ನಾಟ್ಯರಾಣಿ ಶಾಂತಲಾ ದೇವಿಯು ೧೨ ನೇ ಶತಮಾನದ ಪ್ರಸಿದ್ದ ಹೊಯ್ಸಳ ರಾಜವಂಶದ ರಾಜ ವಿಷ್ಣುವರ್ಧನನ ಹೆಂಡತಿ. ರಾಣಿ ಶಾಂತಲಾ ದೇವಿಯು ಲಲಿತಕಲೆಗಳಲ್ಲಿ ಪಾರಂಗತಳಾಗಿದ್ದಳು. ಅವಳು ನೃತ್ಯ, ಗಾಯನ ಮತ್ತು ವಾದ್ಯ ಸಂಗೀತದಲ್ಲಿ ಉತ್ತಮವಾದಳು. ಆಕೆ ಭರತನಾಟ್ಯ ನೃತ್ಯ ಪ್ರಕಾರದಲ್ಲಿ ಚೆನ್ನಾಗಿ ತರಬೇತಿ ಪಡೆದಿದ್ದಳು. ಅವಳು ಜೈನ ಧರ್ಮದ ಅನುಯಾಯಿಯಾಗಿದ್ದಳು. ವಿಷ್ಣುವರ್ಧನನ ಮೂಲತಃ ಜೈನನೇ ಆಗಿದ್ದವನು. ಆಗಿನ ಅವರ ಹೆಸರು ‘ಬಿಟ್ಟಿದೇವ’. ಶ್ರೀ ವೈಷ್ಣವ ಶಿಕ್ಷಕರಾದ ರಾಮಾನುಜಚಾರ್ಯರ ಪ್ರಭಾವದಿಂದ ಅವರು ಶ್ರೀ ವೈಷ್ಣವ ಧರ್ಮಕ್ಕೆ ಮತಾಂತರಗೊAಡರು. ಆದರೆ ವಿಷ್ಣುವರ್ಧನ ಜೈನ ಧರ್ಮವನ್ನು ಪೋಷಿಸುವ ಕಾರ್ಯವನ್ನು ಮುಂದುವರೆಸಿದರು. ರಾಣಿ ಶಾಂತಲಾ ದೇವಿಯು ಚೆನ್ನಕೇಶವ ದೇವಾಲಯದ ರೇಖೆಗಳ ಆಧಾರದ ಮೇಲೆ ಜಿನ್ನಿಗರಾಯ ದೇವಾಲಯ ಎಂಬ ದೇವಾಲಯವನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರಳಾಗಿದ್ದಾಳೆ. ಅವರು ಶ್ರವಣಬೆಳಗೊಳದ ಚಂದ್ರಗಿರಿಯಲ್ಲಿ ಸವತಿ ಗಂಧವರ ದೇವಸ್ಥಾನವನ್ನು ಸ್ನಾಪಿಸಿದರು. ತನ್ನ ಗುರುಗಳಾದ ಪ್ರಭಾಚಂದ್ರ ಸಿದ್ಧಾಂತ ದೇವರು ಆಚರಣೆಗಳನ್ನು ನಡೆಸಲು ಮೊಟ್ಟೆನವಿಲೆ ಎಂಬ ಗ್ರಾಮವನ್ನು ದಾನ ಮಾಡುತ್ತಾಳೆ. ಶಾಂತಲಾ ದೇವಿ ಉತ್ತರ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದರು. ಶಾಂತಲಾ ದೇವಿ ಪಡೆದ ಬಿರುದುಗಳು: ರಾಣಿ ಶಾಂತಲಾ ದೇವಿಯು ೧೧೧೭ ರಲ್ಲಿ ಪಟ್ಟಮಹಾದೇವಿಯಾಗಿ ಪಟ್ಟಾಭಿಷಿಕ್ತಳಾದಳು. ಅವರು ‘ಪರಿಪೂರ್ಣ ನಂಬಿಕೆಯ ರತ್ನ’, ‘ಜೈನ ನಂಬಿಕೆಯ ಕೋಟೆ’, ‘ಯುದ್ಧದಲ್ಲಿ ವಿಜಯದ ದೇವತೆ’ ಮತ್ತು ‘ಸಂಪತ್ತು ಮತ್ತು ಶಾಂತಿಯಲ್ಲಿ ಖ್ಯಾತಿಯ ದೇವತೆ’. ಶಾಂತಲೆಯ ಪ್ರಸಿದ್ದ ಬಿರುದು ‘ಸವತಿ ಗಂಧವಾರಿಣಿ’. ಇದೇ ಹೆಸರಿನಲ್ಲಿ ಶ್ರವಣ ಬೆಳಗೊಳದ ಚಿಕ್ಕಬೆಟ್ಟದಲ್ಲಿ ಬಸದಿ ಕಟ್ಟಿಸಿದ್ದಾಳೆ. ಮದನಿಕೆಯರಿಗೆ ಶಾಂತಲೆಯೇ ರೂಪದರ್ಶಿ ಆಗಿದ್ದಳು ಎಂಬ ಐತಿಹ್ಯ ಇದೆ. ಆದರೆ ಅದಕ್ಕೆ ಐತಿಹಾಸಿಕ ಆಧಾರಗಳು ಇಲ್ಲ. ಶಾಂತಲಾ ದೇವಿಯ ಸ್ಮರಣಾರ್ಥ ದೇವಾಲಯಗಳನ್ನು ನಿರ್ಮಿಸಲಾಗಿದೆ. ಶಾಂತಲಾ ದೇವಿಯ ಸೌಂದರ್ಯದಿAದ ಸ್ಫೂರ್ತಿ ಪಡೆದ ರಾಜ ವಿಷ್ಣುವರ್ಧನನು ಕರ್ನಾಟಕದ ಬೇಲೂರಿನಲ್ಲಿರುವ ಚೆನ್ನಕೇಶವನ ದೇವಾಲಯದಲ್ಲಿ ಹಲವಾರು ಆಕಾಶ ಸ್ತಿçà ವ್ಯಕ್ತಿಗಳನ್ನು ನಿರ್ಮಿಸಿದನು. ಅಂದಾಜಿನ ಪ್ರಕಾರ, ಸುಮಾರು ನಲವತ್ತೆರಡು ‘ಮದನಿಕರು’ ಇದ್ದಾರೆ. ಶಾಂತಲಾ ದೇವಿಯು ಸೌಂದರ್ಯದ ಪ್ರತಿರೂಪವಾಗಿದ್ದಳು ಮತ್ತು ಶಿಲ್ಪಿಗಳು ಸಹ ಅವಳ ಅನುಗ್ರಹದಿಂದ ಪ್ರೇರಿತರಾಗಿದ್ದರು. ಆದ್ದರಿಂದ, ಶಿಲ್ಪಗಳು ಅವುಗಳನ್ನು ಸೂಕ್ಷವಾಗಿ ಕೆತ್ತಲಾಗಿದೆ ಮತ್ತು ಅವೆಲ್ಲವೂ ಭರತನಾಟ್ಯದ ಭಂಗಿಗಳಲ್ಲಿವೆ. ಚೆನ್ನಕೇಶವನ ಸಭಾಂಗಣದಲ್ಲಿ ನಯಗೊಳಿಸಿದ ಕಲ್ಲಿನ ವೇದಿಕೆ ಇದೆ. ಶಾಂತಲಾ ದೇವಿಯು ಈ ವೇದಿಕೆಯಲ್ಲಿ ಚೆನ್ನಕೇಶವನನ್ನು ಸ್ತುತಿಸಿ ನರ್ತಿಸಿದಳು ಎಂದು ಹೇಳಲಾಗುತ್ತದೆ. ರಾಜ ವಿಷ್ಣುವರ್ಧನನು ಶಾಂತಲಾ ದೇವಿಯ ಸ್ಮರಣಾರ್ಥ ಶಿವಗಂಗಾ ಬಟ್ಟದಲ್ಲಿ ‘ಶ್ರೀ ಶಾಂತಲೇಶ್ವರ’ ದೇವಾಲಯವನ್ನು ನಿರ್ಮಿಸಿದ್ದನು. ರಾಣಿ ಶಾಂತಲಾ ದೇವಿಯು ಶಿವಗಂಗೆಯಲ್ಲಿ ‘ಸಲ್ಲೇಖನ’ ಎಂಬ ಜೈನ ಪದ್ದತಿಯನ್ನು ಆಚರಿಸಿದ ನಂತರ ಮರಣಹೊಂದಿದಳು ಎಂದು ಹೇಳಲಾಗುತ್ತದೆ.
ಜನ್ನ ಕನ್ನಡದ ಪ್ರಸಿದ್ಧ ಜೈನಕವಿ. ಈತ ೧೨ನೆಯ ಶತಮಾನದ ಉತ್ತರಾರ್ಧ ಮತ್ತು ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಕೃತಿರಚನೆ ಮಾಡಿದವ.
