Showing posts with label ಭಾವಗೀತೆಗಳು. Show all posts
Showing posts with label ಭಾವಗೀತೆಗಳು. Show all posts

Nov 1, 2011

ನಮ್ಮ ಕನ್ನಡ ನಾಡು - ನನ್ನ ಕವನ

ಕನ್ನಡ ನಾಡಿನ ಅಂದವ ನೋಡ
ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ
ಮನ ತಣಿಸುವ ಹಚ್ಚ ಹಸಿರು
ಮಲೆನಾಡಿನ ಸೌಂದರ್ಯದುಸಿರು

ಜೋಗಿನ ಜಲಪಾತದ ಸೊಬಗಿನ ಇಂಪು
ಪಂಚ ಕೋಟಿ ಜನರಾಡುವ ಕನ್ನಡದ ಕಂಪು
ಬೇಲೂರು ಹಳೇಬೀಡು ಮೈಸೂರು
ಸದಾ ಆಕರ್ಷಿಸಿಸುವ ತವರೂರು

ಸುಂದರ ಇತಿಹಾಸ ಸೃಷ್ಟಿಸಿದ ನಾಡು
ಕಲೆ ವಾಸ್ತುಶಿಲ್ಪ ಸಾಹಿತ್ಯದ ಬೀಡು
ವಿದೇಶಿಯರು ಹೊಗಳುವ ಮೈಸೂರು ದಸರ
ನಾಡಿನ ಜನತೆಯ ಸಂತಸದ ಸಡಗರ

ನಾಡನ್ನು ಕಟ್ಟಿದ ರಾಜರ ವೈಭವ
ಕವಿಗಳು ರಚಿಸಿದ ಸಾಹಿತ್ಯ ಭಂಡಾರ
ಪ್ರವಾಸಿಗರ ಕೈ ಬೀಸಿ ಕರೆಯುವ ತಾಣ
ನೆಲೆಯೂರಲು ಯೋಗ್ಯವಾದ ವಾಸಸ್ಥಾನ

ನೀ ಒಮ್ಮೆ ಬಂದು ನೋಡು ಬಾರ
ಕನ್ನಡನಾಡಿನ ಅಂದವ ಸವಿಯಬಾರ
-ಮಾಕೃಮ*

May 2, 2011

ನಿನ್ನ ಪ್ರೇಮದ ಪರಿಯ ನಾನರಿಯೆ


ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು, ನಿನ್ನೊಳಿದೆ ನನ್ನ ಮನಸು

ಸಾಗರನ ಹೃದಯದಲಿ ರತ್ನಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ

ಅಲೆಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ
ಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ

ನೀನು ಯಾರೆ?


ಹೊಳೆಯ ಬಂಡೆಯ ಮೇಲೆ ನಾ ನಿನ್ನ ಕಂಡೆ,
ನಿನ್ನ ಹೆರ್‍ಅಳೊಳಗಿತ್ತು ಮಲ್ಲಿಗೆಯ ದಂಡೆ;
ನಿನ್ನ ಹಣೆಯಲ್ಲಿತ್ತು ಕಸ್ತೂರಿ ತಿಲಕ,
ಕುಡಿಹುಬ್ಬುಗಳ ನಡುವೆ ಬೈತಲೆಯ ತನಕ.

ಸೀರೆ ಸೆರಗನು ಹಿಡಿದು ಗಾಳಿಯಲಿ ನಿಂತ
ನಿನ್ನ ನೋಟವೆ ಸಾಕು, ಪ್ರತಿದಿನ ವಸಂತ;
ನಿನ್ನ ಮುಂಬೆರಳಲ್ಲಿ ಹೊಳೆದಿತ್ತು ಮಿಂಚು'
ನೀನುಟ್ಟ ಸೀರೆಯದು ಹೊಬಳ್ಳಿಯಂಚು.

ನಿನ್ನ ಕಿವಿಯಲಿ ಹೊಳೆಯುತಿತ್ತು ಬೇಂಡೋಲೆ,
ನಿನ್ನ ಕೊರಳೊಳಗಿತ್ತು ನವರತ್ನಮಾಲೆ;
ನಿನ್ನ ಕಾಲ್ಗೆಜ್ಜೆಗಳ ಇನಿದನಿಗಳಲ್ಲಿ
ನಾನು ಒಲವನು ಕಂಡೆ ಹಾಡಹಗಲಲ್ಲಿ.

ನಾಕಂಡ ಮಂದಹಾಸವನು ವರ್ಣಿಲಾರೆ,
ಅಪ್ಸರೆಯೊ ಕಿನ್ನರಿಯೊ, ಓ ನೀನು ಯಾರೆ?

