Apr 4, 2012

ಕಪ್ಪೆಅರಭಟ್ಟನ ಬಾದಾಮಿ ಶಾಸನದ ಅರ್ಥ

ಇಂಡಿಯನ್ ಆಂಟಿಕ್ವೆರಿಯಲ್ಲಿ (ಸಂ.೧೧, ಮಾರ್ಚ್ ೧೮೮೧, ಪು. ೧೬) ಫ್ಲೀಟ್ ಸಂಪಾದಿಸಿ ಪ್ರಕಟಿಸಿರುವ ತಟ್ಟುಕೋಟಿಗ್ರಾಮದ, ಕಪ್ಪೆ ಅರಭಟ್ಟನೆಂಬ ವೀರನೊಬ್ಬನ ಶೌರ್ಯದ ಹಿರಿಮೆಯನ್ನು ಕೀರ್ತಿಸುವ, ಒಂದು ಶಾಸನ ಕನ್ನಡ ನಾಡಿನಲ್ಲಿ ಬಾದಾಮಿ ಶಾಸನವೆಂಬುದಾಗಿ ಕರೆಯಲ್ಪಡುತ್ತ ಕೆಲವು ವಿಶಿಷ್ಟ ಕಾರಣಗಳಿಗಾಗಿ ಜನಪ್ರಿಯತೆಯನ್ನು ಸಂಪಾದಿಸಿಕೊಂಡಿದೆ. ಆ ಕಾರಣಗಳಲ್ಲಿ ಮುಖ್ಯವಾದವು ಇವು: ೧. ದೊರೆತ ಕನ್ನಡ ಶಾಸನಗಳಲ್ಲಿ ಆ ಭಾಷೆಯ ತ್ರಿಪದಿಯೆಂಬ ಗಣ್ಯವಾದ ದೇಶ್ಯಛಂದಸ್ಸು ಬಳಕೆಯಾಗಿರುವುದು ಮೊತ್ತ ಮೊದಲು ಇಲ್ಲಿಯೇ. ೨. ಪ್ರಾಚೀನ ಕನ್ನಡ ಸಂಸ್ಕೃತಿಯ ಒಂದಂಶವನ್ನು ಕಾವ್ಯರೂಪದಲ್ಲಿ ಸಾಮಾನ್ಯ ಜನತೆಗೆ ಮನವರಿಕೆ ಮಾಡಿಕೊಡುವ ಸಾಹಿತ್ಯಾರಂಭಕಾಲದ ಆಕರ್ಷಕ ಪ್ರಯತ್ನಗಳಲ್ಲಿ ಇದು ಗಣ್ಯವಾಗಿರುವುದು. ೩. ಕನ್ನಡ ಭಾಷೆಯ ಹಳಗಾಲದ ಒಂದು ಅವಸ್ಥೆಯನ್ನು ತಿಳಿಯಲು ತಕ್ಕ ಸಾಮಗ್ರಿಯಿಂದ ಇದು ಕೂಡಿರುವುದು. ಇಂಥ ಕೆಲವು ಕಾರಣಗಳಿಂದ, ಕನ್ನಡ ನಾಡಿನ ಸಂಸ್ಕೃತಿ ಮತ್ತು ಸಾಹಿತ್ಯಗಳ ಅಭ್ಯಾಸಿಗಳು ಪ್ರಸ್ತುತ ಶಾಸನಪಾಠವನ್ನು ಆಗಾಗ ಉದ್ಧರಿಸುತ್ತ, ಅದರ ಆಶಯವನ್ನು ಆಗಾಗ ವಿವರಿಸುತ್ತ ಇರುವುದು ಕಂಡುಬರುತ್ತದೆ.[1] ಪಾಠದ ವಿಷಯದಲ್ಲಿ ಎಲ್ಲರೂ ಸಾಧಾರಣವಾಗಿ ಫ್ಲೀಟ್ ಅವರನ್ನೇ ಅನುಸರಿಸುತ್ತಾರೆ. ಶಾಸನದ ಲಿಪಿಯಲ್ಲಿ ಅಂತಹ ಸಮಸ್ಯೆಗಳೇನೂ ಇಲ್ಲದೆ ಪಾಠವನ್ನು ಸರಿಯಾಗಿ ಓದಿರುವ ಸಾಧ್ಯತೆಯನ್ನಿದು ಸೂಚಿಸುತ್ತದೆ. ಆದರೆ ಆಶಯದ ನಿರೂಪಣೆಯಲ್ಲಿ ಅಲ್ಲಲ್ಲಿ ಬೇರೆ ಬೇರೆಯಾದ ಅರ್ಥ ತಾತ್ಪರ್ಯಗಳನ್ನು ಬರೆದಿರುವುದೂ ಕ್ಲಿಷ್ಟವೆಂದು ತೋರಿದ ಕಡೆ ಸಂಗ್ರಹವಾಗಿ ಭಾವಾನುವಾದ ಮಾಡಿರುವುದೂ ವಿಚಾರಣೀಯವಾಗಿದೆ. ಶಾಸನ ಪಾಠಕ್ಕೆ ಸಮರ್ಪಕವಾದ ಒಂದು ಅರ್ಥವನ್ನು ಹೇಳುವ ಪ್ರಯತ್ನ ಈ ಲೇಖನದ ವಿಯ.
ಇಂಡಿಯನ್ ಆಂಟಿಕ್ವೆರಿಯಲ್ಲಿ ಬಂದಿರುವಂತೆ ಶಾಸನಪಾಠ:
ಕಪ್ಪೆ ಅರಭಟ್ಟನ್ ಶಿಷ್ಟ ಜನಪ್ರಿಯನ್
ಕಷ್ಟ ಜನವರ್ಜಿತನ್ ಕಲಿಯುಗವಿಪರೀತನ್ [||*]
ವರನ್ತೇಜಸ್ವಿನೋ ಮೃತ್ತ್ಯುರ್ನ ತು ಮಾನಾವಖಣ್ದನಮ್
ಮೃತ್ತ್ಯುಸ್ತತಣಿಕೋ ದುಃಖಮ್ಮಾನಭಂಗನ್ದಿನೇ ದಿನೇ [||*]
ಸಾಧುಗೆ ಸಾಧು ಮಾಧೂರ್ಯ್ಯನ್ಗೆ ಮಾಧೂರ್ಯ್ಯಂ ಬಾಧಿಪ್ಪ
ಕಲಿಗೆ ಕಲಿಯುಗವಿಪರೀತನ್ಮಾಧವನೀತನ್ಪೆ ಱನಲ್ಲ [||*]
ಒಳ್ಳಿತ್ತ ಕೆಯ್ವರಾರ್ಪ್ಪೊಲ್ಲದುಮಱನ್ತೆ ಬಲ್ಲಿತ್ತು ಕಲಿಗೆ
[ವ್] ಇಪರೀತಾ ಪುರಾಕೃತಮಿಲ್ಲಿ ಸನ್ಧಿಕ್ಕುಮದು ಬನ್ದು [||*]
ಕಟ್ಟಿದ ಸಿಂಘಮನ್ಕೆಟ್ಟೊಡೇನೆಮೆಗೆನ್ದು ಬಿಟ್ಟವೊಲ್ಕಲಿಗೆ ವಿ
[ಪ] ರೀತಂಗಹಿತರ್ಕ್ಕಳ್ಕೆಟ್ಟರ್ಮ್ಮೇಣ್ಸತ್ತರವಿಚಾರಮ್ [||*]
ಫ್ಲೀಟ್ ಅವರು ಮಾಡಿರುವ ಅರ್ಥ
Kappe Arabhatta was beloved excellent people and avoided by evil people, and an exceptional man in the Kaliyuga.
Better is a glorious death than the destruction of reputation: death is pain that lasts only for an instant; but the destruction of reputation abides from day to-day.
That which is good (is appropriate) to that which is good, and sweetness to sweetness, and he who is an exceptional man in the Kaliyuga to the distressful Kali(age): he is (a very) Madhava and nothing less.
Who are they that do what is good?; they cannot be likeend(to him). Having recognised this…, let there be here effected a reconciliation with Kali (age), saying ‘what is this to us?’ came to injure and destory the eminence that he had achieved, thay were worsted and then they died, as to this, there can be no doubt.
