Mar 26, 2015

ನುಡಿಮುತ್ತುಗಳು

  • ಚೀನಾ ಮಹಾಗೋಡೆಯೇನಾದರೂ ನಮ್ಮ ದೇಶದಲ್ಲಿದ್ದಿದ್ದರೆ ಜಗತ್ತಿನ ಅತಿ ಉದ್ದದ ಶೌಚಾಲಯ ಹೊಂದಿರುವ ಖ್ಯಾತಿ ನಮ್ಮದೇ ಆಗಿರುತ್ತಿತ್ತು.
  • ತನ್ನ ಮಾತು ಕೇಳುವ ಗಂಡನನ್ನು ಮಹಿಳೆ ಇಷ್ಟಪಡುತ್ತಾಳೆ. ಕಡಿಮೆ ಮಾತನಾಡುವವಳೇ ಹೆಂಡತಿಯಾಗಿ ಬರಲಿ ಎಂದು ಗಂಡ ಅಂದುಕೊಳ್ಳುತ್ತಾನೆ.
  • ತಾಯ್ತನ ಎಂಬುದು ಎಲ್ಲ ಸ್ತ್ರೀಯರೂ ಬಯಸುವ ಅವಕಾಶ. ಹಾಗಂತ ಅವಕಾಶ ಸಿಕ್ಕಿತೆಂದು ತಾಯಿಯಾಗಬಾರದು.
  • ನಾವು ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಈ ಜಗತ್ತಿಗೆ ಬಂದಿದ್ದೇವೆ ಎಂಬ ವಿಚಾರವೇನೊ ಚೆನ್ನಾಗಿದೆ. ಆದರೆ ಆ ಬೇರೆಯವರು ಏನು ಮಾಡಲು ಬಂದಿದ್ದಾರೆ?
  • ಅಕಸ್ಮಾತ್ತಾಗಿ ಹಾವನ್ನು ತುಳಿದು ಕಚ್ಚಿಸಿಕೊಳ್ಳುವುದು ಅರೇಂಜ್ಡ್ ಮ್ಯಾರೇಜ್. ಹಾವಿನ ಮುಂದೆ ನಿಂತು ಕಡಿ, ಕಡಿ ಎಂದುಕುಣಿಯುತ್ತಾ ಕಚ್ಚಿಸಿಕೊಳ್ಳುವುದು ಲವ್ ಮ್ಯಾರೇಜ್.
  • ಫೋನ್ ಕಾಲ್ ರಿಸೀವ್ ಮಾಡುವುದಕ್ಕೆ ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರೆಂದರೆ, ರಿಸೀವ್ ಮಾಡಿದ ಮೇಲೆ ದೊಡ್ಡ ಸುಳ್ಳು ಹೇಳಲಿದ್ದೀರೆಂದರ್ಥ.
  • ಬೇರೆಯವರಿಗಾಗಿ ಒಳ್ಳೆಯ ಕೆಲಸಮಾಡುತ್ತಲೇ ಹೋದರೆ ಅದು ಸಹಜ ಎನ್ನಿಸಿಬಿಡುತ್ತದೆ. ಗಮನ ಸೆಳೆಯುವುದಕ್ಕಾದರೂ ಕೆಲವೊಮ್ಮೆ ತಪ್ಪು ಮಾಡುತ್ತಿರಬೇಕಾಗುತ್ತದೆ.
  • ವಾದ್ರಾ ಪ್ರಧಾನಿಯಾಗಲಿ ಎಂದು ಬಯಸುತ್ತೇನೆ. ಭೂಮಿ ಬಗ್ಗೆ ಈ ವ್ಯಕ್ತಿಯ ಹಸಿವನ್ನು ನೋಡಿದರೆ, ಕಾಶ್ಮೀರ ಹಾಗಿರಲಿ, ಲಾಹೋರ್- ಇಸ್ಲಾಮಾಬಾದ್ಗಳನ್ನು ಉಳಿಸಿಕೊಡಿ ಅಂತ ಪಾಕಿಸ್ತಾನ ಕೇಳಬಹುದು.
  • ಭಾರತೀಯ ರಾಜಕಾರಣಿಗಳನ್ನು ಮೂರ್ಖರು ಎನ್ನುವಂತಿಲ್ಲ. ಜನಕ್ಕೆ ಹಾಗೆ ಹೇಳಬಹುದು. ಪ್ರತಿಬಾರಿಯೂ ನೂರು ಕೋಟಿ ಮಂದಿಯನ್ನು ಅವರು ನಂಬಿಸುತ್ತಾರೆ.
  • ಹೆಂಗಸರ ಬಳಿ ಉಳಿದುಕೊಳ್ಳಬಹುದಾದ ಒಂದೇ ಒಂದು ರಹಸ್ಯ ಎಂದರೆ- ಅವರ ವಯಸ್ಸು.
  • ದೇವರು ಪ್ರತಿಯೊಬ್ಬ ಪುರುಷನಿಗೂ ಒಬ್ಬ ಮಹಿಳೆಯನ್ನು ಸೃಷ್ಟಿಸಿರುತ್ತಾನೆ. ಆಕೆಯಿಂದ ತಪ್ಪಿಸಿಕೊಂಡರೆ, ಜೀವನ ಅದ್ಭುತವಾಗಿರುತ್ತದೆ.
  • ಯಾವ ವ್ಯಕ್ತಿಯೂ ಆತನ ಹೆಂಡತಿ ತಿಳಿದುಕೊಂಡಷ್ಟು ಕೆಟ್ಟವನಾಗಿರುವುದಿಲ್ಲ. ಹಾಗೆಯೇ ಅವನ ಅಮ್ಮ ಅಂದುಕೊಂಡಷ್ಟು ಒಳ್ಳೆಯವನೂ ಆಗಿರುವುದಿಲ್ಲ.
  • ಮಲಗುವಾಗ ಯಾವ ತೊಂದರೆಗಳನ್ನೂ ಹಾಸಿಗೆಗೆ ತೆಗೆದುಕೊಂಡುಹೋಗಬೇಡಿ ಎನ್ನುತ್ತದೆ ಹಳೆಯ ಉಪದೇಶ. ಆದರೆ ಇವತ್ತಿಗೂ ಹೆಚ್ಚಿನವರು ತಮ್ಮ ಹೆಂಡತಿ ಪಕ್ಕದಲ್ಲೇ ಮಲಗುತ್ತಾರೆ.
  • ಕೆಲವು ಗಂಡಸರ ಸಂಕಟ ವಿಚಿತ್ರವಾಗಿರುತ್ತದೆ. ಹೆಂಡತಿಯ ಮೇಕಪ್ ಖರ್ಚು ಭರಿಸಲಾಗುವುದಿಲ್ಲ. ಆದರೆ ಮೇಕಪ್ಗೆ ಖರ್ಚು ಮಾಡದಿದ್ದರೆ ಹೆಂಡತಿಯನ್ನು ಸಹಿಸಲಾಗುವುದಿಲ್ಲ.
  • ದಾಂಪತ್ಯ ಚೆನ್ನಾಗಿ ಇರಬೇಕೆಂದರೆ ಮುಖ್ಯವಾಗಿ ಸರಸವಿರಬೇಕು. ಅತಿಮುಖ್ಯವಾಗಿ ಅದು ನಮ್ಮ ಸಂಗಾತಿಯೊಂದಿಗೇ ಇರಬೇಕು.
  • ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂಬ ಗಾದೆ ಮಾತಿದೆ. ಹಾಗೆಂದು ತುಪ್ಪ ತಿನ್ನಬೇಕು ಎಂದೆನಿಸಿದಾಗಲೆಲ್ಲ ಸಾಲ ಮಾಡಬಾರದು.
  • ನೀವು ಅಂದುಕೊಂಡಂತೆ ಜೀವನ ಸಾಗುತ್ತಿಲ್ಲವೆಂದಾದರೆ ನೀವು ಭವಿಷ್ಯಕ್ಕಿಂತ ಹೆಚ್ಚಾಗಿ ಭೂತಕಾಲದ ಬಗ್ಗೆಯೇ ಯೋಚನೆ ಮಾಡುತ್ತಿದ್ದೀರಿ ಎಂದರ್ಥ. ಹೀಗಾಗಿ ಕಳೆದುಹೋದ ಸಂಗತಿ ಬಿಟ್ಟು ಮುಂದಿನ ಜೀವನದ ಬಗ್ಗೆ ಗಮನಹರಿಸಿ.
  • ಅದೃಷ್ಟವೆಂಬುದು ನಿಮ್ಮ ಮನೆಯ ಬಾಗಿಲನ್ನು ಬಡಿಯದಿದ್ದರೆ ಬೇಸರಿಸಿಕೊಳ್ಳಬೇಡಿ. ಬಡಿಯಲು ನಿಮ್ಮ ಮನೆಗೆ ಬಾಗಿಲೇ ಇಲ್ಲದಿರಬಹುದು. ಮೊದಲು ಬಾಗಿಲನ್ನು ನಿಲ್ಲಿಸುವ ಕೆಲಸ ಮಾಡಿ. ಪರಿಶ್ರಮಪಡದಿದ್ದರೆ ಅದೃಷ್ಟವೂ ನಿಮ್ಮ ಮನೆ ತನಕ ಬರುವುದಿಲ್ಲ.
  • ನಿಮಗೇನು ಅನ್ನಿಸುತ್ತೆ ಎಂಬುದರ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆದರೆ ನೀವು ಏನು ತಿಳಿದುಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧಾರ ತೆಗೆದುಕೊಳ್ಳಿ. ಏಕೆಂದರೆ ಆ ನಿರ್ಧಾರ ಹೆಚ್ಚು ಗಟ್ಟಿಯಾಗಿರುತ್ತದೆ
  • ಜಗತ್ತಿನಲ್ಲಿ ನೀವು ನೋಡುತ್ತಿರುವ ಸಂಗತಿಗಳು ನಿಮ್ಮ ಯೋಚನೆಯ ಪ್ರತಿಫಲನಗಳಷ್ಟೇ.ನೀವು ಒಳ್ಳೆಯ ರೀತಿಯಲ್ಲಿ ಯೋಚಿಸಿದರೆ ಜಗತ್ತು ಒಳ್ಳೆಯದಾಗಿರುತ್ತದೆ. ಕೆಟ್ಟ ರೀತಿಯಲ್ಲಿ ಯೋಚಿಸಿದರೆ ಅದೂ ಕೆಟ್ಟದಾಗಿರುತ್ತದೆ.
  • ಕ್ರಿಯೆ ಮತ್ತು ಯಶಸ್ಸಿನ ನಡುವೆ ಅವಿನಾಭಾವ ಸಂಬಂಧವಿದೆ. ನೀವು ಕೆಲಸವನ್ನೇ ಆರಂಭಿಸದಿದ್ದರೆ ಯಶಸ್ಸು ಕಾಣಲು ಸಾಧ್ಯವೇ ಇಲ್ಲ. ಹೀಗಾಗಿ ಯಶಸ್ಸಿನ ಬೆನ್ನು ಹತ್ತುವ ಮೊದಲು ಯಾವುದಾದರೊಂದು ಕೆಲಸ ಆರಂಭಿಸಿ.
  • ನಿಮ್ಮಲ್ಲಿರುವ ಜ್ಞಾನ ಎಂದರೆ ಡಬ್ಬದಲ್ಲಿರುವ ಪೈಂಟ್ ಇದ್ದಂತೆ. ಅದನ್ನು ಗೋಡೆಗೆ ಬಳಿದಾಗಲೇ ಅದರ ಮಹತ್ವ ತಿಳಿಯೋದು. ಬರೀ ಡಬ್ಬದಲ್ಲಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ನಿಮ್ಮ ಜ್ಞಾನದಿಂದ ಸುತ್ತಲಿನ ಗೋಡೆಗೆ ವಿವೇಕದ ಬಣ್ಣ ಬಳಿಯಿರಿ.
  • ಜೀವನದ ಸಾರ್ಥಕ್ಯ ನೀವು ಎಷ್ಟು ಖುಷಿಯಲ್ಲಿದ್ದೀರಿಎಂಬುದರಮೇಲೆ ನಿರ್ಧಾರವಾಗುವುದಿಲ್ಲ. ಆದರೆ ನಿಮ್ಮಿಂದ ಬೇರೆಯವರು ಎಷ್ಟು ಸಂತೋಷಪಡುತ್ತಾರೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಹೀಗಾಗಿ ನಿಮ್ಮ ಸುತ್ತ ಇರುವವರನ್ನು ಖುಷಿಯಾಗಿಡಲು ಪ್ರಯತ್ನಿಸಿ.
  • ನಿಮಗೆ ಹಾರಲು ಸಾಧ್ಯವಿಲ್ಲವೇ? ಹಾಗಾದರೆ ಓಡಿ. ನಿಮ್ಮಲ್ಲಿ ಓಡಲು ಶಕ್ತಿ ಇಲ್ಲವೇ, ನಡೆದಾಡಿ. ನಿಮಗೆ ನಡೆಯಲೂ ಆಗದಿದ್ದರೆ ತೆವಳಿಕೊಂಡು ಹೋಗಿ. ನೀವು ಏನೇ ಮಾಡಿ, ಮುನ್ನಡೆಯುತ್ತಲೇ ಇರಿ. ಎಲ್ಲಿಯೂ ನಿಲ್ಲಬೇಡಿ.
  • ಸುಗಮ ರಸ್ತೆಯಿಂದ ಉತ್ತಮ ಚಾಲಕರಾಗಲು ಸಾಧ್ಯವಿಲ್ಲ. ಮೋಡಗಳಿಲ್ಲದ ಆಕಾಶ ಉತ್ತಮ ಪೈಲಟ್ಗಳನ್ನು ತರಬೇತುಗೊಳಿಸದು.ತೊಂದರೆರಹಿತ ಜೀವನ ಉತ್ತಮ ಮನುಷ್ಯರನ್ನು ರೂಪಿಸಲಾರದು. ಹೀಗಾಗಿ ನನಗೇ ಏಕೆ ಸಮಸ್ಯೆಗಳು ಎಂದು ಕೇಳಬೇಡಿ.