-ಮಲ್ಲಿಗೆ ಕವಿ ಕೆ ಎಸ್ ನರಸಿಂಹಸ್ವಾಮಿ

Mar 3, 2011

ರಂಗಿನ ಚಿಟ್ಟೆ - ನನ್ನ ಕವನ


ರಂಗಿನ ಚಿಟ್ಟೆ

ರಂಗು ರಂಗಿನ ಬಣ್ಣದ ಚಿಟ್ಟೆ
ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ
ನನ್ನ ಹೃದಯವ ಅದಕ್ಕೆ ಕೊಟ್ಟೆ
ನಾನೊಂದು ಗಾಳಿಪಟವಾಗಿ ಬಿಟ್ಟೆ


ಸದಾ ಕನಸ್ಸಿನಲ್ಲಿ ತೇಲುತ್ತಿದ್ದೆ
ಬಣ್ಣ ಬಣ್ಣದ ರೆಕ್ಕೆಯ ಜೋಡಿಸಿದೆ
ಸುಂದರ ಪ್ರಪಂಚವ ಸೃಷ್ಟಿಸಿದೆ
ಪ್ರೀತಿಯ ಅಂಕುರವ ಅದಕ್ಕಿಟ್ಟಿದ್ದೆ


ಇದು ಮನಸ್ಸಿನ ಮಾಯಾಲೋಕ
ರಮಣೀಯವಾಗಿರುವ ಪ್ರೇಮಲೋಕ
ಕನಸ್ಸುಗಳ ಸೃಷ್ಟಿಯ ಬ್ರಹ್ಮ ಲೋಕ
ಊಹೆಗೂ ಮೀರಿದ ಕಲ್ಪನಾಲೋಕ


ಹುಡುಕುತ್ತಿರುವೆ ಈ ಪ್ರೀತಿಯ ಮೂಲವೆಲ್ಲಿ
ಕರಗಿಹೋದ ಸುಂದರ ಕ್ಷಣಗಳಲ್ಲಿ
ಅದ್ಭುತವೆನ್ನುವ ಕಿನ್ನರಲೋಕದಲ್ಲಿ
ಮರೆಯಾದ ಕಲ್ಪನಾ ಸಾಮ್ರಾಜ್ಯದಲ್ಲಿ


ಪ್ರೀತಿ-ಪ್ರೇಮವೇ ಲೋಕದ ಸೃಷ್ಟಿಗೆ ಮೂಲ
ಮತ್ತೆ ಸಿಗದು ಕಳೆದುಹೋದ ಕಾಲ
ಭೇದಿಸಲಾಗದು ಪ್ರೀತಿಯ ಮಾಯಾಜಾಲ
ನಿಗೂಢವಾಗಿಯೇ ಉಳಿದಿದೆ ಈ ಇಂದ್ರಜಾಲ

-.ಮಾ.ಕೃ.ಮ

Feb 12, 2011

ನೀ ಹೀಂಗ ನೋಡಬ್ಯಾಡ

ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ಪಲ್ಲವಿ

ಸಂಸಾರ ಸಾಗರದಾಗ ಲೆಕ್ಕವಿಲ್ಲದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?

ತಂಬಲs ಹಾಕದ ತುಂಬ ಕೆಂಪು ಗಿಡಗಡಕನಕಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆನಗ ಇಲ್ಲದ ಭೀತಿ,

ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ, ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ

-ದ.ರಾ. ಬೇಂದ್ರೆ (ಅಂಬಿಕಾತನಯದತ್ತ)-ನಾದಲೀಲೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ - ಭಾವಗೀತೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ||೨||
ದಾಟಿ ಬಂತು ಬೇಲಿ ಸಾಲ
ಮೀಟಿ ಹಳೆಯ ಮಧುರ ನೋವ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೋರೆ||೨||
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋ
ಎಲ್ಲಿ ಜಾರಿತೋ ಎಲ್ಲೆ ಮೀರಿತೋ ನಿಲ್ಲದಾಯಿತೋ....ಓ..

ರಚನೆ - ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ

ತನುವು ನಿನ್ನದು ಮನವು ನಿನ್ನದು

ತನುವು ನಿನ್ನದು ಮನವು ನಿನ್ನದು,
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಮ್ಬ ಹೆಮ್ಮೆಯ,
ಋ‍ಣವು ಮಾತ್ರವೆ ನನ್ನದು
ನೀನು ಹೊಳೆದರೆ ನಾನು ಹೊಳೆವೆನು,
ನೀನು ಬೆಳೆದರೆ ನಾನು ಬೆಳೆವೆನು
ನೀನು ಹೊಳೆದರೆ ನಾನು ಹೊಳೆವೆನು,
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು,
ನನ್ನ ಮರಣದ ಮರಣವು
ನನ್ನ ಮರಣದ ಮರಣವುತನುವು ನಿನ್ನದು

ನನ್ನ ಮನದಲಿ ನೀನು ಯುಕ್ತಿ,
ನನ್ನ ಹ್ರಿದಯದಿ ನೀನೆ ಭಕ್ತಿ
ನನ್ನ ಮನದಲಿ ನೀನು ಯುಕ್ತಿ,
ನನ್ನ ಹ್ರಿದಯದಿ ನೀನೆ ಭಕ್ತಿ
ನೀನೆ ಮಾಯ ಮೋಹ ಶಕ್ತಿಯು,
ನನ್ನ ಜೀವನ ಮುಕ್ತಿಯು
ನನ್ನ ಜೀವನ ಮುಕ್ತಿಯುತನುವು ನಿನ್ನದು

ರಚನೆ : ಕುವೆಂಪು

ಎದೆ ತುಂಬಿ ಹಾಡಿದೆನು

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನೆಗೆ ಅದುವೆ ಬಹುಮಾನ್
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈ ದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ

ಎದೆ ತುಂಬಿ ಹಾಡಿದೆನು ಅಂದು ನಾನು
ಎದೆ ತುಂಬಿ, ಮನ ತುಂಬಿ, ತನು ತುಂಬಿ
ಹಾಡಿದೆನು ಅಂದು ನಾನು..