ಇದು ಶಾಬ್ದಿಕ ಅನುವಾದದ ಯತ್ನ. ಆದರೆ ಅಭಿಪ್ರಾಯವಿಶದತೆಗಾಗಿ ಅಲ್ಲಲ್ಲಿ ಅಧ್ಯಾಹಾರ ಮಾಡಿ ಸಂಗತಿಯನ್ನು ಸ್ಪಷ್ಟಪಡಿಸಿದೆ. ಒಂದು ಕಡೆ ಅರ್ಥವಾಗದ ಭಾಗವನ್ನು ಅನುವಾದ ಮಾಡದೆ ಹಾಗೆಯೇ ಬಿಟ್ಟಿದೆ. ಈಚೆಗೆ ಈ ಾಸನದ ಅರ್ಥವನ್ನು ಉಲ್ಲೇಖಿಸುವ ಸಂದರ್ಭಗಳು ಬಂದಾಗ್ಗೆ, ವಿದ್ವಾಂಸರು ಬೇರೆ ಬೇರೆಯಾಗಿ ಅರ್ಥ ನಿರೂಪಣೆ ಮಾಡಿರುವುದನ್ನು ಗಮನಿಸಿದರೆ, ಅವರಿಗೆ ಫ್ಲೀಟ್ ಅವರ ಅರ್ಥ ನಿರೂಪಣೆ ಪೂರ್ತಿಯಾಗಿ ಒಪ್ಪಿಗೆಯಾಗಿಲ್ಲ ಎನ್ನುವುದು ಸ್ವಯಂ ವಿದಿತವಾಗುತ್ತದೆ.
೧. ಶಾಸನದ ಮೊದಲೆರಡು ಸಾಲುಗಳು ಒಂದು ಅರ್ಥವತ್ತಾದ ಘಟಕ. ಕನ್ನಡ ಭಾಷೆಯಲ್ಲಿರುವ ಈ ಶಾಸನಭಾಗದಲ್ಲಿ[2] ಸಮಗ್ರಶಾಸನದ ಕೇಂದ್ರವ್ಯಕ್ತಿ ಕಪ್ಪೆ ಅರಭಟ್ಟ ನೆಂಬವನ ಗುಣಗಳನ್ನು ಹೇಳಿದೆ. ಇಲ್ಲಿ ಶಬ್ದಾನ್ವಯ ಇರುವಂತೆಯೇ ಗ್ರಾಹ್ಯವಾಗಬಹುದು; ಇಲ್ಲಿವೆ ‘ಕಲಿಯುಗ ವಿಪರೀತನ್’ ಎಂಬುದು ಮುಂದಿನ ಸಾಲುಗಳಲ್ಲಿ ಶಾಸನವ್ಯಕ್ತಿಯ ಹೆಸರಿಗೆ ಪರ್ಯಾಯವಾಗಿ ಬರುವ ಒಂದು ಅನ್ವರ್ಥನಾಮವೋ ಬಿರುದಿನಂತಹ ಹೆಸರೋ ಆಗಿ ಕಾಣಿಸಿಕೊಂಡಿರುವುದರಿಂದ ‘ಕಲಿಯುಗವಿಪರೀತನ್ ಕಪ್ಪೆ ಅರಭಟ್ಟನ್…’ ಎಂದು ಮುಂತಾಗಿ ಆಗಬಹುದು.
ಈ ಭಾಗದ ಅರ್ಥ: ಫ್ಲೀಟರ ಅರ್ಥ ಒಟ್ಟಿನಲ್ಲಿ ಸರಿಯಾಗಿಯೇ ಇದೆ. ಆದರೆ ಇಲ್ಲಿ ನಮ್ಮ ಕುತೂಹಲವನ್ನು ಕೆರಳಿಸುವುದು ಎಂದರೆ, ವಿಲಕ್ಷಣವಾಗಿ ತೋರುವ ನಾಯಕವ್ಯಕ್ತಿಯ ಹೆಸರು. ಕಪ್ಪೆ ಅರಭಟ್ಟ ಎಂಬ ಹೆಸರಿಗೆ ಏನು ಅರ್ಥ? ಪದವಿಭಾಗ ಕಪ್ಪೆ+ಅರಭಟ್ಟನ್ ಎಂದೋ, ಕಪ್ಪೆಅರ+ಭಟ್ಟನ್ ಎಂದೋ? ಫ್ಲೀಟ್ ಮೊದಲುಗೊಂಡು ಎಲ್ಲರೂ ಈವರೆಗೆ ಮೊದಲಿನ ವಿಭಜನೆಯನ್ನೇ ಮಾನ್ಯ ಮಾಡಿದ್ದಾರೆ. ಶಾಸನದ ಪಡಿಯಚ್ಚಿನಲ್ಲಿ ಈ ಹೆಸರಿನ ಅಕ್ಷರಗಳನ್ನೆಲ್ಲ ಕೂಡಿಸಿ ಬರೆದಿದೆಯಾದ್ದರಿಂದ, ಮೂಲದ ಆಶಯ ಸಂದಿಗ್ಧ; ವಿಭಜನೆ ಎರಡು ರೀತಿಯಲ್ಲಿಯೂ ಆಗಬಹುದು. ಇರಲಿ; ಮೊದಲನೆಯ ರೀತಿಯನ್ನು ಒಪ್ಪಿದರೆ ಹೇಗೆ? ಕಪ್ಪೆ ಎಂದರೆ ಪ್ರಸಿದ್ಧವಾದ ಅರ್ಥ ಕಪ್ಪೆ(Frog)ಎಂದೇ. ಇನ್ನು ಅರಭಟ್ಟನ್ ಎಂಬ ಹೆಸರು ಎಂದರೆ ಪ್ರಸಿದ್ಧವಾದ ಯಾವ ಕನ್ನಡ ಶಾಸನದಲ್ಲಾಗಲಿ, ಸಾಹಿತ್ಯ ಗ್ರಂಥದಲ್ಲಾಗಲಿ ಕಂಡುಬಂದಿಲ್ಲ. ಇದು ವಿಚಾರಣೀಯ. ಈ ಪದದಲ್ಲಿ ಎರಡು ಅರ್ಥಘಟಕಗಳಿರುವುದು ಸ್ಪಷ್ಟ: ಅರ+ಭಟ್ಟನ್. ಈಗ ಅರ್ಥವೇನು?
‘ಭಟ್ಟ’ ಎಂಬುದು ಪರಿಚಿತ ಸಂಸ್ಕೃತಶಬ್ದ. ಇದರ ಅರ್ಥ: ೧. ರಾಜಕುಮಾರರ ಅಥವಾ ರಾಜಮನೆತನದವರ ಗೌರವಾರ್ಥವಾಗಿ ಸೇರುವ ಒಡೆಯ ಅಥವಾ ಸ್ವಾಮಿ. ೨. ಬಹುಶ್ರುತನಾದ ಬ್ರಾಹ್ಮಣನ ಹೆಸರಿನ ಕೊನೆಗೆ ಸಾಮಾನ್ಯವಾಗಿ ಸೇರುವ ಬಿರುದಿನಂತಹ ಮಾತು. ೩. ಮಿಶ್ರವರ್ಣದಲ್ಲಿ (ಎಂದರೆ ಕ್ಷತ್ರಿಯನಿಗೆ ವಿಪ್ರಕನ್ಯೆಯಲ್ಲಿ) ಹುಟ್ಟಿದ ಹೊಗಳುಭಟ್ಟ. ಇನ್ನು ‘ಅರ’ ಶಬ್ದ ಸಂಸ್ಕೃತದಲ್ಲಿ ಇದ್ದರೂ ಅದರ ಅರ್ಥಗಳಾವುವೂ ಪ್ರಸ್ತುತಕ್ಕೆ ಹೊಂದುವಂತೆ ತೋರುವುದಿಲ್ಲ. ಜೈನರ ೧೮ನೆಯ ತೀರ್ತಂಕರ ಹೆರು ‘ಅರ’ ಎಂದು. ಆದರೆ ಇದು ‘ಭಟ್ಟ’ ಶಬ್ದದ ಜೊತೆಯಲ್ಲಿ ಬರುವುದೇ ಸಾಮಾನ್ಯ. ಕನ್ನಡ ‘ಅರ’ ಶಬ್ದದ ಅರ್ಥವೂ ಇಲ್ಲಿಗೆ ಹೊಂದುವುದಿಲ್ಲ. ಮುಂದೇನು?
ಅರಸು ಎಂಬುದು ಸಮಾಸದಲ್ಲಿ ಪೂರ್ವ ಅಥವಾ ಉತ್ತರಪದವಾಗಿದ್ದಾಗ, ಅದಕ್ಕೆ ಬರುವ ಆದೇಶರೂಪ ಕೂಡ ‘ಅರ’ ಎಂದಾಗುತ್ತದೆ. ಉದಾ: ಅರಸು+ಕುವರ ಅರಗುವರ, ಅರಸು+ನೇಱಿಲ್, ಅರನೇಱಿಲ್ ಕನ್ನ+ಅರಸು=ಕನ್ನರ, ಗೋವಿಂದ+ಅರಸು+ಗೋವಿಂದರ. ಮೊದಲನೆಯದರ ಪ್ರಕಾರ ಅಪ್ಪೆಅರ+ಭಟ್ಟ ಎಂದರೆ ಕಪ್ಪೆ ಅರಸನ ಭಟ್ಟ (=ಬ್ರಾಹ್ಮಣನ/ಹೊಗಳು ಭಟ್ಟ) ಎಂದೋ, ಕಪ್ಪೆ ಎಂಬ ವಿಶೇಷಣವನ್ನುಳ್ಳ ಶ್ರೇಷ್ಠನಾದ ಭಟ್ಟ ಅಥವಾ ಭಟ್ಟಾಗ್ರಣಿ (=ಬ್ರಾಹ್ಮಣ/ಹೊಗಳುಭಟ್ಟ) ಎಂದೋ ಆಗಬಹುದು. ಎರಡನೆಯದರ ಪ್ರಕಾರ, ಕಪ್ಪೆ ಅರ ಎಂಬ ಭಟ್ಟ (=ಒಡೆಯ, ಬ್ರಾಹ್ಮಣ, ಹೊಗಳು ಭಟ್ಟ) ಎಂದೋ, ಕಪ್ಪೆ ಎಂಬ ವಿಶೇಷಣವನ್ನುಳ್ಳ ಅರ ಎಂಬ ಭಟ್ಟ ಎಂದೋ ಅರ್ಥ ಮಾಡಬಹುದು.