Mar 21, 2015

ಯುಗಾದಿ ಹಬ್ಬದ ಶುಭಾಷಯಗಳು

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ  !!
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನಾ ಕಹಿ ಬಾಳಿನಲ್ಲಿ,
ಹೊವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ. !!

ತಮಗು ತಮ್ಮ ಸಹ ಕುಟುಂಬಕ್ಕು ಸುಖ, ಶಾಂತಿ, ನೆಮ್ಮದಿ, ಸಮೃದ್ದಿಯ ತರಲಿ
ಎಲ್ಲಾ ಬಂಧುಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.....ಮಂಜುನಾಥ್.ಎಂ.ಕೆ.

☀☀

Mar 3, 2015

ಧರ್ಮಸಮದೃಷ್ಟಿ- ಬುಕ್ಕರಾಯನ ಶಾಸನ ವಿಮರ್ಶೆ - ಡಾ||ಚಿದಾನಂದ ಮೂರ್ತಿ

ಧರ್ಮಸಮದೃಷ್ಟಿ

ಬುಕ್ಕರಾಯನು ವೈಷ್ಣವರ ಕೈಯಲ್ಲಿ ಜೈನರ ಕೈ ಇಟ್ಟು ಧರ್ಮ ಸಮನ್ವಯ ಮಾಡಿದ್ದು
 ಬುಕ್ಕರಾಯನ ಕಾಲದ ಹೊನ್ನು (ಚಿನ್ನದ ನಾಣ್ಯ)
 

ಧರ್ಮಸಮದೃಷ್ಟಿ- ಬುಕ್ಕರಾಯನ ಶಾಸನ ವಿಮರ್ಶೆ - ಡಾ||ಚಿದಾನಂದ ಮೂರ್ತಿ
click here to Download

        ಬಸದಿಯೊಂದು ಹೂತುಹೋಗಿದ್ದರೆ ಆಶ್ಚರ್ಯವಿಲ್ಲ. ಕಲ್ಯ ಮತ್ತು ಸುತ್ತಮುತ್ತ ಜೈನ ಮಂದಿರಗಳ ದೊಡ್ಡ ಪ್ರಮಾಣದ ವಿನಾಶ ನಡೆಯಿತೆಂಬುದಕ್ಕೆ ಇವು ಪ್ರಬಲ ಸಾಕ್ಷ್ಯಾಧಾರಗಳು. 

    ಕಲ್ಯದಲ್ಲಿ ಚಕ್ರತ್ತಾಳ್ವಾರರ ವಿಗ್ರಹವೊಂದಿದ್ದು ಅದು ಈಗ ಮಾಯವಾಗಿದೆ. ಮಾಗಡಿಯಲ್ಲಿ ಶ್ರೀವೈಷ್ಣವರಿಂದ ಆರಾಧನೆಗೊಳ್ಳುತ್ತಿರುವ ರಂಗನಾಥಸ್ವಾಮಿಯ ವಿಗ್ರಹವು ಮೂಲತಃ ಕಲ್ಯದ್ದೆಂದು ಜನ ಹೇಳುತ್ತಾರೆ. ಈಗಲೂ ಮಾಗಡಿಯ ಆ ದೇವರ ರಥೋತ್ಸವದಲ್ಲಿ ದೇವರ ಮೊದಲ ಪ್ರಸಾದವು ಕಲ್ಯದ ಜನರಿಗೆ ಮೀಸಲು. ಇದೆಲ್ಲವೂ ಕಲ್ಯದಲ್ಲಿ ನಡೆದ ಶ್ರೀ ವೈಷ್ಣವ ದೇವಾಲಯದ ನಾಶಕ್ಕೆ ಸಾಕ್ಷ್ಯಾಧಾರ. ಹಳೆಯ ಬೆಳ್ಗೊಳ ಮತ್ತು ಕಲ್ಯ ಎರಡು ಊರುಗಳಲ್ಲಿಯೂ 'ಉಷ್ಟಮರು' ಎಂದು ಕರೆಯುವ ಶ್ರೀ ವೈಷ್ಣವ ಮತದ ಶೂದ್ರ ಅನುಯಾಯಿಗಳಿದ್ದಾರೆ. ಆ ಎರಡು ಊರುಗಳಲ್ಲಿ ಈಗ ಜೈನರು ಇಲ್ಲದಿದ್ದರೂ ಅಲ್ಲಿ ಮೊದಲು ಜೈನರಿದ್ದರೆಂದೂ, 'ಭಕ್ತರ' ಉಪಟಳವನ್ನು ತಾಳಲಾರದೆ ಅವರು ಬೇರೆಡೆಗಳಿಗೆ ವಲಸೆ ಹೋದರೆಂದೂ ಹೇಳಲು ಪ್ರಬಲ ಸೂಚನೆಗಳಿವೆ. ಹಳೆಯ ಬೆಳ್ಗೊಳದ ಜೈನರು ಸಮೀಪದ ಶ್ರವಣಬೆಳ್ಗೊಳಕ್ಕೂ ಕಲ್ಯದ ಜನರು ಸಮೀಪದ ಸಂಕಿಘಟ್ಟಕ್ಕೂ ಹೋಗಿ ನೆಲಸಿರಬೇಕು. ಶ್ರವಣಬೆಳ್ಗೊಳವಂತೂ ಸರಿಯೇ, ಸಂಕಿಘಟ್ಟದಲ್ಲಿ ಈಗಲೂ ಸಾಕಷ್ಟು ಸಂಖ್ಯೆಯ ಜೈನರಿದ್ದು ಅವರು ಅಲ್ಲಿನ ವರ್ಧಮಾನಸ್ವಾಮಿಯನ್ನು ಆರಾಧಿಸುತ್ತಿದ್ದಾರೆ. 