ಹಳೆಯಬೀಡು ಪ್ರಾಂತದವನಾದ ಜನ್ನನ ತಂದೆ ಸುಮನೋಬಾಣನೆಂಬ ಬಿರುದು ಪಡೆದಿದ್ದ ಶಂಕರ. ತಾಯಿ ಗಂಗಾದೇವಿ. ಜನ್ನನ ಹೆಂಡತಿ ಲಕುಮಾದೇವಿ. ಜನ್ನನ ಧರ್ಮಗುರು ರಾಮಚಂದ್ರ ದೇವ ಮುನಿ, ಉಪಾಧ್ಯಾಯ ಇಮ್ಮಡಿ ನಾಗವರ್ಮ. ಜನ್ನನು, ಸಿಂದಗಿ ತಾಲೂಕಿನ ಕೊಂಡಗೂಳಿಯಲ್ಲಿ ಹುಟ್ಟಿ, ಹಳೆಯಬೀಡಿನಲ್ಲಿರುವ ವಿಜಯ ಪಾರ್ಶ್ವನಾಥ ದೇವಾಲಯದ ಮುಖಭಾಗದಲ್ಲಿ ಸೊಗಸಾದ ಮುಖಮಂಟಪವನ್ನು ಕಟ್ಟಿಸಿ ಅಲ್ಲಿ ತನ್ನ ಕಾವ್ಯ ಅನಂತನಾಥಪುರಾಣದ ೧,೦೦೦ ತಾಳೆಗರಿಗಳ ಪ್ರತಿಗಳನ್ನು ಬರೆಸಿ, ಉದಾರ ಸಂಭಾವನೆಯೊAದಿಗೆ ವಿದ್ಯಾಂಸರಿಗೆ ಕೊಟ್ಟು, ಗೌರವಿಸಿದನೆಂದು ತಿಳಿದುಬರುತ್ತದೆ. ಬಾಲಕರಗಣದ ಮೇಘನಂದಿ ಸಿದ್ಧಾಂತಿದೇವರು, ಜನ್ನನ ಆಧ್ಯಾತ್ಮಿಕ ಗುರು ಮಕಾಶಿಗಳಾಗಿದ್ದರು. ಜೀವಿಸಿ ಧರ್ಮಾಚರಣೆಯನ್ನು ಮರೆಯದೆ ಧರ್ಮದ, ನೀತಿಯ ನೆಲಗಟ್ಟನ್ನು ಮೀರದೇ ಇಹಲೋಕದ ಸುಖವನ್ನು ಪರಲೋಕ ಗತಿಯ ಆಶಯವನ್ನೂ ಸಾಧಿಸಿಕೊಳ್ಳಲು ಶ್ರಮಿಸಿದ ಶ್ರೇಷ್ಠವರ್ಗದ ಸಾಧಕ. ಜನ್ನ ಹೊಯ್ಸಳ ಬಲ್ಲಾಳನಿಂದ ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದು, ಅನಂತರ ನರಸಿಂಹನಲ್ಲಿ ದಂಡಾಧಿಪತಿಯೂ ಮಂತ್ರಿಯೂ ಆಗಿದ್ದ. ಜನ್ನ “ಅನುಭವಮುಕುರ” ವೆಂಬ ಕಾಮಶಾಸ್ತç ಸಂಬAಧವಾದ ಕೃತಿಯನ್ನೂ ಯಶೋಧರ ಚರಿತೆ, ಅನಂತನಾಥಪುರಾಣ ಎಂಬ ಎರಡು ಕಾವ್ಯಗಳನ್ನೂ ಬರೆದಿದ್ದಾನೆ. ಕೆಲವು ಶಾಸನಗಳೂ ಈತನಿಂದ ರಚಿತವಾಗಿವೆ. ಯಶೋಧರಚರಿತೆ, ಅನಂತನಾಥ ಪುರಾಣ ಎರಡೂ ಧಾರ್ಮಿಕ ಕೃತಿಗಳು. ಯಶೋಧರಚರಿತೆ ಬಹುಸುಂದರವಾದ ಪುಟ್ಟಕಾವ್ಯ. ಮನುಷ್ಯ ಮನಸ್ಸಿನ ಸಂಕೀರ್ಣತೆ ಮತ್ತು ‘ಹಿಂಸೆ’ ಯ ವ್ಯಾಖ್ಯಾನ, ನೇರ ಹಿಂಸೆ ಮತ್ತು ಭಾವಹಿಂಸೆ (ಸಂಕಲ್ಪ ಹಿಂಸೆ)- ಇವುಗಳ ಕುರಿತಾದ ಚರ್ಚೆ, ಇದರ ಜೊತೆಗೆ ಭವಾವಳಿಗಳ ಮೂಲಕ ‘ಹಿಂಸೆ’ಯ ಪರಿಣಾಮದ ಬಗ್ಗೆ ತಿಳಿ ಹೇಳುವ ಈ ಕಾವ್ಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹಾನ್ ಕೃತಿ ಎಂಬುದಾಗಿ ದಾಖಲಾಗುತ್ತದೆ. ಅನಂತನಾಥಪುರಾಣ ೧೪ನೆಯ ತೀರ್ಥಂಕರನಾದ ಅನಂತನಾಥನ ಕತೆಯನ್ನು ಬಣ್ಣಿಸುವ ತೀರ್ಥಕರ ಭವಾವಳಿಯನ್ನೂ ಪಂಚಕಲ್ಯಾಣಗಳನ್ನೂ ವಿಸ್ತಾರವಾಗಿ ವರ್ಣಿಸಿದ್ದಾನೆ, ಜನ್ನ ಕೊನೆಯ ಭಾಗದಲ್ಲಿ ವಸುಷೇಣ ಚಂಡಶಾಸನರ ಕಥೆಯನ್ನು ರಸಮಯವಾಗಿ ಹೇಳಿದ್ದಾನೆ. ಜನ್ನ ತುಂಬುಜೀವನವನ್ನು ಯಶೋಧರ ಚರಿತೆಯಲ್ಲಿಯೂ’ಅನಂತನಾಥ ಪುರಾಣ’ದಲ್ಲಿಯೂ ಜನ್ನನು ಪ್ರಣಯವನ್ನೂ ತದಾಭಾಸವನ್ನೂ ನೈಪುಣ್ಯದಿಂದ ನಿರೂಪಿಸಿದ್ದಾನೆ. ೧೪ ಆಶ್ವಾಸಗಳ ಪ್ರೌಢ ಚಂಪೂ ಕಾವ್ಯ. ಇದಕ್ಕೆ ಮುಖ್ಯವಾದ ಆಕರ ಗುಣಭದ್ರಾಚಾರ್ಯರು ಸಂಸ್ಕೃತದಲ್ಲಿ ರಚಿಸಿರುವ ಉತ್ತರಪುರಾಣ. ಅಲ್ಲಿ ಕಿರಿದಾಗಿ ಬರುವ ಅನಂತನಾಥನ ಕತೆಯನ್ನು ಜನ್ನ ಎಳೆದು ಹಿಗ್ಗಸಿ ೧೪ ಆಶ್ವಾಸಗಳಷ್ಟು ದೊಡ್ಡದು ಮಾಡಿದ್ದಾನೆ. ಇದರಲ್ಲಿನ ಚಂಡಶಾಸನನ ಉಪಾಖ್ಯಾನ ಒಂದು ಹೃದಯಂಗಮವಾದ ಭಾಗ. ಉತ್ತರ ಪುರಾಣದಲ್ಲಿ ಬಿಂದುರೂಪವಾಗಿ ಬರುವ ಕತೆಯನ್ನು ಇಲ್ಲಿ ಜನ್ನ ಸೊಗಸಾಗಿ ವಿಸ್ತರಿಸಿದ್ದಾನೆ. ಯಶೋಧರಚರಿತೆಯಲ್ಲಿ ಹೆಣ್ಣಿನ ನಿಷಿದ್ಧ ಕಾಮ ಚಿತ್ರಿತವಾಗಿದ್ದರೆ ಚಂಡಶಾಸನ ವೃತ್ತಾಂತದಲ್ಲಿ ಗಂಡಿನ ದುರಂತ ವ್ಯಾಮೋಹ ನಿರೂಪಿತವಾಗಿದೆ. ಸುಮಾರು ೮೦ ಪದಗಳಷ್ಟು ಚಿಕ್ಕದಾದರೂ ಈ ಉಪಾಖ್ಯಾನ ಸಹೃದಯರ ಚಿತ್ರದ ಮೇಲೆ ಅಳಿಸಲಾಗದ ಮುದ್ರೆಯೊತ್ತುತ್ತದೆ. ಯಶೋಧರಚರಿತೆ ಹಾಗೂ ಅನಂತನಾಥಪುರಾಣದ ಚಂಡಶಾಸನ ಕಥೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತವೆ. ಸಂಪ್ರದಾಯಬದ್ಧವೂ ಚಿರಪರಿಚಿತವೂ ಆದ ವಸ್ತುವನ್ನು ಬಿಟ್ಟು, ಕವಿ ವಿಷಮಪ್ರಣಯದ ಎರಡು ದಿಕ್ಕುಗಳನ್ನು ಚಿತ್ರಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ. ವಿಮರ್ಶಕರೊಬ್ಬರು ಹೇಳುವಂತೆ ಅದಮ್ಯವಾದ ಕಾಮದ, ಧರ್ಮವಿರುದ್ದ ಪ್ರಣಯದ ಮುಖ ಪುರಷ ಮುಖಗಳನ್ನು ಉಜ್ವಲವಾಗಿ ಕ್ರಾಂತಿಕಾರಕ ರೀತಿಯಲ್ಲಿ ಚಿತ್ರಿಸಿದ ಜನ್ನ ಕನ್ನಡ ಸಾಹಿತ್ಯಕ್ಕೆ ಸ್ವಂತ ಕಾಣಿಕೆ ಸಲ್ಲಿಸಿದ್ದಾನೆ. ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ, ಜಾಗತಿಕ ಸಾಹಿತ್ಯಕ್ಕೂ ಬೆಲೆಯುಳ್ಳ ಕಾಣಿಕೆ ಸಲ್ಲಿಸಿದ್ದಾನೆ. ಮಹಾಕಾವ್ಯದ ಔನ್ನತ್ಯ, ಭವ್ಯತೆಗಳು ಆಂಶಿಕವಾಗಿಯಾದರೂ ಅವನ ಎರಡು ಕಿರುಗಬ್ಬಗಳಲ್ಲಿ, ತಲೆದೋರಿವೆ. ಜನ್ನನು ಚನ್ನರಾಯಪಟ್ಟಣದ ತಾಮ್ರಶಾಸನವನ್ನು ಕ್ರಿ.ಶ. ೧೧೯೧ರಲ್ಲಿಯೂ ತರೀಕೆರೆಯ ಶಾಸನವನ್ನು ಕ್ರಿ.ಶ. ೧೧೯೭ರಲ್ಲಿಯೂ ಬರೆದನು. ಕ್ರಿ.ಶ. ೧೨೦೯ರಲ್ಲಿ ‘ಯಶೋಧರ ಚರಿತೆ’ಯನ್ನು, ಕ್ರಿ.ಶ. ೧೨೩೦ರಲ್ಲಿ ಅನಂತನಾಥ ಪುರಾಣ'ವನ್ನೂ ರಚಿಸಿದನು. ಈ ಕವಿಯ ಸಾಹಿತ್ಯ ಸೇವೆ ಕ್ರಿ.ಶ. ೧೧೯೧ ರಿಂದ ಕ್ರಿ.ಶ. ೧೨೩೦ರವರಗೆ ನಲವತ್ತು ವರ್ಷಗಳ ಕಾಲ ನಡೆಯಿತು. ಜನ್ನ ‘ಇತ್ತಕೈಯಲ್ಲದೇ ಒಡ್ಡಿದ ಕೈಯಲ್ಲದ ಪೆಂಪು' ಎಂದು ಹೇಳಿಕೊಂಡಿರುವುದರಿAದ ಇವನು ಶ್ರೀಮಂತನೂ ಧಾರಾಳಿಯೂ ಆಗಿದ್ದನೆಂದು ತಿಳಿಯಬಹುದು. ಇವನು ದ್ವಾರಸಮುದ್ರದ ಪಾರ್ಶ್ವಜಿನನ ಮಂದಿರದ ದ್ವಾರವನ್ನು ಮಾಡಿಸಿಕೊಟ್ಟನು. ಅನಂತನಾಥ ಸ್ವಾಮಿಗೆ ಒಂದು ಬಸದಿಯನ್ನೇ ಕಟ್ಟಿಸಿದನು. ಇವನು ಹಿಂದಿನ ಕವಿಗಳಲ್ಲಿ ಪಂಪ, ಪೊನ್ನ, ರನ್ನ ನಾಗಚಂದ್ರ ಮೊದಲಾದವರನ್ನು ಹೊಗಳಿದ್ದಾನೆ. ಮಧುರಕವಿಯು ಇವನನ್ನು ನೇಮಿಚಂದ್ರನ ಜತೆಗೆ ಸೇರಿಸಿ ನೇಮಿ ಜನ್ನಮರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್' ಎಂದು ಕೊಂಡಾಡಿದ್ದಾನೆ. ಪ್ರಶಸ್ತಿ, ಪುರಸ್ಕಾರ, ಬಿರುದು: ಇವನುನಾಳ್ಪçಭು’ವೂ ಆಗಿದ್ದನಂತೆ! ಜಿನೇಂದ್ರ ನಿಲಯ ನಿರ್ಮಾಣಧನಂ' ಎಂದು ಹೇಳಿಕೊಂಡಿರುವ ಜನ್ನನು ಶ್ರೀಮಂತನಾಗಿದ್ದನೆAದು ತಿಳಿಯಬೇಕು. ಇವನಿಗೆ ‘ಕವಿಚಕ್ರವರ್ತಿ,’ ‘ಕವಿ ಭಾಳನೇತ್ರಂ',ಉದ್ದಂಡಕವಿ’ ಅಸಹಾಯ ಸುಕವಿ',ಸಾಹಿತ್ಯ ರತ್ನಾಕರಂ’ ಎಂಬ ಬಿರುದುಗಳಿವೆ.