ಇವುಗಳಲ್ಲಿ ಯಾವುದು ಸರಿ? ಎರಡನೆಯದು ಹೆಚ್ಚು ಸಂಭನೀಯ. ಕನ್ನ ಎಂಬ ಅರಸು ಕನ್ನರ. ಗೋವಿಂದ ಎಂಬ ಅರಸು ಗೋವಿಂದರ ಆದ ಹಾಗೆ ಕಪ್ಪೆ ಅರಸು ಕಪ್ಪೆಅರನೆಂದಾಗಿ ಅದಕ್ಕೆ ಭಟ್ಟನ್ ಸೇರಿರಬಹುದು. ಆಗ ಕಪ್ಪೆ ಅರ ಎಂಬ ಭಟ್ಟ (ಒಡೆಯ/ಹೊಗಳುಭಟ್ಟ) ಎಂದು ಅರ್ಥವಾಗುತ್ತದೆ. ಇಲ್ಲವೆ, ಕಪ್ಪೆ ಎಂಬುದನ್ನು ವಿಶೇಷವನ್ನಾಗಿಟ್ಟು, ಅರಸನೆಂಬ ಭಟ್ಟ ಎಂಬರ್ಥದಲ್ಲಿ ಅರಸು+ಭಟ್ಟ=ಅರಭಟ್ಟ ಎಂದು ಮಾಡಬಹುದು(ಹೋಲಿಸಿ: ರಾಜ ಒಡೆಯ, ರಾಜೇಂದ್ರ). ಈ ಎರಡರಲ್ಲಿ ಪ್ರಾಯಃ ಮೊದಲನೆಯದೇ ಸಂಭವನೀಯ.
ಕಪ್ಪೆಅರ+ಭಟ್ಟನ್ ಎಂಬ ಅನ್ವಯವನ್ನು ಇಲ್ಲಿ ನಾವು ಒಪ್ಪಿಕೊಂಡಂತಾಯಿತು. ಆದರೆ ಕಪ್ಪೆಅರ ಎಂದರೇನು? ಇದಕ್ಕೆ ಉತ್ತರ ಕಷ್ಟ. ಕ್ರಿ.ಶ.೧೦೩೩ರ ಒಂದು ಶಾಸನದಲ್ಲಿ ಕಪ್ಪಣಭಟ್ಟ[3] ಎಂಬ ಒಬ್ಬನ ಹೆಸರುಂಟು. ಕಪ್ಪಣ+ಭಟ್ಟ ಎಂಬ ಪದವಿಭಾಗವೇನೋ ಖಚಿತ. ಈಗಲೂ ಈ ಹೆಸರಿನವರು ಇರುತ್ತಾರೆ. ಆದರೆ ಪದವನ್ನು ಕಪ್ಪೆ+ಅಣ್ಣ(ಕಪ್ಪೆಯಣ್ಣ>ಕಪ್ಪಣ್ಣ) +ಭಟ್ಟ ಎಂದು ಒಡೆಯಬೇಕೋ ಕಪ್ಪ(>ಕಂಪ)+ಅಣ್ಣ+ಭಟ್ಟ ಎಂದು ಒಡೆಯಬೇಕೋ ಸ್ಪಷ್ಟವಿಲ್ಲ. ಕಪ್ಪೆ ಎಂದೇ ಆಗಿದ್ದರೆ, ಅದು ಏನನ್ನು ಹೇಳುವುದೋ ತಿಳಿಯದು?[4]
ಇದೇ ಭಾಗದ ‘ಕಲಿಯುಗ ವಿಪರೀತನ್’ ಎಂಬುದರ ಅರ್ಥವನ್ನು ಫ್ಲೀಟ್ ‘an exceptional man in the kaliyuga’ ಎಂದು ಅನುವಾದಸಿದ್ದಾರೆ. ಇಲ್ಲಿ ‘ಕಲಿಯುಗದೊಳ್ ವಿಪರೀತನ್’ ಎಂಬ ಸಪ್ತಮ್ಯರ್ಥಕ್ಕಿಂತ ‘ಕಲಿಯುಗಕ್ಕೆ ವಿಪರೀತನ್’ ಎಂಬ ಚತುರ್ಥಿಯ ಅರ್ಥ ಸೂಕ್ತವೆಂದು ತೋರುತ್ತದೆ. ಕನ್ನಡದ ಅಧಿಕೃತ ನಿಘಂಟು ಕೂಡ ಹೀಗೆಯೇ ಅರ್ಥ ಮಾಡಿದೆ. ಈಚಿನ ಉಲ್ಲೇಖನಕಾರರು ಈ ಮಾತಿನ ಅರ್ಥವನ್ನು ಅಷ್ಟು ಸರಿಯಾಗಿ ಹೇಳಿದಂತೆ ತೋರದು. ಆದ್ದರಿಂದ ಈ ಬಗ್ಗೆ ಸ್ವಲ್ಪ ವಿಚಾರ ಅವಶ್ಯ.
‘ಕಲಿಯುಗ ವಿಪರೀತನ್’ ಎಂದರೆ ‘ಕಲಿಯುಗಕ್ಕೆ ವಿರುದ್ಧನಾದವನು’ ಎಂದು ವಾಚ್ಯಾರ್ಥ. ಹಾಗೆ ವಿರುದ್ಧನಾಗಿರುವುದು ಗುಣವೋ ದೋಷವೋ? ಗುಣವೇ; ದೋಷವಲ್ಲ. ಇದಕ್ಕೆ ಸಂಸ್ಕೃತ ಕನ್ನಡ ಶಾಸನಗಳಲ್ಲೂ ಗ್ರಂಥಗಳಲ್ಲೂ ಸಾಕ್ಷ್ಯಗಳುಂಟು. ಉದಾ: ೧. “ದೋಷಾಕರ ಕಲಿಯುಗಮಂ ನಿರ್ಮಳಂ ಮಾಡಿದಂ”[5] ೨. “ಕಲಿಕಾಲೋತ್ಥಕಳಂಕಮಂ ತೆರಳೆ ನೂಂಕು ತ್ತಿರ್ಪುದು”[6] ೩. “ಸದ್ಧರ್ಮಶತ್ರುಂ ಕಲಿಕಾಲರಾಜಂ “ಜಿತ್ವಾ ವ್ಯವಸ್ಥಾಪಿತ ಧರ್ಮ ವೃತ್ತ್ಯಾ”[7] ೪. “ವೇದದೊಳೋದಿದಾಯು ನಿನಗಕ್ಕೆ ಚಿರಂ ಕಲಿಕಾಲ ಸೂದನಾ”[8] ೫. “ಕಲಿಕಾಲರ್ದ ಮಬೃಹಹಜ್ಜಂಘಾಳನ್”[9]
ಕಲಿಯುಗ ದೂಷ್ಯವಾದ್ದು, ಅದನ್ನು ಶುದ್ಧ ಮಾಡಬೇಕು ಅಥವಾ ನಿಗ್ರಹಿಸಬೇಕು ಎಂಬುದೇ ಸಜ್ಜನರಕಾಂಕ್ಷೆ. ಆ ಕಾಂಕ್ಷೆ ಈಡೇರುವುದು ಹೇಗೆ? ಕಲಿಯುಗದ ದೋಷಯುಕ್ತ ನಡವಳಿಕೆಗೆ ವಿರುದ್ಧವಾಗಿ ನಡೆಯುವುದರಿಂದ. ಹಾಗೆ ನಡೆಯುವವನನ್ನು ಪ್ರಸ್ತುತ ಶಾಸನದಲ್ಲಿ “ಕಲಿಯುಗ ವಿಪರೀತನ್” ಎಂದಿದೆ. ಬೇರೆ ಶಾಸನಗಳಲ್ಲಿ ಅಂಥವನನ್ನು “ಕಲಿಕಾಲಪ್ರತಿಪಕ್ಷ ಚಾರುಚರಿತಂ ಎಂದೋ”[10] “ಕೃತಯುಗ ಚರಿತಂ” ಎಂದೋ[11] ಕರೆದಿರುವುದುಂಟು. ಆದ್ದರಿಂದ “ಕಲಿಯುಗ ವಿಪರೀತನ್” ಎಂಬುದು ಒಟ್ಟಿನಲ್ಲಿ ಸತ್ಪುರುಷ ಅಥವಾ ಧರ್ಮಿಷ್ಠ ಎಂಬ ಅರ್ಥವನ್ನು ಕೊಡುವ ಮಾತು. ಪ್ರಸ್ತುತ ಶಾಸನಕ್ಕೆ ಅನ್ವಯಿಸಿದರೆ, ಇದು ಕಪ್ಪೆಅರ ಭಟ್ಟನಿಗೆ ವಿಶೇಷಿಸಿ ಹೇಳಿರುವ ಆ ಅರ್ಥದ ಒಂದು ಬಿರುದು. “ಕೃತಯುಗಚರಿತಂ ತ್ರ್ಯಂಬಕ” ಎಂಬಂತೆ ‘ಕಲಿಯುಗವಿಪರೀತನ್ ಕಪ್ಪೆಅರ ಭಟ್ಟನ್’ ಎಂದು ಅನ್ವಯ.