-ಜಿ.ಎಸ್.ಶಿವರುದ್ರಪ್ಪ

Jan 13, 2010

ಸವಿ ಕನಸು

ನಾನೊಂದು ಸವಿ ಕನಸ ಕಂಡೆ
ನಿನ್ನ ನೋಡಿದ ಮೊದಲ ಕ್ಷಣದ ನೆನಪಿಗಾಗಿ
ಸಾವಿರಾರು ಹಕ್ಕಿಗಳ ನಡುವೆ
ಹಕ್ಕಿಯಂತೆ ಹಾರುತ ಬರುವ ನಿನ್ನ ಕಂಡೆ

ಸೋತು ಹೋದೆ ನಿನ್ನ ಅಂದಕೆ
ಬೆಚ್ಚಿ ಬೆರಗಾದೆ ನಿನ್ನ ಮೈಮಾಟಕೆ
ಮೈ ಕಂಪಿಸಿತು ನಿನ್ನ ಕಂಗಳಾಟಕೆ
ಮನ ಸೋತಿತು ನಿನ್ನ ಮಾತಿನ ಮೋಡಿಗೆ
ಹೂವೊಂದು ಕೇಳಿತು ನೀ ಯಾರೆಂದು

ನಾ ಹೇಳಿದೆ ನೀ ನನ್ನ ಉಸಿರೆಂದು
ನಿರ್ಮಲ ಆಕಾಶದಿ ನೆಲಸಿಹ
ಬೆಳದಿಂಗಳಲಿ ಮಿನುಗುವ ತಾರೆಯೆಂದು
ನನ್ನ ಮನಸು ಬೇಡುತ್ತಿದೆ

ಮತ್ತೆ ಮತ್ತೆ ಬಯಸುತ್ತಿದೆ
ನಿನ್ನ ಅಂದವ ಕಂಗಳಲಿ ತುಂಬಲು
ನಿನ್ನ ಕಣ್ಣಿನಾಟವ ಮತ್ತೆ ಸವಿಯಲು

- ಮಾ.ಕೃ.ಮಂಜು

Apr 10, 2009

ಕನ್ನಡದ ಜನಪದ ಮಹಾಕಾವ್ಯಗಳು

ಕನ್ನಡದ ಜನಪದ ಮಹಾಕಾವ್ಯಗಳು
          ಸಮಾಜದಲ್ಲಿ ನಡೆಯುವ ಸಾಂಸ್ಕೃತಿಕ ಸಂಗತಿಗಳನ್ನು ಮುನ್ನೆಲೆಗೆ ತರುವ ಅಥವಾ ಅಂಚಿಗೆ ಸರಿಸಿಬಿಡುವ ಪ್ರಕ್ರಿಯೆಯು ಅಂತಹ ಸಮಾಜದಲ್ಲಿ ನಡೆಯುತ್ತಿರುವ ಸಾಮಾಜಿಕ ಚಲನವಲನಗಳ ನೇರ ಪರಿಣಾಮ. ಆ ಸಂಗತಿಗಳ ಕಲಾತ್ಮಕ ಮೌಲ್ಯಕ್ಕೂ ಈ ಬಗೆಯ ಅತಿಮಹತ್ವ, ನಿರ್ಲಕ್ಷ್ಯಗಳಿಗೂ ನಿಕಟವಾದ ಸಂಬಂಧವಿರುವುದಿಲ್ಲ. ಕಲಾತ್ಮಕ ಮೌಲ್ಯ ಯಾವುದು, ಎನ್ನುವ ತಿಳಿವಳಿಕೆಯೂ ಬದಲಾಗುತ್ತಿರುತ್ತದೆ. ಈ ಮಾತು ಕರ್ನಾಟಕದ ಜನಪದ ಮಹಾಕಾವ್ಯಗಳ ವಿಷಯದಲ್ಲಿ ನೂರಕ್ಕೆ ನೂರರಷ್ಟು ನಿಜ. ಸಾಹಿತ್ಯ ವಿಮರ್ಶೆಯ ಪ್ರಧಾನಧಾರೆಯು ಎಷ್ಟೋ ಶತಮಾನಗಳ ಕಾಲ ಅವುಗಳ ಅಸ್ತಿತ್ವವನ್ನು ಗುರುತಿಸಲೂ ಇಲ್ಲ, ಅವುಗಳನ್ನೂ ಮೆಚ್ಚಿಕೊಳ್ಳಲೂ ಇಲ್ಲ. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಪ್ರಾರಂಭವಾದ ಜನಪದ ಸಾಹಿತ್ಯದ ಸಂಕಲನ ಕಾರ್ಯವು, ಭೂಮಾಲಿಕ ವರ್ಗಗಳಲ್ಲಿ ಪ್ರಚಲಿತವಾಗಿದ್ದ ಜನಪದಗೀತೆಗಳು ಮತ್ತು ಲಾವಣಿಗಳಿಗೆ ಸೀಮಿತವಾಗಿದ್ದವು. ಎಪ್ಪತ್ತರ ದಶಕದ ಮೊದಲ ವರ್ಷಗಳಲ್ಲಿ ಪ್ರಕಟವಾದ ಮಲೆ ಮಾದೇಶ್ವರ ಕಾವ್ಯ ಮತ್ತು ಮಂಟೇಸ್ವಾಮಿ ಕಾವ್ಯಗಳು ಕೂಡ ಸಾಹಿತ್ಯಕ ಯಾಜಮಾನ್ಯದ ಧೋರಣೆಗಳಲ್ಲಿ ಹೆಚ್ಚಿನ ಬದಲಾವಣೆಯನ್ನು ತರಲಿಲ್ಲ. ಮುಂದಿನ ಇಪ್ಪತ್ತು ವರ್ಷಗಳ ಕಾಲ ಅವುಗಳನ್ನು ಮಾನವಶಾಸ್ತ್ರದ ಕುತೂಹಲವನ್ನು ತಣಿಸುವ ಸಾಮಗ್ರಿಯೆಂದು ಬಗೆಯಲಾಯಿತು. ಅವು ಜಾಣಪದ ಅಧ್ಯಯನಗಳ ವ್ಯಾಪ್ತಿಯಿಂದ ಹೊರಗೆ ಬರಲಿಲ್ಲ. ಈ ಮೌಖಿಕ ಮಹಾಕಾವ್ಯಗಳನ್ನು ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟ ಜಾತಿ/ಸಮುದಾಯಗಳವರು ಹಾಡುತ್ತಿದ್ದರು. ಅವು ಅನುಭವಿಸಿದ ನಿರ್ಲಕ್ಷ್ಯಕ್ಕೆ ಈ ಸಂಗತಿಯೂ ಕಾರಣ. ಫಿನ್ ಲ್ಯಾಂಡಿನ ಮೌಖಿಕ ಮಹಾಕಾವ್ಯವಾದ ಕಾಲೇವಾಲಾವನ್ನು ಅಧ್ಯಯನ ಮಾಡುವ ಅವಕಾಶ ಸಿಕ್ಕಿದ್ದು ಕೂಡ ಮಹತ್ವದ ಬದಲಾವಣೆಗೆ ಕಾರಣವಾಗಿರಬಹುದು.