ಚಾವುಂಡರಾಯ ಶ್ರವಣಬೆಳಗೊಳದ ಪ್ರಸಿದ್ದ ಗೊಮ್ಮಟ ವಿಗ್ರಹವನ್ನು ಪ್ರತಿಷ್ಠಾಪಿಸಿ ಕೀರ್ತಿ ಪಡೆದವ; ಚಾವುಂಡರಾಯ ಪುರಾಣ”ವೆಂದು ಹೆಸರಾಗಿರುವ ತ್ರಿಷಷ್ಟಿ ಲಕ್ಷಣ ಮಹಾಪುರಾಣವೆಂಬ ಮಹಾಪುರಾಣವನ್ನು ಗದ್ಯದಲ್ಲಿ ರಚಿಸಿದವ.
ಚಾವುಂಡರಾಯ: ಪೋಸ್ಟಕಾರ್ಡ್ ಕಲ್ಪನೆ – ಮಹಾವೀರ್ ಕುಂದೂರ್, ವರ್ಣಚಿತ್ರ – ಶ್ರೀ ಸುರೇಶ್ ಅರ್ಕಸಾಲಿ, ಹುಬ್ಬಳ್ಳಿ; ಕಲೆ – ಸ್ವಾತಿ ಗ್ರಾಫಿಕ್ಸ್, ಹುಬ್ಬಳ್ಳಿ.
ಈತ ಪಶ್ಚಿಮ ಗಂಗವಂಶದ ರಾಜರಾದ ಮಾರಸಿಂಹ II (೯೬೧-೭೪) ಮತ್ತು ರಾಚಮಲ್ಲ ೪ನೇ (೯೭೪-೭೭) ಇವರಲ್ಲಿ ಯೋಧಾಗ್ರಣಿಯೂ, ಮಂತ್ರಿಯೂ ಆಗಿದ್ದವ. ಈತನನ್ನು ಚಾಮುಂಡರಾಯ (ನಮಿ ತೀರ್ಥಂಕರನ ಯಕ್ಷಿಯಾದ ಚಾಮುಂಡಿ ಎಂಬುದರಿAದ ಬಂದಿರಬೇಕು) ಎಂದೂ ಕರೆಯಲಾಗಿದೆ.
ಗೊಮ್ಮಟ ಈತನ ಇನ್ನೊಂದು ಹೆಸರು. ‘ಗೊಮ್ಮಟ’ ಎಂಬುದು ಚಾವುಂಡರಾಯನ ಹೆತ್ತವರು ಮುದ್ದಿನಿಂದ ಕರೆಯುತ್ತಿದ್ದ ಹೆಸರು. ಗೊಮ್ಮಟ ಎಂದರೆ ‘ಸುಂದರ’ ಎಂದು ಅರ್ಥ. ಇದರಿಂದಾಗಿಯೇ ಗೊಮ್ಮಟ ಕೆತ್ತಿಸಿದ ಬಾಹುಬಲಿ ಬಿಂಬಕ್ಕೆ ಗೊಮ್ಮಟೇಶ್ವರ (ಗೊಮ್ಮಟನ ದೇವರು) ಎಂಬುದಾಗಿ ಕರೆಯಲ್ಪಟ್ಟು ಮೂಲ ಹೆಸರೇ ಮರೆತುಹೋಗುವಷ್ಟು ಜನಪ್ರಿಯ ಅಗಿದೆ ಅಷ್ಟೇ.
ಈತ ಜೈನ, ಬ್ರಹ್ಮ ಕ್ಷತಕುಲೋತ್ಪನ್ನನೆಂದು ತಾನೇ ಹೇಳಿಕೊಂಡಿದ್ದಾನೆ. ತಂದೆತಾಯಿಗಳ ವಿಚಾರ ತಿಳಿಯದು. ಈತನಿಗೆ ಜಿನದೇವಣ ಎಂಬ ಮಗನಿದ್ದನೆಂಬ ಅಂಶಕ್ಕೆ ಶಾಸನಾಧಾರವಿದೆ. ಅಜಿತಸೇನಾಚಾರ್ಯ ಮತ್ತು ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ಈತನ ಗುರುಗಳು. ಈತ ಇಮ್ಮಡಿ ಮಾರಸಿಂಹನ ಸಹಪಾಠಿಯಾಗಿ ಮುಂದೆ ಆತನ ನೆಚ್ಚಿನ ಸೇನಾನಿಯಾಗಿ ಅವನ ಪರವಾಗಿ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ ವಿಷಯ ಚಾವುಂಡರಾಯಪುರಾಣದಲ್ಲಿ ಬರುವ ಉಲ್ಲೇಖಗಳಿಂದಲೂ ಶ್ರವಣಬೆಳ್ಗೊಳದ ಒಂದು ಶಾಸನದಿಂದಲೂ ಅನಂತರ ಪಟ್ಟಕ್ಕೆ ಬಂದ ನಾಲ್ವಡಿ ರಾಚಮಲ್ಲನಲ್ಲಿ ಮಂತ್ರಿಯಾಗಿದ್ದನೆAದು ‘ಸ್ಥಿರ ಜಿನಶಾಸನೋದ್ಧರಣರಾದಿಯೊಳಾರನೆ ರಾಚಮಲ್ಲ ಭೂವರ ವರಮಂತ್ರಿ ರಾಯನೆ…’ ಎಂಬ ಶಾಸನವಾಕ್ಯದಿಂದಲೂ ತಿಳಿದುಬರುತ್ತದೆ. ಈತನಿಗೆ ಗುಣರತ್ನಭೂಷಣಂ, ಕವಿಜನಶೇಖರಂ ಎಂಬ ಬಿರುದುಗಳಲ್ಲದೆ ಸಮರಧುರಂಧರ, ವೀರಮಾರ್ತಾಂಡ, ರಣರಂಗಸಿಂಗ, ವೈರಿಕುಲಕಾಲ ದಂಡ, ಭುಜವಿಕ್ರಮ, ಚಲದಂಕರAಗ, ಸಮರ ಪರಶುರಾಮ, ಪ್ರತಿಪಕ್ಷರಾಕ್ಷಸ, ಭಟಮಾರಿ, ಸುಭಟಚೂಡಾಮಣಿ-ಎಂಬ ಶೌರ್ಯಮೂಲವಾದ ಬಿರುದುಗಳಿದ್ದಂತೆ ತಿಳಿದುಬರುತ್ತದೆ. ಇವು ಈತನ ಕಲಿತನಕ್ಕೆ ಸಾಕ್ಷಿಯಾಗಿವೆ. ತ್ರಿಷಷ್ಠಿಲಕ್ಷಣ ಮಹಾಪುರಾಣ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಪ್ರಾಚೀನ ಗದ್ಯ ಗ್ರಂಥಗಳಲ್ಲಿ ಒಂದು ಎಂಬುದರ ಮೇಲೂ ಇದರ ಹಿರಿಮೆ ನಿಂತಿದೆ. ವಡ್ಡಾರಾಧನೆ ದೊರೆತು ಪ್ರಕಟವಾಗುವ ಮೊದಲು ಕನ್ನಡ ಸಾಹಿತ್ಯದ ಪ್ರಥಮ ಗದ್ಯಕೃತಿ ಎಂದು ಇದು ಮನ್ನಣೆ ಪಡೆದಿತ್ತು. ಜೈನಧರ್ಮಕ್ಕೆ ಸಂಬಂಧಿಸಿದ ಈ ಮಹಾಪುರಾಣ ರಚನೆಯಲ್ಲಿ ಜಿನಸೇನಾಚಾರ್ಯ, ಗುಣಭದ್ರಾಚಾರ್ಯರ ಮಹಾಪುರಾಣವನ್ನು ಅವಲಂಬಿಸಿ ಅನುಸರಿಸಲಾಗಿದೆ.