       ಜೈನ ವೈಷ್ಣವ ಘರ್ಷಣೆಗಳು ಕಲ್ಯ ಶ್ರವಣಬೆಳ್ಗೊಳಗಳಿಗೆ ಸೀಮಿತವಾಗಿರಲಿಲ್ಲ. ಬುಕ್ಕನ ತೀರ್ಪು ಬರುವ ಮುನ್ನ, ಬಹುಶಃ ಬಂದ ಮೇಲೂ-ಬಹು ವ್ಯಾಪಕವಾಗಿ ಘರ್ಷಣೆಗಳು ನಡೆದಿರುವಂತೆ ತೋರುತ್ತದೆ. ನಾಗಮಂಗಲ ತಾಲೂಕಿನ ಹಟ್ಣದಲ್ಲಿರುವ ವೀರಭದ್ರ ದೇವಾಲಯವು ಮೂಲತಃ ಪಾಶ್ರ್ವನಾಥ ಬಸದಿಯಾಗಿತ್ತು. ಜೈನ ವಿಗ್ರಹವಿದ್ದ ಪೀಠದ ಮೇಲೆ ಈಗ ವೀರಭದ್ರನ ವಿಗ್ರಹವಿದೆ. ಪಿರಿಯಾಪಟ್ಟಣ ತಾಲೂಕಿನ ಹೊನ್ನೂರಿನಲ್ಲಿ ರಂಗಸ್ವಾಮಿ ಗುಡಿಯೆಂದು ಕರೆಯುವ ದೇವಾಲಯದಲ್ಲಿರುವುದು ವಾಸ್ತವವಾಗಿ ಜಿನ ವಿಗ್ರಹ; ಅದಕ್ಕೆ ನಾಮವನ್ನು ಹಚ್ಚಿ ವಿಷ್ಣು ವಿಗ್ರಹವಾಗಿ ಮಾಡಲಾಗಿದೆ. ಮಾಗಡಿ ತಾಲೂಕಿನ ನಿಸಕೂರಿನಲ್ಲಿ ಎಪ್ಪತ್ತೈದು ಬಸದಿಗಳಿದ್ದವೆಂದು ಜನ ಹೇಳುತ್ತಾರೆ; ಈಗ ಅಲ್ಲಿ ಬಸದಿಗಳ ಬದಲು ಕೇವಲ ಬೂದಿ ಗುಂಡಿಗಳಿವೆ. ತಿಪಟೂರಿನ ಸಮೀಪದ ಹಳ್ಳಿಯೊಂದರಲ್ಲಿ ಜಿನ ಬಸದಿಯು ಶಿವದೇವಾಲಯವಾಗಿ ಪರಿವರ್ತಿತವಾಗಿ, ಜಿನ ಬಿಂಬಕ್ಕೆ ಭಸ್ಮ, ಕರಡಿಗೆಗಳನ್ನು ಅಳವಡಿಸಲಾಗಿದೆ. ಈ ಮತ್ತು ಇಂತಹ ಎಲ್ಲಾ ಉದಾಹರಣೆಗಳೂ ಹದಿನಾಲ್ಕನೇ ಶತಮಾನದ ಘರ್ಷಣೆಗಳ ಫಲವೇ ಎಂದು ಖಚಿತವಾಗಿ ಹೇಳಲಾಗದಿದ್ದರೂ ಅವುಗಳಲ್ಲಿ ಕೆಲವಾದರೂ ಆ ಘರ್ಷಣೆಗಳ ಫಲವಿರಬಹುದು ಎಂದು ಅನುಮಾನಿಸಲು ಸಾಧ್ಯ. 

       ಹದಿನಾಲ್ಕನೇ ಶತಮಾನದಲ್ಲಿ ಕಲ್ಯ-ಶ್ರವಣಬೆಳ್ಗೊಳ ಪ್ರದೇಶದ ಜೈನರು ಅನುಭವಿಸಿದ ಯಾತನೆ, ಭೀತಿಯ ನೆರಳಲ್ಲಿ ಅವರು ಬದುಕಬೇಕಾಗಿ ಬಂದ ಬವಣೆ ಇವುಗಳನ್ನು ಅರ್ಥ ಮಾಡಿಕೊಂಡ ಬುಕ್ಕ ಅತ್ಯಂತ ನೋವಿನಿಂದ, ಅಷ್ಟೇ ದೃಢವಾಗಿ, ಆದರೆ ಎರಡೂ ಪಂಗಡಗಳ ಮಧ್ಯದ ವಿರಸ ಹೆಚ್ಚಾಗದ ರೀತಿಯಲ್ಲಿ, ಆದರೆ ಪ್ರೀತಿಯಿಂದ ತನ್ನ ಹೃದಯಸ್ಪರ್ಶಿ ತೀರ್ಪನ್ನು ಕೊಟ್ಟನು. ಬುಕ್ಕನ ತೀರ್ಪು ಘರ್ಷಣೆಗಳ ಮೊನಚನ್ನು ಮೊಂಡು ಮಾಡಿರಬಹುದು, ಅನಾಹುತಗಳ ಪ್ರಮಾಣವನ್ನು ತಗ್ಗಿಸಿರಬಹುದು; ಆದರೆ ಘರ್ಷಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿತೇ ಎಂಬುದು ಅನುಮಾನಾಸ್ಪದ. ಒಂದು ವ್ಯಾಪಾರ ಕೇಂದ್ರವೂ ಆಗಿದ್ದ ಕಲ್ಯದಲ್ಲಿ ಅವನು ತನ್ನ ಪ್ರತಿನಿಧಿಯಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿದಂತೆ ಕಾಣುತ್ತದೆ. ಆ ಅಧಿಕಾರಿ ಇತರ ಕರ್ತವ್ಯಗಳ ಜೊತೆ ಘರ್ಷಣೆಗಳಾಗದಂತೆ, ಜೈನ ದೇವಾಲಯಗಳಿಗೆ ಹೆಚ್ಚಿನ ಹಾನಿ ಆಗದಂತೆ ನೋಡಿಕೊಳ್ಳುವ ಕರ್ತವ್ಯವನ್ನೂ ನೆರವೇರಿಸಿರಬಹುದು. ಕ್ರಿ.ಶ.1386 ರ ಶಾಸನವೊಂದು ವಿಜಯನಗರದ ಅಧಿಕಾರಿ ಕಲ್ಯದಲ್ಲಿದ್ದು ಕೆಲಸ ಮಾಡುತ್ತಿದ್ದುದನ್ನು ಸೂಚಿಸುತ್ತದೆ. 