          ಆದರೆ, ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ-ರಾಜಕೀಯ ಬದಲಾವಣೆಗಳು, ಅಕಡೆಮಿಕ್ ಅಧ್ಯಯನದ ಸ್ವರೂಪ ಮತ್ತು ಆಯ್ಕೆಗಳನ್ನು ಸಂಪೂರ್ಣವಾಗಿ ಪರಿವರ್ತಿಸಿವೆ. ಈಗ ಜಾನಪದ ಮಹಾಕಾವ್ಯಗಳನ್ನು ಇದುವರೆಗೆ ಮನ್ನಣೆ ಪಡೆದಿದ್ದ ಶ್ರೇಷ್ಠ ಸಾಹಿತ್ಯಕೃತಿಗಳಿಗೆ ಸರಿಸಮನಾಗಿ ಪರಿಗಣಿಸಲಾಗುತ್ತಿದೆ. ಸಂಸ್ಕೃತಿವಿಮರ್ಶೆಯ ದಿಕ್ಕಿನಲ್ಲಿ ಚಲಿಸಸುತ್ತಿರುವ ವಿಮರ್ಶಕರಿಗೂ ಇವು ಅಧ್ಯಯನದ ಅಮೂಲ್ಯ ಆಕರಗಳಾಗಿ ಕಂಡಿವೆ. ಈಗ ಸಾಹಿತ್ಯವೆಂಬ ಕಲೆಯನ್ನು ಕುರಿತ ವಿಚಾರಗಳು ಬಹಳ ವ್ಯಾಪಕವಾದ ಹಿನ್ನೆಲೆಯನ್ನು ಹೊಂದಿವೆ. ಪ್ರಮಾಣ/ಶಿಷ್ಟ ಭಾಷೆಯ ಚೌಕಟ್ಟುಗಳನ್ನು ಮೀರುವುದು ಕೂಡ ಗುಣವೇ ಇರಬಹುದೆಂಬ ನಿಲುವು ಈಗ ಮಾನ್ಯವಾಗಿದೆ.
          ಜನಪದ ಮಹಾಕಾವ್ಯಗಳು ಮೌಖಿಕವಾಗಿರುವುದರಿಂದ, ಅವುಗಳನ್ನು ಲಿಖಿತ ರೂಪದಲ್ಲಿ ಪ್ರಕಟಿಸಿದಾಗ ಕೆಲವು ಪರಿಮಿತಿಗಳು ಏರ್ಪಡುತ್ತವೆ. ಅವುಗಳ ಚಲನಶೀಲಗುಣವು ಇಲ್ಲವಾಗುತ್ತದೆ. ಅಂತೆಯೇ ಗೇಯತೆಯೂ ಕೂಡ ಊಹೆಯ ವಸ್ತುವಾಗಿಬಿಡುತ್ತದೆ. ಈ ಕಾವ್ಯಗಳ ಸಂವಹನ ಮತ್ತು ಸಂರಕ್ಷಣದ ಕೆಲಸದಲ್ಲಿ ಹಾಡುಗಾರರು-ನಿರೂಪಕರು ಮುಖ್ಯವಾದ ಪಾತ್ರ ವಹಿಸುತ್ತಾರೆ. ಅವರಿಗೆ ತಾವು ನಿರೂಪಿಸುತ್ತಿರುವ ಕಥೆಯ ಸ್ಥೂಲವಾದ ರೂಪುರೇಷೆಗಳು ತಿಳಿದಿರುತ್ತವೆ. ಹಾಗೆಯೇ ಯಾವುದೇ ಸಂದರ್ಭದಲ್ಲಿ ಬಳಸಬಹುದಾದ ಕೆಲವು ಸೂತ್ರರೂಪದ ವಿನ್ಯಾಸಗಳು(ಫಾರ್ಮುಲಾಯಿಕ್ ಪ್ಯಾಟ್ರನ್ಸ್) ಗೊತ್ತಿರುತ್ತವೆ. ಆದ್ದರಿಂದಲೇ ಅವರು ನೀಡುವ ಪ್ರತಿಯೊಂದು ಪ್ರದರ್ಶನವೂ(ಪರ್ಫಾಮನ್ಸ್) ಹೊಸ ಪಠ್ಯವೊಂದಕ್ಕೆ ಜನ್ಮ ಕೊಡುತ್ತದೆ. ಅಲ್ಲದೆ ಪ್ರತಿಯೊಬ್ಬ ಗಾಯಕನೂ ತಾನು ಹಾಡುತ್ತಿರುವ ಕಾವ್ಯದ ತನ್ನದೇ ಆದ ಆವೃತ್ತಿಯನ್ನು ಹೊಂದಿರುತ್ತಾನೆ. ಅದು ಅವನಿಗೆ ಗುರುಪರಂಪರೆಯಿಂದ ಹರಿದು ಬಂದಿರುತ್ತದೆ.ಅವರು ಅದನ್ನು ಹಾಡುವ ಧಾರ್ಮಿಕ ಮತ್ತು ಆಚರಣಾತ್ಮಕ ಸಂದರ್ಭಗಳು ಆಯಾ ಪಠ್ಯದ ಸ್ವರೂಪವನ್ನು ನಿರ್ಧರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಬಗೆಯ ಚಲನಶೀಲತೆ ಮತ್ತು ಪ್ರತಿಯೊಂದು ಪೀಳಿಗೆಯ ಗಾಯಕರು ಹೊಸದಾಗಿ ಸೇರಿಸುವ ವಿವರಗಳು, ಆ ಕಾವ್ಯದ ಐತಿಹಾಸಿಕತೆಯನ್ನು ಕಂಡುಕೊಳ್ಳುವ ಕೆಲಸದಲ್ಲಿ ಕೊಂಚ ಅಡ್ಡಿಯಾಗುತ್ತವೆ.
          ಅನೇಕ ಜನಪದ ಕಾವ್ಯಗಳ ಅಸ್ತಿತ್ವವಿರುವುದು ಒಂದು ನಿರ್ದಿಷ್ಟ ಸಮುದಾಯದ ನಂಬಿಕೆಗಳು ಮತ್ತು ಇತಿಹಾಸದ ಚೌಕಟ್ಟಿನಲ್ಲಿ. ಅವು ಆ ಸಮುದಾಯದ ಸಂಸ್ಕೃತಿ, ಪುರಾಣ ಮತ್ತು ಅಲಿಖಿತ ಇತಿಹಾಸಗಳ ಬೃಹತ್ ಭಂಡಾರವಾಗಿರುತ್ತವೆ. ಆದ್ದರಿಂದ ಅವು ಅವರ ಅನುದಿನದ ಚಟುವಟಿಕೆಗಳನ್ನು ಧೋರಣೆಗಳನ್ನು ನಿರ್ಧರಿಸುವ ಮಾರ್ಗದರ್ಶಿಗಳಾಗಿರುತ್ತವೆ. ಆಗ ಅವುಗಳ ಸಾಹಿತ್ಯಕ ಮೌಲ್ಯವು ಕೊಂಚ ಬದಿಗೆ ಸರಿಯುತ್ತದೆ. ಈ ಕಾವ್ಯಗಳನ್ನು ಅಂತಹ ಚೌಕಟ್ಟಿನಿಂದ ಬೇರ್ಪಡಿಸಿ, ಇತರ ಸಾಹಿತ್ಯಕೃತಿಗಳ ಸಾಲಿನಲ್ಲಿ ಪರಿಶೀಲಿಸುವುದು ಅತ್ಯಗತ್ಯ. ಿವುಗಳನ್ನು ಹೀಗೆ ಸೆಕ್ಯುಲರ್ ಆಗಿ ಮಾರ್ಪಡಿಸುವುದರ ಪರಿಣಾಮ ಮತ್ತು ಪ್ರಯೋಜನಗಳನ್ನು ಕುರಿತು ವಿವರವಾಗಿ ಯೋಚಿಸಬೇಕಾಗಿದೆ.