೨. ಎರಡನೆಯ ಅರ್ಥಘಟಕ ಒಂದು ಸಂಸ್ಕೃತ ಪದ್ಯ:
ವರನ್ತೇಜಸ್ವಿನೋ ಮೃತ್ತ್ಯುರ್ನ ತು ಮಾನಾವಖಣ್ಣನಮ್
ಮೃತ್ತ್ಯುಸ್ತತಣಿಕೋ ದುಃಖಮ್ಮಾನಭಂಗನ್ದಿನೇ ದಿನೇ||
ಫ್ಲೀಟ್ ಅರ್ಥ ಸರಿ. ತೇಜಸ್ವಿಯಾದವನಿಗೆ ಸಾವು ಲೇಸು, ಆದರೆ ಮಾನಭಂಗವಲ್ಲ; ಸಾವಿನದು ಆ ಕ್ಷಣದ್ದು, ಮಾನಭಂಗದ ದುಃಖ ಪ್ರತಿದಿನದ್ದು.
ಈ ಪದ್ಯ ಸಲಕ್ಷಣವಾದೊಂದು ಅನುಷ್ಟುಪ್ ಶ್ಲೋಕ. ಇದನ್ನು ಪ್ರತ್ಯೇಕವಾಗಿಯೇ ಒಂದು ಬಂಡೆಯ ಮೇಲೆ ಕೆತ್ತಿರುವುದುಂಟು. ಬಾದಾಮಿಯಿಂದ ಮಹಾಕೂಟಕ್ಕೆ ಹೋಗುವ ದಾರಿಯಲ್ಲಿ, ಸಿಬಾರಡೋಣಿಯ ಹತ್ತಿರದ ಬಂಡೆಯೊಂದರ ಮೇಲೆ ಇದನ್ನು ಕಾಣಬಹುದು.[12] ಈ ಬಗ್ಗೆ ವಿವರಣೆ ನೀಡುತ್ತ, ಶಾಸನಸಂಪಾದಕರು ಪ್ರಸ್ತುತ ಶಾಸನವನ್ನೂ ಪ್ರಾಸಂಗಿಕವಾಗಿ ಉಲ್ಲೇಖಿಸಿದ್ದಾರೆ. “ಕಪ್ಪೆಅರ ಭಟ್ಟ ಅಸಹನೀಯವಾದ ಯಾವುದೋ ಒಂದು ಪೀಡನೆಗೆ ಒಳಗಾಗಿ, ಅಪಮಾನವನ್ನು ತಾಳಿಕೊಳ್ಳುವುದಕ್ಕಿಂತ ಸಾಯುವುದು ಮೇಲೆಂದು ಬಗೆದು, ಕೊನೆಗೆ ಆತ್ಮಹತ್ಯೆಯನ್ನು ಮಾಡಿಕೊಂಡಂತೆ ತೋರುತ್ತದೆ” ಎಂಬುದಾಗಿ ಬರೆದಿದ್ದಾರೆ. ಕಪ್ಪೆಅರ ಭಟ್ಟನು ಸತ್ತನೇ, ಹೇಗೆ ಸತ್ತ ಎನ್ನುವುದು ಶಾಸನದಿಂದ ಸ್ಪಷ್ಟವಿಲ್ಲ. ಸಂಪಾದಕರು ಪೂರ್ವೋಕ್ತ ಶ್ಲೋಕವನ್ನು ಅವಲಂಬಿಸಿ ಮಾಡಿರುವುದು ಕೇವಲ ಒಂದು ಊಹೆ. ಸತ್ತನು ಎಂಬಷ್ಟರಮಟ್ಟಿಗೆ ಪ್ರಾಯಃ ಅವರ ಊಹೆ ಸರಿಯಿರಬಹುದು.
೩. ಮುಂದಿನ ೬ ಸಾಲುಗಲ್ಲಿ ಪ್ರಾಚೀನವೂ ಪ್ರಸಿದ್ಧವೂ ಆದ, ದೇಶ್ಯ ಛಂದಸ್ಸಿನ ತ್ರಿಪದಿಯೆಂಬ ಜಾತಿಯ ೩ ಪದ್ಯಗಳು ಅಡಗಿವೆಯೆಂಬುದು ಅಲ್ಲಿಯ ಲಯ ಮತ್ತು ಪ್ರಾಸಗಳ ಪರಿಶೀಲನೆಯಿಂದ ತಿಳಿದುಬರುವ ಅಂಶ. ೫-೬ನೆಯ ಸಾಲುಗಳ ಛಂದೋರೂಪ ಹೀಗೆ:
ಸಾಧುಗೆ ಸಾಧು ಮಾಧೂರ್ಯ್ಯನ್ಗೆ ಮಾಧೂರ್ಯ್ಯಂ
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತ
ನ್ಮಾಧವನೀತನ್ಪೆರನಲ್ಲ||
ಫ್ಲೀಟ್ ಮತ್ತು ಈಚಿನ ವಿದ್ವಾಂಸರು ಎಲ್ಲರೂ ಈ ಪದ್ಯಕ್ಕೆ ಒಂದೇ ಬಗೆಯಾಗಿ ಅರ್ಥಮಾಡಿಲ್ಲ. ಇದು ವಿಚಾರಣೀಯ. ನನಗೆ ತೋರಿದ ಅರ್ಥವನ್ನಿಲ್ಲಿ ಮಂಡಿಸುತ್ತೇನೆ: ಸಾಧುಗೆ ಸಾಧು. ಮಾಧೂ(ಧು)ರ್ಯ್ಯನ್ಗೆ ಮಾಧೂ(ಧು)ರ್ಯ್ಯಂ, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಈತನ್ ಮಾಧವನ್, ಪೆಱನಲ್ಲ-ಇದು ಅನ್ವಯ. ೧. “ಸಾಧುವಾದವನ ವಿಷಯದಲ್ಲಿ ಈತ ಸಾಧುವಾಗಿ ನಡೆದುಕೊಳ್ಳುತ್ತಾನೆ” ‘ಸಾಧು’ವಿಗೆ ಒಳ್ಳೆಯ, ಯೋಗ್ಯ, ತಕ್ಕ, ಉತ್ತಮ, ನಿರುಪದ್ರವಿ ಮುಂತಾದ ಅರ್ಥಚ್ಛಾಯೆಗಳಿವೆ. ಯಾವುದೊಂದನ್ನು ಬೇಕಾದರೂ ಪ್ರಸ್ತುತಕ್ಕೆ ಗ್ರಹಿಸಬಹುದು. ಇಲ್ಲಿ ವಿದ್ವಾಂಸರಲ್ಲಿ ಏಕಾಭಿಪ್ರಾಯವಿದೆ. ೨. “ಮಧುರಗುಣ ವುಳ್ಳವನ ವಿಷಯದಲ್ಲಿ ಮಧುರಗುಣವುಳ್ಳವನು.” ಎರಡನೆಯ ಅಂಶ ಅಂಗೀಕೃತವಾದ ಆಶಯ ಇದು. ಆದರೆ ಇಲ್ಲಿ ವಿಚಾರಕ್ಕೆ ಕೊಂಚ ಅವಕಾಶವುಂಟು. ‘ಮಾಧುರ್ಯನ್’ ಶಬ್ದದ ಅರ್ಥವನ್ನು ‘ಮಧುರತೆಯನ್ನು ಗುಣವಾಗಿ ಉಳ್ಳವನು’ ಎಂದು ತೆಗೆದುಕೊಳ್ಳುವುದು ಎಷ್ಟಮಟ್ಟಿಗೆ ಸರಿ? ಮಧುರವೆಂಬ ಗುಣವಾಚಕದ ಭಾವನಾಮರೂಪ ‘ಮಾಧೂರ್ಯಮ್’ ಆಗುವುದು