ಶಲಾಕಪುರುಷರಾದ ತೀರ್ಥಂಕರರು ೨೪, ಚಕ್ರವರ್ತಿಗಳು ೧೨, ಬಲದೇವರು ೯, ವಾಸುದೇವರು ೯, ಪ್ರತಿವಾಸುದೇವರು ೯-ಹೀಗೆ ೬೩ ಜನರ ಚರಿತ್ರೆಯೇ ಈ ಮಹಾಪುರಾಣದ ವಸ್ತು. ಇದರ ಮೂಲವನ್ನು ಬಳಸಿಕೊಳ್ಳುವಾಗ ಅತ್ಯಾವಶ್ಯಕವಾದ ತೀರ್ಥಂಕರಾದಿ ಮಹಾಪುರುಷ ಸಂಬಂಧವಾದ ಕಥಾಸಾರವನ್ನು ಉಳಿಸಿಕೊಂಡು ಅನುಪಯುಕ್ತವಾದ ಕಥಾವಿವರಣೆಗಳನ್ನೂ ವರ್ಣನೆಗಳನ್ನೂ ವ್ಯಕ್ತಿ-ಗುಣ-ವಸ್ತು ವಿಶೇಷಣಾದಿಗಳನ್ನೂ ಅಲಂಕಾರ ವೈಚಿತ್ರö್ಯಗಳನ್ನೂ ನೀತಿಪರವಾಕ್ಯಗಳನ್ನೂ ಧಾರ್ಮಿಕ ಪ್ರಕ್ರಿಯಾವಿವರಗಳನ್ನೂ ಪಾರಿಭಾಷಿಕ ಪದಸಮುಚ್ಚಯಗಳನ್ನೂ ಬಹುಮಟ್ಟಿಗೆ ಬಿಟ್ಟಿದ್ದಾನೆ. ಈತನ ಸಂಗ್ರಾಹಕತೆ ಎಷ್ಟೆಂದರೆ ಆದಿಪುರಾಣದ ಚಕ್ರವರ್ತಿಚರಿತದಲ್ಲಿ ಪ್ರಸಿದ್ಧರಾಗಿರುವ ಭರತ ಬಾಹುಬಲಿಗಳ ವ್ಯಾಯೋಗ ಪ್ರಸಂಗವನ್ನು ಜಿನಸೇನರು ಪೂರ್ಣಪುರಾಣದಲ್ಲಿ ಎರಡೂವರೆ ಪರ್ವಗಳಷ್ಟು ವಿಸ್ತಾರದಲ್ಲೂ ಪಂಪಕವಿ ೧೩೩ ಪದ್ಯಗಳಲ್ಲೂ ಹೇಳಿದ್ದರೆ ಚಾವುಂಡರಾಯ ಕೇವಲ ೨೭ ಸಾಲುಗಳಲ್ಲಿ ಸಂಕ್ಷಿಪ್ತವಾಗಿ ಅಡಕಗೊಳಿಸಿದ್ದಾನೆ. ಇಂಥ ನಿದರ್ಶನಗಳಿಂದ ಚಾವುಂಡರಾಯ ಕುಶಲಸಂಗ್ರಾಹಕನೆAದು ಒಪ್ಪಿಕೊಳ್ಳದಿದ್ದರೂ ನಿಷ್ಟುರ ಸಂಗ್ರಾಹಕನೆನ್ನದೆ ವಿಧಿಯಿಲ್ಲ. ಈ ಸಂಗ್ರಾಹಕತೆಯಿAದಾಗಿ ತೀರ್ಥಂಕರ ಚರಿತ್ರೆಗಳಲ್ಲಿ ಮನ ಸೆಳೆಯುವ ಕಥಾಂಶ, ವಿವರಗಳು ಇಲ್ಲ. ತೀರ್ಥಂಕರ ಚರಿತ್ರೆಯ ಮುಖ್ಯಾಂಶಗಳನ್ನು ಮೂಲಕ್ಕೆ ಚ್ಯುತಿಬಾರದಂತೆ ಸಂಕ್ಷೇಪಿಸಿ ಜೈನಧರ್ಮದ ಬಗ್ಗೆ ಜೈನರಲ್ಲಿ ಶ್ರದ್ಧಾಸಕ್ತಿ ಬೆಳೆಯುವಂತೆ ಮಾಡಿರುವುದು ಇಲ್ಲಿನ ಒಂದು ಸಾಧನೆ.
ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಚಾವುಂಡರಾಯನ ವರ್ಣಚಿತ್ರದ ಪೋಸ್ಟಕಾರ್ಡ್.
ಭಾರತದಲ್ಲಿ ಮಹಾಪುರಾಣ ತುಂಬ ಪುರಾತನವಾದುದಾದರೂ ಕನ್ನಡಕ್ಕೆ ಮೊದಲ ಬಾರಿಗೆ ಅದನ್ನು ತಂದವ ಚಾವುಂಡರಾಯನೇ. ಕನ್ನಡದಲ್ಲಿ ತ್ರಿಷಷ್ಠಿ ಶಲಾಕಾಪುರುಷರ ಚರಿತ್ರೆಯನ್ನು ಕುರಿತು ಮಹಾಪುರಾಣ ಇದೇ ಎನ್ನುವುದರಿಂದಲೂ ಕನ್ನಡದಲ್ಲಿ ಜೈನಪರಂಪರೆಯ ರಾಮಾಯಣ, ಭಾರತ, ಭಾಗವತ ಕಥೆಗಳಿಗೆ ಪ್ರಥಮ ಆಕರಗ್ರಂಥವಾಗಿರುವುದರಿAದಲೂ ಈ ಗ್ರಂಥಕ್ಕೆ ಪ್ರಾಶಸ್ತö್ಯ ಬಂದಿದೆ. ಸಾಮಾನ್ಯವಾಗಿ ಬೇರೆ ಗ್ರಂಥಗಳಲ್ಲಿ ದೊರಕದ, ಸಂಸ್ಕೃತ ಮಹಾಪುರಾಣಗಳ ಕವಿ ಪರಂಪರೆಯನ್ನು ಚಾವುಂಡರಾಯ ಸ್ಪಷ್ಟವಾಗಿ ಹೇಳಿದ್ದಾನೆ, ಈ ದೃಷ್ಟಿಯಿಂದಲೂ ಜೈನಸಾಹಿತ್ಯದಲ್ಲಿ ಚಾವುಂಡರಾಯಪುರಾಣ ಅಧಿಕೃತ ದಾಖಲೆಯಾಗಿ ನಿಲ್ಲುತ್ತದೆ. ತ್ರಿಷಷ್ಟಿ ಲಕ್ಷಣ ಮಹಾಪುರಾಣವನ್ನು ೯೭೮ರಲ್ಲಿ ರಚಿಸಿದುದಾಗಿ ಕವಿಯೆ ಹೇಳಿಕೊಂಡಿದ್ದಾನೆ. ಗದ್ಯದಲ್ಲಿಯೇ ರಚಿತವಾದ ಈ ಗ್ರಂಥದ ಆದಿ, ಅಂತ್ಯ ಹಾಗೂ ಕಥೆಗಳ ಮಧ್ಯದಲ್ಲಿ ಅಲ್ಲಲ್ಲಿ ಪದ್ಯಗಳೂ ಉಂಟು. ಜಿನಸೇನಾಚಾರ್ಯ, ಗುಣ ಭದ್ರಾಚಾರ್ಯರ ಮಹಾಪುರಾಣವನ್ನೇ ಅನುಸರಿಸಿ ಈತ ತನ್ನ ಗ್ರಂಥವನ್ನು ರಚಿಸಿದ್ದರೂ ಈತ ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿ ಹಿಂದೆ ರಚಿತವಾದ ಇತರ ಮಹಾಪುರಾಣಗಳಿಂದಲೂ ಪ್ರಭಾವಿತನಾಗಿರುವುದಕ್ಕೆ ಇಲ್ಲಿ ಕಂಡುಬರುವ ಅನೇಕ ಬದಲಾವಣೆಗಳು ಸಾಕ್ಷಿಯಾಗಿವೆ. ಇದಲ್ಲದೆ ಈತ ತನ್ನ ಗುರು ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ಬರೆದ ಗೊಮ್ಮಟಸಾರಕ್ಕೆ ವೀರಮತ್ತಂಡೀ (ವೀರಮಾರ್ತಂಡೀ) ಎಂಬ ದೇಸೀವೃತ್ತಿಯನ್ನೂ (ಬಹುಶಃ ಕನ್ನಡ) ಬರೆದಂತೆ ಹೇಳಲಾಗಿದೆ. ಆದರೆ ಆ ಗ್ರಂಥ ಉಪಲಬ್ದವಿಲ್ಲ. ಚಾವುಂಡರಾಯನ ಹೆಸರು ಶಾಶ್ವತವಾಗಿ ನಿಂತಿರುವುದು ಆತ ಶ್ರವಣಬೆಳಗೊಳದ ಇಂದ್ರಗಿರಿಯ ಮೇಲೆ ಕೆತ್ತಿಸಿದ ಬಾಹುಬಲಿ ವಿಗ್ರಹದಿಂದ. ಬಾಹುಬಲಿಮೂರ್ತಿಯ ಬಲಭಾಗದ ಪಾದಗಳ ಬಳಿಯ ‘ಶ್ರೀ ಚಾಮುಣ್ಡರಾಜಂ ಮಾಡಿಸಿದಂ’ ಎನ್ನುವ ಶಾಸನದಿಂದಲೂ ತಮಿಳು ಮತ್ತು ಮರಾಠಿ ಭಾಷೆಯ ಅದೇ ಅರ್ಥದ ವಾಕ್ಯಗಳು ಬರುವುದರಿಂದಲೂ ವಿಗ್ರಹವನ್ನು ಕಡೆದಿದ್ದು ಈತನೇ ಎನ್ನುವುದು ಖಚಿತವಾಗುತ್ತದೆ. ಈ ಮೂರ್ತಿಯ ಸ್ಥಾಪನೆ ಬಹುಶಃ ೯೮೩ರಲ್ಲಿ ಆಯಿತೆಂದು ಹೇಳಲಾಗಿದೆ. ಬೊಪ್ಪಣಪಂಡಿತನ ಗೊಮ್ಮಟ ಜಿನೇಂದ್ರ ಗುಣಸ್ತವ ಶಾಸನದಲ್ಲಿ ಚಾವುಂಡರಾಯ ಈ ಮೂರ್ತಿಯನ್ನು ಸ್ಕಾಪಿಸಿದ ವಿವರ ಬಂದಿದೆ. ಭರತ ಪೌದನಪುರದಲ್ಲಿ ಬಾಹುಬಲಿಯ ೫೨೫ ಬಿಲ್ಲುಗಳಷ್ಟು ಎತ್ತರದ ಮೂರ್ತಿಯನ್ನು ಮಾಡಿ ನಿಲ್ಲಿಸಿದನಷ್ಟೆ. ಆ ಮೂರ್ತಿಯ ಮಹಾತಿಶಯವನ್ನು ಕೇಳಿದ ತಾಯಿ ಕಾಳಲಾದೇವಿಗೆ ಚಾವುಂಡರಾಯ ಅದರ ದರ್ಶನ ಪಡೆಯಲು ಹಂಬಲಿಸಿದನAತೆ. ಆ ಮೂರ್ತಿಯಿದ್ದ ಸ್ಥಳ ದೂರವೂ ದುರ್ಗಮವೂ ಆಗಿದೆಯೆಂದು ಬಲ್ಲವರು ಹೇಳಿದಾಗ ಅಂಥದೇ ಇನ್ನೊಂದು ಮೂರ್ತಿಯನ್ನು ತಾನು ಕಡೆಸುವುದಾಗಿ ನಿಶ್ಚಯಿಸಿ ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದನಂತೆ, ಚಾವುಂಡರಾಯನ ಈ ಅಸಾಧಾರಣ ಕಾರ್ಯ ಜನರೂಢಿಯಲ್ಲಿ ಪೌರಾಣಿಕ ಕಲ್ಪನೆಯ ಹಂತವನ್ನು ಮುಟ್ಟುವಷ್ಟು ಪ್ರಭಾವಶಾಲಿಯಾಯಿತು. ಇದರ ಬಗ್ಗೆ ಅನೇಕ ರೀತಿಯ ಕಥೆಗಳು ಬೆಳೆದುಬಂದಿದೆ. ಈ ಪವಾಡಸದೃಶಕಾರ್ಯ ಮಾಡಿದ ಚಾವುಂಡರಾಯನಿಗೆ ‘ರಾಯ’ ಎಂಬ ಬಿರುದು ಕೊಟ್ಟು ರಾಚಮಲ್ಲ ಗೌರವಿಸಿದ. ಚಾವುಂಡರಾಯನ ಈ ಧಾರ್ಮಿಕ ವ್ಯಕ್ತಿತ್ವದಿಂದಾಗಿಯೇ ಬಹುಶಃ ಇತರರು ಆತನನ್ನು ಅಣ್ಣ ಎಂದು ಸಂಬೋಧಿಸಿರಬೇಕು. ಅಜಿತಸೇನಾಚಾರ್ಯರಲ್ಲಿ ಶಿಷ್ಯವೃತ್ತಿಯಲ್ಲಿದ್ದಾಗ ಕವಿ ರನ್ನ ಈತನ ಸಹಪಾಠಿಯಾಗಿದ್ದಿರಬೇಕು. ಅನಂತರವೂ ಈತ ರನ್ನನಿಗೆ ಸಾಕಷ್ಟು ಸಹಾಯ ಮಾಡಿರಬೇಕು. ಬಹುಶಃ ಆ ಕೃತಜ್ಞತೆಯಿಂದಲೇ ರನ್ನ ತನ್ನ ಮಗನಿಗೆ ರಾಯನೆಂದು ಹೆಸರಿಟ್ಟಂತೆ ತೋರುತ್ತದೆ. ಒಂದನೆಯ ನಾಗವರ್ಮನೂ ಚಾವುಂಡರಾಯನ ಆಶ್ರಯ ಪಡೆದಂತೆ ತನ್ನ ಛಂದೋAಬುಧಿಯಲ್ಲಿ ಹೇಳಿಕೊಂಡಿದ್ದಾನೆ.
ಭಾರತೀಯ ಅಂಚೆ ಇಲಾಖೆಯು ಕನ್ನಡ ರಾಜ್ಯೋತ್ಸವ – ೨೦೨೨ರ ಅಂಗವಾಗಿ “ಜಿನರತ್ನ ಭೂಷಣರು” ಮಾಲಿಕೆಯ ಭಾಗವಾಗಿ “ಚಾವುಂಡರಾಯ” ವರ್ಣಚಿತ್ರದ ಪೋಸ್ಟಕಾರ್ಡ್ ಹೊರತಂದಿದೆ. ಹೊಂಬುಜ ಜೈನಮಠದವತಿಯಿಂದ ವರ್ಣಚಿತ್ರದ ಪೋಸ್ಟಕಾರ್ಡುಗಳನ್ನು ಪ್ರಾಯೋಜಿಸಲಾಗಿದೆ.
ದಾನಚಿಂತಾಮಣಿ ಅತ್ತಿಮಬ್ಬೆ ಪ್ರಾಚೀನ ಕರ್ನಾಟಕದ ಸ್ತ್ರೀಯರಲ್ಲಿ ಅಗ್ರಗಣ್ಯರು. ಇವರ ಕಾಲ ಕ್ರಿ.ಶ. ಹತ್ತನೆಯ ಶತಮಾನದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಪೂರ್ವಾರ್ಧ ಅಂದರೆ ಇವರು ಚಾಳುಕ್ಯ ಚಕ್ರವರ್ತಿ ಅಹವಮಲ್ಲ ತೈಲಪ (೯೭೩-೯೯೭) ಹಾಗೂ ಆತನ ಮಗ ಇರಿವ ಬೆಡಂಗ ಸತ್ಯಾಶ್ರಯರ (೯೯೭-೧೦೦೮) ಕಾಲದಲ್ಲಿದ್ದರು.
ದಾನಚಿಂತಾಮಣಿ ಅತ್ತಿಮಬ್ಬೆ: ಪೋಸ್ಟಕಾರ್ಡ್ ಕಲ್ಪನೆ – ಮಹಾವೀರ್ ಕುಂದೂರ್, ವರ್ಣಚಿತ್ರ – ಶ್ರೀ ಸುರೇಶ್ ಅರ್ಕಸಾಲಿ, ಹುಬ್ಬಳ್ಳಿ; ಕಲೆ – ಸ್ವಾತಿ ಗ್ರಾಫಿಕ್ಸ್, ಹುಬ್ಬಳ್ಳಿ.
ಅತ್ತಿಮಬ್ಬೆ ಅವರ ಆಶ್ರಯದಲ್ಲೇ ರನ್ನಕವಿ ತಮ್ಮ ಅಜಿತಪುರಾಣವನ್ನು ಬರೆದದ್ದು (೯೯೩). ಈಕೆ ಲಕ್ಕುಂಡಿಯಲ್ಲಿ ಬಸದಿಯನ್ನು ಕಟ್ಟಿಸಿ ಅದಕ್ಕೆ ದತ್ತಿಗಳನ್ನು ಬಿಡಿಸಿದ್ದು ೧೦೦೭ರಲ್ಲಿ ಎಂದು ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ. ಅತ್ತಿಮಬ್ಬೆಯವರ ಕುರಿತು ಅನೇಕ ಸಂಗತಿಗಳು ರನ್ನ ಕವಿಯ ಅಜಿತಪುರಾಣದಿಂದಲೂ ಆತನೇ ಬರದಿರಬಹುದಾದ ಲಕ್ಕುಂಡಿಯ ಶಾಸನದಿಂದಲೂ ತಿಳಿದುಬರುತ್ತವೆ. ಈಕೆಯ ತೌರುಮನೆಯ ಹಲವು ಸಂಗತಿಗಳು ಪೊನ್ನನ ಶಾಂತಿಪುರಾಣದಿಂದ ತಿಳಿದುಬರುತ್ತವೆ. ಜೊತೆಗೆ, ಈಕೆಯ ಮೇಲೆ ರಚಿತವಾದ ಬ್ರಹ್ಮಶಿವನ ಸಮಯಪರೀಕ್ಷೆಯೂ ಏಳೆಂಟು ಶಾಸನಗಳೂ ಅತ್ತಿಮಬ್ಬೆಯವರನ್ನು ಕೊಂಡಾಡಿವೆ. ಅತ್ತಿಮಬ್ಬೆಯ ತಂದೆಯ ತಂದೆ ನಾಗಮಯ್ಯ. ಈತ ಈಗಿನ ಆಂಧ್ರಪ್ರದೇಶಕ್ಕೆ ಸೇರಿರುವ ವೆಂಗಿಮಂಡಲದ ಕಮ್ಮೆನಾಡಿನ ಪುಂಗನೂರಿನವರು.
ಜೈನ ಬ್ರಾಹ್ಮಣ ಸಂಪ್ರದಾಯಸ್ಥರಾದ ಇವರ ಮಕ್ಕಳು ಮಲ್ಲಪಯ್ಯ ಮತ್ತು ಪೊನ್ನಮಯ್ಯ. ಮಲ್ಲಪಯ್ಯ ಪಂಡಿತ ಮಂಡಳಿಗಂ ಕವಿಮಂಡಳಿಗಂ ತನ್ನ ಮನೆ ತವರ್ಮನೆಯೆನೆ ಬಾಳಿದವರು. ಈ ಸೋದರರಿಬ್ಬರ ಆಶ್ರಯದಲ್ಲಿ ಪೊನ್ನ ಶಾಂತಿಪುರಾಣವನ್ನು ಬರೆದದ್ದು. ಪೊನ್ನಮಯ್ಯ ತನ್ನ ದೊರೆ ತೈಲಪನಿಗಾಗಿ ಕಾವೇರಿ ತೀರದ ಯುದ್ದದಲ್ಲಿ ಪ್ರಾಣವನ್ನು ಒಪ್ಪಿಸಿದ. ಇವರಲ್ಲಿ ಮಲ್ಲಪಯ್ಯ ಮತ್ತು ಅಪ್ಪಕಬ್ಬೆಯರ ಮಗಳೇ ಅತ್ತಿಮಬ್ಬೆ. ಅತ್ತಿಮಬ್ಬೆಯನ್ನು ಅವರ ತಂಗಿ ಗುಂಡಮಬ್ಬೆಯ ಜೊತೆಯಲ್ಲಿ ಚಾಲುಕ್ಯ ಚಕ್ರವರ್ತಿ ಅಹವಮಲ್ಲನ ಭುಜಾದಂಡದಂತಿದ್ದ ನಾಗದೇವನಿಗೆ ಕೊಟ್ಟಿದ್ದರು. ಈ ನಾಗದೇವ ಚಾಲುಕ್ಯ ಚಕ್ರವರ್ತಿಯ ಮಹಾಮಂತ್ರಿ ಧಲ್ಲಪನ ಹಿರಿಯ ಮಗ. ಹೀಗೆ ಅತ್ತಿಮಬ್ಬೆಯನ್ನು ಕೊಟ್ಟ ಮತ್ತು ತಂದುಕೊಂಡ ಮನೆತನಗಳೆರಡೂ ಪ್ರಖ್ಯಾತವಾಗಿದ್ದುವು. ಅತ್ತಿಮಬ್ಬೆ ಅವರಿಗೆ ಅಣ್ಣಿಗದೇವನೆಂಬ ಕಿರಿ ವಯಸ್ಸಿನ ಮಗನೂ ಇದ್ದ. ಆದರೆ ಆಕೆ ಇನ್ನೂ ಯೌವನದಲ್ಲಿರುವಾಗಲೇ ಆಕೆಯ ಗಂಡ ನಾಗದೇವ ಸ್ವರ್ಗಸ್ಥನಾದ. ಆಗ ಅವಳ ತಂಗಿ ಗುಂಡಮಬ್ಬೆ ಅಕ್ಕನನ್ನು ಕಷ್ಟದಿಂದ ಒಪ್ಪಿಸಿ, ತಾನೂ ಗಂಡನೊಡನೆ ಸಹಗಮನ ಮಾಡಿದಳು.