          ಮಲೆ ಮಾದೇಶ್ವರ ಕಾವ್ಯ ಮತ್ತುಮಂಟೇಸ್ವಾಮಿ ಕಾವ್ಯಗಳು, ಕರ್ನಾಟಕದ ಮುಖ್ಯವಾದ ಜನಪದ ಮಹಾಕಾವ್ಯಗಳು. ಚಾಮರಾಜನಗರ ಜಿಲ್ಲೆಯ ಮಲೆಮಾದೇಶ್ವರ ಬೆಟ್ಟದಲ್ಲಿ ಮಾದೇಶ್ವರನ ದೇವಾಲಯವಿದೆ. ಅಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಸಾವಿರಾರು ಜನ ಸೇರುತ್ತಾರೆ. ಈ ಕಾವ್ಯವನ್ನು ಹಾಡುವ ವೃತ್ತಿಗಾಯಕರ ಸಮುದಾಯವೇ ಇದೆ. ಅವರು ಹಲವು ಸನ್ನಿವೇಶಗಳಲ್ಲಿ ಇಂತಹ ಹಾಡುವಿಕೆಯಲ್ಲಿ ತೊಡಗುತ್ತಾರೆ. ಈ ಮಾತು ಮಂಟೇಸ್ವಾಮಿಯವರ ವಿಷಯದಲ್ಲೂ ನಿಜ. ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳಲ್ಲಿ ಈ ಕಾವ್ಯಗಳು ಇಂದಿಗೂ ಅನೇಕ ಸಮುದಾಯಗಳಲ್ಲಿ ಜೀವಂತವಾಗಿವೆ. ಎರಡೂ ಕಾವ್ಯಗಳು ದಲಿತರು ಹಾಗೂ ಮೇಲುವರ್ಗದವರ ನಡುವಿನ ಮುಖಾಮುಖಿ ಮತ್ತು ಸಂಘರ್ಷಗಳನ್ನು ಚಿತ್ರಿಸುತ್ತವೆ. ಬಸವಣ್ಣ ಮತ್ತು ಮಂಟೇಸ್ವಾಮಿಯವರ ನಡುವಿನ ಮುಖಾಮುಖಿಯು ಶತಮಾನಗಳ ಚರಿತ್ರೆಯನ್ನು ಹಿಡಿಯುವ ಪ್ರಬಲವಾದ ರೂಪಕ. ಇಂತಹ ಮಹಾಕಾವ್ಯಗಳು, ಶತಮಾನಗಳಿಂದ ನಾಗರಿಕತೆಯು ರೂಪುಗೊಂಡಿರುವ ಬಗೆಯನ್ನು, ಮಹಾನ್ ಕಥನಗಳಲ್ಲಿ ದಾಖಲೆ ಮಾಡುತ್ತವೆ. ಅನೇಕ ಕಾವ್ಯಗಳು ವಿಭಿನ್ನ ಸಮುದಾಯಗಳ ಅಸ್ಮಿತೆಯ ಸಾಕ್ಷಿಗಳಾಗುತ್ತವೆ. ಹಾಲುಮತದ ಮಹಾಕಾವ್ಯ ಮತ್ತು ಮೈಲಾರಲಿಂಗನ ಕಾವ್ಯಗಳು ಅನುಕ್ರಮವಾಗಿ ಕುರುಬರು ಮತ್ತು ಗೊಲ್ಲರ ಸಮುದಾಯಗಳ ಜೀವನಕ್ರಮ ಮತ್ತು ಇತಿಹಾಸದ ಸುತ್ತ ರೂಪಿತವಾಗಿವೆ. ಕೃಷ್ಣಗೊಲ್ಲರ ಕಾವ್ಯ, ಜುಂಜಪ್ಪನ ಕಾವ್ಯ, ಎಲ್ಲಮ್ಮನ ಕಾವ್ಯ, ಕುಮಾರರಾಮನ ಕಾವ್ಯ ಮತ್ತು ಕರಾವಳಿ ಕರ್ನಾಟಕದ ಸಿರಿ ಮಹಾಕಾವ್ಯಗಳು ಕರ್ನಾಟಕದ ಪ್ರಮುಖ ಜನಪದ ಮಹಾಕಾವ್ಯಗಳು. ತುಳು ಭಾಷೆಯಲ್ಲಿ ರಚಿತವಾಗಿರುವ ಪಾಡ್ದನಗಳನ್ನು ವಿಶೇಷವಾಗಿ ಹೆಸರಿಸಬೇಕು. ಸಿರಿ ಮಹಾಕಾವ್ಯವೂ ಒಂದು ಪಾಡ್ದನವೇ. ಈ ಕಾವ್ಯಗಳನ್ನು ಕನ್ನಡ ಸಾಹಿತ್ಯ ಪರಂಪರೆಯ ಪ್ರಧಾನ ಧಾರೆಯೊಳಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಅದರಿಂದ ಕನ್ನಡ ಸಾಹಿತ್ಯವು ಇನ್ನಷ್ಟು ಶ್ರೀಮಂತವಾಗುತ್ತದೆ. 