ಸಮಸ್ಯಾತ್ಮಕ ಪದಗಳು: 

         ಶಾಸನದಲ್ಲಿ ಬಳಕೆಯಾಗಿರುವ ಕೆಲವು ಪದಗಳ ಅರ್ಥ ಇನ್ನೂ ಪರಿಹಾರವಾಗಿಲ್ಲ. 'ಮೋಷ್ಟಿಕ' ಎಂದರೇನು ತಿಳಿಯದು. 'ತಿರುವಡಿ'ಯೆಂಬುದು ಭಗವಂತನ ಪಾದಗಳನ್ನು ಪೂಜಿಸುವ ಜನರನ್ನು (ಶ್ರೀಪಾದಂ ತಾಂಗಿಗಳ್) ಸೂಚಿಸಬಹುದು. 'ತಣ್ಣೀರವರ್' ಎಂಬುದು ದೇವರ ತೀರ್ಥವನ್ನು ಮೊದಲು ಸ್ವೀಕರಿಸುವ ತೀರ್ಥಗಾರರ್ ಅಥವಾ ಮುದಲ್ ತೀರ್ಥಗಾರರ್ ಇರಬಹುದು ಅಥವಾ ದೇವರ ಅಭಿಷೇಕಕ್ಕೆ ನೀರು ತರುವ ಸೇವಾಕಾರ್ಯವನ್ನು (ತೀರ್ಥಕೈಂಕರ್ಯಮ್) ಕೈಕೊಂಡವರು ಇರಬಹುದು. 'ತಿರುಪಣಿ'ಯವರು ದೇವಾಲಯದ ಸೇವಕವರ್ಗದವರಿರಬಹುದು. 'ತಿರುಕುಲ' 'ಜಾಂಬವಕುಲ'ದವರು ಹರಿಜನರಲ್ಲಿರುವ ಬಲಗೈ ಎಡಗೈ ಪಂಗಡದವರು. ಒಂದು ನಂಬಿಕೆಯ ಪ್ರಕಾರ ಶ್ರೀರಾಮಪ್ರಿಯ ವಿಗ್ರಹವನ್ನು ತರಲು ದೆಹಲಿಗೆ ಹೋದ ಶ್ರೀರಾಮಾನುಜರಿಗೆ ಸಹಾಯಕರಾಗಿ ಜೊತೆಯಲ್ಲಿದ್ದ ಹರಿಜನರನ್ನು ಅವರು ಪ್ರೀತಿಯಿಂದ 'ತಿರುಕುಲ'ದವರೆಂದು ಕರೆದರು. 'ತಿರುಕುಲ' ಪದದ ಅತ್ಯಂತ ಪ್ರಾಚೀನ ಪ್ರಯೋಗವು ಶ್ರವಣಬೆಳ್ಗೊಳ ಶಾಸನದಲ್ಲಿ ದೊರಕುವುದು ಗಮನಾರ್ಹ (ತಮಿಳು ಕೃತಿಗಳ ಪ್ರಯೋಗಗಳೆಲ್ಲಾ ಈಚಿನವು). 'ಹದಿನೆಂಟು ನಾಡು ಎಂಬುದು ಹಿಂದೂಗಳ ಸಾಂಪ್ರದಾಯಿಕ ಹದಿನೆಂಟು ಜಾತಿಗಳನ್ನು ಹೇಳುತ್ತದೆ. ಶ್ರೀ ವೈಷ್ಣವರನ್ನು 'ಭಕ್ತ'ರೆಂದು ಕರೆದಿರುವುದು ಗಮನಾರ್ಹ. 'ಆಚಾರ್ಯ', 'ಸಮಯಿ', 'ಸಾತ್ವಿಕ' ಪದಗಳಿಗಿರುವ ನಿರ್ದಿಷ್ಟಾರ್ಥಗಳನ್ನು, ವ್ಯತ್ಯಾಸಗಳನ್ನು ಗುರುತಿಸುವುದು ಇನ್ನೂ ಕಷ್ಟವಾಗಿದೆ. 'ನಾಲ್ವತ್ತೆಂಟು ಜನ' ಉಕ್ತಿಯ ಅರ್ಥವೂ ಅಷ್ಟೇ; ಬಹುಶಃ ಅದೊಂದು ಜಾತಿಯ ಅಥವಾ ವೃತ್ತಿಯ ಯಾವುದೋ ಶ್ರೇಣಿಯನ್ನು (guild) ಸೂಚಿಸುವಂತೆ ಕಾಣುತ್ತದೆ.
ಕನ್ನಡ ಎಂ.ಎ (ಅಂತಿಮ)ಕ.ರಾ.ಮು .ವಿ. ಕನ್ನಡ ಶಾಸನ ಅಧ್ಯಯನ ಕೋರ್ಸ್೧೦, ಬ್ಲಾಕ್ ೩೫ ,ಪುಟ ೩೨-೩೩,೨೮-೨೯ ನಲ್ಲಿರು ವಂತೆ ಬರೆಯಲಾಗಿದೆ. 
[ಕೃಪೆ-'ಪ್ರತೀಕ್ಷಾ ಬ್ಲಾಗ್' -ಮಮತಾಭಾಗವತ್] 
ಬು ಕ್ಕರಾಯನ ಶಾಸನ ಪಾಠವು ದೇವಚಂದ್ರನ (೧೭೭೦-೧೮೪೧)ರಾಜಾವಳಿ ಕಥಾಸಾರದಲ್ಲಿ (ಕನ್ನಡ ಅಧ್ಯಯನ ಸಂಸ್ಥೆ, ಮೈಸೂ ರು ವಿಶ್ವವಿದ್ಯಾನಿಲಯ,೧೯೮೮,ಪು.೧೯೮-೧೯೯)ಕೂ ಡ ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಬಂದಿದೆ. ಆ ಶಾಸನ ಪಾಠ ಹೀಗಿದೆ....
            ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಪಾಷಂಡ ಸಾಗರ ಮಹಾವಡಬಾ ಮು ಖಾಗ್ನಿ ಶ್ರೀ ರಂಗರಾಜ ಚರಣಾಂಬ ಜ ಮೂ ಲದಾಸಃ ಶ್ರೀ ವಿಷ್ಣು ಲೋಕ ಮಣಿ ಮಂಡಪ ಮಾರ್ಗದಾಯಿ ರಾಮಾನು ಜೋ ವಿಜಯತೇ ಯತಿರಾಜರಾಜ