ಪತಿಯ ಅಗಲಿಕೆಯಿಂದ ಜರ್ಝರಿತರಾದ ಅತ್ತಿಮಬ್ಬೆ ಕಟ್ಟುಮನಸ್ಸು ಮಾಡಿ ಮಗನ ಲಾಲನೆ ಪಾಲನೆಗೊಸ್ಕರ ಉಳಿದರು. ಆದರೆ ಉಗ್ರವ್ರಂತನೇಮಾದಿಗಳಲ್ಲಿ ದೇಹವನ್ನು ಬಳಲಿಸಿದರು; ತಮ್ಮ ಬಳಿಯಿದ್ದ ಐಶ್ವರ್ಯವನ್ನು ಉದಾರವಾಗಿ ಸತ್ಕಾರ್ಯಗಳಿಗೆ ವ್ಯಯಿಸಿದರು. ಅತ್ತಿಮಬ್ಬೆ ಅವರು ಮಾಡಿದ ಧಾರ್ಮಿಕ ಕಾರ್ಯಗಳಲ್ಲಿ ಕೆಲವು ಇಂತಿವೆ: ಮಣಿಖಚಿತವಾದ ೧,೫೦೦ ಜಿನ ಪ್ರತಿಮೆಗಳನ್ನು ಮಾಡಿಸಿ ದಾನ ಮಾಡಿದರು; ಲಕ್ಕುಂಡಿಯಲ್ಲಿ ದೊಡ್ಡ ಬಸದಿಯನ್ನು ಕಟ್ಟಿಸಿದರು; ರನ್ನ ಕವಿಯಿಂದ ಅಜಿತಪುರಾಣವನ್ನು ಹೇಳಿಸಿದ್ದಲ್ಲದೆ, ಅಜಿತ ಪುರಾಣ ೨ನೇಯ ತೀರ್ಥಂಕರ ಅಜಿತಸ್ವಾಮಿಯ ಕುರಿತ ೧೨ ಆಶ್ವಾಸಗಳ ವಿಸ್ತçತ ಕಥೆ. ಮತ್ತು ದಾನಚಿಂತಾಮಣಿ ‘ಅತ್ತಿಮಬ್ಬೆ’ ರನ್ನನಿಂದ ಬರೆಯಿಸಿದಳು. ಪೊನ್ನನಿಂದ ಹೇಳಿಸಿದ ಶಾಂತಿ ಪುರಾಣ ಹಸ್ತಪ್ರತಿಗಳ ಅಭಾವದಿಂದ ಜನರಲ್ಲಿ ಪ್ರಚಾರವಾಗದಿರುವ ಸಂಗತಿಯನ್ನು ಗಮನಿಸಿ ಅದರ ಸಾವಿರ ಪ್ರತಿಗಳನ್ನು ಮಾಡಿಸಿ ಹಂಚಿಸಿದರು.
ಅತ್ತಿಮಬ್ಬೆ ತಮ್ಮ ತಪಸ್ಸು, ನಿಷ್ಠೆ, ಔದಾರ್ಯ, ತ್ಯಾಗ, ಧರ್ಮಾನುರಾಗ, ಕಾವ್ಯಪ್ರೇಮ ಇತ್ಯಾದಿಗಳಿಂದ ತಮ್ಮ ಕಾಲದ ಜನರ ಕಣ್ಣಲ್ಲಿ ಅದ್ಭುತ ವ್ಯಕ್ತಿಯಾದರು. ಅವರು ಮೆರೆದ ಪವಾಡಗಳನ್ನು ಅವರ ಆಶ್ರಯದಲ್ಲಿದ್ದ ರನ್ನ ಕವಿಯ ಮಾತುಗಳು ಮತ್ತು ಆಕೆಯ ಕುರಿತ ಶಾಸನವೂ ಕೊಂಡಾಡಿವೆ. ಜಿನನನ್ನು ಹೊತ್ತು ತಂದ ಅತ್ತಿಮಬ್ಬೆಯನ್ನು ಕಂಡ ಗೋದಾವರಿ ತನ್ನ ಪ್ರವಾಹವನ್ನು ಉಡುಗಿಸಿತು; ಇದರಿಂದಾಗಿ ತೈಲಪ ತನ್ನ ಸೈನ್ಯದೊಡನೆ ನದಿಯನ್ನು ದಾಟುವುದು ಸಾಧ್ಯವಾಯಿತು.
ಭಾರತೀಯ ಅಂಚೆ ಇಲಾಖೆ ಹೊರತಂದಿರುವ ದಾನಚಿಂತಾಮಣಿ ಅತ್ತಿಮಬ್ಬೆಯ ವರ್ಣಚಿತ್ರದ ಪೋಸ್ಟಕಾರ್ಡ್.
ಮದಿಸಿದ ಆನೆ ಅತ್ತಿಮಬ್ಬೆಯ ಪಾದಗಳಿಗೆ ಶರಣಾಗಿ ಎರಗಿತು. ಅಕಸ್ಮಾತ್ ನದಿಯಲ್ಲಿ ಬಿದ್ದುಹೋದ ಜಿನಬಿಂಬ ಎಂಟು ದಿನಗಳಲ್ಲಿ ಕೈಗೆ ಬಂದಿತು (ಆ ಎಂಟು ದಿನವೂ ಆಕೆ ಉಪವಾಸವಿದ್ದರು). ಶ್ರವಣಬೆಳಗೊಳದ ಗೊಮ್ಮಟ ವಿಗ್ರಹವನ್ನು ನೋಡುವವರೆಗೆ ಅನ್ನವನ್ನು ತ್ಯಜಿಸುವೆನೆಂಬ ನಿಯಮವನ್ನು ಪಾಲಿಸಿ, ದರ್ಶನಕ್ಕಾಗಿ ಪರ್ವತವನ್ನು ಹತ್ತಿದಾಗ ಅವರ ಮಾರ್ಗಾಯಾಸ ಪರಿಹಾರಕ್ಕಾಗಿ ಅಕಾಲವೃಷ್ಟಿಯೂ ಆಯಿತು. ಇವು ಅತ್ತಿಮಬ್ಬೆ ಮಾಡಿದರೆಂದು ಹೇಳಲಾದ ಕೆಲವು ಪವಾಡಗಳು. ಹೀಗೆ ಅತ್ತಿಮಬ್ಬೆ ಈಚಿನವರ ಕಣ್ಣಲ್ಲಿ ಮಾತ್ರವಲ್ಲ, ತಮ್ಮ ಕಾಲದಲ್ಲಿಯೇ ಪವಾಡ ವ್ಯಕ್ತಿಯಾಗಿ ಪರಿಣಮಿಸಿದ್ದರು. ಚಕ್ರವರ್ತಿ ಪೂಜಿತೆಯೂ ಆಗಿದ್ದರು. ಅವರ ಜೀವಿತ ಕಾಲದ ನಂತರ ಹುಟ್ಟಿದ ಅನೇಕ ಶಾಸನಗಳಲ್ಲಿಯೂ ಬ್ರಹ್ಮಶಿವನ ಸಮಯ ಪರೀಕ್ಷೆಯಲ್ಲಿಯೂ ಅವರನ್ನು ಮನಸಾರೆ ಕೊಂಡಾಡಲಾಗಿದೆ. ಅವರು ನಾಡಿನಲ್ಲಿ ಶೀಲ ಅನುಪಮಗುಣ ಔದಾರ್ಯ ಅಭಿಮಾನಗಳಿಗೆ ಸಂಕೇತವಾಗಿ ಬಾಳಿದರು. ಅತ್ತಿಮಬ್ಬೆ ಮುಂದಿನ ಜನಾಂಗದ ಮೇಲೆಯೂ ತಮ್ಮ ಪ್ರಭಾವನ್ನು ಬೀರಿದ ಮಹಾವ್ಯಕ್ತಿಗಳಲ್ಲಿ ಒಬ್ಬರನಿಸಿದ್ದಾರೆ.
ಅತ್ತಿಮಬ್ಬೆ ಮಾಡಿರುವ ಕೆಲಸಗಳು: ೧. ರನ್ನನಂಥ ವರಕವಿಗಳಿಗೆ ಸ್ಫೂರ್ತಿ, ಆಶ್ರಯ ಕೊಟ್ಟಳು. ೨. ನಾಗದೇವ, ಅಣ್ಣಿಗದೇವರಂಥ ರಣಕಲಿಗಳಿಗೆ ಉತ್ಸಾಹ ತುಂಬಿದಳು. ೩. ಓಲೆಗರಿ ಪ್ರತಿಗಳನ್ನು – ಶಾಂತಿಪುರಾಣ, ಅಜಿತಪುರಾಣ ಕಾವ್ಯಗಳ ಹಲವಾರು ಪ್ರತಿಗಳನ್ನು ಬರಸಿ ಕನ್ನಡ ಸಾಹಿತ್ಯವನ್ನು ಪುನರುಜೀವಿಸಿದ ಪುಣ್ಯಮೂರ್ತಿಯಾದಳು. ೪. ಜಿನಬಿಂಬಗಳನ್ನು ದಾನಮಾಡಿ ಭಕ್ತರನ್ನು ಉದ್ದೀಪನಗೊಳಿಸಿದಳು. ೫. ಮುನಿಗಳಿಗೆ ಆತ್ಮಾನುಸಂಧಾನದ ಧ್ಯಾನಕಾರ್ಯದಲ್ಲಿ ನೆರವಾದಳು. ೬. ಆರ್ಯಿಕೆಯರಿಗೆ ಆಹಾರ ದಾನವಿತ್ತು ಅವರ ನಿರಾತಂಕ ಜೀವನಕ್ಕೆ ಇಂಬಾದಳು. ೭. ನಾಡಿನಾದ್ಯಂತ ನೂರಾರು ಚೈತ್ಯಾಲಯಗಳನ್ನು ನಿರ್ಮಿಸುವುದರ ಮೂಲಕ ಧಾರ್ಮಿಕ ಚೈತನ್ಯವನ್ನು ಸಾಮಾನ್ಯ ಚೇತನದಲ್ಲೂ ತುಂಬಿ ಹರಿಯಿಸಿದ ಮಹಾಚೇತನವಾದಳು. ೮. ಬೇಡಿದವರಿಗೆ ಅವರು ಬೇಡಿದ್ದನ್ನು ತಡಮಾಡದೆ ಒಡನೆಯೇ ಹಿಡಿ ಹಿಡಿಯಾಗಿ ‘ಹಿಡಿ-ಹಿಡಿ’ ಎಂದು ಮುಕ್ತಹಸ್ತದಿಂದ ನೀಡಿದಳು; ತನ್ನದೆಂಬ ಸರ್ವಸ್ವವನ್ನೂ ಧರ್ಮಕ್ಕಾಗಿ, ಸಹಮಾನವರ ಒಳಿತಿಗಾಗಿ ದಾನಾಮಾಡಿದಳು.