ಸಹಜ, ‘ವತ್ಸಲ>ವಾತ್ಸಲ್ಯಮ್, ಪವಿತ್ರ>ಪಾವಿತ್ರ್ಯಮ್ ಎಂದು ಮುಂತಾಗಿ ಆಗುವ ಹಾಗೆ. ಆದ್ದರಿಂದ ಮಧುರಗುಣವಿರುವವನು ಮಾಧುರ್ಯನ್ ಅಲ್ಲ, ಮಧುರನ್ ಆಗುತ್ತಾನೆ; ವತ್ಸಲಗುಣವುಳ್ಳವನು ವತ್ಸಲನ್, ಪವಿತ್ರಗುಣವುಳ್ಳವನು ಪವಿತ್ರನ್ ಆಗುವ ಹಾಗೆ. ಆದ ಕಾರಣ, ‘ಮಾಧುರ್ಯನ್’ ಶಬ್ದಕ್ಕೆ ಬೇರೆಯೇ ಅರ್ಥವಿರಬೇಕೆಂದು ಸಂಶಯ ಹುಟ್ಟುವುದು. ಈ ಶಬ್ದ ಮಹಾ+ಧುರ್ಯನ್> ಮಾಧುರ್ಯನ್ ಎಂದು ಆಗಿರುವಂತೆ ತೋರುತ್ತದೆ. ಮಹಾ ಮತ್ತು ಧುರ್ಯ ಎಂಬವು ಪರಿಚಿತ ಸಂಸ್ಕೃತ ಶಬ್ದಗಳು. ಇವು ಕನ್ನಡದ ಜಾಯ ಮಾನವನ್ನನು ಸರಿಸಿ ಒಂದು ಸಮಾಸಪದವೂ ಸಮಸಂಸ್ಕೃತಪದವೂ ಆಗಿ ‘ಮಾರ್ಧುಯನ್’ ಎಂಬ ರೂಪದಲ್ಲಿ ಈ ಶಾಸನದಲ್ಲಿ ಬಳಕೆಯಾಗಿದೆ. ಉದಾಹರಣೆಗೆ, ಮಹಾ+ದೇವಂ>ಮಾದೇವಂ, ಮಹಾ+ಕಾಳಿ>ಮಕಾಳಿ, ಮಹಾ+ದಾನಿ>ಮಾದಾನಿ, ಮಹಾ+ಶೌರ್ಯಂ>ಮಶೌರ್ಯಂ, ಮಹಾ+ಜನಂ>ಮಾಜನಂ, ಮಹಾ+ಪಾತಕಂ>ಮಾಪಾಕತಂ, ಮಹಾ+ಪುರುಷಂ>ಮಾಪುರುಷಂ ಇತ್ಯಾದಿ. ಈ ಉದಾಹರಣೆಗಳು ಕೇಶಿರಾಜನ (ಸು.೧೨೬೦) ‘ಶಬ್ದಮಣಿ ದರ್ಪಣ’ವೆಂಬ ಹಳಗನ್ನಡ ವ್ಯಾಕರಣದೊಳಗಿನವು. ಇಲ್ಲಿ ‘ಮಹತ್’ ಶಬ್ದ ‘ಮಾ’ ಎಂದು ಆದೇಶಗೊಂಡು ಪೂರ್ವಪದವಾಗಿರಲು, ಪರದಲ್ಲಿ ಸಂಸ್ಕೃತಪದ ಬಂದರೂ ದೋಷವಿಲ್ಲ ಎಂಬುದಾಗಿ ಹೇಳಿ ಪೂರ್ವೋಕ್ತ ಉದಾಹರಣೆಗಳನ್ನು ಕೊಟ್ಟಿದೆ.[13] ಆದ್ದರಿಂದ ಈ ನಿಯಮಕ್ಕೆ ಅನುಗುಣವಾಗಿ ಮಹಾ+ಧುರ್ಯನ್> ಮಾಧುರ್ಯನ್ ಕೂಡ ಸಾಧುರೂಪವೇ; ಮಾದವೇನ್, ಮಾಪಾತಕನ್, ಮಾಪುರುಷನ್ ಇದ್ದ ಹಾಗೆ.
‘ಧುರ್ಯ’ ಶಬ್ದಕ್ಕೆ ಮುಖ್ಯವಾದ ಕಾರ್ಯಗಳನ್ನು ವಹಿಸಿಕೊಳ್ಳಲು ಸಮರ್ಥನಾದವನು, ಮುಂಚೂಣಿಯಲ್ಲಿರತಕ್ಕವನು. ಅಗ್ರಗಣ್ಯ, ಜವಾಬ್ದಾರಿಯ ಹೊರೆ ಹೊರತಕ್ಕವನು, ನಾಯಕ, ಪ್ರಮುಖ, ಹಿರಿಯ ಮುಂತಾದ ಅರ್ಥಗಳಿವೆ.[14] ಇವುಗಳಲ್ಲಿ ಯಾವುದಾದರೊಂದು ಅರ್ಥ ಇಲ್ಲಿ, ಕಪ್ಪೆ ಅರ ಭಟ್ಟನಿಗೆ, ಮಹತ್ ಶಬ್ದದಿಂದ ವಿಶೇಷಿತವಾಗಿ ಹೇಳಲ್ಪಟ್ಟಿರಬಹುದು. ಇದು ಸರಿಯಾದರೆ, ಶಾಸನದ ವಾಕ್ಯಾಂಶದ ಅರ್ಥ ಹೀಗೆ: (ಕಪ್ಪೆ ಅರ ಭಟ್ಟನು) ಕಾರ್ಯ ನಿರ್ವಹಣೆಯ ಸಾಮರ್ಥ್ಯವನ್ನುಳ್ಳ ಅಧಿಕನ ವಿಷಯದಲ್ಲಿ ತಾನೂ ಕಾರ್ಯ ನಿರ್ವಹಣೆಯ ಸಾಮರ್ಥ್ಯವನ್ನುಳ್ಳ ಅಧಿಕನು; ಅಥವಾ ಪ್ರಮುಖರ ನಡುವೆ ತಾನೂ ಪ್ರಮುಖ.[15]
೩. ಮುಂದಿನ ಅಂಶವನ್ನು ಮೂರು ಬಗೆಯಾಗಿ ಅರ್ಥಯಿಸುವ ಸಾಧ್ಯತೆಯಿದೆ: ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್; ಈತನ್ ಮಾಧವನ್, ಪೆಱನಲ್ಲ ಎಂದರೆ: ಬಾಧಿಸುವ ಕಲಿಪುರುಷನಿಗೆ ಕಲಿಯುಗದ ನಡವಳಿಕೆಗೆ ವಿರುದ್ಧವಾಗಿ ನಡೆಯುವುದರ ಮೂಲಕ ವಿರೋಧಿಯಾದವನು; ಈತ (ಸಾಕ್ಷಾತ್) ವಿಷ್ಣು, ಬೇರೆಯಲ್ಲ. ಶಬ್ದಾನ್ವಯ ಮೇಲಿನ ಹಾಗೆಯೇ. ಆದರೆ ಅರ್ಥ ಹೀಗೆ: ಬಾಧಿಸುವ ಶೂರನಿಗೆ ಈತ ಕಲಿಯುವ ವಿಪರೀತನು (ಹಾಗೆಂದು ಬಿರುದಾಂಕಿತನಾದ ಅಧಿಕಶೂರ); ಈತ (ಸಾಕ್ಷಾತ್) ವಿಷ್ಣು, ಬೇರೆಯಲ್ಲ (ಇ) ಕಲಿಯುವವಿಪರೀತನ್(ಹಾಗೆಂದು ಬಿರುದಾಂಕಿತನಾಂದ ಕಪ್ಪೆ ಅರಭಟ್ಟನು), ಈತನು, ಬಾಧಿಸುವ ಕಲಿಗೆ (ಕಲಿಪುರುಷನಿಗೆ ಅಥವಾ ಶೂರನಿಗೆ) ವಿಷ್ಣುವಾದವನು; ಬೇರೆಯಲ್ಲ.
