ರರೂಪಿ ಶ್ರೀ ಸಂಜೀವರಾಯನ ದರ್ಶನವಾಯಿತಂತೆ. ಶ್ರೀ ರಾಮಸಂಜೀವಮೂರ್ತಿಗೆ ವ್ಯಾಸರಾಜರು ತಮ್ಮ ತಪಃಶಕ್ತಿಯನ್ನೆಲ್ಲಾ ಧಾರೆ ಎರೆದು ಈ ಕ್ಷೇತ್ರದಲ್ಲಿ ನೆಲೆಸುವಂತೆ ಮಾಡಿದರು.

ಈ ಗ್ರಾಮ ಜಗದೇವ(ಕ)ರಾಯನೆಂಬ ಪಾಳೇಗಾರನ ಆಡಳಿತದಲ್ಲಿತ್ತು ಎಂದು ತಿಳಿದುಬಂದಿದ್ದು, ಪಾಳೇಗಾರ ಬೇಟೆ ಆಡಲು ಕಾಡಿಗೆ ಬರುತ್ತಿದ್ದರು. ಆಗ ಸಂಜೀವರಾಯಸ್ವಾಮಿ ಮೂರ್ತಿಯನ್ನು ಕಂಡು ಆಕರ್ಷಿತನಾದ ಪಾಳೇಗಾರ, ಅಲ್ಲೊಂದು ಗುಡಿ ಕಟ್ಟಿದ. ಇದಕ್ಕೆ ಸಂತೃಪ್ತನಾದ ಸಂಜೀವರಾಯ ಪಾಳೇಗಾರನಿಗೆ ಪುತ್ರ ಸಂತಾನ ನೀಡದನೆಂದು ಪ್ರತೀತಿ ಇದೆ.

ಜೀವಕಳೆ ತುಂಬಿರುವ ಮುದ್ದು ಮೂರ್ತಿಯ ಖಚಿತ ನೇತ್ರಗಳು ಪಚ್ಚೆ ವೈಡೂರ್ಯದ ರಾಮ ತಿಲಕ, ನವರತ್ನ ಖಚಿತ ಸ್ವರ್ಣ ಕರ್ಣ ಮಂಡಲಗಳು, ನಳಿನಾಕ್ಷಿ ಮಾಲೆ, ತ್ರಿದಳ ಪದ್ಮ ಶೌರ್ಯ ಸಾಹಸಗಳ ಆದ್ಭುತ ಅಮೃತಾನುಗ್ರಹ ಅಭಯ ಹಸ್ತ, ಕಟಿಬಂಧನ ಅಜಾನುಭಾಹು ಅಂಜನೇಯ ತ್ರಿಚರಣಗಳು ನೋಡುವ ಭಕ್ತರ ಹೃದಯ ಪಲ್ಲವಿಸುತ್ತದೆ.

ದೇವಾಲಯ ಗ್ರಾಮದ ಮಧ್ಯ ಭಾಗದಲ್ಲಿದೆ. ಪಾಕಶಾಲೆ, ಯೋಗಶಾಲೆ, ಹೂವಿನ ತೋಟವಿದೆ. ದೇವಾಲಯದ ಹೊರಗೆ ಗರುಡಗಂಬ, ಒಳಭಾಗದಲ್ಲಿ ಬಿಲಿಪೀಠ, ಧ್ವಜಸ್ಥಂಭ ಮತ್ತು ಎಡಭಾಗದಲ್ಲಿ ಪ್ರಾಚೀನ ಕಾಲದ ಅಶ್ವಥ್ಥ್ ವೃಕ್ಷವಿದೆ. ಹೂವಿನ ತೋಟದಲ್ಲಿ ಮೂಲ ಆದಿಶೇಷನ ವಾಲ್ಮೀಕವಿದೆ.

ಈ ಕ್ಷೇತ್ರದ ಮತ್ತೊಂದು ಐತಿಹ್ಯವೆಂದರೆ ಉಗ್ರನರಸಿಂಹಸ್ವಾಮಿ ಪ್ರತಿಷ್ಠಾಪಿತನಾಗಿ ಅನುಗ್ರಹಿಸಿರುವುದು.ಕ್ಷೇತ್ರದ ದೇವತೆ ಸಂಜೀವಿನಿ ಸಂಜೀವರಾಯ, ಆಂಜನೇಯ, ಉಗ್ರನರಸಿಂಹನ ಲಕ್ಷ್ಮೀವೆಂಕಟೇಶ್ವರ ಉತ್ಸವ ಮೂರ್ತಿಗಳ ಸಾನ್ನಿಧ್ಯ ರಾಜ್ಯದಲ್ಲಿ ಬೇರೆಲ್ಲೂ ಇಲ್ಲವೆಂದು ಹೇಳಲಾಗಿದೆ.

ಜಾತ್ರೆ ವಿಶೇಷ : ನವಜೀವನಕ್ಕೆ ಕಾಲಿಟ್ಟ ಜೋಡಿಗಳು ನಾಡಿನ ಮೂಲೆ ಮೂಲೆಗಳಿಂದ ಜಾತ್ರೆಗೆ ಬಂದು ಸೇರುತ್ತಾರೆ. ಆಷಾಢದಲ್ಲಿ ಒಲಿದ ಜೀವಗಳೂ ಒಂದು ತಿಂಗಳು ದೂರವಾಗಿ ಏಕಾದಶಿಗೆ (ಉಪ ವಾಸದ ಹಬ್ಬ) ಅತ್ತೆ ಮನೆಗೆ ಬರುವ ಅಳಿಯ ತನ್ನ ಪತ್ನಿಯ ಜೊತೆ ಈ ಜಾತ್ರೆಗೆ ಬರುವುದು ವಿಶೇಷ.