May 14, 2026

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ : ನಾಥ ಪರಂಪರೆಯ ದಿವ್ಯ ದರ್ಶನ

 ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ : ನಾಥ ಪರಂಪರೆಯ ದಿವ್ಯ ದರ್ಶನ

ನಮ್ಮ ನಾಡಿನ ಮಠಮಾನ್ಯಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ಸಮಸ್ತ ಸಮಾಜದ ಬದುಕನ್ನು ಬೆಳಗುವ ಚೇತನದ ಕಾರಂಜಿಗಳು. ಕೇವಲ ಮಂತ್ರ-ಘೋಷಗಳಿಗೆ ಸೀಮಿತವಾಗದೆ, ದೀನ-ದಲಿತರ ಮತ್ತು ಸಾಮಾನ್ಯ ಜನರ ಬದುಕಿನಲ್ಲಿ ಸ್ಥಿರತೆಯನ್ನು ತರುವ ಉದಾತ್ತ ಧ್ಯೇಯವನ್ನಿಟ್ಟುಕೊಂಡ ಮಠಗಳ ಸೇವೆ ಅನನ್ಯವಾದುದು. ಯಾವಾಗ ಮಠಗಳು ಸಮಾಜೋದ್ಧಾರವನ್ನೇ ಪರಮ ಧರ್ಮವೆಂದು ಸ್ವೀಕರಿಸುತ್ತವೆಯೋ, ಆಗ ನಾಡಿನ ಜನಜೀವನ ತಾನಾಗಿಯೇ ಪ್ರಗತಿಯ ಪಥದಲ್ಲಿ ಸಾಗುತ್ತದೆ.

ಕರ್ನಾಟಕವು ಇಂದು ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯದ ರಂಗದಲ್ಲಿ ಜಗತ್ತೇ ಮೆಚ್ಚುವಂತಹ ಸಾಧನೆ ಮಾಡಿದ್ದರೆ, ಅದರ ಹಿಂದೆ ಈ ಪವಿತ್ರ ಮಠಗಳ ನಿಸ್ವಾರ್ಥ ಶ್ರಮವಿದೆ. ಇಂತಹ ಜ್ಞಾನದಾಸೋಹದ ಪರಂಪರೆಯಲ್ಲಿ, ಅಜ್ಞಾನದ ಕತ್ತಲನ್ನು ತೊಲಗಿಸಿ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿರುವ ಮುಂಚೂಣಿ ಹೆಸರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ. ಹಗಲಿರುಳೆನ್ನದೆ ನಾಡಿನ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಈ ಮಠವು ನಮ್ಮೆಲ್ಲರ ಗೌರವದ ಸಂಕೇತವಾಗಿದೆ.

ಇಂದು ಕರ್ನಾಟಕದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಭೂಪಟದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಒಂದು ಅಪ್ರತಿಮ ದಿವ್ಯ ಚೇತನವಾಗಿ ಕಂಗೊಳಿಸುತ್ತಿದೆ. ಸೃಷ್ಟಿ ಸೌಂದರ್ಯದ ನಡುವೆ ಮೈದಳೆದಿರುವ ಈ ಪುಣ್ಯಕ್ಷೇತ್ರವು ಕೇವಲ ಒಂದು ಧಾರ್ಮಿಕ ಕೇಂದ್ರವಾಗಿ ಉಳಿಯದೆ, ಲಕ್ಷಾಂತರ ಜನರ ಬದುಕಿಗೆ ದಾರಿದೀಪವಾದ ಶೈಕ್ಷಣಿಕ, ಸಾಮಾಜಿಕ ಮತ್ತು ವೈದ್ಯಕೀಯ ಕ್ರಾಂತಿಯ ಕೇಂದ್ರಬಿಂದುವಾಗಿದೆ. ಹಸಿರು ಕಾನನದ ನಡುವೆ ಸ್ವಚ್ಛಂದವಾಗಿ ನರ್ತಿಸುವ ನವಿಲುಗಳು ಮತ್ತು ಮನಸ್ಸಿಗೆ ಮುದ ನೀಡುವ ಪ್ರಶಾಂತ ಪರಿಸರವನ್ನು ಹೊಂದಿರುವ ಈ ಕ್ಷೇತ್ರವು ನಿಸರ್ಗ ಮತ್ತು ಭಕ್ತಿಯ ಅಪೂರ್ವ ಸಂಗಮವಾಗಿದೆ. 

ಸುಮಾರು ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಈ ಕ್ಷೇತ್ರವನ್ನು 'ಸಿದ್ಧವನ' ಅಥವಾ 'ಗಜಾರಣ್ಯ' ಎಂದೂ ಕರೆಯಲಾಗುತ್ತಿತ್ತು. ಪೌರಾಣಿಕ ಹಿನ್ನೆಲೆಯ ಪ್ರಕಾರ, ಆದಿ ದೇವನಾದ ಶಿವನು ಘೋರ ತಪಸ್ಸನ್ನಾಚರಿಸಿದ ಪುಣ್ಯಭೂಮಿ ಇದಾಗಿದೆ. ಶಿವನು ತನ್ನ ತಪಸ್ಸಿನ ನಂತರ ಈ ಕ್ಷೇತ್ರವನ್ನು ನಾಥ ಸಂಪ್ರದಾಯದ ಸಿದ್ಧಯೋಗಿಗಳಿಗೆ ಹಸ್ತಾಂತರಿಸಿದನು ಎಂದು ನಂಬಲಾಗಿದೆ. ಈ ಕಾರಣದಿಂದಲೇ ಇದನ್ನು 'ಸಿದ್ಧ ಸಿಂಹಾಸನ' ಎಂದು ಕರೆಯಲಾಗುತ್ತದೆ. ಪರಶಿವನು ಸಿದ್ಧಯೋಗಿಗೆ ಈ ಪೀಠವನ್ನು ಅನುಗ್ರಹಿಸುವ ಸಂದರ್ಭದಲ್ಲಿ ಅದರ ಅಪ್ರತಿಮ ಮಹಿಮೆಯನ್ನು ಹೀಗೆ ವರ್ಣಿಸಿದ್ದಾನೆ: "ಈ ಪೀಠವು ನನ್ನ ಸ್ವಂತ ತೇಜಸ್ಸಿನ ಅಂಶಗಳಿಂದ ಮೈದೋರಿರುವುದರಿಂದ ಸಂಪೂರ್ಣವಾಗಿ ಅಗ್ನಿಮಯವಾಗಿದೆ. ಈ ದಿವ್ಯ ಪೀಠದ ಮೇಲೆ ವಿರಾಜಮಾನರಾದ ಗುರುಗಳನ್ನು ದರ್ಶನ ಮಾಡಿದ ಭಕ್ತರ ಜನ್ಮವು ಧನ್ಯವಾಗುತ್ತದೆ ಮತ್ತು ಅವರು ಸಕಲ ಪಾಪಗಳಿಂದ ವಿಮೋಚನೆ ಹೊಂದುತ್ತಾರೆ. ಆದರೆ, ಯೋಗನಿಷ್ಠೆ ಮತ್ತು ತಪಃಶಕ್ತಿ ಇಲ್ಲದವರು ಈ ಅಗ್ನಿಪೀಠವನ್ನು ಸ್ಪರ್ಶಿಸಿದರೆ ಕ್ಷಣಾರ್ಧದಲ್ಲಿ ಭಸ್ಮವಾಗುತ್ತಾರೆ."