ಸಾಧಾರಣವಾಗಿ ೧ ಮತ್ತು ೨ನೆಯ ಅರ್ಥಗಳನ್ನು ಪುರಸ್ಕರಿಸಿರುವುದು ಕಾಣುತ್ತದೆ. ಆದರೆ ಇವುಗಳಲ್ಲಿ ಕೆಲವು ದೌರ್ಬಲ್ಯಗಳಿವೆ. ೩ನೆಯ ಅರ್ಥ ಸಮರ್ಥನೀಯ. ‘ಕಲಿಗೆ ಕಲಿಯುಗವಿಪರೀತನ್’ ಎನ್ನುವಲ್ಲಿ (ಅ) ಪುನರುಕ್ತಿ ದೋಷವಿದೆ. ಅಲ್ಲದೆ ಶಾಸನ ಸಂದರ್ಭದ ದೃಷ್ಟಿಯಿಂದ ಅಂಥ ನಿರೂಪಣೆ ಅನಾವಶ್ಯಕ. ಇನ್ನು ‘ಕಲಿಯುಗ ವಿಪರೀತನ್’ ಎಂಬ ಶಬ್ದದ ಧ್ವನ್ಯರ್ಥವನ್ನು ಗಮನಿಸಿದರೆ, ‘ಶೂರನಿಗೆ ಈತ ಕಲಿಯುಗವಿಪರೀತನು’ ಎನ್ನುವುದರಲ್ಲಿ (ಆ) ಅರ್ಥದ ಸಾರ್ಥಕತೆಯಿಲ್ಲ ಎನ್ನುವುದು ಸ್ಪಷ್ಟ. ಈಗ ೩ನೆಯ ಅರ್ಥ: ಕಪ್ಪೆ ಅರ ಭಟ್ಟನು ಶೌರ್ಯಗುಣವನ್ನು ಕೀರ್ತಿಸುವುದು ಶಾಸನದ ಮುಖ್ಯೋದ್ದೇಶ. ಆದ್ದರಿಂದ ಕಲಿ=ಶೂರ ಎಂದಿಟ್ಟುಕೊಂಡು, ತೊಂದರೆಕೊಡುವ ಶೂರನಿಗೆ, ಕಲಿಯುಗವಿಪರೀತನು (ಕಪ್ಪೆ ಅರ ಭಟ್ಟನು), ಈತನು, ಸಾಕ್ಷಾತ್ ವಿಷ್ಣು (+ಮಾಧವನ್: ಮಧುಧ್ವಸಂಕನಾದ ಎಂದರೆ ಅಸುರಾರಿಯಾದ ವಿಷ್ಣುವಿನ. ಹಾಗೆ ತನ್ನ ಶೌರ್ಯವನ್ನು ಪ್ರತಿಯಾಗಿ ತೋರಿಸಿ ಅವನನ್ನು ನಿಗ್ರಹಿಸುವವನು); ಬೇರೆಯಲ್ಲ(=ಬೇರೆ ಯಾರೂ ಅಲ್ಲ).
ಹೀಗೆ ಭಾವಿಸುವುದು ಅಸಹಜವೇನಲ್ಲ, ‘ಕಲಿಗಳಂಕುಸಂ’ (=ವೀರರಿಗೆ ಅಂಕುಸದಂತಿರು ವವನ ವೀರರ ವೀರ), ‘ಕಲಿಗಳ ಮೊಗದ ಕೈ’ (=ಶೂರರ ಮುಖದ ಮೇಲೆ ಕೈಯಿಂದ ಹೊಡೆಯುವವನು), ‘ಕಲಿಗಂಡ ತೊಂಡಂ’ (=ವೀರಾಧಿವೀರರಿಗೆ ತೊಂಡನಂತಿರುವವನು; ಮಹಾಶೂರ) ಮುಂತಾದ ಬಿರುದುಗಳಂತಹ ಮಾತುಗಳಲ್ಲಿ[16] ಶೂರನಿಗೆ ಪ್ರತಿಶೂರನು ಮಲೆತು ನಿಲ್ಲುವ ಸಂದರ್ಭಗಳ ಸೂಚನೆಯಿರುವುದು ಸ್ಪಷ್ಟ. ಆದ್ದರಿಂದ ಪ್ರಸ್ತುತ ಶಾಸನದಲ್ಲಿ ‘ಬಾಧಿಪ್ಪಕಲಿಗೆ’, ಕಲಿಪುರುಷನಲ್ಲ[17]; ಹುರುಡಿಸಿ ತೊಂದರೆ ಕೊಡುವ ಶೂರ ಎಂದು ತಿಳಿಯಬಹುದು.
೪. ಶಾಸನದ ೭-೮ನೆಯ ಸಾಲುಗಳ ಪದ್ಯರೂಪ ಹೀಗೆ:
ಒಳ್ಳಿತ್ತಕೆಯ್ವಿರಾರ್ಪ್ಪೊಲದುಮದಱನ್ತೆ
ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತ
ಮಿಲ್ಲಿ ಸನ್ಧಿಕ್ಕುಮದು ಬನ್ದು ||
ಪಾಠ ಮತ್ತು ಅರ್ಥಗಳ ದೃಷ್ಟಿಯಿಂದ ಕ್ಲಿಷ್ಟವಾದ ಭಾಗ ಇದು. ಇಲ್ಲಿ ಅರ್ಥ ಕ್ಲೇಷವಿದೆಯೆಂದು ಫ್ಲೀಟ್ ಒಪ್ಪಿದ್ದಾರೆ. ಅರ್ಥ ಮಾಡಿರುವಷ್ಟು ಭಾಗ ಸಮರ್ಪಕವಾಗಿಲ್ಲ; ಈಚೆಗೆ ಪಂಡಿತರು ಈ ಪದ್ಯದ ಗೊಡವೆಗೆ ಅಷ್ಟಾಗಿ ಹೋಗಿಲ್ಲ. ಶಬ್ದಾನ್ವಯ ಹೀಗೆ: ಒಳ್ಳಿತ್ತಕೆಯ್ವಿರಾರ್ ಅದಱಂತೆ ಪೊಲ್ಲದುಂ; ಕಲಿಗೆ ವಿಪರೀ(ತಂ/ತಂಗೆ) ಬಲ್ಲಿತ್ತು; ಪುರಾಕೃತಮ್ ಅದು ಬನ್ದು ಇಲ್ಲಿ ಸನ್ಧಿಕ್ಕುಮ್. ಶಾಸನದ ಎಲ್ಲ ಮುಖ್ಯ ವಿಚ್ಛೇದಕ ಭಾಗಗಳಲ್ಲಿಯೂ ‘ಕಲಿಯುಗ ವಿಪರೀತನ್’ ಎಂಬ ಪದ ಬಿಡದೆ ಆವೃತ್ತಿಗೊಳ್ಳುವುದನ್ನು ಲಕ್ಷಿಸಿದರೆ ಇಲ್ಲಿಯೂ ಅದರ ಅಸ್ತಿತ್ವ ಸಂಭಾವ್ಯ; ಆದರೆ ಅದರ ರೂಪ ಸಮಸ್ಯಾತ್ಮಕ. ‘ಕಲಿಗೆ ವಿಪರೀತತಾ’ ಸುಷ್ಠ ಪದವಲ್ಲ. ‘ಕಲಿಗೆ ವಿಪರೀತನ್ಗೆ’ ಎಂದಿಟ್ಟುಕೊಂಡರೆ ಮಾತ್ರ ವಾಕ್ಯ ರಚನೆ ಸಾರ್ಥಕವಾಗುತ್ತದೆ. ಮುಂದಿನ ಹಾಗೂ ಕೊನೆಯ ಎರಡು ಸಾಲುಗಳಲ್ಲಿ ‘ಕಲಿಗೆ ವಿಪರೀತಂಗೆ’ ಎಂಬ ರೂಪವೇ ಇದೆ. ಅದರ ಬಲದ ಮೇಲೆ ಇಲ್ಲಿಯೂ ಸದೃಶ್ಯರೂಪವನ್ನು ಒಪ್ಪಬಹುದೆಂದು ತೋರುತ್ತದೆ. ಬಂಡೆಯ ಮೇಲೆ ಶಾಸನವನ್ನು ಬರೆದ ಲಿಪಿಕಾರನ ಕೈತಪ್ಪು ಈಯೆಡೆ ಆಗಿರಬಹುದು.