ಅತ್ತಿಮಬ್ಬೆಯ ಬಿರುದುಗಳು: ೧. ಕವಿವರ ಕಾಮಧೇನು ೨. ಗಿಣದಂಕಕಾರ್ತಿ ೩. ಜಿನಶಾಸನದೀಪಿಕೆ ೪. ದಾನಚಿಂತಾಮಣಿ ೫. ಗುಣದಖನಿ ೬. ಜೈನ ಶಾಸನ ಲಕ್ಷö್ಮ ೭. ಅಕಲಂಕಚರಿತೆ ೮. ಸಜ್ಜನೈಕಚೂಡಾಮಣಿ ೯. ಸರ್ವಕಳಾವಿದೆ; ಮುಂತಾದುವು
ಭಾರತೀಯ ಅಂಚೆ ಇಲಾಖೆಯು ಕನ್ನಡ ರಾಜ್ಯೋತ್ಸವ – ೨೦೨೨ರ ಅಂಗವಾಗಿ “ಜಿನರತ್ನ ಭೂಷಣರು” ಮಾಲಿಕೆಯ ಭಾಗವಾಗಿ “ದಾನಚಿಂತಾಮಣಿ ಅತ್ತಿಮಬ್ಬೆಯ” ವರ್ಣಚಿತ್ರದ ಪೋಸ್ಟಕಾರ್ಡ್ ಹೊರತಂದಿದೆ. ಹೊಂಬುಜ ಜೈನಮಠದ ವತಿಯಿಂದ ವರ್ಣಚಿತ್ರದ ಪೋಸ್ಟಕಾರ್ಡುಗಳನ್ನು ಪ್ರಾಯೋಜಿಸಲಾಗಿದೆ.
ಪೊನ್ನ ಕವಿ ಒಬ್ಬ ಕವಿ ಚಕ್ರವರ್ತಿ ಮತ್ತು ರತ್ನತ್ರಯರಲ್ಲಿ ಒಬ್ಬ. ಈತನಿಗೆ ಪೊನ್ನಿಗ, ಪೊನ್ನಮಯ್ಯ ಎಂಬ ಹೆಸರುಗಳೂ ಉಂಟು.
ಪೊನ್ನ: ಪೋಸ್ಟಕಾರ್ಡ್ ಕಲ್ಪನೆ – ಮಹಾವೀರ್ ಕುಂದೂರ್, ವರ್ಣಚಿತ್ರ – ಶ್ರೀ ಸುರೇಶ್ ಅರ್ಕಸಾಲಿ, ಹುಬ್ಬಳ್ಳಿ; ಕಲೆ – ಸ್ವಾತಿ ಗ್ರಾಫಿಕ್ಸ್, ಹುಬ್ಬಳ್ಳಿ.
ವಿಮರ್ಶಕರು ಪೊನ್ನನ ಕಾಲವನ್ನು ಸುಮಾರು ಕ್ರಿ.ಶ. ೯೫೦ ಎಂದು ಪರಿಗಣಿಸಿದ್ದಾರೆ. ಪೊನ್ನನು ಜನ್ಮತ ಒಬ್ಬ ಜೈನ, ಕಮ್ಮನಾಡಿನ ವೆಂಗಿಬಿಷಯ ಎಂಬ ಪ್ರಾಂತ್ಯಕ್ಕೆ ಸೇರಿದವನು. ಇದು ಈಗಿನ ಆಂಧ್ರದ ಚಿತ್ತೂರು ಜಿಲ್ಲೆಯ ಪುಂಗನೂರು ಪ್ರದೇಶದಿಂದ ಈಗಿನ ಗುಲ್ಬರ್ಗಾ ಜಿಲ್ಲೆಗೆ ಸೇರಿದ ರಾಷ್ಟ್ರಕೂಟರ ರಾಜಧಾನಿಯಾದ ಮಾನ್ಯಖೇತಕ್ಕೆ ವಲಸೆ ಬಂದನೆಂದು ವಿದ್ವಾಂಸರ ಅಭಿಪ್ರಾಯವಾಗಿದೆ. ಇಂದ್ರನಂದಿಮುನಿ ತನ್ನ ವಿದ್ಯಾಗುರುವೆಂದೂ, ಜಿನಚಂದ್ರ ಮುನೀಂದ್ರ ತನ್ನ ಧಾರ್ಮಿಕ ಗುರುವೆಂದೂ ಪೊನ್ನ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ. ಪೊನ್ನ ರಾಷ್ಟ್ರಕೂಟರ ದೊರೆ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿದ್ದು “ಉಭಯಕವಿ ಚಕ್ರವರ್ತಿ” ಎಂಬ ಬಿರುದನ್ನು ಪಡೆದಿದ್ದ. ಈತ ಕವಿ, ಗಮಕಿ, ವಾದಿ, ವಾಗ್ಮಿಯಾಗಿದ್ದನೆಂದೂ ಸರ್ವದೇವ ಕವೀಂದ್ರನೆಂಬ ಬಿರುದು ಪಡೆದಿದ್ದುದಾಗಿಯೂ ತಿಳಿದುಬರುತ್ತದೆ.
ಕವಿ ತನ್ನನ್ನು “ಕುರುಳ್ಗಳ ಸವಣ” ಎಂದು ಹೇಳಿಕೊಂಡಿರುವುದನ್ನು ಗಮನಿಸಿದರೆ ಕವಿಯ ನಿರ್ಲಿಪ್ತ ಮನೋಭಾವ ವ್ಯಕ್ತವಾಗುತ್ತದೆ. ಕೃಷ್ಣಚಕ್ರವರ್ತಿಯಿಂದ ಧನ, ಕನಕ, ಕೀರ್ತಿ, ಪ್ರತಿಷ್ಠೆಗಳನ್ನು ಗಳಿಸಿದ್ದರೂ ಲೌಕಿಕ ವ್ಯಾಮೋಹದಿಂದ ದೂರಾಗಿದ್ದ ಭವ್ಯ ವ್ಯಕ್ತಿತ್ಯ ಪೊನ್ನನದಾಗಿತ್ತು.
ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿ ಭುವನೈಕ ರಾಮಾಭ್ಯುದಯವನ್ನು ರಚಿಸಿದ ಪೊನ್ನ ಚಾಲುಕ್ಯ ಚಮೂಪತಿಗಳಾಗಿದ್ದ ಮಲ್ಲಪ್ಪಯ್ಯ ಪುನ್ನಮಯ್ಯರ ಆಶ್ರಯದಲ್ಲಿ ಶಾಂತಿಪುರಾಣವನ್ನು ಬರೆದ. ಪೊನ್ನನ ಹೆಸರಿನಲ್ಲಿರುವ ಕೃತಿಗಳೆಂದರೆ : ಶಾಂತಿಪುರಾಣ, ಭುವನೈಕ ರಾಮಾಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ, ಅಲಂಕಾರ, ಆದಿಪುರಾಣಮು, ವಿರಾಟಮು. ಇವುಗಳಲ್ಲಿ ಶಾಂತಿಪುರಾಣ ಮತ್ತು ಜಿನಾಕ್ಷರ ಮಾಲೆಗಳೂ ಉಪಲಬ್ದವಿದ್ದು ಉಳಿದವು ಕಾಲಗರ್ಭದಲ್ಲಿ ಅಡಗಿಹೋಗಿವೆ.
ಭುವನೈಕರಾಮಾಭ್ಯುದಯವನ್ನು ಕುರಿತು ಪೊನ್ನ ತನ್ನ ಶಾಂತಿಪುರಾಣದಲ್ಲಿ ಪ್ರಸ್ತಾಪಿಸಿದ್ದಾನೆ. ೧೪ ಭುವನಂಗಳಿಗೆ ಸರಿಸಮಾನವಾದಂಥ ೧೪ ಆಶ್ವಾಸಗಳುಳ್ಳ ಭುವನೈಕ ರಾಮಾಭ್ಯುದಯದ ಕಥಾವಸ್ತು ರಾಮಕಥೆಯೆಂದು ಶಾಂತಿಪುರಾಣದಲ್ಲಿ ಹೇಳಲಾಗಿದೆ. ಕಾವ್ಯಾವಲೋಕನ, ಶಬ್ದಮಣಿದರ್ಪಣ, ಸೂಕ್ತಿಸುಧಾರ್ಣವ, ಕಾವ್ಯಸಾರಗಳಲ್ಲಿ ದೂರಕುವ ಕೆಲವು ಲಕ್ಷಪದ್ಯಗಳನ್ನು ಭುವನೈಕ ರಾಮಾಭ್ಯುದಯದಿಂದ ಆಯ್ದವೆಂದು ಗುರುತಿಸಲಾಗಿದೆ. ಅವುಗಳ ಆಧಾರದ ಮೇಲೆ ಭುವನೈಕ ರಾಮಾಭ್ಯುದಯ ವೈದಿಕ ಸಂಪ್ರದಾಯದ ರಾಮಾಯಣವೆಂದು ತಿಳಿದುಬರುತ್ತದೆ. ಸಮಕಾಲೀನ ಸಂಪ್ರದಾಯದಂತೆ ಈ ಲೌಕಿಕ ಕೃತಿಯಲ್ಲಿ ಕಥಾನಾಯಕ ರಾಮನೊಡನೆ, ತನ್ನ ಆಶ್ರಯದಾತ ರಾಷ್ಟçಕೂಟ ಮುಮ್ಮಡಿ ಕೃಷ್ಣನನ್ನು ಒಂದುಗೂಡಿಸಿ ಹೇಳಿದ್ದಾನೆ. ಭುವನೈಕರಾಮ ಎಂದು ದೊರೆ ಕೃಷ್ಣ್ಯನಿಗೆ ಸಂದ ಬಿರುದೇ ಇಲ್ಲಿ ಕಾವ್ಯದ ಶಿರೋನಾಮೆಯಾಗಿದೆ. ತೆಕ್ಕೋಲ ಎಂಬ ಸ್ಥಳದಲ್ಲಿ ನಡೆದ ಯುದ್ಧದಲ್ಲಿ ಮೂವಡಿ ಚೋಳ ರಾಜಾದಿತ್ಯನ ಮೇಲೆ ರಾಷ್ಟçಕೂಟ ಮುಮ್ಮಡಿ ಕೃಷ್ಣ ಸಾಧಿಸಿದ ವಿಜಯದ ಸಂದರ್ಭದಲ್ಲಿ ಈ ಕೃತಿ ಜನ್ಮ ತಳೆಯಿತು.