ಹೀಗೆ ಜ್ವಾಲಾಪೀಠದಲ್ಲಿ ಆಸೀನರಾದ ಗುರುಗಳ ದರ್ಶನ ಪಡೆಯುವುದು, ಸಾಕ್ಷಾತ್ ಕೈಲಾಸದಲ್ಲಿ ಪರಶಿವನ ದರ್ಶನ ಪಡೆದಷ್ಟೇ ಪುಣ್ಯದಾಯಕ ಎಂಬುದು ಭಕ್ತರ ಗಾಢವಾದ ನಂಬಿಕೆಯಾಗಿದೆ. ಹಾಗೆಯೇ ತ್ರೇತಾಯುಗದಲ್ಲಿ ಶ್ರೀರಾಮನು ಸೀತೆಯನ್ನು ಹುಡುಕುತ್ತಾ ಈ ಕಡೆ ಬಂದಾಗ ಶಿವನು ಅವನಿಗೆ ದರ್ಶನ ನೀಡಿ ಆಶೀರ್ವದಿಸಿದನು ಎಂಬ ಉಲ್ಲೇಖಗಳು ಜನಪದ ಸಾಹಿತ್ಯದಲ್ಲಿಯೂ ಕಂಡುಬರುತ್ತವೆ. ಶ್ರೀ ಆದಿಚುಂಚನಗಿರಿ ಪೀಠದ ಗುರುಪರಂಪರೆಯು ಸುದೀರ್ಘವಾದುದು. ಇದುವರೆಗೆ ೭೨ ಮಂದಿ ಧರ್ಮಗುರುಗಳು ಪೀಠಾಧಿಪತಿಗಳಾಗಿದ್ದಾರೆ.

ಕ್ಷೇತ್ರದ ಹೆಸರಿನ ಹಿಂದೆ ಇರುವ 'ಚುಂಚ' ಮತ್ತು 'ಕಂಚ' ಎಂಬ ಇಬ್ಬರು ರಾಕ್ಷಸರ ಕಥೆಯು ಅತ್ಯಂತ ಪ್ರಸಿದ್ಧವಾದುದು. ಈ ರಾಕ್ಷಸರು ಈ ಭಾಗದ ಜನರಿಗೆ ಮತ್ತು ಋಷಿಮುನಿಗಳಿಗೆ ಅಪಾರವಾದ ತೊಂದರೆಯನ್ನು ನೀಡುತ್ತಿದ್ದರು. ಜನರ ಪ್ರಾರ್ಥನೆಗೆ ಒಲಿದ ಪರಶಿವನು ಭೈರವೇಶ್ವರನ ರೂಪದಲ್ಲಿ ಅವತರಿಸಿ ಈ ರಾಕ್ಷಸರನ್ನು ಸಂಹರಿಸಿದನು. ಇದರಲ್ಲಿ ಚುಂಚನು ವಾಸವಿದ್ದ ಬೆಟ್ಟವೇ 'ಆದಿಚುಂಚನಗಿರಿ' ಆಯಿತು. ಇಂದಿಗೂ ಕಾಲಭೈರವೇಶ್ವರನು ಈ ಕ್ಷೇತ್ರದ ರಕ್ಷಕನಾಗಿ, ಅಂದರೆ ಕ್ಷೇತ್ರಪಾಲಕನಾಗಿ ಭಕ್ತರನ್ನು ಕಾಯುತ್ತಿದ್ದಾನೆ ಎಂಬ ಅಚಲ ನಂಬಿಕೆಯಿದೆ. 

ಆದಿಚುಂಚನಗಿರಿಯನ್ನು 'ಪಂಚಲಿಂಗ ಕ್ಷೇತ್ರ' ಎಂದು ಕರೆಯಲಾಗುತ್ತದೆ. ಇಲ್ಲಿ ಶಿವನು ಐದು ವಿಭಿನ್ನ ರೂಪಗಳಲ್ಲಿ ನೆಲೆಸಿದ್ದಾನೆ. ಈ ಐದು ಲಿಂಗಗಳು ಭಕ್ತರ ವಿವಿಧ ಇಷ್ಟಾರ್ಥಗಳನ್ನು ಈಡೇರಿಸುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಆದಿಚುಂಚನಗಿರಿಯ ಪಂಚಲಿಂಗ ದೇವರುಗಳು.

೧. ಶ್ರೀ ಗಂಗಾಧರೇಶ್ವರ ಸ್ವಾಮಿ 

೨. ಶ್ರೀ ಚಂದ್ರಮೌಳೇಶ್ವರ ಸ್ವಾಮಿ 

೩. ಶ್ರೀ ಮಲ್ಲೇಶ್ವರ ಸ್ವಾಮಿ

೪. ಶ್ರೀ ಸಿದ್ಧೇಶ್ವರ ಸ್ವಾಮಿ

೫. ಶ್ರೀ ಕತ್ತಲೆ ಸೋಮೇಶ್ವರ ಸ್ವಾಮಿ 

ಬೆಟ್ಟದ ಶಿಖರ ಭಾಗವನ್ನು 'ಆಕಾಶ ಭೈರವ' ಎಂದು ಕರೆಯಲಾಗುತ್ತದೆ. ಇಲ್ಲಿನ 'ಬಿಂದು ಸರೋವರ'ವು ಅತ್ಯಂತ ಪವಿತ್ರವಾಗಿದ್ದು, ಇದು ಶಿವನ ಜಟೆಯಿಂದ ಇಳಿದ ಪವಿತ್ರ ನೀರಿನ ಹನಿಯಿಂದ ಸೃಷ್ಟಿಯಾದ ಕೆರೆ ಎಂದು ಹೇಳಲಾಗುತ್ತದೆ. ಭಕ್ತರು ಇಲ್ಲಿ ಸ್ನಾನ ಮಾಡುವುದರಿಂದ ಮಾನಸಿಕ ಅಶಾಂತಿ ದೂರವಾಗಿ ಮನಸ್ಸು ಶುದ್ಧವಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ. ಇತ್ತೀಚೆಗೆ ಮಠವು ಈ ಸರೋವರವನ್ನು ಆಗಮ ಶಾಸ್ತ್ರದ ಪ್ರಕಾರ ನವೀಕರಿಸಿದೆ. 