ಶಕವರುಷ ೧೨೯೦ ನೆಯ ಕೀಲಕ ಸಂವತ್ಸರದ ಭಾದ್ರಪದ ಶು ೧೦ ಬೃಹಸ್ಪತಿವಾರ ಸ್ವಸ್ತಿ ಶ್ರೀಮನ್ಮಹಾಮಂಡಳೇಸ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವ ರಾಯರ ಗಂಡ ಶ್ರೀ ವೀರಬು ಕ್ಕರಾಯಂ ಪೃಥ್ವೀರಾಜ್ಯಮಂ ಮಾಡು ತ್ತಾ ಇರು ವಲ್ಲಿ ಜೈನರಿಗೂ ಭಕ್ತರಿಗೂ ಸಂವಾದಮಾದಲ್ಲಿ ಆನೆಗೊಂದಿ ಹೊಸಪಟ್ಟಣ ಪೆನುಗೊಂಡೆ ಕಲ್ಲೇಹದ ಪಟ್ಟಣದೊಳಗಾದ ಸಮಸ್ತ ಭವ್ಯಜನಂಗಳ್ ಬು ಕ್ಕರಾಯಂಗೆ ಭಕ್ತರ್ ಮಾಡುವ ಅನ್ಯಾಯಂಗಳನ್ನು ಬಿನ್ನಹಂ ಮಾಡಲಾಗಿ ಕೋವಿಲ್ ತಿರು ಮಲೆ ಪೆರು ಗೋಯಿಲ್ ತಿರುನಾರಾಯಣಪುರಂ ಮುಖ್ಯವಾದ ಸಕಳಾಚಾರ್ಯರು ಸಕಳ ಸಮಯಿಗಳ್ ಸಕಳ ಸಾತ್ವಿಕರ್ ವೇಷ್ಟಿಕರ್ ತಿರು ಮಣಿ ತಿರು ವಡಿ ತಣ್ಣಿರು ನಾಲ್ವತ್ತೆಂಟು ತಾತಯ್ಯಗಳು ಸಾವಂತ ಬೋವಕ್ಕಳು ತಿರು ಕು ಲ ಜಾಂಬವ ಕು ಲ ದೊಳಾದ ದಿನ್ನೆರಡರೊಳಾದ ಒಳೆಗಾದ ಹದಿನೆಂಟು ನಾಡ ರಾಯನು ಶ್ರೀ ವೈಷ್ಣವರ ಕೈಯೊಳು ಜೈನರ ಕೈವಿಡಿದು ಕೊಟ್ಟು ಈ ಜೈನ ದರ್ಶನಕ್ಕೆ ಪೂ ರ್ವಮರ್ಯಾದೆಯಿಟ್ಟು ಪಂಚಮಹಾವಾದ್ಯಂಗಳುಂ ಕಳಸ ಕನ್ನಡಿ ಶ್ವೇತ ಚ್ಛತ್ರ ಚಾಮರೆಂಗಳ್ ಮೊದಲಾದ ಬಿರು ದು ಗಳು ಸಲು ವವು. ಜೈನ ದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾದೊಡಂ ವೈಷ್ಣವ ಹಾನಿವೃದ್ಧಿಯೆಂದು ಪಾಲಿಸಬೇಕು . ಈ ಮರ್ಯಾದೆಯೊಳು ಎಲ್ಲಾ ರಾಜ್ಯಂಗಳೊಳಿಹ ಬಸ್ತಿಗಳಿಗೆ ಶ್ರೀ ವೈಷ್ಣವರು ಶಾಸನಮಂ ಕೊಟ್ಟು ಪಾಲಿಸುವರು . ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯದವರು , ಶ್ರೀಜೈನದರ್ಶನದವರನತ್ಯಾದರದಿಂ ರಕ್ಷಿಸಿಕೊಂಡು ಬಹೆವು . ವೈಷ್ಣವ ರೂ ಜೈನರು ಒಂದು ಭೆದವಾಗಿ ಕಾಣಲಾಗದು . ಶ್ರೀ ತಿರು ಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳನಮತಗಳಿಂದ ಬೆಳ್ಗುಳದ ತೀರ್ಥದಲ್ಲಿ ದೇವರ ಅಂಗರಕ್ಷಣೆಗೋಸ್ಕರ ಸಮಸ್ತ ರಾಜ್ಯಗಳೊಳಗು ಳ್ಳಂಥ ವೈಷ್ಣವರು ಜೈನರು ಬಾಗಿಲು ಗಟ್ಟಲೆಯಾಗಿ ಮನೆಗೆ ವರುಷ ಒಂದಕ್ಕೆ ಒಂದು ಹಣವಂ ಕೊಟ್ಟು ಆ ಯೆತ್ತಿ ಬಂದ ಹೊನ್ನಿಂಗೆ ದೇವರ ಅಂಗ ರಕ್ಷಣೆಗೆ ೨೦ ಆಳನ್ನು ಸಂತವಿಟ್ಟು ಮಿಕ್ಕ ಹೊನ್ನಿಂಗೆ ಜೀರ್ಣ ಜಿನ ಚೈತ್ಯಾಲಯೋದ್ಧರಣಕ್ಕೆ ಸೊದೆಯನಿಕ್ಕುವುದು .
ಈ ಮರ್ಯಾದೆಯಲ್ಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಂ ಪ್ರತಿಕೊಟ್ಟು ಕೀರ್ತಿ ಸಂಪಾದನೆಯನ್ನು ಪುಣ್ಯವನ್ನೂ ಉಪಾರ್ಜಿಸಿಕೊಂಬುದು . ಈ ಮಾಡಿದ ಕಟ್ಟಳೆಯನ್ನು ಆವನಾನೊಬ್ಬನು ಮೀರಿದವನು ರಾಜದ್ರೋಹಿ .ಸಂಘಸಮುದಾಯಕ್ಕೆ ದ್ರೋಹಿ,ತಪಸ್ವಿಯಾಗಲಿ ಗ್ರಾಮಣಿಯಾಗಲಿ ಈ ಧರ್ಮಮಂ ಕೆಡಿಸಿದರಾದೊಡೆ ಗಂಗೆಯ ತಡಿಯಲ್ಲಿ ಕಪಿಲೆಯನ್ನು ಬ್ರಾಹ್ಮಣನನ್ನೂ ಕೊಂದ ಪಾಪವನ್ನು ಪಡೆದು ಪೋಪರು . ಸ್ವದತ್ತಾಂ ಪರದತ್ತಾಂ ವಾ|| ಕಲ್ಲೇಹದ ಹೆತ್ತ ಶೆಟ್ಟಿ ಮಗ ಬಸವ ಶೆಟ್ಟಿಗೆ ಉಭಯ ಸಮಯಗೂ ಡಿ ಸಂಘನಾಯಕ ಪಟ್ಟಮಂ ಕಟ್ಟಿದರು .ಈ ಶಾಸನಂ ಬೆಳು ಗು ಳದ ಭಂಡಾರಿ ಬಸದಿಯ ಬಲಗಡೆ ದಕ್ಷಿಣದೊಳು ತ್ತರಾಭಿಮು ಖವಾಗಿ ಸ್ಥಾಪಿಸಿದೆ.