ಪೊನ್ನ ತಾನು ‘ಗತಪ್ರತ್ಯಾಗತ’ ಎಂಬ ಸಂಸ್ಕೃತ ಕೃತಿಯನ್ನು ರಚಿಸಿದುದಾಗಿಯೂ ಅದರಿಂದ ತನಗೆ ಉಭಯ ಕವಿ ಚಕ್ರವರ್ತಿ ಬಿರುದು ದೊರೆತುದಾಗಿಯೂ ತನ್ನ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ. ಆದಿಪುರಾಣಮು ಮತ್ತು ವಿರಾಟಮು ಎಂಬ ತೆಲುಗು ಕೃತಿಗಳನ್ನು ಸರ್ವದೇವನೆಂಬ ಕವಿ ರಚಿಸಿದನೆಂದು ತೆಲುಗು ಸಾಹಿತ್ಯ ಚರಿತ್ರಕಾರರು ಹೇಳುತ್ತಾರೆ; ಈ ಸರ್ವದೇವ ಮತ್ತು ಕನ್ನಡದ ಪೊನ್ನ ಒಬ್ಬನೇ ಎಂದು ಹಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಪೊನ್ನನ ವರ್ಣಚಿತ್ರದ ಪೋಸ್ಟಕಾರ್ಡ್.
ಆದಿವುರಾಣಮು ಮತ್ತು ವಿರಾಟಮು ಕೃತಿಗಳು ಕಣ್ಮರೆಯಾಗಿವೆ. ಲಕ್ಷಣಸಾರ ಎಂಬ ಛಂದೋಗ್ರಂಥ ಮತ್ತು ಪ್ರಬಂಧಮಣಿಭೂಷಣಮು ಎಂಬ ಸಂಕಲನ ಗ್ರಂಥಗಳಲ್ಲಿ ಸರ್ವದೇವನ ಕೃತಿಗಳಿಂದ ಆಯ್ದ ಕೆಲವು ಲಕ್ಷö್ಯಪದ್ಯಗಳು ದೊರೆಯುತ್ತವೆ. ಪೊನ್ನನು ಕನ್ನಡದಲ್ಲಿಯಂತೆ ತೆಲುಗಿನಲ್ಲಿಯೂ ಆದಿಪುರಾಣಮು ಎಂಬ ಧಾರ್ಮಿಕ ಕಾವ್ಯವನ್ನೂ, ವಿರಾಟಮು ಎಂಬ ಲೌಕಿಕ ಖಂಡಕಾವ್ಯವನ್ನೂ ಬರೆದಿರುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯವಿದೆ. ಮಲ್ಲಪಯ್ಯ ಪುನ್ನಮಯ್ಯರ ಆಶ್ರಯ ಪಡೆದು ಪುಂಗನೂರಿನಲ್ಲಿ ನೆಲಸಿದ ಈ ಕವಿ ತೆಲುಗು ಸಾಹಿತ್ಯವನ್ನೂ ಅಭ್ಯಸಿಸಿ ಕೃತಿರಚನೆ ಮಾಡಿರುವ ಸಾಧ್ಯತೆ ಉಂಟು ಎಂಬುದು ವಿದ್ವಜ್ಜನರ ಊಹೆ. ಜಿನಾಕ್ಷರ ಮಾಲೆ ಪೊನ್ನನ ಉಪಲಬ್ಧ ಕೃತಿಗಳಲ್ಲೊಂದಾಗಿದೆ. ೩೯ ಕಂದಪದ್ಯಗಳ ಸ್ತೋತ್ರ ರೂಪದ ಈ ಕೃತಿಯಲ್ಲಿ ೨೫ ವರ್ಗೀಯ ವ್ಯಂಜನಗಳು ಹಾಗೂ ೧೨ ಆವರ್ಗೀಯ ವ್ಯಂಜನಗಳನ್ನು ಅಂತಾದಿಕ್ರಮದಲ್ಲಿ ಹೊಂದಿಸಲಾಗಿದೆ. ಕುರುಳ್ಗಳ ಸವಣ ಎಂಬ ನಾಮಾಂಕಿತದಲ್ಲಿಯೇ ಹೆಣೆಯಲಾದ ಈ ಕೃತಿಗಳಲ್ಲಿ ಕವಿಯ ಹೆಸರು ಎಲ್ಲಿಯೂ ಇಲ್ಲ. ಪೊನ್ನ ಕವಿಯ ಮತ್ತೊಂದು ಉಪಲಬ್ಧ ಕೃತಿ ಶಾಂತಿಪುರಾಣ. ಹದಿನಾರನೆಯ ತೀರ್ಥಂಕರನೂ, ಐದನೆಯ ಚಕ್ರವರ್ತಿಯೂ ಆದ ಶಾಂತಿನಾಥನನ್ನು ಕುರಿತು ಕನ್ನಡದಲ್ಲಿ ರೂಪಿತವಾದ ಮೊದಲ ಕೃತಿಯಿದು. ಈ ಕೃತಿಗೆ ಆಸಗ ಕವಿಯ ಸಂಸ್ಕೃತ ಶಾಂತಿಪುರಾಣವು ಆಕರವಾಗಿದೆ. ೧೨ ಆಶ್ವಾಸಗಳುಳ್ಳ ಈ ಚಂಪೂ ಕೃತಿಯಲ್ಲಿ ಶ್ರೀಷೇಣ, ಭೂಗಭೂಮಿಜ, ಶ್ರೀದೇವ, ಅಮಿತತೇಜ, ಮಣಿಚೂಳ, ಅಪರಾಜಿತ, ಅಚ್ಯುತೇಂದ್ರ, ವಜ್ರಾಯುಧ, ಅಹಮಿಂದ್ರ, ಮೇಘರಥ, ಮಹೇಂದ್ರ- ಈ ಹನ್ನೊಂದು ಭವಗಳಲ್ಲಿ ತೊಳಲಿ ಬಂದ ಜೀವ ಶಾಂತಿನಾಥನಾಗಿ ಜಿನತ್ಯವನ್ನು ಪಡೆಯುತ್ತದೆ. ಕಥನಕ್ರಮದಲ್ಲಿ ಅಸಗನನ್ನೇ ಅನುಸರಿಸಿರುವ ಪೊನ್ನ ಕವಿ ವರ್ಣನೆಗಳಲ್ಲಿ ಸ್ವಂತಿಕೆಯನ್ನು ಮೆರೆದಿದ್ದಾನೆ. ಪಾತ್ರಗಳಿಗೆ ಮಾನವೀಯತೆಯ ಮೆರುಗನ್ನಿತ್ತು ಸಜೀವವಾಗಿಸಿದ್ದಾನೆ. ಇದರಲ್ಲಿ ಜಿನ ಜನಾಭಿಷೇಕದ ಭಾಗವನ್ನು ಪಂಪನಿಂದ ಸ್ವೀಕರಿಸಿದ್ದಾನೆ. ಜ್ಯೋತಿಃ ಪ್ರಭಾ ಸ್ವಯಂವರ ಸಂದರ್ಭವನ್ನು ಕಾಳಿದಾಸನ ರಘುವಂಶದಿಂದ ಭಾಷಾಂತರಿಸಿದ್ದಾನೆ. ಶಾಂತಿನಾಥನ ದಿಗ್ವಿಜಯ ವರ್ಣನೆಯಲ್ಲಿ ರಘುವಂಶದ ರಘು ಮಹಾರಾಜನ ದಿಗಿಜಯ ವರ್ಣನೆಯನ್ನು ಬಿಂಬಿಸಿದ್ದಾನೆ. ಸುಂದರ ವರ್ಣನೆಗಳಿಂದ ಕೂಡಿದ ಶಾಂತಿನಾಥ ಪುರಾಣ ಕೇವಲ ಧಾರ್ಮಿಕ ಪುರಾಣವಾಗಿರದೆ ಕಾವ್ಯವೂ ಆಗಿದೆ. ಶಾಂತಿಪುರಾಣವು ಧಾರ್ಮಿಕ ವಿಷಯಗಳ ನಿರೂಪಣೆಯಲ್ಲಿ ಸರಳತೆಯನ್ನಳವಡಿಸಿಕೊಂಡ ಕೃತಿ ಎಂದೆನಿಸಿದೆ.
ಭಾರತೀಯ ಅಂಚೆ ಇಲಾಖೆಯು ಕನ್ನಡ ರಾಜ್ಯೋತ್ಸವ – ೨೦೨೨ರ ಅಂಗವಾಗಿ “ಜಿನರತ್ನ ಭೂಷಣರು” ಮಾಲಿಕೆಯ ಭಾಗವಾಗಿ “ಪೊನ್ನನ” ವರ್ಣಚಿತ್ರದ ಪೋಸ್ಟಕಾರ್ಡ್ ಹೊರತಂದಿದೆ. ಹೊಂಬುಜ ಜೈನಮಠದವತಿಯಿಂದ ವರ್ಣಚಿತ್ರದ ಪೋಸ್ಟಕಾರ್ಡುಗಳನ್ನು ಪ್ರಾಯೋಜಿಸಲಾಗಿದೆ.