ನಾಥ ಸಂಪ್ರದಾಯದ ಗಟ್ಟಿಯಾದ ಬೀಡು  :

ಶ್ರೀ ಆದಿಚುಂಚನಗಿರಿ ಮಠವು ಭಾರತದ ಅತ್ಯಂತ ಪ್ರಾಚೀನ ಸಂಪ್ರದಾಯಗಳಲ್ಲಿ ಒಂದಾದ ‘ನಾಥ ಸಂಪ್ರದಾಯ' ಅಥವಾ 'ನಾಥ ಪಂಥ'ಕ್ಕೆ ಸೇರಿದೆ. ಈ ಪಂಥವು ಯೋಗ, ಧ್ಯಾನ ಮತ್ತು ನೈತಿಕ ಶಿಸ್ತಿನ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಆದಿನಾಥನಾದ ಶಿವನಿಂದ ಆರಂಭವಾದ ಈ ಪರಂಪರೆಯು ಮತ್ಸ್ಯೇಂದ್ರನಾಥ ಮತ್ತು ಗೋರಕ್ಷನಾಥರ ಮೂಲಕ ದಕ್ಷಿಣ ಭಾರತದಲ್ಲಿ ಗಟ್ಟಿಯಾಗಿ ಬೇರೂರಲು ಆದಿಚುಂಚನಗಿರಿ ಮುಖ್ಯ ಕಾರಣವಾಗಿದೆ. ಕರ್ನಾಟಕದ 'ಜೋಗಿ' ಕುಲದವರಿಗೆ ಇದು ಅತ್ಯುನ್ನತ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಪರಂಪರೆಯ ೭೧ನೇ ಪೀಠಾಧಿಪತಿಗಳಾಗಿ ಬಂದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಈ ಸಿದ್ಧ ಸಿಂಹಾಸನಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟರು. ಇವತ್ತು ಮಠವು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳ ಪ್ರಸಾರಕ್ಕೆ ಹೆಸರಾಗಿದೆ. ಮಠದ ಪ್ರತಿಯೊಂದು ಕಾರ್ಯವೂ 'ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರ' ಎಂಬ ತತ್ವದ ಮೇಲೆ ನಿಂತಿದೆ. 

ಯುಗದ ಸನಾತನ ಧರ್ಮ ಪ್ರವರ್ತಕ :  ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು

ಹಲವು ಮಹರ್ಷಿಗಳ ತಪೋಭೂಮಿಯಾಗಿ, ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಶ್ರೀ ಆದಿಚುಂಚನಗಿರಿ ಮಠದ ಕೀರ್ತಿ ಪತಾಕೆಯು ಜಗತ್ತಿನಾದ್ಯಂತ ಪಸರಿಸಿದ್ದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರ ದಿವ್ಯ ಕಾಲಘಟ್ಟದಲ್ಲಿ. ಮಹಾಸ್ವಾಮಿಗಳವರು ಈ ಸಿದ್ಧಸಿಂಹಾಸನವನ್ನು ಅಲಂಕರಿಸಿದ ಆ ಸುಮುಹೂರ್ತವು ನಾಡಿನ ಇತಿಹಾಸದಲ್ಲಿ ಒಂದು ಹೊಸ ಕ್ರಾಂತಿಗೆ ನಾಂದಿಯಾಯಿತು.

ಕೇವಲ ಮೂರೂವರೆ ದಶಕಗಳ ಅವಧಿಯಲ್ಲಿ, ಭೈರವನ ಭಕ್ತರಿಗಷ್ಟೇ ಸೀಮಿತವಾಗಿದ್ದ ಈ ಪುಣ್ಯಕ್ಷೇತ್ರವನ್ನು ಒಂದು ವಿಶ್ವಮಾನ್ಯ ಧರ್ಮಪೀಠವನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಶ್ರೀಗಳವರದ್ದು. 'ಅನ್ನ, ಅಕ್ಷರ ಮತ್ತು ಆರೋಗ್ಯ' ಎಂಬ ತ್ರಿವಿಧ ದಾಸೋಹಗಳ ಮೂಲಕ ಪ್ರತಿ ಮನೆಯ ಮನಗಳಲ್ಲಿ ದೀಪವಾದ ಅವರು, ಸಮಾಜದ ಸರ್ವತೋಮುಖ ಏಳಿಗೆಗಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡರು.

"ಪರರ ಹಿತಕ್ಕಾಗಿ ಶ್ರಮಿಸಿ ಭಗವಂತನನ್ನು ಪ್ರಸನ್ನಗೊಳಿಸುವುದೇ ಬದುಕಿನ ಸಾರ್ಥಕತೆ" ಎಂಬ ನಿಸ್ವಾರ್ಥ ತತ್ವಕ್ಕೆ ಅವರು ಜೀವಂತ ಉದಾಹರಣೆಯಾಗಿದ್ದರು. “ಸರ್ವೇ ಜನಾಃ ಸುಖಿನೋ ಭವಂತು” ಎಂಬ ವಿಶಾಲ ಭಾವನೆಯೊಂದಿಗೆ, ಅಹೋರಾತ್ರಿ ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾಯೋಗಿ ಅವರು. ತಾವು ಕಂಡ ಲೋಕಕಲ್ಯಾಣದ ಕನಸನ್ನು ನನಸು ಮಾಡುವ ಮೂಲಕ, ನಾಡಿನ ಜನತೆಯ ಪಾಲಿಗೆ ಅಕ್ಷಯ ಚೇತನವಾಗಿ ಇಂದಿಗೂ ನೆಲೆಸಿದ್ದಾರೆ.

ಶ್ರೀಮಠದ ಇತಿಹಾಸದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಅವಧಿಯನ್ನು 'ಸುವರ್ಣ ಯುಗ' ಎಂದು ಕರೆಯಬಹುದು. ೧೯೪೫ರ ಜನವರಿ ೧೮ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಬಾನಂದೂರಿನಲ್ಲಿ ಕೃಷಿಕ ಕುಟುಂಬದ ಚಿಕ್ಕಲಿಂಗೇಗೌಡ ಮತ್ತು ಬೋರಮ್ಮ ದಂಪತಿಗಳ ಪುತ್ರನಾಗಿ ಗಂಗಾಧರಯ್ಯ (ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು) ಜನಿಸಿದರು. ಬಾಲ್ಯದಿಂದಲೇ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದ ಇವರು, ೧೯೬೪ರಲ್ಲಿ ತಮ್ಮ ೧೯ನೇ ವಯಸ್ಸಿನಲ್ಲಿ ೭೦ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ರಮಾನಂದನಾಥ ಮಹಾಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಪಡೆದರು. 

೧೯೭೪ರ ಸೆಪ್ಟೆಂಬರ್ ೨೪ರಂದು ಇವರು ೭೧ನೇ ಪೀಠಾಧಿಪತಿಗಳಾಗಿ ಪೀಠಾರೋಹಣ ಮಾಡಿದಾಗ, ಮಠವು ಕೇವಲ ಒಂದು ಸಣ್ಣ ಧಾರ್ಮಿಕ ಕೇಂದ್ರವಾಗಿತ್ತು. ಆದರೆ ಸ್ವಾಮೀಜಿಯವರ ದೂರದೃಷ್ಟಿ ಮತ್ತು ಅವಿರತ ಶ್ರಮದಿಂದ ಅದು ಕೇವಲ ಮೂರುವರೆ ದಶಕಗಳಲ್ಲಿ ಒಂದು ಬೃಹತ್ ಸಾಮಾಜಿಕ ಸಾಮ್ರಾಜ್ಯವಾಗಿ ಬೆಳೆಯಿತು. 