ಶಾಸನದ ಪಠ್ಯ -ಅರ್ಥ

ಒಳ್ಳೆಯದಾಗಲಿನಾಸ್ತಿಕರೆಂಬ ಸಮುದ್ರವನ್ನು ಬತ್ತಿಸುವ ಬಡವಾಗ್ನಿಯಾಗಿಶ್ರೀರಂಗನಾಥನಪಾದಕಮಲಗಳ ಸೇವಕರಾಗಿಶ್ರೀ ವಿಷ್ಣು ಸನ್ನಿಧಿಯೆಂಬ ರತ್ನ ಮಂಟಪಕ್ಕೆ ಮಾರ್ಗದಾಯಕರಾಗಿ ಇರುವ ಯತಿರಾಜರಾಜರಾದ ರಾಮಾನುಜಾಚಾರ್ಯರಿಗೆ ಜಯವಾಗಲಿ.

ಶಕವರ್ಷ ೧೨೯೦ ನೆಯ ಕೀಲಕನಾಮ ಸಂವತ್ಸರಸದ ಭಾದ್ರಪದ ಮಾಸದ ಶುಕ್ಲಪಕ್ಷದ ದಶಮಿಯ ಗುರುವಾರದಂದು ಶ್ರೀ ಮನ್ಮಹಾಮಂಡಳೇಶ್ವರನೂ ಶತ್ರು ರಾಜರನ್ನೂ ಸದೆಬಡಿಯುವವನೂನುಡಿದಂತೆನಡೆಯದ ರಾಜರ ದರ್ಪವನ್ನು ಮುರಿಯುವವನೂ ಆದ ಶ್ರೀ ಬುಕ್ಕರಾಯನು ರಾಜ್ಯಭಾರ ಮಾಡುತ್ತಿರುವಾಗಜೈನರಿಗೂ ಶ್ರೀವೈಷ್ಣವರಿಗೂ (ಒಂದು ಸಲವಾಗ್ವಾದವಾಯಿತು.

ಆಗ ಆನೆಯಗೊಂದಿಹೊಸಪಟ್ಟಣಪೆನುಗೊಂಡೆಕಲ್ಲೆಹ -ಇವುಗಳನ್ನು ಒಳಗೊಂಡ ಎಲ್ಲ ನಾಡುಗಳ ಜೈನ ಮತೀಯರು (ಭವ್ಯಜನಂಗಳುಬುಕ್ಕರಾಯನಿಗೆ ಶ್ರೀವೈಷ್ಣವರು (ಭಕ್ತರುಮಾಡುವ ಅನ್ಯಾಯಗಳನ್ನು ವಿಜ್ಞಾಪಿಸಿಕೊಂಡರುಕೋವಿಲ್ ತಿರುಮಲೆ ಪೆರುಮಾಳ್, ಕೋಯಿಲ್ತಿರುನಾರಾಯಣಪುರ -ಇವೇ ಮುಖ್ಯವಾದ (ಕ್ಷೇತ್ರಗಳಸಕಲಾಚಾರ್ಯರುಸಕಲ ಸಮಯಿಗಳುಸಕಲಸಾತ್ವಿಕರುಮೋಷ್ಠಿಕರು(ಅಕ್ಕಸಾಲಿಗರು), ತಿರುಪಣಿ ತಿರುವಿಡಿ  ತಣ್ಣೀರವರು(ನೀರು ಒದಗಿಸಿವ ಜಲಗಾರರು), ನಾಲ್ವತ್ತೆಂಟು ಜನಗಳು, ಸಾಮಂತ ಬೋವರುಗಳು, ತಿರಿಕುಲ ಜಾಬವ ಕುಲ ಒಳಗೊಂಡ ಹದಿನೆಂಟು ನಾಡುಗಳ ಶ್ರೀವೈಷ್ಣವರನ್ನು ಬರಮಾಡಿಕೊಂಡು ಮಹಾರಾಜನು ವೈಷ್ಣವರ ಕೈಯಲ್ಲಿ ಜೈನರ ಕೈಯನ್ನು ಹಿಡಿದು ಕೊಟ್ಟು, ವೈಷ್ಣವ ಧರ್ಮಕ್ಕೂ ಜೈನಧರ್ಮಕ್ಕೂ ಭೇದವಿಲ್ಲವೆಂದು ಹೇಳಿದನು.