ಇದು ಸರಿಯೆ. ಆದರೆ ಈ ತರ್ಕ ಛಂದಸ್ಸು ಒಡ್ಡುವ ಅಡ್ಡಿಯ ಎದುರಿನಲ್ಲಿ ನಿಲ್ಲುವ ಹಾಗಿಲ್ಲ. ಪದಪಾಠ ಇಷ್ಟು ಮಾರ್ಪಾಟಿಗೆ ಅವಕಾಶ ಕೊಡುವುದಿಲ್ಲ. ‘ಕಲಿಗೆ ವಿಪರೀತನ್’ ಎಂಬುದಾಗಿ ಪ್ರಥಮೆಯೆನ್ನಿಟ್ಟುಕೊಂಡರೆ, ಉದ್ಗಾರದಲ್ಲಿ ‘ವಿಪರೀತಾ’ ಎಂದಾಗಿರಬಹುದೆಂದು ಊಹಿಸಲು ಅವಕಾಶವಾಗುತ್ತದೆ. ಹೀಗಾದರೆ ಪದ್ಯದ ಅರ್ಥ ಬಹುಮಟ್ಟಿಗೆ ಈ ರೀತಿಯಾಗಿರಬಹುದು: (ಕಪ್ಪೆ ಅರಭಟ್ಟನ ಹಾಗೆ) ಒಳ್ಳೆಯದನ್ನು ಮಾಡುವವರು ಯಾರು?; ಅದರ ಹಾಗೆಯೇ ಕೆಡುಕು ಕೂಡ (ಮಾಡುವುದು) ಬಲವಾಗಿದೆ(=ಎಂದರೆ ಈತನಿಗೆ ಚೆನ್ನಾಗಿ ತಿಳಿದಿದೆ). (ಈತ) ಕಲಿಯುಗ ವಿಪರೀತ(ಕಲಿಯುಗ ವಿಪರೀತನಲ್ಲವೇ). (ಅವರವರು) ಹಿಂದೆ ಮಾಡಿದ್ದು (=ಹಿಂದೆ ಮಾಡಿದ ಒಳ್ಳೆಯದು, ಕೆಟ್ಟದ್ದು ಏನುಂಟು) ಅದು ಇಲ್ಲಿ(=ಈತನ ಕೈಯಲ್ಲಿ, ಈತನ ಮೂಲಕವಾಗಿ) ಅವರಿಗೆ ಸಂಧಿಸುತ್ತದೆ.(=ಆ ಒಳ್ಳೆಯದರ ಫಲ. ಕೆಟ್ಟದರ ಫಲ ಪ್ರಾಪ್ತವಾಗುತ್ತದೆ)
೫. ೯-೧೦ನೆಯ ಸಾಲುಗಳ ಪದ್ಯರೂಪ ಹೀಗೆ:
ಕಟ್ಟಿದ ಸಿಂಘಮನ್ಕೆಟ್ಟೊಡೇನೆಮಗೆನ್ದು
ಬಿಟ್ಟವೊಲ್ಕಲಿಗೆ ವಿಪರೀತಂಗಹಿತರ್ಕ್ಕ
ಳ್ಕೆಟ್ಟರ್ಮೇಣ್ಸತ್ತರವಿಚಾರಮ್||
ಫ್ಲೀಟ್ ಸಿಂಘ(<ಸಿಂಗ) ಶಬ್ದವನ್ನು ಶೃಂಗದ ತದ್ಭವವಾಗಿ ತೆಗೆದುಕೊಂಡು ಮಾಡಿರುವ ಅರ್ಥ ಒಪ್ಪತಕ್ಕದ್ದಲ್ಲ. ಈ ತದ್ಭವ ಅಪ್ರಸಿದ್ಧ ಅಪ್ರಚುರ. ಪ್ರಸ್ತುತ, ಸಿಂಹ>ಸಿಂಗ>ಸಿಂಘ ಎಂಬುದೇ ಸೂಕ್ತ. ಇದು ಈಚಿನ ವಿದ್ವಾಂಸರಿಗೂ ಸಮ್ಮತ. ಈಗ ಶಬ್ದಾನ್ವಯ ಹೀಗೆ: ಎಮಗೆ ಕೆಟ್ಟೊ(ದೇ)ನ್ ಎಂದು ಕಟ್ಟಿದ ಸಿಂಘಮನ್ ಬಿಟ್ಟವೊಲ್, ಕಲಿಗೆ ವಿಪರೀತಂಗೆ ಅಹಿತರ್ಕ್ಕಳ್ ಅವಿಚಾರಮ್ ಕೆಟ್ಟರ್ ಮೇಣ್ ಸತ್ತರ್. ಅರ್ಥ: ನಮಗೆ (ಇದರಿಂದ) ಕೆಟ್ಟದ್ದು ಏನು? (=ಕೆಡುಕೇನು?) ಎಂದು ಕಟ್ಟಿಹಾಕಿದ ಸಿಂಹವನ್ನು (ಕಟ್ಟುಕಳಚಿ) ಬಿಟ್ಟಹಾಗೆ, ಕಲಿಯುಗವಿಪರೀತನಿಗೆ (ಪ್ರತಿಭಟನೆ ತೋರಿ) (ಆತನ) ಶತ್ರುಗಳು (ತಮ್ಮ) ಅವಿವೇಕದಿಂದ ಹಾಳಾದರು ಇಲ್ಲವೆ ಸತ್ತರು.
ಈಗ ಈ ಪರಿಶೀಲನೆಯ ಬೆಳಕಿನಲ್ಲಿ ಶಾಸನದ ಅರ್ಥವನ್ನಿಲ್ಲಿ ಒಗ್ಗೂಡಿಸಬಹುದು: ಕಲಿಯುಗವಿಪರೀತನು ಎಂದು ಖ್ಯಾತನಾದ ಕಪ್ಪೆ ಅರ ಭಟ್ಟನು ಒಳ್ಳೆಯ ಜನರಿಗೆ ಬೇಕಾದವನು, ಕೆಟ್ಟ ಜನರಿಗೆ ಬೇಡವಾದವನು ೧. ತೇಜಸ್ವಿಯಾದವನಿಗೆ(ತನಗೆ). ಸಾಯುವುದು ಲೇಸು, ಆದರೆ ಮಾನಭಂಗವಲ್ಲ; ಸಾವಿನ ದುಃಖ ಆ ಕ್ಷಣದ್ದು, ಮಾನಭಂಗದ ದುಃಖ ಪ್ರತಿದಿನದ್ದು (ಎಂದು ಆತ ತಿಳಿದಿದ್ದ) ೨. ಸಾಧುವಾದನ ವಿಷಯದಲ್ಲಿ ತಾನೂ ಸಾಧುವಾದನು; ಕಾರ್ಯ ನಿರ್ವಹಣೆಯ ಸಾಮರ್ಥ್ಯವನ್ನುಳ್ಳ ಅಧಿಕನ ವಿಷಯದಲ್ಲಿ ತಾನೂ ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನುಳ್ಳ ಅಧಿಕನು ಅಥವಾ ಪ್ರಮುಖರ ನಡುವೆ ತಾನೂ ಪ್ರಮುಖ. ತೊಂದರೆ ಕೊಡುವ ಶೂರನಿಗೆ, ಕಲಿಯುಗ ವಿಪರೀತನೆನಿಸಿದ ಕಪ್ಪೆ ಅರಭಟ್ಟನು ಸಾಕ್ಷಾತ್ ವಿಷ್ಣು, ಬೇರೆಯಲ್ಲ ೩. ಈತನ ಹಾಗೆ ಒಳ್ಳೆಯದನ್ನು ಮಾಡುವವರು ಯಾರು? ಹಾಗೆಯೇ ಕೆಟ್ಟದ್ದು ಮಾಡುವುದರಲ್ಲಿ ಕೂಡ ಈತ ಗಟ್ಟಿಗ. ಈತ ಕಲಿಯುಗವಿಪರೀತ! ಅವರವರು ಹಿಂದೆ ಮಾಡಿದ ಒಳ್ಳೆಯದು ಕೆಟ್ಟದ್ದು ಏನುಂಟು. ಅದಕ್ಕೆ ಫಲ ಈತನ ಕೈಯಲ್ಲಿ ಅವರಿಗೆ ಸಿಕ್ಕುತ್ತದೆ. ೪. ನಮಗೆ ಇದರಿಂದ ಕೆಡಕೇನು?- ಎಂದು ಕಟ್ಟಿಹಾಕಿದ ಸಿಂಹವನ್ನು ಕಟ್ಟುಕಳಚಿ ಬಿಟ್ಟ ಹಾಗೆ. ಕಲಿಯುಗವಿಪರೀತನಿಗೆ ಎದುರುಬಿದ್ದು ಆತನ ಶತ್ರುಗಳು ತಮ್ಮ ಅವಿವೇಕದಿಂದ ಹಾಳಾದರು, ಸತ್ತರು ೫.