ಸಂಪ್ರದಾಯದಂತೆ ಸಂನ್ಯಾಸ ಎಂದರೆ ಕೇವಲ ವೈಯಕ್ತಿಕ ಮುಕ್ತಿಯ ಮಾರ್ಗ ಎಂಬ ಭಾವನೆ ಇತ್ತು. ಆದರೆ, ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಸಂನ್ಯಾಸ ಧರ್ಮಕ್ಕೆ ಸಮಾಜ ಧರ್ಮ, ರಾಷ್ಟ್ರ ಧರ್ಮ ಮತ್ತು ಕಾಲ ಧರ್ಮಗಳನ್ನು ಮೇಳವಿಸಿ ಹೊಸ ಭಾಷ್ಯ ಬರೆದರು. ಅವರ ವ್ಯಕ್ತಿತ್ವವು ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಇಡೀ ಪ್ರಪಂಚವೇ ಅವರತ್ತ ಆಯಸ್ಕಾಂತದಂತೆ ಆಕರ್ಷಿತವಾಯಿತು.

ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಮೊದಲು ದೇವಾಲಯಗಳನ್ನು ಕಟ್ಟಲು ಮುಂದಾಗಲಿಲ್ಲ; ಬದಲಾಗಿ ಹಳ್ಳಿ ಹಳ್ಳಿಗಳಲ್ಲಿ ಜ್ಞಾನ ದೇಗುಲಗಳನ್ನು ನಿರ್ಮಿಸಿದರು. "ಸಮಾಜದ ನಿಜವಾದ ಉನ್ನತಿ ಅಡಗಿರುವುದು ಸುಜ್ಞಾನದಲ್ಲಿ" ಎಂಬ ಸತ್ಯವನ್ನು ಅರಿತಿದ್ದ ಶ್ರೀಗಳು, ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಕ್ರಾಂತಿಯನ್ನೇ ಮಾಡಿದರು. ಗ್ರಾಮೀಣ ಭಾಗದ ಮಕ್ಕಳು ಅಕ್ಷರ ವಂಚಿತರಾಗಬಾರದೆಂಬ ಕಳಕಳಿಯಿಂದ ನಾಡಿನಾದ್ಯಂತ ೪೭೫ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಅಸಂಖ್ಯಾತ ಬಡ ಮಕ್ಕಳ ಭವಿಷ್ಯದ ಕನಸಿಗೆ ರೆಕ್ಕೆಗಳನ್ನು ನೀಡಿದರು.

ಇಂದು ಲಕ್ಷಾಂತರ ವಿದ್ಯಾರ್ಥಿಗಳು ಶ್ರೀಮಠದ ನೆರಳಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಅವರ ಅಚಲ ಶ್ರದ್ಧೆಗೆ ಸಾಕ್ಷಿಯಾಗಿದೆ. ಆಧ್ಯಾತ್ಮಿಕತೆಯ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿದ ಅವರು, ಗ್ರಾಮೀಣ ಯುವಕರು ಸ್ವಾವಲಂಬಿಗಳಾಗಲು ವೃತ್ತಿಪರ ಶಿಕ್ಷಣಕ್ಕೂ ಒತ್ತು ನೀಡಿದರು. ಅಜ್ಞಾನದ ಅಂಧಕಾರವನ್ನು ಸರಿಸಿ, ಜ್ಞಾನದ ಜ್ಯೋತಿಯನ್ನು ಬೆಳಗುವ ಮೂಲಕ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು 'ನ ಭೂತೋ ನ ಭವಿಷ್ಯತಿ' ಎಂಬಂತೆ ಜ್ಞಾನದ ಮಹಾಮನೆಯನ್ನಾಗಿ ರೂಪಿಸಿದ ಮಹಾಚೇತನ ಶ್ರೀಗಳವರು.

ಗ್ರಾಮೀಣ ಭಾಗದ ಬಡ ಜನರಿಗೆ ಶಿಕ್ಷಣವೇ ಬದುಕಿನ ಅಸ್ತ್ರ ಎಂದು ನಂಬಿದ್ದ ಮಹಾಸ್ವಾಮೀಜಿಯವರು ೧೯೭೩ರಲ್ಲಿ ‘ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್' ಸ್ಥಾಪಿಸಿದರು. ಇಂದು ಈ ಟ್ರಸ್ಟ್ ಅಡಿಯಲ್ಲಿ ಶಿಶುವಿಹಾರದಿಂದ ಹಿಡಿದು ಮೆಡಿಕಲ್, ಇಂಜಿನಿಯರಿಂಗ್‌ವರೆಗೆ ಸುಮಾರು ೫೭೫ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳಲ್ಲಿ ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಅದರಲ್ಲಿ ಶೇಕಡಾ ೮೫ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ನಿಲಯಗಳನ್ನು ಸ್ಥಾಪಿಸಿರುವುದು ಮಠದ ದೊಡ್ಡ ಉದಾತ್ತ ಕಾರ್ಯವಾಗಿದೆ.

ಗ್ರಾಮೀಣ ಜನರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಸ್ವಾಮೀಜಿಯವರು ಹಾಸನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ಬಳಿ ಬೃಹತ್ ಆಸ್ಪತ್ರೆಯನ್ನು ಸ್ಥಾಪಿಸಿದರು. ಈ ‘ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ'ವು ಇಂದು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದು, ಪ್ರತಿದಿನ ಸಾವಿರಾರು ಬಡ ರೋಗಿಗಳಿಗೆ ಉಚಿತ ಮತ್ತು ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿದೆ. ಇದಲ್ಲದೆ, ಬೆಂಗಳೂರಿನಲ್ಲಿ ‘ಬಿ.ಜಿ.ಎಸ್ ಗ್ಲೋಬಲ್ ಆಸ್ಪತ್ರೆ'ಯನ್ನು ಸ್ಥಾಪಿಸಿ ಮಲ್ಟಿ-ಸ್ಪೆಷಾಲಿಟಿ ಚಿಕಿತ್ಸೆಯನ್ನು ಜನಸಾಮಾನ್ಯರಿಗೆ ದೊರೆಯುವಂತೆ ಮಾಡಿದರು. 