       ಜೈನಧರ್ಮಕ್ಕೆ ಈ ಹಿಂದೆ ಸಲ್ಲುತ್ತಿದ್ದಂತೆ (ಪೂರ್ವಮರ್ಯಾದೆಯಲುಪಂಚಮಹಾವಾದ್ಯಗಳು(ಶೃಂಗವಾದ್ಯತಮಟೆಶಂಖಭೇರಿಜಯಘಂಟೆಕಳಶವು ಸಲ್ಲುವುದುಶ್ರೀ ವೈಷ್ಣವರ ಕಡೆಯಿಂದ ಜೈನಧರ್ಮಕ್ಕೆ ಯಾವುದೇ ಹಾನಿಯಾಗಲಿ ವೃದ್ಧಿಯಾಗಲಿ ಆದರೆ ಅದು ವೈಷ್ಣವ ಧರ್ಮಕ್ಕೆ ಆದ ಹಾನಿಯೆಂದುವೃದ್ಧಿಯೆಂದು ಶ್ರೀವೈಷ್ಣವರು ತಿಳಿಯಬೇಕು ನಿಯಮದಂತೆ (ಮರ್ಯಾದೆಯಲುರಾಜ್ಯದಲ್ಲಿರುವ ಎಲ್ಲಾ ಬಸದಿಗಳಲ್ಲಿ ಶ್ರೀ ವೈ ಷ್ಣವರೇ ಶಾಸನವನ್ನು ಹಾಕಿಸಿ ಇದನ್ನು ಪಾಲಿಸಬೇಕುಚಂದ್ರ ಸೂರ್ಯರು ಇರುವವರೆಗೆ ವೈಷ್ಣವ ಧರ್ಮವು ಜೈನಧರ್ಮವನ್ನು ರಕ್ಷಿಸಿಕೊಂಡು ಬರತ್ತದೆವೈಷ್ಣವ ಧರ್ಮ ಜೈನಧರ್ಮಗಳು ಒಂದೇಅವುಗಳ ನಡುವೆ ಭೇದವಿಲ್ಲಅದನ್ನು ಬೇರೆ ಬೇರೆ ಎಂದು ತಿಳಿಯಬಾರದುಶ್ರೀತಿರುಮಲೆ ತಾತಯ್ಯನವರು ರಾಜಯದ ಎಲ್ಲ ಜೈನಮತೀಯರ ಅನುಮತಿಯಂತೆ ಶ್ರವಣ ಬೆಳುಗೊಳ ಕ್ಷೇತ್ರದಲ್ಲಿ (ಬೆಳುಗೊಳ ತೀರ್ಥದಲ್ಲಿವೈಷ್ಣವ (=ವಿಷ್ಣುದೇವಾಲಯಅಂಗರಕ್ಷೆಗೆ (ಎಂದರೆ ಕಾವಲಿನ ವ್ಯವಸ್ಥೆಗಾಗಿರಾಜ್ಯದಲ್ಲಿರುವ ಎಲ್ಲ ಜೈನರು ಬಾಗಿಲುಗಟ್ಟಳೆಯಾಗಿ (ಪ್ರತಿಮನೆಯವರುಮನೆಮನೆಗೆವರ್ಷಕ್ಕೆ ಒಂದು ಹಣ ಎಂದು ಕೊಡಬೇಕುಹಾಗೆ ಸಂಗ್ರಹಿಸಿದ ಹೊನ್ನಿನಿಂದ ದೇವರ ಕಾವಲಿಗೆ ಇಪ್ಪತ್ತುಜನರನ್ನು ನೇಮಿಸಬೇಕುಉಳಿದ ಹೊನ್ನಿನಿಂದ ಜೀರ್ಣಜಿನಾಲಯಗಳಿಗೆ ಸುಣ್ಣವನ್ನು ಳಿಸಬೇಕುನಿಯಮದಂತೆ ಚಂದ್ರ ಸೂರ್ಯರು ಇರುವವರೆಗೆ ಪ್ರತಿವರ್ಷ ಹೊನ್ನನ್ನು ಕೊಟ್ಟು ಕೀರ್ತಿಯನ್ನು ಪುಣ್ಯವನ್ನು(ಜೈನರು ಅರ್ಜಿಸಿಕೊಳ್ಳಲಿಹೀಗೆ ಮಾಡಿದ ಕಟ್ಟಳೆಯನ್ನು ಯಾರು ಮೀರಿದರೂ ಆತ ರಾಜದ್ರೋಹಿ.ಜೈನಸಂಘ-ವೈಷ್ಣವ ಸಮಾಜಗಳಿಗೆ ದ್ರೋಹಿಮುನಿಯಾಗಲಿಗ್ರಾಮೀಣನಾಗಲಿ ಈ ಧರ್ಮವನ್ನುಯಾರಾದರೂ ಕೆಡಿಸಿದರೆ ಅವರು ಗಂಗಾನದಿಯ ದಡದಲ್ಲಿ ಹಸುವನ್ನೂ ಬ್ರಾಹ್ಮಣನ್ನೂ ಕೊಂದ ಪಾಪಕ್ಕೆ ಗುರಿಯಾಗುತ್ತಾರೆ.
ತಾನು ಕೊಟ್ಟದ್ದಾಗಲಿಬೇರೆಯವರು ಕೊಟ್ಟದ್ದಾಗಲಿ ಅಪಹರಿಸಿದ್ದಾದರೆ ಅಂಥವನು ಈ ಭೂಮಿಯಲ್ಲಿಅರವತ್ತು ಸಾವಿರ ಕ್ರಿಮಿಯಾಗಿ ಹುಟ್ಟುತ್ತಾನೆ.

ವಿಶ್ವ ಮಾನವ ಸಂದೇಶ - ಕುವೆಂಪು

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು "ಜಾತಿ,ಮತ"ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.

ವಿಶ್ವಮಾನವ ಗೀತೆ

ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
-ಕುವೆಂಪು

ಪಂಚಮಂತ್ರ

  • ಪ್ರತಿಯೊಂದು ಮಗುವೂ ಹುಟ್ಟುತ್ತಲೆ - ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು 'ಅಲ್ಪಮಾನವ'ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.
  • ಹುಟ್ಟುವಾಗ 'ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು 'ಬುದ್ಧ'ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ 'ಅನಿಕೇತನ'ರಾಗಬೇಕು.
  • ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿ, ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪುಗುಂಪಾಗಿ ಜನತೆಯನ್ನು ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ 'ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.'
  • ಮನುಜಮತವಿಶ್ವಪಥಸರ್ವೋದಯಸಮನ್ವಯಪೂರ್ಣದೃಷ್ಟಿ- ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ; "ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ "ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".
  • ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರು ವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ಈ 'ದರ್ಶನ'ವನ್ನೆ 'ವಿಶ್ವಮಾನವ ಗೀತೆ' ಸಾರುತ್ತದೆ.

ಸಪ್ತಸೂತ್ರ

ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವಪ್ರಣಾಳಿಕೆ

  1. "ಮನುಷ್ಯಜಾತಿ ತಾನೊಂದೆ ವಲಂ" ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
  2. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ-ಕ್ಷತ್ರಿಯ, ವೈಶ್ಯ-ಶೂದ್ರ, ಅಂತ್ಯಜ, ಷಿಯಾ-ಸುನ್ನಿ, ಕ್ಯಾಥೊಲಿಕ್- ಪ್ರಾಟೆಸ್ಟಂಟ್, ಸಿಕ್-ನಿರಂಕಾರಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
  3. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
  4. 'ಮತ' ತೊಲಗಿ 'ಅಧ್ಯಾತ್ಮ' ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು.
  5. ಮತ 'ಮನುಜಮತ'ವಾಗಬೇಕು; ಪಥ 'ವಿಶ್ವಪಥ'ವಾಗಬೇಕು; ಮನುಷ್ಯ 'ವಿಶ್ವಮಾನವ'ನಾಗಬೇಕು.
  6. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವ 'ತನ್ನ' ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು.
  7. ಯಾವ ಒಂದು ಗ್ರಂಥವೂ 'ಏಕೈಕ ಪರಮ ಪೂಜ್ಯ' ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ 'ದರ್ಶನ'ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.