May 2, 2011

ನೀನು ಯಾರೆ?


ಹೊಳೆಯ ಬಂಡೆಯ ಮೇಲೆ ನಾ ನಿನ್ನ ಕಂಡೆ,
ನಿನ್ನ ಹೆರ್‍ಅಳೊಳಗಿತ್ತು ಮಲ್ಲಿಗೆಯ ದಂಡೆ;
ನಿನ್ನ ಹಣೆಯಲ್ಲಿತ್ತು ಕಸ್ತೂರಿ ತಿಲಕ,
ಕುಡಿಹುಬ್ಬುಗಳ ನಡುವೆ ಬೈತಲೆಯ ತನಕ.

ಸೀರೆ ಸೆರಗನು ಹಿಡಿದು ಗಾಳಿಯಲಿ ನಿಂತ
ನಿನ್ನ ನೋಟವೆ ಸಾಕು, ಪ್ರತಿದಿನ ವಸಂತ;
ನಿನ್ನ ಮುಂಬೆರಳಲ್ಲಿ ಹೊಳೆದಿತ್ತು ಮಿಂಚು'
ನೀನುಟ್ಟ ಸೀರೆಯದು ಹೊಬಳ್ಳಿಯಂಚು.

ನಿನ್ನ ಕಿವಿಯಲಿ ಹೊಳೆಯುತಿತ್ತು ಬೇಂಡೋಲೆ,
ನಿನ್ನ ಕೊರಳೊಳಗಿತ್ತು ನವರತ್ನಮಾಲೆ;
ನಿನ್ನ ಕಾಲ್ಗೆಜ್ಜೆಗಳ ಇನಿದನಿಗಳಲ್ಲಿ
ನಾನು ಒಲವನು ಕಂಡೆ ಹಾಡಹಗಲಲ್ಲಿ.

ನಾಕಂಡ ಮಂದಹಾಸವನು ವರ್ಣಿಲಾರೆ,
ಅಪ್ಸರೆಯೊ ಕಿನ್ನರಿಯೊ, ಓ ನೀನು ಯಾರೆ?

-ಮಲ್ಲಿಗೆ ಕವಿ ಕೆ ಎಸ್ ನರಸಿಂಹಸ್ವಾಮಿ