ಈ ನಿರೂಪಣೆಯಿಂದ ಹೊರಪಡುವ ಕಪ್ಪೆಅರ ಭಟ್ಟನ ವ್ಯಕ್ತಿತ್ವವನ್ನು ಹೀಗೆ ಊಹಿಸಬಹುದು: ಕಪ್ಪೆಅರ ಭಟ್ಟ ಪ್ರಾಯಶಃ ಹುಟ್ಟಿನಿಂದ ಬ್ರಾಹ್ಮಣನಾಗಿದ್ದ ಒಬ್ಬ ಸಮರ್ಥ ಯೋಧ. ತನ್ನ ಒಳ್ಳೆಯ ನಡೆವಳಿಕೆಯಿಂದ ಆತ ‘ಕಲಿಯುಗ ವಿಪರೀತನ್’ ಎಂದು ಹೆಸರಾಗಿದ್ದ. ಹೀಗಿದ್ದುದರಿಂದ ಸಹಜವಾಗಿ ಒಳ್ಲೆಯ ಜನ ಅವನನ್ನು ತಮ್ಮವನೆಂದು ಆದರಿಸುತ್ತಿದ್ದರು. ದುಷ್ಟರು ಆತನ ಹತ್ತಿರ ಸೇರುತ್ತಿರಲಿಲ್ಲ. ಮಾನವಂತನಾಗಿ ಬಾಳಬೇಕು, ಮಾನಭಂಗವನ್ನು ಸಹಿಸುವುದಕ್ಕಿಂತ ಸಾಯುವುದೇ ಲೇಸು ಎಂಬುದು ಆತನ ನಂಬುಗೆಯಾಗಿತ್ತು. ಒಳ್ಳೆಯವರ ವಿಷಯದಲ್ಲಿ ಆತ ಎಂದೂ ಒಳ್ಳೆಯವನೇ. ರಾಜನೈತಿಕವಿರಬಹುದು. ಸೈನ್ಯಕೀಯವಿರಬಹುದು ಯಾವುದೇ ದೊಡ್ಡ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಬಲ್ಲ ಧುರೀಣ ಆತ. ತನಗೆ ಎದುರು ಬಿದ್ದ ಶೂರರನ್ನು, ರಾಕ್ಷಸರನ್ನು ಅಡಗಿಸುವ ಮಹಾವಿಷ್ಣುವಿನಂತೆ ಆತ ನಿಗ್ರಹಿಸಬಲ್ಲವನಾಗಿದ್ದ. ಮನಸ್ಸು ಮಾಡಿದರೆ ಒಳ್ಳೆಯದನ್ನೂ ಮಾಡಬಲ್ಲ, ಕೆಟ್ಟದನ್ನೂ ಮಾಡಬಲ್ಲ; ಎಂದರೆ ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಕೆಟ್ಟವನು, ಶಿಷ್ಟರ ರಕ್ಷಣೆ, ದುಷ್ಟರ ವಿನಾಶ ಎಂಬುದು ಆತನ ಸಂಕಲ್ಪ. ಅದರಲ್ಲಿ ಆತ ಸಮರ್ಥ. ಆತನನ್ನು ಎದುರು ಹಾಕಿಕೊಂಡವರು ಹಾಳಾಗುವುದು ಖಂಡಿತ.
ಸಜ್ಜನಿಕೆ, ಗಾಂಭೀರ್ಯ, ಶೌರ್ಯ ಇವು ಮುಪ್ಪುರಿಗೊಂಡಿದ್ದ ಕನ್ನಡಿಗ ವೀರನೊಬ್ಬನ ವ್ಯಕ್ತಿ ಚಿತ್ರವನ್ನು ಪ್ರಸ್ತುತಶಾಸನ ನಮ್ಮ ಕಣ್ಣೆದುರು ಕಟ್ಟಿ ನಿಲ್ಲಿಸಲು ಸಮರ್ಥವಾಗಿದೆ; ಕರ್ತೃಮಾತ್ರ ಅಜ್ಞಾತದಲ್ಲಿ ಸೇರಿದ್ದಾನೆ.
[1] ಕೆಲವು ಆಕರಣಗಳು:೧. ರಾ.ನರಸಿಂಹಾಚಾರ್ (ಸಂ.), ‘ಶಾಸನಪದ್ಯ ಮಂಜರಿ’, ೧೯೨೩ ಪು.೨. ೨. ಮೈಸೂರು ವಿಶ್ವವಿದ್ಯಾನಿಲಯ (ಪ್ರ.), ‘ಕನ್ನಡ ಕೈಪಿಡಿ’, ೧೯೩೬ (೧೯೫೫), ಪು. ೧೨೩-೨೪. ೩. ಕೆ.ವೆಂಕಟರಾಮಪ್ಪ, ‘ಕನ್ನಡ ಸಾಹಿತ್ಯ’, ೧೯೩೯ (೧೯೭೨), ಪು.೨ ೪. A.N.Narasimhai, A Grammar of the Oldest Kanarese Inscriptions, ೧೯೪೧, p.೨೬೭, ೫. R.S.Panchamukhi (ed), Karnataka Inscriptions, Vol.I, ೧೯೪೧ p.೧೧. ೬. ದೇಸಾಯಿ ಪಾಂಡುರಂಗರಾಯ, ಶಾಸನ ಮತ್ತು ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ೩೧-೨, ಜೂನ್ ೧೯೪೬, ಪು.೩೨-೩೯ ೭. ರಂ.ಶ್ರೀ.ಮುಗಳಿ, ‘ಕನ್ನಡ ಸಾಹಿತ್ಯ ಚರಿತ್ರೆ’, ೧೯೫೩ (೧೯೭೧)ಪು. ೧೦-೧೧. ೮. Pb Government of Mysore, Karnataka through the Ages, ೧೯೬೮, p.cover page. ೯. ಎಂ.ಚಿದಾನಂದಮೂರ್ತಿ, ‘ಸಂಶೋಧನ ತರಂಗ’೧೯೬೬, ಪು.೨೦೬, ೨೧೦ ಅ.ಟಿ, ೧೦. ಎಂ.ಚಿದಾನಂದಮೂರ್ತಿ, ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’, ೧೯೬೬, ಪು. ೨೪೯. ೧೧. ತ.ಸು.ಶಾಮರಾಯ, ‘ಕನ್ನಡ ಸಾಹಿತ್ಯ ಚರಿತ್ರೆ:ಒಂದು ಸಮೀಕ್ಷೆ’, ಪು. ೩-೪. [2] ಇದು ಗದ್ಯವೇ ಪದ್ಯವೇ ಎಂಬ ಚರ್ಚೆಯಿದೆ. ಎ.ಎನ್.ನರಸಿಂಹಯ್ಯನವರು (GOKI, p.೩೬೩) ಮತ್ತು ಆರ್.ಎಸ್.ಪಂಚಮುಖಿಯವರು (‘ಕರ್ನಾಟಕ ಇತಿಹಾಸ’, ಸಂ.೧ ಪುಟ.೧೨೨)ಪದ್ಯವೆಂದಿದ್ದಾರೆ. ಪ್ರಾಚೀನ ಕನ್ನಡ ಪದ್ಯದ ಅವಶ್ಯಲಕ್ಷಣವಾದ ಪ್ರಾಸ ಇಲ್ಲಿ ಕಾಣದಿರುವುದರಿಂದ ಇದೊಂದು ಗದ್ಯಭಾಗವಾಗಿರುವುದೇ ಸಂಭನೀಯ. [3] E.C., VIII. ಸೊರಬ, ೧೮೪-೩೦. [4] E.C., VIII. ಸೊರಬ, ೧೮೪-೩೦. [5] I.A., X, ೧೨೭, c. ೧೦೮೦. [6] E.I., XIII, ೪೧, ೧೧೧೨. [7] E.C., II (ed, ೧೯೭), ೧೫೩೮ (೧೨೯), ೧೧೨೦. [8] ನಾಗವರ್ಮ, ‘ಕಾವ್ಯಾವಲೋಕನ’, ಪು.೪೦೧. [9] K.G.Kundanagara (ed), Inscriptions in Northern Karnataka and the Kolhapur State, Kolhapur, ೧೯೩೯. [10] E.I., XIII, ೪೧, ೧೧೧೨. [11] I.A., X, ೧೨೭, c.೧೦೮೦. [12] R.S.Panchamukhi (ed), Karnataka Inscriptions. Vol. I, ೧೯೪೧, p.೧೧. [13] ಡಿ.ಎಲ್.ನರಸಿಂಹಾಚಾರ್ (ಸಂ.), ‘ಶಬ್ದಮಣಿದರ್ಪಣಂ’, ಸೂ. ೧೮೭, ೩೦೬. [14] V.S.Apte, The Practical Sanskrit-English Dictionary, port II, p.೮೬೪. [15] ಮಹಾ+ಧುರ್ಯನ್>ಮಾಧುರ್ಯನ್ ಎಂಬ ಪದ ವಿಭಾಗದ ಸಾಧ್ಯತೆಯನ್ನು ಮೊದಲು ಮನಗಂಡವರು ವಿದ್ವಾನ್ ಸೇಡಿಯಾಪು ಕೃಷ್ಣಭಟ್ಟರೆಂದು ಕೇಳಿದ್ದೇನೆ. ಈಚೆಗೆ ಪ್ರಕಟವಾದ ‘ಕರ್ನಾಟಕ ಇತಿಹಾಸ ದರ್ಶನ’ಎಂಬ ಗ್ರಂಥದಲ್ಲಿಯೂ ಈ ವಿಭಾಗವನ್ನು ತೋರಿಸಿದೆ. (ಪು. ೧೧೩೦). [16] ಪ್ರಯೋಗಗಳಿಗೆ ನೋಡಿ:‘ಕನ್ನಡ ಸಾಹಿತ್ಯ ಪರಿ,ತ್ತಿನ ಕನ್ನಡ ನಿಘಂಟು’ಪು. ೧೯೫೪-೯೫. [17] ಅದೇ:ಕಲಿ=ಲಿಕಪುರುಷ ಎಂದು ಅರ್ಥ ಹೇಳಿದೆ.