Nov 13, 2008

ನಿನ್ನಯ ಗುರುತು - ನನ್ನ ಕವನ

ನನ್ನ ಎದೆಯಲಿ ಮೂಡಿದ ನೆನೆಪು
ನಿನ್ನ ಒಲವಿನ ಗುರುತು ಕಣೇ
ಗಗನದಿ ಮಿನುಗುವ ಚುಕ್ಕಿಯು ಕೂಡ
ನಿನ್ನ ಕಂಗಳ ಪ್ರತಿಬಿಂಬ ಕಣೇ


ಅರಳಿದ ತಾವರೆ ಎಲೆಗಳ ಮೇಲೆ
ನಾಟ್ಯವಾಡುವ ಪುಟ್ಟ ಇಬ್ಬನಿಯೇ
ದುಂಬಿಯ ರಂಜಿಸಿ ಗಮಗಮ ಎನ್ನುವ
ಹೂವಿನ ಪರಿಮಳ ಮಕರಂದವು ನೀ


ನಿನ್ನ ಹೃದಯದಿ ನೆಲೆಸಿರುವ
ನನ್ನ ಮನಸ್ಸನ್ನು ನಾ ಕಂಡೆ ಕಣೇ
-ಮಾ.ಕೃ.ಮಂಜು

Nov 1, 2008

ಕನಸು - ನನ್ನ ಕವನ

ಕನಸು
ಕನಸಲ್ಲಿ ಬರುವವಳು
ಸದಾ ನನ್ನ ಕಾಡುತಿಹಳು
ಪ್ರೀತಿಯ ಕೊಟ್ಟವಳು
ಹೃದಯದಿ ನೆಲೆಸಿಹಳು
*********************
ನನ್ನವಳು ನನಗೆಲ್ಲಾ
ಪ್ರೀತಿಯ ತೊರೆದಿಲ್ಲ
ನೆನಪನ್ನು ಮರೆತಿಲ್ಲ
ಕನಸ್ಸಾಗಿ ಉಳಿದಳಲ್ಲ
**********************
ನನ್ನ ಮೇಲೆ ತೋರದಿರು ಕೋಪ
ಸಹಿಸಲಾರೇ ಅದರ ತಾಪ
ಬಿಟ್ಟುಬಿಡು ಈ ನಿನ್ನ ಮುಂಗೋಪ
ಮಾಡುತ್ತಿರುವೇ ಸದಾ ನಿನ್ನದೇ ಜಪ
**ಮಾ.ಕೃ.ಮಂಜು**

Oct 16, 2008

ಅಮೃತ ಮುತ್ತು - ನನ್ನ ಕವನ




ಅಮ್ಮನು ಕೊಟ್ಟ ಕೈ ತುತ್ತು
ಮರೆಯಲಾಗದ ಅಮೃತ ಮುತ್ತು
ಅಮ್ಮ ಮಗುವಿನ ಮೊದಲ ಸವಿ ನುಡಿಯು
ಅಮ್ಮ ಎನ್ನಲು ಅಮೃತ ಸವಿದಂತೆ

ಅವಳಾಡುವ ಪ್ರೀತಿಯ ಮಾತು
ಮಕ್ಕಳಿಗೆ ಸದಾ ಹರ್ಷದಾಯಕವು
ಸಾವಿಗೆ ಅಂಜದೇ ಕೊಟ್ಟಳು ಜನ್ಮ
ಈ ಋಣವ ತೀರಿಸಲು ಸಾಲದು ಈ ಜನ್ಮ

ದೇವರು ಕರುಣಿಸಿದ ಮಾತೆಯು
ಮಕ್ಕಳ ಪಾಲಿನ ದೇವತೆಯು
ಮಮತೆಯ ಕರುಣಾಮಯಿಯು
ನನ್ನ ಪಾಲಿನ ಸೌಭಾಗ್ಯ ದೇವತೆಯು
-ಮಾ.ಕೃ.ಮ*

Oct 5, 2008

ಅನಾಥ ಮಗುವಾದೆ ನಾನು - ಹೊಸ ಜೀವನ


ನನ್ನನ್ನು ಸದಾ ಕಾಡುತ್ತಿರುವ ಗೀತೆ.

[ಹೆಣ್ಣು]ಉಳ್. ಳ್ ಳ್ ಳ್... ಆಯಿ ಆಯಿ.....
ಮೇಲೆ ನೋಡೊ ಕಂದ
ಚಂದಮಾಮ ನಗ್ತಾನೆ
ಕಣ್ಣು ಮುಚ್ಚೊ ಕಂದ
ನಿದ್ದೆ ಗುಮ್ಮ ಬರ್ತಾನೆ
ಉಳ್.. ಳ್ ಳ್ ಳ್.... ಆಯಿ ಆಯಿ.....
[ಗಂಡು]ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿ ಹೋಯ್ತು
ಈ ಮನಸೇ ಕಲ್ಲಾಗಿ ಹೋಯ್ತು

ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೂ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನವಾದೆ ನಾ..
ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ..
ತಿಂದೋರು ಎಲೆಯ ಬಿಸಾಡೋ ಹಾಗೆ
ಹೆತ್ತೋಳು ನನ್ನ ಎಸೆದಾಯ್ತು
ಸತ್ತೋರ ಎಡೆಯ ಕಾಗೆಗೆ ಇರಿಸಿ
ಹೆತ್ತೋರ ಕೂಗಿ ಕರೆದಾಯ್ತು
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಕೇಳೋ ದೇವನೇ ೧
ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ
ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ?
ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?
ಭೂಮಿಯ ತುಂಬ ಅನಾಥರೆಂಬ
ಕೋಟ್ಯಾನುಕೋಟಿ ಕೂಗು ಇದೆ
ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ
ಎಂದೆಂದೂ ಅವರ ಶಾಪ ಇದೆ
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಹೇಳೋ ದೇವನೇ ೨
ಸಾಹಿತ್ಯ ಮತ್ತು ಸಂಗೀತ : ಹಂಸಲೇಖಗಾಯನ : ಕೆ .ಜೆ. ಯೇಸುದಾಸ್, ಚಂದ್ರಿಕಾ ಗುರುರಾಜ್

Sep 26, 2008

ನನ್ನ ಹಳ್ಳಿ - ನನ್ನ ಕವನ


ನನ್ನ ಹಳ್ಳಿ
ಹಳ್ಳಿಯ ಸೌಂದರ್ಯ ಸೊಬಗು
ಹಚ್ಚ ಹಸಿರಿನ ಕಾಂತಿಯ ಮೆರಗು
ದಟ್ಟವಾದ ಮರಗಳ ಸಾಲು
ಪ್ರಕೃತಿಯ ಉಳಿವಿಗೆ ಇದರ ಸವಾಲು

ತಣ್ಣನೆಯ ಗಾಳಿಯ ತಂಪು
ಸೊಗಸಾದ ಹಕ್ಕಿಯ ಧ್ವನಿಯ ಇಂಪು
ಸತ್ಯ ನಿಷ್ಟತೆಗೆ ಹೆಸರಾದ ಜನ
ಮೋಸವರಿಯದ ಮುಗ್ಧ ಜನ

ಅಜ್ಜಿಯು ಹೇಳುವ ಚೆಂದದ ಕಥೆ
ಮಾಸಿಹೋದ ನೆನಪುಗಳ ವ್ಯಥೆ
ಜನರಾಡುವ ಕಸ್ತೂರಿ ಕನ್ನಡ
ಕೇಳಲು ನಿಂತರೆ ಮಹಾದಾನಂದ

ಉಳಿದಿದೆ ಸಂಸ್ಕೃತಿಯ ಬೇರು
ಸರ್ವರೂ ಒಂದಾಗಿ ಬಾಳುವ ಊರು
ಹುಟ್ಟಿದರೆ ಹುಟ್ಟಬೇಕು ಹಳ್ಳಿಯಲಿ
ಸೌಂದರ್ಯ ಸಾರುವ ಶಾಂತಿಧಾಮದಲಿ
-* ಮಾ.ಕೃ.ಮ*

Sep 18, 2008

ಓ ನನ್ನ ಜೀವವೇ -ನನ್ನ ಕವನ


ಓ ನನ್ನ ಜೀವವೇ

ಹೃದಯದ ಪ್ರೀತಿಯ ಕಲರವ
ಎನೋ ಕಳೆದುಹೋದ ಅನುಭವ
ಎದೆಯಲಿ ಪ್ರೀತಿಯ ಕಂಪನ
ಸದಾ ಜಿನುಗುವ ಸಿಂಚನ

ಸದಾ ಕಾಡುತ್ತಿದೆ ನಿನ್ನ ನೆನಪು
ಮಾಸಿಹೋದ ನೆನಪುಗಳ ಇಂಪು
ನಾ ಹುಡುಕುತ್ತಿರುವೆ ಆನಂದ
ದುಃಖವಿರದ ಸುಖದಲ್ಲಿಂದ

ಮನವು ಹಕ್ಕಿಯಂತೆ ಹಾರುತಿರಲಿ
ಅಂತ್ಯವಿರದ ಪ್ರೀತಿಯ ದಿಗಂತದಲಿ
ನವಿಲಿನಂತೆ ನಲಿಯುತ್ತಿದೆ ಮನಸ್ಸು
ನನಸ್ಸಾಗುವುದೇ ನನ್ನ ಕನಸ್ಸು

ಸದಾ ಮಾಡುತ್ತಿರುವೆ ನಿನ್ನ ಮನನ
ನೀ ಕೃಪೆ ತೋರಿದರೆ ನಾ ಪಾವನ
ನಾ ಬೆದರುವೆ ನನ್ನ ಆತ್ಮಕ್ಕೆ
ಧೈರ್ಯ ಕಳೆದುಹೋದ ಈ ಕ್ಷಣಕ್ಕೆ

ಮನದಲ್ಲಿ ಹುಟ್ಟಿತು ಈ ಕವನ
ನಾ ಮಾಡಲೇನು ಇದರ ವಾಚನ
- *ಮಾ.ಕೃ.ಮಂಜು*