ಪರಮಪೂಜ್ಯರು ಶ್ರೀಮಠದ ಮೂಲಕ ಕೇವಲ ಒಂದು ಸಮಾಜವನ್ನಷ್ಟೇ ಉದ್ಧರಿಸಿದವರಲ್ಲ. ಯಾವ ಹಿಂದುಳಿದ ಸಮಾಜಕ್ಕೆ ಸಂಘಟಿತ ಶಕ್ತಿ ಇರಲಿಲ್ಲವೋ, ಆಧುನಿಕ ಜ್ಞಾನದ ಅರಿವೂ ಇರಲಿಲ್ಲವೋ, ಯಾವ ಸಮಾಜ ಸಾಂಸ್ಕೃತಿಕವಾಗಿ ಪರಾವಲಂಬಿಯಾಗಿತ್ತೋ ಅಂತಹ ಸಮಾಜದ ಜನಮಾನಸಕ್ಕೆ ಚೇತನ ಶಕ್ತಿಯಾದವರು. ಮಾನವ ಕುಲದ ಕಲ್ಯಾಣಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟು ಜಡವಾಗಿದ್ದ ಸಮಾಜವನ್ನು ಜಾಗೃತಗೊಳಿಸಿದ್ದು ಮಾತ್ರವಲ್ಲ, ಸಮಷ್ಟಿಯ ಉದ್ದಾರ ಮಾಡಿದ ಮನುಕುಲೋದ್ಧಾರಕರೆನಿಸಿದ್ದರು. ಸರ್ವ ಜನಾಂಗದವರನ್ನೂ, ಸರ್ವ ಧರ್ಮೀಯರನ್ನೂ ಸಮಾನವಾಗಿ ಪ್ರೀತಿಸಿದ ಹೆಗ್ಗಳಿಕೆ ಮಹಾಸ್ವಾಮೀಜಿಯವರಿಗೆ ಸಲ್ಲುತ್ತದೆ. ಸಂಸ್ಕೃತ ಭಾಷೆ ಒಂದು ವರ್ಗಕ್ಕಷ್ಟೇ ಸೀಮಿತವಾಗದೆ ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಮಕ್ಕಳೂ ಸಂಸ್ಕೃತವನ್ನು ಅಭ್ಯಸಿಸಲು ಅನುಕೂಲ ಕಲ್ಪಿಸಿಕೊಡಬೇಕೆಂದು ಸಂಕಲ್ಪಿಸಿ ಶ್ರೀಕ್ಷೇತ್ರದಲ್ಲಿ ಕಾಲಭೈರವೇಶ್ವರ ಸಂಸ್ಕೃತ ವೇದ-ಆಗಮ  ಮಹಾವಿದ್ಯಾಲಯವನ್ನು, ಶಾಖಾಮಠಗಳಿರುವೆಡೆಯಲ್ಲೆಲ್ಲಾ ಸಂಸ್ಕೃತ ಪಾಠಶಾಲೆಗಳನ್ನೂ ತೆರೆದು, ಜಾತಿ. ಮತಭೇದವಿಲ್ಲದೆ ಅಲ್ಲಿ ಎಲ್ಲರೂ ಅಧ್ಯಯನ ಮಾಡುವಂತೆ ಅವಕಾಶ ಕಲ್ಪಿಸಿದ್ದಾರೆ. ವಿದ್ಯೆಯನ್ನು ನೀಡುವುದರಲ್ಲಿ ಯಾವತ್ತೂ ಜಾತಿ, ವರ್ಗ, ವರ್ಣಗಳ ಭೇದಭಾವ ಶ್ರೀಮಠಕ್ಕೆ ಅಂಟದಂತೆ ನೋಡಿಕೊಂಡಿದ್ದಾರೆ.

ಆಧುನಿಕ ನಾಗರಿಕತೆಯ ಅಬ್ಬರದಲ್ಲಿ ಉಪೇಕ್ಷೆಗೆ ಒಳಗಾಗಿ ನಶಿಸಿ ಹೋಗುತ್ತಿದ್ದ ಜನಪದ ಸಂಸ್ಕೃತಿಯನ್ನು ಸಂರಕ್ಷಿಸಿ ಅದರ ಪುನರುತ್ಥಾನಕ್ಕಾಗಿ ಸಂಕಲ್ಪಿಸಿದವರು ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರು. ಜನಪದ ಕಲೆ ಸಂಸ್ಕೃತಿಯ ಪುನರುತ್ಥಾನಕ್ಕೆ ಪೂಜ್ಯರು ನೀಡಿದ ನೆರವು ಅನನ್ಯವಾದುದು. ಪರಮಪೂಜ್ಯ ಗುರೂಜಿಯವರು ಜನಪದದ ಮೂಲಬೇರುಗಳನ್ನು. ಜನಪದ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಸಂರಕ್ಷಿಸುವ ಸಂಕಲ್ಪವನ್ನೊಂದಿ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ದಶಕಗಳ ಹಿಂದೆಯೇ ಮುಂದಡಿಯಿಟ್ಟವರು. ಜನಪದ ಕಲೆ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಹಾಗೂ ಜನಪದ ಕಲಾವಿದರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಕಳೆದ ನಲವತ್ತು ವರ್ಷಗಳಿಂದಲೂ ಶ್ರೀಕ್ಷೇತ್ರ ಆದಿಚುಂಚನಗಿರಿ ಯಲ್ಲಿ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ಆಯೋಜಿಸಿ. ತನ್ಮೂಲಕ ಜನಪದ ಹಾಗೂ ಜನಪದರ ಬದುಕನ್ನು ಸುವ್ಯವಸ್ಥಿತಗೊಳಿಸುವಲ್ಲಿ ಅಪೂರ್ವ ಕೊಡುಗೆಯನ್ನು ನೀಡಿರುವುದು ಸ್ಮರಣಾರ್ಹ. ಶ್ರೀಗಳವರು ಜನಪದರಿಗಾಗಿ, ಜನಪದ ಕಲೆಗಳಿಗಾಗಿ ತಮ್ಮ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ದಿನಗಳನ್ನು ಮೀಸಲಿರಿಸಿ ಪಟ್ಟಾಭಿಷೇಕ ಮಹೋತ್ಸವವನ್ನು ಜನಪದ ಕಲಾಮೇಳವನ್ನಾಗಿ ಪರಿವರ್ತಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಗೌರವಿಸುವು ದರಿಂದ ನಾಡಿನ ಪ್ರಗತಿಗೆ ನೆರವು ನೀಡಿದಂತಾಗುತ್ತದೆಂದು ನಂಬಿದ್ದ ಸ್ವಾಮಿಗಳವರು ಪ್ರತಿವರ್ಷ ಐದು ಮಂದಿ ಗಣ್ಯರಿಗೆ ‘ಚುಂಚಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದರು. ಇಂದಿಗೂ ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಪ್ರತಿವರ್ಷ ನಡೆಯುವ ಜಾನಪದ ಕಲಾಮೇಳದಲ್ಲಿ ರಾಜ್ಯಾದ್ಯಂತ ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜಾನಪದ ಕಲಾವಿದರು ಮೇಳೈಸಿ ಜಾನಪದರ ಕಲಾಜಾತ್ರೆಯನ್ನೇ ನಡೆಸುತ್ತಿರುವುದನ್ನು ಕಾಣಬಹುದು.

"ಹಸಿದವನಿಗೆ ಅನ್ನ ನೀಡದ ಆಧ್ಯಾತ್ಮಕ್ಕೆ ಬೆಲೆಯಿಲ್ಲ" ಎಂದು ಸ್ವಾಮೀಜಿ ಹೇಳುತ್ತಿದ್ದರು. ಆದಿಚುಂಚನಗಿರಿ ಕ್ಷೇತ್ರದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಮಠದ ಯಾವುದೇ ಶಾಖೆಗೆ ಹೋದರೂ ಅಲ್ಲಿ ಭಕ್ತರಿಗೆ ಅನ್ನ ಪ್ರಸಾದ ಸಿದ್ಧವಿರುತ್ತದೆ. ಈ ನಿರಂತರ ಅನ್ನದಾನದ ಕಾರಣಕ್ಕಾಗಿಯೇ ಈ ಮಠವನ್ನು ಜನ ಪ್ರೀತಿಯಿಂದ 'ಅನ್ನದಾನಿ ಮಠ' ಎಂದು ಕರೆಯುತ್ತಾರೆ. 

ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಕೇವಲ ಮಾನವ ಕುಲದ ಸೇವೆಯನ್ನಷ್ಟೇ ಮಾಡಲಿಲ್ಲ, ಪ್ರಕೃತಿಯ ಮೇಲಿನ ಅವರ ಪ್ರೀತಿಯೂ ಅಪಾರವಾಗಿತ್ತು. ನಾಡಿನಲ್ಲಿ ಸತತವಾಗಿ ಉಂಟಾಗುತ್ತಿದ್ದ ಬರಗಾಲವನ್ನು ನೋಡಿ ಅವರು 'ವನ ಸಂವರ್ಧನೆ' ಎಂಬ ಅಭಿಯಾನವನ್ನು ಕೈಗೆತ್ತಿಕೊಂಡರು. ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಸುಮಾರು ೫ ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ಬೃಹತ್ ಯೋಜನೆಯನ್ನು ಅವರು ಸಾಕಾರಗೊಳಿಸಿದರು. ಬೆಂಗಳೂರಿನ ಸುತ್ತಮುತ್ತಲಿನ ಹಸಿರು ಹೊದಿಕೆಯನ್ನು ಹೆಚ್ಚಿಸಲು ಇವರು ಕಾರಣಕರ್ತರಾದರು. ಇದಕ್ಕಾಗಿ ಅವರಿಗೆ ಕರ್ನಾಟಕ ಸರ್ಕಾರವು 'ಪರಿಸರ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅಲ್ಲದೆ, 'ಜಲವರ್ಧನೆ' ಯೋಜನೆಯ ಮೂಲಕ ಮಂಡ್ಯ ಮತ್ತು ಸುತ್ತಮುತ್ತಲ ಜಿಲ್ಲೆಗಳ ಅನೇಕ ಕೆರೆಗಳನ್ನು ಹೂಳೆತ್ತಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಶ್ರಮಿಸಿದರು. 

ನಾಥ ಪರಂಪರೆಯಲ್ಲಿ ಗೋವಿಗೆ ಪವಿತ್ರ ಸ್ಥಾನವಿದೆ. ಗೋವುಗಳನ್ನು ಕಸಾಯಿಖಾನೆಗೆ ಹೋಗದಂತೆ ತಡೆಯಲು ಸ್ವಾಮೀಜಿಯವರು ರಾಜ್ಯದ ಹಲವೆಡೆ ಬೃಹತ್ ಗೋಶಾಲೆಗಳನ್ನು ಸ್ಥಾಪಿಸಿದರು. ಮಂಡ್ಯದ ಸಾತನೂರು, ನಾಗಮಂಗಲ, ಚಿತ್ರದುರ್ಗ ಮತ್ತು ಬೆಂಗಳೂರಿನ ಕುಂಬಳಗೋಡು ಬಳಿಯ ಕೆಂಚನಹಳ್ಳಿ ಶಾಖಾ ಮಠಗಳಲ್ಲಿ ಸುಸಜ್ಜಿತ ಗೋಶಾಲೆಗಳಿವೆ. ಇಲ್ಲಿ ಸಾವಿರಾರು ದೇಸೀ ತಳಿಯ ಹಸುಗಳನ್ನು ಅತ್ಯಂತ ಜಾಗರೂಕತೆಯಿಂದ ಸಲಹಲಾಗುತ್ತಿದೆ.

ಸ್ವಾಮೀಜಿಯವರು ಅಂಧ ಮಕ್ಕಳ ಬದುಕಿನಲ್ಲಿ ಬೆಳಕು ತರಲು ರಾಮನಗರ ತಾಲ್ಲೂಕಿನ ಜಾನಪದ ಲೋಕದ ಸಮೀಪ 'ಅಂಧ ಮಕ್ಕಳ ಶಾಲೆ'ಯನ್ನು ಆರಂಭಿಸಿದರು. ಇಂದು ಇಲ್ಲಿ ನೂರಾರು ಅಂಧ ಮಕ್ಕಳು ಉಚಿತವಾಗಿ ಶಿಕ್ಷಣ ಮತ್ತು ಸಂಗೀತ ಕಲಿಯುತ್ತಿದ್ದಾರೆ. ಅಲ್ಲದೆ, ವಯಸ್ಸಾದವರಿಗಾಗಿ ವೃದ್ಧಾಶ್ರಮಗಳನ್ನು ಮತ್ತು ನಿರ್ಗತಿಕ ಮಹಿಳೆಯರಿಗಾಗಿ ಆಶ್ರಮಗಳನ್ನು ಸ್ಥಾಪಿಸಿ ಸಮಾಜದ ನೊಂದ ವರ್ಗದವರಿಗೆ ನೆರವಾದರು. ಜಾತಿ ರಹಿತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ 'ಸಾಮೂಹಿಕ ವಿವಾಹ'ಗಳನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿ ಬಡ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದರು. 

ಶ್ರೀಮಠವು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಭಾರತದ ಇತರ ಭಾಗಗಳಲ್ಲಿಯೂ ತನ್ನ ಶಾಖೆಗಳನ್ನು ಹೊಂದಿದೆ. ಉತ್ತರ ಭಾರತಕ್ಕೆ ಹೋಗುವ ಕನ್ನಡಿಗರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕಾಶಿ (ವಾರಣಾಸಿ) ಮತ್ತು ದೆಹಲಿಯಲ್ಲಿ ಶಾಖಾ ಮಠಗಳನ್ನು ಸ್ಥಾಪಿಸಲಾಗಿದೆ. ಕಾಶಿಯ ಮಣಿಕರ್ಣಿಕಾ ಘಾಟ್ ಬಳಿ ಇರುವ ಶ್ರೀಮಠದ ಶಾಖೆಯು ಅಲ್ಲಿಗೆ ಹೋಗುವ ಭಕ್ತರಿಗೆ ಆಶ್ರಯ ತಾಣವಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಆಧ್ಯಾತ್ಮಿಕ ಸಂಸ್ಕಾರ ನೀಡಲು ಅಮೆರಿಕದ ಮಿಚಿಗನ್ ಮತ್ತು ಜರ್ಮನಿಯ ಬರ್ಲಿನ್‌ನಲ್ಲಿ ಮಠದ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 'ಆದಿಚುಂಚನಗಿರಿ ಕಲ್ಚರಲ್ ಅಂಡ್ ಸ್ಪಿರಿಚುಯಲ್ ಫೌಂಡೇಶನ್' ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಮತ್ತು ಸಂಸ್ಕೃತಿಯ ಪ್ರಸಾರವಾಗುತ್ತಿದೆ.

ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಈ ಲೋಕೋತ್ತರ ಸೇವೆಯನ್ನು ಪರಿಗಣಿಸಿ ಅನೇಕ ಗೌರವಗಳು ಅವರನ್ನು ಹುಡುಕಿಕೊಂಡು ಬಂದವು. ೨೦೧೦ರಲ್ಲಿ ಭಾರತ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಭೂಷಣ' ನೀಡಿ ಗೌರವಿಸಿತು.

೨೦೧೩ರ ಜನವರಿ ೧೩ರಂದು ಈ ಮಹಾನ್ ಚೇತನವು ಕಾಲಭೈರವೇಶ್ವರನಲ್ಲಿ ಲೀನವಾದಾಗ ಇಡೀ ಕರ್ನಾಟಕವೇ ಕಣ್ಣೀರು ಹಾಕಿತು. ಅವರು ಭೌತಿಕವಾಗಿ ದೂರವಾದರೂ, ಅವರು ಹಾಕಿಕೊಟ್ಟ ದಾರಿ ಮತ್ತು ಅವರು ಸ್ಥಾಪಿಸಿದ ಸಂಸ್ಥೆಗಳು ಲಕ್ಷಾಂತರ ಜೀವಗಳಿಗೆ ಇಂದಿಗೂ ಆಧಾರವಾಗಿವೆ.



ಜ್ಞಾನ ಮತ್ತು ವಿಜ್ಞಾನದ ಸಮನ್ವಯಕಾರ : ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು

ಭೈರವೈಕ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ನಂತರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಿದ್ಧ ಸಿಂಹಾಸನವನ್ನು ಅಲಂಕರಿಸಿದವರು ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು. ಇವರ ಆಗಮನವು ಮಠಕ್ಕೆ ಒಂದು ಹೊಸ ತಾಂತ್ರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ನೀಡಿದೆ. ೧೯೬೯ರ ಜುಲೈ ೨೦ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೀರನಹಳ್ಳಿಯಲ್ಲಿ ಜನಿಸಿದ ಇವರು (ಪೂರ್ವಾಶ್ರಮದ ಹೆಸರು ನಾಗರಾಜು), ಅತ್ಯಂತ ಬಡ ಕೃಷಿಕ ಕುಟುಂಬದಿಂದ ಬಂದವರು. ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಶೈಕ್ಷಣಿಕ ಹಿನ್ನೆಲೆಯು ಅತ್ಯಂತ ಆಕರ್ಷಕವಾಗಿದೆ. ಇವರು ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಐ.ಐ.ಟಿ ಮದ್ರಾಸ್‌ನಲ್ಲಿ ಸ್ಟ್ರಕ್ಚರಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ, ಅದೂ ಚಿನ್ನದ ಪದಕದೊಂದಿಗೆ. ಸನ್ಯಾಸ ಸ್ವೀಕರಿಸುವ ಮುನ್ನ ಇವರು ಪುಣೆಯ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಲೌಕಿಕ ಯಶಸ್ಸು ಅವರನ್ನು ತೃಪ್ತಿಪಡಿಸಲಿಲ್ಲ. ರಾಮನಗರದ ಅಂಧ ಮಕ್ಕಳ ಶಾಲೆಯಲ್ಲಿ ಅವರು ಮಾಡಿದ ಸ್ವಯಂಸೇವಕ ಕೆಲಸವು ಅವರ ಜೀವನದ ದಾರಿಯನ್ನು ಬದಲಿಸಿತು. 

೧೯೯೮ರಲ್ಲಿ ಅವರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಪಡೆದರು. ಆಧುನಿಕ ವಿಜ್ಞಾನದ ಅರಿವು ಮತ್ತು ವೇದೋಪನಿಷತ್ತುಗಳ ಜ್ಞಾನದ ಅಪರೂಪದ ಸಂಗಮ ಇವರಲ್ಲಿ ಕಾಣಬಹುದು. ಇವರು ಸಂಸ್ಕೃತದಲ್ಲಿಯೂ ಪಾಂಡಿತ್ಯ ಹೊಂದಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯದಿಂದ 'ನಾಥ ಪಂಥ'ದ ಕುರಿತಾದ ಅಧ್ಯಯನಕ್ಕೆ ಪಿ.ಎಚ್.ಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 

ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕನಸಾಗಿದ್ದ 'ಆದಿಚುಂಚನಗಿರಿ ವಿಶ್ವವಿದ್ಯಾಲಯ'ವನ್ನು ೨೦೧೮ರಲ್ಲಿ ಸಾಕಾರಗೊಳಿಸಿದ್ದು, ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಅತಿದೊಡ್ಡ ಸಾಧನೆ. ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದಲ್ಲಿರುವ ಈ ವಿಶ್ವವಿದ್ಯಾಲಯವು ಇಂದು ಸಂಶೋಧನೆ ಮತ್ತು ಉನ್ನತ ಶಿಕ್ಷಣದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ. ಈ ವಿಶ್ವವಿದ್ಯಾಲಯದ ಅಡಿಯಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಫಾರ್ಮಸಿ ಮತ್ತು ನರ್ಸಿಂಗ್ ವಿಭಾಗಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿವೆ. ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳು  ಬಹುಶಿಸ್ತೀಯ ಸಂಶೋಧನಾ ಕೇಂದ್ರಗಳಾಗಿದ್ದು, ಇಲ್ಲಿ ಆಧುನಿಕ ವಿಜ್ಞಾನ ಮತ್ತು ಸಾಂಪ್ರದಾಯಿಕ ಜ್ಞಾನದ ಕುರಿತು ಅಧ್ಯಯನ ನಡೆಯುತ್ತಿದೆ. ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಸ್ಥಾಪಿಸಲಾದ ಉಚಿತ ವಸತಿ ಶಾಲೆಯವನ್ನು ಶ್ರೀಮಠದ ವತಿಯಿಂದ ಸ್ಥಾಪಿಸಲಾಗಿದ್ದು, ಇಲ್ಲಿ ಅತ್ಯಂತ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಲಾಗುತ್ತಿದೆ. 

ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಕೇವಲ ಮಠದ ಆಡಳಿತಕ್ಕೆ ಸೀಮಿತವಾಗದೆ, ಸ್ವತಃ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಚಿಕ್ಕಬಳ್ಳಾಪುರದ ಶಾಖಾ ಮಠದಲ್ಲಿ ಅವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೇವಲ ತಾಂತ್ರಿಕ ವಿಷಯಗಳನ್ನಷ್ಟೇ ಅಲ್ಲದೆ, ನೈತಿಕ ಮೌಲ್ಯ ಮತ್ತು ಜೀವನ ನಿರ್ವಹಣೆಯ ಕುರಿತು ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಭಾಷಣಗಳು ವೈಜ್ಞಾನಿಕ ತರ್ಕದಿಂದ ಕೂಡಿರುವುದರಿಂದ ಯುವಜನತೆಯನ್ನು ಬಹಳವಾಗಿ ಆಕರ್ಷಿಸುತ್ತವೆ. ಆಕ್ಸ್ಫರ್ಡ್, ಕೇಂಬ್ರಿಡ್ಜ್ ಮತ್ತು ಪ್ರಿನ್ಸ್ಟನ್‌ನಂತಹ ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ ಅವರು ನೀಡಿರುವ ಉಪನ್ಯಾಸಗಳು ಮಠದ ಕೀರ್ತಿಯನ್ನು ವಿಶ್ವವ್ಯಾಪಿ ಮಾಡಿದೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಶ್ರೀಮಠದ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದ್ದಾರೆ. ‘ಡಿಜಿಮೆಡ್' ನಂತಹ ನವೀನ ಕಾರ್ಯಕ್ರಮಗಳ ಮೂಲಕ ವೈದ್ಯಕೀಯ ಶಿಕ್ಷಣದಲ್ಲಿ ಡಿಜಿಟಲ್ ಉಪಕರಣಗಳ ಬಳಕೆಯನ್ನು ಹೆಚ್ಚಿಸಿದ್ದಾರೆ. ಇದಲ್ಲದೆ, ಮಠದ ಆವರಣದಲ್ಲಿ ಪರಿಸರ ಸ್ನೇಹಿ ಇಂಧನ ವ್ಯವಸ್ಥೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕೆಂಬ ಉದ್ದೇಶದಿಂದ ಮಠವು 'ಮಹಿಳಾ ಜಾಗೃತಿ ಶಿಬಿರ'ಗಳನ್ನು ರಾಜ್ಯದಾದ್ಯಂತ ಆಯೋಜಿಸುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯ ಮತ್ತು ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಅವರ ಉನ್ನತ ಶಿಕ್ಷಣಕ್ಕೆ ಮಠವು ಪ್ರೋತ್ಸಾಹ ನೀಡುತ್ತಿದೆ. 

ಆದಿಚುಂಚನಗಿರಿಯ ಮತ್ತೊಂದು ವಿಶೇಷತೆಯೆಂದರೆ ಅದು ನವಿಲುಗಳ ಸಂರಕ್ಷಿತ ಪ್ರದೇಶ. ಮಠದ ಆವರಣದಲ್ಲಿ ನವಿಲುಗಳು ಭಯವಿಲ್ಲದೆ ಓಡಾಡುತ್ತವೆ. "ಮಯೂರವನ" ಎಂದು ಕರೆಯಲ್ಪಡುವ ಈ ಪ್ರದೇಶವು ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗದಂತಿದೆ. ಪ್ರತಿದಿನ ಬೆಳಿಗ್ಗೆ ಮಠದ ಸುತ್ತಮುತ್ತ ಕೇಳಿಬರುವ ನವಿಲುಗಳ ಕೂಗು ಮತ್ತು ವೇದ ಮಂತ್ರಗಳ ಘೋಷ ಆಧ್ಯಾತ್ಮಿಕ ಉತ್ತುಂಗವನ್ನು ನೀಡುತ್ತದೆ. 

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಕಳೆದ ಐವತ್ತು ವರ್ಷಗಳಲ್ಲಿ ಮಾಡಿರುವ ಸಾಧನೆಗಳು ಅಕ್ಷರಶಃ ಪವಾಡಗಳೇ ಸರಿ. ಕೇವಲ ಒಂದು ಧಾರ್ಮಿಕ ಪೀಠವು ಹೇಗೆ ಒಂದು ಇಡೀ ಸಮಾಜದ ಶೈಕ್ಷಣಿಕ ಮತ್ತು ಆರ್ಥಿಕ ಚಿತ್ರಣವನ್ನು ಬದಲಿಸಬಹುದು ಎಂಬುದಕ್ಕೆ ಈ ಮಠವೇ ಅತ್ಯುತ್ತಮ ಉದಾಹರಣೆ. ಭೈರವೈಕ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಜ್ಞಾನ ಮತ್ತು ವಿಜ್ಞಾನದ ಮಹಲನ್ನು ಕಟ್ಟುತ್ತಿದ್ದಾರೆ. ಅನ್ನದ ಮೂಲಕ ಹಸಿವು ನೀಗಿಸುವುದು, ಅಕ್ಷರದ ಮೂಲಕ ಅರಿವು ಮೂಡಿಸುವುದು ಮತ್ತು ಆರೋಗ್ಯದ ಮೂಲಕ ಜೀವ ಉಳಿಸುವುದು - ಈ ಮಠದ ಮೂಲ ಮಂತ್ರವಾಗಿದೆ. ಇವತ್ತು ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ಕಲಿತು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಸಮಾಜದ ನೊಂದವರು, ಅಶಕ್ತರು ಮತ್ತು ನಿರ್ಗತಿಕರು ಈ ಮಠದ ನೆರಳಿನಲ್ಲಿ ಬದುಕುತ್ತಿದ್ದಾರೆ. ಸೃಷ್ಟಿ ಸೌಂದರ್ಯದ ತಾಣವಾದ ಆದಿಚುಂಚನಗಿರಿಯು ಕೇವಲ ನೋಡುವ ಕಣ್ಣುಗಳಿಗಷ್ಟೇ ಅಲ್ಲದೆ, ಪ್ರತಿಯೊಬ್ಬರ ಹೃದಯಕ್ಕೂ ತಂಪನ್ನು ನೀಡುವ ಮಹಾ ಕ್ಷೇತ್ರವಾಗಿದೆ. ಭವಿಷ್ಯದಲ್ಲಿಯೂ ಈ ಸಿದ್ಧ ಸಿಂಹಾಸನವು ತನ್ನ ದಿವ್ಯ ಪ್ರಭೆಯಿಂದ ನಾಡಿನ ಮತ್ತು ರಾಷ್ಟ್ರದ ಉದ್ಧಾರಕ್ಕೆ ಶ್ರಮಿಸುತ್ತಾ, ಮಾನವೀಯತೆಯ ದಾರಿದೀಪವಾಗಿ ಬೆಳಗಲಿ ಎಂಬುದು ಸಮಸ್ತ ಭಕ್ತರ ಆಶಯವಾಗಿದೆ.

